ಹೊಸ ಕಾರ್ ಬುಕ್ ಮಾಡಿ ಈ ಕಾರನ್ನು ಎಕ್ಸ್ಚೇಂಜ್‌ನಲ್ಲಿ ಕೊಡುವ ಮಾತುಕತೆ ಆದ ನಂತರ ಮೊದಲಿನ ಲವಲವಿಕೆಯನ್ನು ಈ ಕಾರು ಕಳೆದುಕೊಂಡು ಬಿಟ್ಟಿತು ಅಂತ ಯಾಕೋ ನನ್ನ ಮನಸ್ಸಿಗೆ ತೀವ್ರವಾಗಿ ಅನ್ನಿಸಿತು. ಮರುದಿನ ಕಾರ್ ಸ್ಟಾರ್ಟ್ ಮಾಡುವಾಗ ಇಂಜಿನ್ ಶಬ್ಧ ಬೇರೆಯೇ ತರಹ ಕೇಳಿಸಿದ ಹಾಗಾಯ್ತು. ಏನೋ ಸಮಸ್ಯೆ ಆಗಿದೆ ತೋರಿಸಿಕೊಂಡು ಬನ್ನಿ ಅಂದ ಹೆಂಡತಿ ಮಾತಿಗೆ ಇಲ್ಲ ಅನ್ನಲಾಗದೆ ಸುರತ್ಕಲ್ ಪೇಟೆಗೆ ಒಂದು ಸುತ್ತು ಹಾಕಿ ಬಂದು ಏನಾಗಿಲ್ಲ ಅಂತೆ, ಅಂತ ಸುಳ್ಳು ಹೇಳಿದ್ದರ ಹಿಂದೆ ಕಾರ್ ಮೇಲೆ ನನಗಿದ್ದ ನಂಬಿಕೆಯೇ ಕಾರಣವಾಗಿತ್ತು. ಆದರೆ ಈ ನಂಬಿಕೆಗೆ ತೆರಬೇಕಾದ ಬೆಲೆ ಮಾತ್ರ ಅವತ್ತು ನನಗೆ ಗೊತ್ತಾಗಲಿಲ್ಲ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಏಳನೆಯ ಬರಹ
ಈಗ ಕುಳಿತು ಆಲೋಚಿಸಿದರೆ ನಾನು ಮೊದಲ ಸಲ ನಡೆಯಲು ಹೆಜ್ಜೆ ಎತ್ತಿಟ್ಟದ್ದು ಯಾವಾಗ ಅಂತ ನೆನಪೇ ಆಗುವುದಿಲ್ಲ. ಅದೆಲ್ಲವೂ ಅಮ್ಮನ ನೆನಪಿನಲ್ಲಿಯೇ ಮತ್ತೆಮತ್ತೆ ಮೈದಾಳುವ ನಿಜವಾಗುವ ಸಂಗತಿಗಳು. ತುಂಬು ಕುಟುಂಬದ ಆಗಿನ ದಿನಗಳಲ್ಲಿ ನನ್ನ ಮೊದಲ ಹೆಜ್ಜೆಯನ್ನು ಸಂಭ್ರಮಿಸಲು ಅವರಿಗೆ ಖಂಡಿತಾ ಸಮಯ ಇದ್ದಿರಲಿಕ್ಕಿಲ್ಲ. ಈಗಂತೂ ಬಿಡಿ ನ್ಯೂಕ್ಲಿಯರ್ ಫ್ಯಾಮಿಲಿಗಳು. ಒಂದೋ ಎರಡೋ ಮಕ್ಕಳು. ಹೊಟ್ಟೆಯಲ್ಲಿದ್ದಾಗಲಿಂದ ಹಿಡಿದು ಮಗುವಿನ ಪ್ರತಿ ಚಲನೆಯಲ್ಲೂ ಮೈಕ್ರೋಸ್ಕೋಪ್ ಇಟ್ಟು ಸಂಗತಿಗಳನ್ನು ದಾಖಲಿಸುವ ಕಾಲ. ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತಾ ಸಾಗುವುದೇ ಬದುಕೇನೋ. ನನ್ನ ಕಾಲದವರಿಗೆ ತಮ್ಮ ಬಾಲ್ಯದ ಒಂದು ಫೋಟೋ ಬೇಕಾದರೆ ಹತ್ತನೇ ಕ್ಲಾಸಿನಲ್ಲಿ ತೆಗೆದ ಗ್ರೂಪ್ ಫೋಟೋದಲ್ಲಿಯೇ ಹುಡುಕಬೇಕು ಮಸುಕಾದ ಮುಖಗಳ ನಡುವೆ ಮಸುಕಾದ ನೆನಪುಗಳನ್ನು ಕೆದಕುತ್ತಾ. ಆ ಕ್ಷಣಕ್ಕೆ ಮುಖ್ಯ ಅಂತ ಅನ್ನಿಸುವ ಅದೆಷ್ಟೋ ಕ್ಷಣಗಳು ಕಾಲದ ಗಿರಣಿಯೊಳಗೆ ಪುಡಿಯಾಗಿ ಅದೇ ಆಕಾರದಲ್ಲಿ ಮತ್ತೆ ಕಾಣುವುದಕ್ಕೆ ಸಾಧ್ಯವಾಗುವುದೇ ಇಲ್ಲ.
ಬಹಳ ಸಹಜ ಅನ್ನುವ ರೀತಿಯಲ್ಲಿಯೇ ಅದೆಷ್ಟೋ ಸಂಗತಿಗಳು ನಮ್ಮ ಬದುಕಿನಲ್ಲಿ ಸಂಭವಿಸಿದಷ್ಟೇ ವೇಗವಾಗಿ ಮರೆತೂ ಹೋಗಿರುತ್ತವೆ. ಬಹಳ ಮುಖ್ಯ ಅಂತ ಅನ್ನಿಸುವ ಅದರ ಸ್ಥಾನವನ್ನು ಇನ್ಯಾವುದೋ ಬಂದು ನಮಗೆ ಗೊತ್ತೇ ಆಗದ ಹಾಗೆ ತೆಗೆದುಕೊಂಡಿರುತ್ತದೆ. ಆದರೆ ಇನ್ನು ಕೆಲವು ಸಂಗತಿಗಳಿವೆ ನೋಡಿ, ಅದೆಷ್ಟೇ ಮರೆಯಲು ಯತ್ನಿಸಿದರೂ ಸಹಜವಾಗಿರಲು ಪ್ರಯತ್ನಿಸಿದರೂ ಅದು ತನ್ನ ಅಸ್ತಿತ್ವವನ್ನು ಪದೇಪದೇ ತೋರಿಸುವುದರ ಜೊತೆಯಲ್ಲಿ ನಮ್ಮ ಜೊತೆ ಭಾವನಾತ್ಮಕ ಸಂಬಂಧವನ್ನು ಬೆಸೆಯುತ್ತಲೇ ಇರುತ್ತದೆ.
ಹೀಗೆಲ್ಲಾ ಅನ್ನಿಸಲು ಮುಖ್ಯ ಕಾರಣ ಕಳೆದ ಹದಿಮೂರು ವರ್ಷಗಳಿಂದ ಸದಾಕಾಲ ನನ್ನ ಜೊತೆಯೇ ಇದ್ದ ನನ್ನ ಮೊದಲ ಕಾರು. ಹುಡುಗರಿಗೆ ಟೀನೇಜ್‌ನಲ್ಲಿ ತಾನು ಖರೀದಿಸುವ ಮೊದಲ ಬೈಕ್ ಅಥವಾ ಕಾರು ಯಾವತ್ತೂ ತನ್ನ ಫಸ್ಟ್ ಗರ್ಲ್‌ಫ್ರೆಂಡೇ ಆಗಿರುತ್ತದೆ. ಕಾರು ಕೀ ಕೈಗೆ ಬಂದ ಮೊದಲ ದಿನ ಇಂದಿಗೂ ಚೆನ್ನಾಗಿ ನೆನಪಿರುವುದರಿಂದ ಇದರ ಜೊತೆ ಕಳೆದ ಪ್ರತೀ ಕ್ಷಣಗಳು ಕೂಡಾ ನನ್ನ ಪಾಲಿಗೆ ಆಪ್ತವಾದದ್ದು. ಬದುಕಿನಲ್ಲಿ ಜೊತೆಗೆ ಬದುಕಿರುವ ವ್ಯಕ್ತಿಗಳು ನಮ್ಮನ್ನು ಭಾವನಾತ್ಮಕವಾಗಿ ಕಲಕುವುದು ಮಾತ್ರವಲ್ಲದೇ ಜೀವವಿಲ್ಲದ ವಸ್ತುಗಳು ಕೂಡಾ ಹಲವು ಸಲ ನಮಗೆ ಅತ್ಯಂತ ಪ್ರಿಯವಾಗುವುದು ಅದರ ಜೊತೆಗಿನ ಒಡನಾಟದಿಂದಾಗಿ. ನೆಲದ ಮೇಲೆ ಸುಮ್ಮನೆ ಬಿದ್ದಿರುತ್ತಿದ್ದ ದನ ಹುಲಿ ಕರಡಿ ಜಿಂಕೆಯಂತಹ ಪ್ಲಾಸ್ಟಿಕ್ ಆಟಿಕೆಗಳೆಲ್ಲಾ ಮಗಳು ನಿದ್ದೆಯಿಂದೇಳುತ್ತಲೇ ಜೀವ ಪಡೆಯುವುದು ಸದಾ ಅಚ್ಚರಿ ನನಗೆ! ಕಾರಿನ ವಿಷಯದಲ್ಲಿಯೂ ನನ್ನ ಸಂಬಂಧ ಅದೆಷ್ಟು ಗಾಢವಾಗಿತ್ತು ಅನ್ನುವುದು ಅದರ ವಿದಾಯದ ಕ್ಷಣ ಬಂದಾಗಲೇ ಅರಿವಾದದ್ದು.
ಕಾರು ಕೊಳ್ಳುವುದೆಂದರೆ ಮಧ್ಯಮವರ್ಗ ಕುಟುಂಬದ ಜೀವಮಾನದ ಕನಸು. ತಮ್ಮ ತಿಂಗಳ ಸಂಬಳದಲ್ಲಿಯೇ ಉಳಿತಾಯ ಮಾಡಿಕೊಂಡು ಮೇಲೆ ಸಾಲ ಮಾಡಿಕೊಂಡು ಒಂದು ಮನೆ ಕಟ್ಟುವುದರಲ್ಲಿಯೇ ಸುಸ್ತಾಗಿರುತ್ತಾರೆ. ಅಂಥದ್ರಲ್ಲಿ ಮತ್ತೆ ಕಾರಿನ ಕನಸು ಕಾಣುವುದೆಂದರೆ ಅಪರಾಧವೇ ಅವರ ಪಾಲಿಗೆ. ಒಂದೆರಡು ವರ್ಷ ಕಳೆದು ಒಂಚೂರು ಉಸಿರುಬಿಡುವ ಎಡೆ ಸಿಕ್ಕಿದ ಕೂಡಲೇ ಮತ್ತೆ ಮನಸ್ಸು ಕನಸು ಕಾಣುವ ಮಗುವಾಗುತ್ತದೆ. ಮನೆ ಮುಂದೆ ಒಂದು ಕಾರು ಇದ್ದರೆ ಎಷ್ಟು ಚಂದ ಅಂತ ಅನ್ನಿಸಲು ಶುರುವಾಗುತ್ತದೆ. ಈಗಾಗಲೇ ಅಡ್ಜಸ್ಟ್ ಮಾಡಿ ಮಲಗಿದ್ದ ಹಾಸಿಗೆಯನ್ನು ಮತ್ತೆ ಜಗ್ಗಲಾರಂಭಿಸುತ್ತೇವೆ. ಹಾಸಿಗೆ ಇದ್ದಷ್ಟೇ ಚಾಚಿದ್ದ ಕಾಲನ್ನು ಸ್ವಲ್ಪ ಸ್ವಲ್ಪವೇ ಹೊರಗೆ ಇಟ್ಟು ಒಂದು ಕನಸನ್ನು ಒಳಗೆ ಬಿಟ್ಟುಕೊಳ್ಳುತ್ತೇವೆ.
ನಂಗಂತೂ ಊರೂರು ಸುತ್ತುವ ಖಯಾಲಿ ಇದ್ದದ್ದರಿಂದ ಮನೆಯ ಬದಲಿಗೆ ಮೊದಲು ಕಾರನ್ನು ಆಯ್ಕೆ ಮಾಡಿಕೊಂಡೆ. ಅಲ್ಲಿಂದ ಶುರುವಾದ ಈ ದೀರ್ಘ ಪ್ರಯಾಣ ನನ್ನ ಬದುಕಿನ ಪುಟಕ್ಕೆ ಎಂದಿಗೂ ಮರೆಯಲಾಗದ ನೆನಪುಗಳನ್ನು ಕಟ್ಟಿಕೊಟ್ಟಿದೆ. ಅದೆಷ್ಟು ದಾರಿಗಳು, ಊರುಗಳು, ಪಯಣಗಳು ಈ ಕಾರಿನ ಜೊತೆಯಲ್ಲಿ. ಅದೆಷ್ಟು ಕನಸುಗಳು, ನೆನಪುಗಳು, ಗುರಿಗಳು ಈ ಕಾರಿನ ನೆಪದಲ್ಲಿ. ಹೊಸ ಕಾರು ಚಲಾಯಿಸುತ್ತಾ ನನ್ನ ಹಳ್ಳಿಯ ಮನೆಗೆ ಮೊದಲ ಸಲ ಹೋದಾಗ ಅಪ್ಪನ ಕಣ್ಣಿನಲ್ಲಿ ಕಂಡ ಹೆಮ್ಮೆಯಿದೆ. ಅಮ್ಮನ ಮುಖದಲ್ಲಿ ಕಂಡ ತೃಪ್ತಿಯಿದೆ. ಅವಳ ಮೊದಲ ಭೇಟಿಯ ತಹತಹದಲ್ಲಿ ನೂರನಲವತ್ತು ಸ್ಪೀಡು ಓಡಿಸಿದ ಎದೆಯ ಢವಢವ ಇನ್ನೂ ಹಸಿರಾಗಿದೆ. ಗೇರ್ ಹಾಕುವ ನೆಪದಲ್ಲಿ ತಾಕಿದ ಅವಳ ಬೆರಳುಗಳ ಸ್ಪರ್ಶವಿದೆ. ಸಂಜೆಯ ಮಬ್ಬುಗತ್ತಲಲ್ಲಿ ಏಸಿಯ ಹಿತವಾದ ಚಳಿಯಲ್ಲಿ ಸವಿದ ಅವಳ ಮೊದಲ ಮುತ್ತಿನ ಬಿಸುಪಿದೆ. ಮದುವೆಯ ಮಂಟಪಕ್ಕೆ ಸಿಂಗರಿಸಿದ ಕಾರಿನಿಂದ ಇಳಿದ ನನ್ನ ಗತ್ತಿದೆ. ನಡುರಾತ್ರಿಯಲ್ಲಿ ಅವಳಿಗೆ ಕಾಣಿಸಿದ ಹೆರಿಗೆ ನೋವಿನಲ್ಲಿ ಆಸ್ಪತ್ರೆ ಸೇರಿಸಿದ ಋಣವಿದೆ. ಮಗಳ ಪುಟ್ಟ ಪಾದಗಳು ಮಾಡಿದ ಪ್ರೀತಿಯ ಕಲೆಯಿದೆ. ಮಗನ ತುಂಟಾಟಕ್ಕೆ ಹರಿದ ಸೀಟ್‌ನ ತೆರೆದ ಬಾಯಿ ಇನ್ನೂ ಹಾಗೆಯೆ ಇದೆ. ಒಂದೇ ಎರಡೇ… ಮತ್ತೆ ಮನಸ್ಸು ಮಗುವಾಗುತಿದೆ. ಎಲ್ಲ ನೆನಪಾಗುತಿದೆ.
ಕೈಕೊಟ್ಟು ಹೋದ ಮೊದಲ ಪ್ರೇಮದ ಹಾಗೆ ಯಾವತ್ತೂ ಈ ಕಾರು ನನ್ನನ್ನು ದಾರಿ ಮಧ್ಯದಲ್ಲಿ ಕೈ ಬಿಟ್ಟ ನೆನಪೇ ಇಲ್ಲ. ಅದರ ಬೇಡಿಕೆಗಳ ಪಟ್ಟಿಯೂ ಬಹಳ ಸಣ್ಣದು. ಅದು ಯಾವತ್ತೂ ಕೇಳಿದ್ದು ನನ್ನ ಜೇಬಿಗೆ ಎಟುಕುವಷ್ಟೇ. ಲೋ ಲೆವೆಲ್‌ಗೆ ಬರದಷ್ಟು ಡೀಸಲ್ಲು ಮತ್ತು ವರ್ಷಕ್ಕೊಂದು ಸರ್ವೀಸು ಅದು ಬಿಟ್ಟರೆ ಟೈಯರ್‌ನ ಹೊಟ್ಟೆ ತುಂಬಿಸುವಷ್ಟು ಉಚಿತ ಗಾಳಿ. ಅಷ್ಟು ಬಿಟ್ಟರೆ ಯಾವುದೇ ದುಬಾರಿ ಖರ್ಚು ನನ್ನಿಂದ ಮಾಡಿಸದಷ್ಟು ಮಿತವ್ಯಯಿ ನನ್ನ ಈ ತೇರು. ಮತ್ತೆ ಪ್ರೀತಿಸದೆ ಇರಲು ಹೇಗೆ ಸಾಧ್ಯ?

ಅತಿಯಾಗಿ ಹಚ್ಚಿಕೊಂಡ ಪ್ರತೀ ಸಂಬಂಧವೂ ಶಾಶ್ವತ ಅನ್ನುವ ಭ್ರಮೆಯಲ್ಲಿ ನಾವು ಬದುಕುತ್ತೇವೆ. ಬಹುಶಃ ಪ್ರತೀ ಪ್ರೇಮಕ್ಕೂ ಸಂಬಂಧಕ್ಕೂ ಒಂದು ಎಕ್ಸಪೈರಿ ಡೇಟ್ ಅನ್ನುವುದು ಇದ್ದೇ ಇರುತ್ತದೆ ಅನ್ನುವುದು ಯಾವುದೋ ಒಂದು ಉತ್ಕಟ ಕ್ಷಣದಲ್ಲಿ ಅನ್ನಿಸಿಬಿಡುತ್ತದೆ. ಯಾರೂ ಇಲ್ಲಿ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಅನ್ನುವ ಕುವೆಂಪು ಮಾತಿನ ಹಾಗೆ ಖಾಲಿಯಾದ ಪ್ರತೀ ಸ್ಥಾನವನ್ನು ಆಯಾ ಕಾಲದಲ್ಲಿ ತುಂಬುವವರು ಬಂದೇ ಬರುತ್ತಾರೆ. ಬದಲಾವಣೆ ಜಗದ ನಿಯಮ. ಅಂತಹ ಒಂದು ಕ್ಷಣ ನನ್ನ ಈ ಪ್ರೀತಿಯ ಕಾರಿನ ವಿಷಯದಲ್ಲೂ ಬರುತ್ತದೆ ಅಂತ ಅಂದುಕೊಂಡಿರಲಿಲ್ಲ.
ಯಾವುದೋ ರಾತ್ರಿಯ ಕಾರ್ಯಕ್ರಮ ಮುಗಿಸಿಕೊಂಡು ಇನ್ನೇನು ಮನೆಗೆ ಹೊರಡಬೇಕು ಅನ್ನುವಷ್ಟರಲ್ಲಿ ಅಕಾಲಿಕವಾಗಿ ಗುಡುಗು ಮಿಂಚುಗಳ ಸಹಿತ ಧಾರಾಕಾರವಾದ ಮಳೆ. ಇದು ಬಿಡುವ ಯಾವುದೇ ಸೂಚನೆ ಕಾಣದಾದಾಗ ಮಳೆಯಲ್ಲಿಯೇ ಡ್ರೈವ್ ಮಾಡಿಕೊಂಡು ಹೊರಟೆ. ಕಾರ್ ಖಾಲಿ ಇತ್ತು ಅಂತ ಪಕ್ಕದ ಮನೆಯ ಫ್ಯಾಮಿಲಿಯನ್ನೂ ಕಾರಿನಲ್ಲಿ ಹತ್ತಿಸಿಕೊಂಡಿದ್ದೆ. ಕಾರ್ ಮಳೆಯ ರಸ್ತೆಗೆ ಹೊರಳಿದಾಗ ಮಾತ್ರ ಆವಾಂತರ ಆಗಿಹೋಗಿತ್ತು. ವೈಪರ್ ಎಷ್ಟು ಜೋರಾಗಿ ಹಾಕಿದ್ರೂ ರಸ್ತೆ ಕಾಣುತ್ತಿಲ್ಲ. ಕಾರ್ ಗ್ಲಾಸ್ ಪೂರಾ ಮಸುಕು ಮಸುಕಾಗಿ ಕಣ್ಣಿಗೆ ಪಟ್ಟಿ ಕಟ್ಟಿದ ಹಾಗಾಯ್ತು. ಹೇಗೋ ಸಾವರಿಸಿಕೊಂಡು ಯಾವುದೇ ಆಕ್ಸಿಡೆಂಟ್ ಆಗದೆ ಮನೆಯವರೆಗೆ ಬಂದದ್ದೇ ದೊಡ್ಡ ಸಾಹಸವಾಗಿತ್ತು. ಪಕ್ಕದ ಮನೆಯವರ ಎದುರು ಹೋದ ಮಾನದಿಂದಾಗಿ ಗರಂ ಆದ ಹೆಂಡತಿಯ ಸಿಟ್ಟು ಮತ್ತು ಕಾರ್ ಏಸಿ ಕೈಕೊಟ್ಟ ಬಿಸಿ ಎರಡೂ ಏಕಕಾಲಕ್ಕೆ ನನ್ನನ್ನು ತಟ್ಟಿದ್ದರಿಂದ ಈ ಕಾರು ಮತ್ತೆಂದೂ ಓನರ್ಸ್ ಪ್ರೈಡ್ ಆಗಿ ಉಳಿಯಲಿಲ್ಲ. ಕಾರ್ ಬದಲಿಸುವ ಕುರಿತು ಆವತ್ತೇ ನಡೆದ ಬಿಸಿಬಿಸಿ ಚರ್ಚೆಗಳನ್ನು ಕೇಳಿಸಿಕೊಂಡ ಕಾರು ಸೋತ ಮುಖ ಹೊತ್ತು ಹೊರಗೆ ನಿಂತಿತ್ತು.
ಹೊಸ ಕಾರ್ ಬುಕ್ ಮಾಡಿ ಈ ಕಾರನ್ನು ಎಕ್ಸ್ಚೇಂಜ್‌ನಲ್ಲಿ ಕೊಡುವ ಮಾತುಕತೆ ಆದ ನಂತರ ಮೊದಲಿನ ಲವಲವಿಕೆಯನ್ನು ಈ ಕಾರು ಕಳೆದುಕೊಂಡು ಬಿಟ್ಟಿತು ಅಂತ ಯಾಕೋ ನನ್ನ ಮನಸ್ಸಿಗೆ ತೀವ್ರವಾಗಿ ಅನ್ನಿಸಿತು. ಮರುದಿನ ಕಾರ್ ಸ್ಟಾರ್ಟ್ ಮಾಡುವಾಗ ಇಂಜಿನ್ ಶಬ್ಧ ಬೇರೆಯೇ ತರಹ ಕೇಳಿಸಿದ ಹಾಗಾಯ್ತು. ಏನೋ ಸಮಸ್ಯೆ ಆಗಿದೆ ತೋರಿಸಿಕೊಂಡು ಬನ್ನಿ ಅಂದ ಹೆಂಡತಿ ಮಾತಿಗೆ ಇಲ್ಲ ಅನ್ನಲಾಗದೆ ಸುರತ್ಕಲ್ ಪೇಟೆಗೆ ಒಂದು ಸುತ್ತು ಹಾಕಿ ಬಂದು ಏನಾಗಿಲ್ಲ ಅಂತೆ, ಅಂತ ಸುಳ್ಳು ಹೇಳಿದ್ದರ ಹಿಂದೆ ಕಾರ್ ಮೇಲೆ ನನಗಿದ್ದ ನಂಬಿಕೆಯೇ ಕಾರಣವಾಗಿತ್ತು. ಆದರೆ ಈ ನಂಬಿಕೆಗೆ ತೆರಬೇಕಾದ ಬೆಲೆ ಮಾತ್ರ ಅವತ್ತು ನನಗೆ ಗೊತ್ತಾಗಲಿಲ್ಲ.
ಕ್ರಿಸ್ಮಸ್ ರಜೆಯಲ್ಲಿ ಒಂದು ದಿನದ ಸಣ್ಣ ಟೂರ್ ಮಾಡುವ ಅಂತ ಮೂಡುಬಿದರೆ ಕಾರ್ಕಳ ಕಡೆಗೆ ಹೊರಟೆ. ಬಹುಶಃ ಈ ಕಾರ್‌ನಲ್ಲಿ ನಾವು ಮಾಡುವ ಕೊನೆಯ ಟೂರ್ ಅನ್ನುವ ಭಾವ ಹುಟ್ಟಿದ್ದೇ ಪ್ರಯಾಣಕ್ಕೆ ವಿಶೇಷ ಮಹತ್ವ ಬಂದಿತ್ತು. ಸಾವಿರ ಕಂಬದ ಬಸದಿ, ಕೆರೆ ಬಸದಿ, ಗೊಮ್ಮಟ ಬೆಟ್ಟ ಎಲ್ಲವನ್ನೂ ನೋಡಿ ಹಿಂದಿರುಗುವ ಹಾದಿಯಲ್ಲಿ ನಂದಳಿಕೆಯಲ್ಲಿ ಊಟಕ್ಕೆ ನಿಲ್ಲಿಸುವ ತನಕ ಕಾರು ಬಿಡುತ್ತಿದ್ದ ಏದುಸಿರು ನನ್ನ ಗಮನಕ್ಕೆ ಬರಲಿಲ್ಲ. ನಮ್ಮ ಆನಂದದ ಕ್ಷಣಗಳಲ್ಲಿ ನಾವು ಮುಳುಗಿರುವಾಗ ಲೋಕದ ನೋವು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಗಾಯಗೊಂಡ ಕುದುರೆಗೆ ಮುಂದೆ ಹೆಜ್ಜೆ ಹಾಕಲು ಮತ್ತಷ್ಟು ಚಾಟಿ ಏಟು ಬೀಳುವ ಹಾಗೆ ಅದು ನೀಡುತ್ತಿದ್ದ ಯಾವ ಸಿಗ್ನಲನ್ನೂ ಗಮನಿಸದೆ ಆಕ್ಸಿಲರೇಟರ್ ಒತ್ತುತ್ತಲೇ ಇದ್ದೆ.
“ನೋಡು ಇದು ಕನ್ನಡದ ಪ್ರಸಿದ್ಧ ಕವಿ ನವೋದಯದ ಮುಂಗೋಳಿ ಅಂತ ಕರೆಸಿಕೊಂಡ ಮುದ್ದಣನ ಊರು” ಅಂತ ಸಂಧ್ಯಾಳ ಜೊತೆ ಮುದ್ದಣನ ಕಾವ್ಯ, ಮುದ್ದಣ ಮನೋರಮೆಯ ಸಲ್ಲಾಪ ಎಲ್ಲವನ್ನೂ ಊಟ ಮಾಡುವಾಗ ಹೇಳುತ್ತಾ “ಅಲ್ಲ, ಇಲ್ಲೊಂದು ಪದ್ಯ ಓದದಿದ್ರೆ ಕವಿ ಹೃದಯಕ್ಕೆ ಬೇಸರ ಆಗಲ್ವಾ” ಅಂತ ಬೆಳಗ್ಗೆ ಬರೆದಿದ್ದ ಹೊಚ್ಚ ಹೊಸ ಪದ್ಯವನ್ನು ಮೊಬೈಲ್ ನಲ್ಲಿ ಹುಡುಕಾಡ ತೊಡಗಿದೆ. ಕಾವ್ಯದ ವಿಷಯ ಬಂದಾಗ ಎದುರಿನವರಿಗೆ ಆಸಕ್ತಿ ಇದೆಯೋ ಇಲ್ಲವೋ ಅನ್ನುವುದನ್ನು ಕೂಡಾ ಯೋಚಿಸುವ ಗೋಜಿಗೆ ಹೋಗದೇ ಹೇಳುತ್ತಾ ಹೋಗುವುದು ನನ್ನ ಕೆಟ್ಟ ಅಭ್ಯಾಸ ಅನ್ನುವುದು ಅವಳಿಗೆ ಗೊತ್ತಿದೆ. ಆದರೆ ಈ ಸಲ ಮಾತ್ರ ಅವಳಿಗೆ ನನ್ನ ಕಾವ್ಯದ ಅತಿ ಉತ್ಸಾಹವನ್ನು ಭಂಗ ಮಾಡುವ ಆಯುಧ ನನ್ನ ಮಾತಿನಲ್ಲಿಯೇ ಸಿಕ್ಕಿದ ಹಾಗಾಗಿತ್ತು. “ಸಾಕು ನಿಲ್ಲಿಸ್ರೀ ನಿಮ್ಮ ಪದ್ಯ. ಮುದ್ದಣನನಂತಹ ಕವಿಯನ್ನೆ ಅವನ ಹೆಂಡತಿ ಪದ್ಯಂ ವಧ್ಯಂ ಗದ್ಯಂ ಹೃದ್ಯಂ ಅಂತ ಹೇಳಿ ನಿನ್ನ ಪದ್ಯದ ಸಹವಾಸ ಬೇಡ, ಹೇಳೋದಾದ್ರೆ ಕತೆ ಹೇಳು ಅಂತ ಹೇಳಿರುವಾಗ ನಿಮ್ಮದೇನ್ರಿ ಗೋಳು” ಅಂತ ನನ್ನ ಪದ್ಯಕ್ಕೆ ಸಡನ್ ಆಗಿ ಬ್ರೇಕ್ ಹಾಕಿದ್ಲು.
ಕಾವ್ಯ ವಾಚನ ಫಲಿಸದ ದುಗುಡದಲ್ಲಿಯೇ ಊಟ ಮುಗಿಸಿ ಮುದ್ದಣನಿಗೊಂದು ನಮಸ್ಕಾರ ಮಾಡಿ ಕಾರು ಚಲಾಯಿಸಿಕೊಂಡು ಸ್ವಲ್ಪವೇ ದೂರ ಬಂದಿದ್ದೆ. ಸ್ಪೀಡಿನ ಟಾಪ್ ಗೇರ್ ಹಾಕುವ ಮೊದಲೇ ಮುದರಂಗಡಿ ತಿರುವಿನ ರಸ್ತೆ ಮಧ್ಯದಲ್ಲಿ ಕಾರ್ ಸಡನ್ ಆಗಿ ನಿಂತುಬಿಟ್ಟಿತು. ನೀರು ಕಂಡ ಕುದುರೆ ಎಷ್ಟು ಏಟು ಕೊಟ್ಟರೂ ಮುಂದೆ ಹೆಜ್ಜೆ ಇಡದ ಹಾಗೆ ಏನು ಮಾಡಿದರೂ ಕಾರು ಸ್ಟಾರ್ಟ್ ಆಗಲೇ ಇಲ್ಲ. ಸಂಧ್ಯಾ ಮತ್ತು ಮಕ್ಕಳನ್ನು ಇಳಿಸಿ ಕಾರನ್ನು ಏನೇನೋ ಕಸರತ್ತು ಮಾಡಿ ಸ್ವಲ್ಪ ಬದಿಗೆ ನಿಲ್ಲಿಸಿದೆ. ನಾನೂ ಇಳಿದು ಬಂದು ಮಾತಾಡುವ ಮೊದಲೇ “ಮೊದ್ಲೇ ಹೇಳಿದ್ದೆ ನಾನು ಈ ಕಾರ್ ನಲ್ಲಿ ಟೂರ್ ಹೋಗೋದು ಬೇಡ ಅಂತ. ನನ್ನ ಮಾತು ಯಾವತ್ತು ಕೇಳ್ತಿರಾ ನೀವು? ಮೊನ್ನೆ ಈ ಕಾರ್ ಏನೋ ಒಂಥರಾ ಶಬ್ದ ಮಾಡುವಾಗ್ಲೇ ಹೇಳಿದ್ದೆ. ಏನೋ ಸಮಸ್ಯೆ ಇದೆ ಅಂತ. ತೋರಿಸಿದ್ರಲ್ವಾ ಮತ್ತೆ ಯಾಕೆ ಹೀಗಾಯ್ತು? ಏನಂತ ಚೆಕ್ ಮಾಡಿದ್ರು ಅವ್ರು? ಯಾರಿಗೆ ಅಂದು ಏನ್ ಪ್ರಯೋಜನ. ನೀವು ಸರಿ ಇದ್ದಿದ್ರೆ ಎಲ್ಲವೂ ಸರಿ ಇರ್ತಿತ್ತು” ಅಂತ ನನ್ನ ಮುಖಕ್ಕೆ ಮಂಗಳಾರತಿ ಬೆಳಗುತ್ತಿದ್ದಾಗ ಅವಳ ಮೂಡ್ ಇನ್ನೂ ಕೆಟ್ರೆ ಕಷ್ಟ ಅನ್ನುವ ನನ್ನ ಅನುಭವ ಕಿವಿಯಲ್ಲಿ ಹೇಳಿದಂತಾಗಿ “ಅಲ್ವೇ ನಿನ್ನ ನಾಲಗೆಯಲ್ಲೇನಾದ್ರೂ ಮಚ್ಚೆ ಇದ್ಯಾ? ಹೇಗೆ ಅದು ಹೇಳಿದ ಹಾಗೆ ಆಗುತ್ತೆ” ಅಂತ ಅವಳ ಆರನೇ ಸೆನ್ಸನ್ನು ಹೊಗಳಿದ ನನ್ನ ಟೈಂಸೆನ್ಸ್ ಅನ್ನು ಮನಸ್ಸಿನಲ್ಲಿಯೇ ಮೆಚ್ಚಿದೆ. ಗೊಮ್ಮಟ ಬೆಟ್ಟದ ಮೇಲೆ ಸಧ್ಯಕ್ಕೆ ಕಾರು ಕೈಕೊಟ್ಟಿಲ್ಲ ಅಂತ ಆ ಆತಂಕದಲ್ಲೂ ಗೊಮ್ಮಟೇಶ್ವರನಿಗೆ ಕೈಮುಗಿದೆ.

ಅವಳ ಮುಖದಲ್ಲಿ ಸಮಾಧಾನ ಇಣುಕತೊಡಗಿದಾಗ ತಡಮಾಡದೆ ಪಕ್ಕದಲ್ಲಿದ್ದ ಗೂಡಂಗಡಿಗೆ ಹೋಗಿ ವಿಚಾರಿಸಿ ಕಾರ್ ಗ್ಯಾರೇಜ್ ನಂಬರ್ ಪಡದುಕೊಂಡೆ. ಹೆಂಡತಿ ಮಕ್ಕಳನ್ನು ಬಸ್ ಹತ್ತಿಸಿ ಕಾರ್ ಜೊತೆಯಲ್ಲಿ ಕಾರ್ ಗ್ಯಾರೇಜ್‌ಗೆ ಬಂದು ಕುಳಿತೆ. ಮತ್ತೆ ಕಾರು ಜೊತೆಗಿನ ನನ್ನ ಬದುಕಿನ ಪ್ರತೀ ಕ್ಷಣಗಳು ನೆನಪಿನಾಳದಿಂದ ಸುರುಳಿ ಬಿಚ್ಚತೊಡಗಿದವು. ಹೌದಲ್ವಾ, ಯಾವತ್ತೂ ಈ ಕಾರು ಹೀಗೆ ರಸ್ತೆ ನಡುವಿನಲ್ಲಿ ಕೆಟ್ಟು ನಿಂತದ್ದೇ ಇಲ್ಲ ಅನ್ನುವ ಅರಿವಿನೊಂದಿಗೆ ಇಂದು ಹಠಾತ್ ಆಗಿ ನಿಂತದ್ದಕ್ಕೆ ಮತ್ತು ಮುಂದೆ ಚಲಿಸಲಾರೆ ಅಂತ ಮಾಡಿದ ಹಠಕ್ಕೆ ಬೇರೆಯೇ ಅರ್ಥ ಸಿಕ್ಕಿದಂತಾಯಿತು. ಉಡುಪಿಯಿಂದ ಕಾರಿನ ಬಿಡಿಭಾಗ ತರಿಸಿ ರಿಪೇರಿ ಆಗಿ ಕಾರು ಮತ್ತೆ ಚೇತರಿಸಿಕೊಂಡಾಗ ನನ್ನಲ್ಲಿ ನಿರಾಳ ಭಾವ ಮೂಡಿದರೂ ಆ ಎರಡು ಗಂಟೆ ಆಪರೇಷನ್ ಥಿಯೇಟರಿನ ಒಳಗೆ ಆಪ್ತ ಜೀವವೊಂದನ್ನು ಕಳಿಸಿ ಹೊರಗೆ ಭಾರವಾದ ಹೃದಯದೊಂದಿಗೆ ಕಾಯುವ ಆತಂಕದ ಪರಿಸ್ಥಿತಿ ನನ್ನದಾಗಿತ್ತು.

ವಿದಾಯದ ಕ್ಷಣಗಳು ಯಾವತ್ತೂ ಭಾವುಕ. ಯಾವುದೋ ಗೊತ್ತಿರದ ಊರಿನಲ್ಲಿ ಪರಮ ಏಕಾಂತದಲ್ಲಿ ನೋವಿನ ಕ್ಷಣಗಳಲ್ಲಿ ನನ್ನ ಎರಡು ಗಂಟೆಗಳನ್ನು ಅದು ಬಯಸಿತ್ತು. ಮೌನದ ಸಂಭಾಷಣೆಯಲ್ಲಿ ನಾವು ಹೇಳಿಕೊಂಡದ್ದು ಕೇಳಿಕೊಂಡದ್ದು ಅದೆಷ್ಟೋ. ಯೋಚಿಸಿದಷ್ಟೂ ಈಗ ಎದೆಭಾರ!

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು
