ಪದ್ಮನಾಭನ್, ಸುಮತಿ ಕೊರಳಿಗೆ ತಾಳಿ ಕಟ್ಟುತ್ತಾನೆ. ಮದುವೆ ನಡೆಸುತ್ತಿದ್ದ ಹಿರಿಯಾತ ಎದ್ದು ಕುಂಡದ ಸುತ್ತಲೂ ಏಳು ಸುತ್ತುಗಳನ್ನು ಹಾಕುವಂತೆ ಹೇಳುತ್ತಾರೆ. ಸೆಲ್ವಿ ನಿಧಾನವಾಗಿ ಹೊಟ್ಟೆಯನ್ನು ಹಿಡಿದುಕೊಂಡು ಎದ್ದುನಿಂತು ಗಂಡನ ಹಿಂದೆ ನಡೆಯುತ್ತಾಳೆ. ಸುತ್ತಲೂ ನೆರೆದಿದ್ದವರೆಲ್ಲ ಸೆಲ್ವಿಯ ಹೊಟ್ಟೆಯನ್ನೇ ನೋಡುತ್ತಾರೆ. ಸೆಲ್ವಿ ಕ್ಲಾಸ್‌ಮೇಟ್ ಸ್ವಾಮಿ ಗುಂಪು ಮತ್ತು ಹುಡುಗಿಯರ ಗುಂಪು ಬೆರಗಾಗಿ ನೋಡುತ್ತಾರೆ. ಮದುವೆ ಮುಗಿದು ಎಲ್ಲರೂ ಅವರನ್ನು ವಿಶ್ ಮಾಡಿ ಪಕ್ಕದಲ್ಲಿದ್ದ ಪೆಂಡಾಲ್ ಒಳಕ್ಕೆ ಊಟಕ್ಕೆ ಹೊರಡುತ್ತಾರೆ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹದಿನಾರನೆಯ ಕಂತು ನಿಮ್ಮ ಓದಿಗೆ
ಅಲಮೇಲು ಶನಿವಾರ ಬೆಳಿಗ್ಗೆ ಐದು ಗಂಟೆಗೆಲ್ಲ ಎದ್ದು ಊರಿಗೆ ಹೋಗಲು ತಯಾರಾಗಿ ಜೊತೆಗೆ ಸುಶೀಲಳನ್ನು ತಯಾರಾಗುವಂತೆ ಹೇಳಿದಳು. ಕನಕ ಎಷ್ಟೇ ಕೇಳಿಕೊಂಡರೂ ಅಲಮೇಲು ಕೇಳಲಿಲ್ಲ. ಅಲಮೇಲು, “ಸಾಯಂಕಾಲ ಅಯ್ಯಪ್ಪ ಕುಟುಂಬ ಮನೆಗೆ ಬರುವುದನ್ನು ನನ್ನಿಂದ ನೋಡಲು ಆಗುವುದಿಲ್ಲ. ನನ್ನ ಮಗಳಿಗೆ ಈ ಮನೆಯಲ್ಲಿ ಸ್ಥಾನ ಇಲ್ಲದ ಮೇಲೆ ಇಲ್ಲಿ ನನಗೇನು ಕೆಲಸ?” ಎಂದಳು. ಮಣಿ ಬೆಳಿಗ್ಗೆ ಮನೆಗೆ ಬಂದಿದ್ದೆ ಕನಕ, “ಮಣಿ ನಿಮ್ಮ ಅತ್ತೆ ಇರುವುದೇ ಇಲ್ಲ ಈಗಲೇ ಊರಿಗೆ ಹೋಗಬೇಕಂತ ಹಠ ಹಿಡಿದು ಕುಳಿತಿದ್ದಾರೆ” ಎಂದಳು. ಮಣಿಗೆ ಏನು ಮಾಡಬೇಕೊ ತಿಳಿಯದೆ ಮನೆ ಹೊರಗೆ ಬಂದು ಸ್ವಲ್ಪಹೊತ್ತು ಸುಮ್ಮನೆ ನಿಂತುಕೊಂಡ. ಅಲಮೇಲು ಅಳುತ್ತ “ಸುಶೀಲ ನಡಿ ಹೊರಕ್ಕೆ” ಎಂದು ಬ್ಯಾಗನ್ನು ಕೈಯಲ್ಲಿ ಹಿಡಿದುಕೊಂಡು ಹೊರಕ್ಕೆ ಬಂದಳು. ಮಣಿ, “ಅತ್ತೆ ಎರಡು ದಿನ ಬಿಟ್ಟುಕೊಂಡು ಹೋಗುವಿರಂತೆ ಇರಿ” ಎಂದ. ಅಲಮೇಲು, “ನಾನು ಇಲ್ಲಿ ಇರುವುದಕ್ಕೆ ಇನ್ನ ಏನು ಉಳಿದಿದೆ?” ಎಂದಳು. ಮಣಿ, “ಅತ್ತೆ ಹೋಗಲಿ ಒಂದು ಅರ್ಧ ಗಂಟೆ ಇರಿ. ಬಂದೆ” ಅಂತ ಎಲ್ಲಿಗೊ ಓಡಿಹೋದ. ಕನಕ, ಅಲಮೇಲು ಕೈಯಲ್ಲಿದ್ದ ಬ್ಯಾಗನ್ನು ಕಿತ್ತುಕೊಂಡು ಮನೆ ಒಳಗೆ ಇಟ್ಟುಕೊಂಡಳು. ಅಲಮೇಲು ಹೊರಗೆ ಕಲ್ಲು ಚಪ್ಪಡಿಯ ಮೇಲೆ ಕುಳಿತುಕೊಂಡು ಅಳತೊಡಗಿದಳು.
ಸಮಯ 1ಂ ಗಂಟೆಯಾದರೂ ಮಣಿ ವಾಪಸ್ ಬರಲಿಲ್ಲ. ಕೊನೆಗೆ 1ಂ:3ಂ ಗಂಟೆಗೆ ಓಡೋಡಿ ಬಂದು ತಾಯಿಯ ಕೈಗೆ ಏನೋ ಕೊಟ್ಟ. ಕನಕ ತೆಗೆದುಕೊಂಡು ನೋಡಿದರೆ ಅದರಲ್ಲಿ ಒಂದಷ್ಟು ಬಟ್ಟೆಗಳ ಜೊತೆಗೆ ಹೂ ಎಲೆ ಬಾಳೆಹಣ್ಣು ತೆಂಗಿನಕಾಯಿಗಳಿದ್ದವು. ಕನಕ, ಸುಮತಿಗೆ ಹೇಳಿ ಸುಮತಿ ತಟ್ಟೆಯಲ್ಲಿ ಹೊಸ ಸೀರೆ ಕುಪ್ಪಸ, ಅರಶಿನ ಕುಂಕುಮ, ಬಾಳೆಹಣ್ಣು ತೆಂಗಿನಕಾಯಿ ಇಟ್ಟು ಅಲಮೇಲುಗೆ ಕೊಟ್ಟಳು. ಅಲಮೇಲು ತೆಗೆದುಕೊಳ್ಳಲಿಲ್ಲ. ಕನಕ ಮತ್ತು ಮಣಿ ಎಷ್ಟೊ ಹೊತ್ತು ಬೇಡಿಕೊಂಡ ಮೇಲೆ ಅಲಮೇಲು ಅಳುತ್ತಲೇ ತೆಗೆದುಕೊಂಡಳು. ಮತ್ತೆ ಅದೇ ರೀತಿ ಹೊಸ ಬಟ್ಟೆಗಳೊಂದಿಗೆ ಇತರ ವಸ್ತುಗಳನ್ನು ತಟ್ಟೆಯಲ್ಲಿಟ್ಟು ಸುಶೀಲಳಿಗೆ ಕೊಟ್ಟು ಆಕೆ ತೆಗೆದುಕೊಂಡಳು. ಈಗ ಕನಕ ದುಃಖಿಸಿ ದುಃಖಿಸಿ ಅಳುತ್ತಿದ್ದಳು. ಮನೆ ಬಿಡುವಾಗ ಅಲಮೇಲು ಕನಕ, ಸುಮತಿ, ಸುಶೀಲ ಎಲ್ಲರೂ ಅತ್ತುಕೊಂಡರು.
ಮಣಿ, ಅಲಮೇಲು ಮತ್ತು ಸುಶೀಲಳನ್ನು ಆಟೋದಲ್ಲಿ ಕೂರಿಸಿಕೊಂಡು ಬಸ್ ನಿಲ್ದಾಣಕ್ಕೆ ಬಂದ. ಬಸ್ಸು ದೂರದಲ್ಲಿ ಬರುತ್ತಿರುವುದನ್ನು ನೋಡಿದ ಮಣಿ ಅತ್ತೆಯ ಕೈಯಲ್ಲಿ ಒಂದಷ್ಟು ಹಣ ಇಟ್ಟು ಮೃದುವಾಗಿ ತಬ್ಬಿಕೊಂಡು ಅತ್ತೆ ಕೆನ್ನೆಗೆ ಮುತ್ತಿಟ್ಟು “ಅತ್ತೆ ಮದುವೆಗೆ ಎಲ್ಲರೂ ತಪ್ಪದೇ ಬರಬೇಕು” ಎಂದ. ಅಲಮೇಲು ಅಳುತ್ತಾ “ನಿಮಗೂ ನಮಗೂ ಇದ್ದ ನೆಂಟಸ್ತನ ಇಲ್ಲಿಗೆ ಮುಗಿದೋಯಿತೊ ಏನೋ ಮಣಿ. ನಿಮ್ಮ ಮಾವನಿಗೆ ತಿಳಿದರೆ ಏನಾಗುತ್ತೊ ಏನೋ?” ಎನ್ನುತ್ತಾ ಬಸ್ ಹತ್ತಿಕೊಂಡಳು. ಸುಶೀಲ, “ಮಾವ ರ್ತೀನಿ” ಎಂದು ಬಸ್ ಹತ್ತಿಕೊಂಡಳು. ಮಣಿ ಅವಳ ತಲೆ ಸವರಿ ಪಕ್ಕಕ್ಕೆ ತಿರುಗಿಕೊಂಡ. ಮಣಿ ಕಣ್ಣುಗಳು ತುಂಬಿಕೊಂಡಿದ್ದು ಬಸ್ಸು ಹೊರಟುಹೋದರೂ ಅವನು ಅಲ್ಲೇ ನಿಂತುಕೊಂಡು ಬಸ್ಸು ಹೋಗುವುದನ್ನೇ ನೋಡುತ್ತಿದ್ದ. ಸುಶೀಲ ಬಸ್ ಒಳಗೆ ಕುಳಿತುಕೊಂಡು ಕಿಟಿಕಿಯಲ್ಲಿ ಮಣಿಯ ಕಡೆಗೆ ನೋಡುತ್ತ ಕೈಬೀಸುತ್ತಿದ್ದಳು. ಮಣಿ ಬಸ್ ಹೋದ ಮೇಲೆ ಎಷ್ಟೊ ಹೊತ್ತು ಅಲ್ಲಿಯೇ ನಿಂತುಕೊಂಡಿದ್ದನು.
*****
ಸಾಯಂಕಾಲ ಸರಿಯಾಗಿ ಐದು ಗಂಟೆಗೆ ಮಣಿ ಮನೆಯ ಮುಂದೆ ಒಂದು ಆಟೋ ಬಂದು ನಿಂತುಕೊಂಡಿತು. ಆಟೋನಿಂದ ನಾಲ್ವರು ಕೆಳಕ್ಕೆ ಇಳಿದುಕೊಂಡಿದ್ದೆ ಆಟೋ ಮತ್ತೆ ಹಿಂದಕ್ಕೆ ಹೊರಟುಹೋಯಿತು. ಮಣಿ ಅವರನ್ನು ಮನೆ ಒಳಕ್ಕೆ ಬರಮಾಡಿಕೊಂಡು ಕುರ್ಚಿಗಳಲ್ಲಿ ಕೂರಿಸಿದ. ಅಯ್ಯಪ್ಪ, ವಿಜಯ, ಒಂದು ಹುಡುಗಿ ಚಿಕ್ಕ ಮಗುವನ್ನು ಎತ್ತಿಕೊಂಡು ಮನೆ ಒಳಕ್ಕೆ ಹೋದರು. ನಂತರ ಹತ್ತು ನಿಮಿಷಗಳಲ್ಲಿ ಅಯ್ಯಪ್ಪನ ಇಬ್ಬರು ಗಂಡುಮಕ್ಕಳು ಮತ್ತು ಸೊಸೆ ಅದೇ ಆಟೋದಲ್ಲಿ ಬಂದು ಮನೆ ಮುಂದೆ ಇಳಿದುಕೊಂಡರು. ಈಗ ಎಲ್ಲರೂ ಮನೆ ಒಳಕ್ಕೆ ಹೋಗಲು ಸ್ಥಳ ಇರಲಿಲ್ಲ. ಹೆಣ್ಣು ಮಕ್ಕಳನ್ನು ಮಾತ್ರ ಒಳಗೆ ಬಿಟ್ಟು ಉಳಿದವರು ಹೊರಗಡೆ ನಿಂತುಕೊಂಡರು. ಇಷ್ಟಕ್ಕೂ ಒಳಗಿದ್ದ ಒಂದು ಉಕ್ಕಿನ ಮಂಚವನ್ನು ಹೊರಕ್ಕೆ ತಂದು ಗೋಡೆ ಪಕ್ಕದಲ್ಲಿ ನಿಲ್ಲಿಸಿ ಆರು ಪ್ಲ್ಯಾಸ್ಟಿಕ್ ಕುರ್ಚಿಗಳನ್ನು ಒಳಗೆ ಹಾಕಲಾಗಿದ್ದು, ನಾಲ್ಕು ಕುರ್ಚಿಗಳನ್ನು ಹೊರಗೆ ಹಾಕಲಾಗಿತ್ತು. ಅಂದರೆ ಗಣಿ ಕಾರ್ಮಿಕರ ಬದುಕು ಯಾವಾಗಲೂ ಮನೆ ಒಳಗೆ ಅರ್ಧ, ಬೀದಿಯಲ್ಲಿ ಅರ್ಧ ಇರುತ್ತಿತ್ತು. ಮಣಿ ಹೊರಗಿದ್ದವರನ್ನು ಕುರ್ಚಿಗಳ ಮೇಲೆ ಕೂರಿಸಿ ಪರಿಚಯಿಸಿಕೊಂಡ. ಅಯ್ಯಪ್ಪನ ಇಬ್ಬರು ಗಂಡು ಮಕ್ಕಳು ಮಣಿಯ ಕೈಕುಲಿಕಿ ಮಾತನಾಡಿಸಿದರು.
ಮನೆ ಒಳಗೆ ವಿಜಯ ಮತ್ತು ಅವರ ಸೊಸೆ ಸುಮತಿಯನ್ನು ನಾಲ್ಕಾರು ಕೋನಗಳಲ್ಲಿ ನಿಲ್ಲಿಸಿ ಕೂರಿಸಿ ನೋಡಿದರು. ಹುಡುಗಿಯ ಕೈ ಕಾಲುಗಳು, ಮುಖ, ಹಣೆ, ಮೂಗು ತುಟಿ, ಗಲ್ಲ, ಹಲ್ಲುಗಳು, ಕೈ ಕಾಲು ಬೆರಳುಗಳು ಹುಡುಗಿಯ ಮೈಬಣ್ಣ ಎಲ್ಲವನ್ನೂ ಒಂದು ಸಲ ನೋಡಿಕೊಂಡರು. ಹುಡುಗಿ ಉದ್ದನೆಯ ಮಲ್ಲಿಗೆ ಜಡೆ ಹಾಕಿಕೊಂಡಿದ್ದಳು. ಯಾರದೊ ಮನೆಯಿಂದ ಒಳ್ಳೆ ಸೀರೆಯನ್ನು ತಂದು ಉಡಿಸಿದ್ದರು. ಬ್ಲೌಸ್ ಸ್ವಲ್ಪಮಟ್ಟಿಗೆ ಸೀರೆಗೆ ಹೊಂದಿಕೊಳ್ಳದಿದ್ದರೂ ಹುಡುಗಿ ಗೌರವ ಬಣ್ಣದಲ್ಲಿ ಸಾಕಷ್ಟು ಚೆನ್ನಾಗಿಯೆ ಕಾಣಿಸುತ್ತಿದ್ದಳು. ವಿಜಯ ಮತ್ತು ಅವರ ಸೊಸೆ ಹುಡುಗಿಯನ್ನು ನಾಲ್ಕಾರು ಸಲ ನೋಡಿದ ಮೇಲೆ ಕಣ್ಣುಗಳಲ್ಲೇ ಏನೊ ಸನ್ನೆಗಳನ್ನು ಮಾಡಿಕೊಂಡರು. ನಂತರ ಸೊಸೆ, ಸುಮತಿಯ ಹತ್ತಿರಕ್ಕೆ ಬಂದು ಸೀರೆಯನ್ನು ಆಕಡೆ ಈಕಡೆ ಸರಿಸಿ ಮುಖಕ್ಕೆ ಇನ್ನಷ್ಟು ಮೇಕಪ್ ಮಾಡಿ ಕೊನೆಗೂ ಚೆನ್ನಾಗಿದ್ದೀಯ ಎಂದು ಒಂದು ಕಾಂಪ್ಲಿಮೆಂಟ್ ಕೊಟ್ಟಳು.
ಮಹಿಳೆಯರ ಮಾತುಗಳು ಎಂದಾದರೂ ಮುಗಿಯುತ್ತವೆಯೆ? ಅವುಗಳಿಗೆ ಅರ್ಥವಾದರೂ ಉಂಟೆ? ನೋಡುವಷ್ಟು ನೋಡಿದ ಅಯ್ಯಪ್ಪ ಹೊರಗಿನಿಂದ “ವಿಜಯ” ಎಂದ. ವಿಜಯ, “ಆಯಿತು. ಒಳಗಡೆ ಬನ್ನಿ” ಎಂದು ಕರೆದಳು. ಅಯ್ಯಪ್ಪ ಎದ್ದು ಚಿಕ್ಕ ಮಗನ ಕೈ ಹಿಡಿದುಕೊಂಡು ಒಳಕ್ಕೆ ಬರುತ್ತಾ, “ಬಾರಪ್ಪ. ಹುಡುಗಿಯನ್ನು ನೀನೇ ನೋಡಬೇಕಾಗಿರುವುದು” ಎಂದ. ಹುಡುಗ ಸಂಕೋಚದಿಂದಲೇ ಒಳಕ್ಕೆ ಮನೆ ಒಳಕ್ಕೆ ಬಂದ. ಅಯ್ಯಪ್ಪ ಮತ್ತು ಹುಡುಗ ಪಕ್ಕಪಕ್ಕದಲ್ಲಿ ಕುಳಿತುಕೊಂಡರು. ಅಯ್ಯಪ್ಪ, “ಮಣಿ ಒಳಗೆ ಬಾ” ಎಂದಿದ್ದೆ ಮಣಿ ಮನೆ ಒಳಗಡೆಗೆ ಬಂದ. ಅಯ್ಯಪ್ಪ, ಮನೆಗೆ ದೊಡ್ಡವನು ನೀನೇ. ನೀನು ಹೊರಗಡೆ ನಿಂತುಕೊಂಡರೆ ಹೇಗೆ?” ಎಂದಿದ್ದೆ ಮನೆ ಹೊರಗಿದ್ದ ಎರಡು ಕುರ್ಚಿಗಳನ್ನು ಮನೆ ಒಳಕ್ಕೆ ತಂದು ಹಾಕಿ ಅಯ್ಯಪ್ಪನ ದೊಡ್ಡ ಮಗ ಕುಮಾರಸ್ವಾಮಿ ಮತ್ತು ಮಣಿ ಹೇಗೋ ಹೊಂದಿಸಿಕೊಂಡು ಕುಳಿತುಕೊಂಡರು. ಅಯ್ಯಪ್ಪನ ಸೊಸೆ, ಮಣಿಯ ಕಡೆಗೆ ನೋಡಿ ಹುಡುಗ ಪರವಾಗಿಲ್ಲ ಎಂದುಕೊಂಡಳು. ವಿಜಯ ಮತ್ತು ಸೊಸೆ ಅಕ್ಕಪಕ್ಕದಲ್ಲಿ ಕುಳಿತುಕೊಂಡಿದ್ದರು. ಕನಕ, ಸುಮತಿಯ ಕೈಗೆ ಟೀ ಕಪ್ಪುಗಳನ್ನು ಕೊಟ್ಟು ಎಲ್ಲರಿಗೂ ಕೊಡುವಂತೆ ಹೇಳಿದಳು.
ಸುಮತಿ ಯಾವ ಸಂಕೋಚವೂ ಇಲ್ಲದೆ ಮಾಮೂಲಿಯಾಗಿ ಎಲ್ಲರಿಗೂ ಟೀ ಕೊಟ್ಟು ಅಯ್ಯಪ್ಪ ಮತ್ತು ವಿಜಯಳ ಕಾಲು ಮುಟ್ಟಿ ನಮಸ್ಕಾರ ಮಾಡಿದಳು. ಅನಂತರ ಅಯ್ಯಪ್ಪನ ದೊಡ್ಡ ಮಗ ಮತ್ತು ಸೊಸೆ ಕಾಲುಗಳನ್ನೂ ಮುಟ್ಟಿದಳು. ಕೊನೆಗೆ ಪದ್ಮನಾಭನ್ ಕಾಲುಗಳನ್ನು ಎರಡು ಕೈಗಳಲ್ಲಿ ಮುಟ್ಟಿ ತುಟಿಗಳಿಗೆ ಒತ್ತಿಕೊಂಡಳು. ಅವಕ್ಕಾದ ಹುಡುಗ ಕಾಲುಗಳನ್ನು ಹಿಂದಕ್ಕೆ ಎಳೆದುಕೊಂಡನು. ವಧು, ವರನ ಕಾಲುಗಳನ್ನು ಮುಟ್ಟಿ ತುಟಿಗಳಿಗೆ ಕೈಗಳನ್ನು ಒತ್ತಿಕೊಂಡಿದ್ದೆ ಪದ್ಮನಾಭನ್‌ಗೆ ಇದೇ ಹುಡುಗಿ ನನ್ನ ಪತ್ನಿ ಎಂದು ಕೂಗಿಬಿಡಬೇಕು ಎನಿಸಿ ಅವಳನ್ನೇ ನೋಡುತ್ತಾ ಇದ್ದುಬಿಟ್ಟ. ಸುಮತಿ ಅವನ ಮುಖವನ್ನು ಒಮ್ಮೆ ನೋಡಿ ತುಟಿಗಳನ್ನು ಬಿರಿದು ಕಣ್ಣುಗಳನ್ನು ಅರಳಿಸಿದಳು. ಎಲ್ಲವನ್ನು ನೋಡುತ್ತಿದ್ದ ಅಯ್ಯಪ್ಪನ ಸೊಸೆ, “ಹುಡುಗಿಯನ್ನು ಈಗಲೇ ಸರಿಯಾಗಿ ನೋಡಿಕೊಂಡ್ಬಿಡು ಪದ್ಮನಾಭ ಅನಂತರ ಮನೆಯಲ್ಲಿ ಬಂದು ನಾನು ಸರಿಯಾಗಿ ನೋಡಿಲ್ಲ. ಹಾಗೆ ಹೀಗೆ ಅಂತ ಹೇಳಬಾರದು” ಎಂದಳು. ಎಲ್ಲರೂ ನಕ್ಕರು.
ಅಲ್ಲಿಗೆ ಹುಡುಗ, ಹುಡುಗಿ ಹಾಕಿದ ಬಲೆಗೆ ಮೀನಿನಂತೆ ಸರಿಯಾಗಿ ಬಿದ್ದಿದ್ದ. ಅಯ್ಯಪ್ಪ, ವಿಜಯ ಮಗನ ಕಡೆಗೆ ನೋಡಿದಳು. ಅವನು ನಾಚಿಕೊಂಡು ಮುಖವನ್ನು ಕೆಳಕ್ಕೆ ಹಾಕಿಕೊಂಡ. ಸುಮತಿ ಮತ್ತೆ ಎಲ್ಲರಿಗೂ ಕೇಸರಿಬಾತ್ ತಂದುಕೊಟ್ಟಳು. ಎಲ್ಲರೂ ತಿನ್ನುತ್ತಾ ಅದೂಇದೂ ಮಾತನಾಡಿದರು. ಕೊನೆಗೆ ಅಯ್ಯಪ್ಪ, “ನಮ್ಮ ಸೆಲ್ವಿಯನ್ನೂ ಕರೆದುಕೊಂಡು ಬರಬೇಕಾಗಿತ್ತು. ಇರಲಿ, ನೀವೆಲ್ಲ ಬರುವ ಭಾನುವಾರ ನಮ್ಮ ಮನೆಗೆ ಬಂದು ಹುಡುಗಿಯನ್ನು ನೋಡಿಕೊಂಡು ಬಂದುಬಿಡಿ. ಅದೂ ಒಂದು ಪದ್ಧತಿ ನಡೆದೋಗಲಿ” ಎಂದರು. ವಿಜಯ, “ಮಣಿ, ನಿಮಗೇನಪ್ಪ ಹೇಳ್ತಾ ಇರುವುದು. ಕನಕಮ್ಮ ನೀವು, ಮಣಿ, ಮಗಳು ಬೇರೆ ಯಾರಾದರು ಇದ್ದರೂ ಜೊತೆಗೆ ಬಂದು ನಮ್ಮ ಹುಡುಗಿಯನ್ನು ನೋಡಿಕೊಂಡು ಬಂದುಬಿಡಿ. ಅನಂತರ ಮದುವೆ ದಿನಾನು ಫಿಕ್ಸ್ ಮಾಡಿಬಿಡೋಣ” ಎಂದಳು.
ಒಂದು ತಿಂಗಳಾದ ಮೇಲೆ ಕಮ್ಯೂನಿಟ ಹಾಲ್‌ನಲ್ಲಿ ಎರಡು ಮದುವೆಗಳು ಒಟ್ಟಾಗಿ ನಡೆಯುತ್ತಿವೆ. ಅಲ್ಲಿನ ಹಿರಿಯರೊಬ್ಬರು ಅಗ್ನಿಕುಂಡದ ಮುಂದೆ ಕುಳಿತುಕೊಂಡು ಎಲ್ಲಾ ಏರ್ಪಾಡುಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮಣಿ ಮತ್ತು ಸೆಲ್ವಿ ಅಕ್ಕಪಕ್ಕ ಕುಳಿತಿದ್ದಾರೆ. ಅವರ ಪಕ್ಕದಲ್ಲಿ ಸುಮತಿ ಮತ್ತು ಪದ್ಮನಾಭನ್ ಜೋಡಿ ಕುಳಿತಿದೆ. ಗಟ್ಟಿಮೇಳ ಗಟ್ಟಿಮೇಳ ಎಂದಿದ್ದೆ ಮೇಳಗಾರರು ಘಟ್ಟಿಯಾಗಿ ವಾದ್ಯಗಳನ್ನು ಭಾರಿಸುತ್ತಾರೆ. ಮೊದಲಿಗೆ ಮಣಿ ಸೆಲ್ವಿ ಕುತ್ತಿಗೆಯಲ್ಲಿ ತಾಳಿ ಕಟ್ಟುತ್ತಾನೆ. ಎರಡನೇಯದಾಗಿ ಪದ್ಮನಾಭನ್, ಸುಮತಿ ಕೊರಳಿಗೆ ತಾಳಿ ಕಟ್ಟುತ್ತಾನೆ. ಮದುವೆ ನಡೆಸುತ್ತಿದ್ದ ಹಿರಿಯಾತ ಎದ್ದು ಕುಂಡದ ಸುತ್ತಲೂ ಏಳು ಸುತ್ತುಗಳನ್ನು ಹಾಕುವಂತೆ ಹೇಳುತ್ತಾರೆ. ಸೆಲ್ವಿ ನಿಧಾನವಾಗಿ ಹೊಟ್ಟೆಯನ್ನು ಹಿಡಿದುಕೊಂಡು ಎದ್ದುನಿಂತು ಗಂಡನ ಹಿಂದೆ ನಡೆಯುತ್ತಾಳೆ. ಸುತ್ತಲೂ ನೆರೆದಿದ್ದವರೆಲ್ಲ ಸೆಲ್ವಿಯ ಹೊಟ್ಟೆಯನ್ನೇ ನೋಡುತ್ತಾರೆ. ಸೆಲ್ವಿ ಕ್ಲಾಸ್‌ಮೇಟ್ ಸ್ವಾಮಿ ಗುಂಪು ಮತ್ತು ಹುಡುಗಿಯರ ಗುಂಪು ಬೆರಗಾಗಿ ನೋಡುತ್ತಾರೆ. ಮದುವೆ ಮುಗಿದು ಎಲ್ಲರೂ ಅವರನ್ನು ವಿಶ್ ಮಾಡಿ ಪಕ್ಕದಲ್ಲಿದ್ದ ಪೆಂಡಾಲ್ ಒಳಕ್ಕೆ ಊಟಕ್ಕೆ ಹೊರಡುತ್ತಾರೆ.
*****
ರಾತ್ರಿ ಎರಡೂ ಜೋಡಿಗಳು ಎರಡು ಹಳೆ ಬಿದಿರು ದಟ್ಟಿ ಗುಡಿಸಿಲುಗಳ ಒಳಗೆ ಮಂಚಗಳ ಮೇಲೆ ಅಕ್ಕಪಕ್ಕ ಕುಳಿತುಕೊಂಡಿದ್ದಾರೆ. ಅವರ ಮುಂದೆ ಮೊದಲ ರಾತ್ರಿ ಇರಬೇಕಾದ ಹಣ್ಣು ಹಂಪಲ ಮತ್ತು ಹಾಲಿನ ಗ್ಲಾಸುಗಳನ್ನು ಇಡಲಾಗಿದೆ. ಪದ್ಮನಾಭನ್ ಒಂದೇ ಸಮನೆ ನಗುತ್ತಿದ್ದಾನೆ. ಸುಮತಿ ನೋಡುವವರೆಗೂ ನೋಡಿ “ಏನು ನನ್ನನ್ನು ನೋಡಿದರೆ ನಗುಬರುತ್ತಾ ನಿಮಗೆ?” ಎಂದಳು. ಪದ್ಮನಾಭನ್ ಮತ್ತೆ ನಗುತ್ತಾ “ಸುಮತಿ ನಮಗೇನೊ ಮೊದಲ ರಾತ್ರಿ. ನಿಮ್ಮ ಅಣ್ಣನಿಗೆ ಎಷ್ಟನೇ ರಾತ್ರಿ?” ಎಂದ. ಸುಮತಿ ಕೋಪಿಸಿಕೊಂಡು “ಅವರ ಮಾತು ನಮಗ್ಯಾಕೆ ಸುಮ್ಮನೇ ಇರ್ರೀ. ನಮ್ಮ ಅಣ್ಣ ಅತ್ತಿಗೇನ ತಮಾಷೆ ಮಾಡಿದರೆ ನಾನು ಸುಮ್ಮನೆ ಇರಲ್ಲ” ಎಂದಳು. ಪದ್ಮನಾಭನ್, “ನಿನ್ನ ಅತ್ತಿಗೆ ನನ್ನ ತಂಗಿ ತಾನೇ? ಅವರು ಲವ್ ಮಾಡ್ದೇ ಇದ್ದಿದ್ದರೆ ನಮಗೆ ಮದುವೆ ಆಗ್ತಾಇರಲಿಲ್ಲ” ಎಂದ. ನಂತರ ನಗುತ್ತಾ ಲೈಟನ್ನು ಸ್ವಿಚ್ ಆಫ್ ಮಾಡಿ ಸುಮತಿಯನ್ನು ತಬ್ಬಿಕೊಂಡ. ಸುಮತಿ, “ಹಾಲು ಹಣ್ಣು ಎಲ್ಲಾ ಹಾಗೆ ಇದೆ” ಎಂದಳು. ಪದ್ಮನಾಭನ್ “ಎಲ್ಲಾ ಹಾಗೇ ಇರ್ಲಿ. ಎಲ್ಲಿಗೋಗುತ್ತೆ?” ಎನ್ನುತ್ತಾ ಸುಮತಿಯನ್ನು ಕತ್ತಲಲ್ಲಿ ಇನ್ನಷ್ಟು ಜೋರಾಗಿ ತಬ್ಬಿಕೊಂಡ.
ಇನ್ನೊಂದು ದಟ್ಟಿ ಮನೆಯಲ್ಲಿ ಮಂಚದ ಮೇಲೆ ಕುಳಿತಿದ್ದ ಮಣಿ, “ಮದುವೆಗೆ ಮುಂಚೇನೆ ನಿನಗೆ ಹೊಟ್ಟೆ ಬರಿಸಿ ಅವಮಾನ ಮಾಡಿಬಿಟ್ಟೆನಲ್ಲ ಸೆಲ್ವಿ” ಎಂದ. ಸೆಲ್ವಿ, “ನನಗೆ ಒಬ್ಬಳಿಗೆ ಅವಮಾನ ಆಗಿಲ್ಲ. ನಿಮಗೂ ಅವಮಾನ ಆಗಿದೆ” ಎಂದಳು. ಮಣಿ, “ಏನು ಹಠಾತ್ ಆಗಿ ಬಹುವಚನದಲ್ಲಿ ಮಾತನಾಡ್ತಾ ಇದ್ದೀಯ?” ಎಂದ. ಸೆಲ್ವಿ, “ಅದು ಹಾಗೇನೆ ಬಿಡು” ಎಂದಳು. ಮಣಿ, “ನಿಮ್ಮಣ್ಣ, ಸುಮತಿ ಏನು ಮಾಡ್ತಾ ಇರಬಹುದು?” ಎಂದ. ಸೆಲ್ವಿ, “ಅವರ ಮಾತು ನಿಮಗ್ಯಾಕೆ ಸುಮ್ಮನೆ ಇರ್ರಿ” ಎಂದಳು. ಮಣಿ, “ತಾಯಿ ಮತ್ತು ಮಗುವಿನ ಜೊತೆಗೆ ಶಾಂತಿ ಮುಹೂರ್ತ ಮಾಡ್ತಾ ಇರೂದು ಜಗತ್ತಿನಲ್ಲಿ ನಾನೇ ಮೊದಲು” ಎಂದ. ಸೆಲ್ವಿ, “ನಿಮ್ಮಮ್ಮನಿಗೆ ನೀನು ಏಳು ತಿಂಗಳಿಗೆ ಹುಟ್ಟಿರಬೇಕು” ಎಂದಳು. ಮಣಿ, “ಹೌದು! ನಿಜ ನಮ್ಮಮ್ಮ ಆಗಾಗ ಹೇಳ್ತಾ ಇರ್ತಾಳೆ” ಎಂದ.
ಯಾರೋ ದಾರಿಯಲ್ಲಿ ಹೋಗುವವನೊಬ್ಬ “ಏನೊ ಫಸ್ಟ್ ನೈಟ್ ನಡಿಯೊ ಪುಷ್ಪಕ್ ವಿಮಾನದಲ್ಲಿ ಇನ್ನೂ ದೀಪ ಉರಿಯ್ತಾ ಇದೆ” ಎಂದರೆ, ಇನ್ನೊಬ್ಬ, “ಪುಷ್ಪಕ್ ವಿಮಾನ ಇನ್ನೂ ಮೇಲಕ್ಕೆ ಹಾರಲಿಲ್ಲ” ಎಂದ. ಜೋರಾಗಿ ಗಾಳಿ ಬಂದರೆ ನಾಲ್ಕೂ ಕಡೆಯಿಂದಲೂ ಬಿದಿರು ದಬ್ಬೆ ಮನೆಗಳ ಒಳಕ್ಕೆ ಗಾಳಿ ತೂರಿ ವಿಪರೀತ ಸದ್ದು ಬರುವುದರಿಂದ ಆ ಮನೆಗಳನ್ನು ಪುಷ್ಪಕ್ ವಿಮಾನ ಮನೆಗಳೆಂದು ಎಲ್ಲರೂ ತಮಾಷೆ ಮಾಡುತ್ತಾರೆ. ಮಣಿ ಅವರ ಮಾತುಗಳನ್ನು ಕೇಳಿಸಿಕೊಂಡಿದ್ದೆ, ಎದ್ದು ಸ್ವಿಚ್ ಆಫ್ ಮಾಡಿದ. ಈಗ ದಾರಿಯಲ್ಲಿ ಹೋಗುತ್ತಿದ್ದವರು “ಓ.. ಪುಷ್ಪಕ್ ವಿಮಾನ ಮೇಲಕ್ಕೆ ಹಾರಿಹೋಯಿತು ನೋಡು” ಎಂದು ಕೈ ತಟ್ಟಿ ನಕ್ಕರು. ಸೆಲ್ವಿ, “ಲೈನ್‌ನಲ್ಲಿ ಇರುವವರಿಗೆ ತುಂಬಾ ಕೊಬ್ಬು” ಎಂದಳು. ಮಣಿ, “ಅವರು ಏನಾದರೂ ಅಂದುಕೊಳ್ಳಲಿ ಬಿಡು” ಎನ್ನುತ್ತಾ, ಕತ್ತಲಲ್ಲಿ ಕೈಚಾಚುತ್ತಾ ಸೆಲ್ವಿಯನ್ನು ಹುಡುಕಿ ನಿಧಾನವಾಗಿ ಸರಿಯಾಗಿ ತಬ್ಬಿಕೊಂಡ.
(ಹಿಂದಿನ ಕಂತು: ನನಸಾಗದ ಕನಸುಗಳು)

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.