Advertisement
ಗೋಹರ್‌ಬಾಯಿ ಕತೆ ಹೇಳಿದ ‘ಪ್ರತಿಗಂಧರ್ವʼ: ಚಿತ್ರಾ ವೆಂಕಟರಾಜು ಸರಣಿ

ಗೋಹರ್‌ಬಾಯಿ ಕತೆ ಹೇಳಿದ ‘ಪ್ರತಿಗಂಧರ್ವʼ: ಚಿತ್ರಾ ವೆಂಕಟರಾಜು ಸರಣಿ

‘ಪ್ರತಿಗಂಧರ್ವʼ ದಂತಹ ನಾಟಕದ ಅಭಿನಯ ಬಹಳ ಸವಾಲಿನದು. ಏಕೆಂದರೆ ಹೆಚ್ಚಿನ ಪಾತ್ರಗಳು ಕಲಾವಿದರದ್ದು. ಗೋಹರ್‌ ಬಾಯಿ ಪಾತ್ರ ಮಾಡುವ ಕಲಾವಿದೆ, ನಾಟಕದ ಪಾತ್ರ ಮಾಡುವುದರ ಜತೆಗೆ ನಾಟಕದೊಳಗಿರುವ ರಂಗಸ್ಥಳದಲ್ಲಿ ಅಭಿನಯ ಮಾಡಬೇಕಾಗುತ್ತದೆ. ಅಂದರೆ ನಾವು ನೋಡುತ್ತಿರುವ ಪಾತ್ರ ಗೋಹರ್‌ ಬಾಯಿ.  ಗೋಹರ್‌ ಬಾಯಿ ನಾಟಕದೊಳಗೆ ಮಾಡಿದ ಪಾತ್ರ ಗೂಢಾಚಾರಿಣಿಯದು. ಗೂಢಾಚಾರಿಣಿಯ ಪಾತ್ರ ಮಾಡಿದ ಗೋಹರ್‌ ಬಾಯಿ ಪಾತ್ರಧಾರಿ, ಅದು ಮುಗಿದ ಮೇಲೆ ಮತ್ತೆ ಗೋಹರ್‌ ಆಗಬೇಕು. ಆಗ ಅಲ್ಲಿನ ಅಭಿನಯಗಳೆರಡೂ ಬೇರೆಯಾಗಬೇಕಾಗುತ್ತದೆ.
ಚಿತ್ರಾ
ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿಯಲ್ಲಿ ‘ಪ್ರತಿಗಂಧರ್ವʼ ನಾಟಕದ ಕುರಿತ ಬರಹ ಇಲ್ಲಿದೆ

ಬಿಜಾಪುರದ ಅಮೀರಬಾಯಿ ಕರ್ನಾಟಕಿ – ಗೋಹರ್‌ ಬಾಯಿ ಕಾರ್ನಾಟಕಿ ಅಂದಿನ ಕಂಪನಿ ನಾಟಕ ಲೋಕದಲ್ಲಿ  ಬೀಳಗಿ ಸಹೋದರಿಯರೆಂದೇ ಖ್ಯಾತರಾಗಿದ್ದ ಹಾಡುನಟಿಯರು. ತಮ್ಮ ಸಂಗೀತ ಮತ್ತು ನಟನೆಯಿಂದ ಪ್ರಸಿದ್ಧರಾಗಿದ್ದವರು. ನಂತರ  ಮುಂಬೈಗೆ ಹೋಗಿ ಅಮೀರಬಾಯಿ ಮತ್ತು ಗೋಹರ್‌ ಬಾಯಿ  ಚಲನಚಿತ್ರ  ತಾರೆಯಾದವರು. ತಮ್ಮ ಸೋದರಮಾವನಿಂದ ಸಂಗೀತ ಕಲಿತ ಸಹೋದರಿಯರು ನಂತರ ಕರ್ನಾಟಕದ ಅನೇಕ ನಾಟಕ ಕಂಪನಿಗಳಲ್ಲಿ ಹಾಡುನಟಿಯರಾಗಿದ್ದವರು. ಮರಾಠಿ ನಾಟಕ ರಂಗದ ದಂತಕತೆಯಾಗಿದದ್ದ ಬಾಲಗಂಧರ್ವರ ಅಭಿನಯವನ್ನು ಎಳವೆಯಲ್ಲೇ ನೋಡಿ ಪ್ರಭಾವಿತರಾದ ಗೋಹರ್‌, ಅವರಂತೇ ಅಭಿನಯ ಮಾಡಬೇಕೆಂದು, ಹಾಡಬೇಕೆಂದು ಬಯಸುತ್ತಾರೆ. ಮುಂದೆ  ಬಾಲಗಂಧರ್ವರ ಕೊನೆಗಾಲದಲ್ಲಿ ಅವರೊಂದಿಗೇ ಇರುತ್ತಾರೆ. ಗಂಧರ್ವರಿಗೆ ಪ್ರತಿಯಾಗಿ – ಪ್ರತಿಗಂಧರ್ವ ಎನಿಸಿಕೊಳ್ಳುತ್ತಾರೆ.

ಗೊಹರಬಾಯಿ ಕರ್ನಾಟಕಿಯವರ  ಜೀವನದ ಕತೆಯೇ ‘ಪ್ರತಿಗಂಧರ್ವʼ ನಾಟಕ. ರಹಮತ್‌ ತರಿಕೆರೆಯವರ ‘ಅಮೀರಬಾಯಿ ಕರ್ನಾಟಕಿʼ ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ರಾಜಪ್ಪ ದಳವಾಯಿಯವರು ‘ಪ್ರತಿಗಂಧರ್ವʼ ನಾಟಕ ಬರೆದಿದ್ದಾರೆ. ಅದನ್ನು ದಾವಣಗೆರೆ ವೃತ್ತಿ ರಂಗಾಯಣದ ನಟರು ‘ನಿರಂತರʼ ರಂಗ ಉತ್ಸವದ ಅಂಗವಾಗಿ ಇತ್ತೀಚೆಗೆ ಮೈಸೂರಿನ ಕಿರುರಂಗಮಂದಿರದಲ್ಲಿ ಅಭಿನಯಿಸಿದರು. ಈ ನಾಟಕವನ್ನು ಮಾಲತೇಶ್‌ ಬಡಿಗೇರ್‌ ಅವರು ನಿರ್ದೇಶಿಸಿದ್ದಾರೆ. ಇದು ದಾವಣಗೆರೆ ರಂಗಾಯಣ ರೆಪರ್ಟರಿಯ ಮೊದಲ ಪ್ರಯೋಗ.

ಆತ್ಮಕತೆ ಅಥವಾ ಜೀವನ ಚರಿತ್ರೆಗಳನ್ನು ನಾಟಕಕ್ಕೆ ಅಳವಡಿಸುವುದು ಸವಾಲಿನ ಕೆಲಸ. ಆತ್ಮಕತೆಯಾದರೆ ನೇರವಾಗಿ ಅವರೇ ನಿರೂಪಿಸಿರುತ್ತಾರೆ. ಜೀವನಚರಿತ್ರೆಯಾದ್ದರಿಂದ ಪ್ರತಿ ಘಟನೆಯೂ  ನೋಡಿದ ಕೇಳಿದ ಘಟನೆಗಳ ಮೇಲೆ ರೂಪುಗೊಳ್ಳುವಂಥವು. ದಾಖಲೆ ಸಿಗುವ ಘಟನೆಗಳನ್ನು ಬಿಟ್ಟರೆ ಉಳಿದೆಲ್ಲವೂ ಒಂದು ದೃಷ್ಟಿಕೋನವೇ. ನೋಡಿದ, ಓದಿದ, ಕೇಳಿದ ಘಟನೆಗಳ ಆಧಾರದ ಮೇಲೆ ಒಂದು ವ್ಯಕ್ತಿತ್ವನ್ನು ನಮ್ಮ ಅನುಭವದ ಆಧಾರದ ಮೇಲೆ ಕಟ್ಟಿಕೊಳ್ಳುವ ಪ್ರಕ್ರಿಯೆ. ಅದರಲ್ಲಿಯೂ ಅಮೀರಬಾಯಿ ಮತ್ತು ಗೋಹರ್‌ ಬಾಯಿಯವರಂಥವರ ಜೀವನದ ಕ್ಯಾನ್ವಾಸ್‌ ಬಹಳ ದೊಡ್ಡದು. ಬಿಜಾಪುರದಿಂದ ಮುಂಬೈವರೆಗಿನ ಅವರ ಪ್ರಯಾಣ ಕೇವಲ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋದ ಪಯಣವಲ್ಲ. ಬದಲಿಗೆ ಅದರೊಂದಿಗೆ ಒಂದು ಕಾಲದ ಸಾಂಸ್ಕೃತಿಕ ಪಲ್ಲಟದ ಇತಿಹಾಸವೇ ಇದೆ. ಇದರಲ್ಲಿ ಬೀಳಗಿ ಬರುತ್ತದೆ. ಬಾಲಗಂಧರ್ವರ ಅಭಿನಯ, ಸಂಗೀತ, ಮುಂಬೈ ಚಿತ್ರರಂಗ, ಸ್ಟುಡಿಯೋ ರೆಕಾರ್ಡಿಂಗ್ ಇವೆಲ್ಲ ಇದೆ. ಕಂಪೆನಿ ನಾಟಕಗಳ ಉಛ್ರಾಯ ಸ್ಥಿತಿಯನ್ನು ಕಂಡ ಗೋಹರ್‌ ಕೊನೆಗಾಲದಲ್ಲಿ ಬಾಲಗಂಧರ್ವರ ಕಂಪನಿಯ ಸಂಗೀತಮಯ ನಾಟಕದ ಅವಸಾನವನ್ನೂ ನೋಡುತ್ತಾರೆ. ಬಾಲಗಂಧರ್ವರ ವೈಭವದ ದಿನಗಳಿಂದ ಪ್ರಭಾವಿತರಾದ ಅವರು, ಪುಣೆಯಲ್ಲಿ ಅವರ ಕೊನೆಯ ಪ್ರದರ್ಶನಕ್ಕೂ  ಸಾಕ್ಷಿಯಾಗುತ್ತಾರೆ.

ನಾಟಕ ಕೃತಿ

ಯಾವುದೇ ಆತ್ಮಕತೆ ಅಥವಾ ಜೀವನ ಚರಿತ್ರೆ ನಾಟಕ ರೂಪದಲ್ಲಿ ಬಂದಾಗ, ನಾವು ಆ ಪಾತ್ರಗಳನ್ನು ವೇದಿಕೆಯ ಮೇಲೆ ಜೀವಂತವಾಗಿ ನೋಡುತ್ತಿರುತ್ತೇವೆ. ಅವರ ಕತೆಯ ಮೂಲಕ ಅಂದಿನ ಆ ಪಾತ್ರಗಳು ಅನುಭವಿಸಿರಬಹುದಾದ ಎಲ್ಲವನ್ನೂ ಪಾತ್ರಗಳ ಮೂಲಕ ನಾವೂ ಅನುಭವಿಸುತ್ತೇವೆ. ನಾಟಕ ಕೊನೆಗೂ ಭಾವಗಳ ಅನುಸಂಧಾನ. ಕತೆ ಮುಖ್ಯವಾದರೂ ಅದು ಒಂದು ನಿಮಿತ್ತ. ‘ಪ್ರತಿಗಂಧರ್ವʼ ನಾಟಕದ ಕ್ಯಾನ್ವಾಸ್‌ ಬಹಳ ದೊಡ್ಡದು. ಅದರಲ್ಲಿ ಅಂದಿನ ಕಾಲದ ವೃತ್ತಿ ರಂಗಭೂಮಿ, ಅದರ ವೈಭವ, ಬಿಜಾಪುರ, ನಂತರ ಬಾಂಬೆ, ಸಿನೆಮಾ, ರೆಕಾರ್ಡಿಂಗ್‌ ಸ್ಟುಡಿಯೋ… ಎಲ್ಲವೂ ಇರುವುದರಿಂದ ಅವೆಲ್ಲವನ್ನೂ ಜೀವನ ಚರಿತ್ರೆಯ ಮಾದರಿಯಲ್ಲಿ ರಾಜಪ್ಪ ದಳವಾಯಿಯವರು ನಾಟಕ ರಚಿಸಿದ್ದಾರೆ.  ಬಿಜಾಪುರದಲ್ಲಿ ಅಮೀರಬಾಯಿ ಮತ್ತು ಗೋಹರ್‌ ಬಾಯಿಯವರು ತಮ್ಮ ಸೋದರ ಮಾವನಿಂದ ಸಂಗೀತ ಕಲಿಯುವುದರಿಂದ ಪ್ರಾರಂಭವಾಗುವ ನಾಟಕ ಮುಂಬೈನಲ್ಲಿ ಬಾಲಗಂಧರ್ವರ ನಾಟಕ ಕಂಪನಿ ಕೊನೆಗೊಳ್ಳುವಲ್ಲಿ ಮುಗಿಯುತ್ತದೆ. ಇಷ್ಟು ವರ್ಷಗಳ ಕತೆಯನ್ನು ಹೇಳಬೇಕಾದಾಗ ಆ ನಡುವಿನ ಸಣ್ಣ ಸಣ್ಣ ಸೂಕ್ಷ್ಮಗಳು ಮರೆಯಾದವೇನೋ ಎನಿಸುತ್ತದೆ. ನಾಟಕದಲ್ಲಿ ‘ಕ್ರಿಯೆʼ ಗಳು ಕಡಿಮೆಯಾಗಿ ನಾಟಕದ ಮುಖ್ಯವಾದ ಕ್ರಿಯೆಗಳೂ ನಿರೂಪಣೆಯ ಮೂಲಕವೇ ಪ್ರೇಕ್ಷಕರಿಗೆ ತಿಳಿಯುತ್ತದೆ.

ನಾಟಕ ಕೃತಿಯಾಗಿ, ಮೊದಲ ಅರ್ಧದಲ್ಲಿ ಚಿಕ್ಕ ಚಿಕ್ಕ  ದೃಶ್ಯಗಳಿದ್ದು ಪ್ರತಿ ದೃಶ್ಯದ್ಲಲೂ ಗೋಹರ್‌ ಪಾತ್ರ ಇದ್ದುದರಿಂದ ಸ್ಥಳ ಮತ್ತು ಕಾಲದ ಮುಂದೆ ಚಲಿಸುತ್ತಿದ್ದರೂ ಪಾತ್ರಧಾರಿಗೆ ಒಮ್ಮೆಯೂ ಕಾಸ್ಟ್ಯೂಂ ಬದಲಾಯಿಸಲು ನಾಟಕದಲ್ಲಿ ಅವಕಾಶವೇ ಇಲ್ಲ. ಹಾಗಾಗಿ ನಾಟಕದಲ್ಲಿ ಕಾಲ ಮುಂದೆ ಹೋದಂತೆ ಗೋಹರ್‌ನ ಪಾತ್ರ ಪೋಷಣೆ ಮತ್ತು  ಬೆಳವಣಿಗೆಗೆ ಕಷ್ಟವಾದಂತಿತ್ತು.

ವಿನ್ಯಾಸ

ದಾವಣಗೆರೆ ವೃತ್ತಿ ರಂಗಾಯಣ ರೆಪರ್ಟರಿಯ ಮೊದಲ ನಾಟಕವಾದ್ದರಿಂದ ಮತ್ತು ನಾಟಕದ ಹಿನ್ನೆಲೆ  ವೃತ್ತಿ ರಂಗಭೂಮಿಯಾಗಿರುವುದರಿಂದ ಬಹುಶಃ ವೃತ್ತಿ ಕಂಪನಿಗಳ ಪರದೆಗಳನ್ನು ನಿರ್ದೇಶಕರು ಬಳಸಿಕೊಂಡಿದ್ದಾರೆ. ಒಂದೇ ಪರದೆ ಬದಲಾವಣೆಯಾಗದೇ ವೇದಿಕೆ ಎರಡು ಬದಿ ಎರಡು ಪರದೆಗಳ ಮೂಲಕ ರಂಗಸ್ಥಳ, ಪುಣೆ, ಬಿಜಾಪುರ, ಮುಂಬೈ ಎಲ್ಲವನ್ನೂ ಸೂಚಿಸಿದ್ದಾರೆ. ಬೇರೆ ಬೇರೆ ಸ್ಥಳವನ್ನು ಸೂಚಿಸಲು ಮಧ್ಯೆ ಬಿಳಿ ಪರದೆಯ ಮೂಲಕ ರೆಕಾರ್ಡಿಂಗ್‌ ಸ್ಟುಡಿಯೋ ಮತ್ತು ಇನ್ನಿತರ ಕಟ್ಟಡಗಳ ಮಿನಿಯೇಚರ್‌ಗಳನ್ನು ಸಿಲೋಟ್‌ನ ಮೂಲಕ ತೋರಿಸಿದ್ದು ಅಡಚಣೆಯೇ ಆಗುತಿತ್ತು. ಏನೂ ಇಲ್ಲದ ಸ್ಥಳದಲ್ಲಿ ಕಲ್ಪನೆ ಮತ್ತು ನಟನೆಯ ಮೂಲಕವೇ ಏನನ್ನಾದರೂ ಸೃಷ್ಟಿಸಬಲ್ಲದು ರಂಗಭೂಮಿಯ ಅನನ್ಯ ಶಕ್ತಿಯಾದ್ದರಿಂದ ಅದು ಇಲ್ಲದೆಯೂ ಆ ಸ್ಥಳವನ್ನು ನಟನೆಯ ಅಥವಾ ಸೆಟ್‌ ಗಳ ಮೂಲಕವೇ ತೋರಿಸಬಹುದಿತ್ತು.

ನಟನೆ

‘ಪ್ರತಿಗಂಧರ್ವʼ ದಂತಹ ನಾಟಕದ ಅಭಿನಯ ಬಹಳ ಸವಾಲಿನದು. ಏಕೆಂದರೆ ಹೆಚ್ಚಿನ ಪಾತ್ರಗಳು ಕಲಾವಿದರದ್ದು. ಗೋಹರ್‌ ಬಾಯಿ ಪಾತ್ರ ಮಾಡುವ ಕಲಾವಿದೆ, ನಾಟಕದ ಪಾತ್ರ ಮಾಡುವುದರ ಜತೆಗೆ ನಾಟಕದೊಳಗಿರುವ ರಂಗಸ್ಥಳದಲ್ಲಿ ಅಭಿನಯ ಮಾಡಬೇಕಾಗುತ್ತದೆ. ಅಂದರೆ ನಾವು ನೋಡುತ್ತಿರುವ ಪಾತ್ರ ಗೋಹರ್‌ ಬಾಯಿ.  ಗೋಹರ್‌ ಬಾಯಿ ನಾಟಕದೊಳಗೆ ಮಾಡಿದ ಪಾತ್ರ ಗೂಢಾಚಾರಿಣಿಯದು. ಗೂಢಾಚಾರಿಣಿಯ ಪಾತ್ರ ಮಾಡಿದ ಗೋಹರ್‌ ಬಾಯಿ ಪಾತ್ರಧಾರಿ, ಅದು ಮುಗಿದ ಮೇಲೆ ಮತ್ತೆ ಗೋಹರ್‌ ಆಗಬೇಕು. ಆಗ ಅಲ್ಲಿನ ಅಭಿನಯಗಳೆರಡೂ ಬೇರೆಯಾಗಬೇಕಾಗುತ್ತದೆ. ಹಾಗಾದಾಗ ನಮ್ಮೆದುರು ನಡೆಯುತ್ತಿರುವ ನಾಟಕ ಮತ್ತು ನಾಟಕದೊಳಗಿನ ನಾಟಕದ ಅಭಿನಯ ಬೇರೆಯಾಗಬೇಕಾಗುತ್ತದೆ.

ಗೋಹರ್‌ ಮತ್ತು ಅಮೀರಬಾಯಿಯವರು ಸಣ್ಣ ವಯಸ್ಸಿನ ಹುಡುಗಿಯರಿದ್ದಾಗಿನಿಂದ ಪ್ರಾರಂಭವಾಗುವ ನಾಟಕ ಮುಗಿಯುವಾಗ ಗೋಹರ್‌ ಅವರಿಗೆ ಬಹುಶಃ ೫೦ ವಯಸ್ಸು. ಆ ವಯಸ್ಸಿನ ಪ್ರಯಾಣವನ್ನು ತೋರಿಸಲು ನಟರಿಗೆ ಬಹಳಷ್ಟು ಅವಕಾಶಗಳಿತ್ತು. ನಾಟಕದ ಮುಖ್ಯ ಪಾತ್ರಗಳು ಹಾಡುವವರಾದ್ದರಿಂದ ಲೇಪಲ್‌ ಮೈಕ್‌ಗಳನ್ನು ಬಳಸಿದ್ದಾರೆ. ಆದರೆ, ಕೆಲವು ಪಾತ್ರಗಳು ಮೈಕ್‌ನಲ್ಲಿ ಮಾತನಾಡಿ ಉಳಿದ ಪಾತ್ರಗಳು ಮೈಕ್ ಇಲ್ಲದೇ ಮಾತನಾಡಿದಾಗ ಎರಡೂ‌ ಅಷ್ಟಾಗಿ ಹೊಂದಾಣಿಕೆಯಾಗುತ್ತಿರಲಿಲ್ಲ. ಅಮೀರ ಬಾಯಿ, ಬಾಲಗಂಧರ್ವ ಮತ್ತು ಚಾಪೇಕರರ ಪಾತ್ರಗಳನ್ನು ಮಾಡಿದ ನಟ ನಟಿಯರ ಅಭಿನಯ ಗಮನಾರ್ಹ.

ಸಂಗೀತ

ನಾಟಕ ಆರಂಭವಾಗುವುದೇ ಸೋದರಮಾವ ಬೀಳಗಿ ಸಹೋದರಿಯರಿಗೆ ಸಂಗೀತ ಕಲಿಸುವುದರಿಂದ. ನಾಟಕದ ವಸ್ತುವೇ ಹಾಡುನಟಿಯರ ಕತೆಯಾದ್ದರಿಂದ ನಟಿ, ಹಾಡುಗಾರರಾಗಬೇಕಾಗುವುದು ಅನಿವಾರ್ಯ. ಗೋಹರ್‌ ಪಾತ್ರ ಮಾಡಿದ ನಟಿ ತಮ್ಮ ಸಂಗೀತದ ಪ್ರತಿಭೆಯಿಂದ ಗೆದ್ದಿದ್ದಾರೆ. ಲೈವ್‌ ಮ್ಯೂಸಿಕ್‌ ಎನ್ನುವುದೇ ಅಪರೂಪವಾದ ಇಂದಿನ  ನಾಟಕಗಳಲ್ಲಿ ಈ ಪ್ರಯೋಗ ಲೈವ್ ಸಂಗೀತ ಬಳಸಿಕೊಂಡದ್ದು ಒಳ್ಳೆಯ ಅನುಭವ ನೀಡಿತಾದರೂ  ಹಾಡುಗಳನ್ನು ಹೊರತು ಪಡಿಸಿ ಇಡೀ ಎರಡು ಗಂಟೆಗಳ ಪ್ರದರ್ಶನದಲ್ಲಿ ನಟ ನಟಿಯರ ಭಾವಕ್ಕೇ ಸಂಗೀತ ಇಲ್ಲದಿರುವುದು ಕೊರತೆಯಂತೆಯೇ ಅನಿಸಿತು. ಮರಾಠೀ ನಾಟ್ಯ ಸಂಗೀತವನ್ನು ಮತ್ತಷ್ಟು ಬಳಸಿಕೊಳ್ಳುವ ಅವಕಾಶ ವ್ಯಾಪಕವಾಗಿತ್ತು.

ನಾಟಕ ಮುಗಿದಾಗ ನಮಗೆ ಗೋಹರ್‌ ಬಾಯಿ ಅಮೀರಬಾಯಿಯವರ ಜೀವನ, ನಡೆದ ಘಟನೆಗಳು ಕುತೂಹಲ ಹುಟ್ಟಿಸಿದವು. ಗೋಹರ್‌ ಚಿತ್ರರಂಗ ಬಿಟ್ಟು ರಂಗಭೂಮಿಗೆ ಮರಳಿದರು, ಯಾವ ಸಂದರ್ಭದಲ್ಲಿ ಬಾಲ ಗಂಧರ್ವರ ಪತ್ನಿ ತೀರಿಕೊಂಡರು ಎನ್ನುವಂಥಾ ಸೂಚನೆಗಳು ನಾಟಕದಲ್ಲಿ ಇದ್ದಿದ್ದರೆ ಅವರ ಜೀವನದ ತಲ್ಲಣಗಳು ಮತ್ತಷ್ಟು ಸ್ಪಷ್ಟವಾಗಿ ಅನುಭವಕ್ಕೆ ಬರುತ್ತಿತ್ತು. ಘಟನೆಗಳ ನಿರೂಪಣೆಗಿಂತ ಘಟನೆಗಳೇ ಹೆಚ್ಚಾಗಿದ್ದರೆ, ಪ್ರಯೋಗ ಮತ್ತಷ್ಟು ಆಪ್ತವಾಗುತ್ತಿತ್ತು. ‘ಪ್ರತಿಗಂಧರ್ವʼ ನಾಟಕ ತನ್ನ ವಸ್ತುವಿನ ದೃಷ್ಟಿಯಿಂದ ಅಪರೂಪದ ಪ್ರಯೋಗ. ಕರ್ನಾಟಕಿ ಸಹೋದರಿಯರ ಜೀವನ ಮತ್ತು ರಂಗಭೂಮಿಯಿಂದ ಸಿನಿಮಾ ಕಡೆಗೆ ಹೊರಟ ಕಲಾವಿದೆಯರಿಬ್ಬರ ಬದುಕಿನ ಬಗ್ಗೆ ಆಶ್ಚರ್ಯ ಮತ್ತು ಕುತೂಹಲ ಮೂಡಿಸಿದ ಪ್ರಯೋಗ.

(ಫೋಟೋ ಕೃಪೆ: ಮೈಸೂರು ರಂಗಾಯಣ)

About The Author

ಚಿತ್ರಾ ವೆಂಕಟರಾಜು

ಚಿತ್ರಾ ವೆಂಕಟರಾಜು, ಚಾಮರಾಜನಗರದವರು. ನಟಿ. ಕಳೆದ ೧೮ ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ರಂಗಶಿಕ್ಷಣಶಿಕ್ಷಕಿಯಾಗಿಕೆಲಸ ನಿರ್ವಹಿಸುತ್ತಿದ್ದಾರೆ. ನೀನಾಸಮ್ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಚಾಮರಾಜನಗರದಶಾಂತಲಾ ಕಲಾವಿದರುʼ ತಂಡದಲ್ಲಿ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಲಾಶಿಕ್ಷಣ, ಸಾಹಿತ್ಯ, ಸಂಗೀತ, ನೃತ್ಯ, ಸಿನೆಮಾದಲ್ಲಿ ಆಸಕ್ತಿ. ಇವರು ಅಭಿನಯಿಸಿದ ಅಮೃತಾ ಪ್ರೀತಂ ಅವರ ಬದುಕನ್ನು ಆಧರಿಸಿದ ಏಕವ್ಯಕ್ತಿ ರಂಗಪ್ರಯೋಗ “ಮೈ ತೆನ್ನು ಫಿರ್ಮಿಲಾಂಗಿ" ಹಲವಾರು ಪ್ರದರ್ಶನಗಳನ್ನು ಕಂಡಿದೆ.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ