ಸಮಯ ಸಂಜೆಯಾಗ್ತಾ ಬಂದಿತ್ತು. ಊಟ ಮುಗಿಸಿ ಅವನಿದ್ದ ಸ್ಥಳದ ಹತ್ತಿರ ಹೋದಾಗ ಅಲ್ಲಿ ಅವನಿರಲಿಲ್ಲ. ಆಗ ನಾನು ನನ್ನ ಪಾಡಿಗೆ ಗಾಯತ್ರಿ ಬಸ್ಸಿಗೆ ಬಂದೆ. ರಾತ್ರಿ ಸರಿಸುಮಾರು ಎಂಟು ಘಂಟೆಗೆ ಪಚ್ಚಿಯ ಆಂಟಿ ಮನೆಗೆ ಬಂದು ಪಚ್ಚಿಯ ಬಗ್ಗೆ ವಿಚಾರಿಸಿದರು. ನಡೆದ ಘಟನೆಯನ್ನು ವಿವರಿಸಿದೆ. ಆದರೆ ಅವರು ಅದನ್ನು ಕೇಳೋ ಪರಿಸ್ಥಿತೀಲಿ ಇರಲಿಲ್ಲ. ಅವನನ್ನು ಕರ್ಕೊಂಡು ಹೋಗಿ ಬಿಟ್ಟು ಬಂದು ನಾನೇ ತಪ್ಪು ಮಾಡಿದೀನಿ ಅನ್ನೋ ದಾಟಿಯಲ್ಲಿ ಅವನು ‘ಬರದೇ ಹೋದ್ರೆ ಮುಂದೆ ಪರಿಣಾಮ ನೆಟ್ಟಗಿರೋಲ್ಲ’ ಎಂದು ಕೋಪದಿಂದ ಹೇಳುತ್ತಾ ಹೋದರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಎಂಟನೆಯ ಕಂತು ನಿಮ್ಮ ಓದಿಗೆ
“ಕಣ್ಣಾ ಮುಚ್ಚೇ ಗಾಡೇ ಗೂಡೇ ಉದ್ದಿನಮೂಟೆ ಉರುಳೇ ಹೋಯ್ತು .. ನಮ್ಮಯ ಹಕ್ಕಿ, ನಿಮ್ಮಯ ಹಕ್ಕಿ, ಬಿಟ್ಟೇ ಬಿಟ್ಟೆ….” ಎಂದು ಹೇಳುತ್ತಾ ದೊಡ್ಡವರು ಒಬ್ಬರ ಕಣ್ಮುಚ್ಚಿ ಉಳಿದವರನ್ನು ಬಚ್ಚಿಟ್ಟುಕೊಳ್ಳಲು ತಿಳಿಸಿ ಆನಂತರ ಅವರನ್ನು ಹುಡುಕುವ ಆಟ ಆಗ ಸಾಮಾನ್ಯವಾಗಿತ್ತು. ರಜಾ ಬಂತೆಂದರೆ ಇದೇ ಆಟ. ತುಂಬಾ ಚಿಕ್ಕ ಮಕ್ಕಳಿದ್ದರೆ ಅವರನ್ನು ಮೊಣಕಾಲ ಮೇಲೆ ಕೂರಿಸಿಕೊಂಡು “ಆನೆ ಬಂತೊಂದಾನೆ…. ಯಾವೂರಾನೆ…? ಬಿಜಾಪುರದ ಆನೆ… ಇಲ್ಲಿಗ್ಯಾಕೆ ಬಂತು…? ದಾರಿ ತಪ್ಪಿ ಬಂತು….. ದಾರಿಗೊಂದು ದುಡ್ಡು… ಬೀದಿಗೊಂದು ದುಡ್ಡು.. ಕೊಡೆ ಬಸಕ್ಕಾ ಈಗೆಲ್ಲೆ ದುಡ್ಡು? ಸಂತೆಪೇಟೆಗೆ ಹೋಗಿ ಹೂವು ಕಾಯಿ ತಂದು ಪೂಜೆ ಮಾಡೀಣಾಂತ ಇಟ್ರೆ ಒಂದು ಹುಡುಗಿ ಬಂದು ಸಿಂಬಳ ಸೀತು ಓಡಿಹೋತು” ಎಂದು ಹೇಳುತ್ತಾ ಆಟ ಆಡಿಸುತ್ತಿದ್ದರು.
ಒಂದೊಮ್ಮೆ ದೊಡ್ಡವರಿಗೆ ಬೆನ್ನು ನೋವು ಬಂದರೆ ಆ ಮಕ್ಕಳಿಗೆ ಬೆನ್ನು ತುಳಿಯಲು ಹೇಳುತ್ತಿದ್ದುದು, ಹಾಗೆ ತುಳಿದ ನೆನಪು ಇನ್ನೂ ಇದೆ. ಮನೇಲಿ ಒಳಾಂಗಣ ಆಟವಾಗಿ ಆಗ ಸಾಮಾನ್ಯವಾಗಿ ಐದು ಮನೆಯ ಏಳು ಮನೆಯ ಚಾವಂಗ ಚೌಕಾಬಾರ) ಆಟ ದೊಡ್ಡವರು ಆಡ್ತಿದ್ರು. ನಾವೂ ಐದು ಮನೆಯ ಆಟ ಕಲಿತು ಆಡ್ತಿದ್ವಿ. ಇದರ ಜೊತೆಗೆ ಕಳ್ಳ ಪೋಲೀಸ್ ಹುಡುಕೋ ಆಟ ಆಡ್ತಿದ್ವಿ. ಈ ಆಟದಲ್ಲಿ ಕಳ್ಳ, ಪೋಲೀಸ್, ರಾಜ, ರಾಣಿ ಎಂಬ ಚೀಟಿ ಬರೆದು ಅವನ್ನು ಕುಳಿತವರಿಗೆ ಹಾಕಿ ಪೋಲೀಸ್ ಚೀಟಿ ಬಂದವರು ಕಳ್ಳನನ್ನು ಹುಡುಕಬೇಕಾಗಿತ್ತು. ಕೆಲಮೊಮ್ಮೆ ಸೆಟ್ ಆಟ ಆಡ್ತಿದ್ವಿ. ಈ ಆಟದಲ್ಲಿ ಒಂದೇ ಪದವಿರುವ ಚೀಟಿಗಳನ್ನು ನಾಲ್ಕರಂತೆ ಬರೆದು ಅವನ್ನು ಮಡಚಿ ಕಲಕಿ, ಅವನ್ನು ಕುಳಿತ ನಾಲ್ಕು ಆಟಗಾರರಿಗೆ ಹಾಕಿ ನಂತರ ನಾಲ್ಕು ಒಂದೇ ಪದವಿರುವ ಚೀಟಿಗಳನ್ನು ಜೋಡಿಸುವ ಆಟ ಆಡ್ತಿದ್ವಿ. ಮೊದಲು ಜೋಡಿಸಿದವರು ನೆಲಕ್ಕೆ ಕೈ ಇಡಬೇಕಾಗಿತ್ತು. ಉಳಿದವರು ಆನಂತರ ಅವರ ಕೈಮೇಲೆ ಇಡಬೇಕಾಗಿತ್ತು. ಇಲ್ಲಿ ತಡವಾಗಿ ಕೈಇಟ್ಟವರಿಗೆ ಪಾಯಿಂಟ್ಸ್ ಕಡಿಮೆ ಆಗ್ತಿದ್ವು. ಈ ರೀತಿ ಜೋಡಿಸಿದವರು ತಮಗೆ ಬೇಕಾದವರಿಗೆ ಸಿಗ್ನಲ್ ಕೊಟ್ಟು ಕೈನೆಲಕ್ಕಿಡುವ ಮೂಲಕ ಆಗಲೇ ಮ್ಯಾಚ್ ಫಿಕ್ಸಿಂಗ್ ಮಾಡ್ತಾ ಇದ್ರು!
ನಾಲ್ಕನೇ ತರಗತಿಯಲ್ಲಿದ್ದಾಗ ನಮಗೆ ಕನ್ನಡಕ್ಕೆ ಸುಜಾತ ಮೇಡಂ ಬರ್ತಾ ಇದ್ರು. ಇವರು ನಮ್ಮ ಶಾಲೇಲಿ ಒಂದೇ ವರ್ಷ ಇದ್ರು. ಇವರು ಕನ್ನಡ ಪಾಠ ವೇಗವಾಗಿ ಓದಿಕೊಂಡು ಬೇಗ ಬೇಗನೇ ಮುಗಿಸಿಬಿಟ್ಟಿದ್ರು. ನಮಗೆ ಪ್ರಶ್ನೋತ್ತರ ಬರೆಯಿಸೇ ಇರಲಿಲ್ಲ. ನಮಗೆ ಏನಪ್ಪಾ ಇದು ಅಂತಾ ತಲೆನೋವಾಗಿತ್ತು. ನಾವ್ಯಾರು ನೋಟ್ಸ್ ಬರೆದಿರಲಿಲ್ಲ. ಆಗ ನಮ್ ಕ್ಲಾಸು ನಾಗಪ್ರಕಾಶ (ದೊಡ್ಡ ಪಚ್ಚಿ) ಮಾತ್ರ ಅವರ ಮನೆಯವರಿಂದ ದಾವಣಗೆರೆಯಲ್ಲಿ ಗೈಡ್ ತರಿಸಿಕೊಂಡು ಬರೀತಾ ಇದ್ದ. ಇಲ್ಲಿ ಅವನ ಹೆಸರು ದೊಡ್ಡ ಪಚ್ಚಿ ಅಂತಾ ಯಾಕೆ ಬರೆದೆ ಅಂದ್ರೆ ಅವನ ತಮ್ಮನಿಗೆ ಸಣ್ಣ ಪಚ್ಚಿ ಅನ್ತಿದ್ರು. ಪಚ್ಚಿ ತರಿಸಿದ್ದ ಗೈಡ್ ಹೆಸರು ‘ಪ್ರಕಾಶ್ ಗೈಡ್’ ಅಂತಾ ನೆನಪು. ನಮ್ಮ ಮನೆ ಹತ್ರ ಇತ್ತು ಪಚ್ಚಿ ಮನೆ. ಅವನು ಕಟ್ಟೆ ಮೇಲೆ ಕುಳಿತು ಬರಿಯೋದು ನನಗೆ ಕಾಣ್ತಾ ಇತ್ತು. ಆದ್ರೆ ಅವನು ಯಾರಿಗೂ ತೋರಿಸ್ತಾ ಇರಲಿಲ್ಲ. ನವೆಂಬರ್ ವೇಳೆಗೆ ಎಲ್ಲಾ ಪಾಠಗಳ ನೋಟ್ಸ್ ಬರೆದು ಸುಜಾತ ಮೇಡಂಗೆ ತೋರಿಸಿ ಅವರಿಂದ ‘ಗುಡ್’ ಅಂತಾ ಅನಿಸಿಕೊಂಡಿದ್ದ! ಮಕ್ಕಳಿಗೆ ತಮ್ಮ ಟೀಚರ್ ಹತ್ತಿರ ಗುಡ್ ಹಾಕಿಸಿಕೊಳ್ಳೋದು ಹೆಮ್ಮೆಯ ವಿಷಯ. ಅದರಲ್ಲೂ ‘ವೆರಿಗುಡ್’ ಹಾಕಿದ್ರೆ ಸಿಕ್ಕಾಪಟ್ಟೆ ಖುಷಿ. ಕೆಲವರಂತೂ ತಾವೇ ಟೀಚರ್ ಹಾಕಿದಂತೆ ನಕಲು ಮಾಡಿ ಖುಷಿ ಪಡುವುದೂ ಉಂಟು!! ಆ ಮೇಡಂ ನೋಟ್ಸಲ್ಲಿ ರೈಟ್ ಅನ್ನು ನೋಟ್ಸಿನ ಹಾಳೆಯ ತಳಭಾಗದಿಂದ ಮೇಲ್ತುದಿಯವರೆಗೂ ಹಾಕ್ತಿದ್ರು. ಆಮೇಲಾಮೇಲೆ ಗೈಡ್ ಇರುವುದು ಅವರಿಗೂ ಗೊತ್ತಾಯ್ತು ಅನಿಸುತ್ತೆ. ನೋಟ್ಸ್ ಬರೆಸೋಕೆ ಶುರು ಮಾಡಿದ್ರು. ತಮಾಷೆ ಅಂದ್ರೆ ಸ್ವಂತ ವಾಕ್ಯದಲ್ಲಿ ಬರೆಯಿರಿ ಅಂತಾ ಪದ ಕೊಟ್ಟರೆ ಅವರು ಬರೆಸಿದ್ದನ್ನೇ ಬರೆಯಬೇಕಾಗಿತ್ತು! ಈ ಪದ್ಯದಲ್ಲಿ ನಿಮಗಿಷ್ಟವಾದ ಪ್ಯಾರಾ ಯಾವುದು? ಯಾಕೆ? ಅಂತಾ ಕೊಟ್ಟಿದ್ರೆ ಅದನ್ನೂ ಅಷ್ಟೇ; ಅವರು ಬರೆಸಿದ್ದ ವಾಕ್ಯ, ಪ್ಯಾರಾಗಳನ್ನೇ ಬರೆಯಬೇಕಾಗಿತ್ತು!! ಹಿಂದೆ ಬಹುತೇಕ ಟೀಚರ್ಸ್‌ಗಳಿಗೆ ತಮ್ಮ ಮಕ್ಕಳು ತಾವು ನೋಟ್ಸ್ ಬರೆಸಿದಂತೆಯೇ ಬರೆಯಬೇಕಾಗಿತ್ತು!!
ದೊಡ್ಡ ಪಚ್ಚಿಯ ಮನೆಗೆ ನಾನು ಟಿವಿ ನೋಡೋಕೆ ಹೋಗ್ತಿದ್ದೆ. ಅವನು ನಮ್ ಶಾಲೆಗೆ ಮೂರನೇ ತರಗತಿಗೆ ಸೇರಿದ್ದ. ಅವನು ನಮ್ಮ ಶಾಲೆಗೆ ಸೇರಿದ್ದಾಗ ನಾರ್ಮಲ್ ಸ್ಟೂಡೆಂಟ್ ಆಗಿದ್ರಿಂದ ಅವನಿಗೆ ಹೇಳಿ ಕೊಡೋಕೆ ನನಗೆ ಅವರ ಆಂಟಿ ಕೇಳಿದ್ರು. ಒಮ್ಮೆ ಹೀಗೆ ಅವರ ಮನೆಗೆ ಹೋಗಿ ಹೇಳಿಕೊಡುತ್ತಿದ್ದಾಗ ಪಚ್ಚಿ ಇದ್ದೋನು ‘ಕಲ್ಲಂಗಡಿ ಹಣ್ಣು ವಾಸನೆ ಬರ್ತಾ ಇದೆ ಕಣೋ’ ಅಂದ. ನಾನೂ ‘ಹೌದು’ ಎಂದೆ. ಅವರ ರೂಮಿನ ಮಂಚದ ಕೆಳಗೆ ನೋಡಿದ್ರೆ ಚಂದ್ರಿಕೆ ಹಾಕಿದ ದಪ್ಪನೆಯ ಕಲ್ಲಂಗಡಿ ಇತ್ತು. ಪಚ್ಚಿ ‘ತಿನ್ನೋಣ್ವ’ ಅಂದ. ನಾನು ‘ಬೇಡ’ ಎಂದೆ. ಆದರೆ ಅವನೇ ತುಂಬಾ ಒತ್ತಡ ಹಾಕಿ ಆ ಹಣ್ಣಿನಿಂದ ಇಲಿ ಕೀಳುವಂತೆ ಕಿತ್ತು ಕಿತ್ತು ಹಣ್ಣನ್ನು ಬಾಯಲ್ಲಿ ಹಾಕಿಕೊಳ್ಳುತ್ತಾ ನನಗೂ ಸ್ವಲ್ಪ ಕೊಟ್ಟಿದ್ದ. ಸ್ವಲ್ಪ ಕಿತ್ತು ತಿಂದಿದ್ರೆ ಏನೂ ಆಗ್ತಾ ಇರಲಿಲ್ವೇನೋ? ಆದರೆ ಅದು ಬಹಳ ರುಚಿಯಿದ್ದುದರಿಂದ ಅವನು ಆಸೆಯಿಂದ ಪದೇ ಪದೇ ಕಿತ್ತು ತಿನ್ನುತ್ತಿದ್ದ. ನಾನೂ ತಿಂದದ್ದು ಅವನು ಕೊಟ್ಟ ಸ್ವಲ್ಪ ಹಣ್ಣಷ್ಟೇ. ಅಂದು ಅವನು ನನ್ನಿಂದ ಹೇಳಿಸಿಕೊಂಡಿದ್ದು ಏನೂ ಇಲ್ಲ. ಸಮಯವಾದ್ಮೇಲೆ ನಾನು ವಾಪಸ್ ಮನೆಗೆ ಹೋದೆ. ಮಾರನೇ ದಿನ ನಾನು ಟಿವಿ ನೋಡಲು ಅವರ ಮನೆಗೆ ಹೋದಾಗ ಅವರು ‘ಹೇಳಿಕೊಡೋಕೆ ಅಂತಾ ಮನೆಗೆ ಕರೆಸಿದ್ರೆ ಹೀಗಾ ಮಾಡೋದು? ಕೇಳಿದ್ರೆ ಕೊಡ್ತಾ ಇರಲಿಲ್ವ? ಹಣ್ಣನ್ನು ಹಾಗ ಕಿತ್ತು ತಿನ್ನೋದು?ʼ ಅಂತ ಕೇಳ್ತಾ… ಇದು ನನ್ನ ಕುಮ್ಮಕ್ಕಿನಿಂದಲೇ ಆಗಿದೆ ಅನ್ನೋ ದಾಟಿಯಲ್ಲಿ ಕೇಳ್ತಾ ನನ್ನನ್ನೇ ವಿಲನ್ ಮಾಡಿದ್ರು! ಈ ಸಮಯದಲ್ಲಿ ಪಚ್ಚಿ ಏನೂ ಹೇಳ್ದೇ ಸುಮ್ಮನಿದ್ದದ್ದು ನನಗೆ ಬೇಸರ ತರಿಸ್ತು. ಅವತ್ತಿನಿಂದ ಕೆಲ ದಿನಗಳು ಅವರ ಮನೆಗೆ ಟಿವಿ ನೋಡೋಕೆ ಹೋಗದೇ ಅವರ ಪಕ್ಕದಲ್ಲಿದ್ದ ಬೇರೊಬ್ಬರ ಮನೆಗೆ ಹೋಗೋಕೆ ಶುರು ಮಾಡಿದೆ.
ಈ ಆಟದಲ್ಲಿ ಒಂದೇ ಪದವಿರುವ ಚೀಟಿಗಳನ್ನು ನಾಲ್ಕರಂತೆ ಬರೆದು ಅವನ್ನು ಮಡಚಿ ಕಲಕಿ, ಅವನ್ನು ಕುಳಿತ ನಾಲ್ಕು ಆಟಗಾರರಿಗೆ ಹಾಕಿ ನಂತರ ನಾಲ್ಕು ಒಂದೇ ಪದವಿರುವ ಚೀಟಿಗಳನ್ನು ಜೋಡಿಸುವ ಆಟ ಆಡ್ತಿದ್ವಿ. ಮೊದಲು ಜೋಡಿಸಿದವರು ನೆಲಕ್ಕೆ ಕೈ ಇಡಬೇಕಾಗಿತ್ತು. ಉಳಿದವರು ಆನಂತರ ಅವರ ಕೈಮೇಲೆ ಇಡಬೇಕಾಗಿತ್ತು. ಇಲ್ಲಿ ತಡವಾಗಿ ಕೈಇಟ್ಟವರಿಗೆ ಪಾಯಿಂಟ್ಸ್ ಕಡಿಮೆ ಆಗ್ತಿದ್ವು. ಈ ರೀತಿ ಜೋಡಿಸಿದವರು ತಮಗೆ ಬೇಕಾದವರಿಗೆ ಸಿಗ್ನಲ್ ಕೊಟ್ಟು ಕೈನೆಲಕ್ಕಿಡುವ ಮೂಲಕ ಆಗಲೇ ಮ್ಯಾಚ್ ಫಿಕ್ಸಿಂಗ್ ಮಾಡ್ತಾ ಇದ್ರು!
ನಾವು ಶಾಲೆಗೆ ಹೋಗುತ್ತಿದ್ದಾಗ ಒಂದು ದಿನ ಪಕ್ಕದ ಶಾಲೆಯಲ್ಲಿ ದೇಗುಲದ ಗೋಪುರದ ಉದ್ಘಾಟನೆ ಇದೆ ಎಂಬ ವಿಷಯ ತಿಳೀತು. ಆಗ ನಾನು ನಮ್ ಮನೇಲಿ ಹೇಳಿ ಹೋಗೋಕೆ ಅಣಿಯಾದೆ. ಅಲ್ಲಿಗೆ ಹೋಗೋಕೆ ಇದ್ದದ್ದು ಒಂದೇ ಒಂದು ಬಸ್ಸು. ಅದು ಗಾಯತ್ರಿ ಬಸ್ಸು. ಅದಕ್ಕೆ ಹತ್ತಿಕೊಂಡು ಹೋಗಿ ಸಂಜೆ ಅದೇ ಬಸ್ಸಿಗೆ ಬರಬೇಕಾಗಿತ್ತು. ಅದು ಮಿಸ್ಸಾದರೆ ಕಥೆ ಅಷ್ಟೇ. ಅದು ಇಂಟೀರಿಯರ್ ಹಳ್ಳಿ ಆಗಿತ್ತು ಆಗ. ನನ್ ಜೊತೆಗೆ ಪಚ್ಚಿಯೂ ಹೊರಟ. ನಾನು ಅವನಿಗೇನು ಬಾ ಹೋಗೋಣ ಅಂತಾ ಕರೆದಿರಲಿಲ್ಲ. ಅವನ ಪಾಡಿಗೆ ಅವನು ಬಂದಿದ್ದ. ಅಲ್ಲಿಗೆ ಹೋದಾಗ ಸಿಕ್ಕಾಪಟ್ಟೆ ಜನ ಸೇರಿದ್ರು. ನಾನು ಪಚ್ಚಿ ಇಬ್ರೂ ಒಬ್ಬರಿಗೊಬ್ರು ತಪ್ಪಿಸಿಕೊಂಡು ಬಿಟ್ವಿ. ನಾನು ಊಟಕ್ಕೆ ಕುಳಿತಾಗ ಪಚ್ಚಿಯನ್ನು ದೂರದಲ್ಲೇ ನೋಡಿದೆ. ಆದರೆ ಅವನು ನನ್ನ ನೋಡಲಿಲ್ಲ. ಸಮಯ ಸಂಜೆಯಾಗ್ತಾ ಬಂದಿತ್ತು. ಊಟ ಮುಗಿಸಿ ಅವನಿದ್ದ ಸ್ಥಳದ ಹತ್ತಿರ ಹೋದಾಗ ಅಲ್ಲಿ ಅವನಿರಲಿಲ್ಲ. ಆಗ ನಾನು ನನ್ನ ಪಾಡಿಗೆ ಗಾಯತ್ರಿ ಬಸ್ಸಿಗೆ ಬಂದೆ. ರಾತ್ರಿ ಸರಿಸುಮಾರು ಎಂಟು ಘಂಟೆಗೆ ಪಚ್ಚಿಯ ಆಂಟಿ ಮನೆಗೆ ಬಂದು ಪಚ್ಚಿಯ ಬಗ್ಗೆ ವಿಚಾರಿಸಿದರು. ನಡೆದ ಘಟನೆಯನ್ನು ವಿವರಿಸಿದೆ. ಆದರೆ ಅವರು ಅದನ್ನು ಕೇಳೋ ಪರಿಸ್ಥಿತೀಲಿ ಇರಲಿಲ್ಲ. ಅವನನ್ನು ಕರ್ಕೊಂಡು ಹೋಗಿ ಬಿಟ್ಟು ಬಂದು ನಾನೇ ತಪ್ಪು ಮಾಡಿದೀನಿ ಅನ್ನೋ ದಾಟಿಯಲ್ಲಿ ಅವನು ‘ಬರದೇ ಹೋದ್ರೆ ಮುಂದೆ ಪರಿಣಾಮ ನೆಟ್ಟಗಿರೋಲ್ಲ’ ಎಂದು ಕೋಪದಿಂದ ಹೇಳುತ್ತಾ ಹೋದರು. ನನಗೆ ಈಗ ಪೀಕಲಾಟ ಶುರುವಾಯ್ತು. ನಮ್ಮ ಮನೆಯವರ ಬಯ್ಗುಳವೂ ನನಗೆ ಆಗಿದ್ದರಿಂದ ಎಷ್ಟೋ ಹೊತ್ತು ನಿದ್ದೆ ಬಾರದೇ ಹೊರಳಾಡಿದೆ. “ಅವನಿಗೇನೂ ಸಮಸ್ಯೆಯಾಗದೇ ಮನೆಗೆ ವಾಪಸ್ಸು ಬಂದ್ರೆ ದೇವ್ರೇ ನಿನಗೊಂದು ಕಾಯಿ ಹೊಡಿಸ್ತೇನೆ” ಎಂದು ಹರಕೆಯನ್ನು ಕಟ್ಟಿಕೊಂಡೆ. ಮಾರನೇ ದಿನ ಅವರ ಮನೆ ಹತ್ತಿರ ಹೋಗಿ ನೋಡೋಕೆ ಏನಾಗಿದೆಯೇನೋ ಎಂಬ ಭಯ ಬೇರೆ ಇತ್ತು. ಅಂದು ಶನಿವಾರವಾದ್ದರಿಂದ ಪ್ರತಿದಿನಕ್ಕಿಂತ ಬೇಗನೇ ಶಾಲೆಗೆ ಹೋದೆ. ಅಲ್ಲಿ ನನ್ನ ಕಣ್ಣು ಪಚ್ಚಿಯ ಹುಡುಕಾಟದಲ್ಲಿತ್ತು. ಆಗ ಪಚ್ಚಿಯನ್ನು ನೋಡಿದಾಗ ನನ್ನ ಮನಸ್ಸಿಗೆ ಸಮಾಧಾನವಾಗಿತ್ತು. ಅವನ ಬಳಿ ಎಲ್ಹೋಗಿದ್ದೆ? ಎಂದು ವಿಚಾರಿಸಿದಾಗ ಅವನು ಊಟ ಮಾಡಿಕೊಂಡೇ ಹೋಗಬೇಕು ಎಂದು ಕಾದಿದ್ದನಂತೆ. ಬಸ್ಸು ಮಿಸ್ಸಾದಾಗ ರಾತ್ರಿ ಅದೇ ರಸ್ತೆಯಲ್ಲಿ ಬರೋ ಲಾರಿಯನ್ನು ಹತ್ತಿಕೊಂಡು ಬಂದಿದ್ದನಂತೆ. ಇದನ್ನು ಕೇಳಿದಾಗ “ಸದ್ಯ ದೇವ್ರೇ ಕಾಪಾಡಿದೆ” ಎಂದು ಅಂದುಕೊಂಡಂತೆ ಕಾಯಿ ಹೊಡೆಸಿ ಹರಕೆ ತೀರಿಸಿದೆ. ಅಂದಿನಿಂದ ಅವನ ಜೊತೆ ಅಷ್ಟಾಗಿ ಸೇರುತ್ತಿರಲಿಲ್ಲ.
ನಾಲ್ಕನೇ ಕ್ಲಾಸು ಪಾಸಾದಾಗ ನನ್ನಪ್ಪ ಅಮ್ಮ ಯಾಕೋ ಏನೋ ನನ್ನ ಹುಟ್ಟೂರಿಗೆ ಟಿಸಿ ತೆಗೆದುಕೊಂಡು ಹೋಗಲು ತೀರ್ಮಾನಿಸಿದರು. ಆಗ ನನ್ನಜ್ಜ ಅಜ್ಜಿಗೆ ಇದನ್ನು ಅರಗಿಸಿಕೊಳ್ಳಲಾಗಲಿಲ್ಲ. ತುಂಬಾ ಹೇಳಿದ್ರೂ ಅವರ ಮಾತು ಕೇಳದೇ ನನ್ನಪ್ಪ ಟಿಸಿ ತೆಗೆದುಕೊಂಡು ಹೋದ್ರು. ನನಗೂ ಮನಸ್ಸಲ್ಲಿ ತುಂಬಾ ಫೀಲ್ ಇತ್ತು. ಆದರೆ ಹೇಳ್ಕೊಂಡ್ರೆ ಏನೂ ಲಾಭವಿಲ್ಲ ಅಂದ್ಕೊಂಡು ಸುಮ್ಮನಿದ್ದೆ. ಮೇಷ್ಟ್ರೂ ಸಹ ಬೇಸರವಾದ್ರು.
ನಮ್ಮೂರು ಹೆಬ್ಬಳಗೆರೆಯಲ್ಲಿ ಐದನೇ ಕ್ಲಾಸಿಗೆ ಸೇರಿದಾಗ ನನಗೆ ಆ ಶಾಲೆ ವಾತಾವರಣ ಅಷ್ಟು ಹಿಡಿಸಲಿಲ್ಲ. ಫ್ರೆಂಡ್ಸೂ ಸಹ ಜಾಸ್ತಿ ಆಗಲಿಲ್ಲ. ನಲ್ಕುದುರೆ ಶಾಲೆಯ ವಾತಾವರಣಕ್ಕೂ ಈ ಶಾಲೆ ವಾತಾವರಣಕ್ಕೂ ಬಹಳ ವ್ಯತ್ಯಾಸ ಇತ್ತು. ನಲ್ಕುದುರೆ ಶಾಲೆ ಸೂಪರ್ ಎನಿಸುತ್ತಿತ್ತು. ಅಜ್ಜ ಅಜ್ಜಿಯ ಮನೆಯಲ್ಲಿ ಸುಖವಾಗಿ ಉಂಡು, ಅವರ ಪ್ರೀತಿಯಲ್ಲಿ ಬೆಳೆದ ನನಗೆ ಹುಟ್ಟಿದ ಊರು ತುಂಬಾ ಬೇಸರವೆನಿಸುತ್ತಿತ್ತು. ಇತ್ತ ಅಜ್ಜ ಬೇಸರವಾಗಿ ಹಾಸಿಗೆ ಹಿಡಿದರು. ಅವರು ಬೇಸರವಾಗಿದ್ದರಿಂದ ಆ ಶಾಲೆಗೆ ಸೇರಿ ಎರಡು ತಿಂಗಳಾಗಿರಲಿಲ್ಲ ಆಗಲೇ ವಾಪಸ್ಸು ಮೊದಲಿದ್ದ ಶಾಲೆಗೆ ಬರಬೇಕು ಎಂಬ ಸುದ್ದಿ ನನಗೆ ಖುಷಿ ತರಿಸಿತ್ತು. ಟಿಸಿಯನ್ನು ಶಾಲೆಯವರೇ ಪೋಸ್ಟ್ ಮೂಲಕವೇ ತರಿಸಿಕೊಂಡ್ರು. ನಮಗೆ ಆಗ ಇಂಗ್ಲೀಷಿಗೆ ಮಹೇಶ್ವರಪ್ಪ ಮೇಷ್ಟ್ರು ಬರುತ್ತಿದ್ದರು. ನಮಗೆ ಐದನೇ ಕ್ಲಾಸಿಗೆ ಇಂಗ್ಲೀಷ್ ಇದ್ದುದ್ದರಿಂದ ಕ್ಯಾಪಿಟಲ್ ಅಕ್ಷರ, ಸ್ಮಾಲ್ ಅಕ್ಷರ ಕಲಿಸಿ ಅದಾಗಲೇ ದಟ್, ದಿಸ್, ದೀಸ್, ಶುರು ಮಾಡಿದ್ರು. ಏನೂ ಕಲಿತಿಲ್ಲ ಎಂದು ನನಗೆ ಆಗ ತುಂಬಾ ಫೀಲ್ ಆಯ್ತು; ನಾನು ಎಲ್ಲರಿಗಿಂತ ಹಿಂದುಳಿದಿದ್ದೇನೆ ಎಂದು ಅನಿಸಿತಾದರೂ ತುಂಬಾ ಶ್ರಮವಹಿಸಿ ಅವೆಲ್ಲವನ್ನು ಕಲಿತೆ.
ಈ ವರ್ಷ ನಮಗೆ ಹೊಸದಾಗಿ ಲೋಕೇಶ್ವರಪ್ಪ ಎಂಬ ಮೇಷ್ಟ್ರು ಬಂದಿದ್ರು. ಅವರು ತುಂಬಾ ಚೆನ್ನಾಗಿ ಪಾಠ ಮಾಡುತ್ತಿದ್ದರು. ಅವರು ನಮಗೆ ಗಣಿತವನ್ನು ಬೋಧಿಸುತ್ತಿದ್ದರು. ಐದನೇ ಕ್ಲಾಸಿಗೆ ನವೋದಯ ಪರೀಕ್ಷೆಯನ್ನು ಸಹ ಕಟ್ಟಿಸಿ ಅದಕ್ಕೆ ಪ್ರತ್ಯೇಕ ಕ್ಲಾಸ್ ಮಾಡ್ತಾ ಇದ್ರು. ಎಲ್ಲರಿಗಿಂತ ಇವರೇ ನಮಗೆ ತುಂಬಾ ಫೇವರೆಟ್ ಟೀಚರ್ ಆದ್ರು. ಇವರು ಪಾಠ ಮಾಡಿದ್ಮೇಲೆ ಆ ಪಾಠದ ಯೂನಿಟ್ ಟೆಸ್ಟ್ ಕೊಡ್ತಾ ಇದ್ರು. ಅದಕ್ಕೆ ನಾವು ಶಾಲೆ ತರಗತಿಯ ಎಲ್ಲಾ ಮಕ್ಕಳು ಐದರಿಂದ 10 ಪೈಸೆ ಕೊಡಬೇಕಾಗಿತ್ತು. ಅದು ಅದನೆಲ್ಲಾ ಸೇರಿಸಿ ಆ ಟೆಸ್ಟ್ ಅಲ್ಲಿ ಯಾರು ಜಾಸ್ತಿ ಮಾರ್ಕ್ಸ್ ತೆಗೆಯುತ್ತಿದ್ದರೋ ಅವರಿಗೆ ಬಹುಮಾನದ ಮೊತ್ತವನ್ನು ಕೊಡ್ತಾ ಇದ್ರು. ಮೊದಲನೇ ಪರೀಕ್ಷೆಯಲ್ಲಿ ಆ ಬಹುಮಾನವನ್ನ ನಾನೇ ಪಡೆದು ತುಂಬಾ ಖುಷಿ ಪಟ್ಟಿದ್ದೆ. ಅವರು ನಮಗೆ ರೋಲ್ ಮಾಡಲಾಗಿದ್ರು. ಅವರ ಹೇರ್ ಸ್ಟೈಲ್ ಇಂದ ಹಿಡಿದು ಪ್ರತಿಯೊಂದನ್ನು ನಾವು ಅನುಕರಣೆ ಮಾಡ್ತಾ ಇದ್ವಿ. ಅವರಿಗೆ ನಾವಷ್ಟೇ ಅಲ್ದೆ ಇಡೀ ಊರವರು ಗೌರವ ಕೊಡ್ತಾ ಇದ್ರು. ನಾನೂ ಮೇಷ್ಟ್ರಾಗಬೇಕು ಎಂಬ ಆಸೆ ಚಿಗುರೊಡೆದಿದ್ದುದು ಇವರಿಂದಾನೇ. ಸ್ಟಡಿ ಅವರ್ಸ್ ಅಂತಾ ಮಾಡಿ ಸ್ಕೂಲಿಗೆ ಮುಂಚೆ ಬಂದು ಓದಿಸ್ತಾ ಇದ್ರು.
ಹೀಗೆ ಅವರ ಬಗ್ಗೆ ಎಷ್ಟು ಹೇಳಿದ್ರೂ ಸಾಲದು. ಮುಂದೆ ಅವರ ಬಗ್ಗೆ ಇನ್ನಷ್ಟು ವಿಷಯಗಳನ್ನು ತಿಳಿಸ್ತೀನಿ. ಜೀವನದಲ್ಲಿ ಕೆಲವೊಮ್ಮೆ ನಮ್ಮ ತಪ್ಪು ಇರದಿದ್ರೂ ನಮ್ಮ ಮೇಲೆ ಆರೋಪಗಳು ಬರಬಹುದು. ಆಗ ನಾವು ವಿಚಲಿತರಾಗದೇ ತಾಳ್ಮೆ, ಧೈರ್ಯದಿಂದ ಎದುರಿಸಬೇಕು. ಧೈರ್ಯ ಸಾಲದಿದ್ದರೆ ದೇವರ ಮೇಲೆ ಭಾರ ಹಾಕಬೇಕು. ಇಲ್ಲಿ ಸಮಸ್ಯೆಗಳು ಶಾಶ್ವತವಲ್ಲ. Prevention is better than cure ಎಂಬಂತೆ ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ವಹಿಸಿದರೆ ಇನ್ನೂ ಒಳ್ಳೆಯದು. ಅದನ್ನೂ ಮೀರಿ ಬಂದರೆ ಎದುರಿಸಬೇಕಷ್ಟೇ. ಆಗಲೇ ನಾವು ಗಟ್ಟಿಯಾಗೋದು.
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
Super
ತುಂಬಾ ಚೆನ್ನಾಗಿದೆ ಸರ್.
ಪೇಚಿಗೆ ಸಿಲುಕಿಸಿದ ಪಚ್ಚಿ ಈಗ ಎಲ್ಲಿದ್ದಾನೆ?
ಹುಟ್ಟಿದ ಊರನು ಬಿಟ್ಟು ಬಂದಾ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ..