ಹಿಂಗ ಒಮ್ಮಿ ನಾನು ನಿಮ್ಮವ್ವ ಆ ದೊಡ್ಡ ಹೊಲಕ್ಕ ರಾಶಿ ಮಾಡಕಂತ ಹೋಗಿದ್ವಿ, ಹೊಲದ್ ದಗದಾ ಅಂದ್ರ ತುಸಾss ಇರತೈತ್ಯನು ಮೈ ಬಗ್ಗಿಸಿ ದುಡದ್ರಷ್ಟss ನೀಗತೈತಿ. ಅವತ್ತು ಮಟ ಮಟ ಮಧ್ಯಾಹ್ನದಾಗ ನಾನು ನಿಮ್ಮವ್ವ ಈ ಮ್ಯಾಗಳಮನಿ ಗಂಗಪ್ಪನ ಹೊಲಕ್ಕ ಆರತಾಸಿನ ದಗದಕ್ಕ ಹೋಗಿದ್ವಿ, ಆಕಿ ಕೂಡ ಅದಾ ನೆಲ್ಲು ಕೊಯ್ಯಾ ಕೆಲಸಕ್ಕಂತ ನಮ್ಮ್ ಜೋಡಿ ಬಂದಿದ್ಲು, ಗಂಗಪ್ಪನ ಹೊಲ ಆ ಮ್ಯಾಗಡಿ ಕಡಿ ಐತ್ಯಲಾ ಆ ದುರ್ಗಮ್ಮನ ಗುಡಿತಾಕ ಅಲ್ಲೆ ಒಂದು ಸಣ್ಣ್ ಹಳ್ಳ ಹರಿತೈತಿ ಅಲಾ ಆ ಹೊಲಕ್ಕೊಗಿದ್ವಿ.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯಲ್ಲಿ ಎರಡನೆಯ ಬರಹ
ಅವತ್ತು ಆಳುಗಳೇ ಇರಲಿಲ್ಲ, ಬಯಲು ಬಯಲಾಗಿದ್ದ ಹೊಲದ ನಡುಕೊಂದು ನೆಲ್ಲಿನ ರಾಶಿ ಯಾರದೊ ಗೋರಿ ಕಂಡಂಗ ಕಾಣತಿತ್ತು, ಹಿಂಗ ನೆಲ್ಲಿನ ರಾಶಿ ಹೊಲದಾಗೈತಂದ್ರ ಅದನ್ನ ಒಬ್ರಲ್ಲ ಇಬ್ರು ಕಾಯ್ದೆ ಕಾಯ್ಬೆಕಾಗ್ತಿರುತ್ತ. ಅತ್ತಿ ಈ ತರ ರಾಶಿ ಕಾಯಾಕ ಹೋಗದಂದ್ರ ಬಲು ಹುರುಪಿಲೆ ಹೋಗ್ತಿದ್ಲು. ರಾತ್ರಿಯೆಲ್ಲಾ ಹೊಲದ ರಾಶಿ ಕಾಯ್ಕ್ಯಂತ ಅಲ್ಲೆ ಮಲಗಾದಂದ್ರ ಆಕಿಗೊಂತರಾ ಖುಷಿ ಅನ್ನಿಸ್ತಿತ್ತು. ಆಗಾಗ ನನ್ನೂ ಕರ್ಕೊಂಡು ಹೊಕ್ಕಿದ್ಲು ಇಬ್ರೂ ರಾಶಿತಾಕ ಮಕ್ಕೊತಿದ್ವಿ. ಹೊಲದಾಗ ಬಟಾ ಬಯಲು ಮ್ಯಾಗ ನಕ್ಷತ್ರ, ಎತ್ತಾಗ ನೋಡಿದ್ರತ್ತಾಗ ನೆಲ್ಲಿನ ಹೊಲ, ರಾಶಿ, ಕಾಲಿಗೆ ಚುಚ್ಚ್ತಿದ್ದ ಕೊಯ್ಲಿ, ಅದ್ರಾಗ ಒಂದೀಟು ಜಾಗ ಮಾಡಿಕ್ಯಂಡು ಮನಿಯಿಂದ ತಗೊಂಡೊಗಿದ್ದ ಬರಕಾ ಹಾಸಿಗ್ಯಂಡು ಮಕ್ಕನಾದಂದ್ರ ಒಂತರಾ ಖುಷಿ ಕೊಡ್ತಿತ್ತು. ಊರಾಗ ಗೆಳತ್ಯಾರ ಜೊತಿ ಆಡಬೇಕಾದ್ರ ಕೊಳ್ಳಿ ದೆವ್ವದ ಬಗ್ಗೆ ಮಾತಾಡ್ತಿದ್ದದ್ದು,
‘ಲೇ…ಹೊಲದಾಗ ರಾತ್ರಿಯೆಲ್ಲಾ ಕೊಳ್ಳಿದೆವ್ವ ಇರ್ತಾವಂತ, ರಾತ್ರಿ ಯಾರ್ ಸಿಗತಾರಲss ಅವ್ರನ್ನ ಗಬಕ್ಕನ ನುಂಗತಾವಂತ’ ಅಂತ ಮಾತಾಡಿದ್ದೆಲ್ಲ ನೆನಪಾಗಿ, ಅತ್ತಿ ಸೆರಗನ್ನ ಮುಖದ ಮ್ಯಾಗ ಆಕ್ಯಂದು ಆಕಿನ ಗಟ್ಯಾಗಿ ಹಿಡ್ಕಂಡು ಮಕ್ಕೊತಿದ್ದೆ. ಹಿಂಗ್ ಹೆದ್ರಿದಾಗೆಲ್ಲ ಅತ್ತಿ
‘ಏಯ್ ಹಂಗ್ಯಾಕ ಅದ್ರಿಕ್ಯಂತ್ಯಲೇ?
ಇಲ್ಲೇನ್ ಹುಲಿ ಅದಾವ… ಕಲ್ಡಿ ಅದಾವ?’ ಅಂತ ಜಬರಸ್ತಿದ್ಲು.

‘ಯತ್ತಿsss.. ಇಲ್ಲಿ ರಾತ್ರಿ ಕೊಳ್ಳಿ ದೆವ್ವ ಬರ್ತಾವಂತ ಮನಶ್ಯಾರ್ನ ನುಂಗತಾವಂತಲಂಗೆ ಹೌದನು?’ ನನ್ನ ಮುಖ ನೋಡಿದ ಅತ್ತಿ
‘ಏಯ್ ಸುಂಕ್ಯ ಮಕ್ಕಾsss ನೀನ ಊರ್ ಮಡಸ ತಂದು, ಊರಾಗೇನೆನರ ಕತಿ ಕೇಳ್ತಿ ಇಲ್ಲಿ ಬಂದ್ ನನ್ನ್ ತಲಿ ತಿಂತಿ. ಕೊಳ್ಳಿದೆವ್ವ ಏನಿಲ್ಲ ಊರಾರೆಲ್ಲ ಸುಮ್ನೆ ಎನೇನರ ಕತಿ ಕಟ್ಟತಾರ ಕೋಡಿ’
‘ಅತ್ತಿ… ಹಂಗಂದ್ರ ಕೊಳ್ಳಿದೆವ್ವ ಮತ್ತೆ ಉಂಚೆಕಟದ ಕತಿ ಸುಳ್ಳನು?’ ಬೆರಗಾದ ಅತ್ತೆ
‘ಅಲಲೇsss ಎಲ್ಲೆಲ್ಲಿ ಕತಿ ಕೇಳಿಕ್ಯಂಬರ್ತ್ಯಲೆ ನೀನ ಸುಬ್ಬಿ!’ ಉಂಚೆಕಟದ ಕತಿ ಯಾರೆಳಿದ್ರು ನಿಂಗ?ʼ ಇಬ್ಬರೂ ಜೋರಾಗಿ ನಕ್ಕ್ವಿ, ನಾ ಅತ್ತಿ ಕಡೆ ಮತ್ತೆ ತಿರಗಿ,
‘ಯವ್ವಾsssಬೇ ಯತಿ! ಉಂಚೆಕಟ ಗಿಡದಮ್ಯಾಗ, ಗಿಡಕ್ಕ ಅಂಟಿಗ್ಯಂದು ಕುಂತಿರುತ್ತಲಂಗೆ, ಅದರ್ತಾಕ ಯಾರನ ಹೋದ್ರ ಅವರ್ ಕುತಿಗಿ ಮ್ಯಾಗ ಎಗರಿ ಅವರ್ ರಕ್ತ ಹೀರತೈತಂತಬೇ!’
ಇನ್ನಷ್ಟು ಜೋರಾಗಿ ನಗ್ತಾ ಅತ್ತಿ,
‘ಉಂಚೆಕಟ ರಕ್ತ ಹೀರತೈತಂತ?!’ ಅಂತ ಮತ್ತೆ ಮತ್ತೆ ಅಂದು ಹೊಟ್ಟಿ ಹಿಡ್ಕೊಂಡು ನಕ್ಕು ನಕ್ಕು ನನ್ನ ಗಲ್ಲ ಹಿಂಡಿ, ಹುಂಚೆಕಟದ ಕತಿ ಭಾರಿ ಐತಿ ಬುಡು ಅನ್ನುತ್ತಾ ಮತ್ತೆ ನಗುತ್ತಾ,
‘ನಿನಗೊಂದು ಕತಿ ನಾ ಹೇಳ್ತಿನ್ ಕೇಳ್ ಈಗ’
‘ಹೌದಾsss ಯಾವ್ ಕತಿ?’ ಅಂತ ಕೇಳಿದ್ದಕ್ಕ
‘ಆಕಿ ಕತಿ’ ಅಂದಳು, ಖುಷಿಯಾದ ನಾನು
‘ಯಾರಬೇ ಆಕಿ?’ ಅಂತ ಕೇಳಿದ್ದಕ್ಕ
‘ಆಕಿ ಯಾರಂದ್ರ… ನೆಲ್ ಬಳ್ಯಾಕಿ ಹೋಲ್ದಾಗ’
‘ಹ್ಮೂಂ ಹೇಳು’
ಅತ್ತಿ ಕತಿ ಹೇಳಾಕ್ ಶುರು ಮಾಡಿದ್ಲು
‘ಒಂದೂರಾಗ ಒಂದು ದೊಡ್ಡ್ ಹೊಲ ಇತ್ತಂತ, ಹೊಲದ ತುಂಬಾ ನೆಲ್ಲು ಬೇಳಿತಿದ್ರಂತ, ಆ ಹೊಲ ನೋಡಾಕ ಎಷ್ಟ್ ಚೆಂದಿತ್ತಂದ್ರ ಎತ್ತಾಗ್ ನೋಡಿದ್ರೂ ಹಸರ್ ಹಸರು, ಸಸಿಮಡಿ ಹಾಕಿ, ಹೊಲದಾಗ ಭತ್ತದ ನಾಟಿ ಮಾಡಿ ಆಮ್ಯಾಗ, ಹೊಲಕ್ಕ ಎಣ್ಣಿ ಹೊಡದು, ಗೊಬ್ಬರ ಹಾಕಿ, ಆವಾಗವಾಗ ಕಸ ಕಿತ್ತಿ, ನೆಲ್ಲು ಬಂದಾವ ಅಂದಾಗ ನೆಲ್ಲು ಕೊಯ್ದು, ರಾಶಿ ಮಾಡಬೊಕಲಾ ಇದಕ್ಕೆಲ್ಲಾ ಹೆಣ್ಣಾಳು ಬೇಕಾತಾವ, ಹಿಂಗss ಆ ದೊಡ್ಡ ಹೊಲದಾಗ ಕೂಡ ನೆಲ್ಲ್ ಬಂದಾಗ ರಾಶಿ ಮಾಡಾಕಂತ ಹೆಣ್ಮಕ್ಕಳು ಗುಂಪು ಕಟಿಗ್ಯಂದು ಬರ್ತಾರ.
ನೆಲ್ಲು ಕೊಯ್ಯಾ ಕೆಲಸ ಬಂದಾಗ ಊರಾಗ ಹೆಣ್ಮಕ್ಕಳದಾ ಸಂಭ್ರಮ ನೋಡ್ಬೊಕು ನೀನು!
ಮುಂಜ್ ಮುಂಜೆಲೆ ಬಡಾsssನ ಎದ್ದು, ರೊಟ್ಟಿ, ಪಲ್ಯ ಅನ್ನ ಮಾಡಿಕ್ಯಂದು, ಮನ್ಯಾಗೆನೂ ಮಾಡಾಕಿಲ್ಲಂದ್ರ ರೊಟ್ಟಿ ಮೆಣಸಿನಕಾಯಿ ಉರದು, ಉಂಚೆಟ್ನಿ ಇಟಗಂದು, ತಲಿಮ್ಯಾಲ್ ಬುತ್ತಿ ಹೊತ್ಗಂಡಾರ ಹೊಂಟ್ ಬಿಡತಾರ, ಹಿಂಗ್ ಹೋಗಾರೆಲ್ಲ ಅವರವರ್ದಾ ಗುಂಪು ಮಾಡಿಕ್ಯಂದು, ಒಬ್ಬಾಕಿನ ಲೀಡರ್ ಮಾಡಿಕ್ಯಂಡು ಎಲ್ಲೆಲ್ಲಿ ಹೊಲದಾಗ ಕೆಲಸ ಬರ್ತಾವ, ಅಲ್ಲಿಗೆಲ್ಲ ಹೊಗ್ತಿದ್ರಂತ, ನೆಲ್ಲು ಬಂದಾಗ ಕೂಡ ಹಿಂಗ ಹೊಕ್ಕಿದ್ರೆಲ್ಲಾರು. ಆ ದೊಡ್ಡ ಹೊಲದಾಗ ನೆಲ್ಲು ಬಂದು ಇನ್ನೇನು, ನೆಲ್ಲು ಕೊಯ್ದು ರಾಶಿ ಮಾಡಬೊಕು ಅಂಬಗಿತ್ತು, ‘ಆಕಿ’ ಅಂತ ಹೇಳಿದ್ನಲಾ ಆಕಿ ಕೂಡ ಹಿಂಗ ನೆಲ್ಲು ಕೊಯ್ಯಾಕಂತ ಹೊಕ್ಕಿದ್ಲು, ಆಕಿಗಿನ್ನ ಅವಾಗ ಮದುವ್ಯಾಗಿತ್ತು ಮನ್ಯಾಗ ಅತ್ತಿ ನಾದ್ನ್ಯಾರೆಲ್ಲ ಸರಿ ಇರಲಾರದಕ್ಕ ದುಡದ್ರ ಹೋಲಕ್ಕನ ಹೋಗ್ಬೊದು, ಮನ್ಯಾಗಿದ್ರ ಇವರದಾ ಮಾತ್ ಕೇಳಾದಾಕೈತಿ ಅಂತ ದಿನಾ ನೆಲ್ಲು ಕೊಯ್ಯಾಕ, ರಾಶಿ ಮಾಡಾಕ ಹೊಕ್ಕಿದ್ಲು ಆಕಿ, ಅದ್ರಿಂದ ಬರಾ ರಕ್ಕಾನೆಲ್ಲ ಗಂಡಗ ಕೊಡಬೊಕಿತ್ತಂತ, ಇನ್ನ ಮಕ್ಕಳಾಗಲಾರದಕ್ಕ ಮನ್ಯಾಗೂ ದಿನಾ ಅಕಿನ ಬೈಯ್ಯಾದು ನೋಡಿ, ಆಕಿ ಬೇಸತ್ತು ಹಿಂಗ್ ನೆಲ್ಲು ಬಳ್ಯಾಕ ಬರ್ತಿದ್ಲು.
ಹಿಂಗ ಒಮ್ಮಿ ನಾನು ನಿಮ್ಮವ್ವ ಆ ದೊಡ್ಡ ಹೊಲಕ್ಕ ರಾಶಿ ಮಾಡಕಂತ ಹೋಗಿದ್ವಿ, ಹೊಲದ್ ದಗದಾ ಅಂದ್ರ ತುಸಾss ಇರತೈತ್ಯನು ಮೈ ಬಗ್ಗಿಸಿ ದುಡದ್ರಷ್ಟss ನೀಗತೈತಿ. ಅವತ್ತು ಮಟ ಮಟ ಮಧ್ಯಾಹ್ನದಾಗ ನಾನು ನಿಮ್ಮವ್ವ ಈ ಮ್ಯಾಗಳಮನಿ ಗಂಗಪ್ಪನ ಹೊಲಕ್ಕ ಆರತಾಸಿನ ದಗದಕ್ಕ ಹೋಗಿದ್ವಿ, ಆಕಿ ಕೂಡ ಅದಾ ನೆಲ್ಲು ಕೊಯ್ಯಾ ಕೆಲಸಕ್ಕಂತ ನಮ್ಮ್ ಜೋಡಿ ಬಂದಿದ್ಲು, ಗಂಗಪ್ಪನ ಹೊಲ ಆ ಮ್ಯಾಗಡಿ ಕಡಿ ಐತ್ಯಲಾ ಆ ದುರ್ಗಮ್ಮನ ಗುಡಿತಾಕ ಅಲ್ಲೆ ಒಂದು ಸಣ್ಣ್ ಹಳ್ಳ ಹರಿತೈತಿ ಅಲಾ ಆ ಹೊಲಕ್ಕೊಗಿದ್ವಿ. ಎಲ್ಲಾ ಹೆಣ್ಣಾಳುಗಳು ನೆಲ್ಲು ಕೊಯ್ಕಂತ, ಮಾತಾಡಿಕ್ಯಂತ ನಕ್ಕಂತ ಆಡಿಕ್ಯಂತ ಕೆಲಸಾ ಸಾಗಿಸಿದ್ವಿ..
ಆಕಿ ಅಂತ ಹೇಳಿದ್ನ್ಯಲಾ ಆಕಿ ನನ್ನ ನೋಡಿದ್ದ ಮುಖ ಅರಳಿಸಿಗ್ಯಂಡು
‘ಬೇ ಲಸಮಮ್ಮಕ್ಕ ಏಸ್ ದಿನಾತಂಗೆ ನಿನ್ನ ನೋಡಿ, ದಗದಾ ಮಾಡಿಕ್ಯಂತ ನನ್ನ ಮರತಬಿಟ್ಟಿ ಬುಡವಾ, ಇವತ್ತ ದಗದಕ್ಕ ಜೊತಿ ಕಲತಿ ನೋಡಂಗೆ’ ಅಂತ ಮಾತಾಡಿಸಿದ್ಲು ಆದ್ರ ಆಕಿ ಮೊದ್ಲು ನೋಡಾಕ ಗುಂಡ್ ಗುಂಡಕ ಇದ್ದಾಕಿ ಈಗ ಮೈಯ್ಯಾಗಿನ್ ಎಲುಬೆಲ್ಲ ಕಾಣುವಂಗ ಆಗಿದ್ಲು, ಆದ್ರ ಆಕಿ ಹೊಲಕ್ಕ ದಗದಕ್ಕ ಬಂದಾಳಂದ್ರ ಅವತ್ತು ಹೊಲ ಎಲ್ಲಾ ಹಾಡು ಕೇಳಾಕ ಕಾಯ್ತಿತ್ತು, ನಾನು ನಿಮ್ಮವ್ವ ಹಾಡ್ ಕಟ್ಟಿ ಹಾಡಿದಂಗ, ಆಕಿನೂ ಚೆಂದ ಹಾಡು ಕಟ್ಟಾಕಿ, ಅವತ್ತು ಜುಲುಮಿ ಮಾಡಿ ಮಾಡಿ ಮತ್ತೊಂದ್ ಪದ ಆಕಿ ಕೈಲೆ ಕಟ್ಟಸಾಕ ನೋಡಿದ್ವಿ ಆದ್ರ ಆಕಿ ಮೊದ್ಲಿದ್ದಷ್ಟು ಹಾಡಾಕ ಹುರುಪು ತೊರಸ್ಲಿಲ್ಲ, ನಾವ್ ಕೇಳಿದ್ದಕ್ಕ ಈ ಪದ ಕಟ್ಟಿದ್ಲು ನಾವು ಆಕಿ ಜೊತಿಗೆ ದನಿ ಗೂಡಿಸಿದ್ವಿ
ಗಿಳಿ ಬರದಾರ ಏನು ಛೆಂದsss
ಬಗಲಕೋಟಿ ಬಾಜು ಬಂದss
ಅದು ನನ್ನ ತವರsss
ಮನಿ ಮುಂದ ಗೆಳತೆವ್ವ …
ಗಿಳಿ ಬರದಾರ ಏನು ಛೆಂದsss
ಬೀಸಾಕ ಕುಂತೀನಿsss
ಕೂಸೈತಿ ತೊಡಿ ಮ್ಯಾಗ
ಬೀಸಣಕಿ ಮುಂದಾss
ಮಗಾ ಮುಂದss ಮಗಾ ಮುಂದss
ಗಿಳಿ ಬರದಾರ ಏನು ಛೆಂದsss
ಬೀಸಣಿಕಿ ಮುಂದss
ಮಗ ಮುಂದ ಆಡಿದರೆss
ಬಂದಾ ಬ್ಯಾಸರಿಕಿss
ಬಯಲಾಗಿ ಬಯಲಾಗಿ
ಗಿಳಿ ಬರದಾರ ಏನು ಛೆಂದsss
ಆಕಳ ಹಿಂಡಿನ್ಯಾಗೆ
ಆಕ್ಯಾಕ ಕುಂತಾಳೇss
ಆಚಾರವಂತೇss
ಗುಣವಂತೆ ಗುಣವಂತೆss
ಗಿಳಿ ಬರದಾರ ಏನು ಛೆಂದsss
ಆಚಾರವಂತೆ
ಗುಣವಂತೆ ಈಕಿss
ಆಕಳ ಬೇಡಿ
ಮುನುದಾಳೆ ಮುನುದಾಳೆ
ಗಿಳಿ ಬರದಾರ ಏನು ಛೆಂದsss
ಚೆಂಡುವಿಗಿನ್ನ ದುಂಡss
ದುಂಡಮ್ಮ ನಿನ್ನ ಮಾರಿss
ಕಂಡ ಕಂಡಲ್ಲೆ
ನಗಬ್ಯಾಡೆ ನಗಬ್ಯಾಡೆss
ಗಿಳಿ ಬರದಾರ ಏನು ಛೆಂದsss
ಕಂಡಲ್ಲೆ ಕಂಡಲ್ಲೆss
ನಗಬ್ಯಾಡೆ ನನ್ನ ಹುಲಿಗೆss
ಗಂಡ ಮಾಡ್ಯಾನ್ಯೇ
ಗವಡಿಕೆss ಗವಡಿಕೆss
ಗಿಳಿ ಬರದಾರ ಏನು ಛೆಂದsss
ನಾಯಿಯ ಕುನ್ನಿಗೆ
ನಲವತ್ತ ಸರಪುಳೆsss
ನಾಡಿ ನನ ಮಗನಾ
ಹುಲಿಬ್ಯಾಟೆ ಹುಲಿಬ್ಯಾಟೆsss
ಗಿಳಿ ಬರದಾರ ಏನು ಛೆಂದsss
ನಾಡಿಗೆ ನನ್ನ ಮಗss
ಹುಲಿಬ್ಯಾಟಿಗೊಂಟಾನೆss
ನಲವತ್ತೊಂದಳ್ಳಿ
ನಡಗ್ಯಾವೆss ನಡಗ್ಯಾವೆss
ಗಿಳಿ ಬರದಾರ ಏನು ಛೆಂದsss
ಎಳ್ಳ ಹೂವಿನ ಸಿರಿ
ಕೊಳ್ಳಾಗೆ ಸಾಮಾನೆss
ಹಳ್ಳಿ ಗೌಡರss
ಮಗಳೇನೆss ಮಗಳೆನೆss
ಗಿಳಿ ಬರದಾರ ಏನು ಛೆಂದsss
ಹಳ್ಳಿ ಗೌಡರ
ಮಗಳೇನೇ ಆಕಿss
ಹಳ್ಳದss ನೀರಾ
ತರುವಾಕಿ ತರುವಾಕಿss
ಗಿಳಿ ಬರದಾರ ಏನು ಛೆಂದsss
ಅಣ್ಣ ತಮ್ಮರ ನ್ಯಾಯ
ನಿನ್ನಿಗೆ ಮೊನ್ನಿಗಿss
ಬಣ್ಣದ ಬಾಗಿಲss
ಎರಡಾಗಿ ಎರಡಾಗಿ
ಗಿಳಿ ಬರದಾರ ಏನು ಛೆಂದsss
ಆಕಿ ಹಾಡು ಕೇಳಿದ್ದಕ್ಕ ಇಡೀ ಹೋಲ ಇನ್ನಷ್ಟು ಹುರುಪಾತು ಮತ್ಯ ನೆಲ್ಲು ಕೊಯ್ಯಾ ಕೆಲಸ ಹೆಂಗ್ ಮುಗಿತ್ಯಂತ ಗೊತ್ತಾಗ್ಲಿಲ್ಲ ಅವತ್ತ್ ಎಲ್ಲಾರೂ ದಗದ ಮುಗದ್ಮ್ಯಾಗ ಬುತ್ತಿ ತಗದು ಊಟ ಮಾಡಾಕಂತ ಒಂದು ದೊಡ್ಡ್ ಪುಟ್ಟಿಯೊಳಾಗ ಎಲ್ಲಾರೂ ತಂದಿದ್ದ ಅನ್ನ, ಪಲ್ಯ, ಗುರೆಳ್ ಪುಡಿ, ಪುಂಡಿ ಪಲ್ಯ, ಹುಂಚೆಟ್ನಿ, ಮಾನೆಕಾಯಿ ಚಟ್ನಿ ಎಲ್ಲಾ ಆ ಬೊಗಾಣ್ಯಾಗ ಹಾಕಿ ಕಲಸಿ ಕೈ ತುತ್ತು ತಿಂದ್ವಿ, ಎಷ್ಟ್ ರುಚಿ ಇತ್ತಂದ್ರ, ಆಕಿ ಹಾಡಿಗೆ, ಈ ಊಟದ್ ನೆಪದಾಗ ದಗದಾ ಮಾಡಿದ್ ದಣಿವು ಓಡಿ ಹೋಗಿತ್ತು.
ಆದ್ರೆ ಆಕಿ ಅವತ್ತು ಯಾಕೊ ಏನೊ ಚಿಂತಿ ಒಳಾಗಿದ್ದಂಗಿದ್ಲು ಮಾತಾಡ್ ಬೇಕಾದ್ರ ನಕ್ಕಂತನಾ ಮಾತಾಡಾಕಿ, ಸ್ವಲ್ಪ ಹೊತ್ತಾದ್ಮ್ಯಾಗ ಸಣ್ಣ ದನಿಲೇ ನನ್ನ ಕಡಿಗೆ ನೋಡಿ
‘ಯಕಾsss ಸ್ವಲ್ಪ ಬರತ್ಯನಂಗೆ
ಎದುಕನು ತಲಿ ಸುತ್ತಿದಂಗ, ಹೊಟ್ಟಿ ಮುರದಂಗಾಗಕತೈತಿ’ ಅಂತ ಹೊಟ್ಟಿ ಹಿಡಕಂಡಾಕಿ ಕುಸದ್ ಕುಂತ್ಲು. ಗಾಬರಿ ಆಗಿ ಅಲ್ಲೆ ಹೊಲದ್ ಬುಡಕಿದ್ದ ದುರ್ಗಮ್ಮನ ಗುಡಿಮುಂದ ಕರಕಂಡೊದ್ವಿ
ಹೊಲದ್ ಕೆಲಸ, ಮನಿ ಕೆಲ್ಸ ಮಾಡಿ ಮಾಡಿ ಬಸುದೊಗಿದ್ದ ಆಕಿ ಮೈಯ್ಯಾಗ ನಿತ್ರಾಣ ಇರಲಿಲ್ಲ, ಎರಡೂ ಕಣ್ಣು ಮ್ಯಾಗ ಕೇಳಾಗ ಮಾಡಿದ್ಲು, ನೋಡ್ ನೋಡ್ತಿದ್ದಂಗ ಆಕಿ ಸೀರಿ ಎಲ್ಲಾ ರಕ್ತಾಗಿ, ರಕ್ತದ ಕಣ್ಣಿ ಹೊರಾಗ್ ಬಿತ್ತು, ಆಕಿ ನಿತ್ರಾಣ ಇಲ್ಲಂದ್ರು ಕಣ್ಣಾಗ ನೀರು ಬಳಾ ಬಾಳಾ ಬಂದ್ವು, ಎನೋ ಕಳ್ಕಂಡಂಗಾಗಿ ಸುಮ್ಮನ ಕುಂತ್ಲು, ನಾನು ನಿಮ್ಮವ್ವ ಆಕಿನ ಹಳ್ಳದ್ ನಡುಕ ಕರ್ಕಂಡೊಗಿ ರಕ್ತಾಗಿದ್ದ ಸೀರಿನ ತೊಳದು, ಆ ರಕ್ತದ ಕಣ್ಣಿನ ಮಣ್ಣಾಗ ಮುಚ್ಚಿ ಅಕಿನ ಕರಕಂಬದ್ವಿ, ಯಾವ್ದೊ ಹಾಡು ಕಳದೊದಂಗ ಆ ಹಳ್ಳದ ದಂಡಿಗೆ ದುರ್ಗಮ್ಮನ ಗುಡಿ ಮುಂದ ಆಕಿ ಮತ್ತೆ ಹಾಡಾಕ ಸುರು ಮಾಡಿದ್ಲು’
ಅತ್ತಿ ಇದನ್ನೆಲ್ಲ ಹೇಳಟ್ಟೊತ್ತಿಗೆ ಕಣ್ಣೆಲ್ಲಾ ನೀರು ತುಂಬಿಕ್ಯಂಡಿತ್ತು, ಅತ್ತಿ ಸೆರಗಿಲೆ ಕಣ್ಣೊರಸಿಗ್ಯಂತ ‘ನಿನಗೆನೆನಾ ಹೇಳಾಕ್ ಹೋಗಿ ಏನೋ ಹೇಳಿದೆ ಅರ್ಥ ಆಗಲಾರದ್ದು’ ಅಂತ ಮತ್ತ ಮುಖ ಸವರಿದ್ಲು, ನಾ ಅತ್ತಿ ಮುಖ ನೋಡಿ
‘ಅತ್ತಿsss ರಕ್ತ ಯಾಕ್ ಬಂತು?’ ಅಂದೆ, ಅತ್ತಿ ನಕ್ಕೊತ
‘ಹಂಗ, ಹೆಣ್ಮಕ್ಕಳು ತಿಂಗಳು ತಿಂಗಳಾನು ಮೈಯ್ಯಾಗಿನ್ ರಕ್ತ ಬಸಿಬೊಕು, ನಿಂಗಿವೆಲ್ಲಾ ಇನ್ನೊಂದ್ ವರ್ಸದಾಗ ಗೊತ್ತಾಕ್ಕಾವ, ಈಗ ಸುಂಕೆ ಮಕ್ಕ, ಇಲ್ಲಂದ್ರ ಕೊಳ್ಳಿ ದೆವ್ವ ಬರುತ್ತ, ಇಲ್ಲಂದ್ರ ಉಂಚೆಕಟನಾದ್ರೂ ಬಂದು ಎಗರತ್ತ’ ಅಂತ ಜೋರಾಗಿ ನಕ್ಕಳು.

ಹೊಲದಾಗ ಗಾಳಿ ಜೋರಾಗಿ ಬೀಸಿ ತಂಪಾಗಿತ್ತು, ಅತ್ತಿನ ಗಟ್ಟಿಯಾಗಿ ಹಿಡ್ಕೊಂಡು ಮಲಗಿದೆ ಆದ್ರ ಆ ಒಂದು ಹುಳ ತಲೆಸುತ್ತ ತಿರಗ್ತಿತ್ತು,
ಆಕಿ ಅಂದ್ರ ಯಾರು?

ಸುವರ್ಣ ಚೆಳ್ಳೂರು ಕೊಪ್ಪಳ ಜಿಲ್ಲೆ ಕಾರಟಗಿ ತಾಲ್ಲೂಕಿನ ಚಳ್ಳೂರಿನವರು. ಈಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಸಂಶೋಧನಾ ವಿದ್ಯಾರ್ಥಿ. ಕಲೆ ಸಾಹಿತ್ಯ ಫೋಟೊಗ್ರಫಿ ಮುಖ್ಯ ಆಸಕ್ತಿಗಳು. ಇವರ ‘ಕಂಬದ ಹಕ್ಕಿ’ ಕಥೆಗೆ ‘ಸಂಗಾತ ಕಥಾ ಪುರಸ್ಕಾರ ‘ (2021), ‘ಕನಕಾಂಬರ’ ಕಥೆಗೆ ಧಾರವಾಡದ ವಿದ್ಯಾವರ್ಧಕ ಸಂಘದಿಂದ ‘ಶ್ರೀಮತಿ ಶಾಂತಾದೇವಿ ಕಣವಿ ಕಥಾ ಪುರಸ್ಕಾರ’ ದೊರಕಿದೆ (2022). ‘ಕನಕಾಂಬರ’ ಹಾಗೂ ‘ಮಾರ್ನಾಮಿ’ ಸಣ್ಣ ಕಥೆಗಳು ToTo Funds the Arts’ India ಅವರು ಕೊಡುವ ಕನ್ನಡ ಸೃಜನಶೀಲ ಬರವಣಿಗೆ (Kannada Creative writing) ವಿಭಾಗದಲ್ಲಿ 2023 ಮತ್ತು 2025 ರಲ್ಲಿ ಅಂತಿಮ ಹಂತಕ್ಕೆ (Short List) ಆಯ್ಕೆ ಆಗಿದೆ. ಇವರ ಬರಹಗಳು ಕೆಲವು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
