ಅರ್ಧ ಬರೆದಿಟ್ಟ ಕವನ

ಅರ್ಧ ಕವನ ಬರೆದಿಟ್ಟ ನಾನು
ಇನ್ನರ್ಧ ಕವನ ಬರೆಯುವ
ಉಮೇದು ಕಡ ತರಲೆಂದು
ಊರು ಸುತ್ತಲು ಹೊರಟೆ

ನಾ ಬರೆದಿಟ್ಟ ಅರ್ಧ ಕವನದ
ಅಕ್ಷರ-ಪದ-ಸಾಲುಗಳೆಲ್ಲಾ
ಸಾಲುಸಾಲಾಗಿ ನನ್ನ ಬೆನ್ನಹಿಂದೆ ಹೊರಟು
ನನ್ನನ್ನೂ ಮೀರಿ ಮುನ್ನಡೆಯುತ್ತಾ
ಜನಸ್ತೋಮದ ಮುಂದೆ
ಕವಾಯತು ನಡೆಸತೊಡಗಿದವು
ಮುಂದಿನ ಅರೆತಾಸು ನಾನು ಮೌನಿ
ನನ್ನ ಅರ್ಧ ಕವಿತೆಯದ್ದೇ ಸಲ್ಲಾಪ ಆಲಾಪ

ಮಲ್ಲಿಗೆ ಮಾಲೆಯ ಮೊಳ ಅಳೆಯುತ್ತಾ
ಆಸೆಗಣ್ಣಾದ ಹರೆಯದವಳ ಹಸಿ ಎದೆಯಲ್ಲಿ
ಬಿಸಿಗನಸು ಮೂಡಿಸಿತು-
ಮತ ಪಂಥಗಳ ಬಿಸಿಯುಸಿರಲ್ಲಿ ಬೆಂದು
ಬಿಸಿನೆತ್ತಿಯಾದವನಲ್ಲಿ ತುಸು ಚಣಗಳ
ಶಾಂತತೆ ಹುಟ್ಟುಹಾಕಿತು-
ರಾವಣನೆದೆಯಲ್ಲಿ ರಾಮನನ್ನು ಸೃಜಿಸಿತು-
ದುರ್ಯೋಧನನ ಭಾವಭಿತ್ತಿಯಲಿ
ಧರ್ಮರಾಯನನ್ನು ನೆಲೆಗೊಳಿಸಿತು-
ನನ್ನ ಅರ್ಧ ಕವಿತೆ

ಬೆವರ ಹನಿಗಳಿಂದ ಮಣ್ಣ ತೇವಗೊಳಿಸಿದವರ
ಕಾಳಪಂಜರದೊಳಗೆ ಶತಶತಮಾನಗಳಿಂದ ಬಂಧಿಯಾದವರ
ತುತ್ತು ಅನ್ನಕ್ಕಾಗಿ ರಕ್ತ ಹರಿಸಿದವರ
ಕ್ಯಾಲೆಂಡರ್‌ನಲ್ಲಿ ಮಾತ್ರವೇ ಸ್ವಾತಂತ್ರ್ಯದಿನ ನೋಡಿದವರ
ಪಾಲಿನ ನಿರಾಳತೆಯ ಉಸಿರಾಯಿತು
ನನ್ನ ಅರ್ಧ ಕವಿತೆ

ಜನತೆಯ ಎದೆಯೊಳಗೆ ಹೂತ
ನನ್ನ ಅರ್ಧ ಕವಿತೆ
ಅವರ ಮೊಗದ ನಗುವಾಗಿ
ಮನದ ತೊಟ್ಟಿಲೊಳಗಿನ ಮಗುವಾಗಿ
ಕೊಂಡಾಟವಾಡತೊಡಗಿತ್ತು

ನನ್ನ ಅರ್ಧ ಕವಿತೆಯೀಗ ಸಂಪೂರ್ಣವಾಗಿತ್ತು
ನಾನು ಬರೆಯದೆಯೇ!