”ಮೊದಲು ಬಂದಾಗಿನ ಅಸ್ಥಿರತೆಯ, ಅಚ್ಚರಿಯ ಮತ್ತು ಅವಕಾಶದ ಮೂಲಕ ಹಾದುಹೋದ ಬದುಕಿನ ಹಲವು ವರ್ಷಗಳು ಕಳೆದು ಹೋದ ನಂತರ ಇಲ್ಲಿಯೇ ಹುಟ್ಟಿ ಬೆಳೆದ ನಮ್ಮ ಮಕ್ಕಳ ಭವಿಷ್ಯ, ಮರಳಿ ಹೋದಾಗ ಮತ್ತೆ ಹೊಂದಿಕೆಯಾಗಲು, ಸ್ಥಿರತೆ ಕಂಡುಕೊಳ್ಳಲು ಸವೆಸಬೇಕಾದ ಸಂಘರ್ಷ, ಸಮಯ ಇನ್ನೂ ಹಲವು ಸಾಮಾಜಿಕ, ಕೌಟುಂಬಿಕ ಮತ್ತು ವೃತ್ತಿಪರ ವಿಚಾರಗಳು, ಸ್ಪರ್ಧೆ ಮತ್ತು ಇನ್ನು ಕೆಲವೊಮ್ಮೆ ನಾವು ಸಮಯದಲ್ಲಿ ಕಂಡುಕೊಳ್ಳುವ ಅಪ್ಪಟ ಸತ್ಯಗಳ ಕಾರಣ ಬಹುತೇಕರು ಇಲ್ಲಿಯೇ ಉಳಿದುಬಿಡುತ್ತಾರೆ. ಅವರಲ್ಲಿ ನಾವೂ ಒಬ್ಬರಾಗಿ ಇವತ್ತು ಬೆರೆತುಹೋಗಿದ್ದೇವೆ”
ಡಾ.ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನ.
ಈ ದೇಶದಲ್ಲಿ ತರಾವರಿ ಮನೆಗಳು ಇದ್ದರೂ ಜನರು ಸ್ವಂತ ಮನೆಕಟ್ಟಿಕೊಳ್ಳುವುದು ಬಹಳ ಕಡಿಮೆ. ಒಂದಷ್ಟು ಜನರು ಡೆವೆಲಪರ್ ಗಳು ಹಲವು ಎಕರೆ ಜಾಗಗಳನ್ನು ಖರೀದಿಸಿ, ದೊಡ್ಡ, ಸಣ್ಣ ಎಂದೆಲ್ಲ ಮನೆಗಳನ್ನು ಕಟ್ಟಿ ಮಾರುವ ಕಾರಣ ಇಡೀ ಏರಿಯಾಗಳು ಒಂದೇ ರೀತಿ ಕಾಣುವ ಮನೆಗಳನ್ನು ಹೊಂದಿರುತ್ತವೆ. ಬಂಗಲೆ ಎಂದರೆ ದೊಡ್ಡ ಮನೆ ಎಂದು ತಿಳಿದಿದ್ದ ನನಗೆ ಬ್ರಿಟಿಷರ ಮಾತಿನಲ್ಲಿ ‘ಬಂಗಲೆ’ ಎಂದರೆ ಕೇವಲ ನೆಲದ ಅಂತಸ್ತಿನ ಮನೆ ಎಂಬ ತಿಳುವಳಿಕೆ ಬಂತು. ಅದೇ ರೀತಿ ಸಾಲು ಸಾಲು ಗಗನ ಚುಂಬಿ ಕಟ್ಟಡಗಳನ್ನು ನೋಡಿ ಸಿರಿವಂತಿಕೆ ಎಂದು ಕೊಳ್ಳುತ್ತಿದ್ದ ನನಗೆ ಅದು ಜಾಗವನ್ನು ಅಗ್ಗಗೊಳಿಸಿಕೊಳ್ಳಲು ಇರುವ ಒಂದು ಮಾರ್ಗ ಎಂಬ ಮಾಹಿತಿ ತಿಳಿಯಿತು. ಚಳಿಯ ದೇಶವಾದ ಕಾರಣ ಇಲ್ಲಿ ಮನೆಗಳನ್ನು ಕಟ್ಟುವ ರೀತಿ, ಕಿಟಕಿಗಳ ಲೆಕ್ಕಾಚಾರ, ಮನೆಗೆ ಗಾಳಿ ಬೆಳಕು ಬರುವ-ಹೋಗುವ ರೀತಿ ಎಲ್ಲವೂ ಭಿನ್ನ. ದೇಶ ಬೇರೆಯಾದ ಕಾರಣ ಮನೆಗಳ ಬಗೆಗಿನ ನನ್ನ ಎಲ್ಲ ಕಲ್ಪನೆಗಳನ್ನು ತಿದ್ದಿಕೊಳ್ಳಬೇಕಾಯಿತು.
21 ನೆಯ ಶತಮಾನದ ಈ ಕಾಲದಲ್ಲಿ ಕೂಡ ಇಲ್ಲಿನ ಬಹುತೇಕ ಮನೆಗಳಲ್ಲಿ ಅಗ್ಗಿಷ್ಟಿಕೆಗಳು, ಚಿಮ್ನಿಗಳೂ ಇರುತ್ತವೆ. ಬಹುತೇಕರ ಮನೆಗಳಲ್ಲಿ ಕಟ್ಟಿಗೆ ಇಟ್ಟು ಬೆಂಕಿ ಹಾಕದಿದ್ದರೂ, ಅದೇ ಮಾದರಿಯ ಫೈರ್ ಪ್ಲೇಸ್ ಗಳನ್ನು ನಿರ್ಮಿಸಿ ‘ವಿದ್ಯುತ್’ ಅಥವಾ ‘ಗ್ಯಾಸ್’ ಬಳಸಿ ಶಾಖ ಕಲ್ಪಿಸಿಕೊಳ್ಳುವ ವ್ಯವಸ್ಥೆಯಿರುತ್ತದೆ. ಮನೆಯ ಪ್ರತಿ ಕೋಣೆಯಲ್ಲಿಯಲ್ಲಿ ತರಾವರಿ ಹೀಟರುಗಳನ್ನು ಹೊಂದಿರುವ ಕಾರಣ ಅಗ್ಗಿಷ್ಟಿಕೆಗಳನ್ನು ಬಳಸುವ ಮಂದಿಯೂ ಕಡಿಮೆಯೇ. ಉರಿಯೇ ಹಾಕದಿದ್ದರೂ ಅಗ್ಗಿಷ್ಟಿಕೆಗಳನ್ನು, ಹೊಗೆ ಹೋಗದಿದ್ದರೂ ಚಿಮಣಿಗಳನ್ನು ಕಟ್ಟಿಕೊಳ್ಳುವ ಬ್ರಿಟಿಷರ ಮನೆಗಳನ್ನು, ಸಾಂಪ್ರದಾಯಿಕತೆಯನ್ನು ನೋಡಿ ಬಹುಬಾರಿ ಅಚ್ಚರಿಯಾಗಿದೆ. ಬ್ರಿಟಿಷರು ಶತಮಾನಗಳ ತಮ್ಮ ಹಲವು ಸಂಪ್ರದಾಯವನ್ನು ಹಾಗೆಯೇ ಉಳಿಸಿಕೊಳ್ಳುವುದನ್ನು ಹೇಳಲು ಇವೆಲ್ಲ ಉದಾಹರಣೆಗಳಷ್ಟೆ.
ಉಡುಪುಗಳ ವಿಚಾರ ಬಂದಾಗ ಕೂಡ ಇವರು ತಮ್ಮ ಹಳೆಯ ಸಂಪ್ರದಾಯಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಿತ್ತಿರುತ್ತಾರೆ. ಆದರೆ ಹಳೆಯ ಸಂಪ್ರದಾಯಗಳನ್ನು ಗೌರವಿಸುವ ಮತ್ತು ಮಾತು ಮಾತಿಗೆ ಹೊಸ ತಲೆಮಾರಿನವರನ್ನು ಜರಿದು ಮಾತಾಡುವ ಹಳೆಯ ತಲೆಮಾರಿನ ಮತ್ತು ಹೊಸ ತಲೆಮಾರಿನ ಬ್ರಿಟಿಷ್ ಜನರ ನಡುವೆ ಘರ್ಷಣೆಗಳಾಗುತ್ತಿರುತ್ತವೆ. ನನ್ನ 65 ವರ್ಷದ ಸಹೋದ್ಯೋಗಿಯೊಬ್ಬಳು ಹಳೆಯ ತಲೆಮಾರಿನವಳು. ಈಕೆ ಇತ್ತೀಚೆಗೆ ಯಾವುದೋ ರೆಸ್ಟೋರೆಂಟಿಗೆ ಹೋದಾಗ ಅಲ್ಲಿನ ಮಹಿಳಾ ಸಪ್ಲೈಯರ್ ಒಬ್ಬಳನ್ನು ನೋಡಿದ್ದಾಳೆ. ಬ್ರಿಟಿಷರು ತುಂಡು ಲಂಗಗಳನ್ನು ಧರಿಸಿದಾಗ ಕಾಲುಗಳಿಗೆ ತೆಳು ಪಾರದರ್ಶಕ ಸ್ಟಾಕಿಂಗ್ ಗಳನ್ನು ಧರಿಸುತ್ತಾರೆ. ಆದರೆ ಈ ಆಧುನಿಕ ಸಪ್ಲೈಯರ್ ಅಂತದ್ದನ್ನು ಧರಿಸಿರಲಿಲ್ಲವಂತೆ. ಇಂತಹವಳು ಏನನ್ನಾದರೂ ಸಪ್ಲೈ ಮಾಡಿದರೆ ತಿನ್ನಲು ಸಾಧ್ಯವೇ ಎನ್ನುವುದು ಇವಳ ಪ್ರಶ್ನೆ?!!
ಇದೇ ಸವಾಲನ್ನು ಆಕೆಯ ಪಕ್ಕದಲ್ಲೇ ಕುಳಿತಿದ್ದ ನನಗೂ ಕೇಳಿದಳು. ನೇರ ಮಾತಿನ ನಾನು “ಅವಳ ಕಾಲನ್ನು ಆರ್ಡರ್ ಮಾಡುತ್ತಿಲ್ಲ ಎನ್ನುವುದಾದರೆ ಅವಳು ಸಪ್ಲೈ ಮಾಡುವ ಊಟ -ತಿಂಡಿ ತಿನ್ನಲು ನನಗೇನೂ ಅಡ್ಡಿಯಿಲ್ಲ” ಎಂದು ಹೇಳಿದೆ. ಆಧುನಿಕ ತಲೆಮಾರಿನ ಇತರರು ಇಡೀ ದಿನ ಮುಸಿಮುಸಿ ನಕ್ಕು ಈ ಹಳೆಯ ತಲೆಮಾರಿನವಳನ್ನು ಗೇಲಿ ಮಾಡಿದರು. ಹಾಗೆಯೇ ಇವರು ತಮ್ಮ ತೂಕವನ್ನು “ಸ್ಟೋನ್” ಗಳ ಲೆಕ್ಕದಲ್ಲಿ ಹೇಳುತ್ತಾರೆ. ಒಂದು ಸ್ಟೋನ್ ಎಂದರೆ 6.35 ಕಿ.ಗ್ರಾಂ. ಗಳು! ಅದರಂತೆ ಔನ್ಸ್ ಮತ್ತು ಪೌಂಡುಗಳಲ್ಲಿ ಅಳತೆ ಮತ್ತು ತೂಕದ ಲೆಕ್ಕ ಹೇಳುತ್ತಾರೆ. ಕಿಲೋಮೀಟರುಗಳ ಬದಲು ಮೈಲುಗಳಲ್ಲಿ ದೂರವನ್ನು ಅಳೆಯುತ್ತಾರೆ. ಇವೆಲ್ಲ ಸಂಪ್ರದಾಯಗಳನ್ನು ಅಮೆರಿಕನ್ನರ ಪ್ರಭಾವದಿಂದಲೂ ರಕ್ಷಿಸಿಕೊಂಡಿದ್ದಾರೆ. ಶಾಲೆಗಳಲ್ಲಿ ಮಕ್ಕಳಿಗೆ ಇವತ್ತಿಗೂ ಕಲಿಸುತ್ತಾರೆ. ಹಾಗಾಗಿ ಇವೆಲ್ಲ ವ್ಯತ್ಯಾಸಗಳಿಗೂ ಒಗ್ಗಿಕೊಳ್ಳಬೇಕಾಯ್ತು.
ಉಡುಪುಗಳ ವಿಚಾರ ಬಂದಾಗ ಕೂಡ ಇವರು ತಮ್ಮ ಹಳೆಯ ಸಂಪ್ರದಾಯಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಿತ್ತಿರುತ್ತಾರೆ. ಆದರೆ ಹಳೆಯ ಸಂಪ್ರದಾಯಗಳನ್ನು ಗೌರವಿಸುವ ಮತ್ತು ಮಾತು ಮಾತಿಗೆ ಹೊಸ ತಲೆಮಾರಿನವರನ್ನು ಜರಿದು ಮಾತಾಡುವ ಹಳೆಯ ತಲೆಮಾರಿನ ಮತ್ತು ಹೊಸ ತಲೆಮಾರಿನ ಬ್ರಿಟಿಷ್ ಜನರ ನಡುವೆ ಘರ್ಷಣೆಗಳಾಗುತ್ತಿರುತ್ತವೆ.
ಬ್ರಿಟನ್ನಿನಲ್ಲಿ ಮನೆಗಳು ಮತ್ತು ಬಾಡಿಗೆ ಎಲ್ಲವೂ ಬಹು ದುಬಾರಿಯೇ. ಜೊತೆಗೆ ಹಲವು ದೇಶಗಳಿಗೆ ಹೋಲಿಸಿದರೆ ಬದುಕು ಕೂಡ ಬಹಳ ದುಬಾರಿ. ಸರ್ಕಾರಕ್ಕೆ ಕಟ್ಟುವ ಟ್ಯಾಕ್ಸ್ ಅಥವಾ ತೆರಿಗೆ ಕೂಡ ಬಹಳ ಹೆಚ್ಚಿನದು. ದುಡಿದ ದುಡ್ಡು ಯಾವ ಮೂಲದ್ದೇ ಆಗಲಿ ಅದರ ಮೇಲೆ ಇಲ್ಲಿನ ಸರ್ಕಾರ ಕಣ್ಣಿಟ್ಟಿರುತ್ತದೆ. ಬರೀ ದುಡಿಮೆಯಷ್ಟೇ ಅಲ್ಲ, ಒಬ್ಬ ವ್ಯಕ್ತಿ ಎಷ್ಟು ಖರ್ಚು ಮಾಡುತ್ತಾನೆ ಎಂಬುದರ ಆಧಾರದ ಮೇಲೆ ಕೂಡ ಆತನ ಆದಾಯವನ್ನು ಪ್ರಶ್ನಿಸಿ ಟ್ಯಾಕ್ಸ್ ವ್ಯವಸ್ಥೆ, ಸುಂಕ ಹೇರಬಲ್ಲದು. ಟ್ಯಾಕ್ಸ್ ಕಟ್ಟದೇ ಸಿಕ್ಕಿಬಿದ್ದಲ್ಲಿ ಗಂಭೀರ ಶಿಕ್ಷೆ ಇರುವ ಕಾರಣ ನೀತಿಯುಕ್ತವಾಗಿ ಟ್ಯಾಕ್ಸ್ ಕಟ್ಟಿ, ಉತ್ತಮ ಜೀವನ ಮಟ್ಟವನ್ನು ಕಾಯ್ದುಕೊಳ್ಳಲು ಇಲ್ಲಿನ ಜನರು ಬಹಳ ಹೆಣಗುತ್ತಾರೆ. ಹೆಚ್ಚು ದುಡಿದಂತೆಲ್ಲ ಹೆಚ್ಚು ತೆರಿಗೆ ಕಟ್ಟಬೇಕಾದ ಕಾರಣ ಹೆಚ್ಚು ದುಡಿಯಬಲ್ಲ ಹಲವರು ಒಂದು ಮಿತಿಯಲ್ಲಿ ಮಾತ್ರ ದುಡಿಯುತ್ತ ಮಿಕ್ಕ ಸಮಯವನ್ನು ವಿರಾಮವಾಗಿ ಕಳೆಯುತ್ತಾರೆ. ಕಡಿಮೆ ದುಡಿಮೆಯಿರುವವರು ವಾರದ ದಿನಗಳು ದುಡಿಮೆಗೆ ಸಾಲದೆಂದು ಗೊಣಗುತ್ತಾರೆ.
1203 ರಲ್ಲಿ ಇಂಗ್ಲೆಂಡಿನ ದೊರೆ ಕುರಿಯ ತುಪ್ಪಟದ ರಫ್ತಿನ ಮೇಲೆ ಸುಂಕ ಹೇರಿದನಂತೆ. ನಂತರ 1275 ರಲ್ಲಿ ವೈನ್ ದಂಧೆಯ ಮೇಲೆ ಮತ್ತೊಬ್ಬ ದೊರೆ ಸುಂಕ ಹೇರಿದನಂತೆ, ಮುಂದಿನ ಮುನ್ನೂರು ವರ್ಷಗಳಲ್ಲಿ ಈ ತೆರಿಗೆ ಹೇರುವ ಕ್ರಮಗಳು ಆಳರಸರ ಪ್ರಿಯ ವಿಷಯವಾಗಿ ನಾನಾ ತರದ ತೆರಿಗೆಗಳು ಹುಟ್ಟಿದವಂತೆ. ಆದರೆ ತೆರಿಗೆಯೇ ಸುಲಿಗೆಯಂತೆ ಕಾಣಲು ಶುರುಮಾಡಿದ ನಂತರ 1572 ರಲ್ಲಿ ಬಡ ಜನರನ್ನು ಈ ಸುಂಕಗಳ ಸಿಂಹದ ಬಾಯಿಂದ ರಕ್ಷಿಸಲು ಕಾನೂನು ಬಂದು 1628 ರಲ್ಲಿ ಇಂಗ್ಲೆಡ್ ಪಾರ್ಲಿಮೆಂಟು ಈ ಸುಲಿಗೆಯ ಸುಂಕ ಹೇರಿಕೆಯನ್ನು ಹತೋಟಿಗೆ ತಂದದ್ದನ್ನು ಚರಿತ್ರೆ ಹೇಳುತ್ತದೆ. ತಮಾಷೆಯೆಂದರೆ 1696 ರಲ್ಲಿ ಗ್ರೇಟ್ ಬ್ರಿಟನ್ ಒಂದು ಮನೆಗೆ ಎಷ್ಟು ಕಿಟಕಿಗಳಿವೆ ಎನ್ನುವ ಆಧಾರದ ಮೇಲೆ ಟ್ಯಾಕ್ಸ್ ಹಾಕುತ್ತಿತ್ತಂತೆ. ಈ ಪ್ರಕಾರ 10-20 ಕಿಟಕಿಯಿದ್ದರೆ 4 ಶಿಲ್ಲಿಂಗ್, 20 ಕ್ಕೂ ಹೆಚ್ಚು ಕಿಟಕಿಯಿದ್ದರೆ (ಶ್ರೀಮಂತಿಕೆಯ ಲಕ್ಷಣ) 8 ಶಿಲ್ಲಿಂಗ್ ಗಳ ಸುಂಕವನ್ನು ವಿಧಿಸುತ್ತಿತ್ತಂತೆ. ಉಳಿದಂತೆ ಪ್ರತಿ ಮನೆ 2 ಶಿಲ್ಲಿಂಗು ತೆರಿಗೆ ಕಟ್ಟಬೇಕೆಂಬುದು ನಿಯಮವಾಗಿತ್ತಂತೆ. ಇದು ಚರಿತ್ರೆಯಲ್ಲಿ ‘ಕಿಟಕಿ ಸುಂಕ’ ವೆಂತಲೇ ಪ್ರಸಿದ್ಧಿ. ಈ ತೆರಿಗೆ 156 ವರ್ಷಗಳ ಕಾಲ ಜಾರಿಯಲ್ಲಿತ್ತಂತೆ. ಇಂತಹ ಸುಂಕದಿಂದ ಪಾರಾಗಲು ಹಲವರು ತಮ್ಮ ಕಿಟಕಿಗಳನ್ನು ಮುಚ್ಚಿಸಿಬಿಡುತ್ತಿದ್ದರಂತೆ. ಚಳಿಯ ದೇಶವಾದ ಬ್ರಿಟನ್ನಿನ್ನಲ್ಲಿ ವರ್ಷದಲಿ ಆರು ತಿಂಗಳು ಬೆಳಕು ಬಹಳ ಕಡಿಮೆ. ಹಾಗಾಗಿ ಬೆಳಕಿಗೆಂದೇ ಇವರು ಹೆಚ್ಚು ಹೆಚ್ಚು ಕಿಟಕಿಗಳನ್ನು ಇಡುತ್ತಾರೆ. ಆದರೆ ‘ಕಿಟಕಿ ತೆರಿಗೆ’ಯನ್ನು ತಪ್ಪಿಸಲು ಹಲವರು ಇಂತಹ ಕಿಟಕಿಗಳನ್ನು ಮುಚ್ಚಿದ ಕಾರಣ ‘ಹಗಲು ಬೆಳಕಿನ್ನು ಕದ್ದ ಟ್ಯಾಕ್ಸ್’ ಎಂದೇ ಈ ತೆರಿಗೆಯನ್ನು ಕರೆದವರಿದ್ದಾರೆ.
ತದನಂತರ 1842 ರಲ್ಲಿ ಬಂದದ್ದು ‘ಇನ್ ಕಂ ಟ್ಯಾಕ್ಸ್’ ಎಂಬ ಹೊಸ ಸಿದ್ಧಾಂತ. 20 ನೆಯ ಶತಮಾನದವರೆಗೂ ಜನರಲ್ಲಿ ಈ ಬಗ್ಗೆಯೂ ಆಕ್ರೋಶ ಮನೆಮಾಡಿತ್ತು. ಈಗಿದು ಎಲ್ಲ ದೇಶಗಳಲ್ಲಿಯೂ ಇರುವ ವ್ಯವಸ್ಥೆ. ಇವತ್ತು ಬ್ರಿಟನ್ನು ದುಬಾರೀ ಸುಂಕ ಅಥವಾ ತೆರಿಗೆ ವಸೂಲು ಮಾಡುವ ದೇಶಗಳಲ್ಲಿ ಒಂದಾಗಿದೆ. ಇದೀಗ ಭಾರತದಲ್ಲಿ ತೆರಿಗೆಯ ನಿಯಮಗಳು ಬಿಗಿಯಾಗುತ್ತಿರುವ ಬಗ್ಗೆ ಜನರಲ್ಲಿ ಒಂದು ಬಗೆಯ ಆತಂಕವಿದೆ. ಅದಕ್ಕೆ ಕಾರಣಗಳು ಇಲ್ಲದಿಲ್ಲ. ಕಪ್ಪು ಹಣವೇ ಹೆಚ್ಚಿರುವ ದೇಶಗಳಲ್ಲಿ ತೆರಿಗೆ ಎನ್ನುವುದು ನಿಯತ್ತಾಗಿ ದುಡಿಯುವವರ ಮೇಲೆ ಮಾತ್ರ ಹೇರುವ ಭಾರದಂತೆ ಕಾಣುತ್ತದೆ. ಕಳ್ಳ ದುಡ್ಡಿಗೆ ಲೆಕ್ಕವಿರುವುದಿಲ್ಲ. ಹೀಗಾಗಿ ಅದು ಮತ್ತೆ ನಿಯತ್ತಾಗಿ ದುಡಿಯುವವರ ಮತ್ತು ಅಕ್ರಮವಾಗಿ ತೆರಿಗೆ ವಂಚಿಸುವವರ ನಡುವೆ ಬಹುದೊಡ್ಡ ಕಂದಕವಾಗಿ ಪರಿಣಮಿಸುತ್ತದೆ.
ಬಹು ನಿಯತ್ತಾಗಿ ತೆರಿಗೆ ವಸೂಲು ಮಾಡುವ ಬ್ರಿಟನ್ನಿನಲ್ಲಿ ತೆರಿಗೆಯನ್ನು ಸಣ್ಣ ಮತ್ತು ದೊಡ್ಡ ಎಲ್ಲ ರೀತಿಯ ದುಡಿಮೆಗೆ ಮತ್ತು ಉದ್ಯಮಗಳಿಗೆ ಅನ್ವಯಿಸುತ್ತಾರೆ. ಆದರೆ ಅತಿರೇಕವೆಂಬಂತ ತೆರಿಗೆಯ ಶಾಸನಗಳೂ ಇಲ್ಲಿವೆ. ಉದಾಹರಣೆಗೆ ತನ್ನ ಜೀವನವಿಡೀ ತೆರಿಗೆ ನೀಡಿ, ಪೈಸೆಗೆ ಪೈಸೆ ಕೂಡಿಟ್ಟು ಒಬ್ಬ ವ್ಯಕ್ತಿ ಸತ್ತ ನಂತರ ಆತನ ಮಕ್ಕಳು/ ಸಂಬಂಧಿಕರಿಗೆ £325.000 ಕ್ಕೂ ಹೆಚ್ಚಿನ ಆಸ್ತಿಯನ್ನು ಬಿಟ್ಟು ಹೋದಲ್ಲಿ ಬ್ರಿಟನ್ ‘ವಾರಸುದಾರಿಕೆಯ ಟ್ಯಾಕ್ಸ್’ ನ್ನು ಹಾಕುತ್ತದೆ. ನಿಗಧಿತ ಮೊತ್ತದ ಮೇಲಿನ ಆಸ್ತಿ/ ಆದಾಯದ ಮೇಲೆ ಶೇಕಡಾ 40% ಸುಂಕ ವಿಧಿಸುತ್ತದೆ. ಉತ್ತರಾಧಿಕಾರಿಯಾಗಿ ಪಡೆದುಕೊಳ್ಳುವ ಹಣಕ್ಕೆ ಬರುವ ಬಡ್ಡಿಗೆ, ಬಾಡಿಗೆಗೆ, ಲಾಭಗಳಿಗೆ ಮತ್ತೆ ಎಂದಿನಂತೆ ಸುಂಕ ವಿಧಿಸುತ್ತಾ ಹೋಗುತ್ತಾರೆ. ಹಾಗಾಗಿ ಇಲ್ಲಿನ ಸಮಾಜದಲ್ಲಿ ಮಕ್ಕಳಿಗಾಗಿ ಹೆಚ್ಚು ಉಳಿಸಿಟ್ಟುಹೋಗುವ ಪದ್ಧತಿಗಳು ಕಡಿಮೆಯಾಗುತ್ತಿವೆ. ಕೂಡಿಡುವ ಬುದ್ದಿಯ ಭಾರತೀಯರಿಗೂ ‘ಇನ್ಹೆರಿಟೆನ್ಸ್ ಟ್ಯಾಕ್ಸ್’ – ಇಲ್ಲಿ ಮಿತಿಗಳನ್ನು ನಿರ್ಮಿಸಿದೆ. ಈಗಾಗಲೇ ಒಮ್ಮೆ ತೆರಿಗೆ ನೀಡಿ ಉಳಿಸಿಕೊಂಡ ಹಣ ಮತ್ತು ಆಸ್ತಿ, ಒಬ್ಬ ವ್ಯಕ್ತಿಯ ಸಾವಿನ ನಂತರ ಮತ್ತೊಬ್ಬರಿಗೆ ಎಷ್ಟೇ ದೊಡ್ಡ ಮೊತ್ತದಲ್ಲಿ ಹೋದರೂ ಅದಕ್ಕೆ ತೆರಿಗೆಯಿರಬಾರದು ಎಂಬ ಬಹುಜನರ ಕೂಗಿಗೆ ಸರ್ಕಾರ ಕಿವಿಗೊಟ್ಟಿಲ್ಲ. ತೆರಿಗೆಯನ್ನು ಯಾವ ರೀತಿಯಲ್ಲೂ ವಂಚಿಸದಂತೆ ಸರ್ಕಾರ ಸದಾ ನಿಗಾ ಇಟ್ಟಿರುತ್ತದೆ. ಒಬ್ಬರು ದುಂದಾಗಿ ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆಂದರೆ ಮತ್ತೊಬ್ಬರು ಅವರನ್ನು ಶಂಕಿಸಿ ಸರ್ಕಾರಕ್ಕೆ ಮಾಹಿತಿಯನ್ನು ಒದಗಿಸುತ್ತಾರೆ. ಕೆಲವು ವರ್ಷಗಳ ಹಿಂದೆ, ಯಾವ ರೀತಿಯ ಶಂಕೆಗೂ ಬಾಧ್ಯಳಾಗಿರದ ಆಫ್ರಿಕಾ ಮೂಲದ ದಂತ ವೈದ್ಯೆಯೊಬ್ಬಳು ಸುದ್ದಿಯಾದಳು.
ತೆರಿಗೆಯೇ ಸುಲಿಗೆಯಂತೆ ಕಾಣಲು ಶುರುಮಾಡಿದ ನಂತರ 1572 ರಲ್ಲಿ ಬಡ ಜನರನ್ನು ಈ ಸುಂಕಗಳ ಸಿಂಹದ ಬಾಯಿಂದ ರಕ್ಷಿಸಲು ಕಾನೂನು ಬಂದು 1628 ರಲ್ಲಿ ಇಂಗ್ಲೆಡ್ ಪಾರ್ಲಿಮೆಂಟು ಈ ಸುಲಿಗೆಯ ಸುಂಕ ಹೇರಿಕೆಯನ್ನು ಹತೋಟಿಗೆ ತಂದದ್ದನ್ನು ಚರಿತ್ರೆ ಹೇಳುತ್ತದೆ. ತಮಾಷೆಯೆಂದರೆ 1696 ರಲ್ಲಿ ಗ್ರೇಟ್ ಬ್ರಿಟನ್ ಒಂದು ಮನೆಗೆ ಎಷ್ಟು ಕಿಟಕಿಗಳಿವೆ ಎನ್ನುವ ಆಧಾರದ ಮೇಲೆ ಟ್ಯಾಕ್ಸ್ ಹಾಕುತ್ತಿತ್ತಂತೆ.
ಆಕೆಯ ದುಬಾರಿ ಬಟ್ಟೆಗಳ, ಶೋಕಿಯ, ಪ್ರವಾಸಗಳ ಕಾರಣ ಯಾರೋ ಸುತ್ತ ಮುತ್ತಲ ಜನ ಶೀಟಿ ಹೊಡೆದಿದ್ದರು ( ತಿhisಣಟe bಟoತಿiಟಿg ) ಈಕೆ ಸುಂಕದ ಅಧಿಕಾರಿಗಳ ಕೆಂಗಣ್ಣಿಗೆ ಬಿದ್ದು ಆಕೆಯ ಮೇಲೆ ತನಿಖೆ ನಡೆಸಲಾಯ್ತು. ಹಣವನ್ನು ಅವ್ಯವಹಾರದ ಮೂಲಕ ಗಳಿಸಿ, ಸುಂಕ ವಂಚಿಸಿದ ಕಾರಣಕ್ಕೆ ಈಕೆ ಜೈಲನ್ನೂ ಸೇರಬೇಕಾಯ್ತು. ದುಬಾರಿ ಸುಂಕದ ಕಾರಣದಿಂದಲೂ ಬ್ರಿಟನ್ನಿನಲ್ಲಿ ಹೆಚ್ಚು ಬೇಗ ಶ್ರೀಮಂತರಾಗುವ ಸಾಧ್ಯತೆ ಬಹಳ ಕಡಿಮೆ. ಹೀಗಾಗಿ ಜನಸಾಮಾನ್ಯರು ಲಾಟರಿ ಹೊಡೆಯಲೆಂಬ ‘ಹೊಂಗನಸಿಗೆ’ ಆತು ಬೀಳುತ್ತಾರೆ.
ಈ ಸಮಾಜದಲ್ಲಿ ಜನರು ತಮ್ಮ ಅಂತ್ಯಕ್ರಿಯೆಗೂ ಬದುಕಿದ್ದಂತೆಯೇ ಹಣ ಕಟ್ಟಲು ತೊಡಗುವುದು ಕೂಡ ನನಗೆ ಆಶ್ಚರ್ಯ ತಂದಿದೆ. ಸಾಮಾನ್ಯವಾಗಿ ಐವತ್ತು ವರ್ಷದವರಾದ ಕೂಡಲೇ ಇವರು ತಮ್ಮ ಅಂತ್ಯ ಕ್ರಿಯೆಗೆ ಬೇಕಾದ ಕಫಿನ್, ತಲೆಗಲ್ಲು, ಅಂತ್ಯ ಕ್ರಿಯೆಯ ವಿಧಿಗಳು ಎಲ್ಲವನ್ನೂ ಖುದ್ದಾಗಿ ಹೋಗಿ ಆಯ್ಕೆಮಾಡಿ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ಪ್ರತಿ ತಿಂಗಳು ಹಣ ಕಟ್ಟುತ್ತ ಹೋಗುತ್ತಾರೆ.
ಟಿ. ವಿ. ಚಾನೆಲ್ ಗಳಲ್ಲಿ ಈ ಬಗ್ಗೆ ಬರುವ ಜಾಹೀರಾತುಗಳಿಗೆ ಲೆಕ್ಕವಿಲ್ಲ. ಇವತ್ತಿನ ಬ್ರಿಟನ್ ನಲ್ಲಿ ದಾಖಲಾದ ಎಲ್ಲ ಹುಟ್ಟುಗಳ ಲೆಕ್ಕಕ್ಕೆ ಶೇಕಡ 75% ಜನರು ತಮ್ಮ ದೇಹಗಳನ್ನು ಹೂಳದೆ, ಸುಡಲು ಆಗ್ರಹಿಸುವುದು ಪರಿಸರ ಕಾಳಜಿಯಿಂದ ಮತ್ತು ಕಡಿಮೆ ಖರ್ಚಿನ ಕಾರಣ ಎನ್ನುವ ಊಹೆಯಿದೆ. ಇನ್ನು ಕೇವಲ 25% ಜನರು ಮಾತ್ರ ದೇಹಗಳನ್ನು ಹೂಳಲು ಇಚ್ಚಿಸುತ್ತಾರೆ. ‘ಫ್ಯೂನೆರಲ್ ಸರ್ವಿಸಸ್’ ಎಂದು ಕರೆಸಿಕೊಳ್ಳುವ ಈ ಸಂಸ್ಥೆಗಳಿಗೆ ಸಾವಿನ ಸುದ್ದಿ ಹೋದಲ್ಲಿ ಮುಂದಿನ ಅಂತ್ಯಕ್ರಿಯೆಗೆ ಬೇಕಾದ ಎಲ್ಲ ಜವಾಬ್ದಾರಿಗಳನ್ನು ಈ ಸಂಸ್ಥೆಗಳು ವಹಿಸಿಕೊಳ್ಳುತ್ತಾರೆ. ತಮ್ಮ ಜೀವಿತ ಕಾಲದಲ್ಲಿ ದುಡಿದ ದುಡಿಮೆಯಲ್ಲಿಯೇ ತಮ್ಮ ಅಂತ್ಯಕ್ರಿಯೆಗೆ ಹಣ ಕಟ್ಟುವ ಈ ಸಮಾಜದ ಜನರು ತಮ್ಮ ಮಕ್ಕಳ ಅಥವ ಸಂಬಂಧಿಕರ ಮೇಲೆ ಈ ಜವಾಬ್ದಾರಿಗಳನ್ನು ಬಿಡುವುದಿಲ್ಲ. ಇನ್ನು ಹಣವಿಲ್ಲದೆ ಸತ್ತ ವ್ಯಕ್ತಿಗಳ ಅಂತ್ಯಕ್ರಿಯೆಯನ್ನು ಮಾತ್ರ ಸರ್ಕಾರ ಸರಳವಾಗಿ ನೆರವೇರಿಸುತ್ತದೆ. ನಮ್ಮ ಅಂತ್ಯಕ್ರಿಯೆಗಳಿಗೆ ಮಕ್ಕಳು, ಸಂಬಂಧಿಕರ ಮೇಲೆಯೇ ಅವಲಂಬಿತವಾಗಿರುವ ನಮ್ಮ ಸಮಾಜಕ್ಕಿಂತ ಇವರ ಪದ್ಧತಿ ಬಹಳ ಭಿನ್ನ. ಇಂತಹ ‘ಫ್ಯೂನರಲ್ ಡೈರೆಕ್ಟರ್ಸ್’ ಗಳ ಬಗ್ಗೆ ರಿವ್ಯೂಗಳನ್ನು ಕೂಡ ಓದಬಹುದು. ಇದನ್ನು ಸಂಬಂಧಿಕರು ಬರೆದಿರುತ್ತಾರೆ ಎಂದು ಬೇರೆ ಹೇಳಬೇಕಿಲ್ಲವಲ್ಲ!
ಇದೀಗ ಹೆಚ್ಚಾಗುತ್ತಿರುವ ಪರದೇಶದ ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸುವ ಸರಕಾರ ಆಯಾ ಧರ್ಮದ ಜನರು ಹೆಚ್ಚಿರುವ ಜಾಗಗಳಲ್ಲಿ ಅವರು ಪೂಜಿಸುವ ದೇವಸ್ಥಾನಗಳನ್ನು, ಮಸೀದಿಗಳನ್ನು, ಗುರುದ್ವಾರಗಳನ್ನು ಕಟ್ಟಿಕೊಳ್ಳಲು ಅನುಮತಿಯೊಂದಿಗೆ ಜಾಗ, ಸಹಾಯ ಮತ್ತು ಸಹಕಾರವನ್ನು ಕೊಟ್ಟಿದೆ. ಅಲ್ಲದೆ ಅವರವರ ಧಾರ್ಮಿಕ ನಂಬಿಕೆಗಳ ಅನುಸಾರ ಅಂತ್ಯಕ್ರಿಯೆಗಳನ್ನು ನೆರವೇರಿಸಿಕೊಳ್ಳಲು ಕೂಡ ಅನುವು ಮಾಡಿಕೊಡುತ್ತದೆ. ಆದರೆ ಈ ಎಲ್ಲ ಅಂತ್ಯಕ್ರಿಯೆಗಳೂ ಇಲ್ಲಿನ 1990 ರಲ್ಲಿ ಬಂದ ಪರಿಸರ ಕಾಯ್ದೆಗಳ ಅಡಿಯಲ್ಲಿ ಬರಬೇಕು ಎನ್ನುವುದು ನಿಯಮ. ಆ ಪ್ರಕಾರ ಏಶಿಯನ್ ಜನರಿಗಾಗಿ ಹಲವು ಏಶಿಯನ್ ಫ್ಯೂನರಲ್ ಸಂಸ್ಥೆಗಳು ಇಲ್ಲಿ ಕೆಲಸ ಮಾಡುತ್ತವೆ.
“ನಾವು ಹನ್ನೊಂದು ವರ್ಷಗಳಿಂದ ಕತಾರ್ ನಲ್ಲಿ ಕೆಲಸ ಮಾಡುತ್ತಿದ್ದೇವೆ, ಆದರೆ ಅಲ್ಲಿನ ಪ್ರಜೆಗಳಾಗುವುದಿರಲಿ, ಸತ್ತರೆ ದೇಹವನ್ನು ಹೂಳಲು ಭಾರತಕ್ಕೇ ಬರಬೇಕು”- ಎಂದು ಹೇಳುವ ನನ್ನ ಗೆಳತಿ ಗುಲ್ಝಾರ್ ಳ ಅಸಮಾಧಾನವನ್ನು ನೋಡಿದಾಗ ತನ್ನ ದೇಶದ ಪೌರತ್ವ ಪಡೆದ ಪ್ರತಿ ನಾಗರಿಕನೊಬ್ಬನ ಮೂಲಭೂತ ಮಾನವೀಯ ಹಕ್ಕುಗಳನ್ನು ಗೌರವಿಸುವ ಬ್ರಿಟನ್ ಸಭ್ಯ ದೇಶ ಎನ್ನಿಸುತ್ತದೆ.
ಮೊದಲು ಬಂದಾಗಿನ ಅಸ್ಥಿರತೆಯ, ಅಚ್ಚರಿಯ ಮತ್ತು ಅವಕಾಶದ ಮೂಲಕ ಹಾದುಹೋದ ಬದುಕಿನ ಹಲವು ವರ್ಷಗಳು ಕಳೆದು ಹೋದ ನಂತರ ಇಲ್ಲಿಯೇ ಹುಟ್ಟಿ ಬೆಳೆದ ನಮ್ಮ ಮಕ್ಕಳ ಭವಿಷ್ಯ, ಮರಳಿ ಹೋದಾಗ ಮತ್ತೆ ಹೊಂದಿಕೆಯಾಗಲು, ಸ್ಥಿರತೆ ಕಂಡುಕೊಳ್ಳಲು ಸವೆಸಬೇಕಾದ ಸಂಘರ್ಷ, ಸಮಯ ಇನ್ನೂ ಹಲವು ಸಾಮಾಜಿಕ, ಕೌಟುಂಬಿಕ ಮತ್ತು ವೃತ್ತಿಪರ ವಿಚಾರಗಳು, ಸ್ಪರ್ಧೆ ಮತ್ತು ಇನ್ನು ಕೆಲವೊಮ್ಮೆ ನಾವು ಸಮಯದಲ್ಲಿ ಕಂಡುಕೊಳ್ಳುವ ಅಪ್ಪಟ ಸತ್ಯಗಳ ಕಾರಣ ಬಹುತೇಕರು ಇಲ್ಲಿಯೇ ಉಳಿದುಬಿಡುತ್ತಾರೆ. ಅವರಲ್ಲಿ ನಾವೂ ಒಬ್ಬರಾಗಿ ಇವತ್ತು ಬೆರೆತುಹೋಗಿದ್ದೇವೆ. ಬಂದ ಕೆಲವು ವರ್ಷಗಳ ನಂತರ ದೂರದ ಈ ಹಸಿರು ಬೆಟ್ಟದಲ್ಲೂ ಹಲವು ನ್ಯೂನ್ಯತೆಗಳು ಕಾಣತೊಡಗಿದವು. ವಿಪರ್ಯಾಸವೆಂದರೆ ಮತ್ತೂ ಹಲವು ವರ್ಷಗಳ ನಂತರ ಅವು ಕಣ್ಮರೆಯಾಗತೊಡಗಿದವು! ಅಥವಾ ಈ ಸತ್ಯಗಳನ್ನು ಬದಿಗೆ ಸರಿಸಿ ಕೆಲವೊಮ್ಮೆ ಮರೆತಂತೆ, ಮತ್ತೊಮ್ಮೆ ತುಲನೆಯಲ್ಲಿ ಇಡುತ್ತ ಬದುಕತೊಡಗಿದೆವು. ಇದನ್ನೇ ಹೊಂದಾಣಿಕೆಯಾಗುವುದು ಎನ್ನುತ್ತಾರೇನೋ!
(ಮುಂದುವರಿಯುವುದು)
ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.