ಆಶಾ ತೀರಾ ವಾಚ್ಯವಾಗಿಸಿ ಯಾವುದನ್ನೂ ಹೇಳುವುದಿಲ್ಲ. ಬಹುಶಃ ಬಂಡಾಯ, ದಲಿತ, ಸ್ತ್ರೀವಾದದ ಘೋಷಣಾ ಸಾಹಿತ್ಯ ಮುಗಿದಂತೆ ಕಾಣುತ್ತಿದೆ. ಆ ಎಲ್ಲ ಚಳುವಳಿಗಳು ಕನ್ನಡದ ಒಟ್ಟೂ ಸಮಾಜದ ಮೇಲೆ, ಸಾಹಿತ್ಯದ ಮೇಲೆ ಉಂಟುಮಾಡಿದ ಅದ್ಭುತ ಚಾಲನಾ ಪ್ರಭಾವವನ್ನು ಅರ್ಥೈಸಿಕೊಂಡು, ಮನದಲ್ಲೂ ಇಟ್ಟುಕೊಂಡು, ಅದೇ ಕಾಲಕ್ಕೆ ಘೋಷಣೆಯ ಕಾಲ್ತೊಡಕುಗಳನ್ನೂ ಕಳಚಿ ಬರೆಯುವ ಹೊಸ ಯುವ ಸಮೂಹವೊಂದು ಕನ್ನಡದಲ್ಲಿ ತಯಾರಾಗಿದೆ. ನಿರ್ವಿವಾದವಾಗಿ ಆಶಾ ಕೂಡಾ ಆ ಪಡೆಯ ಉತ್ತಮ ಸದಸ್ಯೆ.
ಆಶಾ ಜಗದೀಶ್ ಕವನ ಸಂಕಲನ “ನಡು ಮಧ್ಯಾಹ್ನದ ಕಣ್ಣು” ಕೃತಿಗೆ ಲಲಿತಾ ಸಿದ್ಧಬಸವಯ್ಯ ಬರೆದ ಮುನ್ನುಡಿ
ಆಶಾ ಅವರ ಕವಿತೆಗಳಿಗೆ ಶಿಫಾರಸ್ಸು ಬೇಕಿಲ್ಲ. ಅವರು ಪ್ರತಿಭೆಯನ್ನು ಮಾತ್ರ ನಂಬಿಕೊಂಡು ಓದುಗರ ಜೊತೆ ಸಂವಾದಕ್ಕಿಳಿದಿಲ್ಲ. ಶ್ರದ್ಧೆ ಮತ್ತು ಶಿಸ್ತುಗಳನ್ನು ಪ್ರತಿ ಪದದ ಬಳಕೆಯಲ್ಲೂ ಅಳವಡಿಸಿಕೊಂಡು ತನಗಾಗುವಷ್ಟೂ ತನ್ನ ಪ್ರತಿಭೆಯನ್ನು ಸಾಣೆಗೊಳಪಡಿಸಿಕೊಂಡಿದ್ದಾರೆ. ಉತ್ಸಾಹ ಇಲ್ಲದೆ ಕವನ ರಚನೆ ಸಾಧ್ಯವಿಲ್ಲ, ಆದರೆ ಉತ್ಸಾಹವನ್ನೇ ದೊಡ್ಡ ಆಕರವೆಂದು ನಂಬಿ ಹೊರಟಾಗ ನಾವು ಬರಹಗಾರ/ರ್ತಿ ಯರು ಕೆಲವೆ ಹೊತ್ತಲ್ಲಿ ಪುನರಾವರ್ತನೆಯ ಚಾಳಿಗೆ ಬೀಳುತ್ತೇವೆ, ಕಾರಣ ಒಂದು ಪೂರ್ವಸಿದ್ಧತೆಯ ಅಭಾವ. ಎರಡು ತಿದ್ದುವ ಕೆಲಸಕ್ಕೇ ಕೈಯೇ ಇಡದೆ ನಮ್ಮ ಬರಹ ಅಪರೂಪ ರತ್ನವೆಂಬ ಟೊಳ್ಳು ಆತ್ಮವಿಶಾಸವನ್ನು ಪೋಷಿಸಿಕೊಳ್ಳುವುದು. ವಾಸ್ತವವಾಗಿ ಉತ್ಸಾಹವನ್ನು ಬಳಸಿಕೊಂಡು ಪೂರ್ವಸಿದ್ಧತೆ ಮಾಡಿಕೊಳ್ಳುವುದು ಎಲ್ಲಾ ಉತ್ತಮ ಕತೃಗಳ ಲಕ್ಷಣ, ಅದು ಅವಮಾನವಲ್ಲ. ಇದ್ದಕ್ಕಿದ್ದಂತೆ ಸ್ಫೂರ್ತಿ ಬಂದಮರಿಕೊಂಡು ಬರೆದುಬಿಟ್ಟೆ ಎನ್ನುವುದು ಅರ್ಧ ಸತ್ಯದ ಮಾತು. ನಿಜ, ಇದ್ದಕ್ಕಿದ್ದಂತೆಯೇ ಕವಿತೆ ಹೊಳೆಯುತ್ತದೆ. ಆದರೆ ಹೊಳೆದದ್ದೆಲ್ಲ ಓದುಗರ ಮುಂದಿಡುವ ಮೊದಲು ಕೊಂಚ ಸಮಾಧಾನದಿಂದ ಅದರ ಅರಗು ಮೂಲೆಗಳನ್ನು ಕೊರೆದು ಏಣುಗಳು ಸ್ಫುಟವಾಗುವಂತೆ ಮಾಡುವುದು ಬರಹಗಾರ/ರ್ತಿಯ ಕರ್ತವ್ಯ. ಈ ಕರ್ತವ್ಯವನ್ನು ಆಶಾ ಅವರು ಅದೆಷ್ಟು ಶ್ರದ್ಧೆಯಿಂದ ಮಾಡಿದ್ದಾರೆಂದರೆ, ಹೊಸ ರೂಪಕಗಳನ್ನು, ಹೊಸ ನಿರೂಪಣಾ ಶೈಲಿಯನ್ನು, ಹೊಸ ಪದಕೂಟಗಳನ್ನು ಹುಟ್ಟುಹಾಕಿದ್ದಾರೆ.
ಪ್ರಪಂಚದ ಮೇಲೆ ಎರಡೇ ವಸ್ತುಗಳಿರುವುದು ಕವಿಗಳಿಗೆ ಎಂದು ಛೇಡಿಸುತ್ತಾನೆ ಆಧುನಿಕ ಅಸಂಗತ ನಾಟಕವೊಂದರ ವಿದೂಷಕ. ಮೊದಲನೆಯದು ಗಂಡು ಹೆಣ್ಣಿನ ನಡುವಿನ ಕೆಮಿಸ್ಟ್ರಿ, ಇನ್ನುಳಿದಿದ್ದೆಲ್ಲ ಆ ಕೆಮಿಸ್ಟ್ರಿಯ ಉಪ ಉತ್ಪನ್ನಗಳು! ಹೌದು, ಅದಕ್ಕೆ ನಾಚಿಕೆ ಪಡುವಂಥದ್ದೇನಿಲ್ಲ. ಆಡಮ್ ಮತ್ತು ಈವಳ ನಡುವೆ ಹುಟ್ಟಿದ ಕೆಮಿಸ್ಟ್ರಿಯೇ ತಾನೇ ಜಗತ್ ಸೃಷ್ಟಿ. ಆದರೆ ಮೂಲ ಉತ್ಪನ್ನ ಮತ್ತು ಉಪ ಉತ್ಪನ್ನಗಳನ್ನು ಬರಹಗಳಲ್ಲಿ ತಂದಾಗ ಪ್ರತಿ ಬರಹಗಾರರೂ ಅದನ್ನೊಂದು ಹೊಸ ಬಗೆಯಲ್ಲಿ ಹೇಳಲು ಪ್ರಯತ್ನಿಸುತ್ತಾರೆ. ಅದು ಭಾಷೆಯಲ್ಲೋ, ಸನ್ನಿವೇಶ ಸೃಷ್ಟಿಯಲ್ಲೋ, ಬಂಧದಲ್ಲೋ, ಪ್ರಕಾರದಲ್ಲೋ…. ಹೀಗೆ ತಂತಮ್ಮ ಕೈ ಆನಿಸುವಷ್ಟು ಹೊಸದು ಕೊಡಲು ಪ್ರಯತ್ನಿಸುವ ಬರಹಗಳೇ ಇಂದು ಶಾಶ್ವತವಾಗಿ ಉಳಿದಿರುವಂತಹವು. ಆಶಾ ಕೂಡಾ ಅಷ್ಟೇ, ಇಲ್ಲಿನ ಹೆಚ್ಚಿನ ಕವಿತೆಗಳಲ್ಲಿ ಅವರು ಅದೇ ಗಂಡು ಹೆಣ್ಣಿನ ಮನೋಸಾಂಗತ್ಯದ ಬಗೆಬಗೆಗಳನ್ನು ಪರಿಕಿಸಲು ತೊಡಗಿದ್ದರೂ, ಎಲ್ಲಿಯೂ ಓದುಗರಿಗೆ ಇದೂ ಅದೇ ರಾಗವೆಂದೋ ಗೋಳೆಂದೋ ಅನಿಸದಂತೆ ಹೊಸತನ ತಂದಿದ್ದಾರೆ. ಉದಾಹರಣೆಗೆ ಇಲ್ಲಿಯ ‘you were blockedʼ ಎನ್ನುವ ಕವನ ನಿಮ್ಮ ಮುಂದಿಡುವೆ.
ಈ ಕವನದ ವಸ್ತು ಅನಾದಿಯಾದ ಪ್ರೇಮದ್ರೋಹ! ಅದನ್ನು ಹೇಳಲು ಕವಿಯಿತ್ರಿ ಫೇಸ್ ಬುಕ್ಕಿನಿಂದ ಒಲ್ಲದವರನ್ನು ಬ್ಲಾಕ್ ಮಾಡುವ ಈ ಕಾಲದ ತಂತ್ರವನ್ನು ರೂಪಕ ಮಾಡಿಕೊಳ್ಳುತ್ತಾರೆ. ದ್ರೋಹಿಸಿದವರು ದ್ರೋಹಕ್ಕೊಳಗಾದವರು ಮುಖ ತಪ್ಪಿಸಿ ಓಡಾಡುವ, ಕೊಂಡ ಉಡುಗೊರೆಗಳನ್ನು ಮರಳಿಸುವ ಚೇಷ್ಟೆಗಳು ಹಳೆ ಕಾಲದವಾದರೆ, ಈಗ ಫೇಸ್ಬುಕ್ಕಿನಿಂದ ಬ್ಲಾಕ್ ಮಾಡಿಬಿಡುವ Sizzling ice cream ತೆರದ ಇಬ್ಬಂದಿ ಮಾರ್ಗಗಳಿವೆ. ಅದನ್ನು ಕವಿತೆ ರೂಪಕವಾಗಿಸುವಲ್ಲಿ ಗೆದ್ದಿದೆ.
ಅರೆ
ಈ ಹೆಜ್ಜೆಗಳಾದರೂ ಎಷ್ಟು
ಸಮಯಸಾಧಕ….
ಯಾವುದನ್ನು ಯಾರನ್ನು ಯಾವಾಗ
ಹೇಗೆ ಬ್ಲಾಕ್ ಮಾಡಬೇಕೆನ್ನುವ
ಎಲ್ಲ ಪಾಠಗಳನ್ನೂ
ಅದೆಲ್ಲಿ ಕಲಿತು ಬರುತ್ತವೋ
ಹೀಗೆಯೇ ಇಲ್ಲಿ ‘ಪಾರ್ಕಿಂಗ್ ಲಾಟ್’ ಎನ್ನುವ ಕವಿತೆಯೊಂದಿದೆ. ಆಶಾ ಖಾಲಿ ಪಾರ್ಕಿಂಗ್ ಲಾಟಿನ ಕಾರು ಮತ್ತದರ ಚಾಲಕನನ್ನಿಟ್ಟುಕೊಂಡು ಗಂಡು ಹೆಣ್ಣಿನ ನಡುವಿನ ಆಪ್ತಸಾಂಗತ್ಯದ ಕ್ಷಣ ದಾಖಲಿಸುವ ವಿಧಾನವೂ ಅವರ ಹೊಸ ರೂಪಕಗಳ ಬೆಳೆಗೆ ಸೊಗಸಾದ ಉದಾಹರಣೆ. ‘ಮದ್ದು ಬದಲಾಯಿಸುತ್ತಾಳೆ’ ಎನ್ನುವ ಕವಿತೆ ಬಲು ಸೂಕ್ಷ್ಮವಾಗಿ ಭಂಗಿತ ಪ್ರೇಮಿಕೆಯೊಬ್ಬಳ ಎದೆಗುದಿ ಒಣಕೆಮ್ಮಾಗಿ ಕಾಣಿಸಿಕೊಳುವ ಬಗೆಯನ್ನು ಹೇಳುತ್ತದೆ. ಅದು ಗೊತ್ತಿದ್ದೂ ಅಮ್ಮ ಕೇವಲ ಮಗಳ ಹೊರಕೆಮ್ಮಿಗೆ ದಿನದಿನವೂ ಮದ್ದು ಬದಲಾಯಿಸುವ ವ್ಯರ್ಥವನ್ನು ರೂಪಕವನ್ನಾಗಿಸಿ, ಕೊನೆಯೆರಡು ಸಾಲಿನಲ್ಲಿ ಎಲ್ಲ ಹೆತ್ತವರ ಅಸಹಾಯಕತೆಯನ್ನು ಘನವಾಗಿ ಹಿಡಿದಿದೆ.
ಇಂತಹ ಅನೇಕ ಉದಾಹರಣೆಗಳು ಬೇಕೆಂದರೆ, ಆಶಾ ಅವರನ್ನು ಓದಿ! ಪ್ರೇಮಭಂಗದ, ದ್ರೋಹದ, ಜಡಗಟ್ಟುವಿಕೆಯೆ ಮುಂತಾದ ಜಗತ್ತಿನ ಅತಿ ಹಳೆಯ ತಲ್ಲಣಗಳನ್ನು, ಹೊಸ ಕಾಲವು ಕೊಟ್ಟ ದಿಟ್ಟತೆಯಿಂದ ಮುಖಾಮುಖಿಯಾಗುವ ಹುಡುಗಿಯೊಬ್ಬಳಿದ್ದಾಳಿಲ್ಲಿ ! ನೀನೂ ನೋಡಮ್ಮ – look here you, great venus – ನಿನ್ನ ಕುಚೇಷ್ಟೆಗಳನ್ನು ಜೀರ್ಣಿಸಿಕೊಳ್ಳಬಲ್ಲ ಆಧುನಿಕ ಯುವತಿ ಪಡೆ ತಯಾರಾಗಿದೆ ! (ವೀನಸ್ ಗ್ರೀಕ್ ಪುರಾಣದ ಪ್ರೇಮ ಕಾಮಗಳ ದೇವತೆ)
ಅಮ್ಮನ ಮೇಲೆ ಕವಿತೆ ಬರೆಯದೆ ಯಾವ ಕವಿಗಳ ಸಂಕಲನವೂ ಪೂರ್ತಿಯಾಗದೆಂಬ ಷರಾವನ್ನು ಅದು ಹೇಗೆ ಎಲ್ಲಿ ಯಾರು ಬರೆದರೋ ತಿಳಿಯದು, ಯುವಕರಂತೂ ಜಿದ್ದಿಗೆ ಬಿದ್ದಂತೆ ಅಮ್ಮನನ್ನು ತಂದು ಸಂಕಲನದೊಳಗೆ ನೇಣುಹಾಕುವುದು ಅತ್ಯುಚಿತ ಕ್ರಿಯೆಯೆಂದು ಇತ್ತೀಚೆಗೆ ಎದೆ ಮೇಲೆ ಬರಕೊಂಡ ಹಾಗಿದೆ. ಹೀಗೆ ಮಾಡುತ್ತ ಅವರು ತಮ್ಮದೇ ಕಟ್ಟುಕಲ್ಪನೆಗಳ ಅಮ್ಮನನ್ನು ಕಡೆದುಕೊಂಡುಬಿಟ್ಟು ವಾಸ್ತವದ ಅಮ್ಮ ಆ ಕಲ್ಪನೆಯೊಳಗೆ ಅಮುಕಿಕೊಂಡಾದರೂ ಸರಿ ಅಡ್ಜಸ್ಟ್ ಆಗಲೇಬೇಕೆನ್ನುವ ಒತ್ತಡವನ್ನುಂಟು ಮಾಡುತ್ತಿದ್ದಾರೆ, ಆಧುನಿಕ ಸಾಹಿತ್ಯಿಕ ಭಯೋತ್ಪಾದನೆ ಇದು! ಆಶಾ ಕೂಡಾ ಅಮ್ಮನ ಕುರಿತೊಂದು ಪದ್ಯ ಬರೆದಿದ್ದಾರೆ. ಸಂಕಲನದ ಅತ್ಯುತ್ತಮ ಕವಿತೆಗಳಲ್ಲೊಂದಿದು. ಅಮ್ಮನ ಪ್ರಸ್ತಾಪವನ್ನೇ ಮಾಡದೆ ಅವರೂ ಸೇರಿದಂತೆ ಎಲ್ಲ ಕಾಲದ ಅಮ್ಮಂದಿರೂ ‘ಆತ್ಮದ ಜರೂರತ್ತಲ್ಲದಿದ್ದರೂʼ ಬಹುಕಾಲದಿಂದ ಘೋಸ್ಟ್ ರೈಟರುಗಳು ಬರೆದಿಟ್ಟ ಅಮ್ಮನ ಚಿತ್ರದ ಸಾಕಾರಕ್ಕಾಗಿ ಕಲ್ಲಾಗಲೇ ಬೇಕಾದ ಅನಿವಾರ್ಯತೆಯನ್ನು ಪದ್ಯ ಮಿತಪದಗಳಲ್ಲಿ ಹೇಳಿದೆ. ಮೂಗ ಮೇಲಿನ black heads ಹುತ್ತಗಟ್ಟುವ ಪ್ರತಿಮೆ ನಾನು ಇಲ್ಲೆ ಮೊದಲು ಓದಿದ್ದು. ಆಶಾ ತೀರಾ ವಾಚ್ಯವಾಗಿಸಿ ಯಾವುದನ್ನೂ ಹೇಳುವುದಿಲ್ಲ. ಬಹುಶಃ ಬಂಡಾಯ, ದಲಿತ, ಸ್ತ್ರೀವಾದದ ಘೋಷಣಾ ಸಾಹಿತ್ಯ ಮುಗಿದಂತೆ ಕಾಣುತ್ತಿದೆ. ಆ ಎಲ್ಲ ಚಳುವಳಿಗಳು ಕನ್ನಡದ ಒಟ್ಟೂ ಸಮಾಜದ ಮೇಲೆ, ಸಾಹಿತ್ಯದ ಮೇಲೆ ಉಂಟುಮಾಡಿದ ಅದ್ಭುತ ಚಾಲನಾ ಪ್ರಭಾವವನ್ನು ಅರ್ಥೈಸಿಕೊಂಡು, ಮನದಲ್ಲೂ ಇಟ್ಟುಕೊಂಡು, ಅದೇ ಕಾಲಕ್ಕೆ ಘೋಷಣೆಯ ಕಾಲ್ತೊಡಕುಗಳನ್ನೂ ಕಳಚಿ ಬರೆಯುವ ಹೊಸ ಯುವ ಸಮೂಹವೊಂದು ಕನ್ನಡದಲ್ಲಿ ತಯಾರಾಗಿದೆ. ನಿರ್ವಿವಾದವಾಗಿ ಆಶಾ ಕೂಡಾ ಆ ಪಡೆಯ ಉತ್ತಮ ಸದಸ್ಯೆ.
ಆಶಾ ಇತ್ತೀಚೆಗೆ ಮಗಳನ್ನು ಪಡೆದ ಹೊಸ ತಾಯಿ. ತಾಯಿಯಾಗುವ, ಮತ್ತಾ ಎಳೆಕೂಸಿನ ಜೊತೆಗೆ ತಾಯಿಯೂ ಬೆಳೆಯುವ ಕವಿತೆಯನ್ನು ನಾವೆಲ್ಲರೂ ಬರೆದವರೇ, ಕ್ಲೀಷೆಯೆನಿಸುವಷ್ಟು! ಆದರಿಲ್ಲಿ ಹೊಸ ತಂದೆಯೊಬ್ಬನ ಪುಳಕ ವರ್ಣಿಸುವ ಕವಿತೆಯೊಂದಿದೆ. ಮಗುವನ್ನು ಎತ್ತಿಕೊಂಡಾಗ ಆ ಹೊಸತಂದೆಗೆ ತನ್ನಪ್ಪ ಇದ್ದಿದ್ದರೆ ಎನ್ನುವ ಪ್ರಶ್ನೆಗಳಿಗೆಲ್ಲ ಉತ್ತರ ಸಿಕ್ಕಿದೆಯಂತೆ! ಮಾಮೂಲಿನ ಹಾಗೆ ಅವನು ಅಮ್ಮನನ್ನು ನೆನಪು ಮಾಡಿಕೊಂಡಿಲ್ಲ. ತಾತನಾಗುವ ಬಯಕೆಯೂ ಅಷ್ಟೇ ಬೆಲೆಯುಳ್ಳದ್ದೆಂದು ನಮ್ಮ ಕವಿಗಳಿಗೆ ಅರ್ಥಾಯಿತು ಸದ್ಯ!
ಬರೆಯುತ್ತ ಹೋದಂತೆ ಅನೇಕ ಕವಿತೆಗಳ ಸಾಲನ್ನು ಉದ್ಧರಿಸಬಹುದು. ಆದರೆ ಓದುಗರ ತೆರೆದ ಅವಕಾಶಕ್ಕೆ ಮುನ್ನುಡಿಯು ಹಾಕುವ ಕತ್ತರಿ ಅದು. ನನಗೆ ಆಶಾ ಜಗದೀಶ್ ಅವರ ಕವಿತೆಗಳು ಇಷ್ಟವಾಗಿವೆ. ನಿಮಗೂ ಇಷ್ಟವಾಗುತ್ತವೆ. ಅವರಿಂದ ಇನ್ನೂ ಒಳ್ಳೆಯ ಕವಿತೆಗಳು ಕನ್ನಡದ ಓದುಗರಿಗೆ ಲಭ್ಯವಾಗಲಿ. ಆಶಾ ಸೊಗಸಾದ ಗದ್ಯವನ್ನೂ ಬರೆಯುತ್ತಾರೆ. ಅವರ ಲಲಿತ ಪ್ರಬಂಧಗಳು ಹೆಸರಾಗಿವೆ. ಅವೂ ಮತ್ತವರ ಕಥೆಗಳು ಬಹುಮಾನ ಪಡೆದಿವೆ. ಗದ್ಯ ಪದ್ಯಗಳೆರಡನ್ನೂ ಸಮರ್ಥವಾಗಿ ನಿಭಾಯಿಸುವ ಈ ಯುವ ಪ್ರತಿಭೆ ಕನ್ನಡ ಓದುಗರಿಂದ ಪ್ರಂಶಂಸೆ ಪಡೆಯಲೆಂದು ಬಯಸುವೆ.
(ಕೃತಿ: ನಡು ಮಧ್ಯಾಹ್ನದ ಕಣ್ಣು (ಕವನ ಸಂಕಲನ), ಲೇಖಕರು: ಆಶಾ ಜಗದೀಶ್, ಪ್ರಕಾಶಕರು: ಗೀತಾಂಜಲಿ ಪುಸ್ತಕ ಪ್ರಕಾಶನ, ಬೆಲೆ: 150/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಕೃತಿಯ ಉತ್ತಮ ವಿಮರ್ಶೆ…. ಈರ್ವರಿಗೂ ಅಭಿನಂದನೆಗಳು