ಅವಳ ಮನೆಗೆ ಬಂದಿದ್ದ ಅತಿಥಿಗಳಲ್ಲಿ ಅವನೊಬ್ಬನೇ ‘ಸುಶಿಕ್ಷಿತ’. ‘ಎಲ್ಲರಿಗೂ ಗೊತ್ತಿರುವ ಹಾಗೆ ಈ ಊರಿನ ವಿಶ್ವವಿದ್ಯಾಲಯದಲ್ಲಿ ಇನ್ನೆರಡು ವರ್ಷಗಳೊಳಗೆ ಪ್ರೊಫೆಸರ್ ಹುದ್ದೆ ಪಡೆಯುತ್ತಾನೆ.’ ಎರಡನೆಯದಾಗಿ ತನಗೆ ಎಷ್ಟೇ ಮನಸಿದ್ದರೂ ಅಂತ್ಯ ಸಂಸ್ಕಾರಕ್ಕೆ ಬರಲಾಗಲಿಲ್ಲವೆಂದು ಅವಳ ಕ್ಷಮೆ ಕೋರಿದ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

 

ಭಾಗ ಐದು: ಎರಡನೆಯ ಅಧ್ಯಾಯ

ಗಂಡನ ನೆನಪಿಗೆ ಊಟ ಹಾಕಿಸಬೇಕು ಅನ್ನುವ ಬುದ್ಧಿ ಇಲ್ಲದ ಯೋಚನೆ ಅದು ಯಾಕೆ ಕ್ಯಾತರೀನ ಇವಾನೋವ್ನಾಳ ತಲೆಗೆ ಬಂದಿತೋ ಹೇಳುವುದು ಕಷ್ಟ. ರಾಸ್ಕೋಲ್ನಿಕೋವ್ ಕೊಟ್ಟಿದ್ದ ಇಪ್ಪತ್ತಕ್ಕಿಂತಲೂ ಹೆಚ್ಚಿದ್ದ ರೂಬಲ್‌ಗಳಲ್ಲಿ ಹತ್ತು ರೂಬಲನ್ನು ಮಾರ್ಮೆಲಡೋವ್‌ನ ಅಂತ್ಯ ಸಂಸ್ಕಾರಕ್ಕೆ ಸುರಿದಿದ್ದಳು. ತನ್ನ ಗಂಡನ ನೆನಪಿಗೆ ಕ್ರಮಬದ್ಧವಾಗಿ ಊಟ ಹಾಕಿಸುವುದು ತನ್ನ ಕರ್ತವ್ಯ ಎಂದು ಕ್ಯಾತರೀನ ತಿಳಿದಿದ್ದಳೋ ಏನೋ. ಹಾಗೆ ಮಾಡಿದರೆ ಆ ಕಟ್ಟಡದ ಎಲ್ಲ ಬಾಡಿಗೆದಾರರು, ಅದರಲ್ಲೂ ಅಮಾಲಿಯ ಇವಾನೋವ್ನಾ ‘ಸತ್ತು ಹೋದ ಮನುಷ್ಯ ನಮಗಿಂತ ಕಡಮೆಯವನಲ್ಲ, ಉತ್ತಮನೇ ಇರಬೇಕು,’ ಎಂದು ಭಾವಿಸಬಹುದು, ಹಾಗಾಗಿ ಸತ್ತ ಗಂಡನ ಬಗ್ಗೆ ಮೂಗು ಮುರಿಯದೆ ಇರಬಹುದು ಅಂದುಕೊಂಡಳೇನೋ. ‘ಬಡಜನರ ಅಭಿಮಾನ’ ಎಂಬುದು ಅವಳ ಮೇಲೆ ಅತಿ ಹೆಚ್ಚು ಪರಿಣಾಮ ಬೀರಿರಬಹುದು.

ದಿನ ನಿತ್ಯದ ಬದುಕಿನಲ್ಲಿ ಎಲ್ಲರೂ ನಡೆಸಲೇಬೇಕಾದ ಕೆಲವು ಸಾಮಾಜಿಕ ಆಚರಣೆಗಳಿರುತ್ತವೆ. ಅವನ್ನು ನಡೆಸುವುದಕ್ಕಾಗಿ ಬಡವರಾದವರು ತಾವು ಉಳಿಸಿರುವ ಕೊನೆಯ ಕಾಸನ್ನೂ ಹುಡುಕಿ, ತಡಕಿ ಖರ್ಚು ಮಾಡಿ, ‘ನಾವು ಮಿಕ್ಕವರಿಗಿಂತ ಕಮ್ಮಿಯಿಲ್ಲ’, ‘ನಮ್ಮನ್ನು ಬೇರೆಯವರು ಹೀಗಳೆಯುವ ಹಾಗಿಲ್ಲ,’ ಎಂದು ತಮ್ಮಂಥ ಬಡವರೇ ಆದ ಬೇರೆಯವರಿಗೆ ಅನಿಸಬೇಕು ಎಂದು ಬಯಸುತ್ತಾರೆ. ತನ್ನ ಗಂಡ ಕೆಲಸಕ್ಕೆ ಬಾರದವನೆಂದು ಇಡೀ ಜಗತ್ತು ನಿರ್ಲಕ್ಷ್ಯ ಮಾಡಿರುವ ಹೊತ್ತಿನಲ್ಲಿ ‘ಹೇಗೆ ಬದುಕಬೇಕು, ಹೇಗೆ ಜನಕ್ಕೆ ಊಟ ಹಾಕಬೇಕು’ ಅನ್ನುವುದು ನನಗೆ ಗೊತ್ತಿದೆ’ ಎಂದು ಜಗತ್ತಿಗೆ, ಅದರಲ್ಲೂ ವಿಶೇಷವಾಗಿ ‘ಯೋಗ್ಯತೆ ಇಲ್ಲದ ಈ ದರಿದ್ರ ಬಾಡಿಗೆದಾರರಿಗೆ’ ತೋರಿಸಿಕೊಡಲು ಇದೇ ಸರಿಯಾದ ಸಂದರ್ಭ ಎಂದು ಕ್ಯಾತರೀನ ಇವಾನೋವ್ನಾ ಭಾವಿಸಿದ್ದಿರಬಹುದು.

‘ನಾನು ಬೇರೆ ಥರ ಜನರ ಮಧ್ಯೆ, ಶ್ರೀಮಂತರು ಎಂದು ಹೇಳಬಹುದಾದ ಕರ್ನಲ್ ಮನೆಯಲ್ಲಿ ಬೆಳೆದವಳು, ನೆಲ ಒರೆಸುವುದು, ರಾತ್ರಿಯ ಹೊತ್ತು ಮಕ್ಕಳ ಚಿಂದಿ ಬಟ್ಟೆ ಒಗೆಯುವುದು ಇಂಥ ಕೆಲಸ ಮಾಡುವುದಕ್ಕೆ ಹುಟ್ಟಿದವಳಲ್ಲ’ ಎಂದು ತೋರಿಸಿಕೊಳ್ಳವ ಅವಕಾಶವೂ ಹೌದು. ಇಂಥ ಹೆಮ್ಮೆ ಇಂಥ ಬಡಿವಾರಗಳ ಸನ್ನಿ ಅತ್ಯಂತ ಬಡವರಿಗೆ, ತುಳಿತಕ್ಕೆ ಒಳಗಾದವರಿಗೆ ಒಮ್ಮೊಮ್ಮೆ ಅಮರಿಕೊಂಡು ಏನು ಮಾಡಿದರೂ ತೊಲಗದ ತಲೆಚಿಟ್ಟಿನ ಹಾಗೆ ಕಾಡುತ್ತದೆ. ಅಲ್ಲದೆ ಕ್ಯಾತರೀನ ಇವನಾನೋವ್ನ ಬಡ, ಕೆಳವರ್ಗದಿಂದ ಬಂದವಳೂ ಅಲ್ಲ. ಆಕೆ ಪರಿಸ್ಥಿತಿಗಳ ಕಾರಣದಿಂದ ನಜ್ಜುಗುಜ್ಜಾದವಳು. ‘ನೀನು ಮಾನಸಿಕವಾಗಿಯೂ ದಮನಿತಳು,’ ಎಂಬ ಭಾವನೆ ಬರುವ ಹಾಗೆ ಮಾಡಿ ಅವಳ ಸ್ಥೈರ್ಯವನ್ನು ಉಡುಗಿಸುವುದು ಅಸಾಧ್ಯವಾದ ಕೆಲಸವಾಗಿತ್ತು. ಅಲ್ಲದೆ, ಅವಳ ಬುದ್ಧಿಯ ಸ್ಥಿಮಿತ ತಪ್ಪಿಲ್ಲ ಎಂದು ಸೋನ್ಯಾ ಹೇಳುವುದಕ್ಕೆ ಬಲವಾದ ಕಾರಣಗಳೂ ಇದ್ದವು.

ನಿಜ, ಅವಳು ಹುಚ್ಚಿ ಎಂದು ಖಚಿತವಾಗಿ ಹೇಳುವುದಕ್ಕೆ ಸಾಧ್ಯವಿರದಿದ್ದರೂ ಕಳೆದ ವರ್ಷದಲ್ಲಿ ಅವಳ ಮನಸು, ಬುದ್ಧಿಗಳಿಗೆ ಎಷ್ಟು ಹಿಂಸೆಯಾಗಿತ್ತೆಂದರೆ ಅವಳು ಅರೆಮರುಳಿಯಾದರೂ ಆಗಿರಬಹುದು ಅನಿಸುತ್ತಿತ್ತು. ಕ್ಷಯ ರೋಗ ಉಲ್ಬಣಿಸಿದಾಗ ಮನಸಿನ ಸಾಮರ್ಥ್ಯ ಕುಗ್ಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಬಗೆಬಗೆಯ ವೈನುಗಳು ಇರಲಿಲ್ಲ, ಅಥವಾ ಪೋರ್ಚುಗೀಸರ ಮೆಡೇರಿಯ ವೈನೂ ಇರಲಿಲ್ಲ. ಅದೆಲ್ಲ ಬರೀ ಉತ್ಪ್ರೇಕ್ಷೆಯ ಮಾತು. ಆದರೂ ವೈನು ಇತ್ತು, ವೋಡ್ಕಾ ಇತ್ತು ರಮ್ ಇತ್ತು, ಲಿಸ್ಬನ್ ಇತ್ತು—ಎಲ್ಲ ತೀರ ಅಗ್ಗದ ಬೆಲೆಯವು. ಅಗ್ಗವಾದರೂ ಸಾಕಷ್ಟು ಸರಬರಾಜು ಇತ್ತು. ಊಟದ ಮಟ್ಟಿಗೆ ಹೇಳುವುದಾದರೆ ಕಡ್ಡಾಯವಾಗಿ ಇರಲೇಬೇಕಾಗಿದ್ದ [ಒಣ ದ್ರಾಕ್ಷಿ ಮತ್ತು ಅನ್ನ ಬೆರೆಸಿದ] ಕುತ್ವಾ ಜೊತೆಗೆ ಪ್ಯಾನ್ ಕೇಕು ಸೇರಿದ ಹಾಗೆ ಮೂರು ನಾಲ್ಕು ಭಕ್ಷ್ಯಗಳಿದ್ದವು. ಅವೆಲ್ಲ ಅಮಾಲಿಯ ಇವಾನೋವ್ನಳ ಅಡುಗೆ ಮನೆಯಲ್ಲಿ ತಯಾರಾಗಿದ್ದವು, ಜೊತೆಗೆ ಚಹಾಕ್ಕಾಗಿ ಎರಡು ಸಮೋವರ್‍ ಕೂಡ ಇದ್ದವು. ಬೇಕಾಗಿದ್ದ ವಸ್ತುಗಳನ್ನೆಲ್ಲ ಕ್ಯಾತರೀನ ಇವಾನೋವ್ನಾ ಸ್ವತಃ ಖರೀದಿ ಮಾಡಿದ್ದಳು. ಅವಳಿಗೆ ಸಹಾಯಕನಾಗಿ ಅಯ್ಯೋ ಪಾಪ ಅನ್ನಿಸುವ ಹಾಗಿದ್ದ ಯಾವ ಕಾರಣಕ್ಕೋ ಏನೋ ಅದೇ ಅಪಾರ್ಟ್‌ಮೆಂಟಿನ ಬಾಡಿಗೆದಾರನಾಗಿದ್ದ ಪೋಲೆಂಡ್ ಮನುಷ್ಯ ಇದ್ದ.

ಅವಳ ಕೆಲಸದ ಹುಡುಗನ ಹಾಗೆ ನಿನ್ನೆಯ ಇಡೀ ದಿನ, ಮತ್ತೆ ಇವತ್ತು ಬೆಳಿಗ್ಗೆ ನಾಲಗೆ ಹೊರಕ್ಕೆ ಚಾಚಿಕೊಂಡು ದಡಬಡ ಓಡಾಡುತ್ತ, ತನ್ನನ್ನು ಗಮನಿಸಲಿ ಅನ್ನುವ ಆಸೆಯಲ್ಲಿ, ದುಡಿದಿದ್ದ. ಸಣ್ಣಪುಟ್ಟ ಕೆಲಸಗಳಿಗೂ ಕ್ಯಾತರೀನ ಇವಾನೋವ್ನಾಳ ಹತ್ತಿರ ಓಡಿ ಬರುತ್ತಿದ್ದ. ಅವಳನ್ನು ಹುಡುಕಿಕೊಂಡು ಜಗತ್ತಿನ ಅತಿ ಹಳೆಯ ಶಾಪಿಂಗ್ ಸೆಂಟರುಗಳಲ್ಲಿ ಒಂದಾದ ಗೊಸ್ತಿನಿ ಆರ್ಕೇಡ್‌ಗೆ ಕೂಡ ಹೋಗಿದ್ದ. ಅವಳನ್ನು ಪೋಲಿಶ್ ಭಾಷೆಯಲ್ಲಿ ಪಾನೀ (ಶ್ರೀಮತಿಯವರೇ) ಎಂದು ಸಂಬೋಧಿಸುತ್ತಿದ್ದ. ಕೊನೆಗೊಮ್ಮೆ ಆಕೆ ಬೇಸತ್ತು ಹೋದಳು. ‘ಈ ದೊಡ್ಡ ಮನಸಿನ ಮನುಷ್ಯ’ ಸಹಾಯ ಮಾಡದಿದ್ದರೆ ನನ್ನ ಗತಿ ಏನಾಗುತ್ತಿತ್ತೋ ಎಂದು ಅವನನ್ನು ಹಾಡಿ ಹೊಗಳುತ್ತಿದ್ದವಳು ಈಗ ಅವನು ಕಂಡರೇ ಕುಸಿದು ಬೀಳುತ್ತೇನೆ ಅಂದುಕೊಳ್ಳುವುದಕ್ಕೆ ಶುರು ಮಾಡಿದ್ದಳು.

ಕ್ಯಾತರೀನ ಇವಾನೋವ್ನಳ ಸ್ವಭಾವವೇ ಹಾಗೆ. ಹೊಸತಾಗಿ ಪರಿಚಯವಾದ ಯಾರನ್ನಾದರೂ ಸರಿ ಆತುರಾತುರವಾಗಿ ಉಜ್ವಲ ವರ್ಣಗಳಲ್ಲಿ ಅಲಂಕರಿಸಿ, ಅವರಿಗೆ ಮುಜುಗರವಾದರೂ ಬಿಡದೆ ಅವರನ್ನು ಹೊಗಳಿ ಕೊಂಡಾಡುವುದಕ್ಕೆ ವಾಸ್ತವವೇ ಅಲ್ಲದ ಬಗೆ ಬಗೆಯ ಸನ್ನಿವೇಶಗಳನ್ನು ತಾನೇ ಕಲ್ಪಿಸಿಕೊಳ್ಳುತ್ತಿದ್ದಳು. ನಾನು ಕಲ್ಪಿಸಿ ಮೆಚ್ಚಿಕೊಂಡ ಹಾಗೆಯೇ ನಿಜವಾಗಿಯೂ ಅವರು ಇದ್ದಾರೆ ಎಂದು ಪ್ರಾಮಾಣಿಕವಾಗಿ ನಂಬಿರುತ್ತಿದ್ದಳು. ಮತ್ತೆ, ಇದ್ದಕಿದ್ದ ಹಾಗೆ ಅವರ ಬಗ್ಗೆ ಭ್ರಮನಿರಸನವಾಗಿ ಕೆಲವೇ ಗಂಟೆಗಳ ಮೊದಲು ಹೊಗಳಿ ಆರಾಧಿಸಿದ್ದವರನ್ನು ಟೀಕಿಸಿ ಬಾಯಿಗೆ ಬಂದ ಹಾಗೆ ಬೈದುಬಿಡುತ್ತಿದ್ದಳು. ಆಕೆ ಸ್ವಭಾವತಃ ಬಲು ಬೇಗ ಖುಷಿಪಡುವ, ಸಂತೋಷ ಚಿತ್ತದ, ಶಾಂತ ಸ್ವಭಾವದ ಹೆಣ್ಣು. ಪ್ರತಿಯೊಬ್ಬರೂ ಸಂತೋಷವಾಗಿ ಶಾಂತಿಯಿಂದ ಬದುಕಬೇಕು, ಬೇರೆ ಥರ ಇರಲೇಬಾರದು ಎಂದು ತೀವ್ರವಾಗಿ ಬಯಸುತ್ತಿದ್ದಳು. ಸತತವಾದ ಸೋಲು, ದುರದೃಷ್ಟದ ಘಟನೆಗಳ ಕಾರಣದಿಂದ ಹೀಗಾಗಿರಬಹುದು.

ಬದುಕಿನ ಶ್ರುತಿ ಒಂದಿಷ್ಟೆ ಏರುಪೇರಾದರೂ ಸಣ್ಣದೊಂದು ವೈಫಲ್ಯ ಎದುರಾದರೂ ಅವಳು ಉನ್ಮತ್ತಳಾಗಿ, ಅರೆ ಕ್ಷಣದ ಅವಧಿಯಲ್ಲಿ ಅವಳ ಭರವಸೆ, ಕಸನುಗಳೆಲ್ಲ ಛಿದ್ರವಾಗಿ, ತನ್ನ ವಿಧಿಯನ್ನು ಹಳಿಯುತ್ತ, ಕೈಗೆ ಸಿಕ್ಕದ್ದನ್ನೆಲ್ಲ ಹರಿಯುತ್ತ, ಎತ್ತಿ ಬಿಸಾಡುತ್ತ ಗೋಡೆಗೆ ತಲೆ ಚಚ್ಚಿಕೊಳ್ಳುತ್ತಿದ್ದಳು. ಇದ್ದಕಿದ್ದ ಹಾಗೆ, ಯಾವ ಕಾರಣಕ್ಕೊ ಮನೆಯ ಓನರಮ್ಮ ಅಮಾಲಿಯ ಇವಾನೋವ್ನ ಕೂಡ ಕ್ಯಾತರೀನ ಇವಾನೋವ್ನಳ ಅಸಾಮಾನ್ಯ ಗೌರವಕ್ಕೆ ಪಾತ್ರಳಾಗಿದ್ದಳು, ವಿಶೇಷ ಮಹತ್ವ ಪಡೆದಿದ್ದಳು. ಅದಕ್ಕೆ ಇದ್ದಿರಬಹುದಾದ ಏಕೈಕ ಕಾರಣವೆಂದರೆ ಈ ಕಾರ್ಯದ ಊಟ ವ್ಯವಸ್ಥೆಯಾಗಬೇಕು ಎಂದು ತೀರ್ಮಾನವಾದ ಕ್ಷಣದಿಂದ ಅಮಾಲಿಯ ಇವಾನೋವ್ನ ಸಂಪೂರ್ಣವಾಗಿ ಅದರ ಎಲ್ಲ ಕೆಲಸಗಳಲ್ಲಿ ತೊಡಗುವ ತೀರ್ಮಾನ ಮಾಡಿದ್ದಳು:

ಊಟದ ಮೇಜು ಜೋಡಿಸಿ ಅದರ ಮೇಲೆ ಬಟ್ಟೆ ಹಾಸಿ ಅಣಿಮಾಡಿ, ಪಾತ್ರೆ ಪಗಡೆಗಳನ್ನು ಕೊಟ್ಟು, ಅಡುಗೆ ಮಾಡುವುದಕ್ಕೆ ತನ್ನ ಅಡುಗೆ ಮನೆಯಲ್ಲೆ ಅವಕಾಶ ಕೂಡ ಕಲ್ಪಿಸಿದ್ದಳು. ಕ್ಯಾತರೀನ ಇವಾನೋವ್ನಾ ಚರ್ಚ್‌ನ ಸ್ಮಶಾನಕ್ಕೆ ಹೋಗುವಾಗ ಮನೆಯ ಎಲ್ಲ ಉಸ್ತುವಾರಿಗೆ ಅವಳಿಗೇ ಬಿಟ್ಟು ಹೋಗಿದ್ದಳು. ಟೇಬಲ್ಲಿನ ಮೇಲೆ ಹಾಸುವ ಬಟ್ಟೆ ಸಾಕಷ್ಟು ಸ್ವಚ್ಛವಾಗಿತ್ತು, ಪಾತ್ರೆ, ಚಾಕು, ವೈನ್ ಗ್ಲಾಸು, ಕಪ್. ಇತ್ಯಾದಿಗಳನ್ನೆಲ್ಲ ಬೇರೆ ಬೇರೆ ಆಕಾರದವು, ಬೇರೆ ಬೇರೆ ಮನೆಗಳಿಂದ ಎರವಲು ಪಡೆದವು, ಎಲ್ಲವೂ ಹೊತ್ತಿಗೆ ಸರಿಯಾಗಿ ಮೇಜಿನ ಮೇಲೆ ಅಣಿಯಾಗಿದ್ದವು. ತಾನು ಒಳ್ಳೆಯ ಕೆಲಸ ಅಚ್ಚುಕಟ್ಟಾಗಿ ಮಾಡಿದ್ದೇನೆಂದು ಹೆಮ್ಮೆ ಪಡುತ್ತ ಚರ್ಚ್‌ನ ಸ್ಮಶಾನದಿಂದ ವಾಪಸು ಬರುತ್ತಿದ್ದವರನ್ನು ಒಂದಷ್ಟು ಹೆಮ್ಮೆಯಿಂದಲೇ ಬರಮಾಡಿಕೊಂಡಳು ಅಮಾಲಿಯ. ಅವಳ ತಲೆಯ ಬಾನೆಟ್ಟಿಗೆ ದುಃಖ ಸೂಚಕ ಕರಿಯ ರಿಬ್ಬನ್ನು ಇತ್ತು, ಕಪ್ಪು ಉಡುಪು ತೊಟ್ಟಿದ್ದಳು. ಅಷ್ಟೆಲ್ಲ ಕೆಲಸ ಮಾಡಿದವಳಿಗೆ ಈ ಹೆಮ್ಮೆ ಸಹಜವೇ. ಆದರೂ ಅವಳ ಈ ಹೆಮ್ಮೆಯೇ ಕ್ಯಾತರೀನ ಇವಾನೋವ್ನಳನ್ನು ರೇಗಿಸಿತ್ತು: ‘ಏನು ಮಹಾ, ಇವಳಿಲ್ಲದಿದ್ದರೆ ಊಟಕ್ಕೆ ಸಜ್ಜು ಮಾಡುವುದಕ್ಕೆ ಆಗತಲೇ ಇರಲಿಲ್ಲ ಅಂದುಕೊಂಡಿದಾಳಾ!’ ಅವಳ ಬಾನೆಟ್ಟು ಅದರ ಹೊಸ ರಿಬ್ಬನ್ನು ರೇಗಿಸಿದವು.

‘ಈ ಪೆದ್ದ ಜರ್ಮನ್ ಹೆಂಗಸು ಜಂಬ ಮಾಡತಿದ್ದಾಳಾ—ತಾನು ಮನೆಯ ಓನರಾದರೂ ಬಡವ ಬಾಡಿಗೆದಾರರಿಗೆ ಕಷ್ಟ ಕಾಲದಲ್ಲಿ ಉದಾರವಾಗಿ ಸಹಾಯಮಾಡತಿದ್ದೇನೆ ಅಂತ? ಓಹೋಹೋ! ನಮ್ಮಪ್ಪ, ಕರ್ನಲ್ ಆಗಿದ್ದಾಗ, ಆಮೇಲೆ ಗೌರ್ನರ್ ಆದಾಗ ನಮ್ಮ ಮನೇಲಿ ನಲವತ್ತು ಜನಕ್ಕೆ ಊಟದ ಮೇಜು ಅಣಿ ಮಾಡತಿದ್ದರು. ಈ ಅಮಾಲಿಯ ಇವಾನೋವ್ನಾ ಇಂಥವರನ್ನ ಅಡುಗೆ ಮನೆಗೆ ಸೇರಿಸಿ ಕೂಡ ಸರಿಸತಿರಲಿಲ್ಲ…’ ಹಾಗಂದುಕೊಂಡರೂ ಸದ್ಯಕ್ಕೆ ಮನಸಿನಲ್ಲಿರುವ ಭಾವನೆ ತೋರಿಸುವುದು ಬೇಡ ಅಂದುಕೊಂಡಳು ಕ್ಯಾತರೀನ. ಆದರೂ ಇದ್ದದ್ದು ಇದ್ದ ಹಾಗೆ ಹೇಳಬೇಕು ಅವಳ ಜಾಗ ಯಾವುದು ಅಂತ ತೋರಿಸಬೇಕು, ಇಲ್ಲಾಂದರೆ, ದೇವರಿಗೇ ಗೊತ್ತು, ಅವಳ ಜಂಬ, ಬಡಿವಾರ ಎಲ್ಲ ಮಿತಿ ಮೀರತ್ತೆ ಅಂತಲೂ ನಿರ್ಧಾರ ಮಾಡಿಕೊಂಡಳು.

ಅವಳ ಜೊತೆ ವ್ಯವಹರಿಸುವಾಗ ಸ್ನೇಹದ ಭಾವ ತೋರಲಿಲ್ಲ. ಇನ್ನೊಂದು ಘಟನೆಯೂ ಕ್ಯಾತರೀನ ಇವಾನೋವ್ನಳನ್ನು ಕೆರಳಿಸಿತ್ತು. ಗಂಡನ ನೆನಪಿಗೆ ಏರ್ಪಡಿಸಿದ್ದ ಪೂಜೆಗೆ ಅವಳು ಕರೆದ ಅದೇ ಮನೆಯಲ್ಲಿ ಬಾಡಿಗೆಗೆ ಇದ್ದವರಲ್ಲಿ ಪೋಲಿಷ್ ಮನುಷ್ಯನನ್ನು ಬಿಟ್ಟರೆ ಬೇರೆ ಯಾರೂ ಬಂದೇ ಇರಲಿಲ್ಲ.. ಆದರೆ ಊಟಕ್ಕೆ ಮಾತ್ರ—ಅತೀ ಬಡವರು, ಲೆಕ್ಕಕ್ಕೇ ಇರದವರು ಎಲ್ಲರೂ ಬಂದಿದ್ದರು. ಮನುಷ್ಯರ ಹಾಗೆ ಕಾಣದೆ ಕಸದ ಹಾಗಿದ್ದವರೆಲ್ಲ ಇದ್ದರು. ಸ್ವಲ್ಪ ಗಟ್ಟಿ ಕುಳಗಳಾಗಿದ್ದವರು, ಹಿರಿಯರು. ಯಾರೂ ಪತ್ತೆ ಇರಲಿಲ್ಲ. ಸಂಚು ಮಾಡಿಕೊಂಡವರ ಹಾಗೆ ಊಟಕ್ಕೆ ಬಾರದೆ ದೂರ ಉಳಿದಿದ್ದರು. ಉದಾಹರಣೆಗೆ, ಆ ಕಟ್ಟಡದಲ್ಲಿ ಬಾಡಿಗೆಗೆ ಇದ್ದವರಲ್ಲೆಲ್ಲ ಅತ್ಯಂತ ಗಣ್ಯನಾಗಿದ್ದ ಪೀಟರ್ ಪೆಟ್ರೊವಿಚ್ ಬಂದಿರಲಿಲ್ಲ. ಅವನು ಅತ್ಯಂತ ಉದಾರಿ, ಉದಾತ್ತ, ಉತ್ತಮ ಮನುಷ್ಯನೆಂದು, ಹಣವಂತ, ದೊಡ್ಡ ಮನುಷ್ಯರೆಲ್ಲರ ಅವನಿಗೆ ಪರಿಚಯ, ತನ್ನ ಮೊದಲನೆಯ ಗಂಡನ ಮಿತ್ರ, ನಮ್ಮಪ್ಪನ ಮನೆಗೆ ಬರುತ್ತಿದ್ದ, ನನಗೆ ಪಿಂಚಣಿ ಕೊಡಿಸುವುದಾಗಿ ಮಾತುಕೊಟ್ಟಿದ್ದಾನೆ, ಎಂದೆಲ್ಲ ಕ್ಯಾತರೀನ ಇವಾನೋವ್ನ ಹಿಂದಿನ ದಿನವಷ್ಟೇ ಇಡೀ ಜಗತ್ತಿಗೆ, ಅಂದರೆ ಅಮಾಲಿಯ ಇವಾನೋವ್ನ, ಪೋಲೆಚ್ಕಾ, ಸೋನ್ಯಾ, ಹಾಗೂ ಪೋಲಿಷ್ ಮನುಷ್ಯನಿಗೆ ಸಾರಿ ಸಾರಿ ಹೇಳಿದ್ದಳು.

ಇಲ್ಲಿ ಒಂದು ಸಂಗತಿಯನ್ನು ನಾವು ಮರೆಯಬಾರದು. ಕ್ಯಾತರೀನ ಇವಾನೋವ್ನಾ ಬೇರೆ ಯಾರಿಗಾದರೂ ಇರುವ ಜನಸಂಪರ್ಕ ಅಥವ ಸಂಪತ್ತಿನ ಬಗ್ಗೆ ದೊಡ್ಡದಾಗಿ ಮಾತನಾಡಿದಾಗ ಅವಳಲ್ಲಿ ಸ್ವಾರ್ಥದ ಯೋಚನೆ ಇರುತ್ತಿರಲಿಲ್ಲ, ಬೇರೆ ಯಾವುದೋ ಲೆಕ್ಕಾಚಾರವೂ ಇರುತ್ತಿರಲಿಲ್ಲ. ಅವರನ್ನು ಹೃತ್ಪೂರ್ವಕವಾಗಿ, ಹೊಗಳುವ ಸಂತೊಷಕ್ಕಾಗಿಯೇ, ತಾನು ಕೊಂಡಾಡುತ್ತಿರುವ ಮನುಷ್ಯ ಎಷ್ಟು ದೊಡ್ಡವನು ಎಂದು ತಿಳಿಸುವುದಕ್ಕಾಗಿಯೇ ಹೊಗಳುತ್ತಿದ್ದಳು. ಪೀಟರ್ ಪೆಟ್ರೊವಿಚ್‍ ಬರಲಿಲ್ಲ ಅನ್ನುವ ಕಾರಣಕ್ಕೇ ಇರಬೇಕು, ‘ಆ ದುಷ್ಟ ಸೆಮ್ಯೊನೊವಿಚ್’ ಕೂಡ ಬಂದಿರಲಿಲ್ಲ. ‘ಏನಂದುಕೊಂಡಿದಾನೆ ಅವನು? ಏನೋ ಪಾಪ ಅಂತ ಕರೆದದ್ದು. ಅದೂ ಅವನು ಪೀಟರ್ ಪೆಟ್ರೊವಿಚ್‍ ಜೊತೆ ಒಂದೇ ರೂಮಿನಲ್ಲಿದಾನೆ, ಅವನ ಪರಿಚಯದವನು ಕರೆಯದೆ ಇದ್ದರೆ ಚೆನ್ನಾಗಿರಲ್ಲ ಅಂತ ಕರೆದದ್ದು,’ ಅಂದುಕೊಂಡಳು.

ಇನ್ನೊಬ್ಬ ಸ್ಟೈಲು ಮಾಡುವ ಹೆಂಗಸು ಮತ್ತವಳ ಮಗಳು, ಮದುವೆ ವಯಸ್ಸು ಮೀರಿದ ಕೆಲಸದ ಮುದುಕಿಯ ಹಾಗೆ ಕಾಣುತಿದ್ದವಳು, ಅಮಾಲಿಯ ಇವಾನೋವ್ನಾಳ ಕಟ್ಟದ ರೂಮಿನಲ್ಲಿ ಎರಡು ವಾರದಿಂದಷ್ಟೇ ಬಾಡಿಗೆಗೆ ಬಂದಿದ್ದವರು, ಅವರೂ ಬಂದಿರಲಿಲ್ಲ. ‘ಮಾರ್ಮೆಲಡೋವ್ ಮನೆಯಲ್ಲಿ ಗಲಾಟೆ ಜಾಸ್ತಿ, ಅವನು ಕುಡಿದು ಬಂದಾಗ ತೀರ ಜಾಸ್ತಿ ಎಂದು ದೂರು ಮಾಡುತ್ತಿದ್ದವರು ಅವರು.. ಆ ದೂರಿನ ವಿಷಯವನ್ನು ಅಮಾಲಿಯ ಇವಾನೋವ್ನಾ ಆಗಲೇ ಕ್ಯಾತರೀನಳಿಗೆ ಹೇಳಿದ್ದೂ ಆಗಿತ್ತು, ನಿಮ್ಮ ಇಡೀ ಸಂಸಾರ ಬೀದಿಗೆ ತಳ್ಳುತ್ತೇನೆ ಎಂದು ಹೆದರಿಸಿಯೂ ಆಗಿತ್ತು. ದೊಡ್ಡ ಗಂಟಲಲ್ಲಿ ಕಿರಿಚಾಡುತ್ತ ‘ನೀನು ಆ ದೊಡ್ಡ ಮನುಷ್ಯರ ಪಾದಕ್ಕೂ ಸಮನಲ್ಲ’ ಎಂದು ದೊಡ್ಡ ಗಂಟಲ್ಲಿ ಕೂಗಾಡಿದ್ದೂ ಆಗಿತ್ತು. ಯಾರ ಪಾದಕ್ಕೆ ತಾನು ಸಮನಲ್ಲ ಎಂದು ಓನರು ಹೇಳಿದ್ದಳೋ ಆ ಹೆಂಗಸನ್ನೂ ಅವಳ ಮಗಳನ್ನೂ ಕರೆಯಲೇಬೇಕು, ಕರೆದು ‘ನಮಗೂ ದೊಡ್ಡಸ್ತಿಕೆ ಇದೆ,’ ಎಂದು ತೋರಿಸಬೇಕು, ‘ಯಾವುದೇ ಸೇಡು’ ಇಟ್ಟುಕೊಳ್ಳದೆ ಆಹ್ವಾನ ನೀಡುವ ದೊಡ್ಡ ಮನಸ್ಸು ನಮ್ಮದು ಅನ್ನುವುದು ತಿಳಿಯಬೇಕು, ಆಗ ಅವರಿಗೆ ಕ್ಯಾತರೀನ ಇವಾನೋವ್ನ ಬೇರೆ ಮಟ್ಟದ ಬದುಕು ನಡೆಸುವವಳು ಅನ್ನುವುದು ತಿಳಿಯುತ್ತದೆ.

ಊಟಕ್ಕೆ ಕೂತಾಗ ಇದನ್ನೆಲ್ಲ ಅವರಿಗೆ ತಪ್ಪದೆ ವಿವರಿಸಬೇಕು. ಹಾಗೇ ಅಪ್ಪನಿಗೆ ಇದ್ದ ಗೌರ್ನರ್ ಹುದ್ದೆ ಬಗ್ಗೆ ಹೇಳಬೇಕು, ನಾವೆಲ್ಲ ದಿನ ಬೆಳಗಾಗೆದ್ದು ಒಬ್ಬರ ಮುಖ ಇನ್ನೊಬ್ಬರು ನೋಡಲೇಬೇಕು, ಹಾಗಿರುವಾಗ ಭೇಟಿಯಾಗದೆ ತಪ್ಪಿಸಿಕೊಂಡು ತಿರುಗಾಡುವುದು ಮೂರ್ಖ ಕೆಲಸ ಅನ್ನುವುದನ್ನೂ ಮಾತಿನಲ್ಲಿ ಸೂಚಿಸಬೇಕು ಅಂದುಕೊಂಡಳು. ಆ ಡುಮ್ಮ ಲೆಫ್ಟಿನೆಂಟ್ ಕೂಡ (ನಿಜವಾಗಿ ಅವನು ಕ್ಯಾಪ್ಟನ್) ಬಂದಿಲ್ಲ, ಆದರೆ ನಿನ್ನೆ ಸಾಯಂಕಾಲದಿಂದ ಅವನಿಗೆ ಶೀತವಾಗಿ ಮಲಗಿದ್ದಾನೆಂದು ತಿಳಿಯಿತು. ಒಟ್ಟಿನಲ್ಲಿ ಬಂದಿದ್ದವರೆಂದರೆ ಗಿಡ್ಡ ಪೋಲಿಷ್ ಮನುಷ್ಯ, ಮುಖದ ಮೇಲೆಲ್ಲ ಕರಿ ಚುಕ್ಕಿಗಳಿದ್ದ, ಅಸಹ್ಯ ವಾಸನೆಯ ಕೋಟು ತೊಟ್ಟಿದ್ದ ಜುಜುಬಿ ಮೂಕ ಕಾರಕೂನ; ಆಮೇಲೆ, ಕಿವುಡನೂ ಬಹಳ ಮಟ್ಟಿಗೆ ಕುರುಡನೂ ಆಗಿದ್ದ, ಯಾವುದೋ ಕಾರಣಕ್ಕೆ ಯಾರೋ ಬಾಡಿಗೆ ಕೊಟ್ಟು ಅಮಾಲಿಯ ಇವಾನೋವ್ನಳ ಮನೆಯಲ್ಲಿ ಅನಾದಿ ಕಾಲದಿಂದ ಇರಿಸಿದ್ದ ಮುದುಕ; ಜೊತೆಗೆ ಇನ್ನೊಬ್ಬ ರಿಟೈರಾಗಿದ್ದ ಕುಡುಕ ಲೆಫ್ಟಿನೆಂಟು, ನಿಜವಾಗಿ ಅವನು ಬರಿಯ ಸಪ್ಲೈ ಆಫೀಸರು, ಅಸಭ್ಯವಾಗಿ ಜೋರಾಗಿ ನಗುತ್ತಿದ್ದ, ಮಾತಿಗೊಂಡು ಸಾರಿ ‘ಹಾಗಂದುಕೊಳ್ಳಿ,’ ಅನ್ನುತ್ತಿದ್ದ, ಇನ್ನೊಬ್ಬ ವೇಸ್ಟ್ ಕೋಟು ಇಲ್ಲದೆ ಬಂದಿದ್ದ.

ಅವರಲ್ಲಿ ಒಬ್ಬ ಸೀದಾ ಟೇಬಲ್ಲಿನ ಹತ್ತಿರ ಹೋದ, ಕ್ಯಾತರೀನಳಿಗೆ ನಮಸ್ಕಾರ ಅಂತಲೂ ಹೇಳದೆ ಕೂತುಬಿಟ್ಟ. ಮತ್ತೊಬ್ಬ, ಹಾಕಿಕೊಳ್ಳಲು ಬೇರೆ ಬಟ್ಟೆ ಇಲ್ಲದ್ದರಿಂದ ಡ್ರಸಿಂಗ್ ಗೌನು ತೊಟ್ಟು ಬಂದಿದ್ದ. ಹಾಗೆ ಬಂದದ್ದು ಅಸಭ್ಯ ನಡವಳಿಕೆಯೆಂದು ಹೇಳಿ ಅಮಾಲಿಯ ಇವಾನೋವ್ನಾಳ ಜೊತೆಗೆ ಪೋಲೆಂಡಿನ ಮನುಷ್ಯನೂ ಸೇರಿ ಬಹಳ ಪ್ರಯತ್ನಪಟ್ಟು ಅವನನ್ನು ಹೊರಕ್ಕೆ ಕಳಿಸಿದರು.

ಪೋಲೆಂಡಿನವನು ತನ್ನ ಜೊತೆಗೆ ಪೋಲೆಂಡಿನ ಇನ್ನಿಬ್ಬರನ್ನು ಕರೆದುಕೊಂಡು ಬಂದಿದ್ದ. ಅವರು ಅಮಾಲಿಯ ಇವಾನೋವ್ನ ಮನೆಯಲ್ಲಿ ಎಂದೂ ವಾಸವಾಗಿದ್ದವರಲ್ಲ, ಅಲ್ಲಿದ್ದ ಯಾರೂ ಅವರನ್ನು ಅಪಾರ್ಟ್‌ಮೆಂಟಿನಲ್ಲಿ ಎಂದೂ ನೋಡಿರಲೂ ಇಲ್ಲ. ಇವೆಲ್ಲವೂ ಕ್ಯಾತರೀನಳಿಗೆ ಕಿರಿಕಿರಿ ಮಾಡಿ ಸಿಟ್ಟು ತರಿಸಿತ್ತು. ‘ಇದನ್ನೆಲ್ಲ ಮಾಡಿದ್ದು ಯಾರಿಗಾಗಿ?’ ಜಾಗ ಆಗಲೆಂದು ಮಕ್ಕಳನ್ನ ಟೇಬಲ್ಲಿನ ಮುಂದೆ ಊಟಕ್ಕೆ ಕೂರಿಸಿರಲಿಲ್ಲ. ಟೇಬಲ್ಲುಗಳೇ ಇಡೀ ರೂಮನ್ನು ತುಂಬಿದ್ದವು. ಮಕ್ಕಳು ಹಿಂದಿನ ಮೂಲೆಯಲ್ಲಿ ಪೆಟ್ಟಿಗೆ ಮೇಲೆ ಕೂತು, ಇಬ್ಬರು ಪುಟ್ಟ ಮಕ್ಕಳು ಬೆಂಚಿನ ಮೇಲೆ ಕೂತು, ಸ್ವಲ್ಪ ದೊಡ್ಡವಳಾಗಿದ್ದ ಪೋಲೆಚ್ಕಾ ಅವರನ್ನೆಲ್ಲ ನೋಡಿಕೊಳ್ಳುತ್ತಿದ್ದಳು, ಊಟ ಮಾಡಿಸುತ್ತಿದ್ದಳು, ಮೂಗು ಒರೆಸುತ್ತಿದ್ದಳು, ‘ದೊಡ್ಡ ಮನೆಯ ಮಕ್ಕಳು’ ಹೇಗಿರಬೇಕೋ ಹಾಗೆ ಕಾಣುವಂತೆ ಪ್ರಯತ್ನಪಡುತ್ತಿದ್ದಳು. ಸ್ವಲ್ಪದರಲ್ಲಿ ಹೇಳಬೇಕೆಂದರೆ, ಕ್ಯಾತರೀನ ಇವಾನೋವ್ನ ಎಲ್ಲರನ್ನೂ ಉತ್ಪ್ರೇಕ್ಷಿತ ಗೌರವದಿಂದಲೂ ದೊಡ್ಡಸ್ತಿಕೆ ತೋರಿಸಿಕೊಂಡೂ ಉಪಚಾರ ಮಾಡಬೇಕಾಗಿತ್ತು. ಕೆಲವರನ್ನು ತೀರ ಕಠಿಣವಾದ ದೃಷ್ಟಿಯಿಂದ ನೋಡಿದಳು, ಇಲ್ಲಿ ಕೂತುಕೊಳ್ಳಿ ಎಂದು ಒರಟಾಗಿ ಹೇಳಿದಳು.

ಯಾರು ಯಾರು ಊಟಕ್ಕೆ ಬಂದಿಲ್ಲವೋ ಅವರೆಲ್ಲ ಬರದೆ ಇರುವುದಕ್ಕೆ ಅಮಾಲಿಯ ಇವಾನೋವ್ನಾಳೇ ಕಾರಣ ಎಂದು ಅದು ಹೇಗೋ ಅವಳು ಅಂದುಕೊಂಡುಬಿಟ್ಟಿದ್ದಳು. ಹಾಗಾಗಿ ಅವಳ ಬಗ್ಗೆ ಅಪಾರ ಉದಾಸೀನ ತೋರಿದಳು. ಆ ಉದಾಸೀನ ಅಮಾಲಿಯಾಳಿಗೆ ತಟ್ಟನೆ ಗೊತ್ತಾಯಿತು, ಸಿಟ್ಟೂ ಬಂತು. ಹೀಗೆ ಶುರುವಾದ ಕಾರ್ಯಕ್ರಮ ಚಂದವಾಗಿ ಮುಗಿಯುವ ಲಕ್ಷಣವೇ ಇರಲಿಲ್ಲ. ಕೊನೆಗೆ ಎಲ್ಲರೂ ಊಟಕ್ಕೆ ಕೂತರು.

ಸ್ಮಶಾನಕ್ಕೆ ಪೂಜೆಗೆ ಹೋಗಿದ್ದವರು ಬರುವ ಹೊತ್ತಿಗೇ ರಾಸ್ಕೋಲ್ನಿಕೋವ್ ಕೂಡ ಬಂದ. ಅವನನ್ನು ಕಂಡು ಕ್ಯಾತರೀನಳಿಗೆ ಅಪಾರ ಸಂತೋಷವಾಯಿತು. ಮೊದಲನೆಯದಾಗಿ ಅವಳ ಮನೆಗೆ ಬಂದಿದ್ದ ಅತಿಥಿಗಳಲ್ಲಿ ಅವನೊಬ್ಬನೇ ‘ಸುಶಿಕ್ಷಿತ’. ‘ಎಲ್ಲರಿಗೂ ಗೊತ್ತಿರುವ ಹಾಗೆ ಈ ಊರಿನ ವಿಶ್ವವಿದ್ಯಾಲಯದಲ್ಲಿ ಇನ್ನೆರಡು ವರ್ಷಗಳೊಳಗೆ ಪ್ರೊಫೆಸರ್ ಹುದ್ದೆ ಪಡೆಯುತ್ತಾನೆ.’ ಎರಡನೆಯದಾಗಿ ತನಗೆ ಎಷ್ಟೇ ಮನಸಿದ್ದರೂ ಅಂತ್ಯ ಸಂಸ್ಕಾರಕ್ಕೆ ಬರಲಾಗಲಿಲ್ಲವೆಂದು ಅವಳ ಕ್ಷಮೆ ಕೋರಿದ. ಆಕೆ ಅವನ ಮೇಲೆ ಮುಗಿಬಿದ್ದು ಊಟದ ಮೇಜಿನಲ್ಲಿ ತನ್ನ ಎಡಗಡೆಗೆ ಕೂರಿಸಿಕೊಂಡಳು. ಅವಳ ಬಲಬದಿಯಲ್ಲಿ ಅಮಾಲಿಯ ಇವಾನೋವ್ನಾ ಇದ್ದಳು. ಊಟ ಸರಿಯಾಗಿ ಬಡಿಸುತ್ತಿದ್ದಾರೋ ಇಲ್ಲವೋ, ಅಡುಗೆ ಎಲ್ಲರಿಗೂ ಸಾಲುತ್ತದೋ ಇಲ್ಲವೋ ಅನ್ನುವ ಆತಂಕಪಡುತ್ತಿದ್ದಳು. ಜೊತೆಗೇ ನಿಮಿಷಕ್ಕೊಮ್ಮೆ ಮಾತು ನಿಲ್ಲಿಸುವಷ್ಟು ಕಾಟ ಕೊಡುತ್ತಿದ್ದ, ಕಳೆದೆರಡು ದಿನಗಳಿಂದ ಅವಳೊಟ್ಟಿಗೇ ಇದ್ದುಬಿಟ್ಟಿದ್ದ ಕೆಮ್ಮು ಬೇರೆ. ಅವಳು ಕೆಮ್ಮುತ್ತಲೇ ರಾಸ್ಕೋಲ್ನಿಕೋವ್‌ನತ್ತ ತಿರುಗಿ, ಅದುವರೆಗೆ ಅದುಮಿಟ್ಟಿದ್ದ ತನ್ನ ಭಾವನೆಗಳನ್ನೆಲ್ಲ, ಊಟದ ಏರ್ಪಾಟು ಸರಿಹೋಗದ ಸಿಟ್ಟನ್ನೆಲ್ಲ ಅರೆ ಪಿಸುದನಿಯಲ್ಲಿ ಹೇಳಿಕೊಂಡಳು. ಈ ಕೋಪ ಮಿಕ್ಕವರಿಗೆ ಹಾಸ್ಯಾಸ್ಪದವಾಗಿ ಕಂಡು ನಗು ತಡೆಯಲಾಗದೆ, ಎಲ್ಲ ಅತಿಥಿಗಳೂ ಮುಖ್ಯವಾಗಿ ಮನೆಯ ಓನರೂ ನಕ್ಕುಬಿಟ್ಟರು.

‘ಎಲ್ಲಾ ಆ ಗೂಬೆದೇ ತಪ್ಪು. ಯಾರ ಬಗ್ಗೆ ಹೇಳತಾ ಇದೇನೆ, ತಿಳೀತಲ್ಲಾ—ಅವಳೇ! ಅವಳೇ!’ ಅನ್ನುತ್ತ ಕ್ಯಾತರೀನ ತನ್ನ ತಲೆಯನ್ನು ಅಮಾಲಿಯಳತ್ತ ವಾಲಿಸಿದಳು. ‘ಅವಳ ಕಣ್ಣು ಗುಡ್ಡೆ ನೋಡು, ಉದುರಿ ಬೀಳೋ ಹಾಗಿದಾವೆ! ನಾವು ಅವಳ ಬಗ್ಗೆ ಆಡಿಕೊಳ್ಳತಾ ಇದೀವಿ ಅಂದುಕೊಂಡಿದಾಳೆ, ಏನೂ ಕೇಳಿಸತಾ ಇಲ್ಲ, ಅದಕ್ಕೇ ಹಾಗೆ ಗುರಾಯಿಸತಾ ಇದಾಳೆ! ಗೂಬೆ, ಗೂಬೆ!!… ಖೊಖ್, ಖೋಖ್, ಖೊಕ್! ಅವಳ ತಲೆಗೆ ಹಾಕ್ಕೊಂಡಿರೊ ಬಾನೆಟ್ಟು ನೋಡು! ಖೊಖ್, ಖೋಕ್ ಖೋಕ್! ನೋಡಿದೆಯಾ. ನಮ್ಮ ಮನೇಗೆ ಊಟಕ್ಕೆ ಬಂದು ನನಗೆ ಏನೋ ಸಹಾಯ ಮಾಡತಾ, ನನಗೆ ಗೌರವ ಸಿಗೋ ಹಾಗೆ ಮಾಡತಾ ಇದೀನಿ ಅಂತ ಎಲ್ಲಾರು ಅಂದುಕೊಳ್ಳಲಿ ಅನ್ನುವ ಆಸೆ ಅವಳಿಗೆ! ‘ಒಳ್ಳೆಯವರನ್ನ ಊಟಕ್ಕೆ ಕರಿ, ನನ್ನ ಗಂಡನಿಗೆ ಪರಿಚಯ ಇದ್ದವರನ್ನ,’ ಅಂತ ಮರ್ಯಾದಸ್ಥ ಹೆಂಗಸನ್ನ ಕೇಳಿಕೊಳ್ಳೋ ಥರ ಅವಳನ್ನ ಕೇಳಿಕೊಂಡೆ. ಅವಳು ಎಂಥಾವರನ್ನ ತಂದು ಗುಡ್ಡೆ ಹಾಕಿದಾಳೆ, ನೋಡು! ಜೋಕರುಗಳು! ಮೂರು ಕಾಸಿನ ಹೆಂಗಸರು! ಅವನನ್ನ ನೋಡು, ಕುಟ್ಟಲು ಮುಖದ ಸಿಂಬಳಬುರುಕ! ಪೋಲೆಂಡಿನ ಗಿಡ್ಡರು… ಹ್ಹ ಹ್ಹ ಹ್ಹಾ! ಖೊಖ್, ಖೋಖ್, ಖೊಕ್! ಇವರನ್ನೆಲ್ಲ ಯಾರೂ ಯಾರಂದರೆ ಯಾರೂ ಇಲ್ಲಿ ನೋಡಿರಲಿಲ್ಲ. ನಾನೇ ನೋಡಿಲ್ಲ ಅಂತೀನಿ! ಯಾಕೆ ಬಂದರು ಇವರೆಲ್ಲ? ಸಾಲಾಗಿ ಹೇಗೆ ಕೂತಿದಾರೆ ನೋಡು.

ಹೇಯ್, ಮಿಸ್ಟರ್!’ ಪೋಲೆಂಡಿನವರಲ್ಲಿ ಒಬ್ಬನನ್ನ ಇದ್ದಕಿದ್ದ ಹಾಗೆ ಮಾತಾಡಿಸಿದಳು. ‘ಪ್ಯಾನ್ ಕೇಕು ಸಿಕ್ಕಿತಾ ನಿಮಗೆ? ಇನ್ನೊಂದು ಹಾಕಿಸಿಕೊಳ್ಳಿ! ಬಿಯರ್ ಕುಡಿಯಿರಿ! ವೋಡ್ಕಾ ಬೇಡವಾ? ನೋಡು, ನೋಡು ಹೇಗೆ ಕುಪ್ಪಳಿಸಿ ನಿಂತುಕೊಂಡು ಸೊಂಟ ಬಗ್ಗಿಸಿ ನಮಸ್ಕಾರ ಮಾಡತಾ ಇದಾನೆ! ಪಾಪದವು, ಉಂಡು ಯಾವ ಕಾಲವಾಗಿತ್ತೋ! ಇರಲಿ ಬಿಡು, ಅವರ ಪಾಡಿಗೆ ತಿನ್ನಲಿ. ಕೊನೇ ಪಕ್ಷ ಗಲಾಟೆ ಮಾಡತಿಲ್ಲವಲ್ಲ, ಅಷ್ಟು ಸಾಕು! ಓನರಮ್ಮ ತಂದುಕೊಟ್ಟಿರುವ ಬೆಳ್ಳಿ ಚಮಚಗಳದ್ದೇ ಚಿಂತೆ ನನಗೆ.’ ಇದ್ದಕಿದ್ದ ಹಾಗೆ ಗಟ್ಟಿಯಾಗಿ ‘ಅಮಾಲಿಯ ಇವಾನೋವ್ನಾ!’ ಅಂತ ಕರೆದಳು. ‘ಅಕಸ್ಮಾತ್ ಅವರೇನಾದರೂ ಬೆಳ್ಳಿ ಚಮಚ ಕದ್ದುಕೊಂಡು ಹೋದರೆ ನನ್ನ ಕೇಳುವ ಹಾಗಿಲ್ಲ. ಮೊದಲೇ ಹೇಳಿರತೇನೆ, ಹ್ಹೆ, ಹ್ಹೇ, ಹ್ಹೆ!’ ಮೈ ಮರೆತು ಗಹಗಹಿಸಿ ನಕ್ಕಳು. ರಾಸ್ಕೋಲ್ನಿಕೋವ್‌ನತ್ತ ತಿರುಗಿ, ಓನರಮ್ಮನ ಕಡೆ ತಲೆ ತೂಗಿ, ತನ್ನ ಮಾತಿನ ದಾಳಿಯನ್ನು ತಾನೇ ಸುಖಿಸಿದಳು. ‘ಅವಳಿಗೆ ಅರ್ಥ ಆಗಲಿಲ್ಲ, ಅರ್ಥ ಆಗಲಿಲ್ಲ! ಹೆಂಗೆ ಬಾಯಿ ಬಿಟ್ಟುಕೊಂಡು ಕೂತಿದಾಳೆ ನೋಡು! ಗೂಬೆ, ಹಳೇ ಗೂಬೆ! ತಲೆಗೆ ಬಾನೆಟ್ಟು, ರಿಬ್ಬನ್ನು ಹಾಕ್ಕೊಂಡು ಬಂದಿದೆ! ಹ್ಹೆಹ್ಹೆಹ್ಹೆಹ್ಹೇ!’

ಅವಳ ನಗು ತಡೆಯಲಾಗದ ಕೆಮ್ಮಾಗಿ ಬದಲಾಯಿತು. ಐದು ನಿಮಿಷಗಳಷ್ಟು ಹೊತ್ತು ಬಿಟ್ಟೂ ಬಿಡದೆ ಕೆಮ್ಮಿದಳು. ಅವಳ ಕರ್ಚೀಫಿಗೆ ರಕ್ತ ಮೆತ್ತಿತ್ತು. ಹಣೆಯ ಮೇಲೆ ಬೆವರ ಹನಿ ಮೂಡಿದ್ದವು. ಕೆಮ್ಮು ಕಡಿಮೆಯಾಗಿ ಉಸಿರೆಳೆದುಕೊಂಡ ತಕ್ಷಣ ಮತ್ತೆ ಅತ್ಯಂತ ಉತ್ಸಾಹದಿಂದ ರಾಸ್ಕೋಲ್ನಿಕೋವ್‌ನ ಜೊತೆಯಲ್ಲಿ ಪಿಸುಮಾತು ಶುರು ಮಾಡಿದಳು. ಅವಳ ಕೆನ್ನೆಯ ಮೇಲೆ ಕೆಂಪು ಚುಕ್ಕೆ ಕಂಡವು.

‘ಅವಳಿಗೆ ಸೂಕ್ಷ್ಮವಾದ ಕೆಲಸ ವಹಿಸಿದ್ದೆ—ಆ ಹೆಂಗಸನ್ನೂ ಅವಳ ಮಗಳನ್ನೂ ಊಟಕ್ಕೆ ಕರೆಯುವ ಕೆಲಸ. ಯಾರು ಅಂತ ಗೊತ್ತಾಯಿತಲ್ಲ? ನಯವಾಗಿ ನಾಜೂಕಾಗಿ ಮಾತಾಡಿ ಅವರಿಬ್ಬರನ್ನೂ ಕರೆಯಬೇಕಾಗಿತ್ತು… ಇವಳೇನು ಮಾಡಿದಳು ಗೊತ್ತ? ಹಳ್ಳಿಯಿಂದ ಬಂದ ಆ ಪೆದ್ದಿ… ಸತ್ತು ಹೋದ ಯಾವನೋ ಮೇಜರನ ಮುಂಡೆ ಅಂತ ಜಂಬ ಪಡೋ ಕೆಲಸಕ್ಕೆ ಬಾರದ ಹೆಂಗಸು… ಗಂಡನ ಪೆನ್‌ಶನ್ನಿಗೆ ಕಛೇರಿಯಿಂದ ಕಛೇರಿಗೆ ಅಲೆದು ಚಪ್ಪಲಿ ಸವೆಸುತ್ತಾ ಇರೋಳು… ಐವತ್ತೈದು ವರ್ಷ ಆಗಿದ್ದರೂ ಕೂದಲಿಗೆ ಕಪ್ಪು ಬಣ್ಣ, ಕೆನ್ನೆಗೆ ಕೆಂಪು ಬಣ್ಣ ಮೆತ್ತಿಕೊಂಡು ಓಡಾಡೋಳು… ಎಲ್ಲಾರಿಗೂ ಗೊತ್ತು ಇದು… ಇಂಥಾ ಕ್ರಿಮಿ ಊಟಕ್ಕೆ ಬರೋದಿರಲಿ, ಬರಕ್ಕೆ ಆಗಲ್ಲ ಕ್ಷಮಿಸಿ ಅಂತ ಹೇಳಿಕಳಿಸುವ ಸೌಜನ್ಯ ಕೂಡ ತೋರಿಸಿಲ್ಲ. ಇಂಥ ಕಾರ್ಯಕ್ರಮಕ್ಕೆ ಅಷ್ಟಾದರೂ ಮರ್ಯಾದೆ ಕೊಡಕ್ಕೆ ಗೊತ್ತಿಲ್ಲ ಅವಳಿಗೆ. ಆದರೇ… ಪೀಟರ್ ಪೆಟ್ರೊವಿಚ್ ಯಾಕೆ ಬಂದಿಲ್ಲ ತಿಳೀತಿಲ್ಲ.

(ಕಲಾಕೃತಿ: ವಿನ್ಸೆಂಟ್‌ ವ್ಯಾನ್‌ ಗಾಗ್)

ಇಂಥ ಹೆಮ್ಮೆ ಇಂಥ ಬಡಿವಾರಗಳ ಸನ್ನಿ ಅತ್ಯಂತ ಬಡವರಿಗೆ, ತುಳಿತಕ್ಕೆ ಒಳಗಾದವರಿಗೆ ಒಮ್ಮೊಮ್ಮೆ ಅಮರಿಕೊಂಡು ಏನು ಮಾಡಿದರೂ ತೊಲಗದ ತಲೆಚಿಟ್ಟಿನ ಹಾಗೆ ಕಾಡುತ್ತದೆ.

ಸೋನ್ಯಾ ಎಲ್ಲಿ? ಎಲ್ಲಿ ಹೋದಳು ಸೋನ್ಯಾ? ಆಹಾ, ಬಂದಳು, ಇಗೋ! ಯಾಕೆ, ಸೋನ್ಯಾ, ಎಲ್ಲಿಗೆ ಹೋಗಿದ್ದೆ? ನಿಮ್ಮಪ್ಪನ ನೆನಪಿಗೆ ಹಾಕಿಸತಾ ಇರೋ ಊಟಕ್ಕೂ ತಡಮಾಡಿ ಬರತಾ ಇದೀಯಲ್ಲ!… ರೊಡಿಯಾನ್ ರೊಮಾನ್ಯಿಚ್, ಅವಳು ನಿನ್ನ ಪಕ್ಕ ಕೂರಲಿ. ಇಗೋ ಇಲ್ಲಿದೆ ಜಾಗ, ಸೋನ್ಯಾ. ನಿಂಗೆ ಏನು ಬೇಕೋ ಅದನ್ನ ಬಡಿಸಿಕೋ. ಫಿಶ್ ಚೆನ್ನಾಗಿದೆ ನೋಡು. ಇನ್ನೇನು ಪ್ಯಾನ್‌ಕೇಕು ತರತಾರೆ. ಮಕ್ಕಳಿಗೆ ಕೊಟ್ಟಿರಾ?… ಪೋಲೆಚ್ಕಾ, ಅಲ್ಲಿ ಎಲ್ಲಾನೂ ಇದೆಯಾ? ಖ್ಖೊ ಖ್ಖೋ ಖ್! ಸರಿ, ಏ, ಲೆನ್ಯಾ, ನೀನು ಕೋಲ್ಯಾ! ಹಾಗೆ ಕಾಲು ಅಲ್ಲಾಡಿಸಬೇಡ, ಶಿಸ್ತು ಇರಲಿ! ಏನೋ ಹೇಳತಾ ಇದ್ದೆಯಲ್ಲ ಸೋನ್ಯಾ?’

ಸೋನ್ಯಾ ತಕ್ಷಣವೇ ‘ಪೀಟರ್ ಪೆಟ್ರೊವಿಚ್ ಅವರು ಬರುವುದಕ್ಕೆ ಆಗಲಿಲ್ಲ ಕ್ಷಮಿಸಿ,’ ಅಂತ ಹೇಳಿ ಕಳಿಸಿದಾರೆ ಎಂದು ಗಟ್ಟಿಯಾಗಿ ಹೇಳಿದಳು. ಎಲ್ಲರಿಗೂ ಕೇಳುವ ಹಾಗೆ ಅವನ ಬಗ್ಗೆ ಅತ್ಯಂತ ಗೌರವದ ಮಾತು ಆಡಿದಳು, ಸಾಧ್ಯವಾದಷ್ಟೂ ಬೇಗ ಬರತೇನೆ ಆ ವಿಷಯದ ಬಗ್ಗೆ ನಮ್ಮ ಜೊತೆ ಪ್ರೈವೇಟಾಗಿ ಮಾತಾಡತೇನೆ. ಮುಂದೆ ಏನು ಮಾಡಬೇಕು ಎತ್ತ ಅನ್ನೋದೆಲ್ಲ ಹೇಳತೇನೆ, ಇತ್ಯಾದಿ ಇತ್ಯಾದಿ ಮಾತಾಡಿದಳು.

ಹೀಗೆ ಹೇಳಿದರೆ ಕ್ಯಾತರೀನಳಿಗೆ ಸಮಾಧಾನವಾಗುತ್ತದೆ ಹೆಮ್ಮೆಯಿಂದ ಉಬ್ಬಿ ಖುಷಿ ಪಡುತ್ತಾಳೆ, ಎಲ್ಲಕ್ಕಿಂತ ಮುಖ್ಯವಾಗಿ ಅವಳ ನಾನತ್ವಕ್ಕೆ ತೃಪ್ತಿಯಾಗುತ್ತದೆ ಅನ್ನುವುದು ಸೋನ್ಯಾಗೆ ತಿಳಿದಿತ್ತು. ರಾಸ್ಕೋಲ್ನಿಕೊವ್‌ಗೆ ಆತುರದಿಂದ ವಂದಿಸಿ. ಕುತೂಹಲದಿಂದ ಒಮ್ಮೆ ನೋಡಿ, ಅವನ ಪಕ್ಕದಲ್ಲಿ ಕೂತಳು. ಮಿಕ್ಕಂತೆ ಊಟ ಮುಗಿಯವವರೆಗೆ ಅವನತ್ತ ನೋಡಲಿಲ್ಲ, ಅವನನ್ನು ಮಾತಾಡಿಸಲಿಲ್ಲ. ಅವಳ ಮನಸ್ಸು ಎಲ್ಲೋ ಇತ್ತು. ಕ್ಯಾತರೀನಳಿಗೆ ಸಮಾಧಾನವಾಗಲೆಂದು ಆಗಾಗ ಅವಳತ್ತ ನೋಡುತ್ತಿದ್ದಳು. ಕ್ಯಾತರೀನಳಾಗಲೀ ಅವಳಾಗಲೀ ಶೋಕದ ಉಡುಪು ತೊಟ್ಟಿರಲಿಲ್ಲ, ಅವರ ಹತ್ತಿರ ಇರಲಿಲ್ಲ. ಕಪ್ಪು ಛಾಯೆಗೆ ಹತ್ತಿರದ ಕಡು ಕಂದುಬಣ್ಣದ ಉಡುಪು ತೊಟ್ಟಿದ್ದಳು ಸೋನ್ಯಾ. ಕ್ಯಾತರೀನ ತನ್ನ ಹತ್ತಿರದ ಇದ್ದ ಒಂದೇ ಒಂದು ಕಡುಬಣ್ಣದ ಪಟ್ಟೆಗಳಿರುವ ಹತ್ತಿಯ ಉಡುಪು ತೊಟ್ಟಿದ್ದಳು. ಪೀಟರ್ ಪೆಟ್ರೊವಿಚ್‌ನ ಸುದ್ದಿ ಎಲ್ಲರ ಮೇಲೂ ಪ್ರಭಾವ ಬೀರಿತ್ತು.

ಸೋನ್ಯಾ ತಂದ ಸುದ್ದಿಯನ್ನು ಗಾಂಭೀರ್ಯದ ಪೋಸು ಕೊಡುತ್ತ ಕ್ಯಾತರೀನ ಕೇಳಿದಳು. ಅದೇ ಗಾಂಭೀರ್ಯ ನಟಿಸುತ್ತ ಪೀಟರ್ ಪೆಟ್ರೊವಿಚ್‌ನ ಆರೋಗ್ಯ ವಿಚಾರಿಸಿದಳು. ಇದ್ದಕಿದ್ದ ಹಾಗೆ ಎಲ್ಲರಿಗೂ ಕೇಳಿಸುವಷ್ಟು ದೊಡ್ಡ ಪಿಸುದನಿಯಲ್ಲಿ ರಾಸ್ಕೋಲ್ನಿಕೋವ್‌ಗೆ ಹೇಳಿದಳು—ಅಲ್ಲಾ, ನಮ್ಮ ಮನೆಯ ಬಗ್ಗೆ ಅವನಿಗೆ ಎಷ್ಟೇ ಅಭಿಮಾನ ಇರಬಹುದು, ಸೋನ್ಯಾ ಅಪ್ಪನ ಬಗ್ಗೆ ಎಷ್ಟೇ ಸ್ನೇಹ ಇರಬಹುದು, ಆದರೂ ಅಂಥಾ ಗೌರವಸ್ಥ, ಅಂಥಾ ಶ್ರೀಮಂತ ಇಂಥಾ ವಿಶೇಷ ಆಹ್ವಾನಿತರ ಜೊತೆಗೆ ಬಂದು ಕೂತರೆ ವಿಚಿತ್ರ ಅನಿಸತ್ತೆ ಅಲ್ಲವಾ? ಅಂದಳು. ‘ಅದಕ್ಕೇ ನನಗೆ ನಿನ್ನ ಬಗ್ಗೆ ವಿಶೇಷ ಕೃತಜ್ಞತೆ, ರೋಡಿಯಾನ್ ರೊಮಾನ್ಯಿಚ್. ನೀನು ಇಂಥ ಪರಿಸ್ಥಿತಿಯಲ್ಲೂ ನಮ್ಮ ಮನೆಯ ರೊಟ್ಟಿ ತಿನ್ನುವುದಕ್ಕೆ ಕರೆದ ತಕ್ಷಣ ಬಂದೆಯಲ್ಲಪ್ಪಾ’ ಅಂದಳು. ಆಮೇಲೆ ಎಲ್ಲರೂ ಕೇಳುವ ಹಾಗೆ ಗಟ್ಟಿಯಾಗಿ, ‘ನಮ್ಮ ಮನೆಯವರ ಜೊತೆ ಇದ್ದ ನಿನ್ನ ವಿಶೇಷ ಸ್ನೇಹದ ಕಾರಣದಿಂದ ಮಾತ್ರ ನೀನು ಬಂದಿದೀಯ ಅನ್ನೋದು ಗೊತ್ತು,’ ಅಂದಳು.

ಆಮೇಲೆ, ಮತ್ತೆ ಇನ್ನೊಂದು ಸಾರಿ, ಘನ ಗಂಭೀರವಾಗಿ ಎಲ್ಲ ಅತಿಥಿಗಳನ್ನೂ ನೋಡಿದಳು. ಇದ್ದಕ್ಕಿದ್ದ ಹಾಗೆ ಎದುರು ಸಾಲಿನಲ್ಲಿದ್ದ ಕಿವುಡು ಮುದುಕನನ್ನು ಕುರಿತು ವಿಶೇಷ ಕಾಳಜಿ ತೋರಿಸುತ್ತ ಗಟ್ಟಿಯಾಗಿ ‘ಇನ್ನೊಂದು ಸ್ವಲ್ಪ ಸ್ಟ್ಯೂ ಬೇಕಾ, ಲಿಸ್ಬನ್ ವೈನ್ ಕುಡಿದೆಯಾ’ ಎಂದು ವಿಚಾರಿಸಿದಳು. ಮುದುಕ ಮಾತಾಡಲಿಲ್ಲ. ತನ್ನನ್ನು ಏನು ಕೇಳುತ್ತಿದ್ದಾರೆ ಅನ್ನುವುದೇ ತಿಳಿಯಲಿಲ್ಲ ಅವನಿಗೆ. ಅಕ್ಕಪಕ್ಕದವರು ಮಾತ್ರ ಅವನ ಬೆನ್ನು ತಟ್ಟಿ, ಪಕ್ಕೆ ತಿವಿದು ಮಜ ತೆಗೆದುಕೊಂಡರು. ಅವನು ಬಾಯಿ ಬಿಟ್ಟುಕೊಂಡು ಸುತ್ತಲೂ ನೋಡಿದ. ಮಿಕ್ಕವರ ನಗು ಇನ್ನೂ ಹೆಚ್ಚಾಯಿತುʼ

‘ಎಂಥಾ ಪೆಕರ! ನೋಡು, ನೋಡು! ಯಾಕೆ ಕರಕೊಂಡು ಬಂದರೋ ಅವನನ್ನ? ಪೀಟರ್ ಪೆಟ್ರೊವಿಚ್ ಬಂದೇ ಬರತಾನೆ ಅಂದುಕೊಂಡಿದ್ದೆ,’ ರಾಸ್ಕೋಲ್ನಿಕೋವ್‌ಗೆ ಹೇಳಿದಳು, ‘ಇವಳು ಕರಕೊಂಡು ಬಂದಿದಾಳಲ್ಲ (ಅಮಾಲಿಯ ಇವಾನೋವ್ನಾಳನ್ನು ಮೊನಚಾಗಿ ನೋಡಿ, ಮಾತಾಡುವಾಗ ಅಮಾಲಿಯ ಕೂಡ ಅಂಜಿದಳು) ಈ ಬಾಲ ಆಡಿಸುವ ಕುನ್ನಿಗಳು ಇವರ ಹಾಗಲ್ಲ, ಅವನು ದೊಡ್ಡ ಮನುಷ್ಯ, ಈ ಜನಗಳನ್ನ ನಮ್ಮಪ್ಪನ ಮನೆಯಲ್ಲಿ ಅಡುಗೆ ಮನೆ ಕೆಲಸಕ್ಕೂ ಸೇರಿಸಿಕೊಳ್ಳತಿರಲಿಲ್ಲ, ನನ್ನ ಗಂಡನೋ ಅಯ್ಯೋ ಪಾಪ ಅಂತ ಇವರಿಗೆ ಒಂದು ತುತ್ತು ಕೊಡತಿದ್ದ,’ ಅಂದಳು.

‘ಹೌದು ಅಮ್ಮಾ, ಕುಡಿಯುವುದು ಅಂದರೆ ಅವನಿಗೆ ತುಂಬಾ ಇಷ್ಟ, ಯಾವಾಗಲು ಕುಡೀತಾ ಇದ್ದ!’ ರಿಟೈರಾಗಿದ್ದ ಸಪ್ಲೈ ಆಫೀಸರು ತಟ್ಟನೆ ಅಂದು ಹನ್ನೆರಡನೆಯ ಗ್ಲಾಸು ವೋಡ್ಕಾ ಗಟಗಟನೆ ಬರಿದು ಮಾಡಿದ.

‘ನನ್ನ ಗಂಡನಿಗೆ ಆ ವೀಕ್ನೆಸ್ ಇತ್ತು, ಎಲ್ಲಾರಿಗೂ ಗೊತ್ತು ಅದು,’ ಅವನ ಮೇಲೆ ಮಾತಿನಲ್ಲೇ ದಾಳಿ ಮಾಡಿದಳು. ‘ಕುಡೀತಿದ್ದ, ಆದರೂ ದೊಡ್ಡ ಮನುಷ್ಯ, ಒಳ್ಳೇವನು. ಮನೆ, ಹೆಂಡತಿ, ಮಕ್ಕಳು ಅಂದರೆ ತುಂಬಾ ಪ್ರೀತಿ ಇತ್ತು. ಅಯ್ಯೋ ಪಾಪ ಅನ್ನೋ ಗುಣ, ಎಲ್ಲಾರನೂ ನಂಬೋ ಸ್ವಭಾವ ಇತ್ತು. ಅವನು ಇಂಥವರ ಜೊತೆ ಕುಡೀಲಿಲ್ಲ ಅಂತಿಲ್ಲ, ಲಫಂಗರು, ಪೋಲಿಗಳ ಜೊತೆಗೂ ಕುಡೀತಿದ್ದ. ಅವನ ಬೂಟಿಗೆ ಕೂಡ ಸಮನಲ್ಲದವರ ಜೊತೆಲ್ಲೂ ಕುಡೀತಿದ್ದ. ಅವನ ಜೇಬಿನಲ್ಲಿ ಜಿಂಜರ್ ಬ್ರೆಡ್ಡಿನ ಕೋಳಿ ಸಿಕ್ಕಿತು ಅಂದರಪ್ಪ. ಮೂಗಿನವರೆಗೂ ಕುಡಿದು ನಡಕೊಂಡು ಬರತಾ ಇದ್ದ. ಮಕ್ಕಳನ್ನ ಯಾವತ್ತೂ ಮರೀತ ಇರಲಿಲ್ಲ.’

‘ಕೋಳೀ? ಕೋಳಿ ಅಂದಿರಾ?’ ಸಪ್ಲೈ ಆಫೀಸರು ಕೇಳಿದ.

ಕ್ಯಾತರೀನ ಅವನ ಮಾತಿಗೆ ಉತ್ತರ ಹೇಳಲು ಹೋಗಲಿಲ್ಲ. ಸ್ವಲ್ಪ ಹೊತ್ತು ಯೋಚನೆಯಲ್ಲಿ ಮುಳುಗಿದ್ದಳು, ನಿಟ್ಟುಸಿರಿಟ್ಟಳು.
‘ನಾನು ಗಂಡನ್ನ ಕ್ರೂರವಾಗಿ ನಡೆಸಿಕೊಳ್ಳತಿದ್ದೆ ಅಂತ ಮಿಕ್ಕವರ ಹಾಗೆ ನೀವೂ ಅಂದುಕೊಂಡಿರತೀರಿ,’ ರಾಸ್ಕೋಲ್ನಿಕೋವ್‌ನನ್ನು ಉದ್ದೇಶಿಸಿ ಕ್ಯಾತರೀನ ಮಾತಾಡುತ್ತಿದ್ದಳು. ‘ಹಾಗೇನಿಲ್ಲ. ನನಗೆ ಗಂಡನ ಮೇಲೆ ತುಂಬ ಗೌರವ ಇತ್ತು. ತುಂಬ! ಒಳ್ಳೆ ಮನಸು ಅವನದು! ಒಂದೊಂದು ಸಾರಿ ಅವನನ್ನ ನೋಡಿದರೆ ಅಯ್ಯೋ ಅನಿಸತಿತ್ತು! ಮೂಲೇಲ್ಲಿ ಕೂತುಕೊಂಡು ಸುಮ್ಮನೆ ನನ್ನ ನೋಡತಾ ಇರತಿದ್ದ. ಅವಾಗೆಲ್ಲ ಪಾಪ ಅನ್ನಿಸೋದು. ಅವನ ಜೊತೆ ಚೆನ್ನಾಗಿರಬೇಕು ಅಂದುಕೊಳ್ಳತಿದ್ದೆ. ಆದರೆ, ಅವನನ್ನ ಚೆನ್ನಾಗಿ ಮಾತಾಡಿಸಿದರೆ ಹೋಗಿ ಮತ್ತೆ ಕುಡೀತಾನೆ ಅನ್ನಿಸತಿತ್ತು. ಹಾಗೆ ಸ್ಟ್ರಿಕ್ಟಾಗಿದ್ದರೆ ಮಾತ್ರ ಅವನು ಹದ್ದುಬಸ್ತಿನಲ್ಲಿ ಇರತಿದ್ದ.’

‘ಹೌದಮ್ಮಾ. ಅವನ ಕೂದಲು ಹಿಡಿದು ಎಳೆದಾಡಿದ್ದೀರಿ, ಒಂದು ಸಲಾ ಅಲ್ಲಾ ಮತ್ತೆ…’ ಜೋರಾಗಿ ಹೇಳಿದ ಸಪ್ಲೈ ಆಫೀಸರು ಗಹಗಹಿಸಿ ನಕ್ಕ. ಇನ್ನೊಂದು ಲೋಟ ವೋಡ್ಕಾ ಬಗ್ಗಿಸಿಕೊಂಡ.

‘ಬರೀ ಕೂದಲು ಎಳೆಯೋದಷ್ಟೇ ಅಲ್ಲ, ಪೊರಕೆ ಕೂಡ ಪೆದ್ದರಿಗೆ ಪಾಠ ಕಲಿಸತ್ತೆ,’ ಅಂದ ಕ್ಯಾತರೀನ ಇವಾನೋವ್ನಾ, ‘ನನ್ನ ಗಂಡನ ಬಗ್ಗೆ ಅಲ್ಲ ಈ ಮಾತು!’ ಅಂತ ಮೊನಚಾಗಿ ಹೇಳಿದಳು.

ಅವಳ ಕೆನ್ನೆಯ ಕೆಂಪು ಚುಕ್ಕೆಗಳು ಮತ್ತೂ ಮತ್ತೂ ಕೆಂಪಾದವು. ಎದೆ ಜೋರಾಗಿ ಏರಿಳಿಯುತ್ತಿತ್ತು. ಇನ್ನೊಂದು ನಿಮಿಷದಲ್ಲಿ ದೊಡ್ಡ ಜಗಳ ಸೃಷ್ಟಿಮಾಡುತ್ತಾಳೆ ಅನಿಸುತ್ತಿತ್ತು. ಎಷ್ಟೋ ಜನ ಜಗಳದ ತಮಾಷೆಯನ್ನು ಕಲ್ಪಿಸಿಕೊಂಡು ಕಿಸಿಕಿಸಿ ನಗುವುದಕ್ಕೆ ಶುರುಮಾಡಿದ್ದರು. ಸಪ್ಲೈ ಆಫೀಸರನ ಪಕ್ಕೆ ತಿವಿದು ಅವನ ಕಿವಿಯಲ್ಲಿ ಏನೋ ಹೇಳುವುದಕ್ಕೆ ಶುರು ಮಾಡಿದ್ದರು. ಅವರ ಜಗಳ ನಡೆಯುವುದು ಜನಕ್ಕೆ ಬೇಕಾಗಿತ್ತು.

‘ಏ-ನಂ-ದಿ-ರಿ?; ಯಾರನ್ನ ಪೆದ್ದ ಅಂದಿದ್ದು? ನಾನ್ಸೆನ್ಸ್… ಪಾಪ, ಹೆಂಗಸು, ಗಂಡ ಸತ್ತ ಮುಂಡೆ… ಕ್ಷಮಿಸತೇನೆ, ಹೋಗಲಿ ಬಿಡಿ!’ ಅನ್ನುತ್ತ ಇನ್ನಷ್ಟು ವೋಡ್ಕಾ ಬಗ್ಗಿಸಿಕೊಂಡ.

ರಾಸ್ಕೋಲ್ನಿಕೋವ್ ಮಾತಿಲ್ಲದೆ ಕೂತು ಕೇಳಿಸಿಕೊಳ್ಳುತ್ತ ಅಸಹ್ಯಪಡುತ್ತಿದ್ದ. ಸೌಜನ್ಯಕ್ಕೆ ಊಟ ಮಾಡುತ್ತಿದ್ದ. ಕ್ಯಾತರೀನ ಅವನ ತಟ್ಟೆಗೆ ಮತ್ತೆ ಮತ್ತೆ ಬಡಿಸುತ್ತಿದ್ದುದನ್ನು ಮುಟ್ಟುತ್ತಲೇ ಇರಲಿಲ್ಲ. ಅವಳಿಗೆ ಬೇಸರವಾಗಬಾರದೆಂದು ಊಟ ಮಾಡುತ್ತಿದ್ದ. ಸೋನ್ಯಾಳನ್ನು ತೀರ ಗಮನವಿಟ್ಟು ನೋಡುತ್ತಿದ್ದ. ಸೋನ್ಯಾಳ ಕಳವಳ ಹೆಚ್ಚುತ್ತಿತ್ತು. ಮನಸ್ಸು ಎಲ್ಲೋ ಇತ್ತು. ಈ ಊಟದ ಕಾರ್ಯಕ್ರಮ ಶಾಂತವಾಗಿ ಮುಗಿಯುವುದಿಲ್ಲ ಅನಿಸುತ್ತಿತ್ತು. ಕ್ಯಾತರೀನಳ ಕಿರಿಕಿರಿ ಹೆಚ್ಚಾಗುವುದನ್ನು ನೋಡುತ್ತ ಭಯಪಡುತ್ತಿದ್ದಳು. ಅಲ್ಲದೆ, ಆ ಇಬ್ಬರು ಮಹಿಳೆಯರು ಕ್ಯಾತರೀನಳ ಅಹ್ವಾನ ತಿರಸ್ಕಾರ ಮಾಡಿ ಊಟಕ್ಕೆ ಬರದೆ ಇರಲು ತಾನೇ ಕಾಣ ಅನ್ನುವುದು ಕೂಡ ಅವಳಿಗೆ ತಿಳಿದಿತ್ತು. ಆ ಸಂಗತಿಯನ್ನು ಸ್ವತಃ ಅಮಾಲಿಯಾ ಹೇಳಿದ್ದಳು: ‘ನನ್ನ ಮಗಳನ್ನ ಅಂಥಾ ಹುಡುಗಿಯ ಪಕ್ಕದಲ್ಲಿ ಹೇಗೆ ಕೂರಿಸಲಿ?’ ಎಂದು ಕೇಳಿದ್ದಳಂತೆ ಅವಳು. ಈ ಸಂಗತಿ ಹೇಗೋ ಕ್ಯಾತರೀನಳ ಕಿವಿಗೆ ಬಿದ್ದಿದೆ, ಸೋನ್ಯಾಗೆ ಮಾಡಿದ ಅವಮಾನವಲ್ಲ, ತನಗೇ ಮಾಡಿದ ಅವಮಾನ ಅಂದುಕೊಂಡಿದಾಳೆ, ತನಗೆ, ಮಕ್ಕಳಿಗೆ ಅಥವಾ ತೀರಿ ಹೋದ ಅಪ್ಪನಿಗೆ ಅವಮಾನವಾಗುವುದಕ್ಕಿಂತ ನನಗೆ, ಅಂದರೆ ಈ ಸೋನ್ಯಾಗೆ ಅಪಮಾನವಾಗುವುದನ್ನು ಆಕೆ ಸಹಿಸುವುದಿಲ್ಲ ಅನ್ನುವುದೂ ತಿಳಿದಿತ್ತು.

ಇದು ಬರಿಯ ಅವಮಾನವಲ್ಲ, ಘೋರ ಅಪರಾಧ. ಹಾಗಾಗಿ, ಕ್ಯಾತರೀನ ‘ನೆಲ ಗುಡಿಸುವ ಹಾಗೆ ಲಂಗ ತೊಡುವ ಆ ಇಬ್ಬರು ಹೆಂಗಸರಿಗಿಂತ ಸೋನ್ಯಾ ಮೇಲು….’ ಇತ್ಯಾದಿ ಹೇಳಿ ಪಾಠ ಕಲಿಸದೆ ಬಿಡುವವಳಲ್ಲ. ಆ ಹೊತ್ತಿಗೆ ಸರಿಯಾಗಿ ಮೇಜಿನ ಇನ್ನೊಂದು ತುದಿಯಿಂದ, ಪ್ಲೇಟಿನ ಮೇಲೆ ಕಪ್ಪು ಬ್ರೆಡ್ಡನ್ನು ಬಾಣ ಚುಚ್ಚಿಕೊಂಡಿರುವ ಎರಡು ಹೃದಯಗಳ ಆಕಾರದಲ್ಲಿ ಕತ್ತರಿಸಿ ಸೋನ್ಯಾ ಕೈಗೆ ಕೊಡುವಂತೆ ಹೇಳಿ ಕಳಿಸಿದ್ದರು. ಕ್ಯಾತರೀನ ಸಿಡಿದು ಬಿದ್ದಳು. ಈ ಕೆಲಸ ಮಾಡಿದವನು ‘ಕುಡುಕ ಕತ್ತೆ,’ ಎಂದು ಗಟ್ಟಿಯಾಗಿ ಬೈದಳು. ಏನೋ ಅನಾಹುತ ಆಗುತ್ತದೆಂದು ಅಮಾಲಿಯಾಳಿಗೂ ಅನಿಸಿತು. ಕ್ಯಾತರೀನಳ ಸಿಡುಕಿನಿಂದ ಅವಳಿಗೂ ಅವಮಾನವಾಗಿತ್ತು. ಊಟಕ್ಕೆ ಕೂತವರ ಮನಸನ್ನು ಬೇರೆಡೆಗೆ ತಿರುಗಿಸುವ, ತನ್ನ ಬಗ್ಗೆ ಜನರಿಗೆ ಇರುವ ಗೌರವ ಹೆಚ್ಚಿಸಿಕೊಳ್ಳುವ ಆಸೆಯಿಂದ ಇದ್ದಕಿದ್ದ ಹಾಗೆ, ತನ್ನ ಪರಿಚಯದವರೊಬ್ಬರಿಗೆ ಏನಾಯಿತು ಎಂದು ಜರ್ಮನ್ ಛಾಯೆಯ ರಶಿಯನ್ ಭಾಷೆಯಲ್ಲಿ ಹೇಳುವುದಕ್ಕೆ ಶರುಮಾಡಿದಳು:

‘ಔಸ್ಥಿ ಹಂಗಡಿಯ ಖಾರ್ಲ್ ಬಾಡಿಗೆ ಗಾಡಿಯಲ್ಲಿ ಬರುತ್ತಾ ಇದ್ದ, ಆಗ ಘಾಡಿಯವನು ಹವನ್ನ ಖೊಲ್ಲೋದಕ್ಕೆ ಓದ. ಖಾರ್ಲ್ ಥುಂಬ ಥುಂಬ ಬಯಪಟ್ಟ. ಫತರಘುಟ್ಟಿ ಓದ, ಹತ್ತುಬಿಟ್ಟ…’ ಅಂದಳು. ಕ್ಯಾತರೀನ ನಕ್ಕರೂ ತಕ್ಷಣವೇ ಅಮಾಲಿಯ ರಶಿಯನ್ ಭಾಷೆಯಲ್ಲಿ ಕಥೆ ಹೇಳಬಾರದು, ಅವಳಿಗೆ ರಶಿಯನ್ ಬರಲ್ಲ ಅಂದಳು. ಅಮಾಲಿಯಳಿಗೆ ಅವಮಾನವಾಯಿತು. ‘ನಮ್ಮ ಹಪ್ಪ ಬರ್ಲಿನ್‌ನಲ್ಲಿ ಥುಂಬ ಥುಂಬ ಮುಕ್ಯವಾದೋನು, ಝೇಬಲ್ಲಿ ಖೈ ಹಿಟ್ಟುಕೊಂಡು ಹೋಡಾಡ್ತಿದ್ದ,’ ಅಂದಳು. ಅವಳ ಮಾತಿನ ರೀತಿ ಕ್ಯಾತರೀನಳಿಗೆ ತಮಾಷೆ ಅನ್ನಿಸಿ ತಡೆಯಲಾದಷ್ಟು ನಗು ಉಕ್ಕಿ ಪಕಪಕಪಕ ನಕ್ಕುಬಿಟ್ಟಳು. ರಾಸ್ಕೋಲ್ನಿಕೋವ್‌ನತ್ತ ತಿರುಗಿ, ‘ಎಂಥಾ ಗೂಬೆ! ತನ್ನ ಜೇಬಲ್ಲಿ ಕೈ ಇಟ್ಟುಕೊಂಡು ಓಡಾಡತಿದ್ದ ಅನ್ನೋದಕ್ಕೆ ಬೇರೇವರ ಜೇಬಲ್ಲಿ ಕೈ ಬಿಡುತ್ತ ಕಳ್ಳ ಆಗಿದ್ದ ಅನ್ನೋ ಅರ್ಥ ಬರೋ ಹಾಗೆ ಹೇಳತಾಳೆ! ’ ಎಂದು ಪಿಸುಗುಟ್ಟಿದಳು.

‘ಖೊಖ್ಖೊಖ್ಖೊ! ನೀನು ಗಮನಿಸಿದಿಯಾ ರೋಡಿಯಾನ್, ನಮ್ಮ ಪೀಟರ್ಸ್‌ಬರ್ಗ್‌ನಲ್ಲಿರುವ ಎಲ್ಲಾ ಫಾರಿನ್ನೋರು, ಅದರಲ್ಲೂ ಜರ್ಮನಿಯವರು, ನಮಗಿಂತ ಸಿಕ್ಕಾಪಟ್ಟೆ ಪೆದ್ದರು! ನೆಟ್ಟಗೆ ಮಾತಾಡಕ್ಕೂ ಬರಲ್ಲ. ‘ಥುಂಬಾ ಥುಂಬಾ ಹತ್ತನಂತೇ’! ತಾನು ಎಲ್ಲರ ಮನಸ್ಸು ಗೆಲ್ಲತೀನಿ, ಚೆನ್ನಾಗಿ ಮಾತಾಡತೀನಿ ಅಂದುಕೊಂಡಿದಾಳೆ. ಪೆದ್ದಿ. ನನ್ನ ಕೇಳಿದರೆ ಈ ಕುಡುಕ ಸಪ್ಲೈ ಆಫೀಸರು ಇದಾನಲ್ಲ ಅವನು ಇವಳಿಗಿಂತ ವಾಸಿ. ಅವನು ಕುಡುಕ, ಇರೋ ಬುದ್ಧೀನೆಲ್ಲ ಹೆಂಡದಲ್ಲಿ ಮುಳುಗಿಸಿದಾನೆ ಅಂತ ಗೊತ್ತಾಗತ್ತೆ. ಇವಳೋ ತಾನು ಮಹಾ ಸಾಭ್ಯಸ್ತೆ, ಗಂಭೀರ ಅಂತ ಏನೇನೋ ಅಂದುಕೊಂಡಿದಾಳೆ. ನೋಡು, ನೋಡು, ಅವಳಿಗೆ ಸಿಟ್ಟು ಬರತಾ ಇದೆ, ಕಣ್ಣು ಗುಡ್ಡೆ ಕೆಳಕ್ಕೆ ಬಿದ್ದೋಗುವ ಹಾಗೆ ಉಬ್ಬಿಕೊಂಡಿವೆ, ಸಿಟ್ಟು ಬಂತು! ಬಂತೂ! ಹ್ಹೆ ಹ್ಹೇ ಹ್ಹೇ! ಹ್ಹೇ ಹ್ಹೇ! ಖೊಖ್, ಖೊಖ್!;

ಕ್ಯಾತರೀನ ಖುಷಿಯಲ್ಲಿ ಮೈ ಮರೆತಳು. ಪೆನ್ಶನ್ ಸಿಕ್ಕ ತಕ್ಷಣ ಹಳ್ಳಿಗೆ ಹೋಗಿ ಘನವಂತರ ಮನೆಯ ಹೆಣ್ಣು ಮಕ್ಕಳಿಗೆ ತರಬೇತಿ ಕೊಡುವ ಶಾಲೆ ಶುರು ಮಾಡುತ್ತೇನೆ ಎಂದು ವಿವರವಾಗಿ ಹೇಳುವುದಕ್ಕೆ ಶುರುಮಾಡಿದಳು. ಈ ವಿಷಯವನ್ನು ಅವಳು ಯಾವತ್ತೂ ರಾಸ್ಕೋಲ್ನಿಕೋವ್‌ಗೆ ಹೇಳಿರಲಿಲ್ಲವಾದ್ದರಿಂದ ವಿವರಗಳಲ್ಲೇ ಕಳೆದುಹೋದಳು. ಅದು ಹೇಗೆ ಅವಳ ಕೈಗೆ ಬಂತೋ ಯಾರಿಗೂ ಗೊತ್ತಾಗಲೇ ಇಲ್ಲ—ಕ್ಯಾತರೀನ ತನ್ನ ಸರ್ಟಿಫಿಕೇಟ್ ಆಫ್ ಮೆರಿಟ್ಟ್ ತೋರಿಸಿದಳು. ಕ್ಯಾತರೀನ ಆ ಸರ್ಟಿಫಿಕೇಟನ್ನು ಹಿಡಿದು, ಶಾಲು ಹೊದ್ದು ಡಾನ್ಸು ಮಾಡಿದ ಕಥೆಯನ್ನು ಆ ದಿನ ಹೆಂಡದಂಗಡಿಯಲ್ಲಿ ಮಾರ್ಮಲೆಡೋವ್ ಹೇಳಿದ್ದನ್ನು ರಾಸ್ಕೋಲ್ನಿಕೋವ್ ಕೇಳಿದ್ದ. ‘ನೆಲ ಗುಡಿಸುವ ಹಾಗೆ ಲಂಗ ತೊಟ್ಟು’ ಓಡಾಡುವ ಹೆಂಗಸರಿಗೆ ಕ್ಯಾತರೀನಳ ದೊಡ್ಡಸ್ತಿಕೆ ತಿಳಿಸುವ ಪ್ರಮಾಣಪತ್ರವಾಗಿತ್ತು ಈ ಸರ್ಟಿಫಿಕೇಟು. ಅವರೇನಾದರೂ ಊಟಕ್ಕೆ ಬಂದರೆ ‘ನಾನು ಕರ್ನಲ್‌ನ ಮಗಳು, ನಿಮಗಿಂತ ಸಾವಿರ ಪಾಲು ದೊಡ್ಡವಳು’ ಎಂದು ಸಾಬೀತು ಮಾಡುವ ಸಾಕ್ಷಿಯಾಗಿತ್ತು. ಈ ಸರ್ಟಿಫಿಕೇಟು.

ಊಟಕ್ಕೆ ಬಂದಿದ್ದ ಕುಡುಕ ಅತಿಥಿಗಳ ನಡುವೆ ಕೈಯಿಂದ ಕೈಗೆ ದಾಟಿತು. ಅದಕ್ಕೆ ಕ್ಯಾತರೀನ ಆಕ್ಷೇಪ ಮಾಡಲಿಲ್ಲ. ಯಾಕೆಂದರೆ ಅವಳು ನಿಜವಾಗಲೂ ಕೋರ್ಟ್‍ ಕೌನ್ಸಿಲರನ ಮಗಳು, ಅವನು ಅಶ್ವಾರೂಢ ಅಧಿಕಾರಿ ವರ್ಗಕ್ಕೆ ಸೇರಿದವನು, ಅಂದರೆ ತಾನು ಕರ್ನಲ್‌ನ ಮಗಳು ಅನ್ನುವುದಕ್ಕೆ ಅಕ್ಷರಸಾಕ್ಷಿಯಾಗಿತ್ತು. ಉತ್ಸಾಹದಲ್ಲಿ ಪುಟಿಯುತ್ತ ಕ್ಯಾತರೀನ ತನ್ನ ಭವಿಷ್ಯದ ಪ್ರಶಾಂತ ಜೀವನದ ಚಿತ್ರವನ್ನು ವರ್ಣಿಸಿದಳು. ಹಳ್ಳಿಯಲ್ಲಿ ಕಟ್ಟಲಿರುವ ಶಾಲೆಗೆ ಒಳ್ಳೊಳ್ಳೆಯ ಮೇಷ್ಟರನ್ನ, ನನಗೆ ಫ್ರೆಂಚ್ ಹೇಳಿಕೊಟ್ಟ ಮಾನ್ಗಾಟ್‌ನನ್ನ ಕರೆಸುತ್ತೇನೆ, ಈಗ ಹಳ್ಳಿಯಲ್ಲೇ ಇದಾನೆ, ಕರೆದರೆ ಖಂಡಿತ ಬರತಾನೆ ಅಂದಳು. ಕೊನೆಗೆ ಸೋನ್ಯಾ ಕೂಡ ನನ್ನ ಜೊತೆ ಹಳ್ಳಿಗೆ ಬರತಾಳೆ, ಎಲ್ಲ ಕೆಲಸದಲ್ಲಿ ಸಹಾಯ ಮಾಡತಾಳೆ, ಅಂದಳು. ಇದ್ದಕ್ಕಿದ್ದ ಹಾಗೆ ಮೇಜಿನ ಇನ್ನೊಂದು ತುದಿಯಲ್ಲಿ ಯಾರೋ ಜೋರಾಗಿ ಸೀನಿದರು. ಟೇಬಲ್ಲಿನ ಅ ತುದಿಯಲ್ಲಿ ಎದ್ದ ನಗುವಿನ ಗದ್ದಲವನ್ನು ಕ್ಯಾತರೀನ ನಿರ್ಲಕ್ಷಿಸುವ ನಟನೆ ಮಾಡಿದರೂ ಬೇಕೆಂದೆ ದನಿ ಎತ್ತರಿಸಿ ಸೋನ್ಯಾಳ ಸಾಮರ್ಥ್ಯಗಳ ಬಗ್ಗೆ ಜೋರಾಗಿ ಮಾತಾಡಿದಳು.

ಅವಳು ‘ಮೃದು ಸ್ವಭಾವದ, ಸೌಮ್ಯಗುಣದ ತಾಳ್ಮೆಯ, ಸ್ವಾರ್ಥವಿರದ, ತನಗಾಗಿ ಏನೂ ಬೇಕೆಂದು ಕೇಳದ ಹುಡುಗಿ. ಹೈಸ್ಕೂಲಿಗೆ ಹೋಗಿದ್ದಾಳೆ, ನನ್ನ ಸಹಾಯಕಿಯಾಗಲು ತಕ್ಕವಳು ಅಂದಳು. ಸೋನ್ಯಾಳ ಕೆನ್ನೆ ತಟ್ಟಿ, ಸ್ವಲ್ಪ ಮೇಲೆದ್ದು ಎರಡು ಬಾರಿ ಮುತ್ತಿಟ್ಟಳು. ಸೋನ್ಯಾಳ ಮುಖ ಕೆಂಪಾಯಿತು. ಕ್ಯಾತರೀನ ಇದ್ದಕಿದ್ದ ಹಾಗೆ ಕಣ್ಣೀರಿಟ್ಟಳು. ತಕ್ಷಣವೇ ‘ನಾನೊಬ್ಬ ನರ್ವಸ್ ಹೆಂಗಸು, ಪೆದ್ದಿ, ಬಹಳ ಬೇಗ ಮನಸ್ಸು ಕೆಡಿಸಿಕೊಳ್ಳತೇನೆ, ಹೇಗಿದ್ದರೂ ಊಟ ಮುಗಿಯಿತಲ್ಲ, ಟೀ ಕುಡಿಯೋಣ,’ ಅಂದಳು. ಅದೇ ಹೊತ್ತಿಗೆ ಇಡೀ ಭೋಜನಕೂಟದಲ್ಲಿ ತನಗೆ ಮಾತಾಡುವ ಅವಕಾಶವೇ ಸಿಗಲಿಲ್ಲವೆಂದು, ಯಾರೂ ತನ್ನ ಮಾತು ಕೇಳಿಸಿಕೊಳ್ಳುತ್ತಿಲ್ಲವೆಂದು ಬೇಸತ್ತಿದ್ದ ಅಮಾಲಿಯ ಇದ್ದಕಿದ್ದ ಹಾಗೆ ಹೊಸತೊಂದು ಪ್ರಯತ್ನಕ್ಕೆ ಕೈ ಹಾಕಿದಳು.

ಕ್ಯಾತರೀನ ಇವಾನೋವ್ನಾ ಆರಂಭಿಸಲಿರುವ ಘನವಂತ ಹೆಣ್ಣು ಮಕ್ಕಳ ಶಾಲೆಯಲ್ಲಿ ಸ್ವಚ್ಛವಾದ ಬೆಡ್‌ಶೀಟು, ಟೇಬಲ್‍ ಕ್ಲಾತುಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಬೇಕು, ಹೆಣ್ಣುಮಕ್ಕಳೇ ಬಟ್ಟೆಗಳನ್ನು ಸ್ವಚ್ಛಮಾಡುವ ತರಬೇತಿ ಪಡೆಯಬೇಕು. ಮತ್ತು ಹುಡುಗಿಯರು ರಾತ್ರಿಯ ಹೊತ್ತಿನಲ್ಲಿ ಕಾದಂಬರಿ ಓದದ ಹಾಗೆ ನಿಗಾ ಇಡಬೇಕು ಎಂಬ ಪ್ರಾಯೋಗಿಕ ಸಲಹೆಗಳನ್ನು ನೀಡಿದಳು. ನಿಜವಾಗಲೂ ಮನಸು ಕೆಡಿಸಿಕೊಂಡಿದ್ದ ಕ್ಯಾತರೀನ ಬಹಳ ದಣಿದಿದ್ದಳು, ಊಟದ ಕೆಲಸ ಮುಗಿದರೆ ಸಾಕು ಅನಿಸಿತ್ತು. ತಕ್ಷಣವೇ ಅಮೇಲಿಯ ಮೇಲೆ ಸಿಡಿದು ಬಿದ್ದಳು. ‘ಕೆಲಸಕ್ಕೆ ಬರದ ಅರ್ಥವಿಲ್ಲದ ಮಾತು ಆಡುತ್ತಿದ್ದೀಯ, ನನಗೇನೂ ಅರ್ಥವಾಗಲ್ಲವಾ, ಹಾಸಿಗೆ, ಟೇಬಲ್ಲಿನ ಬಟ್ಟೆಗಳ ಬಗ್ಗೆ ಮೇಟ್ರನ್ ತಲೆ ಕೆಡಿಸಿಕೊಳ್ಳಬೇಕೇ ಹೊರತು ಸಂಸ್ಥೆಯ ಮುಖ್ಯಸ್ಥೆಯಲ್ಲ, ಇನ್ನು ಕಾದಂಬರಿ ವಿಚಾರ ಮಾತಾಡುವುದೇ ಅಸಭ್ಯತೆ, ದಯವಿಟ್ಟು ಸುಮ್ಮನೆ ಕುಳಿತುಕೋ,’ ಅಂದಳು.

ಅಮಾಲಿಯಳ ಮುಖ ಕೆಂಪಾಯಿತು. ಸಿಟ್ಟು ಮಾಡಿಕೊಂಡಳು. ನಾನು ‘ಹೊಳ್ಳೆಯಧಾಗಲಿ; ಹಂತ ಏಳಿದೆ, ‘ಹೊಳ್ಳೆಯಧಾಗಲಿ ಅಂತ ಹಷ್ಟೇ’ ‘ಥುಂಬಾ ಧಿನದಿಂದ ಮನೆ ಭಾಡಿಗೆ ಕೊಟ್ಟೇ ಇಲ್ಲ,’ ಅಂದಳು. ಅವಳ ಬಾಯಿ ಮುಚ್ಚಿಸಬೇಕೆಂದು ಕ್ಯಾತರೀನ ತಕ್ಷಣವೇ, ಸುಳ್ಳು ಹೇಳುತ್ತಿದ್ದೀಯ, ನಮಗೆ ‘ಹೊಳ್ಳೆಯದಾಗಲಿ; ಅನ್ನುವುದು ನಿನಗೆ ಅನಿಸೋದೇ ಇಲ್ಲ, ನಿನ್ನೆ ತಾನೇ ಗಂಡನ ಹೆಣ ಇನ್ನೂ ಟೇಬಲ್ ಮೇಲೆ ಮಲಗಿಸಿದ್ದೆವು, ಆಗಲೇ ಬಾಡಿಗೆ ಕೊಟ್ಟಿಲ್ಲ ಅಂತ ವರಾತ ಮಾಡಿದೆಯಲ್ಲಾ ಅಂದಳು. ಈ ಮಾತಿಗೆ ಅಮಾಲಿಯ ತರ್ಕಬದ್ಧವಾಗಿ ಉತ್ತರ ಹೇಳುತ್ತ ಆ ದೊಡ್ಡ ಮನೆತನದ ಹೆಂಗಸರನ್ನ ‘ಹಾವ್ವಾನಿಸಿದ್ದೆ’ ಅವರು ಬರಲಿಲ್ಲ, ಯಾಕೆಂದರೆ ದೊಡ್ಡ ಮನೆಯ ಹೆಂಗಸರು ದೊಡ್ಡಮನೆಯವರು ಕರೆದರೆ ಮಾತ್ರ ಬರತಾರೆ, ನೀವು ದೊಡ್ಡ ಮನೆಯವರಲ್ಲ, ಹದಕ್ಕೇ ಬರಲಿಲ್ಲ,’ ಅಂದಳು.

ಅದಕ್ಕೆ ಕ್ಯಾತರೀನ—ನೀನು ಜುಜುಬಿ ಹೆಂಗಸು, ದೊಡ್ಡ ಮನೆಗೆ ಸೇರಿದವರು ಹೇಗಿರತಾರೆ ನಿನಗೇನು ಗೊತ್ತು ಅಂದಳು. ಅಮಾಲಿಯಾಗೆ ಇದನ್ನು ಸಹಿಲು ಆಗಲಿಲ್ಲ. ‘ನಮ್ಮ ಹಪ್ಪ ಬರ್ಲಿನ್‌ನಲ್ಲಿ ಥುಂಬ ಥುಂಬ ದೊಡ್ಡ ಮನುಷ್ಯ, ಎರಡೂ ಕೈ ಜೇಬಲ್ಲಿಟ್ಟುಕೊಂಡು ಓಡಾಡತಿದ್ದ, ಹುಫ್ ಹುಫ್ ಅನ್ನುತಿದ್ದ’ ಅಂದು, ತಾನೇ ತನ್ನಪ್ಪನ ಚಿತ್ರದ ಹಾಗೆ ತಟ್ಟನೆ ಕುರ್ಚಿಯಿಂದೆದ್ದಳು, ಅಪ್ಪನ ಹಾಗೇ ಎರಡೂ ಜೇಬಿನಲ್ಲಿ ಕೈ ಇಟ್ಟುಕೊಂಡು, ಕೆನ್ನೆ ಊದಿಸಿ ‘ಉಫ್, ಊಫ್’ ಸದ್ದು ಮಾಡಿದಳು. ಊಟಕ್ಕೆ ಸೇರಿದ್ದ ಬಾಡಿಗೆದಾರರೆಲ್ಲ ಈ ಕಥೆ ಕೇಳಿ ದೊಡ್ಡ ಜಗಳವಾಗುವುದೆಂದು ನಿರೀಕ್ಷಿಸುತ್ತ ಅಮಾಲಿಯಳಿಗೆ ಬೆಂಬಲ ಸೂಚಿಸುವ ಹಾಗೆ ವರ್ತಿಸಿದರು.

ಕ್ಯಾತರೀನಳಿಗೆ ಇದನ್ನು ಸಹಿಸಲಾಗಲಿಲ್ಲ. ಎಲ್ಲರಿಗೂ ಕೇಳಿಸುವ ಹಾಗೆ ಅಮಾಲಿಯ ಇವಾನೋವ್ನಳಿಗೆ ‘ಹಪ್ಪ’ ಯಾವತ್ತೂ ಇರಲೇ ಇಲ್ಲ, ಪೀಟರ್ಸ್‌ಬರ್ಗ್‌ನಲ್ಲೇ ಇದ್ದ ಫಿನ್ಲಾಂಡಿನ ಮನುಷ್ಯನ ಮಗಳು, ಅವನು ಯಾರದೋ ಮನೆಯಲ್ಲಿ ಅಡುಗೆಯವನೋ ನೆಲ ಒರೆಸುವವನೋ ಆಗಿದ್ದ ಅಂದಳು. ಅಮಾಲಿಯ ಇವಾನೋವ್ನಾಳ ಮುಖ ಕೆಂಪಾಯಿತು. ಜೋರಾಗಿ ಕೂಗಾಡುತ್ತ ಕ್ಯಾತರೀನಳಿಗೂ ಹಪ್ಪ ಇರಲಿಲ್ಲ, ನನಗೆ ಹಪ್ಪ ಇದ್ದ, ಬರ್ಲಿನ್‌ನಲ್ಲಿ ಫ್ರಾಕ್‍ ಕೋಟು ಹಾಕಿಕೊಂಡು ಪೂಫ್ ಪೂಫ್ ಅಂತ ಹೊಗೆ ಬಿಡತಿದ್ದ ಅಂದಳು. ಆಗ ಕ್ಯಾತರೀನ ತಿರಸ್ಕಾರದಿಂದ ತನ್ನ ಮನೆತನದ ವಿಷಯ ಎಲ್ಲಾರಿಗೂ ಗೊತ್ತು, ತನ್ನ ಬಳಿ ಇರುವ ಸರ್ಟಿಫಿಕೇಟ್ ಆಫ್ ಮೆರಿಟ್‌ನಲ್ಲೂ ಪ್ರಿಂಟಾಗಿದೆ, ನಮ್ಮಪ್ಪ ಕರ್ನಲ್ ಅಂತಲೂ ಅದರಲ್ಲಿ ಬರೆದಿದೆ, ಅಮಾಲಿಯ ಇವಾನೋವ್ನಳ ಅಪ್ಪ ಇದ್ದದ್ದೇ ನಿಜವಾದರೆ ಅವನು ಪೀಟರ್ಸ್‍ಬರ್ಗಿನಲ್ಲೇ ಇದ್ದ ಯಾವನೋ ಫಿನ್‌ಲ್ಯಾಂಡಿನವನು. ನಿಜ ಏನಂದರೆ ಅವಳಿಗೆ ಅಪ್ಪ ಇರೋದೇ ಅನುಮಾನ. ಅವಳ ಅಪ್ಪ ಇವಾನ್ ಅಂತಲೋ ಲುಡ್ವಿಗ್ ಅಂತಲೋ ಅನುಮಾನ ಇದೆ, ಯಾರಿಗೆ ಗೊತ್ತು,’ ಅಂದಳು.

ಅಮಾಲಿಯಾಳಿಗೆ ಕೋಪ ತಡೆಯಲಾಗಲಿಲ್ಲ. ಮೇಜಿನ ಮೇಲೆ ಜೋರಾಗಿ ಗುದ್ದಿದಳು. ಜೋರಾಗಿ ಕಿರಿಚುತ್ತ ನಾನು ಲುಡ್ವಿಗೋವ್ನಾ ಅಲ್ಲ, ನಾನು ಇವಾನೋವ್ನಾ ನಮ್ಮಪ್ಪ ಊರಿನ ಮೇಯರ್ ಆಗಿದ್ದ, ಕ್ಯಾತರೀನಳ ಅಪ್ಪ ಯಾವತ್ತಾದರೂ ಮೇಯರ್ ಆಗಿದ್ದನಾ ಅಂದಳು. ಕ್ಯಾತರೀನ ಎದ್ದು ನಿಂತು, ಮೇಲು ನೋಟಕ್ಕೆ ಶಾಂತವಾಗಿ ಮಾತಾಡಿದರೂ ಅವಳ ಎದೆ ಜೋರಾಗಿ ಏರಿಳಿಯುತ್ತಿತ್ತು. ‘ನೀನೇನಾದರೂ ನಮ್ಮಪ್ಪನಿಗೆ ನಿಮ್ಮಪ್ಪ ಸಮಾ ಅಂತಂದರೆ ನಿನ್ನ ತಲೆಯ ಮೇಲಿನ ಬಾನೆಟ್ ಕಿತ್ತು, ನೆಲಕ್ಕೆ ಹಾಕಿ ತುಳೀತೇನೆ ಅಂದಳು. ಇದನ್ನು ಕೇಳಿ ರೇಗಿದ ಅಮಾಲಿಯ ರೂಮಿನಲ್ಲೆಲ್ಲ ದಪ ದಪ ಹೆಜ್ಜೆ ಹಾಕಿ ಸುತ್ತಾಡುತ್ತ ಶಕ್ತಿ ಎಲ್ಲ ಬಿಟ್ಟು ಕಿರುಚುತ್ತ “ನಾನು ಈ ಕಟ್ಟಡದ ಓನರು, ಹಿನ್ನು ಹೊಂದು ನಿಮಿಷದಲ್ಲಿ ಖ್ಯಾತರೀನ ಮನೆ ಖಾಲಿ ಮಾಢಬೇಕು,” ಅಂದಳು. ಆಮೇಲೆ ಮೇಜಿನ ಮೇಲಿದ್ದ ಬೆಳ್ಳಿಯ ಚಮಚೆಗಳನ್ನು ಯಾವ ಕಾರಣಕ್ಕೋ ಎತ್ತಿಕೊಂಡಳು. ಗಲಾಟೆ ಎದ್ದಿತು. ಮಕ್ಕಳು ಜೋರಾಗಿ ಅತ್ತರು.

ಅಮಾಲಿಯ ‘ಹಳದಿ ಪಾಸ್’ ಬಗ್ಗೆ ಹೇಳಿದಾಗ ಕ್ಯಾತರೀನ ಅವಳ ಬಾನೆಟ್ ಕಿತ್ತುಕೊಳ್ಳಲು ಹೊರಟು, ಸೋನ್ಯಾ ಓಡಿ ಹೋಗಿ ಕ್ಯಾತರೀನಳನ್ನು ಹಿಡಿದು ಹಿಂದಕ್ಕೆಳೆದುಕೊಂಡಳು. ಕ್ಯಾತರೀನ ಕೈ ಕೊಡವಿಕೊಂಡು ನುಗ್ಗಿದಳು. ಅಷ್ಟು ಹೊತ್ತಿಗೆ ಬಾಗಿಲು ತೆರೆದುಕೊಂಡಿತು. ಪೀಟರ್ ಪೆಟ್ರೊವಿಚ್ ಹೊಸ್ತಿಲ ಮೇಲೆ ನಿಂತಿದ್ದ. ನಿಷ್ಠುರವಾದ ದೃಷ್ಟಿಯಿಂದ ಸುತ್ತಲೂ ನೋಡಿದ. ಕ್ಯಾತರೀನ ಅವನ ಬಳಿಗೆ ಓಡಿದಳು.‌

(Featured image: José Jiménez Aranda)