Advertisement
ಪ್ರಾಣಿ ಒಡನಾಟದಲ್ಲಿನ ಮನುಷ್ಯರ ಸಂಕಟ: ಡಾ. ವಿನತೆ ಶರ್ಮ ಬರೆಯುವ ಅಂಕಣ

ಪ್ರಾಣಿ ಒಡನಾಟದಲ್ಲಿನ ಮನುಷ್ಯರ ಸಂಕಟ: ಡಾ. ವಿನತೆ ಶರ್ಮ ಬರೆಯುವ ಅಂಕಣ

ಕಾಡಿನ ರಸ್ತೆಯಲ್ಲಿ ಹೋಗುವಾಗ ವಾಹನ ನಿಲ್ಲಿಸಬೇಡಿ, ಪ್ರಾಣಿಗಳಿಗೆ ಆಹಾರ ಕೊಡಬಾರದು ಎಂದು ದಪ್ಪ ಅಕ್ಷರಗಳಲ್ಲಿ ಬರೆದಿದ್ದರೂ ಅಲ್ಲಲ್ಲಿ ಜನ ವಾಹನಗಳನ್ನು ನಿಲ್ಲಿಸಿದ್ದರು. ಪ್ರಾಣಿಗಳು ಕಾಣಿಸುತ್ತಿವೆ ಎಂದು ಖುಷಿ. ಹತ್ತಿರ ಬರುವ ಮಂಗಗಳಿಗೆ ಹಣ್ಣು, ಸ್ನ್ಯಾಕ್ಸ್ ಕೊಡುವುದು ಮಾಡುತ್ತಿದ್ದರು. ಸ್ವಲ್ಪ ದೂರದಲ್ಲಿ ಇದ್ದ, ಮಂಗಗಳನ್ನೇ ನೋಡುತ್ತಿದ್ದ ಜಿಂಕೆಗಳನ್ನು ಕರೆಯುವುದು ನಡೆದಿತ್ತು. ಇಷ್ಟಾದ ನಂತರ ಹೀಗೆಯೆ ಹಣ್ಣು ತೋರಿಸಿ ಕರೆದರೆ ಆನೆ, ಕಾಡೆಮ್ಮೆ ಕೂಡ ಬರಬಹುದು ಎನ್ನಿಸಿತು. ಅವುಗಳ ಸ್ವಾಭಾವಿಕ ಆಹಾರ ಪ್ರದೇಶಗಳನ್ನು ಈಗ ಲಂಟಾನಾ ಪೊದೆಗಳು ಆಕ್ರಮಿಸಿವೆ. ಜಿಂಕೆಗಳು ರಸ್ತೆಗೆ ಬಂದರೆ ಅವುಗಳನ್ನು ಹುಡುಕಿಕೊಂಡು ಹುಲಿ, ಚಿರತೆ ಕೂಡ ರಸ್ತೆಗಿಳಿಯುತ್ತವೆ.
ಡಾ.
ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

ಪ್ರಿಯ ಓದುಗರೆ,

ಕರ್ನಾಟಕದ ಕಾಡಿನ ಹುಲಿ, ಕ್ವೀನ್ಸ್‌ಲ್ಯಾಂಡ್ ನ dingo ಮನುಷ್ಯರ ಸಂಕಟವನ್ನು ಹೆಚ್ಚಿಸಿವೆ. ಅಲ್ಲಿ ಹುಲಿ ನೋಡುವ ಮೋಹಕ್ಕೆ ಬಿದ್ದ ಪ್ರವಾಸಿಗರು, ಇಲ್ಲಿ dingo ಗಳು ವಾಸಿಸುವ ಪ್ರದೇಶಗಳನ್ನು ಆಕ್ರಮಿಸಿರುವ ಜನರು. ಎರಡೂ ದೇಶಗಳಲ್ಲಿ, ರಾಜ್ಯಗಳಲ್ಲಿ ಪ್ರಾಣಿ-ಮನುಷ್ಯ ನಡುವಿನ ಸಂಬಂಧಗಳಲ್ಲಿ ಸಂಘರ್ಷಗಳು ಹೆಚ್ಚುತ್ತಿವೆ. ಈ ಅಭಿಪ್ರಾಯದ ಪರ ಮತ್ತು ವಿರೋಧ ನಿಲುವುಗಳನ್ನು ನಾನು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ನೋಡಿದೆ. ಕೇಳಿದೆ. ಹೋದ ತಿಂಗಳು ತವರೂರು ಬೆಂಗಳೂರಿಗೆ ಬಂದಾಗ ಬಂಡೀಪುರ ಅಥವಾ ಕಬಿನಿ ಕಡೆ ಹೋಗೋಣ, ಕಾಡಿನ ವಾತಾವರಣದಲ್ಲಿ ಇದ್ದು ಪ್ರಾಣಿ ಪಕ್ಷಿಗಳ ಲೋಕದಲ್ಲಿ ಸ್ವಲ್ಪ ಮುಳುಗಬೇಕು. ನಾವು ಮನುಷ್ಯರು ಎಷ್ಟು ಅಲ್ಪರು ಎಂದು ನೆನಪಿಸಿಕೊಂಡು ಮತ್ತಷ್ಟು ಎಚ್ಚರವಹಿಸೋ ಭಾಗ್ಯ ಬರಲಿ ಎಂದುಕೊಂಡೆ. ಆದರೆ ಅಲ್ಲೆಲ್ಲೂ ಕಾಡಿನ ಒಳಗೆ ಹೋಗಲು ಸಮ್ಮತಿಯಿಲ್ಲ, ಸಫಾರಿ ಇಲ್ಲ. ರದ್ದಾಗಿತ್ತು.

ಪರವಾಗಿಲ್ಲ ಎಂದುಕೊಂಡು ಬಂಡೀಪುರದ ಆಚೆ ಕಡೆ ತಮಿಳುನಾಡಿನಲ್ಲಿರುವ ಮುದುಮಲೈಗೆ ಹೋದೆವು. ನಾಲ್ಕು ದಿನಗಳು ತಂಗಿ, ದಕ್ಕಿದಷ್ಟು ಕಾಡಿನ ಅನುಭವವನ್ನು ಆನಂದಿಸಿ, ಅಲ್ಲಲ್ಲಿ ಕೆಲವು ಪ್ರಾಣಿಗಳನ್ನು ನೋಡಿ ಖುಶಿ ಆಯ್ತು. ಆಗ ಮಾತುಕತೆಯಲ್ಲಿ ಮತ್ತೆ ಮತ್ತೆ ಕೇಳಿದ್ದು ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು. ಬೇರೆ ಬೇರೆ ಅಭಿಪ್ರಾಯಗಳು. ಆದರೂ, ಅವು ಕಾಡು ಬಿಟ್ಟು ಊರಿಗೆ ಬರುತ್ತಿವೆ ಅನ್ನೋದು ಬಹಳ ಜನರ ಅನಿಸಿಕೆ. ಯಾಕೆ ಅನ್ನುವ ಪ್ರಶ್ನೆಯನ್ನು ಉತ್ತರಿಸಿದವರು ಬಗೆಬಗೆಯ ದೃಷ್ಟಿಕೋನ ಇಟ್ಟುಕೊಂಡು ಮಾತನಾಡಿದರು.

೧೯೯೦ ರ ದಶಕದಲ್ಲಿ ನಾನು ಬಂಡೀಪುರ, ಕಬಿನಿ, ಬಿಳಿಗಿರಿರಂಗನಬೆಟ್ಟ, ಸೈಲೆಂಟ್ ವ್ಯಾಲಿ ಮತ್ತು ಮುದುಮಲೈ ಕಾಡುಗಳಿಗೆ ಹಲವಾರು ಬಾರಿ ಹೋಗಿದ್ದೆ. World Wildlife Fund ಮುಖಾಂತರ ಬಂಡೀಪುರದಲ್ಲಿ ಪರಿಸರ ಶಿಕ್ಷಣ ಶಿಬಿರದಲ್ಲಿ ತರಬೇತಿ ಪಡೆದೆ. ಯಾವುದೋ ಒಂದು ಕೆಲಸಕ್ಕಾಗಿ ಕಬಿನಿ ಜಲಾಶಯ ಹಿನ್ನೀರಿನ ಪ್ರದೇಶದಲ್ಲಿ ಕಾಡಿನಿಂದ ನಾಡಿಗೆ ಸ್ಥಳಾಂತರವಾಗಿದ್ದ ಆದಿವಾಸಿ ಜನರನ್ನುಭೇಟಿಯಾಗಿದ್ದೆ. ಪುಟ್ಟಪುಟ್ಟ ಕಾಂಕ್ರೀಟ್ ಮನೆಗಳಲ್ಲಿ ಬಂಧಿತವಾಗಿದ್ದ ಅವರ ಜೀವನವನ್ನು ನೋಡಿ ಸಂಕಟವಾಗಿತ್ತು. ಅದೇ ರೀತಿ ಬಂಡೀಪುರದ ಕಾಡಿನಲ್ಲಿ ಆಗಷ್ಟೇ ಹಬ್ಬುತ್ತಿದ್ದ ಲಂಟಾನಾ ಪೊದೆಗಳನ್ನು ನೋಡಿ, ಅದರಿಂದ ಆಗುವ ಆಪತ್ತನ್ನು ಯೋಚಿಸಿ ಚಿಂತಿತಳಾಗಿದ್ದೆ. ಇದರ ಬಗ್ಗೆ ವಿದ್ಯಾರ್ಥಿಗಳ ಜೊತೆ ಮಾತನಾಡುತ್ತಿದ್ದದ್ದು ನೆನಪಿದೆ.

ಈ ಬಾರಿ ಮುದುಮಲೈನ ತೆಪ್ಪಕಾಡು, ಮಾಸಿನಗುಡಿ ಪ್ರದೇಶದಲ್ಲಿ ಓಡಾಡಿದಾಗ ಹಳೆ ನೆನಪುಗಳು ನುಗ್ಗಿ ಬಂದವು. ಆ ನೆನಪುಗಳಲ್ಲಿ ಇದ್ದದ್ದು ಮಾಯಾರ್ ನದಿಯ ಸೌಂದರ್ಯ, ನಿರ್ಮಲತೆ. ಬಳುಕುತ್ತಾ ನಿಧಾನವಾಗಿ ಹರಿಯುವ ಮಾಯಾರ್ ನದಿಯ ದಡಗಳಲ್ಲಿ ಕಂಡು ಬರುತ್ತಿದ್ದ ದೊಡ್ಡದೊಡ್ಡ ಆನೆಗಳ ಗುಂಪುಗಳು, ಜಿಂಕೆಗಳ ಸಮೂಹ, ಕಾಡೆಮ್ಮೆಗಳು, ಯಥೇಚ್ಛವಾಗಿದ್ದ ಲಂಗೂರ್, ಅಪರೂಪಕ್ಕೆ ಕಾಣಿಸಿದ್ದ ಚಿರತೆ ಮತ್ತು ಸಿಂಹಬಾಲದ ಕೋತಿ.

ಗಾಬರಿಯಾಗಿದ್ದು, ಈ ಬಾರಿ ಜಿಂಕೆಗಳನ್ನು ಬಿಟ್ಟರೆ ಅವೆಲ್ಲ ಈಗ ಬೆರಳೆಣಿಕೆ ಸಂಖ್ಯೆಯಲ್ಲಿ ಕಂಡವು. ಯಾಕೋ ಮಾಯಾರ್ ನದಿಯ ಸೊಬಗನ್ನು ಕಾಂಕ್ರೀಟ್ ಕಟ್ಟಡಗಳು ಮಸುಕು ಮಾಡಿದ್ದವು. ಎಲ್ಲೆಲ್ಲೂ ಬಗೆಬಗೆ ಗಾತ್ರದ ಕಟ್ಟಡಗಳು, ಅವಲ್ಲಿ ಅನೇಕವು ರೆಸಾರ್ಟ್‌ಗಳಾಗಿವೆ.

ಕಾಡಿನ ರಸ್ತೆಯಲ್ಲಿ ಹೋಗುವಾಗ ವಾಹನ ನಿಲ್ಲಿಸಬೇಡಿ, ಪ್ರಾಣಿಗಳಿಗೆ ಆಹಾರ ಕೊಡಬಾರದು ಎಂದು ದಪ್ಪ ಅಕ್ಷರಗಳಲ್ಲಿ ಬರೆದಿದ್ದರೂ ಅಲ್ಲಲ್ಲಿ ಜನ ವಾಹನಗಳನ್ನು ನಿಲ್ಲಿಸಿದ್ದರು. ಪ್ರಾಣಿಗಳು ಕಾಣಿಸುತ್ತಿವೆ ಎಂದು ಖುಷಿ. ಹತ್ತಿರ ಬರುವ ಮಂಗಗಳಿಗೆ ಹಣ್ಣು, ಸ್ನ್ಯಾಕ್ಸ್ ಕೊಡುವುದು ಮಾಡುತ್ತಿದ್ದರು. ಸ್ವಲ್ಪ ದೂರದಲ್ಲಿ ಇದ್ದ, ಮಂಗಗಳನ್ನೇ ನೋಡುತ್ತಿದ್ದ ಜಿಂಕೆಗಳನ್ನು ಕರೆಯುವುದು ನಡೆದಿತ್ತು. ಇಷ್ಟಾದ ನಂತರ ಹೀಗೆಯೆ ಹಣ್ಣು ತೋರಿಸಿ ಕರೆದರೆ ಆನೆ, ಕಾಡೆಮ್ಮೆ ಕೂಡ ಬರಬಹುದು ಎನ್ನಿಸಿತು. ಅವುಗಳ ಸ್ವಾಭಾವಿಕ ಆಹಾರ ಪ್ರದೇಶಗಳನ್ನು ಈಗ ಲಂಟಾನಾ ಪೊದೆಗಳು ಆಕ್ರಮಿಸಿವೆ. ಜಿಂಕೆಗಳು ರಸ್ತೆಗೆ ಬಂದರೆ ಅವುಗಳನ್ನು ಹುಡುಕಿಕೊಂಡು ಹುಲಿ, ಚಿರತೆ ಕೂಡ ರಸ್ತೆಗಿಳಿಯುತ್ತವೆ.

ಆದರೆ ಪ್ರವಾಸಿಗರಿಗೆ ಆ ದೊಡ್ಡ ಪ್ರಾಣಿಗಳ ಬಗ್ಗೆ ಭಯ ಇರುತ್ತದೆ ಅಲ್ಲವೆ. ಅವು ಹತ್ತಿರ ಬರಬಾರದು. ದೂರದಲ್ಲೇ ಇದ್ದುಕೊಂಡು ಪ್ರವಾಸಿಗರು ಕೇಳಿದಾಗ ಅವರ ಬಯಕೆಗಳ ಪ್ರಕಾರ ಮಾಡೆಲ್ ಆಗಬೇಕು. ಫೋಟೋಗಳಲ್ಲಿ ಚೆನ್ನಾಗಿ ಕಾಣಬೇಕು. ಇದೇ ಪಾಡು ಹುಲಿ, ಚಿರತೆಗಳದು ಕೂಡ. ಆ ತರ ಪೋಸ್ ಕೊಡುವಾಗ ಸ್ವಲ್ಪ ಮುಂದೆ ಬಂದರೆ, ಘರ್ಜನೆ ಮಾಡಿದರೆ, ಇರಿಸು ಮುನಿಸು ತೋರಿದರೆ ಅದು ತಪ್ಪು. ಏನಾದರೂ ಅವು ಗುರ್ರೆಂದರೆ ಓಹೋ ನಮ್ಮ ಮೇಲೆ ದಾಳಿ ಮಾಡುತ್ತಿವೆ ಎನ್ನುವ ಕಂಪ್ಲೇಂಟ್. ಹೀಗೆಯೇ ಏನೇನೋ ಮನುಷ್ಯನ ಚೇಷ್ಟೆ. ಕಾಡುಪ್ರಾಣಿ ಬೇಕೋ ಬೇಡವೋ ಎನ್ನುವ ಅನೇಕ ಸಂಕಟಗಳು.

ಮನುಷ್ಯರನ್ನು ನೋಡುತ್ತಾ ನೋಡುತ್ತಾ ಕಾಡುಪ್ರಾಣಿಗಳಿಗೆ ಅವರ ಅಭ್ಯಾಸವಾಗಿ ಅವು ಕಾಡಿನ ಅಂಚಿನಲ್ಲಿರುವ ಮನುಷ್ಯರ ನಾಡಿಗೆ ಬಂದರೆ ಸಂಘರ್ಷಕ್ಕೆ ಅವಕಾಶ ಇರಬಹುದು. ಆದರೆ ಅದು ಎಲ್ಲರಿಗೂ ತೊಂದರೆ ತರುತ್ತದೆ ಎನ್ನುವುದು ಸುಳ್ಳು. ಇದು ಪದೇ ಪದೇ ಸಾಬೀತಾಗಿದೆ.

ಅದೇನೇ ಇರಲಿ, ಸರಕಾರವು ಸಫಾರಿ ರದ್ದು ಅಂತ ನವೆಂಬರ್ ತಿಂಗಳಲ್ಲಿ ಹೇಳಿ ಅದು ಜನವರಿಯಲ್ಲಿ ಕೂಡ ಮುಂದುವರೆಸಿ ಅದರಿಂದ ಸ್ಥಳೀಯ ಪ್ರವಾಸಿ ಸಂಸ್ಥೆಗಳಿಗೆ ತೊಂದರೆ ಆಗಿತ್ತು. ಅನೇಕರ ಹೊಟ್ಟೆಪಾಡಿನ ಚಿಂತೆಗೆ ಕೂಡ ಕಾರಣವಾಗಿತ್ತು. ಪ್ರವಾಸಿಗರಿಗೆ ಕೂಡ ಅಸಮಾಧಾನವಾಗಿದೆ. ಮನುಷ್ಯನ ಕಾಟ ಇಲ್ಲದೆ ಪ್ರಾಣಿಗಳಿಗೆ ಸ್ವಲ್ಪ ನೆಮ್ಮದಿ ಆಗಿರಬಹುದು, ನಿಜ. ಅವುಗಳ ಊರಿನಲ್ಲಿ ಅವು ಆರಾಮಾಗಿ ತಿರುಗಾಡಿಕೊಂಡು ಇದಾವೆ ಎಂದು ಕಾಣುತ್ತದೆ. ‘ಹಾಳು ಮನುಷ್ಯ ನಮ್ಮೂರಿನ ಕಡೆ ಬರುವುದು ತಪ್ಪಿತು’ ಎಂದು ಅವು ಸಂತೋಷವಾಗಿ ಮಾತನಾಡುತ್ತಾ ಇರಬಹುದು. ಇದನ್ನು ಊಹಿಸಿಕೊಂಡು ನನಗೆ ಭಾರಿ ಖುಷಿಯಾಯ್ತು.

ಕಳೆದ ತಿಂಗಳು ಆಸ್ಟ್ರೇಲಿಯಾದಲ್ಲಿ ಕೂಡ ಪ್ರಾಣಿ ಮತ್ತು ಮನುಷ್ಯರ ಸಂಬಂಧ ಕುರಿತ ವಿಷಯ ಬಹಳ  ಚರ್ಚೆಗೆ ಬಂದಿದೆ. ನಮ್ಮ ರಾಣಿರಾಜ್ಯ Queensland ಅಲ್ಲಿರುವ ಗಾರಿ K’Gari ಅಥವಾ Fraser ದ್ವೀಪದಲ್ಲಿ ವಾಸಿಸುವ dingo ಎನ್ನುವ, ಸೀಳುನಾಯಿಯ ತರ ಕಾಣುವ ಪ್ರಾಣಿಗಳ ನಡವಳಿಕೆ ಎಲ್ಲರ ಗಮನ ಸೆಳೆದಿದೆ. ಯಾಕೆಂದರೆ, ಕೆನಡಾ ದೇಶದ ಒಬ್ಬ ಹತ್ತೊಂಭತ್ತು ವರ್ಷದ ಹುಡುಗಿ ಈ ದ್ವೀಪದಲ್ಲಿ ಜನವರಿ ೧೯ರಂದು ಸತ್ತಳು. ಅವಳು ಒಂದು ಸ್ಥಳೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಡಿಂಗೊ ಗಳ ಬಗ್ಗೆ ಕುತೂಹಲ ಬೆಳೆಸಿಕೊಂಡಿದ್ದಳು ಅಂತೆ. ಹೀಗೆ ಆಸ್ಟ್ರೇಲಿಯಾದಲ್ಲಿ ಪ್ರವಾಸ ಮಾಡುತ್ತಾ ಅಷ್ಟಿಷ್ಟು ಕೆಲಸ ಮಾಡಲು ಅನೇಕ ಯುವಕ-ಯುವತಿಯರು backpacker ಸ್ಕೀಮ್‌ನಲ್ಲಿ ಒಂದು ವರ್ಷಕ್ಕೆ ವರ್ಕ್ experience ವೀಸಾ ಪಡೆದು ಬರುತ್ತಾರೆ. ಹೆಚ್ಚಿನವರು ಉತ್ತರಗೋಳದ, ಚಳಿದೇಶಗಳಿಂದ ಬರುತ್ತಾರೆ. ಇವರಿಗೆ ಆಸ್ಟ್ರೇಲಿಯಾ ಎಂದರೆ ಸ್ವರ್ಗ. ಅದ್ರಲ್ಲೂ K’Gari ಅಥವಾ ಫ್ರೇಸರ್ ದ್ವೀಪವು ಅತ್ಯಂತ ಸುಂದರ ಪ್ರದೇಶ. ಇಲ್ಲಿಗೆ ಭೇಟಿ ಕೊಡದೇ ಹೋದರೆ ನಿಮ್ಮ ಆಸ್ಟ್ರೇಲಿಯಾ ಪ್ರವಾಸ ಪೂರ್ಣವಾಗುವುದಿಲ್ಲ ಎನ್ನುತ್ತವೆ ಪ್ರವಾಸೋದ್ಯಮ ಜಾಹಿರಾತುಗಳು. ನಾನಿರುವ ಬ್ರಿಸ್ಬೇನ್ ನಗರದಿಂದ ೨೫೦ ಕಿಲೋಮೀಟರ್ ಉತ್ತರಕ್ಕೆ ಇದೆ. ಇದಕ್ಕೆ ವರ್ಲ್ಡ್ ಹೆರಿಟೇಜ್ ಗುರುತಿದೆ. ನಾನೊಮ್ಮೆ ಹೋದಾಗ ಅಲ್ಲಿನ ಮರಳುಗುಡ್ಡೆಗಳು ಸೆಳೆದಿದ್ದವು.

ಕಳೆದ ತಿಂಗಳು ಜನವರಿಯಲ್ಲಿ ಈ ಕೆನಡಾ ದೇಶದ ಹುಡುಗಿಯ ಸಾವು ಸಂಭವಿಸಿ ಅವಳಿಗೆ dingo ಗಳು ಕಚ್ಚಿದ್ದರಿಂದ ಸತ್ತಳು ಎಂದು ತಕ್ಷಣಕ್ಕೇ ವರದಿಗಳು ಹೇಳಿತು. ಆ ನಂತರ ಬಂದ ವೈದ್ಯಕೀಯ ವರದಿಯ ಪ್ರಕಾರ ಅವಳು ನೀರಲ್ಲಿ ಮುಳುಗಿ ಸತ್ತಳು. ಅನೇಕರಿಗೆ ಇದು ವಿಪರ್ಯಾಸವಾಗಿ ಕಂಡು ಬಗೆಬಗೆಯ ಊಹಾಪೋಹಗಳು ಹುಟ್ಟಿದವು. ಅವಳು ಬೆಳ್ಳಂಬೆಳಗ್ಗೆ ಸಮುದ್ರದಲ್ಲಿ ಈಜಲು ಒಬ್ಬಂಟಿಯಾಗಿ ಹೋಗಿದ್ದಳಂತೆ. ಬಹುಶಃ ಏಕಾಕಿಯಾಗಿದ್ದ ಅವಳನ್ನು dingo ಗಳು ಸುತ್ತುವರೆದಿರಬಹುದು. ಅದು ಈ ಪ್ರಾಣಿಗಳ ಸ್ವಾಭಾವಿಕ ನಡವಳಿಕೆ. ಆದರೆ ಹೆದರಿಕೆಯಾಗಿ ಅವಳು ನೀರಿಗಿಳಿದಿದ್ದಾಳೆ. ಮುಳುಗಿ ಸತ್ತಿದ್ದಾಳೆ. ದೇಹದ ಮೇಲೆ ಡಿಂಗೊಗಳು ಕಚ್ಚಿದ ಗುರುತುಗಳಿದ್ದರೂ, ಹಾಗೆ ಕಚ್ಚಿದ್ದು ಅವಳ ಸಾವಿಗೆ ಕಾರಣವಾಗಲಿಲ್ಲ.

ಮನುಷ್ಯರ ತಿಕ್ಕಲುತನದಲ್ಲಿ ಅನೇಕ ವಿಪರ್ಯಾಸಗಳಿವೆ. Dingo ಗಳು ಆ ಹುಡುಗಿಯ ಸಾವಿಗೆ ಕಾರಣ ಎಂದು ಕ್ವೀನ್ಸ್‌ಲ್ಯಾಂಡ್ ರಾಜ್ಯ ಸರ್ಕಾರ ಅದೇ ವಾರ ನಿರ್ಧರಿಸಿತು. ಈ ಒಂದು ಡಿಂಗೊ ಗುಂಪಿನಲ್ಲಿ ಒಂದೇ ಕುಟುಂಬದ ಹತ್ತು ಸದಸ್ಯರಿದ್ದವು. ಅವಲ್ಲಿ ಆರು ಸದಸ್ಯರನ್ನು ಬಹಳ ಅಪಾಯಕಾರಿ ಎಂದು ಸರ್ಕಾರ ಘೋಷಿಸಿ ತುರ್ತುಕಾರ್ಯಾಚರಣೆಯಲ್ಲಿ ಆ ಆರು ಪ್ರಾಣಿಗಳನ್ನು ಸಾಯಿಸಿತು.

ಬಹಳ ಚುರುಕಾಗಿ ನಡೆದ ಈ ವಿಷಯಗಳ ತೀವ್ರತೆ ಸಾರ್ವಜನಿಕರ ಗಮನಕ್ಕೆ ಬಂದು ಪರ-ಭಿನ್ನ ಮತಗಳು, ಅಭಿಪ್ರಾಯಗಳು, ನಿಲುವುಗಳು ಹುಟ್ಟಿಕೊಂಡವು. ಆರು ಮುಗ್ಧ ವನ್ಯಜೀವಿಗಳನ್ನು ಸಾಯಿಸಿದ್ದು ಬರ್ಬರ ಕೊಲೆ, ರಾಜ್ಯಸರ್ಕಾರದ ಕ್ರಮ ಸರಿಯೇ ಎನ್ನುವ ಪ್ರಶ್ನೆ ತೀವ್ರ ವಿಶ್ಲೇಷಣೆಗೆ ಒಳಗಾಯ್ತು. ಕ್ವೀನ್ಸ್‌ಲ್ಯಾಂಡ್ ರಾಜ್ಯದ ಅತ್ಯಂತ ಸುಪ್ರಸಿದ್ಧ ಗಾರಿ ದ್ವೀಪ ಪ್ರವಾಸೋದ್ಯಮವನ್ನು ಕಾಪಾಡಲು ಸರ್ಕಾರ ಹೀಗೆ ಮಾಡಿತು, ಅದು ಸರಿ ಎಂದು ಕೆಲವರು. ಹಲವು ಮಿಲಿಯನ್ ಗಟ್ಟಲೆ ಡಾಲರ್ ಆದಾಯ ತರುವ ಈ ಪ್ರದೇಶದ ಪ್ರವಾಸವು ಜಾಗತಿಕ ಮಟ್ಟದಲ್ಲಿ ಸುಪ್ರಸಿದ್ಧ. ತಮ್ಮ ಅಂತಾರಾಷ್ಟ್ರೀಯ ಪ್ರವಾಸಿಗರು ಕೊಡುವ ಡಾಲರ್‌ಗಳನ್ನು ಕಳೆದುಕೊಳ್ಳಲು ಸ್ಥಳೀಯ ಸಂಸ್ಥೆಗಳು ತಯಾರಿಲ್ಲ. ಅವರಿಗೆ ರಾಜ್ಯಸರ್ಕಾರದ ಕ್ರಮ ಸರಿಯೆನಿಸಿದೆ. ಆಕ್ರಮಣಕಾರಿ ಡಿಂಗೊ ಗಳಿಂದ ಪ್ರವಾಸಿಗರಿಗೆ ಅಪಾಯ ತಪ್ಪಿದ್ದಲ್ಲ. ಈಗ ಒಂದಷ್ಟು ಭರವಸೆ ಮರಳಿದೆ, ಎಂದಿದ್ದಾರೆ.

ಆದರೆ ಬಹಳ ಜನರು ಅದರ ವಿರುದ್ಧ ದನಿಯೆತ್ತಿದ್ದಾರೆ. ವನ್ಯಜೀವಿಗಳ ಸ್ವಾಭಾವಿಕ ಪ್ರದೇಶಗಳಿಗೆ ಮನುಷ್ಯರು ಹೋಗಬಾರದು, ಪ್ರಾಣಿಗಳ ಜೊತೆ ಸ್ನೇಹ ಬೆಳೆಸಬಾರದು, ಇದು ನಾವು ಉದ್ದೇಶಪೂರ್ವಕವಾಗಿ ನಿಸರ್ಗಕ್ಕೆ ಮಾಡುವ ಹಾನಿ, ಎಂದಿದ್ದಾರೆ. ವನ್ಯಪ್ರಾಣಿ ನಡವಳಿಕೆ ಅಧ್ಯಯನಕಾರರು ಹೇಳಿದ್ದು, ಡಿಂಗೊ ಸಮಸ್ಯೆಯಲ್ಲ, ಮೂಲ ಸಮಸ್ಯೆ ಇರುವುದು ಮನುಷ್ಯರ ನಡವಳಿಕೆಯಲ್ಲಿ. ವನ್ಯಜೀವಿಗಳ ಜೊತೆ ಸಂಬಂಧದಲ್ಲಿ ಎಚ್ಚರಿಕೆ, ಗೌರವ ಇರಬೇಕು. ಆದರೆ ಇಲ್ಲಿಗೆ ಬರುವ ಪ್ರವಾಸಿಗರು ಡಿಂಗೋಗಳನ್ನು ನಾಡಿನ ನಾಯಿ ಎಂದು ಭಾವಿಸುತ್ತಾರೆ, ಹಾಗೆಯೇ ಒಡನಾಟ ಬೆಳೆಸಲು ಹಾತೊರೆಯುತ್ತಾರೆ. ಆದರೆ ಅವು ಕಾಡುಪ್ರಾಣಿಗಳು. ತಮ್ಮ ಸ್ವಾಭಾವಿಕ ಪರಿಸರದಲ್ಲಿ ಬದುಕುತ್ತಿವೆ. ಇದನ್ನು ಸಂಘರ್ಷಕ್ಕೆ ಒಡ್ಡುತ್ತಿರುವುದು ಮನಷ್ಯರು. ಇದಕ್ಕೆ ಇಂಬು ಕೊಡುತ್ತಿರುವುದು ಸೋಶಿಯಲ್ ಮೀಡಿಯಾ. ಡಿಂಗೊ ಜೊತೆಗಿನ ತಮ್ಮ ಫೋಟೋ ಇನ್ಸ್ಟಾಗ್ರಾಮ್ ನಲ್ಲಿ ಹಾಕುವುದು ದೊಡ್ಡ ಗೀಳು.

ಸ್ಥಳೀಯ ಅಬೊರಿಜಿನಲ್ Butchulla ಕುಲದವರು ಈ ಇಡೀ ವಿಷಯದ ಬಗ್ಗೆ ರಾಜ್ಯಸರ್ಕಾರ ನಮ್ಮನ್ನು ಮಾತನಾಡಿಸಿಲ್ಲ, ನಮ್ಮನ್ನು consult ಮಾಡಬೇಕಿತ್ತು. ಡಿಂಗೋಗಳು (ಅವರ ಭಾಷೆಯಲ್ಲಿ wongari ಎಂದು ಕರೆಯುತ್ತಾರೆ) ನಮ್ಮ ಜೀವನದ ಭಾಗ, ಅವು ನಮಗೆ ಪವಿತ್ರವಾದವು. ಒಂದು ಕುಂಟುಂಬದ ಆರು ಸದಸ್ಯರನ್ನು ಉದ್ದೇಶಪೂರ್ವಕವಾಗಿ ಕೊಂದುಹಾಕಿ ರಾಜ್ಯಸರ್ಕಾರ ಕೊಲೆಗಡುಕ ಸರ್ಕಾರವಾಗಿದೆ, ಅಂದರು. ತಮ್ಮ ಕುಲಸಂಪ್ರದಾಯಗಳ ಪ್ರಕಾರ ಡಿಂಗೊ ಸಾವಿನ ಶೋಕಾಚರಣೆಯನ್ನೂ ನಡೆಸಿದರು.

ಅತ್ತ ಕಡೆ ಕೆನಡಾ ದೇಶದಲ್ಲಿ ಮಗಳ ಸಾವಿಗೆ ದುಃಖಿಸುತ್ತಿದ್ದ ಹುಡುಗಿಯ ತಂದೆತಾಯಂದಿರು ಡಿಂಗೊಗಳ ಕೊಲೆಯ ಬಗ್ಗೆ ಕೇಳಿ ‘ಅಯ್ಯೋ, ನಮ್ಮ ಮಗಳು ಎಂದಿಗೂ ಈ ನಡೆಯನ್ನು ಬಯಸುತ್ತಿರಲಿಲ್ಲ, ಡಿಂಗೋಗಳನ್ನು ಕೊಂದಿದ್ದು ನಮಗೆ ಇನ್ನೂ ದುಃಖ ತಂದಿದೆ, ಆದರೆ  ರಾಜ್ಯಸರ್ಕಾರದ ಕ್ರಮ ಸರಿ’, ಅಂದರು. ಫೆಬ್ರವರಿ ಮೊದಲ ವಾರ ಬ್ರಿಸ್ಬೇನ್ ನಗರಕ್ಕೆ ಬಂದು ಅವರು ಗಾರಿ ದ್ವೀಪಕ್ಕೆ ಹೋಗಿದ್ದಾರೆ. ತಮ್ಮ ಸಂಕಟ ಸಮಯದಲ್ಲಿ, ಶೋಕಾಚರಣೆಗೆ ಬೆಂಬಲ ಕೊಟ್ಟಿರುವ ಅನೇಕರನ್ನು ಶ್ಲಾಘಿಸಿದ್ದಾರೆ.

ಮನುಷ್ಯನ ಸಂಕಟಕ್ಕೆ ಸಿಕ್ಕ ಬೆಲೆ ಮನುಷ್ಯರಿಂದ ಕೊಲೆಯಾದ ಆರು ಡಿಂಗೋಗಳಿಗೆ ಲಭಿಸಿದೆಯಾ ಎನ್ನುವ ಪ್ರಶ್ನೆ ಉಳಿದಿದೆ.

About The Author

ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ