Advertisement
ಭರವಸೆಯ ಬುತ್ತಿ, ಶಾಂತಿದೂತೆ – ಜೇನ್ ಗುಡಾಲ್: ಕ್ಷಮಾ ವಿ.ಭಾನುಪ್ರಕಾಶ್ ಬರಹ

ಭರವಸೆಯ ಬುತ್ತಿ, ಶಾಂತಿದೂತೆ – ಜೇನ್ ಗುಡಾಲ್: ಕ್ಷಮಾ ವಿ.ಭಾನುಪ್ರಕಾಶ್ ಬರಹ

ಚಿಂಪಾಂಝಿಗಳ ಬಗ್ಗೆ ಬರೋಬ್ಬರಿ ೬೫ ವರ್ಷಗಳ ಅಧ್ಯಯನದಿಂದ ಜೇನ್ ಗುಡಾಲ್ ಅವರು ವಿಜ್ಞಾನಕ್ಕೆ ನೀಡಿದ ಕೊಡುಗೆ ನಿಜಕ್ಕೂ ಅಪಾರ. ಸಂಶೋಧನೆಗಳಿಗಾಗಿ ಸೆರೆಯಲ್ಲಿರುವ ಪ್ರಾಣಿಗಳ ಆರೈಕೆಯ ಬಗ್ಗೆ, ವನ್ಯಜೀವಿಗಳ ಅಕ್ರಮ ಸಾಗಾಣಿಕೆ ಹಾಗೂ ಮಾರಾಟದ ವಿರುದ್ಧ ತಮ್ಮ ಸಂಸ್ಥೆಯ ಮೂಲಕ ಜೇನ್ ವಿಶ್ವಮಟ್ಟದಲ್ಲಿ ಪ್ರಭಾವಿ ಹೆಸರಾಗಿದ್ದು, ಪರಿಣಾಮಕಾರಿ ಕೆಲಸಗಳನ್ನು ಮಾಡಿದ್ದಾರೆ. ಜೇನ್ ಗುಡಾಲ್ ಇನ್ಸ್ಟಿಟ್ಯೂಟ್ ನ ‘ರೂಟ್ಸ್ ಆಂಡ್ ಶೂಟ್ಸ್’ ಎಂಬ ಶಾಖೆಯು ಯುವಪೀಳಿಗೆಯನ್ನು ಪರಿಸರ ರಕ್ಷಣೆಯ ನಿಜವಾದ ಸವಾಲುಗಳಿಗೆ ಸಿದ್ಧ ಪಡಿಸುವೆಡೆಗೆ, ಪರಿಸರದ ಬಗ್ಗೆ ಜವಾಬ್ದಾರಿಯಿಂದ ನಡೆದುಕೊಳ್ಳುವ ಕಡೆಗೆ ಅನೇಕ ಯೋಜನೆಗಳ ಮುಖಾಂತರ ಮಾರ್ಗದರ್ಶನ ನೀಡುತ್ತಿದೆ.
ಇತ್ತೀಚ್ಚೆಗೆ ತೀರಿಕೊಂಡ ವಿಜ್ಞಾನಿ ಜೇನ್‌ ಗುಡಾಲ್‌ ಕುರಿತು ಕ್ಷಮಾ ವಿ. ಭಾನುಪ್ರಕಾಶ್‌ ಬರಹ ನಿಮ್ಮ ಓದಿಗೆ

ಹೊಟ್ಟೆಪಾಡಿಗಾಗಿ ವೃತ್ತಿ ಎಂಬಂತಹ ಪರಿಸ್ಥಿತಿ ತುಸು ಕಷ್ಟವೇ; ಸ್ವಲ್ಪ ಮನಸು ಮಾಡಿದರೆ ವೃತ್ತಿಯನ್ನೂ-ಪ್ರವೃತ್ತಿಯನ್ನೂ ಒಂದಾಗಿಸಬಹುದು; ಆಗ, ಬದುಕಿಗೊಂದು ಅರ್ಥ, ಬಿಡುವಿಗೊಂದು ಬೆಲೆ ಮತ್ತು ಬವಣೆಗೊಂದು ಗುಡ್ ಬೈ ಸಾಧ್ಯ. ಹೀಗೆ, ತನ್ನ ಆಸಕ್ತಿಯನ್ನು, ಪ್ರವೃತ್ತಿಯನ್ನು ವೃತ್ತಿಯಾಗಿಸಿಕೊಂಡವರಲ್ಲಿ ಒಬ್ಬರು ಜೇನ್ ಗುಡಾಲ್; ೧೯೩೪ರ ಏಪ್ರಿಲ್ ೩ರಂದು ಜನಿಸಿದ ಈ ಬ್ರಿಟಿಷ್ ಮಾನವಶಾಸ್ತ್ರಜ್ಞೆ, ಬೆಳೆಯುವ ಸಿರಿ ಎಂಬುದನ್ನು ಮೊಳಕೆಯಲ್ಲೇ ತೋರ್ಪಡಿಸಿದ ಜಾಣೆ. ಚಿಕ್ಕಂದಿನಿಂದಲೂ ಪ್ರಾಣಿಪ್ರಿಯರಾಗಿದ್ದ ಜೇನ್, ಪ್ರಾಣಿಜಗತ್ತಿನ ಮುಖಗಳನ್ನು ಅರಿಯುತ್ತಾ, ದಾಖಲಿಸುತ್ತಾ, ಜಗತ್ತಿನ ಗಮನವನ್ನು ಚಿಂಪಾಂಝಿಗಳ ಕಡೆಗೆ ಸೆಳೆದವರಲ್ಲಿ ಪ್ರಮುಖರು. ೧೦ ವರ್ಷದ ಹುಡುಗಿಯಾಗಿದ್ದಾಗ, ತನ್ನ ಪರಿಚಿತರ ಬಳಿ, ತಾನು ದೊಡ್ಡವಳಾದ ಮೇಲೆ ಕಾಡಿನಲ್ಲಿ ಪ್ರಾಣಿಗಳ ಜೊತೆಗೆ ಕಾಲ ಕಳೆದು, ಅವುಗಳ ಬಗ್ಗೆ ತಿಳಿದುಕೊಳ್ಳುವ, ಅವುಗಳ ಬಗ್ಗೆ ಪುಸ್ತಕ ಬರೆಯುವ ಹಂಬಲವನ್ನು ವ್ಯಕ್ತಪಡಿಸಿದಾಗ, ನಕ್ಕವರೇ ಬಹಳ; ‘ಅದೆಲ್ಲ ಹುಡುಗಿಯರಿಗಲ್ಲ’ ಎಂದವರೇ ಹೆಚ್ಚು; ಜೇನ್ ಅವರ ತಾಯಿ ಮಾತ್ರ, ‘ನಿಜವಾಗಲೂ ಅದು ನಿನ್ನ ಕನಸಾಗಿದ್ದರೆ, ಅದನ್ನು ನನಸು ಮಾಡಿಕೊಳ್ಳೋಕೆ ನೀನು ಬಹಳ ಪರಿಶ್ರಮ ಹಾಕಬೇಕು; ಆದರೆ, ಯಾವುದೇ ಕಾರಣಕ್ಕೂ ನಿನ್ನ ಕನಸನ್ನು ಸಾಕಾರಗೊಳಿಸಿಕೊಳ್ಳದೇ ಬಿಟ್ಟುಕೊಡಬೇಡ’ ಎಂದು ಬೆನ್ನೆಲುಬಾಗಿ ನಿಂತರು. ತನ್ನ ಕನಸಿನ ಮೇಲೆ ಅಪರಿಮಿತ ನಂಬಿಕೆ, ಜೊತೆಗೆ ಹಿಡಿದ ಕೆಲಸ ಮುಗಿಯುವವರೆಗೂ ಬಿಡದ ಛಲ, ದೊಡ್ಡ ಮಟ್ಟದ ಧೈರ್ಯ, ಕಲಿಯುವ ಕುತೂಹಲ, ಪ್ರಾಣಿಗಳ ಬಗ್ಗೆ ಪ್ರೀತಿ ಮತ್ತು ಪರಿಸರದ ಅಸಮತೋಲನವನ್ನು ಸರಿಮಾಡಲೇಬೇಕೆಂಬ ಜವಾಬ್ದಾರಿಯುತ ಗುರಿ – ಇವೆಲ್ಲವೂ ಜೇನ್ ಗುಡಾಲ್ ಅವರನ್ನು ಕೋಟ್ಯಂತರ ಜನರಿಗೆ ಸ್ಪೂರ್ತಿಯನ್ನಾಗಿಸಿದೆ. ತಮ್ಮ ಕನಸಿನಂತೆ, ಅವರು ಈ ಪ್ರಾಣಿಪ್ರಪಂಚದ ಬಗ್ಗೆ ೩೨ ಪುಸ್ತಕಗಳನ್ನು ಬರೆದಿದ್ದು, ಪ್ರಾಣಿಗಳ ವರ್ತನೆಯನ್ನು ಕಲಿಯಲು ಆಸಕ್ತಿ ಇರುವವರಿಗೆ ಮತ್ತು ಜಾಗತಿಕ ತಾಪಮಾನದ ಕಾಲದಲ್ಲಿ ಬದುಕು ನಡೆಸುವ ಪೀಳಿಗೆಗೆ ದಾರಿದೀಪ.

ಅಂದು, ೨೬ ವರ್ಷದ ತರುಣಿ ಜೇನ್, ಕೀನ್ಯಾದಲ್ಲಿದ್ದ ಪ್ರಸಿದ್ಧ ಪಳೆಯುಳಿಕೆ ತಜ್ಞ ಲೂಯಿಸ್ ಲೀಕಿಯವರನ್ನು ಭೇಟಿ ಮಾಡಿ ಹೆಚ್ಚಿನ ಕಲಿಕೆಗೆ ಮಾರ್ಗದರ್ಶನ ಬೇಡಿದರು; ಆಗ ಲೀಕಿಯವರು, ಕಾಡು-ಮೇಡು ಅಲೆದು ಫೀಲ್ಡ್ ವರ್ಕ್ ಮಾಡಲು ಬೇಕಿರುವ ಧೈರ್ಯ ಮತ್ತು ತಾಳ್ಮೆಯನ್ನು ಜೇನ್ ಅವರಲ್ಲಿ ಗುರುತಿಸಿ, ಚಿಂಪಾಂಝಿಗಳ ಬಗ್ಗೆ ಅಧ್ಯಯನ ಮಾಡೋಕೆ ತಾಂಝಾನಿಯಾದ ಗೊಂಬೆ ರಾಷ್ಟ್ರಿಯ ಉದ್ಯಾನಕ್ಕೆ ಕಳಿಸಿಕೊಟ್ಟರು. ಅಲ್ಲಿಂದ ಮುಂದೆ ನಡೆದಿದ್ದು ಇತಿಹಾಸ! ನಾವೆಲ್ಲರೂ ನ್ಯಾಶನಲ್ ಜಿಯಾಗ್ರಾಫಿಕ್ ಸೇರಿದಂತೆ ಅನೇಕ ಮಾಧ್ಯಮಗಳಲ್ಲಿ, ಸಾಕ್ಷ್ಯಚಿತ್ರದ ಭಾಗವಾಗಿ ಜೇನ್ ಮತ್ತು ಚಿಂಪಾಂಝಿಗಳ ನಡುವಿನ ಒಡನಾಟ, ಚಿಂಪಾಂಝಿಗಳ ನಡವಳಿಕೆಯ ತುಣುಕುಗಳನ್ನು ನೋಡಿರುತ್ತೇವೆ. ಸಂದರ್ಶನದ ಭಾಗವಾಗಿ ಆ ವಿಶಿಷ್ಟ ಅನುಭವಗಳ ಬಗ್ಗೆ ಕೇಳಿ, ತಿಳಿದು ಅಚ್ಚರಿ ಪಟ್ಟಿರುತ್ತೇವೆ ಕೂಡ; ಪ್ರತಿ ಬಾರಿ ಜೇನ್ ಅವರ ಇಂತಹ ಸಂದರ್ಶನಗಳನ್ನು ಓದಿದಾಗ, ಅವರ ಭಾಷಣಗಳನ್ನು ಕೇಳಿದಾಗ ೨೬ರ ತರುಣಿಯಾಗಿದ್ದಾಗಿನಿಂದ ೯೧ ವರ್ಷದವರಾಗುವವರೆಗಿನ ಅವರ ಪಯಣ, ಅದೇ ಭರವಸೆ ತುಂಬಿದ ಮಾತು, ಕುತೂಹಲ ತುಂಬಿದ ಅಧ್ಯಯನಗಳು, ಕಲಿಕೆಯೆಡೆಗಿನ ಆಸಕ್ತಿ ಮತ್ತು ಭೂಮಿಯ ಭವಿಷ್ಯದ ಬಗೆಗಿನ ಜವಾಬ್ದಾರಿ – ಅವರ ಬಗ್ಗೆ ಅಚ್ಚರಿ ಮತ್ತು ಹೆಮ್ಮೆಯನ್ನು ಹೆಚ್ಚಿಸುತ್ತಲೇ ಸಾಗುತ್ತದೆ.

ಜೇನ್ ಗುಡಾಲ್ ಗೊಂಬೆ ಅರಣ್ಯವನ್ನು ಪ್ರವೇಶಿಸಿದಾಗ, ಚಿಂಪಾಂಝಿಗಳ ಬಗ್ಗೆ ಅವರಿಗೆ ಮತ್ತು ಜಗತ್ತಿಗೆ ಬಹಳ ಕಡಿಮೆ ತಿಳಿದಿತ್ತು; ಕೇವಲ ಒಂದು ಬೈನಾಕುಲರ್ ಮತ್ತು ಪೆನ್ನು-ಪುಸ್ತಕ – ಇವಿಷ್ಟನ್ನೇ ನೆಚ್ಚಿಕೊಂಡು ಚಿಂಪಾಂಝಿಗಳ ಗುಂಪುಗಳನ್ನು ಗಮನಿಸಲು ಕಾಡೊಳಗೆ ನಡೆದೇ ಬಿಟ್ಟರು ಜೇನ್. ತಮ್ಮ ಅಧ್ಯಯನದ ಭಾಗವಾಗಿ ಕ್ಷೇತ್ರ ಸಂಶೋಧನೆಯಲ್ಲಿ ಅಸಾಂಪ್ರದಾಯಿಕ ಎನಿಸುವ ವಿಧಾನವನ್ನು ಅವರು ನೆಚ್ಚಿಕೊಂಡರು; ಅದೇನೆಂದರೆ, ಸಾಮಾನ್ಯವಾಗಿ ಎಲ್ಲ ಸಂಶೋಧಕರೂ ಮಾಡುವಂತೆ ದೂರದಲ್ಲಿ ಕುಳಿತ ವೀಕ್ಷಕರಾಗಿ ಉಳಿಯಲಿಲ್ಲ; ಬದಲಿಗೆ, ಚಿಂಪಾಝಿಗಳ ನೆರೆಯವರು ಎಂಬಂತೆ ಹತ್ತಿರದಲ್ಲೇ ಕುಳಿತು ಪರಿವೀಕ್ಷಣೆಯಲ್ಲಿ ತೊಡಗಿದರು. ಹಾಗೆ ನೆರೆಯವರಂತೆ ಹತ್ತಿರವೇ ಇದ್ದಾಗ ಮಾತ್ರ, ಅವುಗಳ ಸಮಾಜದ ಸಂಕೀರ್ಣತೆಯನ್ನು, ಅವುಗಳ ವಾಸಸ್ಥಾನದ ವಿಶೇಷತೆಗಳನ್ನು, ಅವುಗಳ ದಿನನಿತ್ಯದ ವರ್ತನೆಯನ್ನು ಸರಿಯಾಗಿ ಅರ್ಥೈಸಿಕೊಳ್ಳುವುದು ಸಾಧ್ಯ ಎಂಬುದು ಜೇನ್ ಅವರ ಅಚಲ ನಂಬಿಕೆ. ಅದು ಸತ್ಯವೆಂದು ಅವರ ಸಂಶೋಧನೆಗಳ ಫಲಿತಾಂಶಗಳೇ ಜಗತ್ತಿಗೆ ಸಾರಿದವು. ಅಲ್ಲಿಯವರೆಗೂ ಮಂಗನಿಂದ ಮಾನವ ಎಂಬ ಉಕ್ತಿಯು ಜನರ ಬಾಯಲ್ಲಾಡುತ್ತಿತ್ತು ನಿಜ; ಡಾರ್ವಿನ್ನಿನ ವಿಕಾಸವಾದದ ಒಂದು ಅಂಶವನ್ನು ಹೀಗೆ ಅರ್ಥೈಸಿಕೊಂಡಿದ್ದರು ಸಾಮಾನ್ಯಜನ! ಅವರಿಗೆ ಚಿಂಪಾಝಿಗಳ ಮತ್ತು ನಮಗೆ ಸಾಮಾನ್ಯವಾಗಿ ಕಾಣಸಿಗುವ ಮಂಗಗಳ ನಡುವಿನ ವ್ಯತ್ಯಾಸ ಗೊತ್ತಿರಲಿಲ್ಲದಿರಬೇಕು, ಪಾಪ! ಅದಿರಲಿ, ಚಿಂಪಾಝಿಗಳ ಮತ್ತು ಮಾನವರ ನಡುವಿನ ಅನುವಂಶಿಕ ನಿಕಟತೆ ಸುಮಾರು ೯೯% ಎಂದು ಜೇನ್ ಅವರ ಅಧ್ಯಯನಗಳಿಂದ ಪ್ರೇರಿತ ಸಂಶೋಧನೆಗಳು ಸಾಬೀತು ಪಡಿಸಿದವು. ಜೇನ್ ಅವರು ಚಿಂಪಾಝಿಗಳನ್ನು ಕೇವಲ ಒಂದು ಪ್ರಭೇದವನ್ನಾಗಿ ನೋಡದೇ, ಭಾವನೆಗಳು ಮತ್ತು ದೀರ್ಘಕಾಲೀನ ಬಂಧಗಳನ್ನು ಹೊಂದಿರುವ ವ್ಯಕ್ತಿಗಳಾಗಿಯೂ ಅರ್ಥಮಾಡಿಕೊಂಡರು. ೧೯೬೦ ರಲ್ಲಿ ಡಾ. ಜೇನ್ ಗುಡಾಲ್ ಅವರು ಹೊಸ ವೈಜ್ಞಾನಿಕ ಸತ್ಯವನ್ನು ಜಗತ್ತಿನ ಮುಂದಿರಿಸಿ ನಿಬ್ಬೆರಗಾಗಿಸಿದರು; ಚಿಂಪಾಂಝಿಗಳು ಮರದ ಕಡ್ಡಿಗಳು, ಎಲೆಗಳಂತಹ ವಸ್ತುಗಳನ್ನು ಬಳಸಿ ಉಪಕರಣಗಳನ್ನು ತಯಾರಿಸುತ್ತವೆ ಮತ್ತು ಬಳಸುತ್ತವೆ ಎಂಬ ಇವರ ಆವಿಷ್ಕಾರವನ್ನು ಇಪ್ಪತ್ತನೇ ಶತಮಾನದ ಶ್ರೇಷ್ಠ ಸಾಧನೆಗಳಲ್ಲಿ ಒಂದೆಂದು ಇಂದಿಗೂ ಪರಿಗಣಿಸಲಾಗಿದೆ.

ಚಿಂಪಾಂಝಿಗಳ ಜೊತೆಜೊತೆಗೇ ದಿನಕಳೆಯುತ್ತಾ ಜೇನ್ ಅವರು, ಅವೆಷ್ಟು ಮನುಷ್ಯರ ಹಾಗಲ್ವಾ ಎಂದು ಅವುಗಳನ್ನು ಗುರುತಿಸೋಕೆ ಒಂದು ನಂಬರ್ ನೀಡುವ ಬದಲು, ಹೆಸರನ್ನು ನೀಡಿದರು; ತಾವಾಗಿಯೇ ಅವುಗಳೊಂದಿಗೆ ಸಂವಹನ ನಡೆಸದೇ, ಅವೇ ಅವರ ಬಳಿ ಬಂದು ಸಂವಹನ ನಡೆಸಲು ತಾಳ್ಮೆಯಿಂದ ಕಾದರು. ಅವುಗಳ ಬಗ್ಗೆ ಅರಿಯುತ್ತಾ, ಅವುಗಳ ಆವಾಸಸ್ಥಾನಗಳ ಬಗ್ಗೆ ತಿಳಿಯುತ್ತಾ, ಬದಲಾಗುತ್ತಿರುವ ಪರಿಸರದ ಸ್ಥಿತಿಯಿಂದ ಹಾಳಾಗುತ್ತಿರುವ ವನ್ಯಜೀವಿಗಳ ವಾಸಸ್ಥಾನಗಳ ಬಗ್ಗೆ, ವನ್ಯಜೀವಿ ಸಂರಕ್ಷಣೆಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವ ಅನೇಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡರು. ಅವರ ಈ ಪ್ರಯಾಣ ಖಂಡಿತಾ ಸುಲಭದ್ದಾಗಿರಲಿಲ್ಲ. ಚಿಂಪಾಂಝಿಗಳ ಒಡನಾಟದಲ್ಲಿ ಕೆಲವೊಂದು ಕಹಿಘಟನೆಗಳೂ ನಡೆದಿವೆ. ಆಕ್ರಮಣಕಾರಿ ಮನೋಭಾವದ ಚಿಂಪಾಝಿಯೊಂದು ಇವರಿಗೆ ಪ್ರಾಣಾಂತಿಕ ಹೊಡೆತ ನೀಡಿತ್ತು; ಮತ್ತೊಂದು ಘಟನೆಯಲ್ಲಿ, ಪ್ರಯೋಗಾಲಯದಲ್ಲಿ ಗಂಡು ಚಿಂಪಾಂಝಿಯೊಂದನ್ನು ಇವರು ಪರೀಕ್ಷಿಸುತ್ತಿದ್ದಾಗ, ಅದು ಇವರ ಕೈಯ ಹೆಬ್ಬೆರಳನ್ನು ಕಚ್ಚಿ ಪುಟ್ಟ ಭಾಗವೊಂದು ತುಂಡಾಗಿತ್ತು ಕೂಡ; ಅಷ್ಟೇ ಅಲ್ಲದೇ ಕೆಲವು ಚಿಂಪಾಂಝಿಗಳನ್ನು ಅತಿಯಾಗಿ ಹಚ್ಚಿಕೊಂಡ ಇವರಿಗೆ ಅವುಗಳು ಮಕ್ಕಳಂತೆ ಭಾಸವಾಗಿ, ಬಿಟ್ಟುಬರುವುದೇ ಕಷ್ಟವಾಗಿತ್ತಂತೆ! ಅದರಲ್ಲೂ ‘ಫ್ಲಿಂಟ್’ ಎಂಬ ಚಿಂಪಾಂಝಿಯನ್ನು ಅದರ ಶೈಶವಾವಸ್ಥೆಯಿಂದಲೂ ದಿನೇದಿನೇ ಗಮನಿಸಿದ್ದ ಜೇನ್ ಅವರಿಗೆ, ಅದರ ಮೇಲೆ ವಿಶೇಷ ಪ್ರೀತಿ; ‘ಫ್ಲಿಂಟ್’ನ ತಾಯಿ ‘ಫ್ಲೋ’ ತೀರಿಹೋದಾಗ, ‘ಫ್ಲಿಂಟ್’ ಅನುಭವಿಸಿದ ಮಾನಸಿಕ ವ್ಯಥೆ, ಖಿನ್ನತೆ ಜೇನ್ ಅವರನ್ನೂ ಕಂಗೆಡಿಸಿತ್ತು, ಜೊತೆಗೆ, ಮನುಷ್ಯರಂತೆಯೇ ಚಿಂಪಾಂಝಿಗಳಲ್ಲೂ ಇರುವ ಸಂತಸ, ದುಃಖ, ಸರಸ, ವಿರಸ, ಕೋಪ, ಭಯದಂತಹ ಸಾವಿರಾರು ಭಾವನೆಗಳು, ಕೌಟುಂಬಿಕ ಬಂಧಗಳು ಮತ್ತಷ್ಟು ವಿಶದಗೊಂಡವು. ಇಂತಹ ಮಾನಸಿಕ, ಭೌತಿಕ ಸವಾಲುಗಳ ಜೊತೆಗೆ, ಜೇನ್ ಅವರು ಪರಿಸರ ಸಂರಕ್ಷಣೆಯ ಹಾದಿಯಲ್ಲೂ ಅನೇಕ ಸವಾಲುಗಳನ್ನು ಎದುರಿಸಬೇಕಾಯ್ತು. ತಮಗನ್ನಿಸಿದಷ್ಟು ಪರಿಣಾಮಕಾರಿಯಾಗಿ ಪರಿಸರ ಸಂರಕ್ಷಣೆ ಮತ್ತು ಆವಾಸಸ್ಥಾನ ರಕ್ಷಣೆಯ ಕಾರ್ಯಗಳನ್ನು ಸಾಧ್ಯವಾಗಿಸೋಕೆ, ೧೯೭೭ರಲ್ಲಿ ‘ಜೇನ್ ಗುಡಾಲ್ ಇನ್ಸ್ಟಿಟ್ಯೂಟ್’ ಸ್ಥಾಪಿಸಿದರು; ಅದರ ಮೂಲಕ ಗೊಂಬೆ ರಾಷ್ಟ್ರೀಯ ಉದ್ಯಾನವನ್ನೂ ಒಳಗೊಂಡಂತೆ ಅನೇಕ ಕಾಡುಗಳಲ್ಲಿ ಸಂಶೋಧನೆಗಳಿಗೆ ಒತ್ತಾಸೆಯಾಗಿ ನಿಂತರು ಮತ್ತು ಪ್ರಾಣಿಗಳ ಹಕ್ಕುಗಳನ್ನು ಕಾಪಾಡಲು, ಪ್ರಾಣಿಗಳನ್ನು ದಯೆಯಿಂದ, ಪ್ರೀತಿಯಿಂದ ನಡೆಸಿಕೊಳ್ಳಲು ಜಾಗತಿಕ ನೀತಿನಿಯಮಾವಳಿಗಳನ್ನು ರೂಪಿಸುವಲ್ಲೂ ಪ್ರಮುಖ ಪಾತ್ರವಹಿಸಿದರು.

ಒಬ್ಬ ಮಗ, ಮೂರು ಮೊಮ್ಮಕ್ಕಳ ಜೊತೆಗೆ ಕೌಟುಂಬಿಕ ಜೀವನದಲ್ಲೂ ವ್ಯಸ್ತರಾಗಿದ್ದ ಜೇನ್ ಅವರು, ಇಳಿವಯಸ್ಸಿನಲ್ಲೂ ವರ್ಷಕ್ಕೆ ೩೦೦ ದಿನ ಜಗತ್ತನ್ನು ಸುತ್ತುತ್ತಾ, ತಮ್ಮ ಭಾಷಣಗಳು ಮತ್ತು ಭರವಸೆದಾಯಕ ಕೆಲಸಗಳ ಮೂಲಕ ಅವರನ್ನು ಭೇಟಿ ಮಾಡುವ ಲಕ್ಷಾಂತರ ಜನರಲ್ಲಿ, ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಜವಾಬ್ದಾರಿಯ ಬೀಜವನ್ನು ಬಿತ್ತುತ್ತಿದ್ದರು.

ಚಿಂಪಾಂಝಿಗಳ ಬಗ್ಗೆ ಬರೋಬ್ಬರಿ ೬೫ ವರ್ಷಗಳ ಅಧ್ಯಯನದಿಂದ ಜೇನ್ ಗುಡಾಲ್ ಅವರು ವಿಜ್ಞಾನಕ್ಕೆ ನೀಡಿದ ಕೊಡುಗೆ ನಿಜಕ್ಕೂ ಅಪಾರ. ಸಂಶೋಧನೆಗಳಿಗಾಗಿ ಸೆರೆಯಲ್ಲಿರುವ ಪ್ರಾಣಿಗಳ ಆರೈಕೆಯ ಬಗ್ಗೆ, ವನ್ಯಜೀವಿಗಳ ಅಕ್ರಮ ಸಾಗಾಣಿಕೆ ಹಾಗೂ ಮಾರಾಟದ ವಿರುದ್ಧ ತಮ್ಮ ಸಂಸ್ಥೆಯ ಮೂಲಕ ಜೇನ್ ವಿಶ್ವಮಟ್ಟದಲ್ಲಿ ಪ್ರಭಾವಿ ಹೆಸರಾಗಿದ್ದು, ಪರಿಣಾಮಕಾರಿ ಕೆಲಸಗಳನ್ನು ಮಾಡಿದ್ದಾರೆ. ಜೇನ್ ಗುಡಾಲ್ ಇನ್ಸ್ಟಿಟ್ಯೂಟ್ ನ ‘ರೂಟ್ಸ್ ಆಂಡ್ ಶೂಟ್ಸ್’ ಎಂಬ ಶಾಖೆಯು ಯುವಪೀಳಿಗೆಯನ್ನು ಪರಿಸರ ರಕ್ಷಣೆಯ ನಿಜವಾದ ಸವಾಲುಗಳಿಗೆ ಸಿದ್ಧ ಪಡಿಸುವೆಡೆಗೆ, ಪರಿಸರದ ಬಗ್ಗೆ ಜವಾಬ್ದಾರಿಯಿಂದ ನಡೆದುಕೊಳ್ಳುವ ಕಡೆಗೆ ಅನೇಕ ಯೋಜನೆಗಳ ಮುಖಾಂತರ ಮಾರ್ಗದರ್ಶನ ನೀಡುತ್ತಿದೆ. ಬಬೂನ್‌ಗಳ ಬಗೆಗಿನ ಸಂಶೋಧನೆ, ಮ್ಯಾಂಡರಿಲ್‌ಗಳ ಪುನರ್ವಸತಿ, ಆಗ್ರೋಫಾರೆಸ್ಟ್ರಿ, ಆಫ್ರಿಕಾದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಹಾಯ, ಕಾಡಿನಂಚಿನ ಜನರ ಮತ್ತು ಕಾಡುಜನರ ಪುನರ್ವಸತಿ ಮತ್ತು ಕಲ್ಯಾಣ ಯೋಜನೆಗಳು – ಹೀಗೆ ಅನೇಕ ಯೋಜನೆಗಳ ಮೂಲಕ ಕಾಡಿಗೂ ನಾಡಿಗೂ ಸೇತುವೆಯಾಗಿ, ಪೂರಕವಾಗಿ ಕಾರ್ಯನಿರ್ವಹಿಸುತ್ತಾ, ಜೇನ್, ತಮ್ಮ ದಾರಿಯಲ್ಲೇ ಸಾಗುವ ಸಾವಿರಾರು ಪರಿಸರ ಮತ್ತು ಸಾಮಾಜಿಕ ಕಾರ್ಯಕರ್ತರ ಪಡೆಯನ್ನೇ ರಚಿಸಿದ್ದಾರೆ. ಅದರ ಮೂಲಕ, ಅವರ ಸಾವಿನ ನಂತರವೂ ಅವರ ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮೆರೆಯುವ ಕಾರ್ಯವು ಮುಂದುವರೆಯುತ್ತಲೇ ಇರುತ್ತದೆ ಎಂಬುದು ಕೂಡ ಅವರ ಸಾರ್ಥಕ ಜೀವಿತದ ದ್ಯೋತಕ.

ಜೇನ್ ಅವರು ಕಾಡಿನ ಒಳಹೊಕ್ಕು ಅಧ್ಯಯನ ಮಾಡುವಾಗ ಮಾತ್ರವಲ್ಲ, ತಮ್ಮ ಸಾಮಾಜಿಕ ಜೀವನದಲ್ಲೂ ದಿಟ್ಟ ಮಹಿಳೆ ಎಂದು ಹೆಸರು ಮಾಡಿದವರು; ಅನೇಕ ಜಾಗತಿಕ ರಾಜಕೀಯ ನಾಯಕರ ಆಕ್ರಮಣಕಾರಿ ಮನೋಭಾವವನ್ನು ಕ್ಯಾಮೆರಾದ ಎದುರಿಗೇ ತೆಗಳಿದ್ದ ಜೇನ್, ‘ಕೆಲವು ಆಕ್ರಮಣಕಾರಿ ಚಿಂಪಾಂಝಿಗಳಿರತ್ವಲ್ಲ? ಹಾಗೇ ಅವರೆಲ್ಲ! ಅವರನ್ನೆಲ್ಲಾ ಅನ್ಯ ಗ್ರಹಕ್ಕೆ ಎಲಾನ್ ಮಸ್ಕ್ ನ ಸ್ಪೇಸ್ ಶಿಪ್‌ನಲ್ಲಿ ಕಳಿಸಿಬಿಡಬೇಕು’ ಎಂದು ನಗೆಯಾಡಿದ್ದರು. ಭಿಡೆಯಿಲ್ಲದೇ ಇದ್ದದ್ದನ್ನು ಇದ್ದಂತೆ ಹೇಳುತ್ತಾ, ಕಹಿಸತ್ಯಗಳನ್ನು ಭರವಸೆಯ ಲೇಪ ಹಚ್ಚಿ ಹೇಳುತ್ತಾ, ಪ್ರಾಣಿಸಂಕುಲಕ್ಕೆ ಮತ್ತು ಬುಡಕಟ್ಟು ಜನರ, ಹೆಣ್ಣುಮಕ್ಕಳ ಅಭ್ಯುದಯಕ್ಕೆ ಎಣೆಯಿಲ್ಲದಂತೆ ಕೆಲಸ ಮಾಡಿದ ಜೇನ್, ತಮ್ಮ ಪ್ರಿಯವಾದ ಕೆಲಸ – ಅಂದರೆ – ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಭಾಷಣಗಳ ಟೂರ್ ಮಾಡುತ್ತಲೇ ಇದೇ ತಿಂಗಳ ಮೊದಲ ದಿನ (೦೧/೧೦/೨೦೨೫) ಕೊನೆಯುಸಿರೆಳೆದರು. ಹಾಳಾಗುತ್ತಿರುವ ಪರಿಸರ, ದಿನೇ ದಿನೇ ಏರುತ್ತಿರುವ ಮಾಲಿನ್ಯ, ತಮ್ಮ ಅನುಕೂಲವೇ ಪರಿಸರದ ಒಳಿತಿಗಿಂತಲೂ ಹೆಚ್ಚು ಎಂದು ಬದುಕುತ್ತಿರುವ ಕೋಟ್ಯಂತರ ಜನರ ನಡುವೆ, ಪರಿಸರದ ಬಗ್ಗೆ ಕಾಳಜಿಯಿರುವವರು ಅದೆಷ್ಟೇ ಪ್ರಯತ್ನಿಸಿದರೂ ಆಗೊಮ್ಮೆ ಈಗೊಮ್ಮೆ ಖಿನ್ನತೆಗೆ ಜಾರಬೇಕಾದ ಪರಿಸ್ಥಿತಿ; ಅಂತಹ ಹೊತ್ತಿನಲ್ಲೂ ವಿಶ್ವಸಂಸ್ಥೆಯ ‘ಶಾಂತಿದೂತ’ರಾದ ಜೇನ್ ಗುಡಾಲ್, ತಮ್ಮ ಪ್ರತಿ ಬರಹದಲ್ಲೂ, ಪ್ರತಿ ಯೋಜನೆಯಲ್ಲೂ, ಪ್ರತಿ ಭಾಷಣದಲ್ಲೂ ಭೂಮಿಯ ಭವಿಷ್ಯದ ಬಗ್ಗೆ ಭರವಸೆ ಮತ್ತು ಭರವಸೆಯನ್ನಷ್ಟೇ ಬಿತ್ತಿದರು.

೯೧ರ ಹರೆಯದಲ್ಲೂ ಅದೇ ಧನಾತ್ಮಕ ಮುನ್ನೋಟ ಮತ್ತು ಪರಿಸರೀಯ ಜವಾಬ್ದಾರಿಯನ್ನು ಮೆರೆದ ಜೇನ್, ಇಂದಿನ ಮತ್ತು ಮುಂದಿನ ಪೀಳಿಗೆಗೆ ನಿಜವಾದ ಮಾದರಿ, ಎಂದೂ ನಂದದ ದಾರಿದೀಪ!

About The Author

ಕ್ಷಮಾ ವಿ. ಭಾನುಪ್ರಕಾಶ್

ಕ್ಷಮಾ ಸೂಕ್ಷ್ಮಾಣುಜೀವಿ ವಿಜ್ಞಾನದಲ್ಲಿ ಎಂ.ಎಸ್.ಸಿ ಪದವೀಧರೆ. ವಿಜ್ಞಾನ ಶಿಕ್ಷಕಿ. ವಿಜ್ಞಾನ ಲೇಖನಗಳ ಲೇಖಕಿ ಮತ್ತು ಅನುವಾದಕಿ. ರಿಸರ್ಚ್ ಮ್ಯಾಟರ್ಸ್ ನಲ್ಲಿ ವಿಜ್ಞಾನ ಲೇಖನಗಳ ಕನ್ನಡ ವಿಭಾಗದಲ್ಲಿ ಸಂಪಾದಕಿಯೂ ಆಗಿರುವ ಇವರು ಗಾಯಕಿಯೂ, ಕಂಠದಾನ ಕಲಾವಿದೆಯೂ ಹೌದು.

1 Comment

  1. B N Yalamalli

    ಪ್ರಾಣಿಗಳ ಜೀವನದ ಬಗ್ಗೆ ತೊಡಗಿಸಿಕೊಂಡು ವೃತ್ತಿ ಕೈಗೊಳ್ಳುವದು, ಅವುಗಳ ಭಾವನೆಗಳ ಬಗ್ಗೆ ತಿಳುವಳಿಕೆ ಮೂಡಿಸುವ ಅಗಾಧ ವ್ಯಕ್ತಿಯೊಬ್ಬರ ಜೀವನದ ಬಗ್ಗೆ ಅದೇ ಮಾತ್ರೆಯಲ್ಲಿ ತೊಡಗಿಕೊಂಡು ಬರೆದ ಲೇಖನ. Excellant narration

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ