1.ಪ್ರೇಮವೆಂಬ ದೃಷ್ಟಾಂತ

ನಾನು ಪರಾಕ್ರಮಿ ಎಂದು
ಶತ್ರುಗಳ ಬಡಿದೆ
ನಾನು ವೀರ್ಯನಾಗಿ
ನಿರ್ವೀಯರ ಸೋಲಿಸಿದೆ.

ಆಕಾಶ, ಭೂಮಿ, ಚಂದ್ರ
ತಾರೆಗಳ ಹಿಡಿದು
ಗಹಗಹಿಸಿ ನಕ್ಕೆ!
ನೀರು, ಬೆಂಕಿ, ವಾಯುಗಳ
ಅಂಗೈಲಿ ಸೆರೆ ಹಿಡಿದು
ರಾತ್ರಿಗಳ ಕಳೆದೆ.

ಪ್ರೇಮ ಸಂಚಿನ ವಿರಹದ
ಒಂದು ರಾತ್ರಿ ಅವೆಲ್ಲವ
ಬಿಟ್ಟು ಪ್ರಣಯದ
ನೋವಿನಲ್ಲಿ ಅತ್ತೆ!
ಅಯ್ಯೋ ಎಲ್ಲ ಸೆರೆ ಹಿಡಿದ
ನನಗೆ ನೋವೇ?
ಎಂದುಕೊಂಡೆ.

ಬೆಚ್ಚಗಿನ ರಾತ್ರಿಯ
ನೀರಿನಲ್ಲಿ ನೆನದೆ
ಪ್ರೇಮದ ಸಮುದ್ರದ
ಉಕ್ಕುವ ಉಕ್ಕುವ
ಉದ್ವೇಗಕ್ಕೆ ಅಯ್ಯೋ!
ಸತ್ತೆ!
ಮತ್ತೆ ಮತ್ತೆ ಬಿಸಿ ಬಿಸಿ ತಾಗುವ
ಬಿಸಿ ಉಸಿರಿನ ವಿರಹಕ್ಕೆ
ಬೆಂದು ಪ್ರೇಮದ ದೃಷ್ಟಾಂತನಾದೆ.

2. ಮಾಯೆ ಎಂಬ ಪ್ರೇಮದ ಮಡಿಕೆ

ಇಳಿಸಲಾಗದು, ಎತ್ತಿ
ಗಟಗಟನೇ ಮಡಿಕೆಯ
ನೀರನ್ನು ಕುಡಿಯಲಾಗದು.
ಎತ್ತಿದರೆ ಹೊಡೆಯುವುದು
ಇಳಿಸಿದರೆ ಕರಗಿ ಹೋಗುವುದು
ಈ ಪ್ರೇಮವೆಂಬ ಮಾಯೆಯ ಮಡಿಕೆ.

ತುಂಬಿಸಿದರು ತುಂಬದ ಮಡಿಕೆ
ಸಾವಿರ ತೂತಿನ ಟಿಂಟಿನಿ ಮಡಿಕೆ
ಮೋಹದ ಪ್ರಪಂಚದ ಮಡಿಕೆ
ಕರಗಿಸಿ, ಕರಗಿಸಿ ಮುಳುಗುವ ಮಡಿಕೆ.

ಮುಟ್ಟಿದರೆ ಒಡೆದೇ ಹೋಗುವ ಮಡಿಕೆ
ಎತ್ತಿ ತಲೆಯ ಮೇಲೆ ಇಟ್ಟರೆ ನೀರು ಸುರಿಯುವ
ಮಡಿಕೆ;
ಒಲೆಯ ಮೇಲಿಟ್ಟು ಕಾಯಿಸಿದರೆ ಭಗ್ನವಾಗುವ
ಮಡಿಕೆ!

ಅನ್ನವ ಬೇಯಿಸಿ ತಿನ್ನಲು ಹೋದರೆ
ಮತ್ತೆ ಹಸಿವ ನೀಡುವ ಮಡಿಕೆ
ಕಂಟದ ತುಂಬ ರಸ ನೀರನ್ನು ತುಂಬಿಸಿ
ಬೆಳಗ್ಗೆ ಕುಡಿಯಲು ಹೋದರೆ ಮಾಯವಾದ
ಈ ಮಡಿಕೆ!

ಈ ಮಾಯದ ಮಡಿಕೆ, ಮುಪ್ಪು, ಯೌವನ
ಕಳೆದು ಬರೀ ಖಾಲಿಯಾಗಿಸುವ ಮಡಿಕೆ.
ಮೋಹದ ಬಲೆಯಲ್ಲಿ ಸಿಲುಕಿ ನರಳಿ ನರಳಿ
ಬಿಸಿ ನೀರ ಕಾಯಿಸುವ ಮಡಿಕೆ!
ರಸ ಸಮುದ್ರದಲ್ಲಿ ಬಿದ್ದು ಬಿದ್ದು ಪ್ರೇಮದ
ಮನೆಯನ್ನು ಮುಟ್ಟಿಸುವ ಮಡಿಕೆ.

ಈ ಮಾಟದ ಮಾಯದ ಮಡಿಕೆ
ಮುಟ್ಟದ, ಒಡೆಯದ, ಕರಗದ
ಪ್ರೇಮದ ಸಮುದ್ರದ ಮಾಯ ಮಡಿಕೆ.

3. ಈ ಜಗತ್ತು ರೋಗದ ಮನೆ

ಎಲ್ಲರೂ ಬಳಲುವವರೇ
ಔಷಧಿಯಿಲ್ಲದೆ ಸಿಗದೆ
ಒಂಟಿ ಮುಷ್ಟಿಮೈಥುನದ
ನಡುವೆ ನರಳುವುವವರೆ
ಹೆಚ್ಚು; ಈ ಲೋಕದಲ್ಲಿ.

ಕಣ್ಣುಗಳು ಕಾಂತಿಯ ಕಳೆದುಕೊಂಡು
ರಾತ್ರಿಯಲ್ಲಿ ಕುರುಡು ಆಗಿವೆ
ಕಿವಿಗಳು ಮಾತಿನ ಸ್ಪರ್ಶವ
ಮರೆತಿವೆ; ಮೂಗುಗಳು
ಪ್ರೇಮ ವಾಸನೆಯ ಬಿಟ್ಟು
ತುಕ್ಕು ಹಿಡಿದಿವೆ.

ಏಕಾಂತದ ಚಟದಲ್ಲಿ
ಜಗತ್ತು ಮಂಕಾಗಿದೆ.
ಆತ್ಮದ ಆಧ್ಯಾತ್ಮದ
ಬೆಳಕು ಕತ್ತಲೆಯ
ತುಂಬಿಸಿಕೊಂಡಿದೆ.

ಪ್ರೇಮ ಪರೀಕ್ಷೆಯಲ್ಲಿ
ಈ ಜಗತ್ತು ರೋಗಿಯಾಗಿದೆ.
ಸದಾ ಬಳಲುವ, ತೃಷೆಯ
ತೂತು ಮಡಿಕೆಯ ಹೋಲುತ್ತದೆ.
ಯುದ್ಧ, ಅಹಂಕಾರ, ಮದ
ಕಾಮ, ಮೋಹದ ಬಲೆಯಲ್ಲಿ
ಈ ಜಗತ್ತು ರೋಗದ ಮನೆಯಾಗಿದೆ.

4. ಹೂ ಬಿಟ್ಟ ಅತ್ತಿ ಮರ

ಕೇಳಿಕೊಂಡೆ ಅವಳ
ಬಳಿ;
ಅತ್ತಿ ಮರ ಹೂ ಬಿಡಲಿ ಎಂದು
ಆಯಿತು
ಆ ಮರ ಹಣ್ಣುಗಳ ಬಿಟ್ಟಿತು.

ಮತ್ತೆ ಅವಳ ಬಳಿ
ಕೇಳಿಕೊಂಡೆ;
ಈ ಸಲದ ಮರಗಳು ಹೂ
ಬಿಡಲಿ ಎಂದು;
ಆಯಿತು
ಹಣ್ಣುಗಳ ರಾಶಿ.

ಕೇಳಿಕೊಂಡೆ
ಇದೆಲ್ಲ ಹೇಗೆ ಸಾಧ್ಯ? ಎಂದು.
ಅವಳು ತನ್ನ ತೋರು ಬೆರಳುಗಳ
ತೋರಿ ಪ್ರೇಮದ ಕಥೆ ಹೇಳಿದಳು
ಹೂ ಹಣ್ಣಿನ ರಹಸ್ಯ
ಗಂಡು ಹೆಣ್ಣಿನ ದೈವಿಕ ಪರಿಮಳ ಎಂದು.
ಮಿಂಚಿ ಮರೆಯಾದಳು
ಆ ಮರಗಳ ಹೂವಿನ ಕಡೆಗೆ!

5. ಪ್ರೇಮದ ಅಗ್ನಿ

ಆ ಪ್ರೇಮದ ಪ್ರಣಯದ
ಅಗ್ನಿಯಲ್ಲಿ ಬೇಯುವುದು
ಬಲು ಕಷ್ಟ.
ಪ್ರೇಮದ ಕಣಿವೆಯಲ್ಲಿ
ಏಕಾಂತವಾಗಿ
ಕಳೆಯುವುದು ಇನ್ನೂ ಕಷ್ಟ!

ಎಲ್ಲಿ ಸಮುದ್ರವೋ
ಅಲ್ಲಿ ಅಗ್ನಿ ಸುರಿಯುತ್ತದೆ
ಎಲ್ಲಿ ಅವಳು ಇರುವಳೊ
ಅಲ್ಲಿ ನನ್ನ ಪ್ರೇಮ ಜಿನುಗುತ್ತದೆ.

ಹೃದಯ ಜೇಡರ ಹುಳುವಿನಂತೆ
ಪ್ರೇಮದ ಪರಿಧಿಯ ನೇಯುತ್ತದೆ
ಕಣ್ಣುಗಳು ಕಾಣುವ ಸೌಂದರ್ಯಕ್ಕೆ
ಬಿಸಿ ನೀರನ್ನು ಕಾಯಿಸುತ್ತದೆ.

ಉಕ್ಕುತ್ತಲೇ ಇದೆ ಪ್ರೇಮದ ಅಗ್ನಿ
ಸಮುದ್ರದ ನೀರು, ಅಲೆ ತಾಕಿದರೂ
ಅವಳ ಕಣ್ಣಿನ ಅಂಚಿನಲ್ಲಿ ಭುಗ್ಗನೆ
ಉರಿದು ಹೊಗೆಯಾಡಿ ಸೇರುತ್ತದೆ
ಪ್ರೇಮ ಸನ್ನಿಧಿಯ.

ಸೂರ್ಯಕೀರ್ತಿ ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೊಕಿನ ಬೆಟ್ಟಹಳ್ಳಿ ಗ್ರಾಮದವರು
ಬೆಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ( ಎಂ.ಕಾಂ) ಉನ್ನತ ಶ್ರೇಣಿಯಲ್ಲಿ ಮುಗಿಸಿಕೊಂಡು, ಆಸಕ್ತಿಯಿಂದ ಕನ್ನಡ ಸಾಹಿತ್ಯ ಅಧ್ಯಯನ ಮಾಡಿ ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ಕವಿತೆಗಳು ಹಿಂದಿ, ಇಂಗ್ಲೀಷ್, ಚೈನೀಸ್, ಬೆಂಗಾಲಿ ಭಾಷೆಗಳಿಗೆ ಅನುವಾದಗೊಂಡಿವೆ.
ಚೈತ್ರಾಕ್ಷಿ ಮತ್ತು ಮೀನು ಕುಡಿದ ಕಡಲು ಇವರ ಪ್ರಕಟಿತ ಕವನ ಸಂಕಲನಗಳು, ಬಹುತ್ವ ಸಾಹಿತ್ಯ ಮತ್ತು ಭಾಷೆ ಇವರ ಸಂಪಾದನಾ ಕೃತಿ.
ಅಲ್ಲಮ ಕಾವ್ಯ ಪ್ರಶಸ್ತಿ, ಉತ್ತರ ಪ್ರದೇಶದಲ್ಲಿ ನೀಡುವ ‘ತಾಥಗತ ಸೃಜನ್ ಸಮ್ಮಾನ್ʼ ಪ್ರಶಸ್ತಿ ದೊರಕಿವೆ