ಅವರಿಗೆ ಊಟಕ್ಕಿಟ್ಟಾಗ ಎಲ್ಲಾ ಸವನಾಗಿರಬೊಕು. ಮೆತ್ತನ ರೊಟ್ಟಿ, ಪಲ್ಯ, ಶೇಂಗಾ ಪುಡಿ, ಅನ್ನ, ಬ್ಯಾಳಿ ಎಲ್ಲಾನೂ ಮಾಡಬೇಕಿತ್ತು, ಸ್ವಲ್ಪ ಉಪ್ಪು ಖಾರ ಆಚೀಚೆ ಆದ್ರು ಅವರ ಮುಖದಾಗ ಗೊತ್ತಾಕಿತ್ತು. ‘ಏನ್ ಅಡಗಿ ಮಾಡತಾವ ಏನ! ಉಪ್ಪಿಲ್ಲ ಹುಳಿ ಇಲ್ಲ ಖಾರಿಲ್ಲ’ ಅಂತ ಬೈಯ್ಯೊದು ಯಾವಾಗಲೂ ಇರ್ತಿತ್ತು. ಆದ್ರ ನನಗ್ಯಾವಾಗಲೂ ಅನ್ಸೊದು, ಒಂದು ರೊಟ್ಟಿ ಮಾಡಬೊಕಂದ್ರ ಹಿಂದ ಒಂದು ತಾಸಿನ ಕೆಲಸ ಮಾಡಿರ್ತಿವಿ, ನಾದಾದು, ತಟ್ಟಾದು, ಬೇಯ್ಸಾದು ಆಮ್ಯಾಗದಕೊಂದು ಪಲ್ಯ ಮಾಡಿ ಜೋಡಸಾದು, ಒಲಿಮುಂದ ಕುಂತು ಬೇವರು ಸುರಿಸಿಗ್ಯಂತ, ಬೆನ್ನಿನ್ಯಾಗ ಬೇವರೆಲ್ಲ ನೀರು ಹರದಂಗ ಹರದಿರುತ್ತ, ಇದೆಲ್ಲ ಮಾಡಿದಮ್ಯಾಗ ‘ಅಡಗಿ ಮಾಡಾಕ ಬರಂಗಿಲ್ಲ ಇವುಕ’ ಅಂತ ಅನ್ನಿಸಿಗ್ಯನಾದು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯ ಏಳನೆಯ ಬರಹ
‘ಯತ್ತಿಬೇ… ನೀನು ಹೊಲದಾಗ ಮುಂಜಾನಿ ಸಂಜಿ ಅಂಬದಂಗ ದುಡೀತಿ, ಆ ಮ್ಯಾಗಡೆ ಓಣಿ ಸಾಮಣ್ಣಾನೂ ದುಡಿತಾನ ಆದ್ರ, ನಿನಗ್ಯಾಕ ಕಡಿಮಿ ಸಂಬಳ, ಆತಗ್ಯಾಕ ಹೆಚ್ಚು?’ ಅಂದದ್ದೆ. ತಲೆಮ್ಯಾಗಿದ್ದ ಮೇವಿನ ಗಂಟು ಕೆಳಾಗಿಟ್ಟು, ಜೋರಾಗಿ ನಗ್ತಾ,
‘ಕಡಿಮಿ ಕೂಲಿ ಯಾಕಂದ್ರ ನಾನು ಹೆಣಮಗಳದಿನಿ ಅದಕ್ಕಾ’ ಅಂದು ಮತ್ತೆ ನಗತೊಡಗಿದ್ಲು, ಅವಳ ಸುತ್ತ ಇದ್ದ ಗೋಡೆ ಮತ್ತಷ್ಟು ಎತ್ತರ ಆಯ್ತು!
ಈ ಗ್ವಾಡಿ ಮತ್ತದರ ಸುತ್ತಲಿನ ಮುಳ್ಳುಗಳು ಕಾಣದಿದ್ರೂ ಮತ್ತಷ್ಟು ಕಾಡತೊಡಗಿದ್ವು, ಅತ್ತಿ ನಗೋದು ನೋಡಿ ಹಂಗ್ಯಾಕ ನಗ್ತಾಳೀಕಿss ಅಂತನ್ನಿಸ್ತು. ಅವಳಿಗೂ ಈ ಮಹಿಳಾ ದಿನಾಚರಣೆ ಬಗ್ಗೆ ಸಾಲ್ಯಾಗ ಅದನ್ನ ಆಚರಿಸಿದ್ದರ ಬಗ್ಗೆ ಹೇಳಿದೆ, ಅದರ ಬಗ್ಗೆ ಮೇಡಂ ಹೇಳಿದ ಕಥೆಗಳ ಬಗ್ಗೆನೂ ಹೇಳಿದೆ, ಇದನ್ನೆಲ್ಲಾ ಕೇಳಿದ್ರೂನು ಅದೇನೂ ವಿಶೇಷ ಅಲ್ಲ ಅನ್ನಂಗ, ನನ್ನನ್ನ ದಿಟ್ಟಿಸಿ ನೋಡ್ತಾ ಅದೊಂದು ವ್ಯಂಗ್ಯ ನಗೆಯೊಳಾಗ
‘ಹೌದನು ಶಿವಮ್ಮ! ಬಾರಿ ಬುಡವ ನಿಮ್ಮ್ ಸಾಲಿ ಹೆಣ್ಮಕ್ಕಳ ಬಗ್ಗೆ ಹಿಂಗೆಲ್ಲಾ ಮಾತಾಡ್ತಾರನು ಸಾಲ್ಯಾಗ, ಎಲ್ಲಾ ಓದಿಕ್ಯಂಡಾರ ಬುಡವಾ, ನಮ್ಮದೆಲ್ಲಾ ಹಿಂಗಾ ನೋಡು; ಮುಂಜೆಲೆದ್ದು, ಕಚ್ಚಿ ಹಾಕಿ ಕೆಲಸಕ್ಕ ನಿಂತ್ವಿ ಅಂದ್ರ ರಾತ್ರಿವರ್ಗೂ ದುಡಿಬೊಕು’
ಅತ್ತಿ ಹೇಳಿದ್ದು ಕೇಳಿ ಹೌದಲಾ ನಮ್ಮವ್ವ ಅತ್ತಿದು ಇದೇ ಕೆಲಸಾ ಅಲಾ! ಅಂತನ್ನಿಸ್ತು, ಆದ್ರ ಊರಾಗ ಮದುವಿ ಆದೊರೆಲ್ಲಾ ಗಂಡನ ಮನ್ಯಾಗ ಇರ್ತಾರ, ನಮ್ಮವ್ವಾನೂ ಹಂಗ ಗಂಡನ ಮನ್ಯಾಗ ಅದಾಳ, ಆದ್ರ ನೀ ಯಾಕ ತವರ್ ಮನ್ಯಾಗ ಅದಿಬೇ? ಅಂತ ಕೇಳಿದಾಗ ಸ್ವಲ್ಪ ಹೊತ್ತು ಸುಮ್ಮನಾದ ಅತ್ತೆ
‘ಯಾಕಲೇ… ನಿಮ್ಮನ್ಯಾಗ ನಾ ಇರಾದು ನಿಂಗಿಷ್ಟ ಇಲ್ಲನು?’ ಅಂತ ಮತ್ತೆ ನಗತೊಡಗಿದಳು, ಮತ್ತೆ ಸೀರೆಯನ್ನ ಸಡಿಲಿಸಿ ಕಟ್ಟೆ ಮೇಲೆ ಕುಂತವಳೇ ‘ಶಿವಮ್ಮ, ನಾ ಹುಟ್ಟಿದಾಗ ನಾಕು ವರ್ಸದಾಕಿ ಇದ್ದೆ ಅಂತ, ಅವಾಗ ನಮ್ಮವ್ವ ತೊಟ್ಟಲಾಗ ನನ್ನನ್ನ ನಮ್ಮ ಮಾವಗ ಮದುವಿ ಮಾಡಿ ಕೊಟ್ಟಾರ, ಅವಾಗ ನಾ ಇನ್ನೂ ಕೂಸಿದ್ದೆ, ನನ್ನ ಕೈ ನಮ್ಮ ಮಾವನ ಕೈಯ್ಯಾಗ ಇಟ್ಟು ಮದುವಿ ಮಾಡಿದ್ರಂತ, ನನಿಗ್ಯಾವುದೂ ನೆನಪಿಲ್ಲ, ಆದ್ರ ನಾ ಬೆಳದಂಗೆಲ್ಲ ಎಲ್ಲಾರೂ, ನಿನ್ನ್ ಗಂಡ ನಿಂಗಪ್ಪ ಅಂತ ಹೇಳಿದ್ದು ಕೇಳಿ ಕೇಳಿ ನಾನೂ ಅದನ್ನ ಒಪ್ಪಿಗ್ಯಂಡಿದ್ಯ. ಆದ್ರ ಮುಂದೊಂದಿನ ಅವರ ಮನಿಗೆ ಹೊಗ್ಬೊಕು, ಆತನ ಹೆಂಡತಿ ಆಗಿ ಅಲ್ಲೇ ಇರಬೊಕು ಅನ್ನಾದೆಲ್ಲ ಗೊತ್ತಿರಲಿಲ್ಲ ನನಿಗೆ.
ಹಿಂಗ ನನಿಗೆ ಹದಿನಾರ ವರಸಾದಾಗ ಮೈನೆರೆದೆ, ಅದಾದ ಮ್ಯಾಲೆ ನಮ್ಮವ್ವ ಯಾವಾಗಲೂ ಹೇಳಾಕಿ ‘ಬಡಾ ಬಡಾ ಅಡಗಿ ಮಾಡಾದು ಕಲಕಾ, ಮುಂದಲ ಯುಗಾದಿಗೆ ಉಡಿತುಂಬಿ ಕೊಟ್ರ ಗಂಡನ ಮನಿಗೆ ಹೊಕ್ಕಿ, ಅಲ್ಲಿ ಅತ್ತಿ ಮಾವ ಮೈದ್ನ, ನಾದ್ನಿ, ಎಲ್ಲಾರೂ ಇರ್ತಾರ, ತವರು ಮನ್ಯಾಗ ಮಾಡಿದಂಗ ಒಂದು ದಗದ ಮಾಡಿ ಆಡಾಕ ಹೊಕ್ಕಿನಿ ಅಂದ್ರ ಅಲ್ಲಿ ನಡಿಯಾಂಗಿಲ್ಲ, ಮನಿ ಹೆಣಮಗಳಾಗಿ ನೀನಾ ಎಲ್ಲಾ ಸಂಭಾಳಿಸಬೊಕು’ ಅದನ್ನೆಲ್ಲಾ ಕೇಳುವಾಗ ನನಿಗೆ ಯಾವುದೂ ಅರ್ಥ ಆಗಿರ್ಲಿಲ್ಲ. ಆದರೆ, ಅವ್ವ ದಿನಾಲೂ ಹೊಲಕ್ಕೆ ಹೋಗುವಾಗ ಅಡಿಗಿ ಮಾಡೊದನ್ನ ನನಗೆ ಬಿಟ್ಟು ಹೋಗ್ತಿದ್ರು, ಮದುವಿ ಆಗ ಹುಡುಗಿ ಅಂದ್ರ ಆಕಿಗೆ ರೊಟ್ಟಿ ಮಾಡಾಕ ಬರಬೊಕು, ಹಂಗಾಗಿ ಅವ್ವ ನನಗೆ ರೊಟ್ಟಿ ಮಾಡಾದನ್ನ ದಿನಾಲೂ ಹೇಳಿ ಕೊಡ್ತಿದ್ಲು, ಸ್ವಲ್ಪ ಸ್ವಲ್ಪ ಹಿಟ್ಟು ಉಳಸಿ ರೊಟ್ಟಿ ಸುಡಾಕ ಹೇಳ್ತಿದ್ಲು. ನಂಗಂತೂ ಒಲಿ ಮುಂದ ಕುಂದ್ರಾದಂತ್ರ ಬ್ಯಾಸರ ಬರ್ತಿತ್ತು, ಅದರಾಗೂ ಹಸಿ ಕಟಗಿ ಇದ್ದಾಗ ಒಲಿ ಉರಸಾದಂದ್ರ ದೊಡ್ಡ ಸಾಹಸ ಮಾಡಿದಂಗಾಕ್ಕಿತ್ತು. ಜ್ವಾಳದ ಹಿಟ್ಟು ಹದ ಬರಂಗ ನಾದಿ, ಒಲಿ ಮುಂದ ಕೊಣಗಿ ಇಟ್ಟು ಅದರಾಗ ರೊಟ್ಟಿ ದುಂಡಕ ಬಡಿಬೇಕಿತ್ತು, ನಾ ಇನ್ನೂ ಸಣ್ಣಾಕಿದ್ದೆ ರೊಟ್ಟಿ ಸುಡಾದಂದ್ರ ದೊಡ್ಡ ಕೆಲಸ ಅನ್ನಿಸೊದು ಆದ್ರ ಕಲಿಲೇ ಬೇಕಿತ್ತು. ದಿನಾ ಒಲಿ ಮುಂದ ಕುಂದ್ರಾದು ರೊಟ್ಟಿ ಸುಡಾದು ಖಾಯಂ ಕೆಲಸ ಎಲ್ಲಾ ಹೆಣ್ಮಕ್ಕಳಿಗೆ, ಅದು ಬಂತಂದ್ರ ಅವರೆನೊ ಸಾದನೆ ಮಾಡ್ಯಾರನ್ನಂಗ ನಡಿಸಿಗ್ಯಂತಿದ್ರು ಎಲ್ಲಾರೂ. ಒಂದು ಮನ್ಯಾಗ ಹುಡುಗಿ ಅದಾಳಂದ್ರ ಆಕಿಗೆ ಅಡಗಿ ಮಾಡಾಕ ಬರಬೊಕು, ರೊಟ್ಟಿ ಪಲ್ಯ ಮಾಡಾದು ಗೊತ್ತಿರಬೊಕು, ಜೊತಿಗೆ ಹೊಲದ ಕೆಲಸಾನೂ ಗೊತ್ತಿರಬೇಕಿತ್ತು.

ಉಡಿತುಂಬಿ ಕೊಟ್ಟಾಗ ನನಿಗಿನ್ನೂ ಹದಿನೇಳು ವರಸ, ಲಂಗ ದಾವಣಿ ಅಕ್ಯಂದು ಹೊಲದಾಗ ಹಕ್ಕಿ ಹಾರಾಡಿದಂಗ ಹಾರ್ಯಾಡ್ತಿದ್ದೆ, ಅವತ್ತು ಯಾರೊ ಬಂದು ರೆಕ್ಕಿ ಕಟ್ಟಿದಂಗಾತು, ಸೀರೆ ಉಡಿಸಿ, ಹಸರ ಬಳಿ ಹಾಕಿ ಚೆಂದ ರೆಡಿ ಮಾಡಿ, ಹೂ ಮುಡಸಾ ಕಾರ್ಯಕ್ರಮ ಮಾಡಿ, ಮರದಿನ ನನ್ನ ಗಂಡನ ಜೊತಿಗೆ ಕಳಿಸಿದ್ರು. ಗಂಡನ ಮನಿಗೆ ಹೋದಾಗ ಎಲ್ಲಾನೂ ಹೊಸಾದು, ಅಲ್ಲಿರೊ ಜನ, ಊರು, ಮನಿ ಎಲ್ಲಾನೂ ಬದಲಾದಂಗ. ಆದ್ರ ಅತ್ತಿ ಅವ್ವನಂಗ ಸಮಾಧಾನದಾಕಿದ್ಲು ‘ಅಡಗಿ ಎಲ್ಲಾ ಮಾಡಬೊಕು ನೋಡವಾ ‘ ಅಂದಾಗ ಅಂಜಿಕಿ ಬಂದಂಗಾಗಿ, ಅವತ್ತು ರೊಟ್ಟಿ ಮಾಡಿದಾಗ ಹಿಟ್ಟು ಕಲಸಾಕು ಕೈ ನಡಗ್ತಿದ್ವು, ಹಂಚಿನ ಮ್ಯಾಗ ರೊಟ್ಟಿ ಹಾಕುವಷ್ಟರಾಗ ಹರದೊಂಟಿದ್ವು, ಇನ್ನಷ್ಟು ಅಂಜಿಕಿ ಆದಂಗಾಗಿ ಯಾವ ಅಡಗಿನೂ ಸರಿಯಾಗಿ ಬರ್ಲಿಲ್ಲ, ಅವ್ವ ಹೇಳಿಕೊಟ್ಟಿದ್ದು ಎಲ್ಲಾ ನೆನಪಾಗಿ ಕಣ್ಣಾಗ ದಳದಳ ನೀರು ಹರದ್ವು. ಆದ್ರ, ಅದನ್ನ ಅಲ್ಲಿ ಹೇಳಿಕ್ಯನಾಕ ಯಾರೂ ಇರಲಿಲ್ಲ, ಮನ್ಯಾಗ ಅಷ್ಟು ಚೆಂದ ಒಲಿ ಮ್ಯಾಗ ಅಡಗಿ ಮಾಡ್ತಿದ್ದೆ, ಹಬ್ಬ ಹರಿದಿನಕ್ಕ ಹೋಳಿಗಿ ಎಲ್ಲಾ ಅಂಜಿಕಿಲ್ಲದಂಗ ಮಾಡಿದ್ದೆ. ಆದ್ರಿಲ್ಲಿ ಏನಾಯ್ತೆನೊ ಅಡಗಿ ಮಾಡಾಕಾ ಬರಾವಲ್ದು, ಅತ್ತಿ ನಾ ಅಡಗಿ ಮಾಡಿದ್ದು ನೋಡಿ ‘ನೀ ಇನ್ನಾ ಅಡಗಿ ಕಲಿಬೇಕು’ ಅಂದ್ಲು, ಊಟಕ್ಕಿಟ್ಟಾಗ ಮಾವ, ರೊಟ್ಟಿ ಒಂದನ್ನ ಕೈಯ್ಯಾಗ ಹಿಡದು, ಮುಖ ಹಿಂಡಿದಂಗ ಮಾಡಿ ಆದನ್ನೆರಡು ತುಂಡು ಮಾಡಾಕ ಸೆಣಸಾಡಿದಂಗ ಕೈ ಮಾಡಿ
‘ರೊಟ್ಟಿ ಯಾಕ ಹಿಂಗ್ ಆಗ್ಯಾವ ಇವತ್ತು? ಮನ್ಯಾಗ ಹೆಣಮಗಳದಾರ ಇಲ್ಲ? ರೊಟ್ಯನ ರೊಟ್ಯಾ ಇವು? ಕೈಯ್ಯಾರೆ ಎರಡಾಗವಲ್ವು!’ ಅಂತ ಸಿಟ್ಟಿನಿಂದ ಅಂದ. ಮನ್ಯಾಗಿದ್ದ ನನಗೆ ಅದೊಂಥರಾ ಅನ್ನಿಸಿ ಅಳು ಬಂದ್ರೂ ಸುಮ್ಮನಿರಬೇಕಾಗಿತ್ತು. ಅತ್ತಿ ಇನ್ನೆರಡು ರೊಟ್ಟಿ ಮಾಡಿ ಕೊಟ್ರು. ಮಾವ ಊಟಕ್ಕ ಕುಂತಾಗೆಲ್ಲ ಎದಿ ಡಬ್ ಡಬ್ ಅನ್ನಾದು, ಅವರಿಗೆ ಊಟಕ್ಕಿಟ್ಟಾಗ ಎಲ್ಲಾ ಸವನಾಗಿರಬೊಕು. ಮೆತ್ತನ ರೊಟ್ಟಿ, ಪಲ್ಯ, ಶೇಂಗಾ ಪುಡಿ, ಅನ್ನ, ಬ್ಯಾಳಿ ಎಲ್ಲಾನೂ ಮಾಡಬೇಕಿತ್ತು, ಸ್ವಲ್ಪ ಉಪ್ಪು ಖಾರ ಆಚೀಚೆ ಆದ್ರು ಅವರ ಮುಖದಾಗ ಗೊತ್ತಾಕಿತ್ತು. ‘ಏನ್ ಅಡಗಿ ಮಾಡತಾವ ಏನ! ಉಪ್ಪಿಲ್ಲ ಹುಳಿ ಇಲ್ಲ ಖಾರಿಲ್ಲ’ ಅಂತ ಬೈಯ್ಯೊದು ಯಾವಾಗಲೂ ಇರ್ತಿತ್ತು. ಆದ್ರ ನನಗ್ಯಾವಾಗಲೂ ಅನ್ಸೊದು, ಒಂದು ರೊಟ್ಟಿ ಮಾಡಬೊಕಂದ್ರ ಹಿಂದ ಒಂದು ತಾಸಿನ ಕೆಲಸ ಮಾಡಿರ್ತಿವಿ, ನಾದಾದು, ತಟ್ಟಾದು, ಬೇಯ್ಸಾದು ಆಮ್ಯಾಗದಕೊಂದು ಪಲ್ಯ ಮಾಡಿ ಜೋಡಸಾದು, ಒಲಿಮುಂದ ಕುಂತು ಬೇವರು ಸುರಿಸಿಗ್ಯಂತ, ಬೆನ್ನಿನ್ಯಾಗ ಬೇವರೆಲ್ಲ ನೀರು ಹರದಂಗ ಹರದಿರುತ್ತ, ಇದೆಲ್ಲ ಮಾಡಿದಮ್ಯಾಗ ‘ಅಡಗಿ ಮಾಡಾಕ ಬರಂಗಿಲ್ಲ ಇವುಕ’ ಅಂತ ಅನ್ನಿಸಿಗ್ಯನಾದು. ಇದೆಲ್ಲಾ ಮದುವ್ಯಾಗಿ ಹೋದ ಎಲ್ಲಾ ಹೆಣಮಕ್ಕಳ ಕತಿ. ನಂದೂ ಅದಾ ಕತಿ, ಆದ್ರ ನನಗ ಇದು ಭಾಳ ದಿನ ಮಾಡಿಕ್ಯಂತ ಹೋಗಾಕ ಆಗ್ಲಿಲ್ಲ, ಹೊಲ, ಹಕ್ಕಿ, ಹೊಲದ ಬುಡಕ ನಾ ಮಾಡಿದ್ದ ಪುಟ್ಟ ಹೂವ್ವಿನ ತ್ವಾಟ ಎಲ್ಲಾ ನೆನಪಾಗ ತೊಡಗಿದ್ವು, ಗಂಡನ ಮನಿಯೊಳಾಗಿದ್ದಾಗ ಆ ಅಡಗಿ ಮನಿ, ಬೆವರು, ಮಾವನ ಮುಖ, ಅತ್ತಿ ಅಡಗಿ ಮಾಡಾಕ ಮಾಡ್ತಿದ್ದ ಗುದ್ದಾಟ, ಬಡಕಲಾಗಿದ್ದ ಅವಳ ಮೈ, ನಮಗೂ ನಮ್ಮಂಗ ಬದುಕಬೊಕು ಅನ್ನಾದಿರುತ್ತ ಅನ್ನೊದೇ ಮರತೊಗಿತ್ತು, ಇದೆಲ್ಲಾ ಭಾಳ ಕಾಡಿ ಕಾಡಿ, ಅದೊಂದು ದಿನ ನಾ ಗಂಡನ ಮನಿ ಬುಟ್ಟು ತವರು ಮನಿಗೆ ಬಂದೆ, ನನಿಗಲ್ಲಿ ತೊಂದ್ರಿ ಅಂತೆನಿಲ್ಲ. ಆದ್ರ, ನನ್ನ ನಾ ಎಲ್ಲಿ ಕಳಕಂಬುಡುತ್ನು ಅಂತನ್ನಿಸಿ ಬಂದುಬುಟ್ಟೆ. ಬಂದಮ್ಯಾಗ ಊರಾಗಿನಾರೆಲ್ಲ ಆಡಿಕ್ಯನಾರು; ‘ಗಂಡಬುಟ್ಟಾಕಿ, ಗಂಡನ ಮನ್ಯಾಕ ಸಂಸಾರ ಮಾಡಲಾರದಾಕಿ, ಹೋದ ನಾಕ ತಿಂಗಳಿಗೆ ವಾಪಾಸ್ ಬಂದಾಳ, ಊರಾಗಿನ ಹೆಣ್ಮಕ್ಕಳನ್ನ ಕೆಡಸ್ತಾಳೀಕಿ, ಗಂಡಂತಾಕಿದ್ದು ಸಂಸಾರ ನೀಗಸಲಾರದಾಕಿ ತವರು ಮನ್ಯಾಗಿದ್ದು ಏನ್ ಕಡದು ಕಟ್ಯಾಕ್ತಾಳೀಕಿ, ಊರಾಗೀನ ಮುಳ್ಳಿವು!’ ಅಂತ ಮಾತುಗಳ್ನೆಲ್ಲ ಕೇಳಿಸಿಗ್ಯಂಡಾಗ ಒಳಗೊಳಾಗ ಅತ್ತಿದ್ದೆ, ಹೆಣಮಕ್ಕಳಂದ್ರ ಅಡಗಿ ಮಾಡಾಕಷ್ಟ ಹುಟ್ಟಿಲ್ಲ ಹೋಗ್ರಲೊ ಜಿಟ್ಟಿಗುಳ! ಅಂತ ಜೋರಾಗಿ ಬೈದು ಬರ್ತಿದ್ದೆ.
ಮನಿ, ಸಮಾಧಾನದಿಂದ ಅರಳತಿದ್ದ ಹಂಚಿನ ಮ್ಯಾಗಿನ ರೊಟ್ಟಿ, ಹೊಲದಾಗ ನಾನಾ ಕಟ್ಟಿ ಹಾಡತಿದ್ದ ಪದ, ನಾನಾ ಬೆಳಸಿರ ಸಣ್ಣ ತ್ವಾಟ ಅದರಾಗಿನ ಬೆಂಡೆಕಾಯಿ, ಬದನೆಕಾಯಿ, ಪುಂಡೆಪಲ್ಯ ಎಲ್ಲಾನೂ ಪಲ್ಯ ಮಾಡಿ ರೊಟ್ಟಿ ಜೊತಿ ಉಣ್ಣುವಾಗ ಅದೊಂಥರಾ ಸಮಾಧಾನ ಇರ್ತಿತ್ತು, ಹಂಗಾ ಹೊಲದಾಗ ಕಳೆ ಕಿತ್ತಾಕ, ಹಚ್ಚಾಕ, ಹೊಲದ್ ದಗದಕ್ಕ ಹೋದಾಗ ಅದ್ಯಾವುದೊ ಗ್ವಾಡಿ ಬಿಳಸಿ ನಾವು ನಮ್ಮದಾ ಬದುಕಿನ್ಯಾಗ ಹಕ್ಕಿಗಳಂಗ ಹಾರ್ಯಾಡಿದಂಗ ಅನ್ನಿಸ್ತಿತ್ತು, ನಮ್ಮೊಳಾಗಿದ್ದ ಹಾಡು, ಪದ, ಕತಿಗಳೆಲ್ಲ ಅಲ್ಲಿ ಒಬ್ರಿಂದ ಇನ್ನೊಬ್ರಿಗೆ ತಲುಪ್ತಿತ್ತು, ಗೊಳ್ಳಂತ ನಗುವಾಗ ಮನಸ್ಸಿನಿಂದ ನಕ್ಕಿರ್ತಿದ್ವಿ, ಹಕ್ಕಿಗಳೂ ನಮ್ಮ್ ಹಾಡಿಗೆ ದನಿಗೂಡಿಸಿದಂಗಾಗ್ತಿತ್ತು. ಹೆಣಮಗಳದಿನಿ ಅದಕಾ ನಾ ಇದನ್ನ ಮಾಡಬೊಕು, ಅದಕಾ ನಾ ಹಿಂಗಿರಬೊಕು, ಹಿಂಗ ನಡಕಬೊಕು, ಆದ್ರ ನಮಗೂ ಬದುಕದಾ ನಮ್ಮಲ್ಲೂ ಹಾಡುಗಳದಾವ ನಾವು ಹಾಡಬೊಕು ಅಲ್ಲೇನು?
ಅದಕಾ ನಾ ಗಂಡನ ಮನಿಗೆ ಹೋಗಿಲ್ಲ, ಆ ಬದುಕು ನಂದಲ್ಲ ಅನ್ನಿಸಿ ಇಲ್ಲೆ ಅದಿನಿ ನೋಡವಾ ಶಿವಮ್ಮ!

ಅತ್ತಿ ಹೇಳಿದ್ದು ಕೇಳಿ ಕೇಳಿ ಸುತ್ತ ಕಟ್ಟಿದ್ದ ಗ್ವಾಡಿಗೆ ಬಿರುಕು ಬಂದಂಗಾಗಿ, ಹಕ್ಕಿ ಹಾರ್ಯಾಡಿದಂಗಾತು. ಅವತ್ತು ಅತ್ತಿ ನಾನು ಹೊಲದಾಗ ರಾಶಿ ಕಾಯಾಕ ಮತ್ತೆ ಹೋದ್ವಿ, ಆಕಾಶದಾಗ ನಕ್ಷತ್ರಗಳೆಲ್ಲ ಪಳಾ ಪಳಾ ಹೋಳದು ನಗಾ ಕತಿದ್ವು, ಅತ್ತಿ ಹಾಡಾಕ ಶುರು ಮಾಡಿದ್ಲು;
‘ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ?’
ಅತ್ತಿ ಇದು ನಮ್ಮ್ ಪಾಠದಾಗಿನ ಪದ್ಯ ಜಿ.ಎಸ್.ಶಿವರುದ್ರಪ್ಪ ಬರದಿರಾದು ನೀ ಹೆಂಗ್ ಕಲತಿ?
ಅತ್ತಿ ನಗ್ತಾ ‘ಲೇ ಶಿವಮ್ಮ ನಾ ದಿನಾ ಹೊಲಕ್ಕ ಬರುವಾಗ ಆ ಮ್ಯಾಗಡೆ ಮನ್ಯಾಗ ರೇಡಿಯೊ ಹಾಕ್ತಿದ್ರು. ಇವತ್ತು ಅದರಾಗ ಈ ಹಾಡು ಬಂದಿತ್ತು ಕೇಳಿ ಕಲ್ತಿನಿ’ ಅಂದು ಹಾಡು ಮುಂದುವರಿಸಿದ್ಲು…
ಸ್ತ್ರೀ ಎಂದರೆ ಅಷ್ಟೇ ಸಾಕೆ?

ಸುವರ್ಣ ಚೆಳ್ಳೂರು ಕೊಪ್ಪಳ ಜಿಲ್ಲೆ ಕಾರಟಗಿ ತಾಲ್ಲೂಕಿನ ಚಳ್ಳೂರಿನವರು. ಈಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಸಂಶೋಧನಾ ವಿದ್ಯಾರ್ಥಿ. ಕಲೆ ಸಾಹಿತ್ಯ ಫೋಟೊಗ್ರಫಿ ಮುಖ್ಯ ಆಸಕ್ತಿಗಳು. ಇವರ ‘ಕಂಬದ ಹಕ್ಕಿ’ ಕಥೆಗೆ ‘ಸಂಗಾತ ಕಥಾ ಪುರಸ್ಕಾರ ‘ (2021), ‘ಕನಕಾಂಬರ’ ಕಥೆಗೆ ಧಾರವಾಡದ ವಿದ್ಯಾವರ್ಧಕ ಸಂಘದಿಂದ ‘ಶ್ರೀಮತಿ ಶಾಂತಾದೇವಿ ಕಣವಿ ಕಥಾ ಪುರಸ್ಕಾರ’ ದೊರಕಿದೆ (2022). ‘ಕನಕಾಂಬರ’ ಹಾಗೂ ‘ಮಾರ್ನಾಮಿ’ ಸಣ್ಣ ಕಥೆಗಳು ToTo Funds the Arts’ India ಅವರು ಕೊಡುವ ಕನ್ನಡ ಸೃಜನಶೀಲ ಬರವಣಿಗೆ (Kannada Creative writing) ವಿಭಾಗದಲ್ಲಿ 2023 ಮತ್ತು 2025 ರಲ್ಲಿ ಅಂತಿಮ ಹಂತಕ್ಕೆ (Short List) ಆಯ್ಕೆ ಆಗಿದೆ. ಇವರ ಬರಹಗಳು ಕೆಲವು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
