ಮನುಷ್ಯ ಭೂತ ಮತ್ತು ಭವಿಷ್ಯದ ಸಂಗತಿಗಳ ನಡುವೆ ಪಕ್ವವಾಗುವ ವರ್ತಮಾನದ ಹಾದಿಯಲ್ಲಿ ಸಾಗಬೇಕಾಗಿರುವುದು. ಕಾಲದ ಸಮಗ್ರತೆಯಲ್ಲಿ ಮನುಷ್ಯನ ಅರ್ಥವಾಗಿಯೂ ಅರ್ಥವಾಗದ ಸ್ವಭಾವಗಳು, ಕ್ಲೀಷೆಯೆನಿಸುವ ವ್ಯಕ್ತಿತ್ವಗಳನ್ನು ಅರ್ಥೈಸಿಕೊಳ್ಳುವುದು ಕೆಲವೊಮ್ಮೆ ಸುಲಭ, ಇನ್ನು ಕೆಲವೊಮ್ಮೆ ಅಷ್ಟೇ ಕಷ್ಟಕರವೂ ಆಗಿ ಪರಿಣಮಿಸುತ್ತದೆ. ಘಟಿಸಿಹೋದ ಸಂಗತಿಗಳಿಂದ ಕಲಿತ ಚಿಕ್ಕ ಪುಟ್ಟ ಅನುಭವಗಳು, ವಿಚಾರಗಳು ನಮ್ಮ ಭವಿಷ್ಯದ ನೆಲೆಯಲ್ಲಿ ವರ್ತಮಾನದ ವರ್ತನೆಗಳನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದು ಅಷ್ಟೇ ಗಮನಾರ್ಹ. ಇನ್ನು ಪ್ರತಿ ಸಂಗತಿಯೊಂದಿಗೂ ಅಗೋಚರ ಎನ್ನುವಂತೆ ತಳಕು ಹಾಕಿಕೊಂಡಿರುವ ವಿರೋಧಾಭಾಸದ ಚಹರೆಗಳನ್ನು ಗುರುತಿಸುವುದು ಎಷ್ಟು ಆಭಾಸವೋ, ಅಷ್ಟೇ ಸಾಂದರ್ಭಿಕವೂ, ಅನಿವಾರ್ಯವೂ ಆಗುವಂತದ್ದು.
ವಿವೇಕ ಶಾನಭಾಗ ಬರೆದ “ಸಕೀನಾಳ ಮುತ್ತು” ಕಾದಂಬರಿಯ ಕುರಿತು ನಾಗರೇಖಾ ಗಾಂವಕರ ಬರಹ
“ಕಾಕತಾಳೀಯವೆಂಬುದಿಲ್ಲ. ಕೆಲವು ಘಟನೆಗಳ ಹಿಂದಿನ ಸಂಬಂಧ ಸೂತ್ರಗಳು ನಮಗೆ ಗೋಚರಿಸುವುದಿಲ್ಲ ಅಷ್ಟೇ” ಇದು ಕಾದಂಬರಿಯ ಮೊದಲ ಸಾಲು. ಇಡೀ ಕಾದಂಬರಿ ಅರಳಿದ್ದು ಇದೇ ಸಿದ್ಧಾಂತದ ಮೇಲೆಯೇ ಎಂಬುದು ಕಾದಂಬರಿ ಓದಿದ ಮೇಲಿನ ಅಭಿಪ್ರಾಯ.
ಕೌಂಟ್ ಲಿಯೋ ಟಾಲ್ಸಟಾಯ್ ತನ್ನ “ಅನ್ನಾ ಕರೆನಿನಾ”ದ ಮೊದಲ ಸಾಲನ್ನು ಹೀಗೇ ಬಳಸಿದ್ದಾರೆ. ಕಾದಂಬರಿಯ ಒಟ್ಟೂ ಆಶಯ ಆ ಸಾಲಲ್ಲೇ ಅಡಗಿದೆ. “Happy families are all alike: every unhappy family is unhappy in its own way”. ಇದು ಕಾದಂಬರಿ ಹೇಳ ಹೊರಟ ಕೌಟುಂಬಿಕ ಸತ್ವವನ್ನು ಎರಡೇ ವಾಕ್ಯಗಳಲ್ಲಿ ಹಿಡಿದಿಟ್ಟ ಅಪೂರ್ವ ನುಡಿ.
ಮನುಷ್ಯ ಭೂತ ಮತ್ತು ಭವಿಷ್ಯದ ಸಂಗತಿಗಳ ನಡುವೆ ಪಕ್ವವಾಗುವ ವರ್ತಮಾನದ ಹಾದಿಯಲ್ಲಿ ಸಾಗಬೇಕಾಗಿರುವುದು. ಕಾಲದ ಸಮಗ್ರತೆಯಲ್ಲಿ ಮನುಷ್ಯನ ಅರ್ಥವಾಗಿಯೂ ಅರ್ಥವಾಗದ ಸ್ವಭಾವಗಳು, ಕ್ಲೀಷೆಯೆನಿಸುವ ವ್ಯಕ್ತಿತ್ವಗಳನ್ನು ಅರ್ಥೈಸಿಕೊಳ್ಳುವುದು ಕೆಲವೊಮ್ಮೆ ಸುಲಭ, ಇನ್ನು ಕೆಲವೊಮ್ಮೆ ಅಷ್ಟೇ ಕಷ್ಟಕರವೂ ಆಗಿ ಪರಿಣಮಿಸುತ್ತದೆ. ಘಟಿಸಿಹೋದ ಸಂಗತಿಗಳಿಂದ ಕಲಿತ ಚಿಕ್ಕ ಪುಟ್ಟ ಅನುಭವಗಳು, ವಿಚಾರಗಳು ನಮ್ಮ ಭವಿಷ್ಯದ ನೆಲೆಯಲ್ಲಿ ವರ್ತಮಾನದ ವರ್ತನೆಗಳನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದು ಅಷ್ಟೇ ಗಮನಾರ್ಹ. ಇನ್ನು ಪ್ರತಿ ಸಂಗತಿಯೊಂದಿಗೂ ಅಗೋಚರ ಎನ್ನುವಂತೆ ತಳಕು ಹಾಕಿಕೊಂಡಿರುವ ವಿರೋಧಾಭಾಸದ ಚಹರೆಗಳನ್ನು ಗುರುತಿಸುವುದು ಎಷ್ಟು ಆಭಾಸವೋ, ಅಷ್ಟೇ ಸಾಂದರ್ಭಿಕವೂ, ಅನಿವಾರ್ಯವೂ ಆಗುವಂತದ್ದು.
“ಸಕೀನಾಳ ಮುತ್ತು” ಮನದಲ್ಲೆಬ್ಬಿಸುವ ವಿಶೇಷ ಚಿಂತನೆ ಅಸ್ತಿತ್ವದ ಕುರಿತಾದದ್ದು. ಗಂಟುಗಂಟಾದ ಸಿಕ್ಕುಗಳ ಹೊದ್ದ, ಭಿನ್ನ ವಿಭಿನ್ನ ನಿಗೂಢ ಎನಿಸುವ ಮನೋ ಚಹರೆಗಳು ಇಲ್ಲಿ ಮಾತನಾಡುತ್ತವೆ. ‘ಸಾವಿನಂದ ಮುಕ್ತಿ” ಎನ್ನುವ ಪದವೊಂದು ಕೋರೆ ಬರವಣಿಗೆಯ ಕಾರಣ ‘ಸಕೀನಾಳ ಮುತ್ತುʼ ಎಂಬಂತಾಗಿ, ಮನೆ ಮಂದಿಯೇ ಗುರುತು ಹತ್ತದಂತೆ ಬರೆದ ಕೈ ಬರೆಹವನ್ನು ಗುರುತಿಸುವಲ್ಲೇ ವಿಫಲವಾಗುವುದು, ವ್ಯಕ್ತಿತ್ವ ಅಳೆಯುವಲ್ಲಿ ಸೋಲುವ ಕಾರಣದಿಂದ. ಮನುಷ್ಯ ವ್ಯಕ್ತಿತ್ವದಲ್ಲಿನ ನಿಗೂಢತೆಗೆ ಮಾನದಂಡವಾಗಿ ಈ ಸಂದರ್ಭ ಅಮೋಘವಾಗಿದೆ. ಬದುಕಿನ ಹತ್ತಾರು ದರ್ಶನಗಳನ್ನು ನಿರೂಪಿಸುತ್ತಾ, ಸರಳ ನಿರೂಪಣೆಯಲ್ಲಿ ಸಂಕೀರ್ಣ ಕಥನವೊಂದು ಬೆಳಗಿದೆ. ನಾಯಕ ವೆಂಕಟರಮಣನ ಹೆಸರೇ ಅಪಭ್ರಂಶಗೊಂಡು ವೆಂಕಟ್ ಆಗಿ, ವೆಂಕಿಯಾಗಿ, ವೆಂಕಟ್ ರಾಮನ್ ಆಗಿ ಇನ್ನೇನೋ ಆಗಿ ಹೋಗಬಹುದಾದ ಸಂಘರ್ಷದ ಸಂದರ್ಭವಿದು. ಆಧುನಿಕ ಬದುಕಿನಲ್ಲಿ ಮೂಲವ್ಯಕ್ತಿತ್ವ ಮತ್ತು ಜಗ ತೊಡಿಸಿದ ವ್ಯಕ್ತಿತ್ವಗಳಲ್ಲಿ ಕುಬ್ಜನಾಗುವ ವೆಂಕಟರಮಣ ತಾನೊಬ್ಬ ಪ್ರಗತಿಪರ ಎಂದು ತೋರಿಸಿಕೊಳ್ಳುವ ಪ್ರಯತ್ನದಲ್ಲೇ ತನ್ನ ಸನಾತನತೆಯನ್ನು ಬಚ್ಚಿಡಬಯಸುತ್ತಾ ತಿಳಿಯದೇ ಬಿಚ್ಚಿಡುತ್ತಾನೆ. ಇಂತಹ ಹಲವು ಸೂಕ್ಷ್ಮಗಳನ್ನು ಈ ಕಾದಂಬರಿ ವಿಫುಲವಾಗಿ ತೆರೆದುತೋರುತ್ತದೆ.
ಉದ್ಯೋಗಸ್ಥ ದಂಪತಿಗಳಾದ ವೆಂಕಟರಮಣ ಮತ್ತು ಪತ್ನಿ ವಿಜಿಯವರದು “ಸಮರಸದ ಜೀವನ”. ಸದಾ ಒಬ್ಬರನ್ನೊಬ್ಬರು ಬೆಂಬಲಿಸುತ್ತಾ, ಮಾದರಿ ದಂಪತಿಗಳಂತೆ ಬದುಕುವವರು. ಹಾಗಾಗಿ ಎಲ್ಲದರಲ್ಲೂ ಅವರು “ಪರ್ಫೆಕ್ಟ್ ಪ್ಲಾನಿಂಗ್” ಎಂದು ಸ್ನೇಹಿತರ ಹೊಗಳಿಕೆ ಕಾರಣವಾಗುವವರು. ಆದರೆ ಈ ಸಮರಸವೆಂಬುದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಕಾದಂಬರಿ ಓದುತ್ತಾ ಅರಿವಾಗುತ್ತದೆ. “ಅನಘನ ಗಂಡನ ಥರ ಎಲ್ಲಾ ಬಿಚ್ಚಿಡೋದು ಒಂದು ರೀತಿ. ಏನನ್ನಾ ಸಹಿಸ್ಕೋತಾ ಇದೀವಿ ಅನ್ನೋದಾದರೂ ಗೊತ್ತಿರುತ್ತೆ. ಗುಟ್ಟಾಗಿ ಸೆಗಣಿ ತಿನ್ನೋ ದ್ರೋಹಿಗಳು ಹೆಚ್ಚು ಅಸಹ್ಯ. ಬಾಯಿ ವಾಸನೆ ಹೊಡೀತಿದ್ರೂ ತಿಂದಿಲ್ಲವೆಂದು ನಾಚಿಕೆಯಿಲ್ಲದೇ ಸುಳ್ಳು ಹೇಳಿ ಸಾಧಿಸುತ್ತಾರೆ” ಎಂಬ ವಿಜಿಯ ಮಾತಲ್ಲಿ ಈ ಸಮರಸದ ವ್ಯಾಖ್ಯಾನವಿದೆ. ಪರಸ್ಪರ ಗೌರವಿಸುವ ಗುಣವಿದೆಯೆಂಬುದನ್ನು ಉಲ್ಲೇಖಿತ ಧ್ವನಿಯಾಗಿ ಪದಗಳಲ್ಲಿ ಮೂರ್ತವಾಗಿ ವ್ಯಕ್ತಪಡಿಸುವ ಲೇಖಕರು ಅಷ್ಟೇ ಅಮೂರ್ತವಾಗಿ ನಾಯಕನ ಒಳಮನಸ್ಸಿನ ನಿಜರೂಪಕ್ಕೆ ಆಕಾರವನ್ನು ಕೊಡುತ್ತಾರೆ.
ಕಾದಂಬರಿಯ ಉದ್ದಕ್ಕೂ ದ್ವಂದ್ವ ನಿಲುವುಗಳಲ್ಲಿ ವ್ಯಕ್ತವಾಗುತ್ತಾ ಅಸ್ಥಿರ ನಿಲುವಿನ ಕಂದಾಚಾರಗಳಿಂದ ಹೊರಬರಲಾಗದ, ನಾಯಕ ಸ್ಪಷ್ಟವಾಗುತ್ತಾನೆ. ವೆಂಕಟರಮಣ ಹಳ್ಳಿಯಲ್ಲಿ ಬೆಳೆದರೂ ಪಟ್ಟಣದ ಐಶಾರಾಮಿನ, ಆಡಂಬರದ ಜೀವನಕ್ಕೆ ಮರಳಾದವನು, ಕಾರ್ಪೋರೆಟ್ ಜಗತ್ತಿನ ವ್ಯೂಹದಲ್ಲಿ ತನ್ನತನವನ್ನೇ ಮರೆತವನಂತೆ, ಸಮಾಜದ ಸಿದ್ಧ ಮಾದರಿಯ, ಸೀಮಿತ ನೆಲೆಯಲ್ಲೇ ಸಂಭ್ರಮಿಸುವ, ಒಂದು ಸಮೂಹದ ಪ್ರತಿನಿಧಿಯಂತೆ ಕಾಣುತ್ತಾನೆ. ಆದರೆ ಪತ್ನಿ ವಿಜಿ ತನ್ನ ಪರಧಿಯಲ್ಲೇ ಸುತ್ತುತ್ತಾಳಾದರೂ, ಆದರ್ಶದ ಪೊರೆಯನ್ನು, ಸನಾತನತೆಯ ಹೊರೆಯನ್ನು ಕಳಚಿಕೊಂಡ, ಪಕ್ವ ವ್ಯಕ್ತಿತ್ವವಾಗಿ ವಿಸ್ತೃತ ದೃಷ್ಟಿಕೋನದವಳಾಗಿ ಕಂಡುಬರುತ್ತಾಳೆ.
ಊರಿಗೆ ಹೋದ ಮಗಳು ರೇಖಾಳನ್ನು ಹುಡುಕಿಕೊಂಡು ಬರುವ ಆಕೆಯ ಕಾಲೇಜಿನ ಸಹಪಾಠಿ ಹುಡುಗರು, ಅವರ ವೇಷಭೂಷಣ, ಪ್ರೀತಿ ಪ್ರೇಮವನ್ನು ತಲೆಗೇರಿಸಿಕೊಂಡು, ಈ ಕುಟುಂಬವನ್ನು ಪೇಚಿಗೆ ಸಿಲುಕಿಸುವುದು, ಸಾಮಾನ್ಯ ಸಂಗತಿಯೆನಿಸಿದರೂ, ಅವರ ಬೆಂಗಾವಲಿಗರು, ರೇಖಾ ಯಾರ ಜೊತೆ ಮಾತನಾಡಬೇಕು, ಮಾತನಾಡಬಾರದು ಎಂಬುದನ್ನೆಲ್ಲಾ ತಾವೇ ನಿರ್ಧರಿಸುವವರಂತೆ ವರ್ತಿಸುವುದು ಪುರುಷ ಪಾರಮ್ಯದ ಒಳಧೋರಣೆಯನ್ನು ವಿಡಂಬಿಸುತ್ತದೆ. ಈ ಹುಡುಗರಿಗೆ ಬೆಂಬಲಕ್ಕೆ ನಿಲ್ಲುವ ಅಲ್ಲಿಯ ಮರಿ ಫುಡಾರಿಗಳು ಎಲ್ಲವನ್ನೂ ರಾಜಕೀಯದ ಕಲಸುಮೇಲೋಗರ ಮಾಡುವಂತೆ ಪ್ರಯತ್ನಿಸುವುದು ಪರಿಣಾಮಕಾರಿಯಾಗಿ ಮೂಡಿದೆ, ಕಲಿಕೆಯ ದಿನಗಳಲ್ಲಿ ಹೋರಾಟ, ಬಂಡಾಯ ಇತ್ಯಾದಿಗಳನ್ನು ತಲೆಗೇರಿಸಿಕೊಳ್ಳುವಂತೆ ಮಾಡಿ, ಯುವ ಜನತೆಯನ್ನು ತಮ್ಮ ದಾಳವಾಗಿ ಬಳಸಿಕೊಳ್ಳುವ ದುಷ್ಟ ಕೂಟಗಳ ಹುನ್ನಾರವನ್ನೂ, ರಾಜಕೀಯದ ಕುಟಿಲ ಹಿತಾಸಕ್ತಿಗಳನ್ನೂ ಲೇಖಕರು ಸೂಚ್ಯವಾಗಿ ವಿಡಂಬಿಸಿದ್ದಾರೆ. ಬದುಕಿನ ಸುರಕ್ಷತೆ ಮತ್ತು ಸ್ವಾಸ್ತ್ಯ ಎರಡನ್ನೂ ಉಳಿಸಿಕೊಳ್ಳಲಾಗದ ಯುವ ಜನತೆ, ಹೇಗೆ ಬದುಕನ್ನು ನಾಶಮಾಡಿಕೊಳ್ಳುತ್ತಾರೆ ಎಂಬುದಕ್ಕೆ ನಾಯಕನ ತಾಯಿಯ ತಮ್ಮ ರಮಣ ಉದಾಹರಣೆಯಾದರೂ ಮತ್ತದೇ ದಾರಿಯಲ್ಲಿ ಸಾಗುವ ರೇಖಾ ಮುಂದಿನ ಬಂಡಾಯದ ಪ್ರತಿನಿಧಿಯಾಗಿ ವ್ಯಕ್ತಗೊಳ್ಳುತ್ತಾಳೆ. ಒಟ್ಟಾರೆ ಬದುಕಿನ ಹಲವು ಚಿತ್ರಗಳು, ಅದೇ ಚಕ್ರದಲ್ಲಿ ಮತ್ತೆ ಮತ್ತೆ ಸುತ್ತುವುದನ್ನು ನಾವಿಲ್ಲಿ ಕಾಣುತ್ತೇವೆ.
ಸಾಮಾಜಿಕ ಕಳಕಳಿಯುಳ್ಳ ಮನಸ್ಸುಗಳು ಒಂದೆಡೆಯಾದರೆ, ಪ್ರತಿ ಸಂಗತಿಯನ್ನು ತಮ್ಮ ಲಾಭದ ಉದ್ದೇಶಕ್ಕಾಗಿಯೇ ಬಳಸಿಕೊಳ್ಳುವ ಇನ್ನೊಂದು ವರ್ಗ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಲೇ ಗೆದ್ದು ಬರುವುದು ವ್ಯವಸ್ಥೆಯ ವಿಪರ್ಯಾಸ. ಚುನಾವಣೆಯಲ್ಲಿ ಸುಬ್ಬು ಗೆದ್ದು ಬರುವುದು ರೇಖಾಗೆ ಹಿತವಾಗುವುದಿಲ್ಲ. ಭ್ರಷ್ಟ ಅಧಿಕಾರ ಹಿಡಿಯುವುದು ನಮ್ಮ ಚುನಾವಣಾ ವ್ಯವಸ್ಥೆಯ ಅತಿ ದೊಡ್ಡ ದುರಂತ. ಒಂದೇ ಸೂರಡಿಯಲ್ಲಿ ಪತ್ನಿ ವಿಜಿ, ಮಗಳು ರೇಖಾ ಸುಬ್ಬುವಿನ ಗೆಲುವನ್ನು ಸ್ವೀಕರಿಸುವ ರೀತಿ ಭಿನ್ನವಾದರೆ, ಅದೇ ವೆಂಕಟರಮಣ ಅದನ್ನು ವ್ಯಾಖ್ಯಾನಿಸುವ ಧಾಟಿಯಲ್ಲಿ ಆ ಗೆಲುವನ್ನು ಆತ ಸಂಭ್ರಮಿಸಿದಂತಿದೆ. ಗೂಂಡಾ ಸಾಮ್ರಾಜ್ಯದ ಪರ್ತಕರ್ತ ರಂಗಣ್ಣನೂ ಸಮಾಜದ ಉದ್ಧಾರದ ಕನಸುಳ್ಳ ಪತ್ರಕರ್ತ ಸುರೇಶನೂ ಎರಡು ದಡಗಳಂತೆ ಚಿತ್ರಿಸಲಾಗಿದೆ. ಇದು ಪ್ರಸ್ತಾಪಿಸುವುದು ಒಂದೇ ವಸ್ತು, ಸಂಗತಿಯೊಳಗಿರುವ ದ್ವಂದ್ವ ನೋಟಗಳನ್ನು.
ನಿಶ್ಚಲವಾದ ಸಂವೇದನೆಗಳು ಇಲ್ಲವೇ ಇಲ್ಲ. ನಿತ್ಯ ರೂಪಾಂತರಗೊಳ್ಳುವ ಭಾವ- ಭಾವನೆಗಳನ್ನು ಸಾಂಘಿಕ ನೆಲೆಯಲ್ಲಿ ಗ್ರಹಿಸುತ್ತಾ, ಸಂವೇದನೆಗಳಿಗೆ ಏಕಮುಖ ವ್ಯಾಖ್ಯಾನ ನೀಡುವ ಪ್ರಯತ್ನ ಮನುಷ್ಯ ಜಗತ್ತಿನದು. ಇದನ್ನೆ ಸಮಕಾಲೀನ ಸಮಾಜದ ದ್ವಂದ್ವ ಮನಸ್ಥಿತಿಯನ್ನು, ಜೀವನದ ಆಶಯ ಮತ್ತು ಧ್ಯೇಯಗಳಲ್ಲಿಯ ಭಿನ್ನತೆಯನ್ನು, ಆಧುನಿಕತೆ ಮತ್ತು ಸಂಪ್ರದಾಯಶೀಲತೆ ಇವೆರಡರ ಮಧ್ಯೆ ನಲಗುವ ಆಧುನಿಕರೆನಿಸಿಕೊಳ್ಳುವವರ ತುಮುಲಗಳನ್ನು ಈ ಕಥಾನಕ ನಿರೂಪಿಸುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ತಲೆ ಎತ್ತುತ್ತಿರುವ ಸ್ತ್ರೀ ದನಿಗಳಲ್ಲಿ ಗುರುತರವಾಗಿ ಇರಬೇಕಾದ ಧಾಡಸಿತನ ಇದೆಯಾ? ನಾವೆಲ್ಲ ಸತ್ಯ ಎಂದು ಒಪ್ಪಿ ನಡೆಯುತ್ತಿರುವ ಅನುಸರಿಸುತ್ತಿರುವ ಎಲ್ಲ ಆಚಾರ ವಿಚಾರಗಳ ಮೂಲ ಮತ್ತು ಹೊಸ ಜಗತ್ತು ಸೃಷ್ಟಿಸುತ್ತಿರುವ ಹೊಸ ಸತ್ಯಗಳು ಎಲ್ಲವೂ ಅಸಂಗತವೇ? ಹೀಗೆ ಹತ್ತಾರು ಅಸಂಗತ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಕಾದಂಬರಿ. ಸಂಪೂರ್ಣ ಕಾದಂಬರಿಯುದ್ದಕ್ಕೂ ಹಲವು ನೆನಪಿನಿಂದ ಹೆಕ್ಕಿದ ಘಟನೆಗಳನ್ನು ಹೇಳುತ್ತಾ ನಾಯಕನ “ಸ್ವಗತದ ಸುಖ”ದ ಮುಖಾಂತರವೇ ಕಾದಂಬರಿ ಹಿಗ್ಗುತ್ತಾ ಹೋಗುವುದು ವಿಶಿಷ್ಟ ಶೈಲಿಯ ಕಾದಂಬರಿಯನ್ನೋದಿದ ಅನುಭವ ನೀಡುತ್ತದೆ.
(ಕೃತಿ: ಸಕೀನಾಳ ಮುತ್ತು (ಕಾದಂಬರಿ), ಲೇಖಕರು: ವಿವೇಕ ಶಾನಭಾಗ, ಪ್ರಕಾಶಕರು: ಅಕ್ಷರ ಪ್ರಕಾಶನ, ಬೆಲೆ: 150/- )
ನಾಗರೇಖಾ ಗಾಂವಕರ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ.
‘ಏಣಿ’, ‘ಪದಗಳೊಂದಿಗೆ ನಾನು (ಕವನ ಸಂಕಲನಗಳು), ಪಾಶ್ಚಿಮಾತ್ಯ ಸಾಹಿತ್ಯ ಲೋಕ- (ಪರಿಚಯಾತ್ಮಕ ಲೇಖನಗಳ ಅಂಕಣ ಬರಹ)
ಡಿಫರೆಂಟಾಗಿ ಗ್ರಹಿಸಿದ್ದೀಯಾ ನಾಗರೇಖಾ, ರಮಣನ ‘ಸಾವಿನಿಂದ ಮುಕ್ತಿ’ ಪದ ವಿಶ್ಲೇಷಣೆ ತಲ್ಲಣ ಉಂಟು ಮಾಡುವಂಥದ್ದು..