Advertisement
‘ಮಾವಿನ ತುಮಕಿʼ: ಮಾಮಾ ಶಾಂತಾ: ಜಯಂತ ಕಾಯ್ಕಿಣಿ ಕೃತಿಯ ಬರಹ

‘ಮಾವಿನ ತುಮಕಿʼ: ಮಾಮಾ ಶಾಂತಾ: ಜಯಂತ ಕಾಯ್ಕಿಣಿ ಕೃತಿಯ ಬರಹ

ಯಾವುದೇ ಬಸ್ಸು ಹಿಡಿಯಲು ಸರಿಯಾದ ಸಮಯಕ್ಕೆ ಅಥವಾ ಚೂರು ಮುಂಚಿತವಾಗಿ ಆಕೆ ಹೋಗಿದ್ದೇ ಇಲ್ಲ. ಬಸ್ಸು ಹೊರಡುವ ಟೈಮಿಗೆ ಆಕೆ ಮಹಾರಾಣಿಯಂತೆ ನಿಧಾನಕ್ಕೆ ಮನೆಯಿಂದ ಹೊರಡುತ್ತಿದ್ದಳು. ಮತ್ತು ಮನೆಯಲ್ಲಿದ್ದ ನನ್ನನ್ನೋ ರಾಜೇಂದ್ರನನ್ನೋ ರಮಾನಂದನನ್ನೋ “ಹೋಗು ಬಸ್ ನಿಲ್ಲಿಸು” ಎಂದು ಬಸ್ ಸ್ಟ್ಯಾಂಡಿಗೆ ಅಟ್ಟುತ್ತಿದ್ದಳು. ನಾವ್ಯಾರೂ ಇರದಿದ್ದರೆ ಹಾದಿಯಲ್ಲಿ ಸಿಗುವ ಯಾವುದಾದರೂ ಸೈಕಲ್ ಸವಾರರನ್ನು ಓಡಿಸುತ್ತಿದ್ದಳು. ಸಣ್ಣ ಊರಿನ ಬಸ್‌ಸ್ಟ್ಯಾಂಡ್ ಕಂಟ್ರೋಲರ್ ಎಲ್ಲರಿಗೂ ಪರಿಚಿತರಾಗಿದ್ದರಿಂದ ಒಮ್ಮೊಮ್ಮೆ ನಿಲ್ಲಿಸುತ್ತಿದ್ದರು. ಕೆಲವೊಮ್ಮೆ ಬಸ್ಸು ಹೋಗಿಬಿಟ್ಟಿರುತ್ತಿದ್ದವು. ಆಗ ಎಲ್ಲರೂ ಬೈಸಿಕೊಳ್ಳುತ್ತಿದ್ದೆವು.
ಜಯಂತ ಕಾಯ್ಕಿಣಿ ಕೃತಿ “ತಾರಿ ದಂಡೆ”ಯ ಬರಹ ನಿಮ್ಮ ಓದಿಗೆ

ಶಾಂತಾ ಕಾಯ್ಕಿಣಿ ಎಂದ ತಕ್ಷಣ ನನ್ನ ಮನಸ್ಸನ್ನು ಆವರಿಸುವ ಒಂದೇ ಸಂಗತಿ ಎಂದರೆ ಅದಮ್ಯ ಉಮೇದಿ! ಮತ್ತು ಅದರೊಂದಿಗೇ ಇರುವ ಛಲ. ನನಗೆ ಮಾತು ಮೂಡುವ ಸಂದರ್ಭದಲ್ಲೇ ನಮ್ಮ ಕಡೆಯ ವಾಡಿಕೆಯ ‘ಆಯಿ’ ‘ಅಮ್ಮಾ’ ಬದಲಿಗೆ ಹಟದಿಂದ ನನ್ನಿಂದ ತನ್ನನ್ನು ‘ಮಮ್ಮಿ’ ಎಂದೇ ಕರೆಸಿಕೊಂಡ ಛಲವಾದಿ ಆಕೆ. ಆ ಕಾಲದಲ್ಲೆ ಗಂಡ ಗೌರೀಶರನ್ನು ಎಲ್ಲರೆದುರೂ ಸಹ ಏಕವಚನದಲ್ಲೇ ಕರೆದ ಬಂಡಾಯಗಾರ್ತಿ. ಜ್ಞಾನ ಹಂಚುವುದನ್ನೇ ಪರಮೋಚ್ಚ ಕಾಯಕ ಎಂದು ನೆಚ್ಚಿಕೊಂಡು ಆ ದಿಶೆಯಲ್ಲೆ ಅಧ್ಯಯನ, ಬರವಣಿಗೆ, ಶಿಕ್ಷಕ ವೃತ್ತಿ, ಭಾಷಣ, ಪತ್ರಿಕೋದ್ಯಮ ಎಲ್ಲವನ್ನೂ ಉಪಾಸನೆಯಂತೆ ಕೈಗೊಂಡಿದ್ದ ಗೌರೀಶರನ್ನು – ಯಾವ ಸಾಂಸಾರಿಕ, ವ್ಯಾವಹಾರಿಕ, ಅಡಚಣೆಯ ಝಳವೂ ಸೋಕದಂತೆ ಕಾಳಜಿ ಎಚ್ಚರಗಳಿಂದ ನೋಡಿಕೊಂಡ ಗಟ್ಟಿಗಿತ್ತಿ!

ಅದಕ್ಕಾಗಿ, ಮನೆಯ ಹಿತ್ತಿಲ ಮುತ್ತು ಮಲ್ಲಿಗೆ ದಂಡೆ ಕಟ್ಟಿ ದೇವಸ್ಥಾನದ ಎದುರಿನ ತೆಂಗಿನಕಾಯಿ ಅಂಗಡಿಯಲ್ಲಿ ಮಾರಲು ಇಡುವುದು (ಐದು ಪೈಸೆಗೆ ಒಂದು), ಎಲ್.ಐ.ಸಿ. ಸಬ್ ಏಜೆನ್ಸಿ ಮಾಡುವುದು, ಲಾಟರಿ ಟಿಕೆಟ್ಟು ಮಾರುವುದು, ಹನ್ನೊಂದು ಜನರಿಗೆ ಪತ್ರ ಬರೆದು ಅವರೆಲ್ಲ ತಲಾ ಇನ್ಯಾರೋ ಹನ್ನೊಂದು ಜನರಿಗೆ ಪತ್ರ ಬರೆದಾಗ ಒಂದು ಸ್ಟೀಲ್ ಡಬ್ಬ ಪಡೆಯುವುದು…. ಇತ್ಯಾದಿಗಳನ್ನು ಮಾಡಿ ಕೊನೆಗೆ, 1980ರಲ್ಲಿ ಮೊದಲ ಬಾರಿಗೆ ವಿದೇಶಿ ಪ್ರವಾಸಿಗರಿಗೆ (ಬೆರಳೆಣಿಕೆಯ ವಿದೇಶಿಗರಷ್ಟೆ ಬರುತ್ತಿದ್ದ ಕಾಲ ಅದು) ವಿಶೇಷತಃ ಒಂಟಿ ಮಹಿಳಾ ಪ್ರವಾಸಿಗರಿಗೆ ಮನೆಯಲ್ಲಿ ಒಂದೆರಡು ಕೋಣೆಗಳನ್ನು ಬಾಡಿಗೆಗೆ ಕೊಡಲಾರಂಭಿಸಿದ ಗೋಕರ್ಣದ ಆದ್ಯ ಪ್ರವಾಸೋದ್ಯಮಿ ಆಕೆ. ಆಗ ಪ್ರತಿದಿನ ನಮ್ಮ ಮನೆಯ ದಾಸಾಳಗಳನ್ನೇ ಕಿತ್ತು – “ಮಾಮಾ ಶಾಂತಾ ಗುಡ್ ಮಾರ್ನಿಂಗ್” – ಎಂದು ಅವಳ ಕೈಗಿತ್ತು, ತಿಂಗಳುಗಟ್ಟಲೆ ಉಳಿದು ಬಾಡಿಗೆ ಕೊಡದೆ (ದಿನಕ್ಕೆ ಎರಡು ರೂಪಾಯಿ ಬಾಡಿಗೆ) ಮಾಯವಾದ ಒಂದಿಬ್ಬರು ಚಾಣಾಕ್ಷ ಪ್ರವಾಸಿಗರೂ ಇದ್ದರು. ಅವರ ಇಂಗ್ಲಿಷ್ ಅಥವಾ ಇಟಾಲಿಯನ್ ದಾಸಾಳ ವಂದನೆಗೆ ಮನಸೋತು ಮಾಮಾ ಶಾಂತಾ “ಯೆಸ್ ಯೆಸ್” ಎಂದು ತಲೆ ಅಲ್ಲಾಡಿಸಿ ನಗುತ್ತ ಸಂಪ್ರೀತರಾಗಿಬಿಟ್ಟಿರುತ್ತಿದ್ದರು! ಆಗ ಮುಂಬಯಿಯಲ್ಲಿದ್ದ ನಾನು ರಜೆಗೆ ಬಂದಾಗ “ಅಂಥವರಿಗೆಲ್ಲ ರೂಮು ಬಾಡಿಗೆಗೆ ಕೊಡಬೇಡ” – ಎಂದೆಲ್ಲ ಹೇಳಲು ಹೋದರೆ – “ನೀನು ವರುಷಕ್ಕೊಮ್ಮೆ ಬರುವವ. ಅವರು ತುಂಬ ಕಾಳಜಿಯಿಂದ ನಮಗೆ ನೆರವಾಗುತ್ತಾರೆ. ಗಾಯವಾದರೆ ಡ್ರೆಸ್ಸಿಂಗ್ ಮಾಡುತ್ತಾರೆ, ಏನಾದರೂ ಅರ್ಜೆಂಟ್ ಬೇಕಾದರೆ ತಂದುಕೊಡುತ್ತಾರೆ. ಫ್ಯೂಸ್ ಹೋದರೆ ಹಾಕಿ ಕೊಡುತ್ತಾರೆ. ಗಲಾಟೆ ಮಾಡದೆ ಸುಮ್ಮನೆ ಇರುತ್ತಾರೆ. ಅಂಥವರು ಒಂದಿಬ್ಬರಿದ್ದರೆ ನಮಗೂ ಧೈರ್ಯ!” – ಎಂದು ಅವರ ಪರವಾಗಿಯೇ ವಾದಿಸುತ್ತಿದ್ದರು.

ಗೋಕರ್ಣದ ಮನೆ (“ಪರ್ಣಕುಟಿ”)ಯೇ ಗೌರೀಶ ಮತ್ತು ಶಾಂತಾರ ವಿಶ್ವದ ಕೇಂದ್ರವಾಗಿತ್ತು. ಶಾಂತಾರ ಮೊದಲ ಹೆಸರು ‘ದೀನಾ’. ಕೊಂಕಣಿಯಲ್ಲಿ ‘ದೀನಾ’ ಎಂದರೆ ‘ಕೊಡುವುದಿಲ್ಲ’ಎಂದು ಅರ್ಥ. “ಅವಳು ತುಂಬಾ ಕಂಜೂಶಿ (ಜುಗ್ಗಳು). ಅದಕ್ಕೆ ‘ದೀನಾ’ ಹೆಸರು” – ಎಂದು ವ್ಯವಹಾರ ಜ್ಞಾನ ಕಿಂಚಿತ್ತೂ ಇಲ್ಲದ ಗೌರೀಶರು ಛೇಡಿಸಿದ್ದೂ ಇದೆ. ಆಗ ಶಾಂತಾ “ನಿನ್ನ ಪಗಾರು ಎಷ್ಟು ಅಂತಾದರೂ ಗೊತ್ತುಂಟೋ ನಿನಗೆ?” – ಎಂದು ಎಲ್ಲರೆದುರು ಸರಿಯಾದ ತಿರುಗೇಟು ಕೊಟ್ಟಿದ್ದೂ ಇದೆ. ತನ್ನ ಶಾಲಾದಿನಗಳಲ್ಲಿ ತದಡಿಯಿಂದ ಗೋಕರ್ಣ ಶಾಲೆಗೆ “ಸೈಕಲ್” ಮೇಲೆ ಬರುತ್ತಿದ್ದ ದೀನಾಳನ್ನು ಸಾಣಿಕಟ್ಟೆ, ತಲಗೇರಿಯ ಪೋರರು “ಸೈಕಲ್‌ವಾಲಿ” ಎಂದು ಚುಡಾಯಿಸುತ್ತಿದ್ದರಂತೆ. ಅವರ ತಂದೆ ರಾಮಚಂದ್ರ ವೆಂಟೇಕರ್ ಅವರು ತದಡಿ ಬಂದರಿನ ಕಸ್ಟಮ್ಸ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾಗಲೇ – ಮನೆಯಲ್ಲೇ ಪೋಸ್ಟ್ ಆಫೀಸು ನಡೆಸುತ್ತಿದ್ದರು. ಉತ್ಸಾಹಿಯಾಗಿದ್ದ ಅವರನ್ನು ಎಲ್ಲರೂ ಊರಲ್ಲಿ ಹೆಸರಿನಿಂದ ಕರೆಯದೆ ‘ಉಮೇದುವಾರ’ರೆಂದೇ ಕರೆಯುತ್ತಿದ್ದರು. ಹೀಗಾಗಿ ಉಮೇದ್‌ವಾರರ ಮಗಳು ‘ಸೈಕಲ್‌ವಾಲಿ’ ಆದದ್ದರಲ್ಲಿ ಅಚ್ಚರಿಯಿಲ್ಲ.

(ಶಾಂತಾ ಕಾಯ್ಕಿಣಿ)

ಅವಳಿಗೆ ಶಾಲಾ ದಿನಗಳಿಂದಲೂ ಭಾರತ ಸೇವಾದಳ, ಸ್ಕೌಟ್ ಇತ್ಯಾದಿ ಶಿಬಿರಗಳಲ್ಲಿ ಆಸಕ್ತಿ. ಸ್ಕೌಟ್‌ಗೈಡ್ ಆಗಿದ್ದಳು. ಅವಳು ಶಾಲೆಯಲ್ಲಿದ್ದಾಗ ಗೋಕರ್ಣದಲ್ಲಿ ಗೌರೀಶರ ಬಳಿ ಪಾಠ ಹೇಳಿಸಿಕೊಳ್ಳಲು ಬರುತ್ತಿದ್ದಳು. ಜೊತೆಗೆ ಸಂಗೀತವನ್ನೂ ಕಲಿಯುತ್ತಿದ್ದಳು.

ಆಗ ಗೌರೀಶರು ಗೋಕರ್ಣದಿಂದ ಐದು ಕಿ.ಮೀ. ದೂರದ ಬಂಕಿಕೊಡ್ಲದ ಆನಂದಾಶ್ರಮ ಹೈಸ್ಕೂಲಿನಲ್ಲಿ ಮಾಸ್ತರರಾಗಿದ್ದರು. ನಿತ್ಯ ಗೋಕರ್ಣದಿಂದ ನಡೆದುಕೊಂಡೇ ಹೋಗಿ ಬರುತ್ತಿದ್ದರು. ‘ಅವರು ಹೋಗುವಾಗ ದಾರಿಯುದ್ದಕ್ಕೂ ಕೈಲಿ ಪುಸ್ತಕ ಹಿಡಿದು ಓದುತ್ತಲೇ ಹೋಗುತ್ತಿದ್ದರು’-ಎಂದೇ ಎಲ್ಲರೂ ನೆನೆಯುವಷ್ಟು ಅದೊಂದು ದಂತಕತೆಯೇ ಆಗಿಹೋಗಿದೆ. ಅವರು ಓದಿನಲ್ಲಿ ಎಷ್ಟರಮಟ್ಟಿಗೆ ಗರ್ಕರಾಗಿರುತ್ತಿದ್ದರೆಂದರೆ ದಾರಿಯಲ್ಲಿ ನಾಯಿಗಳು ಕಚ್ಚಾಡುತ್ತ ಕಾಲ ಸಮೀಪ ಬಂದಾಗ, ಅವನ್ನು ಕೈಬೀಸಿ ಹಚಾಹಚಾ ಮಾಡುವಾಗಲೂ ಅವರು ಓದುತ್ತಿದ್ದ ಪುಟದಲ್ಲಿ ಬೆರಳಿಟ್ಟುಕೊಂಡೇ ಇರುತ್ತಿದ್ದರಂತೆ! ಇದನ್ನು ಅವರ ಖಾಸಾ ವಿದ್ಯಾರ್ಥಿ, ಪ್ರತ್ಯಕ್ಷದರ್ಶಿ ಎಂ.ಎನ್. ಪ್ರಭು ಯಾವಾಗಲೂ ಕೌತುಕದಿಂದ ಹೇಳುತ್ತಾರೆ. ಆಗ ಶಾಂತಾ ಗೋಕರ್ಣದ ಭದ್ರಕಾಳಿ ಹೈಸ್ಕೂಲಿನಲ್ಲಿ ಆರು ವರ್ಷ ಮಾಸ್ತರಣಿ ಆಗಿ ಕೆಲಸ ಮಾಡಿದಳು. 1955ರಲ್ಲಿ ನಾನು ಹುಟ್ಟಿದ ನಂತರ ಆಕೆ ಕೆಲಸ ಬಿಟ್ಟಳು. ಮತ್ತು ಅವಳ ಜಾಗಕ್ಕೆ ಗೌರೀಶರು ಬಂದು ಸೇರಿಕೊಂಡರು.

ಜನ ಸೇರುವ ಯಾವುದೇ ಚಟುವಟಿಕೆಯಲ್ಲಿ ಶಾಂತಾಬಾಯಿ ಯಾವತ್ತೂ ಮುಂದೆ. ಹೀಗಾಗಿ ಗೌರೀಶ ಮಾಸ್ತರ್ ಅವಳನ್ನು “ಮಾವಿನ ತುಮಕಿ” ಎಂದೇ ಕರೆಯುತ್ತಿದ್ದರು. ಎಲ್ಲ ಶುಭ ಕಾರ್ಯಗಳಲ್ಲಿ ಮುಂದೆ ಇರುವ ‘ಮಾವಿನ ತುಮಕಿ’ ಅಂದರೆ ‘ಮಾವಿನ ತಳಿರು’ ಎನ್ನುವ ಅರ್ಥದಲ್ಲಿ.

(ಕೊಂಕಣಿಯಲ್ಲಿ “ಆಂಬ್ಯಾ ತಾಳೊ”). ಪುಣ್ಯಕ್ಷೇತ್ರ ಎನಿಸಿಕೊಂಡ ಗೋಕರ್ಣದಲ್ಲಿ ದೇವಸ್ಥಾನಗಳು, ಉತ್ಸವಗಳು ಜಾಸ್ತಿ. ಹೀಗಾಗಿ ನಾನಾ ಭಜನಾ ಸಪ್ತಾಹಗಳು ನಡೆಯುತ್ತಿದ್ದವು. ಅಲ್ಲೆಲ್ಲ ತನ್ನ ಹಾಡಿನ ಪಟ್ಟಿ(ಹಾಡುಗಳನ್ನು ಬರೆದಿಟ್ಟುಕೊಂಡ ಪುಟ್ಟ ಪುಸ್ತಕ)ಯೊಂದಿಗೆ ಮಾವಿನ ತುಮಕಿ ಶಾಂತಾಬಾಯಿ ಹಾಜರ್. ಪೋಗದಿರೆಲೋ ರಂಗಾ, ಮನೆಯೊಳಗಾಡೋ ಗೋವಿಂದಾ ಮುಂತಾದ ದಾಸರ ಪದಗಳನ್ನು, ಬಿಟ್ಟೆನೆಂದರೆ ಬಿಡದೀ ಮಾಯೆ, ಮಡಿಕೆಯ ಮಾಡುವರೆ… ಮುಂತಾದ ವಚನಗಳನ್ನು ಹಾರ್ಮೋನಿಯಂ ಬಾರಿಸಿಕೊಂಡು ಹಾಡುತ್ತಿದ್ದಳು. ಶಾಲೆಯ ವಾರ್ಷಿಕೋತ್ಸವ ಅಂದರೆ ಊರಿಗೇ ಹಬ್ಬವಾಗುವ ದಿನಗಳು ಅವು. ಅಲ್ಲಿ, ಬೆಳದಿಂಗಳ ನೋಡಾ, ಆಡಾಡ್ತ ದಿನಮಾನ, ಇಲ್ಲೆ ಇರು ಅಲ್ಲಿ ಹೋಗಿ ಮುಂತಾದ ಭಾವ ಗೀತೆಗಳನ್ನು ಹಾಡುತ್ತಿದ್ದಳು. ನೃತ್ಯ ಕಾರ್ಯಕ್ರಮಗಳಿಗೆ, ಗೀತರೂಪಕಗಳಿಗೆ ವಿಂಗಿನಲ್ಲಿ ಕೂತು ಹಿನ್ನೆಲೆ ಗಾಯನ ಒದಗಿಸುತ್ತಿದ್ದಳು. ರಾತ್ರಿ ಕಾರ್ಯಕ್ರಮ ಮುಗಿಸಿ ಎಲ್ಲ ಒಟ್ಟಿಗೇ ಮನೆಗೆ ಮರಳುವಾಗ ಜೊತೆಗಿರುವ ವಿದ್ಯಾರ್ಥಿನಿಯರನ್ನು ಅವರವರ ಮನೆ ತಲುಪಿಸಿ, ಆಯಾ ಮನೆಯ ಬಾಗಿಲು ತೆರೆದ ಬಳಿಕವೇ ಮುಂದೆ ಚಲಿಸುತ್ತಿದ್ದಳು.

(ಜಯಂತ ಕಾಯ್ಕಿಣಿ)

ಅವಳು ಜಿಲ್ಹಾ ಕಾಂಗ್ರೆಸ್ ಕಮಿಟಿಯ ಉಪಾಧ್ಯಕ್ಷಳಾಗಿ, ನಂತರ ಆಗಿನ ಜನತಾ ಪಕ್ಷದ ಸ್ಥಳೀಯ ಉಪಾಧ್ಯಕ್ಷಳಾಗಿಯೂ ಓಡಾಡಿದಳು. ಗೌರೀಶರದು ಯಾವಾಗಲೂ ದಿನಕರ ದೇಸಾಯಿ, ಗಿರಿ ಪಿಕಳೆ ಮತ್ತು ಸಂಗಡಿಗರ ಸಮಾಜವಾದಿ ಪಕ್ಷಕ್ಕೆ ಬೆಂಬಲ. ಹೀಗಾಗಿ ಎಲ್ಲರಿಗೂ ಈ ಬಗ್ಗೆ ಕುತೂಹಲ. ಎರಡೂ ಪಕ್ಷದವರೂ ನಮ್ಮ ಮನೆಯಲ್ಲಿ ಯಾವತ್ತೂ ಹರಟೆಗೆ ಹಾಜರಿರುತ್ತಿದ್ದರು. ಈಗ ನೆನೆದರೆ ಅದೆಂಥ ಸುವರ್ಣ ಕಾಲ ಎನಿಸುತ್ತದೆ! ಒಬ್ಬನೇ ನಾನು ಬೇಲೆಯಲ್ಲೋ ಬೀದಿಯಲ್ಲೋ ಸಿಕ್ಕಾಗ ಕೆಲವು ಕೀಟಲೆಯವರು “ಏನೋ ಆನು, ನಿನ್ನ ಅಪ್ಪಂದು ಒಂದು ಪಾರ್ಟಿ, ನಿನ್ನ ಆಯಿದು ಒಂದು ಪಾರ್ಟಿ – ನಿಂದ್ ಯಾವ್ದೋ ಮಾರಾಯಾ?”, “ನಿನ್ನ ಆಯಿ ಮೀಟಿಂಗು ಪ್ರಚಾರ ಅಂತ ಮೆರಿತಾಳೆ, ಮನೇಲಿ ಅಪ್ಪಂಗೆ ನಿನಗೆ ಊಟಾಗೀಟಾ ಮಾಡಿ ಹಾಕುವವರು ಯಾರು?” – ಎಂದೆಲ್ಲ ಗೇಲಿ ಮಾತುಗಳನ್ನು ಆಡುತ್ತಿದ್ದರು.

ಕುಟುಂಬ ಯೋಜನೆ ಪ್ರಚಾರದ ಅಬ್ಬರದ ಕಾಲದಲ್ಲಿಯೂ ಅದರ ಅಧಿಕೃತ ಪ್ರಚಾರಕಿಯಾಗಿ ಮನೆಮನೆಗೆ ಅಕ್ಕಪಕ್ಕ ಹಳ್ಳಿಗಳಿಗೆ ಓಡಾಡುತ್ತಿದ್ದಳು. ನಮ್ಮ ಮನೆಯಲ್ಲಿ ಅದಕ್ಕೆ ಸಂಬಂಧಪಟ್ಟ ರಾಶಿ ರಾಶಿ ಪೋಸ್ಟರುಗಳು ಬಿದ್ದಿರುತ್ತಿದ್ದವು. ನಾನು ನನ್ನ ಪುಸ್ತಕಗಳಿಗೆ ಅವುಗಳಿಂದಲೇ ಬೈಂಡ್ ಹಾಕಿಕೊಳ್ಳುತ್ತಿದ್ದೆ. ಗೌರೀಶ ಮಾಸ್ತರ್‌ರಿಗೆ ವ್ಯವಹಾರ ಜ್ಞಾನ ಅಜೀಬಾತ್ ಇರಲಿಲ್ಲ. ಬ್ಯಾಂಕ್ ಖಾತೆ ತೆಗೆಯುವುದು, ಪಿಗ್ಮಿ ತುಂಬುವುದು, ಅಂಚೆ ಕಚೇರಿಗೆ ಹೋಗಿ ಪಾರ್ಸಲ್ ಇತ್ಯಾದಿ ಕಳಿಸುವುದು ಏನೇನೂ ತಿಳಿಯುತ್ತಿರಲಿಲ್ಲ. ಸಮೀಪದ ಊರುಗಳ ಶಾಲಾ ವಾರ್ಷಿಕೋತ್ಸವಕ್ಕೆ ಅವರು ಅತಿಥಿಯಾಗಿ ಹೊರಟಾಗ ಶಾಂತಾಬಾಯಿ ಹೋಗಿ ಬರುವ ಬಸ್‌ಚಾರ್ಜು ನಿಖರವಾಗಿ ಲೆಕ್ಕ ಮಾಡಿ ತೋರಿಸಿ ಕಿಸೆಯಲ್ಲಿ ಹಾಕಿ ಕಳಿಸುತ್ತಿದ್ದರು. ಗೌರೀಶ ಮಾಸ್ತರರದು ಅವರದೇ ಆದ ಹಣದ ಪಾಕೀಟು ಅಥವಾ ಸಂಚಿ ಅಂತ ಇರಲೇ ಇಲ್ಲ. ಹೀಗೊಮ್ಮೆ ಹೋದಾಗ ಕಿಸೆಯ ಹಣವನ್ನು ಆ ಕಾರ್ಯಕ್ರಮದಲ್ಲಿ ಚೆನ್ನಾಗಿ ಹಾಡಿದವನಿಗೆ ಬಹುಮಾನ ಕೊಟ್ಟು, ಬಸ್ಸಿನಲ್ಲಿ ಖಾಲಿ ಕಿಸೆಯಲ್ಲಿ ಕೈಹಾಕಿ ಮಿಕಿಮಿಕಿ ನೋಡಿ ಪಕ್ಕದವರು ಕಡ ಕೊಟ್ಟಿದ್ದೂ ಇದೆ. ನಮ್ಮ ಮನೆಯ ಎಲ್ಲ ವ್ಯವಹಾರ ನೋಡಿಕೊಂಡಿದ್ದೇ ಶಾಂತಾ. ಮಾಸ್ತರರ ಪುಡಿಗಾಸು ಸಂಬಳದಲ್ಲೇ ಹೇಗೋ ಉಳಿತಾಯ ಮಾಡುತ್ತಿದ್ದರು. 1960ರ ಕಾರವಾರ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ಸಂಜೆ ವೇದಿಕೆಯ ಮೇಲೆ ಸಮಾರೋಪ ಭಾಷಣ ನಡೆದಿದ್ದಾಗ ಅಲ್ಲಿಂದ ತುಸು ದೂರ ಸ್ವಾಗತ ಸಮಿತಿಯ ಕೌಂಟರಿನಲ್ಲಿ ಶಾಂತಾಬಾಯಿ ಟಿ.ಏ.ಡಿ.ಏ. ಸರಿ ಕೊಡಲಿಲ್ಲ ಎಂದು ಆ ಕಾಲದ 12 ರೂಪಾಯಿಗಾಗಿ ಕೋಶಾಧ್ಯಕ್ಷರೊಂದಿಗೆ ನಡೆಸಿದ ಬೀದಿ ಜಗಳದಂಥ ವಾದ ನನಗೆ ಮುಜುಗರ ಉಂಟು ಮಾಡಿತ್ತು. ಆದರೆ ಈಗ ನೆನೆದರೆ ಆಕೆಯ ಆ ನಿಲುವಿನ ಋಜುತ್ವದ ಅರಿವಾಗುತ್ತದೆ.

ಅವಳು ಎಷ್ಟೊಂದು ಚಟುವಟಿಕೆಗಳಲ್ಲಿ ಏಕಕಾಲಕ್ಕೆ ನಿರತರಾಗಿದ್ದಳಿಂದಲೋ ಏನೋ, ಒಲೆಯ ಮುಂದೆ ಅತಿ ಕಡಿಮೆ ವೇಳೆ ಕಳೆದು, ಕ್ಷಿಪ್ರವಾಗಿ ಅಡಿಗೆ ಮಾಡಿ ಮುಗಿಸುವುದರಲ್ಲಿ ನಿಸ್ಸೀಮಳಾಗಿಬಿಟ್ಟಿದ್ದಳು. ನಮ್ಮ ಮನೆ ಯಾವತ್ತೂ ಅತಿಥಿಗಳಿಗೆ ತೆರೆದಿತ್ತು. ಬೆಳಗಿಂದ ಸಂಜೆತನಕ ಗೌರೀಶರ ಭೇಟಿಗೆ ಬರುವವರಿಗೆ ಚಹಾ ಗ್ಯಾರಂಟಿ ಇರುತ್ತಿತ್ತು. ಬಂಕಿಕೊಡ್ಲ, ತದಡಿ ಬಸ್ಸು ತಪ್ಪಿಸಿಕೊಂಡವರು ಮುಂದಿನ ಬಸ್ಸಿನ ತನಕದ ವೇಳೆ ಕಳೆಯಲೂ ಬರುತ್ತಿದ್ದರು. ‘ದಾಡಿ ಮಾಡಿಕೋ’, ‘ಸ್ನಾನಕ್ಕೆ ಹೋಗು’; ‘ಶಾಲೆಗೆ ತಡವಾಯಿತು’ – ಹೀಗೆಲ್ಲ ಶಾಂತಾಳೇ ಎಚ್ಚರಿಸುತ್ತಿದ್ದಳು. ನಮ್ಮ ಮನೆಯಿಂದ ಕಾಣುವ ಸಣ್ಣಬೇಲೆಯಲ್ಲಿ ದೋಣಿ ತಾಡಿದ್ದು ಗೊತ್ತಾದರೆ ಸಾಕು ಓಡಿಹೋಗಿ ಹಳೆ ಸಂಯುಕ್ತ ಕರ್ನಾಟಕದ ಹಾಳೆಯಲ್ಲಿ ತಾಜಾಮೀನು ಸುತ್ತಿಕೊಂಡು ತಂದು ಹದಿನೈದು ನಿಮಿಷದಲ್ಲಿ ಹೆರೆದು ಮಸಾಲೆ ಅರೆದು ಮುಕ್ಕಾಲು ಗಂಟೆಯಲ್ಲಿ ಸಾರು ಮಾಡಿ, ಊಟಕ್ಕೆ ಕರೆಯುತ್ತಿದ್ದಳು. ಗೌರೀಶರು ಮೀನು ತಿನ್ನುತ್ತಿರಲಿಲ್ಲ. ಆದರೆ ಕ್ರಮೇಣ ಅವರಿಗೂ ಚೂರುಪಾರು ಅದರ ರುಚಿ ಹತ್ತಿತ್ತು. “ಶಾಂತಾಳ ಸಹವಾಸದಿಂದಾಗಿ ನಾನೂ ಸಹ ‘ಮೀನ್’ ಮೈಂಡೆಡ್ ಆಗಿದ್ದೇನೆ” – ಎನ್ನುತ್ತಿದ್ದರು.

ಊರಿನಲ್ಲಿ ಅಥವಾ ಅಕ್ಕಪಕ್ಕದ ಊರಿನಲ್ಲಿ ಯಾರ ಮನೆಗೆ ಹೋಗಿದ್ದರೂ ಅವರ ಅಂಗಳದಲ್ಲಿ ಅಥವಾ ಹಿತ್ತಲಿನಲ್ಲಿ ಹೊಸದಾದ ಹೂಗಿಡ ಕಂಡರೆ ತಪ್ಪದೆ ಅದರ ಟೊಂಗೆಯನ್ನು ನೆಡಲು ತರುತ್ತಿದ್ದಳು. ಒಂದು ಸಮಯದಲ್ಲಂತೂ ನಮ್ಮ ಮನೆಯಲ್ಲಿ ಇಪ್ಪತ್ತು ಬಗೆಯ ದಾಸಾಳದ ಗಿಡಗಳಿವೆ ಎಂದು ಆಕೆ ಹೆಮ್ಮೆಯಿಂದ ಹೇಳುತ್ತಿದ್ದಳು. ಹೊಸ ವಿಷಯಗಳ ಬಗ್ಗೆ ಶಾಂತಾಗೆ ತುಂಬಾ ಕುತೂಹಲ. ಒಮ್ಮೆ ಆಕೆ ಬೆಂಗಳೂರಿಗೆ ಹೋಗಿದ್ದಾಗ ಇದ್ದ ಎರಡು ದಿನಗಳಲ್ಲೇ ತಾನು ಉಳಿದುಕೊಂಡಿದ್ದ ಮನೆಯವರಿಂದ ಬಣ್ಣದ ವಾಯರಿನಿಂದ ಬ್ಯಾಗು ಹೆಣೆಯುವುದನ್ನು ಕಲಿತು ಅಲ್ಲಿ ಹೆಣೆಯಲು ಶುರುಮಾಡಿ ಜತೆಗೆ ತಂದಿದ್ದಳು. ಇಲ್ಲಿ ಬಂದ ಮೇಲೆ ಅದರ ಮೂಲೆ ಹೇಗೆ ಮಾಡುವುದು ತಿಳಿಯದೆ ಎಷ್ಟೋ ದಿನ ಅದು ಕೆದರಿದ ವಾಯರುಗಳ ಸಮೇತ ಹಾಗೇ ಇತ್ತು. ಆಮೇಲೆ ಯಾರದೋ ನೆರವಿನಿಂದ ಎಂದೋ ಅದು ಪೂರ್ಣಗೊಂಡಿತು. ಅವಳೊಮ್ಮೆ ಕಾರವಾರಕ್ಕೆ ಹೋಗಿದ್ದಾಗ ಅಲ್ಲಿ ಒಬ್ಬ ನನ್ನ ವಯಸ್ಸಿನ ಹುಡುಗ ಹೊಸ ಶೈಲಿಯ ಅಂಗಿ ಹಾಕಿಕೊಂಡಿದ್ದನ್ನು ನೋಡಿ, ಒಂದು ಕಾಗದದಲ್ಲಿ ಅದರ ಡಿಸೈನ್ ಬಿಡಿಸಿಕೊಂಡು ಬಂದು ಊರಿನ ಟೇಲರರ ತಲೆಯ ಮೇಲೆ ಕೂತು ಅದೇ ರೀತಿ ನನಗೆ ಹೊಲಿಸಿದರು. ಅದರಲ್ಲಿ ಬಟನ್‌ಗಳು ಎದೆಯ ಮೇಲೆ ಅಡ್ಡವಾಗಿ ಇದ್ದವು. ಅದನ್ನು ಟಿ ಶರ್ಟಿನಂತೆ ತಲೆಯ ಮೇಲಿನಿಂದ ಹಾಕಿಕೊಳ್ಳಬೇಕಾಗಿತ್ತು. ಅದನ್ನು ಹಾಕಿದಾಗೆಲ್ಲ ಕೆಲವರು ‘‘ಇದೆಂತ ಹೊಸ ನಮೂನಿ?’’ – ಎಂಬಂತೆ ಹಗಲು ವೇಷ ನೋಡುವವರಂತೆ ನನ್ನನ್ನು ನೋಡುತ್ತಿದ್ದುದು ನನಗೆ ಆಗುತ್ತಿರಲಿಲ್ಲ. ಹೀಗಾಗಿ ಅದನ್ನು ಹಾಕುವುದನ್ನು ಇಷ್ಟಪಡಲೇ ಇಲ್ಲ.

ಗೌರೀಶರ ಹಣಕಾಸಿನ ಕುರಿತ ನಿರಾಸಕ್ತಿ ಆಗಿನ ಶಾಲೆಯ ಆಡಳಿತ ಮಂಡಳಿಗೆ ಗೊತ್ತಿದ್ದರಿಂದಲೋ ಏನೋ, ಅವರಿಗೆ ವೇತನ, ಭಡ್ತಿ ಮತ್ತು ಕೊನೆಯಲ್ಲಿ ನಿವೃತ್ತಿ ವೇತನದಲ್ಲೂ ತುಂಬಾ ಅನ್ಯಾಯವಾಗಿದೆ ಎಂದು ತಿಳಿದಾಗ ತುಂಬಾ ತಡವಾಗಿತ್ತು. ತಾನು ವ್ಯವಹಾರತಜ್ಞೆ ಎಂದು ತಿಳಿದುಕೊಂಡಿದ್ದರೂ ಸಹ ಆ ಅನ್ಯಾಯ ತನ್ನ ಲಕ್ಷ್ಯಕ್ಕೆ ಬಾರದೇ ಹೋಯಿತಲ್ಲ, “ನಂಬಿ ಕೆಟ್ಟೆವಲ್ಲ” – ಎಂಬ ಅಸಹಾಯಕ ಸಿಟ್ಟು ಮತ್ತು ಪಶ್ಚಾತ್ತಾಪ ಶಾಂತಾಳನ್ನು ಕೊನೆಯತನಕವೂ ಒಳಗಿಂದ ತಿನ್ನುತ್ತಿತ್ತು. ಅದು ಅವಳ ಆರೋಗ್ಯದ ಮೇಲೂ ಪರಿಣಾಮ ಬೀರಿತ್ತು. ರಕ್ತದೊತ್ತಡ ಅವರಿಗೆ ಎಂದಿನಿಂದಲೂ ಇತ್ತು. ನಾನು ಅವಳನ್ನು ‘ಮಮ್ಮಿ’ ಅಂತ ಕರೆಯುತ್ತಿದ್ದರಿಂದ ನಮ್ಮ ಓಣಿಯ ಎಲ್ಲ ಮಕ್ಕಳಿಗೂ, ನನ್ನ ಸಂಗಾಡಿಗಳಿಗೂ, ನಮ್ಮ ನೆಂಟರ ಮಕ್ಕಳಿಗೂ ಅವಳು ಮಮ್ಮಿಯೇ ಆಗಿದ್ದಳು. ತದಡಿಯ ನನ್ನ ಸೋದರಮಾವ ಗೋಪಾಲಕೃಷ್ಣ ವೆಂಟೇಕರ್ ಅವರ ಮಕ್ಕಳಾದ ರಾಜೇಂದ್ರ ರಮಾನಂದ ಇಬ್ಬರೂ ಅವರವರ ಮಾಧ್ಯಮಿಕ ಶಾಲಾ ಶಿಕ್ಷಣವನ್ನು ನಮ್ಮ ಮನೆಯಲ್ಲಿ ಇದ್ದುಕೊಂಡು ಗೋಕರ್ಣ ಶಾಲೆಯಲ್ಲಿ ಮಾಡಿದರು. ಅವರಿಬ್ಬರಿಗೂ ‘ಮಮ್ಮಿ’ಯ ಸ್ವಭಾವ ಚೆನ್ನಾಗಿ ಗೊತ್ತಿತ್ತು! ಇಳಿ ಸಂಜೆಯಲ್ಲಿ ನಮ್ಮ ಹಿತ್ತಿಲಿನ ಮುತ್ತು ಮಲ್ಲಿಗೆ ಹಿಂಡುಗಳಿಂದ ಮೊಗ್ಗುಗಳನ್ನು ತೆಗೆದುಕೊಟ್ಟ ಮೇಲೆಯೇ ನಮಗೆ ಬೇಲೆಗೆ (ಸಮುದ್ರ ತೀರ) ಆಡಲು ಹೋಗಲು ಅನುಮತಿ ಸಿಗುತ್ತಿತ್ತು. ಹೀಗಾಗಿ ಅವಳು ಹೇಳುವ ಮೊದಲೇ ಸ್ಟೀಲ್ ಡಬ್ಬಿ ತುಂಬ ತೆಗೆದು ಇಡುತ್ತಿದ್ದೆವು.

ಯಾವುದೇ ಬಸ್ಸು ಹಿಡಿಯಲು ಸರಿಯಾದ ಸಮಯಕ್ಕೆ ಅಥವಾ ಚೂರು ಮುಂಚಿತವಾಗಿ ಆಕೆ ಹೋಗಿದ್ದೇ ಇಲ್ಲ. ಬಸ್ಸು ಹೊರಡುವ ಟೈಮಿಗೆ ಆಕೆ ಮಹಾರಾಣಿಯಂತೆ ನಿಧಾನಕ್ಕೆ ಮನೆಯಿಂದ ಹೊರಡುತ್ತಿದ್ದಳು. ಮತ್ತು ಮನೆಯಲ್ಲಿದ್ದ ನನ್ನನ್ನೋ ರಾಜೇಂದ್ರನನ್ನೋ ರಮಾನಂದನನ್ನೋ “ಹೋಗು ಬಸ್ ನಿಲ್ಲಿಸು” ಎಂದು ಬಸ್ ಸ್ಟ್ಯಾಂಡಿಗೆ ಅಟ್ಟುತ್ತಿದ್ದಳು. ನಾವ್ಯಾರೂ ಇರದಿದ್ದರೆ ಹಾದಿಯಲ್ಲಿ ಸಿಗುವ ಯಾವುದಾದರೂ ಸೈಕಲ್ ಸವಾರರನ್ನು ಓಡಿಸುತ್ತಿದ್ದಳು. ಸಣ್ಣ ಊರಿನ ಬಸ್‌ಸ್ಟ್ಯಾಂಡ್ ಕಂಟ್ರೋಲರ್ ಎಲ್ಲರಿಗೂ ಪರಿಚಿತರಾಗಿದ್ದರಿಂದ ಒಮ್ಮೊಮ್ಮೆ ನಿಲ್ಲಿಸುತ್ತಿದ್ದರು. ಕೆಲವೊಮ್ಮೆ ಬಸ್ಸು ಹೋಗಿಬಿಟ್ಟಿರುತ್ತಿದ್ದವು. ಆಗ ಎಲ್ಲರೂ ಬೈಸಿಕೊಳ್ಳುತ್ತಿದ್ದೆವು. ಅವಳ ಇನ್ನೊಂದು ಹಟ ಎಂದರೆ ಎರಡೇ ಕಿ.ಮೀ. ನಂತರದ ಸ್ಟಾಪಿನಲ್ಲಿ ಇಳಿಯುವದಿದ್ದರೂ ಸಹ ಬಸ್ಸಿನ ಅತೀ ಮುಂದಿನ ಸೀಟಿನಲ್ಲಿ ಕೂರಲು ಬಯಸುತ್ತಿದ್ದಳು. ಸಭಾಸಮಾರಂಭಗಳಲ್ಲಿ ಮುಂದಿನ ಸೀಟು ವಿಶೇಷ ಎಂಬ ನಂಬಿಕೆಯನ್ನು ಇಲ್ಲೂ ಆಕೆ ಅನ್ವಯಿಸಿದಂತೆ ಇತ್ತು. “ಹತ್ತೇ ನಿಮಿಷದಲ್ಲಿ ಇಳಿಯುವುದುಂಟು. ಹಿಂದೇ ಕೂತುಕೋ” – ಎಂದು ಎಷ್ಟು ಅಂಗಲಾಚಿದರೂ ಕೇಳುತ್ತಿರಲಿಲ್ಲ. ಆಮೇಲೆ ಆ ದಟ್ಟಣೆಯಲ್ಲಿ ಇಳಿಯುವಾಗ ಎಲ್ಲರ ಗೊಣಗಿಗೆ ತುತ್ತಾಗುತ್ತ, ತಾನೂ ಗತ್ತಿನಲ್ಲಿ ಗೊಣಗುತ್ತ ಇಳಿಯುತ್ತಿದ್ದಳು. ನಮಗೆಲ್ಲ ನಗೆ ಬರಿಸುತ್ತಿದ್ದ ಅವಳ ಇನ್ನೊಂದು ವಿಷಯ ಎಂದರೆ, ಮನೆಯಿಂದ ಹೊರ ಹೋಗುವಾಗ ಮುಖಕ್ಕೆ ಬೇಕಾದುದಕ್ಕಿಂತ ಹೆಚ್ಚು ಪೌಡರ್ ಮೆತ್ತಿಕೊಳ್ಳುತ್ತಿದ್ದಳು. “ಪೌಡರ್ ಜಾಸ್ತಿ ಆಗಿದೆ, ಎದ್ದು ಕಾಣ್ತಿದೆ” – ಎಂದು ನಾವು ಹೇಳಿದರೆ, ಕರವಸ್ತ್ರದಿಂದ ಅದನ್ನು ಮೇಲಿಂದ ಮೇಲೆ ಒರೆಸಿಕೊಂಡ ಅಭಿನಯ ಮಾಡುತ್ತಿದ್ದಳು ಹೊರತು ಒಂದು ಚೂರೂ ಒರೆಸಿಕೊಳ್ಳುತ್ತಿರಲಿಲ್ಲ!

ಕೊಂಕಣಿಯಲ್ಲಿ ಪಾಚ್ಚಿ ಎಂದರೆ ಆಂಟಿ ಅಥವಾ ಮಾಮಿ ಎಂದು ಅರ್ಥ. ಕೊಂಕಣಿ ಬಳಗದಲ್ಲಿ ಎಲ್ಲರೂ ಅವಳನ್ನು ಶಾಂತುಪಾಚ್ಚಿ ಎಂದು ಕರೆಯುತ್ತಿದ್ದರು. ಒಮ್ಮೆ ಕಾರವಾರಕ್ಕೆ ಸಂಬಂಧಿಕರ ಮನೆಗೆ ಹೋಗಿದ್ದಾಗ ಹೊರಗೆ ಕೂತಿದ್ದ ಆ ಮನೆಯ ಮಕ್ಕಳು ಆಕೆಯನ್ನು ನೋಡಿದ್ದೇ ‘‘ಶಾಂತು ಪಾಚ್ಚಿ ಇಲೀ, ಶಾಂತು ಪಾಚ್ಚಿ ಇಲೀ’’ – ಎಂದು ಕೂಗುತ್ತ ಒಳಗೆ ಓಡಿದರು. ನಾನು ಕಂಗಾಲಾದೆ. ಹುಲಿಯಂತಿದ್ದ ಶಾಂತಾಬಾಯಿಯನ್ನು ಇಲಿ ಎಂದು ಕರೆದ ಮೇಲೆ ಇನ್ನೇನು ಕಾದಿದೆಯೋ – ಎಂದು. ಅವಳಿಗೂ ಮುಜುಗರವಾದಂತಿತ್ತು, ಆದರೆ ಸಿಟ್ಟು ಬರಲಿಲ್ಲ. ಏಕೆಂದರೆ ಆ ಸಂಬಂಧಿಕರ ಮನೆಯಲ್ಲಿ ಆಡುತ್ತಿದ್ದ ಮಾಲವಣಿ ಕೊಂಕಣಿಯಲ್ಲಿ ‘ಇಲಿ’ – ಎಂದರೆ ‘ಬಂದಳು’ – ಎಂದರ್ಥ ಎಂದು ಅವಳಿಗೆ ಗೊತ್ತಿದ್ದಂತಿತ್ತು. ಮನೆಗೆ ಬರುವ ಪತ್ರಿಕೆಗಳನ್ನೂ ಮ್ಯಾಗಝಿನ್‌ಗಳನ್ನು ವಿಶೇಷಾಂಕಗಳನ್ನು ಶಾಂತಾ ಒಂದಕ್ಷರ ಬಿಡದೆ ಓದುತ್ತಿದ್ದಳು. ಸಾಮಾನ್ಯವಾಗಿ ಗೌರೀಶರ ಲೇಖನ ಇದ್ದ ದೀಪಾವಳಿ ವಿಶೇಷಾಂಕಗಳ ಗೌರವ ಪ್ರತಿಗಳು ಅವರ ಶಾಲೆಯ ವಿಳಾಸಕ್ಕೇ ಅಂಚೆಯಲ್ಲಿ ಬರುತ್ತಿದ್ದವು. ಅಲ್ಲಿ ಸ್ಟಾಫ್ ರೂಮಿನಿಂದ ಇತರ ಮಾಸ್ತರರು ಅವುಗಳನ್ನು ‘ಓದಿ ಕೊಡ್ತೇನೆ’ ಎಂದು ತೆಗೆದುಕೊಂಡು ಹೋಗಿಬಿಡುತ್ತಿದ್ದರು. ಅವು ಮತ್ತೆ ನಮ್ಮ ಮನೆಗೆ ತಲುಪುತ್ತಲೇ ಇರಲಿಲ್ಲ. ಗೌರೀಶರಿಗೆ ಯಾರು ಒಯ್ದಿದ್ದಾರೆ ಎನ್ನುವ ನೆನಪೂ ಇರುತ್ತಿರಲಿಲ್ಲ. ಆಮೇಲೆ ಶಾಂತಾ ಅಂದಾಜಿನ ಮೇಲೆ ಕೆಲವರ ಮನೆಗೆ ‘‘ಸುಮ್ಮನೆ ಅಲ್ಲಿ ಇದೆಯೋ ನೋಡಿಕೊಂಡು ಬಾ’’ – ಎಂದು ಪತ್ತೇದಾರಿಕೆಗೆ ನನ್ನನ್ನು ಬೇರೆ ಕೆಲಸದ ನೆಪದಲ್ಲಿ ಕಳಿಸಿದ್ದೂ ಇದೆ. ಅವಳ ಒಂದು ಖಾಸ್ ಗುಣವೆಂದರೆ ಯಾವುದೇ ಕಥೆ ಓದುವಾಗ ಅವಳು ಮೊದಲು ಕೊನೆಯ ಪುಟವನ್ನು ಓದಿಕೊಂಡು ಆರಂಭಿಸುತ್ತಿದ್ದಳು. ಕೊನೆಯಲ್ಲಿ ಏನಾದೀತು ಎನ್ನುವ ಟೆನ್ಶನ್ ಓದುವಾಗ ಬೇಡ ಎನ್ನುತ್ತಿದ್ದಳು.

ಎಂದೋ ನಿಂತುಹೋಗಿದ್ದ ತನ್ನ ಶಿಕ್ಷಣವನ್ನು ಮುಂದುವರೆಸುವ ಹಂಬಲ ಆಕೆಗೆ ಎಷ್ಟಿತ್ತು ಅಂದರೆ, ನಾನು ಕುಮಟಾ ಬಾಳಿಗಾ ಕಾಲೇಜಿನಲ್ಲಿ ಬಿ.ಎಸ್ಸಿ. ಓದುತ್ತಿದ್ದಾಗ ಅವಳು ಬಾಹ್ಯವಾಗಿ ಓದಿ ಬಿ.ಎ. ಪರೀಕ್ಷೆ ಕೊಡಲು ನನ್ನ ಕಾಲೇಜಿನ ಸೆಂಟರನ್ನೇ ಆಯ್ದುಕೊಂಡು, ಪರೀಕ್ಷೆ ಬರೆಯಲು ಹಾಜರಾಗಿಬಿಟ್ಟಳು. ಮತ್ತು ಕಾಲೇಜಿನ ಹುಡುಗರ ಹಾಸ್ಟೆಲ್ಲಿನ ನನ್ನ ರೂಮಿನಲ್ಲೇ ಠಿಕಾಣಿ ಹೂಡಿದಳು. ಮತ್ತು ನಿಯಮಿತವಾಗಿ ನನಗೆ, ರೂಮ್‌ಮೇಟ್ ಮಹಾಬಲಮೂರ್ತಿಗೆ ಮತ್ತು ಅಕಸ್ಮಾತ್ ಇಣುಕಿದ ಗೆಳೆಯರಿಗೆ, ಬತ್ತಿ ಸ್ಟೋವಿನ ಮೇಲೆ ಬೆಳ್ಳಂಬೆಳಗ್ಗೆ ಚಹಾ, ಬೋರ್ನ್ವಿಟಾ ಇತ್ಯಾದಿ ಮಾಡಿಕೊಡುವುದರಲ್ಲಿ ನಿರತಳಾಗಿಬಿಟ್ಟಳು. ಅವಳಿಗೆ “ಆಲ್ ದಿ ಬೆಸ್ಟ್” ಹೇಳಲು ಬರುವ ಪೋರರ ಸಂಖ್ಯೆ ಹೆಚ್ಚಾಯಿತು. ಏಕೆಂದರೆ ಧನ್ಯವಾದದ ರೂಪದಲ್ಲಿ ಒಂದು ಕಪ್ ಬಿಸಿ ಚಾ ಸಿಗುವ ಚಾನ್ಸ್ ಇತ್ತು. ಮಜಾ ಅಂದರೆ “ಕುರಿತೋದದೆಯಿಂ ಪರಿಣತಮತಿ”ಯಾದ ಅವಳು ಎರಡನೇ ದರ್ಜೆಯಲ್ಲಿ ಉತ್ತೀರ್ಣಳಾಗಿಬಿಟ್ಟಳು. ಅಷ್ಟೇ ಅಲ್ಲ, ಮರುದಿನವೇ Shrimati Shanta Kaikini B.A. ಎಂದು ರಬ್ಬರ್ ಸ್ಟ್ಯಾಂಪ್‌ ಮಾಡಿಸಿಕೊಂಡಳು. ಅಲ್ಲದೆ ಪತ್ರ ಬರೆಯುವಾಗ ಕಳಿಸಿದವರ ವಿಳಾಸ ಬರೆಯುವಾಗಲೂ ಬಿ.ಎ. ಸೇರಿಸಿಯೇ ಹೆಸರು ಬರೆಯುತ್ತಿದ್ದಳು.

ನನಗಿಂತ ಮುಂಚೆ ಎರಡು ಬಾರಿ, ಕೂಸುಗಳು ಹುಟ್ಟುವಾಗಲೇ ಅಸುನೀಗಿದ್ದವಂತೆ. ನಾನೊಬ್ಬ ಹೇಗೋ ಏಳೂವರೆ ತಿಂಗಳಿಗೆ ಹುಟ್ಟಿಯೂ ಬಚಾವಾದೆ. ಇನ್‌ಕ್ಯುಬೇಟರ್ ಬಿಡಿ, ವಿದ್ಯುತ್ತೂ ಇಲ್ಲದ ಕಾಲ ಅದು. ಹಾಲಿನಲ್ಲಿ ಅದ್ದಿದ ಹತ್ತಿಯನ್ನು ತುಟಿಗೆ ಹಿಂಡಿ ಹೇಗೋ ನನ್ನನ್ನು ಸಲಹಿ ಉಳಿಸಿಕೊಂಡರು. ನಂತರ ನಾನು ಎರಡು ವರುಷದವನಿದ್ದಾಗ ಮತ್ತೆ ಒಂದು ಕೂಸು ಹುಟ್ಟುವಾಗಲೇ ಅಸುನೀಗಿತ್ತು. ಆ ದಿನ ನಾನು ತದಡಿಯ ಅಜ್ಜಿ ಮನೆಯಲ್ಲಿದ್ದೆ. ನನಗೆ ಮಮ್ಮಿ ಆಸ್ಪತ್ರೆಯಲ್ಲಿದ್ದಾಳೆ ಎಂದಷ್ಟೆ ಗೊತ್ತಿತ್ತು. ಏನು, ಯಾಕೆ ಎಂದೆಲ್ಲ ಗ್ರಹಿಕೆಗೆ ಬರದ ವಯಸ್ಸು ಅದು. ಸಂಜೆ ಮಮ್ಮಿಯ ಭೇಟಿಗೆ ನನ್ನನ್ನು ಪಪ್ಪ ಡಾ. ಮಾಸೂರ್‌ಕರ ಅವರ ದವಾಖಾನೆಗೆ ಕರೆದುಕೊಂಡು ಹೋದರು. ಮಮ್ಮಿಯನ್ನು ಮೊದಲ ಬಾರಿ ವಿಚಿತ್ರ ಕೆದರಿದ ಗುಂಗುರು ಕೂದಲಲ್ಲಿ ನೋಡಿ ಹೆದರಿದ್ದು ನೆನಪಿದೆ. ಅವಳು ಸನಿಹ ಕರೆದಾಗ ಹೋಗಲು ಅಳುಕಿದೆನಂತೆ. ನಂತರ ಅವಳೇ ಎಳೆದು ಪಕ್ಕ ಕೂರಿಸಿಕೊಂಡಾಗ “ನೀನು ತಲೆ ಏಕೆ ಬಾಚಿಕೊಂಡಿಲ್ಲ?” ಎಂದು ಅವಳನ್ನು ಕೇಳಿದೆನಂತೆ. ಇದಾದ ಎಷ್ಟೋ ವರುಷಗಳ ನಂತರ ಒಮ್ಮೆ ನಮ್ಮ ಓಣಿಯ ಮನೆಯೊಂದರ ಪೋರಿಯನ್ನು ತೋರಿಸಿ – “ನಿನ್ನ ತಂಗಿ ಇದ್ದಿದ್ದರೆ, ಇವಳಷ್ಟು ಇರುತ್ತಿದ್ದಳು” ಎಂದು ಹೇಳಿದಳು. ಹೀಗೆ ಏಳುವರೆ ತಿಂಗಳಿಗೆ ಹುಟ್ಟಿದ ನನ್ನನ್ನು ಕಷ್ಟಪಟ್ಟು ಬೆಳೆಸಿದ ಆ ತಾಯಿ, ನನ್ನ ಧಾರವಾಡ ಶಿಕ್ಷಣದ ನಂತರ, ಈಗಿನಂತೆ ಫೋನು, ಮೊಬೈಲು ಇತ್ಯಾದಿ ಯಾವ ಸಂಪರ್ಕ ಸೌಲಭ್ಯಗಳೂ ಇಲ್ಲದ 1976ರಲ್ಲಿ, ನೌಕರಿಯ ತಲಾಶಿಗೆ ಮುಂಬಯಿಗೆ ಕಳಿಸಿದ್ದು ಒಂದು ಮಹತ್ವದ ನಿರ್ಣಾಯಕ ನಿಲುವು. ಪಪ್ಪ ಮಮ್ಮಿ ಇಬ್ಬರೂ, ಎದೆಯ ಮೇಲೆ ಕಲ್ಲಿಟ್ಟುಕೊಂಡೇ ನನ್ನನ್ನು ಕುಮಟಾಕ್ಕೆ, ನಂತರ ಧಾರವಾಡಕ್ಕೆ, ತದನಂತರ ಮುಂಬಯಿಗೆ – ಹಂತ ಹಂತವಾಗಿ ದೂರ ಕಳಿಸಿಕೊಟ್ಟರು. ನಂತರ ವಾರಕ್ಕೆರಡು ಅಥವಾ ಮೂರು ಸುದೀರ್ಘ ಕಾಗದಗಳನ್ನು ಬರೆಯುತ್ತ ಗೋಕರ್ಣವನ್ನು ನಾನಿದ್ದಲ್ಲಿಗೇ ಕಳಿಸುತ್ತ ಬೆಚ್ಚನೆ ಅಭಯವನ್ನು ನೀಡಿದರು. ಪಪ್ಪನದು ಯಾವತ್ತೂ ಮೋಡಿ ಅಕ್ಷರದ ಇಂಗ್ಲಿಷ್ ಮತ್ತು ಮಮ್ಮಿಯದು ಸುಂದರ ಅಕ್ಷರದ ಸುಂದರ ಕನ್ನಡ. ಇಬ್ಬರದೂ ಸೂಕ್ಷ್ಮ ವಿವರಗಳ ಕಾಗದ. ಅವರಿಬ್ಬರ ಒಕ್ಕಣೆ ಮತ್ತು ಅಕ್ಷರ ನೋಡಿದರೆ ಅವರನ್ನೇ ನೋಡಿದಂಥ ಮನೆಭಾವನೆ ಆವರಿಸುವಷ್ಟು ಅವರು ಪತ್ರರೂಪಿ ಆಗಿಬಿಟ್ಟರು.

ಮುಂಬಯಿಗೆ ಬಂದ ಹೊಸತರಲ್ಲಿ ಕೆಲಸಕ್ಕಾಗಿ ಓಡಾಡುತ್ತಿದ್ದಾಗ ಕೆಲವು ತಿಂಗಳು ನಾನು ಸಂಬಂಧಿಕರ ಮನೆಯಲ್ಲಿದ್ದೆ. ನನಗೊಂದು ಸಣ್ಣ ಕೆಲಸ ಸಿಕ್ಕಿತು. ಆ ನೆಪದಿಂದ ಮಮ್ಮಿ ನನ್ನನ್ನು ನೋಡಲು ಬಂದಿದ್ದಳು. ಆಗ ಆ ಸಂಬಂಧಿಕರು ಸಹಜವಾಗಿಯೆ “ನಿನ್ನ ಮಗನಿಗೆ ಈಗ ಕೆಲಸ ಆಗಿದೆಯಲ್ಲ. ಬೇರೆ ಕಡೆ ವಾಸ್ತವ್ಯ ನೋಡಿಕೊಳ್ಳಿ” – ಎಂದು ನಿರ್ವಿಕಾರವಾಗಿ ಹೇಳಿದ್ದು ಆಳವಾದ ನೋವನ್ನು ಆಘಾತವನ್ನು ಉಂಟು ಮಾಡಿ – ನಿಂತ ಕಾಲಲ್ಲೆ ಶಾಂತಾಬಾಯಿ ಚಿತ್ತಾಲ, ಹಾವನೂರು, ಅರವಿಂದ ಇವರೆಲ್ಲರನ್ನು ಕಂಡು ವಿನಂತಿಸಿ ಒಂದು ಎಡೆಗಾಗಿ ಹುಡುಕಾಡಿದರು. ಹಾವನೂರರ ಕೃಪೆಯಿಂದ ನನಗೊಂದು ಕಡೆ ಎಡೆ ಸಿಕ್ಕಿತು. ಊರಿಗೆ ಹೋದದ್ದೇ ಆ ಬಾಡಿಗೆ ಹಣವನ್ನು ತಾನೇ ಕಳಿಸುತ್ತಿದ್ದಳು. ಇನ್ನೊಮ್ಮೆ ಅವಳು ಬಂದಾಗ ನಾನು ಡೊಂಬಿವಲಿಯಲ್ಲಿ ಸಣ್ಣ ಬಾಡಿಗೆ ಫ್ಲಾಟು ಒಂದಿಬ್ಬರ ಜೊತೆ ಹಂಚಿಕೊಂಡು ಇದ್ದೆ. ಆಗ ಆಕೆಗೆ ನೆರೆಮನೆಯ ಗುಜರಾತಿ ಹೆಂಗಸೊಬ್ಬಳ ಪರಿಚಯವಾಗಿ, ಮುಂಬಯಿಯಿಂದ ಸೀರೆಗಳನ್ನು ಹೋಲ್ ಸೇಲ್ ರೇಟಿಗೆ ಒಯ್ದು ಊರಲ್ಲಿ ಕಂತಿನಲ್ಲಿ ಮಾರಿ ಹಣವನ್ನು (ಕನಿಷ್ಠ ಮುಂಬಯಿಗೆ ಬಂದು ಹೋಗುವ) ಗಳಿಸುವ ಸಣ್ಣ ಬಿಸಿನೆಸ್ ಐಡಿಯಾ ಬಂತು. ಕಂತಿನಲ್ಲಿ ಕೊಂಡವರು ಕೊನೆಯ ಕಂತು ಬಾಕಿ ಇದ್ದಾಗ ಜೀವ ತಿನ್ನುವುದು ಅನುಭವಕ್ಕೆ ಬಂದ ಮೇಲೆ ಅದು ನಿಂತುಹೋಯಿತು. ‘ಪ್ರಜಾವಾಣಿ’, ‘ಉದಯವಾಣಿ’ – ಪತ್ರಿಕೆಗಳ ದೀಪಾವಳಿ ಕಥಾ ಸ್ಪರ್ಧೆಯ ಜಾಹೀರಾತು ಬಂದ ತಕ್ಷಣ ಅದನ್ನು ಕತ್ತರಿಸಿ ನನಗೆ ಕಳಿಸುತ್ತಿದ್ದಳು. ಮತ್ತು ಅದರ ಕೊನೆಯ ದಿನಾಂಕ ಬರುವತನಕವೂ ಕಾಗದದಲ್ಲಿ ನೆನಪಿಸುತ್ತ ಇರುತ್ತಿದ್ದಳು.

ಪ್ರತಿ ಬಾರಿ ರಜೆಗೆ ನಾನು ಊರಿಗೆ ಬಂದಾಗ ಮನೆಯಲ್ಲಿ ಒಂದಲ್ಲ ಒಂದು ಸಣ್ಣ ಬದಲಾವಣೆ ಆಗಿರುತ್ತಿತ್ತು. ಊರ ಹೆಂಚಿನ ಬದಲಿಗೆ ಮಂಗಳೂರು ಹೆಂಚು, ಅಥವಾ ಮುಂಭಾಗದಲ್ಲಿ ಸಿಮೆಂಟಿನ ತಾರಸಿ. ಒಂದೇ ಫ್ಯಾನ್ ಇದ್ದ ಮನೆಯ ಇತರ ಎರಡು ಕೋಣೆಗಳಿಗೂ ಫ್ಯಾನ್ ಬಂದಿರುತ್ತಿತ್ತು. ಇದೆಲ್ಲ ಶಾಂತಾಬಾಯಿಯ ಕರ್ತೃತ್ವ ಮತ್ತು ಅವಿಶ್ರಾಂತ ಛಲದ ಫಲ. ಮುಂಚಿನಿಂದಲೂ ನಮಗೆ ಸಿನೆಮಾ ಅಂದರೆ ಜೀವ. ಗೋಕರ್ಣದ ಟಾಕೀಸಿನಲ್ಲಿ ಬರುವ ಪ್ರತಿ ಚಿತ್ರದ ಸೆಕೆಂಡ್ ಡೇ ಸೆಕೆಂಡ್ ಶೋ ನಾವು ನೋಡಲೇಬೇಕು. ಶಿರಸಿ, ಕುಮಟಾ, ಅಂಕೋಲಾ, ಹುಬ್ಬಳ್ಳಿ, ಬೆಳಗಾವಿ ಹೀಗೆ ಯಾವುದೇ ದೊಡ್ಡ ಊರಿಗೆ ನೆಂಟರ ಮನೆಗೆ ಹೋದರೆ ಅಲ್ಲಿನ ಪ್ರಮುಖ ಆಕರ್ಷಣೆ ಸಿನೆಮಾಗಳು. ಕೇವಲ ಒಂದೇ ದಿನ ಉಳಿದಿದ್ದರೂ, ಒಂದು ಶೋ ನೋಡಲೇಬೇಕು. ಒಮ್ಮೆ ಬೆಳಗಾವಿಯಲ್ಲಿ ಕೃಷ್ಣಾ ಟಾಕೀಸಿನಲ್ಲಿ “ಬೇಟಿ ಬೇಟೆ” ನೋಡುವಾಗ ಶಾಂತಾಬಾಯಿ ಕನ್ನಡಕ ತೆಗೆದು ಕರ್ಚೀಫಿನಿನಲ್ಲಿ ಕಣ್ಣೊರೆಸುತ್ತ ಅಳುವುದನ್ನು ನಾನು ತೆರೆಯ ಪ್ರಭೆಯಲ್ಲೇ ಆತಂಕಿತವಾಗಿ ಕದ್ದು ನೋಡಿದೆ. “ನನ್ನನ್ನು ಯಾಕೆ ನೋಡ್ತಿ? ಸಿನಿಮಾ ನೋಡು” – ಎಂದು ಬಿಕ್ಕುತ್ತ ಹೇಳಿದಳು. ಅವಳ ಖಾಸಗಿ ಕ್ಷಣದಲ್ಲಿ ನಾನು ಇಣುಕಿದ್ದು ಅವಳಿಗೆ ಮುಜುಗರವಾಗಿತ್ತು. ಅದೇ ಬೆಳಗಾವಿಯಲ್ಲೇ ನಮ್ಮ ಸಂಬಂಧಿ ಉಮೇಶ್ ಪಾಂಗಮ್ ಪೋಲೀಸ್ ಅಧಿಕಾರಿ ಆಗಿದ್ದಾಗಂತೂ, ಅವರ ಕೃಪೆಯಿಂದ ಟಿಕೆಟ್ ಕಾದಿರಿಸಲ್ಪಟ್ಟು ದಿನಕ್ಕೆ ಎರಡರಂತೆ ಸಿನಿಮಾ ನೋಡಿದ್ದೂ ಇದೆ. ಆಗ ಒಮ್ಮೆ ರಾತ್ರಿಯ ಕೊನೆಯ ಶೋದಲ್ಲಿ ಅವಳು ದಣಿದು ನಿದ್ದೆ ಹೋಗಿಬಿಟ್ಟಿದ್ದಳು. “ನಿದ್ದೆ ಯಾಕೆ ಮಾಡ್ತೀ” – ಎಂದು ನಾನು ಅವಳನ್ನು ಅಲುಗಿಸಿ ಎಬ್ಬಿಸಿದಾಗ ಬೆಚ್ಚಿ ಬಿದ್ದು “ನೀನಾದರೂ ಸರೀ ನೋಡು. ಇಲ್ಲವಾದರೆ ವೇಸ್ಟ್ ಆಗುತ್ತದೆ” – ಎಂದು ಹತಾಶಳಾಗಿ ಹೇಳಿ ಮತ್ತೆ ನಿದ್ದೆ ಹೋದಳು.

ಗಿರೀಶ ಕಾಸರವಳ್ಳಿ ಅವರ ‘ಮೂರು ದಾರಿಗಳು’ ಚಿತ್ರೀಕರಣ ಹಿರೇಗುತ್ತಿ ಗೋಕರ್ಣ ಸುತ್ತಮುತ್ತ ಆಗಿತ್ತು. ಅದರ ಕಲಾ ನಿರ್ದೇಶನ ಮತ್ತು ಸಂಭಾಷಣಾ ನಿರ್ವಹಣೆ ನನ್ನದಿತ್ತು. ಅದಕ್ಕಾಗಿ ರಜೆ ಹಾಕಿ ಮುಂಬಯಿಯಿಂದ ಬಂದಿದ್ದೆ. ಆಗ ಛಾಯಾಗ್ರಾಹಕ ಎಸ್.ಆರ್. ಭಟ್ ಮತ್ತು ತಂಡದ ಯಾರಾದರೂ ಒಬ್ಬಿಬ್ಬರು ನಮ್ಮ ಮನೆಯಲ್ಲಿ ಇದ್ದೇ ಇರುತ್ತಿದ್ದರು. ಅವರೆಲ್ಲರನ್ನು ಎಂದಿನ ಉಮೇದಿನಿಂದ ನೋಡಿಕೊಂಡ ಶಾಂತಕ್ಕನಿಗೆ ಚಿತ್ರದಲ್ಲಿ ಹಪ್ಪಳ ಲಟ್ಟಿಸುವ ಒಂದು ದೃಶ್ಯದಲ್ಲಿ ಪಾಲ್ಗೊಳ್ಳಲು ಗಿರೀಶ್ ಹೇಳಿದರು. ನಮ್ಮ ಕೇರಿಯ ಮತ್ತು ನಾಗಬೀದಿಯ ಶಾಂತಕ್ಕನ ಸ್ನೇಹಿತೆಯರು, ಹಳೆ ವಿದ್ಯಾರ್ಥಿನಿಯರೆಲ್ಲರೂ ಅದರಲ್ಲಿ ಪಾಲ್ಗೊಂಡಿದ್ದರು. ಹಪ್ಪಳ ಲಟ್ಟಿಸುತ್ತಲೇ ಒಂದಿಷ್ಟು ಹರಟೆ ಅದರಲ್ಲಿತ್ತು. “ಏನು ಶಾಂತಕ್ಕಾ, ನಿಮ್ಮ ಮಗನ ಮದುವೆಯಂತೆ!” – ಎಂಬ ಡೈಲಾಗನ್ನು ಒಬ್ಬರ ಬಾಯಿಂದ ಹೇಳಿಸಿ ಗಿರೀಶರು ಯುನಿಟ್‌ನಲ್ಲಿ ನನ್ನನ್ನು ನಗೆಪಾಟಲಿಗೆ ನೂಕಿದ್ದರು. ಆ ಚಿತ್ರ ಗೋಕರ್ಣಕ್ಕೆ ಬರದೇ ಹೋದ ಕೊರಗು ಆ ಎಲ್ಲ ಮಹಿಳೆಯರಿಗೆ ಯಾವಾಗಲೂ ಇದೆ.

2002ರಲ್ಲಿ ಗೌರೀಶರ ನಿರ್ಗಮನದ ನಂತರವೂ ಹಟ ಹಿಡಿದು ಗೋಕರ್ಣದಲ್ಲೇ ಇದ್ದ ಮಾಮಾ ಶಾಂತಾ, ಮನೆಗೆ ಬರುವ ಪತ್ರಿಕೆಗಳನ್ನು ಓದಿ ಆದ ಮೇಲೆ ಅದರಲ್ಲಿ ಬರುವ ಸಣ್ಣಪುಟ್ಟ ಚಿತ್ರ ಫೋಟೋ ರಂಗೋಲಿ ಚಿತ್ತಾರ ಚಿನ್ಹೆ ಇತ್ಯಾದಿ ಕತ್ತರಿಸಿ ಇಟ್ಟುಕೊಳ್ಳುತ್ತಿದ್ದರು, ಮತ್ತು ಸಂಗ್ರಹಿಸಿ ಇಟ್ಟುಗೊಂಡ ಹಳೆಯ ದಪ್ಪ ಕಾಗದದ ಕರೆಯೋಲೆಗಳ ಮೇಲೆ ಬಿಳಿ ಕಾಗದ ಅಂಟಿಸಿ, ಅದರ ಮೇಲೆ ಈ ಚಿತ್ರಗಳನ್ನು ಅವರದೇ ರೀತಿಯಲ್ಲಿ ಕೊಲಾಜ್ ಕಲೆಯಂತೆ ಅಂಟಿಸಿ ಶುಭಾಶಯದ ಕಾರ್ಡು ಮಾಡಿಟ್ಟುಕೊಳ್ಳುತ್ತಿದ್ದರು. ಆಪ್ತರ ಹುಟ್ಟು ಹಬ್ಬಗಳಿಗೆ, ಸಮಾರಂಭಗಳಿಗೆ ಅದರ ಮೇಲೆ ಶುಭಾಶಯ ಮತ್ತು ಹೆಸರು ಬರೆದು ಕಳಿಸುತ್ತಿದ್ದರು. ನಮಗೆ ಪತ್ರ ಬರೆದಾಗೆಲ್ಲ ಅದರ ಜೊತೆ ಇಂಥ ಒಂದು ಕಾರ್ಡು ಇಟ್ಟಿರುತ್ತಿದ್ದರು. ನಮ್ಮ ಮಕ್ಕಳಿಗೆ ಅಂಥ ಕಾರ್ಡಿನ ಮೇಲೆ ಪತ್ರ ಬರೆಯುತ್ತಿದ್ದರು.

2011-2012 ಗೌರೀಶರ ಜನ್ಮ ಶತಮಾನೋತ್ಸವವನ್ನು ಗೋಕರ್ಣದ ನಮ್ಮ ಮನೆ ‘ಪರ್ಣಕುಟಿ’ಯ ತಾರಸಿಯ ಮೇಲೆ, ತಿಂಗಳಿಗೊಂದು ಅತಿಥಿಗಳ ಭಾಷಣದ ಮೂಲಕ ನಾವು ಗೋಕರ್ಣ, ಕುಮಟಾ, ಹೊನ್ನಾವರ, ಅಂಕೋಲಾ, ಸಿರ್ಸಿ ಸೀಮೆಯ ಗೆಳೆಯರೆಲ್ಲ ಸೇರಿ ಆಚರಿಸಿದೆವು. ಆಗ ಮೇಲೆ ಬರಲಾಗದಿದ್ದರೂ ಶಾಂತಾಬಾಯಿ ಕೆಳಗೆ ಕೂತೇ ಬಾಯ್ತುಂಬ ನಕ್ಕು ಎಲ್ಲರನ್ನು ಸ್ವಾಗತಿಸಿದರು. ಅವರ ಮತ್ತು ಗೌರೀಶರ ರಿಜಿಸ್ಟರ್ಡ್ ವಿವಾಹ 1953ರಲ್ಲಿ ಕಾರವಾರದಲ್ಲಿ ಆಗಿತ್ತು. ಚಿತ್ತಾಲ ಬಂಧುಗಳಲ್ಲಿ ಹಿರಿಯ ದಾಮೋದರ ಚಿತ್ತಾಲ, ಎಸ್.ಕೆ. ಪೈ, ಎಸ್.ವಿ. ಪಿಕಳೆ ಇಂಥ ಕೆಲ ಗೆಳೆಯರ ಸಮ್ಮುಖದಲ್ಲಿ ರಿಜಿಸ್ಟ್ರೇಶನ್ ಆದ ಮೇಲೆ ಎಲ್ಲರೂ ಕಾರವಾರದ ಬಸ್‌ಸ್ಟ್ಯಾಂಡ್ ಕ್ಯಾಂಟೀನಿನಲ್ಲಿ ರೈಸ್ ಪ್ಲೇಟ್ ಊಟ ಮಾಡಿ ಸಂಭ್ರಮಿಸಿ ಊರಿಗೆ ಮರಳಿದ್ದರಂತೆ.

ಈಡೇರದೇ ಹೋದ ಅವಳ ಒಂದು ಹಂಬಲ ಏನು ಅಂತ ನನಗೆ ಗೊತ್ತು. ಅವಳಿಗೆ ‘ಸ್ಲೀವ್‌ಲೆಸ್’ ಬ್ಲೌಸ್ ಹಾಕಿಕೊಳ್ಳಬೇಕು ಎನ್ನುವ ಆಸೆ ಇತ್ತು. ಆದರೆ ಯಾಕೋ ಅದನ್ನು ಹೊಲಿಸಿ ಹಾಕಿಕೊಳ್ಳುವುದು ಅವಳಿಂದ ಆಗದೇ ಹೋಯಿತು. ಆದರೆ ಮನೆಯಲ್ಲಿ ಇದ್ದಾಗ ಒಮ್ಮೊಮ್ಮೆ ಆಕೆ ಹಳೆಯ ಬ್ಲೌಸಿನ ಸ್ಲೀವ್ ಕತ್ತರಿಸಿಕೊಂಡು, ಒಂದಿಷ್ಟು ಹೊತ್ತು ಹಾಕಿ ಮನೆಯಲ್ಲೇ ಓಡಾಡಿ ಮತ್ತೆ ಸರಕ್ಕನೆ ತೆಗೆದು ಕಪಾಟಿನಲ್ಲಿ ಇಟ್ಟುಬಿಡುತ್ತಿದ್ದಳು. ಕೊನೆ ಕೊನೆಯ ದಿನಗಳಲ್ಲಿ ಅವಳು ನೈಟಿ ಹಾಕಿಕೊಳ್ಳುತ್ತಿದ್ದಳು. “ಸ್ಲೀವ್‌ಲೆಸ್ ನೈಟಿ ಬೇಕೋ?” – ಎಂದು ನಾನು ಕೇಳಿದರೆ ತುಂಬ ಸುಂದರವಾಗಿ ನಗುತ್ತಿದ್ದಳು.

(ಕೃತಿ: ತಾರಿ ದಂಡೆ, ಲೇಖಕರು: ಜಯಂತ ಕಾಯ್ಕಿಣಿ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 250/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

4 Comments

  1. Phalgun Gouda

    ತುಂಬಾ ಆಪ್ತವಾಗಿ ಬಂದಿದೆ.. ಜಯಂತ ಕಾಯ್ಕಿಣಿಯವರು ತಮ್ಮ ತಾಯಿಯ ಬಗ್ಗೆ ಇಷ್ಟು ವಿವರವಾಗಿ ಎಲ್ಲೂ ಹಂಚಿಕೊಂಡಿರಲಿಲ್ಲ..ಓದಿ ತುಂಬಾ ಇಷ್ಟವಾಯಿತು,
    ಲಂಕೇಶರ ‘ಅವ್ವ’ ಕವಿತೆಯನ್ನು ನೆನಪಿಸಿತು.

    @ ಫಾಲ್ಗುಣ ಗೌಡ ಅಚವೆ

    Reply
  2. Rashmi Hegde

    ತುಂಬಾ ಖುಷಿಯಾಯಿತು ಓದಿ. ಅರವತ್ತರ ಕಾಲದ, ಚoದದ,ಕ್ಲಾಸಿಕಲ್ ಉತ್ತರ ಕನ್ನಡದ ಚಿತ್ರಣ ..!
    ವ್ಯಕ್ತಿ ಚಿತ್ರಣವೂ ಅಪ್ರತಿಮವಾಗಿ ಬಂದು ಕವಿ ಮನೆ, ಮಮ್ಮಿ ನಮ್ಮ ಮನದಲ್ಲಿ ಸದಾ ಇರುವಂತೆ ಮಾಡಿದೆ 🙏🏻🙏🏻
    🍀🍀
    ರಶ್ಮಿ ಕಬ್ಬಗಾರು

    Reply
  3. Jyothi Shrinivas Kadkol

    ಸರ್. ತುಂಬಾ ಸುಂದರವಾದ ವ್ಯಕ್ತಿ ಚಿತ್ರಣ. ತಾಯಿಯ ಪ್ರತಿ ಗುಣ – ಸ್ವಭಾವಗಳ ಕುರಿತು ಮನಸ್ಸಿನ ತೆರೆಯಲ್ಲಿ ನಿಲ್ಲುವಂತೆ ಬರೆವ ಶೈಲಿ ಸುಂದರವೆನಿಸಿತು. ಸಹಜ, ಸರಳ, ನೈಜ ಬರವಣಿಗೆ ಓದಿಸಿಕೊಂಡು ಹೋಗಿ ಯಾವಾಗ ಲೇಖನ ಮುಗಿಯಿತೋ ಗೊತ್ತಾಗಲಿಲ್ಲ. ಇನ್ನೂ ಸ್ವಲ್ಪ ಬರೆಯಬಾರದಾಗಿತ್ತೆ ಎನಿಸಿತು ಕೂಡ. ಧನ್ಯವಾದಗಳು ಸರ್

    Reply
  4. ಸುರೇಖಾ ಹೆಗಡೆ

    ನಮಸ್ಕಾರ ಜಯಂತ್ ಕಾಯ್ಕಿಣಿ ಸರ್,
    ನಮ್ಮ ಉತ್ತರ ಕನ್ನಡ ಜಿಲ್ಲೆ, ಗೋಕರ್ಣ, ಕುಮಟಾ ಹೀಗೆ ನಮ್ಮ ಹಳೆಯ ನೆನಪುಗಳಿಗೆ ಒಂದಷ್ಟು ಹೊತ್ತು ತೆರೆದುಕೊಂಡಂತೆ ಆಯ್ತು…ಅದರಲ್ಲೂ ಆ ಭಾಷೆಯ ಸೊಗಡೆ ಚಂದಾ.. ನಾವು ಕಳೆದ ಅಲ್ಲಿಯ ಹಳೆಯ ನೆನಪುಗಳು ಮರುಕಳಿಸುವಂತಾಯ್ತು..
    ಶಾಂತಾ ಅಮ್ಮನ ಲವಲವಿಕೆ, ಧೈರ್ಯ, ವ್ಯವಹಾರ ಚತುರತೆ ಕಂಡು ಒಂದು ಚಿತ್ರಣವೂ ಕಣ್ಣು ಮುಂದೆ ಹಾದುಹೋದಂತಾಯ್ತು

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ