ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್ ಸ್ಟೋರ್ಸ್ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು ಕೂಡ ಲ್ಯಾಂಡ್ ಬ್ಯಾಂಕ್ ಕೆಲಸದಲ್ಲಿ ಎಷ್ಟೇ ಹೊತ್ತು ತಡವಾದರೂ ಒಂದು ಸಲ ಸಂಜೆ ಅಂಗಡಿಗೆ ಹೋಗಿ, ಸಾಮಾನು, ಕ್ಯಾಶ್ ಎಲ್ಲ ಲೆಕ್ಕ ನೋಡಿ ತಮ್ಮನಿಗೆ ಸಹಾಯ ಮಾಡುತ್ತಿದ್ದ. ನೋಡಿ, ಈಗಿನ ಕಾಲದಲ್ಲೂ ಇಂತಹ ಗುಣವಂತ, ನೀತಿವಂತ ಹುಡುಗರು ಇರುತ್ತಾರಾ ಅಂತ ಕಿರಂಗೂರಿನ ಸಮಸ್ತ ಪ್ರಜೆಗಳಿಗೆ ಕೊನೇ ಪಕ್ಷ ಮೂರು ನಾಲ್ಕು ಸಲವಾದರೂ ಗೋದಾದೇವಿ ಹರಿಕತೆ ಮಾಡಿ ತಿಳಿಸಿದ್ದಳು.
ಕೆ. ಸತ್ಯನಾರಾಯಣ ಹೊಸ ಕಾದಂಬರಿ “ಅಂಪೈರ್ ಮೇಡಂ” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ
ರಂಗನಾಯಕಿಯ ಅನುಮಾನವೆಂದರೆ, ಲೆಕ್ಕಾಚಾರವೆಂದರೆ, ಗೋದಾದೇವಿ ಮಗಳಿಗೆ ಒಳ್ಳೆಯ ಕೆಲಸ ಸಿಗಲಿ, ಮದುವೆ ಆಗಲಿ ಅಂತ ಕಾಯ್ತಾ ಇದ್ದಾಳೆ, ಅದಾದ ತಕ್ಷಣ ಇಲ್ಲಿಂದ ಕಳಚಿಕೊಂಡು ಹೋಗ್ತಾಳೆ, ಅಲ್ಲಿಯ ತನಕ ಎಷ್ಟಾಗುತ್ತೋ ಅಷ್ಟು ಹಿಂಸೆ, ಅವಮಾನ ಮಾಡಿಬಿಡಬೇಕು.
ಗೋದಾದೇವಿ ಮಗಳು ಶ್ರೀದೇವಿ ಕೊಂಚ ಕಿಲಾಡಿ. ರಂಗನಾಯಕಿ ಜೊತೆ ನಯವಾಗಿಯೇ ವರ್ತಿಸುವಳು. ಯಾರ ಜೊತೆಯೂ ಜಗಳ ಕಾಯುತ್ತಿರಲಿಲ್ಲ. ನಿಷ್ಠುರವಾಗಿಯೂ ಮಾತನಾಡುತ್ತಿರಲಿಲ್ಲ. ಮಾವ, ಅಜ್ಜಿ ಜೊತೆ ಕೂಡ ನಗುನಗುತಾನೇ ಮಾತು ಕತೆ. ಅವಳ ಕಣ್ಣಲ್ಲೇ ಒಂದು ರೀತಿಯ ಚಂಚಲತೆಯಲ್ಲದೆ, ಏನೋ ಯೋಚನೆ ಮಾಡುತ್ತಿರವ ಭಾವ, ಹೊಂಚು ಹಾಕುತ್ತಿರುವ ಧೋರಣೆ. ಏನಾದರೂ ಮಾಡಿ ತಮ್ಮಂದಿರನ್ನು ಚೆನ್ನಾಗಿ ಓದಿಸಬೇಕೆನ್ನುವ ಆಸೆ, ಹಠ.
ನೀವೇನೂ ಮಾಡಬೇಡಿ. ನಿಮ್ಮ ಎದುರಿಗೆ ಕುಳಿತುಕೊಂಡು ಓದಲಿ. ಒಂದು ಭಯ ಇರುತ್ತೆ. ಭಯದಿಂದ ಓದಿನ ಮೇಲೆ ನಿಗಾ ಬರುತ್ತೆ. ನಿಮ್ಮೆದುರಿಗೆ ಕೂತಿರುವಷ್ಟು ಹೊತ್ತಾದರೂ ಓದುತ್ತಾರೆ. ಇಬ್ಬರು ತಮ್ಮಂದಿರನ್ನು ನನ್ನ ಮುಂದೆ ಕರೆದುಕೊಂಡು ಬಂದು ಕುಕ್ಕು ಹಾಕುವಳು. ಇಬ್ಬರೂ ಆಟಗುಳಿಗಳು. ಸ್ಕೂಲಿನಲ್ಲಿ ಕೂಡ ಅವರಿಗೆ ಚುರುಕಾದ ಓದುವ ಮಕ್ಕಳ ಪೈಕಿ ಎಂದು ಹೆಸರಿರಲಿಲ್ಲ. ಜೊತೆಗೆ ತಿರುಗಾಡುವ ಹುಚ್ಚು. ಪುಸ್ತಕದ ಮೇಲೆ ಕಣ್ಣು ಕೂರುತ್ತಲೇ ಇರಲಿಲ್ಲ. ನಿಮಗೇನಾದರೂ ಸಾಮಾನು ತಂದುಕೊಡಬೇಕಾ, ನಿಮ್ಮ ಮನೆ ಕೆಲಸ ಏನಾದರೂ ಇದೆಯಾ ಎಂದು ಕೇಳಿ, ಏನಾದರು ನೆಪದಿಂದ ಪುಸ್ತಕ ಬಿಟ್ಟು ಓಡಿಹೋಗುವ ಆತುರ. ಹಾಗೇನಾದರೂ ಸಣ್ಣ ಪುಟ್ಟ ಕೆಲಸ ಹೇಳಿದರೆ, ಇಡೀ ದಿನ ಇಬ್ಬರೂ ಮನೆಯಿಂದ ಹೊರಗೇ ಓಡಿಬಿಡುವರು. ಇಬ್ಬರಿಗೂ ಅಣ್ಣ ವಲ್ಲಭನ ಬಗ್ಗೆಯೇ ಕುತೂಹಲ. ಹತ್ತು ಹಲವು ಪ್ರಶ್ನೆಗಳನ್ನು ಕೇಳುವರು. ಮೇಡಂ, ನೀವು ಬೆಂಗಳೂರಲ್ಲಿ ನಡೆಯುವ ಎಲ್ಲ ಮ್ಯಾಚುಗಳನ್ನು ನೋಡಿದ್ದೀರಾ? ಇಂಗ್ಲೆಂಡಿನ ಎಲ್ಲ ಪ್ಲೇಯರ್ಸ್‌ಗಳನ್ನೂ ನೋಡಿದ್ದೀರಾ? ಎಷ್ಟು ಹತ್ತಿರದಿಂದ ನೋಡಿದ್ದೀರಾ?
ಯಾವಾಗಲೂ ನಗುನಗುತಾ ಮಾತಾಡೋ ಶ್ರೀದೇವಿ ಜೊತೆ ಕುಳಿತು ಮಾತನಾಡುವ ಆಸೆ ನನಗೂ. ಆದರೆ ಅವಳು ಕೈಗೆ ಸಿಗಬೇಕಲ್ಲ! ಇದ್ದುದರಲ್ಲಿ ಶನಿವಾರ ಸಂಜೆ ಮಾತ್ರ ಮನೆಗೆ ಬೇಗ ಬರೋಳು. ಭಾನುವಾರವೆಲ್ಲ ಮನೇಲೇ ಇದ್ದರೂ ಬೆಳಿಗ್ಗೆ ಹೊತ್ತು ಎಣ್ಣೆ ಸ್ನಾನ, ಕೂದಲ ಆರೈಕೆಯ ಸಂಭ್ರಮ, ಗಡಿಬಿಡಿ. ತುಂಬಾ ಹೊತ್ತು ನೆನೆದು ಸ್ನಾನ ಮಾಡಿಕೊಂಡು, ಕೂದಲು ಹರಡಿಕೊಂಡು ಒಣಗಿಸಿಕೊಳ್ಳುತ್ತಾ ತಾರಸಿ ಮೇಲೆ ಹೋಗಿ ಓಡಾಡುತ್ತಿದ್ದಳು. ಬೀದಿಯಲ್ಲಿ ಓಡಾಡುವವರೆಲ್ಲ ಕತ್ತೆತ್ತಿ ತಾರಸಿಯ ಕಡೆಯೇ ನೋಡೋರು. ಇದೆಲ್ಲ ಮುಗಿದು ಮಧ್ಯಾಹ್ನ ಸ್ವಲ್ಪ ಹೊತ್ತು ನನ್ನ ರೂಮಿಗೆ ಬರುತ್ತಿದ್ದಳು. ಯಾವಾಗಲಾದರೂ ಒಂದು ಸಲ ಮನೆಯಿಂದ ತಿಂಡಿ ತೀರ್ಥ ತಂದುಕೊಡುತ್ತಿದ್ದಳು. ಒಬ್ಬರಿಗೇ ಅಡುಗೆ ಮಾಡಿಕೊಳ್ಳೋಕೆ ಬೇಜಾರಲ್ಲವೆ ಅಂತ ಹೇಳುವಳು. ನಮ್ಮ ಟೈಪಿಂಗ್ ಇನ್‌ಸ್ಟಿಟ್ಯೂಟ್ ಪಕ್ಕ ಒಂದು ಸರ‍್ಕ್ಯುಲೇಟಿಂಗ್ ಲೈಬ್ರರಿ ಇದೆ. ನಿಮಗೆ ಕಾದಂಬರಿಗಳನ್ನು ಓದಲು ತಂದುಕೊಡುತ್ತೇನೆ ಅಂತ ಒಂದು ಹತ್ತು ಸಲ ಹೇಳಿರಬಹುದು. ಒಂದು ಸಲವೂ ತಂದುಕೊಡಲಿಲ್ಲ. ಅದೂ ಅಲ್ಲದೆ ನಮ್ಮದೇ ಕಷ್ಟ ಕಾರ್ಪಣ್ಯಗಳು ದಿನವೂ ತುಂಬಿಕೊಂಡಿರುವಾಗ, ಪುಸ್ತಕಗಳಲ್ಲಿರುವ ಕತೆಗಳ ಕಷ್ಟವನ್ನು ಏಕೆ ಓದಬೇಕು? ನೀನೇಕೆ ಕಾದಂಬರಿಗಳನ್ನು ಓದಲು ತಂದುಕೊಡುತ್ತಿಲ್ಲ ಎಂದು ಒಂದು ಸಲವೂ ನಾನು ಶ್ರೀದೇವಿಯನ್ನು ಕೇಳಲು ಹೋಗಲಿಲ್ಲ.
ಅದೇನೋ, ಶ್ರೀದೇವಿಯ ವಿಷಯದಲ್ಲಿ ಮಾತ್ರ ನನ್ನ ಮನಸ್ಸು ಒಳ್ಳೆಯದನ್ನೇ ಯೋಚಿಸೋದು, ಬಯಸೋದು. ಅವಳಿಗೆ ಒಳ್ಳೆಯ ಕಡೆ ಮದುವೆ ಆಗಲಿ, ಹಾಯಾಗಿರಲಿ ಅಂತ ಅನಿಸೋದು. ಆದರೆ ಗೋವಿಂದರಾಜು ಮನೆಯ ಪ್ರತಿದಿನದ ಗೋಳನ್ನು ನೋಡಿದರೆ, ಶ್ರೀದೇವಿ ಕೂಡ ನನ್ನ ಹಾಗೇ ಯಾವತ್ತೂ ಮದುವೆ ಆಗೋಲ್ಲ, ಗೋವಿಂದರಾಜು ಅವಳಿಗೆ ಗಂಡು ಹುಡುಕೋಲ್ಲ, ನನ್ನ ಹಾಗೇ ಅವಳು ಇದ್ದುಬಿಡುತ್ತಾಳೆ ಅನ್ನುವ ಭಯ. ಬದುಕು ಯಾವತ್ತೂ ಏನೂ ಬದಲಾಯಿಸೋಲ್ಲ. ಎಲ್ಲರೂ ಅವರವರ ಪಾಲಿಗೆ ಬಂದ ಕಷ್ಟ-ಸುಖಾನ ಅನುಭವಿಸುತ್ತಾ ಹೆಣಗಾಡಿಕೊಂಡು ಇದ್ದುಬಿಡ್ತೀವಿ. ಯಾವುದೂ ಮುಂದಕ್ಕೆ ಹೋಗೋಲ್ಲ, ಹಿಂದಕ್ಕೂ ಬರೋಲ್ಲ. ಗೋವಿಂದರಾಜು ಮನೆ ಕೂಡ ಹಾಗೇನೇ. ಗೋವಿಂದರಾಜು ಮನೆ ಮಾತ್ರ ಯಾಕೆ, ಎಲ್ಲ ಮನೆಗಳೂ, ಎಲ್ಲ ಸಂಸಾರಗಳೂ ಹಾಗೇನೇ! ದೂರದಿಂದ ನೋಡೋಕೆ ಎಲ್ಲ ಮನೆಗಳು, ಫ್ಯಾಮಿಲಿಗಳು, ಬೇರೆ ಬೇರೆ ತರ ಕಾಣುತ್ತವೆ. ಈ ಮನೆಯವರಿಗಿಂತ, ಆ ಮನೆಯವರು, ಆ ಮನೆಯವರಿಗಿಂತ ನಮ್ಮ ಮನೆಯವರು, ಎಲ್ಲರೂ ಎಷ್ಟು ಸುಖವಾಗಿದ್ದಾರೆ, ಎಷ್ಟೊಂದು ನಯ ನಾಜೂಕು ಅನಿಸುತ್ತೆ. ಆದರೆ ಹತ್ತಿರ ಹೋಗಿ ನೋಡಿದರೆ, ನಾಲ್ಕು ಸಲ ಅವರ ಮನೆಗೆ ಹೋಗಿ ಬಂದರೆ, ಪರಿಚಯ ಸಂಬಂಧ ಚೆನ್ನಾಗಿ ಆದರೆ, ಇಲ್ಲ ಇಲ್ಲ ಇವರು ಕೂಡ ನಮ್ಮ ತರಾನೇ ಅನಿಸುತ್ತೆ. ಹಾಗೆನಿಸಿದಾಗ ಒಂದು ರೀತಿಯ ಸಮಾಧಾನ-ಸಂತೋಷವೂ ಆಗುತ್ತೆ.
ಗೋವಿಂದರಾಜು, ವಯಸ್ಸಾದ ದರ್ಪದ ದಾರ್ಷ್ಟ್ಯದ ತಾಯಿ ತೀರಿಹೋದಾಗಲೇ ಅವರ ಮನೆ ಕೂಡ ನಮ್ಮ ಮನೆ ತರಾನೇ, ಅವರು ಕೂಡ ಪ್ಯಾಲೆಸ್ ಮರಾಠಿಗಳ ತರಾನೇ ಅಂತ ನಿಜವಾಗಿ ಗೊತ್ತಾದದ್ದು. ಗೋವಿಂದರಾಜುಗೆ ಅಷ್ಟೊಂದು ಬಂಧು ಬಳಗ ಇದ್ದಾರೆ, ಮದ್ರಾಸು ಬಾಂಬೆ ಕಡೆಯಲ್ಲಿ ಇದ್ದಾರೆ ಅಂತ ನನಗೆ ಗೊತ್ತೇ ಇರಲಿಲ್ಲ. ಎಲ್ಲರೂ ಸಂಸಾರ ಸಮೇತರಾಗಿ ಬಂದರು. ಮೊದಲನೆ ಸಲ ನನ್ನ ಪುಟ್ಟ ಮನೆಯಲ್ಲಿ ನಾನಲ್ಲದೆ ಇನ್ನಿಬ್ಬರು ದೊಡ್ಡ ಹೆಣ್ಣು ಮಕ್ಕಳನ್ನು ರಾತ್ರಿ ಹೊತ್ತು ಮಲಗಿಸಿಕೊಳ್ಳಬೇಕಾಯಿತು. ದಿನಾ ತಿಥಿ, ಪೂಜೆ ಮಾಡೋಕೆ ಮಾತ್ರ ಮಂಡ್ಯದಿಂದ ಅಯ್ಯಂಗಾರ್ ಪೂಜಾರಿಗಳು ಬರುತ್ತಿದ್ದರು. ಕೊನೆ ದಿನ ಗೋವಿಂದರಾಜುವಿನ ಸ್ವಂತ ಊರಾದ ಬೆಳಕವಾಡಿಯಿಂದ ಕೂಡ ಬಂದರು. ಇವರೆಲ್ಲ ಇದ್ದಷ್ಟು ದಿನವೂ ಮನೆಯಲ್ಲಿ ಜಗಳ, ಕದನ, ರಾಮಾಯಣ, ಕಿರುಚಾಟ, ಬಾಯಿ ಬಡಿದುಕೊಳ್ಳುವುದು. ಒಬ್ಬ ತಮ್ಮನಂತೂ ಗೋವಿಂದರಾಜೂಗೆ ಚಪ್ಪಲಿಯಲ್ಲಿ ಹೊಡೀತೀನಿ ಅಂತ ಚಪ್ಪಲಿಯನ್ನು ಹುಡುಕಾಡಿದ. ಮನೇನಲ್ಲಿ ಎಷ್ಟು ಕಿರುಚಾಟ ನಡೀತಿತ್ತು ಎಂದರೆ, ಮನೆ ಮುಂದೆ ಕೂಡ ಜನ ಸೇರಿಬಿಟ್ಟರು. ಇನ್ನೊಂದು ದಿನ ಮಧ್ಯಾಹ್ನ ಊಟ ಮಾಡುತ್ತಿದ್ದಾಗ ಕೊಯಮತ್ತೂರಿನಲ್ಲಿ ಕೆಲಸದಲ್ಲಿದ್ದ ಅವರ ತಮ್ಮ ಜೋರಾಗಿ ಜಗಳ ಕಾದು, ಊಟವನ್ನು ಅರ್ಧದಲ್ಲೇ ಬಿಟ್ಟು ಹೊರಟು ಹೋದ. ರಾತ್ರಿ ಎಷ್ಟು ಹೊತ್ತಾದರೂ ಮನೆಗೆ ವಾಪಸ್ ಬರಲಿಲ್ಲ. ಊರ ಹೊರಗಿರುವ ಹೆಬ್ಬಳ್ಳದ ಹತ್ತಿರ ಹೋಗಿ ಕೂತಿದ್ದನಂತೆ. ರಾತ್ರಿ ಗದ್ದೆಗೆ ನೀರು ಬಿಡಲು ಹೋಗಿದ್ದವರೊಬ್ಬರು ಇವನನ್ನು ನೋಡಿ ಗದರಿಸಿ ಕಳಿಸಿದರಂತೆ. ಗೋವಿಂದರಾಜು ತಾಯಿ ಹತ್ತಿರ ತುಂಬಾ ಹಳೇ ಕಾಲದ ಒಡವೆ ಇದ್ದು, ಅದರು ಪಾರುಪತ್ತೇಗಾರಿಕೆಗೆ ಅಂತ ಅಷ್ಟೊಂದು ಜಗಳ, ಕದನ. ನೀನು ಕಳ್ಳ. ಒಳಗೊಳಗೇ ಸಾಕಷ್ಟು ಒಡವೆ ಲಪಟಾಯಿಸಿ ರಂಗನಾಯಕಿ ಮನೆ ಕಡೆ ಸಾಗಿಸಿದ್ದೀಯ ಅಂತ ಗೋವಿಂದರಾಜು ಮೇಲೆ ಆಪಾದನೆ. ಹೌದು, ಹೌದು, ಅಲ್ಪಸ್ವಲ್ಪ ಅಲ್ಲ, ಗೂಡೆಗಟ್ಟಲೆ ಸಾಗಿಸಿದ್ದೀನಿ. ಅದಕ್ಕೆ ಒಂದು ಲಾರಿ ಬಾಡಿಗೇಗೆ ತಗೊಂಡಿದೀನಿ ಅಂತ ಗೋವಿಂದರಾಜು ಗೊಣಗಾಟ. ತಾಯಿಯ ಒಡವೆ, ಹೆಣ್ಣು ಮಗಳಾದ ನನಗೂ ಚೂರು ಕೊಡಬೇಕು. ಅದು ಎಲ್ಲರೂ ಅನುಸರಿಸುವ ಸಂಪ್ರದಾಯ ಅಂತ ಗೋದಾದೇವಿ ಕೂಡ ಈ ಜಗಳ-ಕದನದ ಭಾಗವಾಗಿದ್ದಳು.
ಒಂದು ದಿನ ಮಧ್ಯಾಹ್ನ ಮೂರು ಮುಕ್ಕಾಲು ಗಂಟೆ. ಸ್ಕೂಲಿನ ಏಳು ಪೀರಿಯಡ್‌ಗಳು ಮುಗಿದಿವೆ. ಎಂಟನೆಯದು ನಡೀತಾ ಇದೆ. ನಾನು ಸ್ಟಾಫ್ ರೂಮಿನಲ್ಲಿ ಕುಳಿತುಕೊಂಡು ಮಕ್ಕಳ ವಿಜ್ಞಾನದ Home work ಪುಸ್ತಕವನ್ನು ತಿದ್ದುತ್ತಾ ಕೂತಿದ್ದೆ. ಗೋದಾದೇವಿ, ಶ್ರೀದೇವಿ ಇಬ್ಬರೂ ಏದುಸಿರು ಬಿಡುತ್ತಾ ಓಡಿಬಂದರು. ಶ್ರೀದೇವಿ ತಲೆ ಕೂದಲೆಲ್ಲಾ ಕೆದರಿಹೋಗಿತ್ತು. ಗೋದಾದೇವಿಯ ರವಿಕೆಯ ಮೇಲುಗಂಡಿಗಳು ಸಡಿಲವಾಗಿದ್ದವು. ಎಡಭುಜದ ಹತ್ತಿರ ರವಿಕೆ ಕೆಳಸರಿದಿತ್ತು. ಗೋದಾದೇವಿ ಅಳುತ್ತಾ ಇದ್ದಾರೆ. ಮಾತು ತೊದಲ್ತಾ ಇದೆ. ಶ್ರೀದೇವಿ ಕೂಡ ಮುಸು ಮುಸು ಅಳುತ್ತಾ ಆಗಲೋ, ಈಗಲೋ ಬೀಳಬಹುದೆನ್ನುವ ತಾಯಿಯಯನ್ನು ಹಿಡಿದುಕೊಂಡಿದ್ದಾಳೆ. ಶ್ರೀದೇವಿ ಸೋರುತ್ತಿರುವ ಮೂಗಿನ ತುದಿಯನ್ನು ಮತ್ತೆ ಮತ್ತೆ ಒರೆಸಿಕೊಳ್ಳುತ್ತಿದ್ದಾಳೆ. ಇಬ್ಬರೂ ಒಂದು ಪುಟ್ಟ ಬಟ್ಟೆ ಗಂಟಿನಲ್ಲಿ ಒಡವೆ ಕಟ್ಟಿಕೊಂಡು ಬಂದಿದ್ದರು.
ಇದೆಲ್ಲ ನನ್ನ ಮದುವೆ ಒಡವೆ. ಗಂಡನ ಕಡೆಯಿಂದ ಬಂದಿರೋದು. ಶ್ರೀದೇವಿ ಮದುವೆಗೆ ಅಂತಾ ಇಟ್ಟಿದ್ದೀನಿ. ಮದುವೆ ಆದ ಮೇಲೆ ಏನಾದರೂ ತೊಂದರೆ ಆದರೆ, ಆಪತ್‌ಧನಕ್ಕೆ ಅಂತ ಇಟ್ಟುಕೊಂಡಿದ್ದೀನಿ. ಅಣ್ಣನ ಸುಪರ್ದಿನಲ್ಲೇ ಇಟ್ಟಿದ್ದೆ. ಅತ್ತಿಗೆಯ ಹದ್ದಿನ ಕಣ್ಣಿನಿಂದ ಇಷ್ಟು ದಿನ ಕಾಪಾಡಿಕೊಳ್ಳೋಕೆ ಕಷ್ಟವಾಯಿತು. ಈಗ ಮೈದುನರು, ಭಾವಂದಿರು, ಅವರ ನಾರೀಮಣಿಯರೆಲ್ಲ ಬಂದು ಕೂತಿದ್ದಾರೆ. ಮನೆ ಮಹಾಭಾರತವಾಗಿದೆ. ನನ್ನಂತ ಬಡ ಮುಂಡೆಯ ಒಡವೇನ ಎಲ್ಲರೂ ಸೇರಿಕೊಂಡು ಲಪಟಾಯಿಸಿಬಿಟ್ಟರೆ ಏನು ಮಾಡೋದು? ನನಗೆ ನಿದ್ದೇನೇ ಬರ್ತಾ ಇಲ್ಲ. ನಿಮ್ಮ ಹತ್ತಿರ ಸದ್ಯಕ್ಕೆ ಇಟ್ಟುಕೊಂಡಿರಿ. ಜೋಪಾನವಾಗಿರಲಿ, ಯಾರಿಗೂ ಹೇಳಬೇಡಿ.
ಗೋದಾದೇವಿ ಇಷ್ಟೆಲ್ಲ ಹೇಳಿ ಕೇಳಿ ಮಾಡುವ ಹೊತ್ತಿಗೆ ಕೊನೆಯ ಎಂಟನೆಯ ಪೀರಿಯಡ್ ಕೂಡ ಮುಗಿಯುತ್ತಾ ಬಂದಿತ್ತು. ಎಲ್ಲ ಮೇಷ್ಟ್ರುಗಳು ಸ್ಟಾಫ್ ರೂಮಿಗೆ ವಾಪಸ್ ಬರ್ತಾ ಇದ್ದರು. ಮೇಷ್ಟರುಗಳೆಲ್ಲ ನಮ್ಮ ಸುತ್ತ ಸೇರಿದರು. ಕೆಲವು ಮೇಷ್ಟರುಗಳಿಗಾದರೂ ಗೋವಿಂದರಾಜು ಚೆನ್ನಾಗಿ ಗೊತ್ತಿತ್ತು. ಎಲ್ಲರೂ ಗುಂಪು ಸೇರಿ ಒಬ್ಬೊಬ್ಬರು ಒಂದೊಂದು ಮಾತಾಡಲು ಶುರು ಮಾಡಿದರು. ಗೋದಾದೇವಿ ಎಲ್ಲವನ್ನೂ ಎಲ್ಲರಿಗೂ ಮೊದಲಿಂದ ಕೊನೇ ತನಕ ಮತ್ತೆ ಮತ್ತೆ ಹೇಳುತ್ತಲೇ ಇದ್ದಳು.
ನಾನೇನೋ ಒಡವೆ ಇಟ್ಟುಕೊಂಡಿದ್ದೆ. ಅದೆಲ್ಲ ಜೋಪಾನವಾಗಿದೆಯೋ ಇಲ್ಲವೋ ಅಂತ ದಿನಕ್ಕೆ ಮೂರು ನಾಲ್ಕು ಸಲ ಬಂದು ಗೋದಾದೇವಿ ಒಡವೆ ಗಂಟು ತೆಗೆದು ಬಿಚ್ಚಿ ಒಡವೆಗಳನ್ನೆಲ್ಲ ಮತ್ತೆ ಮತ್ತೆ ಮುಟ್ಟಿ ಪರೀಕ್ಷೆ ಮಾಡೋಳು. ಪ್ರತಿಸಲ ಹೀಗೆ ಬಂದಾಗಲೂ ಹೊಸ ಹೊಸ ಚಾಡಿ ಮಾತು ಹೇಳೋರು. ದಿನಕ್ಕೆ ನಾಲ್ಕು ಸಲ, ಆರು ಸಲ ಬರೋಕೆ ಶುರು ಮಾಡಿದರು. ಏನು ಈಕೆಗೆ ನನ್ನ ಬಗ್ಗೆಯೇ ಅನುಮಾನವೇ ಅಂತ ನನಗೇ ಗಾಬರಿಯಾಯಿತು.
ಗೋವಿಂದರಾಜು ತಾಯಿ ಸತ್ತಾಗ ಸೌದೆ ಸಾಮಾನು ತರಿಸೋಕೆ, ಹೆಣ ಸುಡೋಕೆಲ್ಲ ಕಿರಂಗೂರು ಬ್ರಾಹ್ಮಣರ ನೆರವು ಪಡೆದಿದ್ದರು. ಆದರೆ ತಿಥಿ, ಸಮಾರಾಧನೆಗೆ ಒಬ್ಬರನ್ನೂ ಕೂಗಲಿಲ್ಲ. ನಮ್ಮ ಸ್ಕೂಲಿನಲ್ಲಿ ಕೆಲಸದಲ್ಲಿದ್ದ ಬ್ರಾಹ್ಮಣ ಮೇಷ್ಟ್ರುಗಳನ್ನು ಕೂಡ ಕರೆಯಲಿಲ್ಲ. ಇದೇ ಒಂದು ತಕರಾರಾಯಿತು. ತಿಥಿ, ಸಮಾರಾಧನೆ ಎಲ್ಲ ನಮ್ಮ ಮನೆ ವಿಚಾರ. ನಮ್ಮ ಧರ್ಮದ ಪ್ರಕಾರ ಮಾಡಿಕೊಂಡಿದೀವಿ. ಇತರೆಯವರನ್ನು ಯಾಕೆ ಕೂಗಬೇಕು? ಇದು ಗೋವಿಂದರಾಜು ನ್ಯಾಯ. ಅಯ್ಯಂಗಾರ್ಸ್ ಅಂದರೆ ಈ ಕಡೆಯೋರು ಅಲ್ಲವೇ ಅಲ್ಲ. ನಮ್ಮ ಲೆಕ್ಕದಲ್ಲಿ ಅವರು ಬ್ರಾಹ್ಮಣರು ಕೂಡ ಅಲ್ಲ ಅಂತ ಊರಿನವರ ತಕರಾರು. ಹೋಟೆಲಿನ ಹೆಬ್ರಿ ಮನೆಯವರಿಗೂ ಕಿರಂಗೂರು ಬ್ರಾಹ್ಮಣರು ಹೀಗೇ ಮಾಡಿದ್ರು. ಅವರೆಲ್ಲ ಮಂಗಳೂರು, ಕೊಂಕಣದ ಕಡೆಯವರು. ಸದಾ ಮೀನು ತಿನ್ನುವವರು. ಅವರೇ ಬೇರೆ, ನಾವೇ ಬೇರೆ. ಹೆಬ್ರಿ ಮನೆ ಹೆಂಗಸರನ್ನು ಗೌರಿ ಹಬ್ಬದ ದಿನ ಕೆರೆ ತಡಿಯಿಂದ ಗೌರಮ್ಮನ ಕರಕೊಂಡು ಬರೋಕೆ ಹೋದಾಗ ಜೊತೆಯಲ್ಲಿ ಕರೆದುಕೊಂಡು ಹೋಗಲಿಲ್ಲ. ಊರ ಗೌರಮ್ಮನಿಗೆ ಪೂಜೆ ಮಾಡೋಕೂ ಬಿಡಲಿಲ್ಲ. ಹಬ್ಬದ ದಿನವೇ ದೊಡ್ಡ ರಾದ್ಧಾಂತ. ಈಗ ಹೆಬ್ರಿ ಫ್ಯಾಮಿಲಿನೋರು ಊರಿನವರಿಗಿಂತ ಚೆನ್ನಾಗಿರೋ ಮನೆ ಕಟ್ಟಿಕೊಂಡಿದ್ದಾರೆ. ಅವರ ಮನೆಗೇ ಮಠದ ಸ್ವಾಮಿಗಳು ಪಾದಪೂಜೆಗೆ ಬರುತ್ತಾರೆ. ಸುತ್ತ ಮುತ್ತಲ ಗ್ರಾಮಗಳಲ್ಲಿ ಹೋಟೆಲ್ ಇಟ್ಟುಕೊಂಡಿದ್ದಾರೆ. ನಮ್ಮ ಸ್ಕೂಲಿನ ಸಮಾರಂಭಗಳಿಗೂ ಹೆಬ್ರಿ ಮನೆಯವರನ್ನು ಕೂಗುತ್ತೇವೆ. ಕಮಿಟಿಯವರು, ಗೌರ್ನಮೆಂಟ್ ಅಫಿಷಿಯಲ್ಸ್ ಜೊತೆ ಅವರು ಮುಂದಿನ ಸಾಲಿನಲ್ಲೇ ಕೂರುತ್ತಾರೆ.
ಗೋವಿಂದರಾಜೂಗೆ ಇದೆಲ್ಲ ಗೊತ್ತಿತ್ತೋ ಇಲ್ಲವೋ, ಸುಮ್ಮನೆ ನಾಲ್ಕು ಜನರ ಹತ್ತಿರ ನಿಷ್ಠುರ ಕಟ್ಟಿಕೊಂಡರು. ಅಷ್ಟು ವರ್ಷ ಸಜ್ಜನರಾವ್ ಸರ್ಕಲ್‌ನಲ್ಲಿದ್ದು, ಅಷ್ಟೊಂದು ಜನಾಂಗದವರ ಮಧ್ಯೆ ಬದುಕಿದ್ದ ನನಗೆ ಈ ರೀತಿಯ ಒಳಪಂಗಡಗಳ ಜಗಳಗಳು ಗೊತ್ತೇ ಇರಲಿಲ್ಲ. ಶೆಟ್ಟರು, ಬ್ರಾಹ್ಮಣರು ಒಬ್ಬರ ಹಿಂದೆ ಒಬ್ಬರು ಹೀಯಾಳಿಸುತ್ತಿದ್ದರು. ನಮ್ಮನ್ನು ಕೂಡ ನೀವು ಬಿಡೀಪ್ಪಾ, ಮಹಾರಾಜರ ಕಡೆಯವರು ಅಂತ ವ್ಯಂಗ್ಯ, ಗೇಲಿ ಮಾಡುತ್ತಿದರು. ಆದರೆ ಅನ್ನೆಲ್ಲ ಮರೆತುಬಿಡೋರು.
ಗೋವಿಂದರಾಜು ತಾಯಿಗೆ ವಯಸ್ಸಾಗಿತ್ತು. ಸಂಜೆ ಹೊತ್ತು ಗೋವಿಂದರಾಜು ಒಂದು ಕುರ್ಚಿ ತಂದು ಗೇಟ್ ಹತ್ತಿರ ಇಡೋರು. ಅವರ ತಾಯಿ ಕೈಯಲ್ಲಿ ಒಂದು ಬೀಸಣಿಗೆ ಹಿಡಿದುಕೊಂಡು ಎಲ್ಲ ಕಡೆಗೂ ಕಠಿಣವಾದ ದೃಷ್ಟಿ ಬೀರುತ್ತಾ ಕೂತುಕೊಳ್ಳೋರು. ಕೆಲವು ದಿವಸ ಗೋವಿಂದರಾಜು ಕೂಡ ತಾಯಿ ಪಕ್ಕ ಇನ್ನೊಂದು ಕುರ್ಚಿ ಹಾಕಿಕೊಂಡು ಕೂರೋರು. ಏನೂ ಮಾತಾಡುತ್ತಿರಲಿಲ್ಲ. ಎಂಟುಹತ್ತು ನಿಮಿಷಕ್ಕೆ ಒಂದು ಸಲ ಮುದುಕಿಯೇ ಗೊರ ಗೊರ ಸದ್ದು ಮಾಡುತ್ತಾ ಗಂಟಲನ್ನು ಸರಿ ಮಾಡಿಕೊಳ್ಳುತ್ತಿದ್ದಳು. ಊರಲ್ಲಿ ಇದ್ದದ್ದು ಒಂದೇ ಒಂದು ಚಿಕ್ಕ ಔಷಧಿ ಅಂಗಡಿ. ಗೋವಿಂದರಾಜು ಆ ಅಂಗಡಿಗೆ ಖಾಯಂ ಗಿರಾಕಿ. ತಾಯಿಗೆ ಒಂದಲ್ಲ ಒಂದು ಔಷಧಿ, ಟಾನಿಕ್, ಮಾತ್ರೆ ಅಂತ ತಗೋತಾ ನಿಂತಿರೋರು.
ವಯಸ್ಸಾದ ತಾಯಿ ಸತ್ತದ್ದಕ್ಕೆ ಗೋವಿಂದರಾಜು ಎಷ್ಟು ದುಃಖ ಪಟ್ಟರೋ, ಏನು ಕತೆಯೋ ಗೊತ್ತಿಲ್ಲ. ಮನೇನಲ್ಲಿ ಒಬ್ಬ ಗಂಡಸು, ಮೂರು ನಾಲ್ಕು ಹೆಂಗಸರು. ಎಲ್ಲರೂ ಒಂದೊಂದು ದಿಕ್ಕಿಗೆ ಎಳೆಯುತ್ತಿದ್ದರು. ಈಗ ಒಂದು ದಿಕ್ಕು, ಒಂದು ಎಳೆತ ಅಂತೂ ಕಡಿಮೆ ಆಯ್ತು. ಗೋವಿಂದರಾಜು ಮನಸ್ಸಿಗೆ ಸ್ವಲ್ಪ ಇಕ್ಕಟ್ಟು ಕಡಿಮೆ ಆಯ್ತು ಅಂತ ಕಾಣುತ್ತೆ. ಮೇಷ್ಟ್ರು ಗರಿಗೆದರಿದರು. ಮುಖದಲ್ಲಿ ಕಳೆ ಬಂತು. ಬೀದಿಯಲ್ಲಿ ಯಾವಾಗಲೂ ತಲೆ ತಗ್ಗಿಸಿಕೊಂಡು, ಏನೋ ಚಿಂತೆ ಮಾಡ್ತಾ ಓಡಾಡುತ್ತಿದ್ದವರು ಈಗ ಓಡಾಡುವಾಗ ಸ್ವಲ್ಪ ಆ ಕಡೆ, ಈ ಕಡೆ ನೋಡುವರು. ತಿಥಿ ಸಮಾರಾಧನೆ ಸಮಯದಲ್ಲಿ ದಾನ ಕೊಡುವುದಕ್ಕೆಂದು ತಂದಿದ್ದ ರ‍್ಟ್ ಪೀಸ್‌ಗಳಲ್ಲಿ ಉಳಿದಿತ್ತೋ, ಇಲ್ಲ ಮನೆಯಲ್ಲಿ ಯಾವುದಾದರೂ ಹಿಂದೆ ತಂದಿದ್ದ ಷರ್ಟ್ ಪೀಸ್ ಉಳಿದಿತ್ತೋ ಅಂತೂ ಈಗ ಎರಡು ಹೊಸ ಷರ್ಟ್‌ಗಳನ್ನು ಹೊಲಿಸಿಕೊಂಡಂತೆ ಕಾಣುತ್ತಿತ್ತು. ಒಂದು ಕೆಂಪು ಬಣ್ಣದ್ದು, ಇನ್ನೊಂದು ನೀಲಿ ಕಲರ್‌ದು. ಚೆನ್ನಾಗಿ ಹೇರ್ ಕಟಿಂಗ್, ಶೇವಿಂಗ್ ಮಾಡಿಸಿಕೊಂಡು ಸ್ಕೂಲಿಗೆ ಹೋಗೋರು. ರಂಗನಾಯಕಮ್ಮ ಕೂಡ ಯಾವುದಾದರೂ ಹಾಡನ್ನು ಗೊಣಗಿಕೊಳ್ಳುವುದು ಕೇಳಿಸುತ್ತಿತ್ತು. ಗೇಟ್ ಒಳಗಡೆ ಇಟ್ಟುಕೊಂಡಿದ್ದದ್ದು ಒಂದೇ ಒಂದು ತುಳಸಿ ಕುಂಡ. ಅದನ್ನೇ ಒಪ್ಪ ಮಾಡ್ತಾ ರಂಗನಾಯಕಿ ನಿಂತಿರುತ್ತಿದ್ದರು.
ಎಲ್ಲರೂ ಒಂದೇ ಸೂರಿನಡಿಯಲ್ಲಿ ಬದುಕುತ್ತಿರಬಹುದು, ಒಂದೇ ಮನೆಯವರಾಗಿರಬಹುದು, ಒಂದೇ ಒಲೆಯಲ್ಲಿ ಅಡುಗೆ ಮಾಡಬಹುದು, ಆದರೆ ಒಳಗೊಳಗೇ ಒಬ್ಬೊಬ್ಬರು ತಮ್ಮ ತಮ್ಮ ವ್ಯವಹಾರ, ಬದುಕನ್ನು ತಮ ತಮಗೆ ಬೇಕಾದ ರೀತಿಯಲ್ಲಿ ಲೆಕ್ಕ ಹಾಕ್ತಾ ಇರುತ್ತಾರೆ. ಒಟ್ಟಿಗೆ ಇದ್ದರೂ, ಪ್ರೀತಿ, ವಿಶ್ವಾಸ, ನಂಬಿಕೆ ಇರೋಲ್ಲ. ಇದೂ ಕೂಡ ನನಗೆ ಚೆನ್ನಾಗಿ ಮನದಟ್ಟಾದದ್ದು ಗೋವಿಂದರಾಜು ಮನೆ ಜಗಳಗಳಿಂದಲೇ!
ರಂಗನಾಯಕಿ ಅನುಮಾನ ಪಟ್ಟಂತೆ, ಶ್ರೀದೇವಿಗೆ ಮದುವೆ ಒಳಗೊಳಗೇ ನಿಗದಿಯಾಗಿದೆ. ಇದು ಗೋದಾದೇವಿಗೂ ಗೊತ್ತಾಗಿದೆ. ಆದರೆ ಅಣ್ಣ, ಅತ್ತಿಗೆಗೆ ಹೇಳೋಕೆ ಹೋಗಿಲ್ಲ. ಎಲ್ಲವೂ ರಂಗನಾಯಕಿ ಅನುಮಾನ ಪಟ್ಟಂತೆಯೇ ನಡೆಯುತ್ತಿದೆ. ಅಷ್ಟೇ ಅಲ್ಲ, ಕಿರಂಗೂರು ಬಿಟ್ಟು, ಮಂಡ್ಯಕ್ಕೆ ವಾಸ ಹೋಗಲು ಕೂಡ ಎಲ್ಲವನ್ನೂ ಪ್ಲಾನ್ ಮಾಡಿಕೊಂಡಿದ್ದಾರೆ. ಯಾರಿಗೂ ಯಾವ ಗುಟ್ಟೂ ಬಿಟ್ಟುಕೊಟ್ಟಿಲ್ಲ. ನನಗೂ ಕೂಡ ಆಶ್ಚರ್ಯವಾದರೂ ಸಂತೋಷವಾಯಿತು. ಈಗ ಶ್ರೀದೇವಿ ಪ್ರತಿದಿನ ಬೆಳಿಗ್ಗೆ ಟೈಪಿಂಗ್ ಇನ್‌ಸ್ಟಿಟ್ಯೂಟ್‌ಗೆ ಹೋಗುವಾಗ, ಒಳ್ಳೆ ಮದುವೆ ಹೆಣ್ಣಿನ ತರವೇ ಜೋರಾಗಿ ಅಲಂಕಾರ ಮಾಡಿಕೊಂಡು ಹೋಗುತ್ತಿದ್ದಳು. ಮೊದಲೇ ಶ್ರೀದೇವಿ ನಡೆಯುತ್ತಿದ್ದುದು ಸ್ಪೀಡಾಗಿ. ಈಗ ಓಡುತ್ತಿರುವಂತೆ ಕಾಣೋದು. ಗೋದಾದೇವಿ ಊರಗಲ ಮುಖ ಮಾಡಿಕೊಂಡು ಗೇಟ್ ಹತ್ತಿರ ಬಂದು ಬಲಗೈಲಿ ಗೇಟಿನ ಮುಂಭಾಗವನ್ನು ಹಿಡಿದುಕೊಂಡು ಹಿಂದಕ್ಕೆ ಮುಂದಕ್ಕೆ ಜಗ್ಗಾಡುಸ್ತಾ ಶ್ರೀದೇವಿ ಹೋಗೋದನ್ನ ನೋಡ್ತಾ ಕಣ್ಣು ತುಂಬಿಸಿಕೊಳ್ಳುತ್ತಿದ್ದಳು. ಗೋವಿಂದರಾಜು ಮನೆಯಿಂದ ಒಂದೊಂದೂವರೆ ಫರ್ಲಾಂಗ್ ನೇರವಾದ ರಸ್ತೆ. ಶ್ರೀದೇವಿಗೆ ಇಷ್ಟು ದೂರ ನಡೆದುಕೊಂಡು ಹೋಗಲು ನಾಲ್ಕಾರು ನಿಮಿಷ ಬೇಕಾಗುತ್ತಿತ್ತು. ಅಷ್ಟು ಹೊತ್ತೂ ಗೋದಾದೇವಿ ಹಾಗೇ ನಿಂತಿರುತ್ತಿದ್ದರು. ಹೆಚ್ಚು ಕಡಿಮೆ ನಾನು ಸ್ಕೂಲಿಗೆ ಹೋಗಲು ರೆಡಿಯಾಗಿ ಗೇಟ್ ಹತ್ತಿರ ಬರುತ್ತಿದ್ದೆ. ಗೋದಾದೇವಿ ನನ್ನೊಡನೆ ಮಾತಾಡುತ್ತಿರಲಿಲ್ಲ. ಮಗಳು ಹೋಗೋದನ್ನು ನೋಡೋದು ಅಷ್ಟೊಂದು ಸಂತೋಷ ಆಗಿರೋದು ಅವರಿಗೆ. ಆಗಿರುವ ಸಂತೋಷಾನ ಮುಚ್ಚಿಡೋಕು ಆಗ್ತಿರಲಿಲ್ಲ. ಒಳ್ಳೆ ಗೋದಾದೇವಿ ಅಂತ ನನಗೆ ನಾನೇ ಹೇಳಿಕೊಂಡಾಗ, ನನಗೂ ಸಂತೋಷವಾಗುತ್ತಿತ್ತು.
ಮದುವೆಗೆ ಗೊತ್ತಾಗಿದ್ದ ಹುಡುಗ ಮರಾಠಿ ಕಡೆಯ ದೇಶಸ್ಥನಂತೆ. ಅಷ್ಟಕ್ಕೇ ಗೋದಾದೇವಿ, ಹುಡುಗ ನಿಮ್ಮ ಪೈಕಿಯೇ ಅಂತೆ, ನಿಮ್ಮ ಸೀಮೆಯವನಂತೆ ಅಂತ ನಗುನಗುತ್ತಾ ತಮಾಷೆ ಮಾಡುತ್ತಿದ್ದರು. ಶ್ರೀದೇವಿ ಹೋಗುತ್ತಿದ್ದ ಟೈಪಿಂಗ್ ಇನ್‌ಸ್ಟಿಟ್ಯೂಟ್ ಪಕ್ಕವೇ ಒಂದು ಬಟ್ಟೆ ಅಂಗಡಿ ಮುಂದೆ ಜಾಬ್ ಟೈಪಿಂಗ್ ಅಂತ ಬೋರ್ಡ್ ಹಾಕಿಕೊಂಡು ಈ ಹುಡುಗ ಕೂತಿದ್ದಾಗ ಶ್ರೀದೇವಿಗೆ ಪರಿಚಯವಾದನಂತೆ. ಆಮೇಲೆ ಲ್ಯಾಂಡ್ ಬ್ಯಾಂಕ್‌ನಲ್ಲಿ ಕೆಲಸಾನೂ ಸಿಕ್ಕಿ ಮದುವೇನೂ ಮಾಡಿಕೊಳ್ಳೋದು ಅಂತ ನಿರ್ಧಾರ ಆಗಿದೆ. ಮದುವೆ ಮಾಡಿಕೊಂಡಾದ ಮೇಲೆ ಶ್ರೀದೇವಿ ಜೊತೆಗೆ ಗೋದಾದೇವಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಕೂಡ ನಮ್ಮ ಜೊತೆಯಲ್ಲೇ ಇಟ್ಟುಕೊಳ್ಳೋಣ ಅಂತ ಹೇಳಿದ್ದಾನಂತೆ. ವಲ್ಲಭನೂ ಹೀಗೇ ಮಾಡಬಹುದಿತ್ತು. ಮುಂದೆ ಹುಡುಗನಿಗೆ ರೈಲ್ವೆ ಇಲಾಖೆಯಲ್ಲಿ ಖಾಯಂ ಪೋಸ್ಟ್ ಸಿಗುತ್ತಂತೆ. ಹುಡುಗನ ತಂದೆಗೆ ಸೋಲಾಪುರ ರೈಲ್ವೆ ಡಿವಿಜನ್‌ನಿಂದ ಬಡ್ತಿ ಮೇಲೆ ಮಂಡ್ಯ ಸ್ಟೇಷನ್‌ಗೆ ವರ್ಗವಾಗಿದ್ದು, ವರ್ಷವಾದ ಮೇಲೆ ಮೈಸೂರು ಡಿವಿಜನಲ್ ಆಫೀಸಿಗೆ ವರ್ಗವಾದಾಗ ಮಂಡ್ಯದಿಂದ ದಿನವೂ ಹೋಗಿ ಬಂದು ಮಾಡುತ್ತಿದ್ದರು. ಸೋಲಾಪುರದಲ್ಲಿದ್ದಾಗಲೇ ಹೃದಯದ ಹತ್ತಿರ ಮೂರು ಕಾಸಿನಗಲದ ತೂತಾಗಿದ್ದು ಗೊತ್ತಿದ್ದರೂ ದಿನವೂ ಮಂಡ್ಯದಿಂದ ಮೈಸೂರಿಗೆ ಹೋಗಿ ಬಂದು ಮಾಡುತ್ತಿದ್ದು, ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾಗ ತೀರಿ ಹೋದರು. ಅಪ್ಪನ ಕೆಲಸವೇ ಮಗನಿಗೂ ತಗೋಬೇಕು ಅಂತ ಪ್ರಯತ್ನ ನಡೆದಿತ್ತು. ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್ ಸ್ಟೋರ್ಸ್ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು ಕೂಡ ಲ್ಯಾಂಡ್ ಬ್ಯಾಂಕ್ ಕೆಲಸದಲ್ಲಿ ಎಷ್ಟೇ ಹೊತ್ತು ತಡವಾದರೂ ಒಂದು ಸಲ ಸಂಜೆ ಅಂಗಡಿಗೆ ಹೋಗಿ, ಸಾಮಾನು, ಕ್ಯಾಶ್ ಎಲ್ಲ ಲೆಕ್ಕ ನೋಡಿ ತಮ್ಮನಿಗೆ ಸಹಾಯ ಮಾಡುತ್ತಿದ್ದ. ನೋಡಿ, ಈಗಿನ ಕಾಲದಲ್ಲೂ ಇಂತಹ ಗುಣವಂತ, ನೀತಿವಂತ ಹುಡುಗರು ಇರುತ್ತಾರಾ ಅಂತ ಕಿರಂಗೂರಿನ ಸಮಸ್ತ ಪ್ರಜೆಗಳಿಗೆ ಕೊನೇ ಪಕ್ಷ ಮೂರು ನಾಲ್ಕು ಸಲವಾದರೂ ಗೋದಾದೇವಿ ಹರಿಕತೆ ಮಾಡಿ ತಿಳಿಸಿದ್ದಳು.
ಮದುವೇನ ಜನಾರ್ಧನಸ್ವಾಮಿ ಗುಡಿಯ ಬೀದಿಯಲ್ಲಿ ಅಯ್ಯಂಗಾರ್ಸ್ ರೀತಿಯಲ್ಲೇ ಮಾಡಿಕೊಟ್ಟರು. ಚಿಕ್ಕ ಛತ್ರದಲ್ಲಿ ಮಾಡಿಕೊಟ್ಟರು. ದೊಡ್ಡ ಛತ್ರದಲ್ಲಿ ಯಾರೋ ಅನುಕೂಲವಿರುವ, ಬಂಧು ಬಳಗದವರ ಹತ್ತಿರ ಎಲ್ಲ ಕಾರು, ಸ್ಕೂಟರ್ ಇರುವ ಅಯ್ಯಂಗಾರ್ಸ್ ಕಡೆಯವರು ಇನ್ನೊಂದು ಮದುವೆ ನಡೀತಾ ಇದ್ದು, ಶ್ರೀದೇವಿ-ಜಯಪ್ರಕಾಶ್ ಮದುವೆ ಸ್ವಲ್ಪ ಮಂಕಾಗೇ ಕಾಣುತ್ತಿತ್ತು. ಜಯಪ್ರಕಾಶ್ ಅಯ್ಯಂಗಾರ್ಸ್ ಪೈಕಿ ಅಲ್ಲ ಅಂತ ಕೆಲವು ನೆಂಟರಿಷ್ಟರು ಗೊಣಗಿದ್ದರೂ, ತುಂಬಾ ಜನ ಮದುವೆಗಂತೂ ಬಂದೇ ಬಂದಿದ್ದರು. ಗೋವಿಂದರಾಜು-ರಂಗನಾಯಕಿಗೆ ಅಸಮಾಧಾನವಿತ್ತು. ನನ್ನ ಹತ್ತಿರವೇ ಹೇಳಿಕೊಂಡು ಗೋದಾದೇವಿಯನ್ನು ಚೆನ್ನಾಗಿ ಬೈದಿದ್ದರು. ಇಷ್ಟು ವರ್ಷ ಇಟ್ಟುಕೊಂಡು ಸಾಕಿದ್ದೀವಿ. ಮರ್ಯಾದೆಗೆ ಅಂತ ಒಂದು ಮಾತು ನಮಗೆ ಹೇಳಲಿಲ್ಲ ಎಂದು ಗೊಣಗಾಡಿದರೂ, ಹುಡುಗೀನ ಧಾರೆ ಎರೆದು ಕೊಡುವಾಗ ನಗುನಗುತ್ತಲೇ ಇದ್ದರು. ರಂಗನಾಯಕಿ, ಶ್ರೀದೇವಿಯ ಧಾರೆ ಶೃಂಗಾರವನ್ನು ತಿದ್ದಿ ತೀಡುತ್ತಲೇ ಇದ್ದರು. ರಂಗನಾಯಕಿಯ ಕಣ್ಣುಗಳು ಮೊದಲ ಬಾರಿಗೆ ಹೊಳೆಯುತ್ತಿರುವುದನ್ನು ನಾನು ನೋಡಿದೆ. ಗೋವಿಂದರಾಜುಗೆ ಆವತ್ತು ನೆಗಡಿ. ಮೂಗು ಸೊರ ಸೊರ ಶಬ್ದ ಮಾಡುತ್ತಾ ಇದ್ದರೂ, ಮುಖ ಮಾತ್ರ ಉಲ್ಲಾಸದಿಂದಿತ್ತು. ಧಾರೆ ಸಮಯದಲ್ಲಿ ಹುಡುಗ ಸ್ವಲ್ಪ ಪೀಚು ಅನಿಸಿತು. ಜೋಡಿ ಅಕ್ಕ-ತಮ್ಮನ ತರ ಕಾಣ್ತಾ ಇದೆಯಲ್ಲ ಅಂತ ಅಂದುಕೊಂಡೆ. ಆದರೆ ಆರತಕ್ಷತೆ ಸಮಯದಲ್ಲಿ ಹುಡುಗ ಸೂಟು ಬೂಟು ಹಾಕಿಕೊಂಡು ಕಾಲೇಜು ಮೇಷ್ಟ್ರುಗಳ ತರಾನೇ ಠೀಕುಠಾಕಾಗಿ ಕಾಣುತ್ತಿದ್ದ. ಶ್ರೀದೇವಿ ಉದ್ದಕ್ಕೂ ನಗುತ್ತಿದ್ದಳು. ಪಟಪಟನೆ ಮಾತಾಡುತ್ತಿದ್ದಳು.
ಗೋವಿಂದರಾಜು-ರಂಗನಾಯಕಿ ಗೋದಾದೇವಿ ಸಂಸಾರವನ್ನು ಔತಣದ ಊಟ ಹಾಕೇ ಕಿರಂಗೂರಿನಿಂದ ಬೀಳ್ಕೊಟ್ಟರು. ಹೋಗುವಾಗ ಗೋದಾದೇವಿ ಬಿಕ್ಕಳಿಸುತ್ತಾ ಬಿಕ್ಕಳಿಸುತ್ತಾ ಗೋವಿಂದರಾಜುಗೆ ತಮಿಳಿನಲ್ಲಿ ಏನೋ ಹೇಳುತ್ತಿದ್ದರು. ಜಯಪ್ರಕಾಶ್ ಜೊತೆ ಅವನ ತಾಯಿ, ಪೋಲಿಯೋ ಪೀಡಿತ ತಮ್ಮ ಕೂಡ ಊಟಕ್ಕೆ ಬಂದಿದ್ದರು. ದೊಡ್ಡ ಜಟಕಾನೇ ಗೊತ್ತು ಮಾಡಿದ್ದರೂ, ಒಂದು ಜಟಕಾದೊಳಗೆ ಮದುವೆ ಸಾಮಾನು ಮತ್ತು ಇಷ್ಟೊಂದು ಜನಕ್ಕೆ ಸಾಕಾಗುತ್ತಿರಲಿಲ್ಲ. ಶ್ರೀದೇವಿಯ ಗಂಡ, ಇಬ್ಬರು ಭಾವಮೈದುನರೊಡನೆ ಜಟಕಾದ ಹಿಂದುಗಡೆ ನಡೆದುಕೊಂಡು ಹೋಗುತ್ತಿದ್ದ. ಗೋವಿಂದರಾಜು ಮುಖ ಸಪ್ಪಗಾಗಿತ್ತು. ರಂಗನಾಯಕಿ ಕಣ್ಣಂಚಿನಲ್ಲಿ ನೀರು ಕಂಡಿತು ಮತ್ತು ತುಂಬಾ ಹೊತ್ತು ಇತ್ತು. ನೋಡ್ತಾ ನೋಡ್ತಾ ನನಗೂ ಒಂದು ತರ ಪಿಚ್ಚೆನಿಸಿತು. ಕಣ್ಣಲ್ಲಿ ನೀರು ತುಂಬಿಕೊಂಡ ರಂಗನಾಯಕಮ್ಮ ಕಣ್ಣಿಗೆ ಈ ವಯಸ್ಸಿನಲ್ಲೂ ಕಾಡಿಗೆ ಹಚ್ಚಿಕೊಳ್ಳುತ್ತಿರುವುದು ಮೊದಲ ಸಲ ಗೊತ್ತಾಯಿತು. ತುಂಬಾ ಮೆತ್ತಗಾದ ಧ್ವನಿಯಲ್ಲಿ ಗೋವಿಂದರಾಜು ರಂಗನಾಯಕಿಗೆ ತಮಿಳಿನಲ್ಲಿ ಏನೋ ಹೇಳುತ್ತಿದ್ದರು.
ಮರ್ಯಾದೆಗೆಂದು ನನಗೂ ಊಟಕ್ಕೆ ಹೇಳಿದ್ದರು. ಬೇಡ, ಮದುವೆ ಔತಣ, ನಾನೇಕೆ ಹೊರಗಿನವಳು ಎಂದು ಸಬೂಬು ಹೇಳಿ ತಪ್ಪಿಸಿಕೊಂಡೆ. ಆಯ್ತು ನೀವು ಅಡುಗೆ ಮಾಡಿಕೋಬೇಡಿ. ನಾವೇ ಊಟ ಕಳಿಸಿಕೊಡ್ತೀವಿ ಅಂತ ಹೇಳಿದ್ದರು. ಎಲ್ಲರೂ ಹೊರಟುಹೋದ ಮೇಲೆ, ರಂಗನಾಯಕಿ ಒಂದು ದೊಡ್ಡ ತಟ್ಟೆ ಮತ್ತು ಚಿಕ್ಕ ಪ್ಲೇಟ್‌ನಲ್ಲಿ ಬಾಳೆ ಎಲೆ ಮುಚ್ಚಿಕೊಂಡು ಊಟ ತಂದುಕೊಟ್ಟರು. ಊಟ ನನ್ನ ಕೈಗೆ ಕೊಡುವಾಗ ಗೋದಾದೇವಿ ಗಂಡನನ್ನು ಕಳೆದುಕೊಂಡಾಗ ಇನ್ನೂ ಇಪ್ಪತ್ತು ಮೂರು ವರ್ಷ ಅಷ್ಟೇ ಅಂದರು.
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.