Advertisement
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ ಪ್ರವಾಸ ಸರಣಿ “ಸಾಗುತ ದೂರ ದೂರ…” ಇಂದಿನಿಂದ

ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ ಪ್ರವಾಸ ಸರಣಿ “ಸಾಗುತ ದೂರ ದೂರ…” ಇಂದಿನಿಂದ

ನಡುನಡುವೆ ನಗುವಿನ ಅಲೆಗಳ ವಿನಿಮಯವಾಗಿದ್ದಷ್ಟೇ ನನಗೆ ಗೊತ್ತು.  ಹತ್ತಾರು ಸಿಗಡಿಗಳು, ಸ್ವಲ್ಪ ಸ್ವಲ್ಪವೇ ಪುಡಿ ಮೀನುಗಳೊಂದಿಗೆ ಮರಳುವ ಧಾವಂತದಲ್ಲಿದ್ದರು. ಆದರೂ ನಾಲ್ಕಾರು ಮೀನುಗಳನ್ನೂ ನಮಗೂ ಕಟ್ಟಿಕೊಡಲು ಬಂದರು! ನಾವು ಬೇಡವೆಂದಿದ್ದಕ್ಕೆ ಬೇಸರಿಸಿಕೊಂಡರು. ನಾಲ್ಕಾರು ಸಿಗಡಿಗಳ ತೋರಿಸಿ ಕುಶಿ ಪಟ್ಟ. ಕಡಲ ಕಿನಾರೆಗೆ ಬಡಿದು ಬಡಿದೂ ಸವೆದ ಚಪ್ಪಲಿ ಹಾಕಿ ಹೊರಟಾಗ ಮನದ ಕರಳು ಚುರುಕ್‌ ಎಂದಿತು. ಭೈರವಿ ರಾಗದ ಆಲಾಪದಂತೆ ಭಾಸವಾದ ಅಲೆಗಳು ಅವಳ ಕಾಲಂದುಗೆಗೆ ಮತ್ತೆ ಮತ್ತೆ ಮುತ್ತಿಕ್ಕುತಾ ಖುಷಿಯಲ್ಲಿ ಮರಳುತ್ತಲಿದ್ದವು.
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ ಪ್ರವಾಸ ಸರಣಿ “ಸಾಗುತ ದೂರ ದೂರ…” ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

ತಿಲಮಿಟ್ಟಿಯ ತೀರದಲಿ

      ಬಾವುಟ ಹೊತ್ತ ಯಾವುದೋ ದೋಣಿ ಕಾರವಾರದ ದಡವ ತಡುವಲು ದೂರದಲಿ ಬರುತಲಿತ್ತು. ದಂಪತಿಗಳಿಬ್ಬರ ಜೊತೆ ಇನ್ನಿಬ್ಬರು ಸೇರಿ ಮತ್ತೊಂದು ದೋಣಿಯ ದಡಕ್ಕೆ ಎಳೆಯುತ್ತಿದ್ದರು.  ಮತ್ತಿಬ್ಬರು ಬೆಳಗಿನ ಮೀನು ಶಿಖಾರಿಗೆ ಬಲೆ ಸರಿಪಡಿಸುತ್ತಿದ್ದರು. ಮರಳ ಮೇಲೆ ಚೆಲ್ಲಿದ ಹಳದಿ ಬೆಳಕು. ಸಮುದ್ರದ ನೀಲಿ ಕುಡಿದು ಕುಡಿ ಒಡೆದ ಆಕಾಶ. ಗಾಳಿ ತೆಕ್ಕೆಗೆ ಸೇರಿದ  ತೆಂಗಿನ ಗರಿಗಳ ಓಲಾಟದ ನಡುವೆ ಹರಿದ ನೇರ ರಸ್ತೆ. ಕಾರೊಳಗೆ ನುಗ್ಗುವ ಕಡಲ್ಗಾಳಿ. ಹಾರುವ ಮರಳಿನ ಕಣ. ಸೂರ್ಯನಾಗಲೇ ದಿನವಿಡೀ ದುಡಿದ ಸುಸ್ತು ಕಳೆಯಲು ಅಂಗಿ ಚಡ್ಡಿ ಕಳಚಿ ಕಡಲಿಗಿಳಿದು ಮೀಯುವ ತಯಾರಿಯಲ್ಲಿದ್ದ. ಮುಂಬರಿದಾಗ ದೂರದಿಂದಲೇ ಕಣ್ಣಿಗೆ ಬಿದ್ದ ಸಣ್ಣ ಫಲಕ ʻತಿಲಮಿಟ್ಟಿʼ, ನಮ್ಮನ್ನು ಆಕರ್ಷಿಸಿತು. ಏನಿದೆಂದು ಕೇಳಲೂ ಒಬ್ಬರೂ ಸನಿಹದಲ್ಲಿ ಪತ್ತೆಯಿಲ್ಲ. ಒಂದು ಕಿ.ಮೀ. ಕಳೆದಾಗ ಸಿಕ್ಕ ಮೀನುಗಾರರ ಮನೆಯಲ್ಲಿ ಏನಿದು ತಿಲಮಿಟ್ಟಿ ಎಂದು ಕೇಳಿದೆವು. ಖಾರ್ವಿ ಕೊಂಕಣಿ, ಮರಾಠಿ ಮಿಶ್ರಿತ ಕನ್ನಡದಲಿ ನಾಚಿಕೆಯಿಂದ ಏನೋ ಉಲಿದಳೊಬ್ಬಳು ತ್ರಿಪುರ ಸುಂದರಿ. ನನಗಂತೂ ಅರ್ಥವಾಗಲಿಲ್ಲ. ಮರಾಠಿ ಬಲ್ಲ ಗೆಳೆಯನೊಬ್ಬನಿಗೆ ಅಲ್ಪ ಸ್ವಲ್ಪ ಅರ್ಥವಾಗಿ ಕಡಲ ಕಿನಾರೆಯ ತುದಿಗೆ ಕರೆದೊಯ್ದ. ಕನ್ನಡದ ಅನಂತ ಸಾಧ್ಯತೆಯ ವಿಸ್ತೃತ ಪ್ರಸ್ತುತಿಯೊಂದು ನಮ್ಮೆದುರಿಗೆ ಅನಾವರಣಗೊಂಡು ಹಾಗೋ ಹೀಗೋ ಅರ್ಥೈಸಿ ಕಡಲ ತುದಿಗಿಳಿದಿದ್ದೆವು. ಗುಡ್ಡದಾಟಿ ಆಚೆಗೆ ಹೋಗಬೇಕೆಂಬುದು ಅವಳ ಭಾವವಷ್ಟೇ ನನಗೆ ಅರ್ಥವಾಗಿದ್ದು. ಭಾಷೆಯ ಅನಂತ ಸಾಧ್ಯತೆಯನಿಲ್ಲಿ ಆಕೆ ನಮಗೆ ತೋರಿಸಿಕೊಟ್ಟಿದ್ದಳು. ಅವಳ ಉಚ್ಛಾರ ಎಲ್ಲವೂ ಕನ್ನಡದಂತಿಲ್ಲ.

ದೂರದೂರದಲ್ಲಿ ನಿಂತ ನಡುಗುಡ್ಡೆಗಳು ನಡುವೆ ಸೂರ್ಯ ನಮ್ಮನ್ನೇ ಅಣಕಿಸುತ್ತಾ ಕಡಲಿಗಿಳಿದಿದ್ದ. ಖಾರ್ವಿ ಹೆಂಗಸು ದಾರಿ ತೋರಿದಲ್ಲಿ ಕುಂಬದಂತಹ ಗುಡ್ಡ ತನ್ನ ನೀಳ ಕಾಲುಗಳನ್ನು ಕಡಲಿಗೆ ಚಾಚಿ ಮಲಗಿತ್ತು. ಮಲಗಿದ ಕುಂಬದಂತಹ ಬಸಾಲ್ಟ್‌ ಶಿಲೆಯ ಗುಡ್ಡವೇರಿ ಆಚೆಗೆ ಹೊರಟೆವು.

ಬಸಾಲ್ಟ್‌ ಗುಡ್ಡವೇರಿ

       ತೆಂಗಿನ ಗರಿಗಳ ನಡುವೆ ಜಾಗ ಮಾಡಿಕೊಂಡು ಮರಾಠಿ ಮಿಶ್ರಿತ ಕೊಂಕಣಿ ಕನ್ನಡದ ದಾರಿ ತೋರಿದೆಡೆಗೆ ಓಡಿ ಕಿನಾರೆಗೆ ಜೋಡಿಸಿದ ಕಿರುದಾರಿಯಲಿ ಸಣ್ಣ ಗುಡ್ಡವೇರಿದೆವು. ಜ್ವಾಲಾಮುಖಿ ಉಗುಳಿನಿಂದಾದ ಕಿರುಗುಡ್ಡ ಕಿನಾರೆಗೆ ತಾಕಿಕೊಂಡಿತ್ತು. ಸೂರ್ಯ ಚೆಲ್ಲಿದ ಪ್ರತಿಫಲಿತ ಬೆಳಕಿನಲ್ಲಿ 20 ನಿಮಿಷದ ಏರು ದಾರಿಯಲಿ ಪಯಣ. ಎಲ್ಲಿಗೆ ಹೋಗುತ್ತಿದ್ದೇವೆ ದಾರಿ ಕೊನೆಗೆ ನಮಗೆ ದಕ್ಕುವುದಾದರೂ ಏನು ಎಂಬ ಕಲ್ಪನೆ ಇಲ್ಲದ ನಿರುದ್ಧೀಶ ನಡಿಗೆ. ದಾರಿ, ಕಿನಾರೆ ಎರಡೂ ಆಹ್ಲಾದಕರ. ಅಲ್ಲಲ್ಲಿ ಕೇಸರಿ ಬಾವುಟ ನೆಟ್ಟು ದೂರದ ದೋಣಿಗಳು ಈ ಕಡೆ ಬರದಂತೆ ಪ್ರತಿಬಂದಿಸಿದ್ದರು. ದೂರದಿಂದಲೇ ಲಂಗರು ಹಾಕಿದ ದೋಣಿಯೊಂದು ಕಂಡಿತು. ಪ್ರವಾಸಿಗರೋ ಇರಬೇಕೆಂದುಕೊಂಡು ಹೆಜ್ಜೆ ಮುಂದಿಟ್ಟೆವು.

ಕರಿ ಕಲ್ಲುಗಳ ನಡುವೆ ಜಾಗ ಮಾಡಿಕೊಂಡು ನಡೆದು ತಲುಪುವ ಧಾವಂತದಲ್ಲಿದ್ದೆವು. ಸುತ್ತಲೂ ಕಲ್ಲು ಕುರುಚಲುಗಳ ನಡುವೆ ತುರುಕಿಟ್ಟಂತಹ ಕೆಂಪು ಮಣ್ಣು. ಮಿಲಿಯಾಂತರ ವರ್ಷಗಳ ಕೆಳಗೆ ಜ್ವಾಲಾಮುಖಿಯಿಂದ ರೂಪುಗೊಂಡ ಕಲ್ಲುಗಳು ಭೂಮಿಯ ವಿವರವನ್ನರಹುತ್ತದೆ. ಇಲ್ಲಿನ ಬಂಡೆಗಳು ಭೂ ಸಂರಚನೆಯ, ಭೂ ಖಂಡಗಳ ಚಲನೆಯ ವಿಸ್ತೃತ ವಿವರದ ಪಟ್ಟಿಯಂತೆ ಸಂಶೋಧಕರಿಗೆ ವಿವರಿಸುತ್ತವೆ. ಬಸಾಲ್ಟ ಶಿಲೆಯ ರೂಪಾಂತರದ ಕತೆಯನ್ನೂ ಅರಹುತ್ತದೆ.

ಕರಿ ಸುಂದರಿಯ ಬೆನ್ನು ಬಿದ್ದು

ಕಾರವಾರ ಮತ್ತು ಗೋವಾದ ಕಿನಾರೆಯಲ್ಲಿ ಅಡ್ಡಾಡುತ್ತಿದ್ದಾಗ ಕಂಡ ಬೋರ್ಡಿನೆಡೆಗೆ ಸೆಳೆದ ವಿಚಿತ್ರ ಸೆಳೆತ ಇಲ್ಲಿಗೆ ಎಳೆದುಕೊಂಡು ಬಂದಿತ್ತು. ಕಾರವಾರದ ಟ್ಯಾಗೋರ್ ಬೀಚಿನಿಂದ ಕೇವಲ 20 ನಿಮಿಷದ ಹಾದಿ!

ಬೆಟ್ಟವಿಳಿಯುತ್ತಲೇ ಅಲ್ಲಿಬ್ಬರು ದಂಪತಿಗಳು ಕಾಣಸಿಕ್ಕರು. ಪ್ರವಾಸಿಗರಿರಬೇಕೆಂದು ಕೊಂಡೆ. ಸನಿಹ ಬರುತ್ತಲೇ ಸಂಜೆ ಮೀನುಗಾರಿಕೆ ಮಾಡಿ ಮರಳಿದ ಮೀನುಗಾರರೆಂದು ತಿಳಿಯಿತು. ಆಕೆ, ಆತ ಮತ್ತು ಕಡಲಷ್ಟೇ ಅಲ್ಲಿ. ಅವರ ನಡುವೆ ಅನೂಹ್ಯ ಮಾತುಕತೆಯೊಂದು ನಿರ್ಲಿಪ್ತ ಏಕಾಂತದ ಆ ಘಳಿಗೆಯಲಿ ಅಲ್ಲಿ ನಡೆಯುತ್ತಲಿತ್ತು. ಅಲೆಗಳ ಮೊರೆತ. ಮೌನವೂ ಸಹಾ ಸಹಜ ಮಾತಂತೆ ಭಾಸ. ಮಹಾ ಧ್ಯಾನದಂತೆ ಮೀನನ್ನು ಬಲೆಯಿಂದ ಬಿಡಿಸುತ್ತಾ ಇರುವ ಇವರು ಬದುಕಿನ ಸಿಕ್ಕು ಬಿಡಿಸುವವರಂತೆ ಕಂಡರು! ಮರಾಠಿ ಮಿಶ್ರಿತ ಕೊಂಕಣಿಯಲ್ಲಿ ಏನೋ ಮಾತನಾಡುತ್ತಿದ್ದರು.

ದಂಡೆಗೆ ಬಡಿ ಬಡಿದು ತಮ್ಮನ್ನು ಮಾತಾಡಿಸಲೋ ಎಂಬಂತೆ ಬಂದು ಹೋಗುತ್ತಿದ್ದ ಅಲೆಗಳ ಮುತ್ತಿಗೆ ವಿಚಲಿತರಾಗದೆ ಮೀನು ಬಿಡಿಸುವುದರಲ್ಲೇ ತಲ್ಲೀನ. ಮೂರು ಮತ್ತೊಂದು ಮೀನು ಬಿಡಿಸುತ್ತಾ ಬದುಕಿನ ಸಿಕ್ಕುಗಳಲ್ಲಿ ಸಿಕ್ಕಿ ಹಾಕಿಕೊಂಡಂತೆನಿಸಿ ವಿಷಾದ ಕಾಡಿತು.

ಅಚಾನಕ್‌ ಆಗಿ ಸಿಕ್ಕ ಕರಿ ಸುಂದರಿ

ಸಹಸ್ರ ಮಾನದಿಂದ ಬೇಸರಿಸದೇ ಬಡಿದ ಅಲೆಗಳು ಕರಿ ಬಂಡೆಗಳನ್ನು ಗೀಚುತ್ತಾ ತನ್ನೊಲವ ತೋರುತ್ತಾ ಬಂಡೆಗಳನ್ನು ಖಾಲಿ ಮಾಡುತಲಿದ್ದವು!  ಹೊಸತೊಂದನು ಸಾಧ್ಯವಾಗಿಸುತಲಿದ್ದವು. ತಿಲಮಿಟ್ಟಿಯು ಕರಿ ಮುರುಳ ಕಿನಾರೆಗೆ ಬಡಿದ ಅಲೆಗಳಿಂದ ಸೃಷ್ಟಿಯಾಗಿತ್ತು. ಕರಿ ಮರಳ ಕಿನಾರೆಯ ಗುಟ್ಟದು! ತಿಲ ಎಂದರೆ ಎಳ್ಳು ಮಿಟ್ಟಿ ಎಂದರೆ ಮಣ್ಣು. ತಿಲಮಿಟ್ಟಿ ಎಂದರೆ ಕರಿ ಮಣ್ಣ ಕಿನಾರೆ. ಯಾವ ಅಲಂಕಾರ ಎಂದು ಮಾತ್ರ ಕೇಳಬೇಡಿ!

ಭಾರತದಲ್ಲಿ ಒಟ್ಟು ೧೦ ಕರಿ ಮಣ್ಣ ಕಿನಾರೆಗಳಿವೆ. ಅವುಗಳಲ್ಲಿ ತಿಲ ಮಿಟ್ಟಿಯು ಒಂದು. ಅನನ್ಯವಾದ ಕರ್ನಾಟಕದ ಕರಿ ಮರಳ ಕಿನಾರೆಯಾಗಿ ಕಂಗೊಳಿಸುತಲಿದೆ. ಇದು ಜ್ವಾಲಾಮುಖಿ ಸ್ಪೋಟದಿಂದಾದ ಬಸಾಲ್ಟ್‌ ಶಿಲೆ ಕರಗಿ ಉಂಟಾದ ಕಿನಾರೆಯಾಗಿದೆ. ಕಿನಾರೆಯ ಸುತ್ತಲೂ ಬಸಾಲ್ಟ್‌ ಶಿಲೆಗಳದೇ ಕಾರುಬಾರು.

ಅಲೆ ಎಂಬ ಒಲವ ದೋಣಿ ಏರಿ

ಇನ್ನೊಬ್ಬರಿಗಾಗಿ ತಾನು ಖಾಲಿಯಾಗುವುದೇ ಒಲವಲ್ಲವೇ? ಈ ಜಗದ ಜಗುಲಿಯಲಿ ಅದು ಸಾಧ್ಯವೇ? ಎಂಬ ಪ್ರಶ್ನೆಯೊಂದು ನನ್ನ ಮನಪಟಲದಲ್ಲಿ ಎದ್ದಿತು.  ಹೊಸತೊಂದನು ಸೃಷ್ಟಿಸಲು ಸವೆಯದೇ ಬೇರೆ ವಿಧಿಯಿಲ್ಲ ಎಂದು ಸಾರಿ ಸಾರಿ ಹೇಳುತಲಿದೆ ಎನಿಸುತ್ತಿತ್ತು. ಸವಕಲಾಗುವುದರಲ್ಲೂ ಸಂತೋಷವಿದೆ ಎಂಬ ಭಾವ ಉಕ್ಕುಕ್ಕಿ ತೆರೆಯಂತೆ ಮನದ ಕಡಲಿಗಪ್ಪಳಿಸುತ್ತಲೇ ಇದೆ. ತಿಲ ಮಿಟ್ಟಿಯ ನೆನಪಿನಂತೆ.

ಅವನ ಕಣ್ಣ ಪಾಪಿಯಲ್ಲಿನ ಸೂರ್ಯ ಕಂತುತಲಿದ್ದ. ಭವದ ಬವಣೆ ತೀರಿಸಿತೇ ಕಡಲು. ಬೆಲೆಯೇ ಇಲ್ಲದ ಮೀನುಗಳ ಸಂಗಡ ಮೀನಾರಿಸುತ್ತಾ ತಿಲಮಿಟ್ಟಿಯ ದಡದಲ್ಲಿ ಬದುಕಿನ ನೌಕೆಗೆ ಹುಟ್ಟು ಹಾಕುತಿರುವ ತೀರ ಸಿಗದ ಜೋಡಿ! ಅಪ್ಪಟ ಕೊಂಕಣಿ ಮಿಶ್ರಿತ ಮರಾಠಿಯಲ್ಲಿ ಸ್ನೇಹಿತನ ಜೊತೆ ಮಾತೆಗಿಳಿದರು! ನಡುನಡುವೆ ನಗುವಿನ ಅಲೆಗಳ ವಿನಿಮಯವಾಗಿದ್ದಷ್ಟೇ ನನಗೆ ಗೊತ್ತು.  ಹತ್ತಾರು ಸಿಗಡಿಗಳು, ಸ್ವಲ್ಪ ಸ್ವಲ್ಪವೇ ಪುಡಿ ಮೀನುಗಳೊಂದಿಗೆ ಮರಳುವ ಧಾವಂತದಲ್ಲಿದ್ದರು. ಆದರೂ ನಾಲ್ಕಾರು ಮೀನುಗಳನ್ನೂ ನಮಗೂ ಕಟ್ಟಿಕೊಡಲು ಬಂದರು! ನಾವು ಬೇಡವೆಂದಿದ್ದಕ್ಕೆ ಬೇಸರಿಸಿಕೊಂಡರು. ನಾಲ್ಕಾರು ಸಿಗಡಿಗಳ ತೋರಿಸಿ ಕುಶಿ ಪಟ್ಟ. ಕಡಲ ಕಿನಾರೆಗೆ ಬಡಿದು ಬಡಿದೂ ಸವೆದ ಚಪ್ಪಲಿ ಹಾಕಿ ಹೊರಟಾಗ ಮನದ ಕರಳು ಚುರುಕ್‌ ಎಂದಿತು. ಬೈರವಿ ರಾಗದ ಆಲಾಪದಂತೆ ಭಾಸವಾದ ಅಲೆಗಳು ಅವಳ ಕಾಲಂದುಗೆಗೆ ಮತ್ತೆ ಮತ್ತೆ ಮುತ್ತಿಕ್ಕುತಾ ಖುಷಿಯಲ್ಲಿ ಮರಳುತ್ತಲಿದ್ದವು.

ಕೊನೆಯ ತುತ್ತು

ಇಂತಹ ವಿಶಿಷ್ಟ ಕಿನಾರೆಯಲ್ಲಿ ಸಿಕ್ಕ ಅಪರೂಪದ ಜೋಡಿಗಳ ನಗು, ಹಾಸ್ಯ, ಬೆರಗು, ಬೇಸರವಿಲ್ಲದ ಅವರ ನಿರ್ಮಲ ಮನ ನನ್ನೆದೆಯ ಆಲ್ಬಂನಲ್ಲಿ ಸದಾ ಜೀವಂತವಾಗಿ ಒಂದು ವಿಶಿಷ್ಟ ಪುಟವಾಗಿ ಸೇರ್ಪಡೆಗೊಂಡಿತು. ಕಡಲು ಕಾಣಲು ಬಂದ ಪ್ರವಾಸಿಗರೆಸೆದ ಕಸವನ್ನೆಲ್ಲಾ ತನ್ನೊಡಲಿನಿಂದ ಕಡಲು ದಡಕ್ಕೆ ಮರಳಿಸಿತ್ತು. ಕಡಲ ಬದುಕು ಕದಡದಂತೆ ಬದುಕಲು ಎಂದು ನಾವು ಕಲಿವೆವೋ? ವಿಧಿ ಲಿಖಿತದ ಅಲೆಯೊಂದು ನಮ್ಮ ಕಾಲಿಗೆ ಸೋಕಿ ಕೇವಲ ನೆನಪನ್ನು ಮಾತ್ರ ಉಳಿಸಿ ಸರ್ವವನೂ ಸ್ವಚ್ಛಗೊಳಿಸಿ ಕಡಲಿಗಿಳಿಯಿತು.

(ಫೋಟೋಗಳು: ಲೇಖಕರವು)

About The Author

ಶ್ರೀಧರ್‌ ಎಸ್.‌ ಸಿದ್ದಾಪುರ

ಶ್ರೀಧರ್‌ ಎಸ್.‌ ಸಿದ್ದಾಪುರ ವೃತ್ತಿಯಲ್ಲಿ ಶಿಕ್ಷಕರು. ತಿರುಗಾಟ, ಅನ್ವೇಷಣೆ ಒಂದು ಹುಚ್ಚು. ಬರಹ, ಓದು ಅಚ್ಚುಮೆಚ್ಚು. ಹಕ್ಕಿ, ಜೇಡಗಳಲ್ಲಿ ವಿಶೇಷ ಆಸಕ್ತಿ.  “ಅಲೆಮಾರಿಯ ಅಂತರಂಗ” ಇಪ್ಪತ್ತು ವರ್ಷದ ಅಲೆದಾಟ, ಅನುಭವಗಳ ಪ್ರವಾಸ ಕಥನ.

1 Comment

  1. Narayana G

    ಅನುಭವಕ್ಕೆ ದಕ್ಕುವ ಪ್ರಕೃತ್ರಿಕ ಜೀವನದ ಇಣುಕ ನೋಟ

    Reply

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ