Advertisement
ಒಗ್ಗಟ್ಟು, ಒಡಕುಗಳ ವಿಚಲತೆ: ಡಾ. ವಿನತೆ ಶರ್ಮ ಬರೆಯುವ ಅಂಕಣ

ಒಗ್ಗಟ್ಟು, ಒಡಕುಗಳ ವಿಚಲತೆ: ಡಾ. ವಿನತೆ ಶರ್ಮ ಬರೆಯುವ ಅಂಕಣ

ಆಂಗ್ಲೋ-ಆಸ್ಟ್ರೇಲಿಯನ್ ಅಂದರೆ ಬಿಳಿ-ವಸಾಹತುಶಾಹಿ-ಸೆಟ್ಟ್ಲರ್ ಸಮಾಜಕ್ಕೆ ಸೇರಿದ ಪೌಲಿನ್ ಹ್ಯಾನ್ಸನ್ ತನ್ನನ್ನು ಕಟ್ಟಾ ಆಸ್ಟ್ರೇಲಿಯನ್ ಎಂದು ಕರೆದುಕೊಳ್ಳುತ್ತಾರೆ. ಅಂದರೆ ಬ್ರಿಟಿಷರು ಹುಟ್ಟುಹಾಕಿದ ಬಿಳಿ ಆಸ್ಟ್ರೇಲಿಯಾ. ಆಸ್ಟ್ರೇಲಿಯಾದಲ್ಲಿ ಬದುಕುತ್ತಿರುವವರು ಕಡ್ಡಾಯವಾಗಿ ಆಸ್ಟ್ರೇಲಿಯನ್ ಸಂಸ್ಕೃತಿಯನ್ನು ಅಂದರೆ ಬಿಳಿಯರ ಸಂಸ್ಕೃತಿಯನ್ನು ಪಾಲಿಸಬೇಕು, ಇಲ್ಲವಾದರೆ ದೇಶ ತೊರೆದು ಹೋಗಬೇಕು, ಎನ್ನುತ್ತಾರೆ. ಹಿಂದೊಮ್ಮೆ ಇಲ್ಲಿನ ಮೂಲನಿವಾಸಿಗಳು ಆಸ್ಟ್ರೇಲಿಯನ್ನರಲ್ಲ ಎಂದು, ನಂತರ ಏಷ್ಯನ್ನರಿಗೆ ಈ ದೇಶದಲ್ಲಿ ಪ್ರವೇಶ ಇಲ್ಲ ಎಂದು ಹೇಳಿ ಎಲ್ಲರ ಗಮನ ಸೆಳೆದಿದ್ದರು. ಈಗ ಅದೇ ಒಡಕಿನ ವಿಭಜನಾ ಮಾತುಗಳನ್ನು ಮುಂದುವರೆಸಿದ್ದಾರೆ.
ಡಾ.
ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

ಪ್ರಿಯ ಓದುಗರೆ,

ಕಳೆದ ಕೆಲದಿನಗಳಲ್ಲಿ ಫೇಸ್ ಬುಕ್ ತೆಗೆದರೆ ಕಣ್ಣಿಗೆ ರಾಚುತ್ತಿದ್ದದ್ದು ಭಾರತದ ರಶ್ಮಿಕಾ ಮಂದಣ್ಣ ಮದುವೆ ಸುದ್ದಿ, ಅಮೆರಿಕಾದ ಟ್ರಂಪಣ್ಣನ ಟಾರಿಫ್ ಆಟಾಟೋಪಗಳು, ಇಲ್ಲಿ ಆಸ್ಟ್ರೇಲಿಯಾದ ರಾಜಕಾರಣಿ ಪೌಲಿನ್ ಹ್ಯಾನ್ಸನ್ ಮುಸ್ಲಿಮರ ಬಗ್ಗೆ, ಭಾರತೀಯರ ಬಗ್ಗೆ ಉದುರಿಸಿದ ಉಗುಳುಮಂತ್ರಗಳು, ನಮ್ಮ ಪ್ರಧಾನಿ ಆಂತೋನಿ ಆಲ್ಬಾನೀಸಿ ಅವರ ಪೇಚಾಟ. ರಶ್ಮಿಕಾರ ಸುಂದರ ಮುಖವೇನೋ ಚೆನ್ನಾಗಿತ್ತು. ಆದರೆ ಟ್ರಂಪಣ್ಣನ, ಪೌಲಿನ್ ಹ್ಯಾನ್ಸನ್ ಇವರಿಬ್ಬರ ಮುಖ, ಕೂದಲು, ಹಾವಭಾವ ಎಲ್ಲವೂ ಅಸಹನೀಯ. ಆದರೂ ಇವರಿಬ್ಬರೂ ಮಾಧ್ಯಮಗಳಿಗೆ ಬೇಕೇಬೇಕು. ಇದರ ಮಧ್ಯೆ ಆಸ್ಟ್ರೇಲಿಯಾದ ಯೂನಿವರ್ಸಿಟಿಗಳಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಅಹವಾಲುಗಳು, ಎಲ್ಲವೂ ದೊಡ್ಡ ಸುದ್ದಿಗಳೆ. ಚಿಕ್ಕಸುದ್ದಿಗಳು ಅಂದರೆ ಗತಕಾಲದಲ್ಲಿ ರಾಜಕುಮಾರನಾಗಿದ್ದ ಇಂಗ್ಲೆಂಡಿನ ಆಂಡ್ರೂ ತಾತ್ಕಾಲಿಕ ಬಂಧನ, ಈ ಹತಭಾಗ್ಯ (ರ ಎನ್ನಬೇಕು) ರಾಜಕುಮಾರನ ಪಟ್ಟವನ್ನು ಸಂಪೂರ್ಣವಾಗಿ ತೆಗೆದು ಹಾಕಲು ಆಸ್ಟ್ರೇಲಿಯಾದ ಒಮ್ಮತವಿದೆ ಎಂದು ಪ್ರಧಾನಿ ಹೇಳಿದ್ದು, ಅದನ್ನು ಕೇಳಿ ರಾಯಲ್-ಬೆಂಬಲಿಗರು ಎಗರಾಡಿದ್ದು ಇತ್ಯಾದಿ.

ಇಷ್ಟೆಲ್ಲಾ ಸುದ್ದಿಗಳಲ್ಲಿ ಯಾವುದು ಮುಖ್ಯ? ಇದನ್ನು ತೀರ್ಮಾನಿಸುವುದು ಅವರವರಿಗೆ ಬಿಟ್ಟದ್ದು. ಆದರೆ, ಭಾರತೀಯರಿಗೆ ಸ್ವಲ್ಪ ಕಸಿವಿಸಿಯಾಗಿ, ಬಿಸಿ ಮುಟ್ಟಿಸಿರುವ ಸುದ್ದಿ ಎಂದರೆ ಆಸ್ಟ್ರೇಲಿಯಾದ ರಾಜಕಾರಣಿ ಪೌಲಿನ್ ಹ್ಯಾನ್ಸನ್ ಅವರ ಒನ್ ನೇಶನ್ ಪಕ್ಷದ ವತಿಯಿಂದ ನಮ್ಮಗಳ ಬಗ್ಗೆ ಬೇಕಾಬಿಟ್ಟಿ ಮಾತನಾಡುತ್ತಿರುವುದು. ಅದರಿಂದ ಪ್ರಭಾವಿತರಾಗಿ ಕೆಲ ಬಿಳಿ ಆಸ್ಟ್ರೇಲಿಯನ್ನರು  ಅಲ್ಲಲ್ಲಿ ಭಾರತೀಯರ ವಿರುದ್ಧ ಅಸಹನೆ ತೋರಿಸಿರುವ ಪ್ರಸಂಗಗಳು ಆತಂಕ ಮೂಡಿಸಿವೆ. ಭಾರತೀಯರ ವಿರುದ್ಧ ಮತ್ತಷ್ಟು ಮಾತುಗಳು ಬಂದಿವೆ. ಈಗಿನ ಪರಿಸ್ಥಿತಿ ಇವತ್ತು, ನಿನ್ನೆ ಉಂಟಾಗಿದ್ದಲ್ಲ. ಇದಕ್ಕೆ ಸುಮಾರು ಮೂವತ್ತು ವರ್ಷಗಳ ಹಿನ್ನೆಲೆಯಿದೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಆಸ್ಟ್ರೇಲಿಯಾ ವಾಸಿಯಾಗಿರುವ ನನಗೆ ಆ ಹಿನ್ನೆಲೆಯ ಪರಿಚಯ ಒಂದಷ್ಟಿದೆ.

ಈ ಪೌಲಿನ್ ಹ್ಯಾನ್ಸನ್ ಎಂಬಾಕೆ ಒಂದಾನೊಂದು ಕಾಲದಲ್ಲಿ ಪುಡಿ ರಾಜಕಾರಣಿಯಾಗಿ ಉದ್ಭವವಾಗಿ, ೧೯೯೬ ರಲ್ಲಿ ಪಾರ್ಲಿಮೆಂಟಿಗೆ ಕಾಲಿಟ್ಟಿದ್ದು. ರಾಷ್ಟ್ರೀಯಮಟ್ಟದ ರಾಜಕಾರಣಿಯಾಗಿ ಅಂಬೆಗಾಲಿಡುವಾಗ ಅದೇ ವರ್ಷ ೧೯೯೬ ರಲ್ಲಿ ಆಸ್ಟ್ರೇಲಿಯನ್ ಮೂಲನಿವಾಸಿಗಳ ವಿರುದ್ಧ ಹೇಳಿಕೆಗಳನ್ನು ಕೊಟ್ಟು ಅವರಿಂದ ಛೀಮಾರಿ ಹಾಕಿಸಿಕೊಂಡು ತೆಪ್ಪಗಾಗಿದ್ದರು. ಅದೇ ಕಾಲದಲ್ಲಿ ಕಾಲುಕೆರೆದುಕೊಂಡು ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಏಷ್ಯನ್ನರೆಲ್ಲಾ ಕೆಟ್ಟವರು, ಅವರನ್ನು ಆಸ್ಟ್ರೇಲಿಯಾದೊಳಗೆ ಸೇರಿಸಿಕೊಳ್ಳಬಾರದು ಎಂದಿದ್ದರು ಈಕೆ. ದುಃಖವೆಂದರೆ ಅದರ ಬಗ್ಗೆ ಅಲ್ಲಿಇಲ್ಲಿ ಅಲ್ಪಸ್ವಲ್ಪ ಅಸಮಾಧಾನ ವ್ಯಕ್ತವಾಗಿತ್ತು ಅಷ್ಟೇ. ಯಾಕೆಂದರೆ ಆ ಅವಧಿಯಲ್ಲಿದ್ದ (೨೦೦೭ ರ ತನಕ) ಲಿಬರಲ್ ಪಕ್ಷದ ನಾಯಕ ಮತ್ತು ಪ್ರಧಾನಮಂತ್ರಿ ಜಾನ್ ಹೊವಾರ್ಡ್ ‘ಒನ್ ಆಸ್ಟ್ರೇಲಿಯಾ’ ಎನ್ನುವ ಸಂದೇಶಕ್ಕೆ ಬದ್ಧವಾಗಿದ್ದರು.

ಜಾನ್ ಹೊವಾರ್ಡ್ ಮತ್ತು ಅವರ ಲಿಬರಲ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆ ಇದ್ದದ್ದು ಲೇಬರ್ ಪಕ್ಷ ಮತ್ತು ಆಗಿನ ಪ್ರಧಾನಿ ಪೌಲ್ ಕೀಟಿಂಗ್. ಬಹಳ ಸುಧಾರಣಾ ಮನೋಭಾವದ ಪೌಲ್ ಕೀಟಿಂಗ್ ಆಸ್ಟ್ರೇಲಿಯನ್ ಮೂಲನಿವಾಸಿಗಳ ಜೊತೆ ಒಪ್ಪಂದ ಮಾಡಿಕೊಳ್ಳುವುದು, ಅವರ ಅಸ್ಮಿತೆ, ಹಕ್ಕುಗಳಿಗೆ ಪ್ರಾಧಾನ್ಯತೆ ಕೊಡುವತ್ತ ಸಾಗಿದ್ದರು. ಅನೇಕ ವಿಷಯಗಳಲ್ಲಿ ಹಿಂದುಳಿದಿದ್ದ ಆಸ್ಟ್ರೇಲಿಯಾವನ್ನು ‘ಸುಧಾರಿತ’ ಸಮಾಜವನ್ನಾಗಿ ಮಾಡಲು ಪಣತೊಟ್ಟಿದ್ದರು. ಮುಖ್ಯವಾಗಿ ಅವರು ಪರಸ್ಪರ ಗೌರವ  ಮತ್ತು ಸೌಹಾರ್ದತೆಗಳಿಗೆ ಬೆಲೆ ಕೊಟ್ಟು ಮೌಲ್ಯಾಧಾರಿತ ಆಡಳಿತ ನಡೆಸುತ್ತಿದ್ದರು. ಆಸ್ಟ್ರೇಲಿಯಾಕ್ಕೆ ‘ಬಹುಸಂಸ್ಕೃತಿಗಳ ಸಮಾಜ’ ಎನ್ನುವ ಸಂದೇಶವನ್ನು ಕೊಟ್ಟಿದ್ದೂ ಇದೇ ಪೌಲ್ ಕೀಟಿಂಗ್. ಆಸ್ಟ್ರೇಲಿಯಾದ ಬೆರಳೆಣಿಕೆ ಸಂಖ್ಯೆಯ ‘ಒಳ್ಳೆಯ’ ಪ್ರಧಾನಮಂತ್ರಿಗಳಲ್ಲಿ ಇವರೊಬ್ಬರು. ಗಫ್ ವಿಟ್ಲಾಮ್ ಮತ್ತು ಬಾಬ್ ಹಾಕ್ ಮತ್ತಿಬ್ಬರು ಒಳ್ಳೆಯ, ಅಭಿವೃದ್ಧಿ ಮನೋಭಾವದ ಪ್ರಧಾನಿಗಳಾಗಿದ್ದವರು. ಇವರೆಲ್ಲಾ ಜಾನ್ ಹೊವಾರ್ಡ್ ಬರುವ ಮುನ್ನ ಇದ್ದವರು.

೧೯೯೬ ರಲ್ಲಿ ಅಧಿಕಾರಕ್ಕೆ ಬಂದ ಜಾನ್ ಹೊವಾರ್ಡ್ ತಾವಿದ್ದ ಒಂಭತ್ತು ವರ್ಷಗಳಲ್ಲಿ ಆಸ್ಟ್ರೇಲಿಯಾವನ್ನು ಮತ್ತೊಮ್ಮೆ ‘ವೈಟ್ ಆಸ್ಟ್ರೇಲಿಯಾ’ ಮಾಡಲು ಪ್ರಯತ್ನಿಸಿದ್ದೂ ಅಲ್ಲದೆ ‘ಬಹುಸಂಸ್ಕೃತಿಗಳ ಸಮಾಜ’ ಎಂಬ ಸಂದೇಶವನ್ನು ಅಳಿಸಿ ಹಾಕಿದರು. ಮೂಲನಿವಾಸಿಗಳಿಗೆ ಮತ್ತಷ್ಟು ನೋವಾಗುವ, ಹಾನಿ ತರುವ ಕ್ರಮಗಳನ್ನು ಜಾರಿಗೆ ತಂದರು. ಸ್ವಾಯತ್ತತೆ, ಸ್ವಾಭಿಮಾನ, ಸ್ವತಂತ್ರ ನಿಲುವು ಅನ್ನುವ ದಿಕ್ಕಿನಲ್ಲಿ ಸಾಗಿದ್ದ ‘ಸುಧಾರಿತ’ ಆಸ್ಟ್ರೇಲಿಯಾವನ್ನು ಅಮೆರಿಕೆಯ ಕೈಯಲ್ಲಿಟ್ಟು ಗೊಂಬೆಯಾಗಿಸಿದರು.

ಈಗ ೨೦೨೬ ರಲ್ಲಿ ತನ್ನ ವಿಭಜನಾ ಮನೋಭಾವದಿಂದ ಸುದ್ದಿ ಮಾಡುತ್ತಿರುವ ಪೌಲಿನ್ ಹ್ಯಾನ್ಸನ್ ಆ ಕಾಲದಲ್ಲಿ ಅಂದರೆ ಜಾನ್ ಹೊವಾರ್ಡ್ ಕಾಲದಲ್ಲಿ ಬೆಳೆದ ರಾಜಕಾರಣಿ. ಪ್ರಧಾನಿಯಂತೆಯೇ ಈಕೆ ಕೂಡ ಮೂಲನಿವಾಸಿಗಳ ಮತ್ತು ವಲಸೆಗಾರರ ವಿರುದ್ಧ ದನಿಯೆತ್ತಿ, ಅವರನ್ನೆಲ್ಲಾ ದೇಶಬಿಟ್ಟು ಓಡಿಸಬೇಕು, ಎಂದರು. ಈ ಮಾತುಗಳು ವಿಪರೀತವಾಗಿ, ಜನರನ್ನು ಅವರಿವರ ವಿರುದ್ಧ ಎತ್ತಿ ಕಟ್ಟಿದಳು ಎಂದು ಕೇಸು ದಾಖಲಾಗಿ ಕಡೆಗೆ ಆಕೆಯನ್ನು ಜೈಲಿಗೆ ಕಳಿಸಿದ್ದರು. ಸಧ್ಯ ಬಚಾವ್ ಆದೆವು ಎಂದು ಅದೆಷ್ಟೋ ಜನರು ಉದ್ಗರಿಸಿದ್ದರು.

ಜೈಲಿನಿಂದ ಹೊರಬಂದ ಮೇಲೆ ತನಗಾಗಿದ್ದ ಅವಮಾನವನ್ನು ತೋರಿಸಿಲಾರದೆ ಪೌಲಿನ್ ಇಂಗ್ಲೆಂಡಿಗೆ ಹೋಗಿ ಅಲ್ಲಿ ಕೆಲವು ವರ್ಷ ಇದ್ದು ನಿಶ್ಯಬ್ದವಾಗಿ ವಾಪಸ್ ಆಸ್ಟ್ರೇಲಿಯಾಕ್ಕೆ ಬಂದಿದ್ದಳು. ಬಂದವಳು, ತನ್ನ ಪಾಡಿಗೆ ತಾನು ಸುಮ್ಮನಿರುತ್ತಾಳೆ ಎಂದುಕೊಂಡವರಿಗೆ ಟಾಂಗ್ ಕೊಟ್ಟು ತನ್ನ ಒನ್ ನೇಶನ್ ರಾಜಕೀಯ ಪಕ್ಷವನ್ನು ಬೆಳೆಸಿದಳು. ಚಾಪೆಯ ಕೆಳಗೆ ತೂರಿಕೊಂಡು ನೆಟ್ವರ್ಕ್ ಮಾಡಿ, ತನ್ನೊಡನೆ ಒಂದೆರಡು ಮಿತ್ರಪಕ್ಷಗಳನ್ನೂ ಸೇರಿಸಿಕೊಂಡು ಬೆಳೆದಳು. ಕೆಲವರ್ಷಗಳ ಹಿಂದೆ ಪಾರ್ಲಿಮೆಂಟಿಗೆ ವಾಪಸ್ಸಾದಳು. ಕಳೆದ ಎರಡು-ಮೂರು ವರ್ಷಗಳಲ್ಲಿ ಈಕೆಯ ಒಡಕು ಸಂದೇಶದ ದನಿ ಜೋರಾಗಿದೆ.

ಆಂಗ್ಲೋ-ಆಸ್ಟ್ರೇಲಿಯನ್ ಅಂದರೆ ಬಿಳಿ-ವಸಾಹತುಶಾಹಿ-ಸೆಟ್ಟ್ಲರ್ ಸಮಾಜಕ್ಕೆ ಸೇರಿದ ಪೌಲಿನ್ ಹ್ಯಾನ್ಸನ್ ತನ್ನನ್ನು ಕಟ್ಟಾ ಆಸ್ಟ್ರೇಲಿಯನ್ ಎಂದು ಕರೆದುಕೊಳ್ಳುತ್ತಾರೆ. ಅಂದರೆ ಬ್ರಿಟಿಷರು ಹುಟ್ಟುಹಾಕಿದ ಬಿಳಿ ಆಸ್ಟ್ರೇಲಿಯಾ. ಆಸ್ಟ್ರೇಲಿಯಾದಲ್ಲಿ ಬದುಕುತ್ತಿರುವವರು ಕಡ್ಡಾಯವಾಗಿ ಆಸ್ಟ್ರೇಲಿಯನ್ ಸಂಸ್ಕೃತಿಯನ್ನು ಅಂದರೆ ಬಿಳಿಯರ ಸಂಸ್ಕೃತಿಯನ್ನು ಪಾಲಿಸಬೇಕು, ಇಲ್ಲವಾದರೆ ದೇಶ ತೊರೆದು ಹೋಗಬೇಕು, ಎನ್ನುತ್ತಾರೆ. ಹಿಂದೊಮ್ಮೆ ಇಲ್ಲಿನ ಮೂಲನಿವಾಸಿಗಳು ಆಸ್ಟ್ರೇಲಿಯನ್ನರಲ್ಲ ಎಂದು, ನಂತರ ಏಷ್ಯನ್ನರಿಗೆ ಈ ದೇಶದಲ್ಲಿ ಪ್ರವೇಶ ಇಲ್ಲ ಎಂದು ಹೇಳಿ ಎಲ್ಲರ ಗಮನ ಸೆಳೆದಿದ್ದರು. ಈಗ ಅದೇ ಒಡಕಿನ ವಿಭಜನಾ ಮಾತುಗಳನ್ನು ಮುಂದುವರೆಸಿದ್ದಾರೆ. ಏಷ್ಯನ್ನರು ಅದರಲ್ಲೂ ಭಾರತೀಯರು ಆಸ್ಟ್ರೇಲಿಯನ್ ಸಂಸ್ಕೃತಿಯನ್ನು ಒಪ್ಪಿಕೊಳ್ಳದೆ ತಮ್ಮದೇ ತವರಿನ ಸಂಸ್ಕೃತಿಯನ್ನು ಆಚರಿಸುತ್ತಾರೆ, ಇದು ‘ಆಸ್ಟ್ರೇಲಿಯನ್ ವೇಸ್’ ಅಲ್ಲ, ಎನ್ನುತ್ತಾರೆ. ಇದುವೇ ಈಕೆಯ ತಂತ್ರ, ಜನರಲ್ಲಿರುವ ಒಗ್ಗಟ್ಟನ್ನು ಮುರಿದು ಆಳುವುದು ಆಕೆಗೆ ಪ್ರಿಯವಾದ ವಿಷಯ. ಇದು ತಪ್ಪು, ಎಂದು ಈಗಿನ ಪ್ರಧಾನಿ ಆಲ್ಬಾನೀಸಿ ಹೇಳಿದ್ದಾರೆ.

ನಾನು ಕಂಡಂತೆ ಇಷ್ಟು ವರ್ಷಗಳಲ್ಲಿ ಯಾವತ್ತೂ ಪೌಲಿನ್ ಹ್ಯಾನ್ಸನ್ ಬಾಯಲ್ಲಿ ಒಗ್ಗಟ್ಟು ಎನ್ನೋ ಪದ ಬಂದಿಲ್ಲ. ನಾವು ಬಿಳಿಯರು ಶ್ರೇಷ್ಠರು, ಮಿಕ್ಕವರೆಲ್ಲಾ ನಮ್ಮನ್ನು ಅನುಸರಿಸಿಕೊಂಡು ಹೋಗಬೇಕು ಎಂದು ಅವರು ಒತ್ತಿ ಹೇಳುತ್ತಾರೆ. ಹಾಗೆ ಹೇಳುವುದರಲ್ಲಿ ಯಾವುದೇ ಮುಜುಗರವಿಲ್ಲ. ಆಸ್ಟ್ರೇಲಿಯಾದ ಕರಾಳ ವಸಾಹತುಶಾಹಿ ಚರಿತ್ರೆಯ ಬಗ್ಗೆ ಎಂತಹುದೆ ಆದ acknowledgement ಇಲ್ಲ. ಮೂಲನಿವಾಸಿಗಳ ಬಗ್ಗೆ ಗೌರವವಿಲ್ಲ. ಆಸ್ಟ್ರೇಲಿಯಾವು ಬಿಳಿಯರಿಗೆ ಸೇರಿದ್ದು, ಮಿಕ್ಕವರೆಲ್ಲ ಹೊರಗಿನಿಂದ ಬಂದು ಸೇರಿಕೊಂಡ ವಲಸೆಗಾರರು ಎಂದು ಹೇಳುತ್ತಾರೆ. ಇದೇ ಉದ್ದೇಶ ಇಟ್ಟುಕೊಂಡು ತಮ್ಮ ಒನ್ ನೇಶನ್ ಪಕ್ಷವನ್ನು ಬಲಪಡಿಸುತ್ತಿದ್ದಾರೆ. ಇವರೊಡನೆ ಸೇರಿಕೊಳ್ಳುತ್ತಿರುವ ಜನರ ಸಂಖ್ಯೆ, ಬೆಂಬಲ ಹೆಚ್ಚುತ್ತಿದೆ. ಇದು ಆತಂಕ ತರುವ ವಿಷಯ. ಅಲ್ಲಿ ಅಮೆರಿಕೆಯಲ್ಲಿ ಟ್ರಂಪಣ್ಣ ಇದೆ ತುತ್ತೂರಿ ಊದುತ್ತಿದ್ದಾರೆ.  ಭಾರತೀಯ-ಮೂಲದ ಜನರಿಗೆ ನಿದ್ದೆ ಕೆಟ್ಟಿದೆ.

ಆಸ್ಟ್ರೇಲಿಯಾವು ಬಹುಸಂಸ್ಕೃತಿಗಳ ದೇಶ, ಸಮಾಜ ಎನ್ನುವುದು ಸರ್ಕಾರದಲ್ಲಿ ಅನುಷ್ಠಾನಕ್ಕೆ ಬಂದಿದೆ. ಅದು ಹೆಗ್ಗಳಿಕೆಯ ವಿಷಯ ಎಂದು ಅನೇಕರು ಭಾವಿಸುತ್ತಾರೆ. ಆದರೆ ಕೆಲದಿನಗಳ ಹಿಂದೆ ಇಸ್ಲಾಂ ಧರ್ಮ ಅನುಸರಿಸುವವರಿಗೆ ರಮಾದಾನ್ ಆಚರಣೆ ಆರಂಭವಾದಾಗ ಪೌಲಿನ್ ಹ್ಯಾನ್ಸನ್ ಮುಸ್ಲಿಮರೆಲ್ಲಾ ಕೆಟ್ಟವರು, ಅವರಲ್ಲಿ ಒಳ್ಳೆಯವರಿಲ್ಲ ಎಂದು ಹೇಳಿ ಗಲಭೆ ಎಬ್ಬಿಸಿದರು. ಸಿಡ್ನಿ ನಗರದ ಆಚೆ ಇರುವ ಒಂದು ಬಡಾವಣೆಯನ್ನು ಹೆಸರಿಸಿ ಅಲ್ಲಿ ಇರುವವರೆಲ್ಲಾ ಮುಸ್ಲಿಮರು. ತಾನು ಅಲ್ಲಿಗೆ ಹೋದಾಗ ಅಭದ್ರತೆಯ ಭಾವನೆ ಬಂತು. ಎಲ್ಲಿಗೆ ಹೋದಾಗ ಕ್ಷೇಮವೆನ್ನಿಸುವುದಿಲ್ಲ ಎಂದರು. ಇದರಿಂದ ಒಂದಷ್ಟು ಕ್ಷೋಭೆ ಉಂಟಾಯಿತು. ಆ ಪ್ರದೇಶದ ನಗರಪಾಲಿಕೆ ಮೇಯರ್ ತಮ್ಮ ವಿಡಿಯೋ ಸಂದೇಶದಲ್ಲಿ ಪೌಲಿನ್ ಹ್ಯಾನ್ಸನ್ ಅವರಿಗೆ ಸೌಹಾರ್ದತೆಯ ಆಮಂತ್ರಣ ಕೊಟ್ಟು ರಮಾದಾನ್ ಆಚರಣೆಯಲ್ಲಿ ಭಾಗವಹಿಸಿ, ನಮ್ಮೊಡನೆ ಬೆರೆಯಿರಿ, ನಾವು ನಡೆಸುವ ಸಂತೆಯಲ್ಲಿ ಅದೆಷ್ಟು ಬಹು ಸಂಸ್ಕೃತಿಗಳ ಜನರು ಕಾಣುತ್ತಾರೆ ಎನ್ನುವುದ ನೋಡಿ, ಆಗ ನಿಮ್ಮ ಪೂರ್ವಾಗ್ರಹ ಕಡಿಮೆಯಾಗುತ್ತದೆ, ಎಂದಿದ್ದಾರೆ.

ಇದು ನೋಡಿ ಒಗ್ಗಟ್ಟಿನ ಮಾತು. ಈ ಮಾತನ್ನ ಪೌಲಿನ್ ಕೇಳಿಸಿಕೊಂಡಿದ್ದಾರೋ ಇಲ್ಲವೋ ತಿಳಿಯದು. ಕೇಳಿಸಿಕೊಂಡಿದ್ದರೆ ಅವರ ವಿಚಲತೆ ಕಡಿಮೆಯಾಗಿ ಮನಸ್ಸು ಸ್ವಲ್ಪ ಶಾಂತವಾಗಬಹುದೇನೋ.

 

About The Author

ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ