ಸಿಕ್ಕೊಂಡು ಸೀರಿ ಉಟ್ಕಂಡಿಯವೂ ಹುಷಾರು..: ಮನೆಯ ಹಿರಿಯ ಹೆಂಗಸರು ಹಿರಿಯರಿಗೆ ಹೇಳಿ ಕಳಿಸುವ ಅತಿ ಎಚ್ಚರಿಕೆಯ ಮಾತು ಇದು. ಹಲವು ನೆರಿಗೆಗಳನ್ನು ಸೀರೆಗೆ ಆಧ್ಯಾರೋಪಿಸಿದಂತಹ ಕಟು ಎಚ್ಚರ ಇಲ್ಲಿ ಸಂಕೇತದಂತೆ ಇದೆ. ಎಡವದಿರುವ ಜಾರದಿರುವ ಎಚ್ಚರ ಹೆಜ್ಜೆ ಹೆಜ್ಜೆಗೂ ಗಂಟೆ ಹೊಡೆಯುತ್ತಿರುತ್ತದೆ. ಜನಪದ ಧಾರೆಯಲ್ಲಿ ಇಂಥದೊಂದು ಸ್ತ್ರೀ ಕೇಂದ್ರಿತ ಎಚ್ಚರದ ಮಾತುಗಳು ಉದ್ದಕ್ಕೂ ಸಿಗುತ್ತವೆ. ಪುರುಷ ವ್ಯಕ್ತಿತ್ವ ವಿಜೃಂಭಣೆಯಾಗಿರುವುದನ್ನು ಗುರುತಿಸಬಹುದು. ಇಲ್ಲಿ ಮಹಿಳೆ ಮುಖವಾಣಿಯಾಗಿದ್ದರೂ ಅವಳೇ ಶೋಷಿತ ಸ್ಥಾನದಲ್ಲಿ ಉಳಿದಿರುವುದು ವೈರುಧ್ಯ ಎನಿಸುತ್ತದೆ.
ಲಿಂಗರಾಜ ಸೊಟ್ಟಪ್ಪನವರ್ ಬರೆಯುವ “ಉತ್ತರದ ಕತೆಗಳು” ಅಂಕಣದ ಎರಡನೆಯ ಬರಹ
ಆಕಳು ಸಾಯುವಾಗ ಬಣವಿ ಒಟ್ಟಿ ಸಾಯುತ್ತೇನು..? ಇದು ಹಳ್ಳಿಗಳಲ್ಲಿ ಕೇಳಿ ಬರುವ ಲೋಕದೃಷ್ಟಿಯ ಮಾತು. ಅವರವರ ಬದುಕನ್ನು ಅವರವರೇ ಕಟ್ಟಿಕೊಳ್ಳಬೇಕೆ ಎನ್ನುವ ವಾಸ್ತವಿಕ ನೆಲೆಯ ಜೀವನ ದರ್ಶನವೂ ಇಲ್ಲಿ ಇರುವಂತೆ ನಾಳೆಗೆಂದು ಏನನ್ನು ಕೂಡಿಡಬೇಡ. ಎಂಬ ಹಂಚಿ ಉಣ್ಣುವ ಮಾತು ದೃಷ್ಟಿಯು ಇದಾಗಿದೆ. ಮನುಷ್ಯನ ಹಪಹಪಿ ಸಂಗ್ರಹ ಪ್ರವೃತ್ತಿಯನ್ನು ಈ ಮಾತು ಅಲ್ಲಗಳೆಯುತ್ತದೆ. ಇಂತಹ ಅನೇಕ ನುಡಿಗಟ್ಟುಗಳು ಹಳ್ಳಿಗರ ರೈತ ಕೂಲಿಕಾರರ ಬದುಕಿನಲ್ಲಿ ಹಾಸು ಹೊಕ್ಕಾಗಿ ಬದುಕಿನ ದರ್ಶನದಂತೆ ಕಾಣುತ್ತದೆ. ಜನಪದರಿಗೆ ಇಂತಹದೊಂದು ಒಳಗಣ್ಣು ಲೋಕದೃಷ್ಟಿ ಕಾರಣ ಅವರ ಬದುಕು ಅಷ್ಟು ಸಹಜವಾಗಿತ್ತು, ಹೀಗಾಗಿ ಅವರು ಬಂದುದ್ದನ್ನೆಲ್ಲಾ ಸ್ವೀಕರಿಸಿದರು. ಸಂತಸ ಸಂಭ್ರಮಗಳನ್ನು ಸ್ವೀಕರಿಸಿದ ಹಾಗೆ ದುಃಖ ದುಮ್ಮಾನ ಸಾವನ್ನು ಸ್ವೀಕರಿಸಿದರು. ಅಲ್ಲಿ ನಿರಾಕರಣೆ ಎಂಬುದು ಇರಲಿಲ್ಲ. ಅವೆಲ್ಲವೂ ಸಹಜ ಎಂಬಂತ ನಿಲುವು ಬದುಕನ್ನು ಅಷ್ಟು ಸಹಜವಾಗಿತ್ತು. ಈ ಸಹಜತೆ ಜನಪದ ಬದುಕನ್ನು ಸುಂದರವಾಗಿಸಿತ್ತು. ಬಂದಿದ್ದೆಲ್ಲ ಬರಲಿ ಶಿವನ ದಯೆಯೊಂದಿರಲಿ.. ಹೀಗೆ ಏನೆಲ್ಲ ಕಷ್ಟ ಕಾರ್ಪಣ್ಯಗಳನ್ನು ಇವನ ಒಂದು ದಯೆಗೆ ಎದುರು ಮಾಡಿ ಎಲ್ಲವನ್ನು ದೈವಕ್ಕೆ ಒಪ್ಪಿಸಿ ಮುನ್ನಡೆಯುವುದೇ ಬದುಕಿನ ಸಹಜ ಧರ್ಮವಾಗಿತ್ತು. ಕಷ್ಟ ಮನುಷ್ಯರಿಗೆ ಅಲ್ಲದೆ ಮರಕ್ಕೆ ಬರುತ್ತೇನು.. ಅಂತಹ ಪಾಂಡವರಿಗೆ ಕಷ್ಟ ತಪ್ಪಲಿಲ್ಲ.. ಇದು ಜನಪದ ಜೀವನದ ದೃಷ್ಟಿ. ಜನಪದ ತನ್ನ ಪದ ಚಮತ್ಕಾರಿಕೆಯನ್ನು ನೀಗಿಸಿಕೊಂಡು ಒಂದು ತಾತ್ವಿಕತೆಯಾಗಿದೆ.
ಇಲ್ಲಾ ಬಾರದ್ದು ಮಾಡಿ ಈರೀ ಒಡಿಸಿಕೊಂಡರಂತೆ – ಮನುಷ್ಯ ಏನು ಮಾಡಬೇಕು ಅದನ್ನು ಮಾತ್ರ ಮಾಡಬೇಕು. ಮಾಡಬಾರದ್ದನ್ನು ಮಾಡಿದರೆ ಏನಾಗುತ್ತದೆ ಎಂಬ ಎಚ್ಚರ ಇಲ್ಲಿದೆ. ಇಂತಹ ಎಚ್ಚರಗಳೇ ಮನುಷ್ಯನನ್ನು ಸರಿ ಮಾರ್ಗದಲ್ಲಿ ಕೈ ಹಿಡಿದು ನಡೆಸುತ್ತವೆ. ಮತ್ತೆ ಇಲ್ಲಿನ ಪದ ಜಾದುಗಾರಿಕೆಯ ಮಹತ್ವ ಏನೆಂದರೆ ಇದರ ಅರ್ಥ ಮರ್ಮ ತಕ್ಷಣವೇ ಎದೆಗೆ ಮೆದುಳಿಗೆ ನಾಟುತ್ತದೆ. ಈ ನಾಟುವಿಕೆಯೇ ಲೋಕರೂಢಿಗಳ ಮಹತ್ತಿಕೆ. ನಮಾಜ್ ಮಾಡಲು ಹೋಗಿ ಮಸೀದಿ ಕೊರಳಿಗೆ ಹಾಕ್ಕೊಂಡರಂತೆ, ಎನ್ನುವುದು ಅಂಥದ್ದೇ ಎಚ್ಚರಿಕೆಯಾಗಿದೆ. ಪರರ ಚಿಂತೆ ನಿನಗೇಕಯ್ಯ.. ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.. ತನುವ ಸಂತೈಸಿಕೊಳ್ಳಿ…. ಈ ವಚನಧಾರೆಯೂ ಕೂಡ “ಊರ ಸುದ್ದಿ ತಗೊಂಡು ಮುಲ್ಲಾ ಸೊರಗಿದನಂತೆ…” ಎಂಬ ಜನಪದ ಸೆಲೆಯಿಂದಲೇ ಹರಿದು ಬಂದದಾಗಿದೆ.
ಸಿಕ್ಕೊಂಡು ಸೀರಿ ಉಟ್ಕಂಡಿಯವೂ ಹುಷಾರು..: ಮನೆಯ ಹಿರಿಯ ಹೆಂಗಸರು ಹಿರಿಯರಿಗೆ ಹೇಳಿ ಕಳಿಸುವ ಅತಿ ಎಚ್ಚರಿಕೆಯ ಮಾತು ಇದು. ಹಲವು ನೆರಿಗೆಗಳನ್ನು ಸೀರೆಗೆ ಆಧ್ಯಾರೋಪಿಸಿದಂತಹ ಕಟು ಎಚ್ಚರ ಇಲ್ಲಿ ಸಂಕೇತದಂತೆ ಇದೆ. ಎಡವದಿರುವ ಜಾರದಿರುವ ಎಚ್ಚರ ಹೆಜ್ಜೆ ಹೆಜ್ಜೆಗೂ ಗಂಟೆ ಹೊಡೆಯುತ್ತಿರುತ್ತದೆ. ಜನಪದ ಧಾರೆಯಲ್ಲಿ ಇಂಥದೊಂದು ಸ್ತ್ರೀ ಕೇಂದ್ರಿತ ಎಚ್ಚರದ ಮಾತುಗಳು ಉದ್ದಕ್ಕೂ ಸಿಗುತ್ತವೆ. ಪುರುಷ ವ್ಯಕ್ತಿತ್ವ ವಿಜೃಂಭಣೆಯಾಗಿರುವುದನ್ನು ಗುರುತಿಸಬಹುದು. ಇಲ್ಲಿ ಮಹಿಳೆ ಮುಖವಾಣಿಯಾಗಿದ್ದರೂ ಅವಳೇ ಶೋಷಿತ ಸ್ಥಾನದಲ್ಲಿ ಉಳಿದಿರುವುದು ವೈರುಧ್ಯ ಎನಿಸುತ್ತದೆ.
ಹೆಣ್ಣು ಹೊಸಿಲು ದಾಟಿ ಹೊರಗೆ ಹೋಗುವಾಗ ಇಂತಹ ಎಚ್ಚರದ ಮಾತುಗಳು ಇನ್ನೊಂದು ಹೆಣ್ಣಿಂದಲೇ ಕೇಳಿ ಬರುತ್ತವೆ. ಯಾವುದೇ ಪ್ರಸಂಗವನ್ನು ಹುಷಾರಿನಿಂದ ಎದುರಿಸಿ ದಾಟಿ ಬರುವ ಜಾಣ್ಮೆ ರೂಢಿಸಿಕೊಳ್ಳಬೇಕು; ಇಲ್ಲವಾದಲ್ಲಿ ಸಿಕ್ಕು ಸೀರೆ ಉಟ್ಟುಕೊಳ್ಳಬೇಕಾಗುತ್ತದೆ ಎಂಬುದು ಇಲ್ಲಿನ ಲೈಂಗಿಕ ತಿಳುವಳಿಕೆಯ ಮೊದಲ ಪಾಠವೂ ಹೌದು. ಇಲ್ಲಿ ‘ಸೀರೆ ಉಡುಕಿ’ ಎಂಬುದು ಸಿಕ್ಕು ಹಾಕಿಕೊಂಡಿದ್ದಕ್ಕೆ ಪರಿಹಾರ ಕ್ರಮವಾಗಿಯೂ ಇನ್ನೊಂದು ರೀತಿ ಪರಿತಾಪವಾಗಿಯೂ ಕಾಣುತ್ತದೆ. ಕಣ್ಣಿನ ಮೋಹ ಪಾಶದಲ್ಲಿ ಸಿಲುಕಿದರೆ ಸೀರೆ ಉಟ್ಕೊಳ್ಳಬೇಕಾಗುತ್ತದೆ. ‘ಸೀರೆ ಉಡುಕಿ’ ಎಂಬುದು ತಾತ್ಕಾಲಿಕ ಮದುವೆ ವ್ಯವಸ್ಥೆಯಾಗಿದೆ. ಇದಕ್ಕೆ ವಿವಾಹದಷ್ಟು ಮನ್ನಣೆ ಇಲ್ಲವಾದರೂ ಇದು ಸಹ ಒಂದು ಬಂಧವಾಗಿದೆ. ಈಗಿನ ಲಿವಿಂಗ್ ಇನ್ ರಿಲೇಶನ್‌ಶಿಪ್ ಅನ್ನುವಂಥದ್ದು. ಎಷ್ಟಾದರೂ ವಿಧಿವತ್ತಾದ ಮದುವೆಯಷ್ಟು ಮಹತ್ವ ಇದಕ್ಕೆ ಇಲ್ಲ. ಸೀರೆ ಉಡ್ಕಿ ಹೆಣ್ಣನ್ನು ಎರಡನೆಯ ದರ್ಜೆಯ ನಾಗರಿಕಳಂತೆ ಸಮಾಜ ನೋಡುತ್ತದೆ. ನಾನೇನು ಸಿರಿ ಉಟ್ಕೊಂಡ್ ಬಂದವಳಲ್ಲ ಹೋಗು. ಎಂದು ಇನ್ನೊಂದು ಹೆಣ್ಣು ಮೂದಲಿಸುವುದನ್ನು ಕಾಣಬಹುದು. ಆದ್ದರಿಂದಲೇ ಈ ಪರಿ ಎಚ್ಚರ.
ಆಸತ್ತು ಬೇಸತ್ತು ಅಕ್ಕನ ಮನೆಗೆ ಬಂದರೆ.. ಅಕ್ಕನ ಗಂಡ ‘ಅವ್ವುಕ್’ ಅಂದನಂತೆ.. ಈ ಗಾದೆ ಮಾತಿನಲ್ಲಿಯ ಪದ ಮೋಡಿಗೆ ಲಯಗಾರಿಕೆಗೆ ಮನಸೋಲದೇ ಇರಲಾಗದು. ಈ ಮಾತಿನ ಮೂಡಿಗೆ ಜನಪದೀಯ ಸೊಗಸುಗಾರಿಕೆಯೂ ಆಗಿದೆ.
ಏನೋ ಎಲ್ಲಿಯದ್ದೋ ಯಾವುದೋ ಕಷ್ಟದಿಂದ ಬಳಲಿದೆ ಹೆಣ್ಣು.. ತನ್ನ ಆಸರಿಕೆ ಬೇಸರಿಕೆ ಕಳೆಯಲು ಹುಡುಕಿಕೊಳ್ಳುವ ಮೊದಲ ತಂಪು ತಾಣ ಅವ್ವನ ಮಡಿಲು. ಅವಳಿಗೆ ಇನ್ನೊಂದು ತಾಣವೂ ಇದೆ; ಅದು ಅಕ್ಕನ ಅಪ್ಪುಗೆ. ಹೀಗೆ ಅಕ್ಕನ ಮನೆಗೆ ಬಂದ ಬಳಲಿದ ಜಿಂಕೆಯನ್ನು ಅಕ್ಕನ ಗಂಡ – ಘರ್ ಕಾ ಸಾಲಿ ಆದಾ ಬೀವಿ.. ಎಂಬ ರೀತಿಯಲ್ಲಿ ಪರಿಗಣಿಸುತ್ತಾನೆ. ಸೋದರ ಸೊಸೆ ಎರಡನೇ ಹೆಂಡತಿ ಇದ್ದ ಹಾಗೆ ಎಂಬ ಸದರವನ್ನು ತನಗೆ ನೀರು ಕಾಯಿಸಿ ಇಡಲು.. ಬಚ್ಚಲ ಮನೆಗೆ ಬಟ್ಟೆ ಇಡಲು.. ಚಹಾ ಮಾಡಿಕೊಡಲು.. ಜೊತೆ ಮಾಡಿಕೊಂಡು ಊಟ ಮಾಡಲು.. ಹೀಗೆ ಎಲ್ಲಾ ಕೆಲಸಗಳಲ್ಲೂ ಅಕ್ಕನ ಪಾಲನ್ನು ತನ್ನದಾಗಿಸಿಕೊಳ್ಳುವ ತಂಗಿ ಅಥವಾ ಹಾಗೆ ಆಗು ಮಾಡುವ ನಮ್ಮ ಕುಟುಂಬ ವ್ಯವಸ್ಥೆ ಸೊಸೆಯನ್ನು ನಿಜವಾಗಿಯೂ ಅರ್ಧ ಹೆಂಡತಿಯನ್ನಾಗಿಸುತ್ತದೆ. ಯಾವುದೊ ಹದವಾದ ಸಂದರ್ಭದಲ್ಲಿ ಅಕ್ಕನ ಗಂಡ ತೆಕ್ಕೆ ಬಡಿದು ಅವುಚಿಕೊಂಡು ಬಿಡುತ್ತಾನೆ. ಅದನ್ನೇ ಅವುಕ್ ಎಂದು ಬಣ್ಣಿಸಿರುವದು.
ನಿಮ್ಮ ಅಕ್ಕನನ್ನೇ ಮಾಡಿ ತಬ್ಬಿಕೊಂಡೆ.. ಎಂಬುದು ಅವನು ನೀಡುವ ಸಬೂಬು. ಅವಳು ಅಕ್ಕನಂತೆಯೇ ಇರುವುದು ಆದ ಪ್ರಮಾದಕ್ಕೆ ಕ್ಷಮೆಯನ್ನು ನೀಡಬಹುದು ಇಲ್ಲವೇ ಮುಂದುವರಿಯಲು ನೆಪವಾಗಬಹುದು. ಹೀಗೆ ಅಕ್ಕನ ಮನೆಗೆ ಬೇಸರ ಕಳೆಯಲು, ಬಾಣಂತನಕ್ಕೆ ಬಂದ ತಂಗಿಯರು ಮಾವನ ಅರ್ಧಾಂಗಿಯರಾದ ಪ್ರಸಂಗಗಳು.. ತಂಗಿಯರೇ ಸ್ವಯಂ ಬಾಣಂತನಕ್ಕೆ ಸಜ್ಜಾದ ಪ್ರಸಂಗಗಳು ಅನೇಕ. ಇದಕ್ಕೆ ಮಾವ ಎಂಬ ಪ್ರೀತಿಯ ಸದರ ಇನ್ನಷ್ಟು ಇಂಬು ಮಾಡಿಕೊಡುತ್ತದೆ.
ಕಾಗಿ ಕಾಗಿ ಕವ್ವಾ
ಯಾರ್ ಬಂದಾರವ್ವ
ಮಾವ್ ಬಂದನವ್ವ
ಏನ್ ತಂದಾನವ್ವ
ಹಂಡೆದಂತ ಕುಂಡಿ ಬಿಟ್ಕೊಂಡ್
ಹಂಗ ಬಂದಾನವ್ವ..
ಮಾವನ ಮನೆಗೆ ಬರುವ ಅಕ್ಕನ ಗಂಡನ ಕುರಿತಾದ ಸೊಸೆಯರ ನಿರೀಕ್ಷೆಗಳು ಏನಾದರೂ ತರುವವನಾಗಿಯೇ ಮಾವನನ್ನು ಕಾಣುತ್ತವೆ. ಅವನು ಸಡಗರದ ಮಾವ. ಹಾಗೆ ಸಂಕಟ ತಂದೊಡ್ದುವವನು ಕೂಡ. ಅವನು ಏನೂ ತರದೇ ಬರುವದನ್ನು ಜನಪದ ಬದುಕು ಒಪ್ಪದು.
ಲಿಂಗರಾಜ ಸೊಟ್ಟಪ್ಪನವರ ಹಾವೇರಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ವಿಜ್ಞಾನ ಶಿಕ್ಷಕರು. ಇವರ ಅನೇಕ ಕಥೆಗಳು ವಿವಿಧ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿವೆ. ಇವರ ಹಲವು ಕಥೆಗಳಿಗೆ ಪ್ರಶಸ್ತಿಗಳು ದೊರಕಿವೆ. ಮಾರ್ಗಿ – ಇವರ ಪ್ರಕಟಿತ ಕಥಾ ಸಂಕಲನ. ಮನ್ಸೂರ್ ಸಾಹೇಬನ ಕೇಗೆಲ್ ಎಕ್ಷಪರೀಮೆಂಟು (ಕಥಾ ಸಂಕಲನ) ಹಾಗೂ ಹರಿವ ನದಿಯೂ ಹಂಬಲದ ತಟವೂ- ಕವನ ಸಂಕಲನಗಳು ಪ್ರಕಟಣೆ ಹಂತದಲ್ಲಿವೆ.