ಇಸ್ರೇಲಿ ಕ್ರೀಡಾಪಟುಗಳನ್ನು ಹೇಗಾದರೂ ರಕ್ಷಿಸಬೇಕೆಂದು ಜರ್ಮನ್ ಅಧಿಕಾರಿಗಳು ಫರ್ಸ್ಟೆನ್‌ಫೆಲ್ಡ್‌ಬ್ರಕ್ ವಾಯುನೆಲೆಯಲ್ಲಿ ಒಂದು ರಕ್ಷಣಾ ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸಿದರು. ಭಯೋತ್ಪಾದಕರು ಮತ್ತು ಒತ್ತೆಯಾಳುಗಳನ್ನು ಆ ವಾಯುನೆಲೆಯಿಂದ ಹೆಲಿಕಾಪ್ಟರ್ ಮೂಲಕ ಸಾಗಿಸುವುದು ಆ ಯೋಜನೆಯ ಭಾಗವಾಗಿತ್ತು. ಆಗ ನಡೆಯಿತು ನೋಡಿ ಮತ್ತೊಂದು ದುರಂತ! ಸಾಕಷ್ಟು ಮುಂಜಾಗ್ರತೆ ವಹಿಸಿದ್ದರೂ, ರಕ್ಷಣಾ ಪ್ರಯತ್ನವು ಕಳಪೆಯಾಗಿ ಕಾರ್ಯಗತಗೊಂಡಿತ್ತು. ಜರ್ಮನ್ ಪೊಲೀಸರು ಅಂತಹ ಕಾರ್ಯಾಚರಣೆಯನ್ನು ನಿಭಾಯಿಸಲು ಶಕ್ತರಾಗಿರಲಿಲ್ಲ.
ಕಾರ್ತಿಕ್ ಕೃಷ್ಣ ಬರೆಯುವ “ಒಲಂಪಿಕ್ಸ್ ಅಂಗಣ” ಸರಣಿಯಲ್ಲಿ ಭಯೋತ್ಪಾದಕರ ಕೈಯಲ್ಲಿ ಕ್ರೀಡಾಪಟುಗಳು ನರಳಿದ ಕತೆ…
ಯುದ್ಧ, ಆಂತರಿಕ ಬಿಕ್ಕಟ್ಟು, ಭಯೋತ್ಪಾದನೆ ಇತ್ಯಾದಿಗಳು ತಾಂಡವವಾಡುತ್ತಿರುವ ಈ ಕಾಲಘಟ್ಟದಲ್ಲಿ ದೇಶದ ರಕ್ಷಾವ್ಯವಸ್ಥೆಗೆ ಸಾಕಷ್ಟು ಮಹತ್ವವನ್ನು ನೀಡಲಾಗುತ್ತಿದೆ. ಅತ್ಯಾಧುನಿಕ ಆಯುಧಗಳು, ಸೈನಿಕರ ತರಬೇತಿ, ಆಂತರಿಕ ಭದ್ರತೆಯ ಜೊತೆಗೆ ಗುಪ್ತಚರ ಸಂಸ್ಥೆಗಳನ್ನು ಸಬಲೀಕರಣಗೊಳಿಸುವಲ್ಲಿ ಎಷ್ಟೋ ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ. ಗುಪ್ತಚರ ಸಂಸ್ಥೆ ಎಂದ ಕೂಡಲೇ, ಜೇಮ್ಸ್ ಬಾಂಡ್ ತರಹದ ಸಿನೆಮಾಗಳಲ್ಲಿ ಏಜೆಂಟ್‌ಗಳು ದುಸ್ಸಾಧ್ಯವಾದ ಮಿಷನ್‌ಗಳಲ್ಲಿ ಪಾಲುಗೊಳ್ಳುವುದು ನೆನಪಾಗುತ್ತದೆ. ಮಾರು ವೇಷದಲ್ಲಿದ್ದು ಯಾರಿಗೂ ನಿಲುಕದ ಮಾಹಿತಿಗಳನ್ನು ಕಲೆ ಹಾಕಿ, ದುರುಳರನ್ನು ಮಟ್ಟ ಹಾಕುವ ಅವರ ಚಾಕಚಕ್ಯತೆ ಅದೆಷ್ಟೋ ವರುಷದ ಕಠಿಣ ಪರಿಶ್ರಮದ ಫಲ. ಭಾರತದ ರಾ, ಅಮೇರಿಕಾದ ಸಿಐಎ, ಯುನೈಟೆಡ್ ಕಿಂಗ್ಡಮ್ಮಿನ MI6 ಇಂತಹದೇ ಕೆಲವು ಹೆಸರಾಂತ ಗುಪ್ತಚರ ಸಂಸ್ಥೆಗಳು. ಈ ಪಟ್ಟಿಯಲ್ಲಿ ಅಗ್ರ ಪಂಕ್ತಿಯಲ್ಲಿರುವ ಇನ್ನೊಂದು ಸಂಸ್ಥೆಯಿದೆ. ಅಚ್ಚುಕಟ್ಟಾಗಿ ಪ್ಲಾನ್ ಮಾಡಿ, ಬಲಗೈ ಮಾಡಿದ ಕೆಲಸ ಎಡಗೈಗೆ ಗೊತ್ತಾಗದಂತೆ ಮಿಷನ್‌ಗಳನ್ನು ಪೂರ್ತಿಗೊಳಿಸುವ ಈ ಸಂಸ್ಥೆಯ ಸಕ್ಸಸ್ ರೇಟ್ ನೂರಕ್ಕೆ ನೂರು ಅಂತಲೇ ಹೇಳಬಹುದು. ತನ್ನ ಮಾತೃ ಭೂಮಿಯಾದ ಇಸ್ರೇಲ್ ದೇಶದ ಅಸ್ಮಿತೆಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಆ ಸಂಸ್ಥೆಯೇ “ಮೋಸ್ಸಾದ್”.
ಒಲಿಂಪಿಕ್ಸ್ ಬಗ್ಗೆ ಬರೆಯೋದು ಬಿಟ್ಟು ಯಾವುದೋ ಸ್ಪೆಷಲ್ ಏಜನ್ಸಿ ಬಗ್ಗೆ ಬರೀತಿದ್ದಾನಲ್ಲಾ ಅಂತ ಹುಬ್ಬೇರಿಸಬೇಡಿ. ಮೋಸ್ಸಾದ್ ಹಾಗೂ ಒಲಿಂಪಿಕ್ಸ್‌ಗೆ ಸಂಬಂಧವಿರುವುದರಿಂದಲೇ ಇಷ್ಟೆಲ್ಲಾ ಪೀಠಿಕೆ. ಎತ್ತಣ ಮೋಸ್ಸಾದ್? ಎತ್ತಣ ಒಲಿಂಪಿಕ್ಸ್? ಎತ್ತಣಿಂದೆತ್ತ ಸಂಬಂಧವಯ್ಯಾ?! ತಿಳಿಯೋಣ ಬನ್ನಿ. 1972ರ ಒಲಿಂಪಿಕ್ಸ್ ನಡೆದದ್ದು ಜರ್ಮನಿಯ ಮ್ಯುನಿಕ್‌ನಲ್ಲಿ. ಅದಕ್ಕೂ ಮೊದಲು ಬರ್ಲಿನ್ ನಲ್ಲಿ 1936ರಲ್ಲಿ ಹಿಟ್ಲರಿನ ನಾಜಿ ಆಡಳಿತದಲ್ಲಿಒಲಿಂಪಿಕ್ಸ್ ನಡೆದಿತ್ತು. ನಾಜಿ ಗಳ ಮಿಲಿಟರಿ ಛಾಯೆಯಲ್ಲಿ ನಡೆದಿದ್ದ ಆ ಒಲಿಂಪಿಕ್ಸ್‌ನ ಕರಾಳತೆ, ಈ ಬಾರಿಯ ಒಲಿಂಪಿಕ್ಸ್‌ನಲ್ಲಿರಬಾರದೆಂದು, ಕ್ರೀಡಾಪಟುಗಳು ನಿರ್ಭಯವಾಗಿ ಆಟದಲ್ಲಿ ಭಾಗವಹಿಸುವ ಸಲುವಾಗಿ ಕಣ್ಣಿಗೆ ಕಾಣದಂತೆ ತೀರಾ ಸರಳವಾದ ಭದ್ರತೆಯನ್ನು ಒದಗಿಸಿದ್ದರು. ಎಡವಟ್ಟಾದದ್ದು ಅಲ್ಲೇ.
ಸೆಪ್ಟೆಂಬರ್ 5, 1972. ಮ್ಯುನಿಕ್‌ನ ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ಎಂದಿನಂತೆ ಅಥ್ಲೀಟ್‌ಗಳು ತಮ್ಮ ತಮ್ಮ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಕ್ರೀಡಾಪಟುಗಳಂತೆ ದಿರಿಸನ್ನು ತೊಟ್ಟ, ‘ಬ್ಲಾಕ್ ಸೆಪ್ಟೆಂಬರ್’ ಎಂಬ ಪ್ಯಾಲೆಸ್ತೀನ್ ಉಗ್ರಗಾಮಿ ಸಂಘಟನೆಯ ಎಂಟು ಮಂದಿ, ತಮ್ಮ ಬಂದೂಕುಗಳನ್ನು ಬಚ್ಚಿಟ್ಟುಕೊಂಡು, ಉಳಿದ ಕ್ರೀಡಾಪಟುಗಳ ನಡುವೆ ಹೇಗೋ ಸೇರಿಕೊಂಡಿದ್ದರು. ತಮ್ಮ ನಡುವೆ ಭಯೋತ್ಪಾದಕರು ಇರುವರೆಂಬ ಸಣ್ಣ ಸುಳಿವೂ ಇರದ ಕ್ರೀಡಾಪಟುಗಳಲ್ಲಿ ಅವರು ಹುಡುಕುತ್ತಿದ್ದದ್ದು ಇಸ್ರೇಲ್ ದೇಶದವರನ್ನು. ಅಂತೂ ಅವರಿದ್ದ ಕ್ವಾರ್ಟರ್ಸ್ ತಲುಪಿದ ಉಗ್ರಗಾಮಿಗಳು ಕೂಡಲೇ ಇಬ್ಬರು ಇಸ್ರೇಲಿಗಳನ್ನು ಕೊಂದು, ಉಳಿದ ಒಂಬತ್ತು ಮಂದಿಯನ್ನು ಒತ್ತೆಯಾಳಾಗಿಸಿರಿಕೊಂಡರು. ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಉಗ್ರಗಾಮಿಗಳು ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದರು. ಇಸ್ರೇಲ್‌ನಲ್ಲಿ ಬಂಧಿತರಾಗಿರುವ 234 ಪ್ಯಾಲೇಸ್ಟಿನಿಯನ್ ಕೈದಿಗಳು ಮತ್ತು ರೆಡ್ ಆರ್ಮಿ ಫ್ಯಾಕ್ಷನ್‌ನಿಂದ ಇಬ್ಬರು ಜರ್ಮನ್ ಭಯೋತ್ಪಾದಕರ ಬಿಡುಗಡೆಗೆ ಒತ್ತಾಯಿಸಿದರು. ಖೈದಿಗಳನ್ನು ಬಿಡುವುದೆಂದರೆ ಸುಲಭದ ಮಾತೇ? ಭಯೋತ್ಪಾದಕರು ಮತ್ತು ಜರ್ಮನ್ ಅಧಿಕಾರಿಗಳ ನಡುವಿನ ಮಾತುಕತೆ ಜಟಿಲವಾಗುತ್ತಾ ಹೋದಂತೆ, ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ದಾಳಿಕೋರರು ಬೆದರಿಕೆ ಹಾಕಿದರು.
ಇಸ್ರೇಲಿ ಕ್ರೀಡಾಪಟುಗಳನ್ನು ಹೇಗಾದರೂ ರಕ್ಷಿಸಬೇಕೆಂದು ಜರ್ಮನ್ ಅಧಿಕಾರಿಗಳು ಫರ್ಸ್ಟೆನ್‌ಫೆಲ್ಡ್‌ಬ್ರಕ್ ವಾಯುನೆಲೆಯಲ್ಲಿ ಒಂದು ರಕ್ಷಣಾ ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸಿದರು. ಭಯೋತ್ಪಾದಕರು ಮತ್ತು ಒತ್ತೆಯಾಳುಗಳನ್ನು ಆ ವಾಯುನೆಲೆಯಿಂದ ಹೆಲಿಕಾಪ್ಟರ್ ಮೂಲಕ ಸಾಗಿಸುವುದು ಆ ಯೋಜನೆಯ ಭಾಗವಾಗಿತ್ತು. ಆಗ ನಡೆಯಿತು ನೋಡಿ ಮತ್ತೊಂದು ದುರಂತ! ಸಾಕಷ್ಟು ಮುಂಜಾಗ್ರತೆ ವಹಿಸಿದ್ದರೂ, ರಕ್ಷಣಾ ಪ್ರಯತ್ನವು ಕಳಪೆಯಾಗಿ ಕಾರ್ಯಗತಗೊಂಡಿತ್ತು. ಜರ್ಮನ್ ಪೊಲೀಸರು ಅಂತಹ ಕಾರ್ಯಾಚರಣೆಯನ್ನು ನಿಭಾಯಿಸಲು ಶಕ್ತರಾಗಿರಲಿಲ್ಲ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಅಂತಹ ಕಾರ್ಯಾಚರಣೆಗಾಗಿ ಸಮರ್ಪಕವಾದ ತರಬೇತಿಯನ್ನು ಜರ್ಮನ್ ಪೋಲೀಸರಿಗೆ ನೀಡಲಾಗಿರಲಿಲ್ಲ. ಆಗ ಸಂಭವಿಸದ ಅಚಾತುರ್ಯದಿಂದ ಎಲ್ಲಾ ಒಂಬತ್ತು ಒತ್ತೆಯಾಳುಗಳು ಸೇರಿ ಐವರು ಭಯೋತ್ಪಾದಕರು ಮತ್ತು ಒಬ್ಬ ಜರ್ಮನ್ ಪೊಲೀಸ್ ಅಧಿಕಾರಿ ಕೊನೆಯುಸಿರೆಳೆದ್ದಿದರು.
ದೂರ ದೇಶದಲ್ಲಿ ತನ್ನ ಪ್ರಜೆಗಳು ಒಂದು ಭಯೋತ್ಪಾದಕ ದಾಳಿಯಲ್ಲಿ ಕೊನೆಯುಸಿರೆಳೆದದ್ದನ್ನು ಕಂಡು ಯಾವ ದೇಶ ತಾನೇ ಸುಮ್ಮನಿದ್ದೀತು ಹೇಳಿ? ಅದೂ ಇಸ್ರೇಲ್‌ನಂತ ಬಲಾಢ್ಯ ದೇಶ, ಲೆಕ್ಕವನ್ನುಇತ್ಯರ್ಥ ಮಾಡಲು ಯಾವ ಮಟ್ಟಕ್ಕೆ ಹೋಗಲೂ ತಯಾರಿರುತ್ತದೆ. ಮ್ಯೂನಿಚ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ, ಪ್ರಧಾನಿ ಗೋಲ್ಡಾ ಮೀರ್ ನೇತೃತ್ವದ ಇಸ್ರೇಲಿ ಸರ್ಕಾರವು ದಾಳಿಗೆ ಕಾರಣರಾದವರನ್ನು ಪತ್ತೆಹಚ್ಚಲು ಮತ್ತು ನಿರ್ಮೂಲನೆ ಮಾಡಲು ರಹಸ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಲು ನಿರ್ಧರಿಸಿತು. operation wrath of God (ದೇವರ ಕ್ರೋಧ!) ಎಂದು ಕರೆಯಲ್ಪಡುವ ಈ ಕಾರ್ಯಾಚರಣೆಯನ್ನು ನಡೆಸಿದ್ದು ಇದೇ ಮೊಸ್ಸಾದ್! ಮ್ಯೂನಿಚ್ ದಾಳಿಯ ಹಿಂದಿರುವ ವ್ಯಕ್ತಿಗಳ targeted assassinationsಗಳನ್ನು ಒಳಗೊಂಡಿದ್ದ ಈ ಕಾರ್ಯಾಚರಣೆಯು ಅದೆಷ್ಟು ಕರಾರುವಾಕ್ ಆಗಿತ್ತೆಂದರೆ, ಮೊಸ್ಸಾದ್ ಏಜೆಂಟ್‌ಗಳು ಬ್ಲ್ಯಾಕ್ ಸೆಪ್ಟೆಂಬರ್ ಮತ್ತು ಪ್ಯಾಲೆಸ್ಟೈನ್ ಲಿಬರೇಶನ್ ಆರ್ಗನೈಸೇಶನ್ (PLO) ಗೆ ಸಂಬಂಧಿಸಿದ ಹಲವಾರು ಪ್ರಮುಖ ವ್ಯಕ್ತಿಗಳನ್ನು ಪತ್ತೆಹಚ್ಚಿ ರಹಸ್ಯವಾಗಿ ಕೊಂದರು. ಕಾರ್ಯಾಚರಣೆಯು ಇಟಲಿ, ಫ್ರಾನ್ಸ್ ಮತ್ತು ಲೆಬನಾನ್ ಸೇರಿದಂತೆ ಅನೇಕ ದೇಶಗಳಲ್ಲಿ ಎರಡು ದಶಕಗಳ ಕಾಲ ನಡೆದಿತ್ತು.
PLO ಸಂಘಟಕ ವೇಲ್ ಜ್ವೈಟರ್, ಈ ಕಾರ್ಯಾಚರಣೆಯ ಮೊದಲ ಟಾರ್ಗೆಟ್. ಆತನನ್ನು ಗುಂಡು ಹಾರಿಸಿ ರೋಮ್‌ನಲ್ಲಿ ಕೊಲ್ಲಲಾಗಿತ್ತು. ಮತ್ತೊಂದು ಮಹತ್ವದ ಕಾರ್ಯಾಚರಣೆಯಲ್ಲಿ, ಪ್ಯಾರಿಸ್‌ನಲ್ಲಿನ PLO ಪ್ರತಿನಿಧಿಯಾದ ಮಹಮೂದ್ ಹಂಶರಿಯನ್ನು ಆತನ ಟೆಲಿಫೋನ್‌ನಲ್ಲಿ ಬಾಂಬ್ ಇರಿಸಿ ಕೊಲ್ಲಲಾಗಿತ್ತು. ಎರಡು ದಶಕಗಳವರೆಗೆ ನಡೆದ ಕಾರ್ಯಚರಣೆಯಲ್ಲಿ, ಮೊಸ್ಸಾದ್ ಏಜೆಂಟ್‌ಗಳು ತಮ್ಮ ಗುರಿಗಳನ್ನು ತೊಡೆದುಹಾಕಲು ವಿವಿಧ ವಿಧಾನಗಳನ್ನು ಬಳಸಿದ್ದರು. ಎಷ್ಟೇ ನಾಜೂಕಾಗಿ ಕೆಲಸ ಮಾಡಿದ್ದರೂ, ವಿವಾದವಿಲ್ಲದೆ operation wrath of God ಮುಗಿದಿರಲಿಲ್ಲ. ಈ ಕಾರ್ಯಾಚರಣೆಯು ಇಸ್ರೇಲ್ ಪ್ರಾಯೋಜಿತವಾದುದರಿಂದ ಎಲ್ಲಾ ಹತ್ಯೆ ಮತ್ತು ಉಂಟಾದ ಹಾನಿಯ ಸಂಭಾವ್ಯತೆಯ ಬಗ್ಗೆ ನೈತಿಕ ಮತ್ತು ಕಾನೂನು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಎಲ್ಲಕ್ಕಿಂತ ಬೇಸರದ ಸಂಗತಿಯೆಂದರೆ, ಒಮ್ಮೆ ಮೊಸ್ಸಾದ್ ಏಜೆಂಟರು ನಾರ್ವೆಯಲ್ಲಿ ಮುಗ್ಧ ಮೊರೊಕನ್ ಮಾಣಿಯನ್ನು ಭಯೋತ್ಪಾದಕನೆಂದು ತಪ್ಪಾಗಿ ತಿಳಿದು ಕೊಂದಿದ್ದರು.
ಮ್ಯುನಿಕ್ ಹತ್ಯಾಕಾಂಡ ಮತ್ತು operation wrath of God, ಅಂತರಾಷ್ಟ್ರೀಯ ಭಯೋತ್ಪಾದನಾ ನಿಗ್ರಹದ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರಿತು. ಈ ಎರಡು ಘಟನೆಗಳು, ಅಂತಾರಾಷ್ಟ್ರೀಯ ಕೂಟಗಳ ದೋಷಗಳನ್ನು ಎತ್ತಿ ತೋರಿಸಿ, ಮುಂದಿನ ಒಲಂಪಿಕ್ ಗೇಮ್ಸ್‌ಗಳಲ್ಲಿ ಹೆಚ್ಚಿನ ಭದ್ರತಾ ಕ್ರಮಗಳಿಗೆ ಕಾರಣವಾಯಿತು. ಈ ಘಟನೆಗಳು ರಾಜಕೀಯ ಸಂಘರ್ಷ ಮತ್ತು ಅಂತರಾಷ್ಟ್ರೀಯ ಸಂಬಂಧಗಳ ನಡುವಿನ ಸಂಕೀರ್ಣ ಸಂಕೇತವಾಗಿ, ಜಾಗತಿಕ ವೇದಿಕೆಯಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸಬೇಕಾಗಿರುವ ಅನಿವಾರ್ಯತೆಗೆ ನಿದರ್ಶನವಾಗಿ, ರಾಷ್ಟ್ರಗಳು ತಮ್ಮ ನಾಗರಿಕರನ್ನು ರಕ್ಷಿಸಲು ಯಾವ ಮಟ್ಟಕ್ಕೂ ಹೋಗುತ್ತವೆ ಎಂಬುದನ್ನು ಸಾರಿ ಹೇಳಿತ್ತು.
ಒಂದು ಉತ್ತಮ ಲೇಖನ. ಒಲಿಂಪಿಕ್ ಕ್ರೀಡೆಗಳ ಉದ್ದೇಶ ವೇ ಭ್ರಾತೃತ್ವವನ್ನು ಬೆಸೆಯುವುದು. ಆದರೆ ಧರ್ಮ ಧರ್ಮಗಳ ನಡುವಿನ ಸಂಘರ್ಷಕ್ಕೆ ಅಮಾಯಕರು ಬಲಿಯಾಗುತ್ತಲೇ ಇದ್ದಾರೆ. ಈ ಘಟನೆಯ ಕುರಿತು ಸ್ಟೀವನ್ ಸ್ಪೀಲ್‌ಬರ್ಗ್ ನಿರ್ದೇಶನದ ಸಿನೆಮಾ ‘ಮ್ಯೂನಿಚ್’ ತೆರೆಕಂಡು ಯಶಸ್ವಿಯಾಯಿತು. ಹಂತಕರನ್ನು ಹುಡುಕಿ ಹುಡುಕಿ ಕೊಲ್ಲುವ ದೃಶ್ಯಗಳು ರೋಚಕವಾಗಿದ್ದವು. ಇಸ್ರೇಲ್ ನ ಮೊಸ್ಸಾದ್ ಗೆ ಸರಿಸಾಟಿಯಾರಿಲ್ಲ.