ಕಣ್ಣು ಹಚ್ಚುವುದೆಂದರೆ
ಇವಳ
ಲೋಕದಲ್ಲಿ ಕನಸುಗಳ
ಕರೆಯುವುದು ಎಂದರ್ಥ
ಎಷ್ಟೊಂದು ಕನಸುಗಳು!
ನದೀತಟದ ಕನಸು
ಮಾಯಾವಿ ತುಟಿಯ ಕನಸು
ಅಂಗೈ ಗೆರೆಯ ಕನಸು
ಮುಂದಲೆ ನೇವರಿಸಿದ ಕನಸು
ಕತ್ತಲಾಚೆಯ ಕನಸು
ಕೈತುತ್ತಿನ ಕನಸು
ಹೂಹೊತ್ತ ಮರದ ಕನಸು…
ಹುಚ್ಚು ಹೊಳೆಯ ಮಟ್ಟ
ಈ ಲೋಕದಲ್ಲಿ
ಗದ್ದಲವೆಬ್ಬಿಸುತ್ತಿದೆ
ಘಳಿಗೆಗೊಮ್ಮೆ
ಏರಿಳಿವ ಎದೆಗೆ
ಸಾಂತ್ವನದ ಪರದೆ
ಬಿಡಲಾಗಿದೆ
ನಿನ್ನೆಗಳ ಕಣ್ಣ ತುಂಬಾ
ಹೊದ್ದವಳು
ಇವಳು
ಇವಳ ಪಾಲಿನ ನಾಳೆ
ಅವನ ಮೆದುನುಡಿಯ
ಮಡಿಲು
ಈ ಹಗಲು ಕೆರೆ ದಿಕ್ಕಿಗೆ
ಮಳೆಬಿಲ್ಲು
ಕಟ್ಟಬಹುದೇ?
ನೆರೆ ನುಗ್ಗಿದರೆ
ಈ ಬೇಲಿ
ಮುರಿಯಬಹುದೇ?
ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿ ಬೆಳೆಗಾರ್ತಿ ಮತ್ತು ಕೃಷಿ ಮಹಿಳೆ. ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.
ಪದ್ಯ ಚೆನ್ನಾಗಿದೆ.
ಅದರಲ್ಲು ಕವಿತೆಯ ಗಹನವಾದ ಸಾಲುಗಳಿವು..
“ಹುಚ್ಚು ಹೊಳೆಯ ಮಟ್ಟ
ಈ ಲೋಕದಲ್ಲಿ
ಗದ್ದಲವೆಬ್ಬಿಸುತ್ತಿದೆ
ಘಳಿಗೆಗೊಮ್ಮೆ
ಏರಿಳಿವ ಎದೆಗೆ
ಸಾಂತ್ವನದ ಪರದೆ
ಬಿಡಲಾಗಿದೆ”
ಅಭಿನಂದನೆಗಳು ನಂದಿನಿ ಹೆದ್ದುರ್ಗ ಅವರಿಗೆ
Waaaaaaa….
ಏರಿಳಿವ ಎದೆಗೆ ಸಾಂತ್ವನದ ಪರದೆ.. 👌