ಮನುಷ್ಯನಿಗೆ ಹಾಳಾಗಲಿಕ್ಕೆ ಒಂದು ಕಾಲ. ಒಳ್ಳೆಯದಾಗಲಿಕ್ಕೆ ಒಂದು ಕಾಲ. ಸಾಮಾನ್ಯ ಅದೇ ಟೈಮಿಗೆ ಇರಬಹುದು, ವೆಂಕಟರಾಯರ ದಂಡು ಮದರಾಸಿನಿಂದ ಹೆಂಡತಿಯನ್ನು ಕರೆದುಕೊಂಡು ಟಾಂಗಾದಿಂದ ಬರುತ್ತಿತ್ತು. ಆ ಬ್ಯಾಗು ಹೋಲ್ಡಾಲು, ಹೆಂಡತಿಯ ತುಟಿಗೆ ಮೆತ್ತುವ ರಂಗು; ಆ ಚಪ್ಪಲಿ, ಆ ಬೂಟ್ಸು, ಹ್ಯಾಟು, ಪ್ಯಾಂಟು, ಕೋಟು, ವಾಕಿಂಗ್ ಸ್ಟಿಕ್, ಐ ರಿಮೆಂಬರ್ ಎವರಿಥಿಂಗ್, ಅಂಡರ್ಸ್ಟೇಂಡ್” ಎಂದು ಅಣ್ಣಯ್ಯ ಮತ್ತೆ ಮತ್ತೆ ತನಗೆ ಬರುವ ಇಂಗ್ಲಿಷ್ ನಲ್ಲಿ ಮುಂದುವರಿಸುತ್ತಿದ್ದ – “ಎಲ್ಲ ವೆಂಕಟರಾಯರನ್ನೇ ನೋಡಿ ತೆರೆದ ಬಾಯಿ ಮುಚ್ಚುತ್ತಿರಲಿಲ್ಲ ಜನ.
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನ ಕಾಲದ ಕಥಾಸರಣಿಯಲ್ಲಿ ಗುರುರಾಜ ಮಾರ್ಪಳ್ಳಿ ಬರೆದ ಕಥೆ “ರಾಯರು ಮತ್ತು ಬಿಳಿಕುದುರೆ”

 

“ಮಗು ಹೇಗಿತ್ತೆಂದರೆ ಇಂಗ್ರೇಜಿಯವರ ಬಣ್ಣವಿಲ್ಲವೇ ಹಾಗೆ” ಅಣ್ಣಯ್ಯ ಹೇಳುತ್ತಿದ್ದ. ಐವತ್ತು ವರ್ಷಗಳ ಹಿಂದೆ ನಡೆದ ಒಂದು ಘಟನೆಗೆ ಜೀವಂತ ಸಾಕ್ಷಿ ಅವನೊಬ್ಬನೆ. “ರಾಯರ ಮನೆಯ ಜಗಲಿಯಲ್ಲಿ ಬಳ್ಳಿ ಮನೆಯ ಶಕುಂತಳೆ ಎಂಬ ಹೆಂಗಸು ಒಂದು ಮಧ್ಯಾಹ್ನ ಬಿಸಿಲಲ್ಲಿ ಆ ಮಗುವನ್ನು ತಂದು ತೋರಿಸಿದಾಗ ಕಾಳಿಂಗ ರಾಯರಿಗೆ ಆದ ಆಘಾತ ಮುಂದೆ ಅರಗಿಸಿಕೊಳ್ಳಲಿಕ್ಕೆ ಆಗಲಿಲ್ಲ.”

ಒಂದು ಕತೆಯ ಸ್ವಾರಸ್ಯದ ಅಂಶವನ್ನು ಹೇಳಿ ಆಮೇಲೆ ಅಣ್ಣಯ್ಯ ತನ್ನ ಜೋತಾಡುತ್ತಿರುವ ಲಂಗೋಟಿಯ ತುದಿಯಿಂದ ತೆಗೆದ ವೀಳ್ಯದೆಲೆ ಹಾಕತೊಡಗುತ್ತಾನೆ. ಆಗ ಅವನಿಗೆ ಕಾಳಿಂಗರಾಯರ ತಮ್ಮ ವೆಂಕಟರಾಯರ ಮುಖ ನೆನಪಿಗೆ ಬರುವುದು. ವೀಳ್ಯದ ಸರಂಜಾಮು ತೆಗೆದು ವೀಳ್ಯದೆಲೆ ಮೊಣಗಂಟಿಗೆ ಒರಸಿ ಅದರ ಕುಡಿ ಚಿವುಟಿ ಹಣೆಯ ಕೆಳಬದಿ ಕಣ್ಣಿನ ಒತ್ತಿಗೆ ಇಟ್ಟುಕೊಂಡು ಮೈಕುಣಿಸಿ ನಗುತ್ತ ಸುಣ್ಣ ಹಚ್ಚುತ್ತ ಹೇಳಿದ,

“ಅಲ್ಲ, ಎಲ್ಲ ಕಾಲದ ಮಹಾತ್ಮೆ ಅಂತೇನೆ. ಇಲ್ಲವಾದರೆ ಕಾಳಿಂಗರಾಯರ ತಲೆ ಹೀಗೆಲ್ಲಾ ಆಗುವಾಗ ಎಲ್ಲಿ ಹೋಗಿತ್ತು ಅಂತ.”

ಅಣ್ಣಯ್ಯ ಗೊತ್ತಿಲ್ಲದೆ ಕತೆಯಲ್ಲಿ ಸಸ್ಪೆನ್ಸು ಬೆಳೆಸುವ ಧಾಟಿ. ಶಿವಪ್ಪಾಡಿಯ ಪಾಳುಬಿದ್ದ ರಾಯರ ಮನೆಯ ಘಟನೆ ಅದು. ಅವನಿಗೆ ಶ್ರೋತೃ ಹಿಸ್ಟರಿ ಎಂ. ಎ. ಮಾಡಿ ತನ್ನ ತೆಂಗಿನ ತೋಟ ನೆಚ್ಚಿ ಬದುಕುತ್ತಿರುವ ಶ್ಯಾಮರಾಯ. ಈ ಶ್ಯಾಮರಾಯ ಹಿಸ್ಟರಿಯ ಮರುಳಿನಿಂದಲೇ ರಾಯರ ಮನೆಯ ಹೆಬ್ಬಾಗಿಲಿನ ಹಂಚಿನ ಇಸವಿ ಓದುತ್ತಿದ್ದ.

“ಬಾಸೆಲ್ ಮಿಶನ್ ಸಾವಿರದ ಒಂಬೈನೂರು….”

ಆಗ ಅಣ್ಣಯ್ಯ ಹೇಳುತ್ತಿದ್ದ, “ಅದೆಲ್ಲ ಯಾಕೆ ಮಾಣೀ, ನಾವೆಲ್ಲ ಈ ರಾಯರ ಮನೆಯ ಜರ್ಬು ನೋಡಿದವರಲ್ವ. ಶಿವಪ್ಪಾಡಿ ಮಾತ್ರ ಅಲ್ಲ ಹತ್ತಿರದ ಬಾರಕೂರು, ಮಂದಾರ್ತಿವರೆಗೂ ಇವರ ಒಕ್ಕಲುಗಳಿದ್ದರು. ಕಾಳಿಂಗರಾಯರ ಕಾಲದಲ್ಲಿ ಇಲ್ಲಿ ವರ್ಷದ ಆರು ತಿಂಗಳು ಒನಕೆಯ ಕೈಗಳಿಗೆ ಬಿಡುವಿರಲಿಲ್ಲ. ಈಗ ಇಲ್ಲ ಆ ಲೆಕ್ಕ. ಕೋರ್ಜಿಗಟ್ಟಲೇ ಆಸ್ತಿ. ಈಗ ನಿಮ್ಮ ಗ್ರಾಂ ಗ್ರೀಂ ಎಲ್ಲ ಬಂದ ಮೇಲೆ ಕೋರ್ಜಿ, ಕಳಸೆ, ಸೇರು, ಒನಕೆ, ಏತ ಎಲ್ಲ ಹೇಗೆ ಮಾಯವಾಯ್ತು ನೋಡು. ಆ ಕಾಲ ಎಂಥದು…” ವೀಳ್ಯದೆಲೆ ಉಗಿಯಲು ಹೋಗುವ ಅಣ್ಣಯ್ಯ ರಾಯರ ಮನೆಯ ಹಿಂದಿರುವ ದೊಡ್ಡ ಗುಡ್ಡವನ್ನು ನೋಡಿ ಕಣ್ಣು ಸಣ್ಣದು ಮಾಡಿ – “ಆ ಗುಡ್ಡದ ತುದಿಯಲ್ಲಿ ಒಂದು ಪಿಲಿ ಮಾಟೆ ಉಂಟಲ್ಲ. ಅಂದರೆ ಹುಲಿಯ ಗುಹೆ. ಅದಕ್ಕೂ ಈ ಮನೆ ಪಾಳು ಬೀಳುವುದಕ್ಕೂ ಒಂದು ಸಂಬಂಧವುಂಟು” ಎನ್ನುವ.

ಆಗ ಅವನ ವೀಳೆಯದ ಸವಿ ಅವನ ಸಸ್ಪೆನ್ಸ್ ಎಲ್ಲವನ್ನೂ ಸಹಿಸಿಕೊಳ್ಳಲಾಗದೆ ಎಂ. ಎ. ಶ್ಯಾಮರಾಯ, “ನೀನು ಏನೋ ಮಾರಾಯ. ಅದರ ಕತೆ ಸಾಯುವುದರೊಳಗೆ ಹೇಳುವುದಿಲ್ಲ ಎಂದು ಕಾಣುತ್ತದೆ” ಎನ್ನುತ್ತಾನೆ.

ಆದರೆ ವೈಶಾಖ ಶುದ್ಧ ಪೂರ್ಣಿಮೆಯ ದಿನ ಯಾಕೋ ಅಣ್ಣಯ್ಯನಿಗೆ ಭಾರೀ ಉಮೇದು ಬಂದಿತು. ಅವನಿಗೂ ಜ್ಞಾನೋದಯ ಆಯ್ತೋ ಏನೆಂದು ಗೊತ್ತಿಲ್ಲ. ಅಥವಾ ಹಿಸ್ಟರಿ ಎಂ.ಎ.ಯ ಭಾಗ್ಯವೋ, ಆ ದಿನ ಅಣ್ಣಯ್ಯ ಕತೆಯನ್ನು ಸೊಗಸಾಗಿ ಹೇಳತೊಡಗಿದ.

ಹೊರಗೆ ಬೆಳದಿಂಗಳಿತ್ತು. ರಾಯರ ಮನೆಯ ಈಶಾನ್ಯ ಭಾಗದಲ್ಲಿದ್ದ ಕೆರೆಯ ನೀರು ಬೆಳದಿಂಗಳಿಗೆ ಹೊಳೆಯುತ್ತಿತ್ತು. ಎಳ್ಳು ಹರಿಯಲು ಹೋದ ಹೆಣ್ಣು ಆಳು ಮಕ್ಕಳು ಕಾಣಿಸುತ್ತದೆ, ನೀರಿನ ಅಲೆಗಳ ಜತೆ ಜತೆ ಕಿಲಕಿಲ ನಕ್ಕು ಸ್ನಾನಮಾಡಿ ಹೊರಟು ಹೋಗುತ್ತಿದ್ದರು. ಗಾಳಿ ಸುಮ್ಮನಿದ್ದು ಒಮ್ಮೊಮ್ಮೆ ಹಾಯಾಗಿ ಬೀಸುತ್ತಿತ್ತು. ಅಣ್ಣಯ್ಯನಿಗೆ ಸ್ವಲ್ಪ ಕಳ್ಳಿನ ಅಮಲು ಜೊಂಪಾಗಿತ್ತು ಎಂದು ಕಾಣಿಸುತ್ತದೆ. ಅವನು ತನ್ನೊಳಗೆ ಎರಡು ಬಾರಿ ನಕ್ಕು ಕತೆ ಶುರು ಮಾಡಿದ.
“ಅಲ್ಲ ಶ್ಯಾಮ, ನಿನ್ನ ಟಿಸ್ ಪುಸ್ ಇಂಗ್ಲೀಷ್ ಉಂಟಲ್ಲ. ಅದು ಯಾರಿಂದ ಬಂದದ್ದು ಹೇಳು. ನೀನು ಗರಡಿ ದೇವಸ್ಥಾನ, ಭೂತದ ಗುಡಿ ಎಲ್ಲ ನೋಡಿದರೆ ಮೊಣಕಾಲಿನವರೆಗೆ ಬೂಟ್ಸು, ತಲೆಗೆ ಹ್ಯಾಟು, ಕೋಟು ಪ್ಯಾಂಟು ಹಾಕಿ ಬಲಗೈಯಲ್ಲಿ ಒಂದು ಉದ್ದ ನಾಡಕೋವಿ ಹಿಡಿದ ಹುರಿಮೀಸೆಯ ಚಿತ್ರ ನೋಡಿಲ್ಲವಾ, ನೋಡಿದ್ದೀಯಾ ಇಲ್ಲವಾ?”

ಶ್ಯಾಮನಿಗೆ ಅಣ್ಣಯ್ಯ ತಾನು ಕಳ್ಳು ಕುಡಿದಿದ್ದೇನೆಂದು ಗ್ಯಾರಂಟಿ ಮಾಡಿಕೊಡುತ್ತಿದ್ದ. ಆದ್ದರಿಂದ ಶ್ಯಾಮ “ಹ್ಞಾಂ ಹ್ಞಾಂ” ಎಂದು ಸ್ವಲ್ಪ ಹೆಚ್ಚೆ ಅರ್ಥ ಆಗುವವರ ಹಾಗೆ ಹೇಳುತ್ತಾನೆ.

“ಹಾಂ ಅದು ಇಂಗ್ರೆಜಿ ಸ್ಟೈಲ್. Understand?”

ಅಣ್ಣಯ್ಯ ಆ ಕಾಲದ ಮುದುಕನಾದರೂ ಅವನಿಗೆ ಇಂಗ್ಲಿಷ್ ಬರುತ್ತದೆ. ಮಿಶನ್ ಶಾಲೆಯಲ್ಲಿ ಅವನು ಕಾಳಿಂಗರಾಯರ ತಮ್ಮನ ಜತೆ ಐದನೆಯವರೆಗೆ ಓದಿ ಮುಂದೆ ಹೋಗದೆ ಇದ್ದುದು ಇಂಗ್ಲಿಷರ ಪುಣ್ಯ. ಇಲ್ಲದಿದ್ದರೆ ಅವರ ಭಾಷೆಯನ್ನು ಪೂರಾ ಲಗಾಡಿ ತೆಗೆಯುತ್ತಿದ್ದ ಎಂದು ಆಲೋಚಿಸಿದ ಶ್ಯಾಮರಾಯ.
“ನಿನ್ನ ಇಂಗ್ಲಿಷ್ ಎಲ್ಲ ಬಿಟ್ಟು ಕನ್ನಡದಲ್ಲೆ ಹೇಳೋ ಮಾರಾಯ. ನಾನು ಬೇಕಿದ್ದರೆ ಇಂಗ್ಲಿಷ್ ನಲ್ಲೆ ಹ್ಞೂಗುಟ್ಟುತ್ತೇನೆ” ಎಂದ.

ಅಣ್ಣಯ್ಯ ಮತ್ತೆ ಕತೆಗೆ ಬಿದ್ದ. ಕೆರೆಯ ಕಡೆ ನೋಡಿದ. ಚಂದ್ರನ ಬಿಂಬ ತೆರೆಗಳಲ್ಲಿ ಹೊಳೆಯುತ್ತಿತ್ತು.

“ಪಾಪ. ಈ ರಾಯರ ಮನೆಯ ಕಾಳಿಂಗರಾಯರು, ಪರಮ ದೈವಭಕ್ತ ಗೊತ್ತ. ರಾಮಟಂಕೆ ಬಂಗಾರದ್ದು ಇತ್ತು. ಕಳಸೆಯಲ್ಲಿ ಬಂಗಾರ. ಹೆಂಡತಿ ಸೀತೆಯ ಹಾಗೆ. ಮೊದಲಿನವರಿಗೆ ಹೆಸರು ಇಡಲೂ ಬರುತ್ತಿರಲಿಲ್ಲ. ದರಿದ್ರವುಗಳು, ಕಾಳಿಂಗರಾಯರೇ ಅವರು? ಬಿಡು, ಅವರನ್ನು ರಾಯರೆಂದೇ ಕರೆಯುವ. ಅವರ ಅಜ್ಜನ ಕಾಲದ ಮನೆ ಇದು. ಮೊದಲು ಶಿವಪ್ಪಾಡಿಗೆ ಬರುವ ಮೊದಲು ಎಲ್ಲೊ ಆ ಕಡೆ ಘಟ್ಟದ ಕಡೆ ಇದ್ದರಂತೆ. ಇಲ್ಲಿ ಬಂದ ಮೇಲೆ ಕಾಳಿಂಗ ರಾಯರದೇ ಆಧಿಪತ್ಯ.

“ಅವರು ಬಂಗಾರ ಜನ ಗೊತ್ತ. ಇಲ್ಲಿಯ ದೇವಸ್ಥಾನದ ಉತ್ಸವ ಆಗಲಿ, ರಂಗಪೂಜೆ ಆಗಲಿ, ಕಂಬಳವಾಗಲಿ, ನೇಮಕೋಲ ಏನೇ ಆಗಲಿ, ಅವರು ಬಂದರೆ ಎದ್ದು ನಿಲ್ಲುತ್ತಿದ್ದರು ಜನ. ಅವರ ಪರ್ಸನಾಲಿಟಿಯೆ ಐಮೀನ್ ದೇಖಿ ಹಾಗೆಯೇ ಇತ್ತು. ಅರಶಿನದ ಕೋಡಿನ ಬಣ್ಣ. ಅವರ ತಮ್ಮ ಸ್ವಲ್ಪ ಭಿನ್ನ. ರಾಯರು ಹೆಚ್ಚು ಓದಿದವರಲ್ಲ. ಅವರ ತಮ್ಮ ಮತ್ತು ನಾನು ಒಟ್ಟಿಗೆ ಇಂಗ್ರೇಜಿ ಶಾಲೆಗೆ ಹೋದವರು. ಅಲ್ಲಿ ವೆಂಕಟರಾಯರ ಲೂಟಿ ಭಾರೀ ಹೆಸರಾಗಿತ್ತು. ನಾನು ಐದನೆ ಫಾರ್ಮಿಗೆ ಹೋಗಿ ಆಮೇಲೆ ಗಾಂಧಿ ಮಂಗಳೂರಿಗೆ ಬಂದು ಹೋದರಲ್ಲ…”

“ನನಗೆ ಗೊತ್ತಿಲ್ಲ” ಎಂದ ಶ್ಯಾಮ.

“ಅಂತೂ ಯಾರೋ ದೇಶಭಕ್ತರು – ಅವರು ಬಂದಾಗ ಶಾಲೆ ಬಿಟ್ಟೆ. ನಮ್ಮ ಅಂಗಿ ಎಲ್ಲ ಹೊಲಿಸಿದ್ದು. ಅಲ್ಲಿಂದ ನಡಕೊಂಡು ಬಂದದ್ದು. ಸಾಯಲಿ ಅದು. ಆ ಕಾಲದಲ್ಲಿ ವೆಂಕಟರಾಯರು ವಕಾಲತು ಕಲಿತು ಮದ್ರಾಸಿಗೆ ಹೋದರು. ಆ ಕಾಲದಲ್ಲಿ ವಕೀಲರೆಂದರೆ ದೇವರು, ಕೆಲವು ವಿಷಯ ಅವರ ಕಿವಿಯಲ್ಲಿ ಗುಟ್ಟಾಗಿ ಹೇಳಿ ಹೋದಷ್ಟು ಜ್ಞಾನಿ ಅಂತ ಭಾವನೆ. ಗೊತ್ತಾಯ್ತ? ಕಾಳಿಂಗ ರಾಯರು ಊರು, ಮನೆ, ದೈವ ದೇವರು, ಮನೆ ದೇವರು, ಒಕ್ಕಲುಗಳೊಡನೆ ಬದುಕಿದವರು. ಪಾಪ ಮಕ್ಕಳಿಲ್ಲ. ಆಗಲೇ ಅವರಿಗೆ ಐವತ್ತು ಸಂದಿರಬೇಕು. ಹೆಂಡತಿ ಏನೋ ಕಾಯಿಲೆ ಬಂದು ನರಳಿ ಸತ್ತರು.

ಮನುಷ್ಯನಿಗೆ ಹಾಳಾಗಲಿಕ್ಕೆ ಒಂದು ಕಾಲ. ಒಳ್ಳೆಯದಾಗಲಿಕ್ಕೆ ಒಂದು ಕಾಲ. ಸಾಮಾನ್ಯ ಅದೇ ಟೈಮಿಗೆ ಇರಬಹುದು, ವೆಂಕಟರಾಯರ ದಂಡು ಮದರಾಸಿನಿಂದ ಹೆಂಡತಿಯನ್ನು ಕರೆದುಕೊಂಡು ಟಾಂಗಾದಿಂದ ಬರುತ್ತಿತ್ತು. ಆ ಬ್ಯಾಗು ಹೋಲ್ಡಾಲು, ಹೆಂಡತಿಯ ತುಟಿಗೆ ಮೆತ್ತುವ ರಂಗು; ಆ ಚಪ್ಪಲಿ, ಆ ಬೂಟ್ಸು, ಹ್ಯಾಟು, ಪ್ಯಾಂಟು, ಕೋಟು, ವಾಕಿಂಗ್ ಸ್ಟಿಕ್, ಐ ರಿಮೆಂಬರ್ ಎವರಿಥಿಂಗ್, ಅಂಡರ್ಸ್ಟೇಂಡ್” ಎಂದು ಅಣ್ಣಯ್ಯ ಮತ್ತೆ ಮತ್ತೆ ತನಗೆ ಬರುವ ಇಂಗ್ಲಿಷ್ ನಲ್ಲಿ ಮುಂದುವರಿಸುತ್ತಿದ್ದ – “ಎಲ್ಲ ವೆಂಕಟರಾಯರನ್ನೇ ನೋಡಿ ತೆರೆದ ಬಾಯಿ ಮುಚ್ಚುತ್ತಿರಲಿಲ್ಲ ಜನ. ಹೇಗೆ? ಆ ಇಂಗ್ಲೀಷ್ ಹೇಗೆ ಮಾರಾಯ. ಈಗ ನೀನು ಎಂ. ಎ. ಮಾಡಿ ತೋಟಕ್ಕೆ ನೀರು ಬಿಡುವ ಇಂಗ್ಲೀಷಲ್ಲ.”

ಶ್ಯಾಮರಾಯನಿಗೆ ಮಧ್ಯೆ ಮಧ್ಯೆ ಅರ್ಧ ವಿರಾಮ. ಅಣ್ಣಯ್ಯ ಇನ್ನೊಂದು ಬಾರಿ ಲಂಗೋಟಿಯ ತುದಿಯಲ್ಲಿ ಕಟ್ಟಿದ್ದ ಹೊಗೆಸೊಪ್ಪು ತೆಗೆದು ಬಾಯಿಗೆ ಎಸೆದುಕೊಂಡು,

“ಶ್ಯಾಮ ನೀನು ಏನೇ ಹೇಳು, ವೆಂಕಟರಾಯರು ಬಂದು ಅವರ ಡೌಲು ಮೆರೆಸುವಾಗ ಕಾಳಿಂಗರಾಯರ ಮುಖ ನೋಡಬೇಕಿತ್ತು. ಮೊದ ಮೊದಲು ವೆಂಕಟರಾಯರ ದಂಡಿನಲ್ಲಿ ಅವರ ಪರಿವಾರ ಬಿಟ್ಟರೆ ಬೇರೆ ಯಾರಿರಲಿಲ್ಲ. ಆಮೇಲೆ ಒಮ್ಮೆ ಅವರು ಬರುವಾಗ ಮಾಳಿಗೆಗೆ ಹೋಗಿ ಅಣ್ಣನೊಡನೆ, ‘ಇಲ್ಲಿಗೆ ಇನ್ನೊಮ್ಮೆ ಮದ್ರಾಸಿನ ಕಲೆಕ್ಟರ್ ಸಾಹೇಬರನ್ನ ಕರೆದುಕೊಂಡು ಬರುತ್ತೇನೆ’ ಎಂದರಂತೆ. ಕಾಳಿಂಗರಾಯರಿಗೆ ತಮ್ಮನ ಡೌಲು ಜರ್ಬು ನೋಡಿಯೇ ಸಾಕಾಗಿತ್ತು. ಆದರೂ ಅವರು ದಾಕ್ಷಿಣ್ಯದ ಮನುಷ್ಯ. ಸಂಸಾರ ಭಗವಂತ ಕೊಡಲಿಲ್ಲ. ತಮ್ಮನ ಸಂಸಾರ ಸುಖ, ಐಶ್ವರ್ಯ ನೋಡಿ ಸಂತೋಷ ಪಡುತ್ತಿದ್ದವರು, ದೇವರು ನಡೆಸಲಿ ಎನ್ನುತ್ತಿದ್ದವರು” ಎಂದ ಅಣ್ಣಯ್ಯ ಲೋ ಪಿಚ್ಚಿನಲ್ಲಿ ಶ್ಯಾಮನೊಡನೆ.

– “ಹಾಗೆ ನೋಡಿದರೆ ಕಾಳಿಂಗರಾಯರ ಪ್ರಾರಬ್ಧಕರ್ಮ. ತಮ್ಮನಿಗೆ ಹೋಲಿಸಿದರೆ ಅಣ್ಣ ಎಷ್ಟೋ ರೀತಿಯಲ್ಲಿ ದೇವರು. ಒಂದು ಆಳುಕಾಳಿಗೆ ಬೈದವರಲ್ಲ. ಬೆಂಕಿ ಬಿದ್ದ ಮನೆ ಕಟ್ಟಿಸಿಕೊಟ್ಟದ್ದುಂಟು. ಉಳುವ ನೊಗ ನೇಗಿಲು ಕೋಣ ಮಾಡಿಸಿಕೊಟ್ಟದ್ದುಂಟು. ಮದುವೆ ಮುಂಜಿ ಯಾವುದಕ್ಕೂ ದಿನಕ್ಕೊಮ್ಮೆ ಅವರಲ್ಲಿ ದಾನ ಕೇಳಿ ಪಡೆಯದೇ ಹೋದ ಜನ ಕಡಿಮೆ. ಆಟ ಕೋಲ ಬಲಿ ಯಾವುದಕ್ಕೂ ಊಟಕ್ಕೆ ಅಕ್ಕಿ ಅವರದೆ. ದೇವರು ಕೊಟ್ಟಿದ್ದಾನೆ. ಎಲ್ಲರ ಹೃದಯದಲ್ಲೂ ಅವನೇ ಇದ್ದು ನಡೆಸುತ್ತಾನೆ. ಪಾಪ ಪುಣ್ಯದ ಭಯ ಇತ್ತು ಅವರಿಗೆ. ಬಡವರ ಕಣ್ಣೀರಿನ ಭಯ ಇತ್ತು. ಕಾಳಿಂಗರಾಯರ ಬಗ್ಗೆ ಹೀಗಾಗಿ ಕೆಟ್ಟ ಮಾತಾಡಿದವನನ್ನು ನಾನು ಕಂಡಿಲ್ಲ. ವೆಂಕಟರಾಯ ಅಣ್ಣನಿಗೆ ತದ್ವಿರುದ್ಧ. ಅವ ನನ್ನ ಕ್ಲಾಸುಮೇಟು. ಆದರೂ ನನ್ನ ವೋಟು ಕಾಳಿಂಗರಾಯರಿಗೆ. ಯಾಕೆ ಅನ್ನುತ್ತೀಯಾ ಶ್ಯಾಮ. ನಾನು ಕುಡಿಯುವುದು ಕಳ್ಳು. ಅದು ನಮ್ಮ ದೇಶದ್ದೆ. ಕಾಳಿಂಗರಾಯರು ಪೂಜೆ ಮಾಡುತ್ತಿದ್ದುದು, ಅದು ನಮ್ಮ ದೇವರೇ. ಒಳ್ಳೆಯದಾಗಲಿ, ಕೆಟ್ಟದ್ದಾಗಲಿ ನಮ್ಮದೆ ನಮಗೆ ಒಳ್ಳೆಯದು. ಇನ್ನೊಬ್ಬರದ್ದು ಎಂಜಲು. ಈಗ ನನ್ನ ಮಕ್ಕಳು, ಮೊಮ್ಮಕ್ಕಳು ಮುಂಬಯಿ, ದುಬೈ ಎಂದು ಹೋಗುತ್ತಾರೆ. ನನಗೂ ನಿನಗೂ ಇರುವ ಸುಖ ಅವರಿಗುಂಟ ಹೇಳು. ಇರಲಿ.”

“ಕಲೆಕ್ಟರ್ ಸಾಹೇಬರು ಬರುವ ಮೊದಲೇ ಕಾಳಿಂಗರಾಯರಿಗೆ ನೆಮ್ಮದಿ ಇರಲಿಲ್ಲ. ಏಕೆಂದರೆ ವೆಂಕಟರಾಯ ಶಿವಪ್ಪಾಡಿಗೆ ಬಂದು ಮಂಗಳೂರಿನ ಮಿಲಿಟ್ರಿ ಹೊಟೇಲಿನಿಂದ ಒಬ್ಬ ಅಡಿಗೆಯವನನ್ನು ಕರೆದುಕೊಂಡು ಬಂದು ನಮ್ಮಲ್ಲಿನ ಗಣ್ಯರ ಮನೆಯಲ್ಲಿ ಮಾಂಸದ ಊಟ, ಫಾರಿನ್ ಬ್ರಾಂಡು ಎಲ್ಲ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದ. ಅವನ ಹೆಂಡತಿ ಮಕ್ಕಳು ಎಲ್ಲರಿಗೂ ಬಿಯರ್ ಅಂದರೆ ಚಾ ಕುಡಿದ ಹಾಗೆ. ಅದನ್ನೆಲ್ಲ ನೋಡಿ ಸಹಿಸಿಕೊಳ್ಳುತ್ತಿದ್ದ ಕಾಳಿಂಗರಾಯರಿಗೆ ದಿನೇ ದಿನೇ ಒಂದು ಕಡೆ ಕಾಂಗ್ರೆಸ್ಸು, ಒಂದು ಕಡೆ ಬ್ರಿಟಿಷು, ಒಂದು ಕಡೆ ಊರು ಮನೆ ಎಲ್ಲ ಕಂಗಾಲುಗೊಳಿಸುತ್ತಿತ್ತು. ಒಂದೊಂದು ದಿನ ಆಗ (ಅವರೆದುರು ನಾನು ಸಣ್ಣವ) ಕಾಳಿಂಗರಾಯರು ನನ್ನನ್ನು ಕರೆದು, `ಅಣ್ಣಯ್ಯ ಕಾಲ ಎಷ್ಟು ಬದಲಾಗಿ ಹೋಯಿತಲ್ಲ. ನಮ್ಮ ಕೈಯಲ್ಲೇನುಂಟು’ ಅನ್ನುತ್ತಿದ್ದರು. ಅವರ ಒಡಲಿನ ಬೇಗೆ ಅವರಿಗೇ ಗೊತ್ತು. ವೆಂಕಟರಾಯರ ಐಲು ಭೋಗ- ಕುಶಾಲು ಗಮ್ಮತ್ತು ಎಲ್ಲ ನೋಡಿ ಕಾಳಿಂಗರಾಯರಿಗೆ ಸಂಕಟ ತಡೆಯಲು ಆಗುತ್ತಿರಲಿಲ್ಲ. ಒಂದು ಕಡೆ ತನಗೆ ಸಂಸಾರವಿಲ್ಲ. ಬಾಯಿಗೆ ನೀರು ಬಿಡಲು ತಮ್ಮನ ಮಕ್ಕಳು ಬೇಕು. ಅವರನ್ನು ಬಿಡುವ ಹಾಗಿಲ್ಲ. ಪ್ರತಿ ಬಾರಿಯೂ ವೆಂಕಟರಾಯ ಬಂದಾಗ ಒಂದೊಂದು ಹೊಸ ಸುದ್ದಿ ತರುತ್ತಿದ್ದ. ಈಗಿನ ಕಲೆಕ್ಟರ್ ಚಿಕ್ಕಮಗಳೂರಿನಲ್ಲಿ ತನಗೆ ಎಸ್ಟೇಟು ತೆಗೆಸಿಕೊಟ್ಟದ್ದು, ಇನ್ನೊಮ್ಮೆ ಅವರಿಗೂ ತನ್ನ ಹೆಂಡತಿಗೂ ಬಾರಿ ಸಲುಗೆ ಎನ್ನುವುದು. ಅವರಲ್ಲಿ ಭೇದವೇ ಇಲ್ಲ. ಗಂಡು ಹೆಣ್ಣು ಎಂದರೆ ನಮ್ಮಲ್ಲಿ ಎದುರಿಗೆ ಪುರಾಣ, ವೇದ ಉಪನಿಷತ್ತು ಗೀತೆ, ಹಿಂದಿನಿಂದ ಬೇರೆಯೇ. ಇಂಗ್ಲಿಷರ ಹಾಗೆ ಓಪನ್ ಆಗಿರಬೇಕು ಎಂದು ಪರೋಕ್ಷವಾಗಿ ಕಾಳಿಂಗರಾಯರನ್ನು ಲೇವಡಿ ಮಾಡಿದ ಹಾಗೆ ಮಾಡುತ್ತಿದ್ದ.”

“ವೆಂಕಟರಾಯರು ಬಂದು ಹೋದಾಗಲೆಲ್ಲ ಕಾಳಿಂಗರಾಯರು ಶಿವಪ್ಪಾಡಿ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ತೀರ್ಥ ತಂದು ಇಡೀ ಮನೆಗೆ ಸಿಂಪಡಿಸುತ್ತಿದ್ದರು. ಹತ್ತು ಆಳುಗಳನ್ನು ಹೇಳಿ ಉಪ್ಪರಿಗೆಯಿಂದ ಹಿಡಿದು ಅಂಗಳದವರೆಗೆ ಗೋಮಯ ಹಾಕಿ ಸಾರಿಸುತ್ತಿದ್ದರು. ಹೀಗೆ ಇಬ್ಬರಿಗೂ ಒಳಗಿಂದ ಜಟಾಪಟಿ ಇದ್ದರೂ ಅವರು ಒಂದೇ ಒಂದು ಕಾರಣ-ತಮ್ಮನ ಮಕ್ಕಳು ತನ್ನ ಬಾಯಿಗೆ ಗಂಗಾಜಲ ಹಾಕಬೇಕು ಎಂಬ ಒಂದು ಕಾರಣಕ್ಕಾಗಿ ಸುಮ್ಮನಿದ್ದರು ಅಂತ ಕಾಣುತ್ತದೆ.”

ರಾಯರ ಮನೆಯ ಹೆಬ್ಬಾಗಿಲಲ್ಲಿ ಕುಳಿತು ಕತೆ ಶುರು ಮಾಡಿದ್ದ ಅಣ್ಣಯ್ಯ ಕತೆ ನಿಲ್ಲಿಸಿ ಹತ್ತಿರದ ಕೆರೆಯನ್ನು ನೋಡಿದ. ಯಾರೋ ಕೋಲಕ್ಕೆ ಹೋಗುವವರೋ ಏನೋ ಗಲಾಟೆ ಮಾಡಿಕೊಂಡು ಬೊಬ್ಬೆ ಹೊಡೆಯುತ್ತಾ ಹೋದರು. ಅಣ್ಣಯ್ಯ ಮುಂದುವರಿಸಿದ.

ಕಾಳಿಂಗರಾಯರಿಗೆ ದೊಡ್ಡ ಪಜೀತಿಯಾಯಿತು. ಏನೇನೆಲ್ಲ ಆಗಬೇಕೆಂದು ಅದರಲ್ಲಿ ಇತ್ತು. ಅವರು ಕುದುರೆಯ ಮೇಲೆ ಕುಳಿತು ಬರುವುದನ್ನು ಅಲ್ಲಿ ಯಾರಾದರೂ ಗುಡಿಗಾರರೋ ಕಲಾವಿದರೋ ನೋಡಿ ಅವರು ಹೆಬ್ಬಾಗಿಲಿನಲ್ಲಿ ಬಿಡಿಸಬೇಕೆಂದು ವೆಂಕಟರಾಯರು ಬರೆದಿದ್ದರು. ಈಗ ನೋಡಿ ತಮಾಷೆ ಅಂದರೆ ಇದು.

“ನೋಡಿದಿಯ ಶ್ಯಾಮ. ಈಗಿನ ಬಿ.ಎ., ಎಂ.ಎ.ಗಳು ಅಲ್ಟಿಮೇಟ್ಲೀ ವಾಟ್ ಈಸ್ ದ ಕಲ್ಚರ್. ಗಂಡು ಹೆಣ್ಣು ಭೇದ ಇಲ್ಲ. ಹಾಗೆಯೇ ಆಯ್ತು. ಕೊನೆಗೊಮ್ಮೆ ವೆಂಕಟರಾಯ ಮದ್ರಾಸಿಗೆ ಹೋದವ ಶಿವಪ್ಪಾಡಿಯ ಮನೆಗೆ ಕಲೆಕ್ಟರ್ ಮತ್ತು ಅವನ ಹೆಂಡತಿ ಬರುತ್ತಾರೆಂದೂ, ಅದಕ್ಕೆ ಎಲ್ಲಾ ಎರೇಂಜುಮೆಂಟು ಮಾಡಬೇಕೆಂದೂ, ಎಂಟು ದಿನ ಮುಂಚಿತವಾಗಿ ತಾವೊಮ್ಮೆ ಬಂದು ಹೋಗುವುದಾಗಿಯೂ ಪತ್ರ ಬರೆದ. ಕಾಳಿಂಗರಾಯರಿಗೆ ದೊಡ್ಡ ಪಜೀತಿಯಾಯಿತು. ಏನೇನೆಲ್ಲ ಆಗಬೇಕೆಂದು ಅದರಲ್ಲಿ ಇತ್ತು. ಅವರು ಕುದುರೆಯ ಮೇಲೆ ಕುಳಿತು ಬರುವುದನ್ನು ಅಲ್ಲಿ ಯಾರಾದರೂ ಗುಡಿಗಾರರೋ ಕಲಾವಿದರೋ ನೋಡಿ ಅವರು ಹೆಬ್ಬಾಗಿಲಿನಲ್ಲಿ ಬಿಡಿಸಬೇಕೆಂದು ವೆಂಕಟರಾಯರು ಬರೆದಿದ್ದರು. ಈಗ ನೋಡಿ ತಮಾಷೆ ಅಂದರೆ ಇದು.”

“ಕಾಳಿಂಗರಾಯರು ಪತ್ರ ಓದಿದ ಮೇಲೆ ಎರಡು ದಿನ ಮಾಳಿಗೆಯಿಂದ ಕೆಳಗೆ ಬರಲಿಲ್ಲ. ಏನು ಮಾಡುವುದು ಎಂದು ಅವರ ಆಲೋಚನೆ. ತಮ್ಮನ ಮೋಜು ಮೇಜವಾನಿಗೆ ತಾನಿದ್ದರೆ ತಾನೇ ಮಾಡಿಸುತ್ತೇನೆ ಎಂಬ ಅಪವಾದ ಬರಬಹುದು. ಶಿವಪ್ಪಾಡಿಯ ದೇವಸ್ಥಾನಕ್ಕೆ ಮೂರನೆಯ ದಿನ ಅವರು ಬೇಗ ಸ್ನಾನ ಮಾಡಿ ಹೋದರು. ಪೂಜೆಯ ಹೊತ್ತಿಗೆ ಅರ್ಚಕರ ಹತ್ತಿರ ಪ್ರಸಾದ ತೆಗೆದುಕೊಂಡರು. ಸಿಂಗಾರದ ಎಸಳು ಎಣಿಸಿ ನೋಡಿದರು. ಏನೋ ಖಾತರಿ ಮಾಡಿಕೊಂಡು ಬಂದರು. ಬಂದವರೇ ತಮ್ಮನಿಗೆ ಕಾಗದ ಬರೆದರು.”

“ಒಂದು ತಿಂಗಳು ಬಿಟ್ಟು ತಮ್ಮನ ಸವಾರಿ ರಾಯರ ಮನೆಗೆ ಬಂತು. ಆ ದಿನ ರಾತ್ರಿ ಮಾಳಿಗೆಯಲ್ಲಿ ಉರಿಯುತ್ತಿದ್ದ ದೀಪ ಆರಲಿಲ್ಲ. ಜಗಳ ಮುಗಿಯಲಿಲ್ಲ. ತಾನು ಜೀವ ಇರುವವರೆಗೆ ಆ ಬಿಳಿ ತೊಗಲಿನವರು ಇಲ್ಲಿಗೆ ಬರಕೂಡದೆಂದು ಕಾಳಿಂಗರಾಯರ ಹಟ. ಅವರನ್ನು ಕರೆತರುತ್ತೇನೆಂದು ವೆಂಕಟರಾಯರ ಜಿದ್ದು. ಊರಿನವರಿಗೆ ಭಾರೀ ಮೋಜು-ಬೇಸರ ಎಲ್ಲವೂ ಆಯಿತು.”

“ಮಾಳಿಗೆಯ ಗಲಾಟೆಯ ಮರುದಿನ ವೆಂಕಟರಾಯ ಹೊರಟುಹೋದ. ಆದರೆ ಕಲೆಕ್ಟರ್ ಬರುವುದು ಖಂಡಿತವಾಗಿತ್ತು. ಕಾಳಿಂಗರಾಯರು ಆ ದಿನಕ್ಕೆ ಸರಿಯಾಗಿ ಹೊರಟು ಹೋದವರು ಹತ್ತು ತಿಂಗಳು ಇಲ್ಲಿ ಬರಲೇ ಇಲ್ಲ.”

“ಕಲೆಕ್ಟರ್ ಅಂದರೆ ಸಾಮಾನ್ಯವೇ! ನಮ್ಮವರಿಗೆ ಶಿವಪ್ಪಾಡಿಯ ದೇವರಿಗಿಂತಲೂ ಮಿಗಿಲು. ಅವರ ಹಿಂದೆ ಮುಂದೆ ಉಸಿರು ತೆಗೆದುಕೊಳ್ಳುವಾಗ ಬಿಡುವಾಗ ಆಳುಕಾಳು. ಪೆನ್ನು ಹಿಡಿದು ಗೀಚುವ ಮಂದಿ. ಕಾಳಿಂಗರಾಯರನ್ನು ಓಲೈಸುತ್ತಿದ್ದ ಮಂದಿಯೆಲ್ಲ ಈಗ ವೆಂಕಟರಾಯರನ್ನು ತಮ್ಮ ಮೀಸೆಯನ್ನು ಹುಬ್ಬಿನವರೆಗೆ ಏರಿಸಿ ಹೊಗಳುತ್ತಿದ್ದರು. ವೆಂಕಟರಾಯರು ಮನೆಗಷ್ಟೇ ಅಲ್ಲ. ದೇವಸ್ಥಾನ, ಗರಡಿ ಎಲ್ಲ ಸುತ್ತಾಡಿಸಿಕೊಂಡು ಬಂದರು ಕಲೆಕ್ಟರರನ್ನು. ಮತ್ತೊಮ್ಮೆ ಬೇಟೆಯ ಗಲಾಟೆ ಸಂಭ್ರಮ ಕೂಡ ಆಯ್ತು.”

“ನಾನು ಇನ್ನೊಂದು ವಿಷಯ ನಿನಗೆ ಹೇಳಲೇ ಇಲ್ಲ. ನನ್ನ ತಲೆ ಸುರುಬು ಹಿಡಿದಿದೆ. ಕಲೆಕ್ಟರ್ ಸಾಹೇಬರು ಬರುವ ಮೊದಲು ಕಾಳಿಂಗರಾಯರು ನಾಲ್ಕು ಊರಿನ ಆಳು ಮಕ್ಕಳನ್ನು ಕರೆದು ತನಗೆ ಸಲ್ಲಿಸುವ ಗೇಣಿಯನ್ನೆಲ್ಲ ದೇವಸ್ಥಾನಕ್ಕೆ ಸಲ್ಲಿಸಿ, ನನ್ನ ತಮ್ಮ ಕೇಳಿದರೆ ನಾನು ಹೇಳಿದ್ದೇನೆಂದು ತಿಳಿಸಿ ಎಂದು ಹೇಳಿ ಹೊರಟು ಹೋಗಿದ್ದರು.”

“ನಾನು ಕಲೆಕ್ಟರ್ ಬಂದುದನ್ನು ನೋಡಿದ್ದೇನೆ. ಬಿಳೀ ಕುದುರೆ. ಕುದುರೆಗಿಂತಲೂ ಬಿಳಿ ಕಲೆಕ್ಟರ್ನ ಹೆಂಡತಿ. ಅವರು ನಮ್ಮ ಸ್ವರ್ಗ ಲೋಕದ ರಂಭೆ-ಊರ್ವಶಿಯರ ಹಾಗೆಯಾ ಅಂತ ನನಗೆ ಡೌಟು. ಭಾರೀ ಬಣ್ಣವೆ. ಈ ಬಣ್ಣವೇ ಜಗತ್ತನ್ನು ನುಂಗಲಿಕ್ಕೆ ಸಾಕು. ಆಮೇಲೆ ಕಲೆಕ್ಟರ್. ಅದೂ ಒಂದು ಹೆಂಗಸಿನ ರೂಪವೇ. ದೇವತೆಯ ಹಾಗೆ ನಗು.”

“ಹತ್ತು ದಿನ ನಡೆಯಿತಯ್ಯ – ನಮ್ಮ ಜಾತ್ರೆ, ಕೋಲ, ಬಲಿ, ನೇಮ, ಒಂದೂ ಇದರ ಸಮನಲ್ಲ. ದೇವಸ್ಥಾನದ ಎಲ್ಲ ಪತಾಕೆ, ಗರ್ನಾಲು, ಕೋಲದ ಎಲ್ಲ ಭೂತಗಳು, ಇಸ್ಸಿ ಎಲ್ಲವೂ ಕಲೆಕ್ಟರರನ್ನು ಎದುರುಗೊಳ್ಳಲಿಕ್ಕೆ ಬಂದು ಕುಣಿದದ್ದೆ ಕುಣಿದದ್ದು. ಆಮೇಲೆ ಕೈಚಾಚಿ ಕೇಳಿದ್ದೆ ಕೇಳಿದ್ದು. ವೆಂಕಟರಾಯರ ಮಕ್ಕಳಿಗೆ ಆ ಭೂತಗಳಿಗೆ ಹಣ ಕೊಡುವುದೇ ಮೋಜು. ಇಷ್ಟಕ್ಕೂ ಮುಗಿಯಲಿಲ್ಲ ಎಲ್ಲ ಆಟ.

“ಪ್ರತೀ ದಿನ ಕುಡಿಯುವವರಿಗೆ ಕುಡಿಯುವಷ್ಟು ಕಳ್ಳು ಸಾರಾಯಿ. ಪ್ರತಿಷ್ಠಿತರಿಗೆ ಗಣ್ಯರಿಗೆ ಬೇರೆಯೇ-ಮಾಂಸದ ಊಟ. ಕಲೆಕ್ಟರರ ಹೆಂಡತಿ ವೆಂಕಟರಾಯರ ಹೆಗಲಿಗೆ ಕೈ ಹಾಕಿಕೊಂಡೆ ತಿರುಗಾಡುವುದೇನು, ಕಲೆಕ್ಟರ್ ಸಾಹೇಬರ ಒಟ್ಟಿಗೇ ಕುಳಿತು ವೆಂಕಟರಾಯರ ಹೆಂಡತಿ ಈ ಪಡಸಾಲೆಯ ಉಯ್ಯಾಲೆಯಲ್ಲಿ ತೂಗುವುದೇನು. ಅಬ್ಬಬ್ಬ! ಕಂಡು ಕೇಳದ್ದು ಇದು!!

“ಅಂತೂ ಅವರು ಹೋಗುವಾಗ ಹತ್ತು ದಿನ ಬಯಲಾಟ ಮುಗಿದ ಹಾಗೆ ಆಗಿತ್ತು. ನಮ್ಮ ಗುಡಿಗಾರ ಬಂದು ಬರೆದ ಚಿತ್ರ ಇದು. ನೋಡು ಶ್ಯಾಮ. ಬಿಳೀ ಕುದುರೆ ಎರಡು. ಆಮೇಲೆ ಅದರಲ್ಲಿ ದೊರೆ ದಂಪತಿಗಳು.”

ಶ್ಯಾಮರಾಯ ಕೇಳುತ್ತಲೇ ಇದ್ದ. ಅವನಿಗೆ ಕಾಳಿಂಗರಾಯರ ಕತೆ ಬೇಕಾಗಿತ್ತು. ರಾತ್ರಿ ಬಹಳ ಸರಿದುದರಿಂದ ರಾಯರ ಪಾಳು ಬಿದ್ದ ಮನೆಯ ವಾತಾವರಣ ನೀರವವಾಗಿಯೇ ಇತ್ತು. ಆದರೆ ಇದರ ಮಧ್ಯೆ ಒಂದು ಪುಕ್ಕು ಅಣ್ಣಯ್ಯನಿಗೆ. ಒಕ್ಕಲಿಲ್ಲದ ಮನೆಯಲ್ಲಿ ಭೂತ ಪ್ರೇತ ಇರಬಹುದೆಂದು ಅವನಿಗೆ ಒಂದು ಡೌಟುಂಟು. ಮೆಲ್ಲನೆ ಅವನು ಹೆಬ್ಬಾಗಿಲಿನ ಜಗಲಿಯಿಂದ ಎದ್ದು ಹೇಳಿದ:

“ಶ್ಯಾಮ ನಾವು ಇಲ್ಲಿ ಇನ್ನು ಇರುವುದು ಬೇಡ. ನಡುರಾತ್ರಿ ಆ ಕೆರೆಕಟ್ಟೆಗೆ ಹೋಗುವ, ಪೂರ ಕತೆ ಅಲ್ಲಿ ಹೇಳುತ್ತೇನೆ”. ಶ್ಯಾಮನೂ ಮರುಮಾತಾಡದೆ ಎದ್ದ. ಬೆಳದಿಂಗಳು ಎಲ್ಲ ಕಡೆ ಪಸರಿಸಿತ್ತು. ಕೆರೆಯ ಕಿರು ಅಲೆಗಳು ನಗುತ್ತಿದ್ದವು.

“ಈ ಕೆರೆ ರಾಯರೇ ಕಟ್ಟಿಸಿದ್ದು. ಎಷ್ಟು ಚಂದವುಂಟು. ಏನೇ ಆಗಲಿ, ಆಗುವುದಕ್ಕೆ ಒಂದು ಕಾಲ, ಹೋಗುವುದಕ್ಕೆ ಒಂದು ಕಾಲ. ಕಾಳಿಂಗ ರಾಯರ ಸವಾರಿ ವೆಂಕಟರಾಯರ ದಂಡು ಹೋದಮೇಲೆ ವಾಪಾಸು ಬಂತು. ಅವರು ಹೋಗುವಾಗ ಗಡ್ಡವಿರಲಿಲ್ಲ. ಈಗ ಬಿಳಿಯ ಗಡ್ಡ ಎದೆಯವರೆಗೆ ಬೆಳೆದಿತ್ತು. ವೆಂಕಟರಾಯ ಹೋಗಿ ಹತ್ತು ತಿಂಗಳ ನಂತರವೇ ಕಾಳಿಂಗರಾಯರು ಬಂದದ್ದು. ಬಂದವರು ಮನೆಯ ಒಳಗೆ ಹೋಗಲಿಲ್ಲ. ಮಾಳಿಗೆ ಹತ್ತಲಿಲ್ಲ. ಪಡಸಾಲೆಯಲ್ಲಿ ಕೂತರು. ಯಾಕೆ ಎಂದು ಜನ ನೋಡಿದರು. ಆಢ್ಯರು ಕೇಳಿದರು. ಕಾಳಿಂಗರಾಯರು ಬಾಯಿ ಬಿಡಲಿಲ್ಲ. ಮತ್ತೂ ಒತ್ತಾಯ ಮಾಡಿದ್ದಕ್ಕೆ ಮಕ್ಕಳ ಹಾಗೆ ಒಂದು ದಿನ ಅತ್ತು ಬಿಟ್ಟರು.”

“ನಂತರ ಶಿವಪ್ಪಾಡಿಯ ದೇವಸ್ಥಾನದ ಹತ್ತಿರ ಅವರು ಒಂದು ಹುಲ್ಲಿನ ಮನೆ ಕಟ್ಟಿಸಿಕೊಂಡರು. ದೇವಸ್ಥಾನದ ಕೆರೆಯಲ್ಲಿ ಸ್ನಾನ. ಬೆಳಿಗ್ಗೆ ಸಂಜೆ ದೇವರ ಜಪ. ಹೀಗೆ ಎರಡು ತಿಂಗಳು ಕಾಲ ಕಳೆದರು. ಅವರಿಗೆ ಆಮೇಲೆ ಏನನಿಸಿತೊ, ಮತ್ತೆ ತಿರುಗಿ ಇದೇ ಹಳೆಯ ಮನೆಗೆ ಬಂದರು. ಬೀಗ ಒಡೆದರು. ಆಳು ಮಕ್ಕಳನ್ನು ಕರೆಸಿ ಇಡಿಯ ಮನೆ ಮತ್ತೆ ಸ್ವಚ್ಛ ತೊಳೆಸಿದರು. ಬಣ್ಣ ಹಾಕಿಸಿದರು.

`ನನಗೆ ಗೊತ್ತಿಲ್ಲ. ಯಾವಾಗ ಆ ಬಳ್ಳಿ ಮನೆ ಹೆಣ್ಣು ಮಗಳನ್ನು ಆ ಕಲೆಕ್ಟರ್ ಕೂಡಿದ್ದನೊ. ಅವಳೊಂದು ಗಂಡು ಮಗು ಹೆತ್ತಾಗಲೇ ಊರಿಗೆಲ್ಲ ತಿಳಿದದ್ದು. ಅದು ಥೇಟು ಇಂಗ್ರೇಜಿಯವರ ಥರವೇ ಇತ್ತು. ರಾಯರು ದೇವಸ್ಥಾನದ ಪಕ್ಕದ ಗುಡಿಸಲಿನಲ್ಲಿ ಇರುವಾಗ ಆ ಹೆಣ್ಣು ಮಗಳು ಮಗುವನ್ನು ಅವರ ಪಾದದಲ್ಲಿ ಇಟ್ಟು, ಇದು ಆ ಬಿಳೀ ಕುದುರೆಯವರು ಮಾಡಿದ ಕೆಲಸ… ಈ ಬಲಾತ್ಕಾರದ ಮಗು. ನಾನು ದರಲೆಗೆ ಅಂತ ನಿಮ್ಮ ಮನೆಯ ಗುಡ್ಡದ ಮೇಲೆ ಹೋಗಿದ್ದೆ. ಅವರು ಕೈಯಲ್ಲಿ ಕೋವಿ ಹಿಡಿದು ಬೇಟೆಗೆ ಅಂತ ಬಂದಿದ್ದರು. ಕೋವಿ ತೋರಿಸಿ ಹುಲಿಯ ಮಾಟೆಗೆ ಒಯ್ದರು’ ಎಂದಳಂತೆ.

“ಕಾಳಿಂಗರಾಯರಿಗೆ ಏನನಿಸಿತೊ. ಆ ತಾಯಿ ಮತ್ತು ಮಗುವನ್ನು ಸ್ವಲ್ಪ ದಿನ ಈ ಮನೆ ಸ್ವಚ್ಛ ಮಾಡಿಕೊಟ್ಟು ಇರಲು ಹೇಳಿದರು. ಐದಾರು ವರ್ಷಗಳ ನಂತರ ಆ ಮಗುವನ್ನು, ಹಿಡಿದುಕೊಂಡು ಆ ಹೆಣ್ಣು ಮಗಳು ಎಲ್ಲಿಗೊ ಹೊರಟು ಹೋಯಿತು. ಎಲ್ಲಿಗಂತ ಗೊತ್ತಿಲ್ಲ. ಕೆಲವರು ಹೇಳುತ್ತಾರೆ, ಆ ಕಲೆಕ್ಟರ್ ನ ಮನೆಗೇ ಕೆಲಸಕ್ಕೆಂದು ಹೋದಳಂತೆ. ಕೆಲವರು ಹೇಳುತ್ತಾರೆ, ಕಾಳಿಂಗರಾಯರೇ ಅವಳನ್ನು ಏನೋ ವ್ಯವಸ್ಥೆ ಮಾಡಿ ಬಿಟ್ಟು ಬಂದರು ಅಂತ. ಆಮೇಲೂ ಅವರು ಇದ್ದದ್ದು ಹುಲ್ಲಿನ ಮನೆಯಲ್ಲೇ. ಆಮೇಲೆ ಕಾಳಿಂಗರಾಯರು ಒಂದು ತಿಂಗಳು ಪ್ರತಿಯೊಂದು ಒಕ್ಕಲ ಮನೆಗೂ ಹೋಗಿ ಸುಖದುಃಖ ವಿಚಾರಿಸಿ ಕಾಶಿಗೆಂದು ಹೊರಟು ಹೋದರು. ಈ ಪಾಳು ಮನೆ ರಾಯರ ಮನೆ ಅಂತ ಈಗಲೂ ಕರೆಸಿಕೊಂಡು ನಿಂತಿದೆ. ಅದರ ಹಿಂದಿನ ಗುಡ್ಡದ ಪಿಲಿಮಾಟೆ ಹಾಗೆಯೇ ಇದೆ. ಆದರೆ ಅದರ ಗುಡಿಸಲು ಈಗಿಲ್ಲ. ದೇವಸ್ಥಾನದ ಹತ್ತಿರ ಮಣ್ಣಿನ ಗೋಡೆ ಮಾತ್ರ ಇರುವ ಹಾಗುಂಟಲ್ಲ, ಅದು”. ಕತೆ ಮುಗಿದ ಮೇಲೆ ಅಣ್ಣಯ್ಯ ಮತ್ತೆ ವೀಳ್ಯ ಹಾಕಲು ತಯಾರಿ ಮಾಡಿದ.

ಅವನ ಅಮಲು ಇಳಿದಿತ್ತೆಂದು ಕಾಣಿಸುತ್ತದೆ. ಅವನ ಇಂಗ್ಲಿಷು ಕಡಿಮೆಯಾಗಿತ್ತು. ಶ್ಯಾಮರಾಯ ಅಣ್ಣಯ್ಯ ಹೇಳಿದ ಕತೆಯ ಸಾಕ್ಷಿಯಾಗಿ ನಿಂತ ರಾಯರ ಮನೆಯ ಕಡೆ ನೋಡಿದ. ಅದು ಬೆಳದಿಂಗಳಲ್ಲಿ ನೀರವವಾಗಿ ನಿಂತಿತ್ತು. ಹುಲಿಯ ಗುಹೆಯನ್ನು ಹೊತ್ತ ಗುಡ್ಡದ ಕಡೆಗೆ ನೋಡಿದ. ಅಣ್ಣಯ್ಯ ಮತ್ತೆ ವೀಳ್ಯ ಹಾಕಿ ಕೆರೆಯ ನೀರಿಗೆ ಉಗಿದು,

“ಬಳ್ಳಿ ಮನೆ ಶಕುಂತಳೆ ಕಲೆಕ್ಟರನ ಮನೆಯ ಕೆಲಸದಾಳಾಗಿ ಸೇರಿಕೊಂಡಳೆಂದು ಕೆಲವರು ಹೇಳುತ್ತಾರೆ. ಅವಳ ಮಗ ಕಿರಿಸ್ತಾನನಾಗಿ ವಿಲಾಯತಿಗೆ ಹೋದನಂತೆ. ಕಣ್ಣೆದುರು ನಡೆದದ್ದರಲ್ಲಿಯೇ ಕಣ್ಮರೆಯ ಆಟ ಎಷ್ಟೋ ಇರುತ್ತದೆ. ಇನ್ನು ನಮಗೆ ಕಾಣದೆಯೇ ನಡೆದ ಕತೆಗಳಲ್ಲಿ ಸತ್ಯ ಸುಳ್ಳು ಎಷ್ಟೆಂದು ನಮಗೇನು ಗೊತ್ತು?”

ಶ್ಯಾಮರಾಯ ಕತೆಯನ್ನೇ ಜೀವಂತ ಮಾಡಿಕೊಂಡು ಯೋಚನೆಯಲ್ಲಿ ಮುಳುಗಿದ್ದ. ಅಣ್ಣಯ್ಯನ ವೀಳ್ಯದ ರಸದಿಂದ ಬೆಳದಿಂಗಳ ಕೆರೆ ಗೋಜಾಲಾಗಿ ಕುಣಿಯುತ್ತಿತ್ತು.

******

ಟಿಪ್ಪಣಿ:
ಗುರುರಾಜ ಮಾರ್ಪಳ್ಳಿ: ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ಸಂಗೀತಗಾರ, ಚಿತ್ರ ಕಲಾವಿದ, ರಂಗನಿರ್ದೇಶಕ, ಯಕ್ಷಗಾನ ಭಾಗವತ – ಹೀಗೆ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಉಡುಪಿಯ ಗುರುರಾಜ ಮಾರ್ಪಳ್ಳಿ (1953) ‘ಬಂಡೆ ಮತ್ತು ಮನುಷ್ಯ’ ಎಂಬ ಕಥಾ ಸಂಕಲನವನ್ನು 1999ರಲ್ಲಿ ಪ್ರಕಟಿಸಿದ್ದಾರೆ. ಎರಡು ಕಾದಂಬರಿಗಳು ಹಾಗೂ ಸಮಗ್ರ ಕವನಗಳು ಸೇರಿ ಮೂರು ಕವನ ಸಂಕಲನಗಳು ಪ್ರಕಟವಾಗಿವೆ. ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಫೆಲೋಶಿಪ್ ಮುಂತಾದ ಗೌರವಗಳು ಪ್ರಾಪ್ತವಾಗಿವೆ.
ಈ ಕತೆ ನಮ್ಮ ದೇಶದ ವಸಾಹತುಶಾಹಿ ಆಳ್ವಿಕೆಯ ಪರಿಣಾಮಗಳನ್ನು ಸಾಂಕೇತಿಕವಾಗಿ ಮತ್ತು ರೂಪಕಗಳ ಮೂಲಕ ಹೇಳಿರುವುದು ಬಹಳ ವಿಶಿಷ್ಟವಾಗಿದೆ.