Advertisement
ಸ್ತ್ರೀ ಅಸ್ಮಿತೆಯ ವಿಭಿನ್ನ ನೆಲೆಗಳು: ಡಾ. ಎಲ್.ಜಿ. ಮೀರಾ ಅಂಕಣ

ಸ್ತ್ರೀ ಅಸ್ಮಿತೆಯ ವಿಭಿನ್ನ ನೆಲೆಗಳು: ಡಾ. ಎಲ್.ಜಿ. ಮೀರಾ ಅಂಕಣ

ಸ್ತ್ರೀತ್ವವನ್ನು, ಅದರಿಂದ ಹೊಮ್ಮುವ ಅರಿವನ್ನು ತಾತ್ವಿಕವಾಗಿ ನಿರ್ವಚಿಸುವುದು ಒಂದು ಬಗೆಯಾದರೆ, ಪ್ರಸ್ತುತ ಬದುಕನ್ನು ಕಾಣುವ-ಕಟ್ಟುವ ಕ್ರಮವೊಂದನ್ನು ಅದು ನೀಡುವುದೇ ಎಂದು ಅನ್ವಯಕ್ರಮದಿಂದ ನೋಡುವುದು ಇನ್ನೊಂದು ಬಗೆ. ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ಸ್ತ್ರೀಯ ಅಸ್ಮಿತೆಯು ಎದುರಿಸುತ್ತಿರುವ ಸವಾಲುಗಳನ್ನು ಚೇತನಾ ಗುರುತಿಸಿದ್ದಾರೆ ……. ಮಹಿಳೆಯರು ತಮ್ಮನ್ನು ಸ್ವಯಂ ಸಂಘಟಿಸಿಕೊಳ್ಳಲು ತಮ್ಮ ಅಸ್ಮಿತೆಯ ಮೂಲ ಸ್ವರೂಪ ಹಾಗೂ ಶಕ್ತಿ ಸಾಧ್ಯತೆಗಳನ್ನು ಅರಿಯುವುದು ಮೊದಲ ಹೆಜ್ಜೆ. ಇದು ಸಾಮಾಜಿಕ ಚಲನೆಗೂ ಪ್ರೇರಣೆಯಾಗುವ ಸಂಗತಿ. ಹೇರಿದ ಕವಚವನ್ನು ನಿಧಾನವಾಗಿ ಕಳಚಿಕೊಳ್ಳುತ್ತ ಅಸೀಮ ಆಗಸದೆಡೆಗೆ ನೋಟನೆಟ್ಟ ಸ್ತ್ರೀಸಂಕಥನವಿದು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹದಿನಾರನೆಯ ಬರಹ

ಸ್ತ್ರೀಯು ತನ್ನ ಅಸ್ಮಿತೆಯನ್ನು ಕಂಡುಕೊಂಡು ಕಾಪಾಡಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚಾಗಿ ಮತ್ತು ಗಂಭೀರವಾಗಿ ಪ್ರಯತ್ನಿಸುತ್ತಿರುವ ಕಾಲಮಾನವಿದು. ಮನೆಯ ಒಳಗೆ ಮತ್ತು ಹೊರಗೆ ತನ್ನ ಅಸ್ತಿತ್ವದ ಬಗ್ಗೆ ಮರುಚಿಂತನೆ ಮಾಡುತ್ತಾ ಹೊಸ ಹೊಸ ಪರಿಭಾಷೆಗಳಲ್ಲಿ ಮಾತಾಡುತ್ತಾ ತನ್ನದೇ ಆದ ಹೊಸ ಸಂಕಥನಗಳನ್ನು ಕಟ್ಟುತ್ತಿರುವ ಕಾಲ ಇದು. ಗಂಡಾಳಿಕೆಯನ್ನು ಕೇವಲ ವಿರೋಧಿಸುವುದಕ್ಕೆ, ಅದರ ಜೊತೆಗೆ ಜಗಳವಾಡುವುದಕ್ಕೆ ಸೀಮಿತವಾಗದೆ ಅದರಿಂದ ಆಚೆಗಿರುವ ತನ್ನ ಸೃಜನಶೀಲತೆಯನ್ನು, ಸಾಧ್ಯತೆಗಳನ್ನು ಆಳವಾದ ಚಿಂತನೆ ಮತ್ತು ಹೊಸ ಉದ್ದೀಪನದೊಂದಿಗೆ ಶೋಧಿಸಿಕೊಳ್ಳುತ್ತಿರುವ ಕಾಲ. ಗಂಡಾಳಿಕೆಯು ತನಗೆ ಬೇಕಾದಂತೆ ಸ್ತ್ರೀಯ ಬಿಂಬವನ್ನು ರಚಿಸಿಕೊಂಡು ತನ್ನ ಅನುಕೂಲದ ದುಡಿಮೆಯ ನೊಗಕ್ಕೆ ಮಾತ್ರ ಅವಳನ್ನು ಕಟ್ಟಿದ್ದನ್ನು ಪ್ರಶ್ನಿಸಿ ಸ್ವಂತಿಕೆಯುಳ್ಳ ತನ್ನ ಬಿಂಬವನ್ನು ಮಾತ್ರವಲ್ಲ, ತನ್ನ ಬಿಡುವನ್ನು ಕುರಿತು ಸಹ ತುಂಬ ತಾಜಾ ಅನ್ನಿಸುವ ಚಿಂತನೆಗಳನ್ನು ಈಗ ಮುಂದಿಡುತ್ತಿದ್ದಾಳೆ. ತನ್ನ ನೆಮ್ಮದಿ, ಬೆಂಬಲ, ಶಾಂತಿಗಳಿಗಾಗಿ ಪುರುಷನ `ಆಸರೆ’ಯನ್ನು ನೆಚ್ಚಿಕೊಳ್ಳದೆ ತನ್ನನ್ನು ಮತ್ತು ತನ್ನ ಲಿಂಗದವರನ್ನು ನೆಚ್ಚಿಕೊಳ್ಳುತ್ತಿರುವ ಹೊಸ ಹೆಜ್ಜೆಗಳನ್ನು ಸಹ ಇಂದು ಅವಳು ಇಡುತ್ತಿದ್ದಾಳೆ. ಉತ್ತರ ಸ್ತ್ರೀವಾದ, ಡಿಜಿಟಲ್ ಸ್ತ್ರೀವಾದ, ಮೂರನೆಯ ಲಿಂಗವನ್ನು ಒಳಗೊಂಡ ಸ್ತ್ರೀವಾದ ಹೀಗೆ ಸ್ತ್ರೀಚಿಂತನೆಗೆ ವಿಭಿನ್ನ ಆಯಾಮ ಸಿಕ್ಕಿರುವ ಸಂದರ್ಭ ಇದು.

ಇಂತಹ ಸನ್ನಿವೇಶದಲ್ಲಿ ಇದರ ಪ್ರತಿಬಿಂಬವೇನೋ ಎಂಬಂತೆ ಈಚೆಗೆ ಪ್ರಕಟಗೊಂಡಿರುವ ಒಂದು ಪುಸ್ತಕ ಎಂದರೆ, `ಸ್ತ್ರೀ ಅಸ್ಮಿತೆ: ವಿಭಿನ್ನ ನೆಲೆಗಳು’. ಇದನ್ನು ಬರೆದ ಲೇಖಕಿ `ಡಾ.ಚೇತನಾ ಹೆಗಡೆ’. 16-03-2025ರಂದು ಬೆಂಗಳೂರಿನ ತರಳಬಾಳು ಕೆಂದ್ರದಲ್ಲಿ ಲೋಕಾರ್ಪಣೆಗೊಂಡ ಈ ಕೃತಿಯನ್ನು `ಅವ್ಯಕ್ತ ಪ್ರಕಾಶನ ಬೆಂಗಳೂರು’ ಎಂಬ ಪ್ರಕಾಶನ ಸಂಸ್ಥೆಯು ಪ್ರಕಟಿಸಿದೆ. ವೃತ್ತಿಯಿಂದ ಕನ್ನಡ ಪ್ರಾಧ್ಯಾಪಕಿಯಾಗಿರುವ ಡಾ. ಚೇತನಾ ಹೆಗಡೆಯವರು ತಮ್ಮ ಪಿ.ಎಚ್.ಡಿ. ಸಂಶೋಧನೆಗಾಗಿ ಡಾ.ಗೀತಾ ವಸಂತ್ ಅವರ ಮಾರ್ಗದರ್ಶನದಲ್ಲಿ ತುಮಕೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಮಹಾಪ್ರಬಂಧದ ಪುಸ್ತಕ ರೂಪ ಇದು. ಕನ್ನಡದ ಪ್ರಾತಿನಿಧಿಕ ಲೇಖಕಿಯರ ಕಥೆಗಳನ್ನು ಅನುಲಕ್ಷಿಸಿ ಈ ಅಧ್ಯಯನವನ್ನು ಕೈಗೊಳ್ಳಲಾಗಿದೆ.

*****

ಮೊಟ್ಟ ಮೊದಲನೆಯದಾಗಿ `ಅಸ್ಮಿತೆ’ ಎಂಬ ಪದವನ್ನು ಇಲ್ಲಿ ಸ್ಪಷ್ಟವಾಗಿ ವಿವರಿಸಿಕೊಳ್ಳಲಾಗಿದೆ.

“ಕನ್ನಡದ ಅಸ್ಮಿತೆ ಪದಕ್ಕೆ ಆಂಗ್ಲ ಭಾಷೆಯ `Identity’ ಪದವನ್ನು ಇಂದು ಸಂವಾದಿಯಾಗಿ ಬಳಸಲಾಗುತ್ತಿದ್ದು ಅಸ್ಮಿತೆಯ ಮೂಲ ಧಾತು `ಅಸು’. ಅಸು ಎಂದರೆ ಪ್ರಾಣ, ನನ್ನ ಜೀವ, ನನ್ನ ಗುರುತು. ಸಂಸ್ಕೃತ ಮೂಲದ ಅಸ್ಮಿ ಎಂಬ ಶಬ್ದದಿಂದ ಅಸ್ಮಿತೆ ಎಂಬ ಪದ ಕನ್ನಡಕ್ಕೆ ಬಂದಿದೆ. ಅಸ್ಮಿ ಎಂದರೆ ನನ್ನ ಇರುವಿಕೆ, `ನಾನು ಇದ್ದೇನೆ’ ಎಂಬ ಉಪಸ್ಥಿತಿ ಭಾವ. `ಅಸ್ಮಿ’ ಎಂಬ ಕ್ರಿಯಾಪದಕ್ಕೆ `ತ’ ಎಂಬ ಪ್ರತ್ಯಯ ಹಚ್ಚಿದರೆ `ಅಸ್ಮಿತೆ’ ನನ್ನತನದ ನೆಲೆ, ನನ್ನತನದ ಇರುವಿಕೆ ಎಂದಾಗುತ್ತದೆ. ಈ ಪದ ರೂಢಿಯಲ್ಲಿ ಅಸ್ಮಿತಾ- ಅಸ್ಮಿತೆ ಎಂದಾಗಿದೆ. ಇದು ನಾನು ನನ್ನದು ಎಂಬ ಭಾವವನ್ನು ಪ್ರತಿಷ್ಠಾಪಿಸುವ ಮೂಲಭೂತ ಗುಣ’’.

ಈ ಕೃತಿಯ ವಿಶಿಷ್ಟತೆ ಏನೆಂದರೆ ಸ್ತ್ರೀಯ ಅಸ್ಮಿತೆಯ ಹುಡುಕಾಟವನ್ನು `ವಿಸ್ಮೃತಿಯಿಂದ ಸ್ಮೃತಿಯೆಡೆಗಿನ ಪಯಣ’ ಎಂದು ಗುರುತಿಸಿರುವಂಥದ್ದು. ಇದಕ್ಕೆ ಕಾರಣವನ್ನು ಈ ಸಂಶೋಧಕಿ ಹೀಗೆ ಹೇಳುತ್ತಾರೆ. “ಸ್ತ್ರೀ ಅಸ್ಮಿತೆಯ ಶೋಧಕ್ಕಿಳಿದಾಗ ಕಂಡುಬರುವ ಮುಖ್ಯ ಸಂಗತಿಯೆಂದರೆ ಅವಳ ಅಸ್ಮಿತೆಯ ಸುತ್ತಲೂ ಹಲವು ಸಂರಚನೆಗಳು ಕವಚದಂತೆ ಸುತ್ತುವರಿದಿವೆ. ಕವಚವೇ ಅಸ್ಮಿತೆಯಾಗಿ ಸಂಕೀರ್ಣ ಸನ್ನಿವೇಶÀದಲ್ಲಿ ಅವಳ ಅಸ್ತಿತ್ವ ಹರಡಿಕೊಂಡಿದೆ. ಅದು ಸಾಮಾಜಿಕ ಸಂರಚನೆ, ಸಾಂಸ್ಕೃತಿಕ ಸಂರಚನೆ ಆಥವಾ ಬೌದ್ಧಿಕ ಸಂರಚನೆ ಯಾವುದಾದರೂ ಆಗಿರಬಹುದು. ಇವೆಲ್ಲದರ ನಡುವೆ ಮರೆಯಾದ ಅವಳ ಮೂಲಭೂತ ಅಸ್ಮಿತೆಯನ್ನು ನಿಖರವಾಗಿ ಗುರುತಿಸಲು ಅಸ್ಮಿತೆಯ ಸುತ್ತಲೂ ವಿಶಾಲವಾಗಿ ವ್ಯಾಪಿಸಿಕೊಂಡಿರುವ ಕವಚವನ್ನು ಬೇಧಿಸುವುದು ಇಂದಿನ ತುರ್ತಾಗಿದೆ. ಆ ಕವಚಗಳನ್ನೆಲ್ಲ ಕಳಚಿದಾಗ ಅವಳ ಅಸ್ಮಿತೆಯ ಮೂಲವು ಜೈವಿಕತೆಯಲ್ಲಿ ಕಂಡುಬರುತ್ತದೆ’’. ಜೊತೆಗೆ “ವೈಭವೀಕರಣ ಮತ್ತು ನಿರಾಕರಣೆಗಳ’’ ನೆಲೆಗಳಿಂದಲೇ ನಮ್ಮ ಸಮಾಜದಲ್ಲಿ ಸ್ತ್ರೀಯ ಅಸ್ಮಿತೆಯನ್ನು ನಮ್ಮ ಗಂಡಾಳಿಕೆಯ ಸಮಾಜವು ನಿರ್ವಚಿಸುತ್ತಾ ಬಂದಿರುವುದನ್ನು ಇಲ್ಲಿ ಗಮನಿಸಲಾಗಿದೆ.

ಬಹಳ ಮುಖ್ಯವಾಗಿರುವ ಮತ್ತು ಗಾಢವಾಗಿ ಯೋಚಿಸುವ ಎಲ್ಲರನ್ನೂ ಕಾಡುವಂಥಹದ್ದಾಗಿರುವ ಒಂದು ಪ್ರಶ್ನೆಯನ್ನು ಇಲ್ಲಿ ಕೇಳಲಾಗಿದೆ.

“ಸಮಾಜವು ಸ್ತ್ರೀಗೆ ಆದಿಶಕ್ತಿ, ಜಗನ್ಮಾತೆ, ಮಾತೆ, ದೇವಿ, ಶಕ್ತಿ ಸ್ವರೂಪಿಣಿ, ಪೂಜ್ಯಳು ಎಂಬ ಗೌರವ ನೀಡಿದರೂ ಮೂಲಭೂತವಾಗಿ, ಪ್ರಧಾನವಾಗಿ ಬಹುತೇಕ ಸಂದರ್ಭಗಳಲ್ಲಿ ಅವಳು ವಸ್ತುವಿನಂತೆ ಏಕೆ ಪರಿಗಣಿತವಾಗಿದ್ದಾಳೆ? ಅವಳು ಏಕೆ ಜೈವಿಕ ಅಸ್ತಿತ್ವವಾಗಿ ಉಳಿದಿದ್ದಾಳೆ? ಸ್ತ್ರೀ ಎಂಬ ಜೀವಿ ತನ್ನ ಹಾಗೆಯೆ ಇನ್ನೊಂದು ಜೀವಿಯಾದ ಗಂಡಿನ ಆಸೆಗಳನ್ನು ಪೂರೈಸುವ ವಾಹಕವಾಗಿ ಉಳಿದದ್ದು ಹೇಗೆ? ಆಧುನಿಕ ಭಾರತದ ಸಂವಿಧಾನವು ಕೊಡುವ ಹಕ್ಕುಗಳು ಮಹಿಳೆಗೆ ಏಕೆ ಸಿಗುವುದಿಲ್ಲ?’’ ಎಂಬ ಸದಾ ಕಾಡುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಈ ಕೃತಿಯ ಉದ್ದೇಶ.
ಈ ಗಂಭೀರ ಪ್ರಶ್ನೆಗೆ ಕನ್ನಡ ಕಥೆಗಾರ್ತಿಯರ ಲೇಖನಿಗಳು ಮೂಡಿಸಿದ ಉತ್ತರವನ್ನು ಪ್ರಸ್ತುತ ಕೃತಿಯು ಕಂಡುಕೊಳ್ಳಲು ಪ್ರಯತ್ನ ಮಾಡಿದೆ.

ತಾನು ಇಟ್ಟುಕೊಂಡ ಉದ್ದೇಶವನ್ನು ಪೂರೈಸಲಿಕ್ಕಾಗಿ ಕೇವಲ ಒಣಸಮೀಕ್ಷೆಯ ರೀತಿಯನ್ನು ತನ್ನದಾಗಿಸಿಕೊಳ್ಳದೆ ವಿಶ್ಲೇಷಣೆಯ ರೀತಿಯನ್ನು ತನ್ನದಾಗಿಸಿಕೊಂಡಿರುವುದು ಈ ಕೃತಿಯ ವೈಶಿಷ್ಟ್ಯವಾಗಿದೆ. ಒಬ್ಬ ಲೇಖಕಿ ಅಥವಾ ಒಂದು ಕಾಲಘಟ್ಟಕ್ಕೆ ಸೀಮಿತವಾಗದೆ, ಒಂದು ಚಿಂತನಾ ವಿನ್ಯಾಸವನ್ನು ಪರಿಗಣನೆಗೆ ತೆಗೆದುಕೊಂಡು ಅದು ಕಾಲ ಸರಿದಂತೆ, ಸಮಾಜ ಬದಲಾದಂತೆ, ಯಾವ ಬದಲಾವಣೆಗೆ ಒಳಪಡುತ್ತಿದೆ ಎಂಬುದನ್ನು ಚರ್ಚೆಗೆ ಎತ್ತಿಕೊಳ್ಳಲಾಗಿದೆ. ಉದಾಹರಣೆಗೆ ಅಸ್ಮಿತೆಯ ಅರಿವಿನ ವಿಕಾಸ, ತಾಯ್ತನದ ಸ್ವಾಯತ್ತ ನೆಲೆಗಳಲ್ಲಿ ಅಸ್ಮಿತೆಯ ಹುಡುಕಾಟ, ಸ್ತ್ರೀ ಅಸ್ತಿತ್ವದ ವಿಭಿನ್ನ ನೆಲೆಗಳಲ್ಲಿ ಬದಲಾಗುತ್ತಿರುವ ವಿನ್ಯಾಸಗಳು, ಅಸ್ಮಿತೆಯ ಪ್ರಶ್ನೆಗಳು ಬದಲಾಗುತ್ತಿರುವಾಗ ಉದ್ಭವವಾಗುತ್ತಿರುವ ಸವಾಲುಗಳು ಹಾಗೂ ಸಾಧ್ಯತೆಗಳನ್ನು ಪರಿಶೀಲಿಸುವ ಪ್ರಯತ್ನವನ್ನು ಇಲ್ಲಿ ಗಂಭೀರವಾಗಿ ಮಾಡಲಾಗಿದೆ.

ಈ ಮಾದರಿಯ ಅಧ್ಯಯನದಿಂದ ಲಭ್ಯವಾಗಿರುವ ಫಲಿತಗಳು ತುಂಬ ಸ್ವಾರಸ್ಯಕರವಾಗಿವೆ. ಕೆಲವು ಉದಾಹರಣೆಗಳನ್ನು ಗಮನಿಸಬಹುದು.

1. ಮಾತೃಪ್ರಧಾನ ವ್ಯವಸ್ಥೆಗಳಲ್ಲಿ ಪ್ರಾರಂಭದಲ್ಲಿ ಸ್ತ್ರೀಗೆ ಇದ್ದಂತಹ ಯಜಮಾನೀ ಸ್ಥಾನವು ಇಂದಿಗೂ ಸಹ ಕೆಲವು ದೇವಾಲಯಗಳಲ್ಲಿ ಪೂಜಾರಿಣಿಯರು ಇರುವುದನ್ನು ನೋಡಿದಾಗ ನಮಗೆ ಸ್ಪಷ್ಟವಾಗಿ ಅರಿವಾಗುತ್ತದೆ. ಮಹಿಳಾ ದೃಷ್ಟಿಯ ಸಂಶೋಧನೆಗಳು ಈ ಸಂಗತಿಯನ್ನು ಪತ್ತೆ ಹಚ್ಚಿವೆ. ಉದಾಹರಣೆಗೆ ಕಮಲಾಪುರದ ತಿಮ್ಮದಕೇರಿಯ ನಿಜಲಿಂಗಮ್ಮ ದೇವಿ, ಹೊಸಪೇಟೆಯ ಗಾಳೆಮ್ಮನ ಗುಡಿ, ಕುಷ್ಟಗಿ ತಾಲೂಕಿನ ಬಂಡ್ರಗಲ್ಲು, ದುರುಗಮ್ಮನ ಗುಡಿಗಳಲ್ಲಿ ಮಹಿಳಾ ಪೂಜಾರಿಗಳಿರುವುದನ್ನು ಗುರುತಿಸಲಾಗಿದೆ. “ಸ್ತ್ರೀದೇವತೆಗಳ ಸಂಖ್ಯಾಬಾಹುಳ್ಯತೆ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸ್ತ್ರೀ ಪೌರೋಹಿತ್ಯ ಇವೆಲ್ಲ ಮಾತೃಪ್ರಧಾನತೆಗೆ ಸಾಕ್ಷಿಯಾಗುತ್ತವೆ’’.

2. ಇಂದಿನ ಅಂದರೆ ಸಮಕಾಲೀನ ಜಗತ್ತಿನಲ್ಲಿ ಸ್ತ್ರೀಯು ಹೊರಜಗತ್ತಿನಲ್ಲಿ ಅನೇಕ ಪಾತ್ರಗಳನ್ನು, ಬೇರೆ ಬೇರೆ ರೀತಿಯ ಉದ್ಯೋಗ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದರೂ ಮನೆಯ ಜವಾಬ್ದಾರಿಗಳೇನೂ ಅವಳ ಮಟ್ಟಿಗೆ ಕಡಿಮೆಯಾಗಿಲ್ಲ. ಅವಳ ಉಡುಪು, ಸೀರೆಯಿಂದ ಜೀನ್ಸ್ ಪ್ಯಾಂಟಿಗೆ ಬದಲಾಗಿರಬಹುದು, ಆದರೆ ಅವಳ ಅಧೀನ ಸ್ಥಿತಿಯೇನೂ ಮೂಲದಲ್ಲಿ ಬದಲಾಗಿಲ್ಲ. `ಜೀನ್ಸ್ ಪ್ಯಾಂಟಿನಲ್ಲಿ ಸೇವಕಿ’ ಎಂಬ ಪದಪ್ರಯೋಗದಿಂದ ಈ ಕೃತಿಯು ಹೆಣ್ಣಿನ ಮುಂದುವರಿದ ದಾಸಿಭಾವವನ್ನು ಈ ಕೃತಿಯು ತೋರಿಸಿಕೊಟ್ಟಿದೆ.

3. ತ್ರಿವೇಣಿ-ನೇಮಿಚಂದ್ರ, ಕೊಡಗಿನ ಗೌರಮ್ಮ-ಶಾಂತಿ ಅಪ್ಪಣ್ಣ, ಯಶವಂತ ಚಿತ್ತಾಲ-ವಿನಯಾ …. ಹೀಗೆ ಬೇರೆ ಬೇರೆ ತಲೆಮಾರಿನ ಸಾಹಿತಿಗಳಲ್ಲಿ ಸ್ತ್ರೀ ಅಸ್ಮಿತೆಯ ವಿಷಯಗಳು ಎಷ್ಟು ವಿಭಿನ್ನವಾಗಿ, ವೈದೃಶ್ಯಮಯವಾಗಿ ಮೂಡಿವೆ ಎಂಬುದನ್ನು ಇಲ್ಲಿ ತುಲನಾತ್ಮಕವಾಗಿ ಅಧ್ಯಯನ ಮಾಡಲಾಗಿದೆ.
ಬಂಜೆತನ, ಫಲವಂತಿಕೆ, ಸಹಜೀವನ, ವೈವಾಹಿಕ ಜೀವನ, ಬಾಡಿಗೆ ತಾಯ್ತನ, ಲೈಂಗಿಕ ಕಾರ್ಯಕರ್ತೆಯರ ಸಮಸ್ಯೆ…… ಹೀಗೆ ಹೆಣ್ಣಿಗೆ ಸಂಬಂಧಿಸಿದ ಯಾವುದನ್ನೂ ಇಲ್ಲಿ ಚರ್ಚಿಸದೆ ಬಿಟ್ಟಿಲ್ಲ.

4. ಇಲ್ಲಿನ ಒಂದು ಮುಖ್ಯ ಗಮನಿಕೆ ಹೀಗಿದೆ, “ಸಮಕಾಲೀನ ಸಾಹಿತ್ಯದಲ್ಲಿ ಸಿದ್ಧ ಮಾದರಿಯ ಪಾತ್ರಗಳು ವಿರಳವಾಗುತ್ತಿದ್ದು, ತಮ್ಮ ಸೃಜನಶೀಲತೆಗೆ ತಡೆಮಾಡುವ ಅಂಶಗಳನ್ನು ಗುರುತಿಸಿ, ಅದನ್ನು ಧೈರ್ಯದಿಂದ ಪ್ರತಿಭಟಿಸಿ, ತನ್ನ ಸೃಜನಶೀಲತೆಯಲ್ಲಿ ತನ್ನತನ ಬೆಳೆಸಿಕೊಳ್ಳುವತ್ತ ಸಾಗುತ್ತಿದೆ. ಕುಟುಂಬದಲ್ಲಿ ನಡೆಯುವ ತಣ್ಣನೆಯ ಕ್ರೌರ್ಯವನ್ನು ಮೌನಮುರಿದು ಪ್ರಶ್ನಿಸಿ, ತನ್ನ ಅಸ್ಮಿತೆಯ ಗಳಿಕೆಗಾಗಿ, ಅಸ್ತಿತ್ವದ ಉಳಿವಿಗಾಗಿ ಹೋರಾಡಿದೆ’’.
5. ಕೆಲವು ನೆಲೆಗಳಲ್ಲಾದರೂ ಸಮಾಜದ ಚಿಂತನಾ ವಿನ್ಯಾಸದಲ್ಲಿ ನಿಧಾನವಾಗಿ ಬದಲಾವಣೆ ಕಂಡುಬರುತ್ತಿರುವುದನ್ನು ಈ ಅಧ್ಯಯನ ಗುರುತಿಸಿದೆ.

6. ಸಮಾಜದಲ್ಲಿ ಬದಲಾವಣೆ ಆದಂತೆ ಕನ್ನಡದ ಕಥೆಗಾರ್ತಿಯರ ನೋಟ ನಿಲುವುಗಳಲ್ಲಿ ಹಾಗೂ ಅವರು ಸ್ತ್ರೀಯ ಅಸ್ಮಿತೆಯನ್ನು ಪರಿಭಾವಿಸುವ ಕ್ರಮಗಳಲ್ಲಿ ಬದಲಾವಣೆಗಳಾದದ್ದನ್ನು ಈ ಕೃತಿಯು ದಾಖಲಿಸಿದೆ.

7. “ಸಿದ್ಧಮಾದರಿಯ ಗಂಡು ಮತ್ತು ಹೆಣ್ಣು ಮಗುವನ್ನು ಬೆಳೆಸುವ ರೀತಿಯಲ್ಲಿ ಬದಲಾವಣೆ ಬರಬೇಕಿದೆ’’ ಎಂಬ ಅಪೇಕ್ಷೆಯನ್ನು ಇಲ್ಲಿ ಮುಂದಿಡಲಾಗಿದೆ, ಹಾಗೂ “ಹೆಣ್ಣಿನ ದೇಹ, ಮನಸ್ಸು ಸಂವೇದನೆಯ ಅಭಿವ್ಯಕ್ತಿಗೆ ಬಹುಸ್ವರ ಮೂಡುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ’’ ಎಂಬ ಸಕಾರಾತ್ಮಕ ಚಿಂತನೆ ಸಹ ಇಲ್ಲಿನ ಫಲಶ್ರುತಿಯಾಗಿ ದಾಖಲಾಗಿದೆ.

****

ಬೆಂಗಳೂರು ನಾಗರತ್ನಮ್ಮ ಅವರು ಬೆಳಕಿಗೆ ತಂದ ಮುದ್ದುಪಳನಿ ಎಂಬ ರಾಜನರ್ತಕಿಯ `ರಾಧಿಕಾ ಸಾಂತ್ವನಂ’ ಎಂಬ ಕೃತಿ ನೆನಪಾಗುತ್ತಿದೆ. ಹದಿನೆಂಟನೆಯ ಶತಮಾನದಲ್ಲಿ ತಂಜಾವೂರಿನ ಪ್ರತಾಪ್ ಸಿಂಗ್ ಎಂಬ ಮರಾಠಾ ರಾಜನ ಆಸ್ಥಾನದಲ್ಲಿ ಇದ್ದ ದೇವದಾಸಿ ಇವಳು: ಪ್ರತಿಭಾವಂತ ಕವಯತ್ರಿ. ಒಬ್ಬ ಹೆಣ್ಣಿನ ಲೈಂಗಿಕ ಬಯಕೆಗಳನ್ನು ಈಕೆ ಮುಕ್ತವಾಗಿ ಚಿತ್ರಿಸಿದಳೆಂದು ಬಹಿಷ್ಕಾರಕ್ಕೆ ಒಳಗಾಗಿದ್ದ ಕೃತಿ ಇದು. ಅಂದರೆ ಹೆಣ್ಣಿನ ಅಸ್ಮಿತೆಯು ಪ್ರಕಟವಾಗಿಬಿಟ್ಟರೆ ಅದನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಿದ್ದ ಕಾಲ ಅದು. ಅದಕ್ಕೆ ಹೋಲಿಸಿದರೆ ಇಂದು ಹೆಣ್ಣಿನ ಅಸ್ಮಿತೆ ಅನೇಕ ರೀತಿ ರೂಪಗಳಲ್ಲಿ ಪ್ರಕಟಗೊಳ್ಳುತ್ತಿದ್ದು ಅದನ್ನು ಭಾಗಶಃ ನಮ್ಮ ಗಂಡಾಳಿಕೆಯ ಸಮಾಜ ಒಪ್ಪಿಕೊಂಡಿದೆ ಎನ್ನುವುದು ಸ್ತ್ರೀವಾದದ ಮಟ್ಟಿಗೆ ಕಡಿಮೆ ಸಾಧನೆ ಏನಲ್ಲ.

“ಸ್ತ್ರೀ ಧ್ವನಿಯಲ್ಲಿ ಮೌನ ಸರಿದು, ಪಿಸುಮಾತು ಆರಂಭವಾಗಿ ಗಟ್ಟಿಧ್ವನಿಯಾಗಿ ಹೊರಹೊಮ್ಮುತ್ತಿದೆ. ಹೆಣ್ಣಿನ ಅಸ್ಮಿತೆಯನ್ನು ಹತ್ತಿಕ್ಕಿದ ಶಕ್ತಿ ಯಾವುದು? ತನ್ನ ಅಸ್ಮಿತೆಯನ್ನು ಅಧಿಕೃತಗೊಳಿಸಲು ಅವಳು ಹೋರಾಡಬೇಕಿದ್ದು ಯಾರೊಂದಿಗೆ? ಅವಳ ಹೋರಾಟದ ನೆಲೆ ಏನು? ಎನ್ನುವ ಪ್ರಶ್ನೆಗಳಿಗೆ ಮುಖಾಮುಖಿಯಾಗಬೇಕು’’.

ಹೆಣ್ಣಿನ ಅಸ್ಮಿತೆಯ ಬಗ್ಗೆ ಇಂತಹ ಗಂಭೀರ ಪ್ರಶ್ನೆಗಳು ಬಂದಾಗ ನಮಗೆ ಮನದಟ್ಟಾಗುವ ವಿಷಯವೇನೆಂದರೆ ಅವಳಲ್ಲಿ ಮತ್ತು ಅವಳ ಅಜ್ಜಿ, ತಾಯಿ, ಅಕ್ಕ, ಅತ್ತೆ, ವಾರಗಿತ್ತಿ, ನೆರೆಹೊರೆಯ ಮಹಿಳೆಯರಲ್ಲಿ ಪರಂಪರಾನುಗತವಾಗಿ ಇಳಿದುಬಿಟ್ಟಿರುವ ಮೌಲ್ಯಗಳ ಪಾಠಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿಕೊಳ್ಳಬೇಕು. ಅಷ್ಟೇ ಅಲ್ಲದೆ ಅವುಗಳಲ್ಲಿ ಯಾವುದನ್ನು ನೆನಪಿನಲ್ಲಿಡಬೇಕು, ಯಾವುದನ್ನು ಮರೆಯಬೇಕು ಎಂಬುದನ್ನು ಸಹ ಸ್ತ್ರೀಯು ಗಂಭೀರ ರೀತಿಯಲ್ಲಿ ನಿರ್ಧರಿಸಬೇಕು.

ಈ ಸಂಶೋಧನೆಯ ದಾರಿದಿಕ್ಕುಗಳನ್ನು ನಿರ್ದೇಶಿಸಿದ ಮಾರ್ಗದರ್ಶಕಿ ಡಾ.ಗೀತಾ ವಸಂತ್ ಅವರು ಈ ಪುಸ್ತಕಕ್ಕೆ ಬರೆದ ಬೆನ್ನುಡಿಯಲ್ಲಿನ ಕೆಳಕಂಡ ವಿಚಾರಗಳೊಂದಿಗೆ ಈ ಪ್ರಬಂಧವನ್ನು ಮುಕ್ತಾಯಗೊಳಿಸುವುದು ಸೂಕ್ತ ಎಂದು ತೋರುತ್ತಿದೆ ನನಗೆ.

“ಸ್ತ್ರೀತ್ವವನ್ನು, ಅದರಿಂದ ಹೊಮ್ಮುವ ಅರಿವನ್ನು ತಾತ್ವಿಕವಾಗಿ ನಿರ್ವಚಿಸುವುದು ಒಂದು ಬಗೆಯಾದರೆ, ಪ್ರಸ್ತುತ ಬದುಕನ್ನು ಕಾಣುವ-ಕಟ್ಟುವ ಕ್ರಮವೊಂದನ್ನು ಅದು ನೀಡುವುದೇ ಎಂದು ಅನ್ವಯಕ್ರಮದಿಂದ ನೋಡುವುದು ಇನ್ನೊಂದು ಬಗೆ. ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ಸ್ತ್ರೀಯ ಅಸ್ಮಿತೆಯು ಎದುರಿಸುತ್ತಿರುವ ಸವಾಲುಗಳನ್ನು ಚೇತನಾ ಗುರುತಿಸಿದ್ದಾರೆ ……. ಮಹಿಳೆಯರು ತಮ್ಮನ್ನು ಸ್ವಯಂ ಸಂಘಟಿಸಿಕೊಳ್ಳಲು ತಮ್ಮ ಅಸ್ಮಿತೆಯ ಮೂಲ ಸ್ವರೂಪ ಹಾಗೂ ಶಕ್ತಿ ಸಾಧ್ಯತೆಗಳನ್ನು ಅರಿಯುವುದು ಮೊದಲ ಹೆಜ್ಜೆ. ಇದು ಸಾಮಾಜಿಕ ಚಲನೆಗೂ ಪ್ರೇರಣೆಯಾಗುವ ಸಂಗತಿ. ಹೇರಿದ ಕವಚವನ್ನು ನಿಧಾನವಾಗಿ ಕಳಚಿಕೊಳ್ಳುತ್ತ ಅಸೀಮ ಆಗಸದೆಡೆಗೆ ನೋಟನೆಟ್ಟ ಸ್ತ್ರೀಸಂಕಥನವಿದು’’.

ನಿಜ. ತನ್ನ ವಾಸ್ತವ್ಯ ಗೂಡಿನಲ್ಲಾದರೂ ಹೆಣ್ಣುಹಕ್ಕಿ ಗಗನಮುಖಿ, ಗಂಡುಹಕ್ಕಿಯಂತೆಯೇ. ಇಂದು ಹೆಣ್ಣು ತನ್ನ ಅಸ್ಮಿತೆಯನ್ನು ತೀವ್ರವಾದ ಮರುಚಿಂತನೆಗೆ ಒಳಪಡಿಸುವ ಮೂಲಕ ತನ್ನ ಗೂಡು ಮತ್ತು ಗಗನ ಎರಡರ ಸ್ವರೂಪವನ್ನೂ ಮರುಚಿಂತನೆಗೆ ಒಳಪಡಿಸುತ್ತಿದ್ದಾಳೆ. ಈ ಮರುಚಿಂತನೆಯ ಪರಿಣಾಮವು ಗಂಡಸರ ಮೇಲೂ ಮತ್ತು ಒಟ್ಟು ಸಮಾಜದ ಮೇಲೂ ಆಗಿದೆ, ಇನ್ನೂ ಗಾಢವಾಗಿ ಆಗಲಿದೆ. ಇದು ಲಿಂಗಭೇದಮುಕ್ತವಾದ ಸ್ವಸ್ಥವಾದ ಸಮಸಮಾಜವನ್ನು ಕಟ್ಟುವೆಡೆಗಿನ ಒಂದು ಹೆಜ್ಜೆಯಾಗಿದೆ. ಈ ದೃಷ್ಟಿಯಿಂದ ಪ್ರಸ್ತುತ ಕೃತಿಯು ಸಮಕಾಲೀನ ಓದಿನ ಸಂದರ್ಭದಲ್ಲಿ ಅಗತ್ಯವಾಗಿದೆ ಮತ್ತು ಅದರ ಲೇಖಕಿಯು ಅಭಿನಂದನಾರ್ಹರಾಗಿದ್ದಾರೆ.

About The Author

ಡಾ. ಎಲ್.ಜಿ. ಮೀರಾ

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ