ನನಗೆ ಈಗಲೂ ನೆನಪಿದೆ, ನನ್ನ ತಮ್ಮಂದಿರನ್ನು, ಅಕ್ಕನ ಮಕ್ಕಳನ್ನು ತೊಟ್ಟಿಲಲ್ಲಿ ಮಲಗಿಸಿ ತೂಗುವಂತೆ ಅಮ್ಮ ಹೇಳುತ್ತಿದ್ದಳು. ಸುಮ್ಮನೆ ತೂಗಿದರೆ ಮಕ್ಕಳು ಅಳುತ್ತಿದ್ದವು. ಲಾಲಿಪದ ಹೇಳಿದರೆ ಸಾಕು ಕೆಲವೇ ಹೊತ್ತಿನಲ್ಲಿ ಅವು ಮಲಗುತ್ತಿದ್ದವು. ಆಗೆಲ್ಲ ನಾವು ದೊಡ್ಡವರು ಹೇಳುತ್ತಿದ್ದ ಜೋಗುಳ, ಲಾಲಿಪದಗಳನ್ನು ಕೇಳಿ ಕಲಿಯುತ್ತಿದ್ದೆವು. ʻಅಳದಿರು ತಮ್ಮಯ್ಯ ಅಳಿರ ಕಣ್ಣಿಗೆ ನಿದ್ದೆ ಬೆಳಗಾದರೆ ಬಕ್ಕು ನಿನ ಮಾವ ತಮ್ಮಯ್ನ ಮಡಿಲಿಗೆ ತಕ್ಕು ಕಡಲೆಯʼ ಅಂತಲೋ ನಮ್ಮದೇ ಆದ ರಾಗದಲ್ಲಿ ಹಾಡುವುದಿತ್ತು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹದಿಮೂರನೆಯ ಕಂತಿನಲ್ಲಿ ಲಾಲಿಹಾಡುಗಳ ಕುರಿತ ಬರಹ ನಿಮ್ಮ ಓದಿಗೆ
ಕೆಲವು ರೂಢಿಗಳೇ ಹಾಗೆ. ಸುಲಭವಾಗಿ ನಮ್ಮನ್ನು ಬಿಟ್ಟು ಹೋಗಲಾರವು. ಈಗಿನಂತೆ ಹಲವು ಬಗೆಯ ಮಾಧ್ಯಮಗಳು ಇಲ್ಲದ ಕಾಲದಲ್ಲಿ ನಾವೆಲ್ಲ ಆಕಾಶವಾಣಿಯ ಶ್ರೋತೃಗಳು. ಪ್ರತಿದಿನವೂ ಬೆಳಗಿನಲ್ಲಿ ರೇಡಿಯೋದಲ್ಲಿ ಬರುವ ಗೀತಾರಾಧನ ಮತ್ತು ವಾರ್ತೆಗಳನ್ನು ಕೇಳದಿದ್ದರೆ ಏನೋ ಕಳೆದುಕೊಂಡ ಭಾವ. ನನ್ನ ಹಾಗೆ ಈಗಲೂ ಒಂದಿಷ್ಟು ಜನ ಬೆಳಗ್ಗೆ ರೇಡಿಯೊ ಕೇಳುವವರಿದ್ದಾರೆ. ಬೆಳಗ್ಗೆ ರೇಡಿಯೊ ಹಾಕಿದರೆ ವಾರಕ್ಕೆ ಎರಡೋ ಮೂರೋ ದಿವಸ ವೆಂಕಟೇಶ ಸುಪ್ರಭಾತ, ಎದ್ದೇಳು ಮಂಜುನಾಥ ಎಂದು ದೇವರುಗಳ ಸುಪ್ರಭಾತ ಕೇಳಬಹುದು. ದೇವತೆಗಳು ನಿದ್ರಿಸುವುದಿಲ್ಲ ಎನ್ನುವ ಅಭಿಪ್ರಾಯ ಪ್ರಚಲಿತವಾದುದು. ಒಮ್ಮೆ ದೇವರು ನಿದ್ದೆ ಮಾಡಿಬಿಟ್ಟರೆ ನಮ್ಮನ್ನು ಕಾಯುವವರು ಯಾರು? ಆದರೂ ನಾವು ಬಗೆಬಗೆಯಲ್ಲಿ ಸ್ತುತಿಸಿ ದೇವರನ್ನು ಎಬ್ಬಿಸುತ್ತೇವೆ. ಅವನೆಂತಹ ಅದೃಷ್ಟವಂತ, ಭಕ್ತರು ಹಾಡಿಹೊಗಳಿ ಎಬ್ಬಿಸಿದಾಗ ಏಳುವವನು. ನಾವೋ ಹುಲುಮಾನವರು. ಹೊತ್ತಿಗೆ ಸರಿಯಾಗಿ ನಾವು ಏಳದಿದ್ದರೆ ನಮ್ಮನ್ನು ಎಬ್ಬಿಸುವುದು ಮಂತ್ರಾಕ್ಷತೆಯ ಮೂಲಕ. ಏಳುವುದು ಎಷ್ಟು ಕಷ್ಟವೋ ನಿದ್ದೆ ಮಾಡುವುದೂ ಕೂಡ ಕೆಲವರಿಗೆ ಅಷ್ಟೇ ಕಷ್ಟ. ಏನ್ಮಹಾ ನಿದ್ದೆ ಮಾಡೋದು? ಅದೂ ಒಂದು ಕೆಲಸವಾ? ಅಂತ ಅನ್ನಬಹುದು. ಆದರೆ ನಿದ್ದೆಮಾಡುವುದು ಅಷ್ಟೊಂದು ಸುಲಭದ ಸಂಗತಿಯಲ್ಲ. ಅದರಲ್ಲಿಯೂ ವಯಸ್ಸಾಯಿತು ಎಂದರೆ ನಿದ್ದೆಗೆ ನಮ್ಮ ಬಳಿ ಸುಳಿಯಲು ಅಲರ್ಜಿ. ಹಾಗಂತ ರಾತ್ರಿ ಹೊತ್ತಿನಲ್ಲಿ ನಿದ್ದೆ ಬಂದಿಲ್ಲ ಎಂದು ಯಾವುದಾದರೂ ಕೆಲಸ ಮಾಡೋಣ ಅಂದ್ರೆ ಅದೂ ಸಾಧ್ಯವಾಗುವುದಿಲ್ಲ.
ಚೆನ್ನಾಗಿ ನಿದ್ದೆ ಮಾಡುವವರೊಬ್ಬರು ನನಗೆ ಹೇಳುತ್ತಿದ್ದರು, ʻನನಗೆ ನಿನ್ನ ಹಾಗಲ್ಲ, ಎಂಟು ತಾಸು ನಿದ್ದೆ ಬರುತ್ತದೆʼ ಎಂದು. ಪ್ರಾಯದಲ್ಲಿಯೂ ದಿನಕ್ಕೆ ಐದೋ ಆರೋ ತಾಸು ನಿದ್ದೆ ಬಂದರೆ ಹೆಚ್ಚು ಎನ್ನುವ ಜನರೂ ಇದ್ದಾರೆ. ʻನಂಗೆ ನಿದ್ದೆ ಬರ್ತಿಲ್ಲʼ ಅಂತ ಮಕ್ಕಳು ಹೇಳಿದರೆ ʻಜೋಗುಳ ಹಾಡಬೇಕಾ?ʼ ಎಂದು ತಮಾಶೆ ಮಾಡುವುದಿದೆ. ನಿಜ, ಬಹಳ ಹಿಂದಿನಿಂದಲೂ ನಿದ್ದೆಗೂ ಜೋಗುಳಕ್ಕು ಬಹಳ ನಂಟು. ಪ್ರಾಚೀನ ಕಾವ್ಯದಿಂದ ಆಧುನಿಕ ಸಿನಿಮಾ ಹಾಡಿನವರೆಗೆ ಜೋಗುಳ, ಲಾಲಿಹಾಡು ಸ್ಥಾನ ಪಡೆದಿವೆ. ಅದರಲ್ಲಿಯೂ ದಾಸರಪದ, ಜನಪದ ಗೀತೆ ಮತ್ತು ಸಂಪ್ರದಾಯದ ಹಾಡುಗಳಲ್ಲಿ ಲಾಲಿಪದ, ಜೋಗುಳಗಳು ಸಾಕಷ್ಟು ದೊರಕುತ್ತವೆ. ದಾಸರಂತು ಪರಮಾತ್ಮನನ್ನು ತೂಗಿ ಮಲಗಿಸುವುದರಲ್ಲಿ ನಿಸ್ಸೀಮರು. ʻತೂಗಿರೆ ರಂಗನ ತೂಗಿರೆ ಕೃಷ್ಣನʼ ಎಂದು ದೇವರ ಲೀಲೆಗಳನ್ನು ವರ್ಣಿಸುತ್ತಾರೆ ಪುರಂದರ ದಾಸರು. ʻಪಾಡಿ ತೂಗಿದಳೆ ಪರಮಾತುಮನ ಯಶೋದೆ ತಾನು ನೋಡಿ ಹಿಗ್ಗಿದಳೆ ಸರ್ವೋತ್ತಮನʼ ಎಂದು ಯಶೋದೆಯ ವಾತ್ಸಲ್ಯಭಾವವನ್ನು ಹಾಡು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ. ʻಲಾಲಿ ನಮ್ಮ ಹರಿಯೆ ಲಾಲಿʼ ಎಂದು ಪ್ರಾರಂಭವಾಗುವ ಲಾಲಿಹಾಡು ʻರಾಮ ಲಾಲಿ ಮೇಘಶ್ಯಾಮ ಲಾಲಿʼ ಎಂದು ರಾಮನನ್ನು ʻಕೃಷ್ಣ ಲಾಲಿ ಸರ್ವೋತ್ಕೃಷ್ಟ ಲಾಲಿʼ ಎಂದು ಕೃಷ್ಣನನ್ನು ಲಾಲಿ ಹಾಡುವ ಪುರಂದರ ದಾಸರ ಕೀರ್ತನೆ ಮನವನ್ನು ಮುದಗೊಳಿಸುವಂಥದು.
ಅವರದೇ ಇನ್ನೊಂದು ರಚನೆ ಹೀಗಿದೆ: ಜೋಜೋ ಶ್ರೀಕೃಷ್ಣ ಪರಮಾನಂದ ಜೋ ಜೋ ಗೋಪಿಯ ಕಂದ ಮುಕುಂದ ಜೋಜೋʼ ಅವರ ಆರಾಧ್ಯದೈವ ಕೃಷ್ಣ ʻಪಾಲಗಡಲಲ್ಲಿ ಪವಡಿಸಿದವನು, ಶ್ರೀಲತಾಂಗಿಯರ ಚಿತ್ತದೊಲ್ಲಭನುʼ ಇಂತವನನ್ನು ಹಾಡಿ ಮಲಗಿಸುವ ಪರಿಕಲ್ಪನೆ ಚೇತೋಹಾರಿಯಾದುದು. ಜಗನ್ನಾಥ ದಾಸರು ಅವರ ಹಿಂದಿನವರಾದ ರಾಘವೇಂದ್ರ ಯತಿಗಳಿಗೆ ʻತೂಗಿರೆ ರಾಯರ ತೂಗಿರೆ ಗುರುಗಳ ತೂಗಿರೆ ಯತಿಕುಲ ತಿಲಕರʼ ಎಂದು ಜೋಗುಳ ಹಾಡುತ್ತಾರೆ.
ನನಗೆ ಈಗಲೂ ನೆನಪಿದೆ, ನನ್ನ ತಮ್ಮಂದಿರನ್ನು, ಅಕ್ಕನ ಮಕ್ಕಳನ್ನು ತೊಟ್ಟಿಲಲ್ಲಿ ಮಲಗಿಸಿ ತೂಗುವಂತೆ ಅಮ್ಮ ಹೇಳುತ್ತಿದ್ದಳು. ಸುಮ್ಮನೆ ತೂಗಿದರೆ ಮಕ್ಕಳು ಅಳುತ್ತಿದ್ದವು. ಲಾಲಿಪದ ಹೇಳಿದರೆ ಸಾಕು ಕೆಲವೇ ಹೊತ್ತಿನಲ್ಲಿ ಅವು ಮಲಗುತ್ತಿದ್ದವು. ಆಗೆಲ್ಲ ನಾವು ದೊಡ್ಡವರು ಹೇಳುತ್ತಿದ್ದ ಜೋಗುಳ, ಲಾಲಿಪದಗಳನ್ನು ಕೇಳಿ ಕಲಿಯುತ್ತಿದ್ದೆವು. ʻಲಾಲಿ ಲಾಲಿ ಮಾಯಲೋಲ ಲಾಲಿ ಕಾಲಕರ್ಮಗಳೆಲ್ಲ ನಿಮ್ಮ ಲೀಲೆಲಾಲಿ ನಂದ ಲಾಲಿ ಯನ್ನ ತಂದೆ ಲಾಲಿ ಇಂದಿರಾ ರಮಣ ಗೋವಿಂದ ಲಾಲಿʼ ಅಂತಲೋ ʻಅಳದಿರು ತಮ್ಮಯ್ಯ ಅಳಿರ ಕಣ್ಣಿಗೆ ನಿದ್ದೆ ಬೆಳಗಾದರೆ ಬಕ್ಕು ನಿನ ಮಾವ ತಮ್ಮಯ್ನ ಮಡಿಲಿಗೆ ತಕ್ಕು ಕಡಲೆಯʼ ಅಂತಲೋ ನಮ್ಮದೇ ಆದ ರಾಗದಲ್ಲಿ ಹಾಡುವುದಿತ್ತು. ʻಲಾಲಿ ಲಾಲಿ ಎಂದು ಯಾರು ತೂಗಿದರವ್ವ ಸೂಳೆ ತೂಗಿದಳು ಸುಗುಣನ ಪಟ್ಟದ ರಾಣಿ ತೂಗಿದಳು ತಮ್ಮಯ್ನʼ ಎಂದು ಹಾಡಿ ತೊಟ್ಟಿಲು ತೂಗುತ್ತಿದ್ದೆವು.
ಮಗುವನ್ನು ಮೊದಲ ಬಾರಿ ತೊಟ್ಟಿಲಿಗೆ ಹಾಕುವಾಗಲೂ ಜೋಗುಳ ಹಾಡುವ ರೂಢಿ ಇವತ್ತಿಗೂ ಪ್ರಚಲಿತದಲ್ಲಿದೆ. ಮಾನವ ಶಿಶುವನ್ನು ಪರಮಾತ್ಮನ ರೂಪದಲ್ಲಿಯೇ ಕಾಣುತ್ತೇವೆ. ಕೃಷ್ಣನ್ನ, ರಂಗನ್ನ ತೂಗುತ್ತೇವೆ, ʻಜೋ ಜೋ ಸದ್ಗುರು ಪರಮಾನಂದ ಜೋಜೋ ಮಾಯಾಧೀಶ ಮುಕುಂದʼ ಎಂದು ಹಾಡಿ ಮಗುವನ್ನು ಮಲಗಿಸುತ್ತೇವೆ. ಸಾಂಪ್ರದಾಯಿಕ ಹಾಡು ಹೇಳುವವರು ಮದಾಲಸೆ ಜೋಗುಳವನ್ನು ಹಾಡುವುದಿದೆ. ಮದಾಲಸೆ ಹಾಡಿನ ಮೂಲಕವೇ ತನ್ನ ಮೂರು ಮಕ್ಕಳಿಗೆ ಪರತತ್ವವನ್ನು ಬೋಧಿಸುತ್ತಾಳೆ. ಕೊನೆಯ ಮಗುವಿಗೆ ಗೃಹಸ್ಥಧರ್ಮವನ್ನು ಅರಹುವುದಲ್ಲದೆ ಪತಿಸಹಿತ ಮೋಕ್ಷಕ್ಕೆ ಹೋಗುತ್ತಾಳೆ ಎನ್ನುತ್ತದೆ ಈ ಜೋಗುಳ.
ಅಮ್ಮ, ಅಕ್ಕಂದಿರು ಹಾಡುತ್ತಿದ್ದ ರಾಮನು ನಿದ್ದೆಮಾಡುತ್ತಿದ್ದಾನೆ ಎನ್ನುವ ಹಾಡು ನಮಗೆಲ್ಲ ಸದಾ ಆಪ್ಯಾಯಮಾನ. ರಾಮ ನಿದ್ದೆ ಮಾಡುತ್ತಿರುವುದರಿಂದ ಸದ್ದು ಮಾಡಬೇಡಿ ಎನ್ನುತ್ತದೆ ಈ ಹಾಡು. ʻನಿದ್ದೆಗೈಯ್ಯುವ ನಮ್ಮ ಸ್ವಾಮಿ ರಾಮಭದ್ರ ಮೂಜಗದಂತರ್ಯಾಮಿ ಸದ್ದು ಮಾಡದಿರಿನ್ನು ಸಾರಸಾಕ್ಷಿಯರೆಲ್ಲ ಸತಿ ಸೀತೆಸಹಿತ ಹೂವಿನ ಮಂಚದೊಳು ಮಲಗಿʼ ಎಂದು. ಸಾಧಾರಣವಾಗಿ ಲಾಲಿಹಾಡು, ಜೋಗುಳ ಯಾವುದೇ ಇರಲಿ ಗಂಡುಮಕ್ಕಳನ್ನು ಅಥವಾ ಗಂಡು ದೇವರನ್ನು ಮಲಗಿಸುವ ಅಥವಾ ಎಬ್ಬಿಸುವ ಹಾಡುಗಳೇ ಆಗಿರುತ್ತವೆ. ಅಪರೂಪ ಎನ್ನುವಂತೆ ದೇವಿಯರನ್ನು ಕುರಿತ ಜೋಗುಳವನ್ನು ನಮ್ಮ ಊರಿನ ಹೆಂಗಳೆಯರು ಹಾಡುವುದನ್ನು ಕೇಳುತ್ತ ಬೆಳೆದವಳು ನಾನು.
ಜೋಜೋ ಗಿರಿಕುಲಾಧಿಪ ಸುಕುಮಾರಿ ಜೋಜೋ ಪ್ರಾಣರಂಜಿತೆ ಅಘಹಾರಿ ಜೋಜೋ ಸದ್ಗುಣಭರಿತೆ ಶ್ರೀಗೌರಿ ಜೋಜೋ ಪಾವನ ಚರಿತೆ ಶೃಂಗಾರಿ ಜೋಜೋ ಎನ್ನುವ ಜೋಗುಳ ಪಾರ್ವತಿ, ಲಕ್ಷ್ಮಿಯರಿಬ್ಬರನ್ನೂ ಒಳಗೊಳ್ಳುತ್ತದೆ.
ದಾಸರಂತು ಪರಮಾತ್ಮನನ್ನು ತೂಗಿ ಮಲಗಿಸುವುದರಲ್ಲಿ ನಿಸ್ಸೀಮರು. ʻತೂಗಿರೆ ರಂಗನ ತೂಗಿರೆ ಕೃಷ್ಣನʼ ಎಂದು ದೇವರ ಲೀಲೆಗಳನ್ನು ವರ್ಣಿಸುತ್ತಾರೆ ಪುರಂದರ ದಾಸರು. ʻಪಾಡಿ ತೂಗಿದಳೆ ಪರಮಾತುಮನ ಯಶೋದೆ ತಾನು ನೋಡಿ ಹಿಗ್ಗಿದಳೆ ಸರ್ವೋತ್ತಮನʼ ಎಂದು ಯಶೋದೆಯ ವಾತ್ಸಲ್ಯಭಾವವನ್ನು ಹಾಡು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ.
ಜನಪದರು ಮಗುವನ್ನು ಮಲಗಿಸುವುದು ಜೋಗುಳ ಹಾಡಿಯೇ ಎನ್ನುವಂತೆ ಅಲ್ಲಿ ಸಾಕಷ್ಟು ರಚನೆಗಳು ಕಂಡುಬರುತ್ತವೆ. ಜನಸಾಮಾನ್ಯರು ಮಾತ್ರವಲ್ಲ, ಸೀತಾದೇವಿಯೇ ಲವಕುಶರನ್ನು ಜೋಗುಳ ಹಾಡಿ ಮಲಗಿಸಿದಳಂತೆ. ʻಜನಕರಾಯನ ಮಗಳು ಬನಕೆ ತೊಟ್ಟಿಲಕಟ್ಟಿ ಲವಕುಶರನ್ನು ತೂಗ್ಯಾಳ ಸೀತಾದೇವಿ ನಗುತ ವನವಾಸ ಕಳೆದಾಳʼ ಎನ್ನುವ ತ್ರಿಪದಿ ಮಗುವನ್ನು ತೂಗುತ್ತ ತನ್ನ ನೋವನ್ನು ಮರೆತು ನಗುತ್ತಲೇ ವನವಾಸವನ್ನು ಸೀತೆ ಕಳೆದಳು ಎನ್ನುವ ಮೂಲಕ ಮಗುವನ್ನ ತೂಗುವುದು ನೋವನ್ನು ಮರೆಸುತ್ತದೆ ಎನ್ನುತ್ತದೆ. ʻತೂಗಿರೊ ರನ್ನವ ತೂಗಿರೊ ಚಿನ್ನವ ತೂಗಿರೊ ಬೇಲೂರ ಚೆನ್ನಿಗನʼ ಎನ್ನುವ ಜನಪದ ಗೀತೆಯನ್ನು ಕಾಳಿಂಗರಾಯರ ದನಿಯಲ್ಲಿ, ನಮ್ಮ ತಲೆಮಾರಿನವರು ಸಾಕಷ್ಟು ಬಾರಿ ಕೇಳಿದ್ದೇವೆ. ಜನಸಾಮಾನ್ಯರಿಗೆ ನಮ್ಮನೆಯ ಮಗು ಚಿನ್ನ, ರನ್ನ ಎಲ್ಲವೂ ಹೌದು. ಪ್ರತಿಯೊಂದು ಮಗುವೂ ಕೃಷ್ಣನ ರೂಪವೇ. ಹಾಗಾಗಿ ಅವನ ಬಾಲಲೀಲೆಗಳನ್ನು ಹಾಡಿ ಮಗುವನ್ನು ಮಲಗಿಸುತ್ತೇವೆ.
ತಾಯಂದಿರು ಮಕ್ಕಳನ್ನು ಮಲಗಿಸುವಾಗ ಹಲವು ರೀತಿಯಲ್ಲಿ ಮಗುವನ್ನು ರಮಿಸುವುದಿದೆ. ʻಮೇಲೆ ನೋಡೋ ಕಂದ ಚಂದಮಾಮ ನಗುತಾನೆ ಮಲಗೋ ಮುದ್ದು ಕಂದ ನಿದ್ದೆಗುಮ್ಮ ಬರುತಾನೆʼ ಎನ್ನುತ್ತ ಆಕೆ ತನ್ನ ಮಗುವನ್ನು ಮಲಗಿಸುತ್ತಾಳೆ. ಜೋಗುಳ ಹಾಡಿ ಮಲಗಿಸುವ ತಾಯಿಗೆ ನಿದ್ದೆ ಮಾಡುತ್ತಿರುವ ತನ್ನ ಕಂದ ಕಂಡುದು ಹೀಗೆ: ʻಹೂವಿನದಳ ನಿನ್ನ ಕಣ್ಣು ಕೆನ್ನೆ ಮಾವಿನಹಣ್ಣು ನಿದ್ದೆಯ ಮರುಳಲ್ಲಿ ನಗಲು ಬೆಳದಿಂಗಳಾಯಿತು ಇರುಳುʼ ಜೋಗುಳ ಕೇಳುವುದು ಮಕ್ಕಳಿಗೆ ಎಷ್ಟೊಂದು ಖುಶಿಯ ಸಂಗತಿ ಎನ್ನವುದನ್ನು ಈ ಮುಂದಿನ ತ್ರಿಪದಿ ಹೇಳುತ್ತದೆ: ʻಜೋಗುಳ ಹಾಡಿದರೆ ಆಗಲೆ ಕೇಳ್ಯಾನು ಹಾಲಹಂಬಲವ ಮರೆತಾನು ಕಂದಾಗೆ ಜೋಗುಳದಾಗೆ ಅತಿಮುದ್ದುʼ ಮಕ್ಕಳನ್ನು ಮಲಗಿಸುವ ಕ್ರಿಯೆ ಮಗುವಿನೊಂದಿಗೆ ತಾಯಿಯ ಅಥವಾ ಮಗುವನ್ನು ಮಲಗಿಸುವವರ ನಡುವೆ ಒಂದು ಮಧುರ ಬಾಂಧವ್ಯವನ್ನು ಬೆಸೆಯುತ್ತದೆ.
ಮಕ್ಕಳನ್ನು ತೂಗಿ ಮಲಗಿಸುವಂತೆಯೇ ತೊಡೆಯಲ್ಲಿಟ್ಟು ತಟ್ಟಿ ಮಲಗಿಸುವ ರೂಢಿಯೂ ಇದೆ. ಮಗುವಿಗೆ ಮಾತು ತಿಳಿಯುವಷ್ಟು ದೊಡ್ಡದಿದ್ದರೆ ʻಪಾಚಿ ಮಾಡು ಬಾʼ ಎಂದು ಹೇಳುವಂತೆ ನಮ್ಮ ಕಡೆ ʻದದ್ದಿ ಮಾಡು ಬಾʼ ಎನ್ನುತ್ತೇವೆ. ಮಗುವನ್ನು ರಮಿಸಿ, ತೊಡೆಯಲ್ಲಿಟ್ಟು ʻದದ್ದದ್ದ ದಮ್ಮಣ್ಣಿ ಕಲ್ಲಲಿ ಮುಳ್ಳಲಿ ಹೋಗಬೇಡ ಅಲ್ಲೊಂದು ಕಳ್ಳ ಕೂತಿತ್ತು ಕಳ್ಳನ ಕಾಲಿಗೆ ಕಲುಗೆಜ್ಜೆ ಮುಳ್ಳನ ಕಾಲಿಗೆ ಮುಳುಗೆಜ್ಜೆʼ ಎಂದು ಹೇಳಿ ಮಲಗಿಸುತ್ತಿದ್ದುದೂ ಇದೆ.
ಮಕ್ಕಳ ನಿದ್ದೆಯನ್ನು ಕವಿಗಳು ಕಂಡುದು ಹೀಗೆ: ʻಹಸುಗೂಸು ಮಲಗಿಹುದು ಹುಸಿನಗೆಯು ತೊಲಗಿಹುದು ಕನಸಿನಾಚೆಗೆ ಇರುವ ನಿದ್ದೆಯಲ್ಲಿʼ ಎನ್ನುವುದು ದ.ರಾ.ಬೇಂದ್ರೆಯವರ ವಿವರಣೆಯಾದರೆ ಲಕ್ಷಿನಾರಾಯಣ ಭಟ್ಟರು ʻಮಲಗು ಮಲಗೆನ್ನ ಮಗುವೆ ಬಣ್ಣದ ನವಿಲಿನ ಗರಿಯೆ ಎಲ್ಲಿಂದ ಬಂದೆ ಈ ಮನೆಗೆ ನಂದನ ಇಳಿದಂತೆ ಭುವಿಗೆʼ ಎನ್ನುತ್ತಾರೆ. ಇನ್ನು ಕೆ.ಎಸ್. ನರಸಿಂಹಸ್ವಾಮಿಯವರು ʻಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು ನಿದ್ದೆ ಬರುವಳು ಹೊದ್ದು ಮಲಗು ಮಗುವೆ ಜೋಜೋಜೋಜೋʼ ಎನ್ನುತ್ತ ʻಮಲಗು ಚಂದಿರನೂರ ಹೋಗುವೆಯಂತೆʼ ಎಂದು ಮಗುವಿಗೆ ಆಸೆ ಹುಟ್ಟಿಸುತ್ತಾರೆ. ಮುಂದುವರಿದು ಚಂದಿರನೂರಿಗೆ ಹೋದಾಗ ಚಂದಿರನ ತಂಗಿಯರು ʻತಾರೆಗಳ ಜರತಾರಿ ಅಂಗಿ ತೊಡಿಸುವರಂತೆʼ ʻಹೂವ ಮುಡಿಸುವರಂತೆ, ಹಾಲ ಕುಡಿಸುವರಂತೆʼ ಎಂದು ಬಗೆಬಗೆಯ ಕನಸನ್ನು ಬಿತ್ತುತ್ತಾರೆ. ಮಗುವಿಗೆ ಇದೆಲ್ಲ ಅರ್ಥವಾಗುತ್ತದೆ ಎಂದಲ್ಲ. ಮಕ್ಕಳ ಪ್ರತಿಯೊಂದ ಚಲನೆ, ಚಟುವಟಿಕೆಗಳು ದೊಡ್ಡವರಿಗೆ ಕಾಣುವ ಪರಿಯನ್ನು ಈ ಸಾಲುಗಳು ಕಂಡರಿಸುತ್ತವೆ. ಎಸ್.ವಿ. ಪರಮೇಶ್ವರ ಭಟ್ಟರ ಪರಿಕಲ್ಪನೆ ವಿಭಿನ್ನವಾದುದು. ಮೋಡಗಳ ನಡುವಿನಲ್ಲಿ ಒಮ್ಮೆ ಕಂಡು ಮತ್ತೆ ಮರೆಯಾಗುವ ಚಂದಿರನ ಚಲನೆ ಅವರಿಗೆ ʻತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ಗಾಳಿ ಜೋಗುಳ ಹಾಡಿ ತೂಗುತ್ತಿತ್ತು ತೂಗುತ್ತಿತ್ತುʼ ಎನ್ನುವಂತೆ ಕಂಡಿದೆ.
ತೂಗುವಿಕೆ ಇದೆಯಲ್ಲ ಅದು ಹಲವರನ್ನು ಬಹುಬೇಗ ನಿದ್ದೆಗೆ ಜಾರುವಂತೆ ಮಾಡುತ್ತದೆ. ಕಾರು, ಬಸ್ಸು, ರೈಲುಗಳಲ್ಲಿ ಪಯಣಿಸುವ ಕೆಲವರು ಹೇಳುವುದಿದೆ ʻನನಗೆ ವಾಹನದಲ್ಲಿ ಹೋಗುವಾಗ ಬಹಳ ಬೇಗ ನಿದ್ದೆ ಬರುತ್ತದೆʼ ಎಂದು. ಇಬ್ಬರೇ ಕಾರಿನಲ್ಲಿ ದೂರದೂರಿಗೆ ಹೋಗುವಾಗ ಪಕ್ಕದವರು ನಿದ್ದೆ ಮಾಡಿದರೆ ಚಾಲಕರು ತಕರಾರು ಮಾಡುವುದೂ ಇದೆ. ʻನೀನು ಹೀಗೆ ಪಕ್ಕದಲ್ಲಿ ಕೂತು ನಿದ್ದೆ ಮಾಡಿದ್ರೆ ನನಗೂ ತೂಕಡಿಸೋ ಹಾಗೆ ಆಗ್ತದೆ. ಏನಾದ್ರೂ ಮಾತಾಡ್ತಿರು ನಿದ್ದೆ ಹಾರಿಹೋಗುತ್ತದೆʼ ಅಂತ. ಇನ್ನು ಕೆಲವರಿಗೆ ಈ ನಿದ್ದೆ ಎನ್ನುವ ಮಾಯಾಂಗನೆ ಪುಸ್ತಕ ಹಿಡಿದ ಕೂಡಲೆ ವಕ್ಕರಿಸುತ್ತಾಳೆ. ಅದು ರಾತ್ರಿಯೇ ಆಗಬೇಕೆಂದಿಲ್ಲ. ಅದರಲ್ಲಿಯೂ ಪಠ್ಯಪುಸ್ತಕ ಮತ್ತು ನಿದ್ದೆಗೆ ಬಹಳ ನಂಟು. ಲಾಲಿಪದವಾಗಲಿ, ಜೋಗುಳವಾಗಲಿ ಇಲ್ಲದೆಯೇ ಅದು ತನ್ನ ಹಾಜರಿ ಹಾಕುತ್ತದೆ. ಲಾಲಿಪದ, ಜೋಗುಳ ಅಂತ ಒಂದಿಷ್ಟು ಹಳೆಯ ನೆನಪನ್ನು ಕೆದಕಿದ್ದಕ್ಕೆ ನಿಮಗೆ ನಿದ್ದೆ ಬಂದಿಲ್ಲ ತಾನೆ?
ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.