ಸರಸ್ವತಿ ನದಿ ಕಣ್ಣಿಗೆ ಕಾಣಸಿಗುವುದು ಇಲ್ಲಿ ಮಾತ್ರ ಮತ್ತು ಶ್ವೇತಶುಭ್ರವಾಗಿ, ರಭಸದಲ್ಲಿ ಹರಿಯುತ್ತಿದ್ದಾಳೆ. ಜ್ಞಾನದಾಯಿನಿ ಸರಸ್ವತಿ ಮಾತೆಗಿಲ್ಲೊಂದು ಅಪರೂಪದ ಮಂದಿರವಿದೆ. ಅಲ್ಲೇ ಅದರೆದುರೇ ಕಾಣುವ ಒಂದು ಹೆಬ್ಬೆರಳು ಗಾತ್ರದ ನೀರಿನ ಝರಿಯು ಮಾನಸ ಸರೋವರದಿಂದ ಬರುತ್ತಿದೆ ಎಂದು ತೋರುತ್ತಾರೆ ಇಲ್ಲಿನ ಜನ. ಹಾಂ, ಇಲ್ಲಿನವರೇ ಹೇಳುವ ಇನ್ನೊಂದು ಕಥೆಯೆಂದರೆ, ಇಲ್ಲಿ ಸರಸ್ವತಿ ಹುಟ್ಟಿ, ಹೆಚ್ಚಿನ ಆರ್ಭಟದಿಂದ ಕುಣಿಕುಣಿದು ಹರಿಯುತ್ತಿದ್ದಳಂತೆ. ಮಹಾಭಾರತ ರಚನೆಯಲ್ಲಿ ಮಗ್ನರಾಗಿದ್ದ ವ್ಯಾಸರಿಗೆ ಇವಳ ಸದ್ದು ಕೋಪ ತರಿಸಿತಂತೆ. ಕಂಡಷ್ಟೂ ಪ್ರಪಂಚ ಅಂಕಣದಲ್ಲಿ ಅಂಜಲಿ ರಾಮಣ್ಣ ಅವರ ಪ್ರವಾಸ ಕಥನ.
ಇಲ್ಲಿಂದಲೇ ಪಾಂಡವರು ಸ್ವರ್ಗದೆಡೆಗೆ ಪಯಣ ಬೆಳೆಸಿದ್ದು ಅನ್ನೋ ಪ್ರತೀತಿ ಮಾತ್ರವಲ್ಲ ಹೆಜ್ಜೆ ಹೆಜ್ಜೆಗೂ ಪುರಾವೆಗಳಿವೆ ಇಲ್ಲಿ. ಸಮುದ್ರ ಮಟ್ಟದಿಂದ ಹತ್ತು ಸಾವಿರ ಅಡಿಗಳಷ್ಟು ಎತ್ತರದಲ್ಲಿರುವ ಈ ಹಳ್ಳಿಯಲ್ಲಿನ ಸಾಕ್ಷರತೆ ಶೇಕಡ 89. ಇಂಡೋ-ಮಂಗೋಲಿಯನ್ ಜನಾಂಗದವರಿರುವ ಇಲ್ಲಿನ ಜನಸಂಖ್ಯೆ ಒಂದಷ್ಟು ನೂರುಗಳು ಅಷ್ಟೆ.
ಬಹಳಷ್ಟು ಗಂಡಸರು ಕೇರಂ, ಚೌಕಾಬಾರ ಆಡುತ್ತಾ ಕಾಲದೂಡಿದರೆ ಹೆಂಗಸರು ಶಾಲು, ಕಾರ್ಪೆಟ್ಟುಗಳನ್ನು ನೇಯುತ್ತಾ, ಸಾಕುಪ್ರಾಣಿಗಳ ಪಾಲನೆಯಿಂದ ಕುಟುಂಬ ನಿರ್ವಹಣೆ ಮಾಡುತ್ತಾರೆ. ಭಾರತೀಯ ಸೇನೆಯವರು ಇಲ್ಲೊಂದು ಕೃಷಿ ಸಂಶೋಧನಾ ಕೇಂದ್ರವನ್ನು ಹೊಂದಿದ್ದು ಆಲೂಗೆಡ್ಡೆ ಮತ್ತು ಕೋಸು ತರಕಾರಿಗಳ ಕೃಷಿ ನಡೆಸಿದ್ದಾರೆ. ಅತೀ ದೊಡ್ಡ ನೆಟ್ವರ್ಕ್ ಹೊಂದಿದೆ ಎನ್ನಲಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯೂ ಇದೆ. ಒಂದು ಚಿಕ್ಕ ಪೋಸ್ಟ್ ಆಫೀಸ್ ಕೂಡ ಇಲ್ಲಿದೆ.
ಈ ಹಳ್ಳಿಯಿಂದ ಮುಂದೆ ಟಿಬೇಟಿನವರೆಗೂ ಅಂದರೆ ಸುಮಾರು 100 ಕಿಲೋಮೀಟರ್ಗಳಲ್ಲಿ ಜನಜೀವನ ಉಹುಂ ಬಿಲ್ಕುಲ್ ಇಲ್ಲ. ಅಲ್ಲಿರೋದು ಹಿಮಾಚ್ಛಾದಿತ ಪ್ರಪಾತ ಮಾತ್ರ. ಹಾಂ, ಇಲ್ಲಿ ಜೀವನ ನಡೆಯೋದು ವರ್ಷದಲ್ಲಿ 5 ತಿಂಗಳು ಮಾತ್ರ ಉಳಿದಂತೆ ಇಲ್ಲಿ ಇರಲಿಕ್ಕಾಗೋದು ಬರೀ ಹಿಮಕ್ಕೆ. ಯಾವುದೋ ಜಾದೂ ಜಾಗದಂತಹ ಭಾವ.
ವ್ಯಾಸಮುನಿ ಕುಳಿತು ಮಹಾಭಾರತದ ಮಾನಸ ಉಕ್ತಲೇಖನವನ್ನು ಸಾಕ್ಷಾತ್ ಗಣಪತಿಗೆ ನೀಡಿದರೆನ್ನುವ ವ್ಯಾಸ ಗುಹೆ, ಗಣೇಶ ವಿಧೇಯ ವಿದ್ಯಾರ್ಥಿಯಂತೆ ಕುಳಿತು
ಬರೆದುಕೊಂಡನೆನ್ನಲಾದ ಗಣೇಶ ಗುಹೆ ಎಲ್ಲವೂ ಇಲ್ಲಿದೆ. ಎರಡು ಗುಹೆಗಳ ನಡುವಿನ ಅಂತ ಸುಮಾರು ಒಂದು ಕಿಲೋಮೀಟರ್. ತುಟಿಯೆರಡು ಮಾಡದೆ ಧ್ವನಿಪೆಟ್ಟಿಗೆಗಳ ಅರಳಿಸದೆ ವ್ಯಾಸರು ನುಡಿದ ಮಹಾಭಾರತವನ್ನು ಆ ಭಾರದ ಮೈ ಹೊತ್ತು ಒಂದರೆ ಘಳಿಗೆಯೂ ಮೇಲೆಳದೆ ಆ ಗಣೇಶ ನಿಜಕ್ಕೂ ಬರೆದುಕೊಂಡನೇ ಅನ್ನುವ ಅನುಮಾನ ಒಂದು ಕ್ಷಣ ನನ್ನ ಕಾಡಿದ್ದು ಸತ್ಯ. ಆದರೆ ಈ ಜಾಗವನ್ನು ಮನಸ್ಸಿನ ದೃಷ್ಟಿಯಿಂದ ನೋಡಿಬಂದರೆ ಮಾತ್ರವಲ್ಲ ವಿಜ್ಞಾನದೊಂದಿಗೆ ತಾಳೆ ಹಾಕಿದರೂ ಪುರಾಣಗಳನ್ನು ನಂಬದಿರಲು ಸಾಧ್ಯವೇಯಿಲ್ಲ ಎನ್ನಿಸುತ್ತದೆ. ವ್ಯಾಸ ಗುಹೆಯು ತಾಳೆಗರಿಗಳಿಂದ ಮಾಡಿದ ಗ್ರಂಥದ ಹಾಗೆ ಪದರಪದರಗಳಿಂದಾದ ಏಕಬಂಡೆಯ ಗುಹೆಯಾಗಿದ್ದರೆ, ಗಣೇಶನ ಗುಹೆಯು ಅವನಂತೆಯೇ ತೊಣಪ ಮತ್ತು ಬಲು ಮುದ್ದಾಗಿ ಕಾಣುತ್ತದೆ.
ವೇದಗಳಲ್ಲಿ ಅತೀ ಪ್ರಾಚೀನವಾದ ಋಗ್ವೇದದಲ್ಲಿ 99 ಬಾರಿ ಉಲ್ಲೇಖಗೊಂಡು ಅಂಬೀತಮೆ, ನದೀತಮೆ, ದೇವತಮೆ ಎಂದೆಲ್ಲ ಹೊಗಳಿಸಿಕೊಳ್ಳುವ ಸರಸ್ವತಿ ನದಿ ಉಗಮವಾಗುವುದು ಇಲ್ಲೇ ಎನ್ನುವ ನಂಬಿಕೆ. ನಮ್ಮ ಬಾಗಮಂಡಲದಂತೆ ಇಲ್ಲೇನೂ ಉಗಮಸ್ಥಾನ ಕಾಣಿವುದಿಲ್ಲ. ಆದರೆ ಬಡಬಾಗ್ನಿಯನ್ನು ಒಡಲಿನಲ್ಲಿ ಇಟ್ಟುಕೊಂಡಿದ್ದಕ್ಕಾಗಿ ಗುಟ್ಟಾಗಿ ಉಳಿಯಬೇಕಾಗಿ ಬಂದ ಸರಸ್ವತಿ ನದಿ ಕಣ್ಣಿಗೆ ಕಾಣಸಿಗುವುದು ಇಲ್ಲಿ ಮಾತ್ರ ಮತ್ತು ಶ್ವೇತಶುಭ್ರವಾಗಿ, ರಭಸದಲ್ಲಿ ಹರಿಯುತ್ತಿದ್ದಾಳೆ. ಜ್ಞಾನದಾಯಿನಿ ಸರಸ್ವತಿ ಮಾತೆಗಿಲ್ಲೊಂದು ಅಪರೂಪದ ಮಂದಿರವಿದೆ. ಅಲ್ಲೇ ಅದರೆದುರೇ ಒಂದು ಹೆಬ್ಬೆರಳು ಗಾತ್ರದ ನೀರಿನ ಝರಿಯನ್ನು ಮಾನಸ ಸರೋವರದಿಂದ ಬರುವುದಾಗಿ ತೋರುತ್ತಾರೆ ಇಲ್ಲಿನ ಜನ. ಹಾಂ, ಇಲ್ಲಿನವರೇ ಹೇಳುವ ಇನ್ನೊಂದು ಕಥೆಯೊಂದರೆ ಇಲ್ಲಿ ಸರಸ್ವತಿ ಹುಟ್ಟಿ, ಹೆಚ್ಚಿನ ಆರ್ಭಟದಿಂದ ಕುಣಿಕುಣಿದು ಹರಿಯುತ್ತಿದ್ದಳಂತೆ. ಮಹಾಭಾರತದ ರಚನೆಯಲ್ಲಿ ಮಗ್ನರಾಗಿದ್ದ ವ್ಯಾಸರಿಗೆ ಇವಳ ಸದ್ದು ಕೋಪ ತರಿಸಿತಂತೆ. ಅದಕ್ಕೇ “ಹೇ, ಸರಸ್ವತಿ ನೀನು ಗುಪ್ತಗಾಮಿನಿಯಾಗಿ ಬಿಡು” ಎನ್ನುವ ಶಾಪ ಕೊಟ್ಟರಂತೆ. ಹೀಗೆ ಶಾಪಗ್ರಸ್ತಳಾದ ನದಿ ಅಲ್ಲೇ ಒಂದಷ್ಟು ಅಡಿಗಳ ದೂರದಲ್ಲಿ ಅಲಕಾನಂದಳ ಜೊತೆ ಸೇರಿ ಮೌನದಲ್ಲೇ ಹರಿಯುತ್ತಾಳೆ ಮುಂದೆ ಮುಂದೆ. ಕಾರಣವೇನೇ ಇದ್ದರೂ ಸರಸ್ವತಿ ಎಂದೂ ಗುಪ್ತಗಾಮಿನಿ ಎನ್ನುವುದು ಎಷ್ಟೊಂದು ಅರ್ಥಬದ್ಧ ಎನ್ನಿಸಿತು.
ಇಲ್ಲಿಂದ ಸ್ವಲ್ಪ ಎಡಕ್ಕೆ ತಿರುಗಿದರೆ ಹತ್ತಿರ ಹತ್ತಿರ 150 ಮೀಟರ್ ಎತ್ತರದಿಂದ ಧುಮುಕುವ ವಸುಂಧರಾ ಜಲಪಾತ. ಪಾಂಡವರು ಇಲ್ಲಿ ಸ್ನಾನ ಮಾಡಿದ್ದರು ಎನ್ನುವ ನಂಬಿಕೆಯನ್ನು ಅಂಟಿಸಿಕೊಂಡು ಎಷ್ಟು ಮನಮೋಹಕವಾಗಿದ್ದಾಳೆ ಪ್ರಕೃತಿ ಇಲ್ಲಿ. ಈಗ ‘ ಸತೋಪಂಥ್ ‘ ಎಂದು ಕರೆಯಲ್ಪಡುವ ಇಲ್ಲಿನ ಮಾರ್ಗದಿಂದ ಸ್ವರ್ಗೆದೆಡೆಗೆ ಹೊರಟ ಪಾಂಡವರು ಇಲ್ಲಿ ಬಂದಾಗ ಭೋರ್ಗೆರೆವ ಸರಸ್ವತಿ ನದಿಯನ್ನು ದಾಟಲು ತ್ರಾಸು ಪಡುತ್ತಿದ್ದ ದ್ರೌಪದಿಗಾಗಿ ಭೀಮ ತನ್ನ ಗಾತ್ರದ್ದೇ ಬಂಡೆಯೊಂದನ್ನು ಸೇತುವೆಯಂತೆ ಹಾಕಿರುವುದು ಭೀಮ್ ಶಿಲಾ ಎಂದು ಗುರುತಾಗಿಸಿಕೊಂಡಿದೆ. ಈ ಭೀಮನ ಸೇತುವೆಯಿಂದ ಸರಸ್ವತಿಯನ್ನು ದಾಟಿದ ಕೂಡಲೆ ದ್ರೌಪದಿ ಪ್ರಾಣತ್ಯಾಗ ಮಾಡುತ್ತಾಳೆ ಎಂದಿದೆ ಮಹಾಭಾರತ.
ಇವುಗಳ ಆಸು ಪಾಸಿನಲ್ಲಿ ಇನ್ನೆರಡು ಸಣ್ಣ ಗುಹೆಗಳ ಕಂಡು ಕುತೂಹಲ ತಾಳದೆ ಬಗ್ಗಿ ನೋಡಿದೆ. ಒಳಗೆ ಹಠಯೋಗಿಯೊಬ್ಬರು ಅದೇನನ್ನೋ ಗುಟುರಿಸುತ್ತಾ ಹೊಗೆಯುಗುಳುತ್ತಾ ಕುಳಿತಿದ್ದರು. ಬೆತ್ತಲೆ ಮೈಗೆಲ್ಲಾ ವಿಭೂತಿ ಬಳಿದುಕೊಂಡು ಅರೆ ನಿಮೀಲಿತ ನೋಟ ಅದೆಲ್ಲೋ ನೆಟ್ಟು ಅನೂಹ್ಯ ಆನಂದ ಅನುಭವಿಸುತ್ತಿರುವಂತೆ ಮುಖಭಾವ ಮಾಡಿದ್ದ ಅವರ ಪಕ್ಕದಲ್ಲೊಂದು ದಷ್ಟಪುಷ್ಟವಾಗಿದ್ದ ತೋಳದ ಗಾತ್ರದ ಕಪ್ಪು ನಾಯಿ ಕೂತಿತ್ತು. ಸಾಧು ಮಹಾರಾಜರು ಇಹಲೋಕಕ್ಕೆ ಮರಳುವುದನ್ನೇ ಕಾಯುತ್ತಾ ಅಲ್ಲೇ ಕುಳಿತೆ.
ಇರುವಿಕೆಯ ಅರಿವಿಗೆ ಬಂದ ಸಾಧುಗಳು ನನ್ನ ನೋಡಿ ನಕ್ಕರು. ಕೇಳಿಯೇ ಬಿಟ್ಟೆ ಅವರ ವಿವರ. ತಿಳಿದದ್ದು ಇಷ್ಟು ‘ ಮಾನ ‘ ದ ಜನ ಇಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಅಕ್ಟೋಬರ್ನಿಂದ ಮಾರ್ಚ್ ಏಫ್ರಿಲ್ವರೆಗೂ ಅಲ್ಲಿಂದ ನೂರು ಕಿಲೋಮೀಟರ್ಗಳಷ್ಟು ದೂರದಲ್ಲಿರುವ ಚಮೋಲಿ ಅನ್ನುವ ಜಾಗಕ್ಕೆ ಹೋಗಿ ವಾಸ ಮಾಡುತ್ತಾರೆ. ಆಗಲೂ ಸಹ ಇವರು ಮಾತ್ರ ತಮ್ಮ ನಾಯಿಯೊಂದಿಗೆ ಇಲ್ಲೇ ಠಿಕಾಣಿ ಹೂಡಿರುತ್ತಾರೆ.
ಅಂದರೆ ಮಳೆ ಇರಲಿ ಮಂಜು ಬರಲಿ ಇವರ ಜೀವನ ಇಲ್ಲಿಯೇ ಜೊತೆ ಜೊತೆಗೆ. ಓಹ್, ಅಲ್ಲಿನ ಭೂಗೋಳ ನೋಡಿದರೆ ” ಇದು ಸಾಧ್ಯವೇ ” ಎನ್ನುವ ಪ್ರಶ್ನೆ ಮೂಡುವುದು ಸಹಜ. ಒಡನೆಯೇ ಅನ್ನಿಸುತ್ತೆ ಈ ದೇವಭೂಮಿಯಲ್ಲಿ ಅಸಾಧ್ಯವಾದದ್ದು ಏನು ತಾನೇ ಇದ್ದೀತು ?
ಗುಹೆಯಿಂದ ಹೊರಬಂದೊಡನೆ ತನ್ನ ಬೆನ್ನ ಮೇಲೆ ಮಣಭಾರದ ಒಣ ಹುಲ್ಲಿನ ರಾಶಿ ಹೊತ್ತ ಒಂದಿಬ್ಬರು ಹೆಂಗಸರ ಕಂಡೆ. ಮಾತನಾಡಿಸೋಣ ಅಂತ ಹತ್ತಿರ ಹೋದಷ್ಟೂ ಅವರು ದೂರ ದೂರ. ಅವರಿಗೆ ಏನೋ ಸಿಟ್ಟು ಸೆಡವು. ಪಹಾಡಿ ಜನರ ಚರ್ಮದ ಪ್ರತೀ ಸುಕ್ಕು ಹೇಳುತ್ತೆ ವಿಭಿನ್ನ ಕಥೆಯೊಂದನ್ನು. ಹೀಗೆ ಯೋಚಿಸುತ್ತಲೇ ಮುಂದಡಿಯಿಟ್ಟಾಗ ” ದೀದಿ ಲೇಲೋನ ” ಅನ್ನೋ ಸ್ವರಕ್ಕೆ ಹಿಂತಿರುಗಿ ನೋಡಿದರೆ ಯಾಕ್ ಉಲ್ಲನ್ನಿನಲ್ಲಿ ಮಾಡಿದ ಕುಲಾವಿಯೊಂದನ್ನು ಹಿಡಿದು ನಿಂತಿದ್ದ ಯುವತಿ ಮುಂದೆ ಬಂದಳು. ಮಾತು ಬೆಳೆಸಿದಾಗ ತಿಳಿದದ್ದು ಆಕೆ ಬಿ.ಎ ಓದಿಕೊಂಡಿದ್ದ 21ರ ಹರೆಯದ ರಂಜನ ಎಂದು. ಹೇಳುತ್ತಾ ಹೋದಳು ‘ ಮಾನ ‘ ಹಳ್ಳಿಯ ಮೂಲ ಹೆಸರು ಮಣಿಭದ್ರ ಪುರ. ಗಂಡಸರ ಸೋಮಾರಿತನದಿಂದ ಬೇಸತ್ತ ಕಷ್ಟ ಜೀವಿ ಹೆಣ್ಣುಮಕ್ಕಳು ಇಲ್ಲಿನವರು. ಅದಕ್ಕೆ ಪ್ರವಾಸಿಗರು ಫೋಟೋ ತೆಗೆದರೆ, ಮಾತನಾಡಿಸಲು ಮುಂದಾದರೆ ಅವರಿಗೆ ಗೋಳು ಭಾವನೆ. ಆಮ್ಲಜನಕದ ಕೊರತೆಯಿಂದಾಗಿ ಹತ್ತು ಹೆಜ್ಜೆ ನಡೆದರೇ ಉಸಿರು ಬತ್ತಿದಂತಾಗುವ ಇಲ್ಲಿ ನಡೆಯಲು ಕಷ್ಟ ಪಡುವವರನ್ನು ಹೊತ್ತು ಊರು ಸುತ್ತಿಸಲು ಕೆಲವರು ‘ ಪಿಟ್ಟ್ಲಾ ‘ ಎನ್ನುವ ಬೆನ್ನು ಬುಟ್ಟಿಯನ್ನು ಇಟ್ಟುಕೊಂಡಿದ್ದಾರೆ. ಒಂದಿಷ್ಟು ರೂಪಾಯಿಗಳಿಗೆ ಆ ಸೌಲಭ್ಯವೂ ಲಭ್ಯ. ಗುಡ್ಡಗಾಡು ಜನರು ಸಹಜವಾಗಿಯೇ ಶ್ರಮಜೀವಿಗಳು. ಮೃದು ಸ್ವಭಾವದವರು. ಸ್ನೇಹಕ್ಕೂ ಸಂಕೋಚ ಪಡುವಷ್ಟು ಸರಳ ಜೀವಿಗಳು.
ಮುಂದುವರೆದ ಮಾತಿನೊಂದಿಗೆ ರಂಜನ ನನ್ನನ್ನು ಚಹ ಅಂಗಡಿಯೊಂದಕ್ಕೆ ಕರೆದೊಯ್ದಳು. ತಲೆ ಎತ್ತಿ ನೋಡಿದಾಗ ಕಂಡ ಫಲಕ ” ಭಾರತದ ಕಟ್ಟ ಕಡೆಯ ಚಹಾ ದುಕಾನು “. ಅಂಗಡಿಯ ಮಾಲೀಕನೊಂದಿಗೆ ನನ್ನ ಮಾತು. 12 ವರ್ಷದ ಹುಡುಗ ಕುಟುಂಬ ನಿರ್ವಹಣೆಗಾಗಿ ಇದೇ ಜಾಗದಲ್ಲಿ ತನ್ನ ತಾಯಿ ಮಾಡಿಕೊಟ್ಟ ಚಹಾವನ್ನು ಕೆಟಲ್ನಲ್ಲಿ ಇಟ್ಟುಕೊಂಡು ಸೈನಿಕರಿಗೆ, ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ಭಕ್ತಾದಿಗಳಿಗೆ ಮತ್ತು ಟ್ರೆಕ್ಕಿಂಗ್ ಹೋಗಲು ಬರುತ್ತಿದ್ದ ವಿದೇಶಿಯರಿಗೆ ಮಾರಾಟ ಮಾಡುತ್ತಿದ್ದ. ಇಂದು ಒಂದಷ್ಟು ಅಡಿಗಳ ಜಾಗದ ಮಾಲೀಕನಾಗಿದ್ದ. ಅಲ್ಲಿಯೇ ಚಹಾ ಮತ್ತು ಸಣ್ಣ ತಿನಿಸುಗಳ ಅಂಗಡಿ ಇಟ್ಟುಕೊಂಡು ಸಂತೃಪ್ತನಾಗಿದ್ದವನ ಹರೆಯ ಈಗ 50 ವರ್ಷಗಳು. ಆ ದುಕಾನು ದಾಟಿದರೆ ಮತ್ತೇನೂ ಇಲ್ಲ. ಅಲ್ಲೊಂದು ನಿಜದ ಶೂನ್ಯ. ಸುಂದರವೆನಿಸೋ ಶಾಂತಿ. ಇನ್ನೂ ಬೇಕೆನಿಸುವ ನಿರುಮ್ಮಳತೆ.
ಕೊನೆಬಾಗಿಲಿನವರೆಗೂ ಜೊತೆಯಾಗಿದ್ದ ರಂಜನಾಳಿಂದ ಬಿಳಿ ಉಣ್ಣೆಯ ಕ್ಕುಲಾವಿಯೊಂದನ್ನು ಖರೀದಿಸಿ, ಫೋಟೊ ತೆಗೆಸಿಕೊಳ್ಳೂವ ಗೀಳು ಹಿಡಿಸಿಕೊಂಡಿದ್ದ ಚೌಹಾಣ್‍ನ ಪಟ ಸೆರೆಹಿಡಿಯುತ್ತಾ ಅಲ್ಲಿಂದ ಹೊರಟಿದ್ದಾಯ್ತು. ಅದೇನೇ ಇದ್ದರೂ ಬದರಿನಾಥಕ್ಕೆ ಹೋದಾಗ ‘ ಮಾನ’ ನೋಡಿ ಬರದಿದ್ದರೆ ನಿಜಕ್ಕೂ ಮೆಚ್ಚನಾ ಬದರಿನಾರಾಯಣ.
ಅಂಜಲಿ ರಾಮಣ್ಣ ಲೇಖಕಿ, ಕವಯಿತ್ರಿ, ಅಂಕಣಗಾರ್ತಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ. ‘ರಶೀತಿಗಳು – ಮನಸ್ಸು ಕೇಳಿ ಪಡೆದದ್ದು’, ‘ಜೀನ್ಸ್ ಟಾಕ್’ ಇವರ ಲಲಿತ ಪ್ರಬಂಧಗಳ ಸಂಕಲನ.
ವಾಹ್!!! ಎಂಥಹ ಬರವಣಿಗೆ, ಪ್ರವಾಸ ಕಥನದಲ್ಲಿ ಸಂದೇಶಗಳನ್ನು ತುಂಬಿಸಿ ಬರೆಯುವವರು ಬಹಳ ಕಡಿಮೆ, ನೀವು ಅದನ್ನು ಅದ್ಭುತವಾಗಿ ಬರೆಯುತ್ತೀರಿ, ಓದುಗರನ್ನು *ಮಾನಾ* ಕ್ಕೆ ಒಮ್ಮೆ ಹೋಗಬೇಕು, ಹೋಗಲೇಬೇಕು ಎಂದು ಅನ್ನಿಸುವಂತೆ ಮಾಡಿತು ನಿಮ್ಮ ಲೇಖನ. ಸಾಧುವಿನ ಮುಖಭಾವವನ್ನು ಅಳೆದದ್ದು ಗ್ರೇಟ್. ಕಥನ / ಲೇಖನ ಮಾಹಿತಿಯೊಂದಿಗೆ ಕುತೂಹಲವಾಗಿತ್ತು, ಸೂಪರ್. *ವ್ಯಾಸ ಗುಹೆ ಮತ್ತು ಗಣೇಶ ಗುಹೆ* ಯ ಮಾಹಿತಿ ತುಂಬಾ ಚೆನ್ನಾಗಿದೆ ??
ಧನ್ಯವಾದಗಳು
Excellent article. ಪ್ರವಾಸ ಕಥನವನ್ನು ಹೇಗೆ ಬರೆಯಬೇಕು ಎನ್ನುವುದಕ್ಕೆ ಈ ಲೆರಖನ ಮಾದರಿ. ಅಲ್ಲಲ್ಲಿ ಅಬ್ದುಲ್ ರಶೀದವರ ಶೈಲಿ ನೆನಪಾಗುತ್ತದೆ.
ಧನ್ಯವಾದಗಳು
ನೀವು ಈ ಹಿಂದೆ ಬರೆದಿದ್ದ ಕೇದಾರನಾಥ್ ಪ್ರವಾಸ ಮತ್ತು ಈ ಲೇಖನದಲ್ಲಿ ಬರೆದಿರುವ ಮಾನ ಹಳ್ಳಿ ಮತ್ತು ಸರಸ್ವತಿ ನದಿ ಬಗ್ಗೆ ಓದಿ ಪುಳಕವಾಯ್ತು. ನಾನು ೧೯೯೦ ರ ದಶಕದಲ್ಲಿ ಎರಡು ಬಾರಿ ಮಾಡಿದ ದೀರ್ಘ ಹಿಮಾಲಯ ಪ್ರವಾಸಗಳು ನೆನಪುಪಾದವು. ಆಗ ನೋಡಿದ್ದ ಸರಸ್ವತಿ ನದಿಯ ಶುಭ್ರತೆ ಮನತಾಗಿತ್ತು, ಅಚ್ಚಳಿಯದೆ ಉಳಿದಿತ್ತು. ಆಗ ತೆಗೆದಿದ್ದ ಫೋಟೋಗಳು ಎಲ್ಲಿವೆಯೋ ಹುಡುಕಬೇಕು. ಆದರೆ ನಿಮ್ಮ ವಿಶಿಷ್ಟ ಅನುಭವ, ಅನಿಸಿಕೆ, ಆಲೋಚನೆಗಳನ್ನು ಓದಿದ್ದು, ಸರಸ್ವತಿಯ ಸೊಗಸಾದ ಫೋಟೋ ನೋಡಿದ್ದು ಬಲು ಖುಷಿಯಾಯ್ತು!
ವಿನತೆ ಶರ್ಮ
ಧನ್ಯವಾದಗಳು