ಕನ್ನಡ ಚಿತ್ರರಂಗದ ಕುರಿತು ಬಸವರಾಜುರವರ ಲೇಖನಓದುವುದಕ್ಕಿಂತ ಮುಂಚೆ ಹಾ.ಮ.ಕನಕರವರು ಬರೆದಿದ್ದ ಮಲೆಯಾಳಂ ಸಿನಿಮಾ ಬಗೆಗಿನ ಲೇಖನ ಓದಿದಾಗ ನಾನೂ ಸಿನಿಮಾದ ಬಗ್ಗೆ ಒಂಚೂರು ಬರೆಯೋಣವೆಂದುಕೊಂಡೆ. ಸಿನಿಮಾ ಬಹುಜನರನ್ನು ತಲುಪುವ ಮಾಧ್ಯಮವಾಗಿರುವುದರಿಂದ ಸಮಾಜವನ್ನು ಕಟ್ಟುವ, ಒಡೆಯುವ, ಮತ್ತು ಒಡೆದು ಕಟ್ಟುವ ಸಾಮಾಗ್ರಿಯಾಗಿ ಬಳಸಲ್ಪಡುತ್ತ ಬರುತ್ತಿರುವುದು ತಿಳಿದ ವಿಷಯವೆ. ಈ ಸಿನಿಮಾ ನಮ್ಮ ಪಕ್ಕದ ರಾಜ್ಯಗಳಾದ ಆಂಧ್ರ ಮತ್ತು ತಮಿಳುನಾಡುಗಳಲ್ಲಿ ರಾಜಕೀಯದೊಳಗೆ ಪ್ರವೇಶಿಸಿ ದಿನನಿತ್ಯದ ವ್ಯವಹಾರವಾಗಿದೆ. ಈ ಕುರಿತು ಸ್ವಲ್ಪ ಬರೆಯೋಣ ಎಂದುಕೊಂಡಿದ್ದಕ್ಕಿಂತ ಸಮಕಾಲೀನ ತಮಿಳು ಸಿನಿಮಾದ ಕುರಿತು ಚರ್ಚಿಸೋಣ ಎಂದುಕೊಂಡೆ. ಏಕೆಂದರೆ ನಾನು ಇದನ್ನು ಇಂದಿನ ಸಾಮಾಜಿಕ ತುರ್ತನ್ನಾಗಿ ಕಾಣುತ್ತಿದ್ದೇನೆ.
ತೆಲುಗು ಮತ್ತು ತಮಿಳು ಸಿನಿಮಾಗಳ ಕಥೆಗಳು ನಮ್ಮಲ್ಲಿ ಮರುರೂಪ ಪಡೆದು ನಮ್ಮ ಕನ್ನಡ ಸಿನಿಮಾಕ್ಕೆ ಇಂಬು ಕೊಡುತ್ತಿರುವುದು ಹಗಲಿನಷ್ಟೆ ಸತ್ಯ. ನಮ್ಮಲ್ಲಿನ ಹಾಗೆಯೇ ಅಲ್ಲಿಯೂ ಸಿನಿಮಾ ಮೊದಲಿಗೆ “ಪುರಾಣ ಪುಣ್ಯ ಕಥೆಗಳ” ಆಗರವಾಗಿತ್ತು. ಅದು ಮೆಲ್ಲಗೆ ಜನಸಮುದಾಯದ ದಿನನಿತ್ಯ ಬದುಕಿನತ್ತ ತಿರುಗಿತು. ಆದರೆ ಅಲ್ಲಿ ವ್ಯತ್ಯಾಸವೆಂದರೆ ಸಾಮಾಜಿಕ ಚಳುವಳಿಗಳು ಸಿನಿಮಾಗಳಲ್ಲೂ ದನಿಯೆತ್ತರಿಸಿ ಸಾಮಾಜಿಕ ಸ್ಥಾನಮಾನವ ಪಡೆದುಕೊಳ್ಳುವಂತಾಗಿದ್ದು. ನಾನಿಲ್ಲಿ ತಮಿಳು ಚಿತ್ರರಂಗದ ಇತಿಹಾಸವನ್ನು ನೆನಪಿಸುತ್ತ ದುಡಿವ ವರ್ಗದ ಗೆಳಯನಾಗಿ ಸಿನಿಮಾ ರೂಪುಗೊಂಡ ಬಗೆಯನ್ನು ಚರ್ಚಿಸಲಿದ್ದೇನೆ. ಕೋಟಿ ಬಜೆಟ್, ಅದ್ದೂರಿ ಸೆಟ್, ಅದ್ಭುತ ಸಂಗೀತ- ಕ್ಯಾಮೆರ-ಕಥೆಗಳೆಂಬ ಸುಳ್ಳುಗಳಲ್ಲಿ ನರಳುತ್ತಿರುವ ಅಲ್ಲಿಯ ಸಿನಿಮಾವನ್ನು ಭಿನ್ನ ದಾರಿಯಲ್ಲಿ ಕೊಂಡೊಯ್ಯುವ ಈ ಹೊತ್ತಿನ ಪ್ರಯತ್ನಗಳ ಇಲ್ಲಿ ದಾಖಲಿಸುತ್ತಿದ್ದೇನೆ. ಇದು ನಮ್ಮ ಚಿತ್ರರಂಗಕ್ಕೂ ಅನ್ವಯವಾಗುವುದರಿಂದ ಅದನ್ನಿಲ್ಲಿ ಪ್ರಸ್ತಾಪಿಸಲು ಬಯಸುತ್ತೇನೆ.
ದೇವ ಪುರಾಣಗಳಿಂದ ಶಿಫ್ಟ್ ಆಗಿ ಸಾಮಾಜಿಕ ಚಿತ್ರಣದತ್ತ ತಮಿಳು ಸಿನಿಮಾ ಹೊರಳುತ್ತಿರುವ ಕಾಲಘಟ್ಟದಲ್ಲೇ ಅಲ್ಲಿ ದ್ರಾವಿಡ ಚಳುವಳಿ ಹುಟ್ಟಿಕೊಳ್ಳುತ್ತಿತ್ತು. ಪೆರಿಯಾರ್ ಸೃಷ್ಟಿಸಿದ ವೈದಿಕ ವಿರೋಧಿ ಹೋರಾಟಗಳು ಅವೈದಿಕ ಮೂಲದ ದ್ರಾವಿಡತ್ವದ ನಿರ್ಮಾಣಕ್ಕಾಗಿ ಜನರನ್ನು ಒಟ್ಟುಗೂಡಿಸುತ್ತಿದ್ದ ಸಮಯವದು. ಹಿಂದು ಧರ್ಮದೊಳಗಿನ ಅಸಮಾನತೆ, ಹಿಂಸೆ, ಶೋಷಣೆಗಳ ವಿರುದ್ಧದ ಹೋರಾಟ ಪೆರಿಯಾರ್ ಎಂಬ ಮನುಷ್ಯ ಜೀವಿಯ ಮುಂದಾಳತ್ವದಲ್ಲಿ ಸಾಗುತ್ತಿದ್ದ ಗಳಿಗೆ. ಬಹುಜನರ ಹೋರಾಟವಾದ ದ್ರಾವಿಡ ಚಳುವಳಿ ದೇವರ ಅಸ್ತಿತ್ವವನ್ನು ಪ್ರಶ್ನಿಸುತ್ತ ವೈಚಾರಿಕತೆಯನ್ನು ಮೂಡಿಸುತ್ತಿತ್ತು. ಇದಕ್ಕಾಗಿ ಅವರುಗಳು ಕಲಾ ಪ್ರಕಾರಗಳನ್ನು ಸಮರ್ಥವಾಗಿ ಬಳಸಿಕೊಂಡರು. ಬ್ರಾಹ್ಮಣತ್ವದ ಕೈಯಲ್ಲಿದ್ದ ಕಲೆ ಮತ್ತು ಕಲಾ ಮೀಮಾಂಸೆಗಳನ್ನು ದ್ರಾವಿಡ ನೆಲೆಗಳತ್ತ ತಿರುಗಿಸುವ ಪ್ರಯತ್ನಗಳು ಶುರುವಾದವು. ತಮ್ಮ ಸಿದ್ಧಾಂತಗಳನ್ನು ಪ್ರಚುರಪಡಿಸುವ ನಾಟಕ, ಕಾವ್ಯ, ಕತೆ-ಕಾದಂಬರಿಗಳನ್ನು ಕಟ್ಟುತ್ತ; ಇತಿಹಾಸದ ಪುಟಗಳಿಂದ ದ್ರಾವಿಡತ್ವವನ್ನು ಹೆಕ್ಕಿ ಉದಾಹರಿಸುತ್ತ ಚಳುವಳಿಯ ಕಟ್ಟುತ್ತಿದ್ದರು. ಇದಕ್ಕೆ ಬಲವಾಗಿ ಇವರ ಜೊತೆ ನಿಂತಿದ್ದು ಸಿನಿಮಾ. ಕರುಣಾನಿಧಿಯಂತಹ ದ್ರಾವಿಡತ್ವದ ಚಳುವಳಿಗಾರರು, ನಾಸ್ತಿಕತೆಯ ವಕ್ತಾರರು ತಮ್ಮ ಲೇಖನಿಗಳಿಂದ ಹಲವಾರು ಕಥೆಗಳನ್ನು, ಸಂಭಾಷಣೆಗಳನ್ನು ಬರೆದು ದ್ರಾವಿಡ ಚಳುವಳಿಯ ಕಟ್ಟಿ ಬೆಳಸಿದರು. “ಪರಾಶಕ್ತಿ”ಯಂತಹ ಸಿನಿಮಾದ ಮೂಲಕ ಚಳುವಳಿ ಗಟ್ಟಿಯಾಗಿ ರೂಪುಗೊಂಡಿತು.
ತಮಿಳುನಾಡಿನ ರಾಜಕೀಯಕ್ಕು ಸಿನಿಮಾಕ್ಕು ನಡುವಿನ ಸಾಮಾನ್ಯ ಅಂಶವಾಗಿ ಕಂಡು ಬಂದ ದ್ರಾವಿಡ ಚಳುವಳಿ, ಚಿಂತನೆಗಳು ಜನಸಾಮಾನ್ಯರನ್ನು ರೂಪಿಸುತ್ತಿದ್ದವು. ಸಿನಿಮಾದಿಂದಲೂ ಚಳುವಳಿಯನ್ನು ಗಟ್ಟಿಯಾಗಿ ಕಟ್ಟಿದ ದ್ರಾವಿಡ ಹೋರಾಟಗಾರರಿಗೆ ಅಧಿಕಾರವೂ ಸಿಕ್ಕಿತು. ಅಲ್ಲಿಂದ ಸಿನಿಮಾ ಹಳ್ಳಕ್ಕೆ ಬೀಳುವ ಆಟ ಶುರುವಾಯ್ತು. ದ್ರಾವಿಡ ಚಿಂತನೆಯಿಂದ ಪ್ರಭಾವಿತರಾದ ಎಷ್ಟೋ ನಿರ್ದೇಶಕರುಗಳು ತಮ್ಮ ಚಿತ್ರಗಳಲ್ಲಿ ಕೆಳ ವರ್ಗದ, ನಿಮ್ನ ವರ್ಗದ ಜನರಿಗೆ ದನಿಯಾಗಿ ಕಥೆಗಳ ಹೆಣೆಯುತ್ತಿದ್ದರು. ಆದರೆ ಇದು ಬೇಗ ಕರಗಿ ಹೋದದ್ದು ದುರಂತ. ಬಾಲಚಂದರ್, ಭಾರತಿರಾಜ, ಬಾಲು ಮಹೇಂದ್ರ ಮುಂತಾದ ನಿರ್ದೇಶಕರ ಒಳ ನೋಟಗಳು, ಕೈ ಚಳಕಗಳು, ಬದುಕನ್ನು ನೋಡುವ ಬಗೆ… ಎಲ್ಲವೂ ಮೂಡಿಸುತ್ತಿದ್ದ ಎಚ್ಚರ ಮೆಲ್ಲಮೆಲ್ಲನೆ ಅರ್ಥ ಕಳೆದುಕೊಂಡು ವಿಶುರಂತಹ ಸಂಪ್ರದಾಯವಾದಿ ನಿರ್ದೇಶಕರುಗಳ ಕೈಯಲ್ಲಿ ಸಿನಿಮಾ ‘ಭಾವನೆಗಳ’ ಲೋಕಕ್ಕೆ ಜಾರಿತು. ನಂತರ ರಜನೀಕಾಂತ್ ಎಂಬ ಕಾಂತೀಯ ನಟನ ಅಂಗಳಕ್ಕೆ ಬಂದು ಅದು ಬಿತ್ತು. ಇಲ್ಲಿಂದ ಮತ್ತೆ ಇತಿಹಾಸದ ಪುನರಾವರ್ತನೆ ಶುರುವಾಯ್ತು. ಸಿನಿಮಾ ಹಣವಂತರ ತೆಕ್ಕೆಗೆ ಜಾರಿತು. ಹತ್ತಾರು ಕೋಟಿ ಬಜೆಟ್ಟುಗಳ ರೀಲುಗಳು ವಿಜೃಂಭಿಸತೊಡಗಿದವು. ಸಿನಿಮಾವನ್ನು ತಮ್ಮ ಬದುಕಿನ ಒಂದು ಭಾಗವನ್ನಾಗಿಯೇ ಕಂಡುಕೊಳ್ಳುತ್ತ ಬರುತ್ತಿದ್ದ ತಮಿಳುನಾಡಿಗರಲ್ಲಿ ಭ್ರಮೆ, ಸುಳ್ಳುಗಳನ್ನು ಅಧಿಕೃತಗೊಳಿಸಲಾಯಿತು. ಶಿವಾಜಿ ಗಣೇಶನ್- ಎಂ.ಜಿ.ಆರ್ ರಂತಹ ನಟರು ಮೂಡಿಸಿದ್ದ ಎಚ್ಚರ ಅವರುಗಳು ಬದುಕಿದ್ದಾಗಲೆ ಆತ್ಮಹತ್ಯೆ ಮಾಡಿಕೊಂಡವು. ನಿರ್ಮಾಪಕರ ದೂರಾಲೋಚನೆಗಳು ಫಲ ನೀಡಲಾರಂಭಿಸಿದ್ದವು. ಕೋಟಿ ಎನ್ನುವುದು ಲೆಕ್ಕವಿಲ್ಲದೆ ದಾಟಿ ಜನರ ಹುಬ್ಬೇರಿಸಿ ಭ್ರಮಾ ವಾಸ್ತವಗಳನ್ನು ನಿರ್ಮಿಸಿದವು. ಇದರ ಸದುಪಯೋಗ ಪಡೆದುಕೊಂಡ ಶಂಕರ್ ಅಂತಹ ನಿರ್ದೇಶಕರುಗಳು ಬ್ರಾಹ್ಮಣ್ಯದ ಹೊಸ ವರಸೆಗಳನ್ನು “ಜೆಂಟಲ್ ಮ್ಯಾನ್”, “ಇಂಡಿಯನ್”, “ಅನ್ನಿಯನ್”ರಂತಹ ಚಿತ್ರಗಳ ಮೂಲಕ ನೀಡಿ ಜನರನ್ನು ಅದ್ದೂರಿತನದ ಮಾಯಾಜಾಲದಲ್ಲಿ ಕಣ್ಕಟ್ಟಿದರು. ರೆಹಮಾನ್ ಎಂಬ ಸಂಗೀತ ಮಾಂತ್ರಿಕನ ಜಾದೂ ಒಳಗೆ ಬ್ರಾಹ್ಮಣ್ಯದ ಸಂಚಿನ ಎಳೆಗಳನ್ನು ಸೂಕ್ಷ್ಮವಾಗಿ ಸೇರಿಸಿ ಶಂಕರ್ ತನ್ನ ಚಿತ್ರಗಳನ್ನು ಹಿಟ್ ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ತಮಿಳು ಚಿತ್ರಗಳ ಕುರಿತು ಮಾತನಾಡುವಂತೆ ಮಾಡಿದ. ಈ ನಡುವೆ ಮಣಿರತ್ನಂ ಸದ್ದಿಲ್ಲದೆ ತಮ್ಮ “ನ್ಯಾಷನಲ್ ಇಂಟಿಗ್ರಿಟಿ” ರೀಲುಗಳನ್ನು ಸುತ್ತುತ್ತ ಸಮಕಾಲೀನ ಭಾರತ ಸಿನಿಮಾದ ಮುಖ್ಯ ನಿರ್ದೇಶಕರೆನಿಸಿಕೊಂಡರು. ಇದೆಲ್ಲದರ ನಡುವೆ ಮಚ್ಚು-ಲಾಂಗು, ಡಪ್ಪಾಂಗುಚ್ಚಿ ಹಾಡುಗಳ ಚಿತ್ರಗಳು ಮೆಲ್ಲಗೆ ಬೆಳ್ಳಿತೆರೆಯನ್ನು ಬಂಗಾರದ ನಾಣ್ಯಗಳ ಕಣಜವನ್ನಾಗಿ ಮಾಡಿದವು. ಚೀಪ್ ಎಮೊಷನಲ್ ಟ್ರಿಕ್ಸ್ ಗಳೂ ಯಶಸ್ವಿಯಾಗಿ ಜನರನ್ನು “ಟ್ರೆಂಡ್ ಸೆಟರ್ಸ್”ಗಳ ಜಾಗದಲ್ಲಿ ಕೂರಿಸಿ ಸಮಾಜಮುಖಿಯಾಗುವ ತಮಿಳು ಸಿನಿಮಾದ ಅವಕಾಶಗಳನ್ನು ತಪ್ಪಿಸಿದವು. ಚಳುವಳಿಯೊಂದರ ಭಾಗವಾಗಿ ಬೆಳೆದು ಸಮಾಜದ ನೈಜ ಸಮಸ್ಯೆಗಳಿಗೆ ಉತ್ತರ ಹುಡುಕಬಹುದಾಗಿದ್ದ ಸಾಧ್ಯತೆಗಳು ಕೈ ತಪ್ಪಿ ಮತ್ತೆ ಸಿನಿಮಾ ಸಿರಿವಂತರ ವ್ಯಾಪಾರವಾಗಿಯೇ ಮುಂದುವರೆಯಿತು.
ಸಿನಿಮಾವನ್ನು ಬಳಸಿಕೊಂಡು ದ್ರಾವಿಡ ಚಿಂತನೆಯನ್ನು ಅಧಿಕಾರಕ್ಕೆ ಏರಿಸಿದ ಜನ ಅಧಿಕಾರದ ಮತ್ತಿನಲ್ಲಿ ಮತ್ತು ರಾಜಕೀಯದಾಟದಲಿ ಮಗ್ನರಾದರು. ಸಿನಿಮಾ ಹಣವಂತರ ಅಡ್ಡೆಯಾಗಿ ಬ್ರಾಹ್ಮಣ್ಯದ, ಪ್ರಬಲ ಜಮೀನ್ದಾರಿ ಜಾತಿಗಳ ಕೈಗೆ ವರ್ಗವಾದುದನ್ನು ತಡೆಯಲು ದ್ರಾವಿಡ ಪಕ್ಷಗಳಿಗೆ ಪುರುಸೊತ್ತಿರಲಿಲ್ಲ ಅಥವ ರಾಜಕೀಯ ನಡೆಗೆ ವಿವಿಧ ಜಾತಿಗಳ ಅನಿವಾರ್ಯವಿದ್ದುದರಿಂದಲೋ ಸುಮ್ಮನಾಗಿಬಿಟ್ಟರು. ಇದರ ವಿರುದ್ಧ ಕೆಲವು ಮಾರ್ಕ್ಸ್ ವಾದ ಹಿನ್ನೆಲೆಯ ನಿರ್ದೇಶಕರುಗಳು ತಮ್ಮ ಚಿತ್ರಗಳ ಮೂಲಕ ಪ್ರಯತ್ನಿಸಿದರೂ ಜನರನ್ನು ಭ್ರಮೆಗಳಿಂದ ಹೊರತರಲಾಗಲಿಲ್ಲ. ಜನ ಸಾಮಾನ್ಯ ಚಲನಚಿತ್ರ ಎಂಬ ಕಲರ್ ಫುಲ್ ಜಗತ್ತಿನ ಅದ್ದೂರಿತನವನ್ನು ತನ್ನದೆ ಎಂಬಂತೆ ಆಸ್ವಾದಿಸುತ್ತ ಬಂಡವಾಳಶಾಹಿಗಳ ಮತ್ತು ಬ್ರಾಹ್ಮಣ್ಯದ ಸಂಚುಗಳನ್ನು ಅರಿಯದೆ “ಸ್ವಚ್ಛತೆ”, “ಲಂಚ”, “ಉಗ್ರವಾದ”ಗಳೇ ನಮ್ಮ ಈ ಹೊತ್ತಿನ ಸಮಸ್ಯೆಗಳು ಎಂದು ಅರ್ಥೈಸಿಕೊಂಡು ಶಂಕರ್, ವಿಕ್ರಮ್ ಗಳೇ ಬುದ್ಧಿಜೀವಿಗಳು ಎಂದುಕೊಂಡ(ಳು). ಇವರುಗಳನ್ನು ಎಚ್ಚರಿಸುವ ದ್ರಾವಿಡ ಪತ್ರಿಕೆಗಳು ಅರ್ಥ ಕಳೆದುಕೊಂಡು ಮಾಯವಾಗಿದ್ದವು; ಇನ್ನು ಸಣ್ಣ ಸಾಂಸ್ಕೃತಿಕ ಪತ್ರಿಕೆಗಳು ಕಾಣೆಯಾಗಿ ಸಿನಿಮಾದ ಸುದ್ದಿಗಳನ್ನು ಮುಖಪುಟದ ಸುದ್ದಿಗಳನ್ನಾಗಿಸಿಕೊಂಡ ಹಲವಾರು ಪತ್ರಿಕೆಗಳು ಜನರನ್ನು ಹಾದಿ ತಪ್ಪಿಸುತ್ತಿದ್ದವು. ಸನ್ ಟಿ.ವಿ ಎಂಬ ದ್ರಾವಿಡ ಪಕ್ಷದ ಮುಂದಾಳುವೊಬ್ಬನ ಚಾನೆಲ್ ದ್ರಾವಿಡ ಚಿಂತನೆಯನ್ನು ಸಂಪೂರ್ಣವಾಗಿ ಅಂಚಿಗೆ ತಳ್ಳಿ ಸಿನಿಮಾ, ಧಾರಾವಾಹಿಗಳ ಮೂಲಕ ತಮ್ಮ ದ್ರಾವಿಡ ಚಿಂತನೆಗಳಿಗೆ ಅಂತ್ಯ ಆಡಿಬಿಟ್ಟರು.
ವಿಜಯ್, ಅಜಿತ್, ವಿಕ್ರಮ್, ಸೂರ್ಯ ಎಂಬ “ನಾಯಕ” ನಟರುಗಳಿಗಾಗಿ ಮಚ್ಚು-ಲಾಂಗು ಕಥೆಗಳ ಹೆಣೆದ ನಿರ್ದೇಶಕರು ತಮ್ಮ ನಿರ್ಮಾಪಕರ ಬ್ಯಾಂಕ್ ಬ್ಯಾಲೆನ್ಸ್ ಗಳ ಹೆಚ್ಚಿಸಿ ಇಂಗ್ಲೆಂಡ್, ಅಮೆರಿಕಾ, ಕೆನೆಡ, ಸಿಂಗಾಪುರ್, ಮಲೇಶ್ಯಗಳಲ್ಲಿ ತಮಿಳು ಚಿತ್ರಗಳಿಗೆ ಮತ್ತಷ್ಟು ಬೇಡಿಕೆಯ ಹೆಚ್ಚಿಸಿದರು. ತಮ್ಮ ತಾಯ್ನಾಡಲ್ಲಿ ಸಮಸ್ಯೆಗಳ ಎದುರಿಸಲಾಗದೆ ದೇಶ ಬಿಟ್ಟು ನಿರಾಶ್ರಿತರಾಗಿ ಮೇಲಿನ ದೇಶಗಳಿಗೆ ಹೋದ ಶ್ರೀಲಂಕಾದ ತಮಿಳರನ್ನು ತಮ್ಮ ಕನ್ಸೂಮರ್ ಗಳನ್ನಾಗಿ ಮಾಡಿಕೊಂಡ ತಮಿಳು ಸಿನಿಮಾ ಅದ್ದೂರಿತನದಲ್ಲಿ ಹಿಂದಿ ಚಿತ್ರಗಳನ್ನು ಮೀರಿಸಿತು. ಈ ಸಮಯದಲ್ಲೇ ತಮಿಳು ಸಿನಿಮಾ ಹೊಸ ದಿಕ್ಕಿನತ್ತ ಹೋಗತೊಡಗಿದ್ದು ಕೆಲವರಲ್ಲಿ ನೆಮ್ಮದಿಯ ಮೂಡಿಸಿತು. ಕಳೆದು ಹೋದ ಸಮಾಜಮುಖಿ ಚಿತ್ರಗಳು ಮತ್ತೆ ಹಿಟ್ ಆಗತೊಡಗಿದವು. ಜನ ಬದಲಾವಣೆಯ ಬಯಸಿಯೋ ಅಥವ ಹೆಚ್ಚಾದ ಸಾಮಾಜಿಕ ಪ್ರಜ್ಞೆಯ ಕಾರಣದಿಂದಲೋ ಸಾಮಾನ್ಯ ಬಜೆಟ್ಟಿನ ಆರ್ಟ್ ಫಿಲ್ಮ್ ಗಳ ತರದ ಚಿತ್ರಗಳನ್ನು ಹಿಟ್ ಮಾಡಿಸಿದರು. Middle Cinema ಅಥವ “ಮಾಟ್ರು ಸಿನಿಮಾ” (ಬದಲಾವಣೆಯ ಚಿತ್ರ) ಎಂಬ ದಿಕ್ಕಿನತ್ತ ಕೆಲವು ನಿರ್ದೇಶಕರು ತಮಿಳು ಸಿನಿಮಾವನ್ನು ಸಮಾಜಮುಖಿಯಾಗಿಸಿದ್ದಾರೆ.
ತಂಗರ್ ಬಚ್ಚನ್, ಬಾಲಾ, ಅಮೀರ್ ಸುಲ್ತಾನ್, ಚೇರನ್, ಮಿಷ್ಕಿನ್, ಶಶಿಕುಮಾರ್, ವಸಂತ ಬಾಲನ್ ರಂತಹ ಸೃಜನಶೀಲ ಮನಸ್ಸುಗಳು ಸಂವೇದನೆಗೆ ಹೊಸ ನೀರ ಸೇರಿಸಿದರು. “ಆಟೋಗ್ರಾಫ್”, “ಪಿತಾಮಗನ್”, “ವೆಯಿಲ್”, “ಪರುತ್ತೀವೀರನ್”, “ಸುಬ್ರಮಣ್ಯ ಪುರಂ”, “ನಾನ್ ಕಡವುಳ್”ರಂತಹ ಚಿತ್ರಗಳು ಮಾಮೂಲಿ ಚಿತ್ರಗಳಿಗಿಂತಿರದೆ ಇದ್ದರೂ ಜನ ಅವುಗಳನ್ನು ಹಿಟ್ ಮಾಡಿದರು. ಅಲ್ಲಿಂದ ಈ “ಮಾಟ್ರು ಸಿನಿಮಾ” ತಮಿಳುನಾಡಲ್ಲಿ ಹೊಸ ಅಲೆಗಳ ಎಬ್ಬಿಸಿದವು. ಅದ್ದೂರಿ, ಹಿಂಸಾತ್ಮಕ, ಅಶ್ಲೀಲ ಚಿತ್ರಗಳನ್ನು ದೂರತಳ್ಳಿ ಈ Middle Cinema ಗಳು ಅನೇಕರನ್ನು ಸೆಳೆಯುವಲ್ಲಿ ಯಶಸ್ವಿ ಕಂಡಿವೆ. ಇದು ಹೀಗೆ ಮುಂದುವರೆಯಲಿ ಎಂದು ಆಶಿಸುತ್ತ ಈ ಅಲೆಯಲ್ಲೇ ಇತ್ತೀಚಿಗೆ ತೆರೆ ಕಂಡು ಹಿಟ್ ಆಗಿರುವ “ಅಂಗಾಡಿ ತೆರು” ಎಂಬ ಚಿತ್ರದ ಬಗ್ಗೆ ಒಂದು ಮಾತು ಸೇರಿಸುತ್ತೇನೆ.
ಚೆನ್ನೈನ ಬೃಹತ್ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಹುಡುಗ-ಹುಡುಗಿಯರ ಕಥೆ ಇದು. ಸಾಮಾನ್ಯ ಜನರ ಸಾಮಾನ್ಯ ಬದುಕನ್ನು ಚಿತ್ರಿಸಿರುವ “ಅಂಗಾಡಿ ತೆರು”ವಿನ ವಿಭಿನ್ನ ನಿರೂಪಣೆ, ನಮ್ಮ ನಡುವೆಯೇ ನಡೆಯುತ್ತಿದೆಯೇನೋ ಅನ್ನಿಸುವ ಕಥೆ, ದಿನ ನಿತ್ಯ ನಾವು ನೋಡುವ ಜನರೇ ತೆರೆಯ ಮೇಲೆ ಬಂದಿದ್ದಾರೆ ಅನ್ನಿಸುವ ಪಾತ್ರಗಳು, ಭ್ರಮೆ-ಸುಳ್ಳುಗಳಿಲ್ಲದ ಕಪ್ಪು ಕೋಣೆಯೊಳಗಿನ ಬಿಳಿ ವಾಸ್ತವ, ಇವೆಲ್ಲವು “…ತೆರು”ವನ್ನು ನಮ್ಮ ಜಗತ್ತಿನ ಚಿತ್ರವನ್ನಾಗಿಸುತ್ತವೆ. ಹೀಗೆ ಸಾಮಾನ್ಯರ ಬದುಕುಗಳನ್ನು ಯಾವುದೆ ಸುಳ್ಳುಗಳ ಜೋಡಿಸದೆ ಈ Middle Cinema ಗಳು ಸೃಜನಶೀಲವಾಗಿ ಬೆಳ್ಳಿ ತೆರೆಯಲ್ಲಿ ತರುತ್ತಿವೆ. ಈ “ಮಾಟ್ರು ಸಿನಿಮಾ”ದ ಮೇಲೆ ಇರಾನ್ ಚಿತ್ರಗಳ ದಟ್ಟ ಪ್ರಭಾವವಿದೆ ಎನ್ನುತ್ತಾರೆ “ಅಂಗಾಡಿ ತೆರು” ಚಿತ್ರದ ನಿರ್ದೇಶಕ ವಸಂತ ಬಾಲನ್. ಅದ್ದೂರಿತನ ಎಂಬ ಭ್ರಮಾ ವಾಸ್ತವದಲ್ಲಿ ಹಣವಂತರ, ಬ್ರಾಹ್ಮಣ್ಯದ ಮತ್ತು ತೇವರ್, ಗೌಂಡರ್ ರಂತಹ ಜಮೀನ್ದಾರಿ ಜಾತಿಗಳ ಹಿತಾಸಕ್ತಿಗಳನ್ನು ಕಾಯುವ ಹಾಗು ಮಚ್ಚುಲಾಂಗುಗಳ ರಕ್ತವನ್ನು ಪ್ರೇಕ್ಷಕರಿಗೆ ಉಣಬಡಿಸಿ ಕ್ರೈಮ್ ರೇಟನ್ನು ಜಾಸ್ತಿ ಮಾಡುವ stereo type ಚಲನಚಿತ್ರಗಳಿಂದ ಜನರನ್ನು ಬಿಡಿಸಿ ಮಾನವೀಯ ಸಂವೇದನೆಯನ್ನು ರೂಪಿಸಿ ಬದುಕನ್ನು ಬದುಕಾಗಿಯೇ ನೋಡುವ ಕಲೆಗಳನ್ನು ಗಟ್ಟಿಗೊಳಿಸುತ್ತಿವೆ, ಈ ಹೊಸ ಅಲೆಯ ಚಿತ್ರಗಳು.
ತಮಿಳು ಚಿತ್ರರಂಗದ ಇತಿಹಾಸವನ್ನು ಭಿನ್ನ ದಾರಿಗೆ ತಿರುಗಿಸಿರುವ ಈ ಚಿತ್ರಗಳಿಗೆ ಶಕ್ತಿ ನೀಡಲೊ ಎನ್ನುವಂತೆ ಹಳೆಯ ಚಿತ್ರಗಳನ್ನು ಲೇವಡಿ ಮಾಡುವಂತಹ ಚಿತ್ರವೊಂದು ಈಚೆಗೆ ಬಿಡುಗಡೆಯಾಗಿ ಸುದ್ದಿ ಮಾಡಿತು. “ತಮಿಳ್ ಪಡಂ” ಎಂಬ ಹೆಸರಿನ ಆ ಚಿತ್ರ ಹಿಂದಿನ ತಮಿಳು ಚಿತ್ರಗಳ ಭ್ರಮೆ,ಸುಳ್ಳು,ಸಂಚು, ಭಾವಾತಿರೇಕಗಳನ್ನು ಪ್ರತಿ ಶಾಟ್ ನಲ್ಲೂ ಗೇಲಿ ಮಾಡಿ ನೋಡುಗರಲ್ಲಿ ನಗೆಯ ಬುಗ್ಗೆಗಳನ್ನು ಏಳಿಸುತ್ತದೆ. ಎಷ್ಟರ ಮಟ್ಟಿಗೆ ಅಂದರೆ ಆ ಚಿತ್ರದ ವಿಲ್ಲನ್ ನಾಯಕಿಯನ್ನು ಶೂಟ್ ಮಾಡುತ್ತಾನೆ, ಆ ಬುಲೆಟ್ ಆಕೆಯನ್ನು ಮುಟ್ಟುವುದರೊಳಗೆ ಆಸ್ಪತ್ರೆಯಲ್ಲಿ ಮಲಗಿರುವ ಹೀರೊ ಎದ್ದು ಹತ್ತಾರು ಕಿ.ಮೀ ದಾಟಿ ಬಂದು ಆಕೆಯನ್ನು ಕಾಪಾಡುತ್ತಾನೆ. ಹೀಗೆ ಹಳೆಯ ಚಿತ್ರಗಳ ಪೊಳ್ಳುತನವನ್ನು “ಕಿಂಡಲ್” ಮಾಡುತ್ತ “ತಮಿಳ್ ಪಡಂ” ಸಿನಿಮಾಗೆ ಬೇಕಾದ ವಾಸ್ತವತೆಯ ಮುಖ್ಯತ್ವವನ್ನು ಚೆನ್ನಾಗಿ ಹಿಡಿದಿಡಿದಿದೆ ಹಾಗು “ಮಾಟ್ರು ಸಿನಿಮಾ”ಗಳ ಅನಿವಾರ್ಯತೆಯನ್ನು ಸೂಚ್ಯವಾಗಿ ನೋಡುಗರಿಗೆ ತಿಳಿಸುತ್ತದೆ.
ಹೊಸ ತಲೆಮಾರಿನ ಕಥೆಗಾರ. ಸಿಲೋನ್ ಸೈಕಲ್ ಇವರ ಇತ್ತೀಚೆಗಿನ ಕಥಾ ಸಂಕಲನ. ಸೌದಿ ಅರೇಬಿಯಾದ ಕಿಂಗ್ ಸೌದ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿರುವ ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಆರನಕಟ್ಟೆಯವರು.