ಈ ಮುತ್ತಿನಂಥಾ ಮಾತುಗಳ ಸರಣಿ ಮುಂದಿನ ಬರಹದಲ್ಲೂ ಮಾಲೆಯಾಗಿ ನಾಲ್ಕು ಸಾಲು ಗೀಚಿಯೋ, ಫೇಸ್ಬುಕ್, ವಾಟ್ಸ್ ಅಪ್‌ಗಳ ಸ್ಟೇಟಸ್‌ಗಳಲ್ಲಿ ಬರುವ ಕವನಗಳನ್ನೋದಿಕೊಂಡು ಬೀಗುವವರ ಕಿವಿಹಿಂಡಿದೆ. “ಕವಿತೆ ಒಂದು ಜೀವನ ದೃಷ್ಟಿ, ಎಷ್ಟೆಲ್ಲಾ ಸಂವೇದನಾಶೀಲರ ಪ್ರಜ್ಞಾ ಪ್ರವಾಹದ ಮನೋಸಂಗಮದಿಂದ ಅರಳುವ ಜೀವನ ಕಲೆ” ಎನ್ನುತ್ತಾ ಪರಂಪರೆಯನ್ನು ಅರಿತಿರುವುದರ ಜೊತೆಗೆ ಕವಿತಾರಚನೆಗೆ ಆಳವಾದ ಧ್ಯಾನ ಅಧ್ಯಯನದ ಅಗತ್ಯವಿದೆ ಎನ್ನುವದನ್ನು ಹೇಳುತ್ತದೆ. ಅವರ ಪುಟ್ಟ ಪುಟ್ಟ ವಾಕ್ಯಗಳನ್ನು ಓದುವುದೇ ಖುಷಿ.
ಜಯಂತ ಕಾಯ್ಕಿಣಿಯವರ “ತಾರಿದಂಡೆ” ಕೃತಿಯ ಕುರಿತು ಶ್ವೇತಾ ಹೊಸಬಾಳೆ ಬರಹ
ನಾನು ಇತ್ತೀಚೆಗೆ ಓದಿದ ಪುಸ್ತಕ ಜಯಂತ್ ಕಾಯ್ಕಿಣಿಯವರ ‘ತಾರಿದಂಡೆ’ – ಬಿಡಿ ಬರಹಗಳ ಸಂಕಲನ. ಇದರಲ್ಲಿ ಮೂರು ಭಾಗಗಳಿವೆ. ಪ್ರಬಂಧಗಳು, ವ್ಯಕ್ತಿಚಿತ್ರಗಳು, ಮತ್ತು ಅವರು ಇಷ್ಟಪಟ್ಟ ಪುಸ್ತಕಗಳು ಮತ್ತು ಪ್ರಭಾವಿಸಿದ ಪತ್ರಿಕೆಗಳ ಬಗೆಗಿನ ಆತ್ಮೀಯ ಮಾತುಗಳು. ಈ ಮೂಲಕ ಕಾಯ್ಕಿಣಿಯವರು ಹಲವು ವಸ್ತು ವಿಷಯಗಳನ್ನು ಪ್ರಸ್ತಾಪಿಸುತ್ತಾ ಓದುಗರನ್ನು ತಮ್ಮ ಕಾಲಕ್ಕೇ ಕರೆದುಕೊಂಡು ಹೋಗುವುದು ವಿಶೇಷ. ಪ್ರತಿಯೊಂದು ಬರಹದಲ್ಲೂ ಅವರ ವಾಕ್ಯ ರಚನಾ ವಿನ್ಯಾಸ ಮನಸೆಳೆಯುತ್ತದೆ, ಅವರದೇ ವಿಶಿಷ್ಟ ಛಾಪು ಒತ್ತಿದ ಪದ ಸಾಲುಗಳನ್ನು ಮತ್ತೆ ಮತ್ತೆ ಓದಬೇಕೆನಿಸುತ್ತದೆ.
ನನಗೆ ತುಂಬಾ ಇಷ್ಟವಾದದ್ದು ಅವರ ಅಮ್ಮನ ಬಗ್ಗೆ ಬರೆದ ‘ಮಾವಿನ ತುಮಕಿ’: ಮಾಮಾ ಶಾಂತಾ” ಎನ್ನುವ ಅಧ್ಯಾಯ. ಯಾವಾಗಲೂ ಪ್ರಸಿದ್ಧ ವ್ಯಕ್ತಿಗಳ, ಲೇಖಕರ ಪತ್ನಿಯರು ತೆರೆಮರೆಯಲ್ಲೇ ಇರುತ್ತಾರೆ, ಅವರು ಪಟ್ಟ ಕಷ್ಟ, ಶ್ರಮ ಜಗತ್ತಿಗೆ ಗೊತ್ತಾಗುವುದಿಲ್ಲ. ಹೀಗಿರುವಾಗ ಕಾಯ್ಕಿಣಿಯವರು ತುಂಬಾ ವಿವರವಾಗಿ ತಮ್ಮ ಅಮ್ಮನ ವ್ಯಕ್ತಿತ್ವವನ್ನು ತೆರೆದಿಟ್ಟಿದ್ದನ್ನು ಓದಲು ಖುಷಿಯಾಗುತ್ತದೆ. ಶಾಂತಾರವರು ಹೇಗೆ ಗೌರೀಶ್ ಕಾಯ್ಕಿಣಿಯವರ ಬದುಕು ಬರಹಗಳಿಗೆ ಸಪೋರ್ಟಿವ್ ಆಗಿದ್ದರು ಎನ್ನುವುದನ್ನು ಹೇಳಿದ್ದಾರೆ. “ಶಾಂತಾ ಕಾಯ್ಕಿಣಿ ಎಂದ ತಕ್ಷಣ ನನ್ನ ಮನಸ್ಸನ್ನು ಆವರಿಸುವ ಒಂದೇ ಸಂಗತಿ ಎಂದರೆ ಅದಮ್ಯ ಉಮೇದಿ! ಮತ್ತು ಅದರೊಂದಿಗೇ ಇರುವ ಛಲ. ನನಗೆ ಮಾತು ಮೂಡುವ ಸಂದರ್ಭದಲ್ಲೇ ನಮ್ಮ ಕಡೆಯ ವಾಡಿಕೆಯ ‘ಆಯಿ’ ‘ಅಮ್ಮಾ’ ಬದಲಿಗೆ ನನ್ನಿಂದ ತನ್ನನ್ನು ಮಮ್ಮಿ ಎಂದೇ ಕರೆಸಿಕೊಂಡ ಛಲವಾದಿ ಆಕೆ. ಆ ಕಾಲದಲ್ಲೇ ಗಂಡ ಗೌರೀಶರನ್ನು ಎಲ್ಲರೆದುರೂ ಸಹ ಏಕವಚನದಲ್ಲೇ ಕರೆದ ಬಂಡಾಯಗಾರ್ತಿ. ಜ್ಞಾನ ಹಂಚುವುದನ್ನೇ ಪರಮೋಚ್ಚ ಕಾಯಕ ಎಂದು ನೆಚ್ಚಿಕೊಂಡು ಆ ದಿಶೆಯಲ್ಲೇ ಅಧ್ಯಯನ, ಬರವಣಿಗೆ, ಶಿಕ್ಷಕ ವೃತ್ತಿ, ಭಾಷಣ, ಪತ್ರಿಕೋದ್ಯಮ ಎಲ್ಲವನ್ನೂ ಉಪಾಸನೆಯಂತೆ ಕೈಗೊಂಡಿದ್ದ ಗೌರೀಶರನ್ನು – ಯಾವ ಸಾಂಸಾರಿಕ ವ್ಯಾವಹಾರಿಕ ಅಡಚಣೆಯ ಝಳವೂ ಸೋಕದಂತೆ ಕಾಳಜಿ ಎಚ್ಚರಗಳಿಂದ ನೋಡಿಕೊಂಡ ಗಟ್ಟಿಗಿತ್ತಿ!”
ಹೀಗಿದ್ದ ಶಾಂತಾರಿಗೆ ಒಂದು ಆಸೆಯಿತ್ತಂತೆ. ಅದು ಸ್ಲೀವಲೆಸ್ ಬ್ಲೌಸ್ ಹಾಕಿಕೊಳ್ಳಬೇಕೆಂಬ ಹಂಬಲ! ಮನೆಯಲ್ಲಿ ಇದ್ದಾಗ ಒಮ್ಮೊಮ್ಮೆ ಹಳೆಯ ಬ್ಲೌಸಿನ ಸ್ಲೀವ್ ಕತ್ತರಿಸಿಕೊಂಡು ಒಂದಿಷ್ಟು ಹೊತ್ತು ಹಾಕಿ ಮನೆಯಲ್ಲೇ ಓಡಾಡಿ ಸರಕ್ಕನೆ ತೆಗೆದು ಕಪಾಟಿನಲ್ಲಿ ಇಟ್ಟುಬಿಡುತ್ತಿದ್ದರಂತೆ. ಅದೊಂದು ಆಸೆ ಈಡೇರದೇ ಹೋಯಿತು ಎಂದು ಲೇಖಕರು ಸ್ಮರಿಸಿಕೊಂಡಿದ್ದಾರೆ. ನಾನು ಮೊನ್ನೆ ಬೇಸಿಗೆ ರಜಾಕ್ಕೆ ಊರಿಗೆ ಹೋಗಿದ್ದಾಗ ತುಂಬಾ ಸೆಕೆಯೆಂದು ಹಾಕಿಕೊಳ್ಳಲು ಸ್ಲೀವ್ ಲೆಸ್ ಚೂಡೀದಾರಗಳನ್ನು ತೆಗೆದುಕೊಂಡು ಹೋಗಿದ್ದೆ. ನನ್ನ ಅಮ್ಮ ನನ್ನನ್ನು ನೋಡಿ ಇಂಥವುಗಳನ್ನು ಬೆಂಗಳೂರಿನಲ್ಲಿ ಹಾಕುವುದಕ್ಕಿಟ್ಟುಕೋ, ಇಲ್ಲಿ ಹಳ್ಳಿ ಮನೆಗಳಲ್ಲಿ ಅದೆಲ್ಲಾ ಸರಿ ಕಾಣುವುದಿಲ್ಲ ಎಂದು ಬಿಟ್ಟರು. ಆಗ ನನಗೆ ಕಾಯ್ಕಿಣಿಯವರ ಅಮ್ಮನ ಆಸೆ ನೆನಪಾಗಿ ಅವರು ಆ ಕಾಲದಲ್ಲೇ ಎಷ್ಟು ಮುಕ್ತವಾಗಿದ್ದಿರಬಹುದು ಎನಿಸಿತು.
ಹನ್ನೊಂದು ಪುಟಗಳಷ್ಟು ವಿಸ್ತಾರವಾಗಿರುವ ಆ ಬರಹದಲ್ಲಿ ಗೌರೀಶ್ ಮತ್ತು ಶಾಂತಾರ ದಾಂಪತ್ಯ ಬದುಕಿನ ಸ್ಥೂಲ ಚಿತ್ರಣ ಸಿಗುತ್ತದೆ. “ಗೋಕರ್ಣದ ಮನೆ(“ಪರ್ಣಕುಟಿ”) ಯೇ ಗೌರೀಶ ಮತ್ತು ಶಾಂತಾರ ವಿಶ್ವದ ಕೇಂದ್ರವಾಗಿತ್ತು. ಶಾಂತಾರ ಮೊದಲ ಹೆಸರು ದೀನಾ. ಕೊಂಕಣಿಯಲ್ಲಿ ದೀನಾ ಎಂದರೆ ಕೊಡುವುದಿಲ್ಲ ಎಂದು ಅರ್ಥ. “ಅವಳು ತುಂಬಾ ಕಂಜೂಶಿ(ಜುಗ್ಗಳು). ಅದಕ್ಕೆ ದೀನಾ ಹೆಸರು ಎಂದು ವ್ಯವಹಾರ ಜ್ಞಾನ ಕಿಂಚಿತ್ತೂ ಇಲ್ಲದ ಗೌರೀಶರು ಛೇಡಿಸಿದ್ದೂ ಇದೆ. ಆಗ ಶಾಂತಾ “ನಿನ್ನ ಪಗಾರು ಎಷ್ಟು ಅಂತಾದರೂ ಗೊತ್ತುಂಟೋ ನಿನಗೆ?” ಎಂದು ಎಲ್ಲರೆದುರು ಸರಿಯಾದ ತಿರುಗೇಟು ಕೊಟ್ಟಿದ್ದೂ ಇದೆ” ಎನ್ನುವ ಅಪರೂಪದ ಪ್ರಸಂಗಗಳಿವೆ.
ಬಿಡಿಬರಹಗಳಿಂದ ಶುರುವಾಗುವ ಪುಸ್ತಕ ವೈವಿಧ್ಯಮಯ ವಿಷಯಗಳಿಂದ ಓದಿಸಿಕೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಕೈ ಬರಹವೂ ಹೇಗೆ ಅನನ್ಯ ಎಂದು ವಿವರಿಸುತ್ತಾ ಅದು ಬರೆದವರ ಮನಸ್ಸಿನ ಕನ್ನಡಿಯೂ ಆಗಿರುವುದರಿಂದಲೇ ಜೀವಂತ ಎನಿಸುವುದು, ಆ ಜೀವಂತಿಕೆ, ಮಾರ್ದವತೆ ಒಂದೇ ರೀತಿಯಾಗಿ ಟೈಪಿಸಲಾಗುವ ಅಕ್ಷರಗಳಲ್ಲಿ ಕಾಣಲಾಗುವುದಿಲ್ಲ ಎನ್ನುವ ಸತ್ಯ ಅವರ ಈ ಬರಹವನ್ನು ಓದುತ್ತಾ ಅನಿಸುವುದು ಸುಳ್ಳಲ್ಲ! ಅವರ ತಂದೆ ಗೌರೀಶರ ಅಕ್ಷರಗಳನ್ನು ಬ್ರಹ್ಮಲಿಪಿ ಎಂದು ಕರೆದು ಓದುವುದರ ಕಡುಕಷ್ಟವನ್ನು ನೆನೆಯುತ್ತಾ ಅವರೊಂದಿಗೆ ಪತ್ರವ್ಯವಹಾರ ಮಾಡುತ್ತಿದ್ದ ಆ ಕಾಲದ ಪ್ರಮುಖ ಸಾಹಿತಿಗಳ ಕೈ ಬರಹಗಳು ಉಕ್ಕಿಸುತ್ತಿದ್ದ ಹಲವು ಭಾವಗಳನ್ನು, ಗ್ರಹಿಕೆಗಳನ್ನು ಹಂಚಿಕೊಂಡಿದ್ದಾರೆ. ಕೈ ಬರಹಗಳೇ ಕಾಣೆಯಾಗಿರುವ ಇಂದಿನ ಕಾಲದಲ್ಲೂ ಕೈಯ್ಯಲ್ಲೇ ಬರೆಯುವ ತಾವು ಶಿಲಾಯುಗದವನೇ ಇರಬಹುದು ಎನ್ನುತ್ತಾ ಕೈ ಬರಹದಲ್ಲಿ ಪ್ರತಿಫಲನಗೊಳ್ಳುವ ಚಡಪಡಿಕೆ, ಅಪೂರ್ಣತೆ ತಮಗೆ ಆಪ್ತವಾಗುವ ಬಗೆಯನ್ನು ಹೇಳಿದ್ದಾರೆ. ಇದನ್ನು ಓದುತ್ತಾ ನಿಮಗೆ ತುಂಬಾ ಹತ್ತಿರವಾದವರಿಗೆ ಕೈ ಬರಹದಲ್ಲೇ ಪತ್ರವನ್ನು ಬರೆದು ಇಡಿ, ಫೋನ್‌ನಲ್ಲಿ ಮೆಸೇಜ್ ಟೈಪ್ ಮಾಡಿಯೋ, ಇಮೇಲೋ ಕಳಿಸಬೇಡಿ ಎಂದು ಮನೋಚಿಕಿತ್ಸಕರು ಹೇಳುವ ಮಾತು ನೆನಪಾಗಿ ಕಾಯ್ಕಿಣಿಯವರು ಈ ಬರಹದ ಕೊನೆಯಲ್ಲಿ ಹೇಳಿದ ಮಾತುಗಳಿಗೆ ತಾಳೆಯಾದವು!
ಕಿಟಕಿ ತೆರೆದ ರೈಲು ಎನ್ನುವ ಮತ್ತೊಂದು ಬರಹದಲ್ಲಿ ಗೌರೀಶ ಕಾಯ್ಕಿಣಿಯವರಿಗೆ ಬರುತ್ತಿದ್ದ ನೂರಾರು ಅಂಚೆಕಾರ್ಡುಗಳನ್ನು ಮಧ್ಯೆ ಮಡಚಿ ಒಂದರ ಹಿಂದೊಂದು ನಿಲ್ಲಿಸಿ ರೈಲು ಮಾಡಿ ಆಟ ಆಡುತ್ತಿದ್ದ ನೆನಪುಗಳಿವೆ. ಹೇಗೆ ಆ ಕಾಲದಲ್ಲಿ ತೆರೆದ ಅಂಚೆ ಕಾರ್ಡುಗಳಲ್ಲಿ ಮುಚ್ಚುಮರೆಯಿಲ್ಲದೆ ಮಹತ್ವದ ವಿಷಯಗಳೂ ಚರ್ಚೆಯಾಗುತ್ತಿದ್ದವು! “ಆ ರೈಲಿನಲ್ಲಿ ಎಂತೆಂಥ ವ್ಯಕ್ತಿಗಳಿದ್ದರು ಎಂಬುದನ್ನು ನೆನೆದರೆ… ಆಟಕ್ಕೆ ಬಳಕೆ ಆಗುವಷ್ಟು ಆ ಅಮೂಲ್ಯ ಕಾಗದಗಳು ಸಹಜವಾಗಿಬಿಟ್ಟಿದ್ದವೆ!” ಎಂದು ಅಚ್ಚರಿಪಡುತ್ತಾರೆ. “ಗೋಕರ್ಣದ ಪಡುಮೂಲೆಯಲ್ಲಿ ಕುಳಿತು ಅವರ ತಂದೆ ಎಷ್ಟೊಂದು ಮನಸ್ಸುಗಳ ಜೊತೆ ಪತ್ರಮುಖೇನ ಸತತ ಸಂವಾದದಲ್ಲಿ ನಿರತರಾಗಿರುತ್ತಿದ್ದರು, ಆ ಸಂವಾದವೂ ತೆರೆದ ಅಂಗೈಗಲ ಅಂಚೆ ಕಾರ್ಡಿನಲ್ಲಿ ಪಾರದರ್ಶಕವಾಗಿತ್ತಲ್ಲ, ಅವನ್ನೆಲ್ಲಾ ಎಂದೂ ಕಾಪಾಡಿ ಸಂಗ್ರಹಿಸಿಡಬೇಕು ಎಂದು ಅವರಿಗೆ ಅನ್ನಿಸಲೇ ಇಲ್ಲವಲ್ಲ” ಎಂದು ತಂದೆಯ ಸರಳತೆ, ಕ್ರಿಯಾಶೀಲತೆಯನ್ನು ನೆನೆದು ಮಗನ ಮನಸ್ಸು ಆರ್ದ್ರವಾಗುತ್ತದೆ. ಅಂಚೆ ಕಾರ್ಡುಗಳ ರೈಲು ಹೇಗೆ ಒಂದು ರೂಪಕವಾಗಿ ಅವರ ಮನಸ್ಸಿನಲ್ಲಿ ನೆಲೆನಿಂತಿದೆ ಎಂಬುದನ್ನು ಹಂಚಿಕೊಂಡಿದ್ದಾರೆ.
ಅರೆಮಲೆನಾಡು, ಬಯಲುಸೀಮೆ, ಪೇಟೆ ನಗರಗಳಲ್ಲಿ ಬದುಕು ಕಳೆವ ನಮ್ಮಂಥವರಿಗೆ ತಾರಿದಂಡೆ ಎನ್ನುವ ಪದವೇ ಹೊಸತು. ಈ ಪುಸ್ತಕದ ಮೂಲಕವೇ ನನಗೂ ತಾರಿದಂಡೆಯ ಪರಿಚಯವಾದದ್ದು. “ತಾರಿದಂಡೆ ಎಂದರೆ ನದಿ ದಾಟಿಸುವ ದೋಣಿಯನ್ನು ಜನ ಹಿಡಿಯುವ ಜಾಗ” ಎನ್ನುತ್ತಾ ನದಿಯ ಸುತ್ತಮುತ್ತ, ಆಚೆ ಈಚೆ ವಾಸಿಸುವ ಜನರ ಜೀವನಕ್ಕೂ ಈ ತಾರಿದಂಡೆಗಳಿಗೂ ಇರುವ ಅವಿನಾಭಾವ ಸಂಬಂಧವನ್ನು ತೆರೆದಿಟ್ಟಿದ್ದಾರೆ. ಗೋಕರ್ಣದಿಂದ ಕುಮಟಾಕ್ಕೆ ಹೋಗುವ ಮಿರ್ಜಾನ್ ತಾರಿದಂಡೆಯಲ್ಲಿನ ಚಟುವಟಿಕೆಗಳ ಚಿತ್ರಕ ವಿವರಣೆಯನ್ನು ಕೊಡುತ್ತಾ ಅಘನಾಶಿನಿ ನದಿಗೆ ಸೇತುವೆಯಾದ ನಂತರ ವಾಹನಗಳು ಓಡಾಡುವುದಕ್ಕೆ ಶುರುವಾಗಿ ಈ ತಾರಿದಂಡೆಗಳ ಗತ್ತು, ಮಹತ್ತು ಕಡಿಮೆಯಾಯಿತು ಎನ್ನುತ್ತಾ ಹೇಗೆ ಪ್ರತೀಬಾರಿ ಹೊಸ ಸೇತುವೆಗಳಾದಾಗಲೂ ಇಂಥ ಹಲವು ತಾರಿದಂಡೆಗಳು ಮಂಕಾಗಿ ಗತಕ್ಕೆ ಸಂದವು, ಸುತ್ತಮುತ್ತಲಿನ ಸಣ್ಣಪುಟ್ಟ ವ್ಯಾಪಾರಸ್ಥರು ಎಲ್ಲಿ ಮಾಯವಾದರು? ಎನ್ನುವ ಕಾಳಜಿ, ಅಚ್ಚರಿಯನ್ನು ವ್ಯಕ್ತಪಡಿಸುತ್ತಾ ಬರಹ ಮುಂದುವರಿಯುತ್ತದೆ. ಸಮುದ್ರದಡದಲ್ಲಿ ಕುಳಿತಾಗಿನ ಅಗಾಧ ಅನಂತ ವಿಸ್ತಾರದ ನೋಟಕ್ಕೂ ತಾರಿದಂಡೆಯಿಂದ ಕಾಣುವ ಆಚೆತಡಿಯ ಸೆಳೆತಕ್ಕೂ ಇರುವ ವ್ಯತಾಸದ ಅನುಭವಗಳನ್ನು ನೀವೂ ಕುಳಿತಲ್ಲೇ ದಕ್ಕಿಸಿಕೊಳ್ಳಬೇಕೆಂದರೆ ಅವರ ಮಾತಿನಲ್ಲೇ ಓದಬೇಕು.
ಜಯಂತರ ಈ ಬರಹವನ್ನೋದುತ್ತಾ ಸ್ವಲ್ಪ ದಿನಗಳ ಹಿಂದೆ ಹೊನ್ನಾವರದಲ್ಲಿ ದೋಣಿ ವಿಹಾರ ಮಾಡುತ್ತಿದ್ದಾಗ ದಡದಲ್ಲಿ ಅಲ್ಲಲ್ಲಿ ಕಾಣಿಸಿದ ಮನೆಗಳು, ಮಧ್ಯೆ ಮಧ್ಯೆ ಜ್ಯೂಸು ಎಳನೀರುಗಳನ್ನು ಮಾರುತ್ತಿದ್ದ ಅಂಗಡಿಗಳು ನೆನಪಾಗಿ ತಾರಿದಂಡೆಯ ಕಲ್ಪನೆಯನ್ನು ಕಣ್ ಮುಂದೆ ತಂದವು. ಜೋರು ಮಳೆಗಾಲದ ಅಬ್ಬರದ ಮೂರ್ನಾಲ್ಕು ತಿಂಗಳುಗಳಲ್ಲಿ ನದಿಯ ನೀರು ಜಾಸ್ತಿ ಆಗಿ ಅವರ ಮನೆಗಳೆಲ್ಲಾ ಮುಕ್ಕಾಲು ಪಾಲು ಮುಳುಗುತ್ತವಂತೆ, ಮತ್ತೆ ನೀರು ಇಳಿಯುವ ತನಕ ಗಂಜಿ ಕೇಂದ್ರಗಳಲ್ಲಿ ಅವರೆಲ್ಲಾ ಆಸರೆ ಪಡೆಯುತ್ತಾರಂತೆ! ದೋಣಿ ನಡೆಸುತ್ತಿದ್ದವನ ಈ ಮಾತು ಕೇಳಿ ಅಪರೂಪಕ್ಕೆ ದೋಣಿ ವಿಹಾರ ಮಾಡಿದಷ್ಟು ಸುಂದರವಲ್ಲ ನದಿಯ ತಟದ ಬದುಕು ಎನಿಸಿತ್ತು. ಆದರೆ ಹಾಗೆ ಹೇಳಿದವನ ದನಿಯಲ್ಲಿ ಅದರ ಬಗ್ಗೆ ಕಿಂಚಿತ್ತೂ ಬೇಸರವಿರಲಿಲ್ಲ. ನದಿಯ ಜೊತೆ ತಲೆಮಾರುಗಳ ಬದುಕು ಬೆಸೆದ ಬಂಧ ಅದು ಸಹಜ ಎಂದೇ ಸ್ವೀಕರಿಸಿತ್ತು.
ಇನ್ನೆರಡು ಬರಹಗಳು ಕವಿತೆಗೆ ಸಂಬಂಧಿಸಿದ್ದು. ಜಯಂತರ ಬರಹ ಎಷ್ಟು ಆಳವೋ ಅದರ ಶೀರ್ಷಿಕೆಗಳೂ ಅಷ್ಟೇ ಆಕರ್ಷಕ. ‘ಕವಿತೆಯ ಮೌನಭಂಗ’ ಎನ್ನುವ ಶೀರ್ಷಿಕೆಯಡಿ ಕವಿತಾ ವಾಚನ ಬೆಳೆದು ಬಂದ ವಿವಿಧ ಹಂತಗಳನ್ನು ವಿಶ್ಲೇಷಿಸುತ್ತಾ ಈಗಿನ ಕಾಲದಲ್ಲಿ ಕವಿತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವಾಚಿಸುವ ಟ್ರೆಂಡ್ ಬಗ್ಗೆ, ಸಾಹಿತ್ಯ ಕಮ್ಮಟಗಳಲ್ಲಿನ ಕವಿಗೋಷ್ಠಿಗಳ ಕುರಿತು ಅನಿಸಿಕೆಯನ್ನು ಹರಿಯಬಿಟ್ಟಿದ್ದಾರೆ.
– “ಮೌನಕ್ಕೂ ಮತ್ತು ಕವಿತೆಯ ಧ್ವನಿಗೂ ನಂಟಿದೆ. ಮೌನದಲ್ಲಿ ಮಾತ್ರ ಕವಿತೆಯ ಧ್ವನಿಯನ್ನು ಆಲಿಸಬಲ್ಲೆವು…ಕವಿಯನ್ನೂ ಒಳಗೊಂಡು ಯಾವುದೇ ಹುಲುದನಿಯ ಹಂಗಿಲ್ಲದಾಗಲೇ ಒಂದು ಕವಿತೆ ಅಥವಾ ಕವನ ಆತ್ಮಿಕವಾಗಿ ನಮ್ಮದಾಗುವುದು. ಏಕೆಂದರೆ ನಿಶ್ಯಬ್ಧವೇ ಕವಿತೆಯ ಜೀವಾಳ”,
– “ವಾಚನದ ಉಮೇದಿಯಿಂದ ನಾಟಕೀಯ ಭಾವಾಭಿನಯದಿಂದ ಕವನದ ಮೌನಭಂಗ ನಡೆಯುತ್ತದೆ”,
– “ವಾಚಕನ ಧ್ವನಿಗೆ ಕವನದ ಸೂಕ್ಷ್ಮ ಧ್ವನಿಯನ್ನು ಮರೆಸದೇ ಇರುವ ದೊಡ್ಡ ಗುಣ ಮತ್ತು ಜವಾಬ್ದಾರಿ ಇರಲೇಬೇಕಾಗುತ್ತದೆ”
ಈ ಥರದ ಕೋಟ್‌ಗಳಂಥ ಮಾತುಗಳಲ್ಲೇ ನಾವು ಬರಹದ, ಲೇಖಕರ ಆಶಯಗಳನ್ನು ಅರ್ಥ ಮಾಡಿಕೊಳ್ಳಬಹುದು. ಅಷ್ಟು ಸ್ಫುಟವೂ ಗುಂಡು ಹೊಡೆದಂಥಾ ಮಾತುಗಳು!
ಈ ಮುತ್ತಿನಂಥಾ ಮಾತುಗಳ ಸರಣಿ ಮುಂದಿನ ಬರಹದಲ್ಲೂ ಮಾಲೆಯಾಗಿ ನಾಲ್ಕು ಸಾಲು ಗೀಚಿಯೋ, ಫೇಸ್ಬುಕ್, ವಾಟ್ಸ್ ಅಪ್‌ಗಳ ಸ್ಟೇಟಸ್‌ಗಳಲ್ಲಿ ಬರುವ ಕವನಗಳನ್ನೋದಿಕೊಂಡು ಬೀಗುವವರ ಕಿವಿಹಿಂಡಿದೆ. “ಕವಿತೆ ಒಂದು ಜೀವನ ದೃಷ್ಟಿ, ಎಷ್ಟೆಲ್ಲಾ ಸಂವೇದನಾಶೀಲರ ಪ್ರಜ್ಞಾ ಪ್ರವಾಹದ ಮನೋಸಂಗಮದಿಂದ ಅರಳುವ ಜೀವನ ಕಲೆ” ಎನ್ನುತ್ತಾ ಪರಂಪರೆಯನ್ನು ಅರಿತಿರುವುದರ ಜೊತೆಗೆ ಕವಿತಾರಚನೆಗೆ ಆಳವಾದ ಧ್ಯಾನ ಅಧ್ಯಯನದ ಅಗತ್ಯವಿದೆ ಎನ್ನುವದನ್ನು ಹೇಳುತ್ತದೆ. ಅವರ ಪುಟ್ಟ ಪುಟ್ಟ ವಾಕ್ಯಗಳನ್ನು ಓದುವುದೇ ಖುಷಿ.
– “ಕ್ಷೋಭೆ ಮತ್ತು ವಿನಯ ಒಟ್ಟಿಗೇ ಉಕ್ಕುವ ನಗ್ನ ಕ್ಷಣದಲ್ಲಿ ಕವಿ ಮೂಡುತ್ತಾನೆ”,
– “ಯಾವುದನ್ನು ಹೇಳಲು ಆಗುತ್ತದೋ ಅದರ ಮೂಲಕ ಯಾವುದನ್ನು ಹೇಳಲು ಆಗುವುದೇ ಇಲ್ಲವೋ ಅದನ್ನು ಧ್ವನಿಸುವುದೇ ಕಾವ್ಯ”,
– “ಬರವಣಿಗೆ ಎಂದರೆ ಮನೋಧರ್ಮವೊಂದು ರೂಪುಗೊಳ್ಳುವ ಮಗ್ನ ನಗ್ನ ಚಟುವಟಿಕೆ”,
– “ಕವಿತೆ ಒಂದು ಚಲನೆ, ಗೊತ್ತಿರುವ ‘ಬಿಡಿ’ಗಳ ಮೂಲಕ ಗೊತ್ತಿರದ ‘ಇಡಿ’ಯೆಡೆಗೆ, ಆಕಾರದಿಂದ ನಿರಾಕಾರದೆಡೆಗೆ, ಅಲೆಗಳಿಂದ ನೀರವದ ನೆಲೆಯೆಡೆಗೆ, ವಿಶಾಲದೆಡೆಗೆ ನಮ್ಮನ್ನು ತೆರೆಯುವ ಪ್ರತಿಮೆ, ಪ್ರತೀಕ, ರೂಪಕಗಳ ಪುಟ್ಟ ಕೀಲಿ ಕೈಗಳ ಗುಚ್ಛ ಅದು”.
ಒಂದು ಪುಸ್ತಕ, ಕಾದಂಬರಿಯ ಪಾತ್ರ, ದೃಶ್ಯಗಳು ನಮ್ಮ ಮನೋಲೋಕದೊಳಗೆ ಜೀವಂತವಾಗಿದ್ದು ಎಷ್ಟೋ ವರುಷಗಳ ನಂತರವೂ ಹೇಗೆಲ್ಲಾ ಕಾಡಬಹುದು ಎನ್ನುವುದನ್ನು ವಿವರಿಸುವ ಬರಹ ‘ಊಹಾಮೃಗ ವಿಜಯ’. ಮುಂದೆ ಹೋಗದೆ ನಿಂತಲ್ಲೇ ನಿಂತು ಹೆಜ್ಜೆ ಹಾಕುವ ಪ್ರಕ್ರಿಯೆ ‘ಕದಂತಾಲ್’ ಅದೇ ತಲೆಬರಹದಡಿ ಮನುಷ್ಯ ಸಂಬಂಧಗಳಿಗೂ, ಕುಳಿತಲ್ಲೇ ನಮ್ಮನ್ನು ಮತ್ತೊಂದು ಲೋಕಕ್ಕೂ ಕರೆದೊಯ್ಯುವ ಬರವಣಿಗೆ/ಓದಿಗೂ ರೂಪಕವಾಗಿದೆ. ಹಾಗೆ ಹೇಳಲು ಅವರು ಮತ್ತೊಂದು ಚೆಂದದ ರೂಪಕವನ್ನೇ ಉದಾಹರಿಸುತ್ತಾರೆ! “ನಿಶ್ಚಲವಾಗಿ ಕಂಡರೂ ಏಕಕಾಲಕ್ಕೆ ಗಗನದೆಡೆಗೂ, ನೆಲದೊಳಗೂ ಸೂಕ್ಷ್ಮ ಲಾಸ್ಯದಲ್ಲಿ ತನ್ನ ಆಂತರ್ಯವನ್ನು ಚಾಚುತ್ತಲೇ ಇರುವ ಮರ ಗಿಡಗಳ ಅಪೂರ್ವ ವಿಸ್ತರಣೆಯಂತೆ”. ಮನಸ್ಸಿನ ಬೊಜ್ಜನ್ನು ಕರಗಿಸಿಕೊಳ್ಳಲು ಮನುಷ್ಯ ಕಲೆ, ಓದು, ಪಶು, ಪಕ್ಷಿ, ಗಿಡ ಮರಗಳ ಸಹವಾಸಕ್ಕೆ ಹಾತೊರೆಯುತ್ತಾನೆ, ಅಲ್ಲಿ ವಿಶಾಲ ಸಂಯುಕ್ತ ಮನಸ್ಸಿನ ಜೊತೆ ಸಂಪರ್ಕ ಸಾಧ್ಯ ಎಂದು ಅವರು ಈ ಬರಹದಲ್ಲಿ ಉಲ್ಲೇಖಿಸಿದ್ದು ನನ್ನ ಅನುಭವಕ್ಕೂ ಬಂತು. ಸಡನ್ ಆಗಿ ಎದುರಾದ ಆರೋಗ್ಯ ಸಮಸ್ಯೆಯಿಂದ ಮಂಕಾದ ನಾನು ಪಾರಾಗಲು ಮೊರೆ ಹೋಗಿದ್ದು ಪುಸ್ತಕಗಳನ್ನ. ಅಲ್ಲಿ ಬಂದ ವೈವಿಧ್ಯಮಯ ವಿಷಯಗಳು, ವಸ್ತುಗಳು, ಪಾತ್ರಗಳು, ಮನಸ್ಸಿಗೂ ಮೆದುಳಿಗೂ ಆಹಾರವಾಗಿ ಒದಗಿ ಆಹ್ಲಾದ ಕೊಟ್ಟವು. ಆ ಪುಸ್ತಕಗಳಲ್ಲಿ ಈ ತಾರಿದಂಡೆಯೂ ಒಂದು ಎಂದು ವಿಶೇಷವಾಗಿ ಹೇಳಬೇಕಿಲ್ಲ.
ಅವರ ತಂದೆ ಗೌರೀಶರ ಅಕ್ಷರಗಳನ್ನು ಬ್ರಹ್ಮಲಿಪಿ ಎಂದು ಕರೆದು ಓದುವುದರ ಕಡುಕಷ್ಟವನ್ನು ನೆನೆಯುತ್ತಾ ಅವರೊಂದಿಗೆ ಪತ್ರವ್ಯವಹಾರ ಮಾಡುತ್ತಿದ್ದ ಆ ಕಾಲದ ಪ್ರಮುಖ ಸಾಹಿತಿಗಳ ಕೈ ಬರಹಗಳು ಉಕ್ಕಿಸುತ್ತಿದ್ದ ಹಲವು ಭಾವಗಳನ್ನು, ಗ್ರಹಿಕೆಗಳನ್ನು ಹಂಚಿಕೊಂಡಿದ್ದಾರೆ. ಕೈ ಬರಹಗಳೇ ಕಾಣೆಯಾಗಿರುವ ಇಂದಿನ ಕಾಲದಲ್ಲೂ ಕೈಯ್ಯಲ್ಲೇ ಬರೆಯುವ ತಾವು ಶಿಲಾಯುಗದವನೇ ಇರಬಹುದು ಎನ್ನುತ್ತಾ ಕೈ ಬರಹದಲ್ಲಿ ಪ್ರತಿಫಲನಗೊಳ್ಳುವ ಚಡಪಡಿಕೆ, ಅಪೂರ್ಣತೆ ತಮಗೆ ಆಪ್ತವಾಗುವ ಬಗೆಯನ್ನು ಹೇಳಿದ್ದಾರೆ.
ಸಾಮಾನ್ಯವಾಗಿ ನಾಟಕಕಾರರಾಗಿಯಷ್ಟೇ ನಮಗೆಲ್ಲಾ ಗೊತ್ತಿರುವ ಗಿರೀಶ್ ಕಾರ್ನಾಡರ ವ್ಯಕ್ತಿತ್ವದ ನಾನಾ ಮುಖಗಳನ್ನು ತಿಳಿಯಬೇಕೆಂದರೆ ಈ ಪುಸ್ತಕದಲ್ಲಿರುವ ಜಯಂತ್‌ರ ಬರಹ ಓದಬೇಕು. ‘ಖಾನೆ ಸುಮಾರಿ’ ಗೆ ಸಿಗದ ಘನವಂತ ಎಂದು ಗಿರೀಶ್ ಕಾರ್ನಾಡರನ್ನು ಕರೆದಿದ್ದಾರೆ. ‘ಖಾನೆ ಸುಮಾರಿ’ ಎಂದರೆ ಯಾವುದೇ ಅಫಿಶಿಯಲ್ ಲೆಕ್ಕಾಚಾರ ಎನ್ನುವ ಅರ್ಥವಂತೆ. ಇಲ್ಲಿ ಅವರು ಬರೆದಿದ್ದನ್ನ ಓದಿದಾಗ ನಿಜವಾಗಿಯೂ ಕಾರ್ನಾಡರ ಪ್ರತಿಭೆ ಲೆಕ್ಕಾಚಾರಕ್ಕೆ ಸಿಗದೇ ಇರುವಷ್ಟು ಅಗಾಧ, ಮೀರಿದ್ದು ಎಂದು ಜಯಂತರ ವಿಶಿಷ್ಟವಾದ ಪದ ಬಳಕೆಯ ಬಗ್ಗೆ ಅಚ್ಚರಿಯಾಗುತ್ತದೆ. ಎಲ್ಲೋ ಒಂದು ನಾಟಕ, ಅಥವಾ ವ್ಯಕ್ತಿ ಚಿತ್ರಣವನ್ನೋದಿ ನಮ್ಮ ಸೀಮಿತ ಗ್ರಹಿಕೆಯ ಕಾರ್ನಾಡರಿಗೂ ಜಯಂತರ ಒಡನಾಟದಲ್ಲಿ ಮೂಡುವ ಕಾರ್ನಾಡರಿಗೂ ಇರುವ ಅಪಾರ ಅಂತರ ಮನದಟ್ಟಾಗುತ್ತದೆ.
ಅದೇ ರೀತಿ ಮೂಲತಃ ಬೆಳಗಾವಿಯವರಾದ ಮುಂಬೈನಲ್ಲಿ ವಾಸವಿದ್ದ ಮುಕುಂದ ಜೋಷಿ ಎನ್ನುಬ ಆತ್ಮಬಂಧುವಿನ ಬಗ್ಗೆ ವಿಸ್ತಾರವಾಗಿ ಬರೆದಿದ್ದನ್ನು ಓದುವ ಹೊತ್ತಿಗೆ ನಾವು ಇಲ್ಲಿಯವರೆಗೂ ಹೆಸರೇ ಕೇಳಿರದ, ನೋಡಿಯೂ ಇರದ ತೀರಾ ಅಪರಿಚಿತ ಎನ್ನುವ ವ್ಯಕ್ತಿ ನಮಗೂ ಆತ್ಮೀಯರಂತೆ ಭಾಸವಾಗಿ ಬಿಡುವ ಕೌತುಕ ಜಯಂತರ ಬರಹಗಳಲ್ಲಿ ಜರುಗುತ್ತದೆ. ಅವರ ಮುಂಬೈವಾಸದ ದಿನಗಳು ಮುಕುಂದ ಜೋಷಿಯವರ ಸ್ನೇಹ ಕಾಳಜಿಯಲ್ಲಿ ಹೇಗೆ ಚೇತೋಹಾರಿಯಾಗಿದ್ದವು ಎಂಬುದನ್ನು ಜಯಂತರ ಮಾತುಗಳಲ್ಲೇ ಓದಬೇಕು, ಅಲ್ಲಿನ ಪ್ರತಿಯೊಂದು ಅಕ್ಷರ ಪದಗಳಲ್ಲೂ ಅಕ್ಕರೆ ತೀವ್ರ ಆತ್ಮೀಯತೆಯ ಲೇಪ ನನಗೆ ಕಾಣಿಸಿತು.
ಹಾಗೆಯೇ 1966 ರಲ್ಲಿ “ಷೇಕ್ಸ್ ಪಿಯರಿಗೆ ನಮಸ್ಕಾರ” ಎನ್ನುವ ಕೃತಿಯನ್ನು ಸಂಪಾದಿಸಿ ಅಪೂರ್ವ ರೇಖಾಚಿತ್ರಗಳೊಂದಿಗೆ ಪುಟ ವಿನ್ಯಾಸ ಮಾಡಿಸಿ ಮುದ್ರಿಸಿದ ಶಾ ಬಾಲುರಾವ್ ಎಂಬ ಕಲೋಪಾಸಕನ ಬಗ್ಗೆ ಒಂದು ಅಧ್ಯಾಯವಿದೆ. ಆ ಪುಸ್ತಕದಲ್ಲಿದ್ದ ರೇಖಾಚಿತ್ರಗಳು ಚಿಕ್ಕಂದಿನಲ್ಲೇ ತಮ್ಮನ್ನು ಹೇಗೆ ಅತೀವವಾಗಿ ಸೆಳೆದಿದ್ದವು, ಮುಂದೆ ಎಷ್ಟೋ ವರ್ಷಗಳ ನಂತರ ಭಾವನಾ ಪತ್ರಿಕೆಯನ್ನು ರೂಪಿಸುವಾಗ ಈ ಪುಸ್ತಕದಲ್ಲಿದ್ದ ಪುಟವಿನ್ಯಾಸ ಹೇಗೆ ಪ್ರೇರಕವಾಗಿತ್ತು, ಪ್ರಭಾವಬೀರಿತ್ತು ಎನ್ನುವುದನ್ನು ಹೇಳಿದ್ದಾರೆ. ಹಾಗೆ ಹೇಳುತ್ತಾ ಆ ಕಾಲದ ಅದೆಷ್ಟೋ ಪೂರಕ ಮಾಹಿತಿಗಳನ್ನು ಒದಗಿಸುವುದು, ಆತ್ಮವನ್ನು ಮುಟ್ಟಿದ ಸಂಗತಿಗಳನ್ನು ತಮ್ಮದೇ ಅಕ್ಕರೆಯ ಧಾಟಿಯಲ್ಲಿ ಓದುಗರಿಗೂ ದಾಟಿಸುವುದು ಜಯಂತರ ಬರಹಗಳಿಗೊಂದು ವಿಶಿಷ್ಟ ಆವರಣವನ್ನು ಕಲ್ಪಿಸಿ ಓದುವ ಸುಖ ನಮ್ಮದಾಗುತ್ತದೆ.
ಎಸ್.ದಿವಾಕರ್, ಜಿ.ರಾಜಶೇಖರ್, ಎಚ್.ಎಸ್.ವೆಂಕಟೇಶ ಮೂರ್ತಿ, ಬನ್ನಂಜೆ ಗೋವಿಂದಾಚಾರ್ಯರು, ನಾಗೇಶ ಹೆಗಡೆ, ಶಾಂತಾದೇವಿ ಕಣವಿ ಇವರೆಲ್ಲರ ಹೆಸರುಗಳನ್ನು ಕೇಳಿರ್ತೀವಿ, ಕೆಲವರನ್ನು ನೋಡಿರ್ತೀವಿ, ಅಲ್ಪ ಸ್ವಲ್ಪ ಓದ್ಕೊಂಡಿರ್ತೀವಿ. ಆದ್ರೆ ಜಯಂತರ ಬರಹಗಳಲ್ಲಿ ಇವರೆಲ್ಲರೂ ನನಗೆ ಹೊಸದಾಗಿ ಗೋಚರಿಸಿದರು. ಇವರೆಲ್ಲರ ಅಸಲಿ ಕಿಮ್ಮತ್ತನ್ನು ತಮ್ಮ ಒಡನಾಟದ ಕಣ್ಣುಗಳಲ್ಲಿ ಬಣ್ಣಿಸಿರುವುದು ಬಹಳ ವಿಭಿನ್ನವಾದ ವ್ಯಕ್ತಿ ಪರಿಚಯ ಅನಿಸಿತು. ಈಗಿನ ಹೊಸ ತಲೆಮಾರಿನ ಓದುಗರಲ್ಲಿ ಎಷ್ಟು ಜನರಿಗೆ ಎಸ್.ದಿವಾಕರ್ ಕನ್ನಡಕ್ಕೆ ತಂದಿರುವ ಇಂಗ್ಲಿಷ್ ಲೇಖಕರ ಕತೆಗಳ ಬಗ್ಗೆ ಗೊತ್ತು? ಅಥವಾ ಶಾಂತಾದೇವಿ ಕಣವಿಯವರದ್ದು ಎಂಟು ಕಥಾಸಂಕಲನಗಳಿವೆ ಎನ್ನುವ ಮಾಹಿತಿ, ಆಯಾ ಲೇಖಕರ ಅಂತಃಸತ್ವವನ್ನು ಕನ್ನಡದ ಓದುಗರಿಗೆ ಹೊಸಾ ರೀತಿಯಲ್ಲಿ ಪರಿಚಯಿಸುವ ಮಾಲಿಕೆ ತಾರಿದಂಡೆಯ ವ್ಯಕ್ತಿಚಿತ್ರಣಗಳಲ್ಲಿದೆ.
ರಿಷಿ ಕಪೂರ್ ಬಗ್ಗೆ ನನ್ನ ತಲೆಮಾರಿಗೆ ಅಷ್ಟೆಲ್ಲಾ ಗೊತ್ತಿಲ್ಲ. ಚಾಂದಿನಿ ಏ ಮೇರಾ ಚಾಂದಿನಿ ಹಾಡೊಂದನ್ನು ಕೇಳಿದ ನೆನಪಿದೆ. ಇಂಥ ರಿಷಿ ಕಪೂರ್‌ನ ಆರಂಭಿಕ ಚಿತ್ರಜೀವನದಿಂದ ಹಿಡಿದು ಆತನ ಏಳುಬೀಳುಗಳನ್ನೊಳಗೊಂಡು ಕೊನೆಯವರೆಗಿನ ಯಾನವನ್ನು ಚಿತ್ರರಸಿಕರಾಗಿ ಆನಂದಿಸುತ್ತಲೇ ಸೂಕ್ಷ್ಮವಾಗಿ ಕಟ್ಟಿಕೊಡುತ್ತಾ ಅವನನ್ನು ‘ಒಲಿಸುವ ಕಲೆಗಾರ’ ಎಂದು ಕರೆದಿದ್ದಾರೆ. ಹಾಗೆಯೇ ನಮ್ಮ ಕಾಲದ ನಟ ಕಣ್ಣಿನಲ್ಲೇ ಮಾತನಾಡಿಸುವ ಕಲಾವಿದ ಇರ್ಫಾನ್ ಖಾನ್ ಬಗ್ಗೆಯೂ ಒಂದು ಅಧ್ಯಾಯವಿದೆ. ಬಹುಷಃ ಅವನಿಗೆ ಇಷ್ಟು ಚೆಂದದ ರೂಪಕವನ್ನು ಸಿನೆಮಾ ಜಗತ್ತಿನಲ್ಲಿಯೂ, ಸಿನಿ ವಿಮರ್ಶಕರೂ ಯಾರೂ ಕೊಟ್ಟಿರಲಿಕ್ಕಿಲ್ಲ. ಪ್ರತೀ ಪಾತ್ರದ ಆಂತರಿಕ ಮೌನವನ್ನು ಗ್ರಹಿಸಿ ಅದನ್ನು ಸಶಕ್ತವಾಗಿ ಅಭಿವ್ಯಕ್ತಿಸುವ, ವೀಕ್ಷಕರಿಗೂ ಅದನ್ನು ದಾಟಿಸುವ ಇರ್ಫಾನ್‌ನನ್ನು ‘ಮೌನದ ಸಮುದ್ರ’ ಕ್ಕೆ ಹೋಲಿಸಿರುವುದು ತುಂಬಾ ಹಿಡಿಸಿತು. ಸಿನೆಮಾ ಹಿನ್ನೆಲೆಯಿಂದ ಬಂದಿದ್ದರೂ, ಬರದಿದ್ದರೂ ವ್ಯಕ್ತಿಯೊಬ್ಬ ನಟನಾಗಿ, ಕಲಾವಿದನಾಗಿ ಎತ್ತರಕ್ಕೇರಲು ಬದ್ಧತೆ, ಕಾಯುವಿಕೆ, ತೀವ್ರತೆಯಿಂದ ತೊಡಗಿಸಿಕೊಳ್ಳುವಿಕೆ, ತನ್ಮಯತೆ, ನಿರ್ವಹಿಸುವಿಕೆ ಇಂಥಾ ಗುಣಗಳು ಇರಬೇಕಾಗುತ್ತವೆ ಎನ್ನುವುದನ್ನು ಈ ಇಬ್ಬರು ನಟರ ಉದಾಹರಣೆ ಕಲಾಜೀವನದ ಮೂಲಕ ಹೇಳಿದ್ದು ಆಸಕ್ತಿಯಿಂದ ಓದಿಸಿಕೊಳ್ಳುತ್ತದೆ.
ಸಾಹಿತಿಗಳು, ಸಿನೆಮಾ ನಟರ ಬಗ್ಗೆ ಬರೆದಷ್ಟೇ ಉತ್ಸುಕತೆ ಅಥವಾ ಅದಕ್ಕೂ ತುಸು ಹೆಚ್ಚೇ ಆಸಕ್ತಿಯಿಂದ ಜಯಂತರು ಇನ್ನಷ್ಟು ವ್ಯಕ್ತಿತ್ವಗಳನ್ನು (ಪಿ.ವಿ ಶಾಸ್ತ್ರಿ ಕಿಬ್ಬಳ್ಳಿ, ಪ್ರೊ.ಜಿ.ವಿ.ಭಟ್, ಹೊನ್ನಾವರದಲ್ಲಿ ಶ್ರೀಧರ ಪ್ರೆಸ್ ನಡೆಸುತ್ತಿದ್ದ ಜೀಯು) ಈ ಪುಸ್ತಕದಲ್ಲಿ ಸ್ಮರಿಸಿಕೊಂಡಿದ್ದಾರೆ. ಅದರಲ್ಲಿ ನನ್ನನ್ನು ಸೆಳೆದದ್ದು ಪುಸ್ತಕ ಪ್ರೇಮಿಯಾಗಿ ಎಲ್ಲೆಲ್ಲಿಂದಲೋ ಅಪಾರ ಪುಸ್ತಕಗಳನ್ನು ತರಿಸಿ ಸಂಗ್ರಹಿಸಿ ಗೋಕರ್ಣದಲ್ಲಿ ಖಾಸಗಿ ಗ್ರಂಥಾಲಯವನ್ನು ನಡೆಸುತ್ತಾ ಓದುವ ಅಭಿರುಚಿಯನ್ನು ಬೆಳೆಸಿದ ವಿಸ್ತರಿಸಿದ ಜಿ.ಎಂ.ವೇದೇಶ್ವರ ಎನ್ನುವವರು. ಸ್ಥಳೀಯವಾಗಿ ಸಿಗುತ್ತಿದ್ದ ವಸ್ತುಗಳಿಂದಲೇ ಏನನ್ನೂ ವ್ಯರ್ಥ ಮಾಡದೇ ನಾಟಕಕ್ಕೆ ಸ್ವತಃ ಪರಿಕರಗಳನ್ನು ರೂಪಿಸುತ್ತಿದ್ದ ಅವರ ಕಲಾಸಕ್ತಿಯ ಬಗ್ಗೆ, 1950 ರಷ್ಟು ಹಿಂದೆಯೇ ವರ್ಷಕ್ಕೊಮ್ಮೆ ವಸಂತ ಸಾಹಿತ್ಯೋತ್ಸವ ನಡೆಸುತ್ತಿದ್ದ ಅವರ ಸಾಂಸ್ಕೃತಿಕ ಪ್ರಜ್ಞೆಯ ಬಗ್ಗೆ ಜಯಂತರು ಆಸ್ಥೆಯಿಂದ ಬರೆದಿದ್ದಾರೆ. ಹಿಂದೆಲ್ಲಾ ಹೀಗೆ ಸ್ವಾರ್ಥವಿಲ್ಲದೇ ಸಮಾಜಕ್ಕೆ ಏನಾದರೂ ಒಳಿತನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಸೇವೆಗೈಯ್ಯುತ್ತಿದ್ದ ಉದಾರವಾಗಿ ಯೋಚಿಸುತ್ತಿದ್ದ ವ್ಯಕ್ತಿಗಳು ಅಲಲ್ಲಿ ಕಾಣಸಿಗುತ್ತಿದ್ದರು. ಅಂಥವರ ಪ್ರತಿನಿಧಿಯಂತೆ ಜಯಂತರು ಪ್ರಸ್ತಾಪಿಸಿದ ಈ ವ್ಯಕ್ತಿಗಳು ಮತ್ತು ಕೋಣೆ ಅಣ್ಣ ಕಂಡರು. ಇಂಥಾ ಮೌಲ್ಯಗಳೆಲ್ಲಾ ಹಿನ್ನೆಲೆಗೆ ಸರಿದು ವ್ಯಕ್ತಿನಿಷ್ಠ ಹಿತಾಸಕ್ತಿಗಳು ವಿಜೃಂಭಿಸುತ್ತಿರುವ ಈ ಕಾಲದಲ್ಲಿ ಮರೆಗೆ ಸಂದವರನ್ನು ಮುಚ್ಚಟೆಯಿಂದ ನೆನಪಿಸಿಕೊಳ್ಳುವುದು, ಅದನ್ನು ಓದುವುದು ಮನಸ್ಸಿಗೆ ಹಿತವೆನಿಸತ್ತದೆ.
ಪ್ರಮೀಳಾ ಸ್ವಾಮಿಯವರ ‘ಊರೆಂಬ ಉದರ’ ಪುಸ್ತಕ ಬಂದಾಗ ತುಂಬಾ ಒಳ್ಳೆಯ ಪುಸ್ತಕ ಎನ್ನುವ ಮೆಚ್ಚುಗೆ ಬಂದಿತ್ತು. ಹೆಗ್ಗೋಡಿನ ಅಕ್ಷರ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ. ಒಮ್ಮೆ ಪುಸ್ತಕ ತರಿಸಬೇಕೆಂದು ನೋಡಿದಾಗ ಸ್ಟಾಕ್ ಇರಲಿಲ್ಲ. ನಂತರ ಬದುಕಿನ ಇತರ ತಾಪತ್ರಯಗಳಲ್ಲಿ ಮರೆತೇ ಹೋಗಿದ್ದ ಈ ಪುಸ್ತಕದ ಘಮ ತಾರಿದಂಡೆಯಲ್ಲಿ ಮತ್ತೆ ಸಿಕ್ಕಿತು. ನೂರಕ್ಕೂ ಹೆಚ್ಚು ಅಡುಗೆ ಪದಾರ್ಥಗಳನ್ನು ಮಾಡುವ ವಿಧಾನದೊಂದಿಗೆ ಒಂದು ಊರಿನ ಕಥೆ, ಸಮುದಾಯದ ಕಥೆ ಬೆಸೆದುಕೊಂಡಿರುವ ಅಪರೂಪದ ಪುಸ್ತಕ ಇದು. ಈ ಪುಸ್ತಕದ ವಿಶಿಷ್ಟತೆಯನ್ನು ‘ಬಾಳೆ ಹೂವಿನ ಚಟ್ನಿ, ಪ್ರಮೀಳಾ ಸ್ವಾಮಿ’ ಎನ್ನುವ ಬರಹದಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. “ಅವರು ಹಂಚಿಕೊಂಡಿರುವ ಬಗೆಬಗೆ ಖಾದ್ಯ ಪದಾರ್ಥಗಳ ಸೂತ್ರ ಮತ್ತು ವಿಧಾನಗಳು – ಅವರು ತಮ್ಮ ಗ್ರಾಮ, ಕುಟುಂಬ, ಆಪ್ತೇಷ್ಟರಿಂದ ಪಡೆದ ಅಮೂಲ್ಯ ಜೀವನ ಮೌಲ್ಯದ ವಿಸ್ತರಣೆಯೇ ಆಗಿವೆ. ನಿಸರ್ಗದ ಲಯ, ಸಾಮಾಗ್ರಿಯ ಲಭ್ಯತೆ, ಮಿತವ್ಯಯ, ಆರೋಗ್ಯ, ಒಡನಾಟಕ್ಕೆ ನೆಪ, ಸಹಜೀವಿಗಳಿಗೆ ಉಣಿಸುವ ಸಮಾಧಾನದ ಜೊತೆಗೆ ಎಂಥ ಸತ್ವಪರೀಕ್ಷೆಯ ಕಾಲದಲ್ಲೂ ಒಂದು ಇಂಬಿನಂತೆ, ಬಚಾವಿನ ವ್ರತದಂತೆ ಒದಗಿ ಬಂದ ವಿದ್ಯಮಾನ ಇದು….. ಉರಿ ಎಷ್ಟು ಮತ್ತು ಹದ ಹೇಗೆ ಎಂಬುದು ಅನುಭವದಿಂದಲೇ ಬರುವ ಪಾಕ ವಿವೇಕ” – ಈ ಥರದ ಒಳನೋಟಗಳು ಪುಸ್ತಕ ಓದಲು ಪ್ರೇರೇಪಿಸುತ್ತವೆ. ಆ ಕಾಲದ ವಿದ್ಯಮಾನಗಳನ್ನು, ಹೆಂಗಸರ ಬದುಕು ಮತ್ತು ಕಷ್ಟಗಳನ್ನು ಪುಸ್ತಕ ತೆರೆದಿಡುವ ರೀತಿಯ ಬಗ್ಗೆ ಜಯಂತರ ಅವಲೋಕನ ಓದಿದಾಗ ಪುಸ್ತಕದ ಬಗ್ಗೆ ಆಸಕ್ತಿ ಹೆಚ್ಚುವುದರ ಜೊತೆಗೆ ನಮ್ಮ ನಮ್ಮ ಸದ್ಯದ ಬದುಕನ್ನು ಸಹನೀಯ ಮಾಡುವಂಥ, ಅಂದ್ರೆ ಹಾಗನ್ನಿಸುವ ಎಷ್ಟೋ ವಿಷಯಗಳೂ ಆ ಪುಸ್ತಕದಲ್ಲಿರಬಹುದು ಎನ್ನುವ ಕುತೂಹಲ ಹುಟ್ಟಿತು.
ಉತ್ತರ ಕರ್ನಾಟಕದ ಅಸ್ಮಿತೆಯಂತೆ ಕಾರ್ಯ ನಿರ್ವಹಿಸುತ್ತಾ ಬಂದ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಜಯಂತರು “ಉತ್ತರ ಕರ್ನಾಟಕದ ಆತ್ಮಸಂಹಿತೆಯನ್ನು ಎತ್ತಿ ಹಿಡಿದ ನಿಡುಗಾಲದ ನಿಲುವುಗನ್ನಡಿ” ಎಂದು ಕರೆದಿದ್ದಾರೆ. ಆ ಭಾಗದ ಜನರ ಜೀವನಾಡಿಯಂತಿದ್ದ ಪತ್ರಿಕೆಯೊಂದಿಗಿನ ಒಡನಾಟವನ್ನು, ಅವರ ತಂದೆ ಗೌರೀಶರು ಬದುಕಿನ ಕೊನೆ ಕ್ಷಣದವರೆಗೂ ಅದಕ್ಕೆ ಅಂಕಣ ಬರೆದ ನೆನಪುಗಳನ್ನೂ ಈ ಬರಹದಲ್ಲಿ ಹೇಳಿಕೊಂಡಿದ್ದಾರೆ. ಆ ಭಾಗದ ಜನರು ಏನಾದರೂ ಸುದ್ದಿ ಹೇಳುವಾಗ ಸಂಯುಕ್ತ ಕರ್ನಾಟಕದಲ್ಲೇ ಬಂದಿದೆ ಎನ್ನುತ್ತಿದ್ದರಂತೆ. ಹೇಗೆ ಒಂದು ಪತ್ರಿಕೆ ತಲೆಮಾರುಗಳ ಸಂವೇದನೆಯನ್ನು ರೂಪಿಸಬಹುದು, ಪೋಷಿಸಬಹುದು ಎನ್ನುವುದು ಈ ಅಧ್ಯಾಯ ಓದಿದಾಗ ವೇದ್ಯವಾಗುತ್ತದೆ.
ಅದೇ ರೀತಿ ಪ್ರಜಾವಾಣಿಯ ದೀಪಾವಳಿ ಕಥಾಸ್ಪರ್ಧೆಗಳು ಕನ್ನಡ ಸಾಹಿತ್ಯದಲ್ಲಿ ಉತ್ತಮ ಕಥೆಗಳ ಹುಲುಸಾದ ಬೆಳೆ ಬರುವಲ್ಲಿ ವಹಿಸಿದ ಪಾತ್ರ, ಹೇಗೆ ಪ್ರಜಾವಾಣಿ ಆರಂಭದಿಂದಲೂ ಎಲ್ಲಾ ವಿಭಾಗಗಳಲ್ಲೂ ಉತ್ಕೃಷ್ಟತೆಯ ಮಾನದಂಡವನ್ನು ಕಾಯ್ದುಕೊಂಡು ಬಂದಿದೆ, ಪ್ರಜಾವಾಣಿಯಲ್ಲಿ ಬಂದರೆ ಹೇಗೆ ಒಂದು ಹೆಗ್ಗಳಿಕೆ ಪ್ರಾಪ್ತವಾಗುತ್ತಿತ್ತು ಎನ್ನುತ್ತಾ ತಮ್ಮ ನೆನಪಿನ ಸಂಚಿಯನ್ನು ತೆಗೆದು ಹೇಳುತ್ತಾ ಹೋಗಿದ್ದಾರೆ. ಇಷ್ಟೆಲ್ಲಾ ಸಾಮಾಜಿಕ ಜಾಲತಾಣಗಳ ಅಬ್ಬರವಿರದಿದ್ದ ಮಾಹಿತಿಗಳ ಉಬ್ಬರವಿರದಿದ್ದ ತಣ್ಣನೆಯ ಕಾಲ ಘಟ್ಟದಲ್ಲಿ ಪತ್ರಿಕೆಗಳು ವಹಿಸಿದ ಮಹತ್ವದ ಪಾತ್ರ, ಪಸರಿಸುತ್ತಿದ್ದ ಸಾಹಿತ್ಯದ ಕಂಪನ್ನು ಈ ಬರಹಗಳು ಸಾರುತ್ತವೆ.
ಯಶವಂತ ಚಿತ್ತಾಲರ ಶಿಕಾರಿ ಕಾದಂಬರಿಯನ್ನು ಮಾತ್ರ ಓದಿರುವ ನನಗೆ ಈ ಪುಸ್ತಕದಲ್ಲಿ ಅವರ ಛೇದ ಮತ್ತು ಪುರುಷೋತ್ತಮ ಕಾದಂಬರಿಗಳ ಬಗ್ಗೆ ಹೊಸ ಹೊಳಹುಗಳು ಸಿಕ್ಕವು. ಅದೇ ರೀತಿ ರಾಘವೇಂದ್ರ ಪಾಟೀಲರಿಗೆ ಅವರ ‘ಎದೆಗೆ ಎದೆ ಮಿಡಿತ’ ಸ್ಪಂದನ ಬರಹಗಳ ಪುಸ್ತಕವನ್ನೋದಿ ಜಯಂತರು ಬರೆದ ಪತ್ರರೂಪಿ ಅಧ್ಯಾಯದಲ್ಲಿ ಬೇರೆ ಬೇರೆ ಲೇಖಕರುಗಳ ಕೃತಿಗಳ ಬಗ್ಗೆ ವಿಮರ್ಶೆಯ ಪರಿಭಾಷೆಗಳು, ಆಳವಾದ ವಿಶ್ಲೇಷಣೆಗಳು ಸಿಕ್ಕವು. ಪುಸ್ತಕದ ಕೊನೆಯ ಅಧ್ಯಾಯ ಆತ್ಮ ಕಥನ ಕುತೂಹಲದಲ್ಲಿ ಆತ್ಮಕತೆಗಳ ಬಗ್ಗೆ ಹಲವು ಜಿಜ್ಞಾಸೆಗಳು ಸಿಕ್ಕವು. ಹೀಗೆ ಈ ಪುಸ್ತಕದ ಹರಹು ವಿಸ್ತಾರ ಹತ್ತು ಹಲವು ವಿಷಯಗಳಿಗೆ ಚಾಚಿಕೊಂಡು ನಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸುವುದರಲ್ಲಿ ಸಂದೇಹವೇ ಇಲ್ಲ.
ಒಟ್ಟಾರೆ, ಇಂದಿನ ಧಾವಂತದ ಯುಗದಲ್ಲಿ ನಾವು ಕಳೆದುಕೊಂಡ ಎಷ್ಟೋ ಸಂಗತಿಗಳನ್ನು ತಾರಿದಂಡೆಯ ಬರಹಗಳು ಬಹಳ ಮುತುವರ್ಜಿಯಿಂದ ನೆನಪಿಸುತ್ತವೆ. ಅಲ್ಲೊಂದು ಕಾಳಜಿಯ ಧ್ವನಿಯಿದೆ. ಕಳಕಳಿಯ ನಿವೇದನೆಯಿದೆ. ‘ವಾಯಾ ಅಂತರವಳ್ಳಿ’ ಎನ್ನುವ ಬರಹ ಅವಸರ ಬೇಡ, ನಿಲ್ಲಿ ನಿಲ್ಲಿ ಎನ್ನುತ್ತಾ ನಮ್ಮ ಸ್ಪೀಡಿಗೆ ಬ್ರೇಕ್ ಹಾಕುತ್ತಾ ಬದುಕಿನ ಮಾರ್ದವತೆ ಬರೀ ಓಡುವುದರಲ್ಲಿಲ್ಲ; ನಿಂತು ಸುಧಾರಿಸಿಕೊಂಡು ಒಮ್ಮೆ ಸುತ್ತ ಗಮನಿಸಿ. ಕಣ್ಣರಳಿಸಿ ಬೆರಗಾಗುಗುವ ಮಾಯಕದ ಕ್ಷಣಗಳು ಎದುರಾಗಬಹುದು ಎನ್ನುತ್ತದೆ. ಇನ್ನೊಂದು ರೀತಿಯಲ್ಲಿ, ಅವರದೇ ಮಾತಿನಲ್ಲಿ ಹೇಳುವುದಾದರೆ “ಪ್ರಚಲಿತ ದೇಶ ಕಾಲ ಸಮಾಜದ ಸಂಯುಕ್ತ ಮನಸ್ಸಿನಿಂದ ಅಮೂಲ್ಯವಾದದ್ದೇನೋ ನಶಿಸುತ್ತಿರುವ ಬಗ್ಗೆ ಚಡಪಡಿಕೆ ಇದೆ, ಇದೇ ಅಲ್ಲ, ಇದಿಷ್ಟೇ ಅಲ್ಲ, ಇನ್ನೇನೋ ಇದೆ ಎನ್ನುವ ಆರ್ತತೆ ಇದೆ”. ಇಡೀ ಪುಸ್ತಕದ ಆತ್ಮ ಈ ಮಾತುಗಳಲ್ಲಿ ನನಗೆ ಕಾಣಿಸಿತು.
ಈ ಮೊದಲು ಕನ್ನಡ ಖಾಸಗಿ ಟೀವಿ ವಾಹಿನಿಗಳ ಮನರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಶ್ವೇತಾ ಈಗ ಸದ್ಯ ಮನೆಯಲ್ಲಿಯೇ ವಿರಾಮ. ಓದುವುದು, ಬರೆಯುವುದು, ಪ್ರವಾಸ, ಫೋಟೋಗ್ರಫಿ ಇವರ ನೆಚ್ಚಿನ ಹವ್ಯಾಸಗಳು. ಪ್ರಕೃತಿ ಮತ್ತು ಸಂಗೀತವೆಂದರೆ ಸೆಳೆತ; ಕಾಡುವುದನ್ನು, ಇಷ್ಟವಾಗಿದ್ದನ್ನು ಬರೆಯುವ ತುಡಿತ. ಬರೆಯುವುದರಲ್ಲಿ ಬಿಡುಗಡೆಯಿದೆ ಎನ್ನುವ ನಂಬಿಕೆ ಇವರದ್ದು.
ಜಯಂತ್ ಬಗ್ಗೆ ಇನ್ನಷ್ಟು ತಿಳಿದು ಸಂತೋಷ. ಅವರ ಮಮ್ಮಿ ಮತ್ತು ನನ್ನ ತಾಯಿ ಸಹಪಾಠಿಗಳಾಗಿದ್ದರೆ, ಅವರ ತಂದೆ ಮತ್ತು ನನ್ನ ತಂದೆ ಸಹೋದ್ಯೋಗಿಗಳಾಗಿದ್ದರು. Good work ಶ್ವೇತಾ ಹೊಸಬಾಳೆ ಮೇಡಂ. Thanks.
Thank you too Sir
Thank you too Sir