Advertisement
ಆನಂದ ಭೋವಿ ಬರೆದ ಈ ಭಾನುವಾರದ ಕತೆ

ಆನಂದ ಭೋವಿ ಬರೆದ ಈ ಭಾನುವಾರದ ಕತೆ

ಅದ್ಯಾವ ಪುಣ್ಯಾತಗಿತ್ತಿ ಅಬ್ಬರಿಸಿದಳೋ ಗೊತ್ತಿಲ್ಲ “ಯಲ್ಲವ್ವ ಬಂಗಾರದ ಮಳೆ ಹರಸಾಕತ್ತಾಳ ಯಾರಿಗೆ ಸಿಗತೈತಿ ಅವರ ಬಾಳು ಬಂಗಾರ ಆಗತೈತಿ” ಇದೊಂದು ಮಾತು ಬರಸಿಡಿಲು ಬಡಿದಂಗ ಆತು. ಸೀಟಿನ ಚಿಂತ್ಯಾಗ ಮುಕರಿಬಿದ್ದಿದ್ದ ಮಂದಿ ಹುಯ್ಯಂತ ಮ್ಯಾಲಕ್ಕೆತ್ತು. ಅವಳು ಇವಳು ಯಾರಿಗೂ ಯಾರು ಕಾಣಲಿಲ್ಲ. ಹಾರಾಡಿ ಬೀಳುತ್ತಿದ್ದ ಸರದ ಗುಂಡು ಆರಿಸಲಿಕ್ಕ ಮುಗಿಬಿದ್ದರು. ಅವರ ಮ್ಯಾಲ ಇವರು ಇವರ ಮ್ಯಾಲ ಅವರು ನೋಡ ನೋಡುವದ್ರೊಳಗ ಕಾಲ್ತುಳಿದ ಗದ್ದಲ ಬಸ್ಸನ್ನು ನುಂಗಿಕೊಂಡಿತು. ಬಿಸಲಿನ ಜಳದೊಳಗ ರಕ್ತದ ವಾಸನೆ ಬಡಿಯತೊಡಗಿತು. ದುರ್ಬಲರು ಬೀಳತೊಡಗಿದರು. ಪ್ರಬಲರು ಮೇಲೆದ್ದು ಓಡತೊಡಗಿದರು.
ಆನಂದ ಭೋವಿ ಬರೆದ ಈ ಭಾನುವಾರದ ಕತೆ “ದೇವರಿಗೂ ಒಂದು ಟಿಕಿಟು”

ರಣ ರಣ ಬಿಸಿಲ ಹೊಡತಕ್ಕ ಮಿರಿ ಮಿರಿ ಮಿಂಚುತ್ತ ಸುಡುತ್ತಿದ್ದ ನರಗುಂದದ ಗುಡ್ಡ. ತನ್ನ ಗುಡ್ಡದ ಕಾವನ್ನು ಚಾಚಿ ಬಸ್‌ ಸ್ಟ್ಯಾಂಡಿನ ತುಂಬ ತುಂಬಿದ್ದ ಮಂದಿ ಮೈಯಗೆ ಬಡಿದು ಅವರ ಮೈಯನೆಲ್ಲಾ ತಪ್ಪನ ತೋಯಿಸಿ ಬೆವರು ಹನಿಯಲ್ಲಿ ಮುಳಗಿಸಿತ್ತು. ಗುಡ್ಡದ ಜಾತ್ರೆಯ ಹುರಪಿನಲ್ಲಿ ತಮ್ಮ ಬೆವರನೆಲ್ಲಾ ಒರೆಸಿಕೊಳ್ಳುತ್ತಿದ್ದ ಮಂದಿ ಗದ್ದಲದಲ್ಲೆ ಸವದತ್ತಿಯ ಯಲ್ಲವ್ವನ ಗುಡ್ಡದ ಬಸ್ಸಿಗಾಗಿ ಕಾಯುತ್ತಿದ್ದರು. ಆಕಡೆ ಈಕಡೆಯಿಂದ ಪಂವ್‌ ಪಂವ್‌ ಹಾರ್ನ ಮಾಡಿ ನರಗುಂದದ ಬಸ್‌ ಸ್ಟ್ಯಾಂಡಿನೊಳಗ ಜಮಾ ಆಗುತ್ತಿದ್ದ ಹತ್ತಾರು ಬಸ್ಸುಗಳು ಬೇರೆ ಬೇರೆ ದಿಕ್ಕಿಗೆ ಹೊರಟು ಹೋಗುತ್ತಿದ್ದ ಪರಿ ಗುಡ್ಡದ ಜಾತ್ರೆಯ ಬಸ್ಸಿಗಾಗಿ ಕಾಯುತ್ತಿದ್ದ ಸಾವಿರಾರು ಮಂದಿಯ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದವು. ತಾಸಿಗೋ ಎರಡು ತಾಸಿಗೋ ಗುಡ್ಡದ ಕಡೆ ಹೊರಡುತ್ತಿದ್ದ ಬಸ್ಸಿನ ಆಗಮನಕ್ಕೆ ಕಾಯುತ್ತಿದ್ದ ಜನರ ಸಂಖ್ಯೆ ಹೆಚ್ಚಾಗುತ್ತಿತ್ತೆ ಹೊರತು ಬಸ್ಸು ಬರುವ ಲಕ್ಷಣಾ ಕಾಣುತ್ತಿರಲಿಲ್ಲ. ಇದ ಸೆಂಟರ ಪಾಯಿಂಟ್‌ ಆಗಿತ್ತು. ಬೇರೆ ಬೇರೆ ಊರಿನಿಂದ ಗುಡ್ಡದ ಜಾತ್ರೆಗಿ ಬರುವ ಜನ ಇದ ನಿಲ್ದಾಣದಾಗ ಇಳಿದು ಸವದತ್ತಿ ಕಡೆ ಹೋಗುವ ಬಸ್ಸಿಗಾಗಿ ಕಾಯುತ್ತಲೆ ಇದ್ದರು.

ಆ ಬಿಸಿಲು ಈ ಜನರ ಬೆವರು ಒಂದಕ್ಕೊಂದು ಬೆರೆತು ತಾಳ ಹಾಕುತ್ತಿದ್ದ ಹೊತ್ತಿನಲ್ಲೆ ಕುಂಟುತ್ತ ಬಂದ ಬಸ್ಸಿನೊಂದರ ಕಂಡಕ್ಟರ “ಯಲ್ಲವನ ಗುಡ್ಡ, ಯಲ್ಲವ್ವನ ಗುಡ್ಡ” ಚೀರಿಬಿಟ್ಟ. ಈಡೀ ನಿಲ್ದಾಣದಲ್ಲಿ ಸಮುದ್ರದ ಅಲೆ ಉಕ್ಕಿ ಹರಿಯಿತು. ಎಲ್ಲಿದ್ದರೋ ಏನೋ ಒಬ್ಬರಿಗೊಬ್ಬರು ಮುಕುರಿ, ತೂರಿ ಕುರಿ ಹಿಂಡಿನಂತೆ ನುಗ್ಗಿ ಬಂದರು. ಒಂದೇ ಒಂದು ಬಾಗಿಲು ಹೊಂದಿದ್ದ ಬಸ್ಸಿಗೆ ಹಸಿದ ತೋಳ ದಾಳಿ ಮಾಡಿದಂತೆ ಜೋತು ಬಿದ್ದರು. ಅವರ ಬ್ಯಾಗು, ಚೀಲ, ಟ್ರಂಕು, ಮಕ್ಕಳು ಮರಿ ಕೊತ ಕೊತ ಕುದಿಯುತ್ತ ಬಸ್ಸನೆಲ್ಲಾ ಆವರಿಸತೊಡಗಿದವು. “ತಡೀರಿ, ತಡೀರಿ.. ಈಡೀ ಬಸ್ಸ ಖಾಲಿ ಐತಿ” ಕಂಡಕ್ಟರನ ಯಾವ ಮಾತು ಅವರ ಕಿವಿಗೆ ಬೀಳಲೆ ಇಲ್ಲ. ಬಸ್ಸು ಏರಿದ ಮ್ಯಾಲ ಸೀಟಿನ ಮ್ಯಾಲ ತಮ್ಮ ಹಕ್ಕು ಸಾಧಿಸುವ ಅಹಂನಲ್ಲಿ ತಮ್ಮ ಟವಲ್‌ ಎಸೆಯುತ್ತ ಕರ್ಚಿಪ್‌ ತೂರುತ್ತ, ಚೀಲ ಬೀಸಾಡುತ್ತ ಗುದಮುರಗಿ ಹಾಕುತ್ತಿದ್ದರು. ಇವರ ಗದ್ದಲದ ಗೂಡಾದ ಬಸ್ಸು ಇವರ ಭಾರ ಹೊತ್ತು ಅಲಗಾಡತೊಡಗಿತು.

ಒಬ್ಬರಾ ಇಬ್ಬರಾ, ಅವರಾ ಇವರಾ ನೂರಾರು ಮಂದಿ ಸಮುದ್ರ ಸೇರಲು ಹಂಬಲಿಸುವ ನದಿಯಂಗ ಬುಸಗುಡುತ್ತಾ ಬಸ್ಸನ್ನೇರಿ ಶತ ಶತಮಾನಗಳಿಂದ ಕಾಯ್ದಿಟ್ಟ ತಮ್ಮ ಹಕ್ಕಿನ ಸೀಟಿಗಾಗಿ ವಾದಿಸತೊಡಗಿದರು. ಸೀಟು ಸಿಕ್ಕವರು ಸಂತೃಪ್ಪಿ ಪಟ್ಟರು. ಸೀಟು ಸೀಗದವರು ತಮ್ಮ ಆಸೆಗಣ್ಣನು ಸುತ್ತಲು ದಿಟ್ಟಿಸತೊಡಗಿದರು. ಹೆಣ್ಣು ಮಕ್ಕಳಿಗೆ ಆಧಾರ ಕಾರ್ಡ ತೋರಿಸಿ ಫ್ರೀ ಬಸ್ಸು ಆದಾಗಿನಿಂದ ಹೆಂಗಸರಂತು ಹಿಂಡ ಹಿಂಡಾಗಿ ಗುರಾಣಿ ಹಿಡಿದು ಯುದ್ಧಕ್ಕೆ ಹೊರಟ ಸೈನಿಕರಂಗ ಈ ಬಸ್ಸಿನ ಮ್ಯಾಲ ದಾಳಿ ಮಾಡುವ ಕಾಯಕದಾಗ ಮಗ್ನರಾಗಿದ್ದರು. ಅದರಾಗ ಗುಡ್ಡದ ಜಾತ್ರೆ ಅಂದರ ಕೇಳಬೇಕಲ್ಲ. ಊರಿಗೆ ಊರ ದಿಬ್ಬಣಕ ರೆಡಿಯಾಗಿ ಮೈತುಂಬ ದಾಗೀನ ಹಾಕೊಂಡು ಯಾವ ಬಸ್ಸ್‌ ಸ್ಟ್ಯಾಂಡನ್ಯಾಗು ಗಂಡಸುರು ಅನ್ನುವ ನರಪಿಳ್ಳೆನು ಬಸ್ಸಿನ ಸಮೀಪ ಬರದಂಗ ತಮ್ಮ ಸಾಮ್ರಾಜ್ಯ ಸ್ಥಾಪಿಸಿದ್ದರು.

ಜೋಗವ್ವನ ತಲಿಮ್ಯಾಲ ಗುಡ್ಡದ ಯಲ್ಲವ್ವನ ಮುಖ ಹಚ್ಚಿದ್ದ ತಾಮ್ರದ ತುಂಬಿದ ಕೊಡ ಲಖ ಲಖ ಹೊಳೆಯುತ್ತಿತ್ತು. ಯಲ್ಲವ್ವನ ಬೆಳ್ಳಿ ಮುಖಕ್ಕ ಹಚ್ಚಿದ್ದ ಕಪ್ಪಾದ ಕಾಡಿಗೆಯ ಕಣ್ಣಿಗೆ ಎದ್ದು ಬರುವ ಕಳೆ ಇತ್ತು. ಕೊಡದ ಕಂಠದ ಕೊರಳ ತುಂಬ ಬೊರಮಾಳ ಸರ, ಪಾದಸರ, ತಾಳಿಸರ, ಬಂಗಾರದ ಗುಂಡುಗಳು ತೇಟ ಯಲ್ಲವ್ವನ ಬಸ್ಸಿನೊಳಗ ಬಂದ ಎಲ್ಲರಿಗೂ ದರ್ಶನ ನೀಡುವಂಗ ಮಿಂಚುತ್ತಿದ್ದವು. ಕುಂಕುಮ ಬೊಟ್ಟು, ಬಂಢಾರದ ನೀರು ಧಳ ಧಳ ಹರಿಯುತ್ತಿತ್ತು. ಮಿರಿ ಮಿರಿ ಜರತಾರಿ ಸೀರೆಯನ್ನ ಹೂವಿನಂಗ ನಿರಿಗೆ ಮಾಡಿ ಉಡಿಸಿದ ಕೊಡ ಹೊತ್ತಿದ್ದ ಜೋಗವ್ವ, ತನ್ನ ಹಿಡಿ ಜೀವನವನ್ನ ಆ ಯಲ್ಲವ್ವನ ಮುಖದ ಕೊಡಕ್ಕ ಸಿಂಗಾರ ಮಾಡಲು ಸವಿಸಿದ್ದಳೋ ಏನೋ. ಆ ಗದ್ದಲದ ಬಸ್ಸಿನೊಳಗ ಗುಡಿಯೊಳಗಿನ ಎಲ್ಲವ್ವನ ಎತ್ತಿಕೊಂಡು ಬಂದಿರುವ ರೀತಿ ಸನ್ನಿವೇಶ ಸೃಷ್ಟಿಸಿದ್ದಳು.

ಹೇಂಗ ಆಕಿ ಆ ಗದ್ದಲದ ಬಸ್ಸಿನ್ಯಾಗ ಏರಿ ಬಂದಳೋ ಏನ. ಅದು ಆ ಗುಡ್ಡದ ಯಲ್ಲವ್ವಗ ಗೊತ್ತು. ಬಸ್ಸಿನ ನಟ್ಟ ನಡಕ ತನ್ನ ಸೀಟು ಖಾತ್ರಿ ಮಾಡಿಕೊಂಡಿದ್ದಳು. ಇಬ್ಬರು ಕೂಡ್ರುವ ಸೀಟಿನ್ಯಾಗ ತನಗೊಂದು ಮತ್ತು ತನ್ನ ತಲಿಮ್ಯಾಲಿನ ಕೊಡದ ಯಲ್ಲವ್ವಗೊಂದು ಸೀಟು ಕಾಯಂ ಮಾಡಿ. ಕಿಡಕಿ ಕಡೆ ದೇವರ ಮೂರ್ತಿ ಇಟ್ಟು ಈ ಕಡೆ ತಾನು ಕುಳತ್ತಿದ್ದಳು. ಮತ್ತೆ ಮತ್ತೆ ಮೂರ್ತಿಯ ಕಡೆ ನೋಡುತ್ತ ಅಲ್ಲಲ್ಲಿ ಮಡಚಿದ್ದ ಸೀರೆಯ ನಿರೆಗೆಗಳನ್ನು ಸರಿಪಡಿಸುತ್ತ, ಮನುಷ್ಯರೇ ಅಲ್ಲಿ ಕುಳಿತ ರೀತಿ ಕಿಡಕಿ ತೆರೆದು ಗಾಳಿ ಹಾಕಿ ಉದೋ ಉಧೋ ಕೂಗು ಹಾಕಿ ತನ್ನ ಇರುವಿಕೆಯನ್ನು ಖಾತ್ರಿಪಡಿಸಿದಳು.

ಈಡೀ ಬಸ್ಸಿಗೆ ಬಸ್ಸ ತುಂಬಿ ತುಳುಕುತ್ತಿತ್ತು. ಹತ್ತಿಪ್ಪತ್ತ ಮಂದಿ ಗಂಡಮಕ್ಕಳ ಬಿಟ್ಟರ ಎಲ್ಲರೂ ಹೆಣ್ಣುಮಕ್ಕಳು. ಅವರೆಲ್ಲರೂ ಗುಡ್ಡದ ಯಲ್ಲವ್ವನ ಭಕ್ತರು. ಬಸ್ಸ ಏರಿದ ಹುರಪಿನ್ಯಾಗ ಉಧೋ ಉಧೋ ಘೋ಼ಷಣೆ ಮುಗಿಲಿಗೆ ಮುಟ್ಟುವಂಗ ಚೀರುತ್ತಿದ್ದರು. ನಿಂದ್ರಾಕು ಜಾಗ ಇಲ್ಲದ ಬಸ್ಸಿನೊಳಗ ದೇವರ ಹುಡುಕುವ ಅವರ ಆವೇಶ ಕಡಿಮೆಯಾಗಿರಲಿಲ್ಲ. ಗದ್ದಲದ ಗೋಜಿನೊಳಗ ಜೋಗವ್ವ ತನಗೊಂದು ತನ್ನ ಮೂರ್ತಿಯ ಕೊಡಕ್ಕೊಂದು ಜಾಗ ಮಾಡಿಕೊಂಡು ಗಾಳಿ ಹೊಡಕ್ಕೊಂತ ಅರಾಮ ಕುಳಿತುಕೊಂಡಿದ್ದಳು.

ಅಕೀನ ದೂಗಿಸಿ, ಈಕೀನ ದೂಗಿಸಿ, ಎಳೆದಾಡಿ ದುಗಸಾಡಿ ಒಬ್ಬರಿಗೊಬ್ಬರು ಬೈದಾಡಿ ಸುಸ್ತಾಗಿದ್ದ ಮಂದಿ ಸೀಟ ಮ್ಯಾಲ ಕುಂತವರ ಕಂಡು ಮತ್ಸರ ಬೆಳಸಿಕೊಂಡರು. ಅಂತದರಾಗ ಜೋಗವ್ವನ ದಿಟ್ಟಿಸಿ ದಿಟ್ಟಿಸಿ ನೋಡಿದ ಒಬ್ಬಾಕಿ “ಯಾರಿಗೆ ಹೀಡದಿ ಸೀಟ..? ಯಾರ ಬರತಾರು..” ಸಿಟ್ಟಿನಿಂದ ಕೇಳಿದಳು. ಬಾಯಿತುಂಬ ತುಂಬಿದ ಎಲೆ ಅಡಕಿ ರಸವನ್ನ ಕಿಡಕ್ಯಾಗ ಪಿಚಕ್ಕನ ಉಗಳಿದ ಜೋಗವ್ವ “ಬರತಾಳ ಬಂದ ಬರತಾಳ ಅಕೀನ ಬರತಾಳ…” ತುಂಬಾ ಸಮಾಧಾನದಿಂದ ಉತ್ತರಿಸಿದಳು.

“ಆಕೀ ಅಂದರ ಯಾರಬೇ…?” ಆಕೆ ಆಶ್ಚರ್ಯ ತಾಳದೇ ಮತ್ತೆ ಕೇಳಿದಳು.

“ಆಕಿ ಯಾರು ಗೊತ್ತಾಗಲಿಲ್ಲ? ನನ್ನ ಮಗ್ಗಲಕ ಕುಂತಾಳಲ್ಲ ಅಕೀನ” ಜೋಗವ್ವನ ಮಾತು ತುಂಬಾ ಸರಳವಾಗಿತ್ತು.

ಈ ಮಾತು ಈಡೀ ಬಸ್ಸಿನ ಮಂದಿಯ ಎದೆ ಕಲುಕಿತು. ಇದುವರೆಗೂ ಯಾರಿಗಾದರು ಸೀಟು ಹಿಡಿದಿರಬಹುದೆಂಬ ಅವರ ಭ್ರಮೆ ಕಳಚಿಕೊಂಡಿತು. ಅಷ್ಟೆಲ್ಲ ಜನರು ಆ ಒಂದು ಸೀಟಿಗಾಗಿ ಕಾಯುತ್ತಿರುವಂತೆ ಅವಳ ಕಡೆ ತಿರಗಿದರು. ಅವರ ಕಾಯ್ದ ಕೆಂಡದಂತಹ ಕಣ್ಣುಗಳಲ್ಲಿ ಯಲ್ಲವ್ವನ ಮೂರ್ತಿಯಿದ್ದ ಸೀಟು ಧಗಧಗ ಉರಿಯತೊಡಗಿತು. ಯಲ್ಲವ್ವನ ಜಗವ ಹೊತ್ತು ಬಂದಿದ್ದ ಜೋಗವ್ವ ಗುಡ್ಡದ ಭಕ್ತರ ಪಾಲಿನ ಖಳನಾಯಕಿಯಾಗಿ ವಿಜೃಂಭಿಸತೊಡಗಿದಳು. ಭವದ ನೋವು ಮರೆಯಲು ಜಾತ್ರೆಯ ಚಾರಣ ಹೊರಟ ಅವರ ಭಕ್ತಿ ಶಕ್ತಿಯಾಗಿ ಪರಿವರ್ತನೆಗೊಳ್ಳತೊಡಗಿತು. ಆಸೆಯ ಮೂಲೆಗಳಲ್ಲಿ ಅದೊಂದು ಸೀಟು ಚುಚ್ಚತೊಡಗಿತು. ಅದು ಅವರ ಅಹಂಕಾರವನ್ನು ಅಣುಕಿಸಿತು. ಅಸಾಯಕತೆಯ ಅಭಿಮಾನಕ್ಕೆ ಪೆಟ್ಟು ನೀಡಿತು. ಇದರ ಯಾವುದೆ ಪರಿಣಾಮ ಎದರಿಸುವ ತಾಕತ್ತು ತೋರಿಸುತ್ತಿದ್ದ ಜೋಗವ್ವ ಥೇಟ ಗುಡ್ಡದ ಯಲ್ಲವ್ವನಂತೆ ಭಕ್ತರ ನೋಡುತ್ತ ಸುಮ್ಮನೆ ಕುಳಿತಳು.
“ಏಳಬೇ.. ಏಳ… ನೀನಗೊಂದು ನಿನ್ನ ಯಲ್ಲವ್ವಗೊಂದು…. ಪುಗ್ಸಟ್ಟೆ ಬಸ್ಸ ಅಂತೇಳಿ… ಈಡೀ ಬಸ್ಸ ತಂದ ಮ್ಯಾಡ್ಯಾಳ….” ಮಂದಿಯ ಮಾತಿನ ಓತಪ್ರೋತಗಳಿಗೆ ವಿರಾಮವಿರಲಿಲ್ಲ.

ಇವರ ಯಾವ ಮಾತಿಗೂ ಕಿವಿಯಾಗದೆ ಸುಮ್ಮನೆ ಕುಂತ ಜೋಗವ್ವ. “ನಿಮಗ್ಯಾರು ಬ್ಯಾಡ ಅಂದ್ರು.. ಅದು ಯಲ್ಲವ್ವನ ಜಾಗ. ಅಷ್ಟ ಧಮ್ಮ ಇದ್ರ ಕಿತ್ತ ಒಗದ ಕುತಕೊಳ್ಳಿ” ಅವರ ಸಿಟ್ಟಿನ ಧಿಮಾಕಿನ ಮಾತಿಗೆ ವಿಚಾರ ಮಾಡಾಕ ಹುಳು ಬಿಟ್ಟು ತಾ ಮತ್ತ ಸುಮ್ಮನ ಕುಂತಳು. ಈಡೀ ಬಸ್ಸು ಯಲ್ಲವ್ವನ ಭಕ್ತರದು. ಗುಡ್ಡದ ಯಲ್ಲವ್ವನ ಮ್ಯಾಲ ಅವರಿಗಿದ್ದ ಭಕ್ತಿಗಿಂತ ಭಯ ದೊಡ್ಡದು. ಮೊದಲ ಮಾಯಕಾರತಿ ಯಲ್ಲವ್ವ ಅಕೀನ ತಡವಿ ಇಲ್ಲದ ಉಸಾಬರಿ ಯಾಕ ಬೇಕು. ನೀನ ತಗದ ಜಾಗ ಮಾಡಿಕೋಡು. ಜೋಗವ್ವನ ಕೆಣಕುತ್ತ ಗುದ್ದಾಡತೊಡಗಿದರು. ಅವರ ಹಠಕ್ಕಿಂತ ನಾನೇನ ಕಡಿಮಿ ಅನ್ನುತ್ತಿದ್ದ ಜೋಗವ್ವ ಅವರ ಯಾವ ಕಿತಾಪತಿಗೂ ಸೊಪ್ಪು ಹಾಕಲಿಲ್ಲ.

ಅದರಾಗ ಒಬ್ಬಾಕಿ ಗಟ್ಟಿ ಮನಸ್ಸ ಮಾಡಿದಳು. “ಆಕೀ ನನಗೂ ಅಷ್ಟ ನಿನಗೂ ಅಷ್ಟ ಸರೀ ನೋಡಿಯೆ ಬೀಡತಿನಿ.” ಜೋಗವ್ವನ ಸರಿಸಿ ಕೊಡದ ಮೂರ್ತೀಗೆ ಕೈ ಹಾಕಾಕ ಪ್ರಯತ್ನಿಸಿದಳು. ಎಲ್ಲಿದ್ದಳೋ ಏನೋ, ಗುಡ್ಡದ ಯಲ್ಲವ್ವ ಜೋಗವ್ವನ ಮೈ ಹೊಕ್ಕಳು… “ಏನ… ಎನ… ನನ್ನ ಜಗಾ ಬೇಕ ನಿನಗ…… ಖಬರ ಐತಿಲ್ಲೊ ನಿನಗ… ಸುಟ್ಟ ಭಸ್ಮ ಆಗತಿ….” ಲಟಕ್‌ ಪಿಟಕ್‌ ಕೈ ಮುರಿದು ಕಣ್ಣ ಕೆಂಪಗ ಮಾಡಿ ಚೀರಾಡಿ ಬಿಕ್ಕಳಿಸಲು ಆರಂಭಿಸಿದ ಜೋರ ದನಿಯ ಮುಂದ ಕುರಿಮರಿಯಂಗ ಕುಂಯ್‌ ಕುಂಯ್‌ ಅಂದ ಆಕೆ ಥಕ ಥಕ ಕುಣಿದು ಕುಪ್ಪಳಿಸಿದ ಜೋಗವ್ವನ ಹಣೆಗೆ ಬಂಡಾರ ಬಡಿದು ಶಾಂತ ಆಗು ತಾಯಿಯೆಂದು ಬೇಡಿಕೊಳ್ಳತೊಡಗಿದಳು. ಇಷ್ಟೊತನಾ ಆ ಒಂದು ಸೀಟಿಗಾಗಿ ಕಾತರಿಸುತ್ತಿದ್ದ ಮಂದಿ ತಮ್ಮ ತಮ್ಮಲ್ಲೆ ಗೊಣಗತೊಡಗಿದರು. ಆಕೆಯ ರೌದ್ರಾವತಾರದ ನಾಟಕ ನೋಡಿ ತಮ್ಮ ತಮ್ಮ ನಸೀಬವನ್ನ ಹಳಿಯತೊಡಗಿದರು.

ಚೂರು ಗಾಳಿಸುಳಿಯದೆ ಬೆವೆತು ಕಂಗಾಲಾಗಿದ್ದ ಮಂದಿಯನ್ನ ನೂಕುತ್ತ ಬಂಢಾರದ ಘಾಟಿನಲ್ಲಿ ಉಸಿರು ಹಾಕುತ್ತ ತನ್ನ ಕಾಯಕ ಆರಂಭಿಸಿದ ಕಂಡಕ್ಟರ ಜನರನ್ನು ಸಂಭಾಳಿಸುವ ಕೋಪದಲ್ಲಿ ಅಬ್ಬರಿಸುತ್ತಿದ್ದ. ಆಂವ ಬರುವ ರಭಸಕ್ಕೆ ಇನ್ನಷ್ಟು ವೇಗ ಸೇರಿಸುವ ಹಾಗೆ ಕೂಡಿದ ಮಂದಿ ಜೋಗವ್ವನ ಸೀಟಿನ ಕಥೆ ಹೇಳತೊಡಗಿದರು. ಅವರನೆಲ್ಲಾ ಸರಿಸುತ್ತ ಮುಂದ ಬಂದ ಕಂಡಕ್ಟರ “ಬೇ ಯವ್ವಾ ಇಲ್ಲಿ ನಂದ ನನಗ ರಗಡ ಆಗೈತಿ. ನಿಂದೊಂದ ಮ್ಯಾಲ, ತಗೀ ಅದನ್ನ ತಗೀ ಸೀಟ ಮಾಡಿ ಕೋಡ..”

ಹಗರಕ ಅವನ ಕಡೆ ದಿಟ್ಟಿಸಿ ನೋಡಿದ ಜೋಗವ್ವ “ಆಕೀ ನಮ್ಮ ಅವ್ವ ನಾ ಹೇಂಗ ಎತ್ತಿ ಇಡಲಿ, ಆಕೀ ಅಲ್ಲೆ ಕುಂಡ್ರತಾಳ.” ನೇರವಾಗಿ ಹೇಳಿದಳು.
“ಹೌದನ… ಹಂಗಾರ ಟಿಕಿಟ್‌ ತಗೋ…”

ಅವನ ಮಾತು ಇನ್ನೂ ಬಾಯಿಯೊಳಗ ಇತ್ತು. ಜೋಗವ್ವ ಉತ್ತರಿಸಿದಳು. “ಯಾರ ಬ್ಯಾಡ ಅಂದಾರು…ಎಷ್ಟ ರೊಕ್ಕ ಹೇಳು…”
ಈ ಮಾತು ಕಂಡಕ್ಟರನ ಸ್ವಾಭಿಮಾನಕ್ಕ ಪೆಟ್ಟುನೀಡಿತು. “ಟಿಕಿಟ್‌ ಕೊಡಾಕ ಮನುಷ್ಯಾ ಆಗಿರಬೇಕು. ಲಗೆಜ್‌ ಟಿಕಿಟ್‌ ಕೊಡತೀನಿ ಲಗೆಜ್‌ ಸೀಟ ಮ್ಯಾಲ ಅದಾವು ನಿನ್ನ ಯಲ್ಲವ್ವನ ಅಲ್ಲೆ ಕೂಡ್ರಿಸು”

“ಬಪ್ಪರೆ ಸಾಹೇಬ್ರ, ಲಗೆಜ್‌ ಮಾಡಿ ಕುಳ್ಳರಿಸುರಾಗಿದ್ದರ ಈಡೀ ಬಸ್ಸುತುಂಬಕೊಂಡ ಆಕೀ ಗುಡ್ಡಕ ಯಾಕ ಹೊಂಟೀರಿ….. ಆಕೀ ನಮ್ಮನೆಲ್ಲ ಕಾಯಾಕ ಇಲ್ಲೆ ಬಂದಾಳʼʼ ಜೋಗವ್ವನ ವೇದಾಂತದ ಮಾತು ಆತನಿಗೆ ಹಿಡಿಸಲಿಲ್ಲ.

“ಆತಬೀಡು ನಿನ್ನ ಯಲ್ಲವ್ವ ಇಲ್ಲೆ ಬಂದಿದ್ರ ಆಧಾರ ಕಾರ್ಡ ತೋರಿಸಿಬಿಡು, ಪುಗ್ಸಟ್ಟೆ ಟಿಕೆಟ್‌ ಹರಿದಬಿಡ್ತೀನಿ. ಯಲ್ಲಮ್ಮನು ಹೆಣ್ಣ ದೇವರ ಅಲ್ಲೇನು”

ಕಂಡಕ್ಟರನ ಈ ಮಾತಿಗೆ ಕೊತ ಕೊತ ಕುದಿಯುತ್ತಿದ್ದ ಬಸ್ಸಿನಲ್ಲಿ ನಗೆಹನಿ ಜಾರಿಬಿತ್ತು. ಬಸ್ಸಿನ ತುಂಬೆಲ್ಲಾ ಮಂದಿಯ ಮುಖದಲ್ಲಿ ಮಂದಹಾಸ ಮೂಡಿತು. “ಬರೊಬ್ಬರಿ ಪಾಯಿಂಟ್‌ ಹೇಳಿದಿರಿ ಸಾಹೇಬ್ರ…” ಎಂದು ಅವನನ್ನು ಉಬ್ಬಿಸಿ ಅಟ್ಟಕ್ಕೇರಿಸಿದರು ಜನ. ಈಗಲಾದರೂ ಸಮಸ್ಯೆ ಬಗೆ ಹರಿಯುವುದೇ ದಿಟ್ಟಿಸಿ ನೋಡತೊಡಗಿದರು.

ಕಂಡಕ್ಟರನೊಂದಿಗೂ ತನ್ನ ವಾದ ಮುಂದುವರೆಸಿದ ಜೋಗವ್ವ ತಾನು ನಂಬಿದ ಮೂರ್ತಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಗಟ್ಟಿಯಾಗಿ ಹೇಳಿದಳು. “ಆಕೀ ನನ್ನ ನೆರಳು, ನಾನು ಆಕೆಯ ನೆರಳು. ಸುಖ ದುಃಖದಾಗ ನಾವ ಜೋಡಿ ಬಂದೇವಿ ಜೋಡಿಯಾಗಿಯೇ ಹೊಕ್ಕೆವಿ”. ಆಕೆಯ ಮಾತಿನ ಮರ್ಮ ಅರಿಯದ ಮಂದಿ ತಮ್ಮ ಇರುವಿಕೆಯ ಚಿಂತಿಬಿಟ್ಟು ಸ್ವಾರ್ಥದ ಬೇಲಿಯೊಳಗೆ ಬೇಯುತ್ತಿದ್ದರು. ದೇವರು ಎನ್ನುವ ನಂಬಿಕೆಯ ಅಸ್ತಿತ್ವದ ಪರಿಧಿಯೊಳಗೆ ಕಾಣೆಯಾಗಿ ಆಕೆಯ ಧೃಡತೆಯನ್ನು ಪ್ರಶ್ನಿಸಿ ಹಾಸ್ಯದ ವಸ್ತುಗಳಾಗಿದ್ದರು.

ಬರಬರುತ್ತ ಬಸ್ಸು ಎರಡು ಪಾರ್ಟೀಗಳಾಗಿ ಬದಲಾಗತೊಡಗಿತು. ಜನರ ಪರ ಒಂದು ಗುಂಪು ಹಾಗೂ ಜೋಗವ್ವನ ಪರ ಒಂದು ಗುಂಪು ವಾದಕ್ಕಿಳಿಯತೊಡಗಿತು. ಸೀಟು ಸಿಗದೆ ನಿಂತ ಮಂದಿ ಸೀಟಿಗಾಗಿ ದನಿ ಎತ್ತಿದರೆ ಈಗಾಗಲೇ ಸೀಟು ಸಿಕ್ಕು ಅರಾಮಾಗಿ ಕುಳಿತ ಮಂದಿ “ನಾವ ಯಲ್ಲವ್ವನ ಗುಡ್ಡಕ್ಕ ಹೊರಟೇವಿ… ಆಕಿ ಇಲ್ಲೆ ಬಂದಾಳು… ಒಂದ ಸೀಟ ಬಿಡದಿದ್ದರ ನಿಮ್ಮದೆಂತಾ ಭಕ್ತಿ….ʼʼ ನಿಂತವರು ಪಾಪದವರು ಎಂಬಂತೆ ವಾದಿಸಿದರು. ಅದರಾಗ ಒಬ್ಬಳು “ಹೌದು ನಾವು ಪಾಪದವರು.. ನೀವು ಪುಣ್ಯವಂತರು. ಯಾಕ ಎದ್ದು ಸೀಟ ಬಿಟ್ಟ ಕೊಡಬಾರದು” ಅವರವರು ತಮ್ಮ ತಮ್ಮಲ್ಲೆ ಬದುಕಿನ ಬಂಧನಗಳ ಹಗ್ಗ ಬಿಚ್ಚಿ ಬಡಿತಾಡತೊಡಗಿದರು. ಆಕೆಯನ್ನು ಮನವೊಲಿಸಲು ವಿಫಲನಾದ ಕಂಡಕ್ಟರ “ಅಷ್ಟ ದೇವರ ಮ್ಯಾಲ ಪ್ರೀತಿ ಇದ್ದರ ಒಂದ್ ಕಾರ ಬಾಡಿಗೆ ಮಾಡಕೊಂಡ ಹೋಗಬೇಕಿಲ್ಲೋ?ʼʼ ಮತ್ತೊಮ್ಮೆ ಜೋಗವ್ವನನ್ನು ಛೇಡಿಸಲು ನೋಡಿದ. ಜೋಗವ್ವ ಮತ್ತೊಮ್ಮೆ ಜೋರಾಗಿ ಬಿಕ್ಕಳಿಸಿದಳು “ತಮ್ಮ ಆಕೀ ತನ್ನ ಮನಸ್ಸಿಗೆ ಎಲ್ಲಿ ಬರತೈತಿ ಹಂಗ ಬರತಾಳು. ಕಾರು ಅವಳದ, ಬಸ್ಸು ಅವಳದ… ನೀನು ಅವಳ ಕೂಸು…. ನಾನು ಅವಳ ಕೂಸು…” ಆಕೆಯ ಮಾತಿಗೆ ಕಂಡಕ್ಟರನ ತಲೆ ಗಿರಗಿರ ತಿರಗತೊಡಗಿತು.

ಹಿಂದಕ್ಕ ಮುಂದಕ್ಕ ಎರಡು ಮೂರು ಸಾರಿ ಬಸ್ಸು ಓಡಿಸಿದ ಡ್ರೈವರ ಹೊರಗ ಇನ್ನು ಜೋತಬಿದ್ದಿದ್ದ ಮಂದಿಗೆ ಬಸ್ಸು ಹೊರಡುವ ಸಿಗ್ನಲ್‌ ಕೊಟ್ಟ. ರಪರಪ ಬಾಗಿಲು ಬಡಿಯತೊಡಗಿದ ಮಂದಿ ನಮ್ಮನ್ಯಾಕ ಬಿಟ್ಟ ಹೋಗತಿ ಅಂತ ಆಕ್ರೋಶ ವ್ಯಕ್ತಪಡಿಸತೊಡಗಿದರು. ನಿಮ್ಮದಾರ ಆಗಲಿ ಎಷ್ಟ ಮಂದಿ ಹತ್ತತೀರಿ ಹತ್ತರಿ ಅನ್ನಕ್ಕೊಂತ ಮತ್ತ ಗಾಡಿ ನಿಂದ್ರಿಸಿ ಸುಮ್ಮನ ಕುಂತ. ಮತ್ತಷ್ಟ ಮಂದಿ ಅದರಾಗ ದುಗಸಕ್ಕೊತ ಮ್ಯಾಲ ಬಂದ್ರು. ಬಸ್ಸಿನೊಳಗ ನಡೆದಿದ್ದ ಹಕ್ಕಿಕ್ಕತ್ತು ಅವರಿಗೆ ಗೊತ್ತಿರಲಿಲ್ಲ. ಜೋತಾಡಕ್ಕೊತ ಜೋಗವ್ವನ ಸೀಟಿನ ಹತ್ರ ಬಂದು ಹಗರಕ ಜೋಗವ್ವನ ಮುಖ ನೋಡಿ ಒಬ್ಬಳು ನಕ್ಕಳು. ಆಕೆಯ ನಗುವಿನ ಮೋಹದಲ್ಲಿ ಸಿಕ್ಕ ಜೋಗವ್ವ ಸೀಟು ಬಿಟ್ಟ ಕೊಡತ್ತಿದ್ದಳೋ ಏನೋ… ಆದ್ರ ನಿಂತು ನಿಂತು ಹೈರಾಣಾಗಿದ್ದ ಆಕೆಯ ನೋವು ಹೆಪ್ಪಗಟ್ಟಿ ಜೋಗವ್ವನ ಮೂರ್ತಿಯ ಮೇಲೆ ಬಿದ್ದಿತು. “ಯಮ್ಮ ನನಗ ಇಲ್ಲದ ಜಾಗ ಆ ಯಲ್ಲವ್ವಗ್ಯಾಕ, ಸರಸ ಬೇ…” ಅದನ್ನ ಒಮ್ಮಲೆ ಮೂರ್ತಿಯ ಕಡೆ ಕೈ ಹಾಕಿದಳು. ಇದುವರೆಗೂ ಗುದ್ದಾಡಿ ಗುದ್ದಾಡಿ ಯುದ್ಧ ಗೆದ್ದಿದ್ದ ಜೋಗವ್ವ ಒಮ್ಮಿಂದೊಮ್ಮಲೆ ಭಯಗೊಂಡಂತೆ ಹೆದರಿಕೊಂಡಳು. ಬಸ್ಸಿನ ಜನರು ಈ ಮೋಜಿನಾಟಕ್ಕಾಗಿ ತಾಸಿನಿಂದಲೇ ಕಾಯುತ್ತಿದ್ದರು. ಬಿಡಬೇಡ ಆಕೀ ಯಾರಿಗೂ ಸೋಲುತ್ತಿಲ್ಲ. ಅಂತ ಒಂದಿಷ್ಟು ಮಂದಿ. ಹೇ ದೇವರ ಮೂರ್ತಿ ಕಿತ್ತು ಪಾಪ ಕಟ್ಟಕೊಳ್ಳಬೇಡ ಅಂತ ಒಂದಿಷ್ಟು ಮಂದಿ ಬಸ್ಸು ಅವರ ಗದ್ದಲಕ್ಕ ಹೋಯ್ದಾಡತೊಡಗಿತು.

ಹಠ, ಅಹಂ, ಸ್ವಾಭಿಮಾನ, ಸಣ್ಣತನ ಇವುಗಳ ಮಧ್ಯ ಸಿಕ್ಕು ದೇವರ ಮೂರ್ತಿ ಆಕಡೆ ಈಕಡೆ ಸರಿದಾಡತೋಡಗಿತು. ಮೂರ್ತಿಯನ್ನು ಕಿತ್ತು ಜಾಗವನ್ನು ಆಕ್ರಮಿಸಿಕೊಳ್ಳವ ಹಠದಲ್ಲಿ ಆಕೆ, ಇದುವರೆಗೂ ಸಾಧಿಸಿದ ತನ್ನ ಗತ್ತು ಕಳೆದುಕೊಳ್ಳದ ವಾಂಛೆಯಲ್ಲಿ ಜೋಗವ್ವ. ಇಬ್ಬರ ನಡುವೆ ಸಿಕ್ಕು ತೂರಾಡತೊಡಗಿದ ಯಲ್ಲವ್ವನ ಮೂರ್ತಿ. ಒಂದಿಷ್ಟು ಬೈಗುಳ, ಗುದ್ದಾಟ, ತೂರಾಟದ ಬಿಸಿ ಮುಟ್ಟಿಸಿ ಬಸ್ಸಿನೊಳಗೊಂದು ಯುದ್ಧದ ಸನ್ನಿವೇಶ ಸೃಷ್ಟಿಸಿತು.

ಒಂದಿಷ್ಟು ಹೋರಾಟ ಆಕೆ ಬಲಗೊಳ್ಳುತ್ತ ಜೋಗವ್ವ ನಡಗತೊಗಿದಳು. ಜೋಗವ್ವ ಜೋರಾಗುತ್ತ ಆಕೆ ರಣಚಂಡಿಯಾಗತೊಡಗಿದಳು. ಕುಹಕದ ನಗೆಗಳು ಚೀರಾಟ ಕೂಗಾಟ ಬಸ್ಸು ತುಂಬುತ್ತಲೆ ಇತ್ತು. ಒಂದು ಸೀಟಿಗಾಗಿ ದೇವರು ಜೋಕಾಲಿ ಆಡುತ್ತಿತ್ತು. ತುಂಬಿದ ಕೊಡದ ನೀರು ಹರಿಯತೊಡಗಿತು. ಇಬ್ಬರ ಕಸುವು ಒಟ್ಟಾಗಿ ಸೀರೆಯ ನೆರಿಗೆಗಳು ಗಂಟಾಗತೊಡಗಿದವು. ಅವರಿಬ್ಬರ ಕೋಪದಲ್ಲಿ ದೇವರು ಮಾಯವಾಗಿ ಬಹಳ ಹೊತ್ತಾಗಿತ್ತು. ಕುಂಕುಮ ಬಂಢಾರದ ಬೂದಿ ಹಾರಾಡಿ ಬಸ್ಸಿನ ತುಂಬ ತುಂಬಿಕೊಂಡಿತು. ಕೊಡದ ಕಂಠ ಅಲುಗಾಡಿ ದೇವರ ಕುತ್ತಿಗೆ ಉಸಿರು ನಿಂತುಹೋಗಿತ್ತು. ಈ ತಳ್ಳಾಟದ ರಭಸಕ್ಕೆ ಹರಿದಾಡಿದ ಬೊರಮಾಳ ಸರದ ಗುಂಡುಗಳು ಚಟ್ಟನೆ ಹರಿದು ಚೆಲ್ಲಾಪಿಲ್ಲಿಯಾಗಿ ತೂರತೊಡಗಿದವು. ಅರಗು ಮೆತ್ತಿಕೊಂಡಿದ್ದ ಬಂಗಾರದ ಗುಂಡುಗಳು ಮಿರಿ ಮಿರಿ ಮಿಂಚುತ್ತ ಹಾರಾಡತೊಡಗಿದವು. ಗುಂಡು ಹರಿದ ನೋವು ತಟ್ಟಿದ ಜೋಗವ್ವ ಆಕೆಯನ್ನು ಕೆಳಗೆ ತಳ್ಳಿ ಮುಖ ಮೂತಿ ಗುದ್ದತೊಡಗಿದಳು.

ಅದ್ಯಾವ ಪುಣ್ಯಾತಗಿತ್ತಿ ಅಬ್ಬರಿಸಿದಳೋ ಗೊತ್ತಿಲ್ಲ “ಯಲ್ಲವ್ವ ಬಂಗಾರದ ಮಳೆ ಹರಸಾಕತ್ತಾಳ ಯಾರಿಗೆ ಸಿಗತೈತಿ ಅವರ ಬಾಳು ಬಂಗಾರ ಆಗತೈತಿ” ಇದೊಂದು ಮಾತು ಬರಸಿಡಿಲು ಬಡಿದಂಗ ಆತು. ಸೀಟಿನ ಚಿಂತ್ಯಾಗ ಮುಕರಿಬಿದ್ದಿದ್ದ ಮಂದಿ ಹುಯ್ಯಂತ ಮ್ಯಾಲಕ್ಕೆತ್ತು. ಅವಳು ಇವಳು ಯಾರಿಗೂ ಯಾರು ಕಾಣಲಿಲ್ಲ. ಹಾರಾಡಿ ಬೀಳುತ್ತಿದ್ದ ಸರದ ಗುಂಡು ಆರಿಸಲಿಕ್ಕ ಮುಗಿಬಿದ್ದರು. ಅವರ ಮ್ಯಾಲ ಇವರು ಇವರ ಮ್ಯಾಲ ಅವರು ನೋಡ ನೋಡುವದ್ರೊಳಗ ಕಾಲ್ತುಳಿದ ಗದ್ದಲ ಬಸ್ಸನ್ನು ನುಂಗಿಕೊಂಡಿತು. ಬಿಸಲಿನ ಜಳದೊಳಗ ರಕ್ತದ ವಾಸನೆ ಬಡಿಯತೊಡಗಿತು. ದುರ್ಬಲರು ಬೀಳತೊಡಗಿದರು. ಪ್ರಬಲರು ಮೇಲೆದ್ದು ಓಡತೊಡಗಿದರು.

ಪಂವ್‌ ಪಂವ್‌ ಹಾರ್ನ ಮಾಡುತ್ತಿದ್ದ ಬಸ್ಸು ಅಳು ಚೀರಾಟ ಕೂಗಾಟದ ಆಕ್ರಂದನದೊಳಗ ಬಿಕ್ಕತೊಡಗಿತು. ಕಿಡಕಿಯ ಗಾಜುಗಳು ಒಡೆದು ಪುಡಿ ಪುಡಿಯಾದವು. ಜಾತ್ರೆಯ ಹುರುಪು ಜೀವ ಉಳಿದರೆ ಸಾಕೆಂದು ಆರ್ಭಟಿಸತೊಡಗಿತು. ಒಂದೇ ಒಂದು ಸೀಟು ಹತ್ತಾರು ಉಸಿರು ನಿಲ್ಲಿಸಿ ಕೊಕ್ಕಾಡಿಸಿ ನಗುತ್ತಿತ್ತು. ಗುಡ್ಡದ ಜಾತ್ರೆಯ ವಿಶೇಷ ವಾಹನ ಹಾಹಾಕಾರದಲ್ಲಿ ತೇಲಾಡುತ್ತಿತ್ತು. ನೂಕಿ ತಳ್ಳಿ ಚೀರಿ ಅತ್ತು ಕರೆಯುತ್ತಿದ್ದ ಜನರ ನಡುವೆ ಉರುಳಿ ಬಿದ್ದ ಯಲ್ಲವ್ವನ ಮೂರ್ತಿ. ಖಾಲಿಯಾದ ಕೋಡವನ್ನು ತಬ್ಬಿ ಹಿಡದಿದ್ದ ಉಸಿರು ನಿಂತ ಜೋಗವ್ವನನ್ನ ಕನಿಕರದಿಂದ ನೋಡುತ್ತಿತ್ತು.

About The Author

ಆನಂದ ಭೋವಿ

ಆನಂದ ಭೋವಿ ಸವದತ್ತಿ ತಾಲೂಕಿನ ಉಗರಗೋಳದವರು. ಕಥೆ, ಕಾದಂಬರಿ, ಗಜಲ್ ಪ್ರಕಾರಗಳಲ್ಲಿ ಪುಸ್ತಕಗಳು ಪ್ರಕಟವಾಗಿದ್ದು, ಇವರ ಕೃತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು, ಬೇಂದ್ರೆ ಬಹುಮಾನ ಸೇರಿ ಹಲವಾರು ಪ್ರಶಸ್ತಿ ಪಡೆದಿದ್ದಾರೆ. ಸಧ್ಯ ಸರಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

1 Comment

  1. ಎಸ್. ಪಿ. ಗದಗ

    ಉತ್ತರ ಕರ್ನಾಟಕದ ನಮ್ಮ ಬೆಳಗಾವಿ ಜಿಲ್ಲೆಯ ಬೇರೆ ಬೇರೆ ಊರುಗಳಿಂದ ಯಲ್ಲಮ್ಮನ ಗುಡ್ಡಕ್ಕೆ ಹೋಗುವ ಬಸ್ಸಿನಲ್ಲಿ ಸಾಮಾನ್ಯವಾಗಿ ಕಾಣುವ ಬಸ್ಸಿನ ಚಿತ್ರಣ ತುಂಬ ಸೊಗಸಾಗಿ ಮೂಡಿ ಬಂದಿದೆ. ತಿಳಿ ಹಾಸ್ಯ ನಮಗೆ ಓದಿನ ಖುಷಿ ಕೊಟ್ಟಿದೆ. ಬಿಟ್ಟು ಬಿಡದೆ ಓದಿಸಿಕೊಂಡು ಹೋದ ಕಥೆ. 🙏🙏

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ