ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನನ್ನ ಸಹಪಾಠಿಯಾಗಿದ್ದ ನಾಸೀರುದ್ದೀನ್ ಶಾ ಭಾರತ ಸಿನಿ ಉದ್ಯಮದಲ್ಲಿ ನಾನು ಮೆಚ್ಚುವ ನಟರಲ್ಲಿ ಒಬ್ಬರು. ಯಾವ ಪಾತ್ರವನ್ನು ಕೊಟ್ಟರೂ ಆ ಪಾತ್ರಕ್ಕೆ ವಿಶಿಷ್ಟತೆ ತರಬಲ್ಲ ಶಕ್ತಿ ಇರುವ ಅಪರೂಪದ ನಟ. ಆದರೆ ಈ ಸಿನಿಮಾದಲ್ಲಿ ನನ್ನ ಅನುಭವ ಅಷ್ಟು ಹಿತಕರವಾಗಿರಲಿಲ್ಲ. ಕನ್ನಡದ ಸಂಭಾಷಣೆ ನೆನಪಿಟ್ಟುಕೊಳ್ಳಲು ಅಸಾಧ್ಯವಾಗಿ ಅವರಿಗೆ ಇರುಸುಮುರುಸಾಗುತ್ತಿತ್ತು. ಅದರಿಂದ ಹುಟ್ಟಿದ ಅಸಹನೆ ಚಿತ್ರೀಕರಣದ ವೇಳೆಯಲ್ಲೂ ಪ್ರತಿಧ್ವನಿಸುತ್ತಿತ್ತು.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ” ದಿಂದ “ಮನೆ” ಚಿತ್ರದ ಕುರಿತ ಮಾತುಕತೆ ನಿಮ್ಮ ಓದಿಗೆ

ಪೈ: ಕನ್ನಡ ಸಾಹಿತ್ಯದಲ್ಲಿ ನಗರ ಕೇಂದ್ರಿತ ಕತೆಗಳಿದ್ದರೂ ನಗರದ ಸಮಸ್ಯೆಗಳ ಸುತ್ತ ಹೆಣೆದ ಕತೆಗಳು ಅಪರೂಪ. ಗ್ರಾಮೀಣ ಮತ್ತು ಚಿಕ್ಕ ಪಟ್ಟಣಗಳೇ ಕೇಂದ್ರವಾಗಿದ್ದ ನಿಮ್ಮ ಸಿನಿಮಾಯಾನದಲ್ಲಿ ಮೊದಲ ಬಾರಿಗೆ ನಗರ ಜೀವನದಲ್ಲಿನ ಸಮಸ್ಯೆ ಕುರಿತ ಕತೆಯನ್ನು ಆರಿಸಿದ್ದೀರಿ. ಈ ಚಿತ್ರ ಮಾಡುವ ವೇಳೆಗೆ ಭಾರತದಲ್ಲಿನ್ನೂ ಮುಕ್ತ ಆರ್ಥಿಕತೆ ತರಲಿರುವ ಬದಲಾವಣೆಗಳ, ಕರ್ಷಣೆಗಳ ಕಲ್ಪನೆ ಇರಲಿಲ್ಲ.

ಗಿರೀಶ್: ಸುಮಾರು 1986ರಲ್ಲಿ ಡಂಕಲ್ ಡ್ರಾಫ್ಟ್‌ನಲ್ಲಿ ಪ್ರಸ್ತಾಪವಾದ ಗ್ಯಾಟ್ ಒಪ್ಪಂದ ನಮ್ಮ ದೇಶಕ್ಕೆ ಸೂಕ್ತ ಮಾದರಿಯೇ, ಅಲ್ಲವೇ ಎಂಬ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿತ್ತು. ಆ ಡ್ರಾಫ್ಟ್‌ನಲ್ಲಿ ಪ್ರಸ್ತಾಪವಾದ ವಿಷಯಗಳಲ್ಲಿ ಕೃಷಿಗೆ ನೀಡುತ್ತಿದ್ದ ಸಹಾಯಧನವನ್ನು ಕಡಿಮೆ ಮಾಡುತ್ತ ಬರಬೇಕು ಹಾಗೂ ದೇಶದಲ್ಲಿ ಹಣ ಹೂಡಲು ಅಂತರರಾಷ್ಟಿçÃಯ ಸಂಸ್ಥೆಗಳಿಗೆ ಅನುವು ಮಾಡಿಕೊಡಬೇಕು ಎಂಬ ನಿಬಂಧನೆಗಳ ಬಗ್ಗೆ ವಿಷಯತಜ್ಞರು ಆಕ್ಷೇಪ ಎತ್ತಿದ್ದರು. ಇದು ಕೃಷಿ ಕೇಂದ್ರಿತ ಭಾರತೀಯ ಸಮಾಜದ ಬುಡವನ್ನು ಅಲ್ಲಾಡಿಸುವ ನಿರ್ಧಾರ ಎಂಬ ಅಭಿಪ್ರಾಯ ಅವರದು. ಈ ನಿರ್ಧಾರಗಳು ನಮ್ಮ ಭಾರತೀಯ ಸಮಾಜವನ್ನು ಮುಕ್ತ ಮಾಡುವ ಬದಲು ಮತ್ತಷ್ಟು ಬಂಧನಕ್ಕೆ ಸಿಕ್ಕಿಸುತ್ತದೆ ಎಂದೂ ಆತಂಕ ಅನೇಕರದ್ದು. ಆಗಿನ ಪ್ರಧಾನಮಂತ್ರಿ ರಾಜೀವ ಗಾಂಧಿಯವರು ‘ಇಪ್ಪತ್ತೊಂದನೆಯ ಶತಮಾನಕ್ಕೆ ಜಿಗಿಯೋಣ’ (Let us leap to 21st Century)) ಎಂದು ಹೇಳುತ್ತಿದ್ದರು. ಅದು ಸದುದ್ದೇಶದ ಹೇಳಿಕೆಯಾಗಿದ್ದರೂ ಈ ಲಂಘನ/ಜಿಗಿತ (leap) ಶಬ್ದದ ಬಗ್ಗೆ ನನಗೆ ತಕರಾರಿತ್ತು. ಆರ್ಥಿಕವಾಗಿ, ರಾಜಕೀಯವಾಗಿ, ದೈಹಿಕವಾಗಿ ಸಬಲರಾಗಿದ್ದವರು ಲಂಘನ ಮಾಡಬಹುದು, ಈ ಸವಲತ್ತುಗಳಿಲ್ಲದವರ ಕತೆ ಏನಾಗಬಹುದು?

ಅವರು ಹಿಂದೆ ಬೀಳುತ್ತಾರಲ್ಲವೇ? ಆ ಬಗ್ಗೆ ದೇಶದ ಚುಕ್ಕಾಣಿ ಹಿಡಿದವರಿಗೆ ಕಾಳಜಿ ಇರಬೇಡವೇ? ಎಂಬ ಅನ್ನಿಸಿಕೆ ಕಾಡತೊಡಗಿತು. ಒಬ್ಬ ನೇತಾರ ಈ ರೀತಿಯ ಲಂಘನಕ್ಕೆ ಕರೆ ಕೊಡುವುದೇ ಅಸಿಂಧು, ಬದಲಾಗಿ ಸಮುದಾಯದ ಸಮಸ್ತರನ್ನೂ ಜೊತೆಯಾಗಿ ಕರೆದುಕೊಂಡು ‘ಹೋಗೋಣ ಬನ್ನಿ’ ಎಂದು ಕರೆ ಕೊಡಬೇಕಾಗಿತ್ತು ಅನ್ನಿಸಿತು.

ಆಗಿನ್ನೂ ನಮ್ಮ ದೇಶ ಜಾಗತೀಕರಣಕ್ಕೆ ತೆರೆದುಕೊಂಡಿರಲಿಲ್ಲವಾದರೂ ಅದರ ಪೂರ್ವ ಸೂಚನೆಗಳು ಕಾಣಿಸುತ್ತಿದ್ದವು. ಅದು ತರಲು ಹೊರಟ ಮುಕ್ತ ಮಾರುಕಟ್ಟೆ (liberalisation) ಖಾಸಗೀಕರಣ (privatisation) ಮತ್ತು ಜಾಗತೀಕರಣ (Globalisation) ಅರ್ಥಾತ್ L.P.Gಯು ಅಡಿಗೆ ಅನಿಲವಾದ L.P.Gಯಷ್ಟೇ ಉಪಯುಕ್ತವೂ ಆಗಬಲ್ಲದು, ಅಯೋಗ್ಯರ ಕೈ ಸೇರಿದರೆ ಸ್ಫೋಟಕವೂ ಆಗಬಲ್ಲದು ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿತ್ತು.

ಸಮಾಜ ಒಂದು ಮಾದರಿಯಿಂದ ಇನ್ನೊಂದು ಮಾದರಿಗೆ ಬದಲಾದಾಗ ಅದು ಕೇವಲ ರಾಚನಿಕವಾಗಷ್ಟೇ ಬದಲಾಗುತ್ತಿರುವುದಿಲ್ಲ. ಅದರ ಮೌಲ್ಯವ್ಯವಸ್ಥೆ, ಸಾಮಾಜಿಕ ಸಂಬಂಧಗಳು, ಜೀವನ ಕ್ರಮಗಳೂ ಬದಲಾಗುತ್ತಿರುತ್ತವೆ. ಆ ಬದಲಾವಣೆಗಳು ಕೌಟುಂಬಿಕ ಸಂಬಂಧಗಳಲ್ಲಿನ ಕರ್ಷಣದಲ್ಲಿ ಪ್ರತಿಫಲನಗೊಳ್ಳುತ್ತವೆ, ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳಲ್ಲಿ ಇಣುಕುತ್ತವೆ. ಕೊನೆಗೆ ಬಾಹ್ಯ ಸಮಾಜದ ಅಡಿಪಾಯವನ್ನೇ ಬದಲಿಸುವ ನೆಲೆ ಮುಟ್ಟುತ್ತವೆ. ಸಾಹಿತ್ಯ, ಸಿನಿಮಾ, ನಾಟಕ ಮೊದಲಾದ ಕಲಾಪ್ರಕಾರಗಳು ಅನೇಕ ವೇಳೆ ಕುಟುಂಬದೊಳಗಿನ ತಲ್ಲಣಗಳ ಮೂಲಕ ಈ ಪಲ್ಲಟವನ್ನು ಅರ್ಥೈಸುತ್ತಿರುತ್ತವೆ.

ನಾನು 1989ರಲ್ಲಿ ‘ಮನೆ’ ಸಿನಿಮಾ ಮಾಡಿದಾಗ ಜಾಗತೀಕರಣ, ಮುಕ್ತ ಮಾರುಕಟ್ಟೆ, ಖಾಸಗೀಕರಣ ಅನುಷ್ಠಾನಕ್ಕೆ ಬಂದಿರಲಿಲ್ಲ. ಅದರ ಪರಿಣಾಮಗಳೇನಾಗಬಹುದು ಎಂಬ ಕಲ್ಪನೆಯೂ ಅನೇಕರಿಗಿರಲಿಲ್ಲ. ಆದರೆ ಹೀಗಾಗಬಹುದು ಎಂಬ ಕಲ್ಪನೆಯಿಂದ ಈ ಚಿತ್ರ ಮಾಡಿದ್ದು. ಅದು ಇವತ್ತು ನಿಜವಾಗಿದೆ.

ಪೈ: ವಾಸ್ತವವಾದೀ ಚಿತ್ರಗಳಲ್ಲಿ ಬಣ್ಣ ಮತ್ತು ಪರಿಕರಗಳ ಬಳಕೆಯ ಉದ್ದೇಶವೇ ಬೇರೆ. ಪ್ರಚಾರ ಚಿತ್ರಗಳಲ್ಲಿ ಅವುಗಳ ಬಳಕೆಯ ಕ್ರಮ ಭಿನ್ನವಾಗಿರುತ್ತದೆ. ಈ ಚಿತ್ರದಲ್ಲಿ ಆ ಎರಡೂ ಕ್ರಮಗಳನ್ನು ಸಂದರ್ಭೋಚಿತವಾಗಿ ಬಳಸುತ್ತಾ ಹೋಗಿದ್ದೀರಿ.

ಗಿರೀಶ್: ಬಣ್ಣ ಮತ್ತು ಪರಿಕರಗಳ ಬಳಕೆಯಲ್ಲಿ ಒಂದು ಸೂತ್ರವನ್ನೂ ಬಳಸಿದೆವು. ಇದೊಂದು ಉಪಭೋಗೀ ಸಂಸ್ಕೃತಿಯ ಸಾಧಕ ಬಾಧಕಗಳನ್ನು ಕುರಿತಾದ ಚಿತ್ರ. ಹಾಗಾಗಿ ಬಿಂಬ ಕಟ್ಟುವಾಗ ಆ ಸಂಸ್ಕೃತಿಯ ಅಳತೆಗೋಲನ್ನೇ ಬಳಸಿ ವ್ಯಾಖ್ಯಾನಿಸಬೇಕು ಎಂಬುದು ನನ್ನ ನಿಲುವಾಗಿತ್ತು. ಉಪಭೋಗೀ ಸಂಸ್ಕೃತಿ ತನ್ನ ಸರಕನ್ನು ಮಾರಲು ಪ್ರಚಾರದ ಮೊರೆ ಹೋಗುತ್ತಿರುತ್ತದೆಯಲ್ಲವೇ? ಆ ಉದ್ದೇಶದಿಂದ ಮಾಡುವ ಪ್ರಚಾರಚಿತ್ರ(ad films)ಗಳಲ್ಲಿ ಎಲ್ಲವೂ ತಾಜಾ ಆಗಿ ಕಾಣಬೇಕು. ಅದು ಬಟ್ಟೆ ಒಗೆಯುವ ಸೋಪಿನ ಪ್ರಚಾರವಾದರೂ ಬಟ್ಟೆ ಹರಿದಿರಬಾರದು, ಬಕೆಟ್ ಈಗಷ್ಟೇ ಅಂಗಡಿಯಿಂದ ತಂದಂತಿರಬೇಕು, ಬಟ್ಟೆ ಒಗೆಯುತ್ತಿರುವ ಹೆಂಗಸು (ಪ್ರಚಾರ ಚಿತ್ರಗಳಲ್ಲಿ ಗಂಡಸರು ಎಂದಾದರೂ ಬಟ್ಟೆ ಒಗೆಯುವುದುಂಟೇ!!) ನೀಟಾಗಿ ಸೀರೆ ಉಟ್ಟು ಆಕರ್ಷಕವಾಗಿ ಕಾಣುತ್ತಿರಬೇಕು. ಪ್ರಚಾರಚಿತ್ರದ ಈ ನುಡಿಗಟ್ಟುಗಳನ್ನೇ ಬಳಸಿ ಕೆಲವು ದೃಶ್ಯ ಬಿಂಬಗಳನ್ನು ಕಟ್ಟಿದ್ದೇವೆ.

ಉದಾಹರಣೆಗೆ ರಾಜಣ್ಣ ಗೋಡೆಗೆ ಬಳಿಯಲು ಹಳದಿ ಬಣ್ಣವನ್ನು ಮಿಶ್ರ ಮಾಡುವಾಗಿನ ವಿವರಗಳಿಗೆ ನಳನಳಿಸುವ ಗುಣಗಳಿದ್ದು, ಪ್ರಚಾರ ಚಿತ್ರವೊಂದರ ಬಿಂಬಗಳಂತಿವೆ.

*****

ಪೈ: ‘ತಬರನ ಕಥೆ’ಗೆ ಚಾರುಹಾಸನ್ ಆಯ್ಕೆ ಮಾಡಿದ್ದು ಹೊರತು ಪಡಿಸಿದರೆ, ನೀವು ಬೇರೆ ಭಾಷೆಯ ನಟ ನಟಿಯರನ್ನು ನಿಮ್ಮ ಚಿತ್ರಗಳಲ್ಲಿ ತೆಗೆದುಕೊಂಡಿಲ್ಲ. ಈ ಚಿತ್ರದಲ್ಲಿ ಹಿಂದಿಯ ಕಲಾವಿದರಾದ ನಾಸೀರುದ್ದೀನ್ ಶಾ, ದೀಪ್ತಿ ನಾವಲ್ ಮತ್ತು ರೋಹಿಣಿ ಹಟ್ಟಂಗಡಿ ನಟಿಸಿದ್ದಾರೆ. ಮೂವರೂ ಹಿಂದಿ ಚಿತ್ರರಂಗದಲ್ಲಿ ತುಂಬಾ ಹೆಸರು ಮಾಡಿದವರು. ಚಿತ್ರವನ್ನು ಕನ್ನಡದ ಜೊತೆ ಜೊತೆಗೇ ಹಿಂದಿಯಲ್ಲೂ ಮಾಡಿದ್ದೀರಿ. ಅವರ ಜೊತೆ ಕೆಲಸ ಮಾಡಿದಾಗ ಸಂವಹನದ ಸಮಸ್ಯೆ ಬರಲಿಲ್ಲವೇ?

ಗಿರೀಶ್: ‘ಮನೆ’ ಚಿತ್ರಕ್ಕೆ ಹಿಂದಿ ನಟ ನಟಿಯರನ್ನು ಬಳಸಬೇಕಾಗಿ ಬಂದದ್ದು ಚಿತ್ರಕ್ಕೆ ಧನ ಸಹಾಯ ನೀಡಿದ ರಾಷ್ಟೀಯ ಚಲನಚಿತ್ರ ಅಭಿವೃದ್ಧಿ ನಿಗಮ((NFDC )ದ ಸಲಹೆಯ ಮೇರೆಗೆ. ಇದಕ್ಕೂ ಮೊದಲು ನಾನು ಮಾಡಿದ ‘ತಬರನ ಕಥೆ’ ಮತ್ತು ‘ಬಣ್ಣದ ವೇಷ’ ಚಿತ್ರಗಳೆರಡನ್ನೂ ಬಜೆಟ್ ಕಾರಣದಿಂದಾಗಿ 16 mmನಲ್ಲಿ ಮಾಡಬೇಕಾಗಿ ಬಂದಿದ್ದು, ಆ ನಿರ್ಧಾರವೇ ನನ್ನ ಅಸಂತೃಪ್ತಿಗೆ ಕಾರಣವಾಗಿತ್ತು.. ಆ ಕಾರಣ ಹೇಳಿ NFDC ಯ ಬಳಿ ಈ ಚಿತ್ರಕ್ಕೆ ಹೆಚ್ಚಿನ ಸಾಲ ಕೇಳಿದೆ. ಆದರೆ ಅವರ ನಿಯಮಾವಳಿಗಳ ಪ್ರಕಾರ ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಆ ಮೊತ್ತದ ಧನ ಸಹಾಯ ನೀಡಲು ಅವಕಾಶವಿಲ್ಲ ಎನ್ನುವುದನ್ನು ತಿಳಿಸಿ, ಹೆಚ್ಚಿನ ಬಜೆಟ್ ಬೇಕಿದ್ದರೆ ಹಿಂದಿಯಲ್ಲಿ ಮಾಡಲು ಸೂಚಿಸಿದರು. ಹಿಂದಿಯಲ್ಲಿ ಮಾಡಲು ನಾನು ಒಪ್ಪದಿದ್ದಾಗ ಅವರೇ ಕೊಟ್ಟ ಸಲಹೆ ದ್ವಿಭಾಷೆಯಲ್ಲಿ ಮಾಡು ಎಂದು. ಕನ್ನಡ ನಟ ನಟಿಯರನ್ನು ಇಟ್ಟುಕೊಂಡು ಹಿಂದಿಯಲ್ಲಿ ಮಾಡುವುದು ವ್ಯಾವಹಾರಿಕವಾಗಿ ಅನುಕೂಲಕರವಲ್ಲ ಎಂದು ಹೇಳಿದ್ದರಿಂದ ಅನಿವಾರ್ಯವಾಗಿ ನಾನು ಹಿಂದಿ ನಟ ನಟಿಯರನ್ನು ಬಳಸಬೇಕಾಯಿತು. ಇದರಿಂದಾಗಿ ಕನ್ನಡ ಆವೃತ್ತಿ ಬಳಲಿತು ಎಂದು ನನ್ನ ಭಾವನೆ.


ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನನ್ನ ಸಹಪಾಠಿಯಾಗಿದ್ದ ನಾಸೀರುದ್ದೀನ್ ಶಾ ಭಾರತ ಸಿನಿ ಉದ್ಯಮದಲ್ಲಿ ನಾನು ಮೆಚ್ಚುವ ನಟರಲ್ಲಿ ಒಬ್ಬರು. ಯಾವ ಪಾತ್ರವನ್ನು ಕೊಟ್ಟರೂ ಆ ಪಾತ್ರಕ್ಕೆ ವಿಶಿಷ್ಟತೆ ತರಬಲ್ಲ ಶಕ್ತಿ ಇರುವ ಅಪರೂಪದ ನಟ. ಆದರೆ ಈ ಸಿನಿಮಾದಲ್ಲಿ ನನ್ನ ಅನುಭವ ಅಷ್ಟು ಹಿತಕರವಾಗಿರಲಿಲ್ಲ. ಕನ್ನಡದ ಸಂಭಾಷಣೆ ನೆನಪಿಟ್ಟುಕೊಳ್ಳಲು ಅಸಾಧ್ಯವಾಗಿ ಅವರಿಗೆ ಇರುಸುಮುರುಸಾಗುತ್ತಿತ್ತು. ಅದರಿಂದ ಹುಟ್ಟಿದ ಅಸಹನೆ ಚಿತ್ರೀಕರಣದ ವೇಳೆಯಲ್ಲೂ ಪ್ರತಿಧ್ವನಿಸುತ್ತಿತ್ತು. ಮುಖ್ಯ ಪಾತ್ರದಲ್ಲಿದ್ದ ಇನ್ನಿಬ್ಬರು ಹಿಂದಿ ನಟಿಯರಾದ ದೀಪ್ತಿ ನಾವಲ್ ಮತ್ತು ರೋಹಿಣಿ ಹಟ್ಟಂಗಡಿ ಸಮರ್ಥವಾಗಿ ಪಾತ್ರ ನಿರ್ವಹಿಸಿದರು. ಅಡಕತ್ತರಿಯಲ್ಲಿ ಸಿಕ್ಕ ಗೀತಾಳಾಗಿ ದೀಪ್ತಿಯವರ ಅಭಿನಯ ನನಗೆ ತುಂಬಾ ಮೆಚ್ಚುಗೆಯಾಯ್ತು. ಈ ಅಸಮಾಧಾನಗಳ ನಡುವೆಯೂ ಒಂದು ಸಂತೋಷಿಸುವ ವಿಷಯವಿದೆ. ಈ ಮೂವರು ಕಲಾವಿದರೂ ಮಿನಿಮಲಿಸ್ಟ್ ಸಿನಿಮಾಕ್ಕೆ ಅಗತ್ಯವಾದ ಸಂಯಮದ ಅಭಿನಯವನ್ನು ಬಹಳ ಸಮರ್ಪಕವಾಗಿ ನಿರ್ವಹಿಸಿದರು ಎನ್ನುವುದು.

(ಕೃತಿ: ಬಿಂಬ ಬಿಂಬನ (ಕಾಸರವಳ್ಳಿ ಚಿತ್ರಗಳ ಸಂಕಥನ), ಲೇಖಕರು: ಗಿರೀಶ್‌ ಕಾಸರವಳ್ಳಿ, ಗೋಪಾಲಕೃಷ್ಣ ಪೈ, ಪ್ರಕಾಶಕರು: ವೀರಲೋಕ ಬುಕ್ಸ್‌)