Advertisement
ಹಿರಿಮೆ-ಗರಿಮೆ ಲೋಕದಲ್ಲಿ ಸಿಕ್ಕ ಆಸ್ಟ್ರೇಲಿಯನ್ ಹಕ್ಕಿ: ಡಾ. ವಿನತೆ ಶರ್ಮಾ ಅಂಕಣ

ಹಿರಿಮೆ-ಗರಿಮೆ ಲೋಕದಲ್ಲಿ ಸಿಕ್ಕ ಆಸ್ಟ್ರೇಲಿಯನ್ ಹಕ್ಕಿ: ಡಾ. ವಿನತೆ ಶರ್ಮಾ ಅಂಕಣ

ಕುತೂಹಲಕಾರಿ ವಿಷಯವೆಂದರೆ ಈ ವರ್ಷ ೨೦೨೫ರಲ್ಲಿ ಅಮೆರಿಕಾ ದೇಶವು ಹನ್ನೆರಡನೇ ಸ್ಥಾನಕ್ಕೆ ಇಳಿದಿದೆ. ಯು.ಎಸ್.ಎ ಪಾಸ್ಪೋರ್ಟ್ ಇರುವವರು ೧೮೦ ದೇಶಗಳಿಗೆ ವೀಸಾ ಪಡೆಯದೆ ಹೋಗಬಹುದು. ಹೆನ್ಲಿ ಸಂಸ್ಥೆಯ ಅಧ್ಯಯನದ ಪ್ರಕಾರ ೨೦೧೪ ನೇ ಇಸವಿಯಲ್ಲಿ ಅಮೆರಿಕೆಯು ಮೊಟ್ಟಮೊದಲ ಸ್ಥಾನದಲ್ಲಿದ್ದು ಪ್ರಪಂಚದ ಅತ್ಯಂತ ಪ್ರಭಾವಶಾಲಿ ಪಾಸ್‌ಪೋರ್ಟ್ ಎನ್ನುವ ಹಿರಿಮೆ, ಮಾನ್ಯತೆಯಿತ್ತು. ಈ ಬಾರಿ ಮೊದಲ ಹತ್ತು ಪ್ರಭಾವಿ ದೇಶಗಳ ಪಾಸ್‌ಪೋರ್ಟ್ ಪಟ್ಟಿಯಲ್ಲಿ ಅದಕ್ಕೆ ಸ್ಥಾನವಿಲ್ಲ ಎನ್ನುವುದು ಸ್ವಲ್ಪ ಮುಜುಗರ ತಂದಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

ಪ್ರಿಯ ಓದುಗರೆ,

ನೋಡನೋಡುತ್ತಿದ್ದಂತೆ ವಿಶ್ವ ವ್ಯವಹಾರಗಳ ಕಾರುಬಾರು ಬದಲಾಗುತ್ತಿದೆ. ಕಳೆದೆರಡು ವಾರಗಳಲ್ಲಿ ಇದು ಸ್ಪಷ್ಟವಾಗಿದೆ. ಹಮಾಸ್ ಗುಂಪೊಂದು ತಾನು ಎರಡು ವರ್ಷಗಳ ಹಿಂದೆ ಅಪಹರಿಸಿ ಹಿಡಿದಿಟ್ಟುಕೊಂಡಿದ್ದ ಇಸ್ರೇಲಿ ನಾಗರಿಕರನ್ನು ಬಿಡುಗಡೆ ಮಾಡಿದೆ. ಈ ನಡೆಯಿಂದ ಪ್ಯಾಲೆಸ್ಟೈನ್-ಗಾಝಾ ಪ್ರಜೆಗಳಿಗೆ ಒಂದಷ್ಟು ಶಾಂತಿ ಸಿಕ್ಕಿದೆ ಎಂದುಕೊಳ್ಳೋಣ. ಈ ಪರಿಯ ಶಾಂತಿ ಸಾಧನೆಯಲ್ಲಿ ತನ್ನ ಪಾತ್ರ ಬಹು ಮುಖ್ಯವಾಗಿತ್ತು ಎಂದು ವಿಶ್ವನಾಯಕ ಮಹಾಶಯರು ಹೇಳಿಕೊಂಡಿದ್ದರು. ಆದರೂ ಅವರಿಗೆ ನೊಬೆಲ್ ಪ್ರಶಸ್ತಿ ಸಿಕ್ಕದೆ ಹೋಯ್ತು. ಇದರಿಂದ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ಸದ್ಯಕ್ಕಂತೂ ಏರ್ಪಟ್ಟಿರುವ ಶಾಂತಿ ಸಂದರ್ಭದ ರೂಪ ಬದಲಾಯಿಸುವುದೋ ಏನೋ, ಹೇಗೆ ಅನ್ನುವುದನ್ನ ನಾವು ಕಾದು ಕೊಡಬೇಕು.

ಅಂತಹುದೊಂದು ಶಾಂತಿ ಸಂಧಾನದಲ್ಲಿ ಆಸ್ಟ್ರೇಲಿಯಾ ಪಾತ್ರವೂ ಸ್ವಲ್ಪ ಇತ್ತು. ಇತ್ತೀಚೆಗೆ ಇತರ ವಿಶ್ವನಾಯಕರನ್ನು ಅನುಸರಿಸುತ್ತಾ, ಆಸ್ಟ್ರೇಲಿಯಾ ಕೇಂದ್ರ ಸರಕಾರವು ಪ್ಯಾಲೆಸ್ಟೈನ್ ಪರವಾಗಿ ನಿಂತಿತ್ತು. ಸಾಕಷ್ಟು ಆಂತರಿಕ ವಿರೋಧದ ನಡುವೆಯೂ ಆಸ್ಟ್ರೇಲಿಯನ್ ಪ್ರಧಾನಮಂತ್ರಿ ಮತ್ತು ಕೇಂದ್ರೀಯ ವಿದೇಶ ವ್ಯವಹಾರಗಳ ಮಂತ್ರಿ ತೋರಿದ್ದ ದೃಢ ನಿಲುವು ನನಗೆ ಮೆಚ್ಚುಗೆಯಾಗಿತ್ತು. ಆದರೆ ಈ ಆಸ್ಟ್ರೇಲಿಯನ್ ದೃಷ್ಟಿಕೋನ ಅಮೆರಿಕನ್ ಮಹಾಶಯರಿಗೆ ಇಷ್ಟವಾಗದೆ ಅವರು ನಮ್ಮ ಪ್ರಧಾನಿಯನ್ನು ಭೇಟಿಮಾಡುವುದರಲ್ಲಿ ತೋರಿದ ಉಪೇಕ್ಷೆ, ಅಸಡ್ಡೆ ಎದ್ದುಕಂಡಿತ್ತು. ಈ ಹಿನ್ನೆಲೆಯಲ್ಲಿ ಅವರು ಆಸ್ಟ್ರೇಲಿಯನ್ ಮಾಧ್ಯಮ ವರದಿಗಾರರೊಬ್ಬರಿಗೆ ಗದರಿಸಿದ್ದು ಆಸ್ಟ್ರೇಲಿಯಾ ಮಟ್ಟಿಗೆ ದೊಡ್ಡ ಸುದ್ದಿಯಾಗಿತ್ತು. ಸದ್ಯಕ್ಕಂತೂ ಮಾಧ್ಯಮಗಳು ಆಸ್ಟ್ರೇಲಿಯಾ-ಅಮೆರಿಕಾ ನಡುವಿನ ರಾಜಕೀಯ ಮತ್ತು ಆಡಳಿತ ಸಂಬಂಧವನ್ನು ವಿಶ್ಲೇಷಿಸುವಾಗ ಆಸ್ಟ್ರೇಲಿಯಾ ಒಂದು ‘ಬಿಸಿನೀರಿನಲ್ಲಿ ಬೇಯುತ್ತಿರುವ ಕಪ್ಪೆ’ ಅನ್ನುವ ಉಪಮೆಗೆ ಹೋಲಿಸುತ್ತಾರೆ. ಅಮೆರಿಕಾ ನಾಯಕರು, ಅಲ್ಲಿನ ಪ್ರಭುತ್ವವು ದಿನದಿನವೂ ಹೊಸಹೊಸ ಹೇಳಿಕೆಗಳೊಂದಿಗೆ, ನಿಲುವುಗಳೊಂದಿಗೆ ಎಲ್ಲರನ್ನೂ ಪೇಚಿಗೆ ಸಿಕ್ಕಿಸುತ್ತಿರುವಾಗ ದಕ್ಷಿಣಗೋಳದಲ್ಲಿರುವ ಆಸ್ಟ್ರೇಲಿಯಾವು ಅವನ್ನೆಲ್ಲಾ ಅರ್ಥಮಾಡಿಕೊಂಡು ಜಾಗರೂಕತೆಯಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಾ ಅಲ್ಲಿನ ಪೇಚಿಗೆ ಒಗ್ಗಿಕೊಳ್ಳುವುದು ಮಹತ್ ಕೆಲಸ. ಆಗಾಗ ಸ್ವಲ್ಪ ಮೈಸುಟ್ಟುಕೊಳ್ಳುವುದೂ, ಮುಲಾಮು ಹಚ್ಚಿಕೊಳ್ಳುವುದೂ ನಡೆದಿದೆ.

ಇವೆಲ್ಲಾ ಗರಿಮೆ–ವಿಶ್ವಕ್ಕೆಲ್ಲಾ ದೊಡ್ಡಣ್ಣ ಅನ್ನುವ ಮನೋಭಾವ ಸ್ವತಃ ಅಮೆರಿಕಕ್ಕೇ ಕಸಿವಿಸಿ ತಂದಿದೆಯೇನೊ. ಮೊನ್ನೆ ಬುಧವಾರ ಪ್ರಕಟವಾಗಿರುವ ಪ್ರಪಂಚದ ಅತ್ಯಂತ ಪ್ರಭಾವಿ ಪಾಸ್ ಪೋರ್ಟ್ ಪಟ್ಟಿಯಲ್ಲಿ ಅಮೆರಿಕಾ ಸ್ವಲ್ಪ ಕೆಳಜಾರಿದೆ. ಬ್ರಿಟನ್ನಿನ ಹೆನ್ಲಿ ಪಾಸ್ಪೋರ್ಟ್ ಇಂಡೆಕ್ಸ್ ಸಂಸ್ಥೆ ಪ್ರಕಟಣೆಯ ಪ್ರಕಾರ ಅತ್ಯಂತ ಪ್ರಭಾವಶಾಲಿಯಾದದ್ದು ಮತ್ತು ಮೊಟ್ಟಮೊದಲ ಸ್ಥಾನದಲ್ಲಿರುವುದು ಸಿಂಗಾಪುರ ಪಾಸ್ಪೋರ್ಟ್. ಹೆನ್ಲಿ ಸಂಸ್ಥೆ ತಾನು ಮೌಲ್ಯಮಾಪನ ಮಾಡಿದ ಒಟ್ಟು ೨೨೭ ದೇಶಗಳಲ್ಲಿ ೧೯೩ ದೇಶಗಳಿಗೆ ಸಿಂಗಾಪುರ ಪ್ರಜೆಗಳು ವೀಸಾ ಇಲ್ಲದೆ ಪ್ರವೇಶಿಸಬಹುದು ಎಂದಿದೆ. ಇದು ಸಿಂಗಾಪುರಕ್ಕೆ ವಿಶ್ವಮಟ್ಟದಲ್ಲಿ ಇರುವ ನಂಬಿಕೆ, ವಿಶ್ವಾಸ ಮತ್ತು ಗೌರವಗಳ ದ್ಯೋತಕವಾಗಿದೆ. ಎರಡನೇ ಸ್ಥಾನವು ದಕ್ಷಿಣ ಕೊರಿಯಾ ಮತ್ತು ಮೂರನೇ ಸ್ಥಾನವು ಜಪಾನ್ ದೇಶಗಳಿಗೆ ಸಿಕ್ಕಿದೆ. ಇದು ಆ ದೇಶಗಳಿಗೆ ಇರುವ ವಿಶ್ವಮಾನ್ಯತೆಯನ್ನು ಸೂಚಿಸುತ್ತದೆ.

ಆಸ್ಟ್ರೇಲಿಯನ್ ಪಾಸ್ಪೋರ್ಟ್‌ಗೆ ಏಳನೇ ಸ್ಥಾನ ಲಭಿಸಿದೆ. ಆಸ್ಟ್ರೇಲಿಯನ್ ಪ್ರಜೆಗಳು ತಮ್ಮ ಪಾಸ್‌ಪೋರ್ಟ್ ಹಿಡಿದುಕೊಂಡು ವೀಸಾ ಇಲ್ಲದೆ ಬರೋಬ್ಬರಿ ೧೮೫ ದೇಶಗಳಿಗೆ ಹೋಗಬಹುದು. ಕಳೆದವರ್ಷ ೨೦೨೪ ರಲ್ಲಿ ಆಸ್ಟ್ರೇಲಿಯಾವು ಐದನೇ ಸ್ಥಾನದಲ್ಲಿತ್ತು. ಅಂದರೆ ೧೮೯ ದೇಶಗಳಿಗೆ ವೀಸಾ ಇಲ್ಲದೆ ಪ್ರವೇಶಿಸುವುದು ಸಾಧ್ಯವಿತ್ತು. ಆಸ್ಟ್ರೇಲಿಯಾದ ಬಳಿಕ ಯುನೈಟೆಡ್ ಕಿಂಗ್ಡಮ್ ಎಂಟನೇ ಸ್ಥಾನದಲ್ಲಿದೆ.

ಕುತೂಹಲಕಾರಿ ವಿಷಯವೆಂದರೆ ಈ ವರ್ಷ ೨೦೨೫ರಲ್ಲಿ ಅಮೆರಿಕಾ ದೇಶವು ಹನ್ನೆರಡನೇ ಸ್ಥಾನಕ್ಕೆ ಇಳಿದಿದೆ. ಯು.ಎಸ್.ಎ ಪಾಸ್ಪೋರ್ಟ್ ಇರುವವರು ೧೮೦ ದೇಶಗಳಿಗೆ ವೀಸಾ ಪಡೆಯದೆ ಹೋಗಬಹುದು. ಹೆನ್ಲಿ ಸಂಸ್ಥೆಯ ಅಧ್ಯಯನದ ಪ್ರಕಾರ ೨೦೧೪ ನೇ ಇಸವಿಯಲ್ಲಿ ಅಮೆರಿಕೆಯು ಮೊಟ್ಟಮೊದಲ ಸ್ಥಾನದಲ್ಲಿದ್ದು ಪ್ರಪಂಚದ ಅತ್ಯಂತ ಪ್ರಭಾವಶಾಲಿ ಪಾಸ್‌ಪೋರ್ಟ್ ಎನ್ನುವ ಹಿರಿಮೆ, ಮಾನ್ಯತೆಯಿತ್ತು. ಈ ಬಾರಿ ಮೊದಲ ಹತ್ತು ಪ್ರಭಾವಿ ದೇಶಗಳ ಪಾಸ್‌ಪೋರ್ಟ್ ಪಟ್ಟಿಯಲ್ಲಿ ಅದಕ್ಕೆ ಸ್ಥಾನವಿಲ್ಲ ಎನ್ನುವುದು ಸ್ವಲ್ಪ ಮುಜುಗರ ತಂದಿದೆ. ಅದರ ಸ್ಥಾನದ ಇಳಿಕೆಯಾಗಿರುವುದಕ್ಕೆ ಮುಖ್ಯ ಕಾರಣ ಬ್ರೆಝಿಲ್, ಚೈನಾ ಮತ್ತು ವಿಯೆತ್ನಾಮ್ ದೇಶಗಳು ಅಮೆರಿಕೆಯನ್ನು ತಮ್ಮ ವೀಸಾ-ಫ್ರೀ ಪಟ್ಟಿಯಿಂದ ತೆಗೆದುಹಾಕಿದ್ದು. ಅಂದರೆ ಅಮೆರಿಕನ್ ಪ್ರಜೆಗಳು ಈ ದೇಶಗಳಿಗೆ ಹೋಗಬೇಕೆಂದರೆ ಅವರು ವೀಸಾ ಪಡೆದೇ ಹೋಗಬೇಕು. ಇದರಿಂದ ಪ್ರಪಂಚದ ರಾಜಕೀಯ ಕಲಾಪಗಳಲ್ಲಿ ಏರುಪೇರಾಗಬಹುದೇನೋ ಎನ್ನುವುದನ್ನು ಮುಂಬರುವ ದಿನಗಳಲ್ಲಿ ನೋಡಬೇಕು.

ಆಸ್ಟ್ರೇಲಿಯಾ ರಾಜಕಾರಣವನ್ನು ಸ್ವಲ್ಪ ಪಕ್ಕಕ್ಕಿಟ್ಟು ಆಸ್ಟ್ರೇಲಿಯನ್ ಪಕ್ಷಿಲೋಕಕ್ಕೆ ಹೋಗೋಣ. ಕಥಾಲೋಕಕ್ಕೆ ಹೋಗಲು ಪಾಸ್ಪೋರ್ಟ್, ವೀಸಾ ಬೇಕಿಲ್ಲವಲ್ಲ! ಆದರೆ ಈ ಪಕ್ಷಿಯನ್ನು ನೋಡಲು ನೀವು ಆಸ್ಟ್ರೇಲಿಯಾಕ್ಕೇ ಬರಬೇಕು. Tawny Frogmouth ಪಕ್ಷಿ ಆಸ್ಟ್ರೇಲಿಯಾ ಭೂಪ್ರದೇಶದ ಮೂಲನಿವಾಸಿ. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ BirdLife Australia ಜನಾಭಿಪ್ರಾಯದ ಮತದಲ್ಲಿ ಈ ವರ್ಷ ೨೦೨೫ ರಲ್ಲಿ Tawny Frogmouth ಗೆ ಆಸ್ಟ್ರೇಲಿಯನ್ ಬರ್ಡ್ ಆಫ್ ದಿ ಇಯರ್ ಪಟ್ಟ ಸಿಕ್ಕಿದೆ. ಕಳೆದ ಕೆಲ ವರ್ಷಗಳಲ್ಲಿ Tawny ಗೆ ಬೇಕಾದಷ್ಟು ಮನುಜರ ಒಲವು ಸಿಕ್ಕಿದ್ದರೂ ಬೇರೆಬೇರೆ ಪಕ್ಷಿಗಳಿಗೆ ಗೆಲುವು ಲಭ್ಯವಾಗುತ್ತಿತ್ತು. ಈ ಬಾರಿ ನಿಚ್ಚಳ ಬಹುಮತ ಸಿಕ್ಕಿ Tawny ಗೆದ್ದಿದೆ. The Guardian (ಆಸ್ಟ್ರೇಲಿಯಾ) ಪತ್ರಿಕೆ ಈ ಜನಾಭಿಪ್ರಾಯ ಮತಚಲಾವಣೆಯನ್ನು ಏರ್ಪಡಿಸಿ ನಡೆಸುತ್ತದೆ. ಎಲ್ಲರಿಗೂ ಬಲು ಪ್ರಿಯವಾದ ಈ Tawny Frogmouth ಮುದ್ದು ಗೊಂಬೆಗಳು Instagram ನಲ್ಲೂ ಬಹಳ ಹೆಸರುವಾಸಿಯಾಗಿದೆಯಂತೆ. ಈ ಲೆಕ್ಕದಲ್ಲಿ ನೋಡಿದರೆ ಅತ್ಯಂತ ಸುಂದರ ಆಸ್ಟ್ರೇಲಿಯನ್ ಪಕ್ಷಿಲೋಕಕ್ಕೆ ಇರುವ ಮಾನ್ಯತೆ ಹೆಮ್ಮೆ ತರಿಸುತ್ತದೆ.

ಅನೇಕರಲ್ಲಿ Tawny Frogmouth ಗೂಬೆ ತರಹದ ಪಕ್ಷಿ ಎನ್ನುವ ತಪ್ಪು ತಿಳುವಳಿಕೆಯಿದೆ. Frogmouth ಅನ್ನುವ ಪ್ರಭೇದಕ್ಕೆ ಸೇರಿದ Tawny ಗೆ ಮತ್ತಿಬ್ಬರು ಕಸಿನ್ಸ್ ಇದ್ದಾರೆ – Marbled Frogmouth ಮತ್ತು Papuan frogmouth. ದೇಶದ ಪೂರ್ತಿ ಇವು ವಾಸಿಸುತ್ತವೆ. ನಮ್ಮ ರಾಣಿರಾಜ್ಯ ಕ್ವೀನ್ಸ್‌ಲ್ಯಾಂಡ್‌ ನಲ್ಲಿ ಈ ಮೂರೂ ಕಸಿನ್ಸ್ ವಾಸವಿದ್ದಾರೆ ಎಂದು ಹೇಳಿದರೂ, ನಾನಿರುವ ಬ್ರಿಸ್ಬೇನ್ ನಗರದ ಸುತ್ತಮುತ್ತ Tawny ಸುಲಭವಾಗಿ ಕಾಣಿಸಿಕೊಳ್ಳುತ್ತದೆ. ಆಗಿಂದಾಗ್ಗೆ ನಮ್ಮನೆ ಹಿತ್ತಲಿನ ಮರಗಳಲ್ಲಿ ತಾಯಿ ಮತ್ತು ಮರಿಗಳು ಬಂದಿಳಿದು ಹಲವಾರು ದಿನಗಳ ಕಾಲ ಕ್ಯಾಂಪ್ ಹೂಡುತ್ತವೆ. ಬೆಳಗಾಗೆದ್ದು Tawny ಸಂಸಾರ ಇದೆಯೋ ಇಲ್ಲವೋ ಎಂದು ನೋಡುವುದು ಖುಷಿ ಕೊಡುತ್ತದೆ (ಫೋಟೋ ನೋಡಿ). ತಾವು ತಂಗುವ ಮರಗಳ ಹಿನ್ನೆಲೆಗೆ ಸ್ವಾಭಾವಿಕವಾಗಿ ಸಂಪೂರ್ಣವಾಗಿ ಹೊಂದಿಕೊಂಡು ಮರೆಮಾಚಿಕೊಳ್ಳುವ ಇವು ತಕ್ಷಣಕ್ಕೆ ಗೋಚರವಾಗುವುದಿಲ್ಲ. ಬೆಳಗಿನ ಸಮಯದಲ್ಲಿ ಕಣ್ಣು ತೆರೆಯುವುದಿಲ್ಲ, ತೆರೆದರೂ ಅರೆಗಣ್ಣು. ಆದರೆ ಇವೆಲ್ಲಾ ನಮಗೆ ಬಲು ಸಂಭ್ರಮ ತರುತ್ತದೆ. ಹತ್ತಿರ ಹೋದರೆ ರವಷ್ಟು ಕಣ್ರೆಪ್ಪೆ ತೆರೆದು ನಾವೇನು ಮಾಡುತ್ತೀವಿ ಎಂದು ಅವು ಗಮನಿಸುವುದು ಕೂತೂಹಲ ಕೆರಳಿಸುತ್ತದೆ. ದಿವ್ಯ ನಿರ್ಲಕ್ಷ್ಯ ಎನ್ನುವುದಕ್ಕೆ ಇವು ಹೇಳಿ ಮಾಡಿಸಿದ ಮಾಡೆಲ್.

ಈ ವಾರ ಪೂರ್ತಿ ನಮ್ಮನೆ ಹಿತ್ತಲಿನಲ್ಲಿ ತಂಗಿರುವ ಎರಡು ದೊಡ್ಡ ಮರಿಗಳನ್ನು ನೋಡಲು ನಿನ್ನೆ ಮರದ ಹತ್ತಿರ ಹೋದಾಗ ಒಂದಕ್ಕೆ ಸ್ವಲ್ಪ ಗಾಬರಿಯಾಯ್ತು ಎಂದು ಕಾಣಿಸಿತು. ಅರ್ಧ ಕಣ್ಣು ಬಿಟ್ಟುಕೊಂಡು ನನ್ನನ್ನು ದಿಟ್ಟಿಸಿ ಗುರಾಯಿಸಿತ್ತು. ಮೊದಲಬಾರಿ ಅಷ್ಟು ಹತ್ತಿರದಿಂದ ನೋಡುತ್ತಿರುವಾಗ ನನ್ನ ಗಮನಕ್ಕೆ ಬಂದಿದ್ದು ಈ ಮರಿಯ ಕಣ್ಣುಗಳು ಕೆಂಪಾಗಿರಲಿಲ್ಲ. Tawny ಗಳು ಪೂರ್ತಿ ವಯಸ್ಕರಾದಾಗ ಅವುಗಳ ಕಣ್ಣುಗಳು ಕೆಂಬಣ್ಣದ ಛಾಯೆಗಳನ್ನು ತೋರುತ್ತವೆ. ಇದು ಛಾಯಾಚಿತ್ರಗಾರರಿಗೆ ಇಷ್ಟವಾಗುತ್ತದೆ.

ನಾನು ಉದ್ದನೆ ಕ್ಯಾಮೆರಾ ಹಿಡಿದುಕೊಂಡು ಹತ್ತಿರ ಹೋದರೆ ಅವಕ್ಕೆ ಗಾಬರಿಯಾಗಿ ಜಾಗ ಖಾಲಿ ಮಾಡುತ್ತವೇನೋ, ಅದರಿಂದ ಅವಕ್ಕೆ ಎಷ್ಟು ಕಷ್ಟವಾಗಬಹುದು ಎಂದೆನಿಸಿ ನಾನು ಕ್ಯಾಮೆರಾ ಬಿಟ್ಟು, ಫೋನ್ ಹಿಡಿದು ಫೋಟೋ ತೆಗೆದೆ. ಅದರಿಂದಲೂ ಅವಕ್ಕೆ ಇರಿಸುಮುರಿಸಾಗಿ ತಕ್ಷಣಕ್ಕೇ ಮುಖ ತಿರುಗಿಸಿದವು. ನಾನು ಫೋಟೋ ಹಿಡಿಯದಿದ್ದರೂ ಪರವಾಗಿಲ್ಲ, Tawny Frogmouth ಸಂಸಾರ ನಿರ್ಭೀತಿಯಿಂದ, ಕ್ಷೇಮವಾಗಿ, ಆರಾಮಾಗಿರಲಿ ಎಂದೆನಿಸಿತು. ಹಿಂದೊಮ್ಮೆ ತನ್ನ ಅಮರನಾಥ್ ಪುಣ್ಯಯಾತ್ರೆಯ ಕಥಾನಕದಲ್ಲಿ ನನ್ನಮ್ಮ ಬರೆದಿದ್ದರು – ‘ಈ ಹಿಮಚ್ಛಾದಿತ ಶಿಖರಗಳ ಸೊಬಗನ್ನು, ಯಾತ್ರೆಯುದ್ದಕ್ಕೂ ಸಿಗುತ್ತಿದ್ದ ಸ್ಫಟಿಕ ನೀಲ ಸರೋವರಗಳ ಸೌಂದರ್ಯವನ್ನು, ಎಲ್ಲೆಲ್ಲೂ ಹರಡಿರುವ ಹಸಿರು ನಿಸರ್ಗವನ್ನು ನೋಡುತ್ತಾ ಮೂಕಳಾಗಿ ನಾನು ಮನಸ್ಸೆಂಬ ಕ್ಯಾಮೆರಾದಲ್ಲಿ ಸಾವಿರಾರು ಫೋಟೋಗಳನ್ನು ತೆಗೆಯುತ್ತಾ ಮಧುರ ನೆನಪುಗಳ ಕಣಜವನ್ನು ಕಟ್ಟಿದೆ.’ ಇದು ನೆನಪಾಗಿ ಮೆಲ್ನಗೆ ಮೂಡಿ ನಮ್ಮನೆ Tawny ಮರಿಗಳಿಗೆ ಗಾಳಿಯಲ್ಲೇ ಹೂಮುತ್ತು ತೂರಿದೆ.

About The Author

ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ