ತೋಚಿದ್ದು ಗೀಚಿದ್ದು. ೧
ಎಚ್ಚರವಾಗೇ ಕೂತಿದೆ ಕಡಲು
ಕಣ್ಣುಜ್ಜುತ್ತಿದೆ ಆಕಾಶ
ಸಮುದ್ರಗನ್ನಡಿಯತ್ತ ಮುಖ ಮಾಡಿ
ಅಲೆಗಳ ಕಣ್ಣಲ್ಲಿ
ಮುಳುಗೆದ್ದ ಬಣ್ಣದ ಮೀನಿನ ಛಾಯೆಯ
ಸ್ಪರ್ಶ ಸುಖ ಕಚಗುಳಿ ನೀಡುತ್ತಿದೆ
ಬೊಗಸೆ ತುಂಬಿದ ಸಾಗರದ ನೀರು
ರುಚಿಸುತ್ತಿದೆ ಆ ಕನಸಲ್ಲಿ ಸಿಕ್ಕ
ಸಿಹಿ ಮುತ್ತಿನಂತೆ
ಕೆಳಗೆ ಬಿದ್ದ ಮೋಡದ ಚೂರೊಂದು
ಹಗಲಿನ ಅಂಗೈಯಲ್ಲಿ ಹೊಳೆಯುತ್ತಿದೆ
ಥೇಟು ನಕ್ಷತ್ರ ಮೀನಿನಂತೆ !
ಇರುಳ ಜಾಗರದ ಅಲೆಗಳಿಗೆ
ತೀರದ ತೋಳಿನ ವ್ಯಾಮೋಹ
ಗಸ್ತು ಹೊಡೆಯುತ್ತಿದ್ದಾನೆ ಚಂದಿರ
ಹಿಡಿದು ಬೆಳ್ಳಿಬೆಳಕ ಲಾಂದ್ರ
ದೂರದಲ್ಲೆಲ್ಲೋ ಕೇಳುತ್ತಿದೆ
ಅಪರಿಚಿತ ಜೋಗುಳ
ಶಿಶುಪಾದದ ಸಪ್ಪಳ ..
ತೋಚಿದ್ದು ಗೀಚಿದ್ದು. ೨
ಕೆಂಡ ವೇಷಾಧಾರಿ ಸೂರ್ಯ
ಸದ್ದಿಲ್ಲದೇ ಸಾಯುತ್ತಿದ್ದಾನೆ
ಕಿಟಕಿಯಾಚೆಯ ಗಾಜಿನ
ಬಾಗಿಲಲ್ಲಿ ಬಂದು ಕುಳಿತಿದ್ದಾನೆ
ಎಳೆ ಚಂದಿರ
ಕೋಣೆ ಏಕಾಂತದಲ್ಲಿದೇ
ತಾಜಾ ಕವಿತೆಯೊಂದು ಪ್ರಸವಿಸುವುದೇನೋ..!
ಕನ್ನಡಿಯೊಳಗೆ ಎಂದೋ ಬಿಟ್ಟ
ಹಳೇ ಮುಖ ಮತ್ತೇ ಕೈಕುಲುಕಿದೆ
ನೋಟಿನ ಮೇಲೆ ನಗುತ್ತಿರುವ
ಗಾಂಧಿಯ ಬೆನ್ನ ಮೇಲೆ
ಬರೆದಿಟ್ಟಿದ್ದ ವಿಸ್ಮಿತ ಸಾಲಂತೆ !
ದಣಿದ ಊರಾಚೆಯ ದಿನ್ನೆಗೊರಗಿದ
ದನಿಯೊಂದು ಪ್ರತಿಧ್ವನಿಸುತ್ತಾ ಚಲಿಸಿದೆ
ಧೂಪದ ಮನೆಯಿಂದಾಚೆ ಬಂತು
ದೀಪದ ನಗು
ಪಲ್ಲವಿಸಿದ ಪ್ರೇಮಕ್ಕೀಗ
ಹೆಸರಿಡಬೇಕಿದೆ
ನೀಲಾಕಾಶದ ಬುಟ್ಟಿಯಲ್ಲಿ
ರಾಶಿ ರಾಶಿ ಪ್ರೇಮಪತ್ರಗಳ ಗುಸುಗುಸು
ಇಮ್ಮಡಿಗೊಂಡಂತಿದೆ ಇರಾದೆ
ಅರ್ಧಕ್ಕೆ ಬಿಟ್ಟ ವಾಕ್ಯದಲ್ಲೇ ಉಳಿದು
ನಿಟ್ಟುಸಿರು ಬಿಡುತ್ತಿದೆ
ಬಾಯಾರಿದ ಬೇಗುದಿ
ಯಾರವನು ? ಎಲ್ಲಿರುವನು ?
ಕಣ್ಣೋಟಗಳ ಹೊಲೆವ
ಅಗೋಚರ ದರ್ಜಿ
ಇರೀ, ವಿಸ್ಮಿತ ವಾಣಿಯೊಂದು
ಮಾರ್ದನಿಸುತ್ತಿದೆ
ನನ್ನೊಳಗಿನ ಆಕೆಯ
ಆತ್ಮವೀಗ ರಜಸ್ವಲೆಯಂತೆ
ಅಲ್ಪವಿರಾಮ , ಪೂರ್ಣವಿರಾಮದ
ಕಾವಲಲ್ಲಿ ಜೀವಂತವಾಗಿದೆ ಕಥೆ
ಇದೀಗ ರೂಢಿಗತವಾದಂತಿದೆ
ಅವಳಿಟ್ಟ ನವಿಲುಗರಿ ನೇವರಿಸಿದ
ಕೊನೆ ಮೊದಲ ಪುಟಗಳ
ಅಭಿಮುಖಗೊಳ್ಳುವಿಕೆ…!
ಕೋಲಾರ ಮೂಲದ ರಾಘವೇಂದ್ರ ಸಿವಿ. ಬೆಂಗಳೂರು ನಿವಾಸಿ.
ಓದಿದ್ದು ಡಿಪ್ಲೋಮ ಮೆಕಾನಿಕಲ್ ಆದರೂ ಬರವಣಿಗೆಯಲ್ಲಿ ಅಪಾರ ಆಸಕ್ತಿ.
‘ಒನ್ ಇಂಡಿಯಾ’ ಜಾಲತಾಣ ಪತ್ರಿಕೆಯಲ್ಲಿ ನ್ಯೂಸ್ ಮತ್ತು ಸಿನಿಮಾ ವಿಭಾಗದಲ್ಲಿ ಕೆಲಸ.
ಸಿನಿಮಾಕ್ಕೆ ಹಾಡು, ಕಥೆ, ಸಂಭಾಷಣೆ ಬರೆಯೋದು ಹವ್ಯಾಸ.
(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ