ಮುತ್ತು
ಮನೆಮುಂದಿನ ದಾಸವಾಳದ ಗಿಡದಲ್ಲಿ
ದಿನಾ ಇರುತ್ತದೆ ಹತ್ತಾರು ಮೊಗ್ಗು
ಬೆಳಿಗ್ಗೆ ತನ್ನನ್ನು ಒಪ್ಪಿಸಿಕೊಳ್ಳುವ ಹಾಗೆ
ನನಗೆ ಕಾಣುವುದು ಒಂದು ಹೂವು
ಇವಳು ಕೊಯ್ಯುತ್ತಾಳೆನೋ ಪ್ರತಿದಿನ ಸಂಜೆ
ಮೊಗ್ಗುಗಳ ಮರುದಿನದ ಪೂಜೆಗೆ
ಇರಲಿ ಬಿಡಿ ಎಂಬಂತೆ ಸುಮ್ಮನಿದ್ದೆನು, ಒಮ್ಮೆ
ಕೇಳಬೇಕೆನಿಸಿತು ಇವಳ, ಕೇಳಿದೆ.
‘ಇಲ್ಲ! ನಾನು ಎಲ್ಲವನ್ನೂ ಕೊಯ್ಯುತ್ತೇನೆ
ಹೇಗೆ ಉಳಿದೀತು ಹೇಳಿ ಒಂದು ಮೊಗ್ಗು?’
ಎನ್ನುತ್ತ ನಕ್ಕು ಹೋದಳು ಒಳಗೆ, ನನ್ನಲ್ಲಿ
ಬಂತು ಸಂಶಯ: ಯಾಕೆ ಹೀಗೆ ಇವಳು?
ಸಂಜೆ ಬೇಗನೆ ಬಂದು ಅಂಗಳದಲಿ ನಿಂತು
ನೋಡಿದೆನು ಇವಳು ಹೂ ಕೊಯ್ಯುವುದನು
ಕೊಯ್ಯುತ್ತ ಕೊಯ್ಯುತ್ತ ಬಿಟ್ಟಳು ಒಂದು ಮೊಗ್ಗು
ನಾಳೆ ಅರಳಲಿ ಅದು ನನಗೆ ಎಂದು!
ರಾತ್ರೆ ಬರಸೆಳೆದು ಕೇಳಿದೆ ‘ಯಾಕೆ ಸುಳ್ಳು
ಹೇಳುತ್ತಿ ಈ ವಯಸ್ಸಿನಲಿ ನನಗೆ?
ಆಕೆ ಹೂವೇ ಆಗಿ ಹೇಳಿದಳು: ‘ಬೆಳಗ್ಗೆದ್ದು
ಕೊಡಲಾಗುತ್ತಿದೆಯೆ ಮುತ್ತು ನಿಮಗೆ?’
ಡಾ. ನಾ. ಮೊಗಸಾಲೆ ಕಾಸರಗೋಡು ತಾಲ್ಲೂಕಿನ ಕೋಳ್ಯೂರಿನ ಮೊಗಸಾಲೆಯವರು. ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆ ಕಥೆ ಕಾದಂಬರಿಗಳನ್ನೂ ಬರೆದಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಪ್ರಭವ, ಕಾಮನ ಬೆಡಗು ಬೆಳಗು ಸೇರಿದಂತೆ ಹಲವು ಕವನ ಸಂಕಲನಗಳು, ಮಣ್ಣಿನ ಮಕ್ಕಳು, ಕನಸಿನ ಬಳ್ಳಿ, ಅನಂತ, ಧಾತು ಸೇರಿದಂತೆ ಹಲವು ಕಾದಂಬರಿಗಳು, ವ್ಯಕ್ತಿಚಿತ್ರಗಳ ಸಂಗ್ರಹ ಸೇರಿದಂತೆ ಇನ್ನೂ ಹಲವು ಕೃತಿಗಳನ್ನು ರಚಿಸಿದ್ದಾರೆ