“ಪ್ರೀತಿಸುವುದಕ್ಕಿಂತ ಕ್ರಾಂತಿಯಾವುದಾದರೂ ಇದಿಯಾ; ನನ್ನ ಕವಿತೆ ಇದನ್ನಷ್ಟೇ ಬಯಸುತ್ತದೆ” ಎನ್ನುವಾಗ, ಜಂಬೂದ್ವೀಪದ ಅಪ್ಪ ಅವ್ವ ಅನ್ನ ಉತ್ಪಾದಿಸುವ ಘನಕಾರ್ಯಕ್ಕೆ ಕಣ್ಣು ಬಂದು, ಅದೆಲ್ಲೋ ಬಲೂನು ಮಾರುತ್ತಿರುವ ಬಡಜನರ ಮೇಲೆ ದೃಷ್ಟಿ ಹಾಯಿಸುತ್ತಾ ಇರುತ್ತದೆ. ಒಂದೇ ಮನೆಯಲ್ಲಿದ್ದು, ಒಂದೇ ತಟ್ಟೆಯಲ್ಲಿ ಅನ್ನ ತಿಂದ ಜನರೇ ಹಣ, ಆಸ್ತಿ ಆಸೆಗಾಗಿ ಸಾವನ್ನೇ ಕತ್ತು ಹಿಸುಕಿ ಕೊಲ್ಲುತ್ತಿರುವಾಗ, ಬಡಜನರ ಬಗ್ಗೆ ದನಿಯಾಗಬೇಕೆಂಬ ಇವರ ಹುಂಬುತನಕ್ಕೆಷ್ಟೊಂದು ಧೈರ್ಯವಿರಬೇಕು ಎಂದುಕೊಳ್ಳುವಾಗಲೆ, ಅದಕ್ಕವರು ಉತ್ತರವಾಗಿ ‘ನದಿಗೆ ತಡೆಯೊಡ್ಡಬಹುದು, ಬತ್ತಿಸಲಾಗುವುದೇ ಒಳಗಿನ ಒರತೆ” ಎಂದುಬಿಡುತ್ತಾರೆ.
ಎಸ್.ಕೆ. ಮಂಜುನಾಥ್ ಕವನ ಸಂಕಲನ “ಗಾಳಿಯ ಎದೆಸೀಳಿ ಹೊರಟ ಹಕ್ಕಿ” ಕುರಿತು ಗೋಳೂರ ನಾರಾಯಣಸ್ವಾಮಿ ಬರಹ
ಸಾಹಿತ್ಯವೆಂದರೆ ಕಾವ್ಯವೆಂದೇ ಭಾವಿಸುವ ಕವಿ ಎಸ್.ಕೆ. ಮಂಜುನಾಥ್ ಕನ್ನಡ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗ ಇವರ “ಗಾಳಿಯ ಎದೆಸೀಳಿ ಹೊರಟ ಹಕ್ಕಿ” ಕವನ ಸಂಕಲನ ಬಿಡುಗಡೆಯಾಗಿದೆ. ಈ ಕೃತಿ ಓದಿದಾಗ ನನಗೆ ದಕ್ಕಿದ್ದು ಇಷ್ಟು….
ಕವಿತೆಯೆಂದರೆ ನನ್ನ ಎದೆಗಿಳಿದ ನೋವಿನ ಹಾಡು; ಅಷ್ಟೇ ಆಗದೆ ಗುರು, ಗೆಳೆಯ, ಸಂಗಾತಿಯೂ ಆಗಿದೆ ಎನ್ನುವ ಈ ಕವಿಯ ಮಾತು ಕೇಳಿದರೆ, ಇವನೊಬ್ಬ ಕಾವ್ಯದ ಹುಚ್ಚುಕಾಡನೆಂಬುದು ತಿಳಿಯುತ್ತದೆ.
ಎಸ್.ಕೆ.ಮಂಜುನಾಥ್ ಅವರ ಕಾವ್ಯದ ತಿರುಳು ಇದೆಯಲ್ಲ ಅದು… “ಪ್ರೀತಿಸುವುದಕ್ಕಿಂತ ಕ್ರಾಂತಿಯಾವುದಾದರೂ ಇದಿಯಾ; ನನ್ನ ಕವಿತೆ ಇದನ್ನಷ್ಟೇ ಬಯಸುತ್ತದೆ” ಎನ್ನುವಾಗ, ಜಂಬೂದ್ವೀಪದ ಅಪ್ಪ ಅವ್ವ ಅನ್ನ ಉತ್ಪಾದಿಸುವ ಘನಕಾರ್ಯಕ್ಕೆ ಕಣ್ಣು ಬಂದು, ಅದೆಲ್ಲೋ ಬಲೂನು ಮಾರುತ್ತಿರುವ ಬಡಜನರ ಮೇಲೆ ದೃಷ್ಟಿ ಹಾಯಿಸುತ್ತಾ ಇರುತ್ತದೆ. ನನಗಿದು ಈ ಹೊತ್ತಿನಲ್ಲಿ ಬಹಳ ಸೋಜಿಗ ಅನ್ನಿಸ್ತಿದೆ. ಒಂದೇ ಮನೆಯಲ್ಲಿದ್ದು, ಒಂದೇ ತಟ್ಟೆಯಲ್ಲಿ ಅನ್ನ ತಿಂದ ಜನರೇ ಹಣ, ಆಸ್ತಿ ಆಸೆಗಾಗಿ ಸಾವನ್ನೇ ಕತ್ತು ಹಿಸುಕಿ ಕೊಲ್ಲುತ್ತಿರುವಾಗ, ಬಡಜನರ ಬಗ್ಗೆ ದನಿಯಾಗಬೇಕೆಂಬ ಇವರ ಹುಂಬುತನಕ್ಕೆಷ್ಟೊಂದು ಧೈರ್ಯವಿರಬೇಕು ಎಂದುಕೊಳ್ಳುವಾಗಲೆ, ಅದಕ್ಕವರು ಉತ್ತರವಾಗಿ ‘ನದಿಗೆ ತಡೆಯೊಡ್ಡಬಹುದು, ಬತ್ತಿಸಲಾಗುವುದೇ ಒಳಗಿನ ಒರತೆ” ಎಂದುಬಿಡುತ್ತಾರೆ.
ಕಾರುಣ್ಯದ ಬೆಳಕು ಬುದ್ದ ದೇವನ ಬಗ್ಗೆ ತಾಯ್ತನವಿರುವ ಯಾವ ಬರಹಗಾರನೂ ಬರೆಯದೇ ಇದ್ದದ್ದಿಲ್ಲ. ಈ ನೆಲದ ಹುಟ್ಟು ಕವಿ ಮಂಜುನಾಥ್ ಎದೆಯಲ್ಲಿ ಬುದ್ದನೆಂದರೆ,
“ಅಪ್ಪನ ಮಾಸದ ಟವಲ್ಲಿನ
ಗಂಟಿನಲ್ಲಿರುವ ಯಾರೋ ಕೊಟ್ಟ-
ರೊಟ್ಟಿಯ ಚೂರಲ್ಲಿ ಒಡಮೂಡಿದ್ದಾನೆ. ಅಷ್ಟೇ ಅಲ್ಲ
ಬುದ್ಧನೆಂಬುವನು ಕರುಣಾ ಮೈತ್ರಿಯ-
ಹೊಕ್ಕಳ ಬಳ್ಳಿ ಜೀವ ಪ್ರೀತಿಯ ಹಾಡು” ಎಂದು ಕವಿ ಹೇಳುತ್ತಿದ್ದಾನೆ. ಈ ಕಾರಣಕ್ಕೆ ನಾನು ಎಸ್ಕೆ ಅವರನ್ನು ಹುಟ್ಟು ಕವಿ ಅಂದಿದ್ದು.
ಸಾವಿರದ ಮೈಗಣ್ಣಿನ ಹಕ್ಕಿಯಿಂದ ಮಾನವ ಲೋಕದಲ್ಲಾಗುವ ಮೋಸ, ಅಪಮಾನ, ಹುನ್ನಾರ, ಶ್ರೀಮಂತಿಕೆಯ ಅಹಂಕಾರ, ನೂರಾರು ಕುತಂತ್ರಗಳ ಬಗ್ಗೆ ಎಚ್ಚರಿಕೆಯಿಂದಿರಲು ತಿಳಿಸುತ್ತಾರೆ. ಬದುಕಿನ ನೆಲವನ್ನು ಹದಗೊಳಿಸಿ, ಅಲ್ಲೊಂದು ಸುಂದರ ತೋಟ ನಿರ್ಮಿಸಿ, ಅದರ ರಕ್ಷಣೆಗೊಂದು ಭದ್ರವಾದ ಕೋಟೆ ಕಟ್ಟಿಸಿ ಆಳಿದ ಈ ದೇಶದ ಆದಿ ದೊರೆ, ಮಾದಿತಾಯಿಯ ಪೊರೆದ ಅರಸು ಕುರುನ್ಗರಾಯನ ಜೀವನಯಾನವನ್ನು ಐತಿಹಾಸಿಕ ದಾಖಲೆಯಾಗಿ ತಂದಿರುವುದು ಕವಿಯ ಚಾರಿತ್ರಿಕ ಪ್ರಜ್ಞೆಗೆ ಹೆಚ್ಚಿನ ಪ್ರಾಮುಖ್ಯತೆ ಯಾವತ್ತಿಗೂ ಇದೆಯೆಂಬುದು ತಿಳಿಯುತ್ತದೆ.
ಇಲ್ಲಿನ ಕವಿತೆಗಳು ಸತ್ಯ ನುಡಿಯಲು ಸಾಕ್ಷಿ ನೀಡಬೇಕಾಗಿರುವುದನ್ನು ವಿಡಂಬನೆ ಮಾಡುತ್ತಿವೆ. ಪ್ರತೀ ಸಾವು ಹೊಸ ಹುಟ್ಟು, ಪ್ರತೀ ಹುಟ್ಟು ಹೊಸ ಸಾವು ಎಂಬ ವಿಷಣ್ಣ ಸ್ಥಿತಿ ನಿರ್ಮಾಣ ಆಗಿದೆ. ಹಾಗಾಗಿ ಯಾರಾದರೂ ಸರಿಯೇ “ನೀವೆಲ್ಲಾದರೂ ಮನುಷ್ಯನನ್ನು ಕಂಡರೆ ಹೇಳಿ ಆತನ ಸಂಗವ ಮಾಡಿ ನಾನೂ ಕೂಡ ಮನುಷ್ಯನಾಗಬೇಕು” ಎಂಬ ಕಳವಳ ವ್ಯಕ್ತಪಡಿಸುತ್ತ ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರ, ಕೊಲೆ, ಸುಲಿಗೆಗಳಂತಹ, ಆತಂಕಕಾರಿ ಬೆಳವಣಿಗೆಗಳ ಬಗ್ಗೆ ಆಕ್ರೋಶ ಹಾಗೂ ಖೇದ ವ್ಯಕ್ತವಾಗಿದೆ.
ಬೀದಿ ಬದಿಯ ವ್ಯಾಪಾರಿಗಳ ದುರಂತಮಯ ಭಾರತೀಯರ ಬದುಕು ಎಷ್ಟೊಂದು ದುಸ್ತರವಾಗಿದೆಯೆಂದರೆ ಅವರ ಉಸಿರನ್ನೇ ಮಾರಾಟಕ್ಕಿಟ್ಟಿದ್ದಾರೆ ಇಲ್ಲಿ; ಅದೂ ಕೇವಲ ಹತ್ತು ರೂಪಾಯಿ ಬಲೂನಿನಲ್ಲಿ. ಇದೊಂದು ರೂಪಕವಷ್ಟೇ ಈ ರೀತಿಯ ಕಷ್ಟದ ಜೀವನಕೆ ಅದೆಷ್ಟೋ ಬಣ್ಣಗಳಿರುವುದು ಕವಿಯ ಮಾತಿನಂತೆ ನಿಜ. ‘ಜಗತ್ತಿಗೆ ಕೇಳದ ಹಾಗೆ ಅಳಬಹುದೇನೋ ಆದರೆ ನನಗೆ ಕೇಳದ ಹಾಗೆ ಅಳುವುದಾದರೂ ಹೇಗೆ’ ಎಂಬ ಪ್ರಶ್ನೆಯೊಂದಿಗೆ;
‘ಸೂಜಿಗಣ್ಣಿಗೆ ದಾರ ಪೋಣಿಸಿ ತಂದಿರುವೆ, ಬಿರಿದ ಎದೆಗಳ ಗಾಯ ಹೊಲೆಯಲು’ ಎಂಬ ಕವಿಯ ಮಹಾದಾಶಯ ಬದುಕಿನ ಭರವಸೆಯನ್ನು ಬಿಂಬಿಸುತ್ತದೆ.
ಈ ಧರೆ ತಂದ ಧರೆಗೆ ದೊಡ್ಡವರು ಎನಿಸಿಕೊಂಡ ಜಗಕೆ ಚಪ್ಪಲಿ ಹೊಲಿದ ತನ್ನ ಅಜ್ಜ ಜಂಬೂದ್ವೀಪಸ್ಥನ ಬಗ್ಗೆ ಅಪಾರ ಗೌರವವಿಟ್ಟುಕೊಂಡಿರುವ ಕವಿ ಹೆಮ್ಮೆಯಿಂದ ತಮ್ಮ ಹಿರೀಕರನ್ನು ನೆನೆದುಕೊಂಡು ಇಂತಹ ಶ್ರೇಷ್ಠ ಕುಲಸಂಜಾತನ ಮೊಮ್ಮಗನಾದ ನಾನು ಅಕ್ಷರದ ರೆಕ್ಕೆಯಾಗಿ ಅಪ್ಪ ಅವ್ವ ಅಜ್ಜ ತಮಟೆಯನ್ನ್ಹೊತ್ತು ದಕ್ಕಲೊಕ್ಕಲುತನದ ತಾಯ್ತನದಿಂದುಳಿದ ಸಾವಿರ ಕಣ್ಣಿನ ನವಿಲಿನ ಕುಲಕಥನ ಹೇಳುತ್ತಾ “ಗಾಳಿಯ ಎದೆ ಸೀಳಿ ಹೊರಟ ಹಕ್ಕಿ” ಜಾವ ಜಾವಕೂ ಹಾರಿ ಜಂಬೂದ್ವೀಪ ಸೇರಲು ಹೊರಟಿದೆ.
ಅಪ್ಪನ ಕರುಣೆ, ಅವ್ವಾಳ ಮಮತೆ ಕವಿಯ ಇಡೀ ಬದುಕನ್ನು ಆವರಿಸಿಕೊಂಡಿರುವುದು ಹಾಗೂ ಅವರಿಗಾಗಿ ಏನು ಬೇಕಾದರೂ ಮಾಡಬಲ್ಲ ಮಗನಾಗಿ ರೈತನು ಹೊಲದಲ್ಲಿ ಹತ್ತಿಯ ಸಾಲು ಹೊಡೆದಷ್ಟೇ ಪ್ರೇಮವುಳ್ಳವನಾಗಿದ್ದಾನೆ.
“ಅಪ್ಪ ತನ್ನ ಒಡಲಲ್ಲಿ ಸಾಕಿಕೊಂಡಿರುವ ಹೆಬ್ಬಸಿವು ಇದ್ದರೂ ತಮಟೆ ಬಡೆಯಬೇಕು-
ನಿಮ್ಮ ಮನಸ್ಸು ಕುಪ್ಪಳಿಸಿ ಕುಣಿವಂತೆ!
ಆದರೂ ಅಪ್ಪ ಕೈ ಮುಗಿಯುತ್ತಾನೆ ದೇವರಿಗೆ ಗುಡಿಯಾಚೆಯೇ ನಿಂತು”.
ಕವಿಯ ಈ ಸಾಲುಗಳಲ್ಲಿ ಹಸಿವನ್ನು ಅಣಕಿಸುವ ಉಳ್ಳವರ ಕುಣಿತದ ಬಗ್ಗೆ ಬಹಳ ವಿಷಾದವಿದೆ. ಅದಕ್ಕಾಗಿ ಬೆಳೆದು ದೊಡ್ಡವನಾದ ಮಗ ತನ್ನ ಅಪ್ಪನನ್ನು ‘ಇನ್ನಾದರೂ ತೊಲಗಲಿ ಊರ ಬಿಟ್ಟಿ ಚಾಕರಿ ಬಾ ನನ್ನೊಂದಿಗೆ ವಿರಮಿಸು ಈ ಬೆಚ್ಚನೆಯ ತೋಳುಗಳಲ್ಲಿ’ ಎಂದು ಕರೆಯುತ್ತಿದ್ದಾನೆ.
ಮಾನವೀಯತೆ ಮರೆತಿರುವ ಈ ಹೊತ್ತಿನಲ್ಲಿ ಹಿಡಿ ಅನ್ನಕ್ಕಾಗಿ ಕೈ ಚಾಚುವವರನ್ನು ಕಂಡರೆ ಅಸಡ್ಡೆ, ಅಸಹ್ಯ ಪಡುವ ಸ್ಥಿತಿಗೆ ಸಮಾಜ ಬಂದು ನಿಂತಿದೆ. ನಾನು “ಸಾವಿನಿಂದ ಉಳಿದದ್ದು ಹಸಿದಿರಲಿಕ್ಕೆ- ಹಸಿದೇ ಸಾಯಲಿಕ್ಕೆ” ಎಂಬ ವೇದನೆಯಿಂದ ಕರೋನಾ ಲಾಕ್ ಡೌನ್ ಸಂದರ್ಭದಲ್ಲಿ ಬಡಜನರು ಬೆಂಗಳೂರಿನಂತಹ ಮಹಾನಗರವನ್ನು ಬಿಟ್ಟು ಸಾವಿರಾರು ಕಿಲೋಮೀಟರ್ ಇರುವ ತಮ್ಮ ದೂರದ ಊರುಗಳಿಗೆ ನಡೆದುಕೊಂಡೆ ಹೋದ ದೃಶ್ಯವನ್ನು ಕಣ್ಣ ಮುಂದೆ ತರುವ “ಭಾರತ ಬರಿಗಾಲಲ್ಲಿ ನಡೆಯುತ್ತಿದೆ” ಎನ್ನುವ ಕವಿತೆಯಲ್ಲಿ ಕಾಣಬಹುದು.
“ಮಾತನಾಡುತ್ತಿದ್ದೇನೆ ಬಿದ್ದ ನೆಲದಲ್ಲೇ,
ಎದ್ದು ನಿಲ್ಲುತ್ತೇನೆ ಜಗದ ನೋವುಗಳೆ ಬನ್ನಿ,
ನೋವಿನ ಮಗುವಿನ ಕೈಗೆ-
ಎದಗಿಲಿಕೆಯ ಕೊಟ್ಟು ರಮಿಸುತ್ತೇನೆ.
ಕಡಿದಷ್ಟು ಕುಡಿಯೊಡೆವ ಈ ಜೀವ ಅರೆಗಣ್ಣಷ್ಟೇ ಈಗ ತೆರೆದಿದೆ. ತೆರೆದ ಕಣ್ಣಿನಿಂದ ಲೋಕ ನೋಡಬೇಕಾದ ಪರಿಗೆ ನಾನು ಕಾಯುತ್ತಿದ್ದೇನೆ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಈ ಜೀವ ಮಂಜು ಸುರಿಸಲಿ ಎಂದು ಆಶಿಸುತ್ತೇನೆ.
ಗೋಳೂರ ನಾರಾಯಣಸ್ವಾಮಿಯವರು ಕಾವ್ಯ, ಕತೆ, ಕಾದಂಬರಿ ರಚನೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಸಧ್ಯ ಕಾಡಿನ ಜನಪದ ಕಾವ್ಯ ಅಧ್ಯನಕ್ಕಾಗಿ ಕ್ಷೇತ್ರ ಕಾರ್ಯದಲ್ಲಿ ತೊಡಗಿದ್ದಾರೆ. ಇವರ ಹಲವು ಕವಿತೆ, ಲೇಖನ ಹಾಗೂ ಕತೆಗಳು ಹಲವು ಪತ್ರಿಕೆಗಳಲ್ಲಿ, ಬ್ಲಾಗ್‌ಗಳಲ್ಲಿ ಪ್ರಕಟಗೊಂಡಿವೆ. ‘ಮೌನ ಕಣಿವೆಯ ಹಾದಿಯಲಿ’ ಇವರ ಪ್ರಕಟಿತ ಕವನ ಸಂಕಲನ.