ಮೊನ್ನೆ ಮೊನ್ನೆಯಷ್ಟೇ ದಷ್ಟ ಪುಷ್ಟವಾದ ರೆಂಬೆ ಕೊಂಬೆಗಳನ್ನು ಅಗಲಿಸಿ ಸಾವಿರಾರು ಹಕ್ಕಿಗಳ ಹಕ್ಕಿನ ಮನೆಯಾಗಿದ್ದ ಆಲದ ಮರ, ಹುಣಸೆ ಮರ, ಹೊಸದಾಗಿ ನಿರ್ಮಾಣವಾದ ದೇಗುಲದ ಕಾಲಬುಡದಲ್ಲಿ ದಿಕ್ಕಾಪಾಲಾಗಿ ಬಿದ್ದಿರುವುದನ್ನು ನೋಡಿದರೆ ಕಣ್ಣು ತುಂಬಿ ಬರುತ್ತದೆ. ನಿಜವಾದ ದೇವರು ಹೀಗೆ ಅನಾಥವಾಗಿ ಬಿದ್ದಿರುವುದನ್ನು, ಆ ದೇವರು ಅಳುತ್ತಿರುವುದನ್ನು ಯಾವ ಧಾರ್ಮಿಕ ಮುಖಂಡರು, ಬಣ್ಣ ಬಣ್ಣದ ಶಾಲು ಹೊದ್ದು ಕಾಣದ ದೇವರ ಗುಂಗಿನಲ್ಲಿರುವವರು, ಲಕ್ಷ ಲಕ್ಷ ದಾನ ಮಾಡಿ ಪುಣ್ಯ ಕಾರ್ಯ ಮಾಡಿದೆವು ಎಂದು ಠೀವಿಯಲ್ಲಿರುವ ಮಹಾದಾನಿಗಳಾರೂ ನೋಡುವುದೇ ಇಲ್ಲ.
ಪ್ರಕೃತಿಯನ್ನೆ ಕೊಂದ ಮೇಲೆ ಉಳಿಯುವವರು ಯಾರು ಎಂದು ಕೇಳುತ್ತಿದ್ದಾರೆ ಪ್ರಸಾದ್‌ ಶೆಣೈ ಆರ್‌.ಕೆ.

 

ನಮ್ಮೂರಿನ ಪೇಟೆಯ ಮೂಲೆ ಮೂಲೆಗಳಲ್ಲೂ, ಪ್ರತೀ ಮನೆಗಳ ಟಿಪಾಯಿಗಳಲ್ಲೂ, ಕತ್ತೆತ್ತಿದ್ದರೆ ಕಾಣುವ ಊರಿನ ಹಳೆ ಮರದ ಗೆಲ್ಲುಗಳಲ್ಲೂ, ಲೈಟು ಕಂಬದ ಸೊಂಟದಲ್ಲೂ “ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ, ಪ್ರತಿಷ್ಠಾಪನೆ, ನೂತರ ಗೋಪುರ, ಧ್ವಜಸ್ತಂಭ ಉದ್ಘಾಟನೆ, ಗರ್ಭಗುಡಿ ಪುನಃ ನಿಮಾಣ, ನೂತನ ಸುತ್ತುಪೌಳಿ ಮಂಟಪ ಪುನಾರಚನೆ ಕಾರ್ಯಕ್ರಮ, ತಮಗೆಲ್ಲರಿಗೂ ಆದರದ ಸ್ವಾಗತ, ತನು, ಮನ ಧನದಿಂದ ಈ ಪುಣ್ಯ ಕಾರ್ಯಕ್ಕೆ ಸಹಕರಿಸಿ ಎನ್ನುವ ಬ್ಯಾನರ್ರುಗಳು, ಬೋರ್ಡುಗಳು, ಹ್ಯಾಂಡುಬಿಲ್ಲುಗಳು, ಆಮಂತ್ರಣ ಪತ್ರಿಕೆ ಇತ್ಯಾದಿಗಳೆಲ್ಲಾ ಮಳೆಗಾಲಕ್ಕೆ ಸಾಲುಸಾಲಾಗಿ ಹುಟ್ಟುವ ಕೊಡೆ ಅಣಬೆಗಳಂತೆ ಹಗುರನೇ ಅಲ್ಲಲ್ಲಿ ಮೂಡತೊಡಗಿದರೆ ಸಾಕು…

ಧರ್ಮ ಕ್ಷೇತ್ರದ ಮಹಾಕಾರ್ಯಕ್ಕೆ ಇಂತಿಂತ ಗಣ್ಯರು ದಾನ ನೀಡಿ ಸಹಕರಿಸಿದ್ದಾರೆ ಎಂದು ದಪ್ಪ ಅಕ್ಷರಗಳಲ್ಲಿ ನಮ್ಮೂರಿನ ದಾನ ನೀಡಿದ ಮಹಾದಾನಿಗಳ ಹೆಸರು, ಊರು, ಅವರು ನೀಡಿದ ಮಹಾದಾನದ ಮೊತ್ತ ಎಲ್ಲವನ್ನೂ ಕೆಂಪು ಬಣ್ಣದಲ್ಲಿ ಕಣ್ಣಿಗೆ ರಾಚುವಂತೆ ಮುದ್ರಿಸಿ, ಆ ಪಟ್ಟಿಯೆಲ್ಲಾ ಒಂದೆರಡು ಪುಟ ತೊಡಗಿ ಖಾಲಿಯಾದ ಕೂಡಲೇ, “ನೀವೂ ದಾನ ನೀಡಲು ಬಯಸಿದ್ದಲ್ಲಿ ಕ್ಷೇತ್ರದ ಈ ಖಾತೆಗೆ ಹಣ ಜಮಾಯಿಸಿ ಬಳಿಕ ರಸೀದಿ ಪಡೆದುಕೊಳ್ಳುವಂತೆ ಕೋರುತ್ತೇವೆ”ಎಂದು ದುಂಡಗಾದ ಅಕ್ಷರಗಳಲ್ಲಿ ಛಾಪಿಸಿರುವ ಕರಪತ್ರಗಳು ಕೈಗೆ ಸಿಕ್ಕರೆ ಸಾಕು,

“ಹೋ ಅವ ೨೦,೦೦೦ ದಾನ ಕೊಟ್ಟಿದ್ದಾನೆ. ನಾನು ೩೦,೦೦ ಕೊಡ್ತೇನೆ” ಎಂದು ದೊಡ್ಡಸ್ತಿಕೆಯಿಂದ ಮೀಸೆಯನ್ನೊಮ್ಮೆ ನೀವಿಕೊಳ್ಳುತ್ತ ಮತ್ತೊಬ್ಬ ಮಹಾದಾನಿ ನಿರ್ಧರಿಸುತ್ತಾನೆ. ಅವನ್ನಿಷ್ಟು ಕೊಟ್ಟಿದ್ದಾನೆ ನಾನು ಅವನಿಗಿಂತ ಜಾಸ್ತಿ ಕೊಟ್ಟು ಮೆರೆದಾಡಬೇಕು, ಜಾಸ್ತಿ ಕೊಟ್ಟರೆ ದೇವರಿಗೂ ಅದು ಸಂದು ತೃಪ್ತಿಯಾಗುತ್ತದೆ ಎಂದು ನಿರ್ಧರಿಸಿ ದಾನ ಮಾಡುವವರ ಪಟ್ಟಿ ಮದುವೆಯ ದಿನಸಿ ಸಾಮಾನು ಪಟ್ಟಿಯಂತೆ ಬೆಳೆಯುತ್ತಲೇ ಹೋಗುತ್ತದೆ. ಅದರ ಜೊತೆ ಹಣ ಕೊಟ್ಟವರ ಪ್ರತಿಷ್ಠೆ ಪರಾಕಾಷ್ಠೆಗೆ ತಲುಪಿ ಅವರ ವರ್ಚಸ್ಸೂ ಬೆಳೆಯತೊಡಗುತ್ತದೆ.

ಇದೇ ಮಹಾದಾನಿಗಳಿಗೆ, ನಮ್ಮೂರಿನ ನದಿ ಮಾಲಿನ್ಯದಿಂದ ತತ್ತರಿಸಿ ಹಾಳಾಗುತ್ತಿದೆ, ಇದ್ದ ಕಾಡೆಲ್ಲಾ ಕಡಿದು ವಿನಾಕಾರಣ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ. ವಿನಾಶಕಾರಿ ಅರ್ಥವಿಲ್ಲದ ಯೋಜನೆಗಳಿಂದ ನಮ್ಮೂರಿನ ಅಗಾಧವಾದ ಕಾಡುಗಳು ನಮಗೆ ಪ್ರತೀ ಕ್ಷಣವೂ ಉಸಿರು ನೀಡುತ್ತ ಪೊರೆಯುವ ಕಾಡುಗಳು ನಾಶವಾಗುತ್ತಿದೆ. ದಯವಿಟ್ಟೂ ಈ ಕಾಡನ್ನು ಉಳಿಸಲು ಕೈಜೋಡಿಸಿ, ನೀವು ಈಗಾಗಲೇ ಸಮಾಜದಲ್ಲಿ ಸಂಪಾದಿಸಿದ, ಇದ್ದ ದೇವರ ಕೇಂದ್ರಗಳಿಗೆ ದಾನ ಕೊಟ್ಟು ಸಂಪಾದಿಸಿದ ಪ್ರತಿಷ್ಠೆಗಳಿಂದ ಇದನ್ನು ತಡೆಯಿರಿ, ಪ್ರಕೃತಿಗಿಂತಲೂ ಪ್ರತ್ಯಕ್ಷ ದೇವರು ಬೇರೆಲ್ಲಿದ್ದಾರೆ? ಈ ದೇವರನ್ನು ಮೊದಲು ಕಾಪಾಡಿ ಎಂದು ಎಷ್ಟೇ ಅವರಿಗೆ ತಿಳಿಹೇಳಿದರೂ “ನಮಗ್ಯಾಕಪ್ಪಾ ಅದೆಲ್ಲಾ ಕಿರಿಕಿರಿ?” ಎಂದು ಅದನ್ನು ಮಂಡೆಗೆ ತೆಗೆದುಕೊಳ್ಳುವುದೇ ಇಲ್ಲ.

ಅವರೆಲ್ಲಾ ತಮ್ಮ ತಮ್ಮ ಧಾರ್ಮಿಕ ಕೇಂದ್ರಗಳಿಗೆ ಇನ್ನಷ್ಟು ದಾನ ಕೊಟ್ಟು ಎಲ್ಲರೆದುರು ಬೀಗಿ, ಅಲ್ಲಿನ ದೇವರು ತಾನು ಇಷ್ಟು ಮಾಡಿದ್ದಕ್ಕೆ ತನ್ನ ಮೇಲೆ ತನ್ನ ಕೃಪಾದೃಷ್ಟಿ ಬೀರಿ ಅನುದಿನವೂ ಪೊರೆಯುತ್ತಾನೆ ಎನ್ನುವ ನಂಬಿಕೆಯಲ್ಲಿ ಧಾರ್ಮಿಕ ಪೋಷಾಕುಗಳನ್ನು ತೊಟ್ಟು ಉನ್ಮತ್ತರಾಗುತ್ತಾರೆ.

ನಮ್ಮೂರು ಇದೀಗ ಎಷ್ಟು ಮುಂದುವರಿದಿದೆ ಎಂದರೆ, ಇಲ್ಲೀಗ ಹೆಜ್ಜೆ ಹೆಜ್ಜೆಗೂ ಹೊಸ ಹೊಸ ಧಾರ್ಮಿಕ ಕೇಂದ್ರಗಳು ನಿರ್ಮಾಣವಾಗುತ್ತಿದೆ. ಇಲ್ಲಿನ ಪ್ರತೀ ದೈವಗಳಿಗೂ, ದೇವರುಗಳಿಗೂ ಹೊಸ ಹೊಸ ದೇವಸ್ಥಾನಗಳ ಭಾಗ್ಯ. ಇದು ಎಲ್ಲಾ ಧರ್ಮಗಳಲ್ಲಿ ಇದ್ದದ್ದೇ ಬಿಡಿ. ಊರಿಗೆ ದೇವಸ್ಥಾನಗಳು ಬೇಕೇ ಬೇಕು ಅಲ್ಲವಾ? ನಮಗೆ ಬದುಕಿಗೆ ಸ್ಪೂರ್ತಿ ಕೊಡುವುದಕ್ಕೆ, ಬಾಳಿನ ಕುರಿತು ನಮ್ಮ ನಂಬಿಕೆಯನ್ನು ಜಾಸ್ತಿ ಮಾಡುವುದಕ್ಕೆ, ನಮ್ಮ ಮೊರೆತಗಳೆಲ್ಲವನ್ನೂ ದುಃಖಗಳೆಲ್ಲವನ್ನೂ ಹಂಚಿಕೊಳ್ಳುವುದಕ್ಕೆ, ಅವೆಲ್ಲದಕ್ಕೂ ಪರಿಹಾರ ಕಾಣುವುದಕ್ಕೆ ಈ ಧಾರ್ಮಿಕ ಕೇಂದ್ರಗಳು ಆಸ್ತಿಕರಿಗೆ ಖಂಡಿತ ಉಪಯೋಗಕ್ಕೆ ಬಂದೇ ಬರುತ್ತದೆ. ಜನರ ಧಾರ್ಮಿಕ ಭಾವನೆಗಳು ಪವಿತ್ರವೂ, ಸೂಕ್ಷ್ಮವೂ ಖಂಡಿತ ಹೌದು. ಒಂದು ದೇವಸ್ಥಾನ ಜೀರ್ಣೋದ್ಧಾರಗೊಳ್ಳುವುದರಿಂದ ಅಥವಾ ಒಂದು ಧಾರ್ಮಿಕ ಕೇಂದ್ರ ಕಟ್ಟಲ್ಪಡುವುರಿಂದ ಆ ಕಾರ್ಯಕ್ಕೆ ಬೇಕಾಗುವ ವ್ಯಕ್ತಿಗಳಿಗೆ ದೇವಸ್ಥಾನವೊಂದು ಕಾಯಕವನ್ನೂ ಕೊಡುತ್ತದೆ, ಸಣ್ಣ ಕೆಲಸದಿಂದ ಹಿಡಿದು ದೊಡ್ಡ ಕೆಲಸ ಮಾಡುವುವವರಿಗೂ ಧಾರ್ಮಿಕ ಕ್ಷೇತ್ರ ಉದ್ಯೋಗವನ್ನು ನೀಡುತ್ತದೆ ಎನ್ನುದೆಲ್ಲವನ್ನೂ ಒಪ್ಪಲೇಬೇಕು.

ನಾನಿಲ್ಲಿ ದೇವಸ್ಥಾನಗಳನ್ನು ಕಟ್ಟಬಾರದೆಂದೂ, ದೇವಸ್ಥಾನಗಳಿಗೆ ದಾನಿಗಳು ದಾನ ಕೊಡಬಾರದೆಂದೂ, ದೇವಸ್ಥಾನಗಳು ಜೀರ್ಣೋದ್ದಾರವಾಗಬಾರದೆಂದು ಹೇಳುತ್ತಲೇ ಇಲ್ಲ. ಆದರೆ ನನ್ನ ಬೇಸರವಿಷ್ಟೇ, ನಮ್ಮೂರಿನ ಅರ್ಧಕರ್ದ ಹೊಸ ದೇವಸ್ಥಾನಗಳೂ, ನಾಗಬನಗಳು, ದೈವಗುಡಿಗಳು, ಚರ್ಚ್, ಮಸೀದಿಗಳು ಕಾಡಿನ ಮಗ್ಗುಲಲ್ಲೇ ಹುಟ್ಟಿಕೊಳ್ಳುತ್ತಿದೆ. ಎಲ್ಲಾ ಧರ್ಮದವರಿಗೂ ಕಾಡಿರುವ ಪ್ರದೇಶದಲ್ಲೇ ತಮ್ಮ ತಮ್ಮ ಧಾರ್ಮಿಕ ಕೇಂದ್ರ ಕಟ್ಟುವ ಉತ್ಸಾಹ ಅದೇಕೋ ತಿಳಿಯುವುದಿಲ್ಲ. ಕಟ್ಟಿದರೆ ಕಟ್ಟಿಕೊಳ್ಳಲಿ. ಆದರೆ ನಮಗೆ ಜೀವ ನೀಡುವ ಅಗಾಧ ಕಾಡುಗಳನ್ನು ಕಡಿದು, ಅದನ್ನೇ ನಂಬಿಕೊಂಡು ಬದುಕಿದ ಜೀವಜಾಲದ ಬದುಕನ್ನು ಕಿತ್ತುಕೊಂಡು, ಅಲ್ಲಿರುವ ಪುಟ್ಟ ಪುಟ್ಟ ತೊರೆ ಹಳ್ಳಗಳಿಗೆ ಜೆಬಿಸಿಯಿಂದ ಮುಣ್ಣುಮುಕ್ಕಿಸಿ, ಅದರ ಪಾಡಿಗದು ಸಹಜವಾಗಿ ಬೆಳೆಯುತ್ತಿರುವ ಅಪರೂಪದ ಗಿಡಗಂಟಿಗಳು ಯಾವುವು? ಅವುಗಳ ಉಪಯೋಗವಾದರೂ ಏನು? ಎಂದೆಲ್ಲಾ ತಿಳಿಯದೇ ನಮಗಿಂತಲೂ ಪೂರ್ವದಿಂದ ಬದುಕಿದ ಜೀವಕೋಟಿಗಳ ಮನೆಯನ್ನು ಹಾಳು ಮಾಡಿ ಗುಡಿ ಕಟ್ಟುತ್ತೇವಲ್ಲ. ಇದ್ಯಾವ ರೀತಿಯ ಧಾರ್ಮಿಕ ಕಾರ್ಯ ಎನ್ನುವ ಚಿಂತನೆಯಲ್ಲಿ ಮುಳುಗುತ್ತದೆ ನನ್ನ ಮನಸ್ಸು.

ನಮ್ಮ ಕಣ್ಣಿಗೆ ಕಾಣುವ, ನಮಗೆ ಜೀವದಾಯಿನಿಯಾದ ನದಿ, ತೊರೆ, ಹಳ್ಳ, ಉಸಿರು ನೀಡುವ ಹಸಿರು, ಭೂಮಿಯನ್ನು ತಂಪಾಗಿ, ಸಹಜವಾಗಿ ರಕ್ಷಿಸಿ, ಕಾಲ ಕಾಲಕ್ಕೆ ಮಳೆ ತರಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಇಡೀ ಲೋಕಕ್ಕೆ ಚೈತನ್ಯ ನೀಡುವ ಪ್ರತ್ಯಕ್ಷ ದೇವರು ಅಂತ ಒಂದಿದ್ದರೆ ಅದು ಸಮೃದ್ಧವಾದ ಪ್ರಕೃತಿ ಮಾತ್ರ. ಹೀಗೆ ಹಚ್ಚ ಹಸಿರಾಗಿ ನಮ್ಮ ಕಣ್ಣೆದುರಲ್ಲೇ ಫಳಫಳ ಹೊಳೆಯುವ, ತೂಗಿ ತೊನೆದಾಡುವ, ಝೇಂಕರಿಸುವ, ನಸು ನಕ್ಕು ಖುಷಿಯಿಂದಿರುವ ಈ ಪ್ರಕೃತಿ ದೇವರನ್ನು ಸಾಯಿಸಿ ನಾವು ಯಾಂತ್ರಿಕವಾಗಿ ದೇವಸ್ಥಾನ ಕಟ್ಟಲು ಹೊರಡುವುದು ಎಷ್ಟೊಂದು ಅಸಹಜ, ವಿಕ್ಷಿಪ್ತ ಅನ್ನಿಸಿಬಿಡುತ್ತದೆ. ನಮ್ಮೂರಿನಲ್ಲಿ ಬರೀ ಧಾರ್ಮಿಕ ಕೇಂದ್ರಗಳ ಹೆಸರಲ್ಲಿ ಹೀಗೆ ಸತ್ತು ಹೋದ ಪ್ರಕೃತಿ ದೇವರುಗಳೆಷ್ಟು ಎಂದು ಲೆಕ್ಕ ಹಾಕಲು ತೊಡಗಿದರೆ ಆ ಲೆಕ್ಕ ಬೇಗ ಮುಗಿಯುವುದಿಲ್ಲ ಬಿಡಿ. ಆರಂಭದಲ್ಲಿ ಕಾಡ ಸುತ್ತ ಒಂದಷ್ಟು ಮರಗಳನ್ನು ಕಬಳಿಸಿ ಅಲ್ಲಿ ಹುಟ್ಟಿಕೊಂಡ ಧಾರ್ಮಿಕ ಕೇಂದ್ರಗಳು, ಕ್ರಮೇಣ ವಿಸ್ತಾರಗೊಂಡು, ಅಲ್ಲಿರುವ ಎಕರೆಗಟ್ಟಲೇ ಕಾಡನ್ನೆಲ್ಲಾ ಕಬಳಿಸಿಬಿಡುವುದನ್ನು ಕಣ್ಣೆದುರೇ ಕಂಡಾಗ ಇವನ್ನೆಲ್ಲಾ ಮೇಲಿರುವ ದೇವರು ನೋಡುತ್ತಿಲ್ಲವಾ ಅನ್ನಿಸುತ್ತದೆ. ಕಾಡಿನ ಜೀವಸ್ವರ ಕೇಳಿಸದೇ ಧಾರ್ಮಿಕ ಮುಖಂಡರುಗಳು, ರಾಜಕಾರಣಿಗಳು ಊರಿನ ದೊಡ್ಡ ಮನುಷ್ಯರು ಧಾರ್ಮಿಕ ಕೇಂದ್ರವನ್ನು ಪುನರ್ ನಿರ್ಮಿಸಿ ಇಡೀ ಕಾಡಿಗೆ ಕಾಡೇ ಮಾಯವಾದ ದೃಶ್ಯಗಳನ್ನು ನೋಡಿ ನಾನು ತುಂಬಾ ಸಲ ಮರುಗಿದ್ದೇನೆ.

ಎಲ್ಲಾ ಧರ್ಮದವರಿಗೂ ಕಾಡಿರುವ ಪ್ರದೇಶದಲ್ಲೇ ತಮ್ಮ ತಮ್ಮ ಧಾರ್ಮಿಕ ಕೇಂದ್ರ ಕಟ್ಟುವ ಉತ್ಸಾಹ ಅದೇಕೋ ತಿಳಿಯುವುದಿಲ್ಲ.

ಮೊನ್ನೆ ಮೊನ್ನೆಯಷ್ಟೇ ದಷ್ಟ ಪುಷ್ಟವಾದ ರೆಂಬೆ ಕೊಂಬೆಗಳನ್ನು ಅಗಲಿಸಿ ಸಾವಿರಾರು ಹಕ್ಕಿಗಳ ಹಕ್ಕಿನ ಮನೆಯಾಗಿದ್ದ ಆಲದ ಮರ, ಹುಣಸೆ ಮರ, ಹೊಸದಾಗಿ ನಿರ್ಮಾಣವಾದ ದೇಗುಲದ ಕಾಲಬುಡದಲ್ಲಿ ದಿಕ್ಕಾಪಾಲಾಗಿ ಬಿದ್ದಿರುವುದನ್ನು ನೋಡಿದರೆ ಕಣ್ಣು ತುಂಬಿ ಬರುತ್ತದೆ. ನಿಜವಾದ ದೇವರು ಹೀಗೆ ಅನಾಥವಾಗಿ ಬಿದ್ದಿರುವುದನ್ನು, ಆ ದೇವರು ಅಳುತ್ತಿರುವುದನ್ನು ಯಾವ ಧಾರ್ಮಿಕ ಮುಖಂಡರು, ಬಣ್ಣ ಬಣ್ಣದ ಶಾಲು ಹೊದ್ದು ಕಾಣದ ದೇವರ ಗುಂಗಿನಲ್ಲಿರುವವರು, ಲಕ್ಷ ಲಕ್ಷ ದಾನ ಮಾಡಿ ಪುಣ್ಯ ಕಾರ್ಯ ಮಾಡಿದೆವು ಎಂದು ಠೀವಿಯಲ್ಲಿರುವ ಮಹಾದಾನಿಗಳಾರೂ ನೋಡುವುದೇ ಇಲ್ಲ. ನಮ್ಮನ್ನು ಅನವರತ ಕಾಪಾಡುವ ಪ್ರಕೃತಿ ದೇವರನ್ನು ನಾವು ಸಾಯಿಸಿದ್ದೇವೆಂದು ಅವರಿಗೆ ಕೊನೆವರೆಗೂ ಅರಿವಾಗುವುದೇ ಇಲ್ಲ. ಕೆಲವೇ ದಿನಗಳಲ್ಲಿ ಕಡಿದ ಅಲ್ಲಿನ ಮರಗಳಿಂದ ಲಕ್ಷ ಲಕ್ಷ ಸಂಪಾದನೆಯಾಗುತ್ತದೆ. ಅದರಲ್ಲಿಷ್ಟು ದೇವಳದ ಅಭಿವೃದ್ಧಿಗೆ ಸೇರಿ, ಉಳಿದದ್ದು ಕೆಲವು ಮುಖಂಡರ ಖಾತೆಗೆ ಸೇರುವುದೂ ಉಂಟಂತೆ. ದೇವಕಾರ್ಯವೂ ಆಯ್ತು, ಸ್ವ-ಕಾರ್ಯವೂ ಆಗುತ್ತದೆ ಜೀರ್ಣೋದ್ಧಾರ ಮಾಡಿದರೆ, ಅಂತ ನನ್ನೊಬ್ಬರು ಸ್ನೇಹಿತರು ಹೇಳುತ್ತಿದ್ದರು.

ಅಂತೂ ಹಿಂದೆ ಪ್ರಕೃತಿ ದೇವರೇ ಇದ್ದ ಆ ಕ್ಷೇತ್ರ ಈಗ ಆ ದೇವರುಗಳನ್ನು ಕಳೆದುಕೊಂಡು ಬರೀ ಧಾರ್ಮಿಕ ಕ್ಷೇತ್ರವಾಗಿ ಬೆಳೆಯುತ್ತದೆ. ಅಲ್ಲೊಂದು ತೊರೆಯಿತ್ತೆಂದಾಗಲೀ, ಮರವಿತ್ತೆಂದಾಗಲೀ ಯಾರಿಗೂ ನೆನಪಾಗುವುದಿಲ್ಲ. ಯಾಕೆಂದರೆ ನಮಗದು ದೇವರಲ್ಲ. ಕಣ್ಣಿಗೆ ಕಾಣುವುದು ದೇವರಲ್ಲ, ನಮಗೆ ಜೀವ ನೀಡುವುದು ದೇವರಲ್ಲ ಎಂದು ನಾವೆಲ್ಲ ಖಡಾಖಂಡಿತವಾಗಿ ನಂಬಿರುವ ಕಾಲವಿದು. ನಿಸರ್ಗ ಸಹಜವಾಗಿದ್ದನ್ನು ಸಾಯಿಸಿ, ಕೃತಕತೆಯನ್ನು ಸಾಧಿಸುವ, ಸಂಭ್ರಮಿಸುವ ಕಾಲವಲ್ಲವೇ ಇದು? ಕಾಡಿನಲ್ಲಿ ಅನಾದಿ ಕಾಲದಿಂದಿರುವ ಮರಗಳನ್ನು ಕಡಿದು ಅಲ್ಲೇ ಒಂದು ಕೃತಕ ಪಾರ್ಕ್ ಕಟ್ಟಿದ ಹಾಗೇ ಇದು. ನಿಜವಾದ ದೇವರನ್ನು ಸಾಯಿಸಿ ಕೃತಕ ದೇವರನ್ನು ಹುಟ್ಟಿಸುತ್ತೇವೆ. ನಾನು ದೇವರ ಕುರಿತು ಹೀಗೇ ಮಾತಾಡಿದರೆ ಧಾರ್ಮಿಕ ವಿರೋಧಿಯೋ? ನಾಸ್ತಿಕನೋ ಆಗಿಬಿಡುತ್ತೇನೆ ಎಂದು ನನಗೆ ಗೊತ್ತು.

ನೋಡಿ, ಈ ಬರಹದ ವಿರೋಧ ದೇವರಲ್ಲ, ಯಾವ ಧರ್ಮದ ದೇಗುಲವೂ ಅಲ್ಲ. ಕಾಡನ್ನು ಕಡಿದು ನೈಸರ್ಗಿಕ ಸಂಪನ್ಮೂಲ ದೋಚಿ ನಿರ್ಮಾಣವಾಗುವ ಧಾರ್ಮಿಕ ಕೇಂದ್ರಗಳೇ ಇಲ್ಲಿನ ವಿರೋಧ. ಆದರೆ ನಾನು ಎಷ್ಟು ಹೇಳಿದರೂ ಪ್ರಕೃತಿಯ ಶಕ್ತಿ ಅಲ್ಲಗೆಳೆದು, “ಇಲ್ಲ ಇಲ್ಲ. ಗುಡಿ ಮಂದಿರ ಕಟ್ಟಿದರೆ ನಮ್ಮ ಪರಂಪರೆಯನ್ನು ದಾಟಿಸಿದಂತೆ, ಸಂರಕ್ಷಿಸಿದಂತೆ ಎಂದು ಪರಂಪರೆ, ಧಾರ್ಮಿಕತೆ, ಸಂಸ್ಕೃತಿ, ಆರಾಧನೆ ಅಂತೆಲ್ಲಾ ಉಪದೇಶ ಕೊಡುವ ಮೇಧಾವಿಗಳೇ ಸಿಗುತ್ತಾರೆ. ಆದರೆ ಪ್ರಕೃತಿಯೂ ಒಂದು ಪರಂಪರೆ, ನಾಳೆ ನಾವು ಉಳಿಯಬೇಕಾದರೆ ಈ ಪರಂಪರೆಯೂ ಉಳಿಯಬೇಕು, ಇಂದು ಪ್ರಕೃತಿಯನ್ನು ಸಂರಕ್ಷಿಸಿದರಷ್ಟೇ ನಾಳೆಯ ಪೀಳಿಗೆಯನ್ನು ರಕ್ಷಿಸಬಹುದು ಎನ್ನುವ ವಿಚಾರವನ್ನು ಈ ಮೇಧಾವಿಗಳು ಯಾವತ್ತೂ ಹೇಳುವುದಿಲ್ಲ.

ನಮ್ಮ ಕಣ್ಣೆದುರಿಗಿರುವ ಪ್ರಕೃತಿ ನಮಗಿಂತಲೂ ಪೂರ್ವದಲ್ಲಿ ಹುಟ್ಟಿದ್ದು, ನಾವು ಹುಟ್ಟಿದ ಮೇಲೆಯೇ ಪರಂಪರೆ, ಆರಾಧನೆ, ಸಂಸ್ಕೃತಿಗಳೆಲ್ಲಾ ಶುರುವಾಗಿದ್ದು, ಅಂತಹ ಸಂಸ್ಕೃತಿಗಳು ಹುಟ್ಟಿದ್ದೂ ಈ ಪ್ರಕೃತಿ ದೇವರ ಸಖ್ಯದಲ್ಲಿಯೇ, ನಾಗರೀಕತೆಯೂ ಹುಟ್ಟಿದ್ದು ನದಿಮೂಲದಲ್ಲಿಯೇ, ಪುರಾಣ ಕಥನ, ಧರ್ಮಗ್ರಂಥಗಳಿಗೂ ಪ್ರಕೃತಿಯೇ ಸ್ಪೂರ್ತಿ ಎಂದು ಹೇಳಿದರೆ ಯಾರೂ ಕಿವಿ ಕೊಡುವುದಿಲ್ಲ ಅನ್ನುವ ಬೇಸರ ಆವರಿಸಿಕೊಳ್ಳುತ್ತದೆ. ತಾವು ದೇವರ ಅಧೀಕೃತ ಪ್ರತಿನಿಧಿಗಳು ಅಂತೆಲ್ಲಾ ಅಂದುಕೊAಡು ಬದುಕುವವರಿಗೆ ತಿಳಿ ಹೇಳಲು ಹೊರಟರೆ ನಮ್ಮ ಕತೆ ಮುಗಿದೇ ಹೋಯ್ತು.

“ನೀವು ದೇವರ ವಿರೋಧಿಗಳು, ಸಂಪ್ರದಾಯ ವಿರೋಧಿಗಳು, ನಮ್ಮ ಧರ್ಮದ ವಿರೋಧಿಗಳು” ಎನ್ನುವ ಲೇಬಲ್ ಅಂಟಿಸಿ ಸುಮ್ಮನಾಗಿಬಿಡುತ್ತಾರೆ. ನಿಜವಾಗಿಯೂ ನೋಡಿದರೆ ಬೇರೆಲ್ಲ ದೇವರುಗಳಿಗಿಂತ ನಾವು ಜಾಸ್ತಿ ಪೂಜಿಸಬೇಕಾದುದ್ದು ಪ್ರಕೃತಿ ದೇವರನ್ನೇ, ದೇಗುಲಗಳಾದರೂ ಕೆಲವೊಂದು ಜಾತಿಗಳಿಗೆ, ಧರ್ಮಗಳಿಗೆ ಸೀಮಿತವಾಗಿ, ಇದು ನಮ್ಮ ಜಾತಿಯವರ ದೇವಸ್ಥಾನ ಎನ್ನುವ ರೂಢಿಯಲ್ಲಿ ಜಾತಿ ಮತಗಳಿಗೆ ಒಗ್ಗಿಕೊಂಡುಬಿಡುತ್ತದೆ. ಆದರೆ ಪ್ರಕೃತಿ ಅನ್ನೋ ದೇವಸ್ಥಾನ ಹಾಗಲ್ಲ, ಎಲ್ಲರನ್ನೂ ಪೊರೆಯುತ್ತದೆ, ಜೀವ ನೀಡುತ್ತದೆ. ಸಾಂತ್ವನ ಹೇಳುತ್ತದೆ, ದಕ್ಷಿಣೆ ಬೇಡುವ ದೇವಸ್ಥಾನವಲ್ಲವದು. ಯಾವ ಆಡಂಭರ, ಡಾಂಭಿಕ ಭಕ್ತಿ, ಮೂಢನಂಬಿಕೆ, ಅಸಹಜ ತೋರಿಕೆಯ ನಟನೆಗಳು ಈ ದೇವಸ್ಥಾನಕ್ಕೆ ಬೇಕಿಲ್ಲ. ಆದರೆ ಈ ದೇವಸ್ಥಾನಕ್ಕೆ ಬೇಕಾಗಿರುವುದು ತನ್ನ ಪಾಡಿಗೆ ತನ್ನನ್ನು ಬಿಟ್ಟು ಬಿಡುವ ಮನಸ್ಸುಗಳು. ಪ್ರಕೃತಿ ದೇವರು ಕಾಣಿಕೆ, ಹರಕೆ, ಬಲಿ, ದಾನ ಏನನ್ನೂ ಕೇಳುವುದಿಲ್ಲ.

“ನಾನು ನಿಮಗೆ ಎಲ್ಲವನ್ನೂ ಕೊಡುತ್ತೇನೆ ಮಕ್ಕಳೇ, ನೀವು ನಿಮ್ಮ ಗುಡಿಯ ದೇವರಿಗೆ ಕೊಟ್ಟ ಹಾಗೆ ನನಗೆ ಏನನ್ನೂ ಕೊಡುವುದು ಬೇಡ, ಆದರೆ ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ, ಗುಡಿ ಕಟ್ಟಿ ಬೇಕಾದರೆ, ಆದರೆ ನಾನೂ ಆ ಗುಡಿಗೆ ನೆರಳಾಗಿರುವೆ, ನಾನಿದ್ದಲ್ಲಿಯೇ ಜೀರ್ಣೋದ್ಧಾರ ಮಾಡಿ, ಆದರೆ ಅದನ್ನು ಉದ್ಧಾರ ಮಾಡಲು ಹೋಗಿ ನನ್ನನ್ನು ಜೀರ್ಣ ಮಾಡಬೇಡಿ. ನೀವು ಗುಡಿಯ ದೇವರ ಮೇಲಿಟ್ಟಿರುವ ನಂಬಿಕೆಯನ್ನು ನಾನೂ ಉಳಿಸುವೆ, ಆದರೆ ನನ್ನನ್ನು ನನ್ನ ಜಾಗದಲ್ಲಿಯೇ ಬದುಕಲು ಬಿಟ್ಟು ನೀವು ಪೂಜೆ, ಪುನಸ್ಕಾರ ಮಾಡಿ” ಎನ್ನುತ್ತದೆ ಪ್ರಕೃತಿ ದೇವರು.

ಇದು ಬರೀ ನಮ್ಮೂರಿನ ಕತೆಯಲ್ಲ. ಪ್ರತೀ ಊರಲ್ಲೂ ನರಳಿ ಸಾಯುವ ಪ್ರಕೃತಿ ದೇವರಿದ್ದಾರೆ. ನಮ್ಮ ಅತಿಯಾದ ಭಕ್ತಿಯ ಪರಾಕಾಷ್ಠೆಯಿಂದ, ಧಾರ್ಮಿಕತೆಯಲ್ಲೂ ದುಡ್ಡು ಮಾಡುವ ಆಸೆಯಿಂದ, ಜೀವನ್ಮುಖಿಯಾದ ನಿಸರ್ಗ ಮಾತೆ ಸತ್ತು ಅಲ್ಲೇ ತೋರಿಕೆಯ ದೇಗುಲವೊಂದು ಹುಟ್ಟುತ್ತಿದೆ.

ಇತ್ತೀಚೆಗೆ ನಮ್ಮೂರಿನ ಹಳ್ಳಿಯೊಂದರಲ್ಲಿ ನಾಗ ಕ್ಷೇತ್ರ ಪುನಃ ನಿರ್ಮಾಣ ಕಾರ್ಯಕ್ರಮವಿತ್ತು. ಕರಾವಳಿಯ ಬಹುತೇಕ ನಾಗಕ್ಷೇತ್ರಗಳು ದಟ್ಟವಾದ ಕಾಡಿನಲ್ಲೇ ಇರುತ್ತದೆಯಾದ್ದರಿಂದ ಕಾಡನ್ನು ನೋಡುವುದಕ್ಕಾದರೂ ಆ ಕಾರ್ಯಕ್ರಮಕ್ಕೆ ಹೋಗಬೇಕು ಎಂದುಕೊಂಡು ಹೊರಟರೆ, ಆ ಕ್ಷೇತ್ರದ ಚಿತ್ರಣ ನೋಡಿ ನಾನು ಕಂಗಾಲಾಗಿ ಹೋದೆ.

ಕೆಲವೇ ತಿಂಗಳುಗಳ ಹಿಂದೆ ಅಲ್ಲಿಗೆ ಹೋಗಿದ್ದಾಗ ಮೌನ, ತಂಪು, ಸ್ವಚ್ಚಂದತೆ, ನೆರಳು, ಅಲ್ಲಿ ಜೀವಾಶ್ರಯ ಪಡೆದಿರುವ ನೂರಾರು ಜಾತಿಯ ಹಕ್ಕಿಗಳನ್ನು ನೋಡಿ, “ದೇವರು ಅಂತ ಒಬ್ಬನಿದ್ದರೆ ಇಲ್ಲೇ ಇರಬೇಕು ಅಷ್ಟೇ” ಎನ್ನುವ ಧನ್ಯತೆ ಆವರಿಸಿತ್ತು. ಯಾವ ಅಸಹಜತೆ, ಆಡಂಭರ, ಗದ್ದಲ ಇಲ್ಲದ ಆ ತಾಣದಲ್ಲಿ ಬದುಕಿಗೆ ಬೇಕಾದದ್ದೆಲ್ಲವೂ ಇತ್ತು. ಅಲ್ಲೇ ಇರುವ ಹುತ್ತಕ್ಕೆ, ಪಕ್ಕದಲ್ಲಿರುವ ನಾಗನ ಕಲ್ಲಿಗೆ ಎಲ್ಲರೂ ನಮಿಸಿ ಹೋಗುತ್ತಿದ್ದರು. ಆದರೆ ಅಲ್ಲಿರುವ ಶಾಂತತೆಯನ್ನೆಲ್ಲಾ ಸಾಯಿಸಿ ಅಲ್ಲೊಂದು ನಾಗ ಕ್ಷೇತ್ರ ಮಾಡಬೇಕು, ಕಾಡಿನಲ್ಲೇ ವಾಸಿಸುವ ನಿಜವಾದ ನಾಗ ಹುತ್ತಬಿಟ್ಟು ಓಡಿದರೂ ತೊಂದರೆಯಿಲ್ಲ. ಕಾಡು ಕಡಿಯಬೇಕು ಅನ್ನೋ ಕಲ್ಪನೆ ಯಾವ ಪುಣ್ಯಾತ್ಮನಿಗೆ ಹೊಳೆಯಿತೋ ಗೊತ್ತಿಲ್ಲ. ನಾನು ಆ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಕಾಡು ಕಾಣಲಿಲ್ಲ, ಕಾಡನ್ನೇ ನಂಬಿಕೊಂಡಿದ್ದ ನಾಗನೂ ಇರಲಿಲ್ಲ. ಹುತ್ತವೂ ಕಾಣೆಯಾಗಿತ್ತು. ಬರೀ ನಾಗನ ಕಲ್ಲಿನ ಮೂರ್ತಿ ಅಷ್ಟೇ ಅಲ್ಲಿತ್ತು…

ಅಲ್ಲಿ ಸಹಜವಾಗಿದ್ದ ಮಣ್ಣನ್ನು ಕಾಂಕ್ರೀಟು ನಾಗನ ಕಟ್ಟೆ ಮಾಡಲಾಗಿತ್ತು. ಯಾವುದು ನಿಜವಾದ ದೇವರು, ಯಾವ ವಿಷಯಕ್ಕೆ ನಾವು ನಿಜವಾದ ಭಕ್ತಿ ತೋರಿಸಬೇಕು ಎನ್ನುವುದಕ್ಕೆ ಉತ್ತರ ಕಂಡುಕೊಳ್ಳಲಾಗದೇ ಈ ಕಾಲ ಸರಿದುಹೋಗುತ್ತಿದೆ ಎಂದು ಅತಿಯಾಗಿ ಅನ್ನಿಸುತ್ತಿದೆ. ಆ ಕಾಲದ ಜೊತೆಗೆ ಅನಾದಿ ಕಾಲದಿಂದ ನಮ್ಮನ್ನು ಪೊರೆದ ಕಾನನ ಅನ್ನೋ ದೇವರುಗಳನ್ನು ನಾವು ದಿನನಿತ್ಯ ಸಾಯಿಸುತ್ತಿದ್ದೇವೆ. ಅಯ್ಯೋ ಪ್ರಕೃತಿ ದೇವರೇ! ನಮ್ಮನ್ನು ಇಷ್ಟು ಕಾಲ ರಕ್ಷಿಸಿದ ನಿನ್ನನ್ನು ನಾವೀಗ ರಕ್ಷಿಸೋದು ಹೇಗೆ?