ಮರೀನ್ ಡ್ರೈವಿನ ಸಂಜೆಯಲ್ಲಿ
ನೈಟ್ ಲೈಫಿನ ಮಂಪರಿನಲ್ಲಿ
ಸೀಲಿಂಕಿನ ವೈಭವದಲ್ಲಿ
ಚೌಪಾಟಿಯ ವಾಸನೆಯಲ್ಲಿ
ಮುಂಬಯಿಯ ಜೀವ ಇರುವುದೆಲ್ಲಿ?
ಧಾರಾವಿಯ ಇಕ್ಕಟ್ಟಿನಲ್ಲಿ
ದಾದರಿನ ಬಿಕ್ಕಟ್ಟಿನಲ್ಲಿ
ಫಿಲ್ಮ್ ಸಿಟಿಯ ಕಣ್ಕಟ್ಟಿನಲ್ಲಿ
ಕೊಲಾಬಾದ ಮಾರ್ಕೆಟ್ಟಿನಲ್ಲಿ
ಲೋಕಲ್‌ನಲ್ಲಿ ಸಿಗದ ಸೀಟಿನಲ್ಲಿ
ಕಟಿಂಗ್ ಚಾಯ್ ಜೊತೆಗಿನ ವಡಾಪಾವಿನಲ್ಲಿ
ಬಾಡಿಗೆ ಕೊಟ್ಟು ಬರಿದಾದ ಜೇಬಿನಲ್ಲಿ
ದಣಿದ ಕೈಗಳ ಒದ್ದೆ ಛತ್ರಿಯಲ್ಲಿ
ಅಂತ್ಯವಿಲ್ಲದ ಉಪನಗರಗಳಲ್ಲಿ
ಪರವೂರಿನ ಹೊರದಾರಿಗಳಲ್ಲಿ
ಡಬ್ಬಾವಾಲರ ಭಜನೆಯಲ್ಲಿ
ಕೊನೆ ರೈಲಿನ ಸೈರನ್ನಿನಲ್ಲಿ
ಮುಂಬಯಿಯ ಜೀವ ಇರುವುದೆಲ್ಲಿ?
ಜೀವವಿಲ್ಲದೂರಿಗೆ
ಜೀವನ ಅರಸಿ ಬಂದವರು,
ಚೈತ್ಯಭೂಮಿಯಿಂದ
ಛತ್ರಪತಿವರೆಗೆ
ನಿತ್ರಾಣಗೊಂಡ ಜನರು.
ಬಾಂಬೆ ಬದುಕೆಂಬ
ರಣಭೀಕರ ಮಳೆಗೆ,
ನಾಳೆ ನಮ್ಮದೆನ್ನುವ
ಕನಸೇ ಛತ್ರಿ.
ಉತ್ತರವಿಲ್ಲದ ಪ್ರಶ್ನೆ
ಮರೆತು ನಿದ್ರೆ
ಬಂದರೆ ಸಾಕು,
ಈ ರಾತ್ರಿ!
ಎಚ್. ವಿ. ಶ್ರೀನಿಧಿ ದಾವಣಗೆರೆಯವರು
ಕಾರ್ಯನಿಮಿತ್ತ ಸದ್ಯದ ವಾಸ್ತವ್ಯ ಬೆಂಗಳೂರು.
ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯ ಆಸಕ್ತಿಯ ವಿಷಯಗಳು.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಮುಂಬೈ ಜೀವನವನ್ನು ಕವಿತೆಯಲ್ಲಿ ಚೆನ್ನಾಗಿ ತಿಳಿಸಿದ್ದೀರಿ. 🙏🙏
ಧನ್ಯವಾದಗಳು