ವ್ಯಕ್ತಿ ಪ್ರಕೃತಿಯು ತನ್ನ ಪರಿಸರದ ಪ್ರಭಾವದ ವಿರುದ್ಧ ಪ್ರತಿಭಟಿಸಿ, ಸೆಣೆಸಿ ತನ್ನದೇ ನಡೆಗಳ ದಾರಿಯಲ್ಲಿ ಚಲಿಸಲು ಯಾವುದೋ ಒಂದು ಆಂತರಿಕ ಸೆಳೆತವಿರಬೇಕು. ಈ ಸೆಳೆತ ಇಂದು ನೆನ್ನೆಯದಲ್ಲ; ಇನ್ನೂ ಹಿಂದಿನದು, ಬಹುದೂರ ಕಾಲ ಹಿಂದಿನದು. ಎಂದೋ ಯಾವ ಕಾಲದಲ್ಲೋ ಯರ‍್ಯಾರ ಕಾಲ-ದೇಶ-ಪ್ರಭಾವ-ಪ್ರವಾಹಗಳ ಹರಿವಿನಲ್ಲೋ ಮೊಳೆತಿದ್ದಿರಬೇಕು. ಹೀಗೆ ಕಾಲಾಂತರ ಕಾದು ಕಾದು ತನ್ನನ್ನು ತಾನು ಅರಿವಿನಲ್ಲಿ ಕಂಡುಕೊಂಡುದುದು. ಇದು ಮೊಳೆತು ಬೆಳೆದು ವಿಕಾಸವಾಗಬಹುದಾದ ಬೀಜರೂಪ ಮಾತ್ರ. ಇದು ಬೆಳೆದು ಬೃಹತ್ ವೃಕ್ಷವಾಗಲು ಏನೆಲ್ಲಾ ಒದಗಿ ಬರಬೇಕೋ?
ಸತೀಶ್ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿ ಸರಣಿಯ ಕೊನೆಯ ಕಂತು ನಿಮ್ಮ ಓದಿಗೆ
ಪ್ರಿಯ ಭೂಮಿ
ಕಳೆದ ಮೂರು ವರ್ಷಗಳ ಹಿಂದೆ ನಡೆದ ಕೆಲವು ವಿದ್ಯಮಾನಗಳನ್ನು ನಿನ್ನೊಂದಿಗೆ ಹಂಚಿಕೊಳ್ಳಬೇಕು ಅನ್ನಿಸುತ್ತಿದೆ. ಆ ದಿನಗಳಲ್ಲಿ ಒಂದು ರಾತ್ರಿ ಮೈಸೂರಿನ ನನ್ನ ಗೆಳೆಯರೊಬ್ಬರು ದೂರವಾಣಿಯಲ್ಲಿ ನನ್ನೊಂದಿಗೆ ಮಾತನಾಡುತ್ತಾ… ‘ಇವತ್ತು ಒಂದು ನಾಟಕ ನೋಡಿದೆ. ಬೆಂಗಳೂರಿನ ಟೀಮ್ ಅಭಿನಯಿಸಿದ್ದು; ಈ ನಾಟಕದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವವರು ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ’ ಎಂದು ಹೇಳಿ; ‘ಆ ಹುಡುಗಿ ನಿಮ್ಮ ಊರಿನವರಂತೆ; ಮತ್ತೆ ನಿನ್ನ ಸ್ಟೂಡೆಂಟ್ ಅಂತ ಹೇಳಿದರು’ ಅಂದರು. ನಾನು ಒಂದು ಕ್ಷಣ ನಮ್ಮ ಭೂಮಿ ರಂಗ ಶಾಲೆಯ ವಿದ್ಯಾರ್ಥಿಗಳನ್ನೆಲ್ಲಾ ನೆನಪು ಮಾಡಿಕೊಂಡೆ. ಸದ್ಯ ನನಗೆ ಗೊತ್ತಿರುವಂತೆ ಯಾರೂ ನಾಟಕದಲ್ಲಿ ಪಾತ್ರ ವಹಿಸುತ್ತಿರಲಿಲ್ಲ. ಕುತೂಹಲದಿಂದ ‘ಆ ಹುಡುಗಿಯ ಹೆಸರೇನು?’ ಎಂದು ಕೇಳಿದೆ. ಅದಕ್ಕೆ ಅವರು ‘ಅಣ್ಣನಿಗೆ ಹೇಳಬೇಡಿ; ನಾನೇ ಅವರೊಂದಿಗೆ ಮಾತಾಡ್ತೇನೆ, ಅಂತ ಹೇಳಿದ್ದಾರೆ’ ಅಂದರು. ನಾನು ಸರಿ ಆಗಲಿ ಎಂದು ಫೋನ್ ಇಟ್ಟೆ.
ಇದಾಗಿ ಮೂರ‍್ನಾಲ್ಕು ದಿನಗಳ ನಂತರ ಆ ಹುಡುಗಿ ದೂರವಾಣಿಯಲ್ಲಿ ನನ್ನೊಂದಿಗೆ ಮಾತನಾಡಿದಳು…
‘ಅಣ್ಣ; ಹೇಗಿದ್ದೀರಾ?’.
‘ನಾನು ಚನ್ನಾಗಿದ್ದೇನೆ; ಯಾರು ಗೊತ್ತಾಗಲಿಲ್ಲ’ ಎಂದೆ.
ಅವಳು ‘ನಾನು ಅನಾಮಿಕಾ; ಅಣ್ಣ ಈ ದಿನಕ್ಕೊಸ್ಕರ ಎಷ್ಟು ವರ್ಷಗಳಿಂದ ಕಾಯ್ತಿದ್ದೆ ಗೊತ್ತಾ?’ ಎಂದು ಪ್ರಾರಂಭ ಮಾಡಿ ‘ಈಗ ಒಂದು ಥಿಯೇಟರ್ ಗ್ರೂಪ್ ಜೊತೆಗೆ ವರ್ಕ್ ಮಾಡ್ತಾ ಇದ್ದೇನೆ; ಸಾಫ್ಟ್ವೇರ್ ಇಂಜಿನಿಯರ್ ಆಗಿ ಬಾಷ್ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದೆ. ಯಾಕೋ ಇದು ನನ್ನದಲ್ಲ ಅನ್ನಿಸಿ ಬಿಟ್ಟು ಬಿಟ್ಟೆ. ಅಲ್ಲಿ ನನಗೆ ಎಪ್ಪತ್ತು ಸಾವಿರ ಸಂಬಳ ಬರ್ತಾ ಇತ್ತು. ಮೂರು ವರ್ಷ ಕೆಲಸ ಮಾಡಿ ಮನೆಯವರು ನನ್ನ ಓದಿಗೆ ಮಾಡಿದ ಸಾಲವನ್ನೆಲ್ಲಾ ತೀರಿಸಿ ಬಿಟ್ಟೆ. ಈಗ ನಾನು ಸಂಬಳಕ್ಕೆ ಕೆಲಸ ಮಾಡ್ತಾ ಇಲ್ಲ. ಮನಸ್ಸಿನ ಸಂತೋಷಕ್ಕೆ ಕೆಲಸ ಮಾಡ್ತಾ ಇದ್ದೀನಿ’ ಅಂದಳು. ಹೀಗೆ ಅವಳು ಮಾತನಾಡುತ್ತಿರುವಂತೆ ನನ್ನ ಮನಸ್ಸು ಈ ಅನಾಮಿಕಾಳ ಜಾಡು ಹಿಡಿದು ಹೊರಟಿತ್ತು. ಇವಳು ಚಿಕ್ಕಂದಿನಲ್ಲೇ ನನ್ನ ಅಕ್ಕನ ಬಳಿ ಭರತನಾಟ್ಯ ಶಿಕ್ಷಣಕ್ಕೆಂದು ಬರುತ್ತಿದ್ದಳು. ಬಹಳ ಆಸಕ್ತಿಯಿಂದ ಕಲಿಯುತ್ತಿದ್ದಳು. ನೃತ್ಯ ಶಾಲೆಯ ಯಕ್ಷಗಾನ ಪ್ರಯೋಗಗಳಲ್ಲಿ ಅಭಿನಯಿಸಿದ್ದಳು; ವಾರ್ಷಿಕೋತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಿದ್ದಳು. ಚಿಕ್ಕಂದಿನಲ್ಲಿ ಮನೆಯ ಪ್ರೋತ್ಸಾಹ ಇತ್ತಾದರೂ ಬೆಳೆಯುತ್ತಾ ಹೋದಂತೆ ಇವಳ ಈ ಅಭ್ಯಾಸಗಳಿಗೆ ಪ್ರೋತ್ಸಾಹ ಕಡಿಮೆಯಾಗಿ, ಪ್ರತಿರೋಧವೂ ಹೆಚ್ಚಾಗಿತ್ತು. ಕೆಲವೊಮ್ಮ ಕಾರ್ಯಕ್ರಮಗಳಿಂದ ತಡವಾಗಿ ಮನೆಗೆ ಹೋದಾಗ ಹೊರಗೆ ನಿಲ್ಲಿಸಿದ್ದೂ ಉಂಟು. ಆಗಾಗ ಕಠಿಣ ಶಿಕ್ಷೆಗೂ ಗುರಿಯಾಗುತ್ತಿದ್ದಳು. ಹೀಗೆ ಬೆಳೆದು ಇಂಜಿನಿಯರಿಂಗ್ ಶಿಕ್ಷಣಕ್ಕೆ ಸೇರಿದ ನಂತರ ಕ್ರಮೇಣ ನೃತ್ಯ ಶಾಲೆಯ ಸಂಪರ್ಕ ಕಡಿದುಕೊಂಡಳು. ಮನೆಯವರೇ ಬಿಡಿಸಿದ್ದರು. ಆದರೂ ಪ್ರತೀ ವರ್ಷ ನಮ್ಮ ಭೂಮಿ ಸಂಸ್ಥೆ ನಡೆಸುತ್ತಿದ್ದ ನಾಟಕೋತ್ಸವದ ಪ್ರದರ್ಶನಗಳನ್ನು ನೋಡಲು ಬರುತ್ತಿದ್ದಳು. ನಂತರದ ವರ್ಷಗಳಲ್ಲಿ ನಾನು ಅವಳನ್ನು ನೋಡಲಿಲ್ಲ.
ಅವಳು ದೂರವಾಣಿಯಲ್ಲಿ ಮಾತನ್ನು ಮುಂದುವರೆಸುತ್ತಾ ‘ರಂಗಭೂಮಿಯಲ್ಲೇ ಮುಂದುವರೆಯಬೇಕು ಅಂದುಕೊಂಡಿದ್ದೇನೆ ಅಣ್ಣ. ನಾನು ಇದ್ದ ಕೆಲಸವನ್ನು ಬಿಟ್ಟು ಈ ರೀತಿ ನಾಟಕ, ಅಭಿನಯ ಅಂತ ತೊಡಗಿಕೊಂಡಿರುವುದು ನನ್ನ ಮನೆಯವರಿಗೆ ಸ್ವಲ್ಪವೂ ಇಷ್ಟವಿಲ್ಲ. ಅವರು ನನ್ನ ಮದುವೆ ಮಾಡಿ ಈ ಸಮಾಜ ಬಯಸುವ ಸಿದ್ಧ ಮಾದರಿಯೊಳಗೆ ನನ್ನ ಬದುಕನ್ನು ಅಳವಡಿಸಬೇಕು ಎಂದುಕೊಂಡಿದ್ದಾರೆ. ಬಹಳ ಒತ್ತಾಯ ಮಾಡಿದರು. ನಾನು ಒಪ್ಪಲಿಲ್ಲ. ನಮ್ಮ ನಡುವಿನ ಸಂಘರ್ಷ ತಾರಕಕ್ಕೇರಿದೆ. ನಾನೂ ಕೂಡ ಹೆಚ್ಚಾಗಿ ಊರಿಗೆ ಬರುತ್ತಿಲ್ಲಾ’. ಎಂದು ಹೇಳಿ ಅವಳು ಮಾಡಿದ ನಾಟಕದ ಪಾತ್ರದ ಕುರಿತು ಮಾತನಾಡಿದಳು. ರಂಗಭೂಮಿಯಲ್ಲಿ ತೊಡಗಿಕೊಳ್ಳುವ ಅವಳ ಉತ್ಕಟ ಬಯಕೆಯ ಬಗೆಗೆ ಹೇಳುತ್ತಾ ‘ಬೇರೆ ದೇಶಕ್ಕೆ ಹೋಗಿ ಏನಾದರು ಕೆಲಸ ಮಾಡುತ್ತಾ ವಾರಾಂತ್ಯದಲ್ಲಿ ರಂಗಭೂಮಿಯ ಅಭ್ಯಾಸದ ಬಗೆಗೆ ಯೋಚಿಸುತ್ತಿದ್ದೇನೆ. ಅದಕ್ಕಾಗಿ ಜರ್ಮನ್ ಭಾಷೆ ಕಲಿಯುತ್ತಿದ್ದೇನೆ’ ಎಂದೆಲ್ಲಾ ಹೇಳಿದಳು.
ನಾನು ಅವಳಿಗೆ ‘ಅದು ಸರಿ; ನಾನು ನಿನಗೆಂದೂ ಪಾಠ ಮಾಡಿದವನಲ್ಲ; ನೀನು ನಮ್ಮ ಭೂಮಿ ರಂಗ ಶಾಲೆಯ ವಿದ್ಯಾರ್ಥಿಯೂ ಅಲ್ಲ. ಆದರೂ ನೀನು ನನ್ನ ಸ್ಟೂಡೆಂಟ್ ಅಂತ ಹೇಳಿದ್ದೀಯಲ್ಲ?’ ಎಂದು ಕೇಳಿದೆ. ಅದಕ್ಕೆ ಅವಳು “ಹೌದು ಅಣ್ಣ ; ನಾನು ಚಿಕ್ಕವಳಿದ್ದಾಗಿನಿಂದ ನಿಮ್ಮ ಮನೆಯ ನೃತ್ಯ ಶಾಲೆಯ ವಿದ್ಯಾರ್ಥಿಯಾಗಿ ಬೆಳೆದವಳು. ಆಗೆಲ್ಲಾ ನೀವು ಮತ್ತು ವಾಣಿ ಅಕ್ಕ ಮಾಡುತ್ತಿದ್ದ ರಂಗಭೂಮಿಯ ಚಟುವಟಿಕೆಗಳನ್ನು ಗಮನಿಸುತ್ತಿದ್ದೆ. ನೀವು ಮಾಡಿದ ಮಕ್ಕಳ ಶಿಬಿರದಲ್ಲೂ ಪಾಲ್ಗೊಂಡಿದ್ದೆ. ನೀವು ಮಾಡಿಸುತ್ತಿದ್ದ ಎಲ್ಲ ನಾಟಕಗಳನ್ನೂ ನೃತ್ಯ ಶಾಲೆಯ ವಿದ್ಯಾರ್ಥಿಗಳಾಗಿ ನಾವು ನೋಡುತ್ತಿದ್ದೆವು. ಒಮ್ಮೆ ಒಂದು ನಾಟಕ ಪ್ರದರ್ಶನಕ್ಕೆ 3 ನೇ ಬೆಲ್ ಹೊಡೆದ ನಂತರ ಬಂದೆ. ಹೊರಗೆ ನಿಂತಿದ್ದ ನೀವು ‘ಅನಾಮಿಕಾ; ತಡವಾಗಿ ಬಂದರೆ ನಾಳೆ ಒಳಗೆ ಸೇರಿಸುವುದಿಲ್ಲಾ’ ಎಂದು ಖಂಡಿತವಾಗಿ ಹೇಳಿದಿರಿ. ಆಗಲೇ ನನಗೆ ಗೊತ್ತಾದದ್ದು ನಾಟಕದ ಗಂಭೀರತೆ. ನೀವು ಮತ್ತು ಅಕ್ಕ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವ ಬದ್ಧತೆ ನನಗೆ ತುಂಬಾ ಇಷ್ಟವಾಗಿತ್ತು. ಆಗೆಲ್ಲಾ ನಾಟಕದಲ್ಲಿ ತೊಡಗಿಕೊಳ್ಳಬೇಕೆಂಬ ಆಸೆಯಿದ್ದರೂ ನಿಮಗೆ ಹೇಳಿಕೊಳ್ಳಲಾಗಲಿಲ್ಲ. ಮನೆಯಲ್ಲಿ ಅವಕಾಶವೂ ಇರಲಿಲ್ಲ. ಏನೇ ಇರಲಿ ಇಂದು ರಂಗದ ಮೇಲೆ ನಾನು ನಟಿಯಾಗಿ ನಿಂತಿದ್ದೀನಿ ಎಂದರೆ ಅದು ನಿಮ್ಮ ಪ್ರಭಾವದಿಂದ” ಎಂದಳು. ನಾನು ಮರು ಮಾತನಾಡದೆ ಸುಮ್ಮನಾದೆ.
ಕೆಲಕಾಲ ಒಂದು ರೀತಿಯ ಮೌನ ನನ್ನನ್ನು ಆವರಿಸಿಬಿಟ್ಟಿತ್ತು. ನನ್ನ ಊಹೆಯ ಪರಿಧಿಯಲ್ಲೇ ಇಲ್ಲದ ಹುಡುಗಿಯೊಬ್ಬಳು ತಟ್ಟನೆ ಪ್ರತ್ಯಕ್ಷವಾಗಿ ನನ್ನೆಡೆಗೆ ಬೆಟ್ಟು ಮಾಡಿ ತೋರಿಸಿ ಮಾಯವಾದಂತಿತ್ತು. ಅನಿರೀಕ್ಷಿತವಾದ ರಂಗಭೂಮಿಯೆಡೆಗಿನ ಅವಳ ನಡೆಯಿಂದ ನನಗೆ ಸಂತೋಷವಾಗಿದ್ದರೂ ಒಳಗೆ ಏನೋ ಒಂದು ರೀತಿಯ ಆತಂಕ ಮನೆಮಾಡಿತ್ತು. ಎರಡುವರೆ ದಶಕಗಳ ಹಿಂದಿನ ನನ್ನ ಅವಸ್ಥೆಯನ್ನೇ ಅನಾಮಿಕಳಲ್ಲಿ ಕಂಡಂತಾಗಿತ್ತು.
ನಾನು ಮಾತನ್ನು ಮುಂದುವರೆಸುತ್ತಾ “ಅನಾಮಿಕಾ; ಇಪ್ಪತೈದು ವರ್ಷಗಳ ಹಿಂದೆ ಈಗ ನೀನಿರುವ ಪರಿಸ್ಥಿತಿಯ ಒತ್ತಡಗಳಲ್ಲೇ ನಾನೂ ಇದ್ದೆ. ನಮ್ಮ ಬಗೆಗೆ ನಮ್ಮ ಮನೆಯವರು ಕಾಣುವ ಕನಸುಗಳು, ನಮ್ಮ ಬಗೆಗಿನ ಅವರ ನಿರೀಕ್ಷೆಗಳು, ನಮ್ಮ ಭವಿಷ್ಯದ ಬಗೆಗಿನ ಅವರ ಕಾಳಜಿಗಳು, ಬದುಕಿನ ಮುಂದಿನ ದಾರಿಗಳಲ್ಲಿ ನಾವು ಎಲ್ಲಾದರು ಎಡವಿಕೊಂಡು ಸೋತುಬಿಟ್ಟರೇ? ಎಂಬ ಅವರ ಆತಂಕಗಳು, ನಮ್ಮ ಕುಟುಂಬ ಬಾಳಿಕೊಂಡಿರುವ ಸಮುದಾಯ ಮತ್ತು ’ಪ್ರತಿಷ್ಠಿತ ಸಮಾಜ’ದ ಕಣ್ಣುಗಳಲ್ಲಿ ಅವರು ಎದುರಿಸಬೇಕಾದ ನಿಂದನೆಗಳು, ತಾವು ಹೆತ್ತು ಸಾಕಿ ಬೆಳೆಸಿದೆವೆಂಬ ಅವರ ಅಧಿಕಾರ ಅಥವಾ ಅಹಂ.. ಮುಂತಾದವುಗಳೆಲ್ಲಾ ಅವರ ಈ ವರ್ತನೆಗೆ ಕಾರಣವಿರಬಹುದು. ಇದು ಸಹಜವೇ; ಆದರೆ ಹೀಗೆ ವರ್ತಿಸುತ್ತಿರುವ ಪರಿಸರದ ಭಾವವು ನಮ್ಮ ಪ್ರಕೃತಿಯ ಅಭೀಪ್ಸೆ, ಇಚ್ಚೆಗೆ ವಿರುದ್ಧವಾಗಿದೆಯಲ್ಲ? ವ್ಯಕ್ತಿ ಪ್ರಕೃತಿ ಏನನ್ನು ಉತ್ಕಟವಾಗಿ ತನ್ನಲ್ಲಿ ಸೃಜಿಸಿಕೊಂಡು ಪ್ರಕಟವಾಗಲು ಬಯಸುತ್ತದೆಯೋ ಅದಕ್ಕೆ ವಿರುದ್ಧವಾದ ಇರುವಿಕೆಯನ್ನು ಅದು ಪ್ರತಿಭಟಿಸುತ್ತದೆ. ಅದೂ ಸಹಜವೇ.
ಈ ಪರಿಸರ ಮತ್ತು ಪ್ರಕೃತಿಯ ಸಹಜತೆಯಲ್ಲಿ ಸಂಘರ್ಷ-ಸಹಬಾಳ್ವೆಗಳು ಸಾವಯವವಾಗಿ ಬೆಸೆದುಕೊಂಡಿರುತ್ತದೆ ಎನಿಸುತ್ತದೆ. ಈ ಹೊತ್ತಿನ ನಮ್ಮ ಸುತ್ತಲಿನ ಸಾಮುದಾಯಿಕ ಪರಿಸರದ ಸಮಷ್ಠಿ ಭಾವವು ಒಂದು ಕಾಲಾಂತರದ ಸಮುದಾಯ ಪ್ರಕೃತಿಯ ಭಾವನೆಗಳ ಕೃಷಿಯ ಉತ್ಪನ್ನವೇ ಆಗಿದೆ. ಈ ಪ್ರಕೃತಿ-ಪರಿಸರದ ಭಾವ ಸಂಘರ್ಷದಲ್ಲಿ ನೀನು ಕಂಡುಕೊಂಡ ‘ಅರಿವೇ’ ಇಂದಿನ ನಿನ್ನ ನಡೆಗಳಿಗೆ ಕಾರಣವಿರಬಹುದು.” ಎಂದು ಅವಳಿಗೆ ಹೇಳಿದೆ…. ಮತ್ತೆ ಮಾತು ಮುಂದುವರೆಸುತ್ತಾ; ರಂಗಭೂಮಿಯ ಅನಿಶ್ಚಿತತೆಯ ಬಗ್ಗೆ, ಬದುಕು ಎದುರಿಸಬೇಕಾದ ಸವಾಲುಗಳ ಬಗ್ಗೆ, ದೀರ್ಘಕಾಲ ಪರಸ್ಪರ ಅರಿತು ಗೌರವ ಪ್ರೀತಿಗಳಿಂದ ಬಾಳಬಲ್ಲ ಸಂಗಾತಿಯ ಆಯ್ಕೆಯ ಬಗ್ಗೆ ಕೇಳಿದೆ. ಈ ಪ್ರಶ್ನೆಗಳಿಗೆಲ್ಲಾ ಎಂದೋ ಸಿದ್ಧವಾದಂತಿದ್ದ ಆತ್ಮವಿಶ್ವಾಸದಲ್ಲಿ ‘ಅರ್ಧ ದಾರಿ ಬಂದು ಆಗಿದೆ ಅಣ್ಣ; ನಾನು ಹಿಂತಿರುಗಿ ನೋಡುವ ಪಶ್ನೆಯೇ ಇಲ್ಲ. ಇಲ್ಲಿ ನನ್ನನ್ನು ನಾನು ಕಂಡುಕೊಳ್ಳಬಹುದೆಂಬ ನಂಬಿಕೆ ಬಂದಿದೆ. ನನ್ನ ಪ್ರಕೃತಿಯನ್ನು ಅರಿತು ಬಾಳಬಲ್ಲ ಸಂಗಾತಿ ಸಿಕ್ಕರೂ ಸಿಗಬಹುದು. ಇಲ್ಲದಿದ್ದರೆ ರಂಗಭೂಮಿಯೇ ನನ್ನ ಸಂಗಾತಿ.’ ಎಂದುಬಿಟ್ಟಳು.
ಕೆಲಕಾಲ ಒಂದು ರೀತಿಯ ಮೌನ ನನ್ನನ್ನು ಆವರಿಸಿಬಿಟ್ಟಿತ್ತು. ನನ್ನ ಊಹೆಯ ಪರಿಧಿಯಲ್ಲೇ ಇಲ್ಲದ ಹುಡುಗಿಯೊಬ್ಬಳು ತಟ್ಟನೆ ಪ್ರತ್ಯಕ್ಷವಾಗಿ ನನ್ನೆಡೆಗೆ ಬೆಟ್ಟು ಮಾಡಿ ತೋರಿಸಿ ಮಾಯವಾದಂತಿತ್ತು. ಅನಿರೀಕ್ಷಿತವಾದ ರಂಗಭೂಮಿಯೆಡೆಗಿನ ಅವಳ ನಡೆಯಿಂದ ನನಗೆ ಸಂತೋಷವಾಗಿದ್ದರೂ ಒಳಗೆ ಏನೋ ಒಂದು ರೀತಿಯ ಆತಂಕ ಮನೆಮಾಡಿತ್ತು. ಎರಡುವರೆ ದಶಕಗಳ ಹಿಂದಿನ ನನ್ನ ಅವಸ್ಥೆಯನ್ನೇ ಅನಾಮಿಕಳಲ್ಲಿ ಕಂಡಂತಾಗಿತ್ತು.
ರಂಗಭೂಮಿಯೇ ಇವಳನ್ನು ಸೆಳೆದುಕೊಳ್ಳುತ್ತಿದೆಯೋ ಅಥವಾ ಇವಳೇ ರಂಗಭೂಮಿಯನ್ನು ಆವಾಹಿಸಿಕೊಳ್ಳುತ್ತಿದ್ದಾಳೋ… ಒಂದು ಕ್ಷಣ ತಲ್ಲಣಿಸಿಹೋದೆ. ನಂತರ ಸಾವರಿಸಿಕೊಂಡು ‘ನಿನ್ನ ಇಚ್ಚೆ ಬಲವಾಗಿದ್ದರೆ಼, ಇದೇ ನಿನ್ನ ಧ್ಯಾನವಾಗಿದ್ದರೆ; ಈ ಜಗತ್ತಿನ ಬೃಹತ್ ಜೀವಜಾಲದಲ್ಲಿ ನೀನು ಬಯಸುವ ಸಂಗಾತಿಯನ್ನು ಒದಗಿಸಿಕೊಡುವುದೂ ಈ ಪ್ರಕೃತಿಯ ನಿಯಮವೇ ಆಗಿರಬಹುದು. ನಿನಗೆ ಶುಭವಾಗಲಿ; ನಿನ್ನ ನಾಟಕ ಪ್ರದರ್ಶನ ನೋಡಲು ಬರುತ್ತೇನೆ’ ಎಂದು ಹೇಳಿ ಅವಳನ್ನು ಬೀಳ್ಕೊಟ್ಟೆ.
ಪ್ರಿಯ ಭೂಮಿ; ಹೀಗೆ ವ್ಯಕ್ತಿ ಪ್ರಕೃತಿಯು ತನ್ನ ಪರಿಸರದ ಪ್ರಭಾವದ ವಿರುದ್ಧ ಪ್ರತಿಭಟಿಸಿ, ಸೆಣೆಸಿ ತನ್ನದೇ ನಡೆಗಳ ದಾರಿಯಲ್ಲಿ ಚಲಿಸಲು ಯಾವುದೋ ಒಂದು ಆಂತರಿಕ ಸೆಳೆತವಿರಬೇಕು. ಈ ಸೆಳೆತ ಇಂದು ನೆನ್ನೆಯದಲ್ಲ; ಇನ್ನೂ ಹಿಂದಿನದು, ಬಹುದೂರ ಕಾಲ ಹಿಂದಿನದು. ಎಂದೋ ಯಾವ ಕಾಲದಲ್ಲೋ ಯರ‍್ಯಾರ ಕಾಲ-ದೇಶ-ಪ್ರಭಾವ-ಪ್ರವಾಹಗಳ ಹರಿವಿನಲ್ಲೋ ಮೊಳೆತಿದ್ದಿರಬೇಕು. ಹೀಗೆ ಕಾಲಾಂತರ ಕಾದು ಕಾದು ತನ್ನನ್ನು ತಾನು ಅರಿವಿನಲ್ಲಿ ಕಂಡುಕೊಂಡುದುದು. ಇದು ಮೊಳೆತು ಬೆಳೆದು ವಿಕಾಸವಾಗಬಹುದಾದ ಬೀಜರೂಪ ಮಾತ್ರ. ಇದು ಬೆಳೆದು ಬೃಹತ್ ವೃಕ್ಷವಾಗಲು ಏನೆಲ್ಲಾ ಒದಗಿ ಬರಬೇಕೋ?
ಹೀಗೆ ಒಂದಕ್ಕೊಂದು ಒಂದೊಂದು ಕಾಲದಲ್ಲಿ ಪೂರಕವಾಗಿ ಒದಗಿಬರುವ, ಕೂಡಿಕೊಳ್ಳುವ, ಹೆಣೆದುಕೊಳ್ಳುವ ಈ ಜೀವಜಾಲದ ಪ್ರೋಗ್ರಾಮಿಂಗ್ ಇದೆಯಲ್ಲಾ ಅದೇ ಒಂದು ವಿಸ್ಮಯ. ಅರಿಯಲು ಪ್ರಯತ್ನಿಸಿದಂತೆಲ್ಲಾ ತೆರೆದುಕೊಳ್ಳುತ್ತಲೇ ಇರುವ, ಪಡೆದುಕೊಳ್ಳುತ್ತಲೇ ಇರುವ ಈ ವಿಸ್ಮಯವೇ ಆಗುತ್ತಿರುವುದು.
ನಾವು ಆಗಾಗ ಈ ಸೆಳೆತಕ್ಕೆ ಆಕರ್ಷಿತರಾಗುತ್ತೇವೆ. ಈ ಆಕರ್ಷಣೆ ಸೆಳೆತದ ಕುರುಹು ಮಾತ್ರ. ಈ ಸೆಳೆತ ಗಾಢವಾಗಿದ್ದರೆ, ತೀವ್ರವಾಗಿದ್ದರೆ ಕಾಲದ ಹರಿವಿನಲ್ಲಿ ಈ ರೀತಿಯ ಕುರುಹುಗಳನ್ನು ಕೊಟ್ಟು ಎಂದೋ ಒಂದು ದಿನ ಒಂದು ಕ್ಷಣ ತನ್ನಲ್ಲಿ ಸೆಳೆದುಕೊಂಡು ಬಿಡುತ್ತದೆಯೇನೋ ಅನಿಸುತ್ತದೆ. ನನ್ನಂತೆ ಅವಳಂತೆ ಎಲ್ಲೆಲ್ಲೊ, ಯಾರ‍್ಯಾರೋ, ಯಾವ್ಯಾವ ಕಾಲದಲ್ಲೋ ಈ ಸೆಳೆತಕ್ಕೆ ಒಳಗಾಗಿದ್ದಾರೆ; ಒಳಗಾಗುತ್ತಲೇ ಇದ್ದಾರೆ, ತಮ್ಮನ್ನು ಕಂಡುಕೊಳ್ಳುತ್ತಲೇ ಇದ್ದಾರೆ. ಈ ಎಲ್ಲವೂ ಪ್ರಕೃತಿಯ ನಿಯಮವೇ ಇರಬಹುದು. ಅಥವಾ ಅದು ವಿಕಾಸವಾಗುವ ಪರಿ ಹೀಗೆ ಇರಬಹುದು. ಎಲ್ಲಕ್ಕೂ ಒಂದು ರೀತಿಯ ಆಂತರಿಕ ಒತ್ತಡ ನಿರ್ಮಾಣವಾಗಬೇಕು. ಸನ್ನಿವೇಶಗಳ ಸಂಘರ್ಷದಲ್ಲಿ ಮೊಳೆಯಬೇಕು, ಇಚ್ಛೆಯ ಬಲದಲ್ಲಿ ಬೆಳೆಯಬೇಕು. ತನ್ನ ತನದ ಸಹಜ ಆಕಾರ, ಗುಣ, ಸ್ವಭಾವವನ್ನು ಪಡೆಯಬೇಕು. ಇದು ‘ನಾನು’. ಇದು ‘ನನ್ನ ಪ್ರಕೃತಿ’; ಹೀಗೆ ಅವರವರ ಪ್ರಕೃತಿಗನುಗುಣವಾಗಿ ವಿಕಸಿಸುವಂತೆ ಅನುವು ಮಾಡಿಕೊಡುವುದೇ ಈ ಜೀವಜಾಲದ ಪ್ರೋಗ್ರಾಮಿಂಗ್ (ನಿಯಮ) ಅನ್ನಿಸುತ್ತದೆ.
ಅವಳ ಈ ನಡೆಗೆ ಅವಳ ಅರಿವಿಗೆ ಬಾರದ ಎಷ್ಟೋ ಕಾರಣಗಳಿರಬಹುದು. ಬದುಕಿನ ಕಾಲದಲ್ಲಿ ಏನೆಲ್ಲಾ ಘಟನೆಗಳು ಅವಳನ್ನು ಪ್ರಭಾವಿಸಿರಬಹುದು; ಅಥವಾ ದೇಹ ಮನಸ್ಸು ಚೈತನ್ಯಗಳನ್ನು ಘಾಸಿಗೊಳಿಸಿರಲೂಬಹುದು. ಕಾಲನ ಚಲನೆಯಲ್ಲಿ ವಿಸ್ಮೃತಿಗೆ ಸರಿದಂತಿದ್ದ ಈ ಎಲ್ಲವೂ ಎಂದೋ ಒಂದು ದಿನ ಅರಿವಿನ ಕಾವಿನಲ್ಲಿ ಬೆಳಕಾಗಿದ್ದಿರಬೇಕು. ಇಲ್ಲಿ ತನ್ನನ್ನು ತಾನು ಕಂಡುಕೊಳ್ಳುತ್ತಿದ್ದಿರಬೇಕು. ಈಗ ತಾನು ಕಂಡುಕೊಂಡೆ ಎಂದೆನ್ನುತ್ತಿರುವುದೂ ಕೂಡ ಈ ಹೊತ್ತಿನ ‘ಸದ್ಯ ಸತ್ಯ’ವೋ ಅಥವಾ ಸತ್ಯದಂತೆ ಭಾಸವಾಗುತ್ತಿರುವ ಮತ್ತಿನ್ನೇನೋ ಆಗಿರಬಹುದು. ಈ ರೀತಿಯ ನಿರಂತರ ಸತ್ಯದ ಹುಡುಕಾಟದಲ್ಲಿ ತೊಡಗಿಕೊಂಡವರೆಲ್ಲಾ ಕಲೆಯನ್ನು ಆಶ್ರಯಿಸಿದ್ದಾರೆ. ಮತ್ತೆ ಕೆಲವರು ಆಧ್ಯಾತ್ಮಿಕ ಪಥದಲ್ಲಿ ಮುನ್ನಡೆದಿದ್ದಾರೆ. ನನ್ನಂತೆ ಈ ಹುಡುಗಿ ಕೂಡ ರಂಗಭೂಮಿಯನ್ನು ಆಶ್ರಯಿಸಿದ್ದಾಳೆ. ಅವಳೇ ಹೇಳುವಂತೆ ಅವಳ ‘ದೇಹ ಭಾವ ಸತ್ಯ’ವನ್ನು ಕಂಡುಕೊಳ್ಳಲು ರಂಗದಮೇಲೆ ನಟಿಯಾಗಿ ನಿಂತಿದ್ದಾಳೆ. ತನ್ನನ್ನು ತಾನು ಕಂಡುಕೊಳ್ಳುವುದು ಆತ್ಮಶೋಧದ ನಿರಂತರ ಪ್ರಕ್ರಿಯೆ. ದೀರ್ಘ ಕಾಲದ ಈ ಶೋಧ ಪ್ರಕ್ರಿಯೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಬೇಕಾದ ಸೆಳೆತ ತೀವ್ರವಾಗಿರಬೇಕು. ಹಾಗೆಯೇ ಕಂಡುಕೊಳ್ಳುವ ಅಭೀಪ್ಸೆ ಕೂಡ. ಹಾಗಿದ್ದಲ್ಲಿ ಮಾತ್ರವೇ ಕಾಲನ ಹೊಡೆತಗಳನ್ನು ಧಾಟಿಕೊಳ್ಳುತ್ತಾ ಧ್ಯಾನಸ್ಥರಾಗಲು ಸಾಧ್ಯ ಎನಿಸುತ್ತಿದೆ.
ಈಗ ನಾನೂ ಕೂಡ ಅವರ ಮನೆಯವರ ಕಾಳಜಿಯಂತೆಯೇ; “ಅನಾಮಿಕಾ ತನ್ನ ಹುಡುಕಾಟದ ದಾರಿಯಲ್ಲಿ ಎಂದೂ ಎಡವಿ ಬೀಳದಿರಲಿ. ಬದುಕು ಘಾಸಿಯಾಗದಿರಲಿ. ಈ ನಿಟ್ಟಿನಲ್ಲಿ ಅವಳಿಗೆ ಬೇಕಾದುದೆಲ್ಲವೂ ಒದಗಿ ಬರಲಿ. ಅವಳ ತನದ ಚೇತನ ಅರಳಿಕೊಳ್ಳಲಿ.” ಎಂದು ಹಾರೈಸುತ್ತೇನೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ