“ಈ ನಾಯಕರ ನಿಲುವು ಏನೆಂದರೆ ತಾವು ಆಸ್ಟ್ರೇಲಿಯಾವನ್ನು ಒಂದು ಆಧುನಿಕ ದೇಶವನ್ನಾಗಿ ಮಾತ್ರ ನೋಡುವುದು. ವಸಾಹತು ಚರಿತ್ರೆಯನ್ನು ಸಮರ್ಥಿಸುವುದಿಲ್ಲ ಮತ್ತು ಬಿಳಿಯರು ಬಂದು ಅಭಿವೃದ್ಧಿಪಡಿಸಿದ್ದರಿಂದ ನಾವು ಈ ಅದೃಷ್ಟದ ನಾಡಿನಲ್ಲಿದ್ದೀವಿ. ಮೂಲಜರಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿಗಳು ಈ ಆಧುನಿಕ ಆಸ್ಟ್ರೇಲಿಯಾದಲ್ಲಿ ಅದಕ್ಕೆ ಹೊಂದಿಕೊಂಡು ಇರಬೇಕು, ತಮಗೆ ಪ್ರತ್ಯೇಕ ಅಸ್ಮಿತೆ ಬೇಕು ಎಂದು ಕೇಳಬಾರದು. ತನ್ನ ಪಕ್ಷ ಅಧಿಕಾರಕ್ಕೆ ಬಂದರೆ ಈ ರೆಫೆರೆಂಡಮ್ ಮುಂತಾದ ಬೇಡಿಕೆಗಳಿಗೆ ಆಸ್ಪದ ಕೊಡುವುದಿಲ್ಲ, ಎಂದಿದ್ದಾರೆ. ಅಲ್ಲಿಗೆ ಈ ದೇಶ ಸೆಟ್ಟ್ಲರ್-ಬಿಳಿಯರ ದೇಶವಷ್ಟೇ ಆಯ್ತಲ್ಲ!”
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪ್ರಿಯ ಓದುಗರೆ,
ಹೋದ ಬಾರಿ ನಾನು ಕೀವೀ ನಾಡಲ್ಲಿ ಒಂದಷ್ಟು ದಿನಗಳು ಕ್ಯಾಂಪರ್ ವ್ಯಾನ್‌ನಲ್ಲಿ ಸುತ್ತಾಡಿದ್ದರ ಬಗ್ಗೆ ಬರೆದಿದ್ದೆ. Aotearoa / New Zealand ದೇಶದ ದಕ್ಷಿಣ ದ್ವೀಪವನ್ನು ಬಿಡುವ ಎರಡು ದಿನಗಳ ಮುಂಚೆ ನಮಗೆ ಅಲ್ಲಿನ Kea ಗಿಳಿಗಳೆರಡು ಕಾಣಿಸಿದ್ದವು. ಕಳೆದ ಅಂಕಣದಲ್ಲಿ ಅದರ ಫೋಟೋ ಇತ್ತು, ನೋಡಿ. ಈ ದೊಡ್ಡ ಗಾತ್ರದ Kea ಗಿಳಿ ದಕ್ಷಿಣ ದ್ವೀಪದಲ್ಲಿ ಮಾತ್ರ ಇದೆ. ಇದು ಅಪರೂಪವಾಗುತ್ತಾ ಆಪತ್ತಿನಲ್ಲಿರುವ ಪಕ್ಷಿ. ಬಹಳ ಬುದ್ಧಿವಂತ, ಚಾಣಾಕ್ಷ ಹಕ್ಕಿ ಎಂದು ಕೂಡ ಹೆಸರು ಗಳಿಸಿದೆ. ನಮ್ಮನ್ನೂ ಸ್ವಲ್ಪ ಆಟ ಕಾಯಿಸ್ತು.
ಅಂದುಕೊಳ್ಳದೆ, ಬಿಡಿಕಾಸು ಖರ್ಚು ಮಾಡದೆ ಅದೃಷ್ಟವಶಾತ್ ಈ Kea ಗಿಳಿಯನ್ನು ನೋಡಿದ್ದೇನೊ ಆಯ್ತು. ಆದರೆ New Zealand ನ ರಾಷ್ಟ್ರೀಯ ಪಕ್ಷಿಯೂ, ದೇಶದ ಗುರುತೂ ಆಗಿರುವ ಕೀವೀ ಯನ್ನು ನೋಡಲಾಗಲಿಲ್ಲ ಅನ್ನೂ ದುಃಖವಿನ್ನೂ ಇದೆ. ಇದೇ ತರಹ ಆದರೆ ದುಡ್ಡು ಕೊಟ್ಟು ಹೋಗಿ ರಾಯಲ್ ಅಲ್ಬಾಟ್ರೋಸ್ ಪಕ್ಷಿಗಳ ಜೋಡಿಗಳನ್ನೂ ನೋಡಿದೆವು. ಆದರೆ ಪುಟಾಣಿ ಪೆಂಗ್ವಿನ್‌ಗಳನ್ನು, ಡುಮ್ಮಣ್ಣ ಸೀಲ್‌ಗಳನ್ನು ನೋಡದೆ ಬಿಟ್ಟು ಬಂದೆವು ಅನ್ನೋ ಸಣ್ಣ ಅಸಮಾಧಾನವಿದೆ. ಇರಲಿ, Kiwi, ಪೆಂಗ್ವಿನ್, ಸೀಲ್ ಇತ್ಯಾದಿಗಳನ್ನು ನೋಡುವ ದಿನ ಬೇಗ ಬರಲಿ.
ಈ ಕೀವೀ ಹಕ್ಕಿ ಹಾರುವುದಿಲ್ಲ. ಜೀವಜಾಲದ ಬೆಳವಣಿಗೆಯಲ್ಲಿ ಕೋಳಿ ಗಾತ್ರದ ಈ ಕೀವೀ ಒಳ್ಳೆ ಬಲಿಷ್ಠ ಕಾಲುಗಳನ್ನ ರೂಢಿಸಿಕೊಂಡಿದೆ. ಇದರ ದೊಡ್ಡ ಮೊಟ್ಟೆಗಾತ್ರ ಬಹಳ ಹೆಸರುವಾಸಿಯಂತೆ. ಯಾಕೆ ಈ ನ್ಯೂ ಝಿಲ್ಯಾಂಡ್ ಜನಕ್ಕೆ ಕೀವೀ ಗಳೆಂದು ಅಡ್ಡ ಹೆಸರು ಬಂತು ಅಂತ ಕೇಳಿದರೆ ಅದೆಲ್ಲಾ ಬ್ರಿಟಿಷ್ ವಸಾಹತುಶಾಹಿಗಳ ಮಂತ್ರ ಅನ್ನುತ್ತಾರೆ. ನ್ಯೂ ಝಿಲ್ಯಾಂಡ್ ನಿಂದ ಬ್ರಿಟನ್‌ಗೆ ಹೋಗುತ್ತಿದ್ದ ವಸ್ತುಗಳಿಗೆ ಕೀವೀ ಹಕ್ಕಿಯ ಲಾಂಛನವನ್ನು ಬಳಸುತ್ತಾ ಹಾಗೇ ಕಡೆಗೆ ‘ದಿಸ್ ಈಸ್ ಫ್ರಮ್ ದಿ ಕೀವೀಸ್’ ಅನ್ನುತ್ತಿದ್ದರಂತೆ. ನೋಡನೋಡುತ್ತಾ ಜನರಿಗೂ ‘ಕೀವೀಸ್’ ಅಡ್ಡ ಹೆಸರು ಅಂಟಿಕೊಂಡಿತು ಅನ್ನುತ್ತಾರೆ. ಇದನ್ನು ಸಾರ್ಥಕಗೊಳಿಸಲು ಕೀವೀ ಹಕ್ಕಿಗೆ ದೊಡ್ಡ ಪಟ್ಟ ಕೊಟ್ಟು ಅದನ್ನು ಎಲ್ಲದರಲ್ಲೂ ಬಳಸಿ, ಹಾಡು ಕಟ್ಟಿ ಕಡೆಗದು ಅಂತಾರಾಷ್ಟ್ರೀಯ ಪ್ರಸಿದ್ಧಿಗೆ ಬಂತು. ಆದರೆ ಮಾಓರಿ ಜನರು ಹೇಳುತ್ತಾರೆ, ಅವರ ಜನರಿಗೆ ಕೀವೀ ಹಕ್ಕಿಯ ಜೊತೆ ತಲೆತಲಾಂತರ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಈ ಹಕ್ಕಿಯ ಹೆಸರಿನಿಂದ ತಮ್ಮ ದೇಶದ ಎಲ್ಲಾರೂ ಒಟ್ಟಾಗಿ ಕರೆಸಿಕೊಳ್ಳುವುದು ಹೆಮ್ಮೆಯ ವಿಷಯ. ನಾವು ದಕ್ಷಿಣ ದ್ವೀಪದ ಸುತ್ತಾಟದಲ್ಲಿ ಕಂಡಿದ್ದು Aotearoa / New Zealand ಎರಡು ಸಂಸ್ಕೃತಿಗಳ ಸಂಗಮ. ಎಲ್ಲೆಲ್ಲೂ ಮಾಓರಿ ಭಾಷೆ ಮತ್ತು ಇಂಗ್ಲಿಷ್ ಭಾಷೆಯ ಬಳಕೆಯಿತ್ತು. ಬಿಳಿ ಜನರು ಮಾತನಾಡುವಾಗ ಭಾಷಾ ಬಳಕೆಯಲ್ಲಿ ಹಾಸುಹೊಕ್ಕಾಗಿ ಮಾಓರಿ ಪದಗಳಿದ್ದವು. ಉದಾಹರಣೆಗೆ, mahika kai ಗೆ ನಿಮಗೆ ಸುಸ್ವಾಗತ ಎಂದರೆ ಅದು ಅವರ ವಿಶೇಷ ಭೋಜನ ಕೂಟ. ಭಾರತೀಯರಂತೆ ಅತಿಥಿ ಸತ್ಕಾರವನ್ನು ಆಹಾರದ ಮೂಲಕ ಆಚರಿಸುತ್ತಾರೆ. ಎಲ್ಲರೂ Kia ora ಎನ್ನುತ್ತಲೆ ಮಾತು ಆರಂಭಿಸುತ್ತಾರೆ. ಇನ್ನೊಂದು ಸಾಮಾನ್ಯ ಬಳಕೆಯ ಮಾತು ‘ಇದು ನಮ್ಮ mahi’ ಅಂದರೆ ‘ನಮ್ಮ ಕೆಲಸ.’ ನಾನು ಕಾನ್ಫರೆನ್ಸ್ ಅಲ್ಲಿದ್ದ ಎರಡೂ ದಿನಗಳಲ್ಲಿ ಪದೇಪದೇ ಕೇಳಿದ್ದು ಬಿಳಿಯರು ಹೇಳುತ್ತಿದ್ದ ಮಾತು – ‘ನಾನು/ನಾವು pakeha ಗಳು. ಈ ಪೂಜ್ಯ Aotearoa ನೆಲದಲ್ಲಿ ಗೌರವಾನ್ವಿತ ಮಾಓರಿ ಜನರಿಂದ ಕಲಿತು ಮಿಳಿತು ಬದುಕುತ್ತಿರುವುದು ನಮ್ಮ ಸೌಭಾಗ್ಯ.” ಆಹಾ, ಎಷ್ಟು ಸಹೃದಯ, ಸಾಮರಸ್ಯದ ಮನೋಭಾವ ಅನಿಸಿತು. ಅನೇಕರು ಮಾಓರಿ ಸಂಸ್ಕೃತಿಯ ಹಾಡುಗಳನ್ನು ಹಾಡುತ್ತಾ, ಮಾಓರಿ ಭಾಷೆಯನ್ನೂ ಮಾತನಾಡುತ್ತಿದ್ದರು, ಇಲ್ಲಾ ಅನೇಕ ಪದಗಳನ್ನು ಉಪಯೋಗಿಸುತ್ತಿದ್ದರು. ಒಂದು ಹಾಡನ್ನಂತೂ ಅವರ ನಾಡಗೀತೆಯಂತೆ ಎಲ್ಲರೂ ಎದ್ದು ನಿಂತು ಹಾಡುತ್ತಿದ್ದರು. ಪ್ರತಿಯೊಂದು ವಿಶೇಷ ಸಂದರ್ಭದಲ್ಲೂ ಮಾಓರಿ ಹಾಡುಗಳನ್ನು ಹಾಡುವುದು ತಮ್ಮ ಸಂಸ್ಕೃತಿ ಎಂದು ಹೆಮ್ಮೆಯಿಂದ ಹೇಳಿಕೊಂಡರು.
ನಾಡಿನ ಜನರು ಅಲ್ಲಿನ ಒಂದು ವಿಶೇಷ ಪಕ್ಷಿಯ ಹೆಸರಿನಿಂದ ಕರೆಸಿಕೊಳ್ಳುತ್ತಾರೆ ಎನ್ನುವುದು ಒಳ್ಳೆಯದೆ. ಅಲ್ಲಿನ ಮೂಲಜನರನ್ನು ಯಾವುದೇ ಹಿಂಜರಿಕೆಯಿಲ್ಲದೆ ಗೌರವಿಸುತ್ತಾರೆ, ಅವರ ಭಾಷೆಯನ್ನು ತಾವು ಕಲಿತು ಮಾತನಾಡುತ್ತಾರೆ ಎನ್ನುವುದು ಇನ್ನೂ ಒಳ್ಳೆಯ ವಿಷಯ. ಯಾಕೆಂದರೆ ವಸಾಹತುಶಾಹಿ ದೇಶಗಳಲ್ಲಿ ಇದು ಕಾಣುವುದು ಅಪರೂಪ. ಪರಸ್ಪರತೆ, ಸಮನ್ವತೆ ಇರುವುದು ಎಲ್ಲರಿಗೂ ಸಮಾನವಾಗಿ ಸೇರುವ ಒಂದು ಅಸ್ಮಿತೆ.
ಹಾಗೆಯೇ ಯೋಚಿಸುತ್ತಾ ನಮ್ಮ ಆಸ್ಟ್ರೇಲಿಯಾದ ಜನರನ್ನು ಇಮ್ಯೂಸ್ (Emu ಹಕ್ಕಿ, Kiwi ಯಂತೆ ಹಾರುವುದಿಲ್ಲ) ಅಥವಾ ಕಾಂಗರೂಸ್ ಅಂತ ಯಾಕೆ ಕರೆಯುವುದಿಲ್ಲ ಅನ್ನೋ ಪ್ರಶ್ನೆಯೆದ್ದಿತ್ತು. ಅಂತಾರಾಷ್ಟ್ರೀಯವಾಗಿ ಡೌನ್ ಅಂಡರ್ ಜನರು ಆಝೀಸ್ (Aussies) ಅಥವಾ Oz ಅನ್ನುವುದು ಶಾಶ್ವತವಾದ ಅಡ್ಡಹೆಸರು. ಇವೆರಡೂ ವಸಾಹತುಶಾಹಿಗಳು ಕೊಟ್ಟಿದ್ದು. ಇದರಲ್ಲಿ ಆಸ್ಟ್ರೇಲಿಯಾದ ಮೂಲನಿವಾಸಿಗಳು ಸೇರುವುದಿಲ್ಲ. ಹೀಗಾದ್ದರಿಂದ ದೇಶವನ್ನು ವಿಭಜಿಸಿದಂತೆ ಆಯ್ತಲ್ಲಾ, ಅದು ಹಾಗೆಯೇ ಉಳಿದುಬಿಟ್ಟಿದೆಯಲ್ಲಾ ಅಂದೆನಿಸುತ್ತದೆ.
ಈ ಯೋಚನೆಗಳಿಗೆ ಇಂಬು ಕೊಡುವುದು ಆಸ್ಟ್ರೇಲಿಯಾದ ವಿರೋಧಪಕ್ಷಗಳ ನಾಯಕರು ಈ ವಾರ ಕೊಟ್ಟಿರುವ ಪತ್ರಿಕಾ ಹೇಳಿಕೆ. ತಾವು ಆಸ್ಟ್ರೇಲಿಯನ್ ಮುಖ್ಯ ಬಾವುಟವನ್ನು ಮಾತ್ರ ಬಳಸುವುದು, ಅಧಿಕೃತವಾಗಿ ತಾನು ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪ ಜನರ ಪ್ರಾತಿನಿಧಿಕ ಎರಡು ಬಾವುಟಗಳನ್ನು ಬಳಸುವುದಿಲ್ಲ. ಯಾಕೆಂದರೆ ಅವರ ಬಾವುಟಗಳನ್ನು ಬಳಸುವುದರಿಂದ ತಮ್ಮ ದೇಶವು ಒಂದು ವಿಭಜಿತ ದೇಶವಾಗಿ ಕಾಣಿಸುತ್ತದೆ, ಇದು ತಪ್ಪು ಎಂದು ಈ ನಾಯಕರು ಹೇಳಿದ್ದಾರೆ. ಆಸ್ಟ್ರೇಲಿಯನ್ ಮುಖ್ಯ ಬಾವುಟವೆಂದರೆ ಬ್ರಿಟನ್ನಿನ ಯೂನಿಯನ್ ಜಾಕ್ ಮತ್ತು ಸದರ್ನ್ ಕ್ರಾಸ್ ನಕ್ಷತ್ರ ಸಮೂಹ. ಈ ನಾಯಕರ ನಿಲುವು ಏನೆಂದರೆ ತಾವು ಆಸ್ಟ್ರೇಲಿಯಾವನ್ನು ಒಂದು ಆಧುನಿಕ ದೇಶವನ್ನಾಗಿ ಮಾತ್ರ ನೋಡುವುದು. ವಸಾಹತು ಚರಿತ್ರೆಯನ್ನು ಸಮರ್ಥಿಸುವುದಿಲ್ಲ ಮತ್ತು ಬಿಳಿಯರು ಬಂದು ಅಭಿವೃದ್ಧಿಪಡಿಸಿದ್ದರಿಂದ ನಾವು ಈ ಅದೃಷ್ಟದ ನಾಡಿನಲ್ಲಿದ್ದೀವಿ. ಮೂಲಜರಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿಗಳು ಈ ಆಧುನಿಕ ಆಸ್ಟ್ರೇಲಿಯಾದಲ್ಲಿ ಅದಕ್ಕೆ ಹೊಂದಿಕೊಂಡು ಇರಬೇಕು, ತಮಗೆ ಪ್ರತ್ಯೇಕ ಅಸ್ಮಿತೆ ಬೇಕು ಎಂದು ಕೇಳಬಾರದು. ತನ್ನ ಪಕ್ಷ ಅಧಿಕಾರಕ್ಕೆ ಬಂದರೆ ಈ ರೆಫೆರೆಂಡಮ್ ಮುಂತಾದ ಬೇಡಿಕೆಗಳಿಗೆ ಆಸ್ಪದ ಕೊಡುವುದಿಲ್ಲ, ಎಂದಿದ್ದಾರೆ. ಅಲ್ಲಿಗೆ ಈ ದೇಶ ಸೆಟ್ಟ್ಲರ್-ಬಿಳಿಯರ ದೇಶವಷ್ಟೇ ಆಯ್ತಲ್ಲ!
Dunedin ನಗರದ ಒಟಾಗೊ ವಿಶ್ವವಿದ್ಯಾಲಯದಲ್ಲಿ ನಡೆದ ಕಾನ್ಫರೆನ್ಸ್‌ಗೆ ಅನೇಕ ಮಾಓರಿ ಅಧ್ಯಾಪಕರು, ಪ್ರಾಧ್ಯಾಪಕರು, ಗುರುತರ ಸ್ಥಾನಗಳಲ್ಲಿದ್ದವರು ಬಂದಿದ್ದರು. ಕೆಲವರು ಪ್ರಾತ್ಯಕ್ಷಿಕೆಗಳನ್ನು ನಡೆಸಿದರು. ಆಗೆಲ್ಲಾ ಮಾಓರಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತನಾಡುತ್ತಾ, ಮರೆಯದೆ ಒಂದು ಕಾರ್ಟೂನ್ ತೋರಿಸುತ್ತಿದ್ದರು. ಕಾರ್ಟೂನ್‌ನಲ್ಲಿದ್ದವರು ನ್ಯೂ ಝಿಲ್ಯಾಂಡ್ ಸಂವಿಧಾನದ ಅತ್ಯಂತ ಕಿರಿಯ ವಯಸ್ಸಿನ ಸದಸ್ಯೆ Hana-Rawhiti Maipi-Clarke ಮತ್ತು ಮತ್ತು ಆಕೆ ಹರಿಯುತ್ತಿದ್ದ ಸರ್ಕಾರಿ ಪತ್ರ. ಇವರು ಸದ್ಯದ ಕೇಂದ್ರ ಸರ್ಕಾರವು ತಮ್ಮ ಜನರ Te Tiriti o Waitangi – Waitangi ಒಪ್ಪಂದಕ್ಕೆ ತಿದ್ದುಪಡಿ ತರುವ ಕ್ರಮದ ವಿರುದ್ಧ ಪಾರ್ಲಿಮೆಂಟಿನಲ್ಲಿ haka ಆರಂಭಿಸಿ ಆಕೆಯೊಡನೆ ಅವರ ಪಕ್ಷದ ಸದಸ್ಯರು ಜೊತೆಗೂಡಿದರು. ಇದು ವಿಶ್ವಪ್ರಸಿದ್ಧಿಯಾಯ್ತು.
ಈ ಘಟನೆ ನಡೆದ ಕೆಲವೇ ದಿನಗಳ ನಂತರ ನಾನು ಈ ನಾಡಿನಲ್ಲಿದ್ದೆ. ಸಹಜವಾಗಿಯೇ ಕಾನ್ಫರೆನ್ಸ್‌ಗೆ ಬಂದಿದ್ದ ಮಾಓರಿ ವಿದ್ವಾಂಸರಲ್ಲಿ ಪ್ರತಿಭಟನೆ ಮತ್ತು ಪ್ರತಿರೋಧದ ಭಾವನೆ ಎದ್ದು ಕಾಣುತ್ತಿತ್ತು. ೧೮೪೦ ರಲ್ಲಿ Waitangi ಎನ್ನುವ ಸ್ಥಳದಲ್ಲಿ ಹಲವಾರು ಮಾಓರಿ ಜನನಾಯಕರು ಮತ್ತು ಬ್ರಿಟನ್ನಿನ ರಾಜಪ್ರಭುತ್ವದ ನಡುವೆ ಒಪ್ಪಂದವಾಗಿತ್ತು. ಒಪ್ಪಂದದಂತೆ ಎರಡೂ- ಮಾಓರಿ ಮತ್ತು ಬ್ರಿಟಿಷ್- ಜನರು, ಸಂಸ್ಕೃತಿಗಳು ಜೊತೆಯಾಗಿ ಬಾಳಬೇಕು, ಜೊತೆಯಾಗಿ ಜನಪರ ಆಡಳಿತ ನಡೆಸಬೇಕು. ಈ ಒಪ್ಪಂದವೇ ಮಾಓರಿ ಜನರನ್ನು ಕಾಪಾಡಿ ಇಂದು ನಾವು ನೋಡುವ Aotearoa/New Zealand ನಲ್ಲಿ ಶಾಂತಿ-ಸೌಹಾರ್ದತೆಗಳಿವೆ.
ಆದರೆ ಕಾನ್ಫರೆನ್ಸ್‌ಗೆ ಬಂದಿದ್ದ ವಿದ್ವಾಂಸರು ಒಪ್ಪಂದಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿರುವುದು ಬಹಳ ಆತಂಕದ ವಿಷಯ ಎನ್ನುತ್ತಾ, ಮಾಓರಿ ಜನರ ಅಸ್ಮಿತೆಗೆ ಕುಂದು ಬರಬಾರದು ಎನ್ನುವುದನ್ನು ಬಾಯಿಬಿಟ್ಟು ಹೇಳಿದರು. ನನಗಂತೂ ಇದನ್ನೆಲ್ಲಾ ನೋಡಿದ್ದು ಸಂತೋಷವಾಗಿ, ನಾನು ಕಾನ್ಫರೆನ್ಸ್‌ಗೆ ಹೋಗಿದ್ದು ಸಾರ್ಥಕವಾಯ್ತು ಅನ್ನಿಸಿತು.
ನಾವು ರಾಯಲ್ ಆಲ್ಬಾಟ್ರೋಸ್ ಹಕ್ಕಿಗಳನ್ನು ನೋಡಲು ಹೋಗಿದ್ದು Pukekura Pa-Taiaroa Headland ಅನ್ನೋ ಜಾಗಕ್ಕೆ. ೧೯೧೯ ರಿಂದ ಇಲ್ಲಿ ಆಲ್ಬಾಟ್ರೋಸ್ ಪಕ್ಷಿಗಳು ಬರುತ್ತಾ, ತಮ್ಮದೇ ಒಂದು ಮನೆ ಮಾಡಿಕೊಂಡು ಮರಿ ಮಾಡುತ್ತಿವೆ. ಇಡೀ ದೇಶದಲ್ಲಿ ಇದೊಂದೇ ಕಡೆ ಈ ಪಕ್ಷಿಗಳು ಕಾಲೂರುವುದು, ಮರಿ ಮಾಡುವುದು. ಇನ್ನೊಂದು ವಿಶೇಷ ಎಂದರೆ ಈ ಸಣ್ಣ ಭೂಭಾಗ-ಸಮುದ್ರ ಸೇರುವ headland ಹೆಸರು Taiaroa ಎಂದು. ಇದು Ngāi Tahu iwi ಎನ್ನುವ ಒಂದು ಮಾಓರಿ ಪಂಗಡ ಮುಖ್ಯಸ್ಥನ ಹೆಸರು. Taiaroa ಎನ್ನುವ ಈತನೇ ೧೮೪೦ ರಲ್ಲಿ Waitangi ಒಪ್ಪಂದಕ್ಕೆ ಸಹಿ-ಗುರುತು ಹಾಕಿದ್ದು ಎನ್ನುವುದು ದಾಖಲಾಗಿದೆ (ಚಿತ್ರ ನೋಡಿ). ಈ ಮಾಹಿತಿಯನ್ನು ಓದಿ ನನಗೆ ರೋಮಾಂಚನವಾಯ್ತು. ಒಂದುಕಡೆ ಅಪರೂಪದ ಆಲ್ಬಾಟ್ರೋಸ್ ಪಕ್ಷಿಗಳು ಇನ್ನೊಂದು ಕಡೆ ಈ ಐತಿಹಾಸಿಕ ಸ್ಥಳಕ್ಕೆ ಬಂದು ನಿಂತಿರುವುದು. ಅದೂ ಕೂಡ ಇಡೀ Waitangi ಒಪ್ಪಂದದ ಕುರಿತು ಇಡೀ ದೇಶದಲ್ಲಿ ಬಿಸಿಬಿಸಿ ಮಾತುಕತೆ ನಡೆಯುತ್ತಿದ್ದ ಸಮಯದಲ್ಲಿ ಒಪ್ಪಂದ ಜಾರಿಯಾದ ಸ್ಥಳದಲ್ಲಿ ಅವತ್ತು ನಾನಿದ್ದದ್ದು. ಏನು ಹೇಳುವುದು?! ಇಂತಹ ಅನುಭವಗಳು ಬದುಕಿಗೊಂದು ಬೋನಸ್! ಡಬಲ್ ಡಬಲ್ ಬೋನಸ್.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.