‘ಈ ಮಾತು ಚರ್ಚೆಗೆ ಬರದೆ ಹೋಗಿದ್ರ ನಾನು ಈ ಸುಳ್ಳು ಹೇಳಬಹುದಿತ್ತು ಪೂಣ, ಈಗ ಎಲ್ಲಾನೂ ಒಪ್ಗೊಂಡ ಮ್ಯಾಲ ಮತ್ತ ಅದೇ ಸುಳ್ಳನ್ನ ಆರಂಭದಿಂದ ಹೇಳು ಅಂದ್ರ ಹೇಳಾಕ ಆಗೂದಿಲ್ಲ. ಏನು ಶಿಕ್ಷೆ ಕೊಡ್ತೀಯೊ ಕೊಡು. ನಾ ನಿನ್ನ ಪ್ರೀತಿಸ್ತೀನಿ ಅನ್ನೂದು ಖರೆ, ಅದೇ ಅಂತಿಮ. ನೀ ಸಿಕ್ರೂ ಸರಿ, ಸಿಗಲಿಲ್ಲ ಅಂದ್ರೂ ಸರಿ. ಜೀವನಪೂರ್ತಿ ನಿನ್ನ ನೆನಪಿನ್ಯಾಗ ಸಾಗಿಸುವಷ್ಟು ಸುಂದರ ಕ್ಷಣಗಳನ್ನ ಕಳದೀನಿ ನಿನ್ನ ಜೋಡಿ, ಅವೇ ಸಾಕು’.
ಪತ್ರಕರ್ತೆ ಸುಶೀಲಾ ಡೋಣೂರ ಹೊಸ ಕಾದಂಬರಿ “ಪೀಜಿ”ಯ ಒಂದು ಅಧ್ಯಾಯ ನಿಮ್ಮ ಓದಿಗೆ
ದೋ ಪಲ್ ರುಖಾ
ಕ್ವಾಬೊ ಕಾ ಕಾರವಾನ್
ಔರ್ ಫೀರ್ ಚಲ್ ದಿಯಾ
ತುಮ್ ಕಂಹಾ ಹಮ್ ಕಂಹಾ
ಹಾಡು ಎದೆಯ ಒಂದೊಂದೇ ತಂತಿಯನ್ನು ಮೀಟುತ್ತ ಮೀಟುತ್ತ ತನ್ನನ್ನು ಮತ್ತೆ ತನ್ನ ಜಗತ್ತಿನಿಂದ ದೂರಕ್ಕೆಳೆದು ಹಾಕುತ್ತಿರುವಂತೆ ಅನಿಸಿ, ಹೆಡ್ ಫೋನ್ ತೆಗೆದು ಬಿಸಾಕಿದಳು ಪೂರ್ಣಾ.
ಈ ಮನುಷ್ಯ ದೂರಾಗಲೂ ಬಿಡದೆ, ಹತ್ತಿರವಾಗಲೂ ಬಿಡದೆ ಕಾಡುತ್ತಿದ್ದಾನೆ. ಬೇರೆಯವರನ್ನೆಲ್ಲಾ ಒಂದು ಹೆಜ್ಜೆಗೆ, ಒಂದು ಮಾತಿಗೆ ಮುಲಾಜಿಲ್ಲದೆ ದೂರ ತಳ್ಳಿದಂತೆ ಇವನನ್ನೂ ತಳ್ಳಬಲ್ಲೆನೆ? ಯಾಕಾಗುತ್ತಿಲ್ಲ? ದೂರ ನಿಂತಷ್ಟೇ ಉತ್ಕಟವಾಗಿ ಕಾತರಿಸುವಂತೆ ಮಾಡುತ್ತಾನೆ. ಪ್ರೀತಿ-ಪ್ರೇಮ ಅಂತೇನೂ ಅಲ್ಲದ ಅನುಬಂಧವೊಂದು ನಮ್ಮಿಬ್ಬರ ನಡುವೆ ಬೆಳೆದು ನಿಂತಿದೆ. ನಾನು ಹುಡುಕುವ ಪ್ರೀತಿ ಅವನಲ್ಲ, ಆದರೆ ಆ ಕಣ್ಣಲ್ಲಿನ ತಣ್ಣನೆಯ ಮಮತೆಗೆ ನಾನು ಕಳೆದುಕೊಳ್ಳುತ್ತಿದ್ದೇನೇನೊ. ಅವನನ್ನು ನೋಡಿದರೆ ನನ್ನೊಳಗೆ ಅನುರಾಗದ ಹೊಳೆ ಹರಿಯುವುದಿಲ್ಲ ಎನ್ನುವುದು ಎಷ್ಟು ಸತ್ಯವೊ, ಅವನು ಮುದ್ದು ಮಾಡುವ ಪರಿಗೆ ನಾನು ಸೆಟೆದು ನಿಂತಷ್ಟೆ ತೀವ್ರವಾಗಿ ಮೆದುವಾಗುತ್ತೇನೆ ಎನ್ನುವುದೂ ನಿಜ. ಅಮ್ಮನ ವಾತ್ಸಲ್ಯ, ಅಣ್ಣನ ಒಲುಮೆ, ಅಕ್ಕನ ಅಕ್ಕರೆಯನ್ನೆಲ್ಲಾ ತನ್ನ ಕಣ್ಣಲ್ಲಿ ತುಳುಕಿಸುತ್ತ ಬೇಕೆಂದೇ ನನ್ನನ್ನು ಆಳಕ್ಕೆಳೆದುಕೊಳ್ಳುತ್ತಿದ್ದಾನೇನೊ. ಇದನ್ನು ಬರೀ ಸ್ನೇಹ ಅನ್ನಲೆ? ಹಾಗಾದರೆ ಈ ಸ್ನೇಹವನ್ನು ಉಳಿಸಿಕೊಳ್ಳಲು ನನ್ನ ಬಳಿ ಬೇರೆ ಯಾವ ದಾರಿ ಇದೆ?
ದೇವರೆ, ನಾನು ತಿಳಿದುಕೊಂಡಿದ್ದೆಲ್ಲಾ ಸುಳ್ಳಂತ ಅವನು ಒಮ್ಮೆ ಹೇಳಿ ಬಿಡಲಿ. ನಾನೆಂದರೆ ಸ್ನೇಹವಲ್ಲದೇ ಬೇರೆ ಯಾವ ಭಾವನೆಯೂ ಇಲ್ಲ ಅಂತನ್ನಲಿ. ಜೀವಮಾನದ ಗೆಳೆಯನೆಂದುಕೊಂಡವ ಅವನೊಬ್ಬನೇ. ಅವನನ್ನೂ ಹೀಗೆ ನಿರ್ದಯವಾಗಿ ಜೀವನದಿಂದ ಹೊರಗಟ್ಟುವ ಸಮಯ ಬರಬಹುದು ಅಂದುಕೊಂಡಿರಲಿಲ್ಲ.
ಇದ್ಯಾಕೊ ಸರಿ ಹೋಗುತ್ತಿಲ್ಲವೆಂದು ತೀವ್ರವಾಗಿ ಅನ್ನಿಸತೊಡಗಿತು ಅವಳಿಗೆ. ತಾನು ಬದಲಾಗಬೇಕು. ತಾನೆ ಬದಲಾಗದ ಹೊರತು ಏನೂ ಸರಿ ಹೋಗದು ಎನ್ನುವುದೂ ಖಾತ್ರಿಯಾಯಿತು. ಅವನ ಸ್ನೇಹದಿಂದ ಕಳಚಿಕೊಳ್ಳದೆ, ತನ್ನ ಮನಸ್ಸು ಮತ್ಯಾರಿಗೂ ತೆರೆದುಕೊಳ್ಳದು ಅನ್ನಿಸಿದ್ದೇ ತಡ, ಅದೇ ಕ್ಷಣ ದಿಲೀಪನಿಗೊಂದು ಮೆಸೇಜು ಹಾಕಿ ಬಿಟ್ಟಳು- ಮಾತಾಡುವುದಿದೆ, ರಜೆ ನೋಡಿಕೊಂಡು ಬೆಂಗಳೂರಿಗೆ ಬಂದು ಹೋಗೆಂದು ಮೆಸೇಜು ಹಾಕಿದಾಗ ರಾತ್ರಿ ಹನ್ನೊಂದೂವರೆ. ಮಲಗಿದ್ದವ ಕೀ ಕೊಟ್ಟ ಬೊಂಬೆಯಂತೆ ಥಟ್ಟನೆದ್ದು ಮನೆಯಲ್ಲಿ ಒಂದು ಮಾತೂ ಹೇಳದೆ ಪಲ್ಸರ್ ಬೈಕಿನ ಟ್ಯಾಂಕ್ ಭರ್ತಿ ಪೆಟ್ರೋಲು ತುಂಬಿಸಿಕೊಂಡು ಬೆಂಗಳೂರಿನ ದಾರಿ ಹಿಡಿದ. 460 ಕಿಲೊಮೀಟರ್ ರಸ್ತೆಯನ್ನು ಕೇವಲ ಐದು ಗಂಟೆಯಲ್ಲಿ ಕ್ರಮಿಸಿ, ಬೆಳಗಿನ ಜಾವ ಮಲ್ಲೇಶಿಯ ರೂಮಿಗೆ ಬಂದ. ನೀಟಾಗಿ ಶೇವ್ ಮಾಡಿಕೊಂಡು, ಹೊಸ ಶರ್ಟ್ ತೊಟ್ಟು ಟ್ರಿಮ್ ಆಗಿ ಅವರ ಮಾಮೂಲು ಸ್ಥಳ ಇಸ್ಕಾನ್ ದೇವಸ್ಥಾನದ ಮೆಟ್ಟಿಲ ಮೇಲೆ ಒಂಟಿಗಾಲಲ್ಲಿ ಕಾದು ನಿಂತಾಗ ಬೆಳಗಿನ ಒಂಬತ್ತೂವರೆ.
ಹೀಗೆ, ಬೆಳಗಾಗುವುದರೊಳಗೆ ಹಾಜರಾಗುತ್ತಾನೆ ಎನ್ನುವ ನಿರೀಕ್ಷೆ ಇಲ್ಲದ್ದಕ್ಕೆ ಅವಳು ತುಸು ದಿಗಿಲುಗೊಂಡಳು. ಯಾವತ್ತಿದ್ದರೂ ಮುರಿದುಕೊಳ್ಳಲೇಬೇಕಿರುವ ಸಂಬಂಧ. ಅದಕ್ಯಾಕೆ ದಿನ, ಸಮಯ ನೋಡಬೇಕು? ಎಷ್ಟು ಬೇಗ ಆದರೂ ಒಳ್ಳೆಯದೆ ಎಂದುಕೊಂಡು ಅವಳೂ ರಜೆ ಹಾಕಿಕೊಂಡು ಹತ್ತು ಗಂಟೆಗೆಲ್ಲ ರಾಜಾಜಿನಗರಕ್ಕಿಳಿದಳು. ಯಾವುದೇ ಭಿಡೆ ಇಲ್ಲದೆ, ಯಾವ ಅಳುಕೂ ಇಲ್ಲದೆ ನೇರಾನೇರ ಅವನೆದುರು ಮಾತಾಡಿ ಅವತ್ತಿಗೇ, ಅದೇ ಕ್ಷಣಕ್ಕೆ ಅವನಿಂದ ಬಿಡಿಸಿಕೊಂಡು ನಿರಾಳವಾಗಬೇಕು ಅಂತ ಗಟ್ಟಿ ನಿರ್ಧಾರ ತಾಳಿಯೆ ಮನೆಯಿಂದ ಹೊರಬಿದ್ದಿದ್ದಳು. ಅವನಿಲ್ಲದೆಯೂ, ಅವನ ಒಂದು ಫೋನು, ಮೆಸೇಜುಗಳಿಲ್ಲದೆಯೂ ತಾನು ಗೆಲುವಾಗಿರಬೇಕು ಎಂದು ಗಟ್ಟಿಗೊಂಡಿದ್ದಳು.
ದೇವರ ದರ್ಶನ ಮಾಡಿ ಮತ್ತೆ ಬಂದು ಅದೇ ಮೆಟ್ಟಿಲ ಮೇಲೆ ಕುಳಿತರು. ಅವನು ಚಡಪಡಿಸುತ್ತಿದ್ದ. ಅವಳು ಮಾತಾಡುವುದಿದೆ ಅಂದಿದ್ದಕ್ಕೆ ಏನೇನೊ ಕಲ್ಪಿಸಿಕೊಂಡು ಪುಳಕಗೊಳ್ಳುತ್ತಿದ್ದಾನೊ ಏನೊ. ಅವನ ಕಣ್ಣಲ್ಲಿ ಎಂಥದೊ ಹೊಳಪು, ಆದರೂ ಏನೊ ಕಳವಳ. ಅವನು ತನ್ನಿಂದ ಯಾವ ಮಾತುಗಳನ್ನು ನಿರೀಕ್ಷಿಸುತ್ತಿದ್ದಾನೆಂದು ಊಹಿಸಬಲ್ಲವಳಾಗಿದ್ದಳು.
‘ಬಾ, ಅಲ್ಲಿ ಕೂತ್ಕೊಂಡು ಮಾತಾಡೋಣು’ ಅಂದ.
‘ಬೇಡ, ಡಾಮಿನೋಸ್‌ಗೆ ಹೋಗೋಣ. ಮೊಟ್ಟಮೊದಲ ಪಿಜ್ಜಾ, ಮೊದಲ ಬಾರಿ ನಿನ್ನೊಂದಿಗೇ ತಿಂದಿದ್ದು… ಕಟ್ಟ ಕಡೆಯ ಪಿಜ್ಜಾ ಸಹ ನಿನ್ನ ಜೊತೆಗೇ ಆಗಲಿ’ ಅಂತಂದಳು. ಕ್ಷಣ ಗಲಿಬಿಲಿಗೊಂಡ. ಅವನ ಉತ್ಸಾಹ ಕ್ಷಣಮಾತ್ರದಲ್ಲಿ ಇಳಿದಂತಾಯ್ತು. ಮೌನವಾಗಿ ಎದ್ದು ಬೈಕ್ ಬಳಿ ಬಂದು, ‘ಕೂತ್ಕೊ’ ಅಂದ. ಅವಳು ಬೈಕನ್ನೊಮ್ಮೆ ಇಡಿಯಾಗಿ ನೋಡಿದಳು. ಯಾವುದೊ ಹೊಸ ನಿರೀಕ್ಷೆಯಲ್ಲಿದ್ದ ಅವನ ಕಣ್ಣಂತೆ ಬೈಕ್ ಕೂಡ ಫಳಫಳ ಹೊಳಿತಿತ್ತು. ತನಗಾಗಿಯೇ ಕೊಂಡ ಬೈಕದು. ಅಣ್ಣನ ಬೈಕ್ ಬಿಟ್ಟರೆ ಇದನ್ನೇ ಹತ್ತಿದ್ದು. ಅಣ್ಣನ ಬೈಕ್ ಮೇಲೆ ತನಗಿನ್ನು ಜಾಗವಿಲ್ಲ ಅನ್ನಿಸಿದಾಗ ಸೀದಾ ಅಂಟಿಕೊಂಡಿದ್ದು ಇವನ ಬೈಕಿಗೇ… ಬೇರೆಯವರಂತೆ ಸುಮ್ಮಸುಮನೇ ಬ್ರೇಕ್ ಹಾಕುವುದಿಲ್ಲ, ಬೈಕನ್ನು ಹಂಪ್‌ಗಳಲ್ಲಿ ಅನವಶ್ಯಕ ಕುಲುಕಿಸುವುದಿಲ್ಲ… ಇಂಥವೇ ಕಾರಣಗಳಿದ್ದವು ಇವನ ಬೈಕೂ, ಇವನೂ ಮನಸಿಗೆ ಹತ್ತಿರವಾಗಲು… ಕನ್ನಿಂಗ್‌ಹ್ಯಾಮ್ ರಸ್ತೆಯ ಡಾಮಿನೋಸ್‌ನ ಅದೇ ಖಾಯಂ ಕಾರ್ನರ್ ಸೀಟಿನಲ್ಲಿ ಎದುರು-ಬದುರು ಕೂತರು. ಅವಳು ಎಲ್ಲೊ ನೋಡುತ್ತ-ಅವನು ಅವಳನ್ನೇ ನೋಡುತ್ತ ಎಷ್ಟೊ ಹೊತ್ತು ಕಳೆದು ಹೋಯಿತು.
‘ಹಂ… ಹೇಳು ದಿಲೀಪ…’ ಅಂದ ಮಾತಿಗೆ ಅನುನಯಿಸುತ್ತ, ‘ಏನ್ ಹೇಳ್ಳಿ ಕಂದಾ?’ ಅಂದ. ಅವನ ತಣ್ಣನೆಯ ದನಿಗೆ, ಆ ಅಕ್ಕರೆಯ ಮಾತಿಗೆ ಮತ್ತೂ ಮನಸ್ಸು ಹೂವಾಯಿತು.
‘ಇದೆಲ್ಲಾ ಬ್ಯಾಡ ನೋಡು, ಸೀದಾ ಮಾತಾಡು… ಹಿಂಗೆಲ್ಲಾ ಮಾತಾಡಿ ನನ್ನ ಮರಳು ಮಾಡ್ಬೇಕು ಅಂತ ನಿರ್ಧಾರ ಮಾಡ್ಕೊಂಡೇ ಬಂದಿ ಏನು?’
‘ಇಲ್ಲ’ ಅಂದ ಚುಟುಕಾಗಿ.
‘ಹೇಳು, ನಿನಗ ನಾ ಅಂದ್ರ ಏನು?’ ತೀಕ್ಷ್ಣವಾಗಿತ್ತು ಅವಳ ಪ್ರಶ್ನೆ.
‘ಎಲ್ಲಾ…’
‘ಎಲ್ಲಾ ಅಂದ್ರ?’
‘ನನ್ನ ಜೀವನಾನೂ ನೀನೇ, ಜೀವಾನೂ ನೀನೇ…’ ಅವನೂ ದೃಢವಾಗಿದ್ದ.
‘ಅದ್ಹೆಂಗ ಆಗ್ತದ ದಿಲಿ, ನಿನ್ನ ಜೀವನಾನೇ ಬ್ಯಾರೆ, ನನ್ನ ಜೀವನಾನೇ ಬ್ಯಾರೆ ಅಲ್ಲೇನೊ? ನಾವಿಬ್ರೂ ಫ್ರೆಂಡ್ಸು… ಸ್ನೇಹ ಬಿಟ್ರ ನಮ್ಮ ನಡುವ ಏನೂ ಇಲ್ಲ… ಹೌದಿಲ್ಲೊ?’ ಕೇಳಿದಳು. ಆತ ಸುಮ್ಮನಾದ.
‘ಹೂಂ ಅಂತ ಹೇಳು ದಿಲಿ, ನಮ್ಮ ಈ ಗೆಳೆತನ ಕಡೀತನಕ ಇರಬೇಕೊ, ಬೇಡೊ ಅಂತನೂ ಹೇಳಿ ಬಿಡು’.
‘ಯಾಕ? ನಿನಗ ನಮ್ಮ ಗೆಳೆತನದ ಮ್ಯಾಲ ಡೌಟಾ? ಈ ಗೆಳೆತನ ಸಾಕು ಅನಸಾತದಾ? ನನ್ನನ್ನ ಬಿಟ್ಟು ಹೋಗ್ಬೇಕು ಅನಸಾತದಾ?’
‘ಇಲ್ಲ, ನಮ್ಮ ನಡುವಿನ ಸಂಬಂಧ ಏನು ಅಂತ ಕ್ಲೀಯರ್ ಆಗ್ಬೇಕಾಗೇದ’.
‘ನೀನೇ ಹೇಳಿಬಿಡು ಕಂದಾ, ಇಷ್ಟು ದಿನ ಇಲ್ಲದ ಅನುಮಾನ ಈಗ ಶುರುವಾಗಿದ್ದು ನಿನಗ. ನಮ್ಮ ಸಂಬಂಧ ಎಂಥದ್ದು… ನಾವು ಬರೀ ಫ್ರೆಂಡ್ಸಾ? ನೀನೇ ವ್ಯಾಖ್ಯಾನ ಮಾಡು… ನೀನು ಹೇಳಿದ್ದೇ ಅಂತಿಮ’.
‘ಎಲ್ಲಾ ನನ್ನ ಮ್ಯಾಲೇ ಹಾಕ್ತೀ?’
‘ಯಾಕಂದ್ರ ಈ ಪ್ರಶ್ನೆಗಳು ಹುಟ್ಟಿದ್ದು ನಿನ್ನೊಳಗ. ಇಷ್ಟು ವರ್ಷಗಳಾದ ಮ್ಯಾಲ ಈ ಸಂಬಂಧಕ್ಕ ಒಂದು ಹೆಸರು ಕೊಡಬೇಕು ಅಂತನ್ನಿಸಿದ್ದು ನಿನಗ, ನಮ್ಮ ಗೆಳೆತನ ಎಂಥದ್ದು ಅನ್ನೂ ಡೌಟು ಶುರು ಆಗಿದ್ದೂ ನಿನಗೇ… ನನಗಲ್ಲ…’
‘ಹೌದು, ಯಾಕಂದ್ರ ನಿನ್ನ ಮನಸು ಮೊದಲಿನಂಗಿಲ್ಲ, ಅಲ್ಲಿ ಏನೊ ನಡ್ಯಾತೇತಿ… ನೀನು ಮುಚ್ಚಿ ಇಡಾತಿ… ನನಗ ಗೊತ್ತದ ದಿಲಿ…’ ಅವನ ಹಣೆಯ ಮೇಲೆ ಆತಂಕದ ಗೆರೆಗಳು ಮೂಡಿದವು.
‘ಅಂದ್ರ?’ ತುಸು ಅಧೀರನಾಗಿ ಕೇಳಿದ.
‘ಯಾಕ? ಏನೂ ಅರ್ಥ ಆಗವಲ್ಲದೇನು ನಿನಗ? ನಾ ಬ್ಯಾರೆ ಹುಡುಗನ ಜೋಡಿ ಕಾಣಿಸಿಕೊಂಡ್ರ ನೀ ಯಾಕ ಕಂಪಿಸ್ತಿ? ನಂದು, ಹೇಮಂತಂದು ಬ್ರೇಕ್‌ಅಪ್ ಆದಾಗ ನೀ ಒಂಥರಾ ರಿಲೀಫ್ ಆದಿ ಅಲ್ಲ? ನನಗದು ಗೊತ್ತಾಗಲಿಲ್ಲ ಅಂದ್ಕೊಂಡಿ? ಸುಹಾನಾ ಜೋಡಿ ನಿನ್ನ ಕೆಮಿಷ್ಟ್ರಿ ಚಲೊ ಹೊಂಟಿತ್ತು… ಯಾಕ ಹಿಂದ ಸರದಿ?’
‘ಕನ್‌ಪ್ಯೂಸ್ ಆಗಬೇಡ ಕಂದಾ… ಸ್ಪಷ್ಟವಾಗಿ ಮಾತಾಡು. ನಿನ್ನ ಮನಸ್ಸು ದೃಢವಾಗಿಲ್ಲನು? ನಿನ್ನ ಮನಸಿನಾಗ ನನ್ನ ಬಗ್ಗೆ ಗೆಳೆತನ ಮೀರಿದ ಭಾವನೆಗಳು ಮೂಡಾತ್ತಾವ? ಅದರಿಂದ ತಪ್ಪಿಸಿಕೊಳ್ಳಾಕ ನನ್ನಿಂದ ದೂರ ಓಡೋ ಪ್ರಯತ್ನ ಮಾಡಾತಿ?’ ಇಡೀ ಪರಿಸ್ಥಿತಿಯನ್ನು ಅವನು ತನ್ನ ಮೇಲೆಯೆ ಎಳೆದು ಹಾಕಲು ನೋಡುತ್ತಿದ್ದಾನೆನ್ನಿಸಿತು. ತಾನು ಹೆಣೆದ ಬಲೆ ತನ್ನನ್ನೆ ಒಳಗೆಳೆದುಕೊಳ್ಳುತ್ತಿರುವಂತೆ ಭಾಸವಾಯ್ತು ಅವಳಿಗೆ.
‘ಶಟ್ ಅಪ್’ ಕಿರುಚಿದಳು.
‘ಹೌದು, ಇಷ್ಟು ದಿನ ಇಲ್ಲದ ಗೊಂದಲ ಈಗ ಯಾಕ? ನಿನ್ನ ಮನಸಿನಾಗ ಮೂಡಿದ ಗೊಂದಲಗಳನ್ನ ಎಳೆದು ತಂದು ನನ್ನ ಮನಸಿನಾಗ ತುರುಕಾಕ ನೋಡಾತಿ?’
‘ಗೊಂದಲ ಮಾಡ್ಕೊಬ್ಯಾಡ, ಮೊದಲು ನಿನ್ನ ಮನಸ್ಸಿನ ಬಗ್ಗೆ ನೀ ಹೇಳು’.
‘ಹೇಳಿದ್ನಿ ಅಲ್ಲ? ನಾನು ಸ್ಪಷ್ಟವಾಗಿದ್ದೀನಿ, ನನಗ ಜೀವನಾನೂ ನೀನೇ, ಜೀವಾನೂ ನೀನೇ… ನಿನ್ನನ್ನ ಬಿಟ್ಟು ಬದುಕೇ ಇಲ್ಲ. ಗೊಂದಲ ಇರೂದು ನಿನಗ… ನಾನು ಏನು ಅನ್ನೂ ಗೊಂದಲ, ನನ್ನ ಮನಸಿನ್ಯಾಗ ಏನದ ಅನ್ನೂ ಗೊಂದಲ, ನಾನು ಬೇಕೊ, ಬ್ಯಾಡೊ ಅನ್ನೂ ಗೊಂದಲ… ಬೇಕು ಅನ್ನೂದಾದ್ರ ಯಾವ ರೂಪದಾಗ ಬೇಕು ಅನ್ನೂ ಗೊಂದಲ… ಆ ಗೊಂದಲಗಳಿಂದ ಬಿಡಿಸಿಕೊಂಡು ಹೊರಗ ಬಾ ಕಂದಾ’.
ನಿಜ, ಅವನ ಮೇಲೆ ಇರುವುದು ಯಾವ ಭಾವನೆ ಎನ್ನುವ ಗೊಂದಲದಲ್ಲಿ ಉಳಿದವಳು ತಾನೆ. ಅವನಿಂದ, ಅವನ ಪ್ರೀತಿಯಿಂದ ತಪ್ಪಿಸಿಕೊಳ್ಳಲು ಓಡುತ್ತಿರುವವಳೂ ತಾನೇ. ಈ ಪ್ರೀತಿಯ ಹರಿವಿಗೆ ಆಣೆಕಟ್ಟು ಕಟ್ಟುತ್ತಿರುವುದು ನಿಜವೇ ಅಥವಾ ಇದೀಗ ತಾನೆ ಹೆಡೆ ಎತ್ತುತ್ತಿರುವ ವಿಷಸರ್ಪವನ್ನು ಈಗಲೇ ಹಲ್ಲು ಕಿತ್ತಿಡಬೇಕು ಎನ್ನುವ ಹಟವೆ? ಗೊತ್ತಾಗಲಿಲ್ಲ. ಅವನಷ್ಟಕ್ಕೆ ಅವನಿದ್ದನಲ್ಲವೆ, ಅವನನ್ನು ಕರೆದು ಮುಂದೆ ಕೂರಿಸಿಕೊಂಡು, ಅವನೆದುರು ಹೀಗೆ ಮಾತಿಗಾಗಿ ಪರಿತಪಿಸುವುದು ತನಗಾದರೂ ಯಾಕೆ ಬೇಕಿತ್ತು? ಅಷ್ಟಕ್ಕೂ ಹೀಗೆ ದಿಢೀರನೇ ಅವನನ್ನು ಕರೆದು ಮಾತಿಗೆ ಕೂರುವ ಮುನ್ನ ತಾನು ಇನ್ನೊಂದಿಷ್ಟು ಸಿದ್ಧತೆ ಮಾಡಿಕೊಳ್ಳಬೇಕಿತ್ತು…
‘ನನ್ನ ಮುಂದ ಸೊಕ್ಕು ತೋರಿಸಬೇಡ ದಿಲೀ, ನಿನಗ ಗೊತ್ತದ, ಹಟಕ್ಕ ನಿಂತ್ರ ನಾ ಎಲ್ಲೂ ಸೋಲೂದಿಲ್ಲ ಅಂತ…’ ಎಚ್ಚರಿಕೆ ನೀಡಿದಳು.
‘ಸೋಲು ಗೆಲುವಿನ ಪ್ರಶ್ನೆ ಇಲ್ಲಿ ಬರೂದಿಲ್ಲ ಪೂಣ, ಸಾವಿರ ಸಲ ನಾನೇ ಸೋತಿನಿ, ಜೀವನಪೂರ್ತಿ ನಾನೇ ಸೋಲುತಿನಿ. ಪ್ರೀತಿಗಿ ಶರಣಾಗೂದರಾಗ ನನಗೇನೂ ಯಾವ ಹಮ್ಮೂ ಅಡ್ಡ ಬರೂದಿಲ್ಲ. ನಿನ್ನೆದುರು, ನಿನಗಾಗಿ ಸೋಲೂದೂ ಸೈತ ಸುಖ ನನಗ’ ಎಂದಾಗ ಮತ್ತೊಮ್ಮೆ ಮಾತಿಗಾಗಿ ತಡಕಾಡಿದಳು. ತನಗೆ ಸೋಲುವೆ ಅನ್ನುತ್ತ, ಅಣುಅಣುವಾಗಿ ತನ್ನನ್ನೇ ಸೋಲಿಸುತ್ತಿರುವ ಅವನ ಜಾಣ್ಮೆಗೆ ಬೆರಗಾದಳು. ಅವಳು ಹೀಗೆ ಮಾತು ಕಳಕೊಂಡವಳಂತೆ ಕೂತಾಗೆಲ್ಲಾ ಅವನ ಮುಖದ ಮೇಲೆ ಪ್ರಶಾಂತವಾದ ಮೆಲುನಗೆಯೊಂದು ವಿರಮಿಸುತ್ತಿತ್ತು.
‘ದಿಲಿ, ನಿನ್ನ ಮಾತು ನನಗ ಅರ್ಥ ಆಗೂದಿಲ್ಲ ಅಂದ್ಕೊಂಡಿ…’ ಎಂದಳು ಧುಮುಗುಡುತ್ತ.
‘ನನ್ನ ಮಾತು ಅರ್ಥ ಆಗೂದಿರಲಿ, ನಿನ್ನ ಮನಸೇ ನಿನಗ ಅರ್ಥ ಆಗವಲ್ಲದು ಪೂಣ, ಸುಮ್ಮನೇ ಕುದಿತೀಯ… ಯಾಕಷ್ಟು ತ್ರಾಸು ಮಾಡ್ಕೋತಿದ್ದಿ? ಆರಾಮಾಗಿರು, ಆರಾಮಾಗಿ ಕೂತು ಯೋಚನೆ ಮಾಡು… ನಿನಗ ಯಾವುದು ನೆಮ್ಮದಿ ಅನಸತದೊ ಅದನ್ನೇ ಮಾಡು, ಯಾವ ಒತ್ತಾಯನೂ ಇಲ್ಲ.’
‘…………….’
‘ನಾನು ಬೇಕಾ, ಬೇಡವಾ ಅನ್ನೋ ತಳಮಳ ಅದ ನಿನ್ಗ. ಮೊದಲು ಅದನ್ನ ತೀರ್ಮಾನ ಮಾಡು. ನೀನು ಬೇಕು ಅಂದ್ರ ಈ ಪ್ರಾಣ ಇರೂತನಕ ನಿನ್ನ ಜೋಡಿ ಇರ್ತೀನಿ, ನೀನು ತೋರಿಸಿದ ಸಂಬಂಧದೊಳಗೇ ಇರ್ತೀನಿ. ನೀನು ಬ್ಯಾಡ ಅಂದ್ರ ಇವತ್ತು ಇಲ್ಲಿಂದ ಹೋದವ, ಮತ್ತೆ ನೀನಾಗೇ ಹುಡುಕಿಕೊಂಡು ಬರೂತನಕ ನಿನ್ನೆದುರು ಸುಳಿಯೂದಿಲ್ಲ’ ಅಂತಂದ.
‘ನಿನ್ನ ಇಂಥ ಮಾತಿಗೆ ಕರಗ್ತೀನಿ ಅಂದ್ಕೊಂಡಿ? ಏನಾದ್ರೂ ಮಾಡಿ ನನ್ನ ವಶಪಡಿಸಿಕೋಬೇಕು ಅಂತ ಮಾಡಿದಿ?’ ಅಂದಳು ತುಸು ಯೋಚಿಸಿ.
‘ಪ್ರೇಮ ಅಂದ್ರ ವಶಪಡಿಸಿಕೊಳ್ಳುದಲ್ಲ ಪೂಣ, ಪ್ರೇಮ ಅಂದ್ರ ವಶವಾಗುದು, ನಾನೇ ನಿನ್ನ ವಶವಾಗಿನಿ. ನೀನಿಲ್ಲದೇ ಉಸಿರಾಡೂದ ಮರೆತು ಬಿಡ್ತೀನಿ. ಹೆಬ್ಬಾವಿನಂಥ ಪ್ರೀತಿನ ಮನಸಿನ್ಯಾಗೇ ಇಟ್ಕೊಂಡು ನಿನಗ ಅದರ ಸುಳಿವೂ ಸಿಗದಂಗ ಸಂಭಾಳಿಸಿಕೊಂಡಿನಿ. ನೋಡಾಕ ಬರೋ ಹುಡುಗರ ಮುಂದ ನೀ ಅಲಂಕಾರ ಮಾಡ್ಕೊಂಡು ಕೂಡುವಾಗೆಲ್ಲಾ ನಾ ಒಳಗೇ ಸಂಕಟ ಪಟ್ಟೀನಿ, ಕಾಫಿ ಕೆಫೆಯಲ್ಲಿ ನೀನು ಯಾರದೊ ಜೋಡಿ ಕುಂತು ಕಾಫಿ ಕುಡಿಯುವಾಗೆಲ್ಲಾ ನನ್ನ ಹೃದಯಕ್ಕೇ ಯಾರೊ ಕೈಹಾಕಿ ಎಳೆದಂಗ ನಾ ಕಂಪಿಸೀನಿ… ನಿನ್ನ ಜೋಡಿ ಬಾಳಬೇಕು ಅಂತ ಕನಸು ಕಂಡ್ರೂ ಗಲ್ಲಿಗೇರಿಸುತ್ತೀ ಅನ್ನೋ ಅಂಜಿಕಿ ಒಳಗ ಸುಮ್ಮನಿದ್ಯಾ. ನೀನು ಬ್ಯಾರೆಯವರ ಜೋಡಿ ಮದುವಿ ಮಾಡ್ಕೊಂಡು ಹೋದ್ರೂ, ಹಿಂಗೇ ಹಲುಬುತ್ತ ಕೂತು ಬಿಡ್ತಿದ್ಯಾ. ಆದ್ರ, ನೀನೇ ಎದುರು ಕೂತು ಎಲ್ಲವನ್ನೂ ಹೊರಗೆಳೆದಿದ್ದು ಒಳ್ಳೇದೇ ಆಯ್ತು… ನಾನೀಗ ಹಗುರ ಆಗಿನಿ ಪೂಣ… ನನ್ನೊಳಗಿನ ಭಾರ ಎಲ್ಲಾ ಇಳಿದಂಗಾಯ್ತು…’
‘ಒಬ್ಬ ಗೆಳೆಯನಾಗಿ ನೀನಂದ್ರ ನನಗಿಷ್ಟ. ಆದ್ರ, ನೀನು ನನ್ನ ಆಯ್ಕೆ ಅಲ್ಲ ದಿಲೀ. ನಿನ್ನ ಮನಸ್ಸು ಕೆಡಿಸಿಕೊಂಡಿ, ನನ್ನ ಮನಸೂ ಕೆಡಿಸಬ್ಯಾಡ. ಕೊನೀ ಮಾತು ಹೇಳ್ತೀನಿ. ನಿನಗ ಆ ಭಾವನೆ ಇಲ್ಲಂತ ಒಪ್ಪಿಕೊಂಡು ಬಿಡು. ನಮ್ಮಿಬ್ಬರ ಸ್ನೇಹ ಉಳಿಸಾಕ ನಿನಗೊಂದು ಕೊನೆಯ ಅವಕಾಶ ಕೊಡ್ತೀನಿ. ನನ್ನ ಜೀವನದಾಗ ನೀ ಇರಬೇಕು, ಗೆಳೆಯನಾಗಿ ಮಾತ್ರ’ ಮಾತಲ್ಲಿ ಯಾಚನೆ ಇತ್ತು.
‘ಈ ಮಾತು ಚರ್ಚೆಗೆ ಬರದೆ ಹೋಗಿದ್ರ ನಾನು ಈ ಸುಳ್ಳು ಹೇಳಬಹುದಿತ್ತು ಪೂಣ, ಈಗ ಎಲ್ಲಾನೂ ಒಪ್ಗೊಂಡ ಮ್ಯಾಲ ಮತ್ತ ಅದೇ ಸುಳ್ಳನ್ನ ಆರಂಭದಿಂದ ಹೇಳು ಅಂದ್ರ ಹೇಳಾಕ ಆಗೂದಿಲ್ಲ. ಏನು ಶಿಕ್ಷೆ ಕೊಡ್ತೀಯೊ ಕೊಡು. ನಾ ನಿನ್ನ ಪ್ರೀತಿಸ್ತೀನಿ ಅನ್ನೂದು ಖರೆ, ಅದೇ ಅಂತಿಮ. ನೀ ಸಿಕ್ರೂ ಸರಿ, ಸಿಗಲಿಲ್ಲ ಅಂದ್ರೂ ಸರಿ. ಜೀವನಪೂರ್ತಿ ನಿನ್ನ ನೆನಪಿನ್ಯಾಗ ಸಾಗಿಸುವಷ್ಟು ಸುಂದರ ಕ್ಷಣಗಳನ್ನ ಕಳದೀನಿ ನಿನ್ನ ಜೋಡಿ, ಅವೇ ಸಾಕು’.
‘ಸರಿ ಹಂಗಾರ, ಹೋಗು, ಹೋಗಿ ಬಿಡು, ಇವತ್ತಿಂದ ನಿನ್ನ ಮುಖ ತೋರಿಸಬ್ಯಾಡ. ನಿನ್ನಂಥವನೊಬ್ಬ ನನಗ ಗೆಳೆಯನಾಗಿದ್ದ ಅನ್ನೂದನ್ನೇ ಮರೀಬೇಕು ನಾನು… ಹಂಗ ದೂರಾಗಬೇಕು…’ ಅಂದಳು. ಅಳುತ್ತಾನೆ. ಅಂಗಲಾಚುತ್ತಾನೆ, ಕಂಗಾಲಾಗುತ್ತಾನೆ, ದೇಹಿ ಅನ್ನುತ್ತಾನೆ ಅಂದುಕೊಂಡಿದ್ದಳೇನೊ. ಆದರೆ, ಅವನು, ‘ಬರ್ತೀ, ನೀನಾಗೇ ಬರ್ತೀ… ನಾ ಕಾಯ್ತೀನಿ…’ ಅಂತಂದ ದೃಢವಾಗಿ.
‘ನಿನ್ನ ನಂಬಿದ್ಯಾ ನಾನು ದಿಲೀ, ಯಾಕೊ ಹಿಂಗ್ ಮಾಡ್ದಿ?’ ದೀನಳಾಗಿ ಕೇಳಿದಳು. ಅವಳು ಕೇಳಿದ ಪ್ರಶ್ನೆಯೂ, ಅವಳ ದನಿಯಲ್ಲಿನ ನೋವೂ ಒಟ್ಟಾಗಿ ಅವನೆದೆಗೆ ಇರಿದಂತೆನಿಸಿ ಘಾಸಿಗೊಂಡ. ಒಂದರೆಕ್ಷಣವೂ ನಿಲ್ಲದೆ ರಪರಪ ಹೆಜ್ಜೆ ಹಾಕುತ್ತಾ ಹೋಗಿಯೇ ಬಿಟ್ಟಳು. ಇಷ್ಟು ವರ್ಷಗಳ ಸ್ನೇಹವನ್ನು ಒಂದಿಷ್ಟೂ ಬೇಸರವಿಲ್ಲದೆ ಬಿಸುಟಿ ಹೋಗುತ್ತಿದ್ದವಳನ್ನೆ ನೋಡುತ್ತ ನಿಂತ ದಿಲೀಪ.
(ಕೃತಿ: ಪೀಜಿ (ಕಾದಂಬರಿ), ಲೇಖಕರು: ಸುಶೀಲಾ ಡೋಣೂರ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 330/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
*ಪೀಜಿ* ಕಾದಂಬರಿಯಲ್ಲಿ ಪ್ರೀತಿಯಲ್ಲಿನ ತಳಮಳ ಓದುಗರ ಮನಸ್ಸನ್ನ ಸ್ಪಂದಿಸುತ್ತದೆ. ಪ್ರೀತಿಯಲ್ಲಿನ ಗೊಂದಲ ಎಳೆ ಎಳೆಯಾಗಿ ವಿವರಿಸಿ ಸಾರ ಉಣಬಡಿಸುವಂತೆ ಚಿತ್ರಣ ಕಣ್ಣ ಮುಂದೆ ತಂದು ನಿಲ್ಲಿಸುವಂತಿದೆ. ಉತ್ತಮ ಓದುಗರಿಗೆ ಈ ಕಾದಂಬರಿ ಕೈದೀವಿಗೆಯೂ ಹೌದು ಎನಿಸುತ್ತಿದೆ. ಈ ಪೀಜಿ ಕಾದಂಬರಿ ಎಂದರೆ… ಅಂತರಾಳದ ನೋವಿಗೆ ಸಾಥ್ ನೀಡುವ ಸಂಗಾತಿ. ನನ್ನೊಳಗಿನ ತವಕಗಳಿಗೆ ಜೀವ ಕೊಡುವ ಪರಿ ಈ ಕೃತಿಯಲ್ಲಿದೆ.
ನನ್ನ ಓದಿನ ಹಸಿವನ್ನು ಹೆಚ್ಚಿಸಿತು..
ಥ್ಯಾಂಕ್ಯು 🙏