ನೇಪಾಳದ ಜನರು ಶ್ರಮಜೀವಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಪರ್ವತ ಪ್ರದೇಶಗಳನ್ನು ಅವರು ಏರುವ ಮತ್ತು ಇಳಿಯುವ ರೀತಿ ಎಂಥವರಲ್ಲೂ ಅಚ್ಚರಿ ಮೂಡಿಸುತ್ತದೆ. ಮೊದಮೊದಲು ಪರ್ವತಾರೋಹಣಕ್ಕೆ ಹೊರಟವರಿಗೆ ಖಾಲಿ ಕೈಯ್ಯಲ್ಲಿ ಪರ್ವತದ ತುದಿ ತಲುಪುವುದೇ ಅಬ್ಬಬ್ಬಾ ಎನಿಸಿಬಿಡುತ್ತದೆ. ಆದರೆ ನೇಪಾಳದವರು ತಮ್ಮ ಬೆನ್ನ ಮೇಲೆ ಭಾರವಾದ ಚೀಲಗಳನ್ನು ಇಲ್ಲವೇ ವಸ್ತುಗಳನ್ನು ಹೊತ್ತುಕೊಂಡು ಪರ್ವತವನ್ನು ಏರುತ್ತಾರೆ; ಇಳಿಯುತ್ತಾರೆ. ಹೀಗೆ ಅವರು ಹೊರುವ ಭಾರವು ಅನೇಕ ಸಂದರ್ಭಗಳಲ್ಲಿ ಅವರ ತೂಕಕ್ಕಿಂತ ನಾಲ್ಕು ಪಟ್ಟು ಇಲ್ಲವೇ ಐದು ಪಟ್ಟು ಅಧಿಕವಾಗಿರುತ್ತದೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ನೇಪಾಳದ ಕುರಿತ ಬರಹ ನಿಮ್ಮ ಓದಿಗೆ

ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿಯೇ ಪ್ರಜಾಪ್ರಭುತ್ವದ ಕಡೆಗೆ ಹೆಜ್ಜೆಗಳನ್ನಿಡತೊಡಗಿದ ರಾಷ್ಟ್ರ ನೇಪಾಳ. ಆದರೆ ದೇಶದಾದ್ಯಂತ ಪ್ರಬಲವಾಗಿದ್ದ ರಾಜಪ್ರಭುತ್ವ ಇದಕ್ಕೆ ಅವಕಾಶವನ್ನು ಕೊಡಲೇ ಇಲ್ಲ. ರಾಜರು ತಮ್ಮ ಅಧಿಕಾರದ ಬಲವನ್ನು ಹೆಚ್ಚಿಸಿಕೊಳ್ಳುತ್ತಾ ಹೋದರೇ ಹೊರತು ಪ್ರಜೆಗಳ ಅಭಿಪ್ರಾಯಗಳಿಗೆ ಮನ್ನಣೆ ನೀಡಲೇ ಇಲ್ಲ. ಇಪ್ಪತ್ತನೇ ಶತಮಾನ ಕೊನೆಗೊಂಡರೂ ರಾಜವರ್ಗದ ಈ ಪ್ರವೃತ್ತಿ ಕೊನೆಗಾಣಲೇ ಇಲ್ಲ. ಸಂವಿಧಾನ- ಕಾನೂನುಗಳ ಮೂಲಕವೇ ಪ್ರಜೆಗಳನ್ನು, ಬಂಡಾಯಗಾರರನ್ನು ಹದ್ದುಬಸ್ತಿನಲ್ಲಿಡುವ ಪ್ರಯತ್ನದಲ್ಲಿ ಯಶಸ್ವಿಯಾದರು. ಆದರೆ ಇಪ್ಪತ್ತೊಂದನೇ ಶತಮಾನದ ಆರಂಭವು ನೇಪಾಳಕ್ಕೂ ಸಹ ಹೊಸದು ಆರಂಭವೊಂದನ್ನು ನೀಡಿತು. ತೀವ್ರಗೊಂಡ ಮಾವೋವಾದಿ ದಂಗೆ 2008ರಲ್ಲಿ ದೇಶವು ಗಣರಾಜ್ಯಗೊಳ್ಳುವಂತೆ ಮಾಡುವಲ್ಲಿ ಫಲಪ್ರದವಾಯಿತು. ಇದರಿಂದಾಗಿ ರಾಜಪ್ರಭುತ್ವ ಕೊನೆಗೊಂಡಿತು. ನಿಜಾರ್ಥದ ಪ್ರಜಾಪ್ರಭುತ್ವ ಸಾಕಾರಗೊಂಡಿತು.

2015ರಲ್ಲಿ ಶಾಶ್ವತವಾದ ಹೊಸ ಸಂವಿಧಾನವನ್ನು ನೇಪಾಳ ರೂಪಿಸಿಕೊಂಡಿದೆ. ನೇಪಾಳದ ರಾಷ್ಟ್ರಧ್ವಜದ ಆಕಾರ ಅತೀ ವಿಶಿಷ್ಟವಾಗಿದೆ. ವಿಶ್ವದ ಎಲ್ಲಾ ರಾಷ್ಟ್ರಗಳ ಧ್ವಜಗಳೂ ಆಯತಾಕಾರದಲ್ಲಿವೆ. ಆದರೆ ಆಯತಾಕಾರದಲ್ಲಿಲ್ಲದ ವಿಶ್ವದ ಏಕೈಕ ರಾಷ್ಟ್ರಧ್ವಜ ನೇಪಾಳದ್ದು. ಇದು ಎರಡು ತ್ರಿಕೋನಗಳಿಂದ ಮಾಡಲ್ಪಟ್ಟಿದೆ. ಇದರಿಂದಾಗಿ ಪಗೋಡಾ ಆಕೃತಿಯಲ್ಲಿದ್ದಂತೆ ತೋರುತ್ತದೆ. ಧ್ವಜವು ಸೂರ್ಯ ಮತ್ತು ಚಂದ್ರರ ವಿನ್ಯಾಸವನ್ನು ಹೊಂದಿ ಆಕರ್ಷಕವಾಗಿದೆ. ನೀಲಿ ಮತ್ತು ಕೆಂಪು ಬಣ್ಣಗಳಿಂದ ಕೂಡಿದೆ. ನೀಲಿ ಬಣ್ಣವು ಶಾಂತಿಯ ಸಂಕೇತವಾಗಿದ್ದರೆ, ನೇಪಾಳದ ಜನರ ಧೈರ್ಯ ಮನೋಭಾವದ ಸೂಚಕವಾಗಿ ಕೆಂಪು ಬಣ್ಣವಿದೆ.

(ಕಠ್ಮಂಡು)

ನೇಪಾಳದ ವೈವಿಧ್ಯತೆಗೆ ಏಷ್ಯನ್ ವಲಸೆ ಪ್ರಮುಖ ಕಾರಣವಾಗಿದೆ. ಟಿಬೆಟ್‌ನಲ್ಲಿದ್ದ ಏಷ್ಯನ್ ಜನಾಂಗದ ಜನರು ಭಾರೀ ಸಂಖ್ಯೆಯಲ್ಲಿ ನೇಪಾಳಕ್ಕೆ ವಲಸೆ ಹೋದದ್ದು ಮೊದಲ ಹಂತವಾದರೆ, ಉತ್ತರ ಭಾರತದ ಇಂಡೋ ಆರ್ಯನ್ ಜನಾಂಗಗಳು ನೇಪಾಳದಲ್ಲಿ ತಮ್ಮ ಶಾಶ್ವತ ನೆಲೆಯನ್ನು ಕಂಡುಕೊಂಡದ್ದು ಇನ್ನೊಂದು ಹಂತ. ಈ ಎರಡೂ ಜನಾಂಗಗಳು ನೇಪಾಳಕ್ಕೆ ವಲಸೆ ಹೋಗುವ ಮೊದಲು ನೆವಾರ್ ಮತ್ತು ಥರಸ್ ಎನ್ನುವ ಜನಾಂಗೀಯ ಗುಂಪು ನೇಪಾಳದಲ್ಲಿತ್ತು. ಅಲ್ಲಿಗೆ ಇಂಡೋ ಆರ್ಯನ್ ಮತ್ತು ಟಿಬೆಟಿಯನ್ ಜನಾಂಗ ನೇಪಾಳೀ ಸಂಸ್ಕೃತಿಯಲ್ಲಿ ಪಾಲು ಪಡೆಯುವುದಕ್ಕೂ ಮೊದಲೇ ಇನ್ನೊಂದು ಜನಾಂಗೀಯ ಗುಂಪು ಅಲ್ಲಿಯ ಸಂಸ್ಕೃತಿಯಲ್ಲಿ ಬೆರೆತುಹೋಗಿತ್ತು ಎನ್ನುವುದು ಸ್ಪಷ್ಟ. ಇದರಿಂದಾಗಿ ನೇಪಾಳದಲ್ಲಿ ವಿವಿಧ ಭಾಷೆಗಳು, ಜನಾಂಗಗಳು ಮತ್ತು ಧರ್ಮಗಳು ರೂಪು ತಳೆಯುವಂತಾಗಿದೆ. ಆದ್ದರಿಂದ ನೇಪಾಳದ ಸಾಂಸ್ಕೃತಿಕ ಬಹುತ್ವವು ನೆರೆಹೊರೆಯ ದೇಶಗಳ ವಲಸೆಗಾರರಿಂದ ಸಾಧಿತವಾಗಿದೆ ಎನ್ನುವುದು ಸ್ಪಷ್ಟ. ಇದರಲ್ಲಿ ಉತ್ತರ ಭಾರತದಿಂದ ಅಲ್ಲಿಗೆ ತೆರಳಿ, ಅಲ್ಲಿನ ನಿವಾಸಿಗಳೆಂಬ ಹಣೆಪಟ್ಟಿ ಕಟ್ಟಿಕೊಂಡ ಇಂಡೋ ಆರ್ಯನ್ ಜನಾಂಗದವರು, ಅದರಲ್ಲಿಯೂ ವಿಶೇಷವಾಗಿ ಪಹಾರಿಗಳು, ತಮ್ಮ ಸಾಮಾಜಿಕ ಸ್ಥಾನಮಾನಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಇವರು ಛೇತ್ರಿ ಬ್ರಾಹ್ಮಣ ಸಮುದಾಯದವರಾಗಿದ್ದು, ನೇಪಾಳಕ್ಕೆ ಹೋದ ಮೇಲೆ ಇನ್ನಷ್ಟು ಪ್ರತಿಷ್ಠೆ ಇವರ ಪಾಲಿಗೆ ಸಂದಿದೆ.

ನೇಪಾಳದಲ್ಲಿ ಹಿಂದೂ ಹಿನ್ನೆಲೆಯ ಸಮುದಾಯಗಳಿಗೆ ಆಡಳಿತಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಉನ್ನತ ಸ್ಥಾನಮಾನಗಳನ್ನು ಪಡೆಯುವ ಅವಕಾಶವಿದೆ. 2008ರಲ್ಲಿ ನೇಪಾಳವನ್ನು ಜಾತ್ಯತೀತ ರಾಷ್ಟ್ರವೆಂದು ಸಂವಿಧಾನಾತ್ಮಕವಾಗಿ ಮಾನ್ಯ ಮಾಡಲಾಗಿದೆ. ಆದರೆ ಸೈದ್ಧಾಂತಿಕವಾಗಿ ಅದು ಈಗಲೂ ಹಿಂದೂ ರಾಷ್ಟ್ರ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಕಾನೂನುಗಳಾಗಲಿ, ನಿಯಮಗಳಾಗಲಿ ಅದೆಷ್ಟೇ ಬಿಗಿಯಾಗಿದ್ದರೂ ಮನುಷ್ಯರ ಮಾನಸಿಕ ಸ್ಥಿತಿಯನ್ನು, ಭಾವನಾತ್ಮಕತೆಯನ್ನು ಅಷ್ಟೊಂದು ಸುಲಭವಾಗಿ ಬದಲಿಸಲಾರವು. ಈ ಇಂಡೋ ಆರ್ಯನ್ ಜನಾಂಗದವರು ಸಂಪೂರ್ಣ ನೇಪಾಳವನ್ನು ಆವರಿಸಿಕೊಂಡಿದ್ದಾರೆ. ಆದರೆ ಟಿಬೆಟೋ ನೇಪಾಳಿಗಳೆಂದು ಕರೆಸಿಕೊಳ್ಳುವ ಟಿಬೆಟ್ ಮೂಲದವರು ನೇಪಾಳದ ಕೆಲವು ಪ್ರದೇಶಗಳಿಗೆ ಮಾತ್ರವೇ ಸೀಮಿತರಾಗಿದ್ದಾರೆ. ತಮಾಂಗ್, ಲಿಂಬು, ಭುಟಿಯಾ, ರಾಯ್ ಮತ್ತು ಸನ್ವಾರ್ ಹೆಸರಿನ ಟಿಬೆಟೋ ನೇಪಾಳಿ ಗುಂಪುಗಳು ನೇಪಾಳದ ಪೂರ್ವ ಮತ್ತು ಉತ್ತರ ಭಾಗದಲ್ಲಿ ನೆಲೆನಿಂತಿದ್ದಾರೆ. ಗುರುಂಗ್ ಮತ್ತು ಮಗರ್ ಗುಂಪಿನವರು ಪಶ್ಚಿಮ ಮತ್ತು ಮಧ್ಯ ನೇಪಾಳಗಳಲ್ಲಿ ವಾಸಿಸುತ್ತಿದ್ದಾರೆ. ಬ್ರಿಟೀಷ್ ಸೇನೆಯಲ್ಲಿದ್ದ ಬಹುಪಾಲು ಪ್ರಸಿದ್ಧ ಗೂರ್ಖಾ ತುಕಡಿಗಳಲ್ಲಿ ಇದ್ದವರು ಮಗರ್, ರಾಯ್ ಮತ್ತು ಗುರುಂಗ್ ಗುಂಪುಗಳಿಂದ ಬಂದವರು. ಮೊದಲೇ ನೇಪಾಳದಲ್ಲಿ ನೆಲೆನಿಂತಿದ್ದ ನೇವಾರ್ ಗುಂಪಿನವರು ಇಂಡೋ ಆರ್ಯನ್ ಮತ್ತು ಹಿಂದೂ ಪದ್ಧತಿಗಳನ್ನು ಅನುಸರಿಸುವವರಾಗಿದ್ದಾರೆ. ಕಠ್ಮಂಡು ಕಣಿವೆಯಲ್ಲಿ ಇವರ ಪಾರಮ್ಯವಿದೆ.

ನೇಪಾಳದ ಪ್ರಧಾನ ಭಾಷೆ ನೇಪಾಳಿ ದೇಶದ ಅಧಿಕೃತ ಭಾಷೆಯ ಸ್ಥಾನಮಾನ ಗಳಿಸಿಕೊಂಡಿದೆ. ಇದನ್ನು ಗೋರ್ಖಾಲಿ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ನೇಪಾಳ, ತಾರೈ ಮತ್ತು ಮಧ್ಯ ಪರ್ವತ ಪ್ರದೇಶಗಳಲ್ಲಿ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ನೇಪಾಳಿ ಭಾಷೆ ಇಂಡೋ- ಯುರೋಪಿಯನ್ ಕುಟುಂಬದ ಇಂಡೋ- ಆರ್ಯನ್ ಶಾಖೆಗೆ ಸೇರಿದ್ದಾಗಿದೆ. ತಾರೈ ಮತ್ತು ಮಧ್ಯ ಪರ್ವತ ಪ್ರದೇಶಗಳಲ್ಲಿ ಹಲವಾರು ಉಪಭಾಷೆಗಳು ಕಂಡುಬರುತ್ತವೆ. ಉತ್ತರ ಮತ್ತು ಪೂರ್ವ ನೇಪಾಳದ ಭಾಷೆಗಳು ಪ್ರಧಾನವಾಗಿ ಟಿಬೆಟೋ- ಬರ್ಮನ್ ಕುಟುಂಬಕ್ಕೆ ಸೇರಿವೆ. ಮಗರ್, ಗುರುಂಗ್, ರಾಯ್, ಲಿಂಬು, ಸನ್ವರ್, ತಮಾಂಗ್, ನೇವಾರಿ, ಶೆರ್ಪಾ, ಥಕಲಿ ಇವುಗಳನ್ನು ಈ ಮಾದರಿಯ ಉಪಭಾಷೆಗಳಾಗಿ ಗುರುತಿಸಬಹುದು. ನೇವಾರ್ ಗುಂಪಿನವರು ಮಾತನಾಡುವ ನೇವಾರಿ ಭಾಷೆಯನ್ನು ಸಾಮಾನ್ಯವಾಗಿ ಟಿಬೆಟೊ- ಬರ್ಮನ್ ಭಾಷಾ ಕುಟುಂಬದಲ್ಲಿ ಗುರುತಿಸಲಾಗುತ್ತದೆ. ಆದರೆ ಇದು ಟಿಬೆಟೊ- ಬರ್ಮನ್ ಮತ್ತು ಇಂಡೋ- ಯುರೋಪಿಯನ್ ಈ ಎರಡೂ ಭಾಷಾ ಕುಟುಂಬಗಳಿಂದ ಪ್ರಭಾವಿತವಾಗಿರುವ ಭಾಷೆಯಾಗಿದೆ.

ನೇಪಾಳಿ ಭಾಷೆಯಲ್ಲಿ ‘ನೀವು’ ಎನ್ನುವುದನ್ನೇ ನಾಲ್ಕು ರೀತಿಯಲ್ಲಿ ಹೇಳಬಹುದಾಗಿದೆ. ಇದು ನೇಪಾಳಿ ಭಾಷೆಯ ವಿಶಿಷ್ಟ ಲಕ್ಷಣ. ‘ತಪೈ’, ‘ಹಜೂರ್’, ‘ಟನ್’ ಮತ್ತು ‘ಟಿಮಿ’ ಈ ನಾಲ್ಕು ಪದಗಳೂ ಸಹ ‘ನೀವು’ ಎನ್ನುವ ಅರ್ಥವನ್ನೇ ನೀಡುತ್ತವೆ. ವ್ಯಕ್ತಿಗಳ ಸ್ಥಾನಮಾನ ಮತ್ತು ಆ ವ್ಯಕ್ತಿಗಳ ಜೊತೆಗೆ ಇರುವ ಆತ್ಮೀಯತೆಯನ್ನು ಆಧರಿಸಿಕೊಂಡು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಪದಗಳನ್ನು ಬಳಸಲಾಗುತ್ತದೆ. ಹಿರಿಯರು, ಮೇಲಧಿಕಾರಿಗಳು ಮತ್ತು ತೀರಾ ಪರಿಚಯಸ್ಥರನ್ನು ಸಂಬೋಧಿಸುವಾಗ ‘ತಪಾಯಿ’ ಮತ್ತು ‘ಹಜೂರ್’ ಎನ್ನಲಾಗುತ್ತದೆ. ಸ್ನೇಹಿತರ ಜೊತೆಗೆ ಮಾತನಾಡುವಾಗ ‘ಟಿಮಿ’ ಪದಬಳಕೆಯಿರುತ್ತದೆ. ತಮಗಿಂತಲೂ ಕೆಳಮಟ್ಟದ ಜನರ ಜೊತೆಗಿನ ಸಂವಹನದಲ್ಲಿ ನೇಪಾಳಿಗಳು ಬಳಸುವ ಪದ ‘ಟನ್’.

ನೇಪಾಳ ಅನೇಕ ಸಂಪ್ರದಾಯ-ನಂಬಿಕೆಗಳಿಗೆ ಬದ್ಧವಾಗಿದೆ. ಪುಸ್ತಕಗಳು ತಿಳುವಳಿಕೆಯ ಮೂಲಗಳಾಗಿರುವುದರಿಂದ ಅವುಗಳನ್ನು ಗೌರವಿಸುವುದು ನೇಪಾಳದ ಸಂಸ್ಕೃತಿಯಾಗಿದೆ. ಪುಸ್ತಕವನ್ನು ತುಳಿಯುವಂತಿಲ್ಲ. ಅದರ ಮೇಲೆ ಕುಳಿತುಕೊಳ್ಳುವಂತಿಲ್ಲ. ಸರಸ್ವತಿಯು ಜ್ಞಾನ ಮತ್ತು ಕಲಿಕೆಯ ದೇವತೆ. ಅವಳು ಪುಸ್ತಕಗಳಲ್ಲಿ ನೆಲೆಸಿದ್ದಾಳೆ. ಪುಸ್ತಕಗಳಿಗೆ ಗೌರವ ತೋರದೇ ಇರುವವರು ಅಜ್ಞಾನಿಗಳಾಗುತ್ತಾರೆ ಎಂಬ ನಂಬಿಕೆ ನೇಪಾಳಿಗಳದ್ದು. ಪುಸ್ತಕಗಳಂತೆಯೇ ಗೋವುಗಳನ್ನೂ ಸಹ ನೇಪಾಳಿಗಳು ಪೂಜ್ಯ ಭಾವನೆಯಿಂದ ಕಾಣುತ್ತಾರೆ. ಇನ್ನೂ ಮದುವೆಯಾಗದ ಹುಡುಗಿಯರ ದೇಹದಲ್ಲಿ ದುರ್ಗಾ ದೇವಿ ನೆಲೆಸಿದ್ದಾಳೆ ಎಂಬ ನಂಬಿಕೆ ನೇಪಾಳದ ಹಿಂದೂಗಳಲ್ಲಿದೆ. ಈ ಕಾರಣಕ್ಕಾಗಿ ಕನ್ಯೆಯರನ್ನು ಪೂಜಿಸುವ ವಿಶಿಷ್ಟ ಸಂಪ್ರದಾಯ ನೇಪಾಳದಲ್ಲಿ ಕಂಡುಬರುತ್ತದೆ. ನೇವಾರ್ ಸಮುದಾಯಕ್ಕೆ ಸೇರಿದ ಶಾಕ್ಯ ಮತ್ತು ಬಜ್ರಾಚಾರ್ಯ ಜಾತಿಯ ಯುವತಿಯರನ್ನು ಈ ಪೂಜೆಗೆ ಆಯ್ಕೆ ಮಾಡಲಾಗುತ್ತದೆ. ಹೀಗೆ ಪೂಜೆಗೆ ಆಯ್ಕೆಯಾದ ಕುಮಾರಿಯರು ಪೂಜೆಗೂ ಮೊದಲು ಪುರೋಹಿತರು ಮತ್ತು ಅವರ ಪರಿಚಾರಕರ ಜೊತೆಗೆ ವಿಶೇಷ ಮನೆಯಲ್ಲಿ ವಾಸವಿರುತ್ತಾರೆ. ಈ ಕುಮಾರಿಯರ ಪಾದಗಳು ನೆಲವನ್ನು ಸೋಕುವಂತಿಲ್ಲ. ಈ ವಿಚಾರದಲ್ಲಿ ಅವರ ಪರಿಚಾರಕರು ನಿಗಾ ವಹಿಸುತ್ತಾರೆ. ಪೂಜೆಗೆ ಮೊದಲು ಮತ್ತು ಪೂಜೆಯ ಸಮಯದಲ್ಲಿ ಅವರನ್ನು ಎತ್ತಿಕೊಂಡೇ ಎಲ್ಲಾ ಕಡೆಗೂ ಕರೆದೊಯ್ಯಲಾಗುತ್ತದೆ. ವಿಶೇಷ ಪೂಜೆ ನಡೆದ ಬಳಿಕ ದೇವಿಯಾಗಿ ಗುರುತಿಸಿಕೊಂಡ ಹುಡುಗಿ ಬಂದ ಭಕ್ತರಿಗೆ ಆಶೀರ್ವಾದ ಮಾಡುತ್ತಾಳೆ. ಪಟಾನ್, ಭಕ್ತಪುರ್ ಪ್ರದೇಶಗಳಲ್ಲಿ ಪೂಜೆಗೆ ಆಯ್ಕೆಯಾದ ಕುಮಾರಿಯರಿದ್ದರೂ ಹೆಚ್ಚಿನ ಪ್ರಾಶಸ್ತ್ಯ ಇರುವುದು ಕಠ್ಮಂಡು ಕಣಿವೆಯ ಕುಮಾರಿಗೆ. ಇವಳನ್ನು ಜೀವಂತ ದೇವತೆ ಎಂದೇ ಪರಿಗಣಿಸಲಾಗಿದೆ.

ಕೆಲವು ನಿರ್ಬಂಧಗಳು ನೇಪಾಳದ ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿವೆ. ಸಾಂಪ್ರದಾಯಿಕ ಮೌಲ್ಯಗಳೇ ಸರ್ವಕಾಲಕ್ಕೂ ಆಧಾರ ಎಂಬ ಗೊಡ್ಡುನಂಬಿಕೆಗೆ ಜೋತುಬಿದ್ದಿರುವ ನೇಪಾಳದಲ್ಲಿ ಜಾತಿಪದ್ಧತಿಯ ಅನಿಷ್ಟಗಳು ಇನ್ನೂ ಕಂಡುಬರುತ್ತವೆ. ನಾಲ್ಕು ಬಗೆಯ ಜಾತಿಗಳನ್ನು ಹುಟ್ಟುಹಾಕಿ, ಬೆಳೆಸುವ ಮೂಲಕ ಇಡಿಯ ಸಮಾಜವನ್ನು ಒಡೆದುಹಾಕಲಾಗಿದೆ. ಈ ರೀತಿಯ ಸಾಮಾಜಿಕ ವ್ಯವಸ್ಥೆಯನ್ನು ಉಂಟುಮಾಡಿರುವುದರ ಜೊತೆಗೆ ಜಾತಿಗೆ ಸಂಬಂಧಪಟ್ಟ ನಿರ್ಬಂಧಗಳನ್ನು ಈ ಕಾಲಘಟ್ಟದಲ್ಲಿಯೂ ಉಳಿಸಿಕೊಂಡಿದೆ. ನಾಲ್ಕು ಜಾತಿಗಳಲ್ಲಿ ಉನ್ನತ ಜಾತಿಗಳು ಮತ್ತು ಕೆಳಜಾತಿಗಳೆಂಬ ವಿಂಗಡಣೆಯಿದೆ. ಉನ್ನತ ಜಾತಿಯ ಜನರನ್ನು ಕೆಳಜಾತಿಯ ಜನರಿಗಿಂತ ಶ್ರೇಷ್ಠರು ಎಂದು ಪರಿಗಣಿಸಲಾಗಿದೆ. ಈ ಮೂಲಕ ಅಸಮಾನತೆಗೆ ಅವಕಾಶ ಮಾಡಿಕೊಡಲಾಗಿದೆ. ಈಗಲೂ ಕೂಡಾ ಅಸ್ಪೃಶ್ಯತೆಯ ಆಚರಣೆಗಳು ನಡೆಯುತ್ತಲೇ ಇವೆ.

ನೇಪಾಳದಲ್ಲಿ ಪ್ರೀತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವುದಕ್ಕೆ ಅವಕಾಶಗಳಿಲ್ಲ. ಹುಡುಗ ಮತ್ತು ಹುಡುಗಿ ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರರ ಬಗೆಗಿರುವ ಆಕರ್ಷಣೆಯನ್ನು ಯಾವುದೇ ರೀತಿಯಲ್ಲೂ ತೋರ್ಪಡಿಸುವಂತಿಲ್ಲ. ಅಂದರೆ ಒಬ್ಬರು ಇನ್ನೊಬ್ಬರ ಹೆಗಲ ಮೇಲೆ ಕೈಹಾಕುವುದು, ತಬ್ಬಿಕೊಳ್ಳುವುದು, ಚುಂಬಿಸುವುದು ಇವೆಲ್ಲವೂ ನೇಪಾಳದಲ್ಲಿ ಬಾಹಿರವಾದದ್ದು. ಇಂತಹ ವರ್ತನೆಗಳನ್ನು ವಿರೋಧಿಸಲಾಗುತ್ತದೆ.

ಹೆಚ್ಚಿನ ದೇಶಗಳಲ್ಲಿ ಭಾನುವಾರ ರಜಾದಿನವಾಗಿದೆ. ಆದರೆ ನೇಪಾಳ ಈ ವಿಷಯದಲ್ಲಿ ಭಿನ್ನ. ನೇಪಾಳದ ಜನರು ಭಾನುವಾರ ಕೆಲಸ ಮಾಡುತ್ತಾರೆ. ಅವರ ಪಾಲಿಗೆ ಶನಿವಾರ ರಜಾದಿನವಾಗಿದೆ. ಯಾಕೆ ನೇಪಾಳಿಗಳು ಭಾನುವಾರವನ್ನು ಕೈಬಿಟ್ಟು ಶನಿವಾರವನ್ನೇ ರಜಾದಿನವಾಗಿ ಆಯ್ಕೆ ಮಾಡಿದ್ದಾರೆ ಎನ್ನುವುದನ್ನು ಅವಲೋಕಿಸಿಕೊಂಡಾಗ ನಂಬಿಕೆಯೊಂದು ಇದರ ಹಿಂದಿನ ಕಾರಣವಾಗಿರುವುದು ತಿಳಿದುಬರುತ್ತದೆ. ಹಿಂದೂ ನಂಬಿಕೆಯನ್ನು ಆಧರಿಸಿಕೊಂಡು ಹೇಳುವುದಾದರೆ ಶನಿವಾರದ ಅಧಿಪತಿ ಶನಿದೇವ ಅಥವಾ ಶತೃನ್. ಶನಿದೇವ ನ್ಯಾಯದ ಅಧಿದೇವತೆಯಾಗಿದ್ದಾನೆ. ಈ ದಿನ ಕೆಲಸ ಮಾಡುವಾಗ ಏನಾದರೂ ತಪ್ಪು ಸಂಭವಿಸಿದರೆ ಆ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಶನಿದೇವ ದುರದೃಷ್ಟವನ್ನು ತರುತ್ತಾನೆ ಎಂಬ ಭಯ ಇಲ್ಲಿನ ಜನರಲ್ಲಿದೆ. ಕೆಲಸ ಮಾಡಿ ದುರದೃಷ್ಟವನ್ನು ಆಹ್ವಾನಿಸುವುದಕ್ಕಿಂತ ಕೆಲಸವನ್ನೇ ಮಾಡದೆ ಅಪಾಯದಿಂದ ಪಾರಾಗುವುದು ಒಳ್ಳೆಯದು ಎಂಬ ಭಾವನೆಯಿಂದ ನೇಪಾಳಿಗಳು ಶನಿವಾರವನ್ನು ರಜಾದಿನವಾಗಿ ಪರಿಗಣಿಸಿದ್ದಾರೆ.

ವಿಶ್ವದ ರಾಷ್ಟ್ರಗಳೆಲ್ಲವೂ ಗ್ರಾಮೀಣ ಸಂಸ್ಕೃತಿಯನ್ನು ಕೈಬಿಟ್ಟು ನಗರ ಸಂಸ್ಕೃತಿಯ ಕಡೆಗೆ ಮುಖ ಮಾಡುತ್ತಿವೆ. ಆದರೆ ನೇಪಾಳ ಈ ವಿಚಾರದಲ್ಲಿ ಉಳಿದ ರಾಷ್ಟ್ರಗಳಿಗಿಂತ ಭಿನ್ನವಾಗಿದೆ. ಸಾಂಪ್ರದಾಯಿಕವಾದ ಮನಃಸ್ಥಿತಿಯನ್ನು ನೇಪಾಳ ಇನ್ನೂ ಉಳಿಸಿಕೊಂಡಿದೆ. ದೇಶದ ಅಧಿಕ ಸಂಖ್ಯೆಯ ಜನರು ಹಳ್ಳಿಗಳಲ್ಲಿ ಬದುಕುತ್ತಿದ್ದಾರೆ. ಇನ್ನೂ ಕೆಲವರು ಸಣ್ಣ ನಗರಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. ಕಠ್ಮಂಡುವನ್ನು ಬಿಟ್ಟರೆ ಬೇರೆ ಯಾವುದೇ ಬೃಹತ್ ನಗರಗಳು ನೇಪಾಳದಲ್ಲಿ ಕಾಣಸಿಗುವುದಿಲ್ಲ. ನೇಪಾಲ್‌ಗಂಜ್, ಬಿರ್‌ಗಂಜ್, ಬಿರಾತ್‌ನಗರ ಮೊದಲಾದ ಕೆಲವು ಸಣ್ಣ ನಗರಗಳು ತಾರೈನಲ್ಲಿ ಕಂಡುಬರುತ್ತವೆ. ಇದು ಭಾರತ ನೇಪಾಳದ ಗಡಿಯುದ್ದಕ್ಕೂ ನೆಲೆಗೊಂಡಿರುವ ಪುಟ್ಟ ನಗರಗಳು. ಮಧ್ಯ ಪರ್ವತ ಪ್ರದೇಶದ ಕಣಿವೆಯಲ್ಲಿ ಪೊಖರಾ ಎನ್ನುವ ಸಣ್ಣ ನಗರವಿದೆ. ನೇಪಾಳದಲ್ಲಿ ಪಟ್ಟಣಗಳ ಸಂಖ್ಯೆ ಸೀಮಿತವಾಗಿದೆ ಎಂದಮಾತ್ರಕ್ಕೆ ನಗರೀಕರಣ ಪ್ರಕ್ರಿಯೆಯ ತಿಳುವಳಿಕೆಯೇ ನೇಪಾಳಿಗರಿಗೆ ಇಲ್ಲ ಎನ್ನುವ ಹಾಗೇನೂ ಇಲ್ಲ. ಹಿಟೌರಾ, ಬುಟ್ವಾಲ್, ಧರಣ್ ಮೊದಲಾದ ಗುಡ್ಡಗಾಡು ಮತ್ತು ತಪ್ಪಲು ಪ್ರದೇಶಗಳು ನಗರಗಳಾಗಿ ಮಾರ್ಪಡುವ ಉತ್ಸುಕತೆ ತೋರುತ್ತಿವೆ. ಇಂತಹ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತಿವೆ.

ನೇಪಾಳದವರ ಆಹಾರ ಪದ್ಧತಿಯಲ್ಲಿ ವೈವಿಧ್ಯತೆ ಅಷ್ಟಾಗಿ ಕಂಡುಬರುವುದಿಲ್ಲ. ತಮಗೆ ಇಷ್ಟವಾದ ಆಹಾರವನ್ನು ಯಾವತ್ತೂ ಬದಲಾಯಿಸದ ವಿಶಿಷ್ಟ ಸ್ವಭಾವ ನೇಪಾಳಿಗಳಲ್ಲಿದೆ. ಇವರು ವರ್ಷದ 365 ದಿನವೂ ದಾಲ್ ಭಾತ್ ಸೇವಿಸುತ್ತಾರೆ. ಇದರ ಜೊತೆಗೆ ಸೂಪ್ ಮತ್ತು ಕರಿಯನ್ನೂ ಸೇವಿಸುತ್ತಾರೆ. ನೇಪಾಳಿಗಳ ತಟ್ಟೆಯಲ್ಲಿ ಯಾವತ್ತೂ ಈ ದಾಲ್ ಭಾತ್ ತಪ್ಪುವುದೇ ಇಲ್ಲ. ಇದಕ್ಕೆ ಕಾರಣವೂ ಇದೆ. ದಾಲ್ ಭಾತ್‌ನಲ್ಲಿ ಕಾರ್ಬೋಹೈಡ್ರೇಟ್ ಸಮೃದ್ಧವಾಗಿದೆ. ಹೆಚ್ಚಿನ ನೇಪಾಳಿಗಳು ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಇವರ ಈ ಜೀವನಶೈಲಿಗೆ ದಾಲ್ ಭಾತ್ ಅಗತ್ಯವಾಗಿದೆ. ಇದು ಹೊಟ್ಟೆ ತುಂಬಿಸುವುದಷ್ಟೇ ಅಲ್ಲದೆ ಶಕ್ತಿಯನ್ನೂ ನೀಡುತ್ತದೆ. ಆಹಾರದ ವಿಷಯದಲ್ಲಿ ನೇಪಾಳ ಕಟ್ಟುನಿಟ್ಟಿನ ನಿಯಮವನ್ನು ಹೊಂದಿದೆ. ಒಮ್ಮೆ ಆಹಾರ ಸೇವಿಸಲು ಪ್ರಾರಂಭಿಸಿದ ನಂತರ ತಟ್ಟೆಯಿಂದ ಆಹಾರವನ್ನು ಇನ್ನೊಬ್ಬರ ಜೊತೆಗೆ ಹಂಚಿಕೊಳ್ಳುವಂತಿಲ್ಲ. ಎಂಜಲಾದ ಆಹಾರವನ್ನು ಇನ್ನೊಬ್ಬರಿಗೆ ಸೇವಿಸಲು ಕೊಡುವುದು ಅವಮಾನಕರ ಎಂಬ ಭಾವನೆ ಇಲ್ಲಿಯ ಜನರದ್ದು. ಇಂತಹ ಆಹಾರ ಅಶುದ್ಧ ಎನ್ನುವುದಾಗಿಯೂ ಪರಿಗಣಿಸಲಾಗುತ್ತದೆ. ಇದನ್ನು ನೇಪಾಳೀ ಭಾಷೆಯಲ್ಲಿ ‘ಜುಥೋ’ ಎಂದು ಕರೆಯಲಾಗುತ್ತದೆ. ಅಂದರೆ ಅಶುದ್ಧ ಎಂದರ್ಥ. ಆಹಾರವನ್ನು ಬಡಿಸಲು ಬಳಸುವ ಚಮಚಾ- ನೀರು ಕುಡಿಯುವ ಲೋಟಗಳನ್ನೂ ಸಹ ಎಂಜಲು ಮಾಡುವಂತಿಲ್ಲ. ಬಾಯಿಗೆ ಮುಟ್ಟಿಸದೆಯೇ ಬಳಸಬೇಕೆಂಬ ನಿಯಮ ಇದೆ. ರಕ್ತಸಂಬಂಧಿಗಳಾಗಿದ್ದರೆ, ತೀರಾ ಆತ್ಮೀಯರಾಗಿದ್ದರೆ ಈ ನಿಯಮದಲ್ಲಿ ಸಡಿಲಿಕೆಯೂ ಇದೆ.

ನೇಪಾಳಿಗಳು ಎಡಗೈಯ್ಯನ್ನು ಅಶುದ್ಧವೆಂದು ಪರಿಗಣಿಸಿದ್ದಾರೆ. ಆದ್ದರಿಂದ ತಿನ್ನಲು ಬಲಗೈಯ್ಯನ್ನೇ ಬಳಸಬೇಕು ಎಂಬ ನಿಯಮವಿದೆ. ಮಲವಿಸರ್ಜನೆಯ ನಂತರದ ಶುಚಿತ್ವಕ್ಕೆ ಬಳಕೆಯಾಗುವ ಎಡಗೈ ಶುದ್ಧವಾಗಿರುವುದಿಲ್ಲ ಎಂಬ ಭಾವನೆ ಇಲ್ಲಿನವರದ್ದು. ಉಡುಗೊರೆ ಮತ್ತು ವಸ್ತುಗಳನ್ನು ಸ್ವೀಕರಿಸುವಾಗ ಇಲ್ಲವೇ ಇತರರಿಗೆ ಏನನ್ನಾದರೂ ಕೊಡುವಾಗಲೂ ಸಹ ಬಲಗೈಯ್ಯನ್ನೇ ಬಳಸಬೇಕು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ನೇಪಾಳಿಗಳು.

ಭಾರತದಂತೆಯೇ ನೇಪಾಳವೂ ಸಹ ಯುವಜನರಿಂದ ತುಂಬಿಕೊಂಡಿರುವ ದೇಶ. ಒಟ್ಟು ಜನಸಂಖ್ಯೆಯನ್ನು ಐದು ಭಾಗಗಳನ್ನಾಗಿಸಿದರೆ ಅದರಲ್ಲಿ ಮೂರು ಭಾಗದಷ್ಟು ಜನರು ಮೂವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಜನನ ಪ್ರಮಾಣ ವಿಶ್ವದ ಉಳಿದ ರಾಷ್ಟ್ರಗಳಲ್ಲಿ ಎಷ್ಟಿದೆಯೋ ಸರಿಸುಮಾರು ಅಷ್ಟೇ ಇದೆ. ಆದರೆ ಮರಣ ಪ್ರಮಾಣ ಉಳಿದ ರಾಷ್ಟ್ರಗಳಿಗಿಂತ ಕಡಿಮೆ. ನೇಪಾಳದಲ್ಲಿ ಪುರುಷರು ಸುಮಾರು ಎಪ್ಪತ್ತು ವರ್ಷ ಬದುಕಿದರೆ, ಮಹಿಳೆಯರು ಇನ್ನೂ ಎರಡು ವರ್ಷ ಜಾಸ್ತಿಯೇ ಬದುಕುತ್ತಾರೆ. ಹಿಂದೂಗಳು ಬಹುಸಂಖ್ಯಾತರಾಗಿರುವ ದೇಶ ನೇಪಾಳ. ಇಲ್ಲಿ ಹಿಂದೂಗಳ ಸಂಖ್ಯೆ ಸುಮಾರು ಎಂಬತ್ತೊಂದು ಶೇಕಡಾ. ಬೌದ್ಧಧರ್ಮೀಯರು ವಿರಳ ಸಂಖ್ಯೆಯಲ್ಲಿದ್ದಾರೆ. ಇತರ ಧಾರ್ಮಿಕ ನಂಬಿಕೆಗಳನ್ನು ಇಟ್ಟುಕೊಂಡವರೂ ಇದ್ದಾರೆ. ಯಾವ ಧಾರ್ಮಿಕ ನಂಬಿಕೆಯ ಕಟ್ಟುಪಾಡಿಗೂ ಒಳಗಾಗದಿರುವ ನಾಸ್ತಿಕರೂ ಇದ್ದಾರೆ. ಭಾರತೀಯ ಇಂಡೋ ಆರ್ಯನ್ ಜನಾಂಗಗಳು ನೆಲೆನಿಂತಿರುವ ಪ್ರದೇಶಗಳಲ್ಲಿ ಹಿಂದೂಗಳು ಮತ್ತು ಟಿಬೆಟಿಯನ್ ಜನಾಂಗದವರು ಇರುವ ಪ್ರದೇಶಗಳಲ್ಲಿ ಬೌದ್ಧರು ಕಾಣಸಿಗುತ್ತಾರೆ.

ನೇಪಾಳದ ಜನರು ಶ್ರಮಜೀವಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಪರ್ವತ ಪ್ರದೇಶಗಳನ್ನು ಅವರು ಏರುವ ಮತ್ತು ಇಳಿಯುವ ರೀತಿ ಎಂಥವರಲ್ಲೂ ಅಚ್ಚರಿ ಮೂಡಿಸುತ್ತದೆ. ಮೊದಮೊದಲು ಪರ್ವತಾರೋಹಣಕ್ಕೆ ಹೊರಟವರಿಗೆ ಖಾಲಿ ಕೈಯ್ಯಲ್ಲಿ ಪರ್ವತದ ತುದಿ ತಲುಪುವುದೇ ಅಬ್ಬಬ್ಬಾ ಎನಿಸಿಬಿಡುತ್ತದೆ. ಆದರೆ ನೇಪಾಳದವರು ತಮ್ಮ ಬೆನ್ನ ಮೇಲೆ ಭಾರವಾದ ಚೀಲಗಳನ್ನು ಇಲ್ಲವೇ ವಸ್ತುಗಳನ್ನು ಹೊತ್ತುಕೊಂಡು ಪರ್ವತವನ್ನು ಏರುತ್ತಾರೆ; ಇಳಿಯುತ್ತಾರೆ. ಹೀಗೆ ಅವರು ಹೊರುವ ಭಾರವು ಅನೇಕ ಸಂದರ್ಭಗಳಲ್ಲಿ ಅವರ ತೂಕಕ್ಕಿಂತ ನಾಲ್ಕು ಪಟ್ಟು ಇಲ್ಲವೇ ಐದು ಪಟ್ಟು ಅಧಿಕವಾಗಿರುತ್ತದೆ.

ಕೃಷಿಯಾಧಾರಿತ ಉದ್ಯೋಗಗಳನ್ನೇ ನಂಬಿಕೊಂಡಿರುವ ನೇಪಾಳದಲ್ಲಿ ಕೈಗಾರಿಕೆಗಳು ಇನ್ನೂ ಬೆಳವಣಿಗೆಯ ಹಂತದಲ್ಲಿವೆ. ಕೈಗಾರಿಕಾ ಉತ್ಪಾದನೆಗಳು ದೇಶದ ಆದಾಯಕ್ಕೆ ಸಣ್ಣ ಕೊಡುಗೆ ನೀಡುತ್ತಿವೆ. ಹೆಚ್ಚಿನ ಕೈಗಾರಿಕೆಗಳು ಕೃಷಿ ಉತ್ಪನ್ನಗಳನ್ನೇ ನಂಬಿಕೊಂಡಿವೆ. ಸಕ್ಕರೆ, ಸೆಣಬು, ಇಟ್ಟಿಗೆ, ಟೈಲ್, ಕಾಗದ, ಸಿಗರೇಟ್, ಸಿಮೆಂಟ್, ಬಿಯರ್ ಮೊದಲಾದವುಗಳನ್ನು ಉತ್ಪಾದಿಸುವ ಕೈಗಾರಿಕೆಗಳಿವೆ. ಹೆಚ್ಚಿನ ಕೈಗಾರಿಕೆಗಳನ್ನು ನಿಭಾಯಿಸುತ್ತಿರುವುದು ಸರ್ಕಾರವಲ್ಲ; ಖಾಸಗಿಯವರು.

ನೇಪಾಳ ಸಮೃದ್ಧವಾದ ಅರಣ್ಯ ಪ್ರದೇಶದಿಂದ ಕೂಡಿದೆ. ನೇಪಾಳದ ಒಟ್ಟು ವಿಸ್ತೀರ್ಣದಲ್ಲಿ ಮೂರನೇ ಒಂದು ಭಾಗ ಅರಣ್ಯದಿಂದ ಕೂಡಿದೆ. ಬಹುತೇಕ ಅರಣ್ಯ ಪ್ರದೇಶಗಳು ಸರ್ಕಾರೀ ಸ್ವಾಮ್ಯದಲ್ಲಿವೆ. ಅರಣ್ಯಗಳು ನೇಪಾಳದ ಪಾಲಿಗೆ ನಿಜವಾಗಿಯೂ ಸಂಪತ್ತಿನ ಮೂಲವಾಗಿದ್ದು, ಅಧಿಕ ಆದಾಯವನ್ನು ತರುತ್ತಿವೆ. ಅರಣ್ಯ ಉತ್ಪನ್ನಗಳನ್ನು ಭಾರತಕ್ಕೆ ರಫ್ತು ಮಾಡುವ ಮೂಲಕ ನೇಪಾಳ ಆದಾಯವನ್ನು ಸಂಪಾದಿಸಿಕೊಳ್ಳುತ್ತಿದೆ. ನೇಪಾಳದಿಂದ ಹೊರಹೋಗುವ ಬಹುತೇಕ ಎಲ್ಲಾ ಮರಗಳು ಬಂದು ತಲುಪುವುದು ಭಾರತವನ್ನು.

ಭಾರತದ ಜೊತೆಗೆ ಭೌಗೋಳಿಕವಾಗಿ ನಿಕಟ ಸಂಪರ್ಕ ಇರುವ ಕಾರಣದಿಂದಾಗಿ ನೇಪಾಳದ ಹೆಚ್ಚಿನ ವ್ಯಾಪಾರ ಚಟುವಟಿಕೆಗಳು ನಡೆಯುವುದು ಭಾರತದ ಜೊತೆಗೆ. ಚೀನಾ ಮತ್ತು ಅಮೇರಿಕಾ ದೇಶಗಳ ಜೊತೆಗೂ ಮಹತ್ವಪೂರ್ಣವಾದ ವ್ಯಾಪಾರ ಪ್ರಕ್ರಿಯೆಗಳನ್ನು ನಡೆಸುತ್ತದೆ ನೇಪಾಳ. ಅನೇಕ ದೇಶಗಳ ಜೊತೆಗೆ ವ್ಯಾಪಾರ ಒಪ್ಪಂದವನ್ನು ನಡೆಸಿರುವ ನೇಪಾಳ ವ್ಯಾಪಾರ ವಲಯವನ್ನು ವಿಸ್ತರಿಸುವ ಪ್ರಯತ್ನದಲ್ಲಿದೆ. ವಾಣಿಜ್ಯ ಚಟುವಟಿಕೆಗಳನ್ನು ಉತ್ತೇಜಿಸುವುದಕ್ಕಾಗಿಯೇ ನ್ಯಾಷನಲ್ ಟ್ರೇಡಿಂಗ್ ಲಿಮಿಟೆಡ್, ಸ್ಟೇಟ್ ಟ್ರೇಡ್ ಅಸೋಸಿಯೇಶನ್ ಇಂತಹ ಸಂಸ್ಥೆಗಳಿವೆ.

ನೇಪಾಳದಲ್ಲಿ ಪ್ರವಾಸೋದ್ಯಮವು ಕಠ್ಮಂಡು ಪ್ರದೇಶಕ್ಕಷ್ಟೇ ಸೀಮಿತವಾಗಿದೆ. ವಿದೇಶೀಯರನ್ನು ಆಕರ್ಷಿಸುತ್ತಿರುವ ಪ್ರದೇಶವೆಂದರೆ ಕಠ್ಮಂಡು ಮಾತ್ರ. ಹೋಟೆಲ್, ರಸ್ತೆ, ವಿಮಾನ ನಿಲ್ದಾಣ ಮೊದಲಾದ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ಹೊಂದಿರುವ ನೇಪಾಳದ ಏಕೈಕ ಪ್ರದೇಶವಿದು. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿಕೊಳ್ಳಬಲ್ಲ ಅಗಾಧ ಅವಕಾಶ ನೇಪಾಳದ ಮುಂದಿದೆ. ಮೌಂಟ್ ಎವರೆಸ್ಟ್ ಪ್ರದೇಶ, ಪೋಖರಾ ಮತ್ತು ನಾರಾಯಣಿ ಪ್ರದೇಶಗಳನ್ನು ಉತ್ತಮ ರೀತಿಯಲ್ಲಿ ತಯಾರುಗೊಳಿಸಿದರೆ ಪ್ರವಾಸೀ ತಾಣಗಳಾಗಿ ಜನಾಕರ್ಷಣೆಯನ್ನು ಪಡೆಯುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ನೇಪಾಳ ತನ್ನದೇ ಆದ ಕೆಲವು ಸಮಸ್ಯೆಗಳನ್ನು ಹೊಂದಿರುವುದರಿಂದ ಅಲ್ಲಿಯ ಆರ್ಥಿಕ ಅಭಿವೃದ್ಧಿ ನಿರೀಕ್ಷೆಯ ಮಟ್ಟದಲ್ಲಿಲ್ಲ. ನೇಪಾಳದ ಭೂಮಿ ಆಗಾಗ ಕುಸಿಯುತ್ತಿದೆ. ಆರ್ಥಿಕ ಚಟುವಟಿಕೆಗಳಿಗೆ ಅತ್ಯಗತ್ಯವಾದ ಸಂಪನ್ಮೂಲಗಳ ಕೊರತೆ ಇದೆ. ಕೆಲವು ಪ್ರದೇಶಗಳಲ್ಲಿ ಸಾರಿಗೆ ಸಂಪರ್ಕಕ್ಕೆ ಅವಕಾಶವೇ ಇಲ್ಲದಂತಹ ಸ್ಥಿತಿ ಇದೆ. ಈ ಎಲ್ಲಾ ಅಂಶಗಳು ನೇಪಾಳದ ಆರ್ಥಿಕ ಪ್ರಗತಿಗೆ ಇರುವ ಅಡಚಣೆಗಳು. ಇದರ ಪರಿಣಾಮವಾಗಿ ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿ ನೇಪಾಳ ಕಾಣಿಸಿಕೊಳ್ಳುವಂತಾಗಿದೆ. ಕೃಷಿ ಉತ್ಪನ್ನಗಳನ್ನು ರಫ್ತು ಮಾಡುವ ನೇಪಾಳ ಮೂಲಭೂತ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಈ ವಿಚಾರ ನೇಪಾಳದ ಆರ್ಥಿಕತೆಯ ವಾಸ್ತವ ಚಿತ್ರಣವನ್ನು ಒದಗಿಸಿಕೊಡುತ್ತದೆ. ನೇಪಾಳದ ಆಡಳಿತ ವ್ಯವಸ್ಥೆ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವುದಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ದೇಶದ ಹಣಕಾಸಿನ ಸ್ಥಿತಿಗಳಲ್ಲಿ ಬದಲಾವಣೆ ಸಂಭವಿಸಬೇಕಾದರೆ ವ್ಯಾಪಾರಕ್ಕೆ ಪೂರಕವಾದ ವಾತಾವರಣ ನಿರ್ಮಾನಗೊಳ್ಳಬೇಕು. ಆಂತರಿಕ ಮತ್ತು ವಿದೇಶೀ ಹೂಡಿಕೆಯ ಪ್ರಮಾಣ ಹೆಚ್ಚಾಗಬೇಕು. ಇದಕ್ಕಾಗಿ ದೇಶದ ಆರ್ಥಿಕ ನೀತಿಗಳಲ್ಲಿ ಗಮನಾರ್ಹ ಮಾರ್ಪಾಡುಗಳು ಕಂಡುಬರಬೇಕು. ಆದರೆ ನೇಪಾಳ ಸರ್ಕಾರ ಈ ನೆಲೆಯಲ್ಲಿ ಕಾರ್ಯೋನ್ಮುಖವಾಗುತ್ತಿಲ್ಲ ಎನ್ನುವ ಅನಿಸಿಕೆ ಅಲ್ಲಿನವರದ್ದು. ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಲ್ಲಿನ ಸರ್ಕಾರ ವಿದೇಶಗಳಿಂದ ಅನುದಾನ ಪಡೆದುಕೊಳ್ಳುತ್ತಿದೆಯಾದರೂ ದೇಶದಲ್ಲಿ ಅಧಿಕವಾಗಿರುವ ಗ್ರಾಮೀಣ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ ಎನ್ನುವ ಅಭಿಪ್ರಾಯವಿದೆ.

ನೇಪಾಳ ಆರ್ಥಿಕತೆಯಲ್ಲಿ ಹಿಂದುಳಿದಿದ್ದರೂ ಸಹ ಕಾಲಗಣನೆಯ ವಿಚಾರದಲ್ಲಿ ಉಳಿದ ದೇಶಗಳಿಗಿಂತ ಮುಂದಿದೆ. ನೇಪಾಳದಲ್ಲಿ ಬಳಸಲಾಗುತ್ತಿರುವುದು ಬಿಕ್ರಮ್ ಸಂಬತ್ ಹೆಸರಿನ ಕ್ಯಾಲೆಂಡರನ್ನು. ಸನಾತನ ಪರಂಪರೆಯನ್ನು ಆಧರಿಸಿಕೊಂಡು ರಚಿತವಾಗಿರುವ ಸೌರ ಕ್ಯಾಲೆಂಡರ್ ಇದಾಗಿದೆ. ಈ ಕ್ಯಾಲೆಂಡರ್ ಗ್ರೆಗೋರಿಯನ್ ಅಥವಾ ಪಾಶ್ಚಾತ್ಯ ಕ್ಯಾಲೆಂಡರ್‌ಗಿಂತ ಐವತ್ತೇಳು ವರ್ಷಗಳಷ್ಟು ಮುಂದಿದೆ. ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಈಗ 2024ನೇ ವರ್ಷ ನಡೆಯುತ್ತಿದೆ. ಆದರೆ ನೇಪಾಳದ ಕ್ಯಾಲೆಂಡರ್‌ನಲ್ಲಿ ನಡೆಯುತ್ತಿರುವುದು 2081ನೇ ಇಸವಿ. ಅಂದರೆ ಉಳಿದೆಲ್ಲಾ ದೇಶಗಳಿಗಿಂತ ಅರ್ಧ ಶತಮಾನ ಮುಂದಿದೆ ನೇಪಾಳ.

ಭಾರತದಲ್ಲಿ ಯಾವ ಬಗೆಯ ಅಧ್ಯಾತ್ಮಿಕ ನಂಬಿಕೆಗಳಿವೆಯೋ ಅವುಗಳು ನೇಪಾಳದಲ್ಲಿಯೂ ಇವೆ. ನೇಪಾಳದ ಸಾಮಾಜಿಕ ವ್ಯವಸ್ಥೆ ಹೆಚ್ಚು ಕಡಿಮೆ ಭಾರತವನ್ನೇ ಹೋಲುತ್ತಿದೆ. ಭಾರತದಲ್ಲಿ ಆರ್ಥಿಕ ಅಭಿವೃದ್ಧಿಗೆ ಇರುವ ಅಡಚಣೆಗಳು ನೇಪಾಳದಲ್ಲಿಯೂ ಇವೆ. ನೇಪಾಳದ ಇತಿಹಾಸ ಅರಾಜಕತೆಯನ್ನು, ರಾಜಕೀಯ ಅವ್ಯವಸ್ಥೆಯನ್ನು ಕಂಡಿದೆ, ಅನುಭವಿಸಿದೆ. ಭಾರತವೂ ಅನುಭವಿಸಿದೆ. ಭಾರತದ ಧಾರ್ಮಿಕ ವಿನ್ಯಾಸದ ಮಾದರಿ ನೇಪಾಳದಲ್ಲಿಯೂ ಕಂಡುಬರುತ್ತದೆ. ಒಟ್ಟಾರೆಯಾಗಿ ನೇಪಾಳ ಹೇಗಿದೆ ಎಂದರೆ ಭಾರತದಂತೆಯೇ ಇದೆ. ಮತ್ತೊಂದು ಭಾರತವೇ ಆಗಿದೆ.