ಹೆಣದ ಎಂಜಲನ್ನು ಬಯಸುವವನು ಪಾಪಿ ಎಂದು ಪಾಠಕ ಮಹಾಶಯರಲ್ಲಿ ಅನೇಕರು ಮೇಲೆ ಹೇಳಿದ ನನ್ನ ಅವಸ್ಥೆಯನ್ನು ನೋಡಿ ಬಾಯೊಳಗೆನೇ ನಗಾಡಬಹುದು. ಅಂತಹರಿಗೆ ನಾನು ಒಂದು ಮಾತನ್ನು ಹೇಳಬೇಕೆಂದಿರುವೆನು. ಮನುಷ್ಯನ ಮರಣಕ್ಕೋಸ್ಕರವೇ ಮನಮರುಗುವವರು ಈ ಕಾಲದಲ್ಲಿ ಕಡಿಮೆ. ಸತ್ತವನು ನಮಗೇನೂ ಬಿಟ್ಟಿಲ್ಲ, ಕೊಟ್ಟಿಲ್ಲ, ಮುಂದೆ ನಮಗೇನು ಗತಿ? ಎಂದು ಅಳುವರಲ್ಲದೆ, ಸತ್ತವನ ಗತಿಯನ್ನು ಕುರಿತು ಒಬ್ಬರೂ ಲೆಕ್ಕಿಸುವುದಿಲ್ಲ. 
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು’ ಸರಣಿಯಲ್ಲಿ ಪಂಜೆ ಮಂಗೇಶರಾವ್  ಬರೆದ ಕತೆ “ನನ್ನ ಚಿಕ್ಕತಂದೆಯವರ ಉಯಿಲ್” ಈ ಭಾನುವಾರದ ನಿಮ್ಮ ಓದಿಗೆ.

 

ನನ್ನ ಚಿಕ್ಕತಂದೆಯವರಿಗೆ ನನ್ನೊಡನೆ ಉಳುಕೊಳ್ಳುವುದು ಸಮಾಧಾನವಾಗುತ್ತಿರಲಿಲ್ಲ. ನನ್ನ ಅಡಿಗೆಯವನಾದ ಮುದ್ದಣ್ಣನ ಬಲಾತ್ಕಾರಕ್ಕೆ ಅವರು ಒಂದು ತಿಂಗಳುವರೆಗೆ ನಮ್ಮೊಟ್ಟಿಗೆ ಇದ್ದರು. ಮುದ್ದಣ್ಣನು ಎಂದಿನಂತೆ ಅವರ ಪರಿಚಾರಕನಾಗಿದ್ದನು. ಕೊನೆಗೆ ಚಿಕ್ಕತಂದೆಯವರು ಊರುಬಿಟ್ಟು ಹೋಗುವ ಆಲೋಚನೆ ಮಾಡಿದರು. ಇದಕ್ಕೆ ಬಲವಾದ ಕಾರಣವಿತ್ತು. ಊರೊಳಗೆ ಪ್ಲೇಗ್ ರೋಗವು ಅಕಸ್ಮಾತ್ತಾಗಿ ಕಾಲುಹಾಕಿ, ಯುವಕರನ್ನೂ ಬಲಿಷ್ಟರನ್ನೂ ಕೊಂಡುಹೋಗುತ್ತಿತ್ತು. ಮನೆ ಮನೆಯಲ್ಲಿ ಇಲಿಗಳು ಸತ್ತು ಬಿದ್ದವು. ಇಲಿ ಬಿದ್ದ ಮನೆಗಳನ್ನು ಜನರು ಬಿಟ್ಟು ಓಡಿದರು. ಬಾಡಿಗೆ ಇಲ್ಲದೆ ದೊಡ್ಡ ದೊಡ್ಡ ಮನೆಗಳಲ್ಲಿ ಉಳುಕೊಳ್ಳುವುದಕ್ಕೆ ಬಡವರು ಮೊದಲು ಮಾಡಿದರು. ಈ ಸಮಯವನ್ನೇ ನೋಡಿಕೊಂಡು ಮನೆಯ ‘ಮಾಲೀಕರು’ ತಮ್ಮ ಮನೆಯ ಬಾಡಿಗೆಯನ್ನೂ ಕೊಡದೆ ಹಟಹಿಡಿದು ಉಳುಕೊಂಡಿದ್ದ ಜನಗಳನ್ನು ತಮ್ಮ ಮನೆಯಿಂದ ಓಡಿಸಿ ಬಿಡಲಿಕ್ಕೆ ಸತ್ತ ಇಲಿಗಳನ್ನು ಮನೆಯೊಳಗೆ ಹಾಕಿಬಿಟ್ಟರು. ದಿನಕ್ಕೆ ಹತ್ತರ ಪ್ರಕಾರ ಜನರು ಸಾಯತೊಡಗಿದರು. ಒಂದೆರಡು ದಿನಗಳಲ್ಲಿಯೇ ಈ ಸಂಖ್ಯೆ 50ಕ್ಕೆ ಮೀರಿತು.

ಎಲ್ಲರೂ ಒಕ್ಕಲು ತೆಗೆದರು. ಹಳ್ಳಿಪಳ್ಳಿಗೆ ಪಲಾಯನ ಮಾಡಿದರು. ಅಂಗಡಿಗಳನ್ನು ಮುಚ್ಚಿಬಿಟ್ಟರು. ಒಕ್ಕಲು ಹೋಗುವ ಅಂಗಡಿಕಾರರು ಉಳಿದವರು ಧೈರ್ಯದಿಂದ ವ್ಯಾಪಾರ ಮಾಡುವುದನ್ನು ನೋಡಿ ಸಹಿಸಲಾರದೆ ಕಂಡಕಂಡವರೊಡನೆ ‘ಅಂಗಡಿ ಬೀದಿಯಲ್ಲಿ ಎಲ್ಲಾ ಕಡೆಗಳಲ್ಲಿ ಇಲಿ ಬಿದ್ದಿವೆ’ ಎಂದು ಸಾರುತ್ತ ಹೋದರು. ಶಾಲೆಯ ಉಪಾಧ್ಯಾಯರು ಒಂದೆರಡು ದಿನ ‘ಡೆಸ್ಕುಗಳಿಗೂ’ ‘ಬೆಂಚುಗಳಿಗೂ’ ಪಾಠ ಹೇಳಿ, ಉಪಾಯವಿಲ್ಲದೆ ಹುಡುಗರಿಗೆ ಕೆಲಕಾಲ ರಜೆ ಕೊಟ್ಟರು. ಹೆಂಡತಿಯನ್ನು ತವರು ಮನೆಗೆ ಕಳುಹಿಸಿ ವಿರಹಪಡುತ್ತಿದ್ದ ‘ಹಜೂರ್ ಗುಮಾಸ್ತನು’ ತನ್ನ ಮನೆಯಲ್ಲಿ ಯಾರಿಗೋ ಜ್ವರವೆಂದು ಚೀಟನ್ನು ಕಳುಹಿಸಿ ನಿರಾಯಾಸವಾಗಿ ಹತ್ತು ದಿನಗಳ ರಜಾ ಪಡೆದು ಮಾವನ ಮನೆಗೆ ನಡೆದುಬಿಟ್ಟನು. ದಿನ ಕಳೆದಂತೆ ಬ್ರಾಹ್ಮಣರಿಗೂ ರೋಗ ಸೋಂಕಿತು. ಔಷಧವಿಲ್ಲದ ರೋಗಕ್ಕೆ ಯಾರು ತಾನೇ ಹೆದರದೆ ಇರುವರು? ಕವಿರಾಜ ಗೋವರ್ಧನರು ಈ ರೋಗಕ್ಕೆ ಔಷಧವನ್ನು ಕಂಡುಕೊಂಡಿರುವೆನೆಂದು ಹೇಳಿ, ಕಲ್ಲುಸಕ್ಕರೆ ಬೆರೆಯಿಸಿದ ಹರಳೆಣ್ಣೆಯ ಸೀಸೆಗೆ ‘ಛಾಪೆಯ ಟಿಕೆಟ್’ ಒಂದನ್ನು ಹಚ್ಚಿ, ಮಾರಾಟದಿಂದ 300 ರೂಪಾಯಿ ಕೂಡಿಸಿಬಿಟ್ಟರು. ಜನರೆಲ್ಲರೂ ಭೀತರಾದರು. ದೇವಾಲಯಗಳಲ್ಲಿ ಪೂಜೆ ಪ್ರಸಾದಗಳು ನಡೆದುವು. ದೇವರೊಡನೆ ಮೀಸಲಿಟ್ಟು ಪರಿಹಾರವನ್ನು ಕೇಳಿದರು. “ಸತ್ತು ಹೋದವರೆಲ್ಲಾ ನನ್ನ ಬಳಿಗೆ ಸೇರಿದರು. ಅತ್ತು ಪ್ರಯೋಜನವಿಲ್ಲ” ಎಂದು ದರ್ಶನಕಾಲದಲ್ಲಿ ದೇವರ ಉತ್ತರವು ಸಿಕ್ಕಿತು. ಇಂಗ್ಲೀಷ ಕಲಿತ ಹಲವು ಮಹನೀಯರು ‘ದಾಕು ಹಾಕಿಸಿ’ ಕೊಂಡರು. ಆದರೂ ರೋಗದ ಹಾವಳಿ ಒಂದಿಷ್ಟಾದರೂ ಕಡಿಮೆಯಾಗಲಿಲ್ಲ. ಅಲ್ಲಲ್ಲಿ ‘ಪಾಸ್ ಪೋರ್ಟುಗಳನ್ನು’ ದಾರಿಗರಿಗೆ ಕೊಡುವುದಕ್ಕೆ ಶಿಬಂದಿಯನ್ನು ಒದಗಿಸಿದರು. ಆದರೂ ರೋಗವು ವೃದ್ಧಿಯಾಗುತ್ತ ಹೋಯಿತು.

ಈ ಆಪತ್ಕಾಲದಲ್ಲಿ ನನ್ನ ಚಿಕ್ಕತಂದೆಯವರು ಏನು ಮಾಡಬೇಕೆಂದು ತಿಳಿಯಲಾರದೆ ಹೋದರು. “ಮುದುಕರಿಗೆ ಈ ರೋಗವು ಸೋಂಕಲಾರದು” ಎಂದು ಒಬ್ಬಿಬ್ಬರು ಅವರನ್ನು ಸಮಾಧಾನಪಡಿಸಿದ್ದರು. ಆದರೆ ತಾನು ಮುದುಕನಲ್ಲವೆಂದು ತಾನು ಆಂತರ್ಯದಲ್ಲಿ ತಿಳಿದುದರಿಂದ, ಅನ್ಯರ ಮಾತುಗಳಿಂದ ಅವರ ಮನಸ್ಸಿಗೆ ಶಾಂತಿ ಉಂಟಾಗುತ್ತಿರಲಿಲ್ಲ. ಕೆಲವರು ಇವರನ್ನು ಸಾಯಂಕಾಲದಲ್ಲಿ ನೋಡಿ, “ಅಯ್ಯಾ! ಮುಖವು ಇಳಿದು ಹೋಗಿದೇನು?” ಎಂದು ಕೇಳುತ್ತಿದ್ದರು. ಪ್ರತ್ಯುತ್ತರವಾಗಿ ಮತ್ತೊಬ್ಬರು “ನನ್ನ ಚಿಕ್ಕಪ್ಪಯ್ಯನವರಿಗೆ ಬೇಸರ. ಹೋದವಾರ ಅವರು ಕಳೆದುಕೊಂಡ ಒಂದು ಆಣೆ ಇನ್ನೂ ಸಿಕ್ಕಲಿಲ್ಲವಂತೆ” ಎಂದು ಹೇಳುತ್ತಿದ್ದರು. ಅವರ ಹಿತಚಿಂತಕರಲ್ಲಿ ಯಾರೊಬ್ಬರು ದೂರದಲ್ಲಿದ್ದು ಇವರೊಡನೆ “ಮೈಯ್ಯಲ್ಲಿ ಆಲಸ್ಯವೇ? ಜ್ವರವುಂಟೇ?” ಎಂದು ಕೇಳುತ್ತಲೇ ನನ್ನ ಚಿಕ್ಕತಂದೆಯವರು ಸಿಟ್ಟಿಗೆದ್ದು ಬಾಯೊಳಗೆ ಅವರನ್ನು ಶಪಿಸುತ್ತಿದ್ದರು. ನಮ್ಮ ಮನೆಗೆ ತಿಂಗಳಿಗೊಮ್ಮೆ ಬರುತ್ತಿದ್ದ ಕಟ್ಟಿಗೆ ಸಾವಕಾರ ಅಣ್ಣಪ್ಪ ಗೌಡರು ನಾನು ಇಲ್ಲದ ವೇಳೆಯಲ್ಲಿ ಮನೆಗೆ ಬಂದು ನನ್ನ ಚಿಕ್ಕತಂದೆಯವರೊಡನೆ, “ಕಟ್ಟಿಗೆ ಬೇಕಿತ್ತೇ?” ಎಂದು ಕೇಳಿ, ಇವರ ಬೈಗಳನ್ನು ತಲೆಯ ಮೇಲೆ ಹೊತ್ತುಕೊಂಡು ಹೋದರಂತೆ. ಆದರೂ ಚಿಕ್ಕತಂದೆಯವರು ಎದೆಗುಂದದೆ ಕೆಲವು ದಿವಸಗಳವರೆಗೆ ಊರಲ್ಲೇ ಇದ್ದರು. ಕೊನೆಗೆ ನಮ್ಮ ಅಗ್ರಹಾರದ ಬಳಿಯಲ್ಲಿ ಗೋಪಿವಲ್ಲಭಾಚಾರ್ಯರು ಎಂಭತ್ತು ವರ್ಷ ಪ್ರಾಯದಲ್ಲಿ ಪ್ಲೇಗ್ ತಗಲಿ ಸತ್ತರೆಂಬ ವರ್ತಮಾನವನ್ನು ಕೇಳುತ್ತಲೇ ನನ್ನ ಚಿಕ್ಕತಂದೆಯವರ ಮರಣ ಭೀತಿಗೆ ಪಾರವಿಲ್ಲದೆ ಹೋಯಿತು. ಈ ಮರಣದ ಮರುದಿನವೇ ನನ್ನ ಚಿಕ್ಕತಂದೆಯವರು ಎಲ್ಲಿಯೋ ಅದೃಶ್ಯರಾದರು.

ಭಾನುವಾರ ಮಧ್ಯಾಹ್ನ ನಾನು ಸಕಲಾವತಿಯೊಡನೆ ಚಿಕ್ಕತಂದೆಯವರ ಪ್ರಸ್ಥಾನವನ್ನು ಕುರಿತು ವಿಚಾರಿಸುತ್ತ ಕುಳಿತಿದ್ದೆನು. ಅಷ್ಟರಲ್ಲಿ ಮುದ್ದಣ್ಣನು ಒಂದು ಸರಕಾರಿ ಕಾಗದವನ್ನು ನನ್ನ ಕೈಯಲ್ಲಿ ಇಟ್ಟನು. ಕಾಗದವು ಈ ಪರಿಯಾಗಿತ್ತು.

“ಶನಿವಾರದಿನ ನಿಮ್ಮ ಮನೆಯಿಂದ ಹೊರಟು ಬಂದಿದ್ದ ಚಿಕ್ಕಪ್ಪಯ್ಯ ಯಾನೆ ಜೋಗಪ್ಪಯ್ಯನು ಈ ‘ಸ್ಟೇಶನ್ನಿಗೆ’ ‘ಪಾಸ್ ಪೋರ್ಟ್’ ತೆಗೆದುಕೊಳ್ಳಲಿಕ್ಕೆ ಬಂದ ಕಾಲದಲ್ಲಿ ಪ್ಲೇಗ್ ಸೋಂಕಿದ ಚಿಹ್ನೆಗಳನ್ನು ತೋರಿಸಿದುದರಿಂದಲೂ, ಸೊಂಟವನ್ನು ಮುಟ್ಟಿ ನೋಡುವುದಕ್ಕೆ ಬಿಡದಿದ್ದ ಕಾರಣದಿಂದಲೂ ಅವರನ್ನು ಇಲ್ಲಿ ತಡಸಿರುತ್ತೇವೆ. ಅವರ ಸ್ಥಿತಿಯು ಬಹಳ ಭಯಂಕರವಾಗಿದೆ. ಪ್ಲೇಗಿನ ಗುಡಿಸಲುಗಳಲ್ಲಿ ಯಾರೊಬ್ಬ ಪ್ರಯಾಣಿಕನು ಸತ್ತಪಕ್ಷಕ್ಕೆ ಸತ್ತವನ ವಾರಿಸ್ದಾರರಿಗೆ ಕೂಡಲೇ ವರ್ತಮಾನ ತಿಳಿಸಬೇಕೆಂದು ಸರಕಾರಿ ಹುಕುಂ ಇರುವುದರಿಂದ, ಅವರ ಆಸ್ಥೆಯನ್ನು ಅವರ ಮರಣದ ಮುಂಚೆಯೇ ನಿಮಗೆ ತಿಳಿಸಿರುತ್ತೇವೆ.

(ಸಹಿ) ಎಸ್. ಪಿ. ಬಂಗರ್ ಸನ್
ಡಿಸ್ಟ್ರಿಕ್ಟ್ ಕಲೆಕ್ಟರ್ ಒಫ್
ಪಾಸ್ ಪೋರ್ಟ್ಸ್

ಈ ಕಾಗದವನ್ನು ಓದುತ್ತಲೇ ನಾನು ‘ಸ್ಟೇಶನ್ನಿ’ಗೆ ಹೊರಟೆನು. ಸಕಲಾವತಿಯು ನಾನು ಹೋಗುವುದನ್ನು ಅಡ್ಡೈಸುತ್ತ, ಮನಸ್ಸಿನಲ್ಲಿಯೇ ಏನನ್ನೋ ಗುಣುಗುಟ್ಟುತ್ತಿದ್ದಳು. ಮುದ್ದಣ್ಣನು ತಾನೂ ಬರುತ್ತೇನೆಂದು ಹೇಳಿ ಹೊರಟನು.

ನಾನು ‘ಪ್ಲೇಗ್ ಸ್ಟೇಶನನ್ನು’ ಮುಟ್ಟುವಾಗ ಸಾಯಂಕಾಲ ಆರು ಗಂಟೆ ಹೊಡೆದಿತ್ತು. ಚಿಕ್ಕತಂದೆಯವರು ತೆಂಗಿನ ಎಲೆಯ ಗುಡಿಸಲಿನಲ್ಲಿ ಮಲಗಿದ್ದರು. ಅವರನ್ನು ದೂರದಿಂದಲೇ ನಾವು ನಿಂತು ನೋಡಿದೆವು. ಚಿಕ್ಕತಂದೆಯವರು ನಮ್ಮನ್ನು ನೋಡಿ ನಗಾಡಿದರು. “ಈ ಪಾಪಿಗಳು ನನಗೆ ಪ್ಲೇಗ್ ಸೋಂಕಿದೆ ಎಂದು ಸುಳ್ಳುಮಾಡಿ, ನನ್ನನ್ನು ನಾನಾ ರೀತಿಯಲ್ಲಿ ಉಪದ್ರಪಡಿಸುವರು,” ಎಂದು ನನ್ನೊಡನೆ ಮೊರೆಯಿಟ್ಟರು. ಅವರ ಮಾತುಗಳ ಸ್ವರವೇ ಬೇರೆಯಾಗಿತ್ತು. ನನಗೆ ಹತ್ತಿರ ಹೋಗಲು ಧೈರ್ಯಸಾಲಲಿಲ್ಲ.

“ಜ್ವರವುಂಟೇ?” ಎಂದು ನಾನು ಕೇಳಿದೆನು.

ಚಿಕ್ಕತಂದೆ :- “ಜ್ವರ? ಯಾರಿಗೆ ಜ್ವರ? ನನಗೆ ಸ್ವಲ್ಪ ಚೈತನ್ಯ ಕಡಿಮೆಯಾಗಿದೆ. ಈ ಬಡ್ಡಿಮಕ್ಕಳು ನನ್ನಿಂದ ಇಪ್ಪತ್ತು ರೂಪಾಯಿ ಹಾರಿಸಬೇಕೆಂದು ಇದ್ದರು. ಅದನ್ನು ನಾನು ಕೊಡದೆ ಹೋದ್ದರಿಂದ, ಇಷ್ಟು ಸಂಕಷ್ಟಕ್ಕೆ ನನ್ನನ್ನು ಗುರಿಮಾಡಿದರು.”

ಅಷ್ಟರಲ್ಲಿ ಕಾವಲಿದ್ದ ಪೋಲೀಸಿನವನು ನನ್ನ ಹತ್ತಿರ ಬಂದು, “ಅಯ್ಯಾ! ಪ್ಲೇಗ್ ರೋಗದಲ್ಲಿ ಮರಣಕ್ಕೆ ಮೊದಲು ರೋಗಿಯು ಸರಿಯಾಗಿ ಮಾತನಾಡುವನು. ಬುದ್ಧಿ ಭ್ರಂಶತೆ ಏನೇನೋ ಇರುವುದಿಲ್ಲ” ಎಂದನು.

ಈ ಮಾತುಗಳನ್ನು ಕೇಳಿ ಚಿಕ್ಕತಂದೆಯವರು “ಓಹೋ! ನಾನು ಸಾಯಲಾರೆನು. ನಾನು – ಓ ಕೆಂಪು ಮುಂಡಾಸ್! ನಾನು ನಿಮ್ಮ ಸಾವನ್ನು ನೋಡಿದ ಹೊರತು ಸಾಯಲಾರೆನು” ಎಂದು ಹೇಳಿ ಗುಡಿಸಲಿನ ಹೊರಬರುವುದಕ್ಕೆ ಪ್ರಯತ್ನಿಸುತ್ತಿದ್ದರು.

“ರೋಗಿಗೆ ವಾಂತಿಯಾಗಿದೆ” ಎಂದು ಹೇಳಿ ಜಮೇದಾರನು ಒಂದು ಬಟ್ಟಲನ್ನು ರೋಗಿಯ ಇದಿರಿಗೆ ತಂದಿಟ್ಟನು. ರೋಗಿಯು ಅದನ್ನು ಬಿಸಾಡಿಬಿಟ್ಟನು; ಬಟ್ಟಲು ಚೂರು ಚೂರಾಯಿತು. “ಜ್ವರವು ರೋಗಿಯ ತಲೆಗೆ ಏರುತ್ತ ಬಂದಿದೆ. ಈಗ ರೋಗಿಯೊಡನೆ ನೀವು ಮಾತನಾಡುವುದು ಸರಿಯಲ್ಲ” ಎಂದು ಪೋಲೀಸಿನವನು ನನಗೆ ಚಿಕ್ಕತಂದೆಯವರೊಡನೆ ಮಾತನಾಡಗೊಡಿಸದೆ ಹೋದನು.

ನಾನು ಬಂಡಿಯನ್ನು ಹತ್ತಿ ಡಾಕ್ಟರನು ಇದ್ದೆಡೆಗೆ ಹೋಗಿ ವಿಚಾರಿಸಿದೆನು. ಡಾಕ್ಟರನು ಹಿಂದಿನ ರಿಪೋರ್ಟನ್ನು ನೋಡಿ, ಚಿಕ್ಕತಂದೆಯವರಿಗೆ ‘ಪ್ಲೇಗ್’ ಸೋಂಕಿದೆ ಎಂದು ದೃಢಪಡಿಸಿದನು. ಈ ಮಾತಿನಿಂದ ನನಗೆ ಸಂತೋಷವಾಯಿತೋ ಸಂತಾಪವಾಯಿತೋ ಈಗ ಹೇಳಲು ಬರುವುದಿಲ್ಲ. ನಾನು ಓಡತೊಡಗಿದೆನು. ಮನೆಗೆ ಹೋಗಿ ಸಕಲಾವತಿಗೆ ಇದನ್ನೆಲ್ಲಾ ನಾನು ತಿಳಿಸುತ್ತಲೇ, ಅವಳು ಬೆಚ್ಚಿಬಿದ್ದಳು. ನಾನು ಮರಳಿ ಅಲ್ಲಿಗೆ ಹೋಗಬಾರದೆಂದು ತನ್ನ ಮೇಲೆ ಆಣೆ ಇಟ್ಟು ನನ್ನನ್ನು ಬೇಡಿದಳು.

“ಚಿಕ್ಕತಂದೆ ಬದುಕುವುದೂ ಸಾಯುವುದೂ ದೇವರ ಇಚ್ಛೆ. ಅವರ ಕಡೆಗಾಲದಲ್ಲಿ ನಾನು ಅವರ ಹಾಸಿಗೆಯ ಹತ್ತಿರವಿಲ್ಲದಿದ್ದರೆ, ಜನಗಳು ಏನೆನ್ನುವರು?”

“ಹಾಸಿಗೆಯ ಹತ್ತಿರ ಹೋಗುವುದುಂಟೇ? ಅಯ್ಯೋ! ಜನಗಳು ಬಾಯಿಗೆ ಬಂದಂತೆ ಹರಟುವರು. ಅದು ಹೋಗಲಿ! ಪರರ ಮರಣವನ್ನು ನೋಡಿದರೆ, ಉಳಿದವರು ವೈರಾಗ್ಯ ಮನಸ್ಕರಾಗುವರಂತೆ. ಇದು ನಿಜವೇ?” ಎಂದು ಸಕಲಾವತಿಯು ಭೀತಿಯಿಂದ ಕೇಳಿದಳು.

“ವೈರಾಗ್ಯವು ಬರಬೇಕಾದರೆ ಮೊದಲು ಸಂಸಾರ ಜ್ಞಾನವು ಪೂರ್ಣವಾಗಬೇಕು. ಪ್ರಕೃತದಲ್ಲಿ ವೈರಾಗ್ಯವನ್ನು ಹೊದ್ದುಕೊಂಡ ಸಂತ ಪುರುಷರೆಲ್ಲರು ಸಂಸಾರ ಸಾಗರವನ್ನು ಈಸಿಕೊಂಡು, ಸೋತುಹೋಗಿ ವೈರಾಗ್ಯ ತೀರವನ್ನು ಸೇರಿದರು. ಮರಣವನ್ನು ನೋಡಿದರೆ ಶ್ಮಶಾನ ವೈರಾಗ್ಯವು ಕೆಲವರಿಗೆ ಉಂಟಾಗುವುದು. ಅಂಥ ಮರಣದಿಂದ ಧನಪ್ರಾಪ್ತಿಯಾಗುವುದೂ ಉಂಟು. ಅನೇಕರು ಈ ವೈರಾಗ್ಯವನ್ನು ಆಶಿಸುವರು.”

ಇಂತಹ ಸಂಭಾಷಣೆಯಿಂದಲೂ ಸುಖಸಲ್ಲಾಪದಿಂದಲೂ ನಾನು ಸಕಲಾವತಿಯ ಮನಸ್ಸನ್ನು ರಂಜಿಸುತ್ತ, ಅವಳ ಅಪ್ಪಣೆಯನ್ನು ಹೊಂದಿ, ರಾತ್ರಿಯೇ ಚಿಕ್ಕತಂದೆಯವರಿದ್ದ ‘ಪಾಸ್ ಪೋರ್ಟ್ ಸ್ಟೇಶನಿಗೆ’ ನಡೆದೆನು.

ನಾನು ‘ಪ್ಲೇಗ್ ಸ್ಟೇಶನನ್ನು’ ಮುಟ್ಟುವಾಗ ಸಾಯಂಕಾಲ ಆರು ಗಂಟೆ ಹೊಡೆದಿತ್ತು. ಚಿಕ್ಕತಂದೆಯವರು ತೆಂಗಿನ ಎಲೆಯ ಗುಡಿಸಲಿನಲ್ಲಿ ಮಲಗಿದ್ದರು. ಅವರನ್ನು ದೂರದಿಂದಲೇ ನಾವು ನಿಂತು ನೋಡಿದೆವು. ಚಿಕ್ಕತಂದೆಯವರು ನಮ್ಮನ್ನು ನೋಡಿ ನಗಾಡಿದರು. “ಈ ಪಾಪಿಗಳು ನನಗೆ ಪ್ಲೇಗ್ ಸೋಂಕಿದೆ ಎಂದು ಸುಳ್ಳುಮಾಡಿ, ನನ್ನನ್ನು ನಾನಾ ರೀತಿಯಲ್ಲಿ ಉಪದ್ರಪಡಿಸುವರು,” ಎಂದು ನನ್ನೊಡನೆ ಮೊರೆಯಿಟ್ಟರು.

ನನ್ನ ಚಿಕ್ಕತಂದೆಯವರಿಗೆ ಸೋಂಕಿದ ರೋಗವು ಪ್ಲೇಗ್ ಎಂದು ನಿಷ್ಕರ್ಷೆಯಾಯಿತು. ನಾನು ‘ಪ್ಲೇಗ್ ಸ್ಟೇಶನಿಗೆ’ ಮುಟ್ಟಿದಾಗ ರಾತ್ರಿ 8 ಘಂಟೆ ಹೊಡೆದಿತ್ತು. ಚಿಕ್ಕತಂದೆಯವರು ನಿದ್ದೆಹೋಗಿದ್ದರು. ಅದು ಅಲ್ಪ ನಿದ್ರೆಯೋ ದೀರ್ಘ ನಿದ್ರೆಯೋ ಎಂದು ಪರೀಕ್ಷಿಸಲು ಹತ್ತಿರ ಹೋಗುವಷ್ಟು ನಾನು ಧೈರ್ಯಗೊಳ್ಳಲಿಲ್ಲ. ನಾನು ರೋಗಿಯನ್ನು ಮುಟ್ಟಬಾರದೆಂದು ಸಕಲಾವತಿಯು ತನ್ನ ಮೇಲೆ ಆಣೆಯಿಟ್ಟು ನನಗೆ ಅಪ್ಪಣೆ ಮಾಡಿದ್ದಳು. ಮುದ್ದಣ್ಣನು ‘ಸ್ಟೇಶನಿನ’ ಹೊರಕ್ಕೆ ಚಿಂತೆಯಿಂದ ತಲೆಬಗ್ಗಿಸಿಕೊಂಡು ಕುಳಿತಿದ್ದನು. ಮುಪ್ಪಿನಲ್ಲಿ ದತ್ತಕ್ಕೆ ಪಡೆದುಕೊಂಡ, ಗಡ್ಡ ಮೀಸೆ ಬಂದ ಚಿಕ್ಕ ಮಗುವು ಸಾಕುತಂದೆಯ ಅನಿವಾರ್ಯವಾದ ಮರಣವನ್ನು ನೋಡಿ ಕಣ್ಣೀರು ಬಿಡುವಂತೆ, ಮುದ್ದಣ್ಣನು ತನ್ನೊಳಗೇನೇ ಮರುಗುತ್ತಿದ್ದನು. ‘ಪೋಲೀಸ್ ಜಮೇದಾರನು’ ಸಂಸಾರದ ನಶ್ವರತೆಯನ್ನು ಕುರಿತು ಮುದ್ದಣ್ಣನಿಗೆ ಉಪದೇಶ ಮಾಡುತ್ತಿದ್ದನು. “ಚಿಕ್ಕತಂದೆಯವರಿಗೆ ಹೇಗುಂಟು?” ಎಂದು ನಾನು ಜಮೇದಾರನೊಡನೆ ವಿಚಾರಿಸಿದೆನು. “ಸಾಯಂಕಾಲದವರೆಗೆ ಸರಿಯಾಗಿ ಮಾತನಾಡುತ್ತಿದ್ದರು. ಈಗ ಕೊಂಚ ಪ್ರಜ್ಞೆ ತಪ್ಪಿದೆ” ಎಂದು ಜಮೇದಾರರು ಹೇಳಿ ಸುಮ್ಮನಾದನು. “ಎಲ್ಲವೂ ದೈವೇಚ್ಛೆ” ಎಂದು ಹೇಳಿ ನಾನು ಅಲ್ಲಿಯೇ ಕುಳಿತುಬಿಟ್ಟೆನು. ಚಿಕ್ಕತಂದೆಯವರು ನಮ್ಮನ್ನೆಲ್ಲಾ ಬಿಟ್ಟುಹೋಗುವರು ಎಂಬ ಚಿಂತೆ ನನ್ನ ಮನಸ್ಸನ್ನು ತೊಂದರೆಗೊಳಿಸಲಿಲ್ಲ. ಅವರು ಒಂದು ವೇಳೆ ಜಗಲಿ ಬಿಟ್ಟು ಗಗನಕ್ಕೆ ಹಾರಿದರೂ ಅವರ ಶ್ಮಶಾನ ಕ್ರಿಯೆಗಳು ದಯಾಳುವಾದ ಸರಕಾರದಿಂದ ಸಾಗಿಸಲ್ಪಡುವುವು ಎಂಬ ನಿಶ್ಚಯವಿತ್ತು. ಅವರ ಉತ್ತರಕ್ರಿಯೆಗಳಿಗೋಸ್ಕರ ನನ್ನನ್ನು ಭಟ್ಟರು, ಮಾದಿಗರು ಚರ್ಮ ಸುಲಿದಂತೆ ಸುಲಿದುಬಿಡುವರೋ ಎಂಬ ದುಃಖವು ವಿಪರೀತವಾಗಿತ್ತು. “ಗಂಡನ ಸಾವು ಒಂದು, ಮುಂಡೆಯ ಗಾಯ ಒಂದು.” ಅನ್ಯರ ಮರಣದಿಂದ ಮಹತ್ವವುಂಟಾಗುವುದಾದರೆ ಇಂತಹ ಸಂಸ್ಕಾರಗಳಲ್ಲಿ ಹಣವನ್ನು ವೆಚ್ಚಮಾಡಲು ಬೇಸರ ಬರುವುದಿಲ್ಲ. ನಾನು ಹತಭಾಗ್ಯನು, ಮರಣದಿಂದ ಮಹತ್ವ ಎಂಬ ಮಾತು ನನ್ನಲ್ಲಿ ಸರಿಹೋಗುವುದೋ ಇಲ್ಲವೋ ಹೇಳಬರುವುದಿಲ್ಲ. ಇತ್ತಲಾಗೆ ಪರರ ಮರಣದಿಂದ ನಮ್ಮ ಊರಲ್ಲಿ ಅನೇಕರು ಪ್ರಯೋಜನ ಹೊಂದಿದರೆಂಬುದು ನಿಜ. ಮಧ್ವರಾಯರ ಮರಣದಿಂದ ರಾಮಸೆಟ್ಟರಿಗೆ ನಿರಾಯಾಸವಾಗಿ ಸಿಕ್ಕಿತು ಅವರ ‘ವಿಮೆಯ’ ಹೊನ್ನು. ಗಿರಿಧರಾಚಾರ್ಯರ ಮರಣದಿಂದ ಶ್ಯಾಮರಾಯರಿಗೆ ತೊಂದರೆ ಇಲ್ಲದೆ ಸಿಕ್ಕಿತು ವಿಧವೆಯಾದ ಹೆಣ್ಣು. ಹೊನ್ನಾಗಲಿ ಹೆಣ್ಣಾಗಲಿ ನನ್ನ ಪಾಲಿಗೆ ಸಿಕ್ಕುವ ಹಾಗೆ ಇರಲಿಲ್ಲ. ಹೊನ್ನು ಹೆಣ್ಣು ಸಿಕ್ಕದವರಿಗೆ ಮಣ್ಣಾದರೂ ಸಿಕ್ಕುವುದಂತೆ. ಚಿಕ್ಕತಂದೆಯವರು ಸತ್ತರೆ ಮಣ್ಣಿನ ಮನೆ ಯಾರ ಪಾಲಿಗೆ ಹೋಗುವುದು ಎಂಬ ಯೋಚನೆಯಿಂದ ಇರುಳೆಲ್ಲ ನನ್ನ ಕಣ್ಣಿಗೆ ನಿದ್ದೆ ಹತ್ತಲಿಲ್ಲ.

ಹೆಣದ ಎಂಜಲನ್ನು ಬಯಸುವವನು ಪಾಪಿ ಎಂದು ಪಾಠಕ ಮಹಾಶಯರಲ್ಲಿ ಅನೇಕರು ಮೇಲೆ ಹೇಳಿದ ನನ್ನ ಅವಸ್ಥೆಯನ್ನು ನೋಡಿ ಬಾಯೊಳಗೆನೇ ನಗಾಡಬಹುದು. ಅಂತಹರಿಗೆ ನಾನು ಒಂದು ಮಾತನ್ನು ಹೇಳಬೇಕೆಂದಿರುವೆನು. ಮನುಷ್ಯನ ಮರಣಕ್ಕೋಸ್ಕರವೇ ಮನಮರುಗುವವರು ಈ ಕಾಲದಲ್ಲಿ ಕಡಿಮೆ. ಸತ್ತವನು ನಮಗೇನೂ ಬಿಟ್ಟಿಲ್ಲ, ಕೊಟ್ಟಿಲ್ಲ, ಮುಂದೆ ನಮಗೇನು ಗತಿ? ಎಂದು ಅಳುವರಲ್ಲದೆ, ಸತ್ತವನ ಗತಿಯನ್ನು ಕುರಿತು ಒಬ್ಬರೂ ಲೆಕ್ಕಿಸುವುದಿಲ್ಲ. ಈ ಮಾತನ್ನು ಬಲಗೊಳಿಸುವುದಕ್ಕೆ ಕಾರಣಗಳಿವೆ. ಮನುಷ್ಯನು ಸಾಯುತ್ತಲೇ ಅವನ ನೆಂಟರಿಷ್ಟರು ಅವನನ್ನು ಕುರಿತು ‘ಸತ್ತದ್ದು ಹೇಗೆ? ಹೊತ್ತದ್ದು ಯಾರು?’ ಎಂದು ಕೇಳುವ ಬದಲಾಗಿ ಅವನ ಹೆಂಡತಿಗೆ ಮಕ್ಕಳಿಗೆ “ಸೊತ್ತುಂಟೇ? ವಿತ್ತವುಂಟೇ?” ಎಂದು ಮೊದಲು ಪ್ರಶ್ನೆ ಮಾಡಿ, ‘ಬದುಕುಂಟು, ಭೂಮಿಯುಂಟು’ ಎಂಬ ಉತ್ತರದಿಂದ ಸ್ವಲ್ಪ ಸಮಾಧಾನಚಿತ್ತರಾಗುವರು. ಹೀಗಿದ್ದುದರಿಂದ ನನ್ನ ಚಿಕ್ಕತಂದೆಯವರ ಮರಣ ವಿಷಯದಲ್ಲಿ ನಾನು ಸ್ವಾರ್ಥಬುದ್ಧಿಯನ್ನು ತೋರಿಸಿದುದು ವಿಚಿತ್ರವೇನೂ ಅಲ್ಲ. ಆದುದರಿಂದ ಅವರನ್ನು ಆಗಾಗ ಮುಟ್ಟಿ ನೋಡಿ, ರೋಗಕ್ಕೆ ನಾನು ಬಲಿಬಿದ್ದು, ಮಕ್ಕಳು ಮರಿ ಹುಟ್ಟುವ ಮೊದಲೇ ನನ್ನ ಹೆಂಡತಿಯನ್ನು ಶಾರದಾ ಸದನದ ಸುಂದರ ಯುವತಿಯನ್ನಾಗಿ ಮಾಡಲು ನನಗೆ ಮನಸ್ಸು ಬರಲಿಲ್ಲ. ನಗಾಡುವವರು ನಗಾಡಲಿ; ಅವರು ಹೊತ್ತು ಗೊತ್ತು ಅರಿಯದೆ ನಗಾಡುವರು. ತಾಯಿ ಮಗುವಿಗೆ ಸ್ತನ್ಯಪಾನ ಮಾಡುವುದನ್ನು ನೋಡಿ ಅವರು ನಗಾಡುವರು. ತಂದೆ ಹೊಟ್ಟೆ ತುಂಬಾ ಉಂಡು ತೇಗುವುದನ್ನು ಕೇಳಿ ಅವರು ನಗಾಡುವರು. ಅಣ್ಣನು ಏಕಾಂತದಲ್ಲಿ ಹೆಂಡತಿಯೊಡನೆ ಮುದ್ದು ಮಾತುಗಳನ್ನು ಆಡುವುದನ್ನು ನೋಡಿ ಅವರು ನಗಾಡುವರು. ಬಡವನು ಭಾಗ್ಯ ತೋರಿಸಿದರೆ, ಕುರೂಪಿಯು ಕಾಂಚನ ತೊಟ್ಟುಕೊಂಡರೆ, ಭಟ್ಟರು ಬೂದಿ ಬಳಿದುಕೊಂಡರೆ ಅವರು ನಗಾಡುವರು. ಇದು ನಗಾಡುವುದೋ ಹಲ್ಲು ಕಿರಿಯುವುದೋ ನಾನು ಹೇಳಲಾರೆನು.

ಮಧ್ಯರಾತ್ರಿ ಕಳೆದುಹೋದ ಬಳಿಕ ‘ಪೋಲೀಸ್ ಜಮೇದಾರನು’ ನನ್ನ ಬಳಿಗೆ ಬಂದು “ಅಯ್ಯಾ! ನಿಮ್ಮ ಚಿಕ್ಕತಂದೆಯವರು ಇನ್ನು ಉಳಿಯುವ ಹಾಗಿಲ್ಲ. ಮುಂದೆ ಏನು ಮಾಡಬೇಕೆಂದಿರುವಿರಿ?” ಎಂದು ಕೇಳಿದನು.

ಇದಕ್ಕೆ ಉತ್ತರವಾಗಿ “ಏನು ಮಾಡಬೇಕೆಂದು ನಾನರಿಯೆ. ನನಗೆ ಎಲ್ಲವು ವಿಪರೀತವಾಗಿ ಪರಿಣಮಿಸುತ್ತಿದೆ. ಮೊದಲೇ ಸಾಲವು ನನ್ನ ತಲೆಯೇರಿ ಹೋಗಿದೆ” ಎಂದು ನಾನು ಹೇಳಿದೆನು.

ಜಮೇದಾರ :- “ನಿಮ್ಮ ಚಿಕ್ಕತಂದೆಯವರ ಕೈಯಲ್ಲಿ ಸ್ವಲ್ಪ ಹಣವಿರುವುದಲ್ಲವೇ? ನಿಮ್ಮ ಅಡಿಗೆಯವನು ಇದನ್ನೆಲ್ಲಾ ಬಲ್ಲನು. ‘ಉಯಿಲನ್ನು’ ಕುರಿತು ಮುದ್ದಣ್ಣನು ನಿಮ್ಮ ಚಿಕ್ಕತಂದೆಯವರೊಡನೆ ಆಗಾಗ ವಿಚಾರಿಸುತ್ತಿದ್ದನು.”

ನಾನು ಮಾತನಾಡದೆ ಜಮೇದಾರನು ಮುಂದರಿಸುವಂತೆ ಸುಮ್ಮನಾದೆನು.

ಜಮೇದಾರ :- “ಮುದ್ದಣ್ಣನು ಹುಚ್ಚನಂತೆ ತೋರುವನು ನಿಜ. ಆದರೆ ನಿಮಗೆ ಓನಾಮಾ ಹಾಕುವಷ್ಟು ಹುಚ್ಚು ಬುದ್ಧಿಯು ಅವನಲ್ಲಿ ಉಂಟು. ಇಷ್ಟರ ಒಳಗೆ ಅವನು ಉಯಿಲನ್ನು ಜಾರಿಸದೆ ಇರಲಾರನು. ತಾವು ಎಚ್ಚರವಿಲ್ಲದಿದ್ದರೆ ಕೆಲಸವು ಕೆಟ್ಟುಹೋಗುವುದು.”

ಈತನ ಮಾತುಗಳಿಂದ ನಾನು ಮೋಸಹೋಗಬಹುದೋ ಇಲ್ಲವೋ ಎಂದು ನನ್ನಲ್ಲಿಯೇ ವಿಚಾರಿಸುತ್ತಿದ್ದೆನು. ಅಷ್ಟರಲ್ಲಿ ಜಮೇದಾರನು ಮುದ್ದಣ್ಣನಿದ್ದ ಎಡೆಗೆ ಹೋಗಿಬರುವೆನೆಂದು ಹೇಳಿ, ಕೆಲವು ನಿಮಿಷಗಳ ಬಳಿಕ ನನ್ನ ಹತ್ತಿರಕ್ಕೆ ಬಂದನು.

ಜಮೇದಾರ :- “ನಾನು ಮುದ್ದಣ್ಣನ ಮೈಯನ್ನು ಹುಡುಕಿ ನೋಡಿದೆನು. ಉಯಿಲನ್ನು ಅವನು ಎಲ್ಲಿಯೋ ಅಡಗಿಸಿರಬಹುದು. ತಮಗೆ ಸಿಕ್ಕುವ ಹಣ ಅನ್ಯರ ಪಾಲಿಗೆ ಹೋಗುವುದೆಂದು ನನಗೆ ಚಿಂತೆ.”

ನಾನು ಏನು ಹೇಳಬೇಕೆಂದು ತಿಳಿಯದೆ ಸುಮ್ಮನಾದೆನು. ಮುದ್ದಣ್ಣನು ಮೊದಲಿಂದಲೂ ಚಿಕ್ಕತಂದೆಯವರ ಹಣವನ್ನು ಆಶಿಸಿ ಉಪಾಯ ಮಾಡುತ್ತಿದ್ದನು. ಜಮೇದಾರನ ಮಾತುಗಳು ನಿಜವಾದರೆ ಹಣವು ಮುದ್ದಣ್ಣಗೆ; ಹೆಣವು ನನ್ನ ಪಾಲಿಗೆ. ಇದನ್ನು ಕುರಿತು ಮುದ್ದಣ್ಣನೊಡನೆ ವಿಚಾರಿಸಬೇಕೆಂದು ನಾನು ಆಲೋಚಿಸುವಷ್ಟರಲ್ಲಿ, ಮುದ್ದಣ್ಣನು ನಿದ್ದೆಯಿಂದ ಎಚ್ಚರವಾದಂತೆ, ತಲೆಯನ್ನು ತುರಿಸುತ್ತ ನನ್ನ ಬಳಿಗೆ ಬಂದು, “ಅಯ್ಯಾ! ನನ್ನ ಮೈಯಲ್ಲಿ ಹುಳುಹರಿದಂತಾಗುವುದು. ಯಾರೋ ನನ್ನ ಮೈಮೇಲೆ, ಬಂದು ಚಕ್ಕಲಗಲ ಮಾಡಿದಂತೆ ತೋರುವುದು” ಎಂದನು.

ಜಮೇದಾರನು ಈ ಮಾತನ್ನು ಕೇಳುತ್ತಲೇ “ನಿನಗೆ ಮೈಮೇಲೆ ಬಂತೇ? ಸರಿ! ಸರಿ! ಸತ್ತವರು ನಿಮ್ಮನ್ನು ಹಿಡಿದಿರುವರು. ಅವರು ಉಯಿಲನ್ನು ಕೇಳುವುದಕ್ಕೆ ಬಂದರೋ ಏನೋ?” ಎಂದು ಹೇಳಿದನು. ಮುದ್ದಣ್ಣನು ಅಲ್ಲಿ ನಿಲ್ಲದೆ ಹಿಂದೆಗೆದನು.

ಮರುದಿನ ಬೆಳಿಗ್ಗೆ ಡಾಕ್ಟರರು ಚಿಕ್ಕತಂದೆಯವರನ್ನು ದೂರದಿಂದ ನೋಡಿ, ‘ಪ್ಲೇಗ್ ಸ್ಟೇಶನ್ ಆಫೀಸರರೊಡನೆ’ ಮಾತನಾಡಿ, “ಚಿಕ್ಕಪ್ಪನವರು ಕಾಲಾಧೀನರಾದರು” ಎಂದು ಹೇಳಿ ಹೋದರು. ಹೆಣವನ್ನು ಎತ್ತುವುದಕ್ಕೆ ಜಾತಿ ಗೃಹಸ್ಥರಾಗಲಿ, ಕುಲಪುರೋಹಿತರಾಗಲಿ ಬರುವ ಸಂಭವ ತೋರಲಿಲ್ಲ. ನಾನು ಮತ್ತು ಮುದ್ದಣ್ಣ ಇಬ್ಬರಿಂದ ಕೆಲಸವು ಸಾಗುವ ಹಾಗೆ ಇರಲಿಲ್ಲ. ಜಮೇದಾರನು ಮುಂದೆ ಬಂದು “ಇನ್ನು ಏನು ಮಾಡಬೇಕು?” ಎಂದು ಮೆಲ್ಲನೆ ಕೇಳಿದನು. ನಾನು ಯೋಚನೆಯಲ್ಲಿ ಬಿದ್ದೆನು. ಅನಾಥ ಪ್ರೇತ ಸಂಸ್ಕಾರದಿಂದ ಕೋಟಿ ಯಜ್ಞ ಫಲವು ಸಿಕ್ಕುವಂತೆ ಸರಕಾರದವರು ತಮ್ಮ ಕಡೆಯಿಂದ ದೀಕ್ಷಿತರಾಗಿ ನಿಯಮಿಸಿದ ಕೃಷ್ಣಕಾಯರಾದ ಪುರೋಹಿತರ ಹಸ್ತದಿಂದ ನಮ್ಮ ಚಿಕ್ಕತಂದೆಯವರಿಗೆ ಪವಿತ್ರವಾದ ಸಮಾಧಿಯು ದೊರೆಯುವುದೋ ಎಂದು ನಾನು ಸಂಶಯ ಪಡುವಷ್ಟರಲ್ಲಿ ನಮ್ಮ ಊರಿನ ಮಾದಣ್ಣನವರು ಅಲ್ಲಿಗೆ ಆಕಸ್ಮಾತ್ತಾಗಿ ಬಂದರು. ಮಾದಣ್ಣನವರು ಏಕೆ ಬಂದರೆಂದು ನನಗೆ ಮೊದಲು ತಿಳಿಯಲಿಲ್ಲ. ಮಾದಣ್ಣನವರು ನಮ್ಮ ಊರಿನ ಬಲಾಢ್ಯರಾದ ಮನುಷ್ಯರು. ಇವರಿಗೂ ನಮ್ಮ ಚಿಕ್ಕತಂದೆಯವರಿಗೂ ಆಂತರಿಕವಾದ ಸ್ನೇಹವಿತ್ತು. ಅದಕ್ಕೋಸ್ಕರ ಅವರು ಚಿಕ್ಕತಂದೆಯವರ ಕಡೆಗಾಲದಲ್ಲಿ ಅವರನ್ನು ದೃಷ್ಟಿಸಬೇಕೆಂದು ಬಂದಿರುವರೆಂದು ನಾನು ತಿಳಿದೆನು. ಮಾದಣ್ಣನವರಿಗೆ ಈಗ ಮೂರು ಜನ ಹೆಣ್ಣು ಮಕ್ಕಳು. ಹಿರಿಯವಳು ಬಾಲವಿಧವೆಯಾಗಿದ್ದಳು. ನಡುವಿನವಳು ಅತಿಸುಂದರಿ. ಗಂಡನು ಅವಳನ್ನು ಬಿಟ್ಟಿದ್ದನೋ, ಅವಳು ಗಂಡನನ್ನು ಬಿಟ್ಟಿದ್ದಳೋ ಇದುವರೆಗೆ ತಿಳಿದು ಬರಲಿಲ್ಲ. ಹೇಗೂ ಹೆಣ್ಣು ತೌರುಮನೆಯಲ್ಲಿಯೇ ಇದ್ದಳು. ಕಿರಿಯವಳು ಮನೆಯಲ್ಲೇ ಇದ್ದರೂ, ಎರಡು ವರ್ಷಗಳಿಗೊಮ್ಮೆ ಗಂಡನ ಮನೆಗೆ ಹೋಗಿ, ಮೂರು ತಿಂಗಳು ಉಳುಕೊಂಡು, ತೊಟ್ಟಿಲ ಮಗುವಿನೊಡನೆ ತೌರುಮನೆಗೆ ಬರುತ್ತಲಿದ್ದಳು. ಇನ್ನೊಬ್ಬಳು ತೀರಿ ಹೋಗಿದ್ದಳು. ಅದು ಕಾರಣದಿಂದ ಮಾದಣ್ಣನವರಿಗೆ ಉಳಿದ ಹೆಣ್ಣುಮಕ್ಕಳ ಮೇಲೆ ಬಹಳ ಪ್ರೇಮ. “ಗೋವಿಂದಾ! ನಿನ್ನ ದಯೆಯಿಂದ ನನಗೇನೂ ಕಡಮೆ ಇಲ್ಲ. ನನಗೆ ಭೂಮಿ ಬೇಡ, ಆಸ್ತಿ ಬೇಡ, ಈ ಹೆಣ್ಣು ಮಕ್ಕಳಿಗೆ ದೀರ್ಘಾಯುವನ್ನು ಕೊಡು!” ಎಂದು ವರ್ಷ ವರ್ಷ ರಥೋತ್ಸವಕಾಲದಲ್ಲಿ ಅವರು ದೇವರೊಡನೆ ಬೇಡುತ್ತಿದ್ದರು. ಈ ಹೆಣ್ಣು ಮಕ್ಕಳು ಹುಟ್ಟಿದಂದಿನಿಂದ ಮಾದಣ್ಣನವರ ಕೀರ್ತಿಯು ದಿಗಂತವಾಗಿ ಪಸರಿಸುತ್ತಲಿತ್ತು. ಸರಕಾರದ ದೊಡ್ಡ ದೊಡ್ಡ ಹುದ್ದೆದಾರರು ಈತನ ಆಜ್ಞೆಗಳನ್ನು ಶಿರಸಾವಹಿಸುತ್ತಿದ್ದರು. ಜಮೀನಿನ ಜವಾಬ್ದಾರಿಯ ಮೇಲೆ ಹಣವನ್ನು ಬಡ್ಡಿಗೆ ಕೊಡದ ಪರಮಲೋಭಿಗಳು ಸಹಾ ಇವನ ಒಂದು ಮಾತಿನ ಮೇಲೆ ಒತ್ತೆ ಕೇಳದೆ, ಇವನಿಗೆ ಧಾರಾಳವಾಗಿ ಸಾಲ ಕೊಡುತ್ತಿದ್ದರು. ಬಿಳೇ ಜನರ ಸಹಾಯವು ಯಾವ ಕಾರ್ಯದಲ್ಲಾದರೂ ದೇಶೀಯರಿಗೆ ಅವಶ್ಯವಿದ್ದರೆ, ಅದನ್ನು ಮಾಡಿಸುವ ಭಾರವು ಇವರ ಹೆಗಲ ಮೇಲೆ ಇತ್ತು.

ಮಾದಣ್ಣನವರನ್ನು ನಾನು ತಲೆಯೆತ್ತಿ ನೋಡಿ, “ರಾಯರೇ! ನೀವು ಬಂದುದು ಚೆನ್ನಾಯಿತು” ಎಂದೆನು.
ಮಾದಣ್ಣನವರು ಸಮೀಪಕ್ಕೆ ಬಂದು, “ನಿಮ್ಮ ಚಿಕ್ಕತಂದೆಯವರಿಗೆ ಹೇಗಿದೆ?” ಎಂದು ಕೇಳಿದನು.
ಜಮೇದಾರನು “ಚಿಕ್ಕತಂದೆಯವರೋ? ನೆಟ್ಟಗಿದ್ದಾರೆ” ಎಂದು ಹೇಳಿ ನೆಗಾಡಿದನು.
ನಾನು ತಲೆಯಲ್ಲಾಡಿಸಿ ಒಳಗಿನ ಅವಸ್ಥೆಯನ್ನು ಹೊರಡಿಸಿದೆನು.

ಮಾದಣ್ಣನವರು ತಲೆಯ ಮೇಲೆ ಕಲ್ಲು ಬಿದ್ದಂತಾಗಿ ಸುಮ್ಮನೆ ನಿಂತರು. “ಗೋವಿಂದಾ! ನಮ್ಮ ಹಾಳು ದೆಶೆ. ಏನು ಸ್ವಾಮಿ ಮನುಷ್ಯನ ಅವಸ್ಥೆ? ಎರಡು ದಿನದ ಹಿಂದೆ ನಮ್ಮ ಮನೆಗೆ ಬಂದು ಮಾತನಾಡಿ ಹೋದ ಪುಣ್ಯಾತ್ಮರು ಈ ಹೊತ್ತು ಎಲ್ಲಿಯೋ? ನಿಮ್ಮ ಚಿಕ್ಕತಂದೆಯವರು ಬದುಕಿರಬಹುದೆಂದು ನಾನು ಒಮ್ಮೆ ತಿಳಿದೆನು. ನೀವು ಯಾರೂ ಗೋಳಿಡುವುದನ್ನು ಕೇಳಲಿಲ್ಲ. ಅವರೊಡನೆ ಎರಡು ಮಾತು ಆಡುವುದಕ್ಕೂ ಆಗದೆ ಹೋಯಿತು” ಎಂದು ದುಃಖಿಸಿದರು.

ಮುದ್ದಣ್ಣನು “ಮನಸ್ಸಿದ್ದರೆ ಅವರು ಇದ್ದಲ್ಲಿಗೆ ಹೋಗಿ ತಾವು ಮಾತನಾಡಬಹುದಲ್ಲವೇ” ಎಂದನು.

ಮಾದಣ್ಣನವರು ವ್ಯಸನಪಟ್ಟರು; ಅಲ್ಲಿ ನಿಲ್ಲಲಾರದಷ್ಟು ವ್ಯಸನಪಟ್ಟರು. ಅವರು ದುಃಖದಿಂದ ಮನೆಯ ಕಡೆಗೆ ಹೆಜ್ಜೆಯಿಡುವುದನ್ನು ನೋಡಿ “ರಾಯರೇ! ಶವ ಎತ್ತುವುದಕ್ಕೆ ಜನಗಳಿಲ್ಲ. ತಾವೂ ಹೋಗುವಿರೇ?” ಎಂದೆನು.

ಮಾದಣ್ಣ : – “ನಾನು ಈಗ ಹೋಗದೆ ಉಪಾಯವಿಲ್ಲ; ಅಗತ್ಯವಾದ ಕೆಲಸವಿದೆ. ಇನ್ನೊಂದು ಸಂದರ್ಭದಲ್ಲಿ ನಾನು ಬರುತ್ತೇನೆ. ನನ್ನನ್ನು ಕ್ಷಮಿಸಬೇಕು – ಇನ್ನೊಂದು ಸಲ ನಿಜವಾಗಿ – ”

ನಾನು ಅವರ ಕೈ ಹಿಡಿದು “ರಾಯರೇ! ನಿಮ್ಮ ಮನೆಗೆ ನಾವು ಆಗಾಗ ಬರುತ್ತಾ ಇರಬೇಕು ಎಂದು ಮನಸ್ಸಿದ್ದರೆ ತಾವು ಈಗ – ” ಎಂದು ಅಲ್ಲಿಯೇ ತಡೆದೆನು.

ಈ ಮಾತಿನಿಂದ ಮಾದಣ್ಣನವರು ಸ್ವಲ್ಪ ಬೇನೆಗೊಂಡಂತಾಗಿ ಮರಳಿ ಬಂದರು. ಶವಸಂಸ್ಕಾರಕ್ಕೆ ವಿಳಂಬ ಮಾಡುವುದು ನ್ಯಾಯವಾಗಿರಲಿಲ್ಲ. ಪ್ಲೇಗ್ ಗುಡಿಸಲಿಗೆ ಆಧಾರವಾಗಿದ್ದ ಎರಡು ಬಿದಿರುಗಳನ್ನು ಈಚೆಗೆ ಸೆಳೆದು, ಅದನ್ನು ನಿಚ್ಚಣಿಗೆಯಂತೆ ಕಟ್ಟಿ, ಕದಳೀಪತ್ರದ ಬದಲಾಗಿ ಪಾಸ್ ಪೋರ್ಟ್ ಬೂಕುಗಳ ಪತ್ರಗಳನ್ನು ಹಾಸಿ, ಚಿತಿಯನ್ನು ಒದಗಿಸಿದೆವು. ಆ ಮೇಲೆ ನಾವು ಮೂವರು ಇಹಲೋಕದ ಚಿಂತನೆಯನ್ನು ಬಿಟ್ಟು, ನಾರಾಯಣ ಸ್ಮರಣೆಯಿಂದ ಶವವನ್ನು ಹೇಗೋ ಎತ್ತಿಕೊಂಡು, ಹತ್ತಿರದ ಸುಡುಗಾಡಿಗೆ ಹೋದೆವು, ಪುರೋಹಿತರು ಆ ಸ್ಥಾನವನ್ನು ಮೊದಲೇ ಅಲಂಕರಿಸಿದ್ದರು. ಚಿಕ್ಕತಂದೆಯವರ ಆವಶೇಷವನ್ನು ಪುರೋಹಿತರ ಹಸ್ತಕ್ಕೂ ಅಗ್ನಿಯ ಮುಖಕ್ಕೂ ಕೊಟ್ಟು ನಾವು ಈಚೆಗೆ ಸರಿದೆವು.

ನನ್ನ ಚಿಕ್ಕತಂದೆಯವರ ಅಕಾಲಿಕ ಮರಣದ 3 ತಿಂಗಳವರೆಗೆ ನಾನು ಏನೊಂದೂ ತೊಂದರೆಗೊಳ್ಳದೆ ಇದ್ದೆನು. ಮುದ್ದಣ್ಣನು ನಮ್ಮನ್ನು ಬಿಟ್ಟುಹೋಗದೆ ನಮ್ಮೊಡನೆ ಉಳುಕೊಂಡಿದ್ದನು. ಸಕಲಾವತಿಯು ಅಕಸ್ಮಾತ್ತಾಗಿ ಅಸ್ವಸ್ಥದಲ್ಲಿ ಬಿದ್ದಳು. ಅವಳ ಕಾಯಿಲೆಯು ನೂತನ ತರದ್ದಾಗಿತ್ತು. ಅನೇಕರು ಅನೇಕ ಕಾರಣಗಳನ್ನು ಕೊಟ್ಟರು. ಒಬ್ಬರು “ಇದು ಇಷ್ಟರೋಗ; ಮಕ್ಕಳು ಹುಟ್ಟದಿದ್ದರೆ ಇದು ವಿಪರೀತವಾಗಿ ಪರಿಣಮಿಸುತ್ತದೆ” ಎಂದರು. ನಾನು ಅವರ ಮಾತನು ಕೇಳಿ ಹೆದರಿಕೆಯಿಂದ ಒಂದು ವಾರದವರೆಗೆ ಅವಳನ್ನು ಮನೆಯಲ್ಲಿಯೇ ಮುಚ್ಚಿಟ್ಟೆನು; ಪುರುಷರ ಮುಖವನ್ನು ನೋಡಬಿಡಲಿಲ್ಲ. ಕಾಹಿಲೆ ಏನೂ ಕಡೆಮೆಯಾಗಲಿಲ್ಲ. ಒಬ್ಬಿಬ್ಬರು “ಇದೆಲ್ಲಾ ನಿಮ್ಮ ಚಿಕ್ಕತಂದೆಯವರ ಉಪದ್ರ. ಅವರ ಉತ್ತರಕ್ರಿಯೆಗಳು ಸರಿಯಾಗಿ ನಡೆಯದೆ ಇದ್ದರೆ ಹೀಗಾಗಬಹುದು” ಎಂದು ಹೇಳಿದರು. ಅವರ ಮರಣದ 4 ನೆಯ ತಿಂಗಳಲ್ಲಿ ಚಿಕ್ಕತಂದೆಯವರ ಉತ್ತರಕ್ರಿಯೆಗಳನ್ನು ನಾನು ಮಾಡತೊಡಗಿದೆನು. ನಾನು ಉತ್ತರಕ್ರಿಯೆಗಳನ್ನು ಪ್ರಾರಂಭಿಸಿರುವೆನೆಂದು ಕೇಳಿ ನನ್ನ ಸ್ನೇಹಿತರಲ್ಲಿ ಕೆಲವರು “ರಾಯರೇ! ನಿಮ್ಮ ಚಿಕ್ಕತಂದೆ ಯಾರ ಮೈಮೇಲೆ ಬರುವರಂತೆ?” ಎಂದು ನನ್ನೊಡನೆ ಕೇಳುತ್ತ ನಗುಮೊಗವನ್ನು ತೋರಿಸುತ್ತಿದ್ದರು. ಮನೆಯಲ್ಲಿ ಕಾಹಿಲೆಯಿಂದ ನಾನು ‘ಆಫೀಸಿಗೆ’ ಕ್ರಮವಾಗಿ ಹೋಗುವುದು ತಪ್ಪಿತು. ಸಕಲಾವತಿಯ ದೇಹವು ಕ್ಷೀಣವಾಗುತ್ತ ಬಂತು; ‘ಆಫೀಸ್’ ಕೆಲಸವು ಉಳಿದುಳಿದು ವೃದ್ಧಿಯಾಗುತ್ತ ಹೋಯಿತು. ನಡುವಿನಲ್ಲಿ ಉಪದ್ರವವು ಮೊಳೆಯಿತು. ನಾನು ಚಿಕ್ಕತಂದೆಯವರಿಂದ 500 ರೂಪಾಯಿ ಸಾಲ ಹೊಂದಿದ್ದೆನೆಂದು ಅವರ ಉಯಿಲಿಂದ ತೋರುವುದೆಂಬುದಾಗಿ, ಉಯಿಲಿನ ಹಕ್ಕುದಾರರಾದ ಮಾದಣ್ಣನವರು ನನ್ನ ಮೇಲೆ ದಾವಾ ತಂದರು. ನನಗೆ ಉಗುರು ಹುಣ್ಣಾದ ಕಾಲಮೇಲೆ, ಒನಕೆಯು ಪೆಟ್ಟು ಬಿದ್ದಂತಾಯಿತು.

ನಾನು ಯಥಾರ್ಥವಾಗಿ ಚಿಕ್ಕತಂದೆಯವರಿಂದ ಸಾಲ ಎತ್ತಿರಲಿಲ್ಲ. ಅವರು ಉಯಿಲಿನಲ್ಲಿ ಏನೇನು ಗೀಚಿಟ್ಟಿದ್ದರೋ ನನಗೆ ತಿಳಿದಿರಲಿಲ್ಲ. ಬಲಾಢ್ಯರಾದ ಮಾದಣ್ಣನವರು ನನ್ನ ಮೇಲೆ ಏಕೆ ಮುನಿದರೋ ನಾನು ಅರಿಯೆನು. ದಶಂಬರ 1 ನೆಯ ತಾರೀಖಿಗೆ ದಾವೆಯು ವಿಚಾರಣೆಗೆ ಇಟ್ಟಿತ್ತು. ಮೊದಲಿನ ಮುನಿಸಿಫರು ಹಳೆಯ ಅಂಗಿ, ಹರಕು ಮುಂಡಾಸು ಇಟ್ಟುಕೊಂಡರೂ, ನ್ಯಾಯಶೀಲರಾಗಿದ್ದರು; ತಾನೇ ಮೂರು ನಾಮಾ ಹಾಕಿದರೂ, ನಮ್ಮಂತಹ ಬಡವರಿಗೆ ನಾಮಾ ಹಾಕುತ್ತಿರಲಿಲ್ಲ. ಹೊಸ ಮುನಿಸಿಫರ ಮರ್ಜಿ ನನಗೆ ಗೊತ್ತಿರಲಿಲ್ಲ. ಅವರು ಇಲ್ಲಿ ಬಂದಕೂಡಲೇ ಮಾದಣ್ಣನವರ ಕ್ಷೇಮಸಮಾಚಾರವನ್ನು ಕೇಳಿದ್ದರಂತೆ; ಮಾದಣ್ಣನವರ ಮನೆಯವರೆಗೆ ಯಾತ್ರೆ ಮಾಡಿ ಬಂದಿದ್ದರೆಂದೂ ಬಾಜಾರಿನಲ್ಲಿ ವರ್ತಮಾನವಿತ್ತು. ಅವರು ಮುಂಡಾಸು ಇಟ್ಟುಕೊಳ್ಳುತ್ತಿರಲಿಲ್ಲ; ಟೊಪ್ಪಿ ಹಾಕುತ್ತಿದ್ದರು. ಇದೆಲ್ಲಾ ನನಗೆ ಸ್ವಲ್ಪ ಅಪಶಕುನವಾಗಿ ಕಂಡು ಬಂತು. ನನಗೆ ಹಾಜರಾಗಲಿಕ್ಕೆ ಕೋರ್ಟಿನ ಕಡೆಯಿಂದ ಅಪ್ಪಣೆ ಬಂದಂತೆ “ಪೂರ್ವಾನ್ಹ 10 ಘಂಟೆಗೆ ಕಮಲಪುರದ ಮುನಿಸಿಫ್ ಕೋರ್ಟಿಗೆ ವಕೀಲರೊಡನೆ ಹೋದೆನು. ಮುನಿಸಿಫರು ಅವರ ಕ್ರಮಕ್ಕೆ ಅನುಸಾರವಾಗಿ 12 ಗಂಟೆಗೆ ಬಂದರು. ಬಂದವರು ಒಳಕ್ಕೆ ಹೋಗುತ್ತಲೇ, ಅಲ್ಲಿ ಮೊದಲೇ ಬಂದಿದ್ದ ಮಾದಣ್ಣನವರು ಎದ್ದು ನಿಂತು, ಸ್ವಲ್ಪ ನಗುಮೋರೆಯಿಂದ ಸಲಾಂ ಮಾಡಿದರು. ಮುನಿಸಿಫರು ತಮ್ಮ ಟೊಪ್ಪಿಯನ್ನು ಎತ್ತಿ ತೋರಿಸಿದರು. ನನ್ನ ಎದೆಯಲ್ಲಿ ಚೂರಿ ಹಾಕಿದಂತಾಯಿತು. ಕೊಂಚ ಹೊತ್ತಿನ ಬಳಿಕ ನನ್ನ ಕಡೆಯ ವಕೀಲರು ನನ್ನ ಬಳಿಗೆ ಬಂದು, ಸ್ವಲ್ಪ ನಶ್ಯವನ್ನು ಕೇಳಿ, ಮುನಿಸಿಫರು ಮೂರು ಗಂಟೆಯವರೆಗೆ ನನ್ನನ್ನು ಕರೆಯಿಸಲಾರರು ಎಂದರು. ನಾನು ಅಲ್ಲಿಯೇ ಕಾದು ಕುಳಿತುಕೊಂಡೆನು. ಪ್ಲೇಗ್ ಹೆಣವನ್ನು ಹೊರುವುದಕ್ಕೆ ಒಬ್ಬನು ಮಾತ್ರವಿದ್ದರೆ, ಆ ಪಾಪಿಯು ಮಿಕ್ಕವರನ್ನು ಕಾದು ನಿಲ್ಲುವಂತೆ, ನಾನು ಕೋರ್ಟಿನ ಹೊರಜಗಲಿಯಲ್ಲಿ ಕಾದುಕುಳಿತೆನು. ಒಡನೆ ನನ್ನ ಕಣ್ಣಿಗೆ ಅಲ್ಲಿಯೇ ಸ್ವಲ್ಪ ಜಂಪು ಹಿಡಿಯಿತು.

ನಾನು ಎಚ್ಚರವಾದಾಗ ಮುನಿಸಿಫರ ಗುಲ್ಲು ಕೇಳಿಸುತ್ತಿತ್ತು. ವಕೀಲರೆಲ್ಲರು ಅಲ್ಲಲ್ಲಿ ‘ಕಮಿಟಿ’ಯಾಗಿ ನಿಂತುಕೊಂಡು ಅಂತರಂಗದಲ್ಲಿ ಮಾತನಾಡುತ್ತಿದ್ದರು. ಕಕ್ಷಿಗಾರರು ಕಿಟಕಿಯ ಹಿಂದುಗಡೆಯಿಂದ ಇಣಿಕಿ ನೋಡುತ್ತಿದ್ದರು. ಗುಮಾಸ್ತರೆಲ್ಲರೂ ಬೆಪ್ಪರಂತೆ ಸುಮ್ಮನಾಗಿದ್ದರು. “ಈ ರಿಕಾರ್ಡನ್ನು ಯಾರು ತೆಗೆದರು?” “ಉಯಿಲ್ ಏನಾಯಿತು?” “ಕೋರ್ಟಿನಲ್ಲಿ ಕಳುವು” “ಉಯಿಲ್ ಎಲ್ಲಿ ಹೋಯಿತು?” ಎಂದು ಮೊದಲಾಗಿ ಹೇಳುತ್ತ ಮುನಿಸಿಫರು ಗುಮಾಸ್ತರನ್ನೆಲ್ಲಾ ಗಜರಿ ಗರ್ಜಿಸಿ ವಿಚಾರಿಸುತ್ತಿದ್ದರು. ನನ್ನ ಕಡೆಯ ವಕೀಲರು ನನ್ನ ಬಳಿಗೆ ಬಂದು, ಪುನಃ ನಶ್ಯವನ್ನು ಕೇಳಿ “ರಿಕಾರ್ಡಿನಿಂದ ಉಯಿಲ್ ಮಾಯವಾಗಿದೆ; ನಿಮಗೆ ನಂಬ್ರ ಗುಣವಾಯಿತೆಂದು ತಿಳಿಯಿರಿ” ಎಂದು ಹೇಳಿದರು. “ಸುಳ್ಳು ಉಯಿಲ್ ಕಳ್ಳರ ಕೈಲಿ.” ನಾನು ಸಂತೋಷದಿಂದ ಸಕಲಾವತಿಗೆ ತಿಳಿಸುವುದಕ್ಕೆ ಮನೆಗೆ ಓಡಿದೆನು. ದೊಡ್ಡಿಯಲ್ಲಿ ಹುಲ್ಲುಕಡ್ಡಿ ಕೊಡದೆ ಕಟ್ಟಿದ್ದ ಕೋಣವು ಬಿಡುಗಡೆ ಹೊಂದುತ್ತಲೇ ಬಾಲಯೆತ್ತಿ ಮನೆಯ ಕಡೆಗೆ ಓಡುವಂತೆ ನಾನು ಓಡಿಹೋದೆನು.

ಮನುಷ್ಯನು ಅಲ್ಪಜ್ಞಾನಿ; ಮುಂದೇನು ಸಂಭವಿಸುವುದು ಎಂಬುದನ್ನು ಅವನ ಸಣ್ಣ ಮನಸ್ಸು ಊಹಿಸಲಾರದು. ನಾಳೆ ಆಗುವುದನ್ನು ಈ ಹೊತ್ತು ಅರಿಯದೆ ಸುಖಾಂತರಿಕ್ಷದಲ್ಲಿ ಹಾರುತ್ತಿರುವನು. ಈಸುವವನು ಮುಳುಗಿ ಸಾಯುವನೆಂದು ಅರಿಯದೆ ನೀರ ಮೇಲೆ ನಲಿಯುವನು; ಹೆಚ್ಚೇಕೆ? ಸಾಕ್ಷಾತ್ ಶ್ರೀರಾಮ ದೇವರು ಪ್ರಾತಃಕಾಲದಲ್ಲಿ ಯುವರಾಜರಾದರು. ಸಾಯಂಕಾಲದಲ್ಲಿ ವನಚರಿಯಾದರು. ನಾನು ಮಹಾ ಸಂತೋಷದಿಂದ ದಾವೆಯ ವರ್ತಮಾನವನ್ನು ಸಕಲಾವತಿಗೂ ಮುದ್ದಣ್ಣಗೂ ಹೇಳುತ್ತಿದ್ದಾಗ ‘ಪೋಲೀಸ್ ಇನ್ಸ್ಪೆಕ್ಟರೊಬ್ಬನು’ ಮನೆಯ ಜಗುಲಿಯ ಮೇಲೆ ಕಾಲಿಟ್ಟನು. ‘ಪೋಲೀಸ್ ಇನ್ಸ್ಪೆಕ್ಟರನು’ ನನ್ನ ನಮಸ್ಕಾರವನ್ನು ಸ್ವೀಕರಿಸಿ “ಅಯ್ಯಾ! ನಿಮ್ಮ ಮನೆಯನ್ನು ಜಡ್ತಿಮಾಡಬೇಕೆಂದು ಈಗ ತಾನೇ ಹುಕುಂ ಆಗಿದೆ. ರಿಕಾರ್ಡಿನಲ್ಲಿದ್ದ ಉಯಿಲನ್ನು ನೀವೇ ತಪ್ಪಿಸಿರಬಹುದೆಂದು ಸಾಕಷ್ಟು ರುಜುವಾತು ಸಿಕ್ಕಿದೆಯಾದ್ದರಿಂದ ನಿಮ್ಮ ಮನೆಯನ್ನು ಜಡ್ತಿ ಮಾಡುವುದಕ್ಕೆ ಅಪೇಕ್ಷಿಸುತ್ತೇನೆ” ಎಂದನು. ನಾನು ಅವಾಕ್ಕಾಗಿ ಅಲ್ಲಿಯೇ ನಿಂತುಬಿಟ್ಟೆನು. ‘ಪೋಲೀಸಿನವರು’ ಯಮದೂತರಂತೆ ಮನೆಯನ್ನು ಮುತ್ತಿದ್ದರು. ನಮ್ಮ ಊರಿನ ನಾಲ್ಕು ದೊಡ್ಡ ಮನುಷ್ಯರು ಅಂಗಳದಲ್ಲಿ ಆಸೀನರಾಗಿದ್ದರು. ಇವರ ಇದಿರಿಗೆ ಹೋಗಲು ನನಗೆ ಮೋರೆ ಇರಲಿಲ್ಲ. ಒಂದು ಗಂಟೆಯ ತರುವಾಯ ‘ಇನ್ಸ್ಪೆಕ್ಟರನು’ ಮುದ್ದಣ್ಣನೊಡನೆ ಹೊರಕ್ಕೆ ಬಂದನು. ನನ್ನ ಪ್ರಾಣವು ಕುತ್ತಿಗೆಗೆ ಓಡಿತು. ‘ಇನ್ಸ್ಪೆಕ್ಟರನು’ ಕೈಯಲ್ಲಿದ್ದ ಕಾಗದವನ್ನು ನಾಲ್ಕು ಜನರಿಗೆ ತೋರಿಸಿ “ಈ ಕಾಗದವನ್ನು ಮುದ್ದಣ್ಣನು ಎಲ್ಲಿಯೋ ಅಡಗಿಸಿಡುವ ಹಾಗಿದ್ದನು” ಎಂದನು. ಮುದ್ದಣ್ಣನು ಹೆದರಿಹೆದರಿ “ಇಲ್ಲ ಸ್ವಾಮಿ! ಆ ಕಾಗದವು ಚಿಕ್ಕತಂದೆಯವರು ಮಾಡಿದ ಉಯಿಲು. ಅದನ್ನು ಇದ್ದಲ್ಲಿಯೇ ಇಡಬೇಕೆಂದಿದ್ದೆನು” ಎಂದು ಅಂಗಲಾಚಿ ಹೇಳಿದನು. ‘ಇನ್ಸ್ಪೆಕ್ಟರನು’ ನನ್ನ ಕೈಹಿಡಿದು “ನಿಮ್ಮ ಮನೆಯಲ್ಲಿ ಉಯಿಲು ಸಿಕ್ಕಿತು. ನಿಮ್ಮ ಮೇಲೆ ರುಜುವಾತು ಬಲವಾದುದರಿಂದ ನಿಮ್ಮನ್ನು ಕೈದು ಮಾಡಿರುವೆನು” ಎಂದು ಹೇಳಿದರು. ನನ್ನ ಎದೆಗೆ ಗುಂಡು ಹೊಡೆದಂತಾಯಿತು. ನಡುಕು ನನ್ನ ಮೈಮೀರಿ ಹೋಯಿತು. ನಾನು ನಿರುಪಾಯನಾಗಿ “ಪೋಲೀಸ್ ಲೊಕಪ್ಪಿನಲ್ಲಿ” ಬೀಳಬೇಕಾಯಿತು.

ನಿರಪರಾಧಿಯಾದ ನಾನು ನಾಲ್ಕನೆಯ ಸಲ ‘ಜೈಲಿಗೆ’ ಹೋಗಬೇಕಾಯಿತು. ನಾಲ್ಕನೆಯ ಸಲವೂ ನನಗೆ ತಾನಾಗಿ ಬಿಡುಗಡೆಯಾಯಿತು.

ಮರುದಿನ 10 ಗಂಟೆಯಹೊತ್ತಿಗೆ ಪೋಲೀಸ್ ಜಮೇದಾರನು ಬಂದು “ವರ್ಗವಾಗಿ ಹೋದ ಹಳೆಯ ಮುನಿಸಿಫರು ಈ ಉಯಿಲ್ ಪತ್ರವನ್ನು ಕಾರಣಾಂತರದಿಂದ ಭದ್ರವಾದ ಪೆಟ್ಟಿಗೆಯಲ್ಲಿ ಇಟ್ಟಿರುವರೆಂದು ಈ ಹೊತ್ತು ತಾನೆ ತಂತೀ ಮೂಲಕ ವರ್ತಮಾನ ಬಂದಿರುವುದರಿಂದ, ನಿಮ್ಮನ್ನು ಬಿಡುಗಡೆ ಮಾಡಬೇಕು ಎಂದು ಹುಕುಂ ಬಂದಿದೆ” ಎಂದು ಹೇಳಿ ನನ್ನನ್ನು ಬೆನ್ನು ತಟ್ಟಿ ನಗಾಡುತ್ತಾ ಮನೆಗೆ ಕಳುಹಿಸಿದನು.

15 ದಿನಗಳ ನಂತರ ನಂಬ್ರವು ಪುನಃ ವಿಚಾರಣೆಯಾಯಿತು. ಎರಡು ಉಯಿಲಿನ ಕಾಗದಗಳೂ ಮುನಿಸಿಫರ ಕೈಯಲ್ಲಿದ್ದವು. ಒಂದು ಮತ್ತೊಂದರ ಪ್ರತಿಯಾಗಿತ್ತು. ಎರಡರಲ್ಲಿಯೂ ತನ್ನ “ಸ್ಥಿರಚರ ಸೊತ್ತು ಸರ್ವಾದಿಯನ್ನು ಬಸವನ ಗುಡಿ ಮುದ್ದಣಗೆ” ಎಂದು ಚಿಕ್ಕತಂದೆಯವರು ಬರೆದಿದ್ದರು. ನಮ್ಮ ಚಿಕ್ಕತಂದೆಯವರ ಹಸ್ತಾಕ್ಷರವು ಗ್ರಂಥಲಿಪಿಯಾದುದರಿಂದ, ಮಾದಣ್ಣಗೋ ಮುದ್ದಣ್ಣಗೋ ಎಂಬ ವಿವಾದಕ್ಕೆ ಆಸ್ಪದವಾಯಿತು. ಇಬ್ಬರ ತಂದೆಯ ಹೆಸರನ್ನೂ ಉಯಿಲಿನಲ್ಲಿ ಹೇಳಿರಲಿಲ್ಲ. ಇಬ್ಬರಿಗೂ ಬಸವನಗುಡಿ ಎಂಬ ಕುಲನಾಮವಿತ್ತು. ಇದೂ ಅಲ್ಲದೆ ಅದರಲ್ಲಿ ಅಕ್ಷರ ಪರಿಶೋಧನೆಯ ಒಗಟುಗಳು ಹಲವಿದ್ದುವು. ಕೆಲವರು ಒಂದು ಎಡೆಯಲ್ಲಿ ಚಿನ್ನ ಮಾರಿದ್ದು ಎಂದು ಓದಿದರು; ಕೆಲವರು ಅದನ್ನೇ ಜನ್ನ ಮಾಡಿದ್ದು ಎಂದು ಅರ್ಥಿಸಿದರು. ದ್ವಯಾರ್ಥದ ಪದಗಳೂ ಕೇವಲವಿದ್ದುವು. ಮನೆ ಕೊಟ್ಟದ್ದು ಎಂದೂ ಮನೆಕೊಟ್ಟದ್ದು (ಕೊಟ್ಟ ರೋಗ) ಎಂದೂ ಬೇಕುಬೇಕಾದ ಹಾಗೆ ವ್ಯಾಖ್ಯಾನವನ್ನು ಮಾಡಿದರು. ಇದನ್ನೆಲ್ಲಾ ಪರಿಶೋಧಿಸುವುದಕ್ಕೆ ಮದ್ರಾಸಿನ ‘ಸ್ವೊಲ್ಲೋ ಪೇ’ ಎಂಬ ಸಾಹೇಬರ ಬಳಿಗೆ ಕಳುಹಿಸಿದರು. ಇವರು ಈ ಶಬ್ದಗಳಿಗೆ ಅರ್ಥವ್ಯಕ್ತಿವನ್ನು ಕೊಟ್ಟು ಕಳುಹಿಸಿದರು. ಇವರ ಹೇಳಿಕೆಯ ಪ್ರಕಾರ ಉಯಿಲಿನಲ್ಲಿ ಮುದ್ಯಣ್ಣ, ಜನ್ನ ಮದ್ದಿದ್ದು, ಮನೆ ಕಾಟದ್ದು ಎಂದು ನಿಷ್ಕರ್ಷೆಯಾಯಿತು. ಈ ವ್ಯಾಖ್ಯಾನದ ಪ್ರಕಾರ ಹಣವೆಲ್ಲಾ ಸರಕಾರಕ್ಕೆ ಹೋಯಿತು. “ಸ್ವೊಲ್ಲೋ ಪೇ” ಸಾಹೇಬರು ಈ ಉಯಿಲಿನ ಲಿಪಿಯ ಆಧಾರದಿಂದ “ಡ್ರೆವಿಡಿಯನ್ ಪೆಲಿಯೋಗ್ರೆಫಿ” ಎಂಬ ಪುಸ್ತಕವನ್ನು ಬರೆದು ಮಹಾವಿದ್ವಾಂಸರೆನ್ನಿಸಿಕೊಂಡರು. ಚಿಕ್ಕತಂದೆಯವರ ಉಯಿಲಿಂದ ಕೋರ್ಟ್ ಗುಮಾಸ್ತನಿಗೆ ಒಂದು ದಿನದ ಮಟ್ಟಿಗಾದರೂ ‘ಸಸ್ಪೆಂಡ್’ ಆಯಿತು; ಮಾದಣ್ಣನವರಿಗೆ ಒಂದು ಹೊತ್ತಿನ ಮಟ್ಟಿಗಾದರೂ ಸಂಕಷ್ಟವಾಯಿತು; ನನಗೆ ಒಂದು ರಾತ್ರಿ ಮಟ್ಟಿಗಾದರೂ ಸೆರೆಯು ಪ್ರಾಪ್ತವಾಯಿತು.

(ಸುವಾಸಿನಿ 1900 – 03)

ಟಿಪ್ಪಣಿ:
ಪಂಜೆ ಮಂಗೇಶರಾಯರ ನಾಲ್ಕು ಕತೆಗಳ ಗುಚ್ಛದ ಕೊನೆಯ ಕತೆ ಇದು. ಉತ್ತರಾಧಿಕಾರದ ಪ್ರಶ್ನೆ ಸಂಶಯಾಸ್ಪದವಾಗಿದ್ದಾಗ ಆಸ್ತಿಯನ್ನು ಅಥವಾ ಸಂಪತ್ತನ್ನು ಮುಟ್ಟುಗೋಲು ಹಾಕಲು ಬ್ರಿಟಿಷ್ ಆಡಳಿತ ಸದಾ ಎಚ್ಚರವಾಗಿರುತ್ತಿತ್ತು. ಬ್ರಿಟಿಷ್ ಸರಕಾರದ ಕಾರ್ಯನಿರ್ವಹಣೆಯನ್ನು ಸರಿಯಾಗಿ ಗಮನಿಸಿದರೆ ತೆರಿಗೆ ಸಂಗ್ರಹವೇ ಸರಕಾರದ ಮುಖ್ಯ ಕಾರ್ಯ ಎನ್ನುವಂತಿತ್ತು. ಅದರ ಎಲ್ಲಾ ಚಟುವಟಿಕೆಗಳ ಹಿಂದಿನ ಉದ್ದೇಶ ಅದೇ ಆಗಿತ್ತು. ಸರಕಾರ ಆರೋಗ್ಯ, ಸಾರ್ವಜನಿಕ ಶಿಕ್ಷಣ, ಸಾರಿಗೆ ಇತ್ಯಾದಿ ಕರ್ತವ್ಯಗಳನ್ನು ಕಣ್ಣೊರಸುವ ತಂತ್ರವಾಗಿ ಅಥವಾ ತನಗೆ ಲಾಭವಾಗುವಷ್ಟು ಮಾತ್ರ ಮಾಡುತ್ತಿತ್ತು. ಶಿಕ್ಷಣವನ್ನೇ ಗಮನಿಸುವುದಾದರೆ, ಡಾ. ಸೂರ್ಯನಾಥ ಕಾಮತರು ಹೇಳುವ ಈ ಮಾತನ್ನು ಗಮನಿಸಿ, “ಮದ್ರಾಸ್ ಸರಕಾರವು ಶಿಕ್ಷಣದ ಪ್ರಗತಿಗೆ ಅಷ್ಟು ಗಮನ ಕೊಟ್ಟಂಥದ್ದಲ್ಲ.” (‘ಪೊನ್ನ ಕಂಠಿ’. ಸಂಪಾದಕರು: ಡಾ. ಬಿ. ಎ. ವಿವೇಕ ರೈ. 1997. ಪುಟ 154.) ಆಗ ದಕ್ಷಿಣ ಕನ್ನಡವು ಮದ್ರಾಸ್ ಪ್ರಾಂತ್ಯದ ಭಾಗವಾಗಿತ್ತು. ಇಲ್ಲಿ ಬಾಸೆಲ್ ಮಿಷನರಿಗಳು, ಅಂದರೆ ಪ್ರೊಟೆಸ್ಟೆಂಟ್ ಕ್ರಿಶ್ಚನ್ನರು ಮತ್ತು ರೋಮನ್ ಕ್ಯಾಥೊಲಿಕರು ವಿದ್ಯಾ ಸಂಸ್ಥೆಗಳನ್ನು ತೆರೆದರು. “ಆದರೆ ಮಿಶನರಿಗಳ ಕೈಗೆ ಶಿಕ್ಷಣಕ್ಕೆ ಹೋಗುವ ತಮ್ಮ ಮಕ್ಕಳು ಮತಾಂತರಕ್ಕೆ ಒಳಗಾಗಬಾರದೆಂದು ಮಂಗಳೂರಿನ ನಾಗರಿಕರು 1865 ರಲ್ಲಿ 65,000 ರೂ. ದೇಣಿಗೆ ಸಂಗ್ರಹಿಸಿ ಸರಕಾರಕ್ಕೆ ಕೊಟ್ಟು, ಸರಕಾರೀ ಶಾಲೆಯೊಂದನ್ನು ತೆರೆಯಲು ಒತ್ತಾಯಿಸಲು 1867 ರಲ್ಲಿ ಮಂಗಳೂರಿನಲ್ಲಿ ಸರಕಾರಿ ಹೈಸ್ಕೂಲ್ ತೆರೆದರು. 1869 ರಲ್ಲಿ ಇದು ಕರ್ನಾಟಕದ ಪ್ರಥಮ ಕಾಲೇಜಾಗಿ ಮಾರ್ಪಟ್ಟಿತು.” (ಅದೇ. ಪುಟ 155).
ಮೇಲೆ ಹೇಳಿದಂತೆ, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಆಸಕ್ತಿಯಿಲ್ಲದ ಸರಕಾರವು ತೆರಿಗೆ ಸಂಗ್ರಹದ ಜತೆಗೆ, ಆಸ್ತಿ ಹಕ್ಕಿನ ವ್ಯಾಜ್ಯಗಳನ್ನು ಇತ್ಯರ್ಥ ಮಾಡಲು ಸಿವಿಲ್ ಕೋರ್ಟು ವ್ಯವಹಾರಗಳನ್ನು ಬಹಳ ಮುತುವರ್ಜಿಯಿಂದ ನಿರ್ವಹಿಸುತ್ತಿತ್ತು. ಆ ಕಾಲದಲ್ಲಿ ಸಮಾಜದ ಶ್ರೀಮಂತ ಉದ್ಯೋಗವೆಂದರೆ ವಕೀಲರದು ಆಗಿದ್ದುದು ಆಶ್ಚರ್ಯಕರವಾದರೂ ಸಕಾರಣದ್ದಾಗಿತ್ತು.
ಪಂಜೆ ಮಂಗೇಶರಾಯರ ಈ ನಾಲ್ಕು ಕತೆಗಳ ಗುಚ್ಛದ ಕೊನೆಯ ಭಾಗವಾದ ಈ ಕತೆಯಲ್ಲಿ ನಿರೂಪಕನ ಕುಟುಂಬದ ಆಸ್ತಿಯ ಉತ್ತರಾಧಿಕಾರವನ್ನು ನಿರ್ಣಯಿಸಬಹುದಾಗಿದ್ದ ಉಯಿಲು ಕೋರ್ಟಿಗೆ ಹೋಗುತ್ತದೆ. ಅದನ್ನು ವ್ಯಾಖ್ಯಾನಿಸುವವರು, ತಥಾಕಥಿತ ಬ್ರಿಟಿಷ್ ವಿದ್ವಾಂಸರು. ಅವರು ಉಯಿಲಿನ ಅಪವ್ಯಾಖ್ಯಾನ ನಡೆಸಿ, ಆಸ್ತಿಯನ್ನು ಸರಕಾರಕ್ಕೆ ಹೋಗುವಂತೆ ಮಾಡುವುದು ಅದ್ಭುತವಾದ ವ್ಯಂಗ್ಯವಾಗಿದೆ.
ಪಂಜೆ ಮಂಗೇಶರಾಯರ ಈ ನಾಲ್ಕು ಕತೆಗಳಲ್ಲಿ ವಸಾಹತು ಆಡಳಿತಗಾರರ ವಂಚನೆಯ ಸಾಂಕೇತಿಕ ನಿರೂಪಣೆಯಿದೆ.