Advertisement
ಆರ್ಥಿಕ ಬಿಕ್ಕಟ್ಟಿನ ಆಂತರಿಕ ಗಲಭೆಯಲ್ಲಿ ಶ್ರೀಲಂಕಾ ಪ್ರವಾಸ: ಡಾ. ವೆಂಕಟಸ್ವಾಮಿ ಪ್ರವಾಸ ಕಥನ

ಆರ್ಥಿಕ ಬಿಕ್ಕಟ್ಟಿನ ಆಂತರಿಕ ಗಲಭೆಯಲ್ಲಿ ಶ್ರೀಲಂಕಾ ಪ್ರವಾಸ: ಡಾ. ವೆಂಕಟಸ್ವಾಮಿ ಪ್ರವಾಸ ಕಥನ

ಶ್ರೀಲಂಕಾದಲ್ಲಿರುವ ಪರಿಸ್ಥಿತಿಯಿಂದ ಗೈಡ್ ಬರಲಿಲ್ಲವೇ? ಅಥವಾ ತಪ್ಪಿಸಿಕೊಂಡನೆ? ಸ್ವಲ್ಪ ಗಾಬರಿಯಾಯಿತು. ಮತ್ತೆ ನಾವಿಬ್ಬರು ಸುಶೀಲ ಮತ್ತು ಶಾಂತಮ್ಮ ಹತ್ತಿರಕ್ಕೆ ಹೋದೆವು. ಅಷ್ಟರಲ್ಲಿ ನಮ್ಮ 12 ಜನರ ಗುಂಪಿನ ಒಂದಷ್ಟು ಜನರು ನಮ್ಮಂತೆ ಗೈಡ್‌ಗಾಗಿ ಹುಡುಕಾಡುತ್ತಿದ್ದರು. ಕೊನೆಗೂ ಒಬ್ಬಾತ ತಮಿಳಿನಲ್ಲಿ ಮಾತನಾಡುತ್ತ ಚಾರಿಯಟ್ ವರ್ಲ್ಡ್‌ ಟೂರ್ ಎಂದು ಹತ್ತಿರಕ್ಕೆ ಬಂದ. ನಾನು, `ಏಯ್ ಎಲ್ಲಿ ಹೋಗಿದ್ದೆಯೊ ಮಹರಾಯ ಇಷ್ಟೊತ್ತು? ನಾವೆಲ್ಲ ಹುಡುಕಿ ಹುಡುಕಿ ಸಾಕಾಯಿತು’ ಎಂದೆ. ಆತ ಇಂಗ್ಲಿಷ್ ಮತ್ತು ತಮಿಳು ಮಾತನಾಡತೊಡಗಿದ.
ಶ್ರೀಲಂಕಾ ಪ್ರವಾಸದ ಕುರಿತು ಡಾ. ವೆಂಕಟಸ್ವಾಮಿ ಬರಹ

ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಈಗ ಪಾತಾಳಕ್ಕಿಳಿದು ಅದರ ರೂಪಾಯಿ ಮೌಲ್ಯ ನೆಲಕಚ್ಚಿದೆ. ನಮ್ಮ ಒಂದು ರೂಪಾಯಿ ಅದರ ನಾಲ್ಕು ರೂಪಾಯಿಗೆ ಸಮ. ನಮ್ಮ ಸುದ್ದಿ ಚಾನಲ್‌ಗಳು ಶ್ರೀಲಂಕಾದಲ್ಲಿ ಒಂದು ಲೀ. ಹಾಲು 700ರೂ, ಒಂದು ಕೆ.ಜಿ. ಅಕ್ಕಿ 500ರೂ, ಪೆಟ್ರೋಲ್ 350ರೂ, ಡೀಸಲ್ 200 ರೂ, ಒಂದು ಲೀ. ನೀರು 150ರೂ. ಶ್ರೀಲಂಕಾದಲ್ಲಿ ಎಲ್ಲೆಲ್ಲೂ ಪ್ರಕ್ಷುಬ್ಧತೆ, ಕೊಲಂಬೊ ವಿಮಾನ ನಿಲ್ದಾಣ 13 ಗಂಟೆ ಕಾಲ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಮುಳುಗಿದೆ. ಹೀಗೆ ಏನೇನೊ ಬಿತ್ತರಿಸುತ್ತಿದ್ದವು. ಈ ಎಲ್ಲದರ ಮಧ್ಯೆ ಬೆಂಗಳೂರಿನ ಚಾರಿಯಟ್ ವರ್ಲ್ಡ್‌ ಟೂರ್ ಪ್ಯಾಕೇಜ್ ಮೂಲಕ 13ರಂದು 12 ಜನರ ನಮ್ಮ ಗುಂಪು ಬೆಳಗಿನ ಜಾವ 3.30ಕ್ಕೆ ಬೆಂಗಳೂರು ಬಿಟ್ಟು ಕೊಲಂಬೊ ಕಡೆಗೆ ಹೊರಟಿತು. ಬಡಕಲು ಶ್ರೀಲಂಕಾ ಏರ್‌ಲೈನ್ಸ್ ವಿಮಾನ 4.30ಕ್ಕೆ ಮಳೆ ಸುರಿಯುತ್ತಿರುವ ಕೊಲಂಬೊ ವಿಮಾನ ನಿಲ್ದಾಣದಲ್ಲಿ ಇಳಿದುಕೊಂಡಿತು. ವಿಮಾನ ಇಳಿಯುವುದಕ್ಕೆ ಮುನ್ನ ಒಂದು ಬಿಸಿ ಪಪ್ಸ್‌, ಆಪಲ್ ಜ್ಯೂಸು ಮತ್ತು ಅರ್ಧ ಬಾಟಲ್ ನೀರು ಕುಡಿಸಿದ್ದರು.

ವಿಮಾನ ನಿಲ್ದಾಣದಲ್ಲಿ ವಿದ್ಯುತ್ ದೀಪಗಳು ಉರಿಯುತ್ತಿದ್ದು ಸ್ವಲ್ಪ ಸಮಾಧಾನಗೊಂಡೆವು. ಆಶ್ಚರ್ಯವೆಂದರೆ ಇಮಿಗ್ರೇಷನ್‌ನಲ್ಲಿ ನೂರಕ್ಕೆ 90ರಷ್ಟು ಯುರೋಪಿಯನ್ನರೆ ತುಂಬಿದ್ದರು. ಶ್ರೀಲಂಕಾದ ಪರಿಸ್ಥಿತಿ ಇವರಿಗೆ ಗೊತ್ತಿಲ್ಲವೆ ಎನ್ನುವ ಅನುಮಾನದ ಜೊತೆಗೆ ನಮ್ಮ ಸುದ್ದಿ ಚಾನಲ್‌ಗಳು ಶ್ರೀಲಂಕಾದ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ಪ್ರಸಾರ ಮಾಡಿ ಯಾತ್ರಿಕರು ಬರದಂತೆ ಮಾಡುತ್ತಿದ್ದಾರೆಯೆ? ಎನ್ನುವ ಅನುಮಾನವೂ ಹುಟ್ಟಿಕೊಂಡಿತು. ನಾವು ಶ್ರೀಲಂಕಾಗೆ ಹೋಗುತ್ತಿದ್ದೇವೆ ಎಂದು ತಿಳಿದ ಕೆಲವು ಗೆಳೆಯರು/ನೆಂಟರು ಹೌಹಾರಿ ಅಯ್ಯೋ ಅಲ್ಲಿಗ್ಯಾಕೆ ಹೋಗ್ತಾಇದ್ದೀರ? ಅಲ್ಲಿ ಅನ್ನ, ನೀರು ಏನೂ ಇಲ್ಲವಂತೆ ಎಂದಿದ್ದರು. ಪ್ಯಾಕೇಜ್ ಟೂರ್ ಬುಕ್ ಮಾಡಿ ಹಣ ಕಟ್ಟಿದ ಮೇಲೆ ಅದು ಹಿಂದಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ನಾವು ನಮ್ಮ ನಿರ್ಧಾರವನ್ನು ಬದಲಿಸಲಿಲ್ಲ.

ವಿಮಾನ ಇಳಿದು ಇಮಿಗ್ರೇಷನ್ ಮುಗಿಸಿಕೊಂಡು ಹೊರಕ್ಕೆ ಬಂದರೆ ನಮಗಾಗಿ ಅಲ್ಲಿ ಯಾರೂ ಕಾಯುತ್ತಿರಲಿಲ್ಲ. ನಮ್ಮ ಗುಂಪಿನಲ್ಲಿ 12 ಜನ ಇದ್ದರೂ ಅದುವರೆಗೂ ನಾವು ನಾಲ್ವರನ್ನು ಬಿಟ್ಟರೆ ಉಳಿದವರು ಯಾರೂ ನಮಗೆ ಪರಿಚಯವಿರಲಿಲ್ಲ. ನಾನು, ಸುಶೀಲ, ಸ್ಮಿಥಾ ರೆಡ್ಡಿ ಮತ್ತು ಶಾಂತಮ್ಮ. ಸುಶೀಲ ಮತ್ತು ಶಾಂತಮ್ಮನನ್ನು ಅಲ್ಲಿಯೇ ಇರುವಂತೆ ಹೇಳಿ ನಾನೂ ಸ್ಮಿಥಾ ರೆಡ್ಡಿ ಹೊರಗಡೆ ಬಂದು ಚಾರಿಯಟ್ ವರ್ಲ್ಡ್‌ ಟೂರ್ ಕೊಟ್ಟಿದ್ದ ಕ್ಯಾಪ್ ಹಾಕಿಕೊಂಡಿರುವವರು ಯಾರಾದರು ಕಾಣಿಸುತ್ತಾರೆಯೆ ಎಂದು ಹುಡುಕಾಡಿದೆವು. ಗೈಡ್ ನನ್ನನ್ನ ಗುರುತಿಸಲಿ ಎಂದು ನಾನು ಕ್ಯಾಪ್ ಹಾಕಿಕೊಂಡಿದ್ದೆ. ಹೊರಗಡೆ ಮಳೆ ಸಣ್ಣಗೆ ಜಿನುಗುತ್ತಿತ್ತು. ನಮ್ಮ ಫೋನುಗಳಿಂದ ಗೈಡ್‌ಗೆ ಫೋನ್ ಮಾಡಿದರೆ ಹೋಗಲಿಲ್ಲ. ಈಗ ಏನು ಮಾಡುವುದು? ಅಲ್ಲಿದ್ದ ಒಂದಿಬ್ಬರು ಸ್ಥಳೀಯರನ್ನು ಮಾತನಾಡಿಸಿದರೆ ಅವರಿಗೆ ಸಿಂಹಳಿ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ಹೊರಗೆ ಸಹಾಯಕವಾಣಿಯ ಹತ್ತಿರ ಹೋಗಿ ವಿಚಾರಿಸಿದರೆ ಆತ ಅವನು ಪಕ್ಕದ ಕಿಟಕಿ ತೋರಿಸಿದ. ಆದರೆ ಅಲ್ಲಿ ಯಾರೂ ಇರಲಿಲ್ಲ. ಶ್ರೀಲಂಕಾದಲ್ಲಿರುವ ಪರಿಸ್ಥಿತಿಯಿಂದ ಗೈಡ್ ಬರಲಿಲ್ಲವೇ? ಅಥವಾ ತಪ್ಪಿಸಿಕೊಂಡನೆ? ಸ್ವಲ್ಪ ಗಾಬರಿಯಾಯಿತು. ಮತ್ತೆ ನಾವಿಬ್ಬರು ಸುಶೀಲ ಮತ್ತು ಶಾಂತಮ್ಮ ಹತ್ತಿರಕ್ಕೆ ಹೋದೆವು. ಅಷ್ಟರಲ್ಲಿ ನಮ್ಮ 12 ಜನರ ಗುಂಪಿನ ಒಂದಷ್ಟು ಜನರು ನಮ್ಮಂತೆ ಗೈಡ್‌ಗಾಗಿ ಹುಡುಕಾಡುತ್ತಿದ್ದರು. ಕೊನೆಗೂ ಒಬ್ಬಾತ ತಮಿಳಿನಲ್ಲಿ ಮಾತನಾಡುತ್ತ ಚಾರಿಯಟ್ ವರ್ಲ್ಡ್‌ ಟೂರ್ ಎಂದು ಹತ್ತಿರಕ್ಕೆ ಬಂದ. ನಾನು, `ಏಯ್ ಎಲ್ಲಿ ಹೋಗಿದ್ದೆಯೊ ಮಹರಾಯ ಇಷ್ಟೊತ್ತು? ನಾವೆಲ್ಲ ಹುಡುಕಿ ಹುಡುಕಿ ಸಾಕಾಯಿತು’ ಎಂದೆ. ಆತ ಇಂಗ್ಲಿಷ್ ಮತ್ತು ತಮಿಳು ಮಾತನಾಡತೊಡಗಿದ.

ಕೊನೆಗೂ ಗೈಡ್ ನಟರಾಜನ್ 12 ಜನರನ್ನು ಒಟ್ಟುಗೂಡಿಸಿ ಟೆಂಪೋದಲ್ಲಿ ಹತ್ತಿಸಿಕೊಂಡು ಕೊಲಂಬೊದ ಹೊರವಲಯದ ಮೀನುಗಾರರ ಪಟ್ಟಣ ನುಗುಂಬೊ ಕಡೆಗೆ ಕರೆದೊಯ್ಯುವಾಗ ನಟರಾಜನ್, `ನೀವೇನೂ ಭಯ ಪಡಬೇಡಿ, ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ. ಶ್ರೀಲಂಕಾ ಜನರು ತುಂಬಾ ಒಳ್ಳೆಯವರು, ಶಾಂತಿಪ್ರಿಯರು, ಸ್ನೇಹಪರರು. ಆದರೆ ಹೋಟಲುಗಳಲ್ಲಿ, ರಾತ್ರಿ ಹೊರಗಡೆ ಹೋದಾಗ ಯಾರಾದರು ನಿಮ್ಮನ್ನು ಪರಿಚಯ ಮಾಡಿಕೊಳ್ಳಲು ಬರಬಹುದು. ಅದೂಇದೂ ಮಾತನಾಡಿ ಕೊನೆಗೆ ಹಣ ಕೇಳಬಹುದು. ಶ್ರೀಲಂಕಾದಲ್ಲಿ ಈಗ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಪೆಟ್ರೋಲ್ ಲೀ. 350, ಡೀಸಲ್ ಲೀ. 170ರೂ. ಕುಕ್ಕಿಂಗ್ ಗ್ಯಾಸ್ 3,700ರೂ. ಆದರೆ ಭಾರತಕ್ಕೆ ಹೋಲಿಸಿದರೆ ಇದು ಕಡಿಮೆ, ಎಂದ.

ಸಮಯ ಬೆಳಿಗ್ಗೆ ಆರು ಗಂಟೆ. ಸಣ್ಣಸಣ್ಣ ಟಾರ್ ರಸ್ತೆಗಳು. ಎರಡೂ ಕಡೆ ಮಾವು, ತೆಂಗು, ಹಲಸು, ಅಡಿಕೆ ಮತ್ತು ವಿವಿಧ ರೀತಿಯ ಗಿಡಮರಗಳಿದ್ದವು. ನನಗೆ ಅಸ್ಸಾಂನ ಬ್ರಹ್ಮಪುತ್ರಾ ನದಿ ಕಣಿವೆಯ ಹಳ್ಳಿಗಳು ಮತ್ತು ಹಸಿರು ತೋಟಗಳ ಮಧ್ಯೆ ಹೋಗುತ್ತಿರುವಂತೆ ಭಾಸವಾಯಿತು. ಮನೆ ಬಾಗಿಲುಗಳು ಇನ್ನೂ ಮುಚ್ಚಿಕೊಂಡೆ ಇದ್ದವು. ಅಲ್ಲಿಂದ ಒಂದು ಫೋರ್‌ಸ್ಟಾರ್ ಹೋಟಲ್ ತಲುಪಿದಾಗ ಎಲ್ಲವೂ ಸಾಮಾನ್ಯವಾಗಿತ್ತು. ಕೋಣೆಯಲ್ಲಿ ಎರಡು ಲೀ. ನೀರು, ಹಾಲಿನ ಪುಡಿ, ಕಾಫಿ, ಟೀ ಪಾಕೆಟ್‌ಗಳು ಇದ್ದವು. ನೀರು ಕುಡಿದು, ಒಳ್ಳೆ ಶ್ರೀಲಂಕಾ ಟೀ ಮಾಡಿಕೊಂಡು ಕುಡಿದೆವು. ಏಸಿ ನಡೆಯುತ್ತಿದ್ದು, ಸ್ನಾನದ ಕೋಣೆಯಲ್ಲಿ ಬಿಸಿ ನೀರು ಬರುತ್ತಿತ್ತು. ಕಾಂಪ್ಲಿಮೆಂಟ್ ಬ್ರೇಕ್‌ಫಾಸ್ಟ್‌ಗೆ ಹೋದಾಗ ಲೆಕ್ಕವಿಲ್ಲದಷ್ಟು ವೆಜ್, ನಾನ್‌ವೆಜ್, ಹಣ್ಣು, ಬೇಕರಿ ಐಟಮ್‌ಗಳು ಇದ್ದವು. ಡೈನಿಂಗ್ ಹಾಲ್ ತುಂಬಾ ಯೂರೋಪಿಯನ್ನರೆ ತುಂಬಿಕೊಂಡಿದ್ದರು. ಶ್ರೀಲಂಕಾ ನಿಜವಾಗಿ ಆರ್ಥಿಕ ತೊಂದರೆಗೆ ಸಿಲುಕಿಕೊಂಡಿದೆಯೇ? ಎನ್ನುವ ಪ್ರಶ್ನೆ ಕಾಡತೊಡಗಿತು.

(ದಾರಿಯಲ್ಲಿ ಸಿಕ್ಕಿದ ಆನೆಗಳು ಹಿಂಡು)

ಸುಮಾರು ಏಳು ಕೋಟಿ ವರ್ಷಗಳ ಹಿಂದೆ ಅಂಟಾರ್ಟಿಕ್‌ನಿಂದ ಬೇರ್ಪಟ್ಟ ಇಂಡಿಯನ್ ಭೂಫಲಕದ ಬಾಲವಾಗಿದ್ದ ಶ್ರೀಲಂಕಾ ಕೇವಲ ಕೆಲವು ಸಾವಿರ ವರ್ಷಗಳ ಹಿಂದೆ ರಾಮೇಶ್ವರಮ್ ಮತ್ತು ಜಾಫ್ನಾ ಮಧ್ಯೆ ಹಿಂದೂ ಮಹಾಸಾಗರದಲ್ಲಿ `ಪಾಕ್ ಸ್ಟ್ರೇಟ್’ (ಬಿರುಕು) ಕಾಣಿಸಿಕೊಂಡು ಪ್ರತ್ಯೇಕಗೊಂಡಿತು. ಹಾಗಾಗಿ ಇಂದಿಗೂ ಎರಡೂ ದೇಶಗಳ ಭೌಗೋಳ-ಭೂಇತಿಹಾಸ, ಸಸ್ಯಸಂಕುಲ-ಪ್ರಾಣಿಪಕ್ಷಿ, ಕಲೆ-ಸಂಸ್ಕೃತಿ ಪುರಾಣಗಳನ್ನು ಹಂಚಿಕೊಂಡಿರುವುದು ಕಾಣಿಸುತ್ತದೆ. ಇನ್ನು ರಾಮಾಯಣದ ಕಥೆಗೆ ಬಂದಾಗ ಶ್ರೀಲಂಕಾ ಮತ್ತು ಭಾರತವನ್ನು ಪ್ರತ್ಯೇಕಿಸಲು ಸಾಧ್ಯವೇ ಇಲ್ಲ. ಮೂರು ಸಾವಿರ ವರ್ಷಗಳ ಐತಿಹಾಸಿಕ ದಾಖಲೆ ಇರುವ ಶ್ರೀಲಂಕಾದಲ್ಲಿ 1.25 ಲಕ್ಷ ವರ್ಷಗಳ ಹಿಂದಿನ ಪ್ರಾಗ್ಜೀವಿ ತಾಣಗಳು ದೊರಕಿವೆ. ಇಲ್ಲಿನ ಮೂಲ ಜನರು ಮೊದಲಿಗೆ ಆಫ್ರಿಕಾದಿಂದ ಕಡಲ ಮೇಲೆ ತೆಪ್ಪಗಳಲ್ಲಿ ಬಂದವರು ಎನ್ನಲಾಗಿದೆ. ದ್ರಾವಿಡರೂ ಕೂಡ ಮೂಲವಾಗಿ ಆಫ್ರಿಕಾ ಖಂಡದಿಂದ ಬಂದವರೆ ಆಗಿದ್ದಾರೆ. ಪಾಲಿ ಭಾಷೆಯಲ್ಲಿ ದಾಖಲಾಗಿರುವ ಬುದ್ಧನ ಬಗೆಗಿನ ವಿವರಣೆಗಳನ್ನು `ಪೋಲಿಕಾನನ್’ ಎಂದು ಕರೆಯಲಾಗಿದ್ದು ನಾಲ್ಕನೆ ಬೌದ್ಧ ಕೌನ್ಸಿಲ್ ಕ್ರಿ.ಪೂ. 29ರಲ್ಲಿ ಶ್ರೀಲಂಕಾದಲ್ಲಿ ನಡೆದಿರುವುದಾಗಿ ದಾಖಲೆಗಳು ದೊರಕಿವೆ. ಬೌದ್ಧ ರಾಜ ಅಶೋಕನ ಮಗ ಮಹೇಂದ್ರ ಮತ್ತು ಮಗಳು ಸಂಘಮಿತ್ತ/ತ್ರ ಶ್ರೀಲಂಕಾಗೆ ಬಂದು ಬೌದ್ಧ ಧಮ್ಮವನ್ನು ಸ್ಥಾಪಿಸಿದರು ಎನ್ನುವ ದಾಖಲೆಗಳಿವೆ.

ಕರ್ನಾಟಕದ ಭೂವಿಸ್ತೀರ್ಣ 191,791 ಚ.ಕಿ.ಮೀ. ಇದ್ದು ಶ್ರೀಲಂಕಾದ ಭೂವಿಸ್ತೀರ್ಣ ಕೇವಲ 65,610 ಚ.ಕಿ.ಮೀ. ಅಂದರೆ ಶ್ರೀಲಂಕಾ, ಕರ್ನಾಟಕದ ಸುಮಾರು ಮೂರನೇ ಒಂದು ಭಾಗ. ಇಲ್ಲಿ 75% ಸಿಂಹಳಿಯರು, 11% ಶ್ರೀಲಂಕಾ ತಮಿಳರು, 9.2% ತಮಿಳುನಾಡಿನ ತಮಿಳರು ಮತ್ತು ಉಳಿದವರು 4% ಜನರು. ಇವರಲ್ಲಿ 72% ಬೌದ್ಧರು, 12.6% ಹಿಂದೂಗಳು 9.7% ಮುಸ್ಲಿಮರು ಮತ್ತು 7.4% ಕ್ರೈಸ್ತರಿದ್ದಾರೆ. ಶ್ರೀಲಂಕಾ ಭೌಗೋಳಿಕವಾಗಿ ಹಿಂದೂ ಮಹಾಸಾಗರದಲ್ಲಿನ ಸ್ಟ್ರಾಟೆಜಿಕ್ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ಮೂರು ದಶಕಗಳ ಹಿಂದೆಯೇ ಚೀನಾದ ವಕ್ರಕಣ್ಣು ಇದರ ಮೇಲೆ ಬಿದ್ದಿತು. ಶ್ರೀಲಂಕಾ ಹಿಂದಿನ ಕಾಲದಲ್ಲಿ ರೇಷ್ಮೆರಸ್ತೆಯ ದಾರಿಯಲ್ಲಿದ್ದು ಈಗಲೂ ಅದು ಬಹಳ ಮುಖ್ಯವಾದ ಮೆರಿಟೈಮ್ ಸಿಲ್ಕ್ ರಸ್ತೆಯ ವ್ಯಾಪಾರ ರಸ್ತೆಯಲ್ಲಿಯೇ ಇದೆ. ಪೂರ್ವ ಏಷ್ಯಾದಿಂದ ಯುರೋಪ್‌ವರೆಗೂ ನಡೆಯುತ್ತಿದ್ದ ವ್ಯಾಪಾರ ಮಾರ್ಗವನ್ನು ಅನುರಾಧಾಪುರಂ (ಬೌದ್ಧಕೇಂದ್ರ) ಕಾಲವೆಂದು ಪರಿಗಣಿಸಲಾಗಿದೆ.

ಚೀನಾ ಈಗ ಅದೇ ಕಾರಣಕ್ಕೆ ಶ್ರೀಲಂಕಾಗೆ ಹೇರಳ ಸಾಲ ಕೊಟ್ಟು ಸೂಲಕ್ಕೆ ಏರಿಸಿ ಕುಳಿತುಕೊಂಡಿದೆ. ಚೀನಾದ ಮುಖ್ಯ ಉದ್ದೇಶ ಹಿಂದೂಮಹಾಸಾಗರವನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳುವುದು. ಈಗಾಗಲೇ ಅದು ಸಮುದ್ರಕ್ಕೆ ಸಾಕಷ್ಟು ಮರಳು-ಮಣ್ಣು ತುಂಬಿ `ಮಾತ್ರಾ’ ಪ್ರದೇಶದಲ್ಲಿ ಒಂದು ದೊಡ್ಡ ಪಟ್ಟಣವನ್ನೇ ನಿರ್ಮಿಸಿ ಅದರಲ್ಲಿ ಚೀನಿಯರನ್ನು ತುಂಬಿಸಿ ಇಟ್ಟುಕೊಂಡಿದೆ. ಚೀನಾ ಕೊಲಂಬೊದಿಂದ ಮಾತ್ರಾವರೆಗೆ 300 ಕಿ.ಮೀ.ಗಳ ಎಕ್ಸ್ಪ್ರೆಸ್ ರಸ್ತೆ ಮಾಡಿದ್ದು ಅದರಲ್ಲಿ ಬರುವ ವಾಹನಗಳ ತೆರಿಗೆಯ 90% ಚೀನಾ ಸರ್ಕಾರಕ್ಕೆ ಹೋಗುತ್ತಿದ್ದು, ಕೇವಲ 10% ಮಾತ್ರ ಶ್ರೀಲಂಕಾಗೆ ದೊರಕುತ್ತಿದ್ದು ಇದು 30 ವರ್ಷಗಳ ಒಪ್ಪಿಗೆಯಂತೆ.

(ಚೀನಿಯರು ನಿರ್ಮಿಸಿರುವ ರಸ್ತೆಗಳು)

ಆರು ದಿನಗಳ ಕಾಲ ನಾವು ಓಡಾಡಿದ ರಸ್ತೆಗಳು ತುಂಬಾ ಚೆನ್ನಾಗಿದ್ದು ಒಂದೇಒಂದು ಸಣ್ಣ ಉಬ್ಬು ಕೂಡ ಕಾಣಿಸಲಿಲ್ಲ. ಇದ್ಹೇಗೆ ಸಾಧ್ಯ? ಎಂದು ನಟರಾಜನ್‌ಗೆ ಕೇಳಿದಾಗ ಕೆಲವು ಕುತೂಹಲಕರ ವಿಷಯಗಳು ಹೊರಬಿದ್ದವು. ಚೀನಾ ತನ್ನ ದೇಶದ ಜೈಲುಗಳಲ್ಲಿದ್ದ ಸಾವಿರಾರು ಖೈದಿಗಳು ಮತ್ತು ಕೂಲಿ ಆಳುಗಳನ್ನು (ಹೆಣ್ಣು-ಗಂಡು) ಶ್ರೀಲಂಕಾಗೆ ಕರೆದುತಂದು ಖುದ್ದಾಗಿ ಅವರೇ ನಿಂತು ರಸ್ತೆಗಳನ್ನು ನಿರ್ಮಿಸಿದರಂತೆ! ಕೊಲಂಬೊದಲ್ಲಿ ಒಂದೂವರೆ ಸಾವಿರ ಜನರು ಹಿಡಿಯುವ ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಿಸಿ ದಾನ ಮಾಡಿದೆ. ಅದೇ ರೀತಿ ಜಪಾನ್ ಶ್ರೀಲಂಕಾಗೆ ಹೊಸ ಪಾರ್ಲಿಮೆಂಟ್ ಕಟ್ಟಡ ಕಟ್ಟಿಕೊಟ್ಟಿರುವುದಾಗಿ ತಿಳಿಯಿತು. ಕೊಲಂಬೊದಲ್ಲಿರುವ ಅನೇಕ ಕಟ್ಟಡಗಳನ್ನು ನೆಲವನ್ನು ವಿದೇಶಗಳಿಗೆ/ವಿದೇಶಿ ಕಂಪನಿಗಳಿಗೆ ಮಾರಿಕೊಂಡಿರುವುದಾಗಿ ಗೈಡ್ ಹೇಳಿದ. ಈಗ ನಮ್ಮ ದೇಶದಲ್ಲಿ ಅಂಬಾನಿ, ಅದಾನಿಗಳಿಗೆ ಮಾತ್ರ ಮಾರಿಕೊಳ್ಳಲಾಗುತ್ತಿದೆ. ನಾಳೆ ಅವರು ವಿದೇಶಗಳಿಗೆ ಮಾರಿಕೊಳ್ಳಬಹುದು. 

ಶ್ರೀಲಂಕಾದ ಇತಿಹಾಸವನ್ನು ಕೆದಕಿದರೆ, ಮೊದಲಿಗೆ ಪೋರ್ಚುಗೀಸರ ಆಗಮನವಾಗಿ ಈ ದ್ವೀಪವನ್ನು ತಮ್ಮ ವಶಕ್ಕೆ ತೆಗೆದುಕೊಂಡುಬಿಟ್ಟರು. ಸಿಂಹಳಿಯರು ಮತ್ತು ಪೋರ್ಚುಗೀಸರ ನಡುವೆ ಯುದ್ಧ ನಡೆದ ಕಾಲದಲ್ಲಿಯೇ ಡಚ್ಚರು ಆಗಿನ ರಾಜಧಾನಿ ಕ್ಯಾಂಡಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡುಬಿಟ್ಟರು. ಮುಂದೆ ಡಚ್ಚರನ್ನು ಸೋಲಿಸಿದ ಬ್ರಿಟಿಷರು (1815-1948) ಆಡಳಿತ ನಡೆಸಿದರು. ಸಿಂಹಳಿಯರು ರಾಷ್ಟ್ರೀಯ ಆಂದೋಳನ ನಡೆಸಿ 1948ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಂಡರು. 1970ರ ದಶಕದಲ್ಲಿ ಶ್ರೀಲಂಕಾ ಮೇಲೆ ಅಮೆರಿಕ ಕಣ್ಣಾಕಿದಾಗ ಇಲ್ಲಿನ ತಮಿಳರು ಮತ್ತು ಸಿಂಹಳಿಯರ ಮಧ್ಯೆ ಘರ್ಷಣೆ ಪ್ರಾರಂಭವಾಗಲು ಭಾರತವೇ ಕಾರಣವಾಗಿ ದ್ವೀಪದಲ್ಲಿ ಎಲ್.ಟಿ.ಟಿ.ಇ. ಸಂಘಟನೆ ಹುಟ್ಟಿಕೊಂಡಿತು. ಅದರ ಸುದೀರ್ಘ ಸಂಘರ್ಷಣೆ 26 ವರ್ಷಗಳ ನಂತರ 2009ರಲ್ಲಿ ಟೈಗರ್ ಪ್ರಭಾಕರನ್ ಹತ್ಯೆಯೊಂದಿಗೆ ಅಂತ್ಯಗೊಂಡಿತು. ಈ ಸಂಘರ್ಷಣೆಯನ್ನು ಹತ್ತಿಕ್ಕಲು ರಾಜೀವ್ ಗಾಂಧಿ ಶ್ರೀಲಂಕಾ ಸಹಾಯಕ್ಕೆ ಭಾರತದ ಮಿಲಿಟರಿಯನ್ನು ಕಳಿಸಿದ ಕಾರಣ ತಮಿಳುನಾಡಿನ ರಾಮನಾಥಪುರಂನಲ್ಲಿ ರಾಜೀವ್ ಗಾಂಧಿ ಅವರ ಹತ್ಯೆ ನಡೆದುಹೋಯಿತು.

ಶ್ರೀಲಂಕಾ ಅನೇಕ ಅಂತರರಾಷ್ಟ್ರೀಯಯ ಸಂಸ್ಥೆಗಳ ಸದಸ್ಯತ್ವವನ್ನು ಪಡೆದುಕೊಂಡು ಭಾಗಿಯಾಗುತ್ತಾ ಬಂದಿದೆ. ಸಾರ್ಕ್, ಯು.ಎನ್, ಕಾಮನ್ ವೆಲ್ತ್, ಜಿ-77 ಮತ್ತು ನಾನ್ ಅಲೈನ್‌ಮೆಂಟ್ ಸದಸ್ಯತ್ವವನ್ನು ಪಡೆದುಕೊಂಡಿದೆ. ದಕ್ಷಿಣ ಪೂರ್ವ ಏಷ್ಯಾ ದೇಶಗಳಲ್ಲಿ ಯುಮೆನ್ ಡೆವಲಪ್‌ಮೆಂಟ್ ಇಂಡೆಕ್ಸ್ ಪಟ್ಟಿಯಲ್ಲಿ ಉನ್ನತ ಸ್ಥಾನ ಹಾಗೂ ತಲಾದಾಯ ಪಟ್ಟಿಯಲ್ಲೂ ಒಳ್ಳೆ ಸ್ಥಾನವನ್ನು ಪಡೆದುಕೊಂಡಿತ್ತು. ಆದರೆ ಈಗಿನ ಆರ್ಥಿಕ ಪರಿಸ್ಥಿತಿ ತೀರಾ ಗಂಭೀರವಾಗಿದೆ. ಅದು ಬಾಂಗ್ಲಾದೇಶ ಮತ್ತು ಪಾಕಿಸ್ಥಾನಗಳಿಗಿಂತ ಕೆಳಕ್ಕೆ ಕುಸಿದುಹೋಗಿದೆ. 75 ವರ್ಷ ವಯಸ್ಸಿನ ಪ್ರಧಾನ ಮಂತ್ರಿ ರಾಜಪಕ್ಷೆ ಮತ್ತು ಆತನ ಮೂವರು ತಮ್ಮಂದಿರು ಐದು ಮುಖ್ಯ ಸಚಿವ ಸ್ಥಾನಗಳನ್ನು ಹೊಂದಿದ್ದು ದೇಶದ 70% ಬಜೆಟ್ ಹಣವನ್ನು ಅವರೇ ನಿರ್ವಹಿಸುತ್ತಿದ್ದಾರೆ ಎಂಬುದಾಗಿ ತಿಳಿಯಿತು.

ಶ್ರೀಲಂಕಾಗೆ ಬರುವ ಹಣದ ಮೂಲಗಳೆಂದರೆ ಶ್ರೀಲಂಕಾ ಕಾರ್ಮಿಕರು ಮಧ್ಯ ಏಷ್ಯಾ ದೇಶಗಳಲ್ಲಿ ದುಡಿದು ಕಳುಹಿಸುವ ಹಣ ಮತ್ತು ಪ್ರವಾಸೋದ್ಯಮದಿಂದ ಬರುವ ಹಣ. ಗಾರ್ಮೆಂಟ್ಸ್, ಟೀ, ಮೀನುಗಾರಿಕೆ ರಫ್ತು ಇತ್ಯಾದಿ. ಕಳೆದ ಮೂರು ವರ್ಷಗಳಿಂದ ಕೋವಿಡ್ ಸೋಂಕು ರೋಗದಿಂದ ಪ್ರವಾಸೋದ್ಯಮ ಬಿದ್ದುಹೋಗಿದೆ. ಇನ್ನು 2019ರ ಈಸ್ಟರ್ ದಿನದಂದು ಕೊಲಂಬೊದ ಮೂರು ಹೋಟಲುಗಳು ಮತ್ತು ಮೂರು ಚರ್ಚ್‌ಗಳಲ್ಲಿ ಇಸ್ಲಾಮಿಕ್ ಉಗ್ರರು ಸ್ಫೋಟಿಸಿದ ಬಾಂಬ್‌ಗಳಿಂದ 269 ಜನರು ಪ್ರಾಣ ಕಳೆದುಕೊಂಡರು. ಇದರಲ್ಲಿ ಯುರೋಪ್ ದೇಶಗಳ 49 ಜನರು ಸೇರಿದ್ದು ಇದರಿಂದ ಶ್ರೀಲಂಕಾ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿತು.

2019ರಲ್ಲಿ ನಡೆದ ಚುನಾವಣಾ ಕಾಲದಲ್ಲಿ ರಾಜಪಕ್ಷೆ ಅವರು ಮುಂದಿನ 10 ವರ್ಷಗಳಲ್ಲಿ ಶ್ರೀಲಂಕಾ ದೇಶವನ್ನು ಸಂಪೂರ್ಣವಾಗಿ ಸಾವಯವ ಕೃಷಿಗೆ ಪರಿವರ್ತನೆ ಮಾಡುವುದಾಗಿ ಆಶ್ವಾಸನೆ ನೀಡಿದ್ದಲ್ಲದೆ ದೇಶದಾದ್ಯಂತ ಸಿಂಥೆಟಿಕ್ ಗೊಬ್ಬರ ಮತ್ತು ಕೀಟನಾಶಕಗಳನ್ನು ನಿಷೇಧಿಸಿಬಿಟ್ಟಿರು. ಜೊತೆಗೆ ಚೀನಾದಿಂದ ಬರಬೇಕಾಗಿದ್ದ 20 ಸಾವಿರ ಟನ್ ಸಾವಯವ ಗೊಬ್ಬರದಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾಗಳು ಇವೆಯೆಂದು ನಿಷೇಧಿಸಲಾಯಿತು. ಇದರಿಂದ ಕುಪಿತಗೊಂಡ ಚೀನಾ, ಶ್ರೀಲಂಕಾದ ಸರ್ಕಾರಿ ಬ್ಯಾಂಕ್ ಆಫ್ ಪೀಪಲ್ಸ್ ಮತ್ತು ಬ್ಯಾಂಕ್ ಆಫ್ ಶ್ರೀಲಂಕಾವನ್ನು ಕಪ್ಪು ಪಟ್ಟಿಗೆ ಸೇರಿಸಿಬಿಟ್ಟಿತು. ಶ್ರೀಲಂಕಾ ಜನರು ಹೆಚ್ಚು ಅಕ್ಕಿ ತಿನ್ನುವ ಜನರಾಗಿದ್ದು ಭತ್ತದ ಉತ್ಪಾದನೆ ಪಾತಾಳಕ್ಕೆ ಕುಸಿದುಹೋಗಿ ಹೊರ ದೇಶಗಳಿಂದ 450 ದಶಲಕ್ಷ ಡಾಲರ್ ಬೆಲೆಯ ಅಕ್ಕಿಯನ್ನು ಕೊಂಡುಕೊಳ್ಳಬೇಕಾಯಿತು ಮತ್ತು ರೈತರಿಗೆ ಸಾಕಷ್ಟು ಅನುದಾನವನ್ನು ನೀಡಬೇಕಾಯಿತು.

ಹಣದುಬ್ಬರ ಹೆಚ್ಚಾಗಿ ಯಾವುದೇ ತರಕಾರಿ ಕೆಜಿಗೆ 400ರೂ, ಲೀ. ನೀರು 70ರೂ, ಕೆ.ಜಿ. ಅಕ್ಕಿ 250ರೂ, ಹಾಲು 150ರೂ, ಇರುವುದಾಗಿ ತಿಳಿಯಿತು. ಕೊಲಂಬೊದಿಂದ ಕ್ಯಾಂಡಿ ಮತ್ತು ಕ್ಯಾಂಡಿಯಿಂದ ನುವುಲಾರ ಗಿರಿಧಾಮಗಳಿಗೆ ಹೋಗುವ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಬೆಟ್ಟಗುಡ್ಡಗಳು ಹೇರಳ ಹಸಿರು ಕಾಡುಗಳಿಂದ ತುಂಬಿಕೊಂಡಿದ್ದು ಸಮತಟ್ಟು ಪ್ರದೇಶಗಳು ಕಂಡುಬಂದು, ಇಲ್ಲೆಲ್ಲ ಭತ್ತ, ಕಬ್ಬು, ಹಣ್ಣು, ತರಕಾರಿ ಬೆಳೆಯಬಹುದಲ್ಲ ಎಂದು ಗೈಡ್‌ಗೆ ಕೇಳಿದಾಗ ಆತ “ಹೌದು. ಆದರೆ ಸರ್ಕಾರ ರೈತರಿಗೆ ಪ್ರೋತ್ಸಾಹ ನೀಡುತ್ತಿಲ್ಲ, ಕಷ್ಟಪಟ್ಟು ಬೆಳೆದರೆ ನಷ್ಟವಾಗುತ್ತದೆ,” ಎಂದ. ಸುತ್ತಲಿನ ಹಸಿರು ಮತ್ತು ಸಮೃದ್ಧ ನೆಲವನ್ನು ನೋಡಿದ ನಾನು ಇಲ್ಲಿ ಅಂತರ್ಜಲಕ್ಕೆ ಏನೂ ಬರವಿಲ್ಲ ಎಂದಾಗ, ಹೌದು ಸರ್ ನೀರಿಗೆ ತೊಂದರೆ ಇಲ್ಲ ಆದರೆ ಯಾರೂ ಕಷ್ಟ ಪಡುವುದಿಲ್ಲ. ದಿನಕೂಲಿ 1000 ದಿಂದ 2000, ಗಾರೆ ಕೆಲಸದ ಮೇಸ್ತ್ರಿಗೆ ದಿನಕ್ಕೆ 4000 ಕೊಡಬೇಕು. ಕೂಲಿ ಕೆಲಸಕ್ಕೆ ಜನರು ದೊರಕುತ್ತಿಲ್ಲ ಎಂದ. ಇದೆಲ್ಲ ಥೇಟ್ ನಮ್ಮ ದೇಶದ ಪರಿಸ್ಥಿತಿಯೇ ಆಗಿದೆ ಎಂದುಕೊಂಡೆ. ಶ್ರೀಲಂಕಾದ ಟೀ ತೋಟಗಳಲ್ಲಿ ದುಡಿಯುತ್ತಿರುವವರು ಈಗಲೂ ತಮಿಳು ಜನರೇ ಆಗಿದ್ದಾರೆ.

ಮತ್ತೆ ಜನರು ಹೇಗೆ ಜೀವನ ನಡೆಸುತ್ತಾರೆ ಎಂದು ಕೇಳಿದ್ದಕ್ಕೆ ಪ್ರತಿ ಕುಟುಂಬಕ್ಕೂ ತೆಂಗು, ಮಾವು, ಹಲಸಿನ ಮರಗಳಿದ್ದು, ಜೊತೆಗೆ ಒಂದಷ್ಟು ಭತ್ತ, ತರಕಾರಿ ಬೆಳೆದುಕೊಳ್ಳುತ್ತಾರೆ. ತೀರಾ ಬಡವರಾದವರಿಗೆ ಸರ್ಕಾರದಿಂದ ಒಂದಷ್ಟು ಹಣ ದೊರಕುತ್ತದೆ, ಎಂದ. ನಾವಿದ್ದ ಹೋಟಲ್‌ಗಳಲ್ಲಿ ಜನರೇಟರ್‌ಗಳಿದ್ದು ವಿದ್ಯುತ್ ಕಡಿತ ಆಗಲಿಲ್ಲ. ಆದರೆ ಹಳ್ಳಿ ಪಟ್ಟಣಗಳೆನ್ನದೆ ಎಲ್ಲಾ ಕಡೆ ಪ್ರತಿದಿನ ಮೂರುನಾಲ್ಕು ಸಲ 3-4 ಗಂಟೆಗಳ ಕಾಲ ವಿದ್ಯುತ್ ಕಡಿತ ಮಾಡಲಾಗುತ್ತದೆ ಎಂಬುದಾಗಿ ಗೈಡ್ ಹೇಳಿದ.

ಚೀನಾ ಕೋಟ್ಯಂತರ ರೂಪಾಯಿಗಳನ್ನು ಶ್ರೀಲಂಕಾದಲ್ಲಿ ಯಾವಯಾವ ಲೆಕ್ಕಾಚಾರ ಹಾಕಿಕೊಂಡು ಖರ್ಚು ಮಾಡಿದೆಯೋ ರಾಜಕಾರಣಿಗಳಿಗೆ ಮಾತ್ರ ಗೊತ್ತಿದ್ದು ಅದನ್ನು ಜನಸಾಮಾನ್ಯರಿಂದ ದೂರ ಇಡಲಾಗಿದೆ. ಜೊತೆಗೆ ಸಾಕಷ್ಟು ಹಣವನ್ನು ಸಾಲ ನೀಡಿದ್ದು ಅದರಲ್ಲಿ ಸಾಕಷ್ಟು ಹಣ ರಾಜಕಾರಣಿಗಳ ಜೇಬು ಸೇರಿರುವುದಾಗಿ ಹೇಳಲಾಗುತ್ತಿದೆ. ಈಗ ಭಾರತವೂ ಶ್ರೀಲಂಕಾಗೆ ಸಾಕಷ್ಟು ಸಾಲ ಕೊಟ್ಟು, ಐಒಸಿ’ಯಿಂದ ಪೆಟ್ರೋಲ್, ಡೀಸಲ್ ಸರಬರಾಜು ಮಾಡುತ್ತಿದೆ. ಶ್ರೀಲಂಕಾದಲ್ಲಿ ಕೇಳಿಬಂದ ಇನ್ನೊಂದು ವಿಷಯವೆಂದರೆ ಭಾರತ, ಉತ್ತರ ಶ್ರೀಲಂಕಾದ ಮೂರು ಸಣ್ಣಸಣ್ಣ ದ್ವೀಪಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಿದೆಯಂತೆ. ಜೊತೆಗೆ ಅದಾನಿ ಕಂಪನಿ ಈ ದ್ವೀಪದಲ್ಲಿ 51% ಷೇರುಗಳಿರುವ ತೈಲ ಸರಬರಾಜು ಕೇಂದ್ರವನ್ನು ಸ್ಥಾಪಿಸುತ್ತಿರುವುದಾಗಿ ತಿಳಿಯಿತು.

ಭಾರೀ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವ ಶ್ರೀಲಂಕಾ ಸಾಲದ ಹೊರೆಯನ್ನು ಕಡಿತಗೊಳಿಸುವಂತೆ ಚೀನಾ ದೇಶವನ್ನು ಕೇಳಿಕೊಳ್ಳುತ್ತಿದೆ. ಜೊತೆಗೆ ಶ್ರೀಲಂಕಾದ ಅಧಿಕಾರಿಗಳು ಮತ್ತು ಸಚಿವರಿರುವ ನಿಯೋಗವೊಂದು ಸಾಲ ಮನ್ನಾ ಮಾಡಲು ಐ.ಎಂ.ಎಫ್. ಸಂಸ್ಥೆಯನ್ನು ಕೇಳಿಕೊಳ್ಳಲು ಹೋಗಿದೆ ಎಂಬುದಾಗಿ ತಿಳಿಯಿತು. ವಿಪರ್ಯಾಸವೆಂದರೆ ಸಾಲ ಮಾಡಿದ್ದು ಮತ್ತು ಕಮಿಷನ್ ಹೊಡೆದಿದ್ದು ರಾಜಕಾರಣಿಗಳು. ಆದರೆ ತೆರಿಗೆ ಕಟ್ಟುತ್ತಿರುವುದು ಮಾತ್ರ ಜನಸಾಮಾನ್ಯರು ಮತ್ತು ಸರ್ಕಾರಿ ಉದ್ಯೋಗಿಗಳು. ಭಾರತವೂ ಇದೇ ದಾರಿಯಲ್ಲಿರುವುದು ದಿಗಿಲು ಹುಟ್ಟಿಸುತ್ತದೆ (ಪ್ರವಾಸ: ಏಪ್ರಿಲ್ 2022).

About The Author

ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ