ಇಲ್ಲಿನ ಐದು ಪಾತ್ರಗಳು ಪಂಚಭೂತಗಳ ಸಂಕೇತ. ಸಿಡಿಯುವ ರಿಚ್ಚಿ ಬೆಂಕಿಯಾದರೆ, ಮೌನ ಧ್ಯಾನಿ ಮುನ್ನಾ ಗಾಳಿ, ಅಲೆಮಾರಿಯಂತೆ ಸಾಗುವ ರಾಘು ನೀರು, ಸಹನಾಮೂರ್ತಿ ರತ್ನಕ್ಕ ಭೂಮಿ, ಬಾಲು ಆಗಸ. ಇದನ್ನು ಹೊರತುಪಡಿಸಿದರೆ, ಚಿತ್ರದ ಮಾತುಗಳು ಸೆರೆ ಆಗಿದ್ದು ಸಿಂಕ್ ಸೌಂಡ್ ತಂತ್ರಜ್ಞಾನದ ಮೂಲಕ. ಇದರಲ್ಲಿ, ದೃಶ್ಯದೊಂದಿಗೆ ಮಾತುಗಳ ದಾಖಲೀಕರಣ ಕೂಡ ನಡೆದು, ದೈನಂದಿನ ಬದುಕು ಕಣ್ಣ ಮುಂದೆ ಸಾಗುತ್ತಿರುವಂತೆ ಭಾಸವಾಗುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ”ಸಿನಿ ಪನೋರಮಾ” ಸರಣಿಯಲ್ಲಿ ‘ಉಳಿದವರು ಕಂಡಂತೆ’ ಸಿನಿಮಾದ ವಿಶ್ಲೇಷಣೆ

ಅನಂತ ಆಗಸದಂತೆ ಹರಡಿ ನಿಂತ ಸಲಿಲದ ರಾಶಿಯಿಂದ, ಬೆಕ್ಕು ತನ್ನ ಮರಿಗಳನ್ನು ಕರೆದೂಯ್ಯುವ ರೀತಿ ಆಗಮಿಸುತ್ತಿರುವ ಅಲೆಗಳ ಹೆಜ್ಜೆಗುರುತು ಮೂಡಿ ಅಳಿಯುತ್ತಿದೆ. ಶಾಂತ ಅಬ್ಬರಗಳ ಹೆಗಲ ಮೇಲೆ ಹೊತ್ತು, ಎದ್ದು ಬರುವ ಅವುಗಳ ಸದ್ದಿಗೆ ನಲುಗಿರುವ ತೀರ, ಮಾತು ಮರೆತಿದೆ. ಮೀನಿಗೆ ಹಾಕಿದ, ಬಣ್ಣ ಮಾಸಿದ ಬಲೆಗಳ ಹೊಟ್ಟೆ ಹಸಿದಿದೆ. ಮರಳ ಮಡಿಲಲ್ಲಿ ಮಲಗಿರುವ ವೃದ್ಧ ದೋಣಿಗಳು ಸಾವಿನ ಕದ ತಟ್ಟುತ್ತಿವೆ. ಅಳತೆಗೆ ನಿಲುಕದ ದೂರದಿಂದ ನಾವೆಗಳು ನಿರಂತರವಾಗಿ ಕಣ್ಣು ಮಿಟುಕಿಸುತ್ತಿವೆ. ದಿಕ್ಕು ದೆಸೆಯಿಲ್ಲದೆ ಅತ್ತಿಂದಿತ್ತ ಪಯಣ ಬೆಳೆಸುವ ಅಲೆಮಾರಿಯಂತೆ, ಕಾಣುತ್ತಿದೆ ದೀಪಸ್ತoಭದಿಂದ ಹೊರಟ ಬೆಳಕು. ಸೂರ್ಯ ಸಾಗರದೊಳಗೆ ಅಡಗಿದ ನಂತರ ನಗುವ ಚಂದಿರನ ಆಗಮನವಾಗಿ ‘ತೀರ’ದ ಸಂಭ್ರಮ ಕಳೆಗಟ್ಟಿದೆ. ಬೆಂಕಿಯ ಮಾಲೆಯೊಳಗೆ, ಮಹಿಷ ಅಬ್ಬರಿಸುತ್ತಿದ್ದಾನೆ. ಚೆಂಡೆಯ ಧಿಗಿಣ ಧರೆಯನ್ನು ಗಾಢ ನಿದ್ದೆಯಿಂದ ಎಬ್ಬಿಸಿ ಸಗ್ಗದ ಸಾಮೀಪ್ಯಕ್ಕೆ ಕರೆದೊಯ್ಯುತ್ತಿವೆ. ಇನ್ನೊಂದೆಡೆ, ಗಗ್ಗರದ ನಾದಕ್ಕೆ ಸಾಕ್ಷೀಭೂತ ಅಕ್ಷಿಗಳು ಭಾವ ಪರವಶಗೊಂಡಿವೆ. ಹೀಗೆ ಸಮುದ್ರವೇ ಕಾಲ್ತೊಳೆಯುವ ಕರಾವಳಿಯೆoಬ ಸಾಂಸ್ಕೃತಿಕ ನೆಲದಲ್ಲಿ, ಮೊಗೆದಷ್ಟು ಮುಗಿಯದ ಕಥೆಗಳಿವೆ. ಅಂತಹ ಶರಧಿಯಿಂದ ಹೆಕ್ಕಿದ, ಶಂಖ ಮೀನಿನ ತೆರನಾದ ನೈಜತೆಯ ಅನಾವರಣವೇ ರಕ್ಷಿತ್ ಶೆಟ್ಟಿಯವರ ‘ಉಳಿದವರು ಕಂಡಂತೆ’ ಸಿನಿಮಾ.

ಕನ್ನಡ ಚಿತ್ರರಂಗ ಚಲಿಸದ ಜಲದಂತೆ ಸ್ತಬ್ಧವಾಗಿದ್ದಾಗ, ಬದಲಾವಣೆಯೆoಬ ಇಶಾರೆಯ ತೋರಿಸಿದ ಚಿತ್ರವೆಂದರೆ ‘ಲೂಸಿಯ’. ಅನಂತರದ ಪ್ರಯತ್ನ ‘ಉಳಿದವರು ಕಂಡಂತೆ’. ಕಥಾನಕವನ್ನು ಅಧ್ಯಾಯಗಳ ಮೂಲಕ, ಭಾವ ವಿಭಾಗೀಕರಣಗೊಳಿಸಿ, ತೀರದ ಭಾಷೆಯ ಬಳಸಿ, ಗಾಜಿನಲ್ಲಿ ಮೂಡುವ ಪ್ರತಿಬಿಂಬದಂತೆ, ಅಲೆಗಳ ಮಾತನ್ನು ಅಳಿಸದೆ ಚಿತ್ರಿಸಿದ ಪರಿಯೇ ಇಲ್ಲಿನ ಅನನ್ಯತೆ. ಇಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ನಡೆವ ಹುಲಿಗಳ ರುದ್ರ ನರ್ತನವಿದೆ. ಬಣ್ಣ ಬಳಿದು ಪಾತ್ರದೊಳಗೆ ಮುಳುಗಿರುವ ಮಕ್ಕಳ ಸಂಭ್ರಮವಿದೆ. ಯಕ್ಷಗಾನದ ಸುಂದರ ಪ್ರಸ್ತುತಿಯಿದೆ. ಮಣ್ಣ ಮಡಿಲಲ್ಲಿ ಅರಳುವ ಮೀನು ಸಾರು, ಮಾತಿನ ಹಂಗಿಲ್ಲದೆ ಅರಳುವ ಪ್ರೀತಿ, ಅಮ್ಮನ ಮುಗಿಯದ ಭರವಸೆ ಹೀಗೆ ನೆಲದ ಸೊಗಡಿನ ಮೋಹಕ ಪರಿಮಳವೇ ತುಂಬಿಕೊಂಡಿದೆ. ಅಲ್ಲದೇ, ಇನ್ನೊಂದು ಅಂಚಿನ ದರ್ಶನವೆಂಬತೆ ಕ್ರೌರ್ಯ, ದರ್ಪ, ದುರಾಸೆಯ ಪರಾಕಾಷ್ಟೆಯಿದೆ. ಇವೆಲ್ಲವೂ ಸಂಕಲನಗೊಂಡು, ಸರಳರೇಖೆಯಲ್ಲಿ ಸಾಗದೆ, ಕಾಗದದ ಚೂರಿನoತೆ, ಪಕ್ಷಿಯ ಗರಿಗಳಂತೆ ದೊರಕಿ ನೋಡುಗನ ತನಿಖೆಯಲ್ಲಿಯೇ ಸಂಪೂರ್ಣ ರೂಪವನ್ನು ತಳೆಯುತ್ತದೆ.

ಕಥೆ ಆರಂಭವಾಗುವುದು ಹಾರುವ ಅಲೆಗಳಿಗೆ ಪೈಪೋಟಿ ನೀಡುವಂತೆ ದೋಣಿಯನ್ನು ಎಳೆದು ತರುವ ಮೀನುಗಾರರ ದನಿಯಿಂದ. ಈ ಪರಿಸರದಲ್ಲಿ ಅರಳಿದ ಗೆಳೆತನವೇ ರಿಚ್ಚಿ ಮತ್ತು ರಾಘುವಿನದ್ದು. ರಾಘುವಿನ ಮೇಲಿನ ದೌರ್ಜನ್ಯದ ವಿರುದ್ಧ ಹುಟ್ಟಿದ ರಿಚ್ಚಿಯ ಕೋಪ ಕೊಲೆಯಲ್ಲಿ ಭಾಗೀದಾರನಾಗುವುದರೊಂದಿಗೆ ಅಂತ್ಯಗೊಳ್ಳುತ್ತದೆ. ಆತ ರಿಮ್ಯಾಂಡ್ ಹೋಮಿನ ಅತಿಥಿಯಾಗುತ್ತಾನೆ. ಅತ್ತ ರಾಘು ಹೇಳದೆ ಕೇಳದೆ ಊರು ಬಿಟ್ಟು ಬೊಂಬಾಯಿಯ ಬೋಟ್ ಹತ್ತುತ್ತಾನೆ. ಮುಂದೆ ಕಾಲ ಜಾರಿದಂತೆ ಇವರ ಕಥೆಗಳು ರಾಶಿ ತಿರುವುಗಳ ಕಾಣುವುದೇ ಚಿತ್ರದ ಮುನ್ನುಡಿ.

ಕಥೆಯ ಮೊದಲ ಅಧ್ಯಾಯ ‘ಮೌನದ ಮಾತು’. ಬಾಲು ಎಂಬ ಮೀನುಗಾರನಿಗೆ ಸಮುದ್ರದ ಮಧ್ಯೆ ಮರದ ದಿಮ್ಮಿಯೊಂದು ಸಿಗುತ್ತದೆ. ಅದನ್ನು ವಿಭಾಗಿಸಿದಾಗ ಚಿನ್ನದ ವಸ್ತುವೊಂದರ ದರ್ಶನವಾಗುತ್ತದೆ. ದುರಾಸೆಯ ಮನಸ್ಸಿಗೆ ರಕ್ತದ ಕಲೆಗಳು ಅಂಟಿಕೊಳ್ಳುತ್ತದೆ.ಬಾಂಬೆಯ ಸ್ಮಗ್ಲರ್ ಪಾಲಾಗುವ ಈ ಬೆಲೆಬಾಳುವ ವಸ್ತು, ಅದಾಗಲೇ ಭೂಗತ ಲೋಕವ ಪ್ರವೇಶಿಸಿದ್ದ ರಾಘುವಿನ ಕೈಯಿಂದ ಕಳವುಗೊಳ್ಳಲ್ಪಡುತ್ತದೆ. ಇನ್ನು ಅಲ್ಲಿಯೇ ಉಳಿದರೆ ಕ್ಷೇಮವಲ್ಲವೆಂದು ಊರಿಗೆ ಬಂದು ಅಮ್ಮನನ್ನು ಕರೆದುಕೊಂಡು ದುಬೈಗೆ ಹೋಗುವ ಆಲೋಚನೆಯನ್ನು ಮಾಡುತ್ತಾನೆ ರಾಘು.

ಎರಡನೇ ಅಧ್ಯಾಯದಲ್ಲಿ ಆಗಲೇ ಊರಿನ ದೊಡ್ಡ ಪುಢಾರಿಯಾಗಿದ್ದ ರಿಚ್ಚಿಯ ಪಾತ್ರ ಪರಿಚಯವಾಗುತ್ತದೆ. ಶಂಕರ ಪೂಜಾರಿಯ ಗ್ಯಾಂಗಿನ ಅಘೋಷಿತ ನಾಯಕನಾಗಿದ್ದ ರಿಚ್ಚಿ ಕ್ರೌರ್ಯದ ಪ್ರತಿರೂಪ. ಚಿನ್ನದ ವಸ್ತುವಿನ ಹಿಂದೆ ಬಿದ್ದಿದ್ದ ರಿಚ್ಚಿಯ ಕ್ರೂರತೆಗೆ ಸಿಲುಕಿ ಬಾಲು ನರಳುತ್ತಾನೆ. ಕೆಲವರ ಅಭಿಮತದಂತೆ, ರಾಘುವಿನ ಅಂತ್ಯವಾಗುತ್ತದೆ. ಮತ್ತೆ ಕೆಲವರ ಪ್ರಕಾರ, ರಾಘು, ರಿಚ್ಚಿಗೆ ಸಿಗದೇ ಊರು ಬಿಟ್ಟು ಪರಾರಿಯಾಗಿದ್ದಾನೆ. ಒಟ್ಟಾರೆಯಾಗಿ ಇದೇ ಸತ್ಯ ಎಂದು ನಂಬುವಂತೆ ಇಲ್ಲ. ಎಲ್ಲವೂ ಉಳಿದವರು ಕಂಡಂತೆ, ಕೇಳಿದಂತೆ.

ಚಿತ್ರದ ಮೂರನೇ ಅಧ್ಯಾಯ ಮೀನು ಕರ್ರಿ. ಇದು ಕಡಲ ತೀರದ ಮೌನದಲ್ಲರಳುವ ಒಡಲಗಾಥೆ. ಮನೆ ಮನೆಗೆ ಮೀನು ಮಾರುವ ಕೆಲಸ ಮಾಡುವ, ತೊರೆದು ಹೋದ ಮಗ, ದೂರವಾದ ಗಂಡನ ನೆನಪಲ್ಲಿ, ತನ್ನದೇ ಮನೆಯಲ್ಲಿ, ತಿರುಗುವುದ ಮರೆತ ಜಗತ್ತಲ್ಲಿನ ಸೆರೆವಾಸ ರತ್ನಕ್ಕನದು. ತುಳಸಿ ಕಟ್ಟೆಯ ಮೇಲೆ ಹಣತೆಯ ಬೆಳಗಿ, ಬಾಗಿಲ ಅಂಚಿನಲ್ಲಿ ಕುಳಿತು ಶೂನ್ಯದತ್ತ ದಿಟ್ಟಿಸುವ ಆಕೆಯ ದೃಷ್ಟಿಯ ಅನಾಥ ಭಾವವೇ ಸಾಕು ಹೃದಯ ಒಡೆದು ಚೂರಾಗಲು. ಇಂತಹ ಖಾಲಿ ಬದುಕಿನಲ್ಲಿ ಮತ್ತೆ ಚಿತ್ತಾರದಂತೆ ಬರುತ್ತಾನೆ ರಾಘು. ಅವನಿಗಾಗಿ ಮೀನು ಸಾರು ಮಾಡಿ, ದುಬೈಗೆ ಹೋಗುವ ಆಸೆಯ ಎಲ್ಲರ ಬಳಿ ಹೇಳಿ, ಮರುದಿನ ಊಟಕ್ಕೆ ಆತ ಬಾರದೇ ಹೋದಾಗ ಮತ್ತೆ ಮೌನದ ಮೊರೆ ಹೋಗುವ ರತ್ನಕ್ಕ ಮತ್ತದೇ ಬಾಗಿಲು, ಗಾಜಿನ ಹಳದಿ ಬಲ್ಬಿನ ಕೆಳಗೆ ಭಾವ ಶೂನ್ಯಳಾಗಿ ಕುಳಿತು ಬಿಡುತ್ತಾಳೆ. ಕನ್ಫ್ಯೂಶಿಯಸ್‌ನ ಮಾತಿದೆಯಲ್ಲ “ನಿರಪೇಕ್ಷ ಪ್ರೇಮಕ್ಕಿರುವ ಏಕೈಕ ಉದಾಹರಣೆ ಅಮ್ಮ” ಎಂದು. ಆ ಮಾತಿಗೆ ಸಾದೃಶ್ಯವೆಂಬoತೆ ನೋಡುಗರ ಮನಸ್ಸು ತಲ್ಲಣಿಸುವಂತೆ ಕಾಡುತ್ತಾಳೆ.

ನಾಲ್ಕನೇ ಅಧ್ಯಾಯ ‘ಕೇಳದ ಪಿಸುಮಾತು’. ಬಾಲುವಿನ ತಂಗಿ, ಮೀನು ಮಾರುವ ಹುಡುಗಿ ಶಾರದಾ ಕಣ್ಣಲ್ಲಷ್ಟೇ ಹೆಚ್ಚು ಮಾತನಾಡುವವಳು ಅಥವಾ ಸಾಗರದ ಮಾತಿಗೆ ಸೋತವಳು. ಬೋಟ್ ರಿಪೇರಿಗೆ ಘಟ್ಟದ ಮೇಲಿಂದ ಬಂದ ಮುನ್ನಾನ ಮೇಲೆ ಆಕೆಗೆ ಒಲವು, ಅವನಿಗೂ ಸಹ. ಆದರೆ ಒಲವ ಪಯಣಕ್ಕೆ ಮಾತಿನ ವಾಹನವೇಕೆ ಎಂಬ ಭಾವ. ತೀರವೇ ನಾಚುವಂತೆ ಕಡು ಮೌನದಲ್ಲೇ ಪ್ರೇಮದಲ್ಲಿ ಕಳೆದು ಹೋದ ಜೋಡಿಯದು. ಈ ಪಯಣ ಐದನೇ ಅಧ್ಯಾಯದಲ್ಲಿ ಮುಂದುವರೆಯುತ್ತದೆ. ಅಲ್ಲಿ ಬಾಲುವಿಗೆ ರಿಚ್ಚಿ ಹೊಡೆದ ಸುದ್ದಿ ತಿಳಿದು ರಿಚ್ಚಿಗೆ ಮುನ್ನಾ ಅಂತ್ಯ ಕಾಣಿಸಿದರೆ, ರಿಚ್ಚಿಯ ಗೆಳೆಯ ದಿನೇಶ ಮುನ್ನಾನಿಗೆ ಅಂತ್ಯ ಕಾಣಿಸುತ್ತಾನೆ. ಹೀಗೆ ಕ್ರೌರ್ಯಗಳು ಅತೀ ನಿಕೃಷ್ಟ ಪೂರ್ಣ ವಿರಾಮವ ಕಾಣುತ್ತವೆ. ಆದರೆ ಇವೆಲ್ಲವುಗಳ ನಡುವೆ ರಾಘು ಏನಾದ ಎಂಬ ಪ್ರಶ್ನೆಗೆ ಉತ್ತರದ ಹುಡುಕಾಟವೇ ಈ ಚಿತ್ರದ ನಾಮಧೇಯ.

ಇಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ನಡೆವ ಹುಲಿಗಳ ರುದ್ರ ನರ್ತನವಿದೆ. ಬಣ್ಣ ಬಳಿದು ಪಾತ್ರದೊಳಗೆ ಮುಳುಗಿರುವ ಮಕ್ಕಳ ಸಂಭ್ರಮವಿದೆ. ಯಕ್ಷಗಾನದ ಸುಂದರ ಪ್ರಸ್ತುತಿಯಿದೆ. ಮಣ್ಣ ಮಡಿಲಲ್ಲಿ ಅರಳುವ ಮೀನು ಸಾರು, ಮಾತಿನ ಹಂಗಿಲ್ಲದೆ ಅರಳುವ ಪ್ರೀತಿ, ಅಮ್ಮನ ಮುಗಿಯದ ಭರವಸೆ ಹೀಗೆ ನೆಲದ ಸೊಗಡಿನ ಮೋಹಕ ಪರಿಮಳವೇ ತುಂಬಿಕೊಂಡಿದೆ. ಅಲ್ಲದೇ, ಇನ್ನೊಂದು ಅಂಚಿನ ದರ್ಶನವೆಂಬತೆ ಕ್ರೌರ್ಯ, ದರ್ಪ, ದುರಾಸೆಯ ಪರಾಕಾಷ್ಟೆಯಿದೆ.

ಈ ಚಿತ್ರದ ವಿಶೇಷತೆಯೇ ಇದರ ಸಂಕೀರ್ಣತೆ. Non Linear Story Telling ವಿಧಾನ ಬಳಸಿದ ಕಾರಣ ಪ್ರೇಕ್ಷಕ ಯೋಚನೆಗೆ ಕಿಚ್ಚು ಹಚ್ಚಿಸಬೇಕಾಗುತ್ತದೆ. ಪಾತ್ರವೊಂದರ ಹಿಂದೆ, ದೃಷ್ಟಿಕೋನದೊಂದಿಗೆ ಬದಲಾಗುವ ಸಂಗತಿಗಳು ಇರುವುದು ಕೂಡ ಅವರವರ ಭಾವಕ್ಕೆ ಎಂಬ ಅರ್ಥೈಸಿಕೊಳ್ಳುವಿಕೆಗೆ ಕಾರಣವಾಗುತ್ತದೆ. ಕಥೆ ಪ್ರಶ್ನೆಗಳನ್ನು ಉಳಿಸಿ ಹೋಗುವುದರಿಂದ ಉತ್ತರಗಳ ಹುಡುಕಾಟ ಜಾರಿಯಲ್ಲಿರುತ್ತದೆ. ಗಿರೀಶ್ ಕಾಸರವಳ್ಳಿಯವರು ಚಿತ್ರದ ಕುರಿತು ಮಾತನಾಡುತ್ತ “ಭೂಗತ ಲೋಕದ ಸಿನಿಮಾಗಳು ಹಿಂಸೆಯನ್ನು ವೈಭವೀಕರಿಸಿ, ಪ್ರೇಕ್ಷಕ ಅದನ್ನು ಆನoದಿಸುವಂತೆ ಮಾಡುತ್ತದೆ. ಆದರೆ, ಇಲ್ಲಿನ ಹಿಂಸೆ ಮನದಲ್ಲಿ ರೇಜಿಗೆಯನ್ನು ಹುಟ್ಟಿಸುತ್ತದೆ. ಇದೇ ನಿಜವಾದ ಚಿತ್ರದ ಗೆಲುವು” ಎಂದು ಸಂವಾದವೊಂದರಲ್ಲಿ ಹೇಳಿದ್ದರು. ಇಲ್ಲಿನ ಪಾತ್ರಗಳಲ್ಲಿ ಅದೆಷ್ಟು ಆಳವಾದ ಅರ್ಥ ಇವೆಯೆಂದರೆ, ಇಲ್ಲಿನ ಐದು ಪಾತ್ರಗಳು ಪಂಚಭೂತಗಳ ಸಂಕೇತ. ಸಿಡಿಯುವ ರಿಚ್ಚಿ ಬೆಂಕಿಯಾದರೆ, ಮೌನ ಧ್ಯಾನಿ ಮುನ್ನಾ ಗಾಳಿ, ಅಲೆಮಾರಿಯಂತೆ ಸಾಗುವ ರಾಘು ನೀರು, ಸಹನಾಮೂರ್ತಿ ರತ್ನಕ್ಕ ಭೂಮಿ, ಬಾಲು ಆಗಸ. ಇದನ್ನು ಹೊರತುಪಡಿಸಿದರೆ, ಚಿತ್ರದ ಮಾತುಗಳು ಸೆರೆ ಆಗಿದ್ದು ಸಿಂಕ್ ಸೌಂಡ್ ತಂತ್ರಜ್ಞಾನದ ಮೂಲಕ. ಇದರಲ್ಲಿ, ದೃಶ್ಯದೊಂದಿಗೆ ಮಾತುಗಳ ದಾಖಲೀಕರಣ ಕೂಡ ನಡೆದು, ದೈನಂದಿನ ಬದುಕು ಕಣ್ಣ ಮುಂದೆ ಸಾಗುತ್ತಿರುವಂತೆ ಭಾಸವಾಗುತ್ತದೆ. ಹಾಸ್ಯಕ್ಕಷ್ಟೇ ಬಳಕೆಯಾಗುತ್ತಿದ್ದ ಮಂಗಳೂರು ಕನ್ನಡದ ಆತ್ಮದಲ್ಲೊಂದು ಸೊಬಗಿನ ಸಂಸ್ಕೃತಿಯ ಪರಿಮಳವಿದೆ ಎಂದು ಹುಲಿ ವೇಷ, ಯಕ್ಷಗಾನದಂತಹ ರೂಪಕಗಳ ಸೇರಿಸಿಕೊಂಡು ಸಿನಿ ಜಗತ್ತಿಗೆ ಸಾರಿದ ಮೊದಲ ಚಿತ್ರ ಉಳಿದವರು ಕಂಡಂತೆ. ಕಥೆ, ಹೀರೊಗಳೆಂದರೆ ಹೀಗೆಯೇ ಇರಬೇಕು ಎಂಬ ಸಿದ್ಧ ಮಾದರಿಯ ಗೋಡೆಯ ಮುರಿದು, ತಾಜಾ ರಹದಾರಿ ಸೃಷ್ಟಿಸಿ ಕಾಂತಾರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಗರುಡ ಗಮನ ವೃಷಭ ವಾಹನದಂತಹ ಕಥನಾಧಾರಿತ ಚಿತ್ರಗಳು ಅಸಂಖ್ಯ ಆಸಕ್ತಿಗಳನ್ನು ಸೆಳೆಯಲು ಮೂಲ ಪ್ರೇರಣೆಯೇ ಈ ಸಿನಿಮಾವೆಂದರೆ ಅತಿಶಯೋಕ್ತಿಯಲ್ಲ.

ರಿಚ್ಚಿಯಾಗಿ ರಕ್ಷಿತ್ ಶೆಟ್ಟಿ ಪರಕಾಯ ಪ್ರವೇಶ. ಕ್ಯೂಬನ್ ಕಿಡ್ ಕಥೆ ಹೇಳುವಾಗ, ರಾಘು ಅಡಗಿರುವ ಮನೆಯ ಬಾಗಿಲು ಮುರಿಯುವಾಗ, ಹುಲಿ ಕುಣಿತ ಮಾಡುವಾಗ, ಹಲ್ಲೆ ಮಾಡುವಾಗ ರಕ್ಷಿತ್ ಕಾಣುವುದಿಲ್ಲ. ಕರಾವಳಿಯ ಪ್ರದೇಶವೊಂದರ ಪುಡಿ ರೌಡಿಯ ನೆನಪಾಗುತ್ತದೆ. ರತ್ನಕ್ಕನಾಗಿ ತಾರಾ ಅನುರಾಧರದ್ದು ಆತ್ಯಂತಿಕ ಅಭಿವ್ಯಕ್ತಿ. ವಿಶೇಷತಃ ರಾಘು ಮರಳಿ ಮನೆಗೆ ಬಂದಾಗ ಆ ಬಾಗಿಲ ಮೇಲೆ ವಾಲುವ ಪರಿ, ಆತನ ಮೊಗವ ಹಿಡಿದು ಕನಸೋ, ಭಾವದ ಭ್ರಮೆಯೋ ಎಂಬಂತೆ ದಿಟ್ಟಿಸುವ ರೀತಿ ಎಲ್ಲವೂ ಭಾವ ಪೂರ್ಣ. ಮುನ್ನನಾಗಿ ಕಿಶೋರ್ ಹೊಸ ನಮೂನೆಯ ಪಾತ್ರದಲ್ಲಿ ಮಿನುಗಿದರೆ, ಬಾಲುವಾಗಿ ಅಚ್ಯುತ್ ರಾವ್ ಅಮೋಘ ಅಭಿನಯ. ಪತ್ರಕರ್ತೆಯಾಗಿ ಶೀತಲ್, ರಾಘುವಾಗಿ ರಿಷಬ್ ಉತ್ತಮ ಪ್ರಸ್ತುತಿ. ಉಳಿದೆಲ್ಲ ಕಲಾವಿದರೂ ಕೂಡ. ಅದರಲ್ಲೂ ‘ಡೆಮೋಕ್ರೆಸಿ’ ಪಾತ್ರಧಾರಿ ಮಾಸ್ಟರ್ ಸೋಹನ್ ರದ್ದು ಗಮನಾರ್ಹ ನಟನೆ.

ಇನ್ನು ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಚಿತ್ರದ ಉಸಿರು. ಹುಲಿ ವೇಷದ ಹಿನ್ನೆಲೆ, ತಾಯಿ ಮಗನ ಭೇಟಿ, ಪತ್ರಕರ್ತೆ ಹಾಗೂ ರಿಚ್ಚಿಯ ಭೇಟಿ ಹೀಗೆ ಅನೇಕ ಸನ್ನಿವೇಶಗಳಿಗೆ ನೀಡಿದ ಸಂಗೀತ, ದೃಶ್ಯಗಳಿಗೊಂದು ಮುತ್ತಿನ ಹಾರ. ವಿಶೇಷತಃ ಕರಾವಳಿಯ ವಾದ್ಯಗಳ Live Recording ಪ್ರಯೋಗ, ‘ಘಾಟಿಯ ಇಳಿದು’, ‘ಕಣ್ಣಾ ಮುಚ್ಚೆ’, ‘ಪೇಪರ್ ಪೇಪರ್’, ‘ಕಾಕಿಗ್ ಬಣ್ಣ ಕಾಂತ’ ‘ಮಳೆ ಮರೆತು’ ಹೀಗೆ ಎಲ್ಲಾ ಹಾಡುಗಳು ವೈವಿಧ್ಯಮಯ ಹಾಗೂ ಭಾವ ಪ್ರಚೋದಕ. ರಕ್ಷಿತ್ ಲೇಖನಿಯಲ್ಲಿ ಮೂಡಿದ ಸಾಲುಗಳಾದ ‘ಕಡಲು ಬೀಸೋ ಗಾಳಿಗವಳು ಮಾತನಾಡಲು, ಕೇಳದ ಪಿಸು ಮಾತಿಗವನು ಮರುಳನಾದನು’ ಮಾತಿನ ಹನಿಯಿಲ್ಲದೇ, ಹರಿವ ಪ್ರೇಮ ಧಾರೆಗೊಂದು ಕಂದೀಲು. ‘ಮಳೆ ಮರೆತು’ ಹಾಡಿನಲ್ಲಿ ಬರುವ ‘ಆ ಚಂದ್ರನಿಂದು ನಿದ್ದೇಲೆ ಎದ್ದು ಕಣ್ಣುಜ್ಜಿಕೊಂಡು ತೇಲಿ ಬಂದ, ತೆಂಗಿನ ಗರಿಗೆ ತಾಗುತ್ತ ಹೋದ ಊರೂರಿಗೆಲ್ಲ ಚಂದ ತಂದ’ ಎನ್ನುವ ಸಾಲುಗಳು ಕೂಡ ಸಿಹಿಯಾದ ರಸಗವಳ. ಇನ್ನು ನಿರ್ದೇಶಕನಾಗಿ, ಕಥೆಗಾರನಾಗಿ ರಕ್ಷಿತ್ ಶೆಟ್ಟಿ, ಕನ್ನಡಿಯ ಮರೆತ ಕಾಲಕ್ಕೆ ಪ್ರತಿಬಿಂಬ ಹಂಚುವ ಕೆಲಸ ಸೊಗಸಾಗಿ ಮಾಡಿದ್ದಾರೆ. ಒಂದೇ ತೆರನಾದ ಕಥೆಗಳು, ಚಿತ್ರಗಳು ಬರುತ್ತಿದ್ದ ಕಾಲದಲ್ಲಿ, ನಮ್ಮ ನೆಲದಲ್ಲೂ ಮರೆಯಲಾಗದ, ಹೇಳದೆ ಉಳಿದ ಅಚ್ಚರಿಗಳಿವೆ ಎಂದು ‘ಉಳಿದವರು ಕಂಡಂತೆ’ಯ ಮೂಲಕ ತೋರಿಸಿದ್ದಾರೆ. ಬದುಕು ಮತ್ತು ಸಂಸ್ಕೃತಿಯನ್ನು, ನಾ ನಿನಗೆ, ನೀ ಎನಗೆ ಎನ್ನುತ್ತಾ ಜೊತೆಯಾಗಿ ನಡೆವ ಪ್ರೇಮಿಗಳ ರೀತಿ ಬಳಸಿದ ಪರಿಯೇ ಈ ಕಥಾನಕದ ಗೆಲುವು.

ಮುಗಿಸುವ ಮುನ್ನ:

ದಿನ ಬೀದಿಯಲ್ಲಿ ಓಡಾಡುವ ಹಳೆಯ ಬಸ್ಸು ಹೊಸ ಬಣ್ಣ ಹಚ್ಚಿಕೊಂಡಾಗ, ಬಹು ಸಂವತ್ಸರಗಳ ನಂತರ ಊರಿಗೆ ಮರಳಿದಾಗ, ಸಾಂಪ್ರದಾಯಿಕ ದಿರಿಸಿನಲ್ಲಿ ಹೃದಯದ ಅರಸಿ ಪ್ರತ್ಯಕ್ಷವಾದಾಗ, ಪುಟ್ಟ ಮಗಳು ದೇವತೆಯಂತೆ ಸಿಂಗರಿಸಿಕೊಂಡು ವೇದಿಕೆಯ ಮೇಲೆ ನಿಂತಾಗ ಅಕ್ಷಿಗಳು ಯಾವದಕ್ಕೂ ನಿಲುಕದ ಆನಂದದಲ್ಲಿ ಕಳೆದು ಹೋಗುತ್ತವೆ ಅಲ್ಲವೇ? ಅದೇ ತೆರನಾದ ಸಂತಸ, ನಮ್ಮ ಮಣ್ಣಿನ, ನಾವು ನಡೆದ ಹಾದಿಯ ಹಾಡು ಕಥೆಯಾಗಿ ‘ಉಳಿದವರು ಕಂಡಂತೆ’ ಯಲ್ಲಿ ರೂಪ ಪಡೆದಾಗಲೂ ಆಗುತ್ತದೆ. ಸಾಗರದ ಸದ್ದು, ತೀರದ ಮೌನ, ಟಾಸೆಯ ಅಬ್ಬರ, ಮೀನುಗಾರರ ದನಿ, ಅನೂಹ್ಯತೆಯ ತುಂಬಿಕೊಂಡ ಜೀವಗಳು, ನಾಪತ್ತೆಯಾದ ಉತ್ತರಗಳು ಹೀಗೆ ಅಸಂಖ್ಯ ಅಂಶಗಳು ಕಾಡುತ್ತವೆ, ಮಳೆ ಬಿಟ್ಟು ಹೋದ ತಂಗಾಳಿಯಂತೆ. ಕಥೆಯು ‘ನಾನು ಉಳಿದವರು ಕಂಡಂತೆ’ ಎಂಬ ಭಾವವ ನೋಡುಗರ ಮನದೊಳಗೆ ಪ್ರತಿಷ್ಟಾಪಿಸಿ, ಅಬ್ಬರ ಮುಗಿಸಿದ ಅಲೆ ಮೆಲ್ಲಗೆ ಶರಧಿಯ ಗರ್ಭದೊಳಗೆ ಕೂಡಿಕೊಳ್ಳುವಂತೆ ಅಂತ್ಯಗೊಳ್ಳುತ್ತದೆ.