Advertisement
ಹೊಸ ಮನೆ… ಹೊಸ ಏರಿಯಾ.. ಹೊಸ ಸಮಸ್ಯೆಗಳು…: ಎಚ್. ಗೋಪಾಲಕೃಷ್ಣ ಸರಣಿ

ಹೊಸ ಮನೆ… ಹೊಸ ಏರಿಯಾ.. ಹೊಸ ಸಮಸ್ಯೆಗಳು…: ಎಚ್. ಗೋಪಾಲಕೃಷ್ಣ ಸರಣಿ

ಅವತ್ತು ಜೋರು ಮಳೆ. ಮಳೆ ಬಂದು ನಿಂತ ನಂತರ ನಮ್ಮ ಸೈಕಲ್ ಜಾಥಾ ಶುರು ಆಯಿತು. ರಾಮಚಂದ್ರಪುರದ ಕಿರು ರಸ್ತೆಗೆ ಬಂದೆವು. ಕತ್ತಲಿನಲ್ಲಿ ಒಬ್ಬ ಮಧ್ಯ ವಯಸ್ಕರು ಕೈಯಲ್ಲಿ ಒಂದು ಟಾರ್ಚ್ ಹಿಡಿದು ನಿಂತಿದ್ದರು. ಸ್ವಾಮೀ ನಿಲ್ಲಿ, ನಿಲ್ಲಿ ಸಾರ್ ಅಂತ ನಮ್ಮನ್ನು ತಡೆದರು. ಎಲೆಕ್ಟ್ರಿಕ್ ವೈರ್ ರಸ್ತೆ ಮೇಲೆ ಅಲ್ಲೆಲ್ಲಾ ಬಿದ್ದು ಕರೆಂಟ್ ಹರಿತಾ ಇದೆ. ಈ ರೋಡಿನಲ್ಲಿ ಹೋಗಬೇಡಿ ಅಂತ ಹೇಳಿ ಎಂ ಎಸ್ ಪಾಳ್ಯದ ಮೂಲಕ ಹೋಗಿ ಅಂತ ಸೂಚಿಸಿದರು. ಇದು ನಾಲ್ಕು ಕಿಮೀ ಹೆಚ್ಚು ದೂರ. ಆದರೂ ಜೀವ ನಮ್ಮದು ತಾನೇ?
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೦ನೇ ಬರಹ ನಿಮ್ಮ ಓದಿಗೆ

 

ಕಳೆದ ಸಂಚಿಕೆ ಹೀಗೆ ಎಂಡ್ ಆಗಿತ್ತು ತಾನೇ..

ಕರೆಂಟ್ ಹೋದರೆ ಎರಡು ದಿವಸ ಮೂರು ದಿವಸ ಕತ್ತಲಲ್ಲೇ ಕೊಳೆಯ ಬೇಕಾದ ಪರಿಸ್ಥಿತಿ. ಹೆಂಡತಿಯೇನೋ ಗಟ್ಟಿಗಿತ್ತಿ, ನಿಭಾಯಿಸುವ ಶಕ್ತಿ ಹೊಂದಿದ್ದಳು. ಆದರೆ ಅವಳ ತವರುಮನೆ ಅವರಿಗೆ ಆತಂಕವೋ ಆತಂಕವೋ ಆತಂಕವೋ ಆತಂಕ. ಇದಕ್ಕೆ ಅಂದರೆ ಆತಂಕ ಪರಿಹಾರಕ್ಕೆ ಒಂದು ದಾರಿ ಅವರೇ ಕಂಡುಕೊಂಡಿದ್ದರು. ನನಗೆ ನೈಟ್ ಶಿಫ್ಟ್ ಸಮಯದಲ್ಲಿ ನನ್ನ ಮಾವ ಬಂದು ಇರುತ್ತಿದ್ದರು!

ಅವರಿಗೂ ಸುತ್ತಲಿನ ಹಳ್ಳಿಗಳ ಮತ್ತು ಮನೆ ಮುಂದೆ ಓಡಾಡುತ್ತಿದ್ದ ಜನಗಳ ಪರಿಚಯ ಆಯಿತು. ಸಹಜವಾಗಿ ಮನುಷ್ಯ ಸಂಘ ಜೀವಿ. ಎಂತಹ ಕಡೆ ಬಿಟ್ಟರೂ ಅಡ್ಜೆಸ್ಟ್ ಆಗುತ್ತಾನೆ ಎಂದು ಸಮಾಜಶಾಸ್ತ್ರಿಗಳು ಹೇಳುತ್ತಾರೆ. ನಾವು ಅವರ ಮಾತು ಕೇಳದೇ ಇರಲು ಸಾಧ್ಯವೇ? ನಿಧಾನಕ್ಕೆ ಹೊಸ ಪರಿಸರಕ್ಕೆ ಹೊಂದುತ್ತಾ ಹೊಂದಿಕೊಳ್ಳುತ್ತಾ ಬಂದೆವು.

ನನಗಿಂತ ಸ್ವಲ್ಪ ಮೊದಲು ಬಂದು ಸೇರಿದ್ದ ನಮ್ಮ ಫ್ಯಾಕ್ಟರಿಯ ಸಹೋದ್ಯೋಗಿಗಳ ಪರಿಚಯ ನಿಕಟವಾಯಿತು. ನಿಕಟ ಆಗಲೇ ಬೇಕಿತ್ತು, ಕಾರಣ ಫ್ಯಾಕ್ಟರಿ ಅವರಲ್ಲದೆ ಬೇರೆ ಯಾರೂ ಇಲ್ಲಿಗೆ ವಾಸಕ್ಕೆ ಬಂದಿರಲಿಲ್ಲ. ಮೂರು ನಾಲ್ಕು ಬೇರೆ ಬೇರೆ ಕಾರ್ಖಾನೆಗಳ ಬಡಾವಣೆಗಳು ಇಲ್ಲಿ ಇದ್ದವು. ಆದರೆ ನಮ್ಮ ಕಾರ್ಖಾನೆ ಹೌಸ್ ಬಿಲ್ಡಿಂಗ್ ಸಂಘವೇ ಮೊದಲು ಇಲ್ಲಿ ಕಾರ್ಯಾರಂಭ ಮಾಡಿದ್ದು ಮತ್ತು ನಮ್ಮ ಕಾರ್ಖಾನೆ ಜನವೇ ಮೊದಮೊದಲು ಬಂದು ಇಲ್ಲಿ ವಾಸಿಸಲು ಶುರುಮಾಡಿದ್ದು. ಅದರಿಂದ ಒಂದು ರೀತಿಯ ಪ್ರಾಮುಖ್ಯತೆ ನಮ್ಮ ಕಾರ್ಖಾನೆಗೆ ಸಂದಿತು. ಹೊಸ ಬಡಾವಣೆ ಅಭಿವೃದ್ಧಿ ಹೊಂದಲು ಅದಕ್ಕೆ ಪೂರಕವಾಗಿ ಬೆಂಬಲವಾಗಿ ನಿಲ್ಲಲು ಹಲವಾರು ಸರ್ಕಾರಿ ಅರೆಸರ್ಕಾರಿ ಸಂಸ್ಥೆಗಳು ಹಲವು ಬಾರಿ ನೇರವಾಗಿ, ಹಲವುಬಾರಿ ಪರೋಕ್ಷವಾಗಿ ನೆರವಾಗುತ್ತವೆ. ಬೆಂಗಳೂರಿನ ಹೊಸ ಹೊಸಾ ಬಡಾವಣೆಗಳು ಆಗ ಬೆಳೆದ ಕತೆಯೇ ಒಂದು ರೀತಿ ವಿಶಿಷ್ಟ ಮತ್ತು ರೋಚಕವಾದದ್ದು. ನಮ್ಮ ಬಾಳು, ನಮ್ಮ ಜೀವನ, ನಮ್ಮ ಜೀವನಕ್ಕೆ ಒಂದು ಅರ್ಥ ಬಂದಿದ್ದು ಇಂತಹ ಕಡೆಯಿಂದ… ಇದರ ಹಲವಾರು ಮಜಲುಗಳು ಕ್ಯೂ ನಿಂತಿವೆ, ತಮ್ಮ ಮುಂದೆ ಬಿಚ್ಚಿಕೊಳ್ಳಲು, ಪ್ರದರ್ಶನಗೊಳ್ಳಲು, ಅವುಗಳ ಕತೆ ಹೇಳಲು…. ಇವುಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ….

ಇನ್ನು ಮುಂದೆ ಈಗ ಓದಿ…

ಫಸ್ಟ್ ಶಿಫ್ಟು ಸೆಕೆಂಡ್ ಶಿಫ್ಟಿನಲ್ಲಿ ಕೆಲಸಕ್ಕೆ ಹೋಗ್ತಾ ಇದ್ದದ್ದು. ಫಸ್ಟ್ ಶಿಫ್ಟ್ ಸೂರ್ಯ ಹುಟ್ಟುವ ಮೊದಲೇ ಶುರು. ಸೆಕೆಂಡ್ ಶಿಫ್ಟು ಸೂರ್ಯ ಮುಳುಗಿ ಅರ್ಧ ರಾತ್ರಿ ಕಳೆದನಂತರ ಮುಗಿಯುತ್ತಾ ಇತ್ತು. ಮನೇಲಿ ಮಗಳು ಒಂಟಿ ಅಂತ ಮಾವ ಬಂದು ಇರ್ತಾ ಇದ್ದರು. ಸೆಕೆಂಡ್ ಶಿಫ್ಟ್ ಮುಗಿಸಿ ಮನೆ ಸೇರಬೇಕಾದ ಸಮಯದಲ್ಲಿ ರಸ್ತೆ ಉದ್ದಕ್ಕೂ ಕತ್ತಲು ಮತ್ತು ಕತ್ತಲು ಮತ್ತು ಹಳ್ಳ ಕೊಳ್ಳಗಳು.

ಜತೆಗೆ ಬೀದಿ ನಾಯಿಗಳ ಕಾಟ. ಆಗ ಅಂದರೆ ನಾಲ್ಕೂವರೆ ದಶಕಗಳ ಹಿಂದೆ ನಾಯಿ ಕಚ್ಚುವುದು ಎಂದರೆ ಸತ್ತನಂತರ ಪಾಪ ಮಾಡಿದವರಿಗೆ ನರಕದಲ್ಲಿ ಕೊಡುವ ಸಾವಿರದ ಆರುನೂರು ಶಿಕ್ಷೆಗಳಲ್ಲಿ ಒಂದು. ಇದರ ಅಂದರೆ ಶಿಕ್ಷೆಯ ಸೀರಿಯಲ್ ನಂಬರು ಸಾವಿರದ ಐನೂರು ನಲವತ್ತು ಅಂತ ಪುರಾಣದಲ್ಲಿ ಇತ್ತಂತೆ. ಯಾವ ಪುರಾಣ ಅಂತ ಕೇಳಬೇಡಿ, ನನಗೂ ತಿಳಿಯದು. ಆದರೆ ಇದಕ್ಕೆ ಅಂದರೆ ನಾಯಿ ಕಚ್ಚುವುದಕ್ಕೆ ಯಾಕೆ ಇಷ್ಟೊಂದು ರೇಟಿಂಗ್ ಅಂತ ಕೇಳಿದರೆ ಅದಕ್ಕೆ ನನ್ನ ಬಳಿ ದೊಡ್ಡ ಉತ್ತರವೇ ಇದೆ. ಆಗ ನಾಯಿ ಕಚ್ಚಿದರೆ ಅದಕ್ಕೆ ಚಿಕಿತ್ಸೆ ಹೇಗಿತ್ತು ಅಂದರೆ.. ಮಸಲಾ ನಾಯಿ ನಿಮ್ಮ ಬೆನ್ನಿಗೋ ಅಂಡಿಗೋ ಅಥವಾ ಮತ್ತೆಲ್ಲಿಗೋ ಬಾಯಿ ಹಾಕಿದೆ ಅಂತ ಇಟ್ಟುಕೊಳ್ಳಿ. ನಾಯಿಯ ಹಲ್ಲು ಊರಿ ರಕ್ತ ಒಸರುತ್ತಾ ಇದೆ ಅಂತಲೂ ಅಂದುಕೊಳ್ಳಿ. ಆಗೇನು ಮಾಡ್ತೀರಿ?

ಮನೆ ಹತ್ತಿರ ಡಾಕ್ಟರು ಇದ್ದ ರೆ ಅಲ್ಲಿಗೆ ಓಡುವಿರಿ. ಅಲ್ಲಿ ಡಾಕ್ಟರು ನಿಮ್ಮನ್ನು ನೋಡಿ ಸರ್ಕಾರಿ ಆಸ್ಪತ್ರೆಗೆ ಹೋಗಿ, ಇಲ್ಲಿ ನಮ್ಮ ಹತ್ತಿರ ನಾಯಿ ಇಂಜೆಕ್ಷನ್ ಇಲ್ಲ ಅಂತ ಕಳಿಸುತ್ತಾರೆ. ನಾಯಿ ಇಂಜೆಕ್ಷನ್ ಅಂದರೆ ನಾಯಿ ಕಚ್ಚಿದಾಗ ಕೊಡುವ ಇಂಜೆಕ್ಷನ್. ಇದು ರೇಬಿಸ್ ಖಾಯಿಲೆ ಬರದಿರಲಿ ಎಂದು ಕೊಡಲೇಬೇಕಾದ ಚುಚ್ಚುಮದ್ದು. ಸರ್ಕಾರಿ ಆಸ್ಪತ್ರೇಲಿ ನಿಮ್ಮ ಅದೃಷ್ಟಕ್ಕೆ ನಾಯಿ ಇಂಜೆಕ್ಷನ್ ಇರ್ತದೆ. ಮತ್ತೆ ಕೆಲವು ಸಲ ಅಲ್ಲೂ ಇರುಲ್ಲ. ಇದು ನಾಲ್ಕುವರೆ ದಶಕಗಳ ಹಿಂದಿನ ಸ್ಥಿತಿ. ಈಗ ಅದೇನೂ ಬದಲಾಗಿರಲಾರದು ಎಂದು ನನ್ನ ಅಭಿಮತ. ಸರ್ಕಾರೀ ಆಸ್ಪತ್ರೆಗೆ ಹೋಗ್ತೀರಾ ನೋಡಿ. ಅಲ್ಲಿ ಮೊದಲು ನಾಯಿ ಕಚ್ಚಿದ ಗಾಯದ ಪರೀಕ್ಷೆ. ಗಾಯ ಆಳವಾಗಿದ್ದು ರಕ್ತ ಬರ್ತಾ ಇದೆ ಅಂದರೆ ಮೊದಲು ರಕ್ತ ನಿಲ್ಲಿಸೋದು, ನಂತರ ಗಾಯಕ್ಕೆ ಅದೇನೋ ಆಸಿಡ್ ಸುರಿಯೋದು (ಇದು ಕಾರ್ಬಾಲಿಕ್ ಆಸಿಡ್ ಅಂತ ಕೇಳಿದ್ದೆ). ಗಾಯ ಸುಡುತ್ತೆ ನೋಡಿ, ಆಗ ನಾಯಿ ಬಾಯಿನಿಂದ ದೇಹದ ಒಳಗೆ ಸೇರಬಹುದಾಗಿದ್ದ ಕ್ರಿಮಿಗಳು ನಾಶ ಆಗ್ತವೆ. ಆಸಿಡ್ ಸುರಿದಾಗ ಅದೆಷ್ಟು ಉರಿ ನೋವು ಆಗುತ್ತೆ ಅಂದರೆ ಸರ್ಕಾರೀ ಆಸ್ಪತ್ರೆ ಸೂರು ಕಳಚಿ ಬೀಳುವ ಹಾಗೆ ನಾಯಿ ಕಚ್ಚಿಸಿಕೊಂಡವರು ಅರಚುತ್ತಾ ಇರುತ್ತಾರೆ. ಇದನ್ನು ನಾನು ನೋಡಿದ್ದೇನೆ. ನನ್ನ ಮಗನಿಗೆ ನಾಯಿ ಕಚ್ಚಿದಾಗ ಹೀಗೆ ಆಸ್ಪತ್ರೆಯಲ್ಲಿ ಅವನು ಸೂರು ಹಾರುವ ಹಾಗೆ ಅರಚುತ್ತಾ ಇದ್ದದ್ದು  ಈಗ ನಡೆದ ಹಾಗಿದೆ. ಆಸಿಡ್ ಸುರಿದು ಮೊದಲನೇ ಹಂತದ ಚಿಕಿತ್ಸೆ ಮುಗಿಯುತ್ತಾ?

ನಾಯಿ ಸಾಕಿರೋದಾ ಅಥವಾ ಬೀದಿ ನಾಯಿನಾ ಎನ್ನುವ ಪ್ರಶ್ನೆ ಏಳುತ್ತೆ. ನೂರಕ್ಕೆ ನೂರು ಸಲ ಬೀದಿನಾಯಿಗಳು ಕಚ್ಚಿರೋ ಕೇಸುಗಳು ಆಸ್ಪತ್ರೆಗೆ ಬರೋವು. ಅದಕ್ಕೆ ಇಂಜೆಕ್ಷನ್ ಆಗಿದೆಯಾ ಎನ್ನುವುದು ಮುಂದಿನ ಪ್ರಶ್ನೆ. ನೂರಕ್ಕೆ ನೂರುಸಲ ಇಲ್ಲ ಎನ್ನುವ ಉತ್ತರ. ಅದರ ನಂತರದ ಚಿಕಿತ್ಸೆ ಅಂದರೆ ನಾಯಿನ ಕಾವಲು ಕಾಯಿರಿ ಅದರಲ್ಲಿ ಏನಾದರೂ ಏರು ಪೇರು ಕಂಡರೆ ತಿಳಿಸಿ, ಅದು ಸತ್ತರೂ ತಿಳಿಸಿ ಎಂದು ವೈದ್ಯರು ಸಲಹೆ ಕೊಡ್ತಾರೆ. ನಾಯಿಯನ್ನು ಅದೂ ಬೀದಿನಾಯಿಯನ್ನು ಕಾವಲು ಕಾಯೋದು ಸುಲಭವೇ? ಇಂಜೆಕ್ಷನ್ ತೆಗೆದುಕೊಂಡು ಬಿಡೋಣ ಅನಿಸುತ್ತೆ ತಾನೇ? ಇಲ್ಲಿ ಹೊಸಾ ಸಮಸ್ಯೆ ಹುಟ್ಟೋದು. ಹೊಕ್ಕಳಿನ ಸುತ್ತ ಹದಿನಾಲ್ಕು ಇಂಜೆಕ್ಷನ್ ತಗೋಬೇಕು ಅಂತ ವೈದ್ಯರು ಹೇಳ್ತಾರೆ. ನಿಮ್ಮ ಅದೃಷ್ಟಕ್ಕೆ ಹದಿನಾಲ್ಕು ಇಂಜೆಕ್ಷನ್ ನಿಯಮಿತವಾಗಿ ನೀವು ಇರುವ ಕಡೆ ಸಿಕ್ಕರೆ ನಿಮ್ಮಷ್ಟು ಅದೃಷ್ಟಶಾಲಿ ಮತ್ತೊಬ್ಬ ಇಲ್ಲ. ಆದರೆ ಸುಮಾರು ಸಲ ಹೀಗೆ ಸಿಗುಲ್ಲ. ಎಲ್ಲಿ ಸಿಗುತ್ತೋ ಹುಡುಕಿಕೊಂಡು ಹೋಗಿ ಅಲ್ಲಿ ಇಂಜೆಕ್ಷನ್ ಹಾಕಿಸಿಕೊಳ್ಳುವಿರಿ. ಇನ್ನು ಇಂಜೆಕ್ಷನ್ ಸಿರಿಂಜ್ ದೊಡ್ಡದು, ಅದಕ್ಕೆ ಹಾಕಿರೋ ಸೂಜಿ ದಬ್ಬಳದ ಹಾಗಿರುತ್ತೆ. ದಬ್ಬಳ ಅಂದರೇನು ಅಂತ ಮೊದಲು ಹೇಳಿಬಿಡುತ್ತೇನೆ, ಇದರ ಅರ್ಥ ಗೊತ್ತಿಲ್ಲದವರಿಗೆ.

ದಬ್ಬಳ ಎಂದರೆ ದಪ್ಪವಾದ ಸೂಜಿ (a thick needle).

ಇದನ್ನು ಸಾಮಾನ್ಯವಾಗಿ ದೊಡ್ಡ, ದಪ್ಪನಾದ ಬಟ್ಟೆ ಅಥವಾ ಚೀಲಗಳನ್ನು ಹೊಲಿಯಲು ಬಳಸಲಾಗುತ್ತದೆ. ಉದಾಹರಣೆಗೆ, ಗೋಣಿ ಚೀಲ (jute or hemp sacks) ಅಥವಾ ಕೃಷಿ ಉತ್ಪನ್ನಗಳನ್ನು ತುಂಬುವ ದಪ್ಪ ಚೀಲಗಳ ಬಾಯಿಯನ್ನು ಹೊಲಿಯಲು ಉಪಯೋಗಿಸುವ ದೊಡ್ಡ ಸೂಜಿ. ನಾನು ನಿಮಗೆ ಹೇಳುತ್ತಾ ಇರುವುದು ಅಂದಿನ ಕತೆ. ಸಿರಿಂಜು ಸೂಜಿ ನೋಡೇ ಎಷ್ಟೋ ಜನ ಓಡಿಹೋಗುತ್ತಿದ್ದರು ಎಂದು ನನ್ನ ಅಮ್ಮ ಹೇಳುತ್ತಿದ್ದಳು. ಕಾಲ ಕಳೆದ ಹಾಗೆ ಹದಿನಾಲ್ಕು ಇಂಜೆಕ್ಷನ್ ಸಂಖ್ಯೆ ಕಡಿಮೆ ಆಗುತ್ತಾ ಬಂದಿತು. ಊಟಿ ಬಳಿಯಲ್ಲಿನ ಕುನೂರು ಎನ್ನುವ ರೇಬಿಸ್ ರಿಸರ್ಚ್ ಸೆಂಟರ್‌ನಲ್ಲಿ (ಇದಕ್ಕೆ ನಾಯಿ  ರಿಸರ್ಚ್ ಸೆಂಟರ್ ಎಂದೂ ಕರೆಯುತ್ತಿದ್ದರು) ಒಂದೇ ಒಂದು ಇಂಜೆಕ್ಷನ್ ಕೊಡುತ್ತಾರೆ ಎಂದು ಕೇಳಿದ್ದೆ. ಅದರ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಈಗ ನಾಯಿ ಕಚ್ಚಿದರೆ ಒಂದು ಇಂಜೆಕ್ಷನ್ ಸಾಕು ಎಂದು ಹೇಳುತ್ತಾರೆ. ಹದಿನಾಲ್ಕು ಇಂಜೆಕ್ಷನ್, ಹೊಕ್ಕಳ ಸುತ್ತ ಹದಿನಾಲ್ಕು ಮತ್ತು ಆಸಿಡ್‌ನಿಂದ ಗಾಯ ಸುಡುವ ಪ್ರಯೋಗ ನನ್ನ ಮಗನಿಗೆ ಆಗಿತ್ತು, ಅವನಿಗೆ. ಎರಡು ಸಲ ನಾಯಿ ಕಚ್ಚಿಸಿಕೊಂಡ ಅನುಭವಿ ಅವನು!

ನಾನು ರಾತ್ರಿ ಶಿಫ್ಟ್ ಮುಗಿಸಿ ವಾಪಸಾಗುವಾಗ ಇರುತ್ತಿದ್ದ ನಾಯಿ ಕಾಟದ ಬಗ್ಗೆ ಹೇಳುತ್ತಿದ್ದೆ ಮತ್ತು ಯಥಾಪ್ರಕಾರ ಕತೆ ಎಲ್ಲೆಲ್ಲಿಗೋ ಎಳೆದುಕೊಂಡು ಹೋಯಿತು. ನಾಯಿ ಪುರಾಣ ಪೂರ್ತಿ ಮುಗಿಸಿಬಿಡುತ್ತೇನೆ.. ಬೀದಿನಾಯಿಗಳ ಕಾಟ ಜಾಸ್ತಿಯಾಗಿ ಬೆಂಗಳೂರಿಗರ ಗೋಳು ಹೆಚ್ಚಾಯಿತು. ಆಗ ಇಲ್ಲಿನ ನಗರ ಸಭೆಯ ಅಧಿಕಾರಿಗಳಿಗೆ ಒಂದು ಹೊಸಾ ಐಡಿಯಾ ಫ್ಲಾಶ್ ಆಯಿತು ಅಂದರೆ ಹೊಳೆಯಿತು. ಬೀದಿನಾಯಿಗಳನ್ನು ಹಿಡಿದುಕೊಂಡು ಹೋಗಿ ಸಾಯಿಸಿಬಿಟ್ಟರೆ  ಸಮಸ್ಯೆ ಇರೋದಿಲ್ಲ ಎನ್ನುವ ಯೋಚನೆ ಬಂತಾ? ಅದನ್ನು ತುಂಬಾ ಉತ್ಸಾಹದಿಂದ ಜಾರಿ ಮಾಡಿಬಿಟ್ಟರು. ನಾಯಿ ಹಿಡಿಯಲು ಕೆಲವರಿಗೆ ತರಪೇತಿ ನೀಡಲಾಯಿತು. ಉದ್ದನೆ ಹಿಡಿ ಇರುವ ನೇಣು ಬಿಗಿದುಕೊಳ್ಳುವ ಒಂದು ಟೂಲ್ ಅವಿಷ್ಕಾರಗೊಂಡಿತು. ಕಬ್ಬಿಣದ ಬಳುಕುವ ನೇಣು ಬಿಗಿಯುವ ಒಂದು ಹಗ್ಗ ಮತ್ತು ಅದನ್ನು ಕೈಯಲ್ಲಿ ಹಿಡಿಯಲು ಒಂದು ಹ್ಯಾಂಡಲ್.. ಇದು ಆ ಟೂಲ್ ನ ಮೇಜರ್ ಪಾರ್ಟು. ಅದನ್ನು ನಾಯಿ ಹಿಡಿಯುವವರು ತರುತ್ತಿದ್ದರು. ನಾಯಿಗಳಿಗೆ ಆರನೇ ಸೆನ್ಸ್ ಚಾಲ್ತಿಯಾಗಿ ಅವುಗಳು ಇವರನ್ನು ಕಂಡ ಕೂಡಲೇ ಪರಾರಿ ಆಗುತ್ತಿದ್ದವು. ಕೆಲವರು ಆಗ ನಾಯಿಗಳನ್ನು ತಮ್ಮ ಮನೆಯಲ್ಲಿ ಮುಚ್ಚಿಟ್ಟುಕೊಂಡು ಶ್ವಾನ ದಳ ಹೋದ ನಂತರ ಬೀದಿಗೆ ಬಿಡುತ್ತಿದ್ದರು. ಹೇಗೋ ನಾಯಿಯ ಕೊರಳಿಗೆ ಉರುಳು ಬೀಳಿಸಿ (ಇದು ಒಂದು ಟೆಕ್ನಿಕು)ಅದನ್ನು ದರ ದರ ಎಳೆದುಕೊಂಡು ಒಂದು ಬೋನು ಇರುವ ಲಾರಿಗೆ ಸಾಗಿಸುತ್ತಾ ಇದ್ದರು. ಬೋನಿನ ಬಾಗಿಲು ಮೇಲಿನಿಂದ ಮುಚ್ಚುವ ರೀತಿಯದು. ನಾಯಿಯನ್ನು ಬೋನಿನ ಬಾಗಿಲು ತೆರೆದು ಒಳಗೆ ಹಾಕಿ ಮುಚ್ಚುತ್ತಿದ್ದರು. ಆಗಲೇ ಕೆಲವು ನಾಯಿಗಳು ಅಲ್ಲಿ ಬಂಧಿಯಾಗಿರುತ್ತಿತ್ತು. ಈ ಹೊಸ ನಾಯಿ ಒಳಹೊಕ್ಕ ಕೂಡಲೇ ರೈಲು ಬೋಗಿಯಲ್ಲಿ ಹಳೇ ಪ್ರಯಾಣಿಕ ಮತ್ತು ಹೊಸಬ ಇವರಿಗೆ ನಡೆಯುವ ಜಗಳ ಇಲ್ಲೂ ರಿಪೀಟ್ ಆಗುತ್ತಿತ್ತು.

ಈ ನಾಯಿ ಪಡೆ, ಬೋನು ಇರುವ ಲಾರಿ ಬರುತ್ತಿದ್ದ ಹಾಗೇ ಬೀದಿನಾಯಿಗಳು ಎಲ್ಲೆಲ್ಲೋ ಹೋಗಿ ಜೀವ ಉಳಿಸಿಕೊಳ್ಳುತ್ತಿದ್ದವು. ಹೀಗೆ ಹಿಡಿದ ನಾಯಿಗಳನ್ನು ಸಾಯಿಸಿ ಹೆಣಗಳನ್ನು ಒಂದು ಕಡೆ ದಫನ್ ಮಾಡುವ ಕಾರ್ಯ ಕೆಲವು ವರ್ಷ ನಡೆಯಿತು. ಶ್ವಾನ ಪ್ರೇಮಿಗಳ ಸಂಘ (ನಾಯಿ ಲವರ್ಸ್ ಎನ್ನುವ ಪರ್ಯಾಯ ಹೆಸರಿನ) ಎನ್ನುವ ಸಂಘ ಸಮಾನ ಮನಸ್ಕರನ್ನು ಸೇರಿಸಿಕೊಂಡು ನಾಯಿಗಳನ್ನು ಹೀಗೆ ಸಾಯಿಸುವುದು ಅತ್ಯಂತ ಅಮಾನುಷ ಕೃತ್ಯ. ನಾಗರಿಕ ಸಮಾಜದಲ್ಲಿ ಇಂತಹ ಬಾರ್ಬೆರಿಕ್ ಕಾರ್ಯ ಸಲ್ಲದು ಎಂದು ಜನಾಭಿಪ್ರಾಯ ಮೂಡಿಸಲು ಯತ್ನಿಸಿತು. ಕೆಲವು ಎನ್ ಜಿ ಒ ಸಂಘಟನೆಗಳು ಉಚ್ಚ ನ್ಯಾಯಾಲಯದಲ್ಲಿ ನಾಯಿಗಳಿಗೂ ಬದುಕುವ ಹಕ್ಕು ಇದೆ, ಅದನ್ನು ಸಾಯಿಸುವ ಅನಾಗರಿಕ ಹೇಯ ರಾಕ್ಷಸೀಯ ಪ್ರವೃತ್ತಿಗೆ ಆಸ್ಪದ ಕೊಡಬಾರದು ಎಂದು ಒಂದು ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿತು. ನ್ಯಾಯಾಲಯ ಭೂಮಿ ಮೇಲಿನ ಎಲ್ಲಾ ಜೀವಿಗಳಿಗೂ ಜೀವಿಸುವ ಹಕ್ಕು ಇದೆ, ಅದನ್ನು ಯಾರೂ ಕಿತ್ತುಕೊಳ್ಳಬಾರದು. ನಾಯಿಗಳ ಉಪದ್ರವ ತಡೆಯಲು ಬೇರೆ ದಾರಿ ಹುಡುಕತಕ್ಕದ್ದು ಎಂದು ತೀರ್ಪು ನೀಡಿತಾ? ಬುದ್ಧಿವಂತರು ಮತ್ತೆ ಮೀಟಿಂಗ್ ಸೇರಿದರು. ಹಾಗೆ ಮಾಡಿದರೆ ಹೇಗೆ ಹೀಗೆ ಮಾಡಿದರೆ ಹೇಗೆ ಎಂದು ಚಿಂತನ ಮಂಥನ ನಡೆಸಿದರು. ನಗರದಲ್ಲಿನ ನಾಯಿಗಳನ್ನು ಹಳ್ಳಿಗಳಿಗೆ ಬಿಡುವ ಯೋಜನೆ ಹುಟ್ಟಿತು. ಹಳ್ಳಿಯವರು ಇದಕ್ಕೆ ಒಪ್ಪಲಾರರು ಎನ್ನುವ ಅಭಿಪ್ರಾಯ ಮೂಡಿತು. ಒಂದು ಎನ್ ಜಿ ಒ ಒಂದು ಸ್ಥಳದಲ್ಲಿ ಬೀದಿನಾಯಿ ಸಾಕುವ ಯೋಜನೆ ಸಹ ರೂಪಿಸಿತು. ಇದೂ ಸಹ ಫೇಲ್ ಆಯಿತು. ಈ ಮಧ್ಯೆ ನಾಯಿಗಳ ಸಂತಾನ ವೃದ್ಧಿ ಆಗುತ್ತಾ ಹೋಯಿತು. ನಗರ ಸಭೆ ಅಧಿಕಾರಿಗಳು ತಲೆ ಕೆಡಿಸಿಕೊಂಡು ಯೋಚಿಸಿ ಯೋಚಿಸಿ ತಲೆ ಪೂರ್ತಿ ಬೋಳು ಮಾಡಿಕೊಂಡರು. ನಂತರ ಶ್ವಾನ ಸಂತಾನ ನಿಯಂತ್ರಣ ಯೋಜನೆ ಜಾರಿಯಾಯಿತು. ಇದಕ್ಕೆ ನಾಯಿಗಳ ಫ್ಯಾಮಿಲಿ ಪ್ಲಾನಿಂಗ್ ಎನ್ನುವ ಹೆಸರು ಅನಧಿಕೃತವಾಗಿ ಯಾರೋ ಇಟ್ಟಿದ್ದರು. ಇದರಂತೆ ಬೀದಿನಾಯಿಗಳನ್ನು ಹಿಡಿದು ಅವಕ್ಕೆ ಸಂತಾನಹರಣ ಚಿಕಿತ್ಸೆ ಮಾಡುವುದು. ಇದರಿಂದ ನಾಯಿಗಳ ಪಾಪ್ಯುಲೇಷನ್ ಕಡಿಮೆ ಆಗುತ್ತೆ ಎನ್ನುವ ಯೋಚನೆ. ಇದು ಜಾರಿ ಆಯಿತಾ? ನಾಯಿಗಳ ಸಂತಾನ ಹರಣ ಚಿಕಿತ್ಸೆ ನಂತರ ನಮ್ಮದಲ್ಲದ ಯಾವ್ಯಾವುದೋ ನಾಯಿಗಳು ನಮ್ಮ ರಸ್ತೆಯಲ್ಲಿ ಬಂದಿವೆ ಎನ್ನುವ ಹುಯಿಲು ಎದ್ದಿತು! ಇದರ ಮುಂದಿನ ಭಾಗ ಎಂದರೆ ಯಾವ ರಸ್ತೆಯಿಂದ ನಾಯಿಗಳನ್ನು ಹಿಡಿದು ತಂದಿರಲಾಗುತ್ತೋ ಅಲ್ಲಿಗೇ ವಾಪಸ ತಂದು ಬಿಡುವ ಯೋಜನೆ. ನಾಯಿಗೆ ಸಂತಾನಹರಣ ಚಿಕಿತ್ಸೆ ಆಗಿದೆ ಎಂದು ಗುರುತಿಸುವುದು ಹೇಗೆ? ಅವುಗಳ ಕಿವಿಯನ್ನು ಕೊಯ್ಯುವ ಹೊಸಾ ಪ್ರಯೋಗ ನಡೆಯಿತು. ಕಿವಿಯ ಮೇಲ್ಭಾಗದಲ್ಲಿ ಇಂಗ್ಲಿಷ್ ವಿ ಆಕಾರದಲ್ಲಿ ಕಿವಿ ಕತ್ತರಿಸಲಾಯಿತು. ಯಾವುದಾದರೂ ಬೀದಿನಾಯಿ ಕಿವಿಗೆ ಕೊಂಚ ಕತ್ತರಿ ಪ್ರಯೋಗ ಆಗಿದ್ದರೆ ಅದಕ್ಕೆ ವ್ಯಾಸೆಕ್ಟಮಿ ಯಾ ಟುಬೆಕ್ಟಮಿ ಆಗಿದೆ ಎಂದು ಅರ್ಥ! ಇನ್ನೂ ಅಂತಹ ಕಟಿಂಗ್ ಕಾಣದಿದ್ದರೆ ಅವಕ್ಕೆ ಇನ್ನೂ ಯೋಗ ಕೂಡಿ ಬಂದಿಲ್ಲ ಅಷ್ಟೇ. ಇದಕ್ಕೆ ಪರ್ಯಾಯವಾಗಿ ಸುನತಿ ಎನ್ನುವ ಹೆಸರು ಕಾರ್ಪೋರೇಷನ್ ವಲಯದಲ್ಲಿತ್ತು. ನಾಯಿ ಕಡಿತ ನಿಂತಿತೇ ಎಂದರೆ ಸಂಪೂರ್ಣ ನಿಂತಿಲ್ಲ. ಸರ್ಕಾರ ನೀಡುವ ಅಂಕಿ ಅಂಶದ ಪ್ರಕಾರ ಕಡಿಮೆ ಆಗಿದೆ ಅಷ್ಟೇ. ಈಚೆಗಿನ ಸುದ್ದಿ (ಇದು ನನ್ನ ಗೆಳೆಯ ಶ್ರೀ ಆನಂದ ರಾಮ ಶಾಸ್ತ್ರೀ ಅವರಿಗೆ ನಾಯಿ ಕಚ್ಚಿ ಅವರು ನೋವು ತಿಂದ ಸಂದರ್ಭದಲ್ಲಿ ನಾನು ಪಡೆದ ಹೊಸಾ ಜ್ಞಾನ. ನಾಯಿ ಕಚ್ಚಿ ಗಾಯದಿಂದ ರಕ್ತ ಸುರಿಯುತ್ತಿರುವ ಫೋಟೋವನ್ನು ಎಪ್ಪತ್ತು ಪ್ಲಸ್ ವರ್ಷದ ಹಿರಿಯ ಶಾಸ್ತ್ರೀ ಅವರು ಫೆಸ್ ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಆ ಫೋಟೋ ನೋಡಿ ಶಾಸ್ತ್ರೀ ಅವರು ಪಟ್ಟಿರುವ ಹಿಂಸೆ ನೋವು ಯೋಚಿಸಿ ಎರಡು ದಿವಸ ನಿದ್ದೆ ಗೆಟ್ಟಿದ್ದೆ….) ಅಂದರೆ ಫೆರೋಷಿಯಸ್ ಅನಿಸುವ ಬೀದಿನಾಯಿಗಳನ್ನು ಬಿಬಿಎಂಪಿ ಸಿಬ್ಬಂದಿ ಹಿಡಿದು ಅದಕ್ಕೆ ಟ್ಯಾಂಕಿಲೈಸೆರ್ (tranquiliser ಉದ್ರೇಕ ಇಳಿಸುವ ಚುಚ್ಚು ಮದ್ದು)ಕೊಟ್ಟು ಅದರ ಆಕ್ರಮಣಶೀಲತೆ ತಗ್ಗಿಸುತ್ತಾರಂತೆ. ಅದನ್ನು ಮತ್ತೆ ಅದರ ಮೊದಲಿನ ತವರಿಗೆ ಬಿಡುತ್ತಾರಂತೆ. ಈ ರೀತಿ ಚಿಕಿತ್ಸೆ ಪಡೆದ ನಾಯಿ ಮುಂಚಿನ ಹಾಗೆ ಹಾರಿ ಕಚ್ಚುವ ಅದರ ಎಂದಿನ ಚಟ, ಅಭ್ಯಾಸ ಕಡಿಮೆ ಆಗುತ್ತದೆ ಎನ್ನುವ ನಂಬಿಕೆ ಕಾರ್ಪೋರೇಷನ್ ಅವರದ್ದು. ಇದು ತಪ್ಪು ಎಂದು ಮತ್ತೆ ಮತ್ತೆ ಸಾಬೀತು ಆಗುತ್ತಿದೆ. ಹಾಗಿದ್ದರೆ ನಾಯಿ ಕಚ್ಚುವುದನ್ನು ಹೇಗೆ ತಪ್ಪಿಸಿಕೊಳ್ಳಬಹುದು? ಇದು ಮಿಲಿಯನ್ ಡಾಲರ್ ಪ್ರಶ್ನೆ. ವಾಕಿಂಗ್ ಮಾಡಬೇಕಾದರೆ ಕೈಯಲ್ಲಿ ಕೋಲಿರಲಿ, ನಾಯಿ ಕಂಡರೆ ಕಲ್ಲು ಎಸೆಯಿರಿ ಮೊದಲಾದ ನೂರು ಉಪಾಯ ಯಾರೇ ಹೇಳಿದರೂ ಪಾಲಿಸಿದರೂ ನಾಯಿಗಳ ಕಚ್ಚುವಿಕೆ ಅನಿವಾರ್ಯ ಎನ್ನುವ ಸ್ಥಿತಿಗೆ ನಾವು ಅಡ್ಜಸ್ಟ್ ಆಗಿದ್ದೇವೆ. ಪ್ರತಿ ದಿವಸ ನಾಯಿ ಕಚ್ಚಿದ, ಮಕ್ಕಳನ್ನು ವೃದ್ಧರನ್ನು ಕಚ್ಚಿ ಕಚ್ಚಿ ದರ ದರ ಎ ಳೆಯುವ ವಿಡಿಯೋಗಳು ವಾಟ್ಸಾಪ್‌ನಲ್ಲಿ ವಿಡಿಯೋದಲ್ಲಿ ಯು ಟ್ಯೂಬಿನ ಚಾನಲ್ಲಿನಲ್ಲಿ ಬರುತ್ತಲೇ ಇರುತ್ತದೆ. ನಾಯಿ ಕಡಿತ ತನ್ನ ನಿರಂತರತೆ ಕಾಪಾಡಿಕೊಂಡಿದೆ. ಇನ್ನೂ ಹೇಳಬೇಕೆಂದರೆ ಜೀವಮಾನದಲ್ಲಿ ನಾಯಿ ಕಚ್ಚದೇ ಇರುವ ಹುಲು ಮಾನವ ಕರೋಡೋ ಮೇ ಏಕ್ ಇರಬಹುದೇನೋ (ನನ್ನ ಹಾಗೆ! ನನಗೆ ಈವರೆಗೆ ಈ ಅನುಭವ ಆಗಿಲ್ಲ, ಇಂತಹ ಅಪೂರ್ವ ಅನುಭವ ವಂಚಿತ ನಾನು!) ಕೆಲವು ಸಲ ನಾಯಿ ಕೈಲಿ ಅಥವಾ ಬಾಯಲ್ಲಿ ಕಚ್ಚಿಸಿಕೊಂಡು ಆ ಅನುಭವ ಪಡೆಯಬೇಕು ಅನಿಸುತ್ತೆ…! ಇಂತಹ ಹುಚ್ಚು ಐಡಿಯಗಳು ನಾವು ಜೀವಂತವಾಗಿರುವುದರ ಪ್ರತೀಕವಂತೆ..! ಹೀಗೆ ನಾನು ಪರಮ ಸುಖಿ.

ತಮಾಷೆ ಎಂದರೆ ನಗರದ ಸುಪ್ರಸಿದ್ಧರು, ಮಂತ್ರಿಗಳು, ಪುಡಾರಿಗಳು ಮತ್ತು ದೊಡ್ಡ ದೊಡ್ಡ ರೌಡಿಗಳು ವಾಸಿಸುವ ಸ್ಥಳಗಳಲ್ಲಿ(ಉದಾಹರಣೆ ಅಂದರೆ ಸದಾಶಿವ ನಗರ)ಹುಡುಕಿದರೂ ನಿಮಗೆ ಔಷಧಕ್ಕೆ ಒಂದೇ ಒಂದು ಬೀದಿನಾಯಿ ಸಿಗುವುದಿಲ್ಲ!

ಈಗ ಮತ್ತೆ ಮೂಲಕ್ಕೆ. ರಾತ್ರಿ ಹನ್ನೊಂದುವರೆ ಸುಮಾರಿನ ಕಗ್ಗತ್ತಲೆಯ ದಾರಿಯಲ್ಲಿ ಮನೆ ಸೇರಬೇಕಿತ್ತು ಅಂತ ಹೇಳಿದೆ ತಾನೇ? ಆಗ ನಮಗೆ ಕಳ್ಳ ಕಾಕರ ಭಯ ಇರಲಿಲ್ಲ. ಯಾಕೆ ಅಂದರೆ ನಮ್ಮ ಯಾರ ಬಳಿಯಲ್ಲಿಯೂ ಸಂಬಳದ ದಿವಸ ಕೂಡಾ ಐವತ್ತು ರೂಪಾಯಿಗಿಂತಲೂ ಹೆಚ್ಚು ಹಣ ಇರುತ್ತಾ ಇರಲಿಲ್ಲ. ಸಂಬಳದ ದಿವಸ ಕೆಲವರು ಅರ್ಧ ದಿವಸ ರಜೆ ಹಾಕಿಬಿಡುತ್ತಿದ್ದರು. ಸುಮಾರು ಜನಕ್ಕೆ ಸಾಲ ಸೋಲ ಕಡಿತ ಆಗಿ ಬರುತ್ತಿದ್ದ ಕಾಸು ಕಡಿಮೆ. ಕೆಲವರು ಬೆಳಿಗ್ಗೆಯೇ ಬಂದು ಸಂಬಳ ತೆಗೆದುಕೊಂಡು ಹೋಗಿಬಿಡುತ್ತಿದ್ದರು. ಆಗಿನ್ನೂ ಸಂಬಳ ನೇರ ಬ್ಯಾಂಕಿಗೆ ಹೋಗುವ ವ್ಯವಸ್ಥೆ ಇರಲಿಲ್ಲ ಮತ್ತು ಸಂಬಳ ನೇರ ಬ್ಯಾಂಕಿಗೆ ಕಳಿಸಬಹುದು ಎನ್ನುವ ಸೈದ್ಧಾಂತಿಕ ಯೋಚನೆ ಹುಟ್ಟೂ ಇರಲಿಲ್ಲ. ನಮ್ಮ ವೈಜ್ಞಾನಿಕ ಜ್ಞಾನ ಬೆಳೆದ ಹಾಗೆ ಇದೆಲ್ಲಾ ನಂತರ ಬಂದವು.

ಕಾರ್ಖಾನೆಯ ಸೆಕೆಂಡ್ ಶಿಫ್ಟ್ ನಂತರ ನಮ್ಮ ಸೈಕಲ್ ಸ್ಟಾಂಡ್‌ನಲ್ಲಿ ನಮ್ಮ ಏರಿಯಾದವರೆಲ್ಲ ಒಟ್ಟು ಸೇರಿ ಅಲ್ಲಿಂದ ಮನೆವರೆಗೆ ಒಟ್ಟಾಗಿ ಬರುತ್ತಾ ಇದ್ದೆವು. ಆಗ ಯಾರೋ ಒಬ್ಬರು ಇಬ್ಬರು ಸ್ಕೂಟರ್ ಇಟ್ಟುಕೊಂಡಿದ್ದರು ಮತ್ತು ಅವರೂ ಸಹ ಸೆಕೆಂಡ್ ಶಿಫ್ಟ್‌ನಲ್ಲಿ ನಮ್ಮ ಜತೆ ಸೈಕಲ್ ಸಂಗಾತಿ ಆಗುತ್ತಿದ್ದರು. ತಮಾಷೆ ಎಂದರೆ ತಾರತಮ್ಯ ಇಲ್ಲದೆ ಮನಸು ಬಿಚ್ಚಿ ಹರಟೆ ಹೊಡೆಯುತ್ತಾ ಸರಿರಾತ್ರಿಯಲ್ಲಿ ಮನೆ ಸೇರುವ ಉಮೇದು ಇತ್ತು. ತಾರತಮ್ಯ ಎಂದು ಯಾಕೆ ಹೇಳಿದೆ ಅಂದರೆ ಕಾರ್ಖಾನೆ ಒಳಗೆ ಆಫೀಸರ್ ಹಾಗೂ ಕೆಲಸಗಾರ ಎನ್ನುವ ಎರಡು ವರ್ಗದ ನಡುವೆ ಸಾಮರಸ್ಯದ ಕೊರತೆ ಇತ್ತು ಮತ್ತು ಇದು ಕೆಲವು ಸಲ ಉಲ್ಬಣವೂ ಆಗುತ್ತಿತ್ತು. ತಮಾಷೆ ಅಂದರೆ ಆಗ ಕಾರ್ಖಾನೆಯಲ್ಲಿ ಕ್ಯಾಂಟೀನ್ ಬೇರೆ ಬೇರೆ(ಈಗಲೂ ಅದು ಬೇರೆಬೇರೆ). ಟಾಯ್ಲೆಟ್‌ಗಳೂ ಅಧಿಕಾರಿಗಳಿಗೆ ಬೇರೆ, ಕೆಲಸದವರಿಗೆ ಬೇರೆ ಬೇರೆ(ಇದು ಕಾಲಾನಂತರ ಒಂದೇ ಆಯಿತು) ಆಫೀಸರ್ ಎಂದರೆ ದೇವರು ಅವರಿಗೆ ವಿಶೇಷ ವಿಸರ್ಜನಾ ಅಂಗಗಳನ್ನು ಕೊಟ್ಟಿದ್ದಾನೆ (ಇದು ಪೂರ್ತಿ ಸ್ಲ್ಯಾಂಗ್ ಲಾಂಗ್ವೇಜ್‌ನಲ್ಲಿ, ಇಲ್ಲಿ ಹಾಗೆ ಬರೆದರೆ ಅಶ್ಲೀಲ ಪೋಲಿ ಅನಿಸಬಹುದೇನೋ)ಎಂದು ಟ್ರೇಡ್ ಯೂನಿಯನ್ ಲೀಡರ್‌ಗಳು ವ್ಯಂಗ್ಯವಾಗಿ ಭಾಷಣ ಹೊಡೆಯುತ್ತಾ ಇದ್ದರು!

ಹೀಗೆ ರಾತ್ರಿ ಕೆಲಸ ಮುಗಿಸಿ ಸೈಕಲ್ ಸವಾರಿ ಮಾಡುತ್ತಿದ್ದ ಗುಂಪಿನ ಸದಸ್ಯರ ನಡುವೆ ಕೆಲವು ಅಲಿಖಿತ ನಿಯಮಗಳು ರೂಢಿಯಲ್ಲಿದ್ದವು!

ರಜಾ ಹಾಕುವ ಹಾಗಿದ್ದರೆ ಮೊದಲೇ ತಿಳಿಸಬೇಕು. ಅರ್ಧ ದಿವಸ ರಜೆ ಹಾಕಿದರೂ ತಿಳಿಸಿ. ಕೆಲವರು ರಾತ್ರಿ ಮಾವನ ಮನೆ ಅಥವಾ ಬಂಧುಗಳ ಮನೆಗೆ ಹೋಗುವ ಹಾಗಿದ್ದರೆ ತಿಳಿಸಿ. ಈ ಗುಂಪಿನವರು ಸುಮಾರು ನಾವೆಲ್ಲರೂ ಬೆಂಗಳೂರಿನಲ್ಲೇ ಬಂಧುಗಳ ಮಾವನ ಮನೆ ಇದ್ದವರು. ಆಗಾಗ ಹೀಗೆ ಹೋಗುವ ಅನಿವಾರ್ಯತೆ ಇತ್ತು. ಈ ರೀತಿಯ ನಿಯಮಗಳು, ಏಕೆ ಅಂದರೆ ಮಿಕ್ಕವರು ಅವರಿಗೋಸ್ಕರ ಕಾಯದಿರಲಿ ಎನ್ನುವ ಮುಂಜಾಕರೂಕತೆ! ಫೋನ್, ಮೊದಲಾದವು ಇನ್ನೂ ಜನಸಾಮಾನ್ಯರಿಗೆ ದೊರಕದಿದ್ದ ಕಾಲ ಅದು. ಇನ್ನು ಸೆಲ್ ಫೋನ್ ಹೆಸರು ಕೇಳಿರದ ಕಾಲ. ಕಮ್ಯುನಿಕೇಶನ್ ಏನಿದ್ದರೂ ಅದು ಮುಖಾಮುಖಿ ಅಷ್ಟೇ ಅಥವಾ ಕಿವಿ ಟು ಕಿವಿ!

ನಾವು ಕಾರ್ಖಾನೆಗೆ ಸೇರುವಾಗ ಆಗಲೇ ಕಾರ್ಖಾನೆ ಶುರು ಆಗಿ ಹದಿನೈದು ವರ್ಷದ ಮೇಲಾಗಿತ್ತು. ನಮಗಿಂತ ಮೊದಲು ಇಲ್ಲಿ ಕೆಲಸಕ್ಕೆ ಸೇರಿದ್ದ ಯುವಕ ಯುವತಿಯರ ರೋಚಕ ಪ್ರೇಮ ಕತೆಗಳು ನಮಗೆ ಟೈಮ್ ಪಾಸ್ ಸ್ಟೋರಿಗಳು. ಇವುಗಳ ಬಗ್ಗೆ ಮುಂದೆ ತಿಳಿಸುತ್ತೇನೆ. ಬಹುಶಃ ಆಗ ನಮ್ಮ ಬಾಯಲ್ಲಿ ದಂತಕತೆಯಾದ ಯಾವ ಜೋಡಿಗಳೂ ಈಗ ಜೀವಂತ ಇರುವ ಸಂಭವ ಕಡಿಮೆಯಾದ್ದರಿಂದ ಯಾವುದೇ ಹಿಂಜರಿಕೆ ಇಲ್ಲದೇ ಅವುಗಳನ್ನು ಹೇಳಿ ತುರುಬು ನೆನೆಸಿಕೊಳ್ಳಬಹುದು. ಇದು ಹಾಗಿರಲಿ. ನೇರ ರಸ್ತೆ ಇಲ್ಲದೆ ಹತ್ತಿರದ ಹಳ್ಳಿ ರಾಮಚಂದ್ರಪುರದ ಅಗಲ ಕಿರಿದಾದ ರಸ್ತೆಯ ಮೂಲಕ ನಾವು ವಿದ್ಯಾರಣ್ಯಪುರ ಸೇರುತ್ತಾ ಇದ್ದೆವು. ಮಳೆ ದಿವಸಗಳಲ್ಲಿ ಮಳೆ ನಿಲ್ಲುವವರೆಗೆ ಅಥವಾ ಬಿರುಸು ತಗ್ಗುವವರೆಗೆ ತಡೆದು ಸೈಕಲ್ ಏರುತ್ತಿದ್ದವು. ಇಂತಹ ಒಂದು ದಿವಸ ಇನ್ನೂ ನೆನಪಿನಲ್ಲಿದೆ. ಅವತ್ತು ಜೋರು ಮಳೆ. ಮಳೆ ಬಂದು ನಿಂತ ನಂತರ ನಮ್ಮ ಸೈಕಲ್ ಜಾಥಾ ಶುರು ಆಯಿತು. ರಾಮಚಂದ್ರಪುರದ ಕಿರು ರಸ್ತೆಗೆ ಬಂದೆವು. ಕತ್ತಲಿನಲ್ಲಿ ಒಬ್ಬ ಮಧ್ಯ ವಯಸ್ಕರು ಕೈಯಲ್ಲಿ ಒಂದು ಟಾರ್ಚ್ ಹಿಡಿದು ನಿಂತಿದ್ದರು. ಸ್ವಾಮೀ ನಿಲ್ಲಿ, ನಿಲ್ಲಿ ಸಾರ್ ಅಂತ ನಮ್ಮನ್ನು ತಡೆದರು. ಎಲೆಕ್ಟ್ರಿಕ್ ವೈರ್ ರಸ್ತೆ ಮೇಲೆ ಅಲ್ಲೆಲ್ಲಾ ಬಿದ್ದು ಕರೆಂಟ್ ಹರಿತಾ ಇದೆ. ಈ ರೋಡಿನಲ್ಲಿ ಹೋಗಬೇಡಿ ಅಂತ ಹೇಳಿ ಎಂ ಎಸ್ ಪಾಳ್ಯದ ಮೂಲಕ ಹೋಗಿ ಅಂತ ಸೂಚಿಸಿದರು. ಇದು ನಾಲ್ಕು ಕಿಮೀ ಹೆಚ್ಚು ದೂರ. ಆದರೂ ಜೀವ ನಮ್ಮದು ತಾನೇ? ಸರಿ ರಾತ್ರಿಯಲ್ಲಿ ಮಳೆಯಲ್ಲಿ ರಸ್ತೆಯಲ್ಲಿ ನಿಂತು ನಮ್ಮ ಜೀವದ ಬಗ್ಗೆ ಕಾಳಜಿ ತೋರಿದ ಅವರಿಗೆ ಥ್ಯಾಂಕ್ಸ್ ಹೇಳಿ ಸೈಕಲ್ ಹಿಂದಕ್ಕೆ ತಿರುಗಿಸಿ ಮನೆಗೆ ಅರ್ಧ ಮುಕ್ಕಾಲು ಗಂಟೆ ತಡವಾಗಿ ಸೇರಿದೆವು. ಮತ್ತೆ ನಾನು ಅವರನ್ನು ನೋಡಿದ ನೆನಪು ಇಲ್ಲ. ಈಗ ಅನಿಸುತ್ತೆ ದೇವರು ಅವತ್ತು ಆ ವೇಷ ತೊಟ್ಟು ಟಾರ್ಚ್ ಹಿಡಿದು ನಮ್ಮನ್ನು ಸಾವಿನಿಂದ ಹೊರಕ್ಕೆ ದೂಡಿರಬಹುದೇ ಅಂತ. ಆದರೆ ನಾನು, ವಿಚಾರವಾದಿ ಹೀಗೆ ಯೋಚಿಸುವ ಹಾಗಿಲ್ಲ..!

ಹೀಗೆ ಮನೆ ಸೇರುತ್ತಿದ್ದೆವು…. ವಿದ್ಯಾರಣ್ಯಪುರ ಎನ್ನುವುದು ನಾವು ಬರುವ ಕೊಂಚ ಮೊದಲು ಅಲ್ಲಿನ ಸೈಟ್ ಅಲಾಟಿಸ್ ಇಟ್ಟ ಹೆಸರು. ಅದಕ್ಕೆ ಮೊದಲು ಇದು ಅಂಚೀಪುರ ಆಗಿತ್ತು. ವಿದ್ಯಾರಣ್ಯ ಪುರದ ಮೂಲಕ ಹಾದು ಎಡಕ್ಕೆ ತಿರುಗಿ ಅರ್ಧ ಕಿಮೀ ಬಂದರೆ ಅಲ್ಲಿ ನಿಮಗೆ ಜಲ್ಲಿ ಮೆಶೀನ್ ಸಿಗುತ್ತಿತ್ತು. ಜಲ್ಲಿ ಕ್ರಷರ್ ಮೆಶೀನ್‌ನಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದದ್ದರಿಂದ ಅದು ಜಲ್ಲಿ ಮೆಶೀನ್ ಸ್ಟಾಪ್ ಎಂದು ಹೆಸರು ಮಾಡಿತ್ತು. ಅದರೆದುರು ಒಂದು ದೊಡ್ಡ ಗ್ರಾನೈಟ್ ಬೆಟ್ಟ ಇತ್ತು. ಕಾಲಕ್ರಮೇಣ ಬೆಟ್ಟ ಒಂದು ಕೊರಕಲಾಗಿ ಬದಲಾಗಿದೆ. ಇಲ್ಲಿನ ಕಲ್ಲುಗಳು ನಮ್ಮ ಮನೆಗಳ ಪಾಯ ಇತ್ಯಾದಿಗಳಿಗೆ ಹಲವು ರೂಪದಲ್ಲಿ ಅಂದರೆ ದಪ್ಪ ಜಲ್ಲಿ, ಸಣ್ಣ ಜಲ್ಲಿ ಬಟಾಣಿ ಜಲ್ಲಿ ಚಪ್ಪಡಿ ಕಂಬ ಹೀಗೆ ಹಲವು ಹತ್ತು ರೀತಿಯಲ್ಲಿ ಉಪಯೋಗವಾಗಿದೆ. ಪ್ರಕೃತಿಯನ್ನು ಬಂಜೆ ಮಾಡಿದ ಗುಂಪಿನಲ್ಲಿ ನಮ್ಮದು ಮೊದಲ ಸಾಲು. ಆದರೆ ಆಗ ಈ ಬಗ್ಗೆ ಕೊಂಚವೂ ಜ್ಞಾನ ಎನ್ನುವುದು ಇರಲಿಲ್ಲ!

ಅಲ್ಲಿ ಎಡಕ್ಕೆ ತಿರುಗಿದರೆ ಆ ರಸ್ತೆ ನಮ್ಮನ್ನು ಎಂ ಎಸ್ ಪಾಳ್ಯ, ಮಿಲಿಟರಿ ಏರಿಯ ಮೂಲಕ ಜಾಲಹಳ್ಳಿ ಪಶ್ಚಿಮ, ಗಂಗಮ್ಮ ಸರ್ಕಲ್ ಮೂಲಕ ಬೀ ಈ ಎಲ್ ವೃತ್ತಕ್ಕೆ ಸಂಪರ್ಕಿಸುತ್ತಾ ಇತ್ತು. ಇದೇ ರಸ್ತೆ ಮುಂದುವರೆದು ಗೋಕುಲ, ಮತ್ತಿಕೆರೆ, ಸುಬೇದಾರ ಪಾಳ್ಯ ಮೂಲಕ ಯಶವಂತಪುರ ಟೋಲ್ ಗೇಟ್ ಸೇರುತ್ತಿತ್ತು. ಆಗ ಬೀ ಈ ಎಲ್ ಗೆ ನಗರದ ಕಡೆಯಿಂದ ಬರಲು ಇದು ಮತ್ತು ಎಂ ಈ ಎಸ್ ರಸ್ತೆ ಎರಡೇ ಇನ್ ಲೆಟ್ ಇದ್ದವು. ಜಲ್ಲಿ ಮೆಶೀನ್ ಬಲಕ್ಕೆ ತಿರುಗಿದರೆ ಅಟ್ಟುರು ಮೂಲಕ ಯಲಹಂಕಕ್ಕೆ ಒಂದು ಎತ್ತಿನ ಗಾಡಿ ಹೋಗುವಷ್ಟು ರಸ್ತೆ ಇತ್ತು. ಆಗ 268 ನಂಬರಿನ ಒಂದು ಬಸ್ಸು ಈ ದಾರಿಯಲ್ಲಿ ಮೆಜೆಸ್ಟಿಕ್, ಮಾರ್ಕೆಟ್‌ಗೆ ಇತ್ತು. ಬಹುಶಃ ನಗರಕ್ಕೆ ಸಂಪರ್ಕಿಸುವ ಕೆಲವೇ ಕೆಲವು ಬಸ್ಸುಗಳಲ್ಲಿ ಈ ಮಾರ್ಗ ಸಹ ಒಂದು. ಜನ ಕಿಕ್ಕಿರಿದು ತುಂಬಿಕೊಂಡ ಬಸ್ಸು ಗರ್ಭಿಣಿ ಹೆಂಗಸರ ಹಾಗೆ ನಿಧಾನಕ್ಕೆ ಬುಸ್ ಬುಸ್ ಉಸಿರು ಬಿಡುತ್ತಾ ಗರ್ಭದ ಭಾರಕ್ಕೆ ಕುಸಿಯುತ್ತೇನೋ ಎನ್ನುವ ಭಯ ಹುಟ್ಟಿಸುತ್ತಿತ್ತು.

ಜಲ್ಲಿ ಮೆಶೀನ್ ಹತ್ತಿರ ಎರಡು ಟೆಂಟ್ ಇದ್ದವು. ಒಂದು ಎಡಕ್ಕೆ ತಿರುಗಿ ಒಂದು ಹದಿನೈದು ಹೆಜ್ಜೆ ಹಾಕಿದರೆ ಅಲ್ಲಿ ಮತ್ತೊಂದು ಬಲಕ್ಕೆ ತಿರುಗಿ ಹದಿನೈದು ಹೆಜ್ಜೆ ಹಾಕಿದರೆ ಅಲ್ಲಿ..! ನಮಗೆ ಆಗ ಇವೇ ರಿಕ್ರಿಯೇಷನ್ ಸೆಂಟರ್‌ಗಳು. ಹಿಂದಿ ತಮಿಳು ತೆಲುಗು ಸಿನೆಮಾಗಳು ಕೆಲವು ಸಲ ವಾರಕ್ಕೊಮ್ಮೆ ಬದಲಾದರೆ ಕೆಲವು ಸಲ ಮೂರು ದಿವಸಕ್ಕೆ ಬದಲಾಗುತ್ತಿದ್ದವು. ನಮಗೆ ತೆಲುಗು ತಮಿಳಿನ ಮಲೆಯಾಳದ ಪ್ರಾಥಮಿಕ ಕಲಿಕೆ ಆಗಿದ್ದು ಇಲ್ಲಿ. ಹಿಂದಿ ಮೊದಲೇ ಬರುತ್ತಿತ್ತು. ನಿಧಾನಕ್ಕೆ ಈ ರಸ್ತೆ ಅಭಿವೃದ್ಧಿ ಕಾಣುತ್ತಾ ಬಂದಿದೆ. ಈಗ ಮೊದಲ ಬಾರಿಗೆ ಈ ರಸ್ತೆ ನೋಡಿದವರು ಹಿಂದೆ ಇದ್ದ ಅದರ ರೂಪವನ್ನು ಕಲ್ಪಿಸಲೂ ಅಸಾಧ್ಯ….! ಈ ಕತೆಗೆ ಮುಂದೆ ಬರುತ್ತೇನೆ.. ಅಲ್ಲಿಯವರೆಗೆ ಬೈ ಬೈ..

ಇನ್ನೂ ಉಂಟು…

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ