ಹುಳಕ್ಕೆ ಎಲ್ಲೆಲ್ಲಿಯ ಕನೆಕ್ಷನ್ನುಗಳಿವೆ? ಎನ್ನುವುದರ ಮೂಲಕ ಮುಗ್ಧ ಜನರಿಗೆ ಈ ಹಸಿವೆಂಬ ಹುಳ ಅದ್ಹೇಗೆ ತನ್ನ ಹಿಡಿತ ಸಾಧಿಸಿದೆ ಎಂಬುದನ್ನು ಮನದಟ್ಟು ಮಾಡುತ್ತಾ ಸಾಗುತ್ತದೆ. ‘ಹೂವುಗಳ್ಯಾಕೋ ಮೊಗ್ಗಿನಲೆ ಕಮರುತ್ತಿವೆ’ ಎನ್ನುವ ಸಾಲಿನಲ್ಲಿಯೂ ಮುಗ್ಧ ಹೃದಯಗಳ ಆತಂಕ ಎತ್ತಿ ತೋರಿಸುತ್ತದೆ. ಮತ್ತೆ ಮುಂದುವರೆದು ‘ಹೂವು ಅರಳಿಲ್ಲ’ ಎನ್ನುವ ಕವಿತೆಯಲ್ಲಿ ಬೆಳಕಿನ ಬೆಂಬತ್ತಿ ಹೋಗಿ, ಎಷ್ಟೆ ದಾರಿ ಸವಿಸಿದರೂ ಗಾಢಕತ್ತಲೆಯಲ್ಲಿ ಕಷ್ಟ ಸುಖ ಸಹಿಸಿಯೂ ಬೆಳಕನೂರ ಕಾಣುವ ಆಶಾವಾದವನ್ನು ಎದೆಯೊಳಗೆ ಕಾಪಿಟ್ಟುಕೊಂಡು ಮನಸ್ಸು ಅರಳಿಸುವ ಅರಳುವ ಕಾಲಘಟ್ಟಕ್ಕಾಗಿ ಕಾಯುತ್ತಾ ಕುಳಿತುಕೊಂಡಿದೆ ಕಾಲ.
ಪ್ರವೀಣ ಅವರ “ಬಾನಸಮುದ್ರಕೆ ಗಾಳನೋಟ” ಕವನಸಂಕಲನ  ಕುರಿತು ಕಿರಸೂರ ಗಿರಿಯಪ್ಪ ಬರೆದ ಲೇಖನ

 

ಬಾನಸಮುದ್ರಕೆ ಗಾಳ ನೋಟ ಪ್ರವೀಣ ಅವರ ಕವನ ಸಂಕಲನ. ಈ ಸಂಕಲನದ ಮೊದಲ ಕವಿತೆಯನ್ನು ಓದಿದಂತೆಲ್ಲಾ ಎದೆಗಿಳಿದು ನನ್ನೊಳಗೆ ಅವ್ವನ ಧ್ಯಾನˌ ಮಣ್ಣ ಬಿಸುಪಿನಲಿ ಅವಳ ಪಿಸುನುಡಿಗಳನ್ನು ಎದೆಯೊಳಗೆ ಇಳಿಸಿ ನೊಂದ ಹೃದಯಗಳಿಗೂ ಲಕ್ಷಾಂತರ ಬತ್ತಿಯಾಗಿ ಹೂ ನಗೆಯಾಗಿ ಬೆಳಕಿನ ಎಳೆಯಾಗಿ ಮನಸ್ಸು ಮತ್ತು ಹೃದಯಗಳಲಿ ಸದಾ ಬೆಚ್ಚಗಿಡುವಂತೆ “ಲಕ್ಷಾಂತರ ಬತ್ತಿ” ಬೆಸೆವ ಅವ್ವ ಕಾಲಗನ್ನಡಿಯಂತೆ ಗೋಚರಿಸುತ್ತಾಳೆ. ಇಲ್ಲಿಯ ಅವ್ವ ಸೀರೆಯ ಸೆರಗಿನಷ್ಟೇ ಜಗವನ್ನೇ ಸಂತೈಸೋ ಜೋಳಿಗೆಯಂತೆˌ ಕಾಣದೂರಿಗೆ ಮಿಣುಕು ದೀಪದ ದಾರಿಯಂತೆ ಅವ್ವ ದಿಕ್ಸೂಚಿಯಾಗಿ ಗೋಚರಿಸುತ್ತಾಳೆ.

ನಂತರದ ಕವಿತೆಗಳನ್ನು ಮತ್ತೆ ಮತ್ತೆ ಓದಿದ್ದೇನೆ. ಓದಿ ಆಡಿಯೋ ಮಾಡಿ ಕೇಳಿದ್ದೇನೆ. ಕೇಳಿಯೂ ಓದಿಯೂ ಅನಿಸಿದ್ದು ಮಾತ್ರ ಬರೆಯಲು ತೊದಲು ನುಡಿ ದಾಖಲಿಸುವ ಪ್ರಯತ್ನ.

‘ಮೋಜಿಗೆಂದು ಬಿಟ್ಟುಕೊಂಡ ಹುಳ
ಹೃದಯವನ್ನೇ ಕೊರೆಯುತ್ತದೆ’

(ಪ್ರವೀಣ)

ಎಂಬಂತಹ ಅಸಾಯಕತೆಯಲ್ಲಿ ‘ಹಸಿವೆಗೆ ದಣಿವೆ ಇಲ್ಲ’ ಇಕ್ಕಟ್ಟುಗಳು ಸಂಕಟಗಳು ತಳಮಳಗಳು ಮನುಷ್ಯನೊಳಗೆ ಸುಳಿದಾಡುವ ಪರಿಯನ್ನು ವಿಸ್ತೃತಗೊಳಿಸುತ್ತಾ ಸಾಗುತ್ತದೆ. ಹುಳಕ್ಕೆ ಎಲ್ಲೆಲ್ಲಿಯ ಕನೆಕ್ಷನ್ನುಗಳಿವೆ? ಎನ್ನುವುದರ ಮೂಲಕ ಮುಗ್ಧ ಜನರಿಗೆ ಈ ಹಸಿವೆಂಬ ಹುಳ ಅದ್ಹೇಗೆ ತನ್ನ ಹಿಡಿತ ಸಾಧಿಸಿದೆ ಎಂಬುದನ್ನು ಮನದಟ್ಟು ಮಾಡುತ್ತಾ ಸಾಗುತ್ತದೆ. ‘ಹೂವುಗಳ್ಯಾಕೋ ಮೊಗ್ಗಿನಲೆ ಕಮರುತ್ತಿವೆ’ ಎನ್ನುವ ಸಾಲಿನಲ್ಲಿಯೂ ಮುಗ್ಧ ಹೃದಯಗಳ ಆತಂಕ ಎತ್ತಿ ತೋರಿಸುತ್ತದೆ. ಮತ್ತೆ ಮುಂದುವರೆದು ‘ಹೂವು ಅರಳಿಲ್ಲ’ ಎನ್ನುವ ಕವಿತೆಯಲ್ಲಿ ಬೆಳಕಿನ ಬೆಂಬತ್ತಿ ಹೋಗಿ, ಎಷ್ಟೆ ದಾರಿ ಸವಿಸಿದರೂ ಗಾಢಕತ್ತಲೆಯಲ್ಲಿ ಕಷ್ಟ ಸುಖ ಸಹಿಸಿಯೂ ಬೆಳಕನೂರ ಕಾಣುವ ಆಶಾವಾದವನ್ನು ಎದೆಯೊಳಗೆ ಕಾಪಿಟ್ಟುಕೊಂಡು ಮನಸ್ಸು ಅರಳಿಸುವ ಅರಳುವ ಕಾಲಘಟ್ಟಕ್ಕಾಗಿ ಕಾಯುತ್ತಾ ಕುಳಿತುಕೊಂಡಿದೆ ಕಾಲ. ಅರಳುವ ಕಾಲ ಬಂದೆ ಬರುತ್ತದೆ ಎಂಬುದು ಕವಿಯ ಆಶಯವಾಗಿದೆ.

ತನ್ನನ್ನೇ ತಾನು ಮೈಸುಟ್ಟುಕೊಂಡು ಎದೆ ಪರಚಿಕೊಂಡು ಸಣ್ಣಾಗಿ ಹಣ್ಣಾಗಿ ಮಾಗುತ್ತಾ ‘ಆಘಾತದಿಂದ ಬಿದ್ದುಕೊಂಡಿರುವ ಬೆಂಕಿಕಡ್ಡಿ ಒಂದೆಡೆಯಾದರೆ ಬೆಂಕಿಯ ಅರಿವೆ ಇಲ್ಲದೆ ನಿಧಾನವಾಗಿ ಎದೆಗಿಳಿವ ಧ್ಯಾನಸ್ಥ ಬುದ್ಧನ ಮಿಂಚು ಎದೆಗೆ ನಾಟುವಂತೆ ಚಿತ್ರಿಸಿದ್ದಾರೆ.

‘ಬ್ಯಾಟರಿ ಬೆಳಕು’ ಪದ್ಯದಲ್ಲಿ ಗಡಿಯಾರದ ಕಾಲಿಗೆ ಪೋಲಿಯೋ ಹೊಡೆದ ಸವಿಗನಸು’ ಹೀಗೆ ಬೀಡುಬೀಸಾಗಿ ಕವಿತೆಯ ಸಾಲುಗಳ ಮೂಲಕ ಕಾಲಕ್ಕೆ ಅಂಟಿದ ರೋಗದ ವ್ಯಾದಿಗಳನ್ನು ಬಿಚ್ಚಿಡುತ್ತಾ ಬ್ಯಾಟರಿ ಬೆಳಕು ಬೆನ್ನು ಬಿಡುತ್ತಿಲ್ಲ ಎನ್ನುವ ಆತಂಕದೊಳಗೆ ಹೃದಯಕ್ಕೆ ಬೆಂಕಿಹಚ್ಚಿ ಬೆಚ್ಚಗಾಗುತ್ತೇನೆ ಎನ್ನುವ ಆತಂಕದೊಳಗೂ ಕತ್ತಲಿನಲಿ ಮಿಂಚುಹುಳುವಿನ ಧ್ಯಾನದಲಿ ನಕ್ಷತ್ರ ಬಿಡಿಸುವ ಕೆಲಸಕ್ಕೆ ಕೈಹಾಕುತ್ತಾರೆ.

‘ವಿಶ್ವವೆ ಆಟಿಕೆಯ ಬುಟ್ಟಿ’ ಭಯವಿಲ್ಲ ಬೇದವಿಲ್ಲˌ ದಣಿವಿಲ್ಲ ರಣರಣ ಬಿಸಿಲಲ್ಲೂ ಹಣೆತುಂಬಾ ಇಬ್ಬನಿಸಂತೆ’ ಮನಸು ಮಗುವಾದ ಬೆರಗಿನಲಿ ತೇಲುವ ಕವಿತೆ ವಿಶ್ವವನ್ನೇ ತೆಕ್ಕೆಯೊಳಗೆ ಬಾಚಿಕೊಂಡು ಸಾಗುತ್ತದೆ. ವಿಶ್ವ ಅದು ಮುಗ್ಧಮಗುವಿನಂತೆ ಚಂದಿರನ ತಿಳಿ ನಗುವಿನಂತೆ ಎಂಬ ಕ್ಷಣ ಚುಂಬಕ ಬಿಸಿಲು ಇಬ್ಬನಿಗೆ ಹೋಲಿಸಿದ್ದಾರೆ.

ಇಲ್ಲಿಯ ಅವ್ವ ಸೀರೆಯ ಸೆರಗಿನಷ್ಟೇ ಜಗವನ್ನೇ ಸಂತೈಸೋ ಜೋಳಿಗೆಯಂತೆˌ ಕಾಣದೂರಿಗೆ ಮಿಣುಕು ದೀಪದ ದಾರಿಯಂತೆ ಅವ್ವ ದಿಕ್ಸೂಚಿಯಾಗಿ ಗೋಚರಿಸುತ್ತಾಳೆ.

‘ಕನಿಕರ ಬೇಕಿರುವುದು ಹೆಣಕ್ಕಲ್ಲ
ಅಳುವವರಿಗೆ'(ಆಚೆಗೇನು ಇಲ್ಲ)

ಇಲ್ಲಿ ವ್ಯಕ್ತವಾಗಿರುವ ಕವಿಯ ಕನಿಕರ ಕಳವಳ ಮಾರ್ಮಿಕವಾದದ್ದು. ಸದ್ಯ ಸತ್ತವರ ಹೆಸರಲ್ಲಿ ರಾಜಕೀಯ ಮಾಡುತ್ತಾ ರಾಡಿ ಎಬ್ಬಿಸುವವರಿಗೆ ನೇರವಾದ ಪ್ರಶ್ನೆಯೂ ಹೌದು. ಕಣ್ಣೀರಲ್ಲಿ ಕೈತೊಳೆಯುತ್ತಿರುವ ಅಸಂಖ್ಯಾತ ಕಣ್ಣೀರುಗಳಿಗೆ ಆಶ್ರಯಬೇಕು ಎಂದು ಹೇಳುತ್ತಾ ‘ಸಾವು ನಿರಾತಂಕ ನಿರ್ಭಯ ನಿರ್ವಸ್ತ್ರ| ಗೆಳತಿಯಂತೆ ಬಂದು| ತಬ್ಬಿಕೊಳ್ಳುತ್ತದೆ|-ಸಾವಿನ ಬೀಡೆಗೂ ಮುನ್ನ ಜನ ಇದ್ದಷ್ಟು ದಿನವನ್ನಾದರೂ ಸುಖನೆಲೆ ಕಂಡುಕೊಳ್ಳಲಿ ಎಂಬುದಾಗಿದೆ.

‘ಬೀಜಧ್ಯಾನ’ ಕವಿತೆಯಲ್ಲಿ ‘ರೆಕ್ಕೆಕಟ್ಟಿಕೊಂಡು ಹಾರಿ ಹೋಗುತ್ತಿತ್ತು ಮೋಡ’ ಹೀಗೆ ನೆಲದ ನಗೆ ಹಿಗ್ಗಿಸಲು ಬಿಸಿಲ ಬರೆಯನ್ನು ಅಳಿಸಲು ಬೋಳು ಬುಡದ ಟೊಂಗೆಯಲಿ ಹೊಸ ಹೂ ಅರಳಿಸಲು ತಯಾರಿಯಾಗಬೇಕಿದ್ದ ಮೋಡಗಳು ಆಗಸದ ಜಾತ್ರೆಯಲ್ಲಿ ಕಳೆದುಕೊಂಡಿವೆ ಎನ್ನುತ್ತಾರೆ. ಮತ್ತು ನೆಲದ ಬಾಯಾರಿಕೆ ಕಣ್ಣುಗಳು ನಿವೇದಿಸುತ್ತಲೆ ಕನವರಿಸುವಂತೆ ಮಾಡುತ್ತದೆ.

ಹಾಗೆ ಮುಂದುವರೆದ ಇನ್ನೊಂದು ಕವಿತೆ ‘ಕಾಮಪಿಪಾಸು ಸಮುದ್ರ’ ಕವಿತೆಯಲ್ಲಿ ‘ಮಳೆಯ ಸ್ಪರ್ಶದಿಂದ ತೃಪ್ತಿ ಹೊಂದದ/ ‘ಕಾಮಪಿಪಾಸು ಸಮುದ್ರ/ಉಬ್ಬರದಿಂದ ಬಳಲುತ್ತದೆ ಎನ್ನುತ್ತಾರೆ. ನಂತರ ‘ಇಲ್ಲಿ ಮಳೆ ನಿನ್ನಂತಿಲ್ಲ’ ಕವಿತೆಯಲ್ಲಿ ‘ಮಳೆಬಿದ್ದ ಮುಂಜಾನೆಯ/ಮಬ್ಬೆಳಕಿನಲಿ ಮನದ ಕೊಳ್ಳ ತುಂಬುವ/ನೂರಾರು ಹರಿವುಗಳು/ಹೀಗೆ ನಿರಂತರ ಜೀವಜಲದಂತೆ ಪುಳಕದಂತೆ ನಿಟ್ಟುಸಿರಿನಂತೆ ಗೋಚರಿಸುವ ಮಳೆ ‘ಕೆಲಸದ ಮಧ್ಯೆ ಧುತ್ತನೆ ಗೆಳತಿಯ ನೆನಪಾದಂತೆ ಎಂದು ಮಳೆಯನ್ನು ತಬ್ಬಿಕೊಳ್ಳುವ ಕೆಲಸ ನಡೆಯುತ್ತದೆ.

‘ನನ್ನದೂ ಒಂದು ಕೂಗು’ ಎನ್ನುವ ಕವಿತೆಯೂ ವ್ಯವಸ್ಥೆಯ ಪಿತೂರಿಗಳ ನಡುವೆ ನಿಂತು ಮೌನ ಪ್ರತಿಭಟನೆಯನ್ನು ದಾಖಲಿಸುತ್ತದೆ. ‘ಹಗ್ಗದ ಯಾವ ತುದಿಗಾದರೂ ನೂಲಾಗಲಿ|ನನ್ನ ಕೂಗು| ಎನ್ನುವುದರ ಮೂಲಕ ‘ಒಡಕು ಅಪಸ್ವರವಾದರು ಕೂಗುತ್ತೇನೆ| ಎನ್ನುವುದರ ಮೂಲಕ ಧಮನಿತ ದನಿ ಕೊಲ್ಲುವ ಪಿತೂರಿಗೆ ಹಗ್ಗವನ್ನೆ ಉರುಳಾಗಿಸಲು ಹಿಂಜರಿಯುವುದಿಲ್ಲ ಎಂಬದನ್ನು ಕವಿತೆಯ ಮೂಲಕ ಪ್ರತಿಭಟಿಸುತ್ತಾರೆ.

ತಮ್ಮ ಕವಿತೆಯುದ್ದಕ್ಕೂ ಸುಪ್ತ ಮನಸ್ಸುಗಳ ಬೆಸೆಯುವ ಕೆಲಸ ಮಾಡುತ್ತಾ ನೊಂದವರಿಗೆ ದನಿಯಾಗಿ ಈ ಕಾಲದ ತಲ್ಲಣಗಳಿಗೆ ಮಿಡಿಯುತ್ತಾ ‘ದೂರದಲಿ ನೀರಿಗೂ ಹಸಿವು’ ಎಂಬುದನ್ನು ಜೋರಾಗಿ ಸಿಳ್ಳೆ ಹೊಡೆದಂತೆ ಹೇಳುತ್ತಾರೆ. ‘ಭೂಮಿಗೂ ಬುದ್ಧಿ ಇರಬೇಕಿತ್ತು’ ಎನ್ನುವುದರ ಮೂಲಕ ‘ಹಸಿದವನಿಗೆ ಹಸಿವಾದರೆ ಮಾತ್ರ ಪ್ರಳಯವಾಗುತ್ತದೆ’ ಎಂಬುದನ್ನು ಎತ್ತಿ ತೋರಿಸುತ್ತಾರೆ.

ಪ್ರವೀಣರವರ ಕವಿತೆಯಲ್ಲಿ ನೆಲದ ನಗೆ ಹಿಗ್ಗಿಸುವ ಮಳೆಯ ಮೊದಲ ಸ್ಪರ್ಶವಿದೆ. ತವಕ ತಲ್ಲಣಗಳ ಕಂಗಾಲಾದವರ ದನಿಗೆ ಮುಲಾಮಾಗಿ ನಿಲ್ಲುವ ಧೈರ್ಯವಿದೆ. ಹಸಿವೆಂಬ ಕ್ರೂರ ಜಗತ್ತಿಗೆ ಬಿಸಿಲಲ್ಲೂ ಕಚಗುಳಿ ಇಕ್ಕುವ ಇಂಬನಿಯ ಧ್ಯಾನವಿದೆ. ನಿಧಾನವಾಗಿ ಎದೆಗೆ ತಾಕುವ ಇಲ್ಲಿಯ ಕವಿತೆಗಳು ಪಳಗಿಸಿಕೊಂಡವನೊಬ್ಬ ಎಳೆಎಳೆಯಾಗಿ ಪೋಣಿಸಿ ಮಾಲೆ ಮಾಡಿ ಸಮಾಜದ ಹೊಸ್ತಿಲಲಿ ಎಚ್ಚರಗೊಂಡಂತೆ ಎಲ್ಲ ಕವಿತೆಗಳು ಎಚ್ಚರವಾಗಿಯೆ ಎಲ್ಲ ಕಾಲಘಟ್ಟದಲ್ಲಿಯೂ ಎದೆ ತಾಕುತ್ತವೆ.