12ನೆಯ ಶತಮಾನದ ಬಸವಾದಿ ಶರಣರು ಈ ಹಿಂಸಾಯಂತ್ರಕ್ಕೆ ನೇರವಾದ ಸವಾಲೆಸೆದರು. ಕಾಯಕ ಸಿದ್ಧಾಂತದ ಮೂಲಕ ಇದರ ಮರ್ಮವನ್ನು ಹೊರಗೆಳೆದರು. ಈ ಹಿಂಸಾಯಂತ್ರದ ಬಿಡಿ ಉಪಕರಣಗಳಾದ ಜಾತಿ, ಅಸ್ಪೃಶ್ಯತೆ, ಅಸಮಾನತೆ ಮತ್ತು ಲಿಂಗಭೇದದ ವಿರುದ್ಧ ಶರಣರು ಹೋರಾಡಿದರು. ತನ್ನ ಎಲ್ಲ ಸಾಮರ್ಥ್ಯವನ್ನು ಬಳಸಿಕೊಂಡು ತಮ್ಮ ಸವರ್ಣೀಯ ಚಾಲಕರ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸುತ್ತ ಅದನ್ನು ಕಾಪಾಡುವುದಲ್ಲೇ ಹಿಂಸಾಯಂತ್ರ ತಲ್ಲೀನವಾಗಿತ್ತು. ಆದರೆ ಶರಣರ ಹೋರಾಟದಿಂದ ಜಾಗೃತವಾಯಿತು. ಉಗ್ರವಾಗಿ ಶರಣರ ಮೇಲೆ ಹರಿಹಾಯಿತು. ಶರಣರ ಕಗ್ಗೊಲೆಯಾಯಿತು. ಅವರ ಬಹುಪಾಲು ಸಾಹಿತ್ಯವನ್ನು ಧ್ವಂಸ ಮಾಡಿತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 88ನೇ ಕಂತು ನಿಮ್ಮ ಓದಿಗೆ

ವಿ. ಶ್ರೀನಿವಾಸ ಪ್ರಸಾದ (6.8.1947-29.4.2024) ರನ್ನು ನಾನು ಮೊದಲ ಬಾರಿಗೆ ಮೈಸೂರಿನಲ್ಲಿ ನೋಡಿದ್ದು 1981ರಲ್ಲಿ. ಅವರ ಮಿತಭಾಷೆ ಮತ್ತು ಪ್ರಶಾಂತ ಮುಖ ಇನ್ನೂ ನೆನಪಿದೆ. ಆಗ ಅವರು 32 ವರ್ಷಗಳ ಕಪ್ಪುಬಣ್ಣದ ಸ್ಫುರದ್ರೂಪಿ ಮಂದಸ್ಮಿತ ಯುವಕ. ಆಗ ನಾನು ಮಾನಸ ಗಂಗೋತ್ರಿಯಲ್ಲಿನ ಅಭಿವೃದ್ಧಿ ಅಧ್ಯಯನಗಳ ಸಂಸ್ಥೆಯಲ್ಲಿ ಎಂ.ಎ.ಎಂ.ಎಂ ಓದಲು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಿಂದ ಡೆಪ್ಯುಟೇಷನ್ ಮೇಲೆ ಬಂದಿದ್ದೆ.

1976ರಿಂದ ನನಗೆ ದ.ಸಂ.ಸ. ಸಂಪರ್ಕವಿದ್ದುದರಿಂದ ಮೈಸೂರಲ್ಲೇ ಪ್ರಕಟವಾಗುತ್ತಿದ್ದ “ಪಂಚಮ” ಪತ್ರಿಕೆಗೆ ಲೇಖನಗಳನ್ನು ಬರೆಯುವುದು ಮತ್ತು ಸಮಯ ಸಿಕ್ಕಾಗ ಇತರರ ಲೇಖನಗಳನ್ನು ಎಡಿಟ್ ಮಾಡಿಕೊಡುವುದು ಹವ್ಯಾಸವಾಗಿತ್ತು. ಕೆಲವೊಂದು ಸಲ ಶ್ರೀನಿವಾಸಪ್ರಸಾದರಿಗೆ ಸಂಬಂಧಿಸಿದ ವಿಚಾರಗಳನ್ನು ಪಂಚಮದಲ್ಲಿ ಪ್ರಕಟಿಸಿದ್ದುಂಟು.

ಅವರು ಮೊದಲಿನಿಂದಲೂ ವೈಚಾರಿಕ ಸ್ಪಷ್ಟತೆಯನ್ನು ಉಳಿಸಿಕೊಂಡು ಬಂದವರು. ಅಂಬೇಡ್ಕರ್ ಚಿಂತನೆಗಳಿಂದ ರೂಪುಗೊಂಡವರು. ಬುದ್ಧ ಬಸವ ಅಂಬೇಡ್ಕರ್ ಚಿಂತನಾ ಮಾರ್ಗದಲ್ಲಿ ಬೆಳೆದವರು. ಅವರೆಂದೂ ಆರಕ್ಕೆ ಏರುವ ಮಹತ್ವಾಕಾಂಕ್ಷೆಯನ್ನು ಹೊಂದಿದವರಲ್ಲ. ಆದರೆ ಮೂರಕ್ಕೆ ಇಳಿಸಲು ಪ್ರಯತ್ನಿಸುವವರ ಎದುರು ಸೆಡ್ಡು ಹೊಡೆದು ನಿಂತವರು.

ನಾನು ಕಮ್ಯುನಿಸ್ಟ್ ಪಕ್ಷದ ಒಡನಾಟದಲ್ಲಿದ್ದರೂ ಕೆ.ಎಚ್. ರಂಗನಾಥರ ಶಿಷ್ಯವರ್ಗಕ್ಕೆ ಸೇರಿದವನು. 1976ರಿಂದ 1978ರ ವರೆಗೆ ಅವರ ಸರ್ಕಾರಿ ಗೃಹ ಆಗಿದ್ದ “ಕ್ರೆಸೆಂಟ್ ಹೌಸ್”ನಲ್ಲಿ ಜೊತೆಗೇ ಇದ್ದವನು. ಪ್ರಾಮಾಣಿಕ ವ್ಯಕ್ತಿತ್ವದಿಂದಾಗಿ ಅವರು ನನಗೆ ಆದರ್ಶವಾಗಿದ್ದರು. ಅದೇ ರೀತಿಯಲ್ಲಿ ಮಾನವೀಯ ವ್ಯಕ್ತಿತ್ವವನ್ನು ನಾನು ವಿ. ಶ್ರೀನಿವಾಸಪ್ರಸಾದ್ ಮತ್ತು ಗೋವಿಂದ ಕಾರಜೋಳ ಅವರಲ್ಲಿ ಕಂಡೆ. ಇವರೆಲ್ಲರ ರಾಜಕೀಯ ಚಿಂತನೆಗಳು ಬೇರೆ ಬೇರೆಯಾಗಿದ್ದರೂ ಸಾಮಾಜಿಕ ಕಾಳಜಿಯುಳ್ಳ ರಾಜಕಾರಣಿಗಳು.

55 ವರ್ಷಗಳ ಹಿಂದೆ ಅಂದರೆ 1969ರಲ್ಲಿ ನಾನು ಸಿ.ಪಿ.ಐ. ಸೇರಿದವನು. ಮಾರ್ಕ್ಸ್-ಲೆನಿನ್‌ರ ಚಿಂತನೆಗಳಿಂದ ಪುಳಕಿತನಾಗಿದ್ದ ಕಾಲವದು. ಇಂದಿಗೂ ಅದೇ ದಾರಿಯಲ್ಲಿ ಹೋಗುವಾಗ ಬುದ್ಧ ಬಸವ ಮತ್ತು ಅಂಬೇಡ್ಕರರು ಸಿಕ್ಕರು. ಈ 55 ವರ್ಷಗಳ ಅವಧಿಯಲ್ಲಿ ಯಾವುದೇ ರಾಜಕೀಯ ಹುದ್ದೆ ಪಡೆಯದಿದ್ದರೂ ರಾಜಕೀಯ ಸಿದ್ಧಾಂತಗಳ ಬಗ್ಗೆ ಚಿಂತಿಸುತ್ತ ಬಂದವನು. ಕಾಮ್ರೇಡ್ ವಿ.ಎನ್. ಪಾಟೀಲ, ಕಾಮ್ರೇಡ್ ಪಂಪಾಪತಿ, ಕಾಮ್ರೇಡ್ ಬಿ.ವಿ. ಕಕ್ಕಿಲಾಯ ಮುಂತಾದ ಪ್ರಾಮಾಣಿಕ ಕ್ರಾಂತಿಕಾರಿ ರಾಜಕೀಯ ನಾಯಕರ ಜೊತೆ ಬೆಳೆದವನು.

ಇಂದು ಆ ದಿನಗಳು ಹೋಗಿವೆ. ನಿಷ್ಠೆ ಎನ್ನುವುದು ನಾಲಗೆಗೆ ಸಂಬಂಧಿಸಿದ ಶಬ್ದವಾಗಿದೆ. ಮಾತು ಮತ್ತು ಕೃತಿಗಳ ಮಧ್ಯೆ ಸಂಬಂಧ ಕಲ್ಪಿಸುವವರನ್ನು “ಪೆದ್ದರು” ಎನ್ನುವಂಥ ಕಾಲದಲ್ಲಿ ನಾವಿದ್ದೇವೆ. ಅವಕಾಶವಾದಿ ಪಕ್ಷಗಳು ಮತ್ತು ನಾಯಕರಿಂದ ಇಡೀ ರಾಜಕಾರಣ ಕೂಡಿದೆ. ‘ಕಾಂಗ್ರೆಸ್ ಇಲ್ಲದಿದ್ದರೆ ಬಿಜೆಪಿ’ ಎಂದು ಹೇಳಿಕೆ ಕೊಡುವ ಹಾಗೆ ಜನ ರಾಜಕಾರಣದಲ್ಲಿ ಅಸ್ತಿತ್ವದಲ್ಲಿದ್ದಾರೆ. ನಿನ್ನೆ ಭೇಟಿಯಾಗಿದ್ದ ರಾಜಕೀಯ ನಾಯಕರು ಇಂದು ಭೇಟಿಯಾದರೆ “ಈಗ ಯಾವ ಪಕ್ಷದಲ್ಲಿದ್ದೀರಿ” ಎಂದು ಕೇಳುವ ಪರಿಸ್ಥಿತಿ ಬಂದಿದೆ. ಇಂಥ ಅಸಹ್ಯ ವಾತಾವರಣದಲ್ಲಿ ಶ್ರೀನಿವಾಸಪ್ರಸಾದರ ಬಗ್ಗೆ ನಾಲ್ಕು ಮಾತುಗಳನ್ನು ಬರೆಯಬೇಕಾಗಿದೆ.

ಶ್ರೀನಿವಾಸಪ್ರಸಾದ ಅವರು ಅಬೇಂಡ್ಕರ್‌ವಾದಿಯಾಗಿ ಬಸವಪ್ರಿಯರಾಗಿದ್ದರು. ನಾನು ಮಾರ್ಕ್ಸ್‌ವಾದಿ ಮತ್ತು ಬಸವವಾದಿಯಾಗಿರುವುದರ ಜೊತೆಗೆ ಅಂಬೇಡಕರ್ ಪ್ರಿಯನೂ ಆಗಿದ್ದೇನೆ. ಈ ಕಾರಣದಿಂದ ಕೂಡ ಅವರ ಬಗ್ಗೆ ನನಗೆ ಗೌರವವಿದೆ. ಅವರು ನನ್ನ ಬಸವಪ್ರಜ್ಞೆ ಮುಂತಾದ ಪುಸ್ತಕಗಳಿಂದ ಪ್ರಭಾವಿತರಾಗಿ ನನ್ನ ಸಂಪರ್ಕ ಬೆಳೆಸಿದರು. ಕೊನೆಯವರೆಗೂ ನನ್ನ ಬಗ್ಗೆ ಗೌರವಾದರಗಳನ್ನು ತೋರುತ್ತಿದ್ದರು. 26.1.2020ರಲ್ಲಿ ನಡೆದ ಅವರ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭಕ್ಕೂ ನನ್ನನ್ನು ಅತಿಥಿಯಾಗಿ ಕರೆದಿದ್ದರು. ಅವರ ಆತ್ಮೀಯತೆಯ ಮುಂದೆ ನನಗೆ ಅವರ ಆಗಿನ ಬಿಜಿಪಿ ಪಕ್ಷ ಏನೂ ಅನಿಸಲಿಲ್ಲ. ಆ ಸಭೆಯಲ್ಲಿ ಜನ ಜಾತಿ, ಧರ್ಮ ಮತ್ತು ಪಕ್ಷ ಮರೆತು ಕಿಕ್ಕಿರಿದು ತುಂಬಿದ್ದರು. ಅವರು ಮರುವರ್ಷವೇ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದರು.

ಶ್ರೀನಿವಾಸ ಪ್ರಸಾದ ಅವರು ಹದಿಹರೆಯದಲ್ಲಿ ಸಂಘಪರಿವಾರದ ಜೊತೆಗೆ ಸಖ್ಯ ಬೆಳೆಸಿದರು. 1972ರ ವರೆಗೆ ಆರ್.ಎಸ್.ಎಸ್. ನಲ್ಲಿ ಸ್ವಯಂ ಸೇವಕರಾಗಿದ್ದರು. ಜನಸಂಘ ಮತ್ತು ಎ.ಬಿ.ವಿ.ಪಿ.ಯಲ್ಲಿ ಕ್ರಿಯಾಶೀಲರಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯದಿಂದ ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ದಲಿತ ನಾಯಕರಾಗಿ ಬೆಳೆದರು.

1974ರಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಸ್ವಂತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕೀಯ ಪ್ರವೇಶಿಸಿದರು. 1976ರಲ್ಲಿ ಜನತಾ ಪಕ್ಷ ಸೇರಿದರು. 1979ರಲ್ಲಿ ಕಾಂಗ್ರೆಸ್ ಸೇರಿದರು. 1980, 1984, 1989, 1991ರ ಲೋಕಸಭಾ ಚುನಾವಣೆಗಳಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಗಳಿಸಿದರು. 1999 ರಲ್ಲಿ ಲೋಕಶಕ್ತಿ ಮತ್ತು ಬಿಜೆಪಿ ಸಂಯುಕ್ತ ಅಭ್ಯರ್ಥಿಯಾಗಿ ಅದೇ ಕ್ಷೇತ್ರದಿಂದ ಲೋಕಸಭಾಸದಸ್ಯರಾದರು. ವಾಜಪೇಯಿ ಅವರ ಸಂಪುಟದಲ್ಲಿ 1999ರಿಂದ 2004ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿ ಸೇವೆ ಸಲ್ಲಿಸಿದರು.

2008 ಹಾಗೂ 2013ರಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆಯಾಗಿದ್ದ ಶ್ರೀನಿವಾಸಪ್ರಸಾದ, 2013ರಲ್ಲಿ ಸಿ.ಎಂ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕಂದಾಯ ಸಚಿವರಾದರು. 2916ರಲ್ಲಿ ಸಂಪುಟ ಪುನರ‍್ರಚನೆ ಸಂದರ್ಭದಲ್ಲಿ ಅನಾರೋಗ್ಯದ ಕಾರಣ ಹೇಳಿ ಸಿದ್ದರಾಮಯ್ಯ ಅವರು ಶ್ರೀನಿವಾಸ ಪ್ರಸಾದ ಅವರನ್ನು ಸಂಪುಟದಿಂದ ಕೈಬಿಟ್ಟ ಕಾರಣ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜಿಪಿ ಸೇರಿದರು.

2019ರಲ್ಲಿ ಚಾಮರಾಜ ಲೋಕಸಭಾ ಕ್ಷೇತ್ರದಿಂದ ಬಿ.ಜೆ.ಪಿ. ಅಭ್ಯರ್ಥಿಯಾಗಿ ಆಯ್ಕೆಯಾದರು. ರಾಜಕೀಯ ಪ್ರವೇಶಿಸಿ 50 ವರ್ಷ ತುಂಬಿದ ಸಂದರ್ಭದಲ್ಲಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದರು. ನಿವೃತ್ತಿ ಘೋಷಿಸಿದ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರ ಬೆಂಬಲ ಪಡೆಯಲು ಕಾಂಗ್ರೆಸ್ ಹಾಗೂ ಬಿ.ಜೆ.ಪಿ. ಪಕ್ಷಗಳು ಯತ್ನಿಸಿದವು.

ಇಂಥ ರಾಜಕಾರಣದ ಮಧ್ಯೆಯೂ ಅವರಿಗೆ ಅಂಬೇಡ್ಕರ್ ಆತ್ಮಗೌರವದ ಮೂಲ ಸೆಲೆಯಾಗಿದ್ದರು. ಆದರೆ ಅವರಿವರನ್ನು ತುಳಿದು ರಾಜಕಾರಣದ ತುತ್ತತುದಿಗೆ ಹೋಗಬೇಕೆಂಬ ತೀವ್ರತೆ ಅವರನ್ನು ಬಾಧಿಸಲಿಲ್ಲ. ಸಿಕ್ಕ ಅವಕಾಶವನ್ನು ಜನಹಿತಕ್ಕೆ ಬಳಸಿಕೊಳ್ಳುವ ಚಿಂತನೆ ಬಿಟ್ಟರೆ ಬೇರೆ ಲೆಕ್ಕಾಚಾರಗಳಿಲ್ಲ. ಹೀಗಾಗಿ ಅವರೆಂದೂ ಮಹತ್ವಾಕಾಂಕ್ಷೆಯ ಹುಚ್ಚಿನ ರಾಜಕಾರಣ ಮಾಡಲಿಲ್ಲ.

ಅವರು ಬೇರೆ ಬೇರೆ ಪಕ್ಷಗಳಿಗೆ ಹೋದರು ಎನ್ನುವುದಕ್ಕಿಂತ ಅವರು ಹಾಗೆ ಹೋಗುವಂತೆ ಮಾಡುವ ಒತ್ತಡಗಳು ಆ ಪಕ್ಷಗಳಲ್ಲಿ ಸೃಷ್ಟಿಯಾದವು. ಅದೇನೇ ಇದ್ದರೂ ರಾಜಕೀಯದಲ್ಲಿ ತಾವಿಷ್ಟಪಟ್ಟ ಗೆಳೆಯರಿಗೆ, ಕಿರಿಯರಿಗೆ, ಹಿರಿಯರಿಗೆ ಮತ್ತು ಸಹಾಯ ಕೇಳಿ ಬಂದವರಿಗೆ ಎಂದೂ ನಿರಾಶೆ ಮಾಡಿದವರಲ್ಲ. ಅವರ ಸಹಾಯ ನಾಟಕೀಯವಾದುದಲ್ಲ. ಮನಃಪೂರ್ವಕವಾಗಿ ಸಹಾಯ ಮಾಡುವಂಥ ವ್ಯಕ್ತಿತ್ವವನ್ನು ಅವರು ಹೊಂದಿದ್ದರು. ನಂಬಿದವರು ಕೈಕೊಟ್ಟಾಗ ನೊಂದುಕೊಳ್ಳುತ್ತಿದ್ದ ಅವರು, ಅಂಥವರ ಸಹವಾಸಕ್ಕೆ ಮತ್ತೆ ಹೋಗಲಿಲ್ಲ. ಇಂಥ ಸ್ವಾರ್ಥ ಕಾರಣಗಳಿಂದಾಗಿಯೆ ಅವರು ಬೇಸರಗೊಂಡು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋದವರಾಗಿದ್ದಾರೆ. ಆದರೆ ಎಲ್ಲಿಯೂ ತಮ್ಮ ಜಾತ್ಯತೀತ ನಿಲವನ್ನು ಮತ್ತು ಅಲ್ಪಸಂಖ್ಯಾತರ ಬಗ್ಗೆ ಇರುವ ಕಾಳಜಿಯನ್ನು ಬಿಟ್ಟುಕೊಟ್ಟಿಲ್ಲ. ಮಿತಭಾಷಿಯಾದ ಅವರು ತಮಗೆ ನೋವುಂಟು ಮಾಡಿದವರ ಬಗ್ಗೆ ಮಾತನಾಡಿದರೆ ಹಸಿಗೋಡೆಯಲ್ಲಿ ಹರಳನ್ನಿಟ್ಟಂತೆ. ಎಲ್ಲರ ಶ್ರೇಯೋಭಿವೃದ್ಧಿಯನ್ನು ಬಯಸುವ ಅವರು, ಸಹಾಯ ಪಡೆದವರೇ ಕೈಕೊಟ್ಟಾಗ ನೋವು ಪಡುವುದು ಸ್ವಾಭಾವಿಕವಾಗಿದೆ.
ಹಿಂಸಾಯಂತ್ರ: ನಾನೀಗ ಹಿಂಸಾಯಂತ್ರ ಎಂಬ ರೂಪಕದೊಂದಿಗೆ ವರ್ಣ ವ್ಯವಸ್ಥೆಯ ಬಗ್ಗೆ ಬರೆಯ ಬಯಸುವೆ. ಲೋಕಾಯತರು, ಜೈನರು, ಬೌದ್ಧರು, ಎರಡೂವರೆ ಸಾವಿರ ವರ್ಷಗಳಿಗಿಂತಲೂ ಹಿಂದೆಯೆ ಈ ಹಿಂಸಾಯಂತ್ರದ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಹೋರಾಡುತ್ತಲೇ ಬಂದಿದ್ದಾರೆ. ಈ ಹಿಂಸಾಯಂತ್ರ ಮೊದಲಿಗೆ ಲೋಕಾಯತರೆಂಬ ಚಾರ್ವಾಕರನ್ನು ಬಲಿ ತೆಗೆದುಕೊಂಡಿತು. ಅವರ ಸಾಹಿತ್ಯವನ್ನು ಧ್ವಂಸ ಮಾಡಿತು. ಮಹಾಭಾರತ ಯುದ್ಧವನ್ನು ನಿಲ್ಲಿಸಲು ಅವರು ಮಾಡಿದ ಕಾರಣವೇ ಈ ದುರಂತಕ್ಕೆ ಕಾರಣವಾಯಿತು. ಕೌರವರು ಮತ್ತು ಪಾಂಡವರ ಮಧ್ಯೆ ಚಾರ್ವಾಕರು ಓಡಾಡುತ್ತ ಶಾಂತಿಯ ಪ್ರತಿಪಾದನೆ ಮಾಡುವಾಗ ಇಬ್ಬರೂ ಸೇರಿ ಅವರನ್ನು ಕೊಂದರು!

ಯುದ್ಧವು ಅದಾಗಲೆ ಆ ಹಿಂಸಾಯಂತ್ರದ ಮನಸ್ಸಿನಲ್ಲಿ ಮೂಡಿಬಿಟ್ಟಿತ್ತು. ಕೌರವರು ಮತ್ತು ಪಾಂಡವರು ಆ ಹಿಂಸಾಯಂತ್ರದ ಭಾಗವೇ ಆಗಿದ್ದರು. 18 ಅಕ್ಷೋಹಿಣಿ ಸೈನ್ಯ ಅದಕ್ಕೆ ಬಲಿಯಾಯಿತು. ಆ ಸೈನಿಕರ ಹೆಂಡಂದಿರು ವಿಧವೆಯರಾದರು. ಅವರ ಮಕ್ಕಳು ಅನಾಥರಾದರು!

ಜೈನರು ಬಹುಬೇಗ ಈ ಹಿಂಸಾಯಂತ್ರವನ್ನು ಎದುರಿಸುವ ಶಕ್ತಿಯನ್ನು ಕಳೆದುಕೊಂಡರು. ಬೌದ್ಧರು ಧ್ಯಾನಸ್ಥ ಸ್ಥಿತಿಯಲ್ಲೇ ಈ ಹಿಂಸಾಯಂತ್ರದ ಬಗ್ಗೆ ಜನರನ್ನು ಎಚ್ಚರಿಸಿದರು. ದೇವರು, ಸ್ವರ್ಗ ಮತ್ತು ನರಕಗಳ ಬಗ್ಗೆ ಬೌದ್ಧರು ತೋರಿದ ಉದಾಸೀನತೆಯಿಂದಾಗಿ ಈ ಹಿಂಸಾಯಂತ್ರ ಬೆಚ್ಚಿಬಿದ್ದಿತು. ಸ್ವರ್ಗ, ನರಕ ಮತ್ತು ಅಸಂಖ್ಯಾತ ದೇವರುಗಳ ಆಧಾರದ ಮೇಲೆ ನಿಂತಿರುವ ಈ ಹಿಂಸಾಯಂತ್ರ ಗಲಿಬಿಲಿಗೊಂಡಿತು. ಸಿಟ್ಟಿಗೆದ್ದು ಅನೇಕ ಬೌದ್ಧರನ್ನು ಜೀವಂತ ಸುಟ್ಟುಹಾಕಿತು. ಅವರ ಸಾಹಿತ್ಯವನ್ನು ಧ್ವಂಸ ಮಾಡಿತು. ನಂತರ ಮಾನವತಾವಾದಿಗಳು ಬೌದ್ಧರ ಅಳಿದುಳಿದ ಸಾಹಿತ್ಯವನ್ನು ನೇಪಾಳ, ಶ್ರೀಲಂಕಾ ಮುಂತಾದ ಕಡೆಗಳಿಂದ ಸಂಗ್ರಹಿಸಲು ಶತಪ್ರಯತ್ನ ಮಾಡಿದರು.

12ನೆಯ ಶತಮಾನದ ಬಸವಾದಿ ಶರಣರು ಈ ಹಿಂಸಾಯಂತ್ರಕ್ಕೆ ನೇರವಾದ ಸವಾಲೆಸೆದರು. ಕಾಯಕ ಸಿದ್ಧಾಂತದ ಮೂಲಕ ಇದರ ಮರ್ಮವನ್ನು ಹೊರಗೆಳೆದರು. ಈ ಹಿಂಸಾಯಂತ್ರದ ಬಿಡಿ ಉಪಕರಣಗಳಾದ ಜಾತಿ, ಅಸ್ಪೃಶ್ಯತೆ, ಅಸಮಾನತೆ ಮತ್ತು ಲಿಂಗಭೇದದ ವಿರುದ್ಧ ಶರಣರು ಹೋರಾಡಿದರು. ತನ್ನ ಎಲ್ಲ ಸಾಮರ್ಥ್ಯವನ್ನು ಬಳಸಿಕೊಂಡು ತಮ್ಮ ಸವರ್ಣೀಯ ಚಾಲಕರ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸುತ್ತ ಅದನ್ನು ಕಾಪಾಡುವುದಲ್ಲೇ ಹಿಂಸಾಯಂತ್ರ ತಲ್ಲೀನವಾಗಿತ್ತು. ಆದರೆ ಶರಣರ ಹೋರಾಟದಿಂದ ಜಾಗೃತವಾಯಿತು. ಉಗ್ರವಾಗಿ ಶರಣರ ಮೇಲೆ ಹರಿಹಾಯಿತು. ಶರಣರ ಕಗ್ಗೊಲೆಯಾಯಿತು. ಅವರ ಬಹುಪಾಲು ಸಾಹಿತ್ಯವನ್ನು ಧ್ವಂಸ ಮಾಡಿತು.

ಈ ಹಿಂಸಾಯಂತ್ರವನ್ನು ನಾಶಗೊಳಿಸುವುದಕ್ಕಾಗಿ ಅಂಬೇಡ್ಕರ್ ಜೀವನವಿಡಿ ಹೋರಾಡಿದರು. ಹೋರಾಟಕ್ಕಾಗಿ ಸಂವಿಧಾನ ಎಂಬ ವಜ್ರಾಯುಧವನ್ನೂ ತಯಾರಿಸಿ ಕೊಟ್ಟರು. ಈ ವಜ್ರಾಯುಧವನ್ನು ಹಿಡಿದು ಹಿಂಸಾಯಂತ್ರದ ವಿರುದ್ಧ ಹೋರಾಡಬಲ್ಲವನು ಮಾತ್ರ ಅಂಬೇಡ್ಕರವಾದಿಯಾಗಬಲ್ಲ. ವಜ್ರಾಯುಧವನ್ನು ಹಿಡಿದುಕೊಂಡು ಹಿಂಸಾಯಂತ್ರದ ಮೇಲೆ ಸವಾರಿ ಮಾಡುವ ಮೂಲಕ ಆ ಹಿಂಸಾಯಂತ್ರವನ್ನು ನಾಶಮಾಡಲಿಕ್ಕಾಗದು.

ಸಮಾಜವಾದವನ್ನು ಮತ್ತು ವಿಚಾರವಾದವನ್ನು ಹೇಳುವ ಅನೇಕರು ಕೂಡ ಈ ಹಿಂಸಾಯಂತ್ರದ ಮೇಲೆಯೆ ಕುಳಿತು ಹಿಂಸೆಯ ವಿರುದ್ಧ ಹೋರಾಟ ಮಾಡುತ್ತಿದ್ದೇವೆಂದು ಭ್ರಮಿಸುತ್ತಿದ್ದಾರೆ. ಏನೆಲ್ಲ ಕ್ರಾಂತಿಕಾರಿ ಮಾತುಗಳನ್ನು ಆಡಿದ ಅನೇಕ ರಾಷ್ಟ್ರೀಯ ನಾಯಕರೂ ಈ ಹಿಂಸಾಯಂತ್ರದ ಮೇಲೆ ಕುಳಿತು ತಮ್ಮ ಜನರ ಮೇಲೆ ಆಗುತ್ತಿರುವ ಹಿಂಸೆಗೆ ಸಾಕ್ಷಿಯಾದರು. ಇನ್ನೂ ಸಾಕ್ಷಿಯಾಗುತ್ತಲೇ ಇರುತ್ತಾರೆ. ಜರ್ಮನಿಯಲ್ಲಿ ಹಿಟ್ಲರನ ಹಿಂಸಾಯಂತ್ರದ ಮೇಲೆ ಸೋಷಿಯಲ್ ಡೆಮಾಕ್ರೇಟ್ಸ್ ಕುಳಿತ ಹಾಗೆ ಕುಳಿತು ಹಿಂಸೆಗೆ ಸಾಕ್ಷಿಯಾದ ಹಾಗೆ ಇವರೂ ಆಗುತ್ತಿದ್ದಾರೆ.

1969ರಲ್ಲಿ ಕಾಂಗ್ರೆಸ್ ಇಬ್ಭಾಗವಾಯಿತು. ಅವುಗಳಿಗೆ ಇಂಡಿಕೇಟ್ (ಇಂದಿರಾ ಕಾಂಗ್ರೆಸ್ ಅಥವಾ ಕಾಂಗೈ) ಮತ್ತು ಸಿಂಡಿಕೇಟ್ (ಸಂಸ್ಥಾ ಕಾಂಗ್ರೆಸ್, ಕಾಂಗ್ರೆಸ್ ಓಲ್ಡ್ ಅಥವಾ ಕಾಂಗೋ) ಎಂದು ಕರೆದರು. ಬಹುಪಾಲು ಜಮೀನುದಾರರು, ದೊಡ್ಡ ವ್ಯಾಪಾರಿಗಳು, ಉದ್ದಿಮೆದಾರರು ಸಿಂಡಿಕೇಟ್ ಪರವಾಗಿದ್ದರು. ಕಾಯಕಜೀವಿಗಳಾದ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಕಾಂಗೈ ಜೊತೆ ಉಳಿದರು. ಆಗ ಕಾಂಗೈನಲ್ಲಿ ನಾಯಕತ್ವದ ಕೊರತೆಯುಂಟಾಯಿತು. ಖರ್ಗೆ, ಧರ್ಮಸಿಂಗ್, ಯಾಹ್ಯಾರಂಥ ತರುಣರಿಗೆ ಕಾಂಗೈನಲ್ಲಿ ನಾಯಕತ್ವ ಲಭಿಸಿತು. ಜನಬೆಂಬಲಕ್ಕೆ ಕೊರತೆ ಇರಲಿಲ್ಲ. ಜಮೀನುದಾರರ ಮತ್ತು ಸುಲಿಗೆಕೋರರ ಹಿಡಿತದಿಂದ ಹೊರಬರುವ ಕನಸನ್ನು ಬಡವರು ಮೊದಲಬಾರಿಗೆ ಕಂಡರು. ಮೂರು ಸಾವಿರ ವರ್ಷಗಳಷ್ಟು ಹಳೆಯದಾದ ಹಿಂಸಾಯಂತ್ರವನ್ನು ಧ್ವಂಸ ಮಾಡುವ ದಿನಗಳಿವು ಎಂಬ ಉತ್ಸಾಹ ಅವರಿಗೆ ಬಂದಿರಬಹುದು.

ಪ್ರಧಾನಿ ಇಂದಿರಾ ಗಾಂಧಿ ಅವರು ಮಾಡಿದ ರಾಜಧನ ರದ್ದತಿ ಮತ್ತು ಬ್ಯಾಂಕ್ ರಾಷ್ಟ್ರೀಕರಣ ದೇಶದ ಬಡವರಲ್ಲಿ ಮೊದಲಬಾರಿಗೆ ಹೊಸ ಭರವಸೆಯನ್ನು ಮೂಡಿಸಿತ್ತು. ತದ ನಂತರ ಬಂದ ಚುನಾವಣೆಯಲ್ಲಿ ಅವರು ಇಂದಿರಾ ಗಾಂಧಿಗೆ ಮತ ಚಲಾಯಿಸುವ ನಿರ್ಧಾರಕ್ಕೆ ಬಂದರು. ಅದಕ್ಕಾಗಿ ತಮ್ಮೂರಿನ ಮೇಲ್ಜಾತಿಯ ಜಮೀನುದಾರರನ್ನು, ಗೌಡರನ್ನು, ಪಟೇಲರನ್ನು ಮತ್ತು ತಮಗೆ ಸಾಲ ಕೊಡುವ ಯಜಮಾನರನ್ನು ಎದುರು ಹಾಕಿಕೊಂಡರು. ಈ ಸಂದರ್ಭದಲ್ಲಿ ನಮ್ಮ ವಿಜಯಪುರದ ಹಳ್ಳಿಯೊಂದರಲ್ಲಿ ನಡೆದ ಘಟನೆಯ ಕುರಿತು ಬರೆಯಬಯಸುತ್ತೇನೆ.

ಆಗ ಹತ್ತಿ ಬಿಡಿಸುವ ಸಂದರ್ಭ. ಮತದಾನದ ದಿನ ಸಮೀಪಿಸುತ್ತಿದ್ದಂತೆ ಪಟ್ಟಭದ್ರರು “ಮತದಾನದ ದಿನದಂದು ಬೆಳಿಗ್ಗೆ ಆರು ಗಂಟೆಯಿಂದ ಸಂಜೆ ಆರುಗಂಟೆಯವರೆಗೆ ನಮ್ಮ ಹೊಲಗಳಲ್ಲಿ ಬಂದು ಬೇಕಾದಷ್ಟು ಹತ್ತಿ ಬಿಡಿಸಿಕೊಂಡು ಹೋಗಬಹುದು. ಆದರೆ ಮತದಾನ ಮುಗಿಯುವವರೆಗೆ ಹೊರಗೆ ಹೋಗುವ ಹಾಗಿಲ್ಲ” ಎಂದು ಡಂಗುರ ಸಾರಿದರು. ಆದರೆ ಬಡವರು ಹತ್ತಿ ಆಸೆಗಾಗಿ ಅವರ ಹೊಲಗಳಿಗೆ ಹೋಗಲಿಲ್ಲ. ಬಿಸಿಲಲ್ಲಿ ನಿಂತು ಇಂದಿರಾ ಗಾಂಧಿ ಅವರಿಗೆ ಮತ ಚಲಾಯಿಸಿದರು. ಆಗ ಈ ಮತದಾರರಿಗೆ ಕಾಂಗೈ ಅಭ್ಯರ್ಥಿಗಳು ಲೆಕ್ಕಕ್ಕೆ ಇರಲಿಲ್ಲ. ಇದ್ದದ್ದು ಕೇವಲ ಇಂದಿರಾ ಗಾಂಧಿ!
ನಂತರ ನಡೆದದ್ದು ಮತ್ತೆ ಅದೇ ಹಿಂಸಾಯಂತ್ರದ ಪ್ರಾಬಲ್ಯ. ಅವಕಾಶವಾದಿಗಳಿಗೆ ಎಡ ಬಲ ಎಂಬುದಿರುವುದಿಲ್ಲ. ಯಾವುದು ಲಾಭದಾಯಕವೋ ಅದರ ಜೊತೆ ಇರುತ್ತಾರೆ. ಹೀಗಾಗಿ ಹಿಂಸಾಯಂತ್ರ ಹೊಸ ಹೊಸ ರೂಪ ತಾಳುತ್ತಲೇ ಇರುತ್ತದೆ.

ಜೈ ಭೀಮ, ಜೈ ಸಮಾಜವಾದ, ಜೈ ಬಸವಾ ಎಂದು ಮುಂತಾಗಿ ಹೇಳುತ್ತ ಹಿಂಸಾಯಂತ್ರದ ನಟ್ ಬೋಲ್ಟುಗಳಾಗಿ ಬದುಕುವುದನ್ನು ಬಿಟ್ಟು ಹೊರಬರುವುದು ಈ ಕಾಲದ ಅವಶ್ಯಕತೆಯಾಗಿದೆ. “ಅವರು ಕಳ್ಳರು, ದುಷ್ಟರು” ಎಂದು ಸಿಡಿಮಿಡಿಗೊಂಡು ದರೋಡೆಕೋರರ ಜೊತೆ ಶಾಮೀಲಾಗಿ ಅದೇ ಹಿಂಸಾಯಂತ್ರದ ಮೇಲೆ ಕುಳಿತುಕೊಳ್ಳುವುದು ಬುದ್ಧ ಬಸವ ಅಂಬೇಡ್ಕರರಿಗೆ ಶೋಭೆ ತರುವಂಥದ್ದಲ್ಲ.

“ಪ್ರಜಾಪ್ರಭುತ್ವ ಈ ದೇಶದ ಧರ್ಮ. ಸಂವಿಧಾನ ಈ ದೇಶದ ಧರ್ಮಗ್ರಂಥ” ಎಂದು ಯಾರು ಕಾಯಾ ವಾಚಾ ಮನಸಾ ನಂಬಿ ತಮಗೆ ಸಾಧ್ಯವಾದ ರೀತಿಯಲ್ಲಿ ಹೋರಾಟಗಾರರಾಗುತ್ತಾರೋ ಅವರೇ ನಿಜವಾದ ಬುದ್ಧ, ಬಸವ ಮತ್ತು ಅಂಬೇಡ್ಕರ್‌ವಾದಿಗಳಾಗುತ್ತಾರೆ. ನಿಜವಾದ ಮಾರ್ಕ್ಸ್‌ವಾದಿಗಳೂ ಅವರೇ ಆಗುತ್ತಾರೆ.

ನಮ್ಮ ಧರ್ಮಗಳು ಮತ್ತು ಧರ್ಮಗ್ರಂಥಗಳು ನಮ್ಮ ನಮ್ಮ ಮನೆಗಳಿಗೆ ಮತ್ತು ಸಮಾಜಗಳಿಗೆ ಸೀಮಿತವಾದುವು. ಆದರೆ ಅವುಗಳ ಮಾನವೀಯ ಸಂದೇಶದ ಒಟ್ಟು ಮೊತ್ತ ಕೂಡ ನಮ್ಮ ಸಂವಿಧಾನದ ಆಶಯವಾಗಿದೆ. ಅರಿವು (ಬುದ್ಧಂ), ನೈತಿಕತೆ (ಧಮ್ಮಂ) ಮತ್ತು ಸಮಜ (ಸಂಘಂ) ಇವು ನಮ್ಮ ಸಂವಿಧಾನದ ಅಡಿಪಾಯಗಳಾಗಿವೆ. ಜನಸಂಸ್ಕೃತಿಯನ್ನು ಸೃಷ್ಟಿಸಿದಂಥ ಸಂತ, ಸೂಫಿಸಂತ, ಶರಣ, ದಾಸ ಮತ್ತು ಅನುಭಾವಿಗಳ ಭಕ್ತಿ ಪಂಥದ ಬದುಕು ನಮ್ಮ ಸಂವಿಧಾನದ ಆಶಯವಾಗಿದೆ.

ಕಬೀರಪಂಥ ಮತ್ತು ಬೌದ್ಧಧರ್ಮ ಅಂಬೇಡ್ಕರರ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದವು ಎಂಬುದನ್ನು ಮರೆಯಬಾರದು. ನಮ್ಮ ಎಲ್ಲ ಲೆಕ್ಕಾಚಾರಗಳನ್ನು ಮರೆತು ಸಂವಿಧಾನ ರಕ್ಷಣೆಯ ಹೋರಾಟದಲ್ಲಿ ನಮಗೆ ಸಾಧ್ಯವಾಗುವ ರೀತಿಯಲ್ಲಿ ತೊಡಗುವುದೇ ಕಾಲದ ಕರೆಯಾಗಿದೆ. ಆಗ ಮಾತ್ರ ನಾವು ನಿಜವಾದ ಅಂಬೇಡ್ಕರ್‌ವಾದಿಗಳಾಗಲು ಸಾಧ್ಯ.