ಇದೇ ಅಲೆಯ ಬುಡದಲ್ಲಿ ಒಂದು ಕಾಲದಲ್ಲಿ ಹಳ್ಳಿಯಿತ್ತು. ಗದ್ದೆಯಿತ್ತು. ಮನೆಯಿತ್ತು. ದನಕರುಗಳು ಓಡಾಡುತ್ತಿದ್ದವು. ಮನುಷ್ಯ ವಾಸವಾಗಿದ್ದ. ಅಲ್ಲೆಲ್ಲೋ ದೂರದಲ್ಲಿ ನದಿಯೊಂದರ ದಾರಿಯ ತಡೆದ ಕಾರಣಕ್ಕೆ ಇಲ್ಲಿ ಇವೆಲ್ಲವೂ ಮುಳುಗಿದವು. ಈ ನೀರಡಿಗೀಗ ಏನೇನಿರಬಹುದು? ಮುಳುಗಡೆಯಾಗುವ ಹೊತ್ತಿಗೆ ಎದ್ದು ಹೋದ ಮಗುವೊಂದು ಅರ್ಧಕ್ಕೇ ಆಡಿ ಬಿಟ್ಟ ಆಟಿಕೆಯಿರಬಹುದೇ? ರೈತನೊಬ್ಬ ನೂರಾರು ಕಟ್ಟು ಹುಲ್ಲು ಕೊಯ್ದಿರುವ ಕತ್ತಿಯಿರಬಹುದೇ? ಅಮ್ಮ ಒಬ್ಬಳು ನೂರಾರು ಬಾರಿ ಗಂಜಿ ಕಾಯಿಸಿರುವ ಪಾತ್ರೆಯಿರಬಹುದೇ? ಹಲವು ದೇವಸ್ಥಾನಗಳೂ ಇಲ್ಲಿ ಮುಳುಗಿ ಹೋಗಿವೆಯಂತೆ… ಇನ್ನಾದರೂ ಅಲ್ಲಿ ದೇವರಿರಬಹುದೇ?
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ
ವರ್ಷಗಳ ಕೆಳಗೆ ಗೆಳಯರೊಬ್ಬರು ಊರಿಗೆ ಬಂದಿದ್ದಾಗ ಅವರನ್ನು ಸುತ್ತಾಡಲಿಕ್ಕೆ ಎಲ್ಲಿಗೆ ಒಯ್ಯುವುದು ಎಂಬ ಪ್ರಶ್ನೆ ಮೂಡಿತ್ತು. ಬಯಲು ಸೀಮೆಯವರಾಗಿದ್ದ ಅವರು “ನೀರು, ದೋಣಿ, ಗುಡ್ಡ ಇಂಥಾದ್ಯಾವ್ದಾದ್ರೂ ಜಾಗಕ್ಕೆ ಹೋಗೋಣ್ರಿ” ಎಂದರು. ಆಗ ಕಣ್ಮುಂದೆ ಬಂದಿತ್ತು ಹಸಿರುಮಕ್ಕಿ. ಎರಡು ದಡಗಳ ನಡುವೆ ತುಂಬಿ ನಿಂತ ನೀರಿನ ಊರು. ದಶಕಗಳ ಹಿಂದೆ ಶರಾವತಿಗೆ ಲಿಂಗನಮಕ್ಕಿ ಆಣೆಕಟ್ಟು ಕಟ್ಟಿದಾಗ ಹುಟ್ಟಿಕೊಂಡ ಕೃತಕ ಸರೋವರ. ಹೆಚ್ಚಿಗೆ ಯೋಚಿಸದೇ ಅತ್ತಲಿನ ಬಸ್ಸು ಹತ್ತಿದ್ದೆವು. ಸಂಪೆಕಟ್ಟೆಯ ಸಮೀಪ ಒಂದು ಗಂಟೆಗೂ ಹೆಚ್ಚು ಕಾದ ಮೇಲೆ ಬಂದಿತ್ತು ಹಸಿರುಮಕ್ಕಿಯ ಬಸ್ಸು.
ಕಾಯುವುದು ಕಷ್ಟವಾದರೂ ಹೀಗೆ ಬಸ್ಸೇ ಬಾರದ, ಕಾರುಗಳೇ ಓಡಾಡದ ಊರಿನಲ್ಲಿ ಕುಳಿತು ಅಲ್ಲಿನ ಆಗುಹೋಗುಗಳ ನೋಡುವುದೇ ಒಂದು ಸಂಭ್ರಮ. ಇಲ್ಲಿ, ಧಾವಂತವೇ ಆಕ್ಸಿಜನ್ ಆಗಿರುವ ಮಹಾನಗರಿಯಲ್ಲಿ ಕೆಂಪು ದೀಪ ನಮಗೆ ಸಿಡಿಮಿಡಿಯುಂಟುಮಾಡುತ್ತದೆ. ಹಸಿರು ದೀಪ ಓಡು ಓಡು ಎಂದು ಧಾವಂತಕ್ಕೆ ಹಚ್ಚುತ್ತದೆ. ಹತ್ತಾರು ಮುಖ್ಯ ರಸ್ತೆಗಳಿದ್ದರೂ, ಎಲ್ಲಿಂದಲೋ ಬಂದು ಅದಕ್ಕೆ ಸೇರಿಕೊಂಡ ನೂರಾರು ಅಡ್ಡ ರಸ್ತೆಗಳಿದ್ದರೂ, ಅದರ ಮೇಲೆ ಗಾಳಿಯಲ್ಲಿ ಸಾಗುವ ಫ್ಲೈ ಓವರ್ ಇದ್ದರೂ, ಇದನ್ನೆಲ್ಲ ನಿಭಾಯಿಸುವ ನೂರಾರು ಟ್ರಾಫಿಕ್ ಪೋಲೀಸರಿದ್ದರೂ ಪಯಣ ಸಾಗುವುದಿಲ್ಲ. ಆದರೆ ಯಾವುದೇ ಧಾವಂತವಿಲ್ಲದೆ ಹೂವಿನ ಭೇಟಿಗೆ ಹೊರಟ ದುಂಬಿಯಂತೆ ಸಾವಕಾಶವಾಗಿ ಮಾತಾಡುತ್ತಾ, ನಗುತ್ತಾ ತಮ್ತಮ್ಮ ಕೆಲಸಕ್ಕೆ ಹೋಗುವ ಕೂಲಿಯಾಳುಗಳು ಕಣ್ಣಿಗೆ ಬೀಳುತ್ತಿದ್ದ ಹಳ್ಳಿಯ ರಸ್ತೆಗಳನ್ನು ನೋಡುತ್ತಾ, ಆ ಕೆಲವು ಕ್ಷಣಗಳ ಮಟ್ಟಿಗಾದರೂ ಆ ನೆಮ್ಮದಿಯ ಭಾಗವಾಗಿ ನಾವಲ್ಲಿ ಕುಳಿತೆವು. ಒಂದು ಗಂಟೆಯ ಬಳಿಕ ದೂರದ ಘಾಟಿಯಿಂದ ಹತ್ತಿ ಬಂದ ಬಸ್ಸು ಉಸ್ಸೆನ್ನುತ್ತಾ ನಮ್ಮೆದುರು ಬಂದು ನಿಂತಿತು. ಮರಗಳೇ ಮಹಾ ಪ್ರಜೆಗಳಾಗಿರುವ ಊರುಗಳೊಳಗೆ ಹಾಯುತ್ತಾ ಹಸಿರು ಮಕ್ಕಿ ತಲುಪಿದೆವು.
ಅಲೆ ಮೂಡುತ್ತಾ ನಿಂತಿತ್ತು ಹಿನ್ನೀರು. ಲಾಂಚೊಂದು ದೂರದ ಆಚೆ ದಡದಿಂದ ಈಗಷ್ಟೇ ಹೊರಟಿತ್ತು. ಯಾವುದೋ ಮಗು ಆಟಕ್ಕೆ ಮಾಡಿ ಬಿಟ್ಟ ದೋಣಿಯೊಂದು ತೇಲುತ್ತಿರುವಂತೆ ಅದು ನಮ್ಮತ್ತ ಬರುತ್ತಿತ್ತು. ಅದರ ಮೇಲೆ ಕುಳಿತ ಮಂದಿ ಎತ್ತರದ ಮರದಲ್ಲಿ ಗೂಡಿಗಂಟಿಕೊಂಡಿರುವ ಜೇನು ನೊಣಗಳಂತೆ ಕಾಣುತ್ತಿದ್ದರು. ಹೊರಗೆ ನಿಲ್ಲಿಸಿದ ಕಾರು, ಬೈಕು, ಬಸ್ಸುಗಳೂ ನೀರಿನ ಆಳವನ್ನು ಅಂದಾಜಿಸುವಂತೆ ಅತ್ತಲೇ ನೋಡುತ್ತಾ ನಿಂತಿದ್ದವು. ತಳಕ್ ತಳಕ್ ಎಂದು ದಡವ ತಾಕಿ ಮರಳುವ ಪುಟ್ಟ ಪುಟ್ಟ ಅಲೆಗಳ ನೋಡುತ್ತಾ ನಾವು ನಿಂತು ಕಾದೆವು.
ಎತ್ತರೆತ್ತರದ ಗುಡ್ಡಗಳು. ಅವುಗಳ ನೆತ್ತಿಯ ಮೇಲೆ ಮಾಡರ್ನ್ ಹೇರ್ ಕಟ್ ಮಾಡಿಸಿದಂತೆ ಇಷ್ಟೇ ಇಷ್ಟು ಉಳಿದಿರುವ ಕಾಡು. ಬಿಸಿಲಿನ ಝಳಕ್ಕೆ ನೀರು ಇಳಿದು ಹೋಗಿತ್ತಾದ್ದರಿಂದ ಗುಡ್ಡದ ಎದೆಯ ತುಂಬಾ ಈ ಹಿಂದೆ ತುಂಬಿ ನಿಂತಿದ್ದ ನೀರು ಮಾಡಿ ಹೋದ ಅಲೆಯ ವಕ್ರಾವಕ್ರ ಗುರುತುಗಳು ಕಾಣುತ್ತಿದ್ದವು. ಗುಡ್ಡದಾಚೆಯೆಲ್ಲಿಂದಲೋ ಹರಿದು ಬಂದಂತೆ ಹಿನ್ನೀರು ಬಳುಕಿ ಬಂದಿತ್ತು. ಲಾಂಚೆನ್ನುವ ಈ ದೋಣಿ ಆಚೆ ದಡಕ್ಕೆ ಹೋಗಲೇ ಬೇಕೆನ್ನುವ ನಿಯಮವ ಮೀರಿ ಈ ಹರಿವಿನ ಗುಂಟ ಹೀಗೇ ತೇಲಿ ಹೋಗಬಾರದೇಕೆ ಅನ್ನಿಸಿತು. ಇಕ್ಕೆಲದಲ್ಲಿ ನಿಂತ ಗುಡ್ಡಗಳ ಬಳಸುತ್ತಾ, ನಡು ನಡುವೆ ಸ್ತಂಭ, ಸ್ಥೂಪಗಳಂತೆ ತಲೆಯೆತ್ತಿ ನಿಂತಿರುವ, ಎಂದೋ ಸತ್ತರೂ ದೇಹ ಉಳಿದ ಮಮ್ಮಿಗಳಂತೆ ಕಾಣುತ್ತಿರುವ ಒಣ ಮರಗಳ ನೋಡುತ್ತಾ ಶರಾವತಿಯ ಮೈಯ ತುಂಬಾ ತೇಲಬೇಕು. ಕೊನೆಗೊಮ್ಮೆ ಅಚ್ಚರಿಯೆಂಬಂತೆ ಎದಿರಾಗುವ ಲಿಂಗನಮಕ್ಕಿಯ ತಲುಪಬೇಕು ಅಂತೆಲ್ಲ ಅನಿಸಿತು. ಆದರೆ ಹಾಗೆಲ್ಲ ಹೋಗಲಿಕ್ಕೆ ನಾವೇನು ಸ್ವಚ್ಛಂದ ಹಕ್ಕಿಗಳಲ್ಲವಲ್ಲಾ? ಹೊರಡುವ ಮೊದಲೇ ನಮ್ಮ ದಾರಿ ನಿಗದಿಯಾಗಿರುತ್ತದೆ. ಇಂಥದೇ ದಾರಿ, ಇಂಥದೇ ತಿರುವು, ಇಂಥದೇ ನಿಲ್ದಾಣ, ಇಂಥದೇ ಗಮ್ಯ. ಅಲ್ಲೇ ನಡೆಯಬೇಕು. ಅಲ್ಲೇ ಸೇರಬೇಕು. ಜಲರಾಶಿಯ ಮೇಲೆ ಹಾರುತ್ತಿದ್ದ ಹಕ್ಕಿಗಳ ನೋಡಿದಾಗ ಹೊಟ್ಟೆ ಕಿಚ್ಚಾಯಿತು. ನಮ್ಮ ಎದೆ ಮಟ್ಟಕ್ಕೆ ನಾವು ನೋಡುತ್ತಿರುವ ಈ ನಿಶ್ಚಲ ಜಲರಾಶಿ ಎತ್ತರದಲ್ಲಿ ತೇಲುತ್ತಿರುವ ಅವುಗಳಿಗೆ ಹೇಗೆ ಕಾಣುತ್ತಿರಬಹುದು? ನಿಂತನಿಂತಲ್ಲೇ ನಾವೂ ಹಕ್ಕಿಗಳಾಗಿ ಹಾರಬಾರದೇಕೆ ಅನ್ನಿಸಿತು. ಯಾರೋ ಹಾಕಿಟ್ಟ ರಸ್ತೆಯ ಪಾಲಾಗುವ ಬದಲು ದಾರಿಯೇ ಇಲ್ಲದ ಆಗಸದಲ್ಲಿ ಹಣ, ಸಂಪಾದನೆ, ಸಾಲ, ಶೂಲಗಳ ಹಂಗಿಲ್ಲದೆ ಎಲ್ಲೋ ಇರುವ ಗೂಡಿನ ಹಂಗಾಮಿ ಒಡೆಯನಾಗಿ, ಆಕಾಶಕ್ಕೆ ಮಾತ್ರ ಸ್ವಂತವಾಗಿ ಬದುಕುವ ಬದುಕು ಮನುಷ್ಯನಿಗೇಕಿಲ್ಲ?

ಇಷ್ಟೆಲ್ಲ ಯೋಚಿಸುವ ಹೊತ್ತಿಗೇ ಲಾಂಚು ಬಂತು. ವರ್ಷಾನುವರ್ಷಗಳಿಂದ ಅದದೇ ದಡಗಳ ನಡುವೆ ಓಡಾಡಿ ಬೇಸತ್ತಿರುವ ಲಾಂಚು ದಶಕಗಳಿಂದ ಒಂದೇ ಸಂಸ್ಥೆಯಲ್ಲಿರುವ ಉದ್ಯೋಗಿಯಂತೆ ಕಂಡಿತು. ಎತ್ತಲೋ ನೋಡುತ್ತಿದ್ದರೂ ಕೈ ಸರಿಯಾದುದನ್ನೇ ಟೈಪಿಸುವ ನುರಿತ ಐಟಿ ಉದ್ಯೋಗಿಯಂತೆ ಸುಮ್ಮನೆ ನಿಲ್ಲಿಸಿದರೂ ಈ ಲಾಂಚು ತಾನಾಗಿಯೇ ತೇಲಿ ಆಚೆ ದಡಕ್ಕೆ ಹೋಗುತ್ತದೇನೋ ಅನಿಸಿತು. ಎಲ್ಲರಿಗಾಗಿಯೂ ಬಂದ, ಯಾರಿಲ್ಲದಿದ್ದರೂ ಹೊರಡುವ ಲಾಂಚು ದಡಕ್ಕೆ ತನ್ನ ಕೈ ಚಾಚಿ ನಿಂತುಕೊಂಡಿತು. ದಡವ ಮೀರಿದ ನಾವು ಲಾಂಚಿನ ಪಾಲಾದೆವು. ಬಸ್ಸು, ಕಾರು, ಬೈಕುಗಳೂ ನಮ್ಮೊಟ್ಟಿಗೆ ಲಾಂಚೇರಿದವು. ಗುರ್ ಗುರ್ರೆಂದು ಗುರುಗುಟ್ಟಿದ ಲಾಂಚು ನೀರಿನ ಮೇಲೆ ಹೊರಟಿತು. ನೋಡ ನೋಡುತ್ತಿದ್ದಂತೆ ದಡ ದೂರಕ್ಕೆ ಸರಿಯಿತು. ಲಾಂಚು ಮುಂದೆ ಸಾಗಿದಂತೆಲ್ಲ ಕ್ಷಣಿಕ ಪಥವೊಂದು ಅದರ ಹಿಂದೆ ಮೂಡುತ್ತಿತ್ತು. ನಿಂತಲ್ಲೇ ಉಕ್ಕುವ ನೀರು ಲಾಂಚನ್ನು ಅಟ್ಟಿಸಿಕೊಂಡು ಬರುತ್ತಾ ಆ ಪಥವನ್ನು ಅಳಿಸಿ ಹಾಕುತ್ತಿತ್ತು. ನಮ್ಮ ಕಾಲಡಿಗೆ ನೆಲ ಕನಿಷ್ಠ ಮೂವ್ವತ್ತು, ನಲವತ್ತಡಿ ಕೆಳಗಿದೆ ಎನ್ನುವ ಯೋಚನೆಗೇ ನಾವು ಪುಳಕಗೊಂಡೆವು. ದಾರಿಯೇ ಇಲ್ಲದ, ಎಲ್ಲವೂ ದಾರಿಯಾದ ಮಾರ್ಗದಲ್ಲಿ ಲಾಂಚು ತೇಲಿತು. ನೀರನ್ನು ಸೋಕಿ ತಂಪಾದ ಗಾಳಿ ನಮ್ಮಗಳ ಮುಖಕ್ಕೆ ತಾಗಿದಾಗ ಬಿಸಿಲಿನ ಬೇಗೆ ಕಡಿಮೆಯಾಗಿ ಹಾಯೆನಿಸಿತು. ವ್ಯವಹಾರಿಕ ಜಗತ್ತಿನಿಂದ ಪಾರಾಗಿ ದೂರ ಲೋಕಕ್ಕೆ ಹೊರಟ ಪಯಣಿಗರಂತೆ ನಾವೆಲ್ಲ ನೀರ ಮೇಲೆ ತೇಲಿದೆವು. ಹಕ್ಕಿಗಳು ವಿಚಿತ್ರ ವಿನ್ಯಾಸ ರಚಿಸಿಕೊಂಡು ನೀರ ಮೇಲೆ ಹಾರುತ್ತಿದ್ದವು. ನದಿ, ದಡ, ಆಕಾಶಗಳೆಲ್ಲವನ್ನೂ ದಾರಿ ಮಾಡಿಕೊಂಡಿರುವ ಅವುಗಳ ಮೇಲೆ ನಮಗೆ ಹೊಟ್ಟೆಕಿಚ್ಚಾಯಿತು.
ಒಂದು ಕಾಲದಲ್ಲಿ ಊರಾಗಿದ್ದ ಜಾಗದಲ್ಲೀಗ ನೀರು ತುಂಬಿಕೊಂಡಿದೆ ಹಾಗೂ ನಾವು ಅದರ ಮೇಲೆ ತೇಲುತ್ತಿದ್ದೇವೆ ಎಂಬ ಕಲ್ಪನೆ ಬಂದೊಡನೆ ಮೈ ಜುಂ ಎಂದಿತು. ಇದೇ ಅಲೆಯ ಬುಡದಲ್ಲಿ ಒಂದು ಕಾಲದಲ್ಲಿ ಹಳ್ಳಿಯಿತ್ತು. ಗದ್ದೆಯಿತ್ತು. ಮನೆಯಿತ್ತು. ದನಕರುಗಳು ಓಡಾಡುತ್ತಿದ್ದವು. ಮನುಷ್ಯ ವಾಸವಾಗಿದ್ದ. ಅಲ್ಲೆಲ್ಲೋ ದೂರದಲ್ಲಿ ನದಿಯೊಂದರ ದಾರಿಯ ತಡೆದ ಕಾರಣಕ್ಕೆ ಇಲ್ಲಿ ಇವೆಲ್ಲವೂ ಮುಳುಗಿದವು. ಈ ನೀರಡಿಗೀಗ ಏನೇನಿರಬಹುದು? ಮುಳುಗಡೆಯಾಗುವ ಹೊತ್ತಿಗೆ ಎದ್ದು ಹೋದ ಮಗುವೊಂದು ಅರ್ಧಕ್ಕೇ ಆಡಿ ಬಿಟ್ಟ ಆಟಿಕೆಯಿರಬಹುದೇ? ರೈತನೊಬ್ಬ ನೂರಾರು ಕಟ್ಟು ಹುಲ್ಲು ಕೊಯ್ದಿರುವ ಕತ್ತಿಯಿರಬಹುದೇ? ಅಮ್ಮ ಒಬ್ಬಳು ನೂರಾರು ಬಾರಿ ಗಂಜಿ ಕಾಯಿಸಿರುವ ಪಾತ್ರೆಯಿರಬಹುದೇ? ಹಲವು ದೇವಸ್ಥಾನಗಳೂ ಇಲ್ಲಿ ಮುಳುಗಿ ಹೋಗಿವೆಯಂತೆ… ಇನ್ನಾದರೂ ಅಲ್ಲಿ ದೇವರಿರಬಹುದೇ? ಅರ್ಚಕರು ಹಳತೆಂದು ಒಯ್ಯದೇ ಹೋದ ಆರತಿಯಿರಬಹುದೇ? ದೇವರೇ ಸ್ಥಳಾಂತರಗೊಂಡ ಜಲಾಲಯದ ಶೂನ್ಯ ಗರ್ಭಗುಡಿಗದು ಇನ್ನಾದರೂ ಆರತಿ ಎತ್ತುತ್ತಿರಬಹುದೇ? ಎಷ್ಟೋ ಮಂದಿ ಸಿಮೆಂಟಲ್ಲದಿದ್ದರೆ ಸೋಗೆಯಿಂದ, ಸೋಗೆಯಲ್ಲದಿದ್ದರೆ ಮಣ್ಣಿನಿಂದ ಕಟ್ಟಿಕೊಂಡ ಮನೆಗಳು.. ಅವುಗಳ ಅವಶೇಷವಾದರೂ ಈಗ ಇರುವುದು ಸುಳ್ಳು. ಸಾವಿರಾರು ಜೀವಗಳು ಅತ್ತು, ನಕ್ಕು, ಬದುಕಿ, ಹೋರಾಡಿ ಹೋದ ಲೋಕವೊಂದು ಈಗ ನಮ್ಮ ಕಾಲಡಿಗೆ ನಿಶ್ಚಲವಾಗಿ ಮುಳುಗಿಕೊಂಡಿದೆ ಎನಿಸಿ ಮೈ ಝುಂ ಎಂದಿತು. ಹಿಂದೆಂದೋ ಯಾರೋ ಹೊರಡಿಸಿದ ಕೂಗೊಂದು ತಳದಿಂದ ನೀರನ್ನು ಭೇದಿಸಿಕೊಂಡು ಎದ್ದು ಬಂದು ಕೇಳಿದಂತಾಗಿ ಕಿವಿ ನಿಮಿರಿತು. ನೀರಿನಾಳದಲ್ಲೆಲ್ಲೋ ಬುಡವಿಟ್ಟುಕೊಂಡು, ಆಚೆ ತಲೆ ಚಾಚಿ ಇಣುಕುತ್ತಾ ನಿಂತಿರುವ ಒಣ ಮರಗಳು.. ಅವುಗಳ ಕಣ್ಣಿಗೆ ಈ ಮುಳುಗಿದ ಲೋಕದ ಕದಲಿಕೆಗಳು ಇನ್ನಾದರೂ ಕಾಣುತ್ತಿರಬಹುದಲ್ಲವೇ? ಇಲ್ಲೇ ಒಂದು ಒಣ ಮರದ ಪಕ್ಕ ಲಾಂಚು ನಿಲ್ಲಿಸಿ ಕೇಳಿದರೆ ನೂರು ನಿಟ್ಟುಸಿರುಗಳ ಜೊತೆ ಆ ಎಲ್ಲ ಕಥೆಗಳ ಹೇಳಿದರೂ ಹೇಳೀತೇನೋ?
ಲಾಂಚು ಮುಕ್ಕಾಲು ಹಾದಿಯನ್ನು ಸವೆಸಿತ್ತು. ಸೇರ ಬೇಕಾದ ದಡ ಹತ್ತಿರದಲ್ಲಿತ್ತು. ಬಿಟ್ಟು ಬಂದ ತೀರ ದೂರ ನಿಂತಿತ್ತು. ಇಲ್ಲಿ ಮತ್ತೊಂದಷ್ಟು ಜನ ತಮ್ಮ ಪಾಲಿನ ಯಾನಕ್ಕಾಗಿ ಕಾದು ನಿಂತಿದ್ದರು. ಅವರ ವಾಹನಗಳು ಗುರ್ ಗುರ್ ಎನ್ನುತ್ತಾ ಲಾಂಚನ್ನು ಕರೆಯುತ್ತಿದ್ದವು. ದಡದಿಂದ ಶುರುವಾಗಿ ಸುಮಾರು ಮೂರ್ನಾಲ್ಕು ಹೆಗ್ಗಂಬಗಳು ನೀರಿನಾಳದಲ್ಲಿ ಕಾಲಿಟ್ಟುಕೊಂಡು ನಿಂತಿದ್ದವು. ಸಿಗಂದೂರಿನಂತೆ ಇಲ್ಲೂ ಕೆಲವೇ ವರ್ಷಗಳಲ್ಲಿ ಸೇತುವೆಯೊಂದು ನಿರ್ಮಾಣವಾಗುತ್ತದೆ. ಈಚೆಯ ಇಡೀ ದಡವೇ ಆಚೆ ತೀರದ ಕೈಗೆ ಸಿಕ್ಕು ಬಿಡುತ್ತದೆ. ಸುತ್ತ ನೀರಿದೆ ಅನ್ನುವುದೊಂದನ್ನು ಬಿಟ್ಟರೆ ಸೇತುವೆಯ ಮೇಲಿನ ಪ್ರಯಾಣ ಇನ್ಯಾವುದೇ ನೆಲದ ಮೇಲಿನ ಓಟದಂತೆಯೇ ನೀರಸವೇ. ನಂತರ ಲಾಂಚು ಏನಾಗುತ್ತದೆ? ಆಗಲೂ ಓಡಾಡುತ್ತದಾ? ಅಥವಾ ನಿಲ್ಲುತ್ತದಾ? ಓಡಾಡುವುದೇ ಆದರೆ ನಾವಂತೂ ಅದರ ಮೇಲೇ ದಡ ದಾಟಬೇಕು. ಇಷ್ಟೇ ಇಷ್ಟಗಲದ, ಏಕರೂಪ ಪಥದ, ಅಲೆಗಳೇಳದ, ತಂಗಾಳಿ ಸೋಕದ, ಹಕ್ಕಿ ಹಾರದ, ಮುಳುಗಿದ ಜೀವನಗಳ ಪಿಸು ಮಾತು ಕೇಳಿಸದ ಈ ಸೇತುವೆ ಪ್ರಯಾಣದ ಹಂಗೇ ನಮಗೆ ಬೇಡ. ಇಂಥಾ ಹತ್ತು ಸೇತುವೆಗಳು ಹುಟ್ಟಿಕೊಂಡರೂ ಈ ಲಾಂಚು ಹೀಗೇ ದಡ-ದಡಗಳ ನಡುವೆ ತೇಲುತ್ತಿರಲಿ ದೇವರೇ ಎಂದು ಮನಸ್ಸು ಮುಳುಗಿದ ಗುಡಿಯೊಂದಕ್ಕೆ ಹರಕೆ ಹೊತ್ತುಕೊಂಡಿತು. ಆದರೆ ಇಲ್ಲಿ ದಿನನಿತ್ಯದ ಓಡಾಟಕ್ಕೆ ಲಾಂಚು ದಾಟಬೇಕಾದವರ ಸ್ಥಿತಿಯ ನೆನೆದಾಗ ಸೇತುವೆ ಬೇಗ ಆಗುವುದು ಒಳಿತು.

ದಡ ಬಂತು. ನಮ್ಮ ಬಸ್ಸು ನೆಲಕ್ಕಿಳಿದು ನಮ್ಮನ್ನು ಕರೆಯಿತು. ಮತ್ತದೇ ಟಾರು, ಮಣ್ಣುಗಳ ರೋಡಿನಲ್ಲಿನ ಓಟ ಶುರುವಾದರೂ ಮನಸ್ಸಿನಲ್ಲಿ ಮಾತ್ರ ಜಲರಾಶಿಯ ಅಲೆಗಳ ಏರಿಳಿತದ ಯಾನವೇ ಮುಂದುವರೆಯಿತು.

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ’ ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ ‘ಮರ ಹತ್ತದ ಮೀನು’ ಕಥಾ ಸಂಕಲನಗಳು ಪ್ರಕಟವಾಗಿವೆ.
