ಒಂಟಿ ಓಲೆ
ಬೇಡಿಕೊಂಡಿತು ದೇವರಲ್ಲಿ,
ಮುಂದೆ ಬರುವುದು
ತನ್ನ ತದ್ರೂಪಿಯಾಗಲೆಂದು,
ಅತ್ತ ಕಿವಿಯು
ತುಂಡಾದ ಓಲೆಯ
ನೆನೆದು ನಕ್ಕಿತ್ತು,
ಊರ ಜಾತ್ರೆಯಲಿ ಕಂಡ
ಝುಮುಕಿ, ಲೋಲಾಕು,
ಹರಳಿನ ಕುಡುಕು,
ಬೆಳ್ಳಿಯದೋ, ಚಿನ್ನದ್ದೋ,
ಗ್ಯಾರಂಟಿದಾ ಅಥವಾ ಗಿಲಿಟ್ಟಾ,
ತೇರಿಕೋಟಾ, ಯಾವುದಿರಲಿ,
ಮೊದಲಿನಂತೆ ರಿಂಗ್
ಕಿವಿಗೆ ಫಿಕ್ಸಾಗಿರದಿರಲಿ,
ಯಾರೋ ಒಂಟಿ ಓಲೆ ಎಳೆದರು,
ಕಿವಿಯು ಹರಿಯಿತು,
ಒಂಟಿಯೋಲೆಯ ಜಂಟಿ
ಬರಲೇ ಇಲ್ಲ,
ಇತ್ತ ಕಿವಿಯು ಹರಿದು,
ಇತ್ತ ಕಿವಿಯ ಕನಸು
ನನಸಾಗದೇ ಕಮರಿತು…
ಅಂಜನಾ ಗಾಂವ್ಕರ್ ಕುಮಟಾದಲ್ಲಿ ಶಿಕ್ಷಕ ತರಬೇತಿ ಮುಗಿಸಿ ಏಳು ವರ್ಷಗಳ ಕಾಲ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಹಿಂದಿ ಭಾಷೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ಈಗ ಯಲ್ಲಾಪುರದ ದಟ್ಟ ಅರಣ್ಯದ ನಡುವೆ ಪುಟ್ಟ ಮನೆ ಮಾಡಿದ ರೈತ ಮಹಿಳೆ. ಕತೆ ಬರೆಯೋದು ಇವರ ಹವ್ಯಾಸ.