ಆಸ್ಟ್ರೇಲಿಯಾದ ಬೇಸಿಗೆಯ ಕಡುಬಿಸಿಯನ್ನು ತಪ್ಪಿಸಿಕೊಳ್ಳಲು ಕೆಲವರು ತಂಪು ಪ್ರದೇಶಗಳನ್ನು ಆಯ್ದುಕೊಳ್ಳುತ್ತಾರೆ. ಆದರೆ ಮುಂಚಿತವಾಗಿಯೇ ಬೇಸಿಗೆಯ ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡೇ ಅನೇಕ ಆಸ್ಟ್ರೇಲಿಯನ್ ಸಂಸ್ಥೆಗಳು, ಸರಕಾರದ ಪ್ರವಾಸೀ ಇಲಾಖೆಗಳು ದೇಶದ ಉದ್ದಗಲಕ್ಕೂ ಹಾಸಿ ಹರಡಿರುವ ನೂರಾರು ಪ್ರವಾಸಸ್ಥಳಗಳ ಬಗ್ಗೆ ಆಕರ್ಷಕ ಜಾಹಿರಾತುಗಳನ್ನು ಕೊಡುತ್ತಾ, ಹಲವಾರು ತರಹದ ರಿಯಾಯ್ತಿಗಳು, ಸೌಲಭ್ಯಗಳ ಆಮಿಷವೊಡ್ಡುತ್ತಾರೆ. ಇವು ಮಧ್ಯಮ ವರಮಾನದ ಕುಟುಂಬಗಳನ್ನು ಕೈಬೀಸಿ ಕರೆಯುತ್ತವೆ. ಇವಕ್ಕೆ ಮನಸೋತ ಅನೇಕರು ತಾವೂ ಕೂಡ ಬಹಳ ಗಮ್ಮತ್ತಾದ ಪ್ರವಾಸವನ್ನು ಕೈಗೊಂಡೆವು ಎಂದು ಬಂಧುಮಿತ್ರರಲ್ಲಿ ಜಂಭವಾಗಿ ಹೇಳಿಕೊಳ್ಳುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಆಸ್ಟ್ರೇಲಿಯಾದಲ್ಲಿ ಬೇಸಿಗೆ ರಜೆ ಕಾಲವಿದು. ಶಾಲಾ ಮಕ್ಕಳು, ಕಾಲೇಜು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಖುಷಿಯೋ ಖುಷಿ. ನೌಕರಿಯಲ್ಲಿರುವವರಿಗೆ ಡಿಸೆಂಬರ್ ೨೫ ರ ಕ್ರಿಸ್ಮಸ್ ದಿನ, ಅದರ ಮರುದಿನ ೨೬ರಂದು Boxing Day ಮತ್ತು ಜನವರಿ ಒಂದನೇ ತಾರೀಕು ಸೇರಿದಂತೆ ಮೂರು ದಿನಗಳು ಅಧಿಕೃತವಾಗಿ ರಜೆ ಸಿಕ್ಕಿದೆ. ಹೋದ ಬಾರಿಯ ಪತ್ರದಲ್ಲಿ ಕ್ರಿಸ್ಮಸ್ ಹಬ್ಬದ ಬಗ್ಗೆ ಬರೆದಿದ್ದೆ. ಸುಮಾರು ದೇಶಗಳಲ್ಲಿ ಎಲ್ಲರೂ ಆಚರಿಸುವ ಕ್ರಿಸ್ಮಸ್ ಹಬ್ಬಕ್ಕೆ ಸಾರ್ವಜನಿಕ ರಜೆ ಸಿಗುತ್ತದೆ. ಆದರೆ ಅದರ ಮರುದಿನ ಕೂಡ ರಜೆ ಸಿಗುವುದು ಬೆರಳೆಣಿಕೆ ದೇಶಗಳಲ್ಲಿ ಮಾತ್ರ. ತಮ್ಮ ಒಡೆಯರ ವೈಭವದ ಕ್ರಿಸ್ಮಸ್ ಹಬ್ಬದಾಚರಣೆಗಾಗಿ ವಾರಗಟ್ಟಲೆ ದುಡಿಯುವ ಸೇವಕ ವರ್ಗದವರಿಗೆ ಹಬ್ಬದ ಮರುದಿನ ರಜೆ ಮತ್ತು ಅವರ ಒಡೆಯರು ಕೊಡುವ ವಿಶೇಷ ಉಡುಗೊರೆಗಳನ್ನು ಬಿಚ್ಚಿ ನೋಡಿ ಅವರು ಸಂತೋಷ ಪಡುವ ದಿನ Boxing Day ಎಂದು ಹೆಸರಾಗಿದೆ. ಅಂದರೆ ಬಾಕ್ಸ್ ಗಳನ್ನು ಬಿಚ್ಚಿ ಕೊಟ್ಟ ಉಡುಗೊರೆಯನ್ನು ನೋಡಿ ಹರ್ಷಿಸುವ ಪದ್ಧತಿ. ಇದರ ಜೊತೆಗೆ ಸೇರಿರುವ ಇನ್ನೊಂದು ಪದ್ಧತಿ ಎಂದರೆ ಕ್ರಿಸ್ಮಸ್ ಸಮಯದಲ್ಲಿ ಚರ್ಚ್ಗಳಿಗೆ ಉದಾರ ದಾನಿಗಳು ನೀಡುವ ದಾನ. ಇದೂ ಕೂಡ ಚರ್ಚ್ಗಳಲ್ಲಿರುವ ಮರದ ಅಥವಾ ಲೋಹದ ಪೆಟ್ಟಿಗೆಗಳಲ್ಲಿ ಇರುತ್ತದೆ. ಪೆಟ್ಟಿಗೆಗಳನ್ನು ಹಬ್ಬದ ಮರುದಿನ ತೆಗೆದು ನೋಡಿ, ದಾನಗಳನ್ನು ಬಡವರಿಗೆ ಹಂಚುವುದು.
ಈ ಬಾರಿ ೨೬ರ Boxing Day ಮಂಗಳವಾರವಾಗಿತ್ತು. ಅದನ್ನು ಮುಂದುವರೆಸಿ, ಎಲ್ಲರಿಗೂ ಇಲ್ಲದಿದ್ದರೂ, ಸುಮಾರು ಉದ್ಯೋಗ ಸ್ಥಳಗಳಲ್ಲಿ ಬುಧ, ಗುರು ಮತ್ತು ಶುಕ್ರವಾರವೂ ಸೇರಿ ಬರೋಬ್ಬರಿ ಹತ್ತು ದಿನದ ಮುಂದುವರೆದ ರಜೆ! ಇದರ ಲಾಭವನ್ನು ಪಡೆದು ಬಹುಪಾಲು ಆಸ್ಟ್ರೇಲಿಯನ್ನರು ರಜೆಯ ಮಜಾವನ್ನು ಅನುಭವಿಸುತ್ತಿರುವುದು ನಾವು ಕೇಳುತ್ತಿದ್ದೀವಿ, ನೋಡುತ್ತಿದ್ದೀವಿ. ತೊಂಭತ್ತು, ನೂರು, ನೂರಾಹತ್ತು ಕಿಲೋಮೀಟರು ವೇಗದಲ್ಲಿ ಕಾರು ಓಡಿಸಬಹುದಾದ ಹೈವೇ, ಮೋಟಾರ್ ವೇ ಗಳಲ್ಲಿ ತುಂಬಿ ತುಳುಕುತ್ತಿರುವುದು ಒಂದಿಂಚೂ ಬಿಡದಂತೆ ಪ್ಯಾಕ್ ಮಾಡಿರುವ ಕಾರುಗಳು, ದೊಡ್ಡದೊಡ್ಡ 4WD ಬಾಲಕ್ಕೆ ಅಂಟಿಕೊಂಡು ಪಯಣಿಸುತ್ತಿರುವ ನಾನಾಗಾತ್ರದ caravan ಗಳು, camper van ಗಳು, ಅಲ್ಲಲ್ಲಿ ಕಾಣಿಸುವ ಕಾರು-ದೋಣಿ ಜೋಡಿಗಳು, ನಗುಬರಿಸುವ ಖಾಸಗಿ ರಿಜಿಸ್ಟ್ರೇಷನ್ ಪ್ಲೇಟ್ ಪದಗಳು, ವಾಹನಗಳಿಗೆ ಇನ್ನೂ ಅಂಟಿಕೊಂಡಿರುವ ಕ್ರಿಸ್ಮಸ್ ಅಲಂಕಾರ. ಇವನ್ನೆಲ್ಲಾ ನೋಡುತ್ತಾ ಆನಂದಿಸುತ್ತಾ ಡ್ರೈವಿಂಗ್ ಕಡೆ ಗಮನವಿಡುವುದು ಸ್ವಲ್ಪ ಕಷ್ಟವೇ ಅಂದುಕೊಳ್ಳಿ.
ಜನರು ತಮ್ಮ ಬೇಸಿಗೆ ರಜೆಯನ್ನು ಎಲ್ಲಿ, ಹೇಗೆ ಕಳೆಯುವುದು ಎನ್ನುವ ಲೆಕ್ಕಾಚಾರವನ್ನು ತಿಂಗಳುಗಳ ಮುಂಚೆಯೇ ಮಾಡಿರಬೇಕು. ತಮ್ಮ ಹಣಕಾಸು ಪರಿಸ್ಥಿತಿ, ಆರೋಗ್ಯ, ತಾವು ಇಷ್ಟಪಡುವ ಸ್ಥಳವು ತಮಗೆ ಬೇಕಿರುವ ದಿನಾಂಕಗಳಂದು ಲಭ್ಯವಿದೆಯೇ ಎನ್ನುವುದು, ಹೋಗುವ ಸ್ಥಳದಲ್ಲಿ ಹವಾಮಾನ ಸ್ಥಿತಿ ಹೇಗಿರುತ್ತದೆ ಎನ್ನುವುದು, ರಜೆ ಹೊಂದಿಸಿಕೊಳ್ಳುವುದು ಎನ್ನುವಂತೆ ಅನೇಕ ವಿಷಯಗಳನ್ನು ಆಧರಿಸಿ ತೀರ್ಮಾನ ಮಾಡುತ್ತಾರೆ. ಶ್ರೀಮಂತ ದೇಶವೆಂಬ ಹಣೆಪಟ್ಟಿ ಇರುವ ಆಸ್ಟ್ರೇಲಿಯಾದಲ್ಲಿ ಮಧ್ಯಮ ವರಮಾನ ವರ್ಗದವರೇ ಹೆಚ್ಚು. ಹೀಗಾಗಿ ಅಳೆದೂಸುರಿದೂ ಖರ್ಚು ತೂಗಿಸುವುದು ಯಾವಾಗಲೂ ಇದ್ದದ್ದೇ.
ಉದಾಹರಣೆಗೆ, ಮುಂದಿನ ವರ್ಷ ವಿದೇಶಕ್ಕೆ ಹೋಗುವುದಾದರೆ ಈ ವರ್ಷವೇ ವಿಮಾನ ಪ್ರಯಾಣದ ಖರ್ಚುವೆಚ್ಚಗಳನ್ನು ತೂಗಿಸಿ ನೋಡಿ ಮುಂಗಡ ಬುಕಿಂಗ್ ಮಾಡುತ್ತಾರೆ. ಮಧ್ಯಮ ವರಮಾನವಿರುವ ಕುಟುಂಬಗಳು ಇಂತಹ ದೊಡ್ಡ ವಿದೇಶಿ ಪ್ರವಾಸಗಳಿಗೆಂದೇ ಜಾಗರೂಕತೆಯಿಂದ ಹಣವನ್ನು ಕೂಡಿಡುತ್ತಾರೆ. ಈ ರೀತಿ ಮುಂಗಡ ಬುಕಿಂಗ್ ಮಾಡುವಾಗ ಸಿಗುವ ಹೆಚ್ಚುವರಿ ರಿಯಾಯ್ತಿ, ಸಣ್ಣಪುಟ್ಟ ಖರ್ಚುಗಳ ಉಳಿತಾಯ ಎಲ್ಲವೂ ಮುಖ್ಯವಾಗುತ್ತದೆ. ಆಸ್ಟ್ರೇಲಿಯಾದ ಪಕ್ಕದಲ್ಲಿರುವ ದಕ್ಷಿಣ-ಪೂರ್ವ ಏಷ್ಯಾ ದ್ವೀಪ ರಾಷ್ಟ್ರಗಳು, ಕೆಳಗಿರುವ ನ್ಯೂ ಝಿಲ್ಯಾಂಡ್, ದೂರದ ನ್ಯೂಯಾರ್ಕ್, ಲಂಡನ್, ಶ್ರೀಲಂಕಾ, ಭಾರತ, ಹೀಗೇ ಪಟ್ಟಿಯಲ್ಲಿ ಇರುವ ಆಯ್ಕೆಗಳು ಬಹಳ ಆಕರ್ಷಣೀಯ. ಆರಿಸಿಕೊಳ್ಳುವಾಗ ಮಾತ್ರ ಹಾಸಿಗೆಯಿದ್ದಷ್ಟು ಕಾಲು ಚಾಚಬೇಕು ಎನ್ನುವುದು ಕಡ್ಡಾಯ ನಿಯಮ.
‘ಈ ಬಾರಿ ಬೇಸಿಗೆಯಲ್ಲಿ ಎಲ್ಲಿ ಹೋಗುತ್ತೀರಿ? ಚೆಂದನೆ ತಾಣಕ್ಕೆ ಹೋಗುತ್ತೀರಾ?’ ಎನ್ನುವ ಪ್ರಶ್ನೆ ತೀರಾ ಸಾಮಾನ್ಯವಾದದ್ದು. ಇದು ಸಮಾಜದ ಏಕರೂಪಿ ಮನೋಭಾವನೆಯನ್ನೂ ಪ್ರತಿಬಿಂಬಿಸುತ್ತಾ, ಇರುವವರು-ಇಲ್ಲದವರು ಎಲ್ಲರ ಮೇಲೂ ಒತ್ತಡವನ್ನು ಹೇರುತ್ತದೆ. ಅವರಿಗೆ ಬೇಕಿದೆಯೋ, ಬೇಡವೋ ಎನ್ನುವುದಕ್ಕಿಂತಾ ಈ ಸಾಮಾಜಿಕ ಒತ್ತಡಕ್ಕೆ ಬಲಿಯಾಗಿ, ತಾವುಗಳು ಇಂತಿಂಥಾ ಪ್ರವಾಸ ಕೈಗೊಂಡೆವು, ಇಲ್ಲೆಲ್ಲಾ ಹೋಗಿದ್ದೆವು ಎಂದು ಹೇಳಿಕೊಳ್ಳುವ ಪ್ರಮೇಯ ಬಂದುಬಿಡುತ್ತದೆ. ವಿದೇಶೀ ಪ್ರವಾಸವೆಂದರೆ ಬ್ರಿಟನ್, ಯೂರೋಪ್, ಅಮೇರಿಕ ಮೊದಲ ಸ್ಥಾನವನ್ನು ಆಕ್ರಮಿಸಿಕೊಂಡು ಪ್ರವಾಸಿಗರ ಅಂತಸ್ತನ್ನು ಬಂಧುಬಳಗ, ಮಿತ್ರವರ್ಗದಲ್ಲಿ ಹೆಚ್ಚಿಸಿಬಿಡುತ್ತದೆ. ದೇಶದ ಒಳಗೇ ಇದ್ದುಕೊಂಡು ರಾಜ್ಯಗಳ ಮಧ್ಯೆ ಓಡಾಡಿ ಪ್ರಮುಖ ಸ್ಥಳಗಳಿಗೆ ಹೋದರೆ ಅದಕ್ಕೆ ಎರಡನೇ ಸ್ಥಾನ. ಕಟ್ಟಕಡೆಯದ್ದು ಎಂದರೆ ರಾಜ್ಯದೊಳಗೇ ಉಳಿದುಕೊಂಡು ಕ್ಯಾಂಪಿಂಗ್ ಹೋಗುವುದು ಇತ್ಯಾದಿ ಮಾಡಿದರೆ ‘ಓ ಹೌದಾ’ ಎನ್ನುವ ಉದಾಸೀನದ ಉದ್ಗಾರವನ್ನು ಕೇಳಬೇಕು.
ಆಸ್ಟ್ರೇಲಿಯಾದ ಬೇಸಿಗೆಯ ಕಡುಬಿಸಿಯನ್ನು ತಪ್ಪಿಸಿಕೊಳ್ಳಲು ಕೆಲವರು ತಂಪು ಪ್ರದೇಶಗಳನ್ನು ಆಯ್ದುಕೊಳ್ಳುತ್ತಾರೆ. ಆದರೆ ಮುಂಚಿತವಾಗಿಯೇ ಬೇಸಿಗೆಯ ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡೇ ಅನೇಕ ಆಸ್ಟ್ರೇಲಿಯನ್ ಸಂಸ್ಥೆಗಳು, ಸರಕಾರದ ಪ್ರವಾಸೀ ಇಲಾಖೆಗಳು ದೇಶದ ಉದ್ದಗಲಕ್ಕೂ ಹಾಸಿ ಹರಡಿರುವ ನೂರಾರು ಪ್ರವಾಸಸ್ಥಳಗಳ ಬಗ್ಗೆ ಆಕರ್ಷಕ ಜಾಹಿರಾತುಗಳನ್ನು ಕೊಡುತ್ತಾ, ಹಲವಾರು ತರಹದ ರಿಯಾಯ್ತಿಗಳು, ಸೌಲಭ್ಯಗಳ ಆಮಿಷವೊಡ್ಡುತ್ತಾರೆ. ಇವು ಮಧ್ಯಮ ವರಮಾನದ ಕುಟುಂಬಗಳನ್ನು ಕೈಬೀಸಿ ಕರೆಯುತ್ತವೆ. ಇವಕ್ಕೆ ಮನಸೋತ ಅನೇಕರು ತಾವೂ ಕೂಡ ಬಹಳ ಗಮ್ಮತ್ತಾದ ಪ್ರವಾಸವನ್ನು ಕೈಗೊಂಡೆವು ಎಂದು ಬಂಧುಮಿತ್ರರಲ್ಲಿ ಜಂಭವಾಗಿ ಹೇಳಿಕೊಳ್ಳುತ್ತಾರೆ. ಇನ್ನೂ ಕೆಲವರು ತಾವು ಎಷ್ಟೋ ವರ್ಷಗಳಿಂದ ನೋಡಲು ಕಾದಿದ್ದ, ತಮ್ಮ ಬಕೆಟ್ ಲಿಸ್ಟಿನಲ್ಲಿ ಇರುವ, ಅತ್ಯಂತ ಹೆಸರುವಾಸಿ ಸ್ಥಳಗಳಿಗೆ ಹೋಗಿ ಹಿರಿಹಿರಿ ಹಿಗ್ಗುತ್ತಾರೆ.
ಆಸ್ಟ್ರೇಲಿಯಾದಲ್ಲಿ ಅಂತಹ ಹೆಸರುವಾಸಿ ಮತ್ತು ಜನಪ್ರಿಯ ಸ್ಥಳಗಳು ಬೇಕಾದಷ್ಟಿವೆ. ತಕ್ಷಣಕ್ಕೆ ನೆನಪಾಗುವುದು ಸಿಡ್ನಿ ನಗರದ ಪಶ್ಚಿಮಕ್ಕಿರುವ Blue Mountains. ನೂರಾರು ಮೈಲಿ ಹಬ್ಬಿರುವ ಈ ಬೆಟ್ಟ, ಪರ್ವತಗಳ ಸಾಲು ಒಮ್ಮೊಮ್ಮೆ ನೀಲಿಯಾಗಿ ಕಾಣುವುದು ನಿಜವೇ. ಅಲ್ಲಿರುವ ವ್ಯೂ ಪಾಯಿಂಟ್ ಅಲ್ಲಿ ನಿಂತು ನೋಡಿದರೆ ತ್ರೀ ಸಿಸ್ಟರ್ಸ್ ಎಂದು ಕರೆಸಿಕೊಳ್ಳುವ ಬೆಟ್ಟಗಳು ಕಾಣುತ್ತವೆ. ಅಬೊರಿಜಿನಲ್ ಜನರ ಅನೇಕಾನೇಕ ಕಥೆಗಳು ಈ ಬೆಟ್ಟಗಳ ಜೊತೆ ಹಾಸುಹೊಕ್ಕಾಗಿವೆ. ಮತ್ತೊಂದು ಹೆಸರುವಾಸಿ ಪ್ರದೇಶ ಮೆಲ್ಬೋರ್ನ್ ನಗರದಿಂದ ಆಚೆ ಇದೆ. ನಾವು ದಕ್ಷಿಣಕ್ಕೆ ಹೊರಟು ಸ್ವಲ್ಪ ಹಾಗೇ ಪಶ್ಚಿಮಕ್ಕೆ ತಿರುಗಿ Great Ocean Road ಅಲ್ಲಿ ಡ್ರೈವ್ ಮಾಡುತ್ತಾ ಸಾಗಿದರೆ ಪಕ್ಕದಲ್ಲಿರುವ Southern Ocean, ಸಮುದ್ರದಂಚಿನಲ್ಲಿ ಉದ್ದಕ್ಕೆ ತಲೆಯೆತ್ತಿರುವ ಅನೇಕ ಮೊನಚು ಗುಡ್ಡಗಳು (cliff), ಬೀಚ್ಗಳು, ರಾಕ್ ಪೂಲ್ಸ್, ಪ್ರಾಣಿ-ಪಕ್ಷಿ ವಿಶೇಷಗಳು ಅಪರೂಪದ ಅನುಭವವನ್ನು ಕೊಡುತ್ತದೆ.
ಇನ್ನು ಆಸ್ಟ್ರೇಲಿಯಾದ ಮೇಲ್ಭಾಗಕ್ಕೆ ಬಂದರೆ ಕೆಂಪುಬಣ್ಣದ Uluru ಬೆಟ್ಟವಂತೂ ಒಂದು ಅದ್ಭುತ ರಮ್ಯದಂತೆ ಅದೆಷ್ಟೋ ಸಾವಿರಸಾವಿರ ವರ್ಷಗಳಿಂದ ಅಲ್ಲಾಡದೇ ಕೂತುಬಿಟ್ಟಿದೆ. Uluru ಬೆಟ್ಟ ಆಸ್ಟ್ರೇಲಿಯಾದ ಚಿಹ್ನೆ. ಆಸ್ಟ್ರೇಲಿಯಾ ಖಂಡದ ಮಧ್ಯ ಮರುಭೂಮಿಯ ರೆಡ್ ಸೆಂಟರ್ ಎಂದು ಕೆಂಪುಮಣ್ಣಿನ ನೆಲದಲ್ಲಿ ವಿಶಾಲವಾಗಿ ಹರಡಿರುವ ಏಕಶಿಲಾ ಬೆಟ್ಟವಿದು. Uluru ಸ್ಥಳೀಯ ಅನಂಗು ಅಬೊರಿಜಿನಲ್ ಜನರಿಗೆ ಪವಿತ್ರವಾದದ್ದು. ವರ್ಷಗಳ ಕಾಲ ಮಾಡಿದ ಪ್ರಯತ್ನಗಳಿಂದ ಈಗ ಈ ಬೆಟ್ಟವನ್ನು ಹತ್ತುವುದು ಮತ್ತು ಬೆಟ್ಟವನ್ನು ಮುಟ್ಟುವುದನ್ನು ನಿಷೇಧಿಸಲಾಗಿದೆ. ಬೆಳಗಿನ ಸೂರ್ಯೋದಯ ಮತ್ತು ಸಂಜೆಯ ಸೂರ್ಯಾಸ್ತಮಾನ ಸಮಯದಲ್ಲಿ ಸೂರ್ಯಕಿರಣಗಳು ತಾಕಿದಾಗ ಈ ಬೆಟ್ಟದ ಕೆಂಪು ಬಣ್ಣವು ವಿವಿಧ ಛಾಯೆಗಳನ್ನು ಮೂಡಿಸುತ್ತಾ ಮೈನವಿರೇಳಿಸುತ್ತದೆಯಂತೆ. ಭಾರತದಿಂದ ಸಿಡ್ನಿಗೆ ಬರುವ ವಿಮಾನದ ಹಾದಿಯಲ್ಲಿ ಒಮ್ಮೊಮ್ಮೆ Uluru ಬೆಟ್ಟ ಕಾಣುತ್ತದೆ.
ಇನ್ನು ಕ್ವೀನ್ಸ್ಲ್ಯಾಂಡ್ ರಾಜ್ಯದ ಸಮುದ್ರತೀರವು, ಜಲಪಾತಗಳು, ಗ್ರೇಟ್ ಸ್ಯಾಂಡಿ ಡೆಸರ್ಟ್, ಗಾರಿ ದ್ವೀಪ, ಗ್ರೇಟ್ ಬ್ಯಾರಿಯರ್ ರೀಫ್, ಮೀನು-ಮೊಸಳೆ-ಆಮೆ-ಮಂಟಾ ರೇ ಇತ್ಯಾದಿ ಮಾಂತ್ರಿಕ ಜೀವಿಗಳು ನಮ್ಮನ್ನು ಮರುಳು ಮಾಡುತ್ತವೆ. ದೇಶದ ದಕ್ಷಿಣದ ತುದಿಗೆ ಹೋಗಿ ಅಲ್ಲಿಂದ ಮೇಲೆ ನೋಡಿದರೆ ಅಲ್ಲಿರುವುದು Great Victoria Desert. ಇದರ ಜೊತೆಗೆ ಹೆಣೆದುಕೊಂಡಿರುವ ಅಬೊರಿಜಿನಲ್ ಜನರ ಮತ್ತು ವಸಾಹತುಶಾಹಿತನಕ್ಕೆ ಸಂಬಂಧಿಸಿದ ಕಥೆಗಳಿಗೆ ಕೊನೆಯಿಲ್ಲ, ಮೊದಲಿಲ್ಲ. ಪಶ್ಚಿಮದಿಂದ ಮೇಲಕ್ಕೆ ಹೋದರೆ ಅಚ್ಚರಿ ಹುಟ್ಟಿಸುವ ಜೀವಜಾಲ ವೈವಿಧ್ಯತೆಯಿರುವ ಕಾಕಡು ಅರಣ್ಯಗಳಿವೆ.
ಹೀಗೇ ಹೇಳುತ್ತಾ ಹೋದರೆ ಆಸ್ಟ್ರೇಲಿಯಾದ ಮನಮೋಹಕ ಪ್ರಾಕೃತಿಕ ಸೌಂದರ್ಯಕ್ಕೆ ಎಣೆಯಿಲ್ಲ. ಅವನ್ನೆಲ್ಲಾ ನೋಡಲು, ಅನುಭವಿಸಲು, ಸಂತೋಷಪಡಲು ತಿಂಗಳುಗಳಲ್ಲ, ವರ್ಷಗಳೇ ಬೇಕು. ವಿದೇಶಗಳಿಂದ ‘ಆಸ್ಟ್ರೇಲಿಯನ್ ಡ್ರೀಮ್’ ಹೊತ್ತುಕೊಂಡು ಇಲ್ಲಿಗೆ Backpack ಪ್ರವಾಸಿಗರು ಬಂದಾಗ ಅವರು ಮಾಡುವುದೇನೆಂದರೆ ಒಂದು ಕ್ಯಾಂಪರ್ ವ್ಯಾನ್ ಬಾಡಿಗೆಗೆ ತೆಗೆದುಕೊಂಡು ಚಿಕ್ಕದೊಂದು ಗುಂಪು ಕಟ್ಟಿಕೊಂಡು ತಮ್ಮ ಕಡಿಮೆ ಬಜೆಟ್ಟಿನಲ್ಲಿ ವರ್ಷಪೂರ್ತಿ ದೇಶ ಸುತ್ತುತ್ತಾರೆ. ಬೇಸಿಗೆ ರಜೆಯಲ್ಲಿ ನಾವು ಹೋಗುವ ಕ್ಯಾಂಪ್ ಸೈಟ್ಗಳಲ್ಲಿ ಆಗಾಗ ಇಂತಹ backpackers ಮಾತಿಗೆ ಸಿಗುತ್ತಾರೆ. ಅವರ ಪ್ರವಾಸ ಕಥೆಗಳನ್ನು, ಅನುಭವಗಳನ್ನು ಕೇಳುತ್ತಾ, ಮುಖದಲ್ಲಿ ಲಾಸ್ಯವಾಡುವ ಮಿಂಚಿನ ಹೊಳಪನ್ನು ನೋಡುವಾಗ ಅಲ್ಲಿ ತತ್ಕ್ಷಣ ಅನೇಕ ಅದ್ಭುತರಮ್ಯ ಪ್ರಪಂಚಗಳು ಹುಟ್ಟಿಬಿಡುತ್ತವೆ. ಆಸ್ಟ್ರೇಲಿಯಾ ಬೇಸಿಗೆ ಸಂಜೆಯ ತಂಪು ಗಾಳಿಯಲ್ಲಿ ಕಥೆ ಕೇಳುತ್ತಾ, ನಾವು ತೇಲಾಡುತ್ತಾ ಅದ್ಯಾವುದೋ ಲೋಕದಲ್ಲಿ ಕಳೆದುಹೋಗುತ್ತೀವಿ. ಅಥವಾ ಆ ಭ್ರಮೆಯಲ್ಲಿ ಓಲಾಡುತ್ತೀವಿ. ಅದುವೇ ಆಸ್ಟ್ರೇಲಿಯಾದ ಮಾಯೆ!
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.
Chennagide
ಧನ್ಯವಾದಗಳು ನಿಮಗೆ.