
ಅವಳ ರಜೆ ಒಂದು ತಿಂಗಳು ಮುಗಿಯುತ್ತಿದ್ದಂತೆ ಕಚೇರಿಯಿಂದ ಫೋನ್ ಬರಲು ಶುರುವಾಯಿತು, ನೀವು ತಕ್ಷಣ ಬಂದು ಕೆಲಸಕ್ಕೆ ಸೇರಿಕೊಳ್ಳಬೇಕು ಎಂಬ ಆದೇಶ. ಇವಳಿಗೆ ಆಶ್ಚರ್ಯ ತನ್ನ ಎರಡು ತಿಂಗಳ ರಜೆ ಇನ್ನೂ ಮುಗಿದಿಲ್ಲ, ಮಗುವಿಗೆ ಕೇವಲ ಒಂದೇ ಒಂದು ತಿಂಗಳು, ಈ ಪರಿಸ್ಥಿತಿಯಲ್ಲಿ ಮಗುವನ್ನು ಬಿಟ್ಟು ಹೋಗೋದು ಹೇಗೆ? ಕಡೇಪಕ್ಷ ಇನ್ನೊಂದು ತಿಂಗಳು ಕಳೆದರೆ ಅಷ್ಟರಲ್ಲಿ ತಾನು ಮಗುವಿನ ಆರೈಕೆಗೆ ಬೇರೆ ವ್ಯವಸ್ಥೆ ಮಾಡಿ ಕೆಲಸಕ್ಕೆ ಬರಬಹುದು ಎಂದುಕೊಂಡು ಅದನ್ನೇ ಕಂಪೆನಿಯ ಮುಖ್ಯಸ್ಥರಿಗೆ ತಿಳಿಸಿದಳು. ಆದರೆ ಅವರು ಒಪ್ಪಲಿಲ್ಲ.
ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಉದ್ಯೋಗಸ್ಥ ಮಹಿಳೆಯರ ಪಾಡಿನ ಕುರಿತು ಡಿ. ಯಶೋದಾ ಬರಹ
ಮಾರ್ಚ್ ೮ಕ್ಕೆ ಅಂತಾರಾಷ್ಟ್ರೀಯ ಮಹಿಳಾ ದಿನ. ಈ ತಿಂಗಳು ಪೂರ್ತಿ ಮಹಿಳಾ ದಿನವನ್ನು ವಿವಿಧ ರೀತಿಯಲ್ಲಿ ಆಚರಿಸುತ್ತಿರುತ್ತಾರೆ. ಮುಖ್ಯವಾಗಿ ವಿವಿಧ ಕ್ಷೇತ್ರಗಳಲ್ಲಿನ ಮಹಿಳೆಯರ ಕೊಡುಗೆಗಳನ್ನು ಗುರುತಿಸಿ, ಅವರನ್ನು ಗೌರವಿಸುವ, ಸನ್ಮಾನಿಸುವ ಕಾರ್ಯವೂ ನಡೆಯುತ್ತದೆ. ಮಹಿಳೆಯರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಇವೆ.
ಇವೆಲ್ಲವು ಒಂದು ದಿನದ, ಕೆಲವು ದಿನಗಳ ಕಾರ್ಯಕ್ರಮಗಳಾಗುತ್ತವೆ. ಆದರೆ ಮಹಿಳೆ ದಿನನಿತ್ಯ ವಿವಿಧ ರೀತಿಯ ಸಂಕಷ್ಟಗಳಿಗೆ ಗುರಿಯಾಗುತ್ತಿದ್ದಾಳೆ. ಮಹಿಳಾ ದಿನದ ಹುಟ್ಟಿಗೆ ವೇತನ ತಾರತಮ್ಯವೂ ಒಂದು ಪ್ರಮುಖ ಕಾರಣ. ಶತಮಾನದ ಹಿಂದೆಯೇ ವೇತನ ಸಮಾನತೆಗಾಗಿ ಹಾಗೂ ಹಲವಾರು ವಿಷಯಗಳಿಗಾಗಿ ವಿಶ್ವದಾದ್ಯಂತ ದೊಡ್ಡ ಪ್ರತಿಭಟನೆಯೇ ನಡೆಯಿತು. ಆದರೆ ಶತಮಾನ ಕಳೆದರೂ ವೇತನ ತಾರತಮ್ಯ ಹಾಗೂ ಇನ್ನಿತರ ಸಮಸ್ಯೆಗಳಿಗೆ ಪರಿಹಾರ ದೊರಕದೇ ಇರುವುದು ವಿಷಾದ.
ವಿಶ್ವದಾದ್ಯಂತ ಇಂಥ ತಾರತಮ್ಯ ಹಾಗೂ ಅನೇಕ ಸಮಸ್ಯೆಗಳಿಗೆ ಸಿಲುಕಿ ಗೆದ್ದುಬಂದಿರುವ, ವಿವಿಧ ರೀತಿಯ ದೌರ್ಜನ್ಯಗಳಿಗೆ ಒಳಗಾಗಿದ್ದರೂ ಸಹಿಸಿ, ಧೈರ್ಯದಿಂದ ಮುನ್ನುಗ್ಗಿರುವ ಮಹಿಳೆಯರ ಸಂಖ್ಯೆ ನಮ್ಮಲ್ಲಿ ದೊಡ್ಡದೇ ಇದೆ. ಇವರೆಲ್ಲರನ್ನು ಮಾದರಿಯಾಗಿಟ್ಟುಕೊಂಡು ಬೀಗದೇ, ಬಾಗದೇ ಬೆಳಗುವ ಗುರಿಯಲ್ಲಿ ಮಹಿಳೆಯರು ಮುನ್ನುಗ್ಗಲು ಪ್ರಯತ್ನಿಸಬೇಕು.
ಬಡ್ತಿ ಭೇದ
ಆ ಕಂಪೆನಿಯಲ್ಲಿ ಆ ದಿನ ಕೆಲಸಗಾರರಿಗೆ ಬಡ್ತಿ ನೀಡುವ ದಿನ. ಅವಳಿಗೋ ತುಂಬಾ ಖುಷಿ. ತನಗೆ ಈ ಬಾರಿ ಭಾರಿ ಮೊತ್ತದ ಬಡ್ತಿ ಸಿಗಬಹುದೆಂಬ ನಂಬಿಕೆ. ತನ್ನ ಸರದಿ ಬಂದಾಗ ಕಂಪೆನಿಯ ಮುಖ್ಯಸ್ಥರ ಚೇಂಬರ್ಗೆ ಹೋಗುತ್ತಾಳೆ. ಬಡ್ತಿ ಪತ್ರವನ್ನು ನೀಡುತ್ತಾ ಮುಖ್ಯಸ್ಥರು ಹೇಳುತ್ತಾರೆ- ‘ನಿಮ್ಮ ಕೆಲಸ ನಮಗೆ ತೃಪ್ತಿ ನೀಡಿದೆ, ಇನ್ನು ಚೆನ್ನಾಗಿ ಕೆಲಸ ಮಾಡಿ’ ಅಂಥ. ಅವಳು ಸಂತೋಷದಿಂದ ಪತ್ರವನ್ನು ತೆಗೆದುಕೊಂಡು ಬಂದು ತನ್ನ ಸ್ಥಳದಲ್ಲಿ ಕೂತು ತೆಗೆದು ನೋಡುತ್ತಾಳೆ. ಅವಳ ಉತ್ಸಾಹವೆಲ್ಲ ಇಳಿದು ಹೋಗುತ್ತದೆ. ಅದು ತಾನು ನಿರೀಕ್ಷಿಸಿದ್ದಕ್ಕಿಂತ ತುಂಬಾ ಕಡಿಮೆ ಮೊತ್ತದ್ದಾಗಿರುತ್ತೆ. ತನ್ನ ಜೊತೆ ಕೆಲಸ ಮಾಡುತ್ತಿದ್ದ ಪುರುಷ ಸಹೋದ್ಯೋಗಿ ಕೆಲಸ ಬಿಟ್ಟು ಹೋದ ಮೇಲೆ ಇಬ್ಬರು ಮಾಡುವ ಕೆಲಸವನ್ನು ಸುಮಾರು ಒಂದು ವರ್ಷ ಕಾಲ ಒಬ್ಬಳೇ ಮಾಡಿದ್ದಳು. ಅದರಿಂದ ಕಂಪೆನಿಗೆ ಒಬ್ಬರಿಗೆ ನೀಡಬಹುದಾದ ಸಂಬಳದ ಮೊತ್ತ ಉಳಿತಾಯ ಆಗಿರುತ್ತೆ. ಜೊತೆಗೆ ಹೆಚ್ಚು ರಜೆ ತೆಗೆದುಕೊಳ್ಳದೆ ಕೆಲಸಕ್ಕೆ ಹಾಜರಾಗಿರುತ್ತಾಳೆ.
ಪತ್ರ ನೋಡಿ ಒಂದೈದು ನಿಮಿಷ ಚಡಪಡಿಸಿ ತಡೆಯಲಾಗದೆ ತನ್ನ ಸೀನಿಯರ್ ಒಬ್ಬರನ್ನು ಕೇಳುತ್ತಾಳೆ ‘ನಾನು ಮಾಡಿದ ಹೆಚ್ಚಿನ ಕೆಲಸಕ್ಕೆ ಬೆಲೆಯೇ ಇಲ್ಲವೇ, ಇಬ್ಬರು ಮಾಡುವ ಕೆಲಸವನ್ನು ನಾನು ಒಬ್ಬಳೇ ಮಾಡಿದ್ದೇನೆ. ನನ್ನ ಜೊತೆಯಲ್ಲಿ ನನ್ನ ಕೆಲಸದಲ್ಲಿ ಅರ್ಧ ಕೆಲಸ ಮಾಡುತ್ತಿದ್ದವರಿಗೆ ನನಗಿಂತ ಹೆಚ್ಚಿನ ಸಂಬಳ ಸಿಗುತ್ತಿತ್ತು. ಈಗ ಅವರ ಕೆಲಸವನ್ನೂ ನಾನೇ ಮಾಡುತ್ತಿದ್ದು, ಈ ಬಡ್ತಿಯೂ ಸೇರಿದರೆ ನನ್ನ ಸಂಬಳ ಅವರಿಗೆ ಸಿಗುತ್ತಿದ್ದ ಸಂಬಳದಷ್ಟು ಆಗಲ್ಲ’ ಅಂಥ ಕೇಳಿದಾಗ ಆ ಸೀನಿಯರ್ ಅವರದ್ದು ‘ನಿಮಗೆ ಅವರಷ್ಟು ವಯಸ್ಸಾಗಿಲ್ಲ ಬಿಡಿ, ಅವರೇ ಬೇರೆ ನೀವೇ ಬೇರೆ..’ ಎಂಬ ತೇಲಿಕೆಯ ಉತ್ತರ. ಮತ್ತೊಬ್ಬರದು ಆಕೆ ಆ ರೀತಿ ಕೇಳಲೇಬಾರದಿತ್ತು ಎಂಬ ವಿಮರ್ಶೆ. ಕೆಲಸ ಮಾಡುವಾಗ ಇಲ್ಲದ ವಯಸ್ಸಿನ ಲೆಕ್ಕಾಚಾರ, ಭೇದ ಭಾವ ಸಂಬಳ ಮತ್ತು ಬಡ್ತಿಗೆ ಏಕೆ?
ಆಕೆ ಸುಮಾರು ದಿನಗಳು ಯೋಚನೆ ಮಾಡಿದಳು. ತಾನು ಕಷ್ಟಪಟ್ಟು, ಹೆಚ್ಚಿನ ಕೆಲಸ ಮಾಡಿ ತನ್ನ ಸಾಮರ್ಥ್ಯ ನಿರೂಪಿಸಿದರೂ ಅದನ್ನು ಗುರುತಿಸದೇ ಹೋದಮೇಲೆ, ತಾನು ಇನ್ನೇನು ಮಾಡಿದರೂ ಪ್ರಯೋಜನವಿಲ್ಲ ಅನ್ನೋದು ಅವಳಿಗೆ ಸ್ಪಷ್ಟವಾಯಿತು. ಇದೇ ರೀತಿ ತಾನು ಮುಂದುವರಿಯುವುದು ಹೇಗೆ? ಮನೆಯಲ್ಲಿ ಆರ್ಥಿಕ ಸಂಕಷ್ಟ, ಕೆಲಸಬಿಟ್ಟರೆ ಮನೆಯನ್ನು ಸಂಭಾಳಿಸುವುದು ಹೇಗೆ? ಕೆಲಸವಿಲ್ಲದೆ ಸುಮ್ಮನೆ ಕೂರುವುದಾದರೂ ಹೇಗೆ? ಹೀಗೆ ಯೋಚನೆಯಲ್ಲಿ ಮತ್ತಷ್ಟು ದಿನಗಳನ್ನು ಕಳೆದಳು. ಕಡೆಗೂ ಒಂದು ದಿಟ್ಟ ಹೆಜ್ಜೆ ಇಟ್ಟೇಬಿಟ್ಟಳು. ಈ ಕೆಲಸಕ್ಕಾಗಿ ಅವಳು ಪ್ರತಿದಿನ 10 ಗಂಟೆಗಳ ಕಾಲ ಮೀಸಲಿಡಬೇಕಿತ್ತು. 10 ಗಂಟೆಗಳ ಶ್ರಮಕ್ಕೆ ತಕ್ಕ ಸಂಬಳವೇನೂ ಸಿಗುತ್ತಿರಲಿಲ್ಲ. ಆ 10 ಗಂಟೆಗಳ ಕಾಲದಲ್ಲಿ ತಾನೇ ಏನಾದರೂ ಸ್ವಂತ ಉದ್ಯೋಗದಲ್ಲಿ ತೊಡಗಿಕೊಳ್ಳಬಹುದಲ್ವ ಅಂಥ ಯೋಚಿಸಿದಳು.
ತಕ್ಷಣವೇ ತನಗೆ ಏನೇನು ಮಾಡಲು ಶಕ್ತವಿದೆ, ತನ್ನ ಸಾಮರ್ಥ್ಯವೇನು? ಯಾವುದಕ್ಕೆ ಎಷ್ಟು ಬಂಡವಾಳ ಬೇಕಾಗುತ್ತದೆ, ಅದರ ಪರಿಣಾಮಗಳು ಏನು ಎಲ್ಲದರ ಬಗ್ಗೆಯೂ ಯೋಚಿಸಿ ನಿರ್ಧಾರ ಮಾಡಿಯೇಬಿಟ್ಟಳು. ತನ್ನ ಮನೆಯ ಮುಂದಿನ ತೆರೆದ ಅಂಗಳವನ್ನು ಸ್ವಚ್ಛ ಮಾಡಿ ಅದನ್ನು ಕೊಠಡಿಯಾಗಿ ಬದಲಾಯಿಸಿ ಅಲ್ಲಿ ಮಕ್ಕಳಿಗೆ ಮನೆಪಾಠ ಹೇಳಿಕೊಡಲು ಮುಂದಾಗುತ್ತಾಳೆ. ಒಬ್ಬ ವಿದ್ಯಾರ್ಥಿಯಿಂದ ಶುರುವಾದದ್ದು ಅನೇಕ ವಿದ್ಯಾರ್ಥಿಗಳ ಟ್ಯೂಷನ್ ಕೇಂದ್ರವಾಗುತ್ತದೆ.
ಒಂದು ಸೀಮಿತ ಅವಧಿಯಲ್ಲಿ ನಡೆಯುವ ಈ ಕಾಯಕದಿಂದ ಅವಳಿಗೆ ಕೊಂಚ ನೆಮ್ಮದಿ ಉಂಟಾಗಿದೆ. ತಾನು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ನ್ಯಾಯಯುತವಾದ ಬಡ್ತಿ ಸಿಗದಿದ್ದರೇನಂತೆ ತಾನೇ ಬಡ್ತಿ ಪಡೆದು ಜೀವನದಲ್ಲಿ ಇವಳು ಮುಂದೆ ಬಂದಳು.
ಹೆರಿಗೆ ರಜೆ- ಸಜೆ
ದುಡಿಯುವ ಮಹಿಳೆಯರಿಗೆ ಇಂತಹದೇ ಕಷ್ಟ ಅಂಥ ಹೇಳೋದಕ್ಕೆ ಆಗಲ್ಲ, ನಾನಾ ರೀತಿಯ ಕಷ್ಟಗಳನ್ನು ಅವರು ಎದುರಿಸಬೇಕಾಗುತ್ತೆ. ಕೆಲವೊಮ್ಮೆ ಪ್ರತಿಭೆ, ಸಾಮರ್ಥ್ಯ ಇದ್ದರೂ ಪರಿಸ್ಥಿತಿ ಒತ್ತಡದಲ್ಲಿ ಸಿಲುಕಿ ನರಳಬೇಕಾಗುತ್ತದೆ.
ಎಷ್ಟೋ ಖಾಸಗಿ ಕಂಪೆನಿಗಳಲ್ಲಿ ಹೆರಿಗೆ ರಜೆ ಕೇಳುವುದೇ ಒಂದು ಮುಜುಗರದ ಸಂಗತಿ. ಕೆಲವು ಕಡೆ ಹೆರಿಗೆ ರಜೆ ಮುಗಿಸಿಕೊಂಡು ಹೋಗುವ ಮಹಿಳೆಯರ ಕೆಲಸ ಬೇರೆಯವರ ಪಾಲಾಗಿರುತ್ತದೆ. ಈ ವಿಷಯ ಕೆಲವರಿಗೆ ಹೆರಿಗೆ ರಜೆ ಪಡೆಯುವ ಮುಂಚೆಯೇ ಸ್ಪಷ್ಟವಾಗಿರುತ್ತದೆ. ಅದಕ್ಕೇ ಎಷ್ಟೋ ಹೆಣ್ಣುಮಕ್ಕಳು ತಮಗೆ ಕೆಲಸ ಮಾಡುವ ಸಾಮರ್ಥ್ಯವಿದ್ದರೂ ಸಹ ಮಕ್ಕಳು ಹುಟ್ಟಿದ ಮೇಲೆ ಹೊರಗಿನ ಕೆಲಸದಿಂದ ವಿಮುಖರಾಗುತ್ತಾರೆ, ಮತ್ತು ಕೆಲವರು ಮಕ್ಕಳು ಮಾಡಿಕೊಳ್ಳುವುದನ್ನೇ ಮುಂದೂಡುತ್ತಾರೆ.
ಕೆಲವು ಕಡೆಗಳಲ್ಲಿ ಒಂದು ತಿಂಗಳು ಹೆರಿಗೆ ರಜೆ ಮುಗಿಸಿ ಇನ್ನೊಂದೇ ಒಂದು ತಿಂಗಳ ರಜೆ ಕೇಳಿದಾಗಲೂ ‘ನಿಮ್ಮದು ನಾರ್ಮಲ್ ಡೆಲಿವರಿಯಾ, ಸಿಜೇರಿಯನ್ನ, ನೀವು ಮಗುವಿಗೆ ಫೀಡ್ ಮಾಡಲೇಬೇಕಾ, ಈ ತಿಂಗಳು ಕೆಲಸ ಮಾಡಿ ಮುಂದಿನ ತಿಂಗಳು ರಜೆ ತಗೊಳ್ಳಿ,….’ ಈ ರೀತಿಯ ಮಾತುಗಳನ್ನೂ ಕೇಳಬೇಕಾಗಿರುವ ಪರಿಸ್ಥಿತಿಯೂ ಇದೆ.
ಆಕೆಯದೂ ಅದೇ ಪರಿಸ್ಥಿತಿ. ಹೆರಿಗೆ ಸಮಯದಲ್ಲಿ ಉಪಯೋಗಕ್ಕೆ ಬರುತ್ತದೆ ಅಂಥ ತನ್ನ ರಜೆಗಳನ್ನೆಲ್ಲ ಕೂಡಿಟ್ಟುಕೊಂಡಿದ್ದ ಆಕೆ, ಹೆರಿಗೆಗೆ ಇನ್ನೊಂದೇ ವಾರವಿರುವಾಗ ಎರಡು ತಿಂಗಳ ರಜೆ ಪಡೆದಳು, ಹಾಗೂ ಎರಡು ತಿಂಗಳ ನಂತರ ತನಗೆ ಇನ್ನೊಂದು ತಿಂಗಳು ರಜೆ ಬೇಕಾಗುತ್ತದೆ ಎಂಬುದನ್ನೂ ತಿಳಿಸಿದ್ದಳು.
ಆದರೆ ಅವಳ ರಜೆ ಒಂದು ತಿಂಗಳು ಮುಗಿಯುತ್ತಿದ್ದಂತೆ ಕಚೇರಿಯಿಂದ ಫೋನ್ ಬರಲು ಶುರುವಾಯಿತು, ನೀವು ತಕ್ಷಣ ಬಂದು ಕೆಲಸಕ್ಕೆ ಸೇರಿಕೊಳ್ಳಬೇಕು ಎಂಬ ಆದೇಶ. ಇವಳಿಗೆ ಆಶ್ಚರ್ಯ ತನ್ನ ಎರಡು ತಿಂಗಳ ರಜೆ ಇನ್ನೂ ಮುಗಿದಿಲ್ಲ, ಮಗುವಿಗೆ ಕೇವಲ ಒಂದೇ ಒಂದು ತಿಂಗಳು, ಈ ಪರಿಸ್ಥಿತಿಯಲ್ಲಿ ಮಗುವನ್ನು ಬಿಟ್ಟು ಹೋಗೋದು ಹೇಗೆ? ಕಡೇಪಕ್ಷ ಇನ್ನೊಂದು ತಿಂಗಳು ಕಳೆದರೆ ಅಷ್ಟರಲ್ಲಿ ತಾನು ಮಗುವಿನ ಆರೈಕೆಗೆ ಬೇರೆ ವ್ಯವಸ್ಥೆ ಮಾಡಿ ಕೆಲಸಕ್ಕೆ ಬರಬಹುದು ಎಂದುಕೊಂಡು ಅದನ್ನೇ ಕಂಪೆನಿಯ ಮುಖ್ಯಸ್ಥರಿಗೆ ತಿಳಿಸಿದಳು. ಆದರೆ ಅವರು ಒಪ್ಪಲಿಲ್ಲ. ತಕ್ಷಣವೇ ಬಂದು ಕೆಲಸಕ್ಕೆ ಹಾಜರಾಗಬೇಕು, ಇಲ್ಲವಾದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಅಂಥ ತಾಕೀತು ಮಾಡಿದರು.
ಆದರೆ ಅವಳಿಗೆ ಒಂದು ತಿಂಗಳ ಕಂದಮ್ಮನನ್ನು ಗಂಟೆಗಳ ಕಾಲ ಬಿಟ್ಟು ಹೊರಗೆ ಕೆಲಸಕ್ಕೆ ಹೋಗುವ ಮನಸ್ಸಾಗಲೇ ಇಲ್ಲ. ಜೊತೆಗೆ ಹೆರಿಗೆಯಲ್ಲಿ ಕೊಂಚ ಸಮಸ್ಯೆಯಾಗಿದ್ದರಿಂದ ವೈದ್ಯರು ಒಂದೆರಡು ತಿಂಗಳು ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದೂ ಹೇಳಿದ್ದರು. ಗಂಡನ ಜೊತೆ ತಾನೂ ದುಡಿಯುತ್ತಿದ್ದುದ್ದರಿಂದ ಮನೆ ನಿಭಾಯಿಸಲು ಸಾಧ್ಯವಾಗಿತ್ತು. ಈಗ ಮನೆಗೆ ಹೊಸ ಅತಿಥಿಯ ಪ್ರವೇಶವಾಗಿತ್ತು, ಹೆಚ್ಚಿನ ಖರ್ಚು ಸಹ. ಇಂತಹ ಸಮಯದಲ್ಲಿ ಕೆಲಸ ಕಳೆದುಕೊಳ್ಳುವುದೇ? ಆರೋಗ್ಯ ನಿರ್ಲಕ್ಷಿಸುವುದೇ, ಮಗುವಿನ ಆರೈಕೆ ಹೇಗೆ? ಅವಳ ಮನಸ್ಸು ಈ ವಿಷಯಗಳಲ್ಲಿ ತೂಗಾಡಿತು. ಕಡೆಗೆ ಕೆಲಸ ಹೋದರೆ ಹೋಗಲಿ ಎಂದು ಮಗುವಿನ ಪಾಲನೆಗೆ ತೊಡಗಿದಳು.
ಮಗು ಸ್ವಲ್ಪ ದೊಡ್ಡದಾಗುತ್ತಿದ್ದಂತೆ ತನ್ನಂತಹ ತಾಯಿಯರಿಗಾಗಿ ಏನಾದರೂ ಮಾಡಬೇಕು ಎಂದು ಯೋಚಿಸಿ ತನ್ನ ಮದುವೆಯಲ್ಲಿ ತವರುಮನೆಯವರು ಕೊಟ್ಟಿದ್ದ ಚಿನ್ನದಾಭರಣಗಳನ್ನು ಮಾರಿ ಒಂದು ಸಣ್ಣ ಮನೆಯನ್ನು ಬಾಡಿಗೆಗೆ ಪಡೆದು ಅಲ್ಲಿ ಬೇಬಿ ಸಿಟ್ಟಿಂಗ್ ಶುರುಮಾಡಿದಳು. ತನ್ನ ಮಗುವಿನ ಜೊತೆಗೆ ಬೇರೆ ಮಕ್ಕಳನ್ನೂ ನೋಡಿಕೊಳ್ಳುತ್ತಾ, ಆರ್ಥಿಕ ಸಮಸ್ಯೆಗೂ ಪರಿಹಾರವನ್ನೂ ಕಂಡುಕೊಂಡಳು. ಒಂದು ಕೆಲಸ ಇಲ್ಲದಿದ್ದರೆ ಇನ್ನೊಂದು ಕೆಲಸ, ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ಆಕೆ ಅರ್ಥಮಾಡಿಕೊಂಡಳು.

ನಿಯಮಬಾಹಿರ ನಡವಳಿಕೆ
ಮಹಿಳೆಯರು ತಮ್ಮತಮ್ಮ ಕೆಲಸ ಸರಿಯಾಗಿ ಮಾಡಿದರೂ ಮೊಸರಿನಲ್ಲಿ ಕಲ್ಲು ಹುಡುಕುವಂತೆ ಸುಮ್ಮನೆ ಖ್ಯಾತೆ ತೆಗೆಯುವ ಸಮಸ್ಯೆಗೆ ಪರಿಹಾರವೇ ಇಲ್ಲ ಅನ್ನಿಸುತ್ತೆ.
ಆಕೆ ತನ್ನ ಕೆಲಸವನ್ನು ನಿಗದಿತ ಸಮಯಕ್ಕೆ ಸರಿಯಾಗಿ ಮುಗಿಸಿ ಹೊರಡಬೇಕು ಎನ್ನುವಾಗಲೇ ಏನಾದರೂ ತಕರಾರು ಶುರು. ಕಚೇರಿಯಿಂದ ಮನೆಗೆ ಹೊರಡಲು ಅನುಮತಿ ಸಿಗದೇ ಸುಮ್ಮನೆ ಕೂರಬೇಕು. ಮೇಲಧಿಕಾರಿಗಳನ್ನು ಕೇಳುವಹಾಗಿಲ್ಲ, ಕೇಳಿದರೆ ‘ನಾವು ಹೇಳುವವರೆಗೂ ಹೋಗಂಗಿಲ್ಲ’ ಎಂಬ ದಾರ್ಷ್ಟ್ಯದ ಉತ್ತರ. ತನ್ನ ಕೆಲಸ ಮುಗಿದಿದೆ, ಕೆಲಸದ ಸಮಯವೂ ಮೀರಿದೆ. ಸುಮ್ಮನೆ ಕೂರುವ ಬದಲು ಹೋಗಿಬಿಡೋಣ ಎಂದು ಹೊರಟರೆ, ಅನುಮತಿ ಪಡೆಯದೇ ಹೋಗುವುದು ಕಂಪೆನಿಯ ನಿಯಮ ಬಾಹಿರ ನಡವಳಿಕೆ ಎಂಬ ಆರೋಪ. ಇಂದೆಂಥ ಕ್ರೌರ್ಯ? ನಿಗದಿತ ಸಮಯಕ್ಕಿಂತ ಹೆಚ್ಚಾಗಿ ಕಂಪೆನಿಯಲ್ಲಿ ಸುಮ್ಮನೆ ಕೂರಿಸಿಕೊಳ್ಳುವುದು ಸಹ ನಿಯಮ ಬಾಹಿರ ನಡವಳಿಕೆಯಲ್ಲವೇ?
ಆದರೆ ಇದನ್ನು ಪ್ರಶ್ನೆ ಮಾಡುವವರು ಯಾರು? ಕೆಲವು ಕಂಪೆನಿಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ನಿಯಮಗಳು ಇರುವುದಿಲ್ಲ. ನಿಯಮಗಳು ಏನಿದ್ದರೂ ಕಂಪೆನಿ ನಡೆಸುವವರಿಗೆ ಉಪಯೋಗವಾಗುಂತಹವು. ಈ ಮಹಿಳೆ ಹೆಚ್ಚಿನ ಕೆಲಸವಿದ್ದಾಗ ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ಕೆಲಸ ಮಾಡಿದ್ದರು. ಆದರೆ ಪ್ರತಿನಿತ್ಯ ತಡವಾಗೇ ಹೋಗಬೇಕೆಂಬ ಪಿತೂರಿಗೆ ಸಿಲುಕಿಕೊಳ್ಳಲು ಆಕೆಗೆ ಇಷ್ಟವಿರಲಿಲ್ಲ. ಹಾಗಾಗೇ ತನಗೆ ಒಪ್ಪಿಸಿದ ಕೆಲಸಗಳನ್ನು ನಿಗದಿತ ಸಮಯದಲ್ಲಿ ಮುಗಿಸಿ ಹೊರಡಲು ಅನುವಾಗುತ್ತಿದ್ದಳು. ಆದರೆ ಇದನ್ನು ಸಹಿಸದ ಮುಖ್ಯಸ್ಥರು ಏನಾದರೂ ಸಮಸ್ಯೆ ಮಾಡುತ್ತಿದ್ದರು. ತಾನು ಉದ್ಯೋಗದಲ್ಲಿ ದೊಡ್ಡ ಸ್ಥಾನ ಪಡೆಯಬೇಕೆಂಬ ಹಂಬಲದಿಂದ ಅವಳು ಕಂಪೆನಿಯ ಈ ಅನ್ಯಾಯವನ್ನೂ ಸಹಿಸಿಕೊಂಡಿದ್ದಳು. ಆದರೆ ಎಷ್ಟು ದಿವಸ?
ಕೆಲಸವಿದ್ದು, ತಡವಾದರೆ ಅದಕ್ಕೊಂದು ಅರ್ಥ, ಕೆಲಸ ಮುಗಿದರೂ ಸುಮ್ಮನೆ ತಡಮಾಡುವುದು ಆಕೆಗೆ ಸರಿಕಾಣಲಿಲ್ಲ, ಕೆಲಸದಲ್ಲಿ ಮುಂದೆ ಬರಬೇಕು ನಿಜ, ಹಾಗಂತ ತಪ್ಪುಗಳನ್ನೆಲ್ಲ ಸಹಿಸಿಕೊಂಡಿದ್ದರೆ ಅದು ಮುಂದಕ್ಕೆ ಇನ್ನೂ ಸಂಕಷ್ಟಕ್ಕೆ ಗುರಿ ಮಾಡಬಹುದು ಎಂದು ಕೆಲಸಕ್ಕೆ ಹೋಗುವುದನ್ನೇ ನಿಲ್ಲಿಸಿದಳು.
ಮತ್ತೆ ಇನ್ನೊಂದು ಕೆಲಸ ಸಿಗುವುದಕ್ಕೆ ಅವಳಿಗೆ ತುಂಬಾ ಕಷ್ಟವಾಯಿತು. ತಾನು ಉದ್ಯೋಗದಲ್ಲಿ ದೊಡ್ಡ ಸ್ಥಾನಕ್ಕೆ ಬರಬೇಕು ಎಂಬ ಅವಳ ಕನಸು ಆಗ ನುಚ್ಚುನೂರಾಯಿತು. ಆದರೂ ದಿನನಿತ್ಯದ ಕಿರಿಕಿರಿ ತಪ್ಪಿತು.
ಅವಳು ತನ್ನ ಪ್ರಯತ್ನವನ್ನು ನಿಲ್ಲಿಸಲಿಲ್ಲ, ಕಡೆಗೆ ಹಲವಾರು ಪ್ರಯತ್ನಗಳ ನಂತರ ಆಕೆಗೆ ಮುಂದೆ ಒಂದು ಉತ್ತಮ ಕೆಲಸ ದೊರೆಯಿತು. ಮತ್ತೆ ಅವಳ ಕನಸು ಚಿಗುರೊಡೆಯಿತು.

ಇಂತಹ ಪ್ರಕರಣಗಳು ಒಂದೇ ಎರಡೇ? ಹೇಳುತ್ತಾ ಹೋದರೆ, ಲೆಕ್ಕ ಮಾಡುವುದಕ್ಕೆ ಕಷ್ಟವಾಗುತ್ತದೆ. ಆದರೆ ಮಹಿಳೆಯರು ಇದರಿಂದ ಕುಗ್ಗಬಾರದು. ಸಾಗುವ ಹಾದಿಯಲ್ಲಿ ಏಳು-ಬೀಳು ಏನೇ ಇದ್ದರೂ ಎದ್ದು ನಿಲ್ಲುವುದೇ ಗುರಿ. ಒಂದು ದಾರಿ ಮುಚ್ಚಿದ್ದರೆ ಮತ್ತೊಂದು ದಾರಿ ಇದ್ದೇ ಇರುತ್ತದೆ. ಸೋಲೋ, ಗೆಲುವೋ ಸಾಗುತ್ತಿದ್ದರೆ ಮುನ್ನಡೆಗೆ ಸರಿದಾರಿ ಕಾಣಲೂಬಹುದು. ಮಹಿಳಾ ದಿನದ ಈ ಸಂದರ್ಭದಲ್ಲಿ ಮಹಿಳೆಯರ ಏಳಿಗೆಗೆ ನೆರವಾಗುವ ರೀತಿಯಲ್ಲಿ ಕಾರ್ಯಕ್ರಮಗಳು ನಡೆದರೆ ಉತ್ತಮ ಹಾಗೂ ಮಹಿಳೆಯರಿಗೆ ತಾವು ಮಾಡುವ ಕೆಲಸಕ್ಕೆ ನ್ಯಾಯ ದೊರಕುವಂತಾಗಬೇಕಲ್ಲವೇ.

ಯಶೋದಾ ಇಂಡಿಪೆಂಡೆಂಟ್ ಜರ್ನಲಿಸ್ಟ್ ಹಾಗೂ ಆಪ್ತಸಮಾಲೋಚಕಿ. ಪತ್ರಿಕೆಯೊಂದರ ವಿವಿಧ ವಿಭಾಗಗಳಲ್ಲಿ ಹಿರಿಯ ಉಪಸಂಪಾದಕಿಯಾಗಿ ೧೪ ವರ್ಷ ಕೆಲಸದ ಅನುಭವ, ಭಾರತೀಯ ವಿದ್ಯಾಭವನದ ಮಾಧ್ಯಮ ಭಾರತಿಯಲ್ಲಿ ೪ ವರ್ಷ ಅಧ್ಯಯನ ಸಂಯೋಜಕಿಯಾಗಿ ಕೆಲಸ ನಿರ್ವಹಿಸಿದ್ದಾರೆ. ‘ಡೆಡ್ಲೈನ್ ವೀರರ ಕಥೆಗಳು’, ‘ಸುದ್ದಿ ಬಿಂಬ’, ‘ಪವರ್ಫುಲ್ ಲೇಡಿ’, ‘ಕ್ಷಣಕ್ಷಣ’ , ‘ಸುದ್ದಿ ಸಂತೆ’ ‘ಸದರ್ನ್ ಎಕಾನಮಿಸ್ಟ್- ಸುಶೀಲಾ ಅರ್ಥಕತೆ’, ‘ಪತ್ರಕರ್ತೆಯರ ಪುರಾವೆಗಳು’, ‘ರೆಕ್ಕೆ ಬಿಚ್ಚಿ ಹಾರೋಣ’, ‘ರೊಕ್ಕ ಲೆಕ್ಕ’ಇವರ ಪ್ರಕಟಿತ ಕೃತಿಗಳು
