ಸೂರ್ಯಕಾಂತ್ ಕೃಷಿಯೆಡೆಗಿನ ಸೆಳೆತ ಇತ್ತಲ್ಲ, ಅದೇನೂ ಸಣ್ಣದಲ್ಲ. ಆದರೆ ನೀರಿಲ್ಲದೆ ಕೃಷಿ ಕೆಲಸ ಮಾಡುವುದು ಹೇಗೆ? ಅದಕ್ಕಾಗಿ ಬೋರ್ವೆಲ್ ಉತ್ತರದಂತೆ ಕಾಣಿಸಿದರೂ ಅದು ಪರಿಹಾರವಾಗಿ ಕಾಣಲಿಲ್ಲ. ಅದಕ್ಕಾಗಿ ಬೋರ್ವೆಲ್ ಹಾಕಿಸಲು ಆತನ ಮನಸ್ಸು ಒಪ್ಪಲಿಲ್ಲ. ಸತತ ಐದು ತಿಂಗಳು ಒಬ್ಬರೇ ಬಾವಿ ತೋಡಿದರು. ಮೈಗೆ ಗಾಯ, ನೋವು ಎಲ್ಲಾ ಆದವು. ಆಗ ಜನರ ಪ್ರತಿಕ್ರಿಯೆ ಇತ್ತಲ್ಲ, ಅದು ಇರಿದದ್ದು ಮನಸ್ಸಿಗೆ; ಎಲ್ಲಾ ಗಾಯಕ್ಕಿಂತ ಹೆಚ್ಚು ಕಾಡಿದ್ದು ಅದೇ ಎನ್ನುವುದು ಸೂರ್ಯಕಾಂತ್ ಮನದಾಳ.
ಸಿದ್ದು ಸತ್ಯಣ್ಣನವರ ಹೊಸ ಕೃತಿ “ಬೆಳಕಿನ ತೆನೆ”ಯ ಒಂದು ಬರಹ ನಿಮ್ಮ ಓದಿಗೆ
ಬೀದರ್ ಎಂದರೆ ಬರೀ ಬಿಸಿಲು ಎಂದು ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಔರಾದ್ ತಾಲೂಕು ಎಂದರೆ ಮುಗಿಯಿತು. ಆ ಮೂಗು ಮುರಿಯುವ ಕ್ರಿಯೆ ಎರಡು ಬಾರಿ ಪುನರಾವರ್ತಿತ. ಆದರೆ ವಸ್ತುಸ್ಥಿತಿ ಹಾಗಿಲ್ಲ. ತೀರಾ ಭಿನ್ನ. ಬೀದರ್ ಮಳೆಗಾಲಕ್ಕೆ ಮಲೆನಾಡಿನಂತಹ ಸೊಬಗು. ಔರಾದ್ ತಾಲೂಕಿಗೆ ಊಟಿ, ಚಿರಾಪುಂಜಿಯಂತಹ ಯೌವ್ವನ. ಚೂರು ಹಸಿರು ಕಾಣುವ ಎಲ್ಲೇ ಕಾಲಿಟ್ಟರೂ ಮುತ್ತಿಕ್ಕುವ ತೊರೆಯ ನೀರು. ಮಳೆಗಾಲಕೆ ಕಣ್ಣಾಯಿಸಿದಷ್ಟು ದೂರಕೂ ನಿಗಿ ನಿಗಿ ಹಸಿರ ಬೆಳಕು.
ಬೀದರ ಜಿಲ್ಲೆಯ ಹಿಂದುಳಿದ ತಾಲೂಕು ಎನಿಸಿಕೊಂಡ ಔರಾದ್ ಕರ್ನಾಟಕದಲ್ಲೂ ಅದೇ ಹಣೆಪಟ್ಟಿ ಹೊಂದಿರುವ ಪಟ್ಟಣ. ಕನ್ನಡ ಮಾತನಾಡುವುದೇ ಕಡಿಮೆ. ಮಾತನಾಡಿದರೂ ಅಲ್ಲಿಯ ಕನ್ನಡದ ಲಯ ಉಳಿದವರಿಗೆ ಅರ್ಥವಾಗುವುದು ದುಸ್ತರ. ಬೇಸಿಗೆ ಕಾಲದಲ್ಲಷ್ಟೇ ಪ್ರಾಕೃತಿಕವಾಗಿ ಹಿಂದುಳಿದ ಹಣೆಪಟ್ಟಿಯ ಈ ತಾಲೂಕಿಗೆ ಮಳೆಗಾಲದಲಿ ಮಾತ್ರ ಅವರವರ ಇಷ್ಟದ ನಟಿಯ ಕೆನ್ನೆಯ ನುಣುಪಿನಷ್ಟು ಹೆಚ್ಚುಗಾರಿಕೆ. ಮಳೆಗಾಲದಲಿ ಇಂತಹ ಸುಖವುಣಿಸುವ ಬೀದರ್, ಬೇಸಿಗೆಯಲ್ಲಿ ಥೇಟ್ ಸೂರ್ಯನ ಸಂತ್ರಸ್ತ. ಕುಡಿಯುವ ಹನಿನೀರಿಗೂ ಔರಾದ್ ಪಡಿಪಾಟಲು ಪಡಬೇಕು. ಮಳೆಗಾಲದ ಪ್ರಯಾಣಕ್ಕೂ ಬೇಸಿಗೆಯ ಪ್ರಯಾಣಕ್ಕೂ ಸಂಪೂರ್ಣ ವಿರುದ್ಧ ವಾತಾವರಣ. ಇಂಥದ್ದರಲ್ಲೇ ಬೇಸಿಗೆ ಮಧ್ಯಾಹ್ನವೊಂದರಲ್ಲಿ ಆ 34 ವರ್ಷದ ಎಂಟೆಕ್ ಪದವೀಧರ ತಾ ನೆಟ್ಟ ಸಸಿಗಳಿಗೆ ನೀರುಣಿಸುವ ಪಡಿಪಾಟಲಿಗೆ ಬಿದ್ದಿದ್ದ. ಆತನ ಊರು ಔರಾದ್ ತಾಲೂಕಿನ ಕೌಠಾ(ಬಿ) ಎಂಬ ಹಳ್ಳಿ. ತಾನೇ ಕೊರೆದ ಬಾವಿಯಲಿ ಬೇಸಿಗೆ ಕಾರಣಕ್ಕೆ ಮೂಲೆಯೊಂದರಲ್ಲಿ ಶೇಖರಣೆಯಾಗಿದ್ದ ನೀರನ್ನು ಕೊಡದ ಮೂಲಕ ಒಂದೂವರೆ ಎಕರೆಯ ತಮ್ಮ ಜಮೀನಿನಲ್ಲಿದ್ದ 400 ವಿಭಿನ್ನ ಗಿಡಗಳಿಗೆ ಹೊತ್ತುಹಾಕಿ ಉಣಿಸಲು ಹದಿನಾಲ್ಕು ಅಡಿ ಖಾಲಿ ಕೊಡದೊಂದಿಗೆ ಇಳಿದು, ಅಷ್ಟೇ ಅಡಿ ತುಂಬಿದ ಕೊಡದೊಂದಿಗೆ ಮೇಲೇರುತ್ತಿದ್ದ. ಆತನ ಹೆಸರು ಸೂರ್ಯಕಾಂತ್ ಪ್ರಭು ಕೋಳಿ.
ಓದಿದ್ದು ಮೆಕ್ಯಾನಿಕಲ್ ಎಂಜನೀಯರಿಂಗ್. ಮಷೀನ್ ಡಿಸೈನಿಂಗ್ನಲ್ಲಿ ಎಂ.ಟೆಕ್ ಸ್ನಾತಕೋತ್ತರ ಪದವಿ. ಮಾಡಿದ್ದು ಪುಣೆ ಮಹಾನಗರದ ಖಾಸಗಿ ಕಂಪನಿಯೊಂದರಲ್ಲಿ ಮೆಕ್ಯಾನಿಕ್ ಎಂಜನೀಯರ್, ಹೈದರಾಬಾದಿನ ಪ್ರತಿಷ್ಠಿತ ಎಂಜನೀಯರಿಂಗ್ ಕಾಲೇಜಿಗೆ ಬೋಧಕ ಕೆಲಸ. ಕೈತುಂಬಾ ಸಂಬಳವಿತ್ತು. ತುಡಿತ ಅನ್ನೋದಿತ್ತಲ್ಲ ಅದು ಮೊದಲಿನಿಂದಲೂ ಬೇರೆಯೇ ಆಗಿತ್ತು. ಕಲಿಯುವಾಗ ಚಡಪಡಿಕೆ. ಕಲಿತ ಮೇಲೆ ನೌಕರಿ ಹಿಡಿದರೂ ಕಟಿಪಿಟಿ. ಗಿಡ ಹಚ್ಚಬೇಕು, ನೀರು ಹಾಯಿಸಬೇಕು, ಬೆಳೆ ಬೆಳಿಬೇಕು ಎಂಬಾಸೆ ಎದೆಗೆ ಒದೆಯುತ್ತಲೇ ಇತ್ತು. ಎದೆಗೂ ಮಿತಿಯುಂಟು? ಎಷ್ಟು ಒದೆ ಸಹಿಸಿಕೊಳ್ಳಬಲ್ಲುದದು? ದಶರಥ್ ಮಾಂಜಿ ಬಹುತೇಕರಿಗೆ ಗೊತ್ತು. ಮೊದಲು ಆತನನ್ನು ಸಿನಿಮಾದ ಮೂಲಕ ಕನ್ನಡಕ್ಕೆ ಪರಿಚಯಿಸಿದ್ದು ನಿರ್ದೇಶಕ ಜಯತೀರ್ಥ ಅವರು. ‘ಒಲವೇ ಮಂದಾರ’ ಸಿನಿಮಾ ನೋಡಿದವರಿಗೆ ಅದು ಗೊತ್ತು. ಜೀವಮಾನದ ಬಹುಪಾಲು ಸಮಯ ಗುಡ್ಡವನ್ನೇ ಕಡಿದು ದಾರಿ ಮಾಡಿದಾತ ಮಾಂಜಿ. ಆತನ ಈ ಕಾರ್ಯದ ಹಿಂದೆ ಪತ್ನಿ ನೀರು ತರುವಾಗ ಆ ಗುಡ್ಡದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾಗಿತ್ತು. ಆ ಬಗೆಗೆ ಹಿಂದಿ ಸಿನಿಮಾ ‘ಮಾಂಜಿ’ ಅಂತಲೇ ಬಂದದ್ದು ಸಹ ಈಗ ಇತಿಹಾಸ. ತುಡಿತದ ಒದೆತ ಯಾವಾಗಲೂ ಬಲು ಭಾರ. ಅನಿವಾರ್ಯತೆಗೆ ಪಗಾರಕ್ಕೆ ಬದುಕಿದರೂ ಅಲ್ಲೊಂದು ಅನಾಥಭಾವ. ಸೂರ್ಯಕಾಂತ್ ಸೋತಿದ್ದು ಕೃಷಿಗೆ. ಆದರೆ ನೀರಿಲ್ಲದ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಏನು ಮಾಡುವುದು? ಬಾಲ್ಯದಿಂದಲೂ ಗಿಡ-ಮರದ ನಂಟು. ಪರಿಸರದ ಪ್ರೀತಿ ಎದೆಯಲ್ಲಿ ಬಲು ಜೋಪಾನವಾಗಿತ್ತು. ಅಳೆದು ತೂಗಲು ಕೆಲ ದಿನಗಳು ಕಟಿಪಿಟಿಗೆ ಹಿಡಿದವು. ಒಬ್ಬನೇ ಮಾಡಬಲ್ಲೆ ಎಂಬ ವಿಶ್ವಾಸ ಚಿಗುರೊಡೆದದ್ದೆ ತಡ, ಮರು ಯೋಚನೆ ಮಾಡಲಿಲ್ಲ. ಲ್ಯಾಪ್ಟ್ಯಾಪ್ ಕೀಬೋರ್ಡ್, ಆಧುನಿಕ ಪ್ರೊಜೆಕ್ಟರ್ ಮೇಲೆ ವಸಾಹತು ಸಾಧಿಸಿದ್ದ ಕೈಗಳಿಗೆ ಗುದ್ದಲಿ, ಹಾರೆ, ಸಲಾಕೆಗಳು ಬಂದಿದ್ದವು. ಸೂರ್ಯಕಾಂತ್ಗೆ ಹೊಳೆದದ್ದೇ ಇದ್ದ ತಮ್ಮ ಜಮೀನಿನಲ್ಲಿ ಒಬ್ಬನೇ ಬಾವಿ ತೋಡುವ ಉಪಾಯ. ತುಡಿತದ ಹುಚ್ಚುತನ ಆ ಗಟ್ಟಿಗೆ ಹಚ್ಚಿದರೂ ಬಾಲ್ಯದಿಂದಲೂ ಮೈಯುಣ್ಣದಂತೆ ಮಾಡಿದ್ದ ಹೊಲದ ಕೆಲಸಗಳು ಕೆಲಸ ಮಾಡಿದ್ದವು. ಬೀದರ್ ಜಿಲ್ಲೆ ಮೊದಲಿನಿಂದಲೂ ಮನೆಯ ಹಿಂದಿನ ಬಾವಿಗಳಿಗೆ ಹೆಸರುವಾಸಿ. ಆ ಬಾವಿಗಳೋ ಪಕ್ಕಾ ಕೆಂಪುಮಣ್ಣಿನವು. ಇಲ್ಲಿನ ಬಹುತೇಕ ಮನೆಯ ಹಿತ್ತಲಲ್ಲಿ ಕಂಡುಬರುವ ಈ ಬಾವಿಗಳ ಬಗ್ಗೆ ಬಿದರಿ ವೈಶಿಷ್ಟ್ಯ ಎನ್ನುವವರು ಹೆಚ್ಚು, ಬೀದರ್ ಬಗೆಗೆ ಜ್ಞಾನ ಉಳ್ಳವರು. ಇವತ್ತಿಗೂ ಗವಾನನ ಕಾಲದಲ್ಲೇ ಮಾಡಿದ ನೆಲದಡಿಯ ಕುಡಿಯುವ ನೀರಿನ ಸಂಪರ್ಕ ಮಜಬೂತಾಗಿದೆ. ಇದು ವಿಶ್ವಮಾನ್ಯತೆಗೂ ಹೆಸರಾಗಿತ್ತು. ಹಾಗಾಗಿ ಸೂರ್ಯಕಾಂತ್ಗೆ ತಮಗಿದ್ದ ಜಮೀನಿನಲ್ಲಿ ತಾವೊಬ್ಬರೇ ಬಾವಿ ತೋಡುವ ಉಪಾಯ ಹೊಳೆದಿರಬಹುದು.
ಸೂರ್ಯಕಾಂತ್ ಕೃಷಿಯೆಡೆಗಿನ ಸೆಳೆತ ಇತ್ತಲ್ಲ, ಅದೇನೂ ಸಣ್ಣದಲ್ಲ. ಆದರೆ ನೀರಿಲ್ಲದೆ ಕೃಷಿ ಕೆಲಸ ಮಾಡುವುದು ಹೇಗೆ? ಅದಕ್ಕಾಗಿ ಬೋರ್ವೆಲ್ ಉತ್ತರದಂತೆ ಕಾಣಿಸಿದರೂ ಅದು ಪರಿಹಾರವಾಗಿ ಕಾಣಲಿಲ್ಲ. ಅದಕ್ಕಾಗಿ ಬೋರ್ವೆಲ್ ಹಾಕಿಸಲು ಆತನ ಮನಸ್ಸು ಒಪ್ಪಲಿಲ್ಲ. ಸತತ ಐದು ತಿಂಗಳು ಒಬ್ಬರೇ ಬಾವಿ ತೋಡಿದರು. ಮೈಗೆ ಗಾಯ, ನೋವು ಎಲ್ಲಾ ಆದವು. ಆಗ ಜನರ ಪ್ರತಿಕ್ರಿಯೆ ಇತ್ತಲ್ಲ, ಅದು ಇರಿದದ್ದು ಮನಸ್ಸಿಗೆ; ಎಲ್ಲಾ ಗಾಯಕ್ಕಿಂತ ಹೆಚ್ಚು ಕಾಡಿದ್ದು ಅದೇ ಎನ್ನುವುದು ಸೂರ್ಯಕಾಂತ್ ಮನದಾಳ. ‘ಕಲಿತವಗ ಯಾಕ್ ಬೇಕು ಇದೆಲ್ಲ’ ಅಂದವರು ಹತ್ತು ಜನ. ‘ದುಡದ ದುಡ್ಡು ಮಾಡಿಸುತ್ತ. ಎಷ್ಟ್ ದಿನ ಈ ಕೆಬ್ಬಣ ಸಾಮಾನ ಜೊತೆಗೆ ಆಟ, ಬಿಟ್ಟು ಹೊಳ್ಳಿ ಹೋಗುದ ದಾರಿ’ ಅಂದವರು ನೂರು ಜನ. ‘ಇದ್ದ ಕೆಲಸ ಬಿಟ್ಟು ಬಂದಿದ್ದು ಹುಚ್ಚತನ. ಇನ್ನ ಒಬ್ನ ಬಾವಿ ತೋಡಾಕ ಹೋಗೂದು ಈತ ಫಿಕ್ಸ್ ಹುಚ್ಚನ ಆಗಿರಬೇಕು ಎಂಬುದರ ಲಕ್ಷಣ’ ಎಂದವರು ಸಾವಿರ ಜನ. ಆದರೆ ಸೂರ್ಯಕಾಂತ್ ತೋಡಿದ ಬಾವಿಯ ನೀರು ಇಂದು ಅಕ್ಕಪಕ್ಕದವರ ಜಮೀನಿಗೂ ಹರಿಯುತ್ತಿದೆ. ಹೊಸ ಹಸಿರು ಹುಟ್ಟಲು ಕಾರಣವಾಗುತ್ತಿದೆ ಎಂಬುದು ವಾಸ್ತವ. ಆಗ ಇವೆಲ್ಲ ಬಾಣದಂತೆ ಎದೆಗೆ ನಾಟುತ್ತಲೇ ಇದ್ದರೂ ಸೂರ್ಯಕಾಂತ್ ಯೋಚಿಸುತ್ತಿದ್ದದ್ದು ಬಾವಿಗೆ ನೀರು ಯಾವಾಗ ಬರಬಹುದು? ಅಂತಲೇ. ಮನುಷ್ಯನ ಪರಿಪೂರ್ಣತೆ ಅವನಂದುಕೊಂಡಂತೆ ಬದುಕುವುದರಲ್ಲಿಯೇ. ಆಗ ಸೂರ್ಯಕಾಂತ್ ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ನಡೆಯುವ ದಾರಿ ಮನದೊಳಗಿದೆ, ನಡೆಯೋಣ. ನಡೆಯತೊಡಗಿದರೆ ದಾರಿ ತಾನೇ ಸಿಗುತ್ತದೆ, ಸಿಗದಿದ್ದರೆ ನಾ ನಡೆದದ್ದು ಕಾಲುದಾರಿಯಾಗಬಹುದು ಎಂಬ ಮನಸ್ಥಿತಿ.
ಗುದ್ದಲಿಗಳೊಂದಿಗೆ ಶುರುವಾದ ಪ್ರೇಮಗೀತೆಗೆ ತಡೆಯೇ ಇರಲಿಲ್ಲ. ಸತತ ಐದು ತಿಂಗಳು 25/30 ವಿಸ್ತೀರ್ಣದಲ್ಲಿ ಸೂರ್ಯಕಾಂತ್ ಒಬ್ಬರೇ 14 ಅಡಿ ಆಳಕ್ಕೆ ಅಗೆದರು. ಗಂಗೆ ಭಗೀರಥನಿಗೆ ಕರಗಿದಂತೆ ಇವರಿಗೂ ಕರಗಿದಳು. ನೀರು ಅಷ್ಟಕ್ಕೆ ಚಿಮ್ಮಿತ್ತು. ಆಗ ಮಳೆಗಾಲ ಬೇರೆ; ಬಾವಿ ತೋಡುವ ಕೆಲಸ ಅಷ್ಟಕ್ಕೆ ನಿಂತಿತು. ನಂತರ ಬೇಸಿಗೆ ಹೊತ್ತಿಗೆ ನೀರಿಲ್ಲದ ಭೂಮಿಯ ಸಸಿಗಳಿಗೆ ದುರಿತ ಕಾಲ ಉಂಟಾದಾಗಲೇ ಸೂರ್ಯಕಾಂತ್ ಕೊಡದ ಮೂಲಕ ನೀರುಣಿಸಿ ಅವುಗಳನ್ನು ಬದುಕಿಸಿಕೊಂಡರು. ಒಂದೂವರೆ ಎಕರೆ ಜಮೀನಿನಲ್ಲೇ ಮುಂದೆ ಕುರಿ, ಕೋಳಿ ಸಾಕಣೆ ಹಾಗೂ ಇತರೆ ಕೃಷಿ ಚಟುವಟಿಕೆ ನಡೆಸುವ ಉಮೇದಿ ಸೂರ್ಯಕಾಂತರಿಗೆ. ಸದ್ಯವು ಬದುಕು ಆಟೀಟು ಕಟಿಪಿಟಿಯಲ್ಲಿದ್ದರೂ ನನ್ನ ಖುಷಿಯನ್ನು ಹುಡುಕಿಕೊಂಡ ತೃಪ್ತಿ ನನಗಿದೆ. ಬೋಧನೆ, ಕೆಲಸ ಎಲ್ಲ ಮಾಡುವಾಗ ಈಗಿನಷ್ಟು ಖುಷಿ ಇರಲಿಲ್ಲ ಎಂಬ ಅವರ ಅಭಿಪ್ರಾಯ ಅವರ ನಗುವಿನ ಮೂಲಕ ಹೊರಬಂದಿತ್ತು.
‘ಗಿಡಗಳು ಬೆಳೀತವೆ. ಹಣ್ಣು ಹಾಗೂ ಮರಗಳು ಸೇರಿ ಒಟ್ಟು 16 ವಿವಿಧ ರೀತಿಯ 1200 ಗಿಡ ಬೆಳೆದಿದ್ದೇನೆ. ಅವು ಬೆಳೆದ್ರೆ ನಾನೂ ಬೆಳೀತೀನಿ. ಬೆಳೆಸುವುದೆ ಸಂಯಮ ಅಲ್ವೇ? ಎನ್ನುವಾಗ ಸೂರ್ಯಕಾಂತ್ ಮುಖದ ಮೇಲೆ ಮುಗ್ಧತೆಯ ನಗು. ಬಯಸಿದಂತೆ, ಅಂದುಕೊಂಡಂತೆ ಬದುಕಿದ ಸಂತೃಪ್ತಿ. ಇದ್ದ ನೌಕರಿ ಬಿಟ್ಟು ಬಂದಾನ ಅಂತ ಜನ ಅಂತಾರೆ. ಜನ ಯಾವ್ದಕ್ಕೆ ಮಾತಾಡಲ್ಲ? ಎಲ್ಲದಕ್ಕೂ ಮಾತಾಡ್ತಾರೆ. ನಮ್ಮ ಬದುಕು ನಮ್ಮದಲ್ವೇ? ಮಾತಾಡುವವರು ಮಾತಾಡ್ತಾರೆ. ನಾನು ಬದುಕುವವ ಬದುಕುತ್ತಿದ್ದೇನೆ. ಅದರತ್ತಲೇ ಗಮನ ನೆಟ್ಟಿದ್ದೇನೆ, ಅಷ್ಟೇ. ಮೊದಲು ಮಾತಾಡಿದ ಜನರೇ ಈಗ ಸೂರ್ಯಕಾಂತ್ ಏನೋ ಮಾಡ್ತಾನೆ ಎಂದು ಮಾತನಾಡ್ತಿದಾರೆ’ ಎಂದಾಗ ಕಂಗಳಲ್ಲಿ ಎಂಥದೋ ಒಂದು ಹೊಳಪು.
(ಕೃತಿ: ಬೆಳಕಿನ ತೆನೆ (ನೋವುಂಡು ಬೆಳಕು ಕಂಡವರ ಕಥನಗಳು), ಲೇಖಕರು: ಸಿದ್ದು ಸತ್ಯಣ್ಣನವರ, ಪ್ರಕಾಶನ: ಅಮೂಲ್ಯ ಪುಸ್ತಕ (ಫೋ: 9448676770), ಪುಟಗಳು: 104, ಬೆಲೆ: 125/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ